Thursday, April 29, 2010

ಮರೆಯಾದ ಮಾತಿನ 'ಮಾಣಿಕ್ಯ'!ಹರಿದಾಸ ಮಲ್ಪೆ ರಾಮದಾಸ ಸಾಮಗ - 'ಸಣ್ಣ ಸಾಮಗ'ರು. ಇವರಣ್ಣ ಕೀರ್ತಿಶೇಷ ಮಲ್ಪೆ ಶಂಕರನಾರಾಯಣ ಸಾಮಗ 'ದೊಡ್ಡ ಸಾಮಗ'ರು. ಇಬ್ಬರದೂ 'ದೊಡ್ಡ ವ್ಯಕ್ತಿತ್ವ'. ಅರ್ಥಗಾರಿಕೆಯಲ್ಲಿ 'ದೊಡ್ಡ ಹೆಜ್ಜೆ'. ಇವರ ಮಾತಿನ ಝರಿಯ ಮುಂದೆ ಮಾಣಿಕ್ಯದ ಪ್ರಭೆಯೂ ಮಸುಕಾಗುತ್ತಿತ್ತು! ಆದರೆ ಮಾತಿನ ಲೋಕದಲ್ಲೀಗ ಮೌನ! ಎಂಭತ್ತನಾಲ್ಕು ಸಂವತ್ಸರದ ಮಾತಿನ ಬದುಕಿಗೆ ವಿರಾಮ.

ರಾಮದಾಸ ಸಾಮಗರು - ಹರಿದಾಸರು. ಸಂಗೀತ ಅವರಿಗೆ ಖುಷಿ. ರಾಗ, ತಾಳ, ಲಯಗಳಲ್ಲಿ ಬಿಗಿ. ಒಂದು ಕಾಲಘಟ್ಟದಲ್ಲಿ ಮೃದಂಗವಾದಕರು. ಇವೆಲ್ಲವೂ ಹರಿಕೀರ್ತನೆ(ಕಥೆ)ಯಲ್ಲಿ ಮೇಳೈಸುತ್ತಿದ್ದುವು.

ಸಾಮಗರದು ಕಾವ್ಯಪ್ರಧಾನ ಅರ್ಥಗಾರಿಕೆ. ಕಾವ್ಯಾತ್ಮಕ ಶೈಲಿ-ವಾಕ್ಸರಣಿ. ಭಾವಾತ್ಮಕ ಧೋರಣೆ. ಧರ್ಮಶಾಸ್ತ್ರದ ಕಾವ್ಯಾತ್ಮಕ ಜ್ಞಾನ. ಶಬ್ಧಾಲಂಕಾರ ಹೆಚ್ಚು. ವೇಗದ ನುಡಿ.

ತಾಳಮದ್ದಳೆಯಲ್ಲಿ ಹಿಮ್ಮೇಳವನ್ನು ಪೂರ್ತಿ 'ಅನುಭವಿಸುವ' ಅರ್ಥಧಾರಿ. ಭಾಗವತಿಕೆ, ಚೆಂಡೆ, ಮದ್ದಳೆಯೊಂದಿಗೆ ಸಾಗುತ್ತದೆ-ಅಭಿವ್ಯಕ್ತಿ ಸಂಸಾರ. ಲಹರಿ ಬಂದಾಗ ಭಾಗವತರೊಂದಿಗೆ 'ಭಾಗವತ'ರಾಗುವುದೂ ಇದೆ. ರಂಗದಲ್ಲಿದ್ದಷ್ಟೂ ಹೊತ್ತು ಪಾತ್ರ - ಪಾತ್ರಧಾರಿ ಒಂದೇ.

ಸಾಮಗರ ವೇಷಭೂಷಣ - ಜುಟ್ಟು, ಜುಬ್ಬಾ, ಕಚ್ಚೆ, ಶಾಲು. ಆಧುನಿಕದ ಸೋಂಕಿಲ್ಲ. ಕಚ್ಚೆಯ 'ಮುನ್ನಿ'ಯ ತುದಿಯನ್ನು ಎಡಗೈ ಮೇಲೆ ಬಿಟ್ಟು ಮಾತಿನ ಮಂಚವನ್ನು ಏರುವುದೇ ಸಂಭ್ರಮ! ಮೊದಲ ವಂದನೆ ಭಾಗವತರಿಗೆ. ಅದೂ ಪೂರ್ಣಪ್ರಮಾಣದ ನಮಸ್ಕಾರ. ಇದು ಶ್ರಾವ್ಯ ವೇದಿಕೆಯ 'ದೃಶ್ಯ'. ತನ್ನದೇ ಆದ ಪರಂಪರೆ. ವೇದಾಂತ, ತರ್ಕ, ಮಂಡನೆ, ಕಥೆ-ಉಪಕಥೆಗಳಿಂದ ಆವರಿಸಿದ 'ಸ್ವಗತ'. ಯಾವುದೂ ಪೂರ್ವ ನಿರ್ಧರಿತವಲ್ಲ, ಅಲ್ಲಲ್ಲಿನ ಸ್ಪುರಣೆ.
ಪಾತ್ರ ವೈಭವ
ಕೂಡ್ಲು, ಮೂಲ್ಕಿ, ಕರ್ನಾಟಕ, ಇರಾ, ಸುರತ್ಕಲ್, ಕದ್ರಿ, ಬಪ್ಪನಾಡು, ಅಮೃತೇಶ್ವರೀ, ಶಿರಸಿ, ಪೆರ್ಡೂರು ಮೇಳಗಳಲ್ಲಿ ವೇಷಧಾರಿಯಾಗಿ ವ್ಯವಸಾಯ. ಬಯಲಾಟದ ಅರ್ಥಗಾರಿಕೆಗೆ ಸೊಗಸು ತಂದ ದಿನಗಳೀಗ ನೆನಪು. ನಾಟ್ಯ ಕೊರತೆಯನ್ನು 'ಮಾತಿನ ಕುಣಿತ'ದಿಂದ ತುಂಬಿದ್ದಾರೆ. ಪೂರ್ತಿ ರಂಗವನ್ನಾವರಿಸುವ ಮಾತು - ಸಹಜ ಅಂಗಾಭಿನಯ.

ಪಟ್ಟಾಭಿಷೇಕ ಪ್ರಸಂಗದ 'ದಶರಥ', ರುಕ್ಮಾಂಗದ ಚರಿತ್ರೆಯ 'ರುಕ್ಮಾಂಗದ', ಕರ್ಮಬಂಧದ 'ಭೀಷ್ಮ', ಬ್ರಹ್ಮಕಪಾಲದ 'ಈಶ್ವರ', ದಕ್ಷಾಧ್ವರದ 'ಶಿವ', ಅಕ್ಷಯಾಂಬರದ 'ಶಕುನಿ', ಪಾರಿಜಾತದ 'ಕೃಷ್ಣ', ಯಾವುದೇ ಪ್ರಸಂಗದ 'ರಾಮ'-'ಕೃಷ್ಣ' ಪಾತ್ರಗಳು ಮತ್ತು 'ಶಂತನು', 'ಉತ್ತರಕುಮಾರ', - ಮಾತಲ್ಲೇ ಮರುಹುಟ್ಟು ಪಡೆದಿವೆ. ಬಯಲಾಟದಲ್ಲಿ 'ವಿಶ್ವಾಮಿತ್ರ', 'ನಳ', 'ಹರಿಶ್ಚಂದ್ರ', 'ಕೈಲಾಸ ಶಾಸ್ತ್ರಿ', 'ಮಾಧವ ಭಟ್ಟ' ಪಾತ್ರಗಳಿಗೆ ಮುಗಿಬೀಳುವ ದಿನಗಳಿದ್ದುವು. ಕೋಳ್ಯೂರು ರಾಮಚಂದ್ರ ರಾವ್ ಮತ್ತು ಸಾಮಗರ 'ಯಕ್ಷದಾಂಪತ್ಯ'ವು ನಿಜದಾಂಪತ್ಯಕ್ಕೊಂದು ಆದರ್ಶ! ನಳ-ದಮಯಂತಿ, ಹರಿಶ್ಚಂದ್ರ-ಚಂದ್ರಮತಿಯರು ರಂಗದಲ್ಲಿ ಅತ್ತರೆ ಸಾಕು, ಪ್ರೇಕ್ಷಕರೂ ಕೂಡಾ ಕಣ್ಣೊರೆಸಿಕೊಳ್ಳುತ್ತಿದ್ದರು.

ತುಳು ಯಕ್ಷಗಾನವನ್ನು ಜ್ಞಾಪಿಸಿಕೊಳ್ಳಿ. 'ತುಳು' ಭಾಷೆಯನ್ನು ಅಲ್ಲಿ ಹುಡುಕಬೇಕು! ಸಾಮಗರು ನಿರ್ವಹಿಸಿದ ಪಾತ್ರಗಳು 'ತುಳು'ವಿಗೊಂದು ಸಂಭ್ರಮ. ಹೊಸಹೊಸ ಶಬ್ಧಗಳು. 'ತುಳುವರು ಹುಬ್ಬೇರುವಷ್ಟು ಭಾಷಾ ಪ್ರಯೋಗ ಅವರಿಗೆ ಸಿದ್ಧಿ. 'ಕೋಳ್ಯೂರು-ಸಾಮಗರ ಮತ್ತು 'ಸಾಮಗ-ಮಿಜಾರು ಅಣ್ಣಪ್ಪ ಹಾಸ್ಯಗಾರರ' ಅಂದಿನ ರಂಗಪಾತ್ರಗಳ ವೈಭವ ಒಂದು 'ತುಳು ಪಠ್ಯ'! ಕೋಟಿಚೆನ್ನಯ್ಯ ಪ್ರಸಂಗದ 'ಬುದ್ಧಿವಂತ', ತುಳುನಾಡ ಸಿರಿಯ 'ಕಾಂತುಪೂಂಜ', ಕಾಡಮಲ್ಲಿಗೆಯ 'ಉದಯವರ್ಮ' - ಮತ್ತೆ ಮತ್ತೆ ಕಾಡುವ ಪಾತ್ರಗಳು.
ಮಾತಿನ ದಿಂಙಣ
ಸಾಮಗರದು 'ಚಿಂತನೆ ಮತ್ತು ರಂಜನೆ'ಯ ಮಾತು. ಅರ್ಥಗಾರಿಯಲ್ಲಿ 'ಚಿತ್ರಕ ಸಾಮಥ್ರ್ಯ'. ಒಂದು ವಸ್ತುವಿಷಯವನ್ನು ತಂದು ಕಣ್ಣಿಗೆ ಕಟ್ಟುವಂತೆ ಸನ್ನಿವೇಶವನ್ನು ನಿರ್ಮಿಸುವ ಅಪೂರ್ವತೆ.' ಮೂಲದಲ್ಲಿ ಕಥೆ ಒಂದು, ಪ್ರಸಂಗದಲ್ಲಿ ಇನ್ನೊಂದು. ಇಂತಹ ವೈರುಧ್ಯದ ಹೊತ್ತಲ್ಲಿ ವಾದ-ವಿವಾದಗಳು ಏರ್ಪಟ್ಟರೆ ತುದಿಮುಟ್ಟುವುದು ತ್ರಾಸ. ಈ ಎರಡನ್ನೂ ತಮ್ಮ ಅರ್ಥಗಾರಿಕೆಯಲ್ಲಿ ಸಮನ್ವಯ ಮಾಡಿ, ಪಾತ್ರಕ್ಕೆ ನ್ಯಾಯ ಸಲ್ಲಿಸುವತ್ತ ಗಮನ. ಮೊಗೆಮೊಗೆದು ಉಂಡ ಜ್ಞಾನದ ಫಲ!

ಸಾಮಗರ ಅರ್ಥಗಾರಿಕೆ ಅಂದರೆ 'ವ್ಯಾಕರಣ ಪಾಠ' ಎಂದು ವಿನೋದಕ್ಕೆ ಹೇಳುವುದುಂಟು. ಇಲ್ಲಿ ಪ್ರಜ್ಞಾಪೂರ್ವಕವಾದ ಶುದ್ಧ ಕನ್ನಡ. 'ಶುದ್ಧ ಪ್ರಯೋಗಗಳು ಅರ್ಥಗಾರಿಕೆಯಲ್ಲಿ ಬರಬೇಕು' ಎನ್ನುತ್ತಾ 'ಇದು ಕನ್ನಡ ಭಾಷೆ ಉಳಿಸಲು ಯಕ್ಷಗಾನದ ಕೊಡುಗೆ' ಎಂದು ಪ್ರತಿಪಾದಿಸುತ್ತಿದ್ದರು.

ಸಾಮಾನ್ಯವಾಗಿ ಅರ್ಥಧಾರಿ ಎಲ್ಲಿ ತಪ್ಪುತ್ತಾನೋ - ಇದಿರು ಅರ್ಥಧಾರಿ ಕಾಯುತ್ತಿರುತ್ತಾನೆ - ಆಕ್ರಮಣ ಮಾಡಲು! ಸಾಮಗರು ಇದಿರಿದ್ದಾಗ ಸಣ್ಣ ಅರ್ಥಧಾರಿ ಬೆವರಬೇಕಾದ್ದಿಲ್ಲ. ಒಂದು ವೇಳೆ ತಪ್ಪಿದರೂ, ತಾನೇ ಸರಿಪಡಿಸುತ್ತಾ, ತನ್ನ ಪಾತ್ರವನ್ನು ಕೆಡಿಸಿಕೊಂಡಾದರೂ ಇದಿರಿನ ಪಾತ್ರವನ್ನೂ ಪೋಶಿಸುವ ಗುಣ. ಮನೋಭಂಗ ಮಾಡುವುದಿಲ್ಲ. ಇವರಿಂದಾಗಿ ಅಸಂಖ್ಯ ಪ್ರತಿಪಾತ್ರಗಳು ವಿಜೃಂಭಿಸಿವೆ.

ವಾದ-ಪ್ರತಿವಾದಗಳ ಹರಹು ತನ್ನ ನಿರ್ಣಯದ-ದಾರಿಯ ಚೌಕಟ್ಟಿನೊಳಗೆ ಸಂಚರಿಸುತ್ತವೆ. ಒಣಚರ್ಚೆಗಳಿಲ್ಲ. ಪಾತ್ರದ ಗೌರವವುಳಿಸಿಕೊಂಡೇ ಮಾತು. ಕೆಲವೊಂದು ಸಲ ವೀರರಸದ ಸಂದರ್ಭದಲ್ಲಿ ಕೆರಳುವಾಗ ಹಿಮ್ಮೇಳವೂ ಒಂದು ಕ್ಷಣ ಬೆರಗಾಗುತ್ತಿತ್ತು!

ಸಾಮಗರ ಅರ್ಥದಲ್ಲಿ ಚಿಂತನಗ್ರಾಹ್ಯ ವಿಚಾರಗಳ ಮಳೆ! ಉದಾ. 'ಅಮರಾವತಿಯೋ, ಅಮರವತಿಯೋ' ದ್ವಾರಾವತಿಯೋ, ದ್ವಾರವತಿಯೋ..ಏನೋ..ನನಗೆ ಗೊತ್ತಿಲ್ಲ' ಅಂತ ನಿಲ್ಲಿಸಿಬಿಡುತ್ತಾರೆ. ಅಂದರೆ ಅವರಿಗೆ ಗೊತ್ತಿಲ್ಲ ಎಂದಲ್ಲ. ಅಷ್ಟಕ್ಕೆ ನಿಲ್ಲಿಸಿ ಮುಂದಕ್ಕೆ ಹೋಗುತ್ತಾರೆ. ಇದನ್ನು 'ವಿನೋದ -ಗೇಲಿ'ಯಾಗಿ ಸ್ವೀಕರಿಸಿದವರೇ ಹೆಚ್ಚು. ಅದಕ್ಕೆ ಹಾಗೊಂದು ಅರ್ಥ ಇದೆಯಾ ಅಂತ ಆಲೋಚಿಸಿದವರು ಕಡಿಮೆ.

ನಮ್ಮಲ್ಲಿ ಪ್ರತಿಭೆಯನ್ನು ಒಪ್ಪಲು, ಪ್ರಶಂಸಿಸಲು ಮಾತಿನ ದಾರಿದ್ರ್ಯ ಕಾಣುತ್ತೇವೆ. ಒಬ್ಬ ಅರ್ಥಧಾರಿಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಬಂದಾಗ, ಕೀಳರಿಮೆಯನ್ನು ಆವಾಹಿಸಿಕೊಳ್ಳುವ ಸಹವರ್ತಿಗಳು ಎಷ್ಟು ಮಂದಿ ಬೇಕು? ಸಾಮಗರಿಗೆ ತನ್ನಿದಿರಿನ ಅರ್ಥಧಾರಿಗೆ ಪ್ರಶಂಸೆ ಸಿಕ್ಕಿದಾಗ, ತಾನೂ ಅದರೊಂದಿಗೆ ಬೆರೆಯುತ್ತಾರೆ. ಮುಖವರ್ತನೆಯಿಂದ ತಿಳಿಸುತ್ತಾರೆ. ಮುಂದಿನ ಅರ್ಥದಲ್ಲಿ ತಂದೇ ತರುತ್ತಾರೆ.

ಯಕ್ಷಗಾನದ ಚೌಕಟ್ಟಿನೊಳಗೆ ಪೌರಾಣಿಕವಾದ ಹೊಸ ಪ್ರಯೋಗಗಳಿಗೆ ತೆರೆದುಕೊಳ್ಳುತ್ತಿದ್ದರು. ರಾಜಕಾರಣ ಅವರ ಆರ್ಥಗಾರಿಕೆಯಲ್ಲಿಲ್ಲ. ಇವರ ಬಹುಕಾಲದ ಒಡನಾಡಿ ಕೋಳ್ಯೂರು ರಾಮಚಂದ್ರ ರಾಯರು ಒಂದೆಡೆ ಹೇಳುತ್ತಾರೆ -'ಪತ್ರಿಕೆಯ ಭಾಷೆಯನ್ನು ಪಾತ್ರ ಚಿತ್ರಣದಲ್ಲಿ ಬಳಸಿಕೊಂಡಿರುವುದನ್ನು ನಾನು ನೋಡಿಲ್ಲ'!
ಮದುಡುವ ಮಗು-ಮನಸ್ಸು
ಬದುಕಿನಲ್ಲೂ ಸಾಮಗರು ಸರಳ, ಭಾವಜೀವಿ. ಮಗುವಿನ ಮನಸ್ಸು. ಭೇಟಿಗೆ ಬಂದವರನ್ನು ಪ್ರೀತಿಪೂರ್ವಕವಾಗಿ ಮಾತನಾಡಿಸಿ ತಾನು ಪಡೆವ ಸತ್ಕಾರವನ್ನು ಅವರಿಗೂ ಕೊಡಿಸುವ ಗುಣ. ಬಟ್ಟಲಿನ ದೋಸೆಯನ್ನು ಹಂಚಿ ತಿನ್ನುವ ಮನೋಭಾವ.

ಧುತ್ತೆಂದು ಎರಗಿದ ಶಾರೀರಿಕ ಅಸಹಾಯಕತೆ ಸಾಮಗರನ್ನು ಹಿಂಡಿ-ಹಿಪ್ಪೆ ಮಾಡಿತ್ತು. ರಂಗದಲ್ಲಿ ಶನಿಕಾಟಕ್ಕೆ ತುತ್ತಾದ 'ನಳ' ಪಾತ್ರದ ಭಾವವೇ ಯೋಗವಾಗಿ ಬಂತೋ ಏನೋ? ಕಳೆದೆರಡು ವರುಷಗಳಿಂದ ಹಾಸಿಗೆಗೆ ಒರಗಿದ 'ಮಾತಿನ ಮಾಣಿಕ್ಯ'ದ ಹೊಳಪು ಮಸುಕಾಗಿತ್ತು. ಈಗ ಪೂರ್ತಿ ಮೌನ. ಮಡದಿ ನಾಗರತ್ನ. ಇಬ್ಬರು ಗಂಡುಮಕ್ಕಳು ಮತ್ತು ಮೂವರು ಹೆಣ್ಣುಮಕ್ಕಳ ಸಂಸಾರ. ಎಪ್ರಿಲ್ 27, ೨೦೧೦ರಂದು ಎಂಭತ್ತನಾಲ್ಕು ಸಂವತ್ಸರ ಬಾಳಿದ ರಾಮದಾಸ ಸಾಮಗರ (20-6-1926) ಬದುಕು ಪೂರ್ತಿಯಾಯಿತು.

ಡಾ. ಶೇಣಿ ಗೋಪಾಲಕೃಷ್ಣ ಭಟ್ ಮತ್ತು ರಾಮದಾಸ ಸಾಮಗ - ಎಂಬ ಮಾತಿನ ಮಂಟಪದ ಎರಡು ಪ್ರಧಾನ ಸ್ತಂಭಗಳು ಕಳಚಿಬಿದ್ದುವು. ಇಹದಿಂದ ದೂರವಾದ ಮಲ್ಪೆ ರಾಮದಾಸ ಸಾಮಗರಿಗಿದು ನುಡಿನಮನ.

ಹಳ್ಳಿ ಸೊಗಸಿನ ಕಲಾವರಣ

ಮಂಟಪ ಪ್ರಭಾಕರ ಉಪಾಧ್ಯರ ಏಕವ್ಯಕ್ತಿ ಯಕ್ಷಗಾನ ಪ್ರದರ್ಶನದ 'ಸಾವಿರ ಸಂಭ್ರಮ'ವು ಮೂಡಬಿದಿರೆಯ ಆಳ್ವಾಸ್ ವಿದ್ಯಾಸಂಸ್ಥೆಯಲ್ಲಿ ಸಂಪನ್ನಗೊಂಡಿತು. ಅಂದು ಕೇರಳದ ಪ್ರಸಿದ್ಧ 'ಕಥಕ್ಕಳಿ'ಯ ಪ್ರದರ್ಶನವಿತ್ತು.

ಕಥಕ್ಕಳಿಗೂ ಹಿಮ್ಮೇಳವಿದೆ ತಾನೆ. ಅದರ ಹಿಮ್ಮೇಳದವರು ಬರಿಮೈಯಲ್ಲಿ ರಂಗಸ್ಥಳಕ್ಕೆ ಬಂದಾಗ, ಓರ್ವ ಸುಶಿಕ್ಷಿತ ಮಹನೀಯ, 'ಛೇ.. ಇವರು ಕಾಲದಲ್ಲಿದ್ದಾರೆ... ಸಮವಸ್ತ್ರವನ್ನಾದರೂ ಧರಿಸಬಹುದಿತ್ತಲ್ಲಾ. ನಾವಿಷ್ಟು ಮಂದಿ ಪ್ರೇಕ್ಷಕರಿದ್ದಾಗ ಬರಿಮೈಯಲ್ಲಿ ರಂಗಕ್ಕೆ ಬರುವುದು ಆಶ್ಲೀಲವಲ್ವಾ' ತಮ್ಮ ಮಾತನ್ನು ಇತರರು ಕೇಳಿಸಿಕೊಳ್ಳಲೇಬೇಕು ಎಂಬ ಹಠದಲ್ಲಿದ್ದಂತೆ ವರ್ತಿಸುದ್ದರು.

ಕಥಕ್ಕಳಿಯ ಹಿಮ್ಮೇಳ ಕಲಾವಿದರು 'ಬರಿಮೈ'ಯಲ್ಲಿ ಬಂದಿರುವುದು ಇವರಿಗೆ ಅಶ್ಲೀಲ! ಇಂತಹ 'ಅಪೂರ್ವ ಆಲೋಚನೆ' ಅಲ್ಲಿ ಸೇರಿದ್ದ ಬೇರ್ಯಾವ ವಿದ್ವಾಂಸರಿಗೂ ಹೊಳೆಯಲೇ ಇಲ್ಲ. ಅದು ಆ ಕಲೆಯ ಸೊಗಸು-ಸೊಗಡು. ಬಹುಶಃ ಕಥಕ್ಕಳಿಯ ಪರಿಚಯವಿರುತ್ತಿದ್ದರೆ, ನೋಡಿರುತ್ತಿದ್ದರೆ ಪ್ರಾಯಃ ಅವರು ಹೀಗನ್ನುತ್ತಿರಲಿಲ್ಲವೋ ಏನೋ? ಬಿಳಿವಸ್ತ್ರ, ಹಣೆಯಲ್ಲಿ ಭಸ್ಮ-ತಿಲಕ ಧರಿಸಿ, ವಾದನ ಪರಿಕರಗಳೊಂದಿಗೆ ರಂಗದಲ್ಲಿ ನಿಂತಾದ ಕಥಕ್ಕಳಿಯ ಲೋಕವೊಂದು ಅನಾವರಣಗೊಳ್ಳುತ್ತದೆ. ಆದರೂ ಅವರ 'ಸಮವಸ್ತ್ರದ ಕಲ್ಪನೆ' ಆಲೋಚಿಸುವಂತಾದ್ದು.

ಭಾರತೀಯ ಕಲೆಗಳು ಇತ್ತೀಚೆನ ದಿನಗಳಲ್ಲಿ 'ಆದುನಿಕ ಸ್ಪರ್ಶಕ್ಕೆ' ಒಳಗಾಗುತ್ತಿವೆ. ಬಹುಶಃ ಕಥಕ್ಕಳಿಯ ಬಗ್ಗೆ 'ಬರಿಮೈ' ವಿಮರ್ಶೆಯನ್ನು ಮಾಡಿದ ಮಹನೀಯರು ಕೂಡಾ ಆಧುನಿಕ ಸ್ಪರ್ಶಕ್ಕೆ ಒಳಗಾಗಿರಬಹುದು. ಕಲೆಯನ್ನು ನೋಡುವ ನಮ್ಮ ಕಣ್ಣುಗಳಿಗೆ ಮೊದಲಾದ್ಯತೆಯಲ್ಲಿ ಚಿಕಿತ್ಸೆಯಾಗಬೇಕು ಅನ್ನಿಸುತ್ತದೆ. ಹೆಚ್ಚಿನ ಸಮಾರಂಭಗಳಲ್ಲಿ ನೋಡಿದ್ದೇನೆ - ವಸ್ತುವಿನೊಳಗೆ ಇಳಿಯದೆ, ಸುತ್ತಾಡದೆ 'ತಕ್ಷಣದ ಪ್ರತಿಕ್ರಿಯೆ' ನೀಡಿ ಸುಭಗನಂತೆ ಕಾಣಿಸಿಕೊಳ್ಳುವ ಮಂದಿಗಳನ್ನು!

ಇರಲಿ, ಯಕ್ಷಗಾನವನ್ನು ನೋಡಿದರೆ ಕೆಲವೊಂದು ವೇಷಭೂಷಣಗಳಲ್ಲಿ ಮಾತ್ರ ಯಕ್ಷಗಾನವನ್ನು ಗುರುತಿಸಬಹುದೇ ವಿನಾ, ಮತ್ತೆಲ್ಲಾ ಬಹುತೇಕ ಪರಿಷ್ಕಾರವಾಗಿದೆ. ಈ ಬದಲಾವಣೆ, ಪರಿಷ್ಕಾರವನ್ನು 'ಅಭಿವೃದ್ಧಿ' ಎಂದು ವ್ಯಾಖ್ಯಾನಿಸುತ್ತೇವೆ. ಕಾಲದ ಪರಿಮಾಣಕ್ಕೆ ತಕ್ಕಂತೆ ಚೌಕಟ್ಟಿನೊಳಗೆ ಬದಲಾವಣೆ ಗ್ರಾಹ್ಯ. ಬದಲಿಗೆ ಯಕ್ಷಗಾನ ಭಾಗವತಿಕೆಯಲ್ಲಿ ಜಾನಪದ ಹಾಡನ್ನೋ, ಹಿಂದಿ ಹಾಡಿನ ನಡೆಯನ್ನೋ ಬಳಸಿದರೆ 'ಆಟ ಮುಗಿಯುತ್ತದೆ- ಬೆಳಗಾಗುತ್ತದೆ' ಅಷ್ಟೇ.

ನಮ್ಮ ಹಳ್ಳಿಗಳಲ್ಲಿ ನಡೆಯುವ ಯಕ್ಷಗಾನ, ಯುವಕ ಮಂಡಲಗಳ ವಾರ್ಷಿಕೋತ್ಸವ, ಜಾತ್ರಾ ಸಮಯಗಳ ಸಾಂಸ್ಕೃತಿಕ ಸಮಾರಂಭಗಳಲ್ಲಿ ಹಳ್ಳಿ ಸೊಗಸಿದ್ದ ದಿನಗಳಿದ್ದುವು. ಹೇಳುವಂತಹ 'ಫಿನಿಶಿಂಗ್' ಇಲ್ಲದೆ, ಅಲ್ಲಲ್ಲಿನ ಸಂಪನ್ಮೂಲಗಳನ್ನು ಬಳಸಿ ಅಭಿವ್ಯಕ್ತಗೊಳ್ಳುತ್ತಿದ್ದುವು. ನಾಟಕವೊಂದು ನಿಶ್ಚಿತವಾದರೆ, ಒಂದೆರಡು ತಿಂಗಳ ಹಿಂದೆಯೇ ಅದಕ್ಕೆ ತಾಲೀಮು. ಸ್ಟೇಜ್ ಪ್ರಾಕ್ಟೀಸ್. ಯಕ್ಷಗಾನವಾದರೆ ಮೂರ್ನಾಲ್ಕು ತಿಂಗಳಿಂದಲೇ ತರಬೇತಿ-ಆಧ್ಯಯನ.

ಇಂತಹ ಸ್ಥಿತಿ ಬದಲಾಗಿದೆ. ಎಲ್ಲಾ ಕಡೆ 'ರೆಡಿ ಟು ಈಟ್'! ಜನಪ್ರಿಯತೆಯ ಗುಂಗು ಹಳ್ಳಿ ಪ್ರತಿಭೆಗಳನ್ನೂ ಬಿಟ್ಟಿಲ್ಲ. ಸಿನಿಮಾ ಢಾಂಢೂಂ ಹಾಡುಗಳು, ಕುಣಿತಗಳು, ಮೈಕುಲುಕಾಟ.. ಇತ್ಯಾದಿಗಳು ಹಳ್ಳಿ ಸ್ಟೇಜ್ಗಳನ್ನೂ ಬಿಟ್ಟಿಲ್ಲ. ಇದರಿಂದಾಗಿ ಪಾರಂಪರಿಕವಾಗಿ ನಡೆಯುತ್ತಿದ್ದ ನಾಟಕ, ಯಕ್ಷಗಾನ, ದೇವರನಾಮ.. ಗಳು ಮಸುಕಾಗಿವೆ.

ಮೊನ್ನೆ ದೇಲಂಪಾಡಿಯ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ಅರುವತ್ತಾರನೇ ವಾರ್ಷಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದಾಗ ಈ ಎಲ್ಲಾ ವಿಚಾರಗಳು ಗಿರಕಿ ಹೊಡೆದುವು! ಕನ್ನಾಡು-ಕೇರಳದ ಗಡಿಯಂಚಿನ ಗ್ರಾಮ 'ಬನಾರಿ'. ಯಕ್ಷಗಾನದ ಪ್ರಾತಃಸ್ಮರಣೀಯ ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ - ಆರೇಳು ದಶಕಗಳ ಹಿಂದೆ ಹುಟ್ಟು ಹಾಕಿದ ಸಾಂಸ್ಕೃತಿಕ ವೇದಿಕೆಯು ಬದುಕನ್ನರಳಿಸುವ ಉಪಾದಿ.

ಕೀರ್ತಿಶೇಷ ಗುಡ್ಡಪ್ಪ ಗೌಡರು ಒಮ್ಮೆ ಹೇಳಿದ್ದರು - 'ಬನಾರಿ ಸುತ್ತೆಲ್ಲಾ ಅಕ್ಷರಾಭ್ಯಾಸಿಗಳು ಕಡಿಮೆಯಿದ್ದ ಕಾಲದಲ್ಲಿ, ಕೈಹಿಡಿದು ಅಕ್ಷರ ಬರೆಸಿದವರು ವಿಷ್ಣು ಭಟ್ಟರು. ಹಿಂದೆಲ್ಲಾ ಋಷ್ಯಾಶ್ರಮದಲ್ಲಿರುವ ಗುರುಕುಲ ಮಾದರಿಯಂತಹುದನ್ನು ಬನಾರಿಯಲ್ಲಿ ಕಟ್ಟಿ, ಶಿಷ್ಯರನ್ನು ರೂಪಿಸಿ, ಅವರ ಮೂಲಕ ತನ್ನಾಶಯದ ಸಾಂಸ್ಕೃತಿಕ ಲೋಕವನ್ನು ಅನಾವರಣಗೊಳಿಸುತ್ತಿದ್ದ ಪರಿ ಅನ್ಯಾದೃಶ'.
ಬನಾರಿಯ ನೆಲದಲ್ಲಿ ಕುಣಿದ, ಮಾತನಾಡಿದ ಎಷ್ಟೋ ಕಲಾವಿದರು 'ಹೆಸರು' ಮಾಡಿದವರೇ. ನಿರಕ್ಷರಿಗಳಿಗೆ ಅಕ್ಷರಪ್ರೀತಿಯನ್ನು ಹುಟ್ಟಿಸಿ, ಓದುವ ಅಭ್ಯಾಸವನ್ನು ಮಾಡಿಸಿದ ಮಾಸ್ತರರು ಬನಾರಿ ನೆಲದಲ್ಲಿ ಜೀವಂತ.

ತಾನು ಗೆಜ್ಜೆ ಕಟ್ಟಿದರು. ವೇಷ ತೊಟ್ಟರು. ಕುಣಿದರು. ತನ್ನ ಶಿಷ್ಯರಲ್ಲೂ ಅದನ್ನೇ ನಿರೀಕ್ಷಿಸಿದ್ದರು. ಊಟ, ವಸತಿ ಕೊಟ್ಟು ಒಂದಷ್ಟು ಯಕ್ಷಗಾನ ಕಲಾವಿದರನ್ನು ರೂಪಿಸಿದ ಮಾಸ್ತರ್ ವಿಷ್ಣು ಭಟ್ಟರ ಬನಾರಿ ನೆಲ ಯಕ್ಷಗಾನಕ್ಕೆ ವಿಶ್ವವಿದ್ಯಾನಿಲಯ.
ಭೂಒಡಲಲ್ಲಿ ಸಿಕ್ಕ ಕೃಷ್ಣನ ಸುಂದರ ಮೂರ್ತಿಗೆ ಚಿಕ್ಕ ಆಲಯ ಕಟ್ಟಿಸಿ, ಅದಕ್ಕೆ ಯಕ್ಷಗಾನವನ್ನು ಥಳಕು ಹಾಕಿ, ಆರಾಧನಾ ಕಲೆಯಾದ ಯಕ್ಷಗಾನಕ್ಕೆ ಮತ್ತಷ್ಟು ದೇವತಾ ಸ್ಪರ್ಶ ಕೊಟ್ಟರು. ಕಲಾವಿದರಲ್ಲಿ ಭಯ-ಭಕ್ತಿ ಹುಟ್ಟಿತು. ಕಲೆಯ ಬಗ್ಗೆಯೂ ಆದರ ಹೆಚ್ಚಾಯಿತು.

ತನ್ನ ಶಿಷ್ಯರ ಕುಡಿತವನ್ನು ಬಿಡಿಸಲು ತಾನೇ 'ಅನ್ನ ಸತ್ಯಾಗ್ರಹ' ಮಾಡಿ ಯಶಸ್ವಿಯಾದ ಬಗೆ ಕಾಲದ ಕಥನ. ತಪ್ಪಿದವರಿಗೆ ಸಾತ್ವಿಕ ಶಿಕ್ಷೆ ಕಾದಿತ್ತು. ಅವರ ಕೋಪದ, ಶಿಕ್ಷೆಯ ಹಿಂದೆ ಇದ್ದುದು - ತಾಯಿಯ ಪ್ರೀತಿ-ಮಮತೆ. ನಮ್ಮ ಎಷ್ಟು ಯಕ್ಷಗಾನದ ಗುರುಗಳಲ್ಲಿ ಈ ಭಾವವಿದೆ ಹೇಳಿ? ಯಕ್ಷಗಾನವನ್ನು ಮನೆಯ ಅಂಗವಾಗಿ, ಕುಟುಂಬ ಸದಸ್ಯರ ಮಿಳಿತದೊಂದಿಗೆ ಕಟ್ಟಿದ ಆ ಕಾಲದ ವಾತಾವರಣವಿದೆಯಲ್ಲಾ, ಅದೇ ಈಗಲೂ ಮುಂದುವರಿಯುತ್ತಿರುವುದು ವಿಷ್ಣು ಭಟ್ಟರ ತಪ್ಪಸ್ಸಿನ ಫಲ.

ವಿಷ್ಣು ಭಟ್ಟರ ಚಿರಂಜೀವಿಗಳು ತಂದೆಯ ದಾರಿಯಲ್ಲಿ ಸಾಗುತ್ತಿದ್ದಾರೆ. ಜರಗುವ ಎಲ್ಲಾ ಕಾರ್ಯಕ್ರಮಗಳಿಗೂ 'ಆರಾಧನಾ ಸ್ಪರ್ಶ'. ಆಧುನಿಕತೆಯ ಥಳಕು ಕಡಿಮೆ. ಊರಿನ ಜನರಿಗೂ ಅಷ್ಟೇ - ಇದು ನಮ್ಮದು ಎಂಬ ಭಾವ. ಹಾಗಾಗಿ ಬನಾರಿ ನೆಲದಲ್ಲಿ ಜರಗುವ ಎಲ್ಲಾ ಕಲಾ ಸಂಬಂಧಿ ಕಾರ್ಯಕ್ರಮಗಳಂದು ಬಹುತೇಕ ಎಲ್ಲಾ ಮನೆಗಳಿಗೂ ಬೀಗ!

ತೀರಾ ಹಳ್ಳಿ ಸೊಗಸಿನಲ್ಲಿ ಸಹಜವಾಗಿ ನಡೆಯುವ ಬನಾರಿಯ ಯಕ್ಷಗಾನ ವಾರ್ಷಿಕೋತ್ಸವದಲ್ಲಿ ಭಾಗವಹಿಸುವುದು ಮುದ ನೀಡುವ ಸಂಗತಿ. ಕೈಯಲ್ಲಿ ರಿಮೋಟ್ ಹಿಡಿದು ಚಾನೆಲ್ ಬದಲಾಯಿಸುವ ಮನಸ್ಸುಗಳಿಲ್ಲಿ ಗೆಜ್ಜೆಕಟ್ಟಿ, ವೇಷತೊಟ್ಟು ಕುಣಿಯುತ್ತವೆ; ತಾಳ ಹಿಡಿದು ಹಾಡುತ್ತವೆ. ಇಂತಹ ಮನಸ್ಸುಗಳ ರೂಪೀಕರಣ ಕಾಲದ ಆವಶ್ಯಕತೆ.

Wednesday, April 28, 2010

ಮಲ್ಪೆ ಹರಿದಾಸ ರಾಮದಾಸ ಸಾಮಗ ವಿಧಿವಶ

ಯಕ್ಷರಂಗದ ಮೇರು, ಹರಿದಾಸ ಮಲ್ಪೆ ರಾಮದಾಸ ಸಾಮಗರು ಎಪ್ರಿಲ್ 27, ಮಂಗಳವಾರ ಅಪರಾಹ್ನ ನಿಧನರಾದರು. ಯಕ್ಷಗಾನ, ಹರಿಕಥೆ, ತಾಳಮದ್ದಳೆ, ಬಯಲಾಟಗಳಲ್ಲಿ ಸುಮಾರು ಐದಾರು ದಶಕಗಳ ಕಾಲ ಮಿಂಚಿ, ಹೊಸ ಹುರುಪನ್ನು ಸ್ಥಾಪಿಸಿದವರು.

ಸಂಸ್ಕೃತ, ಕನ್ನಡ, ಸಾಹಿತ್ಯ, ಸಂಗೀತ ಕ್ಷೇತ್ರದ ಆಳ ವಿದ್ವತ್ ಹೊಂದಿದ ಸಾಮಗರು, ತುಳು ಭಾಷೆಗೆ ತನ್ನ ಪಾತ್ರಗಳ ಮೂಲಕ ಕೊಟ್ಟ ಕೊಡುಗೆ ಅಪಾರ. ತೆಂಕು-ಬಡಗು ತಿಟ್ಟುಗಳ ವಿವಿಧ ಮೇಳಗಳಲ್ಲಿ ವ್ಯವಸಾಯ ಮಾಡಿದ ಸಾಮಗರು ಎರಡು ವರುಷಗಳ ಹಿಂದೆ ಅನಾರೋಗ್ಯಕ್ಕೆ ತುತ್ತಾಗಿ, ಒಂದು ಕಾಲನ್ನು ಕಳೆದುಕೊಂಡರು. ಅಲ್ಲಿಂದೀಚೆಗೆ ಪತ್ನಿ ನಾಗರತ್ನ ಅವರ ಆಸರೆ.

* ಜನನ ದಿನಾಂಕ : 20-6-1926 * ತಂದೆ : ಮಲ್ಪೆ ಲಕ್ಷ್ಮೀನಾರಾಯಣ ಸಾಮಗ * ತಾಯಿ : ಲಕ್ಷ್ಮೀ ಅಮ್ಮ * ಅಣ್ಣ : ಮಲ್ಪೆ ಶಂಕರನಾರಾಯಣ ಸಾಮಗ * ಮಲ್ಪೆ ಎಲಿಮೆಂಟರಿ ಶಾಲೆ, ಕೊಡವೂರು ಹಾಯರ್ ಪ್ರೈಮರಿ ಶಾಲೆಗಳಲ್ಲಿ ಓದು. ಉಡುಪಿಯ ಕ್ರಿಶ್ಚಿಯನ್ ಹೈಸ್ಕೂಲಿನಲ್ಲಿ ಮೆಟ್ರಿಕ್ಯುಲೇಶನ್ ಪಾಸ್. ನಂತರ ಉಡುಪಿ ಸಂಸ್ಕ್ರತ ಕಾಲೇಜಿನಲ್ಲಿ ವಿದ್ಯಾರ್ಜನೆ. * 1947ರಲ್ಲಿ ನಾಗರತ್ನ ಇವರೊಂದಿಗೆ ವಿವಾಹ * ಐವರು ಮಕ್ಕಳು - ವಾರಿಜಾ, ವಾಸುದೇವ, ಅಶೋಕ (ದಿವಂಗತ), ಮಾಲಿನಿ, ಅಂಬುಜಾ * ರಾಮದಾಸ ಸಾಮಗರ ನಿಧನ - 27-4-2010 - ಮಣಿಪಾಲ ಆಸ್ಪತ್ರೆಯಲ್ಲಿ * ದೇಹಸಂಸ್ಕಾರ - 28-4-2010, ಬೆಳಿಗ್ಗೆ 9-45, ಕೊಡವೂರು ಗ್ರಾಮದ ಮೂಡಬೆಟ್ಟು ಸ್ವಗೃಹದಲ್ಲಿ.
- ಅಗಲಿದ ಹಿರಿಯ ಚೇತನಕ್ಕೆ ಕಂಬನಿ -

Friday, April 23, 2010

ಪೊಳಲಿ ಲೋಕಯ್ಯ ನಿಧನ

ಯಕ್ಷಗಾನದ ಹಿರಿಯ ಸ್ತ್ರೀಪಾತ್ರಧಾರಿ ಪೊಳಲಿ ಲೋಕಯ್ಯ (೭೦) ಎಪ್ರಿಲ್ 20, ೨೦೧೦ರಂದು ಪೊಳಲಿಯ ತಮ್ಮ ಗೃಹದಲ್ಲಿ ನಿಧನರಾದರು. ಕೆಲವು ದಿವಸಗಳಿಂದ ಅವರು ಅನಾರೋಗ್ಯಪೀಡಿತರಾಗಿದ್ದರು. ಲೋಕಯ್ಯರಿಗೆ ಕ್ರಿಶ್ಚಿಯನ್ ಬಾಬು ಗುರು. ಸ್ತ್ರೀವೇಷಗಳಲ್ಲೇ ಪ್ರಸಿದ್ಧಿ. ಸೀತೆ, ಗೌರಿ, ಮಂಡೋದರಿ, ಕೈಕೆ ಮುಂತಾದ ಪಾತ್ರಗಳಲ್ಲಿ ಖ್ಯಾತಿ. ಸಿರಿ, ಕಿನ್ನಿದಾರ, ಪುಲ್ಲುಪೆರ್ಗಡ್ತಿ ಇತ್ಯಾದಿ ಪಾತ್ರಗಳು ಅವರ ಮಾಸ್ಟರ್ ಪೀಸ್. ತುಳು ಭಾಷೆಯ ದೇಸೀ ಸೊಗಡು, ಗಾದೆ, ಕತೆ, ಕವಿತೆ..ಗಳು ಅವರ ಪಾತ್ರಗಳನ್ನು ಇನ್ನಷ್ಟು ಎತ್ತರಕ್ಕೆ ಏರಿಸಿದ್ದುವುದು. ಅಗಲಿದ ಚೇತನಕ್ಕೆ ನುಡಿನಮನ.

Sunday, April 11, 2010

ಸಂಮಾನದಿಂದ.. ಡಾಕ್ಟರೇಟ್ವರೆಗೆ...

ಹಗಲಿಡೀ ಕಾಲ್ನಡಿಗೆ. ರಾತ್ರಿಯಿಡೀ ಜಾಗರಣೆ. ಕಾಸು ಸಿಕ್ಕರೆ ಪುಣ್ಯ! ಹೊತ್ತು ತಪ್ಪಿ ಭೋಜನ. ಅಪರೂಪಕ್ಕೊಮ್ಮೆ ಸುಗ್ರಾಸ. ಆಟ ಆಡಿಸುವಾತ ಉಳ್ಳವನಾದರೆ ಕೈಗೆ ನಾಲ್ಕಾಣೆ ಬಿದ್ದೀತು. ಆಗದು ಲಕ್ಷಕ್ಕೂ ಹಿರಿದು!

ಆಟವನ್ನು ಮೊದಲೇ ಬುಕ್ ಮಾಡುವುದು ವಿರಳ. ಕಾಲ್ನಡಿಗೆಯಲ್ಲಿ ಸಾಗುತ್ತಾ, ದೊಡ್ಡ 'ಮನೆ-ಮನೆತನ' ಸಿಕ್ಕರೆ ಅವರಲ್ಲಿ ವಿನಂತಿಸಿ, ತಾಳಮದ್ದಳೆ. ಒಂದು ಹೊತ್ತಿನ ಊಟ ಆಯಿತಲ್ವಾ! ಸ್ವಲ್ಪ ಹೆಚ್ಚೆ ಮನೆಯಜಮಾನನನ್ನು ಉಬ್ಬಿಸಿ, ರಾತ್ರಿಯ ಆಟಕ್ಕೆ ವೀಳ್ಯ ಪಡೆಯುವುದೂ ಇದೆ! ಕೇವಲ ಇಪ್ಪತ್ತೈದು ರೂಪಾಯಿ ವೀಳ್ಯ! ಆಟ 'ರೈಸಿದರೆ' ಮರುದಿವಸವೂ ಠಿಕಾಣಿ.

ಹೊಟ್ಟೆ ತುಂಬುವುದು ಮುಖ್ಯ. ಸಿಕ್ಕಿದ ಪುಡಿಗಾಸು ಮನೆವಾರ್ತೆಗೆ. ರಜೆ ಎಂಬುದಿಲ್ಲ. ಜ್ವರ ಬಂದರೂ ಚೌಕಿಯಲ್ಲೇ ಇರಬೇಕೇ ವಿನಾ, ರಜೆ ಮಾಡಿ ಮನೆಗೆ ಹೋಗುವಂತಿಲ್ಲ! ಒಂದು ಆಟದಿಂದ ಮತ್ತೊಂದು ಕಡೆಗೆ ಹತ್ತೋ-ಇಪ್ಪತ್ತೋ ಮೈಲು ಅಂತರ. ತಲಪಿದ ನಂತರಷ್ಟೇ ಸ್ನಾನ-ನಿತ್ಯಾನುಷ್ಠಾನ. ಭೋಜನವಾಗುವಾಗ ಗಂಟೆ ನಾಲ್ಕು ಮೀರುತ್ತಿತ್ತು. ಕೆಲವು ಸಲ ಮಧ್ಯಾಹ್ನ-ರಾತ್ರಿಯದು ಒಟ್ಟಿಗೆ ಆಗುವುದೂ ಇದೆ! ಸಣ್ಣ 'ಕೋಳಿನಿದ್ದೆ' ಪೂರೈಸಿ, ರಾತ್ರಿಯ ವೇಷಕ್ಕೆ ಅಣಿಯಾಗಬೇಕಾಗುತ್ತಿತ್ತು. ಅದೂ ಒಂದೇ ವೇಷವಲ್ಲ, ರಾತ್ರಿಯಿಡೀ-ಪಾಲಿಗೆ ಬಂದುದೆಲ್ಲವನ್ನೂ ನಿರ್ವಹಿಸಬೇಕು.

ಹಗಲಿನ ತನುಶ್ರಮ ಎಷ್ಟೋ ಸಲ ವೇಷಗಾರಿಕೆಯಲ್ಲಿ ಪ್ರತಿಫಲಿತವಾದುದಿದೆ. ಏನು ಮಾಡೋಣ. ಈಗಿನ ಹಾಗೆ ಸಾರಿಗೆಯಿರಲಿಲ್ಲ. ದೂರವಾಣಿಯಿಲ್ಲ. ಆಟಕ್ಕೆಂತ ಮನೆಯಿಂದ ಹೊರಟರೆ ಎರಡೋ, ಮೂರೋ ತಿಂಗಳು ಸಂಚಾರ. ನಮ್ಮ ಜವ್ವನದ ಕಾಲದ ತಿರುಗಾಟವನ್ನು ನೆನೆಸಿಕೊಂಡರೆ, ಈಗಿನವರಿಗೆ ಸುಖ ಸುಪ್ಪತ್ತಿಗೆ! ಆಟದಿಂದ ಆಟಕ್ಕೆ ಬಸ್ಸು ವ್ಯವಸ್ಥೆಯಿದೆ. ವಸತಿ-ಆಸನ ವ್ಯವಸ್ಥೆ ತುಂಬಾ ಸುಧಾರಿಸಿದೆ. ಕಲಾವಿದನ ಬದುಕು ಮೊದಲಿಗಿಂತ ಭಿನ್ನ. ಮಾನ-ಸಂಮಾನಗಳು ಅರಸಿಕೊಂಡು ಬರುತ್ತಿವೆ. ಸಮಾಜ ಕಲಾವಿದನನ್ನು ಗುರುತಿಸುತ್ತದೆ-ಮಾನಿಸುತ್ತದೆ. 'ಛೇ.. ನಾನು ತಿರುಗಾಟ ಮಾಡುತ್ತಿದ್ದಾಗ ಈಗಿನ ವ್ಯವಸ್ಥೆಗಳು ಬೇಕಿತ್ತು.. ಆಟದ ಕತೇನೇ ಬೇರಿತ್ತು..'

- ಹೀಗೆ ತನ್ನ ನೆನಪಿನ ಬುತ್ತಿಯನ್ನು ಬಿಚ್ಚಿಟ್ಟವರು ಬಡಗು ತಿಟ್ಟಿನ ಹಿರಿಯ ಸ್ತ್ರೀಪಾತ್ರಧಾರಿ ಮಾರ್ಗೋಳಿ ಗೋವಿಂದ ಸೇರಿಗಾರ್. ಈ ಸಾಲಿನ 'ಪಾತಾಳ ಪ್ರಶಸ್ತಿ'ಯ ಆಯ್ಕೆಯನ್ನು ತಿಳಿಸಲು ಅವರ ಕುಂದಾಪುರದ ಮನೆಗೆ ಕಾಲಿಟ್ಟಾಗ, ಎಂಭತ್ತನಾಲ್ಕರ ಮಾರ್ಗೋಳಿ ಯವರು ಇಪ್ಪತ್ತನಾಲ್ಕಕ್ಕೆ ಇಳಿದಿದ್ದರು! ಇಳಿ ವಯಸ್ಸಲ್ಲೂ ತುಂಬು ಉತ್ಸಾಹ. ಹಳೆಯ ಕಲಾದಿನಗಳ ಪುಟಗಳನ್ನು ಪುನಃ ಓದುವ ಹಂಬಲ. ಇತರರಿಗೂ ತಿಳಿಸುವ ಕಾತರ. ರಂಗದ ಹಳೆಯ ಸಂಪ್ರದಾಯಗಳಿಗೆ ಅವರೊಬ್ಬ 'ಅಥಾರಿಟಿ'.

ಬಡಗಿನ ಐವತ್ತು ದಶಕದ ಮೇಳದ ವ್ಯವಸಾಯದಲ್ಲಿ ಎರಡು ವರುಷ ಕೂಡ್ಲು ಮೇಳದಲ್ಲಿ ತಿರುಗಾಟ ಮಾಡಿರುವ ಮಾರ್ಗೋಳಿ ಯವರು, ಇಲ್ಲಿನ ದೇವಿ ಮಹಾತ್ಮೆ ಪ್ರಸಂಗವನ್ನು ಅಭ್ಯಸಿಸಿ, ಬಡಗಿನಲ್ಲಿ ಇನ್ನಷ್ಟು ಒಪ್ಪ-ಓರಣಗೊಳಿಸಿದರು. 'ಶ್ರೀದೇವಿ' ಪಾತ್ರಕ್ಕೆ ಹೊಸ ಭಾಷೆಯನ್ನೇ ಬರೆದರು. ಭಾವವನ್ನು ಕೊಟ್ಟರು. ಸ್ವ-ಭಾವವನ್ನು ನೀಡಿದರು.

ಒಟ್ಟಿನಲ್ಲಿ - ನಮ್ಮಲ್ಲಿ ಪಾತಾಳ ವೆಂಕಟ್ರಮಣ ಭಟ್, ಕೋಳ್ಯೂರ್ ರಾಮಚಂದ್ರ ರಾವ್ ಹೇಗೋ, ಬಡಗಿನಲ್ಲಿ ಮಾರ್ಗೋಳಿ ಗೋವಿಂದ ಸೇರಿಗಾರ್. ಎಲ್ಲರೂ ಅಪ್ಪಟ ಚಿನ್ನ.

ಡಾಕ್ಟರೇಟ್

ಹಾಂ.. ಮರೆತೇ ಬಿಟ್ಟೆ. ಕೋಳ್ಯೂರ್ ರಾಮಚಂದ್ರ ರಾಯರಿಗೆ ಮಂಗಳೂರು ವಿಶ್ವವಿದ್ಯಾನಿಲಯವು 'ಡಾಕ್ಟರೇಟ್' ಪದವಿ ನೀಡಿ ಗೌರವಿಸಿದೆ. ಇನ್ನವರು ಡಾ.ಕೋಳ್ಯೂರು ರಾಮಚಂದ್ರ ರಾವ್. ಇದು ಯಕ್ಷಗಾನಕ್ಕೆ ಸಂದ ಗೌರವ.

ಕೀರ್ತಿಶೇಷ ಶೇಣಿ ಗೋಪಾಲಕೃಷ್ಣ ಭಟ್ಟರಿಗೆ 'ಡಾಕ್ಟರೇಟ್' ಪದವಿ ಬಂದಾಗ ಹಾಸಿಗೆಗಂಟಿದ್ದರು. ದೃಷ್ಠಿ ಮಂಜಾಗಿತ್ತು. ಮಾತು ತೊದಲುತ್ತಿತ್ತು. ಯಕ್ಷರಂಗದ ಒಂಟಿಸಲಗ ಒಂಟಿಯಾದ ಹೊತ್ತು. 'ಹತ್ತು ವರ್ಷದ ಮೊದಲೇ ಈ ಪದವಿ ಬರುತ್ತಿದ್ದರೆ, ನಾನು ಡಾ.ಶೇಣಿ ಅಂತ ಸೈನ್ ಮಾಡುತ್ತಿದ್ದೆ. ಲೆಟರ್ಹೆಡ್ ಮಾಡಿಸಿಕೊಳ್ಳುತ್ತಿದ್ದೆ. ಈಗ ಬಂದು ಏನು ಪ್ರಯೋಜನ' ಎಂದು ಮಾರ್ಮಿಕವಾಗಿ ಹೇಳಿದ್ದು ಮರೆಯದ ಮಾತು. ಬದುಕಿನ ಕೊನೆಯ ಕ್ಷಣದಲ್ಲೂ ಪುಟಿಯುತ್ತಿದ್ದ ಜೀವನೋತ್ಸಾಹ - ಕಾಡುವ ನೆನಪು.
ಸಂಮಾನ, ಪುರಸ್ಕಾರ, ಪದವಿಗಳು - ಕಲಾವಿದ ಸಕ್ರಿಯನಾಗಿದ್ದಾಗಲೇ ಮಡಿಲಿಗೆ ಬೀಳಬೇಕು. ಆಗ ಅದನ್ನು ಅನುಭವಿಸುವ, ಆನಂದಿಸುವ, ಖುಷಿಪಡಲು ಸಾಧ್ಯ. ಈ ಹಿನ್ನೆಲೆಯಲ್ಲಿ ಕೋಳ್ಯೂರ್ ಅವರಿಗೆ ಸಂದ ಗೌರವ ಸಕಾಲಿಕ. ಡಾ.ಕೋಳ್ಯೂರ್ರಿಗೆ ಅಭಿನಂದನೆಗಳು.

'ಪುತ್ತೂರು ಪ್ರಶಸ್ತಿ'

ಪುತ್ತೂರು ನಾರಾಯಣ ಹೆಗಡೆ ಅಂದರೆ ಸಾಕು, ನಮ್ಮ ಕಣ್ಣೆದುರಿಗೆ ಸಾಲು ಸಾಲು ಖಳ ಪಾತ್ರಗಳು ಮಿಂಚಿ ಮರೆಯಾಗುತ್ತವೆ. ಅವರು ಕಾಲವಾಗಿ ಸುಮಾರು ಎರಡು ದಶಕಗಳು ಸಂದರೂ ಪಾತ್ರಗಳು ಮನಃಪಟಲದಿಂದ ಮಾಸಿಲ್ಲ. ಮಸುಕಾಗಿಲ್ಲ. ಆ ಕಂಸ, ಜರಾಸಂದ, ಮಾಗಧ, ಭೌಮಸುರ, ಅಣ್ಣಪ್ಪ.. ಇವೆಲ್ಲಾ ಹೆಗಡೆಯವರಲ್ಲಿ ಮರುಹುಟ್ಟು ಪಡೆದ ದಿನಗಳು ಈಗ 'ಕಾಲದ ಕಥನ'.

ಹೆಗಡೆಯವರ ಚಿರಂಜೀವಿಗಳು ತಮ್ಮ ತೀರ್ಥರೂಪರ ನೆನಪಿಗಾಗಿ 'ಪುತ್ತೂರು ಪ್ರಶಸ್ತಿ'ಯನ್ನು ಸ್ಥಾಪಿಸಿದ್ದು, 'ಯಕ್ಷ ಸಂಜೀವಿನಿ ಪ್ರತಿಷ್ಠಾನ' ಮೂಲಕ ವರುಷಕ್ಕೊಮ್ಮ ಹಿರಿಯ ಕಲಾವಿದರಿಗೆ ಪ್ರದಾನ ಮಾಡುವ ಸಂಕಲ್ಪ ಮಾಡಿರುವುದು ನಿಜಕ್ಕೂ ಶ್ಲಾಘನೀಯ.
ಎಪ್ರಿಲ್ 11ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ಎದುರಿನ ಗದ್ದೆಯಲ್ಲಿ ನಡೆಯುವ ಶ್ರೀ ಧರ್ಮಸ್ಥಳ ಮೇಳದ ರಂಗವೇದಿಕೆಯಲ್ಲಿ, ಕಡತೋಕ ಮಂಜುನಾಥ ಭಾಗವತರಿಗೆ ಪ್ರಥಮ ಪ್ರಶಸ್ತಿಯ ಪ್ರದಾನವಾಗಲಿದೆ.

ಕೊನೆಯದಾಗಿ - ಖ್ಯಾತ ಹಾಸ್ಯಗಾರ ಪೆರುವೋಡಿ ನಾರಾಯಣ ಭಟ್ಟರಿಗೆ ಈ ಸಾಲಿನ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಅರಸಿ ಬಂದಿದೆ. ಹೀಗೆ ಪಾತಾಳ ಪ್ರಶಸ್ತಿ, ಕೋಳ್ಯೂರ್ಗೆ ಡಾಕ್ಟರೇಟ್, ಪುತ್ತೂರು ಪ್ರಶಸ್ತಿ, ಅಕಾಡೆಮಿ ಪ್ರಶಸ್ತಿ.. ಒಂದೇ ಎರಡೇ. ಕಲೆಯನ್ನು, ಕಲಾವಿದನನ್ನು ಪ್ರೀತಿಸುವವರಿಗೆ ಇಷ್ಟವಾಗುವ ಸಂಗತಿಗಳಿವು.

Thursday, April 8, 2010

ಪಾತಾಳ ಪ್ರಶಸ್ತಿ ಪುರಸ್ಕೃತ ಮಾರ್ಗೋಳಿ ಗೋವಿಂದ ಸೇರಿಗಾರ್

'ಹಳೆಯ ಪ್ರಸಂಗಗಳು ರಂಗದಿಂದ ದೂರವಾಗುತ್ತಿರುವುದನ್ನು ನೋಡಿ ಬೇಸರವಾಗುತ್ತದೆ. ಅದರಲ್ಲಿರುವಷ್ಟು ಸತ್ವ, ಸತ್ಯ, ಬದುಕಿಗೆ ಪೂರಕವಾಗಿರುವ ಹೂರಣ ಮತ್ತು ಕಲಾಗಾರಿಕೆ ಆಧುನಿಕ ಪ್ರಸಂಗಗಳಲ್ಲಿ ಇಲ್ಲ. ಈ ಹಿನ್ನೆಲೆಯಲ್ಲಿ ಯಕ್ಷಗಾನದ ವೈಭವಕ್ಕೆ ಮಸುಕಾಗಿದೆ' - ಎಂಬ ದುಃಖ ಬಡಗು ತಿಟ್ಟಿನ ಖ್ಯಾತ ಸ್ತ್ರೀಪಾತ್ರಧಾರಿ ಮಾರ್ಗೋಳಿ ಗೋವಿಂದ ಸೇರಿಗಾರ್ ಅವರದು.

ಐವತ್ತು ವರುಷಗಳ ರಂಗ ಬದುಕಿನಲ್ಲಿ ತೆಂಕು-ಬಡಗಿನುದ್ದಕ್ಕೂ ತಿರುಗಾಟ ಮಾಡಿದ ಮಾರ್ಗೋಳಿಯವರು ಬಡಗು ತಿಟ್ಟಿನ ಪ್ರಾತಿನಿಧಿಕ ಕಲಾವಿದ. ಬಡಗಿನ ಹಳೆಯ ಕ್ರಮಗಳ ಬಗ್ಗೆ ಅಧಿಕೃತ ದನಿ. ನಾಟ್ಯದಿಂದ ರಂಗಸೂಕ್ಷ್ಮದ ವರೆಗಿನ ಸಂಗತಿಗಳಿಗೆ ಈ ಕಾಲಘಟ್ಟದಲ್ಲಿ ಮಾರ್ಗೋಳಿಯವರು ಯಕ್ಷಗಾನಕ್ಕೆ ಅನಿವಾರ್ಯ.

ಮಾರ್ಗೋಳಿಯವರಿಗೀಗ ಎಂಭತ್ತನಾಲ್ಕು. ರಂಗ ಬದುಕಿನ ಉಚ್ಛ್ರಾಯ ಕಾಲದ ನೆನಪು ಅವರ ಇಳಿವಯಸ್ಸಿನ ಲವಲವಿಕೆಯ ಗುಟ್ಟು. ತನ್ನ ಹದಿಮೂರನೇ ವರುಷದಿಂದ ಬಣ್ಣದ ಬದುಕು ಆರಂಭ. ಕುಂದಾಪುರದ ಬಸ್ರೂರಿನಲ್ಲಿ ನಾಲ್ಕನೇ ತರಗತಿ ತನಕ ವಿದ್ಯಾಭ್ಯಾಸ. ಬದುಕಿನ ಅನಿವಾರ್ಯತೆಯೊಂದಿಗೆ ಬೆಳೆದು, ಬಡಗುತಿಟ್ಟಿನ ಬಹುತೇಕ ಖ್ಯಾತರೊಡನೆ ಪಾತ್ರವಹಿಸಿ, ತಾನೂ ಗಟ್ಟಿಯಾಗಿ ರಂಗದ ಸಾರಸರ್ವಸ್ವವನ್ನುಂಡ ಅಪರೂಪದ ಕಲಾಗಾರಿಕೆ.

ಗುರು ವೀರಭದ್ರ ನಾಯಕ್, ಕೊಕ್ಕರ್ಣೆ ಗುಂಡು ನಾಯಕ್, ನರಸಿಂಹ ಕಮ್ತಿ.. ಮೊದಲಾದ ಆಢ್ಯರ ಗರಡಿಯಲ್ಲಿ ತಿದ್ದಿ-ತೀಡಿದ ಅಪ್ಪಟ ಪ್ರತಿಭೆ. ತೆಂಕುಟ್ಟಿನಲ್ಲಿ ಪ್ರಸಿದ್ಧವಾದ 'ದೇವಿ ಮಹಾತ್ಮೆ' ಪ್ರಸಂಗದ 'ಶ್ರೀದೇವಿ' ಪಾತ್ರಕ್ಕೆ ಬಡಗಿನ ರಂಗದಲ್ಲಿ ಜೀವತುಂಬಿ, ಅದಕ್ಕೆ ಪ್ರತ್ಯೇಕವಾದ ಎತ್ತರದ ಸ್ಥಾನ ರೂಪಿಸಿದ ಕೀರ್ತಿ ಮಾರ್ಗೋಳಿಯವರಿಗೆ ಸಲ್ಲಬೇಕು.

ಮಂದಾರ್ತಿ ಮೇಳದಿಂದ ತಿರುಗಾಟ (1939)ಆರಂಭ. ಮುಂದೆ ಸೌಕೂರು, ಸಾಲಿಗ್ರಾಮ, ಇಡಗುಂಜಿ, ಪೆರ್ಡೂರು, ಅಮೃತೇಶ್ವರೀ, ಕಮಲಶಿಲೆ, ಕೂಡ್ಲು, ಮಾರಣಕಟ್ಟೆ ಮೇಳಗಳಲ್ಲಿ ತಿರುಗಾಟ. ಈ ಮಧ್ಯೆ ಅಮೃತೇಶ್ವರಿ ಮೇಳದ ಯಜಮಾನಿಕೆ ಮಾಡಿದ ಅನುಭವ. 'ಮಾರಣಕಟ್ಟೆ ಮೇಳವೊಂದರಲ್ಲೇ ಮೂವತ್ತಾರು ತಿರುಗಾಟ ಮಾಡಿದ್ದೇನೆ' ಎನ್ನುತ್ತಾ, ಮೇಳದ ತಿರುಗಾಟದ ರಸನಿಮಿಷಗಳನ್ನು ಹಂಚಿಕೊಳ್ಳುತ್ತಾರೆ.

ಏರುಜವ್ವನದದ ಇವರ ಸ್ತ್ರೀಸಹಜ ಒನಪು-ಒಯ್ಯಾರಗಳ ಪಾತ್ರಗಳನ್ನು ಈಗಲೂ ಹಿರಿಯರು ಜ್ಞಾಪಿಸಿಕೊಳ್ಳುತ್ತಾರೆ. ನಾಲ್ಕೈದು ದಶಕದ ಹಿಂದೆ ಕುಂಬಳೆಯಲ್ಲಿ ಜರುಗಿದ 'ಪಂಚವಟಿ' ಪ್ರಸಂಗದ 'ಮಾಯಾಶೂರ್ಪನಖಿ'ಯ ಪಾತ್ರವನ್ನು ರಂಗದಲ್ಲಿ ಬಿಡಿ, ಚೌಕಿಯಲ್ಲೇ ನೋಡಲು ಜನ ಮುಗಿಬೀಳುತ್ತಿದ್ದರಂತೆ. ಚೌಕಿಯಿಂದ ರಂಗಸ್ಥಳಕ್ಕೆ ಹೋಗುವ ದಾರಿಯ ಇಕ್ಕೆಡೆಯಲ್ಲೂ ಇವರಿಗೆ ರಕ್ಷಣೆ ಒದಗಿಸಬೇಕಾದ ಪ್ರಸಂಗ ಬಂದಿತಂತೆ. ಈ ಘಟನೆ ಹೇಳುವಾಗ 84ರ ಮಾರ್ಗೋಳಿಯರು ನಾಚಿ ನೀರಾಗಿ 24ರ ಯುವಕರಾಗುತ್ತಾರೆ!

ಮಾರ್ಗೋಳಿಯವರ ಕಸೆ ಸ್ತ್ರೀಪಾತ್ರಗಳಲ್ಲಿ ಪ್ರತ್ಯೇಕವಾದ ಛಾಪು. 'ಮೀನಾಕ್ಷಿ' ಮೆಚ್ಚಿನ ಪಾತ್ರ. ಶಶಿಪ್ರಭೆ, ಭ್ರಮರಕುಂತಳೆ, ಚಿತ್ರಾಂಗದೆ, ಚಿತ್ರಲೇಖೆ ಹೀಗೆ ಅನೇಕ ಪಾತ್ರಗಳ ಶಿಲ್ಪ ಎಂದೂ ಮಾಸದು! ದೇಹ ಮಾಗುತ್ತಿದ್ದಾಗ 'ನನ್ನ ಸ್ತ್ರೀಪಾತ್ರ ಇನ್ನು ಸಾಕು' ಎಂದು ಕಂಡದ್ದೇ ತಡ, ಪುರುಷ ಪಾತ್ರಗಳ ನಿರ್ವಹಣೆ. ರಾಮ, ಕೃಷ್ಣ, ಅರ್ಜುನ, ಸುಧನ್ವ, ತಾಮ್ರಧ್ವಜ, ಕಮಲಭೂಪ.. ಪಾತ್ರಗಳ ನಿರ್ವಹಣೆ. ಪಾತ್ರಗಳನ್ನು ನಿರ್ವಹಿಸಿ, ಪ1986ರಿಂದ ರಂಗನಿವೃತ್ತಿ. ಎಂಟು ವರುಷ ಮಹಿಳೆಯರಿಗೆ ತರಬೇತಿ ನೀಡಿ ತನ್ನದೇ ಆದ ಯಕ್ಷತಂಡವನ್ನು ರೂಪಿಸಿದ್ದರು.

'ಸ್ತ್ರೀವೇಷಧಾರಿಯಾದವನು ಭಾವಜೀವಿಯಾಗಿರಬೇಕು. ಜೀವನವನ್ನು ಅತ್ಯಂತ ಸೂಕ್ಷ್ಮವಾಗಿ ಅನುಭವಿಸುವವರಿಗೆ, ಗಮನಿಸುವವರಿಗೆ ಹೆಚ್ಚಿಗೆ ಒಲಿಯುತ್ತದೆ' ಎನ್ನುತ್ತಾರೆ. ಹದಿನೆಂಟು ದಿವಸದ ಮಹಾಭಾರತ, ಹನ್ನೆರಡು ದಿವಸದ ರಾಮಾಯಣ ಪ್ರಸಂಗಗಳ ಪ್ರದರ್ಶನಗಳನ್ನು ನೆನಪಿಸಿಕೊಳ್ಳುವಾಗ ಭಾವುಕರಾಗುತ್ತಾರೆ.

ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಬೆಂಗಳೂರಿನ 'ಕಲಾಶ್ರೀ ಪ್ರಶಸ್ತಿ', 'ಯಕ್ಷ ಸವ್ಯಸಾಚಿ', 'ರಂಗಸ್ಥಳದ ರಾಣಿ' ಪುರಸ್ಕಾರಗಳಿಂದ ಭಾಜನರು. ಮಾರ್ಗೋಳಿಯವರು ಕಲಾಸೇವೆಗೆ ಈಗ 'ಪಾತಾಳ ಪ್ರಶಸ್ತಿ'. ಎಪ್ರಿಲ್ 15, ೨೦೧೦ರಂದು ರಾತ್ರಿ 8 ಗಂಟೆಗೆ ಶ್ರೀ ಎಡನೀರು ಮಠದಲ್ಲಿ ಪರಮಪೂಜ್ಯ ಶ್ರೀ ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀ ಪಾದಂಗಳವರ ದಿವ್ಯ ಉಪಸ್ಥಿತಿಯಲ್ಲಿ ಮಾರ್ಗೋಳಿಯವರಿಗೆ ಪಾತಾಳ ಪ್ರಶಸ್ತಿಯ ಪ್ರದಾನ.

ಪುತ್ತೂರು ನಾರಾಯಣ ಹೆಗಡೆ ಸಂಸ್ಮರಣೆ - ಪ್ರಶಸ್ತಿ ಪ್ರದಾನ

ತೆಂಕುತಿಟ್ಟು ಯಕ್ಷಗಾನದ ರಂಗಸ್ಥಳದ 'ಖಳ' ಕಲಾವಿದ ಪುತ್ತೂರು ನಾರಾಯಣ ಹೆಗಡೆಯವರು ಕಾಲವಾಗಿ ಹತ್ರಹತ್ರ ಎರಡು ದಶಕಗಳಾದುವು. ಅವರ ಹೆಸರಿನಲ್ಲಿ 'ಯಕ್ಷ ಸಂಜೀವಿನಿ ಪ್ರತಿಷ್ಠಾನ' ಸ್ಥಾಪನೆಯಾಗಿದೆ. ಅವರ ಚಿರಂಜೀವಿಗಳು ಪ್ರತಿಷ್ಠಾನ ಮೂಲಕ ವರುಷಕ್ಕೊಬ್ಬ ಹಿರಿಯ ಕಲಾವಿದರಿಗೆ ಪ್ರಶಸ್ತಿ ನೀಡಲು ಮುಂದಾಗಿದ್ದಾರೆ. ಈ ಸಲದ ಮೊದಲ 'ಪುತ್ತೂರು ಹೆಗಡೆ ಪ್ರಶಸ್ತಿ' - 'ತನ್ನ ಪಾತ್ರಗಳಿಗೆ ಜೀವಕಳೆ ತುಂಬಿದ' ಕಡತೋಕ ಮಂಜುನಾಥ ಭಾಗವತರಿಗೆ. ಎಪ್ರಿಲ್ 11, 2010ರಂದು ಸಂಜೆ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಳದ ಸನಿಹ ನಡೆಯುವ ಶ್ರೀ ಧರ್ಮಸ್ಥಳ ಮೇಳದ ಬಯಲಾಟದ ರಂಗದಲ್ಲಿ ಪ್ರಶಸ್ತಿ ಪ್ರದಾನ.

ಕೋಳ್ಯೂರ್ ರಾಮಚಂದ್ರ ರಾಯರಿಗೆ 'ಡಾಕ್ಟರೇಟ್'

ತೆಂಕುತಿಟ್ಟು ಯಕ್ಷಗಾನದ ಹಿರಿಯ ಸ್ತ್ರೀಪಾತ್ರಧಾರಿ ಶ್ರೀ ಕೋಳ್ಯೂರು ರಾಮಚಂದ್ರ ರಾಯರಿಗೆ (7-4-2010) ಮಂಗಳೂರು ವಿಶ್ವವಿದ್ಯಾನಿಲಯವು 'ಡಾಕ್ಟರೇಟ್' ಪದವಿ ನೀಡಿ ಪುರಸ್ಕರಿಸಿದೆ. ವಿಶ್ವವಿದ್ಯಾನಿಲಯದ 28ನೇ ಘಟಿಕೋತ್ಸವದಲ್ಲಿ ಮಾನ್ಯ ರಾಜ್ಯಪಾಲ ಹೆಚ್.ಆರ್.ಭಾರದ್ವಾಜ್ ಅವರು ಪದವಿ ಪ್ರದಾನ ಮಾಡಿದರು. ಕೋಳ್ಯೂರು ರಾಮಚಂದ್ರ ರಾಯರು ಈ ಹಿಂದೆ ರಾಜ್ಯ, ರಾಷ್ಟ್ರ ಪ್ರಶಸ್ತಿಗಳಿಂದ ಪುರಸ್ಕೃತರಾಗಿದ್ದು, ಅವರ ಕಲಾ ಸೇವೆಗೆ ಈಗ ಮತ್ತೊಂದು ಗರಿ - ಡಾಕ್ಟರೇಟ್ ಪದವಿ. ಕೋಳ್ಯೂರು ಅವರಿಗೆ ಮನತುಂಬಿದ ಹಾರ್ದಿಕ ಅಭಿನಂದನೆಗಳು.