Monday, December 26, 2011

ಡಾ.ವೆಂಕಟರಾಜ ಪುಣಿಂಚಿತ್ತಾಯರಿಗೆ 'ಬೊಳ್ಳಿಂಬಳ ಪ್ರಶಸ್ತಿ'

ಪಾಣಾಜೆಯ 'ಬೊಳ್ಳಿಂಬಳ ಶಂಕರನಾರಾಯಣ ಓಕುಣ್ಣಾಯ ಪ್ರತಿಷ್ಠಾನ'ವು ವಾರ್ಶಿಕವಾಗಿ ನೀಡುವ 'ಬೊಳ್ಳಿಂಬಳ ಪ್ರಶಸ್ತಿ'ಗೆ ಈ ಸಾರಿ ಹಿರಿಯ ವಿದ್ವಾಂಸ, ಸಂಶೋಧಕ ಡಾ.ವೆಂಕಟರಾಜ ಪುಣಿಂಚಿತ್ತಾಯರು ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ಐದು ಸಾವಿರ ರೂಪಾಯಿ ನಗದು ಪುರಸ್ಕಾರ, ಪ್ರಶಸ್ತಿ ಪತ್ರ, ಸ್ಮರಣಿಕೆಯನ್ನು ಒಳಗೊಂಡಿದೆ.

ದಶಂಬರ 25ರಂದು ಸಂಜೆ ಗಂಟೆ 4ಕ್ಕೆ ಪುತ್ತೂರಿನ 'ನಟರಾಜ ವೇದಿಕೆ'ಯಲ್ಲಿ ಜರಗುವ ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ ವಾರ್ಷಿಕೋತ್ಸವದಂದು ಪ್ರಶಸ್ತಿ ಪ್ರದಾನ ನಡೆಯಿತು. ಕರ್ನಾಟಕ ಯಕ್ಷಗಾನ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷ ಕುಂಬಳೆ ಸುಂದರ ರಾವ್ ಪ್ರಶಸ್ತಿ ಪ್ರದಾನ ಮಾಡಿದರು.

ಒಂದು ವಿಶ್ವವಿದ್ಯಾನಿಲಯವು ಒಂದು ಭಾಷೆಯ ಕುರಿತು ಏನೆಲ್ಲಾ ಮಾಡಬಹುದೋ, ಅದನ್ನು ಏಕಾಂಗಿಯಾಗಿ ಪುಣಿಂಚಿತ್ತಾಯರು ತುಳು ಭಾಷೆಯ ಬಗ್ಗೆ ಮಾಡಿದ್ದಾರೆ. 'ತುಳುವಿನಲ್ಲಿ ಶಿಷ್ಟ ಸಾಹಿತ್ಯ ಪರಂಪರೆಯೇ ಇದ್ದಿರಲಿಲ್ಲ ಎಂಬ ವಾದವನ್ನು ಅಲ್ಲಗೆಳೆದು, ನಾಲ್ಕು ಅತೀ ಪ್ರಾಚೀನ ತಾಡವಾಲೆ ಗ್ರಂಥಗಳನ್ನು ಪತ್ತೆ ಮಾಡಿ; ಅವುಗಳನ್ನು ಕನ್ನಡಕ್ಕೆ ಲಿಪ್ಯಂತರಗೊಳಿಸಿ ವಿಸ್ತಾರವಾದ ಪೀಠಿಕೆ, ಅಡಿಟಿಪ್ಪಣಿ, ಅರ್ಥಕೋಶದೊಂದಿಗೆ ಸಂಪಾದಿಸುವ ಮೂಲಕ ತುಳು ಭಾಷೆಗೆ ಭಾರತದ ಇತರ ಇಪ್ಪತ್ತು ಭಾಷೆಯಲ್ಲಿ ಸಮಾನ ಸ್ಥಾನವನ್ನು ಒದಗಿಸಿಕೊಟ್ಟ ಸಾಧನೆ ಪುಣಿಂಚಿತ್ತಾಯರದು.

ನೂರಾರು ಪಾಡ್ದನ ಸಂಗ್ರಹ, ಜಾನಪದ ರಾಮಾಯಣದ ಲಿಪಿಗಾರಿಕೆ, ದೈವಾರಾಧನೆ ಕುರಿತು ಬರೆಹ, ಕನ್ನಡ ತುಳು ಕವನ ಸಂಗ್ರಹ, ಯಕ್ಷಗಾನ ಕಲಾವಿದ ಅಲ್ಲದೆ ಕನ್ನಡ ಸಾಹಿತ್ಯ, ಸಂಸ್ಕೃತ, ಮಲೆಯಾಳ, ಹಿಂದಿ ಭಾಷೆಗಳಲ್ಲಿ ಖಚಿತ ಅನುಭವ. ನಾಟಕ, ಶಿಶುಗೀತೆ, ಧ್ವನಿಸುರುಳಿಗಳ ಸಾಹಿತ್ಯಗಳು, ಗಿಡಮೂಲಿಕೆಗಳ ಅರ್ಥಕೋಶ, ಎಪ್ಪತ್ತೈದಕ್ಕೂ ಮಿಕ್ಕಿ ಸಂಶೋಧನಾ ಬರೆಹಗಳು.. ಹೀಗೆ ಪುಣಿಂಚಿತ್ತಾಯರ ಕುರಿತು ಮೊಗೆದಷ್ಟೂ ತುಂಬುವ ಸಂಪತ್ತು.

ಮಂಗಳೂರು ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್, ಶ್ರೇಷ್ಠ ಅಧ್ಯಾಪಕ ಪ್ರಶಸ್ತಿ, ಕುಕ್ಕಿಲ ಪ್ರಶಸ್ತಿ, ದೇರಾಜೆ ಪ್ರಶಸ್ತಿ, ದ್ರಾವಿಡಿಯನ್ ಯುನಿವರ್ಸಿಟಿ ಕುಪ್ಪಂ ಇದರ ಬೆಸ್ಟ್ ರೀಸರ್ಚ್ ಅವಾರ್ಡ್ ಪುರಸ್ಕಾರ.. ಹೀಗೇ ಪ್ರಶಸ್ತಿಗಳ ಸರಮಾಲೆ. ಈ ಮಾಲೆಗೆ ಈಗ 'ಬೊಳ್ಳಿಂಬಳ ಪ್ರಶಸ್ತಿ'ಯ ಗರಿ.

ಹಿರಿಯ ಕಲಾವಿದ, ಅಧ್ಯಾಪಕ ಬಿ.ಎಸ್.ಓಕುಣ್ಣಾಯರು ತನ್ನ ತೀರ್ಥರೂಪದ ನೆನಪಿಗಾಗಿ 'ಬೊಳ್ಳಿಂಬಳ ಪ್ರಶಸ್ತಿ'ಯನ್ನು ಸ್ಥಾಪಿಸಿದ್ದು, ಈ ಹಿಂದಿನ ಸಾಲಿನಲ್ಲಿ ಹಿರಿಯ ಕಲಾವಿದರಾದ ಕೆ.ವಿ.ಗಣಪಯ್ಯ, ಎಡಮಂಗಲ ಎನ್.ಆರ್.ಚಂದ್ರ, ಬೆಟ್ಟಂಪಾಡಿ ಪಿ.ಸದಾಶಿವ ಭಟ್ - ಇವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

ಇದೇ ವೇದಿಕೆಯಲ್ಲಿ ಶ್ರಿ ಆಂಜನೇಯ ಯಕ್ಷಗಾನ ಕಲಾ ಸಂಘದ ಸಂಮಾನವನ್ನು ಹಿರಿಯ ಮದ್ದಳೆಗಾರ ಲಕ್ಷ್ಮೀಶ ಅಮ್ಮಣ್ಣಾಯ ಮತ್ತು ಕಲಾವಿದ ರಾಜರತ್ನಂ ಅವರಿಗೆ ಗೌರವಪೂರ್ವಕವಾಗಿ ಸಲ್ಲಿಸಲಾಯಿತು.

Thursday, December 1, 2011

ಬೊಂಬೆಗಳೂ ಮಾತನಾಡುತ್ತವೆ!

'ಬೊಂಬೆ'ಗೆ ಮಾತಿಲ್ಲ. ಭಾವನೆಯಿಲ್ಲ. ಚಲನೆಯಿಲ್ಲ. ಆದರೆ ರೂಪವಿದೆ, ಆಯವಿದೆ, ಆಕಾರವಿದೆ. ಅದು ಮಾತನಾಡಿದರೆ ಬೊಂಬೆಯಲ್ಲ. (ಗೊಂಬೆ = ಬೊಂಬೆ)

ಆ ಒಂದು ದಿನ. ಬೊಂಬೆಗಳು ಮಾತನಾಡಿದುವು. ಕುಣಿದುವು, ಕೈಕಾಲುಗಳನ್ನಾಡಿಸಿದುವು. ಭಾವನೆಗಳೇ ಭಾಷೆಗಳಾದುವು. ಅದು ಸಭಾಭವನ ಪೂರ್ತಿ ಆವರಿಸಿತು. ಮತ್ತೆ ಮತ್ತೆ ಕಾಡಲು ಶುರುವಾಯಿತು. 'ಬೊಂಬೆಗಳಾದ ನಮಗೇ ಮಾತು ಬರುತ್ತವೆ. ನೀವು ಮಾತನಾಡಿದರೂ ಬದುಕಿನಲ್ಲಿ ಕೆಲವೊಂದು ಸಲ ನಮ್ಮಂತೆ ಆಗುತ್ತೀರಲ್ಲಾ' ಎಂದು ಅಣಕಿಸಿದಂತೆ ಭಾಸವಾಯಿತು.

ಪುತ್ತೂರಿನ ಸಂತ ಫಿಲೋಮಿನಾ ಪ್ರೌಢಶಾಲೆಯಲ್ಲಿ ಬೊಂಬೆಗಳು ಮಾತನಾಡುತ್ತಿದ್ದಾಗ (೧೫-೧೧-೨೦೧೧) ಒಂಭೈನೂರ ಐವತ್ತು ವಿದ್ಯಾರ್ಥಿಗಳು ನಿಜಕ್ಕೂ ಬೊಂಬೆಗಳಾದರು! ಚಿಕ್ಕ ವೇದಿಕೆಯಲ್ಲಿ ಹಾದು ಹೋಗುವ ಅವುಗಳ ಕಾರುಬಾರು ಕ್ಷಣಕ್ಷಣಕ್ಕೂ ಏರುಗತಿಗೆ ಬದಲಾಗುತ್ತಿತ್ತು. ಒಂದು ಘಂಟೆಯಲ್ಲಿ ಇಡೀ ಪೌರಾಣಿಕ ಬದುಕನ್ನು ಕಟ್ಟಿಕೊಟ್ಟಿತ್ತು. 'ಕಲೆಗೆ ಜಾತಿ, ಭಾಷೆ, ಅಂತಸ್ತಿನ ಬಂಧನವಿಲ್ಲ' ಎಂಬುದನ್ನು ಸಾರಿತ್ತು.

ಕಾಸರಗೋಡಿನ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘ (ರಿ) ಇವರು 'ನರಕಾಸುರ ವಧೆ' ಎಂಬ ಯಕ್ಷಗಾನ ಪ್ರಸಂಗವನ್ನು ಬೊಂಬೆಗಳಿಂದಲೇ ಆಡಿಸಿದರು. ನಿರ್ದೇಶಕರಾದ ಕೆ.ವಿ.ರಮೇಶ್ ಮತ್ತು ಸಹೋದರರ ಭಾವನೆಗಳಂತೆ ಕಿರು ವೇದಿಕೆಯಲ್ಲಿ ಕುಣಿದ ಚಿಕ್ಕ ಗೊಂಬೆಗಳು ನರಕಾಸುರ, ಕೃಷ್ಣ, ದೇವೇಂದ್ರ, ಸತ್ಯಭಾಮೆಗಳಾಗಿ ಕಾಣಿಸಿಕೊಂಡವು.

ಬೊಂಬೆಯಾಟ ಸಂಘಕ್ಕೆ ಈಗ ಮೂವತ್ತರ ಹರೆಯ. ಮೂವತ್ತು ಶಾಲೆಗಳಲ್ಲಿ ಬೊಂಬೆಯಾಟವನ್ನು ಆಡುವುದರ ಮೂಲಕ ವಿದ್ಯಾರ್ಥಿಗಳಿಗೆ ಕಳೆದುಹೋಗುತ್ತಿರುವ ಕಲೆಯೊಂದನ್ನು ಪರಿಚಯಿಸುವ ಉದ್ದೇಶ. ಪುತ್ತೂರಿನ ಫಿಲೋಮಿನಾದಲ್ಲಾದುದು ಇಪ್ಪತ್ತೆರಡನೇ ಪ್ರಯೋಗ. ಮುಂದಿನ ಜನವರಿಯಲ್ಲಿ ರಾಜಧಾನಿಯಲ್ಲಿ ಸಮಾರೋಪ. ಮೂವತ್ತು ಪ್ರದರ್ಶನಗಳಿಗೆ ಇನ್ಫೋಸಿಸ್ ಸಾರಥ್ಯ.

'ಚಿಣ್ಣರ ಅಂಗಳಕ್ಕೆ ಪುತ್ಥಳಿ ಯಾತ್ರೆ' ಶೀರ್ಶಿಕೆಯನ್ನು ಮುಂದಿಟ್ಟು ಅಭಿಯಾನದ ಅಖಾಡಕ್ಕಿಳಿದವರು ನಿವೃತ್ತ ಅಧ್ಯಾಪಕ, ಸಹೃದಯಿ ಎಂ.ವಿ.ಭಟ್ ಮಧುರಂಗಾನ. ಅವರು ಬೊಂಬೆಯಾಟ ತಂಡವನ್ನು ಹತ್ತಿರದಿಂದ ಬಲ್ಲವರು. ಅವರು ಒಂದೆಡೆ ಬರೆಯುತ್ತಾರೆ :
ಬೊಂಬೆಯಾಟ ಸಂಘದ ಸಾಧನೆ ಅತ್ಯದ್ಭುತ. ಸದ್ದುಗದ್ದಲವಿಲ್ಲದ ಮೌನ ಕ್ರಾಂತಿ. ಎರಡು ಸಾವಿರಕ್ಕೂ ಮಿಕ್ಕಿ ಪ್ರದರ್ಶನ ನೀಡಿದೆ.

ಕಲಾ ಮೇಳಗಳಲ್ಲಿ, ಜಾನಪದ ಮೇಳಗಳಲ್ಲಿ ಭಾಗವಹಿಸಿದೆ. ಕೇರಳ, ಕರ್ನಾಟಕ, ಆಂಧ್ರ, ತಮಿಳುನಾಡು ಸೇರಿದಂತೆ ನಾನಾ ರಾಜ್ಯಗಳಲ್ಲಿ ಸಂಚರಿಸಿವೆ. ಪಾಕಿಸ್ತಾನದ ಲಾಹೋರ್, ದುಬೈ, ಪ್ರಾನ್ಸಿನ ಪ್ಯಾರಿಸ್, ಯುರೋಪಿನ ಜೆಕೋಸ್ಲೋವಾಕಿಯಾದ ಫ್ರಾಗ್ನಲ್ಲಿ ಬೊಂಬೆಗಳು ಕುಣಿದಿವೆ. ಆಕಾಶವಾಣಿ, ದೂರದರ್ಶನ, ಮಾಧ್ಯಮಗಳಿಂದ ಹೊಗಳಿಸಿಕೊಂಡಿದೆ. ನಮ್ಮ ಕನ್ನಾಡಿನ ರಾಜ್ಯೋತ್ಸವ ಪ್ರಶಸ್ತಿ ಅರಸಿ ಬಂದಿದೆ.

ತಂಡದ ನಾಯಕ ಕೆ.ವಿ.ರಮೇಶ್ ಅವರಿಗೆ ಬೊಂಬೆಯಾಟ ಉಸಿರು. ಜೀವನದ ಭಾಗ. ಅದೊಂದು ಸಂಸ್ಕೃತಿ. 'ಅದನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಹೊಣೆಗಾರಿಕೆ. ಮುಂದಿನ ಜನರೇಶನ್ಗೆ ಇಂತಹುದೊಂದು ಕಲಾಪ್ರಕಾರವಿದೆ ಎಂಬ ಅರಿವು ಉಂಟಾಗಲಿ ಎಂಬುದಕ್ಕಾಗಿ ಶಾಲೆಗಳಿಗೆ ಹೊರಟಿದ್ದೇವೆ' ಎನ್ನುತ್ತಾರೆ.

ರಮೇಶ್ ಕಳಕಳಿಯ ಹಿಂದೆ ಉದ್ದೇಶವೂ ಇದೆ - '1900ರ ಸುಮಾರಿಗೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂವತ್ತು ಬೊಂಬೆಯಾಟ ತಂಡಗಳಿದ್ದುವಂತೆ. 1981ರಲ್ಲಿ ಎಂಟಕ್ಕೆ ಇಳಿಯಿತು. 2010ರಲ್ಲಿ ಕೇವಲ ಎರಡು. ಒಂದು ಬಡಗಿನ ಉಪ್ಪಿನಕುದ್ರು ಭಾಸ್ಕರ ಕೊಗ್ಗ ಕಾಮತರ ತಂಡ. ಮತ್ತೊಂದು ಕಾಸರಗೋಡಿನದು..' ರಮೇಶ್ ಮಾತನಾಡುತ್ತಿದ್ದಾಗ ಸಾಂಸ್ಕೃತಿಕ ಪಲ್ಲಟವೊಂದರ ಚಿತ್ರ ಕಣ್ಮುಂದೆ ಹಾದು ಹೋಗುತ್ತದೆ.

'ಬೊಂಬೆಯಾಟದ ಸಂಘ ಏಳುಗಳೊಂದಿಗೆ ಬೀಳುಗಳನ್ನೂ ಅನುಭವಿಸಿದೆ. ಬೊಂಬೆಗಳ ತಯಾರಿಗಾಗಿ ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಿದೆ. ಪ್ರಯಾಣ ಮತ್ತು ಪ್ರದರ್ಶನಗಳಿಗಾಗಿ ಲೆಕ್ಕಕ್ಕೆ ಸಿಗದಷ್ಟು ಖರ್ಚು ಮಾಡಿದೆ. ಸಾಲಸೋಲಗಳಿಂದ ಸೊರಗಿದೆ. ಆದರೆ ಬಳಲಿ ಕುಳಿತಿಲ್ಲ. ನಿರಾಶೆಯಿಂದ ಕೈಬಿಟ್ಟಿಲ. ಇನ್ನೂ ಉತ್ಸಾಹದಲ್ಲಿದೆ' ಎನ್ನುತ್ತಾರೆ ಎಂ.ವಿ.ಭಟ್.

'ಚಿಣ್ಣರ ಅಂಗಳಕ್ಕೆ ಪುತ್ಥಳಿ ಯಾತ್ರೆ'ಯ ಸಂಕಲ್ಪ ರಮೇಶರ ಮುಂದೆ ಸ್ಪಷ್ಟವಾಗಿದೆ. ಕೇರಳ ಮತ್ತು ಕರ್ನಟಕದ ಐವತ್ತು ಸಾವಿರ ವಿದ್ಯಾರ್ಥಿಗಳನ್ನು ಸಂಪರ್ಕಿಸುವ ಉದ್ದೇಶ. ಈ ಯೋಜನೆಗೆ ಹೆಗಲೆಣೆಯಾಗಿ ನಿಂತವರು ಇನ್ಫೋಸಿಸ್ ಫೌಂಡೇಶನ್ನ ಮುಖ್ಯಸ್ಥೆ ಸುಧಾಮೂರ್ತಿಯವರು. 'ಅವರ ಈ ಕೊಡುಗೆಯಿಂದ ಅಳಿವಿನಂಚಿನಲ್ಲಿರುವ ಒಂದು ಪ್ರಾಚೀನ ಜಾನಪದ ಕಲೆಯನ್ನು ಪುನಶ್ಚೇತನಗೊಳಿಸಿದಂತಾಗಿದೆ. ಮುಂದಿನ ತಲೆಮಾರಿಗೆ ಈ ವಿಶಿಷ್ಟ ಕಲೆಯನ್ನು ಪರಿಚಯಿಸಿದಂತಾಗಿದೆ' ಎಂಬ ಖುಷಿ ರಮೇಶರಿಗಿದೆ.

ರಮೇಶ್ ಅವರ ಮುಂದೆ ಹಲವು ಕನಸುಗಳಿವೆ. ಬೊಂಬೆಯಾಟದ ರಂಗಮಂದಿರ, ಬೊಂಬೆ ನಿರ್ಮಾಣ ಶಾಲೆ, ಸಾವಿರ ಬೊಂಬೆಗಳ ಒಂದು ಮ್ಯೂಸಿಯಂ, ಎಲ್ಲಾ ಮಾಹಿತಿಗಳನ್ನು ಕಲೆ ಹಾಕಿದ ಒಂದು ಗ್ರಂಥಾಲಯ.. ನಿಕಟ ಭವಿಷ್ಯದ ಯೋಜನೆ-ಯೋಚನೆ. ಕಲೆ, ಭಾಷೆ, ಸಂಸ್ಕೃತಿಯನ್ನು ಪ್ರೀತಿಸುವ ಮನಸ್ಸುಗಳು 'ಮನಸ್ಸು ಮಾಡಿದರೆ' ಕಷ್ಟವೇನಿಲ್ಲ.

ಫಿಲೋಮಿನಾ ಪ್ರೌಢಶಾಲೆಯಲ್ಲಿ ಪ್ರದರ್ಶನದ ಬಳಿಕ ವಿದ್ಯಾರ್ಥಿಗಳ ಎದುರಿಗೆ ಬೊಂಬೆಗಳನ್ನು ತಂದರು. ಬೆರಳುಗಳ ಮೂಲಕ ಕುಣಿಸಿದರು. ಒಂದಿಬ್ಬರು ವಿದ್ಯಾರ್ಥಿಗಳನ್ನು ವೇದಿಕೆಗೆ ಬರಹೇಳಿ ಅವರ ಕೈಯಲ್ಲಿ ಬೊಂಬೆಗಳನ್ನು ಕೊಟ್ಟರು. ಅಧ್ಯಾಪಿಕೆಯರ ಕೈಗೂ ನೀಡಿದರು. ಪ್ರದರ್ಶನ ಮುಗಿಸಿ ಹೊರಡುವಾಗ ಎಲ್ಲರ ಮನದಲ್ಲೂ ಗೊಂಬೆಗಳೇ ಆವರಿಸಿದ್ದುವು.

ಪ್ರತಿ ಪ್ರದರ್ಶನದಲ್ಲಿ ಚಿಕ್ಕ ಸಭಾ ಕಾರ್ಯಕ್ರಮ. ಒಬ್ಬರು ಉದ್ಘಾಟಕರು. ಇನ್ನೊಬ್ಬರು ಮುಖ್ಯ ಅತಿಥಿಗಳು. ಮತ್ತೊಬ್ಬರು ಅತಿಥೇಯರು. ಯಾರಿಗೂ ಮಾತಿಗೆ ಅವಕಾಶವಿಲ್ಲ. ಯಕ್ಷಗಾನ ಬೊಂಬೆಯ ಕೈಯಲ್ಲಿರುವ ದೀಪವನ್ನು ಉದ್ಘಾಟಕರು ದೀಪದಲ್ಲಿರುವ ಬತ್ತಿಗೆ ಸೋಕಿಸಿದರಾಯಿತು. ಅಲ್ಲಿಗೆ ಉದ್ಘಾಟನಾ ಸಮಾರಂಭಕ್ಕೆ ಮುಕ್ತಾಯ. ಅತಿಥಿಗಳಿಗೆ ಸ್ಮರಣಿಕೆ, ಶಾಲು. ಗೌರವದ ಸ್ವಾಗತ-ಧನ್ಯವಾದ. ಈ ರೀತಿಯ ಚಿಕ್ಕ ಸಮಾರಂಭವು ಕಾಲದ ಆವಶ್ಯಕತೆ.

ಹಾಂ.. ಒಂದು ವಿಷಯ ಮರೆತುಬಿಟ್ಟೆ. ರಮೇಶರ ಬೊಂಬೆಯಾಟ ಸಂಘದ ಬೊಂಬೆಗಳಿವೆಯಲ್ಲಾ, ಇವುಗಳು ವಿಶ್ವದಲ್ಲೇ ಅತೀ ಸುಂದರ ಮತ್ತು ಅತಿ ಚಿಕ್ಕ ಗೊಂಬೆಗಳು ಎಂಬ ಖ್ಯಾತಿ ಪಡೆದಿವೆ.

Monday, October 31, 2011

ನಂದಿದ ಶತಮಾನದ ಧ್ವನಿ

ತೆಂಕು ಮತ್ತು ಬಡಗು ತಿಟ್ಟುಗಳ ಸವ್ಯಸಾಚಿ ಭಾಗವತ ಕಡತೋಕ ಮಂಜುನಾಥ ಭಾಗವತರು ವಿಧಿವಶರಾದರು. ಅಗಲಿದ ಚೇತನಕ್ಕೆ ಅಕ್ಷರ ನಮನ.

'ಕಡತೋಕ' ಎಂದರೆ ಸಾಕು, ಧರ್ಮಸ್ಥಳ ಮೇಳವೇ ಕಣ್ಣಮುಂದೆ ನಿಲ್ಲುತ್ತದೆ. ಇವರ ಹಾಡುಗಾರಿಕೆ ಒಂದು ಕಾಲಘಟ್ಟದ ಅದ್ಭುತ! ಶತಮಾನದ ಧ್ವನಿ. ಕಾಳಿಂಗ ನಾವುಡರ ಮಿಂಚಿನ ಸಂಚಾರದ ಸಮಯದಲ್ಲೂ ಕಡತೋಕ ಭಾಗವತರು ಸರಿಸಾಟಿಯಾಗಿ ಯಕ್ಷಗಾನ ರಂಗದಲ್ಲಿ ನಿಂತವರು. ಧರ್ಮಸ್ಥಳ ಮೇಳದ ಯಕ್ಷಗಾನ ವೈಭವಗಳ ದಿನಗಳ ಕುರಿತು ಮಾತನಾಡುವಾಗ ಕಡತೋಕರನ್ನು ಬಿಟ್ಟು ಮಾತನಾಡಲು ಸಾಧ್ಯವಿಲ್ಲ. ತನ್ನ ಹಾಡುಗಾರಿಕೆ ಮೂಲಕ ಪ್ರಸಂಗಗಳಿಗೆ, ಪಾತ್ರಕ್ಕೆ, ಪಾತ್ರಧಾರಿಗಳಿಗೆ ಹೊಸ 'ಸೃಷ್ಟಿ'ಯನ್ನು, 'ದೃಷ್ಟಿ'ಯನ್ನು ನೀಡಿದ ಅಸಾಮಾನ್ಯ. ಕಡತೋಕರು ರಂಗದಲ್ಲಿ ಜಾಗಟೆ ಹಿಡಿದಷ್ಟು ದಿವಸ ಅವರೇ ತ್ರಿವಿಕ್ರಮ.
ಶ್ರೀ ಧರ್ಮಸ್ಥಳ ಮೇಳದ ಮುಮ್ಮೇಳ, ಕಡತೋಕರ ಸಾರಥ್ಯದಲ್ಲಿ ಹಿಮ್ಮೇಳ, ಮುಗಿಬೀಳುವ ಪ್ರೇಕ್ಷಕ ವರ್ಗ..ಅದ್ದೂರಿ.. ಇವೆಲ್ಲ ಯಕ್ಷಗಾನದ ವೈಭವದ ದಿನಗಳು. "ಮಾತಿಗೆ" ಸಾಂಸ್ಕೃತಿಕವಾದ ಮೌಲ್ಯವನ್ನು ಕೊಟ್ಟ ದಿನಮಾನಗಳು. ಕಡತೋಕರು ಇಂದು ದೈಹಿಕವಾಗಿ ಅಗಲಿದ್ದಾರೆ. ಮಾನಸಿಕವಾಗಿ ಜೀವಂತ.

Saturday, October 29, 2011

ಉಡುಪಿ ಕಲಾರಂಗದ ಪ್ರಶಸ್ತಿ ಪ್ರಕಟ

ಉಡುಪಿಯ ಶ್ರೀ ಕೃಷ್ಣ ಮಠ ಮತ್ತು ಪರ್ಯಾಯ ಶ್ರೀ ಶಿರೂರು ಮಠದ ಆಶ್ರಯದಲ್ಲಿ ಉಡುಪಿ ಕಲಾರಂಗದ 'ಶ್ರೀ ವಿಶ್ವೇಶತೀರ್ಥ ಪ್ರಶಸ್ತಿ' ಸಹಿತ ವಿವಿಧ ಪ್ರಶಸ್ತಿ ಪ್ರದಾನ ಸಮಾರಂಭವು ನವೆಂಬರ್ 13, ಭಾನುವಾರದಂದು ಅಪರಾಹ್ನ ಗಂಟೆ 3-00ರಿಂದ 8-30ರ ತನಕ ರಾಜಾಂಗಣದಲ್ಲಿ ನಡೆಯಲಿದೆ.

ಈ ಸಾಲಿನ 'ಶ್ರೀ ವಿಶ್ವೇಶತೀರ್ಥ ಪ್ರಶಸ್ತಿ'ಯು ಯಕ್ಷಗಾನ ಕಲಾಕ್ಷೇತ್ರ, ಗುಂಡಿಬೈಲು, ಉಡುಪಿ ಇವರಿಗೆ ಪ್ರಾಪ್ತವಾಗಿದೆ.

ಇತರ ಪ್ರಶಸ್ತಿಗಳ ವಿವರ: ಶ್ರೀಗಳಾದ ಪುತ್ತೂರು ಶ್ರೀಧರ ಭಂಡಾರಿ (ಡಾ.ಬಿ.ಬಿ.ಶೆಟ್ಟಿ ಪ್ರಶಸ್ತಿ), ಬಾಬು ಕುಡ್ತಡ್ಕ (ನಿಟ್ಟೂರು ಸುಂದರ ಶೆಟ್ಟಿ ಮಹೇಶ್ ಡಿ.ಶೆಟ್ಟಿ ಪ್ರಶಸ್ತಿ), ಹಾಲಾಡಿ ಕೃಷ್ಣ (ಕುಷ್ಠ) ಗಾಣಿಗ (ಪ್ರೊ.ಬಿ.ವಿ.ಆಚಾರ್ಯ ಪ್ರಶಸ್ತಿ), ಆನಂದ ಶೆಟ್ಟಿ, ಮಜ್ಜಿಗೆಬೈಲು (ಬಿ.ಜಗಜ್ಜೀವನದಾಸ್ ಶೆಟ್ಟಿ ಪ್ರಶಸ್ತಿ), ಕೃಷ್ಣಯಾಜಿ ಇಡಗುಂಜಿ (ಭಾಗವತ ನಾರಣಪ್ಪ ಉಪ್ಪೂರ ಪ್ರಶಸ್ತಿ), ಹಳ್ಳದಾಚೆ ವೆಂಕಟರಾಮಯ್ಯ (ಕಡಿಯಾಳಿ ಸುಬ್ರಾಯ ಉಪಾಧ್ಯಾಯ ಪ್ರಶಸ್ತಿ), ಜಮದಗ್ನಿ ಶೀನ ನಾಯ್ಕ್ (ಐರೋಡಿ ರಾಮ ಗಾಣಿಗ ಪ್ರಶಸ್ತಿ), ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ (ಪಡಾರು ನರಸಿಂಹ ಶಾಸ್ತ್ರಿ ಪ್ರಶಸ್ತಿ), ಬಜ್ಪೆ ದೇರಣ್ಣ (ಶ್ರೀಮತಿ ಮತ್ತು ಶ್ರೀ ಹೆಚ್.ಆರ್.ಕೆದ್ಲಾಯ ಪ್ರಶಸ್ತಿ), ಮಂಜೇಶ್ವರ ಜನಾರ್ದನ ಜೋಗಿ (ಯು.ವಿಶ್ವನಾಥ ಶೆಣೈ ಪ್ರಶಸ್ತಿ), ಎಸ್.ಗೋಪಾಲಕೃಷ್ಣ (ಯಕ್ಷಚೇತನ ಪ್ರಶಸ್ತಿ)

ನವೆಂಬರ 13ರಂದು ಅಪರಾಹ್ನ ಗಂಟೆ 3-5ರ ತನಕ ಬಡಗು ತಿಟ್ಟಿನ 'ಸೈಂಧವ ವಧೆ' ಯಕ್ಷಗಾನ, 5ರಿಂದ ಸಭಾಕಾರ್ಯಕ್ರಮ, 6-30ರಿಂದ 8-30 ತೆಂಕು ತಿಟ್ಟಿನ 'ಮಹಿಷವಧೆ' ಯಕ್ಷಗಾನ ಬಯಲಾಟ.

Wednesday, October 26, 2011

ಪು.ಶ್ರೀನಿವಾಸ ಭಟ್ - ಇನ್ನು ನೆನಪು

2010ರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ. ಹಿರಿಯರಾದ ಕಟೀಲಿನ ಪು. ಶ್ರೀನಿವಾಸ ಭಟ್ಟರೊಂದಿಗೆ ನನಗೂ ಪ್ರಶಸ್ತಿ ಸ್ವೀಕರಿಸುವ ಅವಕಾಶ. ಅವರ ಸರದಿಯ ಬಳಿಕ ನನ್ನದು. 'ಒಳ್ಳೆಯದಾಗಲಿ, ಸ್ವೀಕರಿಸಿ' ಎಂದು ಹರಸಿದರು.

ಬಳಿಕ ಮಾತನಾಡುತ್ತಾ, 'ಇಂದು ಬೆಂಗಳೂರಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭವಲ್ವಾ, ಈ ವಯಸ್ಸಲ್ಲಿ ಅದು ಪ್ರಾಪ್ತವಾಗಬೇಕಿತ್ತು. ಏನು ಮಾಡ್ಲಿ ಹೇಳಿ, ನನಗೆ ರಾಜಕೀಯ ಬಲ ಇಲ್ಲ, ಆರ್ಥಿಕ ಬಲ ಮೊದಲೇ ಇಲ್ಲ' ಎಂದು ನಿಟ್ಟುಸಿರು ಬಿಟ್ಟಿದ್ದರು.

ಕಟೀಲಿನಲ್ಲಿ ಪುಚ್ಚೆಕೆರೆ ಕೃಷ್ಣ ಭಟ್ಟರು ಮುಖ್ಯಗುರು ಆಗಿದ್ದಾಗ ಕಾರ್ಯಕ್ರಮಗಳಿಗೆ ಭಾಗವಹಿಸುತ್ತಿದ್ದೆ. ಅವರೊಂದಿಗೆ ಶ್ರೀನಿವಾಸ ಭಟ್ಟರ ಸಾಥಿ. ಆಗೆಲ್ಲಾ ಯಕ್ಷಗಾನದ್ದೇ ಗುಂಗು. ಮುಖತಃ ಸಿಕ್ಕಾಗೆಲೆಲ್ಲ, 'ನಿಮ್ಮ ಲೇಖನ ಓದುತ್ತಾ ಇದ್ದೇನೆ. ಬರೆಯಿರಿ' ಎಂದು ಹಾರೈಸುತ್ತಿದ್ದರು.

'ಕಲಾವಿದರ ಪರಿಚಯ ಪತ್ರಿಕೆಗಳಲ್ಲಿ ಬರೆಯಬಾರದು ಮಾರಾಯ್ರೆ, ಪ್ರಕಟವಾದ ಬಳಿಕ ಫೋನಿಸುವುದು ಬಿಡಿ, ಕೃತಜ್ಞತೆಯ ನುಡಿಯೂ ಇಲ್ಲ' ಎಂದು ಒಮ್ಮೆ ಖೇದ ವ್ಯಕ್ತಪಡಿಸಿದ್ದರು.`ಈ ವಿಚಾರದಲ್ಲಿ ನಿಮ್ಮೊಂದಿಗೆ ನಾನೂ ಪಾಲುದಾರ' ಎಂದಿದ್ದೆ.
ಇದು ನೂರಕ್ಕೆ ನೂರು ಸತ್ಯ. ಬರೆದ ಲೇಖನ ಹೇಗಿದೆ ಎಂಬುದಕ್ಕಿಂತಲೂ, ಲೇಖನದಲ್ಲಿ ಬಿಟ್ಟ ಅಂಶ ಯಾವುದು ಎಂಬುದನ್ನೇ ಎತ್ತಿ ಆಡುವ ಕೃತಘ್ನರಿಗೆ ಸಹಾಯ ಮಾಡಬೇಕಾ? ಎಂದು ಶ್ರೀನಿವಾಸ ಭಟ್ಟರು ನೋವಿನಿಂದ ಹೇಳಿದ ವಿಚಾರವು ಅವರ ಮರಣ ವಾರ್ತೆ ಬಂದಾಗ ನೆನಪಾಯಿತು.

ಪು.ಶ್ರೀನಿವಾಸ ಭಟ್ಟರು ಹಿರಿಯ ಜಾನಪದ ವಿದ್ವಾಂಸ. ಸಾಹಿತಿ. ನಿವೃತ್ತ ಶಿಕ್ಷಕ. ಮೂಲತಃ ಕವತ್ತಾರು ಗ್ರಾಮದ ಪುತ್ತೂರಿನವರು. ಮೂರು ದಶಕಗಳ ಕಾಲ ಕಟೀಲಿನ ಪ್ರಾಥಮಿಕ ಶಾಲೆಯಲ್ಲೇ ಸೇವೆ.

ಹನ್ನೊಂದು ಯಕ್ಷಗಾನ ಕೃತಿಗಳ ರಚಯಿತರು. ಕನ್ನಡ ಮತ್ತು ತುಳುವಿನಲ್ಲಿ ನಾಡಿನ ಹಲವಾರು ಪತ್ರಿಕೆಗಳಿಗೆ ಲೇಖನಗಳನ್ನು, ಅಂಕಣಗಳನ್ನು ಬರೆಯುತ್ತಿದ್ದರು. ತಾಳಮದ್ದಳೆ ಕೂಟಗಳಲ್ಲಿ ಅವಲೋಕನಕಾರನಾಗಿ, ಸ್ಪರ್ಧೆಗಳಲ್ಲಿ ತೀರ್ಪುಗಾರನಾಗಿ ತೊಡಗಿಸಿಕೊಂಡಿದ್ದರು. ಶಿಲಾಶಾಸನಗಳ ಅಧ್ಯಯನಕಾರನಾಗಿ ಹಲವಾರು ದೇವಳಗಳ, ದೈವಸ್ಥಾನಗಳ ಕುರಿತು ಸಂಶೋಧನಾಲೇಖನಗಳನ್ನು ಬರೆದಿದ್ದಾರೆ. ಕುಬೆವೂರು ಪುಟ್ಟಣ್ಣ ಶೆಟ್ಟಿ, ಕೊ.ಅ.ಉಡುಪ, ಯಕ್ಷಲಹರಿ ಪ್ರಶಸ್ತಿಗಳಿಂದ ಪುರಸ್ಕೃತರು.
24 ಅಕ್ಟೋಬರ್ 2011ರಂದು ಬಜಪೆಯ ಪಾಪ್ಯುಲರ್ ಶಾಲೆಯಲ್ಲಿ ದೀಪಾವಳಿಯ ಕುರಿತು ಉಪನ್ಯಾಸ ಮುಗಿಸಿ, ಮರಳುವಾಗ ಎದೆನೋವು ಕಾಣಿಸಿಕೊಂಡು, ಮನೆಸೇರಿದಾಗ ಕುಸಿದರು. ಶಿವೈಕ್ಯವಾದರು. ಅಗಲಿದ ಹಿರಿಯ ಚೇತನಕ್ಕ ಭಾಷ್ಪಾಂಜಲಿ.

Thursday, September 29, 2011

ಮನ ಸೆಳೆಯುವ 'ತದ್ರೂಪಿ ಯಕ್ಷ'ರು

'ಪುತ್ತೂರಿನ ಕಾನಾವು ಮನೆಯಲ್ಲಿ ಯಕ್ಷಗಾನ ವೇಷಗಳಿವೆ,' ಮಿತ್ರ ಪ್ರಕಾಶ್ ಕೊಡೆಂಕಿರಿ ಸುಳಿವು ಕೊಟ್ಟರು. 'ಹತ್ತರೊಟ್ಟಿಗೆ ಹನ್ನೊಂದು' ಎನ್ನುತ್ತಾ ಉದಾಸೀನ ತೋರಿದೆ. ಅವರ ದಾಕ್ಷಿಣ್ಯಕ್ಕೆ ಕಟ್ಟುಬಿದ್ದು ಹೋಗಿ ನೋಡ್ತೇನೆ, ಕಲಾವಿದರೇ ವೇಷತೊಟ್ಟು ಅಲ್ಲಿ ನಿಂತಿದ್ದರು!

ಅಲ್ಲಿದ್ದುದು ಯಕ್ಷಗಾನದ ವೇಷಗಳ ಮುಖವಾಡವಲ್ಲ, ತದ್ರೂಪಿ ಪ್ರತಿಕೃತಿ. 'ಯಕ್ಷಗಾನದ ವೇಷವೊಂದನ್ನು ನಮ್ಮ ಕಣ್ಣುಗಳು ಹೇಗೆ ನೋಡ್ತದೋ, ಅದರಂತೆ ಈ ರಚನೆ' ಎಂದು ಪರಿಚಯಿಸಿದರು, ಕಲಾವಿದ ಕುಂದಾಪುರದ ಪ್ರಕಾಶ್ ಕೋಣಿ.

ಯಕ್ಷಗಾನ ಮುಖವಾಡಗಳಿಂದು ಸಮಾರಂಭಗಳಲ್ಲಿ ಸ್ಮರಣಿಕೆಗಳಾಗಿ ಪ್ರಸಿದ್ಧಿಯಾಗಿವೆ. ಮಂಗಳೂರು, ಕಾರ್ಕಳಗಳಲ್ಲಿ ವೇಷದ ಪ್ರತಿಕೃತಿಗಳು ಮ್ಯೂಸಿಯಂಗಳಲ್ಲಿವೆ. ಅಡೂರು ಶ್ರೀಧರ ರಾಯರು ಸ್ವತಃ ಯಕ್ಷಗೊಂಬೆಗಳನ್ನು ಪಾರಂಪರಿಕ ರೀತಿಯನ್ನು ತಯಾರಿಸುತ್ತಾರೆ. ಪ್ರಕಾಶ್ ಕೋಣಿಯವರ 'ತದ್ರೂಪಿ ಯಕ್ಷ'ರು ಈ ಎಲ್ಲಾ ಕಲಾಗಾರಿಕೆಗಳಿಗಿಂತ ಭಿನ್ನ. ರಚನೆಗಳಲ್ಲಿ ವ್ಯತ್ಯಾಸವಿಲ್ಲದಿದ್ದರೂ ವಿನ್ಯಾಸಗಳಲ್ಲಿ ತುಸು ಭಿನ್ನ.

ವೇಷಧಾರಿಯು ಪಾತ್ರಕ್ಕೆ ಸಿದ್ಧವಾಗಲು ಏನೆಲ್ಲಾ ಪರಿಕರಗಳನ್ನು ಬಳಸಿಕೊಳ್ಳುತ್ತಾರೋ ಅವೆಲ್ಲಾ ಇಲ್ಲಿವೆ ಉದಾ. ಸಾಕ್ಸ್, ಗೆಜ್ಜೆ, ಕಚ್ಚೆ, ಕಿರೀಟ, ಆಭರಣಗಳು.. ಇತ್ಯಾದಿ. ಹಾಗಾಗಿ ತದ್ರೂಪಿಯ ಮುಂಭಾಗ ಎಷ್ಟು ಸೌಂದರ್ಯವಾಗಿ ಕಾಣುತ್ತದೋ, ಅಷ್ಟೇ ಹಿಂಭಾಗವೂ ಕೂಡಾ. ತದ್ರೂಪಿಯನ್ನು ನಿಲ್ಲಿಸಿದಾಗ ಕಲಾವಿದನೇ ವೇಷತೊಟ್ಟು ನಿಂತಂತೆ ಭಾಸವಾಗುತ್ತದೆ.

ಬಳಸುವ ಬಟ್ಟೆ, ತೊಡುವ ಆಭರಣದ ಗಾತ್ರ, ಕಿರೀಟ, ಕೇಶ.. ವಿನ್ಯಾಸಗಳಲ್ಲಿ ರಾಜಿಯಿಲ್ಲ. ಹಾಗಾಗಿ ಒಂದು ತದ್ರೂಪಿ ಸೃಷ್ಟಿಯಾಗಲು ವಾರಗಟ್ಟಲೆ ಬೇಕಂತೆ. ಖರ್ಚೂ ಅಧಿಕ. ಈಗಾಗಲೇ ಬಹಳಷ್ಟು ಮಂದಿ ಮೆಚ್ಚಿಕೊಂಡು, ಪ್ರಕಾಶರ ಬೆನ್ನುತಟ್ಟಿದ್ದಾರೆ, ತದ್ರೂಪಿ ಯಕ್ಷರನ್ನು ಮನೆಯೊಳಗೆ ಸೇರಿಸಿಕೊಂಡಿದ್ದಾರೆ.

'ತದ್ರೂಪಿ ಆಕರ್ಷಕವಾಗಿದೆ. ನನ್ನ ಕ್ಲಿನಿಕ್ನಲ್ಲಿ ಇಟ್ಟಿದ್ದೇನೆ. ಎಲ್ಲರೂ ಇದರ ನೋಟಕ್ಕೆ ಮಾರುಹೋಗಿ ವಿಚಾರಿಸುತ್ತಿದ್ದಾರೆ' ಎನ್ನುತ್ತಾರೆ ಪುತ್ತೂರಿನ ವೈದ್ಯ ಡಾ.ವಿಶ್ವನಾಥ ಭಟ್ ಕಾನಾವು.

ತದ್ರೂಪಿಗಳ ಎತ್ತರ ಎರಡೂವರೆ ಅಡಿ. ಐದರಿಂದ ಆರು ಕಿಲೋ ಭಾರ. ಮುಖ ರಚನೆಯಲ್ಲಿ ಪೈಬರ್ ಬಳಸಿದ್ದರಿಂದ ಅಂದ ಹೆಚ್ಚು. ಗ್ಲಾಸ್ಮನೆ(ಚೌಕಟ್ಟು)ಯಲ್ಲಿಟ್ಟರೆ ಬಾಳ್ವಿಕೆ ಹೆಚ್ಚು.

ಪ್ರಕಾಶರಿಗೆ ಬಾಲ್ಯದಿಂದಲೇ ಯಕ್ಷಗೀಳು. ಚೌಕಿಯಲ್ಲಿ ರಾತ್ರಿ ಹೋಗಿ ಕುಳಿತರೆ, ಬೆಳಿಗ್ಗೆಯೇ ಹೊರಬರುವುದು! ಪಾತ್ರಧಾರಿ ಬಣ್ಣ ಹಾಕುವಲ್ಲಿಂದ, ರಂಗಕ್ಕೆ ಹೋಗಿ ಪುನಃ ವೇಷ ಬಿಚ್ಚುವ ತನಕ ನೋಡಿ ಆನಂದಿಸುವ ಅಪರೂಪದ ಚಾಳಿ! 'ಇಲ್ಲೇನು ಮಾಡ್ತೆ. ಆಟ ನೋಡು' ಎಂದು ಕಲಾವಿದರು ಅಬ್ಬರಿಸಿದರೂ, ಪ್ರಕಾಶ್ ಜಪ್ಪೆನ್ನುತ್ತಾ ಬಣ್ಣದ ಮನೆಯಲ್ಲೇ ಆಟ ನೋಡ್ತಾರೆ.

ಯಕ್ಷಗಾನದ ವೇಷ ತಯಾರಿಯನ್ನು ನೋಡುವ ಅವರ ಚಪಲವೇ 'ತದ್ರೂಪಿ ಯಕ್ಷ'ರ ಸೃಷ್ಟಿಯ ಹಿನ್ನೆಲೆ. ಬಣ್ಣದ ಮನೆಯಲ್ಲಿ ನೋಡಿದ ದೃಶ್ಯಗಳು ಮಸ್ತಕದ ಕಂಪ್ಯೂಟರಿನಲ್ಲಿ ದಾಖಲು. 'ಆರಂಭದ ದಿವಸಗಳಲ್ಲಿ ಇದಕ್ಕೆ ಬೇಕಾದ ಪರಿಕರಗಳು ಅಂಗಡಿಯಲ್ಲಿ ಸಿಕ್ತದೆ ಅಂತ ಗೊತ್ತಿರಲಿಲ್ಲ. ನಂತರ ತಿಳಿಯಿತು' ಎನ್ನುತ್ತಾರೆ.

ಏಕಲವ್ಯ ಅಭ್ಯಾಸ. ಮಾಡುತ್ತಾ ಕಲಿತರು. ತದ್ರೂಪಿಗಳ ಆಕರ್ಷಕ ವಿನ್ಯಾಸ ಮತ್ತು ನೋಟಕ್ಕೆ ಮಾರು ಹೋದ ಕಲಾವಿದರನ್ನು ಪ್ರಕಾಶ್ ಜ್ಞಾಪಿಸಿಕೊಳ್ಳುತ್ತಾರೆ. ಪ್ರಕಾಶರ ಅಕ್ಕ ದ.ಕ.ಜಿಲ್ಲೆಯ ಸವಣೂರಿನಲ್ಲಿ ಅಧ್ಯಾಪಿಕೆ. ಅವರ ಮೂಲಕ ಕಾನಾವು ಶ್ರೀದೇವಿಯವರ ಪರಿಚಯ. ಪ್ರಕಾಶರ ಕಲಾಗಾರಿಕೆಯನ್ನು ನೋಡಿದ ಇವರು ಮುಂದಿನ ಅಭ್ಯಾಸಕ್ಕಾಗಿ ಸುಳ್ಯದ ಕಲಾವಿದ ಜೀವನರಾಂ ಗುರುಕುಲಕ್ಕೆ ಹಾದಿ ತೋರಿದರು. ’ನನಗೆ ಕಲಾ ಕಲಿಕೆಯ ಬಾಲಪಾಠದ ಶೈಕಣಿಕ ಕೊರತೆಯಿದೆ ಎಂದು ಇಲ್ಲಿಗೆ ಬಂದ ಮೇಲೆ ತಿಳಿಯಿತು' ಎನ್ನುತ್ತಾರೆ ಪ್ರಕಾಶ್.

ಬೆಂಗಳೂರು ಸನಿಹದ ಬಿಡದಿಯ ಕಲಾಶಾಲೆಯಲ್ಲಿ ಅಕಾಡೆಮಿಕ್ ಅಭ್ಯಾಸ. ಶಿಲ್ಪಕಲೆಯಲ್ಲಿ ವಿಶೇಷ ಕಲಿಕೆ. ಒಂದೂವರೆ ವರುಷ ಕಲಿಕೆಯೊಂದಿಗೆ ಪ್ರಾಕ್ಟಿಕಲ್. 'ನಿಜಕ್ಕೂ ನನಗೊಂದು ಟರ್ನಿಂಗ್ ಪಾಯಿಂಟ್. ಮೊದಲೇ ಬರಬೇಕಿತ್ತು.' ಎಂದಾಗ ಅವರ ಕಲಿಕಾ ಹಸಿವು ಅರ್ಥಮಾಡಿಕೊಳ್ಳಬಹುದು.

ತದ್ರೂಪಿಗಳ ಸೃಷ್ಟಿಗೆ ಇನ್ನಷ್ಟು ವೇಗ. ಆಯ-ಆಕಾರ ಫಿನಿಶಿಂಗ್ ಪಡೆಯಿತು. 'ತದ್ರೂಪಿಗಳ ರಚನೆಗೆ ಬಹಳಷ್ಟು ಸಮಯ ಹಿಡಿಯುತ್ತದೆ. ವೆಚ್ಚವೂ ಅಧಿಕ. ಹಾಗಾಗಿ ಐದಾರು ಸಾವಿರ ದರವಿಟ್ಟರೂ ಕಡಿಮೆಯೇ. ಅಷ್ಟೊಂದು ಮೊತ್ತ ಕೊಟ್ಟು ಕೊಳ್ಳುವ ಕಲಾ ಹೃದಯವಂತರು ಇದ್ದಾರೆ. ಹೆಚ್ಚು ಬಂಡವಾಳ ಬೇಡುವ ಉದ್ದಿಮೆ. ಆದರೆ ಹೊಟ್ಟೆಪಾಡಿಗಾಗಿ ಚಾಲ್ತಿಯಲ್ಲಿರುವ ಮುಖವಾಡ ತಯಾರಿ ಕಾರ್ಯಾಗಾರವನ್ನು ಆರಂಭಿಸಬೇಕು' ಎನ್ನುತ್ತಾರೆ ಪ್ರಕಾಶ್.

ತದ್ರೂಪಿಗಳ ರಚನೆಗೆ ಬಳಸುವ ಪರಿಕರಗಳಲ್ಲಿ ರಾಜಿಯಿಲ್ಲ. ರಂಗದಲ್ಲಿ ವೇಷವನ್ನು ನೋಡಿದ ಹಾಗೆ ಇರಬೇಕು. ಆದರೆ ಮನುಷ್ಯದ ಬದಲಿಗೆ ಬೊಂಬೆ. ಉಳಿದುದೆಲ್ಲಾ ಯಥಾವತ್.

ಪ್ರಕಾಶ್ ಮುಗ್ಧ. ಸರಳ. ಮುಜುಗರದ ವ್ಯಕ್ತಿ. ಹತ್ತು ಮಾತನಾಡಿದರೆ ಒಂದು ಮಾತನಾಡಿಯಾರು. ಕಲೆಯತ್ತಲೇ ಅವರ ಮೈಂಡ್ ಸೆಟ್. 'ಎಷ್ಟೇ ಖರ್ಚು ಬೀಳಲಿ, ಕಷ್ಟವಾಗಲಿ, ತದ್ರೂಪಿ ಕೆಲಸವನ್ನು ಬಿಡುವುದಿಲ್ಲ' ಎಂದಾಗ ಇವರಿಂದ ಕಲಾಕೃತಿಯನ್ನು ಕೊಂಡು ಪ್ರೋತ್ಸಾಹಿಸೋಣ ಎಂದು ಅನ್ನಿಸುತ್ತದೆ.

(7353258662)

Wednesday, September 28, 2011

ಹೊಸಹಿತ್ಲು 'ಲಿಂಗಣ್ಣ' - ನೆನಪಿನ ಭಾಷ್ಪಾಂಜಲಿ


1998ರ ಸಮಯ. ನನಗಾಗ ಬಹುತೇಕ ರಾತ್ರಿಗಳೆಲ್ಲಾ ಹಗಲು! ಕುಳಿತಲ್ಲಿ, ನಿಂತಲ್ಲಿ ಆಟದ್ದೇ ಮಾತು, ಧ್ಯಾನ. 'ನಿನ್ನೆ ಹಾಗಾಯಿತು, ಇಂದು ಹೀಗಾಗಬಹುದು' - ಈ ವ್ಯಾಪ್ತಿಯೊಳಗೆ ಮಾತಿನ ಸುರುಳಿ. ಅವಕಾಶ, ಬಹುಬೇಡಿಕೆ ಬರುತ್ತಿರುವುದರಿಂದ ಮನದೊಳಗೆ 'ಒಣಜಂಭ'.

ಅಂದು 'ಕಂಸವಧೆ' ಪ್ರಸಂಗ. ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿಗಳ ಭಾಗವತಿಕೆ. ನನ್ನ 'ಕೃಷ್ಣ'. ಹೊಸಹಿತ್ಲು ಮಹಾಲಿಂಗ ಭಟ್ಟರ 'ಅಕ್ರೂರ'. ಅವರ ಕಲಾಗಾರಿಕೆಯನ್ನು ಹೇಳಿ-ಕೇಳಿ ಗೊತ್ತಿತ್ತೇ ವಿನಾ, ನೋಡಿದ್ದಿರಲಿಲ್ಲ, ಮಾತನಾಡಿದ್ದಿರಲಿಲ್ಲ. ಎಂದಿನಂತೆ ಚೌಕಿಗೆ ಹೋದಾಗ ಮಾತನಾಡಿಸುವ ಸ್ನೇಹಿತರು(?) ಸಿಕ್ಕರು. ಒಂದಷ್ಟು ಹೊತ್ತು ನಿನ್ನೆಯದೋ, ಮೊನ್ನಿನದೋ ಆಟದ ಕುರಿತು ವ್ಯಂಗ್ಯ, ಕ್ಲೀಷೆ, ಹೊಗಳಿಕೆ.. ನಡೆಯುತ್ತಲೇ ಇತ್ತು. 'ಇಂದಿನ ಆಟದ ಸುದ್ದಿ' ಯಾರೂ ಮಾತನಾಡುತ್ತಿಲ್ಲ.

'ಕಾರಂತ್ರೆ, ಲಿಂಗಣ್ಣ ಅವರಲ್ಲಿ ಮಾತನಾಡಿದ್ರಾ' ಎಂದರು ತೆಂಕಬೈಲು. 'ಪರಿಚಯವಿಲ್ಲ' ಎಂದೆ. ದೇವರ ಪೆಟ್ಟಿಗೆಯ ಹತ್ತಿರ ವಿಶ್ರಾಂತಿಯಲ್ಲಿದ್ದ ಅವರ ಬಳಿಗೆ ಕರೆದೊಯ್ದ ಭಾಗವತರು ಪರಿಚಯ ಮಾಡಿಕೊಟ್ಟರು. 'ಇವರಾ. ಕಾರಂತ್ರು ಅಂದ್ರೆ.. ಏನಯ್ಯಾ.. ಹೇಗಿದ್ದೀರಿ' ಎಂಬ ಮೊದಲ ಮಾತು ಅವರದ್ದೇ ಆಯಿತು. 'ಈ ಪ್ರಸಂಗದಲ್ಲಿ ಎಷ್ಟು ಕೃಷ್ಣನ ವೇಷ ಮಾಡಿದ್ರಿ' ಎಂಬುದು ಮರುಪ್ರಶ್ನೆ.

ಈ ಪ್ರಶ್ನೆಯಲ್ಲಿದ್ದ ಹಿರಿತನ ನನ್ನನ್ನು ಚುಚ್ಚಿತು. ನಿಜಕ್ಕೂ ಸ್ತ್ರೀಪಾತ್ರದಲ್ಲೇ ಹೆಚ್ಚು ಕಾಣಿಸಿಕೊಳ್ಳುತ್ತಿದ್ದ ನಾನು ಪುರುಷ ಪಾತ್ರಗಳನ್ನು ಮಾಡಿದ್ದೂ ಕಡಿಮೆ. ಈ ಪ್ರಶ್ನೆ ನನ್ನ ಅರ್ಧ ಶಕ್ತಿಯನ್ನು ಉಡುಗಿಸಿತ್ತು. 'ಒಂದೆರಡು ಮಾಡಿದ್ದೇನೆ' ಎಂದೆ. 'ಊಟ ಆಯಿತಾ' ಎಂದರು. 'ಬನ್ನಿ.. ಮಾತನಾಡುತ್ತಾ ಊಟ ಮಾಡೋಣ' ಎಂದು ಎದ್ದರು.

ನನಗೆ ಆಶ್ಚರ್ಯವಾಯಿತು. ನನಗೋ 30-32 ಆದರೆ ಅವರಿಗೋ 60 ಮೀರಿದ ಹರೆಯ. 'ಇಂದು ನನ್ನನ್ನು ಲಗಾಡಿ ಕೊಡ್ತಾರೆ' ಎಂದು ಮನಸ್ಸಿನಲ್ಲೇ ಸಂಘಟಕರಿಗೆ ಹಿಡಿಶಾಪ ಹಾಕುತ್ತಾ ಹೆಜ್ಜೆ ಹಾಕಿದೆ. 'ಬನ್ನಿ.. ಒಳ್ಳೆಯ ಗಾಳಿ ಇದೆ. ಇಲ್ಲೇ ಮಾತನಾಡೋಣ.. ನಿಮ್ಮ ಬಗ್ಗೆ ಕೇಳುತ್ತಾ ಇದ್ದೇನೆ. ಪತ್ರಿಕೆಗಳಲ್ಲಿ ಲೇಖನ ಒದುತ್ತಾ ಇದ್ದೇನೆ..' ಹೀಗೆ 'ಹೊಗಳುತ್ತಾ' (ಹೊಗಳಿದಾಗ ಉಬ್ಬುವುದು ಸಹಜ ಧರ್ಮ!) ಹೋದ ಹಾಗೆ ಅಂಜಿಕೆ ದೂರವಾಗುತ್ತಾ ಹೋಯಿತು.

'ಸರಿ.. ಜಲದಿಸುತೆಯಳ.. ಈ ಪದ್ಯಕ್ಕೆ ಏನು ಅರ್ಥ ಹೇಳ್ತೀರಿ ನೋಡ್ವಾ' ಎಂದರು. ನನಗೆ ಗೊತ್ತಿರುವಷ್ಟನ್ನು ಒಪ್ಪಿಸಿದೆ. ಎರಡನೇ ಪದ್ಯ, ಮೂರನೇ ಪದ್ಯ.. ಹೀಗೆ ನನ್ನ ಸಂದರ್ಶನ ಮುಗಿಸಿದರು. ನಂತರ ಅಕ್ರೂರದ ಪದ್ಯದ ಪಾಳಿ ಬಂದಾಗ, 'ನಾನು ಏನು ಹೇಳ್ತೇನೆ ಎಂಬುದನ್ನು ಈಗ ಹೇಳುವುದಿಲ್ಲ. ನನ್ನ ಜತೆಯಲ್ಲೇ ಬಂದರೆ ಆಯಿತು' ಎಂದರು. ನಿಜಕ್ಕೂ 'ತಲೆಬುಡ' ಗೊತ್ತಾಗಲಿಲ್ಲ.

ಮೇಕಪ್ಗೆ ಕುಳಿತೆ. 'ಸ್ತ್ರೀವೇಷ ಮಾಡುವವರು ಪುರುಷ ವೇಷ ಮಾಡಬಾರದು' ಎಂದು ನನ್ನ ಮೇಕಪ್ ನೋಡಿ ಗೇಲಿ ಮಾಡಿದರು! ಆಟ ಶುರುವಾಯಿತು, ಪ್ರವೇಶವಾಯಿತು. ತೆಂಕಬೈಲು ಭಾಗವತರ 'ಬೆಟ್' ಪ್ರಸಂಗದಲ್ಲಿ 'ಕಂಸವಧೆ'ಯೂ ಒಂದು. ಅಂದಿನ ಪದ್ಯವನ್ನು ಜ್ಞಾಪಿಸಿಕೊಂಡರೆ ರೋಮಾಂಚನವಾಗುತ್ತದೆ. ಮೊದಲ ಪದ್ಯಕ್ಕೆ ಅರ್ಥ ಹೇಳಿದೆ. ಅವರೂ ಮಾತನಾಡಿದರು. ನಿರರ್ಗಳವಾದ ಮಾತುಗಾರಿಕೆ. ಶಬ್ದ ಶಬ್ದಗಳಲ್ಲಿ ಭಾವನೆಗಳು. ಅಂದಿನ ಅವರ ಅರ್ಥಗಾರಿಕೆ ಹೇಗಿತ್ತೆಂದರೆ ಅದರಲ್ಲೆಲ್ಲಾ ಪ್ರಶ್ನೆಗಳೇ ತುಂಬಿದ್ದುವು. ಅವಕ್ಕೆ ನಾನು ಉತ್ತರ ಕೊಟ್ಟರೆ ನನ್ನ ಅರ್ಥ ತುಂಬಿದಂತೆ. ಉತ್ತರ ಹೇಳಲಾಗದಿದ್ದರೆ 'ಹಾಗಲ್ವೋ ಕೃಷ್ಣ' ಎಂದು ಅವರೇ ಉತ್ತರ ಹೇಳುತ್ತಿದ್ದರು.

ಮೊದಲು ಅವರ ಬಗ್ಗೆ ನಾನು ಯಾವ ಭಾವ ಇಟ್ಟುಕೊಂಡಿದ್ದೆನೋ, ಆಟ ಮುಗಿಯುವಾಗ ನಿರಾಳ. ಅಂದಿನ ಆಟಕ್ಕೆ ನಿರೀಕ್ಷೆಗಿಂತ ಹತ್ತು ಅಂಕ ಅಧಿಕವೇ. ಅಂದಿನ 'ಕೃಷ್ಣ-ಅಕ್ರೂರ' ಜತೆಗಾರಿಕೆ ನನಗಂತೂ ಮಾಸದ ನೆನಪು. ಮುಂದೆ ಆ ಪ್ರಸಂಗದಲ್ಲಿ 'ಕೃಷ್ಣ'ನ ಪಾತ್ರ ಪಾಲಿಗೆ ಬಂದಾಗ ಲಿಂಗಣ್ಣ ನೆನಪಿಗೆ ಬರುತ್ತಾರೆ.

ನಂತರದ ಕೆಲವು ಆಟಗಳಿಗೆ ಅವರು ಕೆಲವು ಪಾತ್ರಗಳಿಗೆ ನನ್ನನ್ನೆ ಆಯ್ಕೆ ಮಾಡಿ ಸಂಘಟಕರಿಂದ ಹೇಳಿಸುತ್ತಿದ್ದರು. ಕೃಷ್ಣಾರ್ಜುನ ಕಾಳಗದ ಅವರ 'ಅರ್ಜುನ' ಪಾತ್ರಕ್ಕೆ ಮೂರ್ನಾಲ್ಕು ಬಾರಿ ನನ್ನ 'ಸುಭದ್ರೆ'ಯ ಜತೆಯಾಗಿತ್ತು. 1994-95ರ ಸುಮಾರಿಗೆ ಅಡೂರು ಶ್ರೀಧರ ರಾಯ ಮನೆಯಂಗಳದಲ್ಲಿ 'ಯಕ್ಷಗಾನ ಸಮ್ಮೇಳನ' ಜರುಗಿತ್ತು. ಅಂದು 'ದಮಯಂತಿ ಪುನರ್ ಸ್ವಯಂವರ' ಪ್ರಸಂಗದಲ್ಲಿ ಹೊಸಹಿತ್ಲು ಮಹಾಲಿಂಗ ಭಟ್ 'ಋತುಪರ್ಣ'ನ ಪಾತ್ರ, ಕೋಳ್ಯೂರು ರಾಮಚಂದ್ರ ರಾಯರ 'ದಮಯಂತಿ', ಪೆರುವಡಿ ನಾರಾಯಣ ಭಟ್ಟರ 'ಬಾಹುಕ' ಮತ್ತು ಬಲಿಪ ನಾರಾಯಣ ಭಾಗವತರ ಹಾಡುಗಾರಿಕೆ. ಆ ಹೊತ್ತಿಗೆ ಮಹಾಲಿಂಗ ಭಟ್ಟರು ಶಾರೀರಿಕವಾಗಿ ಬಳಲಿದ್ದರೂ, ಪಾತ್ರದ ಗತ್ತುಗಾರಿಕೆಯಲ್ಲಿ ಅದು ಕಂಡಿಲ್ಲ. ಬಹುಶಃ ಅವರನ್ನು ಕಂಡದ್ದು, ಮಾತನಾಡಿದ್ದು ಅದೇ ಕೊನೆ.

ಅವರ ಇಹಲೋಕ ಯಾತ್ರೆಯ ಸುದ್ದಿ ಪತ್ರಿಕೆಯಲ್ಲಿ ಕಂಡಾಗ 'ಅಕ್ರೂರ, ಋತುಪರ್ಣ, ಅರ್ಜುನ' ಪಾತ್ರಗಳೆಲ್ಲಾ ಚಿತ್ತಪಟಲದಲ್ಲಿ ಹಾದುಹೋದುವು. ಯಕ್ಷಗಾನದ ಸರ್ವಾಂಗ ಸಂಪನ್ಮೂಲವಿದ್ದರೂ ಅದರ ಪ್ರಕಾಶಕ್ಕೆ 'ವಿಧಿ'ಯ ಮಸುಕು. 'ಯೋಗ-ಯೋಗ್ಯತೆ' ಒಬ್ಬರಲ್ಲೇ ಇರುವುದಿಲ್ಲವಲ್ಲಾ!

ಮೀಯಪದವು ಹೊಸಹಿತ್ಲು ಮಹಾಲಿಂಗ ಭಟ್ (ಲಿಂಗಣ್ಣ) ಸೆಪ್ಟೆಂಬರ್ 21ರಂದು ವಿಧಿವಶರಾದರು. ಅವರಿಗೆ 76ರ ವಯಸ್ಸು. ತಂದೆ ಹೊಸಹಿತ್ಲು ಗಣಪತಿ ಭಟ್, ತಾಯಿ ವೆಂಕಮ್ಮ. ಬಾಲ್ಯದಿಂದಲೇ ಯಕ್ಷಗಾನ ಉಸಿರು. ಶ್ರೀಧರ್ಮಸ್ಥಳ ಮೇಳದಲ್ಲಿ ಹದಿನೈದು ವರುಷ, ಕಟೀಲು, ಸುರತ್ಕಲ್, ಕೂಡ್ಲು, ಬಪ್ಪನಾಡು, ಮೂಲ್ಕಿ, ಪುತ್ತೂರು ಮೇಳಗಳಲ್ಲಿ ತಲಾ ಎರಡು ವರುಷಗಳಂತೆ ವ್ಯವಸಾಯ. ನಿವೃತ್ತಿಯ ಬಳಿಕ ಹವ್ಯಾಸಿ ಸಂಘಗಳಲ್ಲಿ ಭಾಗಿ. ಯಕ್ಷಗಾನ ಶಿಕ್ಷಕನಾಗಿ ಹಲವಾರಿ ಶಿಷ್ಯರನ್ನು ರೂಪಿಸಿದ್ದಾರೆ

ಅಭಿಮನ್ಯು, ಬಬ್ರುವಾಹನ, ಕೃಷ್ಣ, ಪರಶುರಾಮ, ಮಕರಾಕ್ಷ, ಭೀಷ್ಮ, ಕಾರ್ತವೀರ್ಯ.. ಮೊದಲಾದ ಪಾತ್ರಗಳು ಹೈಲೈಟ್ಸ್. ಎಲ್ಲವೂ ಗಂಡುಗತ್ತಿನವುಗಳು. .

ಅಗಲಿದ ಹಿರಿಯ ಚೇತನಕ್ಕೆ ಕಂಬನಿ.

Tuesday, September 13, 2011

ಯಕ್ಷಗಾನದ ಹಿರಿಯ ಅರ್ಥದಾರಿ ಕೊರ್ಗಿ : ವಿಧಿವಶ

ಹಿರಿಯ ವಿದ್ವಾಂಸ, ದ್ವಿವೇದಿ ಕೊರ್ಗಿ ವೆಂಕಟೇಶ ಉಪಾಧ್ಯಾಯರು ಹೃದಯಾಘಾತದಿಂದ ಸೆಪ್ಟೆಂಬರ್ 12ರಂದು ವಿಧಿವಶರಾದರು. ಮೂಲತಃ ಕುಂದಾಪುರ ತಾಲೂಕಿನ ಕೊರ್ಗಿಯವರು. ಅವರಿಗೆ ಅರುವತ್ತು ವರುಷ ಪ್ರಾಯ. ಪತ್ನಿ, ಇಬ್ಬರು ಪುತ್ರರು.

ಕೊರ್ಗಿಯವರು ಸಂಸ್ಕೃತ ವಿದ್ವತ್ ಪರಂಪರೆಯ ಹಿರಿಯ ವಿದ್ವಾಂಸರು. ಉಡುಪಿಯ ಸಂಸ್ಕೃತ ಕಾಲೇಜಿನಲ್ಲಿ ನ್ಯಾಯಶಾಸ್ತ್ರದ ವಿದ್ವತ್ ಕಲಿಕೆ. ಕಟೀಲಿನ ಪ್ರೌಢಶಾಲೆಯಲ್ಲಿ ಶಿಕ್ಷಕ ವೃತ್ತಿ. ಸಂಸ್ಕೃತ ಮತ್ತು ಕನ್ನಡ ಭಾಷಾ ಪಾಂಡಿತ್ಯ, ಶಬ್ದ ಮತ್ತು ವ್ಯಾಕರಣಗಳ ಖಚಿತತೆ ಅವರ ಹಿರಿಮೆ. ಕಟೀಲು ಕ್ಷೇತ್ರ ಮಹಾತ್ಮೆ, ಶ್ರಿರಾಮ ಪಟ್ಟಾಭಿಷೇಕ, ವಾತಾಪಿ ಜೀರ್ಣೋಭವ - ಯಕ್ಷಗಾನ ಪ್ರಸಂಗಗಳ ರಚಯಿತರು. 'ಹತ್ತರ ಹಿರಿಮೆ, ಪಂಚಪ್ರಪಂಚ, ಅಕ್ಷರ ಯಕ್ಷಗಾನ.. ಅಚ್ಚಾದ ಮುಖ್ಯ ಕೃತಿಗಳು.

ಲಕ್ಷ್ಮೀನಾರಾಯಣ ಹೃದಯ ಅರ್ಥ ಮತ್ತು ಕಲ್ಪೋಕ್ತ ಪೂಜಾವಿಧಿ, ಬ್ರಹ್ಮಕಲಶ ವಿಧಿ, ಅಷ್ಟೋತ್ತರ ಗಣಪತಿ ಹವನ ವಿಧಿ ಕೃತಿಗಳು ಮಹತ್ತರವಾದವುಗಳು.

ತಾಳಮದ್ದಳೆಯಲ್ಲಿ ಅಪಾರವಾದ ವಿದ್ವತ್ತನ್ನು ಸರಳವಾಗಿ ಪ್ರಸ್ತುತಪಡಿಸುತ್ತಿದ್ದರು. ಪ್ರಖರ ಮಾತುಗಾರಿಕೆ. ವಾದ ವಿವಾದಗಳಲ್ಲಿ ತರ್ಕಗಳಿಗೆ ಪ್ರಾಧಾನ್ಯತೆ. ಶಾಸ್ತ್ರ, ಪುರಾಣ, ವೇದಗಳ ಕುರಿತಾದ ವಿಚಾಗಳಿಂದ ಲೇಪಿತವಾದ ಅರ್ಥಗಾರಿಕೆ.

ಅಗಲಿನ ಕೊರ್ಗಿ ಹಿರಿಯ ಚೇತನಕ್ಕೆ ಕಂಬನಿ.

Sunday, September 11, 2011

ಎಂ.ಎಲ್.ಸಾಮಗ : ಯಕ್ಷಗಾನ ಅಕಾಡೆಮಿ ಅಧ್ಯಕ್ಷ

ಯಕ್ಷಗಾನದ ತೆಂಕು ಮತ್ತು ಬಡಗು ತಿಟ್ಟುಗಳೆರಡರಲ್ಲೂ ಅನುಭವ ಪಕ್ವತೆಯನ್ನು ಹೊಂದಿದ ಪ್ರೊ:ಎಂ.ಲಕ್ಷ್ಮೀನಾರಾಯಣ ಸಾಮಗ (ಪ್ರೊ.ಎಂ.ಎಲ್.ಸಾಮಗ) ಇವರನ್ನು ಕರ್ನಾಟಕ ಸರಕಾರವು ಯಕ್ಷಗಾನ ಬಯಲಾಟ ಅಕಾಡೆಮಿ ಅಧ್ಯಕ್ಷರನ್ನಾಗಿ ನೇಮಿಸಿದೆ.

ನಾಲ್ಕು ದಶಕಗಳ ಆಂಗ್ಲ ಭಾಷಾ ಪ್ರಾಧ್ಯಾಪಕರಾಗಿ ಸೇವೆ. ಉಡುಪಿ ಎಂ.ಜಿ.ಎಂ.ಕಾಲೇಜಿನಲ್ಲಿ ಮೂರು ವರುಷ ಪ್ರಾಂಶುಪಾಲ. ಪ್ರಸ್ತುತ ತೆಂಕನಿಡಿಯೂರು ಸರಕಾರಿ ಕಾಲೇಜಿನ ಸ್ನಾತಕೋತ್ತರ ಕೇಂದ್ರದಲ್ಲಿ ಅತಿಥಿ ಉಪನ್ಯಾಸಕ.

ಎಂ.ಎಲ್.ಸಾಮಗರು ಯಕ್ಷಮೇರು ದಿ. ಮಲ್ಪೆ ಶಂಕರನಾರಾಯಣ ಸಾಮಗರ ಪುತ್ರ. ಕೀರ್ತಿಶೇಷ ಹರಿದಾಸ ಮಲ್ಪೆ ರಾಮದಾಸ ಸಾಮಗರು ಇವರಿಗೆ ಚಿಕ್ಕಪ್ಪ.

ಸಾಮಗರು ಬಯಲಾಟ ಮತ್ತು ತಾಳಮದ್ದಳೆಗಳಲ್ಲೂ ಅನುಭವ ಸಂಪನ್ನರು. ತೆಂಕು ಮತ್ತು ಬಡಗಿನ ಅಗ್ರಮಾನ್ಯ ಕಲಾವಿದರೊಂದಿಗೆ ಸಹಪಾತ್ರಧಾರಿಯಾಗಿ ಕಾಣಿಸಿಕೊಂಡಿದ್ದಾರೆ. ಸಾಲಿಗ್ರಾಮ, ಪೆರ್ಡೂರು, ಶ್ರೀ ಎಡನೀರು ಮೇಳ, ಇಡಗುಂಜಿ..ಮೇಳಗಳಲ್ಲಿ ಅತಿಥಿ ಕಲಾವಿದರಾಗಿ ಭಾಗಿ. ಉತ್ತರಕನ್ನಡದಿದ ಕಾಸರಗೋಡು ತನಕ ಸಮಗ್ರ ಯಕ್ಷ ಪರ್ಯಟನೆ ಸಾಮಗರ ಹೆಗ್ಗುರುತು.

ಇಂಗ್ಲೀಷ್ ತಾಳಮದ್ದಳೆ, ಬಯಲಾಟಗಲ್ಲಿ ಉತ್ತಮ ನಿರ್ವಹಣೆ. ಏಸುಕ್ರಿಸ್ತ ಕತೆಯನ್ನು ಇಂಗ್ಲಿಷ್ ಭಾಷೆಗೆ ಅಳವಡಿಸಿ ಯಕ್ಷಗಾನದ ಮೂಲಕ ಪ್ರಸ್ತುತಿ. ಪ್ರಯೋಗಾತ್ಮಕ ನಾಟಕ, ಯಕ್ಷಗಾನ, ನೃತ್ಯ ರೂಪಕಗಳಲ್ಲಿ ಪ್ರಧಾನ ನಟನಾಗಿ ಭಾಗವಹಿಸಿದ ಅನುಭವ.ಡಾ.ಶಿವರಾಮ ಕಾರಂತರ ನಿರ್ದೇಶನದ ಯಕ್ಷಗಾನ ನೃತ್ಯ ರೂಪಕ ತಂಡದಲ್ಲಿ ಇಟಲಿಯಲ್ಲಿ ಮೂರು ವಾರ ತಿರುಗಾಟ ಮಾಡಿದ್ದರು.

ವೈಯಕ್ತಿಕವಾಗಿ ನಾವಿಬ್ಬರೂ ರಂಗದಲ್ಲಿ ಸಾಕಷ್ಟು ಬಾರಿ ಗಂಡ-ಹೆಂಡತಿಯರಾಗಿದ್ದೇವೆ. ಅವರೊಂದಿಗೆ ಪಾತ್ರವಹಿಸುವುದು ಖುಷಿ ಕೊಡುವ ವಿಚಾರ. ಸಂಭಾಷಣೆಗೆ ಒಗ್ಗುವ, ಎಳೆಯುವ ವಿರಳ ಕಲಾವಿದರಲ್ಲಿ ಸಾಮಗರೂ ಒಬ್ಬರು. ದಕ್ಷಾಧ್ವರ ಪ್ರಸಂಗದಲ್ಲಿ ಅವರ ಈಶ್ವರ, ನನ್ನ ದಾಕ್ಷಾಯಿಣಿ ಪಾತ್ರಗಳು ಮರೆಯದ ಕ್ಷಣಗಳು. ಮೇರು ಪ್ರತಿಭೆಯ ಎಂ.ಎಲ್.ಸಾಮಗರಲ್ಲಿ ಯಾವುದೇ ಹಮ್ಮುಬಿಮ್ಮುಗಳಿಲ್ಲ. ಅಹಂಕಾರಗಳಿಲ್ಲ. ಸಹಜವಾಗಿ ಕಲಾವಿದರಿಗೆ ಅಂಟುವ 'ವಿಕಾರ' ಇಲ್ಲವೇ ಇಲ್ಲ. ಹಾಗಾಗಿಯೇ ಸಾಮಗರದು ಎಲ್ಲರಿಗೂ ಪ್ರಿಯವಾಗುವ ವ್ಯಕ್ತಿತ್ವ.

ಹವ್ಯಾಸಿ ಮಟ್ಟದಿಂದ ಮೇಳದ ವರೆಗಿನ ಎಲ್ಲಾ ಕಲಾವಿದರಲ್ಲಿ ಒಡನಾಟ. ಚೌಕಿಯಲ್ಲಿ ’ತಾನಾಯಿತು, ತನ್ನ ಕಸುಬಾಯಿತ” ಎಂದು ಇದ್ದು ಬಿಡುವ ಸ್ವಭಾವ. ಬಹುತೇಕ ಕಲಾವಿದರು 'ಅರ್ಹತೆ'ಯೆಂದೇ ಸ್ಥಾಪಿಸುವ 'ಪರದೂಷಣೆ'ಯಿಂದ ಸಾಮಗರು ಯೋಜನ ದೂರ.

'ನನ್ನ ತಂದೆ, ಚಿಕ್ಕಪ್ಪ ಇವರಿಬ್ಬರು ಯಕ್ಷಗಾನದಲ್ಲಿ ಅಸಾಮಾನ್ಯ ಪ್ರತಿಭೆ ತೋರಿದ ಕಲಾವಿದರು. ಇವರ ಸಾಧನೆಯ ಫಲವಾಗಿ ಅಕಾಡೆಮಿ ಆಧ್ಯಕ್ಷ ಸ್ಥಾನ ನನಗೆ ಪ್ರಾಪ್ತವಾಗಿದೆ' ಎಂದು ವಿನೀತರಾಗಿ ಹೇಳುತ್ತಾರೆ.

ಆತ್ಮೀಯ, ಅಜಾತಶತ್ರು ಪ್ರೊ.ಎಂ.ಎಲ್.ಸಾಮಗರು ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾದುದು ಹೆಮ್ಮೆಯ ವಿಚಾರ.
ಅವರಿಗೆ ತುಂಬು ಅಭಿನಂದನೆಗಳು.

Tuesday, August 23, 2011

ಕಡತೋಕರಿಗೆ ಪಾರ್ತಿಸುಬ್ಬ ಪ್ರಶಸ್ತಿ

ಕಡತೋಕ ಮಂಜುನಾಥ ಭಾಗವತರು (1926) ಉತ್ತರಕನ್ನಡದ ಕುಮಟ ತಾಲೂಕಿನವರು. ಸಮಕಾಲೀನ ಯಕ್ಷಗಾನ ರಂಗದ ಅಗ್ರಗಣ್ಯ ಮಹಾನ್ ಭಾಗವತರಲ್ಲಿ ಒಬ್ಬರು. ತಂದೆ ಶಂಭು ಭಾಗವತರು. ನಟ ಪರಮಯ್ಯ ಹಾಸ್ಯಗಾರ, ಕೆರೆಮನೆ ಶಿವರಾಮ ಹೆಗಡೆ ಮತ್ತು ಮಾಂಬಾಡಿ ನಾರಾಯಣ ಭಾಗವತರ ಶಿಷ್ಯರಾಗಿ ತೆಂಕು-ಬಡಗು ತಿಟ್ಟುಗಳಲ್ಲಿ ಸಮಾನ ಪ್ರಭುತ್ವವುಳ್ಳ ವಿರಳ ಕಲಾವಿದರಲ್ಲಿ ಒಬ್ಬರು.

ಇವರು ಕರ್ಕಿ, ಕೊಳಗಿಬೀಸ್, ಮೂರೂರು, ಮೂಲ್ಕಿ ಮೇಳಗಳಲ್ಲಿ ಪಳಗಿ, ಶ್ರೀ ಧರ್ಮಸ್ಥಳ ಮೇಳದಲ್ಲಿ ನಾಲ್ಕು ದಶಕಗಳ ಕಾಲ ಭಾಗವತರಾಗಿ ಕೀರ್ತಿಗಳಿಸಿದ ಶ್ರೇಷ್ಠ ಕಲಾವಿದರು. ಮಾಧುರ್ಯ ಸಾಹಿತ್ಯ ಶುದ್ಧಿ, ಛಂದಸ್ಸಿನ ಅಂದ, ಲಯದ ಹಿಡಿತ, ಅಭಿನಯಪೋಷಕ ರಂಗ ನಿರ್ವಹಣೆ, ಪ್ರಯೋಗಶೀಲತೆಯಲ್ಲಿ ಮಹೋನ್ನತ ಸಿದ್ಧಿಯುಳ್ಳ ಕಡತೋಕರು, ಪ್ರದರ್ಶನದ ಯಶಸ್ಸು ಮತ್ತು ಜೀವಂತಿಕೆಯಲ್ಲಿ ನಿಜಾರ್ಥದ ಭಾಗವತರು. ರಂಗದಲ್ಲಿ ಅನೇಕ ಹೊಸ ಪ್ರಯೋಗಗಳನ್ನು ಗೈದು ಮಾದರಿಗಳನ್ನು ನಿರ್ಮಿಸಿದವರು.

ಕೆಲಕಾಲ ಅಧ್ಯಾಪಕರಾಗಿದ್ದ ಕಡತೋಕರು, ಉತ್ತಮ ಮೌಲ್ಯದ ಕಲಾ ಕಾರ್ಯಕ್ರಮಗಳ ಸಂಘಟಕರಾಗಿಯೂ ಪ್ರಸಿದ್ಧರು. ತನ್ನ 22ನೇ ವಯಸ್ಸಿನಲ್ಲಿ ಯಕ್ಷಗಾನ ಪತ್ರಿಕೆ ಸ್ಥಾಪಿಸಿ ದಾಖಲೆ ನಿರ್ಮಿಸಿದ ಇವರು, ಉತ್ತರ ಕನ್ನಡದ ಅಭಿನಯ ಶೈಲಿಯನ್ನು ತೆಂಕುತಿಟ್ಟಿನಲ್ಲಿ ಸಮನ್ವಯಗೊಳಿಸಿದ ಯುಗಪ್ರವರ್ತಕರು. ಸುಮಾರು ಇಪ್ಪತ್ತು ಯಕ್ಷಗಾನ ಪ್ರಸಂಗಗಳನ್ನೂ, ಹಲವು ಲೇಖನಗಳನ್ನು ಬರೆದಿರುವ ಕಡತೋಕ ಮಂಜುನಾಥ ಭಾಗವತರು ಪಾರ್ತಿಸುಬ್ಬನ ಕೃತಿಗಳ ಹಾಡುಗಾರಿಕೆಯಲ್ಲಿ ಓರ್ವ ನಿಷ್ಣಾತ ಭಾಗವತರಾಗಿದ್ದಾರೆ. ಅವರಿಗೀಗ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ವತಿಯಿಂದ ಪ್ರತಿಷ್ಠಿತ 'ಪಾರ್ತಿಸುಬ್ಬ ಪ್ರಶಸ್ತಿ. ಆಗಸ್ಟ್ ೨೬ರಂದು ರಾತ್ರಿ ೮ ಗಂಟೆಗೆ ಬಜಪೆಯ ರಾಘವೇಂದ್ರ ಸಭಾಸದನದಲ್ಲಿ ಪ್ರಶಸ್ತಿ ಪ್ರದಾನ.

ಈ ಹಿಂದಿನ ಸಾಲಿನಲ್ಲಿ ಡಾ.ಅಮೃತ ಸೋಮೇಶ್ವರ (2009), ಹೊಸ್ತೋಟ ಮಂಜುನಾಥ ಭಾಗವತರು (2010) ಪ್ರಶಸ್ತಿ ಪಡೆದಿದ್ದಾರೆ.

Tuesday, July 19, 2011

'ಚಕ್ಕುಲಿ ಅಜ್ಜ'ನ ನೆನಪಿನಲ್ಲಿ..

ತಲೆಂಗಳ ಗೋಪಾಲಕೃಷ್ಣ ಭಟ್ - ಯಕ್ಷಗಾನ ಹಿಮ್ಮೇಳದ ಮೇರು. 'ಚಕ್ಕುಲಿ ಅಜ್ಜ' ಎಂಬುದು ಪ್ರೀತಿಯ ನಾಮ. ಇವರ ಮನಸ್ಸನ್ನು ಅರಿತು ಚೆಂಡೆ-ಮದ್ದಳೆಗಳೇ ಇವರಿಗೆ ಬಾಗುತ್ತಿದ್ದುವು, ಬಳುಕುತ್ತಿದ್ದುವು! ನಾಲ್ಕು ದಶಕಗಳ ರಂಗಾನುಭವ. ಜೂನ್ 24ರಂದು ಅಜ್ಜ ವಿಧಿವಶ. ನೆನಪುಗಳ ಕೆಲವು ಎಳೆಗಳು ಅವರಿಗೆ ಸಲ್ಲಿಸುವ ಶೃದ್ಧಾಂಜಲಿ.

ಮೇ ಕೊನೆಯ ವಾರ ಇರಬೇಕು, ತಲೆಂಗಳ ಗೋಪಾಲಕೃಷ್ಣ ಭಟ್ಟರು ಕಚೇರಿಗೆ ಬಂದಿದ್ದರು. ಶುದ್ಧ ಬಿಳಿ ಉಡುಪು, ಹೆಗಲಲ್ಲಿ ಝರಿ ಶಾಲು,ಚೀಲ. ನೀಟ್ ಆದ ಉಡುಪು. ಯಾವುದೋ ಕೆಲಸದಲ್ಲಿ ಮಗ್ನನಾಗಿದ್ದೆ. 'ಸ್ವಲ್ಪ ಮಾತನಾಡಲು ಉಂಟು, ಒಳಗೆ ಬರಬಹುದಾ,' ಎಂಬ ಧ್ವನಿಯನ್ನು ಕೇಳಿಯೂ ಕೇಳದಂತಿದ್ದೆ.

ಕಾರಣ ಇಲ್ಲದಿಲ್ಲ. ಎಷ್ಟೋ ಸಲ ಅವರೊಡನೆ ಮಾತನಾಡಿದಾಗ, 'ಹಿಂಸೆ'ಯ ಭಾವ ಕಾಡುತ್ತಿತ್ತು. ಅವರ ನಡವಳಿಕೆ, ನಿಯಂತ್ರಣಗಳಿಲ್ಲದ ವರ್ತನೆಗಳಿಂದ ಸಾಧ್ಯವಾದಷ್ಟೂ ದೂರವಿರುತ್ತಿದ್ದೆ. ಅವರನ್ನು ಬಲ್ಲ ಬಹುತೇಕ ಕಲಾವಿದರೂ ಈ 'ಹಿಂಸೆ'ಯನ್ನು ಅನುಭವಿಸಿದವರೇ!

ಕಚೇರಿಗೆ ಬಂದವರು 'ಇಂದು ಸರಿ ಇದ್ದೇನೆ ಮಾರಾಯ' ಎನ್ನುತ್ತಾ ಮಾತಿಗೆಳೆದರು. ಹೌದಲ್ಲಾ.. ಅಂದು ಹೊಸ ಭಟ್ಟರಾಗಿ ಕಂಡರು. 'ಯಕ್ಷಗಾನ ಹುಟ್ಟುವಾಗಲೇ ಬಂದದ್ದು. ನನ್ನ ಗ್ರಹಚಾರ ಸರಿಯಿಲ್ಲ. ನೋಡೋಣ, ತೆಂಕಿನ ಪ್ರಸಿದ್ಧ ಚೆಂಡೆ ವಾದಕರು ನನ್ನ ಮುಂದೆ ಚೆಂಡೆ ಹಿಡಿದು ನಿಲ್ಲಲಿ ನೋಡೋಣ. ಸವಾಲಿಗೆ ಸವಾಲ್. ಏನು ಮಾಡೋಣ. ಚೌಕಿಗೆ ಹೋದಾಗ ಎಲ್ಲರೂ ಡೋಂಗಿ ಮಾಡುವವರೇ,' ಮನಬಿಚ್ಚಿ ಮಾತನಾಡುತ್ತಾ ಹೋದರು.

'ನನ್ನ ತಂದೆಯವರ ಹೆಸರಿನ ಯಕ್ಷಗಾನ ಕೇಂದ್ರವೊಂದರ ಸ್ಥಾಪನೆ ನನ್ನ ಕನಸು. ಅದಿನ್ನೂ ಪೂರೈಸಿಲ್ಲ. ಹಣ ಹೊಂದಿಸಲು ನಾನು ಬಡವ. ಉಳ್ಳವರಲ್ಲಿ ಹೋದರೆ ಹತ್ತೋ ಐವತ್ತೋ ಕಿಸೆಗೆ ಹಾಕ್ತಾರೆ. ನನ್ನ ವಿಚಾರವನ್ನು ಕೇಳುವಷ್ಟೂ ಅವರಿಗೆ ಪುರಸೊತ್ತಿಲ್ಲ. ಅವರಲ್ಲಿ ಭಿಕ್ಷೆ ಕೇಳಲು ಹೋದಂತೆ ವರ್ತಿಸುತ್ತಾರೆ' ಹೀಗೆ ಒಂದಷ್ಟು ಹೊತ್ತು ಕಳೆದು, 'ಐವತ್ತು ರೂಪಾಯಿ ಬೇಕಿತ್ತು. ನಾಳೆ ಕೊಡ್ತೇನೆ,' ಎಂದರು. ಅವರ ಈ ಸ್ವಭಾವದ ಪರಿಚಯವಿದ್ದ ನಾನು 'ಅಸಹನೆ'ಯಿಂದಲೇ ಕೊಟ್ಟಿದ್ದೆ. ಆದರೆ ಅವರ ಹೇಳಿದಂತೆ ಮರುದಿವಸ ಹಣವನ್ನು ತಂದೂ ಕೊಟ್ಟರು. ಅಂದೂ ಕೂಡಾ ತುಂಬಾ ಹೊತ್ತು ಹಿರಿಯ ಕಲಾವಿದರ ಒಡನಾಟವನ್ನು ನೆನಪಿಸಿಕೊಂಡರು.

ಅಂದಿನ ಅವರ ಸ್ವಭಾವ ಬಹಳ ವಿಚಿತ್ರವಾಗಿ ಕಂಡಿತು. 'ಹೆಚ್ಚು ಮಂಡೆಬಿಸಿ ಆದರೆ ಏನು ಮಾಡೋದು ಮಾರಾಯ, ಹೊಟ್ಟೆಗೆ ಹಾಕಿದಾಗ ಕಡಿಮೆಯಾಗುತ್ತದೆ,' ವಿನೋದಕ್ಕೆ ಒಮ್ಮೆ ಹೇಳಿದ್ದರು. ಹಾಗಾಗಿ ಎಷ್ಟೋ ಸಲ ಅವರು ಅವರಾಗಿಯೇ ಇರುವುದಿಲ್ಲ. ಯಕ್ಷಗಾನ ಬದುಕಿನಲ್ಲಿ ಏನೋ ನಿರೀಕ್ಷೆಯನ್ನಿಟ್ಟುಕೊಂಡ ಭಟ್ಟರು, ಅದನ್ನು ಸಾಧಿಸಲಾಗುತ್ತಿಲ್ಲವಲ್ಲಾ ಎಂಬ ಕೊರಗು ಅವರನ್ನು 'ಮಂಡೆಬಿಸಿ' ಮಾಡಿತ್ತು ಎಂಬುದು ಅವರ ಪ್ರತಿಭೆಯನ್ನು ಅರಿತ ಮಂದಿಗೆ ಗೊತ್ತು.

ಸಹಜವಾಗಿ ಇಂತಹ ಹೊತ್ತಲ್ಲಿ ಯಾರನ್ನೂ ಸಮಾಜ, ಸ್ನೇಹಿತರು, ಬಂಧುಗಳು ಹತ್ತಿರ ಸೇರಿಸಿಕೊಳ್ಳುವುದಿಲ್ಲ. 'ತಲೆಂಗಳ ಚೆಂಡೆ ಹೆಗಲಿಗೇರಿಕೊಂಡರೆ ಸಾಕು, ಅದ್ಭುತ ಕೈಚಳಕ, ಅವರೊಬ್ಬ ಚೆಂಡೆಯ ಗಂಡುಗಲಿ,' ಅವರ ಸುದ್ದಿ ಮಾತನಾಡುವಾಗಲೆಲ್ಲಾ ಬರುವ ಹೊಗಳಿಕೆಯ ಮಾತು. ಆದರೆ ಅದೇ ತಲೆಂಗಳ 'ತಾನು ತಾನಾಗಿಯೇ ಇರದಿದ್ದಾಗ' ಒಳ್ಳೆಯ ರೀತಿಯಿಂದ ಮಾತನಾಡಿಸುವವರು ಎಷ್ಟು ಮಂದಿ ಇದ್ದರು? ಅವರು ಕೇಳುತ್ತಿರಲಿಲ್ಲ ಎಂಬುದು ಬೇರೆ ಮಾತು.

ತನ್ನ ಸಂಕಲ್ಪಿತ ಯಕ್ಷಗಾನ ಕೇಂದ್ರ, ತಂದೆಯವರ ಪ್ರಸಂಗ ಪುಸ್ತಕದ ಪ್ರಕಟಣೆ, ಯಕ್ಷಗಾನ ಪ್ರದರ್ಶನ.. ಹೀಗೆ ಕೆಲವು ವರ್ಷ ಕರಪತ್ರಗಳನ್ನು ಮುದ್ರಿಸಿ ಹಂಚುತ್ತಿದ್ದರು. ಆದರೆ ಕರಪತ್ರದಲ್ಲಿ ಮುದ್ರಿಸಿದಂತೆ ಕಲಾಪವನ್ನು ಅವರಿಗೆ ನಡೆಸಲು ತ್ರಾಸಪಡುತ್ತಿದ್ದರು.
ಆಸಕ್ತಿ ಹುಚ್ಚೆದ್ದು ಕುಣಿದಾಗ ಆಟ ಮಾಡುವ ಉಮೇದು. ಕರಪತ್ರಗಳನ್ನು ಅಚ್ಚು ಹಾಕಿಸಿ, ಪ್ರತಿಯೊಬ್ಬರನ್ನು ಭೇಟಿ ಮಾಡುತ್ತಿದ್ದರು. ವೇಷ ಮಾಡದವರಿಗೂ 'ನಿಮಗೊಂದು ವೇಷ ಉಂಟು' ಎನ್ನುತ್ತಾ ಒತ್ತಾಯಿಸುತ್ತಿದ್ದರು. ಕಲಾವಿದರನ್ನೂ ಗೊತ್ತು ಮಾಡುತ್ತಿದ್ದರು. ಆದರೆ ಆಟ ಆದುದು ಒಂದೋ ಎರಡೋ ಅಷ್ಟೇ. 'ಈಚೆಗೆ ಚಕ್ಕುಲಿ ಅಜ್ಜನ ಆಟದಲ್ಲಿ ವೇಷ ಮಾಡಿದ್ದೆ. ಹಿರಿಯ ಕಲಾವಿದರಲ್ವಾ. ಅವರ ಸೋಲಿಗೆ ನಾವು ಕಾರಣವಾಗಬಾರದು,' ತಲೆಂಗಳದವರನ್ನು ಹತ್ತಿರದಿಂದ ಬಲ್ಲ ಅರ್ಯಾಪಿನ ವೆಂಕಟೇಶ ಮಯ್ಯರು ಹೇಳುತ್ತಾರೆ.
ಅವರ ಚೆಂಡೆ ವೈಭವದ ಅಡಕ ತಟ್ಟೆಯಾಗಿತ್ತು. 'ಇದಾ, ನಿನಗೊಂದು ಇರಲಿ, ಪೈಸೆ ಬೇಡ' ಎನ್ನುತ್ತಾ ಸಿಡಿ ಕೊಟ್ಟಿದ್ದರು. ವಾರ ಕಳೆದು 'ಹೇಂಗಿದ್ದು' ಅಂತ ಹಿಮ್ಮಾಹಿತಿ ಪಡೆಯಲು ಮರೆಯಲಿಲ್ಲ. ತಲೆಂಗಳದವರ ಪ್ರತಿಭೆ ಎಲ್ಲವೂ ಅದರಲ್ಲಿ ಅನಾವರಣಗೊಳ್ಳದಿದ್ದರೂ, ಅವರ ಕೈಚಳಕಕ್ಕೆ ಸಾಕ್ಷಿಯಾಗಿದೆ.

ಎಷ್ಟೋ ಚೌಕಿಯಲ್ಲಿ ಚಕ್ಕುಲಿ ಅಜ್ಜನನ್ನು ಕೆರಳಿಸಿ, ಅವರು ಕೆರಳುವುದನ್ನು ನೋಡುತ್ತಾ 'ಸಂತೋಷ ಪಡುವ' ಪತನಸುಖಿಗಳ ಪರಿಚಯವಿದೆ. ಈ ರೀತಿ ಕೆರಳಿದಾಗ ಅದು ತಕ್ಷಣಕ್ಕೆ ಶಮನವಾಗುತ್ತಿರಲಿಲ್ಲ! ಆಟ ಉಂಟು ಅಂತ ಗೊತ್ತಾದರೆ ಸಾಕು, ಅಜ್ಜನಿಗೆ ಕರೆ ಬೇಡ. ನೇರವಾಗಿ ಚೆಂಡೆ-ಮದ್ದಳೆಗಳ ಹತ್ತಿರ ಹೋಗುತ್ತಿದ್ದರು. ಕಿರಿಕಿರಿಯಾಗುವಷ್ಟೂ ವಾಚಾಳಿಯಾಗುತ್ತಿದ್ದರು. ಒಂದರ್ಧ ಗಂಟೆ ಅಷ್ಟೇ. ಮತ್ತೆ ಅವರ ಪಾಡಿಗೆ ಹೋಗುತ್ತಿದ್ದರು. ಇಲ್ಲ, ಪ್ರದರ್ಶನ ನೋಡುತ್ತಿದ್ದರು.

ಒಮ್ಮೆ ಯಾವುದೋ ಚೌಕಿಯಲ್ಲಿ ಅವರಿಗೆ ಅವಮಾನವಾಗಿತ್ತು. ರಾದ್ದಾಂತ ಎಬ್ಬಿಸಿದ್ದರು. 'ನಿಮ್ಮ ಯಾರ ಸಹವಾಸವೂ ಬೇಡ. ನಾನು ಅಡುಗೆಗೆ ಹೋದರೆ ದಿವಸಕ್ಕೆ ಐನೂರು ರೂಪಾಯಿ ಸಂಪಾದಿಸ್ತೇನೆ' ಎಂದು ಏರು ಸ್ಥಾಯಿಯಲ್ಲಿ ಹೇಳಿದ್ದರು.

ಯಕ್ಷಗಾನ ರಂಗದಲ್ಲಿ ತಲೆಂಗಳ ಎಷ್ಟು ದೊಡ್ಡವರೋ, ಸೂಪಜ್ಞರಾಗಿಯೂ ಅಷ್ಟೇ ದೊಡ್ಡವರು. ಯಾರದ್ದೇ ಹಂಗಿಲ್ಲದೆ ಬದುಕುವ, ಯಕ್ಷಗಾನ ರಂಗವನ್ನು ತನ್ನ ವಿದ್ವತ್ತಿನಿಂದ ಮೆರೆಸುವ ಎಲ್ಲಾ ಸಂಪನ್ಮೂಲಗಳು ಅವರಲ್ಲಿದ್ದರೂ 'ವಿಜಯಲಕ್ಷೀ' ಅವರಿಗೆ ಒಲಿಯಲಿಲ್ಲ. ಧನಲಕ್ಷ್ಮೀ ಹತ್ತಿರ ಸುಳಿಯಲಿಲ್ಲ.

ತನಗೆ ಅಂಟಿಕೊಂಡ ವಿಕಾರಗಳೇನೇ ಇರಲಿ. ಅದರಿಂದ ಕಳಚಿಕೊಳ್ಳಲೂ ಅವರಿಗೆ ಗೊತ್ತಿತ್ತು. ಅಂಟಿಸಿಕೊಳ್ಳಲೂ ಗೊತ್ತಿತ್ತು! ಯೋಗವಿದ್ದವರಿಗೆ ಯೋಗ್ಯತೆಯಿಲ್ಲ. ಯೋಗ್ಯತೆಯಿದ್ದವರಿಗೆ ಯೋಗವಿರುವುದಿಲ್ಲ!

ಯಕ್ಷಗಾನದ ಸ್ಟೇಜ್ನಲ್ಲಿ 'ಗಟ್ಟಿ ಪೆಟ್ಟಿನ' ನಾದ ಇನ್ನು ಕೇಳುವುದಿಲ್ಲ, ಎನ್ನುತ್ತಾ ಕಲಾವಿದ ರಾಜರತ್ನಂ ಅಜ್ಜನ ಚೆಂಡೆ ವಾದನ, ಶ್ರುತಿ ಜ್ಞಾನ, ರಂಗ ಜಾಣ್ಮೆಗಳನ್ನು ಅವರ ಉತ್ತರಕ್ರಿಯೆಯ ಸಂದರ್ಭದಲ್ಲಿ ನೆನಪಿಸಿಕೊಂಡರು.

Monday, June 13, 2011

ಯಕ್ಷಗಾನ ಅಕಾಡೆಮಿ ಪುಸ್ತಕ ಪುರಸ್ಕಾರ ಪ್ರದಾನ

ಕಲಾವಿದ, ಪತ್ರಕರ್ತ ನಾ. ಕಾರಂತ ಪೆರಾಜೆ ಇವರ 'ಸಾಮಗ ಪಡಿದನಿ', ಡಾ.ಪ್ರಭಾಕರ ಶಿಶಿಲರ 'ಮತ್ಸ್ಯಗಂಧಿ' ಮತ್ತು ಡಾ. ಶಾಂತಾ ಇಮ್ರಾಪುರ ಅವರ ಅಲ್ಲಮ ಕೃತಿಗಳಿಗೆ ಈ ಸಾಲಿನ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ಪುರಸ್ಕಾರ ಪ್ರಾಪ್ತವಾಗಿದ್ದು, ಶ್ರೀ ಕ್ಷೇತ್ರ ಹೊರನಾಡಿನಲ್ಲಿ ಜರುಗಿದ 'ಯಕ್ಷಗಾನ ಕಲಾವಿದರ ಪುನಶ್ಚೇತನ ಶಿಬಿರ'ದ ಸಮಾರೋಪ ಸಮಾರಂಭದಲ್ಲಿ 'ಪುಸ್ತಕ ಪುರಸ್ಕಾರ' ಪ್ರದಾನ ಮಾಡಲಾಯಿತು.

ಅಕಾಡೆಮಿಯ ಅಧ್ಯಕ್ಷ ಕುಂಬಳೆ ಸುಂದರ ರಾವ್ ಇವರ ಆಧ್ಯಕ್ಷತೆಯಲ್ಲಿ ಜರುಗಿದ ಸಮಾರಂಭದಲ್ಲಿ ಹೊರನಾಡು ಕ್ಷೇತ್ರದ ಧರ್ಮದರ್ಶಿ ಭೀಮೇಶ್ವರ ಜೋಶಿಯವರು ಪುರಸ್ಕಾರ ಪ್ರದಾನ ಮಾಡಿದರು.

ಹಿರಿಯ ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗಡೆ, ಕೂಚುಪುಡಿ ನೃತ್ಯ ವಿದುಷಿ ವೈಜಯಂತಿ ಕಾಶಿ, ಅಕಾಡೆಮಿಯ ರಿಜಿಸ್ಟ್ರಾರ್ ಮಹಾದೇವಯ್ಯ, ಯಕ್ಷಗುರುಗಳಾದ ಸಂಜೀವ ಸುವರ್ಣ, ಕರ್ಗಲ್ಲು ವಿಶ್ವೇಶ್ವರ ಭಟ್, ಉಡುಪಿ ಕಲಾರಂಗದ ಮುರಳಿ ಕಡೆಕಾರ್ ಉಪಸ್ಥಿತರಿದ್ದರು.

Friday, May 20, 2011

ಹಿರಿಯ ಅರ್ಥದಾರಿ : ಅಡೂರು 'ಸೂರ್ಯಜ್ಜ'

ಅಡೂರು ಸೂರ್ಯನಾರಾಯಣ ಕಲ್ಲೂರಾಯರನ್ನು ಜ್ಞಾಪಿಸಿದಾಗಲೆಲ್ಲಾ 'ದಕ್ಷಾಧ್ವರ' ಪ್ರಸಂಗ ನೆನಪಾಗುತ್ತದೆ. ಇವರ ಮೊಮ್ಮಗ ಪ್ರಕಾಶ್ ಕೊಡೆಂಕಿರಿಯರ ಮನೆಯಲ್ಲೊಂದು ಸಮಾರಂಭ. ಅಂದು 'ದಕ್ಷಾಧ್ವರ' ಪ್ರಸಂಗದ ಆಟ. ಕಲ್ಲೂರಾಯರದು ವೃದ್ಧವಿಪ್ರನ ಪಾತ್ರ. ದಾಕ್ಷಾಯಿಣಿ ಪಾತ್ರವನ್ನು ನಾನೇ ನಿರ್ವಹಿಸಿದ್ದೆ.

ಸರಿ, ದಾಕ್ಷಾಯಿಣಿಯನ್ನು ಕಂಡ ವೃದ್ಧವಿಪ್ರನಿಗೆ ಏನಾಯ್ತೋ ಗೊತ್ತಿಲ್ಲ. ದೇವಿಸ್ತುತಿಯನ್ನು ಮಾಡುತ್ತಾ, ಸ್ತ್ರೋತ್ರ ಪಠಿಸುತ್ತಾ, ಕರಗಳೆರಡನ್ನು ಮೇಲೆತ್ತಿ ದಾಕ್ಷಾಯಿಣಿಗೆ ಮೂರು ಪ್ರದಕ್ಷಿಣೆ ಬಂದು ದೀರ್ಘದಂಡ ಪ್ರಣಾಮ ಸಲ್ಲಿಸಿದಲ್ಲಿಗೆ ಕಲ್ಲೂರಾಯರ ವಿಪ್ರ ಸಾವರಿಸಿಕೊಳ್ಳುತ್ತಿದ್ದ! ಒಂದರೆಕ್ಷಣ ಎಲ್ಲರಿಗೂ ಗಲಿಬಿಲಿ. ರಂಗದಲ್ಲಿ ಗಾಢ ಮೌನ. ಪ್ರೇಕ್ಷಕರಲ್ಲೂ ಕುತೂಹಲ. ನಂತರ ಹೇಗೋ ಪ್ರಸಂಗ ಮುಂದೆ ಹೋಯಿತೆನ್ನಿ.

'ನೋಡಿ, ದಾಕ್ಷಾಯಿಣಿಯನ್ನು ಎದುರುಗೊಳ್ಳುವ ವಿಪ್ರನಲ್ವಾ. ಆಕೆ ಶಿವನ ಮಡದಿ. ಲೌಕಿಕನಾದ ವಿಪ್ರನು ದೇವಿಯನ್ನು ನೋಡಿ ಅಷ್ಟು ತಲ್ಲೀನನಾಗದಿದ್ದರೆ ಪಾತ್ರಕ್ಕೆ ನ್ಯಾಯ ಸಲ್ಲಿಸಿದ ಹಾಗಾಗ್ತದೋ' ಎಂದರು. ಸೂರ್ಯಜ್ಜನ ಪಾತ್ರ ತಲ್ಲೀನತೆ ಎಲ್ಲರ ಹಣೆಯಲ್ಲಿ ಬೆವರು ತರಿಸಿತ್ತು.

ಮೂಲತಃ ಕಲ್ಲೂರಾಯರು ಕಾಸರಗೋಡು ಜಿಲ್ಲೆಯ ಅಡೂರಿನ ತಲ್ಪಚ್ಚೇರಿಯವರು. ಎಳವೆಯಿಂದಲೇ ಯಕ್ಷಗಾನದ ಆಸಕ್ತಿ. ದೊಡ್ಡ ಸಂಸಾರ. ಮಕ್ಕಳು ನಿದ್ರಿಸಿದ ಬಳಿಕ ಹತ್ತಿರದ ಯಕ್ಷಗಾನದ ಕೂಟಾಟಗಳಿಗೆ ಹೋಗಿ, ಅವರು ಎಚ್ಚರವಾಗುವುದರೊಳಗೆ ಪುನಃ ಮನೆ ಸೇರಿಬಿಡುವಷ್ಟು ಕಲಾ ಸೆಳೆತ.

ಕಲ್ಲೂರಾಯರು ಅರ್ಥದಾರಿಯಾಗಿ ಹೆಚ್ಚು ಕಾಣಿಸಿಕೊಂಡದ್ದು. ಹಾಗೆಂತ ಅವರಿಗೆ ಭಾಗವತಿಕೆ ಗೊತ್ತಿತ್ತು. ಚೆಂಡೆ, ಮದ್ದಳೆ ನುಡಿಸುತ್ತಿದ್ದರು. ಸಂದರ್ಭ ಬಂದರೆ ವೇಷವನ್ನೂ ಮಾಡುತ್ತಿದ್ದರು.

ಭೀಷ್ಮಪರ್ವದ 'ಭೀಷ್ಮ', ಕೃಷ್ಣ ಸಂಧಾನದ 'ಕೃಷ್ಣ', ಕರ್ಣಪರ್ವದ 'ಕರ್ಣ' ಮತ್ತು 'ಕೃಷ್ಣ'.. ಮುಂತಾದ ಪಾತ್ರಗಳು ಪ್ರಿಯ. ಅದರಲ್ಲೂ 'ಕರ್ಮಬಂಧ'ದ ಕೃಷ್ಣ, ಭೀಷ್ಮ ಪಾತ್ರದತ್ತ ಹೆಚ್ಚು ಒಲವು.

'ಇವರ ಅರ್ಥಗಾರಿಕೆಯಲ್ಲಿ ತರ್ಕ ಜಾಸ್ತಿ. ವಾದ ಶುರು ಮಾಡಿದರೆ ಅರ್ಧದಲ್ಲಿ ರಾಜಿಯಿಲ್ಲ. ತನ್ನ ನಿಲುವಿಗೆ ಅಂಟಿಕೊಳ್ಳುವ ಹಠವಾದಿ. ಕೆಲವೊಂದು ಪಾತ್ರಚಿತ್ರಣಗಳು ಅದ್ಭುತವಾಗಿ ಮೂಡಿಬರುತ್ತಿದ್ದುವು. ಬಹುತೇಕ ಪಾತ್ರಗಳಿಗೆ ಬೇಕಾಗುವ ಸಾಹಿತ್ಯ ಸ್ಟಾಕ್ ಬತ್ತುತ್ತಲೇ ಇರಲಿಲ್ಲ' ಎಂದು ಅವರ ಒಡನಾಡಿ ಅಡೂರು ಶ್ರೀಧರ ರಾವ್ ಜ್ಞಾಪಿಸಿಕೊಳ್ಳುತ್ತಾರೆ. 'ರಘುವಂಶ' ಎಂಬ ಪ್ರಸಂಗದ ರಚಯಿತರು.

ಕಲ್ಲೂರಾಯರು ಕಿರಿಯರಿಗೆ 'ಸೂರ್ಯಜ್ಜ'. ಇನ್ನೂ ಕೆಲವರಿಗೆ 'ಸೂರ್ಯಣ್ಣ'. ಅವರ ಜವ್ವನದ ಸಮಯದಲ್ಲಿ ನರಸಿಂಹಯ್ಯನವರ ಬಹುತೇಕ ಎಲ್ಲಾ ಪತ್ತೇದಾರಿ ಕಾದಂಬರಿಯ ಅಪ್ಪಟ ಓದುಗ. 'ಲಾಟನ್ ಬೆಳಕಿನಲ್ಲಿ ಅಜ್ಜ ರಾತ್ರಿಯಿಡೀ ಓದುತ್ತಿದ್ದುದು ನನಗೆ ನೆನಪಿದೆ' ಪ್ರಕಾಶ್ ಅಜ್ಜನ ಒಡನಾಟವನ್ನು ಜ್ಞಾಪಿಸಿಕೊಳ್ಳುತ್ತಾರೆ.

ಆ ಬಳಿಕ ಆಧ್ಯಾತ್ಮದತ್ತ ಒಲವು. ಭಾರತ ದರ್ಶನ ಪ್ರಕಾಶನದವರ ಮಹಾಭಾರತ ಕೃತಿಯನ್ನು ಹಲವು ಸಲ ಓದಿದ್ದಾರಂತೆ. ಬೇರೆ ಬೇರೆ ಭಾರತ, ರಾಮಾಯಣ, ಭಾಗವತಗಳನ್ನೂ ಓದಿದ್ದಾರೆ. ವೈಚಾರಿಕ ಸಾಹಿತ್ಯದಲ್ಲಿ ಮೋಹ. ಹಾಗಾಗಿ ಪುರಾಣದ ಸೂಕ್ಷ್ಮ ವಿಚಾರಗಳ ಕುರಿತ ವಾದಗಳಲ್ಲಿ ಅವರು ಸೋತದ್ದಿಲ್ಲ.

ಕಲ್ಲೂರಾಯರ ಮೆಮೊರಿ 'ಎಂಬಿ'ಯಲ್ಲಿಲ್ಲ. ಅದು 'ಜಿಬಿ'ಯಲ್ಲಿದೆ! 'ಪ್ರತಿದಿನ ತೋಟ ಸುತ್ತುವುದು ಅಪ್ಪನಿಗೆ ರೂಢಿ. ನಮ್ಮಲ್ಲಿ ಏನಿಲ್ಲವೆಂದರೂ ಒಂದು ಸಾವಿರಕ್ಕೂ ಮಿಕ್ಕಿ ಅಡಿಕೆ ಮರಗಳಿದ್ದುವು. ಅದರಲ್ಲಿ ಒಂದು ಮರದ ಅಡಿಕೆ ಗೊನೆ ಕಳವಾದರೂ ಗೊತ್ತಾಗಿಬಿಡುತ್ತಿತ್ತು' ಎನ್ನುತ್ತಾರೆ ಪುತ್ರಿ ಶಾರದಾ ಭಟ್.

ಊರಿನ ರಾಜಿ ಪಂಚಾಯಿತಿಕೆ, ದಾನಧರ್ಮ, ಆರ್ತರಿಗೆ ನೆರವಾಗುವುದು, ಉಪನಯನವಾದ ವಟುಗಳಿಗೆ ಸಂಧ್ಯಾವಂದನೆ ಕಲಿಕೆ.. ಮುಂತಾದ ಸಮಾಜಮುಖಿ ಕಾರ್ಯಗಳಲ್ಲಿ ಸೂರ್ಯಜ್ಜ ಮುಂದು. ಬದುಕಿನಲ್ಲಿ ನಿರಂತರ ಚಲನಶೀಲ. ಅವರು ಸಿಕ್ಕಾಗಲೆಲ್ಲಾ ಹಿಂದೆ ನಡೆಯುತ್ತಿದ್ದ ತಾಳಮದ್ದಳೆಗಳ ಸುದ್ದಿ, ಪಾತ್ರಧಾರಿಗಳ ಪರಿಚಯ, ಅವರು ಮಾಡುತ್ತಿದ್ದ ವಾದಗಳು, ಸೋಲು-ಗೆಲುವು, ಹಾಸ್ಯ ಪ್ರಸಂಗಗಳನ್ನು ಅವರ ಮಾತಲ್ಲೇ ಕೇಳುವುದಿದೆಯಲ್ಲಾ, ಒಂದು ಕಾಲ ಘಟ್ಟದ ಯಕ್ಷಗಾನ ಮರುಸೃಷ್ಟಿಯಾಗುತ್ತದೆ.

'ಅನ್ನ ಆಹಾರದಲ್ಲಿ ಶುಚಿ. ಉಡುವ ಪಂಚೆ, ಜುಬ್ಬಾವೂ ಅಷ್ಟೇ ಕ್ಲೀನ್. ಅದಕ್ಕೆ ಚಿನ್ನದ ಗುಂಡಿಗಳು. ಹೆಗಲಲ್ಲೊಂದು ಶಾಲು. ಹಣೆಯಲ್ಲಿ ತಿಲಕ. ತನ್ನ ಕೊನೆ ಕಾಲದ ತನಕವೂ ಈ ಶುಚಿತ್ವವನ್ನು ಕಾಪಾಡಿಕೊಂಡಿದ್ದರು.' ಎನ್ನುತ್ತಾರೆ ಅವರ ಪುತ್ರ ಶಂಕರ ನಾರಾಯಣ.

ನಾವಿಂದು ಸಂದುಹೋದ ಬಹುತೇಕ ಹಿರಿಯರ ಬದುಕನ್ನು ಬೇರೆ ಬೇರೆ ಮಾಧ್ಯಮಗಳಲ್ಲಿ ನೋಡುತ್ತೇವೆ, ಓದುತ್ತೇವೆ. 'ಯಕ್ಷಗಾನ ಹುಚ್ಚಿನಿಂದಾಗಿ ಆಸ್ತಿ ಕಳಕೊಂಡರಂತೆ, ಮನೆ ಮಾರಿದರಂತೆ'.. ಹೀಗೆ. ಆದರೆ ಕಲ್ಲೂರಾಯರು ಮನೆಮಂದಿ, ಕುಟುಂಬ, ತೋಟ, ಆಸ್ತಿ, ಮನೆಯ ಆಗುಹೋಗು.. ಇವುಗಳ ಬಗ್ಗೆ ನಿಗಾ ಇಟ್ಟುಕೊಂಡು' ಮಕ್ಕಳಿಗೆಲ್ಲಾ ವಿದ್ಯಾಭ್ಯಾಸ ನೀಡುತ್ತಾ ಯಕ್ಷಗಾನದ 'ವಿಪರೀತ' ಗೀಳನ್ನು ಅಂಟಿಸಿಕೊಂಡಿದ್ದರು. 'ತಾನೊಬ್ಬ ಗೃಹಸ್ಥ' ಎಂಬ ಅರಿವು ನಿತ್ಯ ಜಾಗೃತವಾಗಿದ್ದಿತ್ತು.

ಸೂರ್ಯನಾರಾಯಣ ಕಲ್ಲೂರಾಯರು ವಿಧಿವಶರಾಗಿ ಮೇ 19ಕ್ಕೆ ಒಂದು ವರುಷ. ತೊಂಭತ್ತು ವರುಷಗಳ ದೀರ್ಘಕಾಲೀನ ಬದುಕಿನಲ್ಲಿ 'ಲವಲವಿಕೆ'ಯೇ ಅವರ ಆರೋಗ್ಯದ ಗುಟ್ಟು. ಅಗಲಿದ ಚೇತನಕ್ಕೆ ಅಕ್ಷರ ನಮನ.

Tuesday, May 10, 2011

ಖ್ಯಾತ ಮದ್ದಳೆ ವಾದಕ ಗೋರೆ ನಿಧನ

ಎಡನೀರು ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಮಂಡಳಿಯಲ್ಲಿ ವ್ಯವಸಾಯ ಮಾಡುತ್ತಿದ್ದ ಖ್ಯಾತ ಮದ್ದಳೆ ವಾದಕ ಪ್ರಭಾಕರ ಗೋರೆ ಮೇ 9ರಂದು ಕುಂಜಿಬೆಟ್ಟು ಬಳಿ ಸಂಭವಿಸಿದ ಅಪಘಾತದಲ್ಲಿ ತೀವ್ರ ಅಸ್ವಸ್ಥರಾಗಿ ಬಳಿಕ ನಿಧನರಾದರು. ಅವರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.

ಖ್ಯಾತ ಭಾಗವತ ಕೀರ್ತಿಶೇಷ ದಾಮೋದರ ಮಂಡೆಚ್ಚ ಅವರ ಪ್ರೇರಣೆಯಿದ ಕರ್ನಾಟಕ ಮೇಳಕ್ಕೆ ಸೇರಿದ ಗೋರೆಯವರು ಸುಮಾರು ಮೂರು ದಶಕಗಳ ಕಾಲದ ವ್ಯವಸಾಯ ಮಾಡಿದ್ದರು. ಬಳಿಕ ಐದು ವರುಷ ಮಂಗಳಾದೇವಿ ಮೇಳದಲ್ಲಿ ತಿರುಗಾಟ. ಕಳೆದ ಆರು ವರುಷದಿಂದ ಎಡನೀರು ಮೇಳದಲ್ಲಿ ವ್ಯವಸಾಯ ಮಾಡುತ್ತಿದ್ದರು.

ಇವರು ತಬಲಾ ವಾದಕರಾಗಿಯೂ ಪ್ರಾವಿಣ್ಯ ಪಡೆದಿದ್ದರು.

Monday, May 9, 2011

ಯಕ್ಷಗಾನಕ್ಕೆ ಶೈಕ್ಷಣಿಕ ಸ್ಪರ್ಶ


ಶಾಲಾ ವಿದ್ಯಾರ್ಥಿಗಳಿಗೆ ಬೇಸಿಗೆ ರಜೆ. ಕೆಲವರು ಅಜ್ಜಿಮನೆ ಸೇರಿದ್ದಾರೆ. ಕೆಲವರನ್ನು ವಿವಿಧ ಕೋರ್ಸ್, ಶಿಬಿರ, ಇಂಗ್ಲಿಷ್ ಕ್ಲಾಸ್ಗಳು ಆವರಿಸಿವೆ. ಇನ್ನು ಯಕ್ಷಗಾನದತ್ತ ಹೊರಳಿದರೆ ಅಲ್ಲಲ್ಲಿ ಯಕ್ಷಗುರುಗಳಿಂದ ಯಕ್ಷಾಭ್ಯಾಸ ನಡೆಯುತ್ತಲೇ ಇದೆ. ಯಕ್ಷಗಾನ ಕೇಂದ್ರಗಳ ಚಟುವಟಿಕೆಗಳು ನಿರಂತರ.

ಇಲ್ನೋಡಿ, ಒಂದು ವಾರದ ವಿಶಿಷ್ಟ 'ಯಕ್ಷಶಿಕ್ಷಣ ಕಾರ್ಯಾಗಾರ' ಯಾ ಶಿಬಿರ. ಪುತ್ತೂರಿನ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಪರಿಕಲ್ಪನೆ. ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ಸಾರಥ್ಯ. ಅರುವತ್ತೈದು ವಿದ್ಯಾರ್ಥಿಗಳು. ಯಾವುದೇ ಶುಲ್ಕವಿಲ್ಲ.

ಯಕ್ಷಗಾನದ ಕುರಿತಾದ ಮೂಲಭೂತ ಸಂಗತಿಗಳನ್ನು ತಿಳಿಸಿಕೊಡುವುದು ಉದ್ದೇಶ. ಇಲ್ಲಿ ಥಿಯರಿ ಮತ್ತು ಪ್ರಾಕ್ಟಿಕಲ್ ಜತೆಜತೆಗೆ ನಡೆದಿದೆ. ಕಾರ್ಯಾಗಾರದುದ್ದಕ್ಕೂ ಶಿಬಿರಾರ್ಥಿಗಳ ಉಪಸ್ಥಿತಿ ಶಿಬಿರ ಯಶಕ್ಕೆ ಕನ್ನಡಿ.
'ಒಂದು ವಾರದಲ್ಲಿ ಏನು ಗೊತ್ತಾಗುತ್ತದೆ' ಶಿಬಿರಪೂರ್ವದಲ್ಲಿ ಕೇಳಿಬಂದ ಅಡ್ಡಪ್ರಶ್ನೆ. ಸಹಜವೂ ಕೂಡ. 'ಒಂದು ವಾರದಲ್ಲಿ ಕಲಾವಿದನಾಗಿಯೋ, ಕಲಾವಿದೆಯಾಗಿಯೋ ರೂಪುಗೊಳ್ಳಲಾರರು. ಆದರೆ ಎಲ್ಲೂ ಸಿಗದ ಬೇಸಿಕ್ ಮಾಹಿತಿಗಳು ಸಿಕ್ತವಲ್ಲಾ. ಮಕ್ಕಳು ಮುಂದೆ ಯಕ್ಷಗಾನದ ಒಲವು ಮೂಡಿಸಿಕೊಳ್ಳಲು ಇದು ಸಹಕಾರಿ' ಎಂಬ ಉತ್ತರ ನೀಡಿದರು, ಶಿಬಿರದ ನಿರ್ದೇಶಕ, ಯಕ್ಷಗುರು ಕರ್ಗಲ್ಲು ವಿಶ್ವೇಶ್ವರ ಭಟ್.

ಪ್ರಕೃತ 'ಬದಲಾವಣೆ' ಎಂದು ನಾವು ಒಪ್ಪಿಕೊಂಡ ಕಾಲಘಟ್ಟದಲ್ಲಿ ಮಕ್ಕಳಲ್ಲಿ ಯಕ್ಷಗಾನದ ಆಸಕ್ತಿಯನ್ನು ಕುದುರಿಸಲು, ಇದ್ದ ಆಸಕ್ತಿಯನ್ನು ಗಟ್ಟಿಮಾಡಲು ಇಂತಹ ಕಾರ್ಯಾಗಾರ ಹೆಚ್ಚು ಸೂಕ್ತ.

ಶಿಬಿರದಲ್ಲಿ ತೆಂಕುತಿಟ್ಟಿನ ವಿವಿಧ ವೇಷಗಳ ವೈವಿಧ್ಯವನ್ನು ಪವರ್ ಪಾಯಿಂಟ್ ಮೂಲಕ ವಿವರಣೆ, ಕಲಾವಿದ ದಿವಾಣ ಶಿವಶಂಕರ ಭಟ್ಟರಿಂದ ಕಿರೀಟ ವೇಷಗಳ ಮಾಹಿತಿ, ಹಿರಿಯ ಕಲಾವಿದ ಪುತ್ತೂರು ಶ್ರೀಧರ ಭಂಡಾರಿಯವರಿಂದ ಪುಂಡು ವೇಷಗಳ ಮತ್ತು ಶಿಕ್ಷಕ ಚಂದ್ರಶೇಖರ್ ಅವರಿಂದ ರಾಕ್ಷಸ ವೇಷಗಳ ಮಾಹಿತಿ ನೀಡಿಕೆ.

ರಂಗದಲ್ಲಿ ಹಾಸ್ಯ ಹೊಮ್ಮುವ ಪರಿಯನ್ನು ಹಾಸ್ಯಗಾರ್ ಪೆರುವಡಿ ನಾರಾಯಣ ಭಟ್ಟರು ತಾನೇ ಅಭಿನಯಿಸಿ, ಪಾತ್ರ ಸ್ವಭಾವಕ್ಕನುಗುಣವಾದ ಸ್ವರ ಬದಲಾವಣೆಯನ್ನು ಮಾಡಿ ತೋರಿಸಿದರು. ಕಲಾವಿದ, ಉಪನ್ಯಾಸ ವೆಂಕಟರಾಮ ಭಟ್ ಸುಳ್ಯ ಇವರಿಂದ ಸ್ತ್ರೀ ಪಾತ್ರಗಳ ವಿವರಣೆ. ಪಾತ್ರಗಳು, ಅವುಗಳ ಸ್ವಭಾವಗಳು, ಮುಖವರ್ಣಿಕೆಯ ರೀತಿ, ಯಾವ್ಯಾವ ಪಾತ್ರಗಳು ಯಾವ್ಯಾವ ಗುಣಗಳನ್ನು ಪ್ರತಿನಿಧಿಸುತ್ತವೆ ಎಂಬ ವಿಚಾರಗಳ ಕುರಿತು ಥಿಯರಿ.

ಮಹಾಬಲ ಕಲ್ಮಡ್ಕರಿಂದ ಯಕ್ಷಗಾನದ ಮುಖವರ್ಣಿಕೆಯ ಪ್ರಾತ್ಯಕ್ಷಿಕೆ. ಎಲ್ಲಾ ಮಕ್ಕಳ ಮುಖದಲ್ಲೂ ಅಂದು ಯಕ್ಷಗಾನದ ಕಳೆ. ಶಿಕ್ಷಕ ರುಕ್ಮಯ ಪೂಜಾರಿ ಯಕ್ಷ ಮುಖವಾಡಗಳ ರಚನೆಯನ್ನು ಶಿಬಿರಾರ್ಥಿಯಿಂದಲೇ ಮಾಡಿಸಿದ್ದರು. ಅರ್ಥಗಾರಿಕೆ ಮತ್ತು ಪುರಾಣ ಜ್ಞಾನವನ್ನು ಉಪನ್ಯಾಸಕ ರಾಧಾಕೃಷ್ಣ ಕಲ್ಚಾರ್ ವಿವರಿಸಿ, ಅರ್ಥಗಾರಿಕೆ ಮೂಡುವ ರೀತಿಯನ್ನು ಪ್ರಾತ್ಯಕ್ಷಿಕೆ ಮೂಲಕ ಪ್ರಸ್ತುತಿ. ಕಲಾವಿದ ರಾಮ ಜೋಯಿಸ್ ಬೆಳ್ಳಾರೆ ಸಾಥಿ. ಮನೋವಿಶ್ಲೇಷಕರಾದ ಗಂಗಾಧರ ಬೆಳ್ಳಾರೆ ನಿರ್ವಹಣೆ. ಬಯಲಾಟ ಅಕಾಡೆಮಿಯ ಸದಸ್ಯ ಡಾ.ಸುಂದರ ಕೇನಾಜೆಯವರ 'ಯಕ್ಷಗಾನ-ಸಾಮಾಜಿಕ ಪ್ರೇರಣೆ' ವಿಚಾರಗಳು ಶಿಬಿರಾರ್ಥಿಗಳಲ್ಲಿ ಕುತೂಹಲ ಮೂಡಿದುದಕ್ಕೆ ಅವರಿಂದ ಬಂದ ಹಲವು ಪ್ರಶ್ನೆಗಳೇ ಸಾಕ್ಷಿ.

ಅಪರಾಹ್ನದ ಅವಧಿಯಲ್ಲಿ ಕರ್ಗಲ್ಲು ವಿಶ್ವೇಶ್ವರ ಭಟ್ಟರಿಂದ ಯಕ್ಷ ನಡೆಗಳ ಶಿಕ್ಷಣ. ನಡೆದ ಥಿಯರಿ ಸೆಶನ್ಗಳಲ್ಲೂ ಕರ್ಗಲ್ಲು ಅವರ ಭಾಗಿ. ಹುಬ್ಬುಗಳು ಹೇಗಿರಬೇಕು, ವೇಷಗಳಿಗೆ ಕಣ್ಣು ಬರೆಯುವ ಕ್ರಮ, ಮುದ್ರೆಗಳ ವೈವಿಧ್ಯ, ತಿಲಕಗಳ ರೀತಿ, ಯಾವ್ಯಾವ ಪಾತ್ರಗಳು ಯಾವ್ಯಾವ ತಿಲಕವನ್ನು ಧರಿಸಬೇಕು.. ಮುಂತಾದ ಸೂಕ್ಷ್ಮ ವಿಚಾರಗಳನ್ನು ರೇಖಾಚಿತ್ರ ಸಹಿತ ವಿವರಣೆ.

ಶಿಬಿರದ ಕಲಿಕೆ ಮಕ್ಕಳಲ್ಲಿ ಹೆಚ್ಚು ಪರಿಣಾಮ ಬೀರಿದೆ. 'ಯಕ್ಷಗಾನದ ಬೇರೆ ಬೇರೆ ಪಾತ್ರಗಳ ಉಡುಗೆ ತೊಡುಗೆಗಳು ಹೇಗಿರುತ್ತವೆ ಎಂದು ತಿಳಿಯಿತು. ಅದರಲ್ಲೂ ವಾನರ ಪಾತ್ರಗಳ ಮುಖವರ್ಣಿಕೆ, ಉಡುಗೆಗಳು ಮನದಲ್ಲಿ ಅಚ್ಚೊತ್ತಿವೆ' ಎಂದು ಶ್ವೇತಾ ಜೆ. ಹೇಳಿದರೆ; ನಿಶ್ಮಿತಾಳ ಅನುಭವವೇ ಬೇರೆ - 'ಮೊದಲು ನನಗೆ ಯಕ್ಷಗಾನದಲ್ಲಿ ಆಸಕ್ತಿ ಇರಲಿಲ್ಲ. ಇಲ್ಲಿನ ಮಾಹಿತಿಯಿಂದ ಒಲವು ಮೂಡಿದೆ'.

ಶಿಬಿರದಲ್ಲಿ ಯಕ್ಷಗಾನದ ಪರಿಚಯವಿದ್ದ ಒಂದಷ್ಟು ಮಂದಿ ವಿದ್ಯಾರ್ಥಿಗಳಿದ್ದರು. ಅವರಲ್ಲಿ ಕೆಲವರು ಪಾತ್ರಗಳನ್ನೂ ನಿರ್ವಹಿಸಿದ್ದರು. ಯಕ್ಷಗಾನವೇ ಗೊತ್ತಿಲ್ಲದ ಮಂದಿಯೂ ಇದ್ದರು. 'ಶಿಬಿರದಿಂದ ಯಕ್ಷಗಾನದ ಕುರಿತು ವಿಚಾರಗಳು ತಿಳಿಯಿತು. ಕಲಾವಿದೆಯಾಗಬೇಕೆನ್ನುವ ತುಡಿತ ಮೂಡಿಸಿದೆ' ಎನ್ನುತ್ತಾಳೆ ಪವಿತ್ರಾ ಜೆ.

ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಕುಂಬಳೆ ಸುಂದರ ರಾಯರು ಸಮಾರೋಪದಂದು ಪೂರ್ತಿಯಾಗಿ ಶಿಬಿರದಲ್ಲಿ ಭಾಗವಹಿಸಿ ಅನುಭವ ಹಂಚಿಕೊಂಡರು. 'ಯಕ್ಷಗಾನ ಯಾವಾಗ ಆರಂಭವಾಯಿತು?' 'ಯಕ್ಷಗಾನವನ್ನು ಯಾರು ಶುರು ಮಾಡಿದರು?' 'ಒಂದು ಯಕ್ಷಗಾನ ನೋಡಿದರೆ ಹಲವು ರಂಗಪೂಜೆ ಯಾಕೆ ನೋಡಬೇಕು?'.. ಮುಂತಾದ ಫಕ್ಕನೆ ಉತ್ತರಿಸಲಾಗದ ಪ್ರಶ್ನೆಗಳಿಗೆ ನವಿರಾದ ಉತ್ತರವನ್ನು ಕುಂಬಳೆಯವರು ನೀಡಿದರು.

'ಒಂದು ವಾರ ಯಕ್ಷ ಶಿಕ್ಷಣದೊಂದಿಗೆ ಯೋಗಾಸನ, ಯೋಗಗಳನ್ನು ಕೂಡಾ ಮಕ್ಕಳಿಗೆ ತರಬೇತಿ ನೀಡಿದ್ದೇವೆ. ಯಕ್ಷಶಿಕ್ಷಣ ಎನ್ನುವ ಶಿಬಿರ ಒಂದು ಕಲ್ಪನೆ. ಯಕ್ಷಗಾನಕ್ಕೆ ಶೈಕ್ಷಣಿಕ ಸ್ಪರ್ಶ ನೀಡುವ ಪ್ರಯತ್ನ. ಇನ್ನಷ್ಟು ಬೆಳೆಸಲು ಅವಕಾಶವಿದೆ' ಎನ್ನುತ್ತಾರೆ ಶಾಲಾ ಮುಖ್ಯಗುರು ಆಶಾ ಬೆಳ್ಳಾರೆ.

'ಯಕ್ಷಶಿಕ್ಷಣ ಪಡೆದ ವಿದ್ಯಾರ್ಥಿಗಳಲ್ಲಿ ಎಲ್ಲರೂ ಕಲಾವಿದರಾಗಲು ಆಸಾಧ್ಯ. ಆದರೆ ಒಳಿತು. ಕೊನೇಪಕ್ಷ ಯಕ್ಷಗಾನದ ಸಹೃದಯೀ ಪ್ರೇಕ್ಷಕರಾದರೂ ಆದಾರಲ್ಲ.' ಎಂದರು ಕರ್ಗಲ್ಲು. ಸಮಾರೋಪದಲ್ಲಿ ಹಿರಿಯ ವಿದ್ವಾಂಸ, ವಿಮರ್ಶಕ ಡಾ.ಎಂ.ಪ್ರಭಾಕರ ಜೋಷಿಯವರು 'ಯಕ್ಷಗಾನದ ಕಲಿಕೆ ಎನ್ನುವುದು ಸಮಗ್ರ ಕಲಿಕೆಗೆ ಪೂರಕವಾಗಬೇಕು. ಶಿಕ್ಷಣದ ವಿಸ್ತರಣೆಯಾಗುವಾಗ ಅದರ ಸ್ವರೂಪ ಬದಲಾಗುವುದು ಸಹಜ. ಅನಿವಾರ್ಯ ಕೂಡಾ. ಈ ನಿಟ್ಟಿನಲ್ಲಿ ಯಕ್ಷಶಿಕ್ಷಣದ ಯೋಜನೆ, ಯೋಚನೆ ಶ್ಲಾಘ್ಯ' ಎಂದರು.

ಯಕ್ಷ ಶಿಕ್ಷಣದಂತಹ ಶಿಬಿರಗಳು ಶಾಲಾ ಮಟ್ಟದಲ್ಲಿ ನಡೆಯಬೇಕು. ಹದಿನೈದು ದಿವಸಕ್ಕೆ ಒಮ್ಮೆಯಾದರೂ ಯಕ್ಷಗಾನದ ಕುರಿತು ಒಂದು ಅವಧಿ ಪಾಠವನ್ನು ರೂಪಿಸಬೇಕಾಗಿದೆ. ಇದರಿಂದಾಗಿ ಕೂಟಾಟಗಳ ಹೊರತಾಗಿ ಒಂದಷ್ಟು ಯಕ್ಷಗಾನೀಯ ವಿಚಾರಗಳ ಕುರಿತು ಮಾಹಿತಿ ಹರಿದಂತಾಗುತ್ತದೆ. ಇಲ್ಲದಿದ್ದರೆ ಯಕ್ಷಗಾನವೆಂದರೆ 'ವೇಷ ಮಾಡುವುದು, ಅರ್ಥ ಹೇಳುವುದು' ಇಷ್ಟಕ್ಕೇ ಮೈಂಡ್ ಸೆಟ್ ಆಗುತ್ತದೆ. ಅದರ ಸುತ್ತಲೇ ಸುತ್ತುತ್ತಿರುತ್ತದೆ.

ಡಾ.ಕೋಳ್ಯೂರು ರಾಮಚಂದ್ರ ರಾಯರು ಕಾರ್ಯಾಗಾರವನ್ನು ಉದ್ಘಾಟಿಸುತ್ತಾ, 'ಮುಂದಿನ ದಿನಗಳಲ್ಲಿ ಯಕ್ಷಗಾನದ ಪ್ರೇಕ್ಷಕರಿಗೂ ಕೂಡ ಕಾರ್ಯಾಗಾರ ಬೇಕಾಗಬಹುದು' ಎಂದಿರುವುದು ವರ್ತಮಾನ ಮತ್ತು ಭವಿಷ್ಯದ ಕರೆಗಂಟೆ.

Thursday, April 14, 2011

ಶ್ರೀಧರ ಭಂಡಾರಿಗಳಿಗೆ ಪ್ರಶಸ್ತಿಯ ಬಾಗಿನ

ತೆಂಕುತಿಟ್ಟು ಯಕ್ಷಗಾನದ ಸಿಡಿಲ ಮರಿ ಶ್ರೀ ಪುತ್ತೂರು ಶ್ರೀಧರ ಭಂಡಾರಿಯವರಿಗೆ 2010ನೇ ಸಾಲಿನ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ಪ್ರಶಸ್ತಿ ಪ್ರಾಪ್ತವಾಗಿದೆ.

ಹಿರಿಯ ಕಲಾವಿದ ಪುತ್ತೂರು ಶೀನಪ್ಪ ಭಂಡಾರಿ ಮತ್ತು ಸುಂದರಿ ದಂಪತಿಗಳ ಪುತ್ರ. 1945ರಲ್ಲಿ ಜನನ. ಐದನೇ ತರಗತಿಯವರೆಗೆ ಓದು. ತನ್ನ ಒಂಭತ್ತನೇ ವಯಸ್ಸಿನಲ್ಲಿ ರಂಗಪ್ರವೇಶ. ಹೊಸಹಿತ್ಲು ಮಹಾಲಿಂಗ ಭಟ್ ಮತ್ತು ದಿ.ಕುರಿಯ ವಿಠಲ ಶಾಸ್ತ್ರಿ ಅವರಲ್ಲಿ ಯಕ್ಷ ಕಲಿಕೆ. ಕುದ್ಕಾಡಿ ವಿಶ್ವನಾಥ ರೈಯವರಲ್ಲಿ ಭರತನಾಟ್ಯ ಅಭ್ಯಾಸ.

ಶ್ರೀ ಆದಿಸುಬ್ರಹ್ಮಣ್ಯ ಕೃಪಾಪೋಶಿತ ಯಕ್ಷಗಾನ ಮಂಡಳಿ, ಶ್ರೀ ಧರ್ಮಸ್ಥಳ ಮೇಳ, ಪುತ್ತೂರು ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಮಂಡಳಿ, ಶ್ರೀ ಕಾಂತಾವರ ಮೇಳ.. ಹೀಗೆ ವಿವಿಧ ಮೇಳಗಳಲ್ಲಿ 46 ವರುಷಗಳ ತಿರುಗಾಟ. ಪುತ್ತೂರು ಮತ್ತು ಕಾಂತಾವರ ಮೇಳವನ್ನು ಹನ್ನೊಂದು ವರುಷ 'ಯಜಮಾನ'ನಾಗಿ ನಿರ್ವಹಿಸಿದ್ದರು. ಪ್ರಸ್ತುತ ಶ್ರೀ ಧರ್ಮಸ್ಥಳ ಮೇಳದಲ್ಲಿ ಕಲಾವಿದ.

ಅಭಿಮನ್ಯು, ಬಬ್ರುವಾಹನ, ಲಕ್ಷ್ಮಣ, ಪರಶುರಾಮ, ಕೃಷ್ಣ, ಜಯಂತ, ಚಂಡಮುಂಡ, ರಕ್ತಬೀಜ, ಹಿರಣ್ಯಾಕ್ಷ, ಇಂದ್ರಜಿತು.. ಹೀಗೆ ಬೀಸು ಹೆಜ್ಜೆಯ ಪಾತ್ರಗಳಲ್ಲಿ ಅಚ್ಚರಿಯ ಮತ್ತು ಯಾರೂ ಅನುಕರಿಸದ ಅಭಿವ್ಯಕ್ತಿ.

ಎಪ್ರಿಲ್ 9, 2011ರಂದು ಸುಳ್ಯ ತಾಲೂಕಿನ ಮಂಡೆಕೋಲಿನಲ್ಲಿ 'ಯಕ್ಷಭಂಡಾರಿ' ಎಂಬ ಕೃತಿ (ತಂದೆ ಶೀನಪ್ಪ ಭಂಡಾರಿ ಮತ್ತು ಶ್ರೀಧರ ಭಂಡಾರಿ ಇವರ ಜಂಟಿ ಜೀವನ ಗಾಥಾ) ಬಿಡುಗಡೆಯಾದ ಬೆನ್ನಲ್ಲೇ ರಾಜ್ಯ ಪ್ರಶಸ್ತಿ ಅರಸಿ ಬಂದಿರುವುದು ಶ್ರೀಧರ ಭಂಡಾರಿಯವರ ಮೇರು ಪ್ರತಿಭೆಗೆ ಸಾಕ್ಷಿ.

ಪ್ರಶಸ್ತಿ ಪುರಸ್ಕೃತ ಶ್ರೀಧರಣ್ಣನವರಿಗೆ ಅಭಿವಂದನೆಗಳು.

Friday, March 11, 2011

ಸರ್ವಾಂಗ ಕಲಾವಿದ ಮಧೂರು ವೆಂಕಟಕೃಷ್ಣ

ಮನೆತುಂಬ ನೆಂಟರಿಷ್ಟರು. ಬಂಧು-ಬಾಂಧವರು. ಪ್ರತಿಯೊಬ್ಬರನ್ನು ಹುಡುಕಿ ಸ್ವಾಗತಿಸುವ ಪರಿ. ಲೋಪವಾಗದ ಆತಿಥ್ಯ. ಮೃಷ್ಟಾನ್ನ ಭೋಜನ. ಯಕ್ಷಗಾನ ಪ್ರಸಂಗಗಳ ಅನಾವರಣ. ನೆನಪು ಸಂಚಿಕೆ ಬಿಡುಗಡೆ. ಆಪ್ತರಿಗೆ ಅಭಿನಂದನೆ. ಹಿರಿಯರಿಗೆ ಸಂಮಾನ. ತಾಳಮದ್ದಳೆ - ಹಿರಿಯ ವಿದ್ವಾಂಸ, ಕಲಾವಿದ ಮಧೂರು ವೆಂಕಟಕೃಷ್ಣರು ತನ್ನ ಸಪ್ತತಿಯನ್ನು ಆಚರಿಸಿದ ಬಗೆಯಿದು. ಧಾರ್ಮಿಕ ವಿಧಿಗಳಿಗೆ ವಹಿಸಿದ ಕಾಳಜಿಯಷ್ಟೇ ಕಲೆಗೂ ಮಾನ-ಸಂಮಾನ.

ವೆಂಕಟಕೃಷ್ಣರು ವಿಶ್ರಾಂತ ಸರಕಾರಿ ಅಧಿಕಾರಿ. ಇವರು ಸಂಘಟಕ, ಕವಿ, ಪ್ರಸಂಗಕರ್ತ, ಅರ್ಥದಾರಿ, ವೇಷಧಾರಿ. ತಂದೆ ಮಾಧವ ಭಟ್. ನಾಟಿ ವೈದ್ಯರು. ವೈದಿಕ ಮನೆತನ.
ಆರಂಭದಲ್ಲಿ ಅಧ್ಯಾಪಕ ವೃತ್ತಿ. ಬಳಿಕ ಮಾರಾಟ ತೆರಿಗೆ ಇಲಾಖೆಯಲ್ಲಿ ಅಧಿಕಾರಿ. ಬಾಲ್ಯದಿಂದಲೇ ಬದುಕಿಗಂಟಿದ ಯಕ್ಷಗಾನವು ಅವರ ವಾಙ್ಮಯ ದಾಹಕ್ಕೆ ಗಟ್ಟಿಯಾದ ಅಡಿಗಟ್ಟು
.
ಎಲ್ಲಂಗಳ ಶಂಕರನಾರಾಯಣ ಶ್ಯಾನುಭೋಗರಿಂದ ಭಾಗವತಿಕೆ. ಕುಡಾಣ ಗೋಪಾಲಕೃಷ್ಣ ಭಟ್ಟರಿಂದ ಆರಂಭಿಕ ಹೆಜ್ಜೆ. ನಂತರ ಕೂಡ್ಲು ನಾರಾಯಣ ಬಲ್ಯಾಯರಿಂದ ಯಕ್ಷಗಾನದ ನಾಟ್ಯ ಕಲಿಕೆ. ಪಗಡಿ ಮತ್ತು ಕಿರೀಟ ವೇಷಧಾರಿ. ಸುತ್ತೆಲ್ಲಾ ಜರಗುತ್ತಿದ್ದ ಕೂಟಾಟಗಳಲ್ಲಿ ವೇಷಗಾರಿಕೆ. ಜಲಂಧರ, ಶ್ರೀದೇವಿ, ಮದನ, ಇಂದ್ರಜಿತು, ಪಂದಳರಾಜ, ಶ್ವೇತಕುಮಾರ, ಭರತ, ಅತಿಕಾಯ..ಪಾತ್ರಗಳ ನಿರ್ವಹಣೆ.
ರಾಮ, ಕೃಷ್ಣ, ಭೀಷ್ಮ.. ಮುಂತಾದ ವೈಚಾರಿಕ ಪ್ರಸ್ತುತಿಗೆ ಹೆಚ್ಚು ಅವಕಾಶವಿರುವ ಪಾತ್ರಗಳು ವೆಂಕಟಕೃಷ್ಣರಿಗೆ ಪ್ರಿಯ. ಪಟ್ಟಾಭಿಷೇಕದ 'ದಶರಥ', ಕರ್ಣಪರ್ವದ 'ಕರ್ಣ', ಕೃಷ್ಣಸಂಧಾನ ಪ್ರಸಂಗದ 'ಧರ್ಮರಾಯ, ಕೃಷ್ಣ', ಮಯೂರಧ್ಜಜ, ರುಕ್ಮಾಂಗದ ಪಾತ್ರಗಳು ಒಂದು ಕಾಲಘಟ್ಟದಲ್ಲಿ ಪ್ರಸಿದ್ಧಿ ತಂದವುಗಳು.
ಇವರ ಆರ್ಥಗಾರಿಕೆ ಶುಚಿ-ರುಚಿ. ಸಂವಾದಕ್ಕೆ ಎಳೆಯುವ ಸ್ವಭಾವ. ಇದರಾಳಿ ಹೇಳುವ ವಿಚಾರ ಮರೆತಾಗ ಅದನ್ನು ನವಿರಾಗಿ ತಿಳಿಸಿಕೊಡುವ, ನೆನಪಿಸುವ ಜಾಣ್ಮೆ. ಪಾತ್ರಸ್ವಭಾವವನ್ನು ತೆರೆದಿಡುವ, ಪಾತ್ರದ ಆಂತರ್ಯವನ್ನು ಬಿಚ್ಚುವ, ಪಾತ್ರದೊಳಗೆ ಕುಬ್ಜವಾಗಿರುವ ವಿಚಾರದ ಎಳೆಯನ್ನು ಹೊರತೆಗೆವ ಸೂಕ್ಷ್ಮ. ಅಗತ್ಯವಿರುವಷ್ಟೇ ವಾದ-ತರ್ಕ. ಸರಸ-ಸಂವಾದವನ್ನು ಹೆಚ್ಚು ಇಷ್ಟಪಡುತ್ತಾರೆ. ಕಾರ್ಯಕ್ರಮದ ನಂತರವೂ ನಿರ್ವಹಿಸಿದ ಪಾತ್ರದ ಕುರಿತಾಗಿ, ಜತೆ ಕಲಾವಿದರ ನಿರ್ವಹಣೆ ಕುರಿತಾದ ವಿಮರ್ಶೆ. ಇಂತಹ ಸಂದರ್ಭಗಳಲ್ಲಿ ರಾಜಿಯ ಸುಳಿವೇ ಇಲ್ಲ!

ಸ್ವತಃ ನಾಟಕ ಕಲಾವಿದ. ಕೃತಿ ರಚನೆಯೊಂದಿಗೆ ಕಲಾವಿದನಾಗಿ, ನಿರ್ದೇಶಕನಾಗಿ ಮುನ್ನಡೆಸಿದ್ದರು. ಸ್ವತಃ ಹರಿಕಥೆ ಮಾಡುವಷ್ಟು ಗಟ್ಟಿ ಸಂಪನ್ಮೂಲ ಅವರಲ್ಲಿತ್ತು. ಪುರಾಣ ವಾಚನ-ಪ್ರವಚನದಲ್ಲೂ ಅನುಭವಿ. ಮುಂದೆ ಯಕ್ಷಗಾನ ಕ್ಷೇತ್ರದಲ್ಲೇ ಹೆಚ್ಚು ವ್ಯವಸಾಯ.

ಉತ್ತಮ ಭಾಗವತ. ಸಾಹಿತ್ಯದ ಜ್ಞಾನ, ರಾಗದ ನಿಖರತೆ, ಪಾತ್ರದ ಪೋಷಣೆಗೆ ಯಾವ್ಯಾವ ಪದ್ಯಗಳು ಬೇಕೆಂಬ ಖಚಿತ ನಿಲುವು.. ಗಮನಿಸಬಹುದಾದ ಅಂಶಗಳು. ಆರ್ಥದಾರಿಗೆ ಸ್ಫೂರ್ತಿ ತುಂಬುವ ಭಾಗವತಿಕೆ.

ಉಳಿಯ ಶ್ರೀ ಧನ್ವಂತರಿ ಯಕ್ಷಗಾನ ಕಲಾ ಸಂಘದ ಆರಂಭ ಕಾಲದಿಂದಲೂ ಸಕ್ರಿಯ. ಬಹುತೇಕ ಹಿರಿಯ-ಕಿರಿಯ ಕಲಾವಿದರೊಂದಿಗೆ ಒಡನಾಟ. ಒಂದು ಹಂತದಲ್ಲಿ ಸಂಘದ ಜವಾಬ್ದಾರಿಯನ್ನು ಹೆಗಲಿಗೇರಿಕೊಂಡಿದ್ದರು.

'ವೈಶಾಲಿನಿ ಪರಿಣಯ' ವೆಂಕಟಕೃಷ್ಣರ ಮೊದಲ ಯಕ್ಷಗಾನ ಕೃತಿ. ಆಟಕ್ಕೆ ಹೆಚ್ಚು ಒಗ್ಗಿಕೊಳ್ಳುವ ಪ್ರಸಂಗವಿದು. 'ದೂರ್ವಾಸಾತಿಥ್ಯ' ಅದರ ಜತೆಜತೆಯಲ್ಲಿ ಸಿದ್ಧವಾದ ಇನ್ನೊಂದು ಕೃತಿ. ತಾಳಮದ್ದಳೆಗೆ ಒಪ್ಪುವಂತಹುದು. ದೂರ್ವಾಸ ಶಾಪ, ಧನ್ವಂತರಿ ಮಹಾತ್ಮೆ, ಸಂತಾನ ಗೋಪಾಲ, ಕುಂಟಾರು ಕ್ಷೇತ್ರ ಮಹಾತ್ಮೆ, ನದಿಯಾಗಿ ಹರಿದ ನಂದಿನಿ, ದುಂಬಿಯಾಗಿ ನೆಗೆದ ಭ್ರಾಮರಿ, ಪಾವಮಾನಿಯ ಪ್ರಣಯಲೀಲೆ, ಬಂಡಿ ಹೊಡೆದ ಗಂಡುಗಲಿ, ಮಧೂರ ಮಹಿಮೆ, ಪಾಪನಾಶಿನಿ ಸರಸ್ವತಿ, ಗುರುವಾಯೂರು ಮಹಾತ್ಮೆ, ಹರಿಭಕ್ತ ಅಂಬರೀಶ; ನಂದಗೋಕುಲದ ಪೊರ್ಲೆ, ಸತ್ಯನಾರಾಯಣ ವ್ರತ ಮಹಾತ್ಮೆ ಎಂಬ ಎರಡು ತುಳು ಪ್ರಸಂಗಗಳು.. ಹೀಗೆ ಹದಿನಾರು ಪ್ರಸಂಗಗಳ ವಿರಚಿತರು.

ರಚಿಸಿದ ಭಕ್ತಿಗೀತೆಗಳು ಬಹುತೇಕ ಧ್ವನಿಸುರುಳಿಗಳಾಗಿವೆ. ಅಡಕತಟ್ಟೆಗಳಾಗಿವೆ. ಏನಿಲ್ಲವೆಂದರೂ ಇನ್ನೂರಕ್ಕೂ ಮಿಕ್ಕಿ ಪದ್ಯಗಳು ಅಕ್ಷರಕ್ಕಿಳಿದಿವೆ. ಇವೆಲ್ಲವೂ ಪದ್ಯಕ್ಕಾಗಿ ಪದ್ಯಗಳಲ್ಲ. ಎಲ್ಲದರಲ್ಲೂ ಸುಲಲಿತವಾದ ಬಂಧವಿದೆ. ಸಾಹಿತ್ಯ ಗಟ್ಟಿತನವಿದೆ. ಕ್ಷೇತ್ರಗಳ ಕುರಿತಾದ ಬರೆದ ಪದ್ಯಗಳಲ್ಲಿ ಆಯಾಯ ಕ್ಷೇತ್ರದ ಐತಿಹ್ಯವನ್ನು ಅಭ್ಯಸಿಸಿಯೇ ಪದ್ಯ ರಚಿಸುವುದು, ಪ್ರಸಂಗ ರಚಿಸುವುದು ವೆಂಕಟಕೃಷ್ಣರ ಸಾಹಿತ್ಯಗುಣ.
ಕಲೆಯಲ್ಲೂ, ಬದುಕಿನಲ್ಲೂ ಶಿಸ್ತು-ಸೌಮ್ಯಗಂಭೀರ. ಮಿತಭಾಷಿ. ಪ್ರತಿಭೆ ಪಾಂಡಿತ್ಯಗಳ ಸಮರಸ. ಆಲೋಚಿಸದೆ ಯಾವುದೇ ಉತ್ತರವನ್ನು ಕೊಡರು. ತಕ್ಷಣದ ಪ್ರತಿಕ್ರಿಯೆ ಅವರಲ್ಲಿಲ್ಲ. ಹಿರಿಯ ಕಲಾವಿದರ ಅನುಭವದ ಬುತ್ತಿಯ ಗಂಟು ಸಾಕಷ್ಟಿದೆ. ಒಮ್ಮೆ ಮಾತಿಗಿಳಿದರೆ ಸಾಕು, ತಕ್ಷಣ ಆವರಿಸಿಕೊಳ್ಳುವ ಅವರ ವ್ಯಕ್ತಿತ್ವ ಹತ್ತಿರದಿಂದ ಅನುಭವಿಸುವಂತಾದ್ದು. ಸಾಕಷ್ಟು ಪುಸ್ತಕ ಸಂಗ್ರಹವಿದ್ದರೂ, ಅವೆಲ್ಲಾ ಅವರ 'ಮಸ್ತಕ'ದಲ್ಲಿದೆ.

ಅವರ ಆಸಕ್ತಿಯ ಇನ್ನೊಂದು ತಾಣ - ಕ್ಷೇತ್ರ ಪರ್ಯಟಣೆ. ಗುಜರಾತ್, ರಾಜಸ್ಥಾನ, ಉತ್ತರ ಪ್ರದೇಶ, ಹರಿಯಾಣ, ಉತ್ತರಾಂಚಲ, ಬಿಹಾರ, ಮಧ್ಯಪ್ರದೇಶ, ಮಹಾರಾಷ್ಟ್ರ, ಆಂಧ್ರ, ತಮಿಳುನಾಡು, ಕರ್ನಾಟಕ, ಕೇರಳ ರಾಜ್ಯಗಳ ಪ್ರಮುಖ ತೀರ್ಥಕ್ಷೇತ್ರಗಳನ್ನು ಸಂದರ್ಶಿಸಿದ ಸಂತೃಪ್ತ ಗೃಹಸ್ಥ. ಕೇರಳದ ಉಡುಪಿ ಮಾಧ್ವ ಬ್ರಾಹ್ಮಣ ಸಭಾದವರು 'ನಾಟ್ಯ ಕಲಾ ರತ್ನ-2010' ಪ್ರಶಸ್ತಿ ನೀಡಿ ವೆಂಕಟಕೃಷ್ಣರನ್ನು ಗೌರವಿಸಿದ್ದಾರೆ.

ಪತ್ನಿ ಸುಮಿತ್ರಾ. ಮುರಳಿಮಾಧವ, ಡಾ.ನಾರಾಯಣ ಮತ್ತು ಜ್ಯೋತಿ - ಮಕ್ಕಳು. ಮೊನ್ನೆ ಜನವರಿ 29, ೨೦೧೧ರಂದು ತನ್ನ ಎಪ್ಪತ್ತರ ಸಂಭ್ರಮವನ್ನು ಆರ್ಥಪೂರ್ಣವಾಗಿ ಮಧೂರಿನ ತನ್ನ ಸ್ವಗೃಹ 'ವೃಂದಾವನ'ದಲ್ಲಿ ಆಚರಿಸಿದರು. ತನ್ನೆಲ್ಲಾ ಯಕ್ಷಗಾನ ಕೃತಿಗಳ ಸಂಕಲನ 'ಯಕ್ಷಪಲ್ಲವ' ಮತ್ತು ಅಭಿನಂದನಾ ಗ್ರಂಥ 'ರಂಗಾಂತರಂಗ'ವನ್ನು ಮುದ್ರಿಸಿ ಆತ್ಮೀಯರ ಕೈಗಿತ್ತಿದ್ದಾರೆ. ಈ ಎರಡೂ ಕೃತಿಗಳ ಪ್ರಕಟಣೆಗೆ ಮನೆಯೊಳಗಿನ ಬಂಧುಗಳೇ ಸಮಿತಿ ರೂಪಿಸಿಕೊಂಡಿರುವುದು ಗಮನಾರ್ಹ ಮತ್ತು ಮಾದರಿ.

Friday, February 18, 2011

ಕೋಳ್ಯೂರು ನಾರಾಯಣ ಭಟ್ - ನೆನಪು

ತೆಂಕುತಿಟ್ಟು ಯಕ್ಷಗಾನದ ಪ್ರಸಿದ್ಧ ವೇಷಧಾರಿ ಕೋಳ್ಯೂರು ನಾರಾಯಣ ಭಟ್ (80) ಫೆಬ್ರವರಿ 11, 2011ರಂದು ನಿಧನರಾದರು. ನಾರಾಯಣ ಭಟ್ಟರು ನಾಟ್ಯಾಚಾರ್ಯ ಕೀರ್ತಿಶೇಷ ಕುರಿಯ ವಿಠಲ ಶಾಸ್ತ್ರಿಗಳ ಶಿಷ್ಯ. ನಾಲ್ಕು ದಶಕಗಳ ರಂಗಸ್ಥಳ ದುಡಿಮೆ. ಧರ್ಮಸ್ಥಳ, ಕೂಡ್ಲು, ಕುಂಡಾವು, ಸುಂಕದಟ್ಟೆ ಮೇಳಗಳಲ್ಲಿ ತಿರುಗಾಟ. ತಮ್ಮ ಮೇಳವಾಸದಲ್ಲಿ ಕಾಲು ಶತಮಾನಗಳಷ್ಟು ಕಾಲ ಶ್ರೀ ಕಟೀಲು ಮೇಳವೊಂದರಲ್ಲೇ ಕಲಾವಿದನಾಗಿ ಮಿಂಚಿರುವುದು ಇವರ ಹೆಗ್ಗಳಿಕೆ. ರಂಗದಿಂದ ನಿವೃತ್ತನಾಗಿ ಹನ್ನೊಂದು ವರುಷ. ಬಾಲಗೋಪಾಲ ವೇಷದಿಂದ ಮೇಲೇರಿದ ಭಟ್; ಸೌದಾಸ, ಹಿರಣ್ಯಾಕ್ಷ, ಅರುಣಾಸುರ, ಮಕರಾಕ್ಷ, ಭಾನುಗೋಪ, ಜಾಬಾಲಿ.. ಮೊದಲಾದ ಪಾತ್ರಗಳು ಹೆಸರು ತಂದವುಗಳು. ಶೇಣಿ ಪ್ರಶಸ್ತಿ, ಅಗರಿ ಪ್ರಶಸ್ತಿ..ಗಳಿಂದ ಸಂಮಾನಿತರು.

ಬದಿ ಕುಞಪ್ಪ ನಾಯ್ಕ - ನೆನಪು

ಕಾಸರಗೋಡು ಜಿಲ್ಲೆಯ ಎಣ್ಮಕಜೆ ಗ್ರಾಮದ ಪಡ್ರೆ ಬದಿಯವರಾದ ಕುಞಪ್ಪ ನಾಯ್ಕ 16 ಫೆಬ್ರವರಿ 2011ರಂದು ನಿಧನರಾದರು. ಅವರಿಗೆ 85 ವರುಷ ವಯಸ್ಸು.
ಸುರತ್ಕಲ್, ಕೂಡ್ಲು, ಮೂಲ್ಕಿ, ಕೊಲ್ಲಂಗಾನ ಮೇಳಗಳಲ್ಲಿ ಯಕ್ಷಗಾನ ಕಲಾವಿದನಾಗಿ, ಪ್ರಸಾಧನ ಕಲಾವಿದನಾಗಿ ವ್ಯವಸಾಯ. ಪರಂಪರೆಯ 'ಕಿರಾತ' ಪಾತ್ರ ನಿರ್ವಹಣೆಯಲ್ಲಿ ಬದಿಯವರು ಖ್ಯಾತಿ. ಕಿರೀಟ ವೇಷಗಳಲ್ಲೂ ಸೋಲದ ಅಭಿವ್ಯಕ್ತಿ.
ಅವರ ಪುತ್ರ ಶ್ರೀಧರ ಪಡ್ರೆ ಮಂಗಳಾದೇವಿ ಮೇಳದಲ್ಲಿ ಚೆಂಡೆ-ಮದ್ದಳೆ ಕಲಾವಿದ. ರಾಮ ರೈಲ್ವೇ ಉದ್ಯೋಗಿ. ಬಾಲಕೃಷ್ಣ ಭೂಸೇನೆಯಲ್ಲಿ ಸೇವೆ. ಮೋಹನ ಹವ್ಯಾಸಿ ಕಲಾವಿದ.

Thursday, February 3, 2011

'ಸಾಮಗ ಪಡಿದನಿ' ಅನಾವರಣ'ನಮ್ಮ ಕಾಲದ ಓರ್ವ ಶ್ರೇಷ್ಠ ಕಲಾವಾಗ್ಮಿ, ಮಾತಿನ ಲೋಕದ ಭಾವಾವೇಶಜೀವಿ ಮಲ್ಪೆ ರಾಮದಾಸ ಸಾಮಗರ ಒಡನಾಟ, ನೆನಪು, ರಂಗದ ಮೇಲಣ ಸಹವರ್ತಿತ್ವ - ಇವೆಲ್ಲ ಒಂದೊಂದು ವಿಶಿಷ್ಟ ಆಪ್ಯಾಯಮಾನ ಅನುಭವಗಳು. ಆರ್ಧ ಶತಮಾನಗಳ ಕಾಲ ಯಕ್ಷಗಾನದ ಮಾತುಗಾರಿಕೆಗೆ, ಹರಿಕಥಾ ರಂಗಕ್ಕೆ ದೊಡ್ಡ ಕೊಡುಗೆ ನೀಡಿದ ಸಾಮಗರು ಓರ್ವ ವಿಶಿಷ್ಟ, ವಿಚಿತ್ರ ಪ್ರತಿಭಾವಂತ. ವಾಚಿಕದ ಅಂಗದಲ್ಲಿ ಅವರೋರ್ವ ಅಸಾಮಾನ್ಯ ಸಿದ್ಧಿಯಿದ್ದ ಪ್ರತಿಭಾಶಾಲಿ. ಸನ್ನಿವೇಶ ನಿರ್ಮಾಣ, ವಿವರಗಳ ಪೋಣಿಕೆ, ಪೂರಕ ಪಾಂಡಿತ್ಯ, ಭಾಷಾಸೌಂದರ್ಯ, ಶಬ್ದಾಲಂಕಾರ, ಅರ್ಥಾಲಂಕಾರ, ಧ್ವನಿಸೌಂದರ್ಯ, ಉತ್ಕಟಭಾವದ ಅವರ ಮಾತುಗಾರಿಕೆ ಒಂದು ಅಸಾಮಾನ್ಯ ಅನುಭವ' ಎಂದು ಯಕ್ಷಗಾನ ವಿಮರ್ಶಕ, ಅರ್ಥದಾರಿ, ವಿದ್ವಾಂಸ ಡಾ| ಎಂ.ಪ್ರಭಾಕರ ಜೋಶಿ ಹೇಳಿದರು.

ಪುತ್ತೂರಿನ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ಜರುಗಿದ ಯಕ್ಷಗಾನದ ಮೇರು ಮಲ್ಪೆ ರಾಮದಾಸ ಸಾಮಗರ ಕುರಿತಾಗಿ ಪತ್ರಕರ್ತ, ಕಲಾವಿದ ಶ್ರೀ ನಾ. ಕಾರಂತ ಪೆರಾಜೆ ಸಂಪಾದಿಸಿದ 'ಸಾಮಗ ಪಡಿದನಿ' ಕೃತಿಯನ್ನು ಅನಾವರಣ ಗೊಳಿಸಿ ಮಾತನಾಡುತ್ತಾ, 'ಈ ಕೃತಿಯು ಸಾಮಗರ ಕಲಾಭಾವಜೀವನದ ದಾಖಲೆ. ಸಾಮಗರ ಮಾತಿನ ಲೋಕವೊಂದರ ದರ್ಶನ' ಎಂದರು.

ಅವಿನಾಶ್ ಕೊಡೆಂಕಿರಿ ಲೇಖಕರಾಗಿರುವ ಭರ್ತ್ಹರಿಯ ಶತಕಗಳು ಕೃತಿಯನ್ನು ಉಡುಪಿ ಎಂ.ಜಿ.ಎಂ.ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ, ಅರ್ಥದಾರಿ, ವಿದ್ವಾಂಸ ಪ್ರೊ:ಎಂ.ಎಲ್.ಸಾಮಗ ಬಿಡುಗಡೆ ಮಾಡಿ ಮಾತನಾಡುತ್ತಾ, 'ಜೀವನಕ್ಕೊಂದು ದಿಕ್ಕನ್ನು ಸೂಚಿಸುವ ಇಂತಹ ಕೃತಿಯ ಪ್ರಕಟಣೆ ಸ್ವಾಗತಾರ್ಹ' ಅಂದರು. ಲೇಖಕ ಅವಿನಾಶ್ ಕೊಡೆಂಕಿರಿ ಕೃತಿಯನ್ನು ಪರಿಚಯಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ, ಧರ್ಮದರ್ಶಿ ಹರಿಕೃಷ್ಣ ಪುನರೂರು ಸಭಾಧ್ಯಕ್ಷತೆಯನ್ನು ವಹಿಸಿ, 'ಪುಸ್ತಕ ಕೊಂಡು ಓದುವ ಪ್ರವೃತ್ತಿಯನ್ನು ಬಾಲ್ಯದಿಂದಲೇ ಮಕ್ಕಳಲ್ಲಿ ರೂಢಿಸುವ ಕೆಲಸವನ್ನು ಹೆತ್ತವರು ಮಾಡಲೇಬೇಕಾದ ಅನಿವಾರ್ಯವಿದೆ' ಎಂದರು.

ಕೀರ್ತಿಶೇಷ ರಾಮದಾಸ ಸಾಮಗರಿಗೆ 'ಭೀಷ್ಮ ಮತ್ತು ಮಯೂರಧ್ವಜ' ಪ್ರಸಂಗಗಳನ್ನು ತಾಳಮದ್ದಳೆ ಮೂಲಕ ಪ್ರಸ್ತುತಪಡಿಸಿ 'ಯಕ್ಷನಮನ' ಸಲ್ಲಿಸಲಾಯಿತು. ಶ್ರೀಗಳಾದ ಹೊಸಮೂಲೆ ಗಣೇಶ ಭಟ್, ಬಟ್ಯಮೂಲೆ ಲಕ್ಷ್ಮೀನಾರಾಯಣ ಭಟ್, ಜಗನ್ನಿವಾಸ ರಾವ್ ಪಿ.ಜಿ., ಲಕ್ಷ್ಮೀಶ ಅಮ್ಮಣ್ಣಾಯ, ಕೃಷ್ಣಪ್ರಕಾಶ ಉಳಿತ್ತಾಯ, ಡಾ.ಜೋಶಿ, ಪ್ರೊ:ಎಂ.ಎಲ್.ಸಾಮಗ, ರಾಧಾಕೃಷ್ಣ ಕಲ್ಚಾರ್, ವಾಸುದೇವ ರಂಗಾಭಟ್, ಭಾಸ್ಕರ ಬಾರ್ಯ ಕಲಾವಿದರಾಗಿ ಭಾಗವಹಿಸಿದ್ದರು.

ಆರಂಭದಲ್ಲಿ ಯಕ್ಷಗಾನದ ಹಿರಿಯ ಕಲಾವಿದ ಶ್ರೀ ಪಾತಾಳ ವೆಂಕಟ್ರಮಣ ಭಟ್ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಶುಭಾರಂಭ ನೀಡಿದರು. ಕೊಡೆಂಕಿರಿ ಪ್ರಕಾಶನದ ಪ್ರಕಾಶ್ ಕುಮಾರ್ ಕೊಡೆಂಕಿರಿ ಸ್ವಾಗತಿಸಿದರು. ದೀಪಾ ಬುಕ್ ಹೌಸ್ನ ಸತ್ಯಮೂರ್ತಿ ಹೆಬ್ಬಾರ್ ಅತಿಥಿಗಳಿಗೆ ಪುಸ್ತಕ ನೀಡಿ ಗೌರವಿಸಿದರು. ಉಪನ್ಯಾಸಕ ಡಾ.ಬಿ.ಎನ್.ಮಹಾಲಿಂಗ ಭಟ್ ನಿರ್ವಹಿಸಿದರು. ಸಾಮಗ ಪಡಿದನಿ ಕೃತಿಯ ಲೇಖಕ ನಾ. ಕಾರಂತ ಪೆರಾಜೆ ವಂದಿಸಿದರು. ಆರಂಭದಲ್ಲಿ ಸ್ವಪ್ನಾ ಉದಯಕುಮಾರ್ ಕೊಡೆಂಕಿರಿ ಪ್ರಾರ್ಥಿಸಿದರು.