Thursday, September 29, 2011

ಮನ ಸೆಳೆಯುವ 'ತದ್ರೂಪಿ ಯಕ್ಷ'ರು

'ಪುತ್ತೂರಿನ ಕಾನಾವು ಮನೆಯಲ್ಲಿ ಯಕ್ಷಗಾನ ವೇಷಗಳಿವೆ,' ಮಿತ್ರ ಪ್ರಕಾಶ್ ಕೊಡೆಂಕಿರಿ ಸುಳಿವು ಕೊಟ್ಟರು. 'ಹತ್ತರೊಟ್ಟಿಗೆ ಹನ್ನೊಂದು' ಎನ್ನುತ್ತಾ ಉದಾಸೀನ ತೋರಿದೆ. ಅವರ ದಾಕ್ಷಿಣ್ಯಕ್ಕೆ ಕಟ್ಟುಬಿದ್ದು ಹೋಗಿ ನೋಡ್ತೇನೆ, ಕಲಾವಿದರೇ ವೇಷತೊಟ್ಟು ಅಲ್ಲಿ ನಿಂತಿದ್ದರು!

ಅಲ್ಲಿದ್ದುದು ಯಕ್ಷಗಾನದ ವೇಷಗಳ ಮುಖವಾಡವಲ್ಲ, ತದ್ರೂಪಿ ಪ್ರತಿಕೃತಿ. 'ಯಕ್ಷಗಾನದ ವೇಷವೊಂದನ್ನು ನಮ್ಮ ಕಣ್ಣುಗಳು ಹೇಗೆ ನೋಡ್ತದೋ, ಅದರಂತೆ ಈ ರಚನೆ' ಎಂದು ಪರಿಚಯಿಸಿದರು, ಕಲಾವಿದ ಕುಂದಾಪುರದ ಪ್ರಕಾಶ್ ಕೋಣಿ.

ಯಕ್ಷಗಾನ ಮುಖವಾಡಗಳಿಂದು ಸಮಾರಂಭಗಳಲ್ಲಿ ಸ್ಮರಣಿಕೆಗಳಾಗಿ ಪ್ರಸಿದ್ಧಿಯಾಗಿವೆ. ಮಂಗಳೂರು, ಕಾರ್ಕಳಗಳಲ್ಲಿ ವೇಷದ ಪ್ರತಿಕೃತಿಗಳು ಮ್ಯೂಸಿಯಂಗಳಲ್ಲಿವೆ. ಅಡೂರು ಶ್ರೀಧರ ರಾಯರು ಸ್ವತಃ ಯಕ್ಷಗೊಂಬೆಗಳನ್ನು ಪಾರಂಪರಿಕ ರೀತಿಯನ್ನು ತಯಾರಿಸುತ್ತಾರೆ. ಪ್ರಕಾಶ್ ಕೋಣಿಯವರ 'ತದ್ರೂಪಿ ಯಕ್ಷ'ರು ಈ ಎಲ್ಲಾ ಕಲಾಗಾರಿಕೆಗಳಿಗಿಂತ ಭಿನ್ನ. ರಚನೆಗಳಲ್ಲಿ ವ್ಯತ್ಯಾಸವಿಲ್ಲದಿದ್ದರೂ ವಿನ್ಯಾಸಗಳಲ್ಲಿ ತುಸು ಭಿನ್ನ.

ವೇಷಧಾರಿಯು ಪಾತ್ರಕ್ಕೆ ಸಿದ್ಧವಾಗಲು ಏನೆಲ್ಲಾ ಪರಿಕರಗಳನ್ನು ಬಳಸಿಕೊಳ್ಳುತ್ತಾರೋ ಅವೆಲ್ಲಾ ಇಲ್ಲಿವೆ ಉದಾ. ಸಾಕ್ಸ್, ಗೆಜ್ಜೆ, ಕಚ್ಚೆ, ಕಿರೀಟ, ಆಭರಣಗಳು.. ಇತ್ಯಾದಿ. ಹಾಗಾಗಿ ತದ್ರೂಪಿಯ ಮುಂಭಾಗ ಎಷ್ಟು ಸೌಂದರ್ಯವಾಗಿ ಕಾಣುತ್ತದೋ, ಅಷ್ಟೇ ಹಿಂಭಾಗವೂ ಕೂಡಾ. ತದ್ರೂಪಿಯನ್ನು ನಿಲ್ಲಿಸಿದಾಗ ಕಲಾವಿದನೇ ವೇಷತೊಟ್ಟು ನಿಂತಂತೆ ಭಾಸವಾಗುತ್ತದೆ.

ಬಳಸುವ ಬಟ್ಟೆ, ತೊಡುವ ಆಭರಣದ ಗಾತ್ರ, ಕಿರೀಟ, ಕೇಶ.. ವಿನ್ಯಾಸಗಳಲ್ಲಿ ರಾಜಿಯಿಲ್ಲ. ಹಾಗಾಗಿ ಒಂದು ತದ್ರೂಪಿ ಸೃಷ್ಟಿಯಾಗಲು ವಾರಗಟ್ಟಲೆ ಬೇಕಂತೆ. ಖರ್ಚೂ ಅಧಿಕ. ಈಗಾಗಲೇ ಬಹಳಷ್ಟು ಮಂದಿ ಮೆಚ್ಚಿಕೊಂಡು, ಪ್ರಕಾಶರ ಬೆನ್ನುತಟ್ಟಿದ್ದಾರೆ, ತದ್ರೂಪಿ ಯಕ್ಷರನ್ನು ಮನೆಯೊಳಗೆ ಸೇರಿಸಿಕೊಂಡಿದ್ದಾರೆ.

'ತದ್ರೂಪಿ ಆಕರ್ಷಕವಾಗಿದೆ. ನನ್ನ ಕ್ಲಿನಿಕ್ನಲ್ಲಿ ಇಟ್ಟಿದ್ದೇನೆ. ಎಲ್ಲರೂ ಇದರ ನೋಟಕ್ಕೆ ಮಾರುಹೋಗಿ ವಿಚಾರಿಸುತ್ತಿದ್ದಾರೆ' ಎನ್ನುತ್ತಾರೆ ಪುತ್ತೂರಿನ ವೈದ್ಯ ಡಾ.ವಿಶ್ವನಾಥ ಭಟ್ ಕಾನಾವು.

ತದ್ರೂಪಿಗಳ ಎತ್ತರ ಎರಡೂವರೆ ಅಡಿ. ಐದರಿಂದ ಆರು ಕಿಲೋ ಭಾರ. ಮುಖ ರಚನೆಯಲ್ಲಿ ಪೈಬರ್ ಬಳಸಿದ್ದರಿಂದ ಅಂದ ಹೆಚ್ಚು. ಗ್ಲಾಸ್ಮನೆ(ಚೌಕಟ್ಟು)ಯಲ್ಲಿಟ್ಟರೆ ಬಾಳ್ವಿಕೆ ಹೆಚ್ಚು.

ಪ್ರಕಾಶರಿಗೆ ಬಾಲ್ಯದಿಂದಲೇ ಯಕ್ಷಗೀಳು. ಚೌಕಿಯಲ್ಲಿ ರಾತ್ರಿ ಹೋಗಿ ಕುಳಿತರೆ, ಬೆಳಿಗ್ಗೆಯೇ ಹೊರಬರುವುದು! ಪಾತ್ರಧಾರಿ ಬಣ್ಣ ಹಾಕುವಲ್ಲಿಂದ, ರಂಗಕ್ಕೆ ಹೋಗಿ ಪುನಃ ವೇಷ ಬಿಚ್ಚುವ ತನಕ ನೋಡಿ ಆನಂದಿಸುವ ಅಪರೂಪದ ಚಾಳಿ! 'ಇಲ್ಲೇನು ಮಾಡ್ತೆ. ಆಟ ನೋಡು' ಎಂದು ಕಲಾವಿದರು ಅಬ್ಬರಿಸಿದರೂ, ಪ್ರಕಾಶ್ ಜಪ್ಪೆನ್ನುತ್ತಾ ಬಣ್ಣದ ಮನೆಯಲ್ಲೇ ಆಟ ನೋಡ್ತಾರೆ.

ಯಕ್ಷಗಾನದ ವೇಷ ತಯಾರಿಯನ್ನು ನೋಡುವ ಅವರ ಚಪಲವೇ 'ತದ್ರೂಪಿ ಯಕ್ಷ'ರ ಸೃಷ್ಟಿಯ ಹಿನ್ನೆಲೆ. ಬಣ್ಣದ ಮನೆಯಲ್ಲಿ ನೋಡಿದ ದೃಶ್ಯಗಳು ಮಸ್ತಕದ ಕಂಪ್ಯೂಟರಿನಲ್ಲಿ ದಾಖಲು. 'ಆರಂಭದ ದಿವಸಗಳಲ್ಲಿ ಇದಕ್ಕೆ ಬೇಕಾದ ಪರಿಕರಗಳು ಅಂಗಡಿಯಲ್ಲಿ ಸಿಕ್ತದೆ ಅಂತ ಗೊತ್ತಿರಲಿಲ್ಲ. ನಂತರ ತಿಳಿಯಿತು' ಎನ್ನುತ್ತಾರೆ.

ಏಕಲವ್ಯ ಅಭ್ಯಾಸ. ಮಾಡುತ್ತಾ ಕಲಿತರು. ತದ್ರೂಪಿಗಳ ಆಕರ್ಷಕ ವಿನ್ಯಾಸ ಮತ್ತು ನೋಟಕ್ಕೆ ಮಾರು ಹೋದ ಕಲಾವಿದರನ್ನು ಪ್ರಕಾಶ್ ಜ್ಞಾಪಿಸಿಕೊಳ್ಳುತ್ತಾರೆ. ಪ್ರಕಾಶರ ಅಕ್ಕ ದ.ಕ.ಜಿಲ್ಲೆಯ ಸವಣೂರಿನಲ್ಲಿ ಅಧ್ಯಾಪಿಕೆ. ಅವರ ಮೂಲಕ ಕಾನಾವು ಶ್ರೀದೇವಿಯವರ ಪರಿಚಯ. ಪ್ರಕಾಶರ ಕಲಾಗಾರಿಕೆಯನ್ನು ನೋಡಿದ ಇವರು ಮುಂದಿನ ಅಭ್ಯಾಸಕ್ಕಾಗಿ ಸುಳ್ಯದ ಕಲಾವಿದ ಜೀವನರಾಂ ಗುರುಕುಲಕ್ಕೆ ಹಾದಿ ತೋರಿದರು. ’ನನಗೆ ಕಲಾ ಕಲಿಕೆಯ ಬಾಲಪಾಠದ ಶೈಕಣಿಕ ಕೊರತೆಯಿದೆ ಎಂದು ಇಲ್ಲಿಗೆ ಬಂದ ಮೇಲೆ ತಿಳಿಯಿತು' ಎನ್ನುತ್ತಾರೆ ಪ್ರಕಾಶ್.

ಬೆಂಗಳೂರು ಸನಿಹದ ಬಿಡದಿಯ ಕಲಾಶಾಲೆಯಲ್ಲಿ ಅಕಾಡೆಮಿಕ್ ಅಭ್ಯಾಸ. ಶಿಲ್ಪಕಲೆಯಲ್ಲಿ ವಿಶೇಷ ಕಲಿಕೆ. ಒಂದೂವರೆ ವರುಷ ಕಲಿಕೆಯೊಂದಿಗೆ ಪ್ರಾಕ್ಟಿಕಲ್. 'ನಿಜಕ್ಕೂ ನನಗೊಂದು ಟರ್ನಿಂಗ್ ಪಾಯಿಂಟ್. ಮೊದಲೇ ಬರಬೇಕಿತ್ತು.' ಎಂದಾಗ ಅವರ ಕಲಿಕಾ ಹಸಿವು ಅರ್ಥಮಾಡಿಕೊಳ್ಳಬಹುದು.

ತದ್ರೂಪಿಗಳ ಸೃಷ್ಟಿಗೆ ಇನ್ನಷ್ಟು ವೇಗ. ಆಯ-ಆಕಾರ ಫಿನಿಶಿಂಗ್ ಪಡೆಯಿತು. 'ತದ್ರೂಪಿಗಳ ರಚನೆಗೆ ಬಹಳಷ್ಟು ಸಮಯ ಹಿಡಿಯುತ್ತದೆ. ವೆಚ್ಚವೂ ಅಧಿಕ. ಹಾಗಾಗಿ ಐದಾರು ಸಾವಿರ ದರವಿಟ್ಟರೂ ಕಡಿಮೆಯೇ. ಅಷ್ಟೊಂದು ಮೊತ್ತ ಕೊಟ್ಟು ಕೊಳ್ಳುವ ಕಲಾ ಹೃದಯವಂತರು ಇದ್ದಾರೆ. ಹೆಚ್ಚು ಬಂಡವಾಳ ಬೇಡುವ ಉದ್ದಿಮೆ. ಆದರೆ ಹೊಟ್ಟೆಪಾಡಿಗಾಗಿ ಚಾಲ್ತಿಯಲ್ಲಿರುವ ಮುಖವಾಡ ತಯಾರಿ ಕಾರ್ಯಾಗಾರವನ್ನು ಆರಂಭಿಸಬೇಕು' ಎನ್ನುತ್ತಾರೆ ಪ್ರಕಾಶ್.

ತದ್ರೂಪಿಗಳ ರಚನೆಗೆ ಬಳಸುವ ಪರಿಕರಗಳಲ್ಲಿ ರಾಜಿಯಿಲ್ಲ. ರಂಗದಲ್ಲಿ ವೇಷವನ್ನು ನೋಡಿದ ಹಾಗೆ ಇರಬೇಕು. ಆದರೆ ಮನುಷ್ಯದ ಬದಲಿಗೆ ಬೊಂಬೆ. ಉಳಿದುದೆಲ್ಲಾ ಯಥಾವತ್.

ಪ್ರಕಾಶ್ ಮುಗ್ಧ. ಸರಳ. ಮುಜುಗರದ ವ್ಯಕ್ತಿ. ಹತ್ತು ಮಾತನಾಡಿದರೆ ಒಂದು ಮಾತನಾಡಿಯಾರು. ಕಲೆಯತ್ತಲೇ ಅವರ ಮೈಂಡ್ ಸೆಟ್. 'ಎಷ್ಟೇ ಖರ್ಚು ಬೀಳಲಿ, ಕಷ್ಟವಾಗಲಿ, ತದ್ರೂಪಿ ಕೆಲಸವನ್ನು ಬಿಡುವುದಿಲ್ಲ' ಎಂದಾಗ ಇವರಿಂದ ಕಲಾಕೃತಿಯನ್ನು ಕೊಂಡು ಪ್ರೋತ್ಸಾಹಿಸೋಣ ಎಂದು ಅನ್ನಿಸುತ್ತದೆ.

(7353258662)

Wednesday, September 28, 2011

ಹೊಸಹಿತ್ಲು 'ಲಿಂಗಣ್ಣ' - ನೆನಪಿನ ಭಾಷ್ಪಾಂಜಲಿ


1998ರ ಸಮಯ. ನನಗಾಗ ಬಹುತೇಕ ರಾತ್ರಿಗಳೆಲ್ಲಾ ಹಗಲು! ಕುಳಿತಲ್ಲಿ, ನಿಂತಲ್ಲಿ ಆಟದ್ದೇ ಮಾತು, ಧ್ಯಾನ. 'ನಿನ್ನೆ ಹಾಗಾಯಿತು, ಇಂದು ಹೀಗಾಗಬಹುದು' - ಈ ವ್ಯಾಪ್ತಿಯೊಳಗೆ ಮಾತಿನ ಸುರುಳಿ. ಅವಕಾಶ, ಬಹುಬೇಡಿಕೆ ಬರುತ್ತಿರುವುದರಿಂದ ಮನದೊಳಗೆ 'ಒಣಜಂಭ'.

ಅಂದು 'ಕಂಸವಧೆ' ಪ್ರಸಂಗ. ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿಗಳ ಭಾಗವತಿಕೆ. ನನ್ನ 'ಕೃಷ್ಣ'. ಹೊಸಹಿತ್ಲು ಮಹಾಲಿಂಗ ಭಟ್ಟರ 'ಅಕ್ರೂರ'. ಅವರ ಕಲಾಗಾರಿಕೆಯನ್ನು ಹೇಳಿ-ಕೇಳಿ ಗೊತ್ತಿತ್ತೇ ವಿನಾ, ನೋಡಿದ್ದಿರಲಿಲ್ಲ, ಮಾತನಾಡಿದ್ದಿರಲಿಲ್ಲ. ಎಂದಿನಂತೆ ಚೌಕಿಗೆ ಹೋದಾಗ ಮಾತನಾಡಿಸುವ ಸ್ನೇಹಿತರು(?) ಸಿಕ್ಕರು. ಒಂದಷ್ಟು ಹೊತ್ತು ನಿನ್ನೆಯದೋ, ಮೊನ್ನಿನದೋ ಆಟದ ಕುರಿತು ವ್ಯಂಗ್ಯ, ಕ್ಲೀಷೆ, ಹೊಗಳಿಕೆ.. ನಡೆಯುತ್ತಲೇ ಇತ್ತು. 'ಇಂದಿನ ಆಟದ ಸುದ್ದಿ' ಯಾರೂ ಮಾತನಾಡುತ್ತಿಲ್ಲ.

'ಕಾರಂತ್ರೆ, ಲಿಂಗಣ್ಣ ಅವರಲ್ಲಿ ಮಾತನಾಡಿದ್ರಾ' ಎಂದರು ತೆಂಕಬೈಲು. 'ಪರಿಚಯವಿಲ್ಲ' ಎಂದೆ. ದೇವರ ಪೆಟ್ಟಿಗೆಯ ಹತ್ತಿರ ವಿಶ್ರಾಂತಿಯಲ್ಲಿದ್ದ ಅವರ ಬಳಿಗೆ ಕರೆದೊಯ್ದ ಭಾಗವತರು ಪರಿಚಯ ಮಾಡಿಕೊಟ್ಟರು. 'ಇವರಾ. ಕಾರಂತ್ರು ಅಂದ್ರೆ.. ಏನಯ್ಯಾ.. ಹೇಗಿದ್ದೀರಿ' ಎಂಬ ಮೊದಲ ಮಾತು ಅವರದ್ದೇ ಆಯಿತು. 'ಈ ಪ್ರಸಂಗದಲ್ಲಿ ಎಷ್ಟು ಕೃಷ್ಣನ ವೇಷ ಮಾಡಿದ್ರಿ' ಎಂಬುದು ಮರುಪ್ರಶ್ನೆ.

ಈ ಪ್ರಶ್ನೆಯಲ್ಲಿದ್ದ ಹಿರಿತನ ನನ್ನನ್ನು ಚುಚ್ಚಿತು. ನಿಜಕ್ಕೂ ಸ್ತ್ರೀಪಾತ್ರದಲ್ಲೇ ಹೆಚ್ಚು ಕಾಣಿಸಿಕೊಳ್ಳುತ್ತಿದ್ದ ನಾನು ಪುರುಷ ಪಾತ್ರಗಳನ್ನು ಮಾಡಿದ್ದೂ ಕಡಿಮೆ. ಈ ಪ್ರಶ್ನೆ ನನ್ನ ಅರ್ಧ ಶಕ್ತಿಯನ್ನು ಉಡುಗಿಸಿತ್ತು. 'ಒಂದೆರಡು ಮಾಡಿದ್ದೇನೆ' ಎಂದೆ. 'ಊಟ ಆಯಿತಾ' ಎಂದರು. 'ಬನ್ನಿ.. ಮಾತನಾಡುತ್ತಾ ಊಟ ಮಾಡೋಣ' ಎಂದು ಎದ್ದರು.

ನನಗೆ ಆಶ್ಚರ್ಯವಾಯಿತು. ನನಗೋ 30-32 ಆದರೆ ಅವರಿಗೋ 60 ಮೀರಿದ ಹರೆಯ. 'ಇಂದು ನನ್ನನ್ನು ಲಗಾಡಿ ಕೊಡ್ತಾರೆ' ಎಂದು ಮನಸ್ಸಿನಲ್ಲೇ ಸಂಘಟಕರಿಗೆ ಹಿಡಿಶಾಪ ಹಾಕುತ್ತಾ ಹೆಜ್ಜೆ ಹಾಕಿದೆ. 'ಬನ್ನಿ.. ಒಳ್ಳೆಯ ಗಾಳಿ ಇದೆ. ಇಲ್ಲೇ ಮಾತನಾಡೋಣ.. ನಿಮ್ಮ ಬಗ್ಗೆ ಕೇಳುತ್ತಾ ಇದ್ದೇನೆ. ಪತ್ರಿಕೆಗಳಲ್ಲಿ ಲೇಖನ ಒದುತ್ತಾ ಇದ್ದೇನೆ..' ಹೀಗೆ 'ಹೊಗಳುತ್ತಾ' (ಹೊಗಳಿದಾಗ ಉಬ್ಬುವುದು ಸಹಜ ಧರ್ಮ!) ಹೋದ ಹಾಗೆ ಅಂಜಿಕೆ ದೂರವಾಗುತ್ತಾ ಹೋಯಿತು.

'ಸರಿ.. ಜಲದಿಸುತೆಯಳ.. ಈ ಪದ್ಯಕ್ಕೆ ಏನು ಅರ್ಥ ಹೇಳ್ತೀರಿ ನೋಡ್ವಾ' ಎಂದರು. ನನಗೆ ಗೊತ್ತಿರುವಷ್ಟನ್ನು ಒಪ್ಪಿಸಿದೆ. ಎರಡನೇ ಪದ್ಯ, ಮೂರನೇ ಪದ್ಯ.. ಹೀಗೆ ನನ್ನ ಸಂದರ್ಶನ ಮುಗಿಸಿದರು. ನಂತರ ಅಕ್ರೂರದ ಪದ್ಯದ ಪಾಳಿ ಬಂದಾಗ, 'ನಾನು ಏನು ಹೇಳ್ತೇನೆ ಎಂಬುದನ್ನು ಈಗ ಹೇಳುವುದಿಲ್ಲ. ನನ್ನ ಜತೆಯಲ್ಲೇ ಬಂದರೆ ಆಯಿತು' ಎಂದರು. ನಿಜಕ್ಕೂ 'ತಲೆಬುಡ' ಗೊತ್ತಾಗಲಿಲ್ಲ.

ಮೇಕಪ್ಗೆ ಕುಳಿತೆ. 'ಸ್ತ್ರೀವೇಷ ಮಾಡುವವರು ಪುರುಷ ವೇಷ ಮಾಡಬಾರದು' ಎಂದು ನನ್ನ ಮೇಕಪ್ ನೋಡಿ ಗೇಲಿ ಮಾಡಿದರು! ಆಟ ಶುರುವಾಯಿತು, ಪ್ರವೇಶವಾಯಿತು. ತೆಂಕಬೈಲು ಭಾಗವತರ 'ಬೆಟ್' ಪ್ರಸಂಗದಲ್ಲಿ 'ಕಂಸವಧೆ'ಯೂ ಒಂದು. ಅಂದಿನ ಪದ್ಯವನ್ನು ಜ್ಞಾಪಿಸಿಕೊಂಡರೆ ರೋಮಾಂಚನವಾಗುತ್ತದೆ. ಮೊದಲ ಪದ್ಯಕ್ಕೆ ಅರ್ಥ ಹೇಳಿದೆ. ಅವರೂ ಮಾತನಾಡಿದರು. ನಿರರ್ಗಳವಾದ ಮಾತುಗಾರಿಕೆ. ಶಬ್ದ ಶಬ್ದಗಳಲ್ಲಿ ಭಾವನೆಗಳು. ಅಂದಿನ ಅವರ ಅರ್ಥಗಾರಿಕೆ ಹೇಗಿತ್ತೆಂದರೆ ಅದರಲ್ಲೆಲ್ಲಾ ಪ್ರಶ್ನೆಗಳೇ ತುಂಬಿದ್ದುವು. ಅವಕ್ಕೆ ನಾನು ಉತ್ತರ ಕೊಟ್ಟರೆ ನನ್ನ ಅರ್ಥ ತುಂಬಿದಂತೆ. ಉತ್ತರ ಹೇಳಲಾಗದಿದ್ದರೆ 'ಹಾಗಲ್ವೋ ಕೃಷ್ಣ' ಎಂದು ಅವರೇ ಉತ್ತರ ಹೇಳುತ್ತಿದ್ದರು.

ಮೊದಲು ಅವರ ಬಗ್ಗೆ ನಾನು ಯಾವ ಭಾವ ಇಟ್ಟುಕೊಂಡಿದ್ದೆನೋ, ಆಟ ಮುಗಿಯುವಾಗ ನಿರಾಳ. ಅಂದಿನ ಆಟಕ್ಕೆ ನಿರೀಕ್ಷೆಗಿಂತ ಹತ್ತು ಅಂಕ ಅಧಿಕವೇ. ಅಂದಿನ 'ಕೃಷ್ಣ-ಅಕ್ರೂರ' ಜತೆಗಾರಿಕೆ ನನಗಂತೂ ಮಾಸದ ನೆನಪು. ಮುಂದೆ ಆ ಪ್ರಸಂಗದಲ್ಲಿ 'ಕೃಷ್ಣ'ನ ಪಾತ್ರ ಪಾಲಿಗೆ ಬಂದಾಗ ಲಿಂಗಣ್ಣ ನೆನಪಿಗೆ ಬರುತ್ತಾರೆ.

ನಂತರದ ಕೆಲವು ಆಟಗಳಿಗೆ ಅವರು ಕೆಲವು ಪಾತ್ರಗಳಿಗೆ ನನ್ನನ್ನೆ ಆಯ್ಕೆ ಮಾಡಿ ಸಂಘಟಕರಿಂದ ಹೇಳಿಸುತ್ತಿದ್ದರು. ಕೃಷ್ಣಾರ್ಜುನ ಕಾಳಗದ ಅವರ 'ಅರ್ಜುನ' ಪಾತ್ರಕ್ಕೆ ಮೂರ್ನಾಲ್ಕು ಬಾರಿ ನನ್ನ 'ಸುಭದ್ರೆ'ಯ ಜತೆಯಾಗಿತ್ತು. 1994-95ರ ಸುಮಾರಿಗೆ ಅಡೂರು ಶ್ರೀಧರ ರಾಯ ಮನೆಯಂಗಳದಲ್ಲಿ 'ಯಕ್ಷಗಾನ ಸಮ್ಮೇಳನ' ಜರುಗಿತ್ತು. ಅಂದು 'ದಮಯಂತಿ ಪುನರ್ ಸ್ವಯಂವರ' ಪ್ರಸಂಗದಲ್ಲಿ ಹೊಸಹಿತ್ಲು ಮಹಾಲಿಂಗ ಭಟ್ 'ಋತುಪರ್ಣ'ನ ಪಾತ್ರ, ಕೋಳ್ಯೂರು ರಾಮಚಂದ್ರ ರಾಯರ 'ದಮಯಂತಿ', ಪೆರುವಡಿ ನಾರಾಯಣ ಭಟ್ಟರ 'ಬಾಹುಕ' ಮತ್ತು ಬಲಿಪ ನಾರಾಯಣ ಭಾಗವತರ ಹಾಡುಗಾರಿಕೆ. ಆ ಹೊತ್ತಿಗೆ ಮಹಾಲಿಂಗ ಭಟ್ಟರು ಶಾರೀರಿಕವಾಗಿ ಬಳಲಿದ್ದರೂ, ಪಾತ್ರದ ಗತ್ತುಗಾರಿಕೆಯಲ್ಲಿ ಅದು ಕಂಡಿಲ್ಲ. ಬಹುಶಃ ಅವರನ್ನು ಕಂಡದ್ದು, ಮಾತನಾಡಿದ್ದು ಅದೇ ಕೊನೆ.

ಅವರ ಇಹಲೋಕ ಯಾತ್ರೆಯ ಸುದ್ದಿ ಪತ್ರಿಕೆಯಲ್ಲಿ ಕಂಡಾಗ 'ಅಕ್ರೂರ, ಋತುಪರ್ಣ, ಅರ್ಜುನ' ಪಾತ್ರಗಳೆಲ್ಲಾ ಚಿತ್ತಪಟಲದಲ್ಲಿ ಹಾದುಹೋದುವು. ಯಕ್ಷಗಾನದ ಸರ್ವಾಂಗ ಸಂಪನ್ಮೂಲವಿದ್ದರೂ ಅದರ ಪ್ರಕಾಶಕ್ಕೆ 'ವಿಧಿ'ಯ ಮಸುಕು. 'ಯೋಗ-ಯೋಗ್ಯತೆ' ಒಬ್ಬರಲ್ಲೇ ಇರುವುದಿಲ್ಲವಲ್ಲಾ!

ಮೀಯಪದವು ಹೊಸಹಿತ್ಲು ಮಹಾಲಿಂಗ ಭಟ್ (ಲಿಂಗಣ್ಣ) ಸೆಪ್ಟೆಂಬರ್ 21ರಂದು ವಿಧಿವಶರಾದರು. ಅವರಿಗೆ 76ರ ವಯಸ್ಸು. ತಂದೆ ಹೊಸಹಿತ್ಲು ಗಣಪತಿ ಭಟ್, ತಾಯಿ ವೆಂಕಮ್ಮ. ಬಾಲ್ಯದಿಂದಲೇ ಯಕ್ಷಗಾನ ಉಸಿರು. ಶ್ರೀಧರ್ಮಸ್ಥಳ ಮೇಳದಲ್ಲಿ ಹದಿನೈದು ವರುಷ, ಕಟೀಲು, ಸುರತ್ಕಲ್, ಕೂಡ್ಲು, ಬಪ್ಪನಾಡು, ಮೂಲ್ಕಿ, ಪುತ್ತೂರು ಮೇಳಗಳಲ್ಲಿ ತಲಾ ಎರಡು ವರುಷಗಳಂತೆ ವ್ಯವಸಾಯ. ನಿವೃತ್ತಿಯ ಬಳಿಕ ಹವ್ಯಾಸಿ ಸಂಘಗಳಲ್ಲಿ ಭಾಗಿ. ಯಕ್ಷಗಾನ ಶಿಕ್ಷಕನಾಗಿ ಹಲವಾರಿ ಶಿಷ್ಯರನ್ನು ರೂಪಿಸಿದ್ದಾರೆ

ಅಭಿಮನ್ಯು, ಬಬ್ರುವಾಹನ, ಕೃಷ್ಣ, ಪರಶುರಾಮ, ಮಕರಾಕ್ಷ, ಭೀಷ್ಮ, ಕಾರ್ತವೀರ್ಯ.. ಮೊದಲಾದ ಪಾತ್ರಗಳು ಹೈಲೈಟ್ಸ್. ಎಲ್ಲವೂ ಗಂಡುಗತ್ತಿನವುಗಳು. .

ಅಗಲಿದ ಹಿರಿಯ ಚೇತನಕ್ಕೆ ಕಂಬನಿ.

Tuesday, September 13, 2011

ಯಕ್ಷಗಾನದ ಹಿರಿಯ ಅರ್ಥದಾರಿ ಕೊರ್ಗಿ : ವಿಧಿವಶ

ಹಿರಿಯ ವಿದ್ವಾಂಸ, ದ್ವಿವೇದಿ ಕೊರ್ಗಿ ವೆಂಕಟೇಶ ಉಪಾಧ್ಯಾಯರು ಹೃದಯಾಘಾತದಿಂದ ಸೆಪ್ಟೆಂಬರ್ 12ರಂದು ವಿಧಿವಶರಾದರು. ಮೂಲತಃ ಕುಂದಾಪುರ ತಾಲೂಕಿನ ಕೊರ್ಗಿಯವರು. ಅವರಿಗೆ ಅರುವತ್ತು ವರುಷ ಪ್ರಾಯ. ಪತ್ನಿ, ಇಬ್ಬರು ಪುತ್ರರು.

ಕೊರ್ಗಿಯವರು ಸಂಸ್ಕೃತ ವಿದ್ವತ್ ಪರಂಪರೆಯ ಹಿರಿಯ ವಿದ್ವಾಂಸರು. ಉಡುಪಿಯ ಸಂಸ್ಕೃತ ಕಾಲೇಜಿನಲ್ಲಿ ನ್ಯಾಯಶಾಸ್ತ್ರದ ವಿದ್ವತ್ ಕಲಿಕೆ. ಕಟೀಲಿನ ಪ್ರೌಢಶಾಲೆಯಲ್ಲಿ ಶಿಕ್ಷಕ ವೃತ್ತಿ. ಸಂಸ್ಕೃತ ಮತ್ತು ಕನ್ನಡ ಭಾಷಾ ಪಾಂಡಿತ್ಯ, ಶಬ್ದ ಮತ್ತು ವ್ಯಾಕರಣಗಳ ಖಚಿತತೆ ಅವರ ಹಿರಿಮೆ. ಕಟೀಲು ಕ್ಷೇತ್ರ ಮಹಾತ್ಮೆ, ಶ್ರಿರಾಮ ಪಟ್ಟಾಭಿಷೇಕ, ವಾತಾಪಿ ಜೀರ್ಣೋಭವ - ಯಕ್ಷಗಾನ ಪ್ರಸಂಗಗಳ ರಚಯಿತರು. 'ಹತ್ತರ ಹಿರಿಮೆ, ಪಂಚಪ್ರಪಂಚ, ಅಕ್ಷರ ಯಕ್ಷಗಾನ.. ಅಚ್ಚಾದ ಮುಖ್ಯ ಕೃತಿಗಳು.

ಲಕ್ಷ್ಮೀನಾರಾಯಣ ಹೃದಯ ಅರ್ಥ ಮತ್ತು ಕಲ್ಪೋಕ್ತ ಪೂಜಾವಿಧಿ, ಬ್ರಹ್ಮಕಲಶ ವಿಧಿ, ಅಷ್ಟೋತ್ತರ ಗಣಪತಿ ಹವನ ವಿಧಿ ಕೃತಿಗಳು ಮಹತ್ತರವಾದವುಗಳು.

ತಾಳಮದ್ದಳೆಯಲ್ಲಿ ಅಪಾರವಾದ ವಿದ್ವತ್ತನ್ನು ಸರಳವಾಗಿ ಪ್ರಸ್ತುತಪಡಿಸುತ್ತಿದ್ದರು. ಪ್ರಖರ ಮಾತುಗಾರಿಕೆ. ವಾದ ವಿವಾದಗಳಲ್ಲಿ ತರ್ಕಗಳಿಗೆ ಪ್ರಾಧಾನ್ಯತೆ. ಶಾಸ್ತ್ರ, ಪುರಾಣ, ವೇದಗಳ ಕುರಿತಾದ ವಿಚಾಗಳಿಂದ ಲೇಪಿತವಾದ ಅರ್ಥಗಾರಿಕೆ.

ಅಗಲಿನ ಕೊರ್ಗಿ ಹಿರಿಯ ಚೇತನಕ್ಕೆ ಕಂಬನಿ.

Sunday, September 11, 2011

ಎಂ.ಎಲ್.ಸಾಮಗ : ಯಕ್ಷಗಾನ ಅಕಾಡೆಮಿ ಅಧ್ಯಕ್ಷ

ಯಕ್ಷಗಾನದ ತೆಂಕು ಮತ್ತು ಬಡಗು ತಿಟ್ಟುಗಳೆರಡರಲ್ಲೂ ಅನುಭವ ಪಕ್ವತೆಯನ್ನು ಹೊಂದಿದ ಪ್ರೊ:ಎಂ.ಲಕ್ಷ್ಮೀನಾರಾಯಣ ಸಾಮಗ (ಪ್ರೊ.ಎಂ.ಎಲ್.ಸಾಮಗ) ಇವರನ್ನು ಕರ್ನಾಟಕ ಸರಕಾರವು ಯಕ್ಷಗಾನ ಬಯಲಾಟ ಅಕಾಡೆಮಿ ಅಧ್ಯಕ್ಷರನ್ನಾಗಿ ನೇಮಿಸಿದೆ.

ನಾಲ್ಕು ದಶಕಗಳ ಆಂಗ್ಲ ಭಾಷಾ ಪ್ರಾಧ್ಯಾಪಕರಾಗಿ ಸೇವೆ. ಉಡುಪಿ ಎಂ.ಜಿ.ಎಂ.ಕಾಲೇಜಿನಲ್ಲಿ ಮೂರು ವರುಷ ಪ್ರಾಂಶುಪಾಲ. ಪ್ರಸ್ತುತ ತೆಂಕನಿಡಿಯೂರು ಸರಕಾರಿ ಕಾಲೇಜಿನ ಸ್ನಾತಕೋತ್ತರ ಕೇಂದ್ರದಲ್ಲಿ ಅತಿಥಿ ಉಪನ್ಯಾಸಕ.

ಎಂ.ಎಲ್.ಸಾಮಗರು ಯಕ್ಷಮೇರು ದಿ. ಮಲ್ಪೆ ಶಂಕರನಾರಾಯಣ ಸಾಮಗರ ಪುತ್ರ. ಕೀರ್ತಿಶೇಷ ಹರಿದಾಸ ಮಲ್ಪೆ ರಾಮದಾಸ ಸಾಮಗರು ಇವರಿಗೆ ಚಿಕ್ಕಪ್ಪ.

ಸಾಮಗರು ಬಯಲಾಟ ಮತ್ತು ತಾಳಮದ್ದಳೆಗಳಲ್ಲೂ ಅನುಭವ ಸಂಪನ್ನರು. ತೆಂಕು ಮತ್ತು ಬಡಗಿನ ಅಗ್ರಮಾನ್ಯ ಕಲಾವಿದರೊಂದಿಗೆ ಸಹಪಾತ್ರಧಾರಿಯಾಗಿ ಕಾಣಿಸಿಕೊಂಡಿದ್ದಾರೆ. ಸಾಲಿಗ್ರಾಮ, ಪೆರ್ಡೂರು, ಶ್ರೀ ಎಡನೀರು ಮೇಳ, ಇಡಗುಂಜಿ..ಮೇಳಗಳಲ್ಲಿ ಅತಿಥಿ ಕಲಾವಿದರಾಗಿ ಭಾಗಿ. ಉತ್ತರಕನ್ನಡದಿದ ಕಾಸರಗೋಡು ತನಕ ಸಮಗ್ರ ಯಕ್ಷ ಪರ್ಯಟನೆ ಸಾಮಗರ ಹೆಗ್ಗುರುತು.

ಇಂಗ್ಲೀಷ್ ತಾಳಮದ್ದಳೆ, ಬಯಲಾಟಗಲ್ಲಿ ಉತ್ತಮ ನಿರ್ವಹಣೆ. ಏಸುಕ್ರಿಸ್ತ ಕತೆಯನ್ನು ಇಂಗ್ಲಿಷ್ ಭಾಷೆಗೆ ಅಳವಡಿಸಿ ಯಕ್ಷಗಾನದ ಮೂಲಕ ಪ್ರಸ್ತುತಿ. ಪ್ರಯೋಗಾತ್ಮಕ ನಾಟಕ, ಯಕ್ಷಗಾನ, ನೃತ್ಯ ರೂಪಕಗಳಲ್ಲಿ ಪ್ರಧಾನ ನಟನಾಗಿ ಭಾಗವಹಿಸಿದ ಅನುಭವ.ಡಾ.ಶಿವರಾಮ ಕಾರಂತರ ನಿರ್ದೇಶನದ ಯಕ್ಷಗಾನ ನೃತ್ಯ ರೂಪಕ ತಂಡದಲ್ಲಿ ಇಟಲಿಯಲ್ಲಿ ಮೂರು ವಾರ ತಿರುಗಾಟ ಮಾಡಿದ್ದರು.

ವೈಯಕ್ತಿಕವಾಗಿ ನಾವಿಬ್ಬರೂ ರಂಗದಲ್ಲಿ ಸಾಕಷ್ಟು ಬಾರಿ ಗಂಡ-ಹೆಂಡತಿಯರಾಗಿದ್ದೇವೆ. ಅವರೊಂದಿಗೆ ಪಾತ್ರವಹಿಸುವುದು ಖುಷಿ ಕೊಡುವ ವಿಚಾರ. ಸಂಭಾಷಣೆಗೆ ಒಗ್ಗುವ, ಎಳೆಯುವ ವಿರಳ ಕಲಾವಿದರಲ್ಲಿ ಸಾಮಗರೂ ಒಬ್ಬರು. ದಕ್ಷಾಧ್ವರ ಪ್ರಸಂಗದಲ್ಲಿ ಅವರ ಈಶ್ವರ, ನನ್ನ ದಾಕ್ಷಾಯಿಣಿ ಪಾತ್ರಗಳು ಮರೆಯದ ಕ್ಷಣಗಳು. ಮೇರು ಪ್ರತಿಭೆಯ ಎಂ.ಎಲ್.ಸಾಮಗರಲ್ಲಿ ಯಾವುದೇ ಹಮ್ಮುಬಿಮ್ಮುಗಳಿಲ್ಲ. ಅಹಂಕಾರಗಳಿಲ್ಲ. ಸಹಜವಾಗಿ ಕಲಾವಿದರಿಗೆ ಅಂಟುವ 'ವಿಕಾರ' ಇಲ್ಲವೇ ಇಲ್ಲ. ಹಾಗಾಗಿಯೇ ಸಾಮಗರದು ಎಲ್ಲರಿಗೂ ಪ್ರಿಯವಾಗುವ ವ್ಯಕ್ತಿತ್ವ.

ಹವ್ಯಾಸಿ ಮಟ್ಟದಿಂದ ಮೇಳದ ವರೆಗಿನ ಎಲ್ಲಾ ಕಲಾವಿದರಲ್ಲಿ ಒಡನಾಟ. ಚೌಕಿಯಲ್ಲಿ ’ತಾನಾಯಿತು, ತನ್ನ ಕಸುಬಾಯಿತ” ಎಂದು ಇದ್ದು ಬಿಡುವ ಸ್ವಭಾವ. ಬಹುತೇಕ ಕಲಾವಿದರು 'ಅರ್ಹತೆ'ಯೆಂದೇ ಸ್ಥಾಪಿಸುವ 'ಪರದೂಷಣೆ'ಯಿಂದ ಸಾಮಗರು ಯೋಜನ ದೂರ.

'ನನ್ನ ತಂದೆ, ಚಿಕ್ಕಪ್ಪ ಇವರಿಬ್ಬರು ಯಕ್ಷಗಾನದಲ್ಲಿ ಅಸಾಮಾನ್ಯ ಪ್ರತಿಭೆ ತೋರಿದ ಕಲಾವಿದರು. ಇವರ ಸಾಧನೆಯ ಫಲವಾಗಿ ಅಕಾಡೆಮಿ ಆಧ್ಯಕ್ಷ ಸ್ಥಾನ ನನಗೆ ಪ್ರಾಪ್ತವಾಗಿದೆ' ಎಂದು ವಿನೀತರಾಗಿ ಹೇಳುತ್ತಾರೆ.

ಆತ್ಮೀಯ, ಅಜಾತಶತ್ರು ಪ್ರೊ.ಎಂ.ಎಲ್.ಸಾಮಗರು ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾದುದು ಹೆಮ್ಮೆಯ ವಿಚಾರ.
ಅವರಿಗೆ ತುಂಬು ಅಭಿನಂದನೆಗಳು.