Monday, October 31, 2011

ನಂದಿದ ಶತಮಾನದ ಧ್ವನಿ

ತೆಂಕು ಮತ್ತು ಬಡಗು ತಿಟ್ಟುಗಳ ಸವ್ಯಸಾಚಿ ಭಾಗವತ ಕಡತೋಕ ಮಂಜುನಾಥ ಭಾಗವತರು ವಿಧಿವಶರಾದರು. ಅಗಲಿದ ಚೇತನಕ್ಕೆ ಅಕ್ಷರ ನಮನ.

'ಕಡತೋಕ' ಎಂದರೆ ಸಾಕು, ಧರ್ಮಸ್ಥಳ ಮೇಳವೇ ಕಣ್ಣಮುಂದೆ ನಿಲ್ಲುತ್ತದೆ. ಇವರ ಹಾಡುಗಾರಿಕೆ ಒಂದು ಕಾಲಘಟ್ಟದ ಅದ್ಭುತ! ಶತಮಾನದ ಧ್ವನಿ. ಕಾಳಿಂಗ ನಾವುಡರ ಮಿಂಚಿನ ಸಂಚಾರದ ಸಮಯದಲ್ಲೂ ಕಡತೋಕ ಭಾಗವತರು ಸರಿಸಾಟಿಯಾಗಿ ಯಕ್ಷಗಾನ ರಂಗದಲ್ಲಿ ನಿಂತವರು. ಧರ್ಮಸ್ಥಳ ಮೇಳದ ಯಕ್ಷಗಾನ ವೈಭವಗಳ ದಿನಗಳ ಕುರಿತು ಮಾತನಾಡುವಾಗ ಕಡತೋಕರನ್ನು ಬಿಟ್ಟು ಮಾತನಾಡಲು ಸಾಧ್ಯವಿಲ್ಲ. ತನ್ನ ಹಾಡುಗಾರಿಕೆ ಮೂಲಕ ಪ್ರಸಂಗಗಳಿಗೆ, ಪಾತ್ರಕ್ಕೆ, ಪಾತ್ರಧಾರಿಗಳಿಗೆ ಹೊಸ 'ಸೃಷ್ಟಿ'ಯನ್ನು, 'ದೃಷ್ಟಿ'ಯನ್ನು ನೀಡಿದ ಅಸಾಮಾನ್ಯ. ಕಡತೋಕರು ರಂಗದಲ್ಲಿ ಜಾಗಟೆ ಹಿಡಿದಷ್ಟು ದಿವಸ ಅವರೇ ತ್ರಿವಿಕ್ರಮ.
ಶ್ರೀ ಧರ್ಮಸ್ಥಳ ಮೇಳದ ಮುಮ್ಮೇಳ, ಕಡತೋಕರ ಸಾರಥ್ಯದಲ್ಲಿ ಹಿಮ್ಮೇಳ, ಮುಗಿಬೀಳುವ ಪ್ರೇಕ್ಷಕ ವರ್ಗ..ಅದ್ದೂರಿ.. ಇವೆಲ್ಲ ಯಕ್ಷಗಾನದ ವೈಭವದ ದಿನಗಳು. "ಮಾತಿಗೆ" ಸಾಂಸ್ಕೃತಿಕವಾದ ಮೌಲ್ಯವನ್ನು ಕೊಟ್ಟ ದಿನಮಾನಗಳು. ಕಡತೋಕರು ಇಂದು ದೈಹಿಕವಾಗಿ ಅಗಲಿದ್ದಾರೆ. ಮಾನಸಿಕವಾಗಿ ಜೀವಂತ.

Saturday, October 29, 2011

ಉಡುಪಿ ಕಲಾರಂಗದ ಪ್ರಶಸ್ತಿ ಪ್ರಕಟ

ಉಡುಪಿಯ ಶ್ರೀ ಕೃಷ್ಣ ಮಠ ಮತ್ತು ಪರ್ಯಾಯ ಶ್ರೀ ಶಿರೂರು ಮಠದ ಆಶ್ರಯದಲ್ಲಿ ಉಡುಪಿ ಕಲಾರಂಗದ 'ಶ್ರೀ ವಿಶ್ವೇಶತೀರ್ಥ ಪ್ರಶಸ್ತಿ' ಸಹಿತ ವಿವಿಧ ಪ್ರಶಸ್ತಿ ಪ್ರದಾನ ಸಮಾರಂಭವು ನವೆಂಬರ್ 13, ಭಾನುವಾರದಂದು ಅಪರಾಹ್ನ ಗಂಟೆ 3-00ರಿಂದ 8-30ರ ತನಕ ರಾಜಾಂಗಣದಲ್ಲಿ ನಡೆಯಲಿದೆ.

ಈ ಸಾಲಿನ 'ಶ್ರೀ ವಿಶ್ವೇಶತೀರ್ಥ ಪ್ರಶಸ್ತಿ'ಯು ಯಕ್ಷಗಾನ ಕಲಾಕ್ಷೇತ್ರ, ಗುಂಡಿಬೈಲು, ಉಡುಪಿ ಇವರಿಗೆ ಪ್ರಾಪ್ತವಾಗಿದೆ.

ಇತರ ಪ್ರಶಸ್ತಿಗಳ ವಿವರ: ಶ್ರೀಗಳಾದ ಪುತ್ತೂರು ಶ್ರೀಧರ ಭಂಡಾರಿ (ಡಾ.ಬಿ.ಬಿ.ಶೆಟ್ಟಿ ಪ್ರಶಸ್ತಿ), ಬಾಬು ಕುಡ್ತಡ್ಕ (ನಿಟ್ಟೂರು ಸುಂದರ ಶೆಟ್ಟಿ ಮಹೇಶ್ ಡಿ.ಶೆಟ್ಟಿ ಪ್ರಶಸ್ತಿ), ಹಾಲಾಡಿ ಕೃಷ್ಣ (ಕುಷ್ಠ) ಗಾಣಿಗ (ಪ್ರೊ.ಬಿ.ವಿ.ಆಚಾರ್ಯ ಪ್ರಶಸ್ತಿ), ಆನಂದ ಶೆಟ್ಟಿ, ಮಜ್ಜಿಗೆಬೈಲು (ಬಿ.ಜಗಜ್ಜೀವನದಾಸ್ ಶೆಟ್ಟಿ ಪ್ರಶಸ್ತಿ), ಕೃಷ್ಣಯಾಜಿ ಇಡಗುಂಜಿ (ಭಾಗವತ ನಾರಣಪ್ಪ ಉಪ್ಪೂರ ಪ್ರಶಸ್ತಿ), ಹಳ್ಳದಾಚೆ ವೆಂಕಟರಾಮಯ್ಯ (ಕಡಿಯಾಳಿ ಸುಬ್ರಾಯ ಉಪಾಧ್ಯಾಯ ಪ್ರಶಸ್ತಿ), ಜಮದಗ್ನಿ ಶೀನ ನಾಯ್ಕ್ (ಐರೋಡಿ ರಾಮ ಗಾಣಿಗ ಪ್ರಶಸ್ತಿ), ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ (ಪಡಾರು ನರಸಿಂಹ ಶಾಸ್ತ್ರಿ ಪ್ರಶಸ್ತಿ), ಬಜ್ಪೆ ದೇರಣ್ಣ (ಶ್ರೀಮತಿ ಮತ್ತು ಶ್ರೀ ಹೆಚ್.ಆರ್.ಕೆದ್ಲಾಯ ಪ್ರಶಸ್ತಿ), ಮಂಜೇಶ್ವರ ಜನಾರ್ದನ ಜೋಗಿ (ಯು.ವಿಶ್ವನಾಥ ಶೆಣೈ ಪ್ರಶಸ್ತಿ), ಎಸ್.ಗೋಪಾಲಕೃಷ್ಣ (ಯಕ್ಷಚೇತನ ಪ್ರಶಸ್ತಿ)

ನವೆಂಬರ 13ರಂದು ಅಪರಾಹ್ನ ಗಂಟೆ 3-5ರ ತನಕ ಬಡಗು ತಿಟ್ಟಿನ 'ಸೈಂಧವ ವಧೆ' ಯಕ್ಷಗಾನ, 5ರಿಂದ ಸಭಾಕಾರ್ಯಕ್ರಮ, 6-30ರಿಂದ 8-30 ತೆಂಕು ತಿಟ್ಟಿನ 'ಮಹಿಷವಧೆ' ಯಕ್ಷಗಾನ ಬಯಲಾಟ.

Wednesday, October 26, 2011

ಪು.ಶ್ರೀನಿವಾಸ ಭಟ್ - ಇನ್ನು ನೆನಪು

2010ರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ. ಹಿರಿಯರಾದ ಕಟೀಲಿನ ಪು. ಶ್ರೀನಿವಾಸ ಭಟ್ಟರೊಂದಿಗೆ ನನಗೂ ಪ್ರಶಸ್ತಿ ಸ್ವೀಕರಿಸುವ ಅವಕಾಶ. ಅವರ ಸರದಿಯ ಬಳಿಕ ನನ್ನದು. 'ಒಳ್ಳೆಯದಾಗಲಿ, ಸ್ವೀಕರಿಸಿ' ಎಂದು ಹರಸಿದರು.

ಬಳಿಕ ಮಾತನಾಡುತ್ತಾ, 'ಇಂದು ಬೆಂಗಳೂರಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭವಲ್ವಾ, ಈ ವಯಸ್ಸಲ್ಲಿ ಅದು ಪ್ರಾಪ್ತವಾಗಬೇಕಿತ್ತು. ಏನು ಮಾಡ್ಲಿ ಹೇಳಿ, ನನಗೆ ರಾಜಕೀಯ ಬಲ ಇಲ್ಲ, ಆರ್ಥಿಕ ಬಲ ಮೊದಲೇ ಇಲ್ಲ' ಎಂದು ನಿಟ್ಟುಸಿರು ಬಿಟ್ಟಿದ್ದರು.

ಕಟೀಲಿನಲ್ಲಿ ಪುಚ್ಚೆಕೆರೆ ಕೃಷ್ಣ ಭಟ್ಟರು ಮುಖ್ಯಗುರು ಆಗಿದ್ದಾಗ ಕಾರ್ಯಕ್ರಮಗಳಿಗೆ ಭಾಗವಹಿಸುತ್ತಿದ್ದೆ. ಅವರೊಂದಿಗೆ ಶ್ರೀನಿವಾಸ ಭಟ್ಟರ ಸಾಥಿ. ಆಗೆಲ್ಲಾ ಯಕ್ಷಗಾನದ್ದೇ ಗುಂಗು. ಮುಖತಃ ಸಿಕ್ಕಾಗೆಲೆಲ್ಲ, 'ನಿಮ್ಮ ಲೇಖನ ಓದುತ್ತಾ ಇದ್ದೇನೆ. ಬರೆಯಿರಿ' ಎಂದು ಹಾರೈಸುತ್ತಿದ್ದರು.

'ಕಲಾವಿದರ ಪರಿಚಯ ಪತ್ರಿಕೆಗಳಲ್ಲಿ ಬರೆಯಬಾರದು ಮಾರಾಯ್ರೆ, ಪ್ರಕಟವಾದ ಬಳಿಕ ಫೋನಿಸುವುದು ಬಿಡಿ, ಕೃತಜ್ಞತೆಯ ನುಡಿಯೂ ಇಲ್ಲ' ಎಂದು ಒಮ್ಮೆ ಖೇದ ವ್ಯಕ್ತಪಡಿಸಿದ್ದರು.`ಈ ವಿಚಾರದಲ್ಲಿ ನಿಮ್ಮೊಂದಿಗೆ ನಾನೂ ಪಾಲುದಾರ' ಎಂದಿದ್ದೆ.
ಇದು ನೂರಕ್ಕೆ ನೂರು ಸತ್ಯ. ಬರೆದ ಲೇಖನ ಹೇಗಿದೆ ಎಂಬುದಕ್ಕಿಂತಲೂ, ಲೇಖನದಲ್ಲಿ ಬಿಟ್ಟ ಅಂಶ ಯಾವುದು ಎಂಬುದನ್ನೇ ಎತ್ತಿ ಆಡುವ ಕೃತಘ್ನರಿಗೆ ಸಹಾಯ ಮಾಡಬೇಕಾ? ಎಂದು ಶ್ರೀನಿವಾಸ ಭಟ್ಟರು ನೋವಿನಿಂದ ಹೇಳಿದ ವಿಚಾರವು ಅವರ ಮರಣ ವಾರ್ತೆ ಬಂದಾಗ ನೆನಪಾಯಿತು.

ಪು.ಶ್ರೀನಿವಾಸ ಭಟ್ಟರು ಹಿರಿಯ ಜಾನಪದ ವಿದ್ವಾಂಸ. ಸಾಹಿತಿ. ನಿವೃತ್ತ ಶಿಕ್ಷಕ. ಮೂಲತಃ ಕವತ್ತಾರು ಗ್ರಾಮದ ಪುತ್ತೂರಿನವರು. ಮೂರು ದಶಕಗಳ ಕಾಲ ಕಟೀಲಿನ ಪ್ರಾಥಮಿಕ ಶಾಲೆಯಲ್ಲೇ ಸೇವೆ.

ಹನ್ನೊಂದು ಯಕ್ಷಗಾನ ಕೃತಿಗಳ ರಚಯಿತರು. ಕನ್ನಡ ಮತ್ತು ತುಳುವಿನಲ್ಲಿ ನಾಡಿನ ಹಲವಾರು ಪತ್ರಿಕೆಗಳಿಗೆ ಲೇಖನಗಳನ್ನು, ಅಂಕಣಗಳನ್ನು ಬರೆಯುತ್ತಿದ್ದರು. ತಾಳಮದ್ದಳೆ ಕೂಟಗಳಲ್ಲಿ ಅವಲೋಕನಕಾರನಾಗಿ, ಸ್ಪರ್ಧೆಗಳಲ್ಲಿ ತೀರ್ಪುಗಾರನಾಗಿ ತೊಡಗಿಸಿಕೊಂಡಿದ್ದರು. ಶಿಲಾಶಾಸನಗಳ ಅಧ್ಯಯನಕಾರನಾಗಿ ಹಲವಾರು ದೇವಳಗಳ, ದೈವಸ್ಥಾನಗಳ ಕುರಿತು ಸಂಶೋಧನಾಲೇಖನಗಳನ್ನು ಬರೆದಿದ್ದಾರೆ. ಕುಬೆವೂರು ಪುಟ್ಟಣ್ಣ ಶೆಟ್ಟಿ, ಕೊ.ಅ.ಉಡುಪ, ಯಕ್ಷಲಹರಿ ಪ್ರಶಸ್ತಿಗಳಿಂದ ಪುರಸ್ಕೃತರು.
24 ಅಕ್ಟೋಬರ್ 2011ರಂದು ಬಜಪೆಯ ಪಾಪ್ಯುಲರ್ ಶಾಲೆಯಲ್ಲಿ ದೀಪಾವಳಿಯ ಕುರಿತು ಉಪನ್ಯಾಸ ಮುಗಿಸಿ, ಮರಳುವಾಗ ಎದೆನೋವು ಕಾಣಿಸಿಕೊಂಡು, ಮನೆಸೇರಿದಾಗ ಕುಸಿದರು. ಶಿವೈಕ್ಯವಾದರು. ಅಗಲಿದ ಹಿರಿಯ ಚೇತನಕ್ಕ ಭಾಷ್ಪಾಂಜಲಿ.