Monday, January 9, 2012

ಮೂರು ಪ್ರಸಂಗವೂ, ಏಳು ಮಂದಿ ಕಲಾವಿದರೂ..!

ಕಾಲು ಶತಮಾನದ ಹಿಂದೆ. 'ಚೌಡೇಶ್ವರಿ ಮೇಳ'ವು ಸುಳ್ಯ-ಕೊಡಗು ವ್ಯಾಪ್ತಿಯಲ್ಲಿ ಖ್ಯಾತಿ. ಬಹುತೇಕ ಹವ್ಯಾಸಿ ಕಲಾವಿದರು. ಅಪ್ಪಟ ಭಾಗವತ ಕೀರ್ತಿಶೇಷ ದಾಸರಬೈಲು ಚನಿಯ ನಾಯ್ಕರ ನಿರ್ದೇಶನ. ಆ ತಂಡದಲ್ಲಿ ಈಗ ನಮ್ಮೊಂದಿಗಿಲ್ಲದ ಹಾಸ್ಯಗಾರ ಪ್ಯಾರ್ ನಾವೂರು ಇದ್ದರು.

ಆ ಭಾಗಕ್ಕೆ ಆಟಕ್ಕೆ ಬಂದಾಗಲೆಲ್ಲಾ ಭಾಗವತ ಚನಿಯ ನಾಯ್ಕರು ಬಿಡುವಿದ್ದಾಗ ನಮ್ಮಲ್ಲಿಗೆ ಬರುತ್ತಿದ್ದರು. ಒಂದು ದಿವಸ ಮಡಿಕೇರಿ ಹತ್ತಿರದ ಹಳ್ಳಿಯೊಂದರ ಆಟ ಮುಗಿಸಿ ಮನೆಗೆ ಬರುವಾಗಲೇ ಅವರ ಮೂಡ್ ಔಟ್ ಆಗಿತ್ತು! 'ಎಂಚಿನ ಸಾವುದ ಆಟ. ಯಕ್ಷಗಾನ ಪಂಡ ಗೊತ್ತಿಜ್ಜಿ. ಸಾಕೋ ಸಾಕಾಂಡ್' (ನಾಯ್ಕರು ಹೆಚ್ಚಾಗಿ ತುಳುವಿನಲ್ಲಿ ಸಂಭಾಷಿಸುತ್ತಿದ್ದರು.)

ಅಜಾತ ಶತ್ರುವಾಗಿದ್ದ ನಾಯ್ಕರು ಅಂದು ಯಾಕೆ ಅಸಹನೆಗೊಂಡಿದ್ದರು. 'ಭಾಗವತರೆ, ದೂರದ ಆಟ. ಸಂಭಾವನೆಗೆ ತೊಂದರೆಯಾಯಿತಾ' ಅಂತ ಮಾತಿಗಿಳಿದೆ. 'ಕವರ್ ಏರೆಗ್ ಬೋಡು. ಯಾನೇ ಕೊರ್ತುವೆ! ಅಕ್ಲೆಗ್ ಯಕ್ಷಗಾನ, ನಾಟಕ, ಕೋರಿಕಟ್ಟ ಪೂರಾ ಒಂಜೇ, ಯಕ್ಷಗಾನದ ಮರ್ಯಾದಿ ಪೋಂಡ್...', ಅವರ ಅಸಹನೆ ಕಡಿಮೆಯಾದಂತಿಲ್ಲ. ಸ್ನಾನ, ಕಾಫಿ ಮುಗಿಸಿ, ಅವರಿಗೆ ನಿದ್ರಿಸಲು ವ್ಯವಸ್ಥೆ ಮಾಡುತ್ತಿದ್ದಂತೆ, 'ಅವು ಎಂಚಿನ ಪಂನ್ಡಾ...' ಅಂತ ನಿನ್ನೆಯ ಆಟದ ಕತೆಗೆ ಮುಂದಾದರು.

ಮಡಿಕೇರಿ ಸನಿಹದ ಹಳ್ಳಿಯೊಂದರಲ್ಲಿ ಚೌಡೇಶ್ವರಿ ಮೇಳದ ಆಟ. ಏಳು ಮಂದಿ ವೇಷಕ್ಕಾದರೆ, ಹಿಮ್ಮೇಳಕ್ಕೆ ಮೂರು ಮಂದಿ. ಹೆಚ್ಚು ವೇಷ ಇರುವ ದೇವಿ ಮಹಾತ್ಮೆಯಂತಹ ಪ್ರಸಂಗ ಹೊರತು ಪಡಿಸಿ ಉಳಿದ ಪ್ರಸಂಗಗಳಿಗೆ ಸೂಕ್ತವಾಗುವಂತಹ ವೇಷಭೂಷಣ. ಅಂದು ವೀಳ್ಯ ಕೊಟ್ಟವರು ನಿಗದಿಪಡಿಸಿದ ಪ್ರಸಂಗ - 'ಶ್ವೇತಕುಮಾರ ಚರಿತ್ರೆ'.

ಸಮಯಕ್ಕೆ ಸರಿಯಾಗಿ ಕಲಾವಿದರ ದಂಡು ಆಟದ ಜಾಗ ತಲುಪಿತು. ವೀಳ್ಯಕೊಟ್ಟವರಿಂದ ಸ್ವಾಗತ. ಉಪಾಹಾರ-ಭೋಜನ ವ್ಯವಸ್ಥೆ. ನಾಲ್ಕು ಕಂಬದ ರಂಗವೇದಿಕೆ. ಗ್ಯಾಸ್ಲೈಟ್ ಬೆಳಕು. ಸಂಜೆಯಾದಂತೆ ಮೈಕಾಸುರನ ಅಟ್ಟಹಾಸ. ಚೌಕಿ ತೆರೆದುಕೊಂಡಿತು. ಪಾತ್ರ ಹಂಚೋಣವಾಯಿತು. ಎಂಟು ಗಂಟೆಯಿಂದ ಹನ್ನೆರಡು ಗಂಟೆ ತನಕ ಪ್ರದರ್ಶನ.

ಒಮ್ಮೆ ಚೌಕಿ ತೆರೆದುಕೊಂಡರೆ ಆಯಿತು, ಮತ್ತೆ ಭಾಗವತ ಚನಿಯ ನಾಯ್ಕರು ದೇವರ ಪೆಟ್ಟಿಗೆಯ ಸನಿಹವೇ ಕುಳಿತುಕೊಳ್ಳುತ್ತಿರುವುದು ಜಾಯಮಾನ. ಭಾಗವತನ ಲಕ್ಷಣವೂ ಹೌದೆನ್ನಿ. ಆಟ ಶುರುವಾಗಲು ಹಸಿರು ನಿಶಾನೆ ಸಿಕ್ಕಿತು.
ಚೌಕಿ ಪೂಜೆ, ಪೀಠಿಕೆ. ಪ್ರಸಂಗ ಶುರುವಾಯಿತು. ಅಷ್ಟರಲ್ಲಿ ಚೌಕಿಗೆ 'ನಿಶೆ ಏರಿಸಿಕೊಂಡ' ಹತ್ತಾರು ಮಂದಿಯ ದಂಡು ನುಗ್ಗಿತು. ಆ ತಂಡದಲ್ಲಿ ವೀಳ್ಯ ನೀಡಿದ ವ್ಯಕ್ತಿಯೂ ಇದ್ದ! 'ನಿಮ್ಮದು ಎಂತಹ ಪ್ರಸಂಗ. ನಮಗೆ ಮಹಿಷಾಸುರ ಬರುವ ಪ್ರಸಂಗವೇ ಆಗಬೇಕು' ಎನ್ನಬೇಕೆ!

ಚೌಕಿಯಲ್ಲಿ ಗೊಂದಲ. ಉತ್ತರ ಕಾಣದ ಕ್ಷಣಗಳು. ಕಾರಣ ನಿಗದಿಯಾಗಿದ್ದ ಪ್ರಸಂಗಕ್ಕೆ ಎಲ್ಲಾ ಕಲಾವಿದರೂ ತಯಾರಾಗಿದ್ದರು. ಹೊಸ ಪ್ರಸಂಗಕ್ಕೆ ಅಣಿಯಾಗಲು ಅವಕಾಶವಿಲ್ಲ. ಕಲಾವಿದರಿಗೆ ಅಷ್ಟು ಸುಲಭವೂ ಅಲ್ಲ. ಅಲ್ಲದೆ, ಪ್ರಸಂಗ ಪುಸ್ತಕವೂ ಇಲ್ಲ. ಏನು ಮಾಡೋಣ?

ಸರಿ, ಅವರನ್ನು ಹಾಸ್ಯಗಾರರಾದ ಪ್ಯಾರ್ ನಾವೂರು ಸಮಾಧಾನಪಡಿಸಿ ಸಾಗಹಾಕಿದರು. ಆಟ ಮುಂದುವರಿದು ಒಂದು ಗಂಟೆಯಾಗಿರಬಹುದು, ಇನ್ನೊಂದು ತಂಡ ಚೌಕಿಗೆ ನುಗ್ಗಿತು. ಅವರಿಗೆ 'ತ್ರಿಜನ್ಮ ಮೋಕ್ಷ' ಪ್ರಸಂಗವೇ ಆಗಬೇಕಂತೆ. ಎರಡೂ ತಂಡಗಳ ಬೇಡಿಕೆಯ ಮುಂದೆ ಮೇಳದ ಕಲಾವಿದರು ಕಂಗಾಲು.

ರಂಗ ಪ್ರವೇಶ ಮಾಡಿದ ಪಾತ್ರಗಳು ಚೌಕಿಗೆ ಬಂದುವು. ಮುಂದಿನ ವೇಷ ಪ್ರವೇಶ ಮಾಡೋಣ ಅಂದರೆ ಚೌಕಿ ಗೊಂದಲದ ಗೂಡಾಗಿತ್ತು. ಪ್ರೇಕ್ಷಕರಲ್ಲೂ ಗುಲ್ಲು, ಶಿಳ್ಳೆ ಜೋರಾಯಿತು. 'ಐವತ್ತು ರೂಪಾಯಿ ಕೊಟ್ಟಿದ್ದೇನೆ. ಆಟ ಯಾಕೆ ನಿಲ್ಲಿಸಿದ್ರಿ' ಎನ್ನುತ್ತಾ ಒಬ್ಬರು ಚೌಕಿಗೆ ನುಗ್ಗಲು ಪ್ರಯತ್ನಿಸುತ್ತಿದ್ದಂತೆ, 'ನಾನು ಇನ್ನೂರು ರೂಪಾಯಿ ಕೊಟ್ಟಿದ್ದೇನೆ' ಎಂದರು ಇನ್ನೊಬ್ಬರು..!

ಪರಿಸ್ಥಿತಿ ಕೈಮೀರುವ ಲಕ್ಷಣ ಕಂಡು ಬಂತು. 'ನಿಮಗೆ ಮಹಿಷಾಸುರ, ಹಿರಣ್ಯಾಕ್ಷ, ಹಿರಣ್ಯಕಶಿಪು ಸ್ಟೇಜ್ಗೆ ಬರಬೇಕಲ್ವಾ. ಬರುತ್ತದೆ. ನೀವೆಲ್ಲಾ ಹೋಗಿ. ಆಟ ಶುರುಮಾಡೋಣ' ಎನ್ನುವ ಧೈರ್ಯ ನೀಡಿದ ಚನಿಯ ನಾಯ್ಕರು; ವೀಳ್ಯ ಹಾಕಿ, ಮುಂಡಾಸು, ಶಾಲು ಏರಿಸಿ, ಜಾಗಟೆಯೊಂದಿಗೆ ರಂಗಕ್ಕೆ ಬರಲು ಸಿದ್ಧರಾದರು.

ಮರುದಿವಸದ ಆಟ ಮಹಿಷ ಮರ್ದಿನಿ. ಅದಕ್ಕಾಗಿ ಮಹಿಷಾಸುರ ಪಾತ್ರದ ಕೊಂಬು ಕ್ಯಾಂಪ್ನಲ್ಲಿತ್ತು. ಶ್ವೇತಕುಮಾರ ಪ್ರಸಂಗದ 'ಕರಾಳನೇತ್ರೆ' ರಾಕ್ಷಸಿಯ ಪಾತ್ರಕ್ಕೆ ಕೊಂಬು ಬಿಗಿಯಲಾಯಿತು. 'ತ್ರಿಲೋಕ ಸುಂದರಿ' ಪಾತ್ರಕ್ಕೆ ಸಿದ್ಧರಾದವರಿಗೆ ಶ್ರೀದೇವಿ ಪಾತ್ರ ಆವಾಹನೆಯಾಯಿತು. ಹಿರಣ್ಯಾಕ್ಷ ಅಲ್ವಾ, ದುರ್ಜಯನ ಪಾತ್ರ ಮಾಡುವಾತ 'ಹಿರಣ್ಯಾಕ್ಷ'ನಾದ. ಮತ್ಯಾರೋ ಹಿರಣ್ಯಕಶಿಪು, ನರಸಿಂಹನಾದರು. ಪಾತ್ರಗಳ ಪಕ್ಷಾಂತರ!

ಪಡಿಮಂಚವನ್ನೇರಿದ ಭಾಗವತರು 'ಶ್ವೇತಕುಮಾರ' ಪ್ರಸಂಗವನ್ನು ಸ್ವಲ್ಪ ಮುಂದುವರಿಸುತ್ತಾ, 'ಮಹಿಷಾಸುರನ' ಪ್ರವೇಶಕ್ಕೆ ಅಣಿಯಾದರು. ಸೂಟೆ, ಮುಳಿಹುಲ್ಲು.. ಅಬ್ಬರ ಜೋರಾಗಿಯೇ ಇತ್ತು. 'ಸ್ವಲ್ಪ ನಿಧಾನಕ್ಕೆ ರಂಗಕ್ಕೆ ಬಂದರೆ ಸಾಕು. ಅವರೆಲ್ಲಾ ಕುಣಿದು ಕುಪ್ಪಳಿಸಲಿ' ಎಂದು ವೇಷಧಾರಿಗೆ ಸೂಚನೆ ಕೊಟ್ಟರು. ಅಂದಿನ ಮಹಿಷಾಸುರನಿಗೆ ಏನಿಲ್ಲವೆಂದರೂ ರಂಗವೇದಿಕೆ ತಲುಪಲು ಮುಕ್ಕಾಲು ಗಂಟೆ.

ರಂಗದಲ್ಲಿ ಮಹಿಷಾಸುರನ ಅಬ್ಬರ. ಕುಣಿತ. ಪ್ರೇಕ್ಷಕರಿಂದ ಶಿಳ್ಳೆ, ಚಪ್ಪಾಳೆ. ಇವರು ಸಂತೋಷದ ಪರಾಕಾಷ್ಠೆಗೇರುತ್ತಲೇ ಭಾಗವತರು, 'ದೇವಿ ಮತ್ತು ಮಹಿಷಾಸುರ' ಯುದ್ಧ ಪದ್ಯಗಳನ್ನು ಎತ್ತುಗಡೆ ಮಾಡಿ ಮಹಿಷಾಸುರನನ್ನು ಕೊಂದೇ ಬಿಟ್ಟರು! ದೇವಿ ಪಾತ್ರಧಾರಿಗೆ ಹೂವಿನ ಮಾಲೆ, ಮಹಿಷಾಸುರನಿಗೆ ವಿಶೇಷ ಆತಿಥ್ಯ! ಚಳಿಯ ಊರಲ್ವಾ..! ಏನಂತೀರಿ?

ಸರಿ, ಹಿರಣ್ಯಾಕ್ಷನ ಪ್ರವೇಶ. ದೇವಿ ಪಾತ್ರ ಮಾಡಿದರು ಅಷ್ಟಭುಜವನ್ನು ಕಳಚಿಕೊಂಡು, ಹಿರಣ್ಯಾಕ್ಷನ ಮುಂದೆ ಪ್ರ್ರತ್ಯಕ್ಷ. ಬಳಿಕ ಹಿರಣ್ಯಕಶಿಪು. ಅಂತೂ ಮಧ್ಯರಾತ್ರಿಯಾಗುವಾಗ ಆಟಕ್ಕೆ ಮಂಗಳ. ಸ್ವಲ್ಪ ಹೆಚ್ಚೆ ವೀಳ್ಯವೂ ಸಿಕ್ಕಿತು.

'ನಾವು ಹೇಳಿದ ಪ್ರಸಂಗವೇ ಆಯಿತಲ್ಲಾ' ಎಂಬ ಸಂತೋಷ ಒಂದು ವರ್ಗಕ್ಕಾದರೆ, 'ನಮ್ಮದೂ ಪ್ರದರ್ಶನವಾಯಿತಲ್ಲಾ' ಎನ್ನುವುದು ಇನ್ನೊಂದು ತಂಡದ ಖುಷಿ. ಆದರೆ ಕಲಾವಿದರಿಗೆ ಬೇಸರವಾಗಿತ್ತು. 'ಯಕ್ಷಗಾನದ ಪರಂಪರೆಗೆ ನಾವು ಅನ್ಯಾಯ ಮಾಡಿದೆವು' ಎಂಬ ಕೊರಗು.

ಆಟದ ಕತೆಯನ್ನು ಹೇಳಿದ ಚನಿಯ ನಾಯ್ಕರಲ್ಲೂ ಮನಶ್ಶಾಂತಿಯಿರಲಿಲ್ಲ. 'ಹೇಗೂ ಆಯ್ತಲ್ಲಾ, ನಿದ್ದೆ ಮಾಡಿ. ಸಂಜೆಯ ಆಟಕ್ಕೆ ಹೋಗಬೇಡ್ವಾ' ಎಂದರು ನನ್ನಮ್ಮ.

'ನನ್ನ ಯಕ್ಷಗಾನದ ಬದುಕಿನಲ್ಲಿ ಇಂತಹ ಅವಸ್ಥೆ ಅದುದೇ ಇಲ್ಲ. ಮುಂದೆಯೂ ಹೀಗಾಗದಿರಲಿ' ಎನ್ನುತ್ತಾ ನಿದ್ದೆಗೆ ಜಾರಲು ಪ್ರಯತ್ನಿಸಿದರು.

Tuesday, January 3, 2012

ಒಂದು ಆಟದ ಸುತ್ತ.. ..

'ಯಕ್ಷಗಾನ ಜಾನಪದ ಕಲೆಯಲ್ಲ. ಅದೊಂದು ಆರಾಧನಾ ಕಲೆ' ಎಂದು ಕೀರ್ತಿಶೇಷ ಡಾ.ಶೇಣಿ ಗೋಪಾಲಕೃಷ್ಣ ಭಟ್ಟರು ಸೋದಾಹರಣವಾಗಿ ಹೇಳುತ್ತಿದ್ದರು. ಅವರ ಹೇಳಿಕೆಗಳನ್ನು ದಿನಗಟ್ಟಲೆ ಚರ್ಚೆ ಮಾಡಬಹುದಾದರೂ, 'ಅರಾಧನೆ ಕಲೆ' ಎನ್ನುವುದನ್ನು ತಳ್ಳಿ ಹಾಕುವಂತಿಲ್ಲ. ಅದಕ್ಕೆ ಪೂರಕವಾಗಿ ಇಂದಿನ ವರೆಗೂ ಯಕ್ಷಗಾನವನ್ನು ಆರಾಧಿಸುವಂತಹ ಸಾಕಷ್ಟು ಉಪಾಧಿಗಳು ಸಿಗುತ್ತವೆ.

ಶೇಣಿಯವರ ಮಾತನ್ನು ನೆನಪಿಸಿಕೊಳ್ಳುತ್ತಿದ್ದಂತೆ ಮೂರು ದಶಕದ ಹಿಂದಿನ ನನ್ನೂರಿನ ಯಕ್ಷಗಾನ ವಾತಾವರಣ ಮಿಂಚಿ ಮರೆಯಾಯಿತು. ನಾನಿನ್ನೂ ಬಣ್ಣದ ಲೋಕದ ಸಮೀಪಕ್ಕೆ ಬಂದಿರಲಿಲ್ಲ. ಈಗ ದಿವಂಗತರಾಗಿರುವ ಪ್ರಕಾಶ್ಚಂದ್ರ ರಾವ್ ಬಾಯಾರು ಗರಡಿಯಲ್ಲಿ ಪಳಗಿದ ತಂಡ ಸಿದ್ಧವಾಗಿತ್ತು. 'ನಮ್ಮೂರಲ್ಲಿ ಯಕ್ಷಗಾನ ತರಬೇತಿ ನಡೆಯುತ್ತಿದೆ. ನಮ್ಮ ಯುವಕರು ವೇಷ ಹಾಕ್ತಾರೆ' ಎಂಬ ಸಂಭ್ರಮ ಕಲಾವಿದರಿಗೆ ಮಾತ್ರವಲ್ಲ, ಇಡೀ ಊರಿಗೆ ಖುಷಿಕೊಟ್ಟಿತ್ತು.

ಹೋಟೆಲ್ಗಳಲ್ಲಿ, ಗೂಡಂಗಡಿಗಳಲ್ಲಿ, ಶಾಲೆಗಳಲ್ಲಿ, ಕಟ್ಟಪುಣಿಗಳಲ್ಲಿ ಮುಖತಃ ಸಿಕ್ಕಾಗಲೆಲ್ಲಾ ಇದರದ್ದೇ ಸುದ್ದಿ. ನಾಟ್ಯ ಕಲಿವ/ಕಲಿತವರು ಸಿಕ್ಕರಂತೂ ಮುಗಿಯಿತು, 'ಹೇಗಾಯಿತು, ಎಲ್ಲಿಯ ವರೆಗೆ ಮುಟ್ಟಿತು, ಆಟ ಯಾವಾಗ' ಎಂಬ ಪ್ರಶ್ನೆಗಳು. ನಾಟ್ಯ ಕಲಿಸುವ ಗುರುಗಳು ಮುಖಾಮುಖಿಯಾದಾಗ ಮನೆಗೆ ಬರುವಂತೆ ಒತ್ತಾಯಿಸುತ್ತಿದ್ದರು. ಆತಿಥ್ಯ ನೀಡುತ್ತಿದ್ದರು. 'ಇವರೆಲ್ಲಾ ತುಂಬ ಮುಜುಗರ ಕೊಟ್ಟಿದ್ದಾರೆ' ಎಂದು ನಂತರದ ದಿನಗಳಲ್ಲಿ ಪ್ರಕಾಶ್ಚಂದ್ರರು ಹೇಳಿದ್ದುಂಟು.

'ದೇವಿ ಮಹಾತ್ಮೆ' ಪ್ರಸಂಗ ಎಂದು ನಿಶ್ಚಯವಾಯತು. ಪ್ರಸಂಗದ ಹೆಸರು ಕೇಳಿದಾಗಲೇ ಕಲಾವಿದರು ಕಂಗಾಲಾಗಿದ್ದರು! ಕುತೂಹಲ-ಕಾತರ. ಸರಕಾರದ ಮಂತ್ರಿಮಂಡಲ ವಿಸ್ತರಣೆ ಅಂತ ಘೋಷಿಸಿದಾಗ ಉಂಟಾಗುತ್ತದಲ್ಲಾ ಅಂತಹ ಟೆನ್ಶನ್! 'ಮಹಿಷಾಸುರ ಯಾರು ಮಾರಾಯ್ರೆ, ದೇವಿ ಯಾರು, ಚಂಡ-ಮುಂಡ ಪಾತ್ರ ಯಾರಿಗೆ, ರಕ್ತಬೀಜ ಯಾರು ಮಾಡ್ತಾರೆ?' ಮೊದಲಾದ ಚೋದ್ಯಗಳಿಗೆ ತಂತಮ್ಮಲ್ಲೇ ಉತ್ತರವಿರುತ್ತಿತ್ತು.

ಸರಿ, ಪಾತ್ರ ಹಂಚುವಿಕೆಯೂ ನಡೆಯಿತು. ಸಂಭಾಷಣೆ ಹಸ್ತಪ್ರತಿಗಳು ಕೈ ಸೇರಿದ್ದುವು. ಕಂಠಪಾಠ ನಡೆಯುತ್ತಿತ್ತು. ಪ್ರಾಕ್ಟೀಸ್ ಆಗುತ್ತಿತ್ತು. ಕೊನೆಗೆ ಸ್ಟೇಜ್ ಪ್ರಾಕ್ಟೀಸ್. ಕರ ಪತ್ರ ಅಚ್ಚಾಯಿತು. ಊರಿಗೆ ಊರೇ 'ದೇವಿ ಮಹಾತ್ಮೆ' ಆಟಕ್ಕೆ ತೆರೆದುಕೊಳ್ಳುತ್ತಾ ಬಂತು. ಪ್ರದರ್ಶನದ ದಿವಸ. 'ದೇವಿ ಮಹಾತ್ಮೆ ಪ್ರಸಂಗವಲ್ವಾ. ಎಲ್ಲರೂ ಶುದ್ಧದಲ್ಲಿ ಇರಬೇಕು' ಎಂದು ಹಿರಿಯರೊಬ್ಬರ ಕಟ್ಟಾಜ್ಞೆ. ಹಿರಿಯರ ಮಾತು ಅಂದರೆ ಮುಗಿಯಿತು. ಕಟ್ಟುನಿಟ್ಟಾಗಿ ಪಾಲಿಸಲ್ಪಡುತ್ತಿತ್ತು.

'ಶುದ್ಧವಾಗಿರುವುದು ಹೇಗೆ? ಮುಖ್ಯವಾಗಿ ಮಹಿಷಾಸುರ, ದೇವಿ, ಚಂಡ-ಮುಂಡ, ರಕ್ತಬೀಜ ಪಾತ್ರ ಮಾಡುವ ಕಲಾವಿದರು ದೇವಸ್ಥಾನದಲ್ಲಿ ಪವಿತ್ರವಾದ 'ಕಲಶ ಸ್ನಾನ' ಮಾಡಿದರು. ದೇವರಿಗೆ ವಿಶೇಷ ಪೂಜೆ. ಅರ್ಚಕರಿಂದ ಪ್ರಾರ್ಥನೆ. ಪ್ರಸಾದ ವಿತರಣೆ. ಆ ಹೊತ್ತಲ್ಲಿ ಕಲಾವಿದನ ಮನೆಯವರೆಲ್ಲಾ ಹಾಜರ್. ಅವರಿಂದಲೂ ಪ್ರತ್ಯೇಕ ಹರಕೆ.

'ಮಹಿಷಾಸುರ ಮತ್ತು ದೇವಿ ಪಾತ್ರವನ್ನು ಮಾಡುವ ಕಲಾವಿದರು ಆಟ ಮುಗಿಯುವಲ್ಲಿಯ ತನಕ ಜತೆಗೆ ಓಡಾಡಬಾರದು' ಹಿರಿಯರಿಂದ ಇನ್ನೊಂದು ಬಾಂಬ್! ಸ್ವಲ್ಪ ಮಟ್ಟಿಗೆ ಈ ಆದೇಶ ಪಾಲನೆಯಾದರೂ, ಚೌಕಿಯಲ್ಲಿ ಒಂದಾಗಬೇಡ್ವೇ! ರಂಗಸ್ಥಳವನ್ನು ಕಲಾವಿದರೆಲ್ಲಾ ಸೇರಿ ರಚಿಸಿದರು. ಮಹಿಷಾಸುರನ ಪ್ರವೇಶ ಎಲ್ಲಿಂದ, ಹೇಗೆ, ಎಷ್ಟು ಹೊತ್ತಿಗೆ ಎಂಬೆಲ್ಲಾ 'ತಾಂತ್ರಿಕ ಅಂಶ'ವನ್ನು ಭಾಗವತರಿಂದ ಪಡೆದದ್ದಾಯ್ತು. ಪ್ರವೇಶ ಮಾಡುವ ದಾರಿಯನ್ನು ವಿಶೇಷ ಆಸ್ಥೆಯಿಂದ ಕ್ಲೀನ್ ಮಾಡಿದ್ದೂ ಆಯಿತು.

ಸೂರ್ಯಾಸ್ತವಾಗುತ್ತಿದ್ದಂತೆ ಯಕ್ಷಗಾನ ಲೋಕ ತೆರೆದುಕೊಳ್ಳಲು ಆರಂಭ. ಕೆಲವರು ಮೈಕ್ ಬಿಗಿಯುತ್ತಿದ್ದರು. ಹತ್ತಾರು ಗ್ಯಾಸ್ಲೈಟ್ಗಳು ಕಾಯಕಲ್ಪ ಹೊಂದುತ್ತಿದ್ದುವು. ಚೌಕಿ ಸಿದ್ಧತೆಯಾಗುತ್ತಿತ್ತು. 'ದೇವಿ' ಕುಳಿತುಕೊಳ್ಳಲು ಉಯ್ಯಾಲೆಯ ಹಗ್ಗ ಎಷ್ಟು ಗಟ್ಟಿಯಿರಬೇಕು ಎಂಬುದಕ್ಕೆ ಕಲಾವಿದನನ್ನೇ ಕೂರಿಸಿ ಧಾರಣ ಶಕ್ತಿಯನ್ನು ಪರೀಕ್ಷಿಸಿಯಾಗಿತ್ತು! 'ಎಂತ ಮಾಡಿ ಬಿಟ್ರಿ.. ಈಗಲೇ ಅವನನ್ನು ಕುಳ್ಳಿರಿಸುವುದಾ.. ಸೊಯ ಇಲ್ವಾ.. ಮತ್ತೇ ಏನಾದರೂ ಆಗ್ಬೇಕು.. ನೋಡಿ' ಹಿರಿಯರಿಂದ ಬೈಗುಳ ಸುರಿಮಳೆ. ಇಷ್ಟು ಹೊತ್ತಿಗೆ ಕಲಾವಿದರ ಮೈಯಲ್ಲಿ ಪಾತ್ರಗಳು ಆವೇಶವಾಗಲು ಶುರು ಮಾಡಿದ್ದುವು!

'ಗಜಮುಖನೆ ಗಣಪತಿಯೆ ನಿನಗೆ ವಂದನೆ' ಮೈಕ್ನಲ್ಲಿ ಹಾಡು ಬರುತ್ತಿದ್ದಂತೆ ಸುತ್ತುಮುತ್ತಲಿನ ಮನೆಗಳಲ್ಲಿ ಹೈಅಲರ್ಟ್! 'ಮೈಕ್ ಕೇಳ್ತಾ ಇದೆ. ಇನ್ನೂ ಹೊರಟು ಆಗಿಲ್ವಾ.. ಬೇಗ ತಯಾರಾಗಿ' ಮನೆ ಮನೆಯಲ್ಲಿ ಅವಸರ-ಸಂಭ್ರಮ. ಇತ್ತ ಪ್ರದರ್ಶನ ಆಗುವಲ್ಲಿ 'ಸೋಜಿ ಅಂಗಡಿ' (ಈಗ ಮಾಯವಾಗಿದೆ), ಬೀಡಾ-ಬೀಡಿ ಅಂಗಡಿ, ಚಹ ಹೋಟೆಲ್..ಗಳಿಗೆ ಜೀವ ಬರಲಾರಂಭಿಸಿತು. ಐದು ಗಂಟೆಗೆ ಐಸ್ಕ್ಯಾಂಡಿಯವನು ರೆಡಿ. ಅವನ ಸುತ್ತ ಮಕ್ಕಳ ಗಡಣ. ಮಕ್ಕಳಲ್ಲಿದ್ದ ಪುಡಿಕಾಸುಗಳು ನೀರಾಗಿ ಹೊಟ್ಟೆಗಳಿದುವು.

ಗಂಟೆ ಒಂಭತ್ತೂವರೆಯಾಯಿತು. 'ದೇವರ ಮುಂದೆ ಕುಣಿಯಲು ವೇಷ ರೆಡಿಯಾಯ್ತಾ, ಏನು ಮಾಡ್ತೀರಿ' ಎನ್ನುತ್ತಾ ಹಿರಿಯರು ಚೌಕಿಗೆ ನುಗ್ಗಿ, ಹಿಮ್ಮೆಳದವರನ್ನು-ವೇಷಗಳನ್ನು ಹೊರಡಿಸಿದರು. ದೇವರ ಮುಂದೆ ವೇಷಗಳು ಕುಣಿಯುತ್ತಿದ್ದಂತೆ, 'ದೇವರೇ ನಮ್ಮ ಮುಂದೆ ಕುಣಿಯುತ್ತಿದ್ದಾರೆ' ಎಂಬ ಭಾವ ಎಲ್ಲರಲ್ಲಿರುತ್ತಿತ್ತು. ತೀರ್ಥಪ್ರಸಾದದ ಸೇವನೆಯ ಬಳಿಕ, 'ಪುನಃ ಪ್ರಾರ್ಥನೆ ಮಾಡಿಕೊಂಡು' ಚೌಕಿಗೆ ಮರುಪ್ರಯಾಣ.

ಕಿಕ್ಕಿರಿದ ಜನಸಂದಣಿ. ವೇಷಗಳೆಲ್ಲಾ ಚೌಕಿಯಲ್ಲಿ ತಯಾರಾಗುತ್ತಿದ್ದುವು. ಸಂಬಂಧಿಕರು ಚೌಕಿಯಲ್ಲಿ ಇಣುಕಿ ಇಣುಕಿ ನೋಡುತ್ತಿದ್ದರು. 'ಓ.. ಇಂತಹವನ ವೇಷ ಆಯಿತು, ಇವನದು ಆಗುತ್ತಾ ಉಂಟಷ್ಟೇ.. ಅವನಿಗೆ ಚಹ ಬೇಕೋ ಏನೋ.. ನಿಂಬೆ ಶರಬತ್ ಬೇಕಾಗಬಹುದಾ..' ಎಂಬ ಚಡಪಡಿಕೆ, ಕಾತರಗಳು ಚೌಕಿಯ ಹೊರಗಿನ ನೋಟ.

ಚೌಕಿಯಲ್ಲಿ ಪೂಜೆ. ಗಪ್ಚಿಪ್, ಗದ್ದಲವಿಲ್ಲ. 'ಮೈಕ್ ಆಫ್ ಮಾಡಿ' ಹಿರಿಯರ ಬುಲಾವ್. ಕಲಾವಿದರೆಲ್ಲೂ ಭಯ-ಭಕ್ತಿಯಿಂದ ಕೈಮುಗಿದು 'ತನ್ನ ವೇಷ ಒಳ್ಳೆಯದಾಗಲಿ' ಎಂದು ಹರಕೆ ಹೇಳಿಕೊಳ್ಳುತ್ತಿದ್ದರು. ಆಟ ಶುರುವಾಯಿತು. ಚೆಂಡೆಯ ಸದ್ದಿನೊಂದಿಗೆ 'ದೇವಿ ಮಹಾತ್ಮೆ'ಯ ಪೌರಾಣಿಕ ಲೋಕ ನಾಲ್ಕು ಕಂಬದ ಮಧ್ಯೆ ಅನಾವರಣಗೊಂಡಿತು. ಯಾವ್ಯಾವ ಪಾತ್ರಗಳ ಬಗ್ಗೆ ಭಯ-ಆತಂಕಗಳಿದ್ದುವೋ ಅವೆಲ್ಲಾ ಸುಲಲಿತವಾಗಿ ನಿರ್ವಹಿಸಲ್ಪಟ್ಟಿತ್ತು. ಮಧು-ಕೈಟಭ, ಮಹಿಷಾಸುರ, ಚಂಡ, ಮುಂಡ, ರಕ್ತಬೀಜ, ಶುಂಭ, ನಿಶುಂಭ ಪಾತ್ರಗಳ ವಧೆಯಾಗುವಾಗ ಕಡಿದ ಕುಂಬಳಕಾಯಿ ಹೋಳುಗಳು ಮರುದಿನವಿಡೀ ಆಟಕ್ಕೆ ಸಾಕ್ಷಿಯಾಗಿದ್ದುವು.

ಕೆಲವರ ಪಾತ್ರಗಳು ಮಧ್ಯೆ ಮಧ್ಯೆ ಮುಗಿದುಹೋಗುತ್ತಿತ್ತು. ಅವರೆಲ್ಲಾ ಮುಖದ ಬಣ್ಣವನ್ನು ಸ್ವಲ್ಪ ಉಳಿಸಿಕೊಂಡು, ತನ್ನ ಬಂಧುಗಳ-ಸ್ನೇಹಿತರ ಗಡಣದೊಂದಿಗೆ 'ಪಾತ್ರದ ಯಶಸ್ಸಿನ' ಕುರಿತು ಹರಟೆ ನಡೆಸುತ್ತಿದ್ದರು. ಪಾತ್ರವಾದ ಬಳಿಕವೂ 'ಅಬ್ಬಾ.. ದೇವರು ಕೈಬಿಟ್ಟಿಲ್ಲ. ಏನೂ ತೊಂದರೆಯಾಗಿಲ್ಲ. ಆಯಾಸವಾಗಿಲ್ಲ.' ಎಂಬ ಭಯ-ಭಕ್ತಿ. ಆಟ ಮುಗಿಸಿದ ಮರುದಿವಸ ಜರುಗಿದ ಪ್ರದರ್ಶನದ ಪೋಸ್ಟ್ಮಾಟಂ. ಹೊಗಳಿಕೆಗಳ ಸುರಿಮಳೆ. ಮನೆಮನೆಯಲ್ಲಿ ಆಟದ-ಕಲಾವಿದರ ವಿಮರ್ಶೆ.. ನಂತರದ ದಿವಸಗಳಲ್ಲಿ ಕಲಾವಿದರು ಸಿಕ್ಕಿದಾಗಲೆಲ್ಲಾ ಅವರಿಗೆ ಪ್ರತ್ಯೇಕ ಮಣೆ. ಬಹುತೇಕ ಎಲ್ಲಾ ಊರುಗಳಲ್ಲೂ ಯಕ್ಷಗಾನದ ಪ್ರದರ್ಶನದ ಸುತ್ತ ಇಂತಹ ಸುಂದರ ಅನುಭವವಿರುತ್ತಿತ್ತು.

ಈ ರೀತಿಯ ಭಕ್ತಿ-ಶೃದ್ಧೆಯ ವಾತಾವರಣ ಯಕ್ಷಗಾನ ಕ್ಷೇತ್ರದಲ್ಲಿ ಎಲ್ಲಿದೆ? ಹುಡುಕಿದರೆ ಅಲ್ಲೋ-ಇಲ್ಲೋ ಅಷ್ಟೇ. ಆಗ ಸಾಂಸ್ಕೃತಿಕ ಆಯ್ಕೆ ಬೇರೆ ಇರಲಿಲ್ಲ ಎಂಬುದು ಸರಿ. ಆದರೆ ಯಕ್ಷಗಾನವನ್ನು 'ದೈವೀ ಕಲೆ'ಯಾಗಿ ಸ್ವೀಕರಿಸಿದ್ದರಲ್ಲಾ, ಅದರ ಹಿಂದಿರುವ ಭಾವನೆಗಳಿಗೆ ಭಾಷೆಯನ್ನು ಬರೆಯಲಾಗುವುದಿಲ್ಲ. ಅವೆಲ್ಲಾ ಅನುಭವ ಜನ್ಯ. ಅದರಲ್ಲಿ ಸುಖವಿತ್ತು, ನೆಮ್ಮದಿಯಿತ್ತು, ಆನಂದಗಳಿದ್ದುವು. 'ನಮ್ಮೂರಲ್ಲೂ ಯಕ್ಷಗಾನ ಬೆಳೆಯಬೇಕೆಂಬ' ಆಶಯವಿತ್ತು. ಹಾಗಾಗಿಯೇ 'ಗಂಡು ಕಲೆ' ಉಳಿದುಕೊಂಡಿದೆ.

ಈಗ 'ಪ್ರದರ್ಶನ ರೈಸಬೇಕು' ಎಂಬ ಮಾನದಂಡದಂತೆ ಯಶಸ್ಸು. ಸ್ಥಾನ-ಮಾನ. ಹೊಗಳಿಕೆ. 'ಕೆಟ್ಟ ಅಭಿವ್ಯಕ್ತಿಯಾದರೂ ಹೊಗಳಲೇ ಬೇಕು' ಎಂಬ ಅಲಿಖಿತ ಶಾಸನ!