Friday, July 26, 2013

ಶೀನಪ್ಪ ಭಂಡಾರಿಗಳ ಮೇಳ - ಹಳ್ಳಿಗಳ ಸಾಂಸ್ಕೃತಿಕ ಉಸಿರು


                 ಕೃಷ್ಣ ವರ್ಣದ ಕಲಾವಿದರೊಬ್ಬರು ಕಂಕುಳಲ್ಲಿ ಆಟದ ವಾಲ್ಪೋಸ್ಟ್ ಇಟ್ಟುಕೊಂಡು ಬಸ್ಸಿಳಿದರೆ ಸುತ್ತುಮುತ್ತ ಶ್ರೀ ಸುಬ್ರಹ್ಮಣ್ಯ ಮೇಳದ ಆಟವಿದೆ ಎಂದರ್ಥ. ಚಹದಂಗಡಿ, ಸೆಲೂನ್, ಸ್ಫೂರ್ತಿ ರಸಾಯನ ಸೇವಿಸುವ ಅಂಗಡಿಗಳ ಗೋಡೆಗಳಲ್ಲಿ ವಾಲ್ಪೋಸ್ಟ್ ಅಂಟಿಸಿ, ಕರಪತ್ರಗಳನ್ನಿಟ್ಟು ಮುಂದಿನ ಬಸ್ಸಲ್ಲಿ ತೆರಳುತ್ತಾರೆ. ಈ ಮೂರು ಸ್ಥಳಗಳಲ್ಲಿ ಒಂದಕ್ಕಾದರೂ ಜನ ಬಾರದಿರರು ಎಂಬ ನಂಬುಗೆ ಕಲಾವಿದ ಅಂಬು ಶೆಟ್ಟರದು. ಅಂಟಿಸಿದ ಬ್ಯಾನರ್ ಪ್ರದರ್ಶನ ಮುಗಿಯುವಲ್ಲಿಯ ತನಕ ಸಾಂಸ್ಕೃತಿಕ ಗುಂಗನ್ನು ಜೀವಂತ ಹಿಡಿದಿಡುತ್ತಿತ್ತು.

             ಪುತ್ತೂರು ಶೀನಪ್ಪ ಭಂಡಾರಿ (ಶೀನಪ್ಪಣ್ಣ, ಶೀನಣ್ಣ) ಇನ್ನಿಲ್ಲ. ಜೂನ್ 24ರಂದು ವಿಧಿವಶ. ಅರ್ಧ ಶತಮಾನಕ್ಕೂ ಮಿಕ್ಕಿ ಸದ್ದಿಲ್ಲದೆ ಕರಾವಳಿಯುದ್ದಕ್ಕೂ ಯಕ್ಷಗಾನ ಮೇಳವನ್ನು ಒಯ್ದಿದ್ದಾರೆ. ಸಾರಿಗೆಯ ತೊಂದರೆಯಿಂದಾಗಿ ದೊಡ್ಡ ಮೇಳಗಳು ಹೋಗಲಾಗದ ಸ್ಥಳಗಳಲ್ಲಿ ಟೆಂಟ್ ಊರಿದ್ದಾರೆ. ಇವರ ಮೇಳದ ಸರಕು ಸಾಗಾಟಕ್ಕೆ ಎತ್ತಿನ ಗಾಡಿ ಹೋಗುವಷ್ಟು ದಾರಿ ಸಾಕು. ಹೀಗಾಗಿ ನಗರಕ್ಕಿಂತಲೂ ಹಳ್ಳಿಯ ಜನ ಸುಬ್ರಹ್ಮಣ್ಯ ಮೇಳವನ್ನು ಒಪ್ಪಿಕೊಂಡಿದ್ದರು, ಅಪ್ಪಿಕೊಂಡಿದ್ದರು. ಇದು ಒಂದು ಕಾಲಘಟ್ಟದ ಚಿತ್ರಣ.

             ಸಾರಿಗೆ ಬಂತು. ವ್ಯವಸ್ಥೆಗಳು ದಾಂಗುಡಿಯಿಟ್ಟವು. ಮೇಳಗಳ ಸಂಖ್ಯೆ ಬೆಳೆದುವು. ವೈವಿಧ್ಯ ಪ್ರಸಂಗಗಳು ಪ್ರದರ್ಶಿತಗೊಂಡುವು. ರಂಗುರಂಗಿನ ವೇಷಭೂಷಣಗಳು, ರಂಗವೇದಿಕೆಗಳು ಪ್ರೇಕ್ಷಕರನ್ನು ಹಿಡಿದಿಟ್ಟುವು. ಇವುಗಳ ಮಧ್ಯೆ ಭಂಡಾರಿಗಳ ಮೇಳ ಯಾವ ಪ್ರಚಾರ ರಂಪಾಟಕ್ಕೂ ಸಿಕ್ಕದೆ ಹಳ್ಳಿಯ ಪ್ರೇಕ್ಷಕರನ್ನು ನಂಬಿತು. ಕಿಸೆ ತುಂಬಿ ತುಳುಕದಿದ್ದರೂ, ಎಂದೂ ಖಾಲಿಯಾದುದಿಲ್ಲ; ಅರೆಹೊಟ್ಟೆಯಲ್ಲಿ ನಿದ್ರಿಸಲಿಲ್ಲ, ಮನೆಮಂದಿ ಉಪವಾಸ ಕೂರಲಿಲ್ಲ ಎನ್ನುವುದು ಗಮನಾರ್ಹ.

              ಶೀನಣ್ಣ ತುಳು ಪ್ರಸಂಗಗಳ ಮೂಲಕ ಹಳ್ಳಿಯ ಮನಸ್ಸು ಗೆದ್ದಿದ್ದರು. ಒಂದು ಪ್ರಸಂಗದ ಪ್ರದರ್ಶನದಲ್ಲಂತೂ ರಾತ್ರಿ ಪ್ರೇಕ್ಷಕರಿಗೆ ಚಹ ವಿತರಿಸಿ ಟೆಂಟ್ ಫುಲ್ ಮಾಡಿದುದು ಇತಿಹಾಸಕ್ಕೆ ಸೇರಿದ ಸಂಗತಿ. ಹಿತಮಿತವಾದ ವೇಷಭೂಷಣವಿದ್ದರೂ ಪ್ರೇಕ್ಷಕರಿಗೆ ಗೊಂದಲವಾಗದಂತೆ ಸರಿದೂಗಿಸುವ ಜಾಣ್ಮೆ ಮೇಳ ಕಲಿಸಿದ ಅನುಭವ. ಪ್ರದರ್ಶನದ ಮಧ್ಯೆ ಜನರೇಟರಿನಲ್ಲಿ ಡೀಸಿಲ್ ಕೈಕೊಟ್ಟಾಗ, ವಿದ್ಯುತ್ ಕಣ್ಣುಮುಚ್ಚಾಲೆಯಾಡಿದಾಗ ಭಂಡಾರಿಗಳು ಅಧೀರರಾದುದಿಲ್ಲ. ಪ್ರೇಕ್ಷಕರಿಗೆ ನಿರಾಶೆ ಮಾಡದೆ ಬೆಳಗ್ಗಿನವರೆಗೆ ಆಟ ರೈಸುವಂತೆ ಮಾಡುವಲ್ಲಿ ಪರಿಣತ!

               ಆಟಕ್ಕೆ ಜನ ಕಡಿಮೆಯಾಗಿ ವೆಚ್ಚಕ್ಕೆ ಹಣ ಸಾಕಾಗದ ಸಂದರ್ಭಗಳಲ್ಲಿ ಹಳ್ಳಿಯ ಅಭಿಮಾನಿಗಳು ಆಧರಿಸಿ, ಹಣ ಸಂಗ್ರಹಿಸಿ ಕೈಗಿತ್ತುದನ್ನು ನೆನಪಿಸಿಕೊಳ್ಳುತ್ತಿದ್ದರು. ಚೌಕಿಯೊಳಗೆ ಇಣುಕಿದರೆ ಐದೋ ಹತ್ತೋ ಮಂದಿ ಕಲಾವಿದರು. ಬೆಳಗ್ಗಿನವರೆಗೆ ದೇವಿ ಮಹಾತ್ಮೆ ಪ್ರಸಂಗವನ್ನು ನಿರ್ವಹಿಸುವಷ್ಟು ಅನುಭವಿಗಳು. ಶೀನಪ್ಪಣ್ಣನ ಗರಡಿಯಲ್ಲಿ ಪಳಗಿದ ಚಾಣಾಕ್ಷರಿವರು. ಒಂದು ರಾತ್ರಿ ಮೂರೋ ನಾಲ್ಕೋ ವೇಷವನ್ನು ನಿರ್ವಹಿಸುವಷ್ಟು ಗಟ್ಟಿಗರು.

                ಶ್ರೀ ಸುಬ್ರಹ್ಮಣ್ಯ ಮೇಳವು ಕಲಾವಿದರನ್ನು ಸೃಷ್ಟಿಸುವ ಒಂದು ಕಾರ್ಖಾನೆ. ಇಲ್ಲಿ ಗೆಜ್ಜೆ ಕಟ್ಟಿ ಕುಣಿಯದ ಕಲಾವಿದರು ವಿರಳ. ಒಂದೆರಡು ವರುಷ ವ್ಯವಸಾಯ ಮಾಡಿದರೆ ಸಾಕು, ಕಷ್ಟ-ಸುಖಗಳ ಆರ್ಜನೆಯಾಗುತ್ತಿತ್ತು. ರಂಗಮಾಹಿತಿಗಳು ಕರಗತವಾಗುತ್ತಿತ್ತು. ತೆಂಕಿನ ಬಹುತೇಕ ಮೇಳಗಳಲ್ಲಿ ಭಂಡಾರಿಗಳ ಗರಡಿಯಲ್ಲಿ ಪಳಗಿದ ಕಲಾವಿದರು ಒಬ್ಬಿಬ್ಬರಾದರೂ ಮಾತಿಗೆ ಸಿಗುತ್ತಾರೆ.

              ಮೇಳದ ಬದುಕು ಹೂವಿನ ಹಾಸಿಗೆ ಕೊಟ್ಟಿಲ್ಲ, ಆದರೆ ಮುಳ್ಳಿನಲ್ಲಿ ನಡೆದಿಲ್ಲ. ಕಾಂಚಾಣ ಸದ್ದುಮಾಡಿಲ್ಲ, ಆದರೆ ಬದುಕು ನಲುಗಲಿಲ್ಲ. ಕೊನೆಯವರೆಗೂ ಯಕ್ಷಗಾನದ್ದೇ ಮಂತ್ರ. ರಂಗದಲ್ಲಿ ಕೌರವನಾಗಿ, ಹಿರಣ್ಯಾಕ್ಷನಾಗಿ ಮೆರೆದ ಭಂಡಾರಿಗಳಿಗೆ ಪುರಾಣ ಪಾತ್ರಗಳ ಸೂಕ್ಷ್ಮಾತಿಸೂಕ್ಷ್ಮಗಳ ಅರಿವಿತ್ತು. ಮೇಳ ಮುನ್ನಡೆಸುವ, ಕಲಾವಿದರನ್ನು ಪೋಶಿಸುವ ದೃಷ್ಟಿಯಿಂದ ತುಳು ಪ್ರಸಂಗಗಳನ್ನು ನೆಚ್ಚಿಕೊಳ್ಳಬೇಕಾಯಿತು.

              ಶೀನಪ್ಪಣ್ಣ ರಾಜ್ಯ ಪ್ರಶಸ್ತಿ ಪುರಸ್ಕೃತರು. ಸರಕಾರಿ ವಲಯದಲ್ಲಿ ಯಕ್ಷಗಾನದ ಹೆಸರು ಬಂದಾಗಲೆಲ್ಲಾ ವರಿಷ್ಠರಿಗೆ ಭಂಡಾರಿಗಳು ಪರಿಚಿತ. ಬಹಳ ಆಪ್ತ ಸಂಬಂಧವಿತ್ತು. ಅಷ್ಟೇ ಅಂತರವನ್ನು ಕಾಪಾಡಿಕೊಂಡಿದ್ದರು. ಸರಕಾರಿ ಆಯೋಜಿತ ಯಕ್ಷಗಾನ ಪ್ರದರ್ಶನಗಳನ್ನು ನಿರುಮ್ಮಳವಾಗಿ ನಡೆಸಿಕೊಡುತ್ತಿದ್ದರು. ಕಚೇರಿಗಳ ಕೆಂಪುಪಟ್ಟಿ ವ್ಯವಸ್ಥೆಯ ಹತ್ತಿರದ ಪರಿಚಯವಿತ್ತು.

              ನಯ ವಿನಯ ಮಾತುಗಳು ಜನ್ಮದತ್ತ. ವ್ಯವಹಾರ ಕುಶಲಿ. ಅರ್ಧ ಶತಮಾನಕ್ಕೂ ಮಿಕ್ಕಿದ ಯಕ್ಷಬದುಕಿನ ಯಶದ ಕಾರಣವಿದು. ಮೇಳದ ಪ್ರದರ್ಶನಗಳಲ್ಲಿ, ವ್ಯವಸ್ಥೆಗಳಲ್ಲಿ ವ್ಯತ್ಯಾಸ ಬಂದಾಗ ಪ್ರೇಕ್ಷಕರು ಶೀನಪ್ಪಣ್ಣನ ಬೆನ್ನ ಹಿಂದೆ ಇರುತ್ತಿದ್ದರು. ಆಕ್ಷೇಪಿಸುತ್ತಿರಲಿಲ್ಲ. ಒಮ್ಮೆ ಅವರ ಸ್ನೇಹ ತೆಕ್ಕೆಗೆ ಸಿಕ್ಕರೆ ಸಾಕು, ಮತ್ತೆಂದು ಬಿಡದಷ್ಟು ಆಪ್ತತೆ.

               ಆಜಾನುಬಾಹು ದೇಹ, ಧರಿಸಿದ ಶುಚಿ ಉಡುಪು, ಹಣೆಯ ತಿಲಕ, ಹೊಳಪು ಕಂಗಳುಗಳಿಗೆ ಸೆಳೆಮಿಂಚಿನ ತಾಕತ್ತು. ಕಲಾವಿದರ ವರ್ತನೆ, ಅಭಿವ್ಯಕ್ತಿಗಳು ದಾರಿತಪ್ಪಿದಾಗ ತಿಳಿಹೇಳುವ ಹಿರಿಯಜ್ಜ. ಮಾತು ಕೇಳದಿದ್ದರೆ ಮನಸ್ಸಿನಲ್ಲಿ ಕೊರೆಯುವ ತಾತ. ಮಾತಿಗೆ ತೊಡಗಿದರೆ ಮನದ ಮೌನ ಮಾತಾಗುತ್ತಿತ್ತು. ಅಲ್ಲಿ ಅಸಹಾಯಕತೆ, ಚಡಪಡಿಕೆಗಳಿರುತ್ತಿತ್ತು. ವಿಷಾದವಿರುತ್ತಿರಲಿಲ್ಲ.

               ತಮ್ಮ ಮಕ್ಕಳಿಗೆಲ್ಲಾ ಯಕ್ಷಗಾನವನ್ನು ಬಾಲ್ಯದಲ್ಲೇ ಅಂಟಿಸಿದ್ದರು. ಅವರಲ್ಲೊಬ್ಬರಾದ ಪುತ್ತೂರು ಶ್ರೀಧರ ಭಂಡಾರಿಯವರು ತೆಂಕುತಿಟ್ಟು ರಂಗದ ಸಿಡಿಲಮರಿ! ಮೇಳದ ತಿರುಗಾಟ ನಿರ್ವಹಣೆಗಿಂತಲೂ ಮಗ ಶ್ರೀಧರರನ್ನು ಯಕ್ಷಗಾನನಲ್ಲಿ ಬೆಳೆಸಿರುವುದು ಶೀನಣ್ಣದ ಯಕ್ಷಗಾನದ ದೊಡ್ಡ ಕೊಡುಗೆ. 'ದೊಡ್ಡ ಮೇಳದ ಕಲಾವಿದ' ಎಂದು ಮಗನನ್ನು, 'ಯಜಮಾನ್ರ (ತಂದೆಯ) ಮೇಳ' ಎಂಬ ಭಾವಸಂಚಾರಗಳು ಅವರಿಬ್ಬರ ಸಂಭಾಷಣೆಯಲ್ಲಿ ನೋಡಿದ್ದೇನೆ.

               ಶೀನಪ್ಪಣ್ಣ ಈಗಿಲ್ಲ. ಪ್ರಚಾರ ಜವಾಬ್ದಾರಿ ಹೊತ್ತ ಅಂಬು ಶೆಟ್ರೂ ಇಲ್ಲ. ಅಂದು ವಾಲ್ಪೋಸ್ಟ್ ಅಂಟಿಸುತ್ತಿದ್ದ ಗೋಡೆಗಳೆಲ್ಲಾ ನುಣುಪಾಗಿ ಮಿರಿಮಿರಿಯಾಗಿವೆ. ಅಲ್ಲಿ ಮೊಬೈಲ್ ಕಂಪೆನಿಗಳ ವಾಲ್ಪೋಸ್ಟ್ ರಾರಾಜಿಸುತ್ತಿವೆ. ಒಂದೆಡೆ ಕಾಲದ ಓಟದ ಅನುಭವ. ಮತ್ತೊಂದೆಡೆ ಕಳೆದು ಹೋದ ಸಾಂಸ್ಕೃತಿಕ ದಿನಗಳು. ಬದುಕಿನ ದ್ವಂದ್ವಗಳಿವು.

              ಇವರ ಯಕ್ಷ ಬದುಕಿನ ಅನುಭವವನ್ನು 'ಯಕ್ಷ ಭಂಡಾರಿ' ಕೃತಿಯಲ್ಲಿ ಪತ್ರಕರ್ತ ಚಂದ್ರಶೇಖರ ಮಂಡೆಕೋಲು ಪೋಣಿಸಿದ್ದಾರೆ. ಶೀನಪ್ಪಣ್ಣನ ಕಲಾ ಸಾಕ್ಷಿಗೆ ಇದೊಂದೇ ದಾಖಲೆ ಈಗ ಉಳಿದಿರುವುದು. ಯಕ್ಷಗಾನವನ್ನು ಪ್ರೀತಿಸುವ ಎಲ್ಲರ ಮನದಲ್ಲೂ ಸಾಕ್ಷಿಯಾಗಿ ಶೀನಪ್ಪಣ್ಣ ಸ್ಥಾಯಿಯಾಗಿದ್ದಾರೆ. ಅಗಲಿದ ಹಿರಿಯ ಚೇತನಕ್ಕೆ ಅಕ್ಷರ ನಮನ.

Saturday, July 20, 2013

ಉಪನಯನದ ಬೌದ್ಧಿಕ ಉಪಾಯನ


            ದೇವರ ನಾಡಿನ ಊರಲ್ಲಿ ಮಾಹಿತಿಯೊಂದರ ಬೆನ್ನೇರಿದ್ದೆ. ಹಿರಿಯರನ್ನು ಮಾತನಾಡಿಸುತ್ತಿದ್ದೆ. ತಿಂಗಳಲ್ಲಿ ಇಪ್ಪತ್ತು ದಿವಸ ಒಂದಲ್ಲ ಒಂದು ಮನೆಯಲ್ಲಿ ತಾಳಮದ್ದಳೆಗಳು ಆಗುತ್ತಿದ್ದುವು, ಬಹುತೇಕರು ಕಾಲ ಶತಮಾನದ ಹಿಂದಿನ ದವಸಗಳನ್ನು ನೆನಪು ಮಾಡಿಕೊಳ್ಳುತ್ತಾ, 'ಈಗ ತಾಳಮದ್ದಳೆಗಳು ಅಪರೂಪ. ಸಿಡಿಯಲ್ಲೋ, ಕ್ಯಾಸೆಟ್ಟಿನಲ್ಲೋ ಇದೆಯಷ್ಟೇ,' ಎಂಬ ವಿಷಾದ.

             ಆಗ ಗ್ರಹಿಸಿದಾಗ ಎಟಕುವ ಸಾಂಸ್ಕೃತಿಕ ಆಯ್ಕೆಗಳಿರಲಿಲ್ಲ ಎಂಬುದು ನಿಜ. ಆದರೆ ತಾಳಮದ್ದಳೆಗಳು ಹಳ್ಳಿಯಲ್ಲಿ, ಕುಟುಂಬದಲ್ಲಿ ಪೌರಾಣಿಕವಾದ ಗುಂಗನ್ನು ಉಂಟುಮಾಡುತ್ತಿತ್ತು. ಜ್ಞಾನ ಪ್ರಸಾರವೂ ಉಂಟಾಗುತ್ತಿತ್ತು. ಪುರಾಣ ಪುಸ್ತಕಗಳನ್ನು ಓದದೆ ಪೌರಾಣಿಕ ವಿಚಾರಗಳನ್ನು ಗ್ರಹಿಸಬಲ್ಲರು, ಮಾತನಾಡಬಲ್ಲರು, ಚರ್ಚೆ ಮಾಡಬಲ್ಲರು. ಅದು ಯಕ್ಷಗಾನದ ಗಟ್ಟಿತನ.

             ಈಚೆಗೆ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ 'ನಟರಾಜ ವೇದಿಕೆ'ಯಲ್ಲಿ ಜರುಗಿದ ತಾಳಮದ್ದಳೆಯನ್ನು ಆಲಿಸುತ್ತಿದ್ದಾಗ ಹಿರಿಯರ ಮೇಲಿನ ಮಾತುಗಳು ನೆನಪಾದುವು. ಈಗಲೂ ಅಲ್ಲೋ ಇಲ್ಲೋ ನಡೆವ ಮನೆ ತಾಳಮದ್ದಳೆಗಳ ನೆನಪು ಕಾಡುತ್ತದೆ. ಸಮಾರಂಭಗಳಲ್ಲಿ ತಾಳಮದ್ದಳೆಗಳನ್ನು ಹಮ್ಮಿಕೊಳ್ಳುವ ಮನಸ್ಸು ಈಗೀಗ ರೂಪುಗೊಳ್ಳುತ್ತಿರುವುದು ಶ್ಲಾಘನೀಯ. 

           ಪುತ್ತೂರಿನ ಇಂಜಿನಿಯರ್ ಪಿ.ಜಿ.ಜಗನ್ನಿವಾಸ ರಾವ್ (ಜಗ್ಗಣ್ಣ) ಮತ್ತು ಶ್ರೀವಿದ್ಯಾ ದಂಪತಿಗಳ ಪುತ್ರ ಶ್ರೀಕೃಷ್ಣನ ಉಪನಯನ. (3-6-2013) ಎಡನೀರು ಮಠಾಧೀಶ ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀ ಪಾದಂಗಳವರ ದಿವ್ಯ ಸಾನ್ನಿಧ್ಯ. ನಟರಾಜ ವೇದಿಕೆಯಲ್ಲಿ ವಿವಿಧ ಸಾಂಸ್ಕೃತಿಕ ಕಲಾಪ. ಜಗನ್ನಿವಾಸರ ಸ್ನೇಹಿತರ, ಆಪ್ತರ ಹೆಗಲೆಣೆ. ಉಪನಯನದ ಮುನ್ನಾದಿನ ಬೆಂಗಳೂರಿನ ಸುಪ್ರಿತಾ ರಾವ್ ಅವರಿಂದ ಹಾಡುಗಾರಿಕೆ. ಬಳಿಕ ಪುತ್ತೂರಿನ ಪಶುಪತಿ ಶರ್ಮ ಮತ್ತು ಕೃಷ್ಣಮೋಹನ್ ಇವರಿಂದ ಮೆದುಳಿಗೆ ಮೇವನ್ನು ನೀಡುವ ಹಲವು ಸಂಗತಿಗಳ ಪ್ರಸ್ತುತಿ.

           ಮರುದಿವಸ ಪೂರ್ವಾಹ್ನ ಯಕ್ಷಕೂಟ ಪುತ್ತೂರು ಇವರ ಸಾರಥ್ಯದಲ್ಲಿ 'ಜಾಂಬವತಿ ಕಲ್ಯಾಣ', ಅಪರಾಹ್ನ 'ಸುಧನ್ವ ಮೋಕ್ಷ' ತಾಳಮದ್ದಳೆ. ಗಾನಗಂಧರ್ವ ಪದ್ಯಾಣ ಗಣಪತಿ ಭಟ್ ಮತ್ತು ರಮೇಶ ಭಟ್ ಪುತ್ತೂರು ಇವರ ಭಾಗವತಿಕೆ. ಪದ್ಯಾಣ ಶಂಕರನಾರಾಯಣ ಭಟ್, ಪದ್ಯಾಣ ಜಯರಾಮ ಭಟ್, ಲಕ್ಷ್ಮೀಶ ಅಮ್ಮಣ್ಣಾಯ, ಕೃಷ್ಣಪ್ರಕಾಶ್ ಉಳಿತ್ತಾಯ, ವದ್ವ ರಾಮ್ಪ್ರಸಾದ್, ರಮೇಶ್ ಕಜೆ.. ಹಿಮ್ಮೇಳ ಸಾಥಿ. ಡಾ.ಎಂ. ಪ್ರಭಾಕರ ಜೋಶಿ, ರಾಧಾಕೃಷ್ಣ ಕಲ್ಚಾರ್, ವಾಸುದೇವ ರಂಗಾಭಟ್ಟ, ಕಾರನ್ತ, ರಮಾನಂದ ನೆಲ್ಲಿತ್ತಾಯ, ರಾಮ ಜೋಯಿಸ್ ಬೆಳ್ಳಾರೆ, ಹರೀಶ ಬೊಳಂತಿಮೊಗರು.. ಅರ್ಥಧಾರಿಗಳು.

              'ಸಮಾರಂಭಗಳಲ್ಲಿ ತಾಳಮದ್ದಳೆ, ಆಟಗಳನ್ನು ಆಯೋಜಿಸಿದ್ದರೆ ಜನ ನಿಲ್ಲುವುದಿಲ್ಲ ಮಾರಾಯ್ರೆ,' ಬಹುತೇಕ ಯಕ್ಷಪ್ರಿಯ ಸಂಘಟಕರ ಪೂರ್ವನಿರ್ಧಾರ! ಆದರೆ ಕಾರ್ಯಕ್ರಮ ಏರ್ಪಡಿಸಿದರೆ ಬದುಕಿನ ತೀವ್ರ ಒತ್ತಡದ ಮಧ್ಯೆಯೂ ತಾಸುಗಟ್ಟಲೆ ಕುಳಿತು ಕೇಳುವವರಿದ್ದಾರೆ ಎನ್ನುವುದಕ್ಕೆ ಶ್ರೀಕೃಷ್ಣನ ಉಪನಯನ ಸಾಕ್ಷಿ.

             ತಾಳಮದ್ದಳೆ ಬಿಸಿಯೇರುವುದಿಲ್ಲ, ಪ್ರದರ್ಶನ ಕುಲಗೆಟ್ಟಿತು.. ಎಂದು ನಾಲ್ಕು ಮಂದಿ ಸೇರುವಲ್ಲಿ ಸಂಭಾಷಣೆಗಳು ಆರಂಭವಾಗುತ್ತವೆ. ಕಾರ್ಯಕ್ರಮದಲ್ಲಿ ಭಾಗವಹಿಸದೆ ಗಂಭೀರ ಸಂಭಾಷಣೆ ಯಾ ಆರೋಪಗಳು ನಿತ್ಯ ನಡೆಯುತ್ತಲೇ ಇರುತ್ತದೆ! ಇವೆಲ್ಲಾ ಸಮಯ ಕೊಲ್ಲುವ ಮಾತುಕತೆಗಳಷ್ಟೇ.

             ಮದುವೆ, ಉಪನಯನದಂತಹ ಶುಭ ದಿವಸದಂದು ಧಾರ್ಮಿಕ ಪ್ರಕ್ರಿಯೆಯೊಂದಿಗೆ ಕಲಾರಾಧನೆಯೂ ಮಿಳಿತಗೊಳ್ಳಬೇಕು. ಸಾಂಸ್ಕೃತಿಕ ಆಯ್ಕೆಗಳು ಕೈಬೆರಳಿನಲ್ಲಿ ಕುಣಿಯುತ್ತಿರುವ ಕಾಲಘಟ್ಟದಲ್ಲಿ ಬೌದ್ಧಿಕ ಗಟ್ಟಿತನಕ್ಕೆ ಸಹಾಯವಾಗುವ ಯಕ್ಷಗಾನ ಮಾಧ್ಯಮವನ್ನು ಸಾಮಾಜಿಕವಾಗಿ ಗಟ್ಟಿಗೊಳಿಸುವ ಜವಾಬ್ದಾರಿ ನಮ್ಮೆಲ್ಲರಲ್ಲಿ ಇಲ್ವಾ. ಈ ಹಿನ್ನೆಲೆಯಲ್ಲಿ ಪಿ.ಜಿ. ಜಗನ್ನಿವಾಸ ರಾವ್, ಪಿ.ಜಿ.ಚಂದ್ರಶೇಖರ್ ರಾವ್ ಕುಟುಂಬ ಅಭಿನಂದನಾರ್ಹರು. ಇಂತಹ ಸಾಂಸ್ಕೃತಿಕ ಮನಸ್ಸುಗಳು ರೂಪುಗೊಳ್ಳಬೇಕಾದುದು ಕಾಲದ ಅನಿವಾರ್ಯ.

Tuesday, July 16, 2013

ಆಪ್ತ ಭಾಗವತ : ಪುತ್ತಿಗೆ ರಘುರಾಮ ಹೊಳ್ಳ (Bhagavth Puttige Raghurama Holla)

 




                 ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ ಪ್ರಸಂಗದ 'ಧರ್ಮದೇವತೆ'ಗಳು, ಗದಾಯುದ್ಧ ಪ್ರಸಂಗದ 'ಕೌರವ', ಭರತಾಗಮನದ 'ಭರತ', ದ್ರುಪದ ಗರ್ವಭಂಗದ 'ಏಕಲವ್ಯ', ತ್ರಿಪುರ ಮಥನದ 'ಚಾರ್ವಾಕ', ಭೌಮಾಸುರ... ಪಾತ್ರಗಳು ರಂಗದಲ್ಲಿ ಮಾತ್ರವಲ್ಲ, ಮನದಲ್ಲೂ ನಿತ್ಯ ಕುಣಿಯುತ್ತವೆ. ಅಭಿನಯ ಮಾಡುತ್ತವೆ. ಮಾತನಾಡುತ್ತವೆ. ಇದರ ಹಿಂದೆ ಪಾತ್ರಧಾರಿಯ ಸಾಮಥ್ರ್ಯದೊಂದಿಗೆ ಭಾಗವತನ ನಿರ್ದೇಶನವೂ ಮಿಳಿತಗೊಂಡಿರುತ್ತದೆ. ಇದು ಅಜ್ಞಾತ. ಒಟ್ಟೂ ಪ್ರದರ್ಶನವನ್ನು ಆಕಳಿಸದೆ ಆಸ್ವಾದಿಸಿದರೆ ಮಾತ್ರ ಗೋಚರ.

                ಹಾಗಾಗಿಯೇ ಇರಬೇಕು, ಇಂತಹ ಪಾತ್ರಗಳನ್ನು ಜ್ಞಾಪಿಸಿಕೊಂಡರೆ ಸಾಕು, ಕಡತೋಕ ಮಂಜುನಾಥ ಭಾಗವತರ ದಿನಮಾನಗಳು ಮಿಂಚಿ ಮರೆಯಾಗುತ್ತವೆ. ಪ್ರಸಂಗ ಸಾಹಿತ್ಯಕ್ಕೆ ಬಾಧಕವಾಗದಂತೆ ಭಾಗವತಿಕೆಯಿಂದಲೇ ಕೆಲವೆಡೆ 'ಪಂಚ್ ಸನ್ನಿವೇಶ'ಗಳನ್ನು ರೂಪಿಸಿರುವುದನ್ನು ನೋಡುತ್ತೇವೆ. ಪಂಚ್ ಸನ್ನಿವೇಶಗಳ ಸೃಷ್ಟಿಗೆ ಇವರು ಖ್ಯಾತಿ. ಅವರ ಬಳಕ ಅಷ್ಟೇ ಸಮರ್ಥವಾಗಿ ರಂಗದ ಪಡಿಮಂಚವನ್ನು ಏರಿದವರು ಪುತ್ತಿಗೆ ರಘುರಾಮ ಹೊಳ್ಳರು (58).

                ತಂದೆ ಕೀರ್ತಿಶೇಷ ಪುತ್ತಿಗೆ ರಾಮಕೃಷ್ಣ ಜೋಯಿಸರು ಒಂದು ಕಾಲಘಟ್ಟದ ಯಕ್ಷಗಾನದ ದಂತಕತೆಗಳ ಮೂಟೆ. ಅವರ ಭಾಗವತಿಕೆ ರಂಗದ ಕ್ರಾಂತಿದನಿ. ತಂದೆಗಂಟಿಗೊಂಡೇ ಯಕ್ಷಗಾನದ ನಂಟನ್ನು ಅಂಟಿಸಿಕೊಂಡ ಹೊಳ್ಳರಿಗೆ ಮದ್ದಳೆ ಮತ್ತು ಚೆಂಡೆಯತ್ತ ಮೊದಲಾಸಕ್ತಿ. ಮವ್ವಾರು ಕಿಟ್ಟಣ್ಣ ರೈಗಳು ಮತ್ತು ಕುದ್ರೆಕೂಡ್ಲು ರಾಮ ಭಟ್ಟರಂತಹ ಉದ್ಧಾಮ ಗುರುಗಳನ್ನು ಪಡೆದ ರಘುರಾಮರಿಗೆ ತಂದೆಯೇ ಭಾಗವತಿಕೆಗೆ ಗುರು.

              ಕರ್ನೂರು ಕೊರಗಪ್ಪ ರೈಗಳ ನೇತೃತ್ವದ ಕದ್ರಿಮೇಳವು ತುಳು ಪ್ರಸಂಗದ ಪ್ರದರ್ಶನದಲ್ಲಿ ಜನಮಾನಸವನ್ನು ಹೊಕ್ಕ ಕಾಲ. ಆಗ ರಘುರಾಮ ಹೊಳ್ಳರು ಮೇಳದಲ್ಲಿ ಭಾಗವತ. 'ಗೆಜ್ಜೆಪೂಜೆ' ಪ್ರಸಂಗಕ್ಕೆ ಜನಮಾನ್ಯತೆ. ಪ್ರಸಂಗ, ಮೇಳ, ಕಲಾವಿದರಿಗೆ ಕೀರ್ತಿ. ಭಾಗವತ ರಘುರಾಮರು ಫೀನಿಕ್ಸ್ ಹಕ್ಕಿಯಂತೆ ಎದ್ದು ಬಂದರು. ಯಕ್ಷಲೋಕದಲ್ಲಿ ಹಾರಿದರು. ಹಲವರ ಹುಬ್ಬು ಮೇಲೇರಿತು. ಬೆನ್ನುತಟ್ಟಿದರು. ಅಂದು ಕೈಹಿಡಿದ ಯಶಲಕ್ಷ್ಮಿಯು ಹೊಳ್ಳರ ಭಾಗವತಿಕೆಯ ಸಿರಿಗೆ ಬೀಸುಹೆಜ್ಜೆ ನೀಡಿದಳು.

                  ಶ್ರೀ ಕ್ಷೇತ್ರ ಧರ್ಮಸ್ಥಳ ಮೇಳವು ಸಮರ್ಥ ಕಲಾವಿದರೊಂದಿಗೆ ಕಡತೋಕ ಭಾಗವತರ ನಿರ್ದೇಶನದಲ್ಲಿ ವಿಜೃಂಬಿಸುತ್ತಿತ್ತು. ಪೂಜ್ಯ ಖಾವಂದರ ಅಪೇಕ್ಷೆಯಂತೆ ರಘುರಾಮ ಹೊಳ್ಳರು ಶ್ರೀ ಧರ್ಮಸ್ಥಳ ಮೇಳಕ್ಕೆ ಭಾಗವತರಾಗಿ ಸೇರ್ಪಡೆ. ಮೇಳದಲ್ಲಾಗ ಪುರಾಣ ಪ್ರಸಂಗಗಳ ಪ್ರದರ್ಶನ, ಪ್ರಬುದ್ಧ ಕಲಾವಿದರು, ಗಟ್ಟಿ ಹಿಮ್ಮೇಳ, ಚಿಕಿತ್ಸಕ ನೋಟದ ಪ್ರೇಕ್ಷಕರು, ತೂಗಿ ಅಳೆದು ಮಾತನಾಡುವ ವಿಮರ್ಶಕರು, ಕಡತೋಕ ಭಾಗವತರ ಪ್ರಭಾವಲಯ, ಚಿಪ್ಪಾರು ಕೃಷ್ಣಯ್ಯ ಬಲ್ಲಾಳರ ಮದ್ದಳೆ-ಚೆಂಡೆಯ ಮಿಡಿತ ನುಡಿತಗಳ ಅನುರಣನ.. ಇವಿಷ್ಟನ್ನು ಎದುರಿಸುವುದು ರಘುರಾಮರಿಗೆ ಮೊದಲ ಸವಾಲು. ಯಾಕೋ ಸವಾಲುಗಳಿಗೆ ಎದೆಯೊಡ್ಡುವುದು ಹುಟ್ಟು ಗುಣ. ಅಲ್ಲಿಂದ ನಿರಂತರ ಅಧ್ಯಯನ.

                 ಬಹುಶಃ ರಂಗ ಸವಾಲನ್ನು ಸಮರ್ಥವಾಗಿ ಎದುರಿಸುವ ಗಟ್ಟಿತನ ನೀಡಿರುವುದು ಕದ್ರಿ ಮೇಳದ ಹಿಮ್ಮೇಳ. ಯಕ್ಷಗುರು ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರು ಚೆಂಡೆ, ಮದ್ದಳೆ ಸಾಥಿಯಾಗಿದ್ದು ಹೊಳ್ಳರ ಭಾಗವತಿಕೆಯನ್ನು ಹರಿತ ಮಾಡಿದ್ದರು. ನಾವು ಹಿಮ್ಮೇಳದಲ್ಲಿ ಮಾಡುತ್ತಿದ್ದ ಹೊಂದಾಣಿಕೆಗಳು ಸ್ವಾರಸ್ಯಕರ. ಚೆಂಡೆಯಲ್ಲಿ ನಾನೇನಾದರೂ ಹೊಸತಾದ ಒಂದು ನಾಟ್ಯದ ಪೆಟ್ಟು ತೆಗೆದುಕೊಟ್ಟರೂ ಅದನ್ನು ಕೂಡಲೇ ಗ್ರಹಿಸಿ, ಅದೇ ರೀತಿ ತಾಳ ಹೊಂದಿಸಿ, ವೇಷಧಾರಿಗೆ ಅವಕಾಶಕೊಟ್ಟು, ಅವರ ಪ್ರತಿಭೆ ಎದ್ದು ಕಾಣುವಂತೆ ಮಾಡುತ್ತಿದ್ದರು. ಗೆಜ್ಜೆ ಪೂಜೆಯು ಜನಾಕರ್ಷಣೆ ಪಡೆದು ದಾಖಲೆ ನಿಮರ್ಿಸಿದ್ದು ಹೊಳ್ಳರ ಭಾಗವತಿಕೆಯಲ್ಲಿ... ಹೊಳ್ಳರ ಬಗೆಗೆ ಮಾಂಬಾಡಿಯವರ ಮನಸ್ಸಿನ ಮಾತು.

                 ಶ್ರೀ ಧರ್ಮಸ್ಥಳ ಮೇಳದಲ್ಲಿ ರಘುರಾಮರು ಕಡತೋಕರ ಭಾಗವತಿಕೆಯ ಪ್ರಖರತೆಗೆ ಮೈಯೊಡ್ಡಿದರೂ ಕರಕಲಾಗಲಿಲ್ಲ. ಬೆಂದು ಹದವಾದರು. ಕ್ಷಣ ಕ್ಷಣವೂ ಮೈಯೆಲ್ಲಾ ಕಣ್ಣಾದರು. ರಂಗಸೂಕ್ಷ್ಮಗಳನ್ನು ಅಭ್ಯಸಿಸಿದರು. ಚಿಪ್ಪಾರರ ನುಡಿತಗಳನ್ನು ಬೆರಗು ಕಣ್ಣುಗಳಿಂದ ನೋಡಿದರು. ಚೆಂಡೆ-ಮದ್ದಳೆಯ ನುಡಿತದ ಜ್ಞಾನ ಇದ್ದುದರಿಂದ ಬೆರಗಾಗಲಿಲ್ಲ. ಮೇಳದಲ್ಲಿ ಪೂರ್ವಾರ್ಧ ರಘುರಾಮರ ಪಾಳಿ. ಬಳಿಕ ಕಡತೋಕರ ಸರದಿ. ರಘುರಾಮರು ಹಾಡಿ ರಂಗವಿಳಿದ ಬಳಿಕವೂ ರಂಗದ ಗುಂಗು ಉಸಿರಾಡುತ್ತಿತ್ತು.

              ಕಡತೋಕ ಭಾಗವತರ ನಿವೃತ್ತಿಯ ಬಳಿಕ ಮೇಳದಲ್ಲಿ ಹೊಳ್ಳರು ಮುಖ್ಯ ಭಾಗವತ. ಅಮೃತ ಸೋಮೇಶ್ವರ, ರಾಘವ ನಂಬಿಯಾರ್, ಬೊಟ್ಟಿಕೆರೆ ಪುರುಷೋತ್ತಮ ಪೂಂಜರಂತಹ ಹಿರಿಯ ಸಾಹಿತಿಗಳ ಪ್ರಸಂಗಗಳಿಗೆ ಭಾಗವತಿಕೆ ಮತ್ತು ರಂಗಕ್ರಿಯೆಯ ಮೂಲಕ ಹೊಸ ಸಾಧ್ಯತೆಗಳನ್ನು ತೋರಿದ್ದರು. ಯಕ್ಷಾಸಕ್ತರು ಪ್ರದರ್ಶನಗಳಿಗೆ ಮುಗಿಬೀಳುವಷ್ಟು ಪ್ರಸಂಗಗಳೂ ಜನಪ್ರಿಯವಾದುವು.

               ಇವರ ಭಾಗವತಿಕೆಯಲ್ಲಿ ವೇಷ ಮಾಡುವುದು, ತಾಳಮದ್ದಳೆಯಲ್ಲಿ ಅರ್ಥ ಹೇಳುವುದು ನಿರಾಯಾಸ. ಯಾಕೆಂದರೆ ಅವರು ಕೂಡಾ ನಿರಾಯಾಸವಾಗಿ ರಂಗದಲ್ಲಿರುತ್ತಾರೆ. ಪಾತ್ರದೊಂದಿಗೆ ತಾನೂ ಪಾತ್ರವಾಗುತ್ತಾರೆ. ರಂಗವನ್ನು ಸೊರಗದಂತೆ ಬೆಳಗ್ಗಿನ ತನಕ ಜೀವಂತವಾಗಿಡುವ ಜ್ಞಾನ ಸಿದ್ಧಿಸಿದೆ.

            ಹೊಳ್ಳರ ಹಾಡುಗಳಿಗೆ ಒಮ್ಮೆ ಕಿವಿಯಾದರೆ ಅವ್ಯಕ್ತವಾದ ಮೋಹಕ ಶಕ್ತಿ ನಮ್ಮನ್ನು ಆವರಿಸುತ್ತದೆ. ಎಲ್ಲಾ ರಸಗಳಿಗೆ ಒಗ್ಗುವ ಕಂಠ. ಇವರಲ್ಲಿ ಪ್ರಸಂಗದ ಸಾಹಿತ್ಯಗಳಿಗೆ ಮಾನ. ಅನಾವಶ್ಯವಾಗಿ ಅಕ್ಷರಗಳನ್ನು ಲಂಬಿಸುವ, ಸಾಹಿತ್ಯ ಲೋಪ ಮಾಡಿದ್ದನ್ನು ನಾನು ನೋಡಿಲ್ಲ. ರಂಗದಲ್ಲಿರುವಷ್ಟೂ ಹೊತ್ತು 'ತಾನು ಭಾಗವತ' ಎಂಬ ಪ್ರಜ್ಞೆ ಜಾಗೃತ. ರಂಗದಲ್ಲಿ ಪಾತ್ರವು ಸೊರಗಿದಾಗ ಸನ್ನಿವೇಶವನ್ನು ಕುಂಠಿತಗೊಳಿಸುವ, ವಿಜೃಂಬಿಸಿದಾಗ ಲಂಬಿಸುವಂತೆ ಮಾಡುವ ರಂಗನಿರ್ದೇಶಕ. ನಿಜಾರ್ಥದಲ್ಲಿ ಒಂದನೇ ವೇಷಧಾರಿ.

                 "ಯಕ್ಷಗಾನದ ಶಿಸ್ತನ್ನು ಎಲ್ಲಿಯೂ ಮೀರದೆ ನಗುನಗುತ್ತಾ ಅನುಭವಿಸುತ್ತಾ ಅವರು ಹಾಡುವ ರೀತಿ ಅಷ್ಟು ಚಂದ ಮತ್ತು ಅಂದ," ಹಿರಿಯ ಮದ್ದಳೆಗಾರ ಪದ್ಯಾಣ ಶಂಕರನಾರಾಯಣ ಭಟ್ಟರು ಹೊಳ್ಳರ ರಂಗಕಸುಬನ್ನು ಬಣ್ಣಿಸುತ್ತಾರೆ. ಆಧುನಿಕ ಪ್ರೇಕ್ಷಕ ವರ್ಗದ ಆಸಕ್ತಿಯನ್ನು ಗೌರವಿಸುತ್ತಾ, ಯಕ್ಷಗಾನ ಚೌಕಟ್ಟನ್ನು ಮೀರದೆ, ಕಲಾವಿದರಿಗೆ ತೊಂದರೆಯಾಗದಂತೆ ಹಾಡಿ ಪ್ರದರ್ಶನಕ್ಕೆ ನ್ಯಾಯ ಒದಗಿಸುವ ಅವರ ಒಳಮನಸ್ಸು ಸದಾ ಎಚ್ಚರದಲ್ಲಿರುತ್ತದೆ.

               ಬಹುತೇಕ ಎಲ್ಲಾ ಭಾಗವತರು ಮೆಚ್ಚುವ ಭಾಗವತ. ದ್ವಂದ್ವ ಹಾಡುಗಾರಿಕೆಗೆ ಒಗ್ಗುವ ಶಾರೀರ. ಸಹ ಕಲಾವಿದನನ್ನು ಶೋಷಿಸದ ಜಾಯಮಾನ. ಎಷ್ಟೋ ಸಲ ವಿಕ್ಷಿಪ್ತವಾಗಿ ಕಾಣುತ್ತಾರೆ. ತಮ್ಮಷ್ಟಕ್ಕೆ ತಾವಿದ್ದುಕೊಳ್ಳುವ ಗುಣ. ಅನಾವಶ್ಯಕವಾಗಿ ಹೆಚ್ಚು ತೆರೆದುಕೊಳ್ಳರು. ಒಮ್ಮೆ ತೆರೆದುಕೊಂಡ ಸ್ನೇಹ ಮತ್ತೆಂದೂ ಮುಚ್ಚಿಕೊಳ್ಳದು. ಮೇಲ್ನೋಟಕ್ಕೆ ಬಿಗುವಾಗಿ ಕಾಣಿಸಿಕೊಳ್ಳುವ ಹೊಳ್ಳರು ಬೀಗಿದ್ದು ಕಡಿಮೆ. ಬೀಗಿದಂತೆ ಕಾಣುವುದು ಸ್ವ-ಭಾವ.

               ಕೆಲವೊಂದು ಪೌರಾಣಿಕ ಪ್ರಸಂಗಳನ್ನು ನೆನಪಿಸಿಕೊಂಡರೆ ಬಲಿಪ ನಾರಾಯಣ ಭಾಗವತರು, ಪದ್ಯಾಣ ಗಣಪತಿ ಭಟ್, ದಿನೇಶ ಅಮ್ಮಣ್ಣಾಯರು.. ಹೇಗೆ ನೆನಪಾಗುತ್ತಾರೋ, ಅದೇ ರೀತಿ ಧರ್ಮಸ್ಥಳ ಮೇಳವು ಆಡಿ ಇತಿಹಾಸ ನಿರ್ಮಿಸಿದ ಕಾಯಕಲ್ಪ, ತ್ರಿಪುರ ಮಥನ, ರಂಭಾ ರೂಪರೇಖಾ, ಸಹಸ್ರಕವಚ ಮೋಕ್ಷ, ಪರೀಕ್ಷಿತ, ಮಹಾಬ್ರಾಹ್ಮಣ.. ಮೊದಲಾದ ಪ್ರಸಂಗಗಳ ಹಿಂದೆ ಹೊಳ್ಳರ ಹೆಸರು ಅಜ್ಞಾತವಾಗಿ ಮಿಳಿತವಾಗಿದೆ.

                   ಹಿಂದಿ, ಸಂಸ್ಕೃತ ಭಾಷೆಯ ಪ್ರಸಂಗಗಳನ್ನು ಹಾಡಿದ್ದಾರೆ. 'ಯಕ್ಷ ಮಂಜೂಷಾ' ತಂಡದೊಂದಿಗೆ ಕಡಲಾಚೆ ಹಾರಿದ್ದಾರೆ. ಅಭಿಮಾನಿಗಳನ್ನು ಪಡೆದಿದ್ದಾರೆ. ಮಾನ-ಸಂಮಾನಗಳು ಪ್ರಾಪ್ತವಾಗಿವೆ. 'ಕಲಾವಿದನಿಗೆ ಜನರ ಪ್ರೀತಿ-ಅಭಿಮಾನವೇ ಪ್ರಶಸ್ತಿ. ಯಕ್ಷಗಾನವು ಒಪ್ಪುವಂತೆ ರಂಗದಲ್ಲಿ ವ್ಯವಸಾಯ ಮಾಡುವುದೇ ದೊಡ್ಡ ಪ್ರಶಸ್ತಿ, ಎಂದು ಹೊಳ್ಳರೊಮ್ಮೆ ಹೇಳಿದ ಮಾತು ಮರೆಯುವಂತಹುದಲ್ಲ.

                  ಸುಮಾರು ನಾಲ್ಕು ದಶಕಗಳ ಯಕ್ಷಗಾನ ನಂಟು. ಹೊಗಳಿಕೆಗೆ ಮಣೆ ಹಾಕದೆ, ಟೀಕೆಗಳಿಗೆ ಕುಗ್ಗದೆ, ವಿಮರ್ಶೆಗಳನ್ನು ಸವಾಲಾಗಿ ಸ್ವೀಕರಿಸುವ, ಅಭಿಪ್ರಾಯಗಳನ್ನು ಗೌರವಿಸುವ ಪುತ್ತಿಗೆ ರಘುರಾಮ ಹೊಳ್ಳರು ನಮ್ಮ ನಡುವಿನ ಆಪ್ತ ಭಾಗವತ. ಪ್ರಸ್ತುತ ಮಂಗಳೂರಿನಲ್ಲಿ ವಾಸ. ಮಡದಿ ವಾಣಿ. ಶ್ರೀಲಕ್ಷ್ಮೀ, ಶ್ರೀ ವಿದ್ಯಾ ಪುತ್ರಿಯರು.

               ಅವರ ರಂಗ ಬದುಕನ್ನು ಕೃತಿಯ ಮೂಲಕ ದಾಖಲಿಸುವ, ಬೌದ್ಧಿಕ ಗಟ್ಟಿತನವನ್ನು ಅನಾವರಣಗೊಳಿಸುವ, ಸಾಗಿ ಬಂದ ಪಥವನ್ನು ತಿರುಗಿ ನೋಡುವ, ಅದಕ್ಕೆ ಕಾರಣರಾದವರನ್ನು ಗೌರವಿಸುವ ಅಪರೂಪದ 'ರಘುರಾಮಾಭಿನಂದನಮ್' ಸಮಾರಂಭವು ಜುಲೈ 5 ರಿಂದ 7ರ ತನಕ ಮಂಗಳೂರು ಪುರಭವನದಲ್ಲಿ ಜರುಗಿದೆ.