Saturday, October 25, 2014

ದಶಕದ ಮಿರುಗಿನಲ್ಲಿ ಎಡನೀರು ಮೇಳ


               ಕಾಸರಗೋಡು ಜಿಲ್ಲೆಯ ಎಡನೀರು ಶ್ರೀಮಠವು ಕಲಾರಾಧನೆಯ ಕ್ಷೇತ್ರ. ಇಲ್ಲಿ ಸದಾ ಸಂಗೀತ, ನೃತ್ಯ, ಯಕ್ಷಗಾನ ಸುಧೆಯ ಅಮೃತಪಾನ. ದಕ್ಷಿಣಾಮೂರ್ತಿ  ಶ್ರೀ ಗೋಪಾಲಕೃಷ್ಣ ದೇವರ ಸಾನ್ನಿಧ್ಯ. ಈತ ಕಲಾಪ್ರಿಯ. ಇಲ್ಲಿನ ಗುರುಗಳಾದ ಪೂಜ್ಯ ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರಿಗೆ ಯಕ್ಷಗಾನ ಆರಾಧನೆ. ಇದೇ ಉಸಿರು. ಇದು ಸದಾ ಹಸಿರು.
               ಯಕ್ಷಗಾನದ ಉದ್ಧಾಮರ ವಾಗ್ಝರಿಯಲ್ಲಿ ಮಿಂದ ತಾಣವಿದು ನಡೆಯುತ್ತಿದ್ದ ತಾಳಮದ್ದಳೆಗಳೆಲ್ಲಾ  ವಿದ್ವತ್ಗೋಷ್ಠಿಯ ತರಹ. ಪೌರಾಣಿಕ ವಿಚಾರಗಳ ಸೂಕ್ಷ್ಮಾತಿಸೂಕ್ಷ್ಮಗಳ ಮಥನ. ಇದರಿಂದ ತೆಗೆದ ನವನೀತವನ್ನುಣಿಸಿದ ಕಲಾವಿದರ ಗಾಥೆಗಳನ್ನು ಸ್ವಾಮೀಜಿಯವರು ಹೇಳತೊಡಗಿಸಿದರೆ ಒಂದು ಕಾಲಘಟ್ಟದ ಯಕ್ಷ ಸಮೃದ್ಧತೆ ಅನಾವರಣಗೊಳ್ಳುತ್ತದೆ. ಶ್ರೀಮಠದಲ್ಲಿ ತಾಳಮದ್ದಳೆಗಳು ನಿರಂತರ.
                 ಯಕ್ಷಗಾನವನ್ನು ಉತ್ಸವದ ರೀತಿಯಲ್ಲಿ ನಡೆಸಿ, ಅದನ್ನು ಪವಿತ್ರ ಮನೋಭಾವದಿಂದ ನಡೆಸುವ ಉದ್ದೇಶದಿಂದ 'ತಾಳಮದ್ದಳೆ ಸಪ್ತಾಹ'ಗಳ ಪ್ರಸ್ತುತಿ. ಶ್ರೀಮಠವೂ ಸೇರಿದಂತೆ ಕುಮಟಾ, ಅಂಕೋಲ, ಯಲ್ಲಾಪುರ, ಶಿರಸಿ, ಬೆಂಗಳೂರು, ಪುತ್ತೂರು.. ಹಲವೆಡೆ ಸಪ್ತಾಹಗಳ ವೈಭವ. ಪರಿಣಾಮ, ಸಾಮಾಜಿಕವಾಗಿ ಉನ್ನತ ಸ್ತರದಲ್ಲಿರುವ ಅನೇಕರು ಯಕ್ಷಗಾನಕ್ಕೆ ಹತ್ತಿರವಾಗಿದ್ದಾರೆ.
                    ಹತ್ತು ವರುಷಗಳ ಹಿಂದೆ ಮೇಳಕ್ಕೆ ಶ್ರೀಕಾರ. 'ಶ್ರೀ ಗೋಪಾಲಕೃಷ್ಣ ಯಕ್ಷಗಾನ ಮಂಡಳಿ, ಎಡನೀರು' ರೂಪೀಕರಣ. ಎಲ್ಲಾ ಕ್ಷೇತ್ರಗಳಲ್ಲೂ ಯಕ್ಷಗಾನ ಮೇಳಗಳಿವೆ. ಶ್ರೀಮಠಕ್ಕೂ ಮೇಳ ಬೇಕು. ಇದರಿಂದಾಗಿ ಸಮಾಜಕ್ಕೆ ಉತ್ತಮ ಮಾನವೀಯ, ಪೌರಾಣಿಕ ಸಂದೇಶ ನೀಡಬಹುದು, ಎನ್ನುವುದು ಆಶಯ.  ಮೊದಲ ನಾಲ್ಕು ವರುಷ ಟೆಂಟ್ ಮೇಳದ ಜಯಭೇರಿ. ಪ್ರಸಿದ್ಧ ಕಲಾವಿದರ ಗಡಣ. ಶಿಸ್ತುಬದ್ಧ ಪ್ರದರ್ಶನ. ನಾಲ್ದೆಸೆಯಲ್ಲೂ ಯಶಕಂಡಿತು. ಆರ್ಥಿಕವಾಗಿ ಕೈತುಂಬದಿದ್ದರೂ ಭಾವನಾತ್ಮಕವಾಗಿ ಹಲವು ಮನಸ್ಸುಗಳು ತುಂಬಿ ಬಂದಿದ್ದುವು.
                  ಐದನೇ ವರುಷದಿಂದ ಬಯಲಾಟ ಮೇಳವಾಗಿ ಪರಿವರ್ತನೆ. ಕಾಲಮಿತಿ ಪ್ರಯೋಗಕ್ಕೆ ನಿರ್ಧಾರ.  ಸಂಘಟಕರು ಅಪೇಕ್ಷೆ ಪಟ್ಟರೆ ಪೂರ್ಣರಾತ್ರಿ ಪ್ರದರ್ಶನ. ಒಂದೊಂದು ಪ್ರದರ್ಶನದ ಹಿಂದೆ ಪೂಜ್ಯ ಶ್ರೀಗಳ ಸೂಕ್ಷ್ಮನೋಟವಿದೆ. ಪ್ರಸಂಗ ನಿಗದಿ, ಪಾತ್ರ ಹಂಚುವಿಕೆ, ಪ್ರಸಂಗದ ಎಡಿಟಿಂಗ್, ಕಾಲಮಿತಿಗೆ ಹೊಂದುವ ಕಂಪೋಸಿಂಗ್.. ಎಲ್ಲವೂ ಶ್ರೀಗಳ ಯೋಜನೆ, ಯೋಚನೆ.
               ಬಹುತೇಕ ಪ್ರದರ್ಶನಗಳು ಸೇವಾ ರೂಪದ್ದಾದ ಕಾರಣ ಶ್ರೀಮಠದಲ್ಲೇ ನಡೆಯುತ್ತವೆ. ಇಲ್ಲಿ ಜರಗುವ ಕಾರ್ಯಕ್ರಮದಲ್ಲಿ ಸ್ವತಃ ಸ್ವಾಮೀಜಿಯವರು ಭಾಗವತಿಕೆ ಮಾಡುತ್ತಾರೆ. ಇವರ ಹಾಡಿನಲ್ಲಿ ಭಾವತೀವ್ರತೆ, ಭಕ್ತಿಯ ಅಭಿವ್ಯಕ್ತಿಯ ಭಾವಗಳು ಸದಾ ಜಾಗೃತ. ರಂಗದಲ್ಲಿ ಕಲಾವಿದರು ಪಾತ್ರಧಾರಿಗಳು ಸ್ಪಷ್ಟವಾಗಿ ಮಾತನಾಡಬೇಕೆನ್ನುವ ಹಪಾಹಪಿ. ಕಲಾವಿದರು ಅಧ್ಯಯನಶೀಲರಾಗಬೇಕು, ಆಗ ಮಾತ್ರ ಪಾತ್ರಗಳು ಪರಿಪುಷ್ಟವಾಗಿ ರೂಪುಗೊಳ್ಳುತ್ತವೆ ಎನ್ನುವತ್ತ ಕಾಳಜಿ.
                  ಮೇಳವೆಂದಾಗ ಸಹಜವಾಗಿ ಬರುವ, ಬರಬಹುದಾದ ಗೊಣಗಾಟಗಳನ್ನು ಸ್ವಾಮೀಜಿ ಮೌನವಾಗಿ ಅನುಭವಿಸಿದ್ದಾರೆ! ಸಮಸ್ಯೆಗಳನ್ನು ಹತ್ತಿಯಂತೆ ಹಗುರಗೊಳಿಸಿದ್ದಾರೆ. ರಾಚಿ ಬರುವ ಒತ್ತಡಗಳನ್ನು ನಿಯಂತ್ರಿಸಿಕೊಂಡಿದ್ದಾರೆ. ಮೇಳದ ನಿರ್ವಾಹಕರಾದ ಶ್ರೀಮಠದ ಜಯರಾಮ ಮಂಜತ್ತಾಯರು ಹೇಳುತ್ತಾರೆ, "ಹತ್ತು ವಿವಿಧ ಮನಸ್ಸುಗಳಿರುವಾಗ ಅಭಿಪ್ರಾಯದಲ್ಲಿ ವ್ಯತ್ಯಾಸಗಳು ಸಹಜ. ಅದೆಂದೂ ಮೇಳದ ನಿರ್ವಹಣೆ, ಆಟದ ಒಟ್ಟಂದಕ್ಕೆ ತೊಂದರೆ ಮಾಡಿಲ್ಲ. ಎಲ್ಲಾ ಕಲಾವಿದರ ಸಹಕಾರ, ಶ್ರಮ ಗುರುತರ."
                  ಮೇಳದ ಕಲಾವಿದರನ್ನು ಹೊಂದಿಕೊಂಡು ಪ್ರಸಂಗ ನಿರ್ಧಾಾರ. ಸಂಘಟಕರು ಅಪೇಕ್ಷೆ ಪಟ್ಟದ್ದನ್ನೆಲ್ಲಾ ಆಡುವಂತಿಲ್ಲ. ಮೂರು ಗಂಟೆ ಕಾಲಮಿತಿಗೆ ಹೊಂದುವ ಪ್ರಸಂಗಗಳ ಆಯ್ಕೆ. ಹಾಗಾಗಿ ಎಡನೀರು ಮೇಳದ ಆಟಗಳೆಲ್ಲಾ ಕಾಲದ ಮಿತಿಯೊಳಗೆ ಜನಮುಟ್ಟುವ ಪ್ರದರ್ಶನ ನೀಡುತ್ತದೆ. ಭಸ್ಮಾಸುರ ಮೋಹಿನಿ, ವಿಶ್ವಾಮಿತ್ರ ಮೇನಕೆ, ಅಭಿಮನ್ಯು ಕಾಳಗ, ಬಬ್ರುವಾಹನ, ಪಂಚವಟಿ, ದ್ರುಪದ ಗರ್ವಭಂಗ.. ಮೊದಲಾದ ಪ್ರಸಂಗಗಳ ನಿಜಸವಿಯನ್ನು ನೋಡಿಯೇ ಅನುಭವಿಸಬೇಕು. ಅನುಭವಿಗಳ ಗಟ್ಟಿ ಹಿಮ್ಮೇಳ ಪ್ರದರ್ಶನ ಯಶದ ಗುಟ್ಟು.
                  "ಕಳೆದ ವರುಷ ನೂರ ಅರುವತ್ತ ಮೂರು ಪ್ರದರ್ಶನಗಳಾಗಿವೆ. ಎಲ್ಲವೂ ಸೇವಾ ರೂಪದವುಗಳು. ಶ್ರೀಮಠದ ಅಭಿಮಾನಿ ಶಿಷ್ಯವೃಂದ ಮತ್ತು ಭಕ್ತರ ಪ್ರಾಯೋಜಕತ್ವ. ಬಹುತೇಕ ಪ್ರದರ್ಶನವನ್ನು ಶ್ರೀಮಠದಲ್ಲೇ ನಡೆಸುವ ಇಂಗಿತ ಇವರದ್ದು," ಎನ್ನುತ್ತಾರೆ ಜಯರಾಮ ಮಂಜತ್ತಾಯ. ಭಾಗವತರಾದ ದಿನೇಶ ಅಮ್ಮಣ್ಣಾಯ ಮತ್ತು ಹಾಸ್ಯಗಾರ ಬಾಲಕೃಷ್ಣ ಮಣಿಯಾಣಿ ಇವರಿಬ್ಬರು ಇದೇ ಮೇಳದಲ್ಲಿ ಹತ್ತೂ ವರುಷ ವ್ಯವಸಾಯ ಮಾಡಿರುವುದು ಗಮನಾರ್ಹ.
                   ಅಬ್ಬರದ ಪ್ರದರ್ಶನವನ್ನು ಅಪೇಕ್ಷಿಸುವ ಪ್ರೇಕ್ಷಕರು ಎಡನೀರು ಮೇಳದಿಂದ ಸಾತ್ವಿಕ, ಸಂದೇಶ, ಸಂವಾದವಿರುವ ಪ್ರಸಂಗಗಳನ್ನು ಅಪೇಕ್ಷಿಸುವುದು ನೋಡಿದ್ದೇನೆ. ಹೆಚ್ಚಿನ ಪ್ರದರ್ಶನಗಳಲ್ಲಿ ಪ್ರೇಕ್ಷಕರು ಕೂಡಾ ಪ್ರಸಂಗದ ಒಂದು ಪಾತ್ರವೆಂಬಂತೆ ಸ್ಪಂದಿಸುವುದು ಆಶ್ಚರ್ಯ. ದುಃಖದ ಸನ್ನಿವೇಶದಲ್ಲಿ ಪ್ರೇಕ್ಷಕರು ಅತ್ತ ಘಟನೆ ಎಷ್ಟು ಬೇಕು? ಹಾಗಾದರೆ ಮನಮುಟ್ಟುವ ಅಭಿವ್ಯಕ್ತಿಯು 'ಬದಲಾದ ಕಾಲಘಟ್ಟದಲ್ಲೂ' ಮನಸ್ಸನ್ನು ಮುಟ್ಟುತ್ತದೆ, ತಟ್ಟುತ್ತದೆ ಎನ್ನುವುದಕ್ಕೆ ಪುರಾವೆ ಬೇಕಾಗಿಲ್ಲ.
                 ಸಂವಾದಗಳು ದಾರಿತಪ್ಪಿದಾಗ, ಅರ್ಥಗಾರಿಕೆಯಲ್ಲಿ ತಪ್ಪು ನುಸುಳಿದಾಗ, ಅಬದ್ಧ ಪದಪುಂಜಗಳು ನುಸುಳಿದಾಗ ಸ್ವಾಮೀಜಿ ಎಚ್ಚರಿಸುತ್ತಾರೆ, ತಿಳಿಹೇಳುತ್ತಾರೆ.  ಹಾಗಾಗಿ ಎಡನೀರು ಮೇಳದ ಆಟಗಳ ಪಾತ್ರಧಾರಿಗಳಲ್ಲಿ ಬುದ್ಧಿಪೂರ್ವಕವಾದ ಅಬದ್ಧತೆ ತೀರಾ ತೀರಾ ಕಡಿಮೆ. ಕಲೆಯನ್ನು ಸ್ವಾಮೀಜಿ ಎಷ್ಟು ಪ್ರೀತಿಸುತ್ತಾರೋ ಅಷ್ಟೇ ಪ್ರೀತಿ ಕಲಾವಿದರಲ್ಲೂ ಇದೆ. ಈ ಪ್ರೀತಿಯಲ್ಲಿ ಮಗುವಿನ ಮುಗ್ಧತೆಯಿದೆ.
                  ಎಡನೀರು ಮೇಳವು ಹತ್ತು ತಿರುಗಾಟವನ್ನು ಪೂರ್ತಿಗೊಳಿಸಿದೆ. ಸಾಗಿಬಂದ ದಾರಿಯನ್ನು ಮೆಲುಕು ಹಾಕಲು, ಹತ್ತರ ಖುಷಿಯನ್ನು ಹಂಚಿಕೊಳ್ಳಲು ಎಡನೀರು ಶ್ರೀಮಠದ ಶ್ರೀಕೃಷ್ಣ ಸಭಾಮಂದಿರವು ಸಜ್ಜಾಗಿದೆ. ೨೦೧೪ ಅಕ್ಟೋಬರ್ 25, ಶನಿವಾರದಂದು ದಿನಪೂರ್ತಿ ಕಲಾಪ. ವಿಚಾರಗೋಷ್ಠಿ, ತಾಳಮದ್ದಳೆ, ಬಯಲಾಟಗಳ ಸಂಪನ್ನತೆ. ಬರುತ್ತೀರಲ್ಲಾ.