Saturday, March 7, 2015

ಇತಿಹಾಸಕ್ಕೆ ಯಕ್ಷ ಬೆಳಕು : 'ಜಗಜಟ್ಟಿ ಬಾಚ'

              'ಬಾಚ'ನ ಪಾತ್ರದಲ್ಲಿ ಮಧೂರು ರಾಧಾಕೃಷ್ಣ ನಾವಡ ಮತ್ತು ರಾಜನಾಗಿ ಪೆರ್ಮುದೆ ಜಯಪ್ರಕಾಶ್ ಶೆಟ್ಟಿ
               ಕಲಾವಿದರು : ಈಶ್ವರ ಪ್ರಸಾದ್ ಧರ್ಮಸ್ಥಳ, ಪುತ್ತೂರು ಶ್ರೀಧರ ಭಂಡಾರಿ, ಉಬರಡ್ಕ ಉಮೇಶ ಶೆಟ್ಟಿ    


 ತುಳುನಾಡಿನ ಸಾಂಸ್ಕೃತಿಕ ಇತಿಹಾಸವು ಸಮೃದ್ಧ. ವಿವಿಧ ಉಪಾಧಿಗಳ ಮೂಲಕ ಜೀವಂತ. ಸಂಶೋಧಕರು ಅಲ್ಲಿಲ್ಲಿ ಸಿಗುವ ವಿರಳ ದಾಖಲೆಗಳ ಎಸಳುಗಳ ಜಾಡಿನಲ್ಲಿ ಸಾಗಿ ಸತ್ಯಾಂಶವನ್ನು ಇತಿಹಾಸಕ್ಕೆ ಹೊಸೆದಿದ್ದಾರೆ. ಕಾಲಗರ್ಭದಲ್ಲಿ ಸಂದು ಹೋದ ಇಂತಹ ಐತಿಹಾಸಿಕ ವ್ಯಕ್ತಿ 'ಪುಳ್ಕೂರು ಬಾಚ'ನ ಸಾಹಸಗಾಥೆಯನ್ನು ಈಚೆಗೆ ಯಕ್ಷಗಾನ ರಂಗದಲ್ಲಿ ಪ್ರದರ್ಶಿಸಲಾಯಿತು. ಕರ್ಣಾಕರ್ಣೀಕೆಯಾಗಿ ದಂತಕಥೆಗಳ ಮೂಲಕ ಬಾಚನ ಬದುಕನ್ನು ಕೇಳಿದ್ದ ಮಂದಿಗೆ ಅಂದು ಪುಳಕದ ಅನುಭವ.
              ಮಾರ್ಚ್  1. ಕಾಸರಗೋಡು ಜಿಲ್ಲೆಯ ಪುಳ್ಕೂರು ಶ್ರೀ ಮಹಾದೇವ ದೇವಸ್ಥಾನದ ಬ್ರಹ್ಮಕಲಶೋತ್ಸವದ ಸಂದರ್ಭ. 'ಜಗಜಟ್ಟಿ ಬಾಚ' ಎನ್ನುವ ಆಖ್ಯಾನದ ಯಕ್ಷಗಾನದ ಪ್ರದರ್ಶನ. ವೃತ್ತಿ, ಹವ್ಯಾಸಿ ಕಲಾವಿದರ ಸಮ್ಮಿಲನ. ಪ್ರದರ್ಶನದ ಸಂಪನ್ನತೆಗೆ ಸಾಕ್ಷಿಯಾದವರು ಮೂರು ಸಾವಿರಕ್ಕೂ ಮಿಕ್ಕಿದ ಯಕ್ಷಾಭಿಮಾನಿಗಳು. ಶ್ರದ್ಧೆಯ ಚೇತನ 'ಬಾಚ'ನ ಜೀವನ ಸಂದೇಶವನ್ನು ಬಾಚಿಕೊಳ್ಳುವ ಅವಕಾಶ.
             ಮಧೂರು ಸಮೀಪದ ಸಿರಿಬಾಗಿಲು ಗ್ರಾಮೀಣ ಪ್ರದೇಶ.  ಪುಳ್ಕೂರು ಕ್ಷೇತ್ರಕ್ಕೂ ಬಾಚನಿಗೂ ಹತ್ತಿರದ ಸಂಬಂಧ. ತನ್ನ ಬದುಕಿನ ವಿವಿಧ ಕ್ಷಣಗಳನ್ನು ಪುಳ್ಕೂರು, ಕೂಡ್ಲು... ಪರಿಸರದಲ್ಲಿ ಕಳೆದ ಬಾಚನ ಹೆಸರು ಈ ಭಾಗದಲ್ಲಿ ಮನೆಮಾತು. ಐತಿಹಾಸಿಕ ವಿಚಾರ ಒಂದಾದರೆ, ಜನರ ಬಾಯಲ್ಲಿ ವಿವಿಧ ದಂತಕಥೆಗಳ ಮೂಲಕ ಬಾಚ ಈಗಲೂ ಪ್ರಸ್ತುತ.
            ಸಂಶೋಧಕ, ಸಾಹಿತಿ ಕೀರ್ತಿಶೇಷ ಸಿರಿಬಾಗಿಲು ವೆಂಕಪ್ಪಯ್ಯಯವರು ಇತಿಹಾಸದ ಒಳಹೊಕ್ಕು ಹೊರಗೆಳೆದ ಬಾಚನ ಜೀವನ ಚರಿತ್ರೆಯು ಕಾಸರಗೋಡು ಜಿಲ್ಲೆಯ ಕನ್ನಡ ಪಾಠದಲ್ಲಿ ಪಠ್ಯವಾಗಿತ್ತು. ಅದನ್ನು ಯಕ್ಷಗಾನದ ಪ್ರಸಂಗಕ್ಕೆ ಹೊಂದುವಂತೆ ಅವರ ಚಿರಂಜೀವಿ, ಭಾಗವತ ಸಿರಿಬಾಗಿಲು ರಾಮಕೃಷ್ಣ ಮಯ್ಯರು ಕಥಾ ಹಂದರ ರೂಪಿಸಿದ್ದರು. ಇದಕ್ಕೆ ಪ್ರಸಂಗಕರ್ತ ಮಧೂರು ವೆಂಕಟಕೃಷ್ಣ ಪದ್ಯಗಳನ್ನು ರಚಿಸಿದ್ದಾರೆ. ಪತ್ರಕರ್ತ ರಾಧಾಕೃಷ್ಣ ಉಳಿಯತ್ತಡ್ಕ, ಎಂ.ನಾ ಚಂಬಲ್ತಿಮಾರ್ ಕಥೆಗೆ ಪೂರಕವಾದ ಇತಿಹಾಸ ಶೋಧನೆ ಮಾಡಿದರೆ, ರಾಮಕೃಷ್ಣ ಮಯ್ಯರೊಂದಿಗೆ ಶೇಣಿ ವೇಣುಗೋಪಾಲ ರಂಗವಿನ್ಯಾಸ ಮಾಡಿದ್ದಾರೆ. ಹೀಗೆ ವಿವಿಧ ಕಲಾ ಮನಸ್ಸುಗಳ ರಸಪಾಕ 'ಜಗಜಟ್ಟಿ ಬಾಚ'.
               ಬಾಚನ ಕಥೆ ಅಂದಾಗ ಕೇವಲ ಆತನ ಚರಿತ್ರೆ ಮಾತ್ರವಲ್ಲ. ತುಳುನಾಡಿದ ಪ್ರಬುದ್ಧ ಜನಜೀವನ, ಅಲ್ಲಿನ ಸಹಬಾಳ್ವೆ, ಕ್ರೀಡೆಗಳು, ಮನೋರಂಜನೆ, ಕೃಷಿ, ಕಂಬಳ.. ಎಲ್ಲವೂ ಮಿಳಿತವಾಗಿದೆ. ಕುಂಬಳೆಯ ಜಯಸಿಂಹ ಮಹಾರಾಜನ ಇತಿಹಾಸ, ಪುಳ್ಕೂರು ದೇವಳದ ಐತಿಹ್ಯ, ಕದಂಬ ವಂಶಸ್ಥರ ಆಳ್ವಿಕೆ, ಕೂಡ್ಲು ಶ್ಯಾನುಭಾಗ್ ಮನೆತನದ ಚರಿತ್ರೆಗಳು ಪ್ರಸಂಗದಲ್ಲಿವೆ. ಜಟ್ಟಿ ಕಾಳಗದ ಮಲ್ಲ ಬಾಚನ ಶಾರೀರಿಕ ಶಕ್ತಿಯ ದ್ಯೋತಕವಾದ - ಬಂಡೆಕಲ್ಲು, ಅರೆಯುವ ಕಲ್ಲು, ವೀರಕಲ್ಲು ಎತ್ತುವ, ಕೈಯಿಂದಲೇ ಕೊಬ್ಬರಿಯನ್ನು ಹಿಂಡಿ ಎಣ್ಣೆ ತೆಗೆಯುವ - ವಿವಿಧ ಸನ್ನಿವೇಶಗಳನ್ನು ಪರಿಣಾಮಕಾರಿಯಾಗಿ ಕಲಾವಿದರು ಪ್ರದರ್ಶಿಸಿದರು.
              ಪ್ರಸಿದ್ಧ ಕಲಾವಿದ ರಾಧಾಕೃಷ್ಣ ನಾವಡ ಮಧೂರು 'ಬಾಚ'ನ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಕುರಿಯ ಗಣಪತಿ ಶಾಸ್ತ್ರಿ, ಸಿರಿಬಾಗಿಲು ರಾಮಕೃಷ್ಣ ಮಯ್ಯರ ಸಿರಿಕಂಠದ ಭಾಗವತಿಕೆ. ಪುತ್ತೂರು ಶ್ರೀಧರ ಭಂಡಾರಿ, ಜಯಪ್ರಕಾಶ್ ಶೆಟ್ಟಿ ಪೆರ್ಮುದೆ, ಉಬರಡ್ಕ ಉಮೇಶ ಶೆಟ್ಟಿ, ಶೇಣಿ ವೇಣಗೋಪಾಲ, ಮೊವ್ವಾರು ಬಾಲಕೃಷ್ಣ, ಮಹಾಬಲೇಶ್ವರ ಭಟ್ ಭಾಗಮಂಡಲ, ಪಡುಮಲೆ ಜಯರಾಮ ಪಾಟಾಳಿ, ಸೂರಂಬೈಲು ರಾಮಚಂದ್ರ ಹೊಳ್ಳ... ಮೊದಲಾದ ಕಲಾವಿದರು ಭಾಗವಹಿಸಿದ್ದರು.
            ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಆಯೋಜನೆಯ ಈ ಕಾರ್ಯಕ್ರಮದ ರೂವಾರಿ ರಾಮಕೃಷ್ಣ ಮಯ್ಯ ಹೇಳುತ್ತಾರೆ, "ಪುಳ್ಕೂರಿನಂತಹ ಹಳ್ಳಿ ಪ್ರದೇಶದಲ್ಲಿ ಜರುಗಿದ ಈ ಪ್ರಸಂಗಕ್ಕೆ  ಸಾವಿರಗಟ್ಟಲೆ ಕಲಾಭಿಮಾನಿಗಳು ಸಾಕ್ಷಿಯಾದುದು ಹೆಮ್ಮೆಯ ವಿಚಾರ. ಐತಿಹಾಸಿಕ ಪುರುಷ, ಈ ಪ್ರದೇಶದ ಅಭಿಮಾನದ ಮೂರ್ತಿಯನ್ನು ಜನರು ಸ್ವೀಕರಿಸಿದ ಬಗೆ ಅನನ್ಯ."
              ಪುಳ್ಕೂರು ಮಹಾದೇವನಿಗೆ ಬ್ರಹ್ಮಕಲಶದ ಮೂಲಕ ಚೈತನ್ಯ ವೃದ್ಧಿಯಾಗುವ ಸಂಭ್ರಮ. ಇದೇ ಕ್ಷೇತ್ರದ ಇತಿಹಾಸಕ್ಕೆ ಸೇರಿ ಹೋದ ಬಾಚನ ಬದುಕಿನ ಗಾಥಾಕ್ಕೆ ಅಕ್ಷರ ರೂಪ, ಕಲಾ ರೂಪ ನೀಡುವ ಮೂಲಕ ಚೈತನ್ಯವನ್ನು ಮರಳಿ ತಂದ ಸಿರಿಬಾಗಿಲು ರಾಮಕೃಷ್ಣ ಮಯ್ಯ ಮತ್ತು ಅವರ ಹೆಗಲೆಣೆಗಾಗಿ ದುಡಿದ ಎಲ್ಲರ ಅಜ್ಞಾತ ಶ್ರದ್ಧಾ ಮನಸ್ಸುಗಳ ಶ್ರಮಕ್ಕೆ ನಮನ.