Wednesday, April 15, 2015

ಭಾವದೆತ್ತರಕ್ಕೆ ಏರಿದ 'ಬ್ಯಾಲೆ'

           ನಮ್ಮ ಯಕ್ಷಗಾನ ಪಾತ್ರಗಳು ಯಾಕೆ ಭಾವ ಶುಷ್ಕವಾಗಿದೆ. ಮಾತು, ಕುಣಿತಗಳ ಮಧ್ಯೆ ಭಾವಗಳು ಯಾಕೆ ಅದ್ರ್ರತೆಯನ್ನು ಕಳೆದುಕೊಂಡಿದೆ. ಒಂದು ಕಾಲಘಟ್ಟದಲ್ಲಿ ನಳದಮಯಂತಿ, ಹರಿಶ್ಚಂದ್ರ ಪ್ರಸಂಗಗಳು ರಂಗದಲ್ಲಿ ವೈಭವ ಪಡೆದಿತ್ತಲ್ಲಾ. ಈ ಪ್ರಸಂಗಗಳು ಯಾಕೆ ನೇಪಥ್ಯಕ್ಕೆ ಸರಿಯುತ್ತಿದೆ.  ರಂಗಭೂಮಿಯ ಮಿತಿಯೋ? ಭಾವದೆತ್ತರಕ್ಕೆ ಏರಲಾಗದ ಕಲಾವಿದನ ಅಸಹಾಯಕತೆಯೋ? ಅಥವಾ ಕಾಲದ ಕಾಟವೋ..?
          ಪುತ್ತೂರಿನಲ್ಲಿ ಜರುಗಿದ 'ಪಂಚವಟಿ' ಪ್ರಸಂಗದ 'ಯಕ್ಷಗಾನದ ಬ್ಯಾಲೆ'ಯನ್ನು ವೀಕ್ಷಿಸುತ್ತಿದ್ದಾಗ ಮಿಂಚಿ ಮರೆಯಾದ ಸಂದೇಹಗಳಿವು. ಪಂಚವಟಿ ಆಖ್ಯಾನವು ತೆಂಕು-ಬಡಗುಗಳಲ್ಲಿ ತಾಳಮದ್ದಳೆ, ಆಟಗಳ ಮೂಲಕ ಹೆಚ್ಚು ಪ್ರದರ್ಶನಗಳಾಗುತ್ತಿವೆ. ಹವ್ಯಾಸಿ ಕ್ಷೇತ್ರದಲ್ಲಂತೂ ಈ ಪ್ರಸಂಗವನ್ನು ಬಿಟ್ಟಿರಲಾರದಷ್ಟು ಬಂಧ. ರಂಗದಲ್ಲಿ ಮುಖ್ಯವಾಗಿ ರಾಮ, ಸೀತೆ, ಮಾಯಾ ಶೂರ್ಪನಖಿ, ರಾವಣ ಸನ್ಯಾಸಿ.. ಪಾತ್ರಗಳು 'ಪದ್ಯಕ್ಕೆ ಅರ್ಥಹೇಳುವ ಜೀವಂತ ಮೂರ್ತಿ'ಗಳಾದುವೋ ಎಂದು ತೋರುತ್ತವೆ. ರಾಮನಲ್ಲಿ ದುಗುಡವನ್ನು ಹೇಳಿಕೊಳ್ಳುವ ಸೀತೆಯ ಮುಖ ಬಾಡುವುದಿಲ್ಲ, ಮಾಯಾಶೂರ್ಪನಖೆಯಲ್ಲಿ ಲಾಸ್ಯದ ಬದಲಿಗೆ ರಂಗವಿಡೀ ಕುಣಿಯುವ ಹಠ.. ಕುಣಿಸುವವರಿದ್ದಾಗ ಕುಣಿಯುವವರಿದ್ದಾರೆನ್ನಿ...!
               ಭಾವನೆಗಳನ್ನು ಮೊಗೆದು ಕೊಡುವಲ್ಲಿ ಬ್ಯಾಲೆ ಯಶಸ್ಸಾಗಿದೆ. ಸೀತೆ, ಮಾಯಾ ಶೂರ್ಪನಖಿ, ಲಕ್ಷ್ಮಣ, ಘೋರ ಶೂರ್ಪನಖಿ, ರಾವಣ ಸನ್ಯಾಸಿ, ಜಟಾಯು.. ಪಾತ್ರಗಳು ಉತ್ತಮವಾಗಿ ಮೂಡಿ ಬಂದುವು. ಪಾತ್ರಗಳ ಅಭಿನಯಗಳು ಅವ್ಯಕ್ತವಾಗಿ ಪ್ರೇಕ್ಷಕನ ಮನದಲ್ಲಿ ಮಾತಾಗುವಷ್ಟು ಪರಿಣಾಮ ಬೀರಿದೆ. ಒಂದು ಪ್ರದರ್ಶನದ ಗರಿಷ್ಠ ಸಾಧ್ಯತೆ ಇಷ್ಟಾದರೂ ಆಗಬೇಕಲ್ಲಾ. ವಿದ್ವಾನ್ ಸುಧೀರ್ ರಾವ್ ಕೊಡವೂರು ಅವರ ಸುಶ್ರಾವ್ಯ ಭಾಗವತಿಕೆ, ವಿದ್ವಾನ್ ಅನಂತ ಪಾಠಕ್ ಅವರ ಮೃದಂಗದ ದನಿಭಾಷೆ, ರಾಮ ಬಾಯರಿಯವರ ಚೆಂಡೆಯ ನುಡಿತಗಳು ರಂಗದೊಳಗೆ ಮಿಳಿತಗೊಂಡಿದ್ದುವು.  ಪಾತ್ರಗಳಲ್ಲಿ ಭಾವವನ್ನು ಎತ್ತಿ ಕೊಟ್ಟ, ಪ್ರೇಕ್ಷಕರ ಹೃದಯ ತಟ್ಟುವಲ್ಲಿ ಗೆದ್ದ ರವಿಕುಮಾರ್ ಮೈಸೂರು ಅವರ ವಯೋಲಿನ್ ಮೆಚ್ಚಿಕೊಂಡವರು ನೂರಾರು ಮಂದಿ. ಬೆಳ್ತಂಗಡಿಯ ಹರಿದಾಸ ಡೋಗ್ರ ಅವರ ಸ್ಯಾಕ್ಸೋಫೋನ್ ವಾದನ.
           "ಕಾರಂತರು ಯಕ್ಷಗಾನವನ್ನು ಮಾತಿಲ್ಲದ ಮೂಕಿಯನ್ನಾಗಿ ಮಾಡಿದರು," ಎನ್ನುವ ಅಪವಾದ ಬ್ಯಾಲೆಯ ಆರಂಭದ ದಿವಸಗಳಲ್ಲಿ ಬಂದಿತ್ತು. ನನಗನ್ನಿಸುತ್ತದೆ, ಪಾತ್ರಗಳನ್ನು ಮೂಕ ಮಾಡಿದ್ದರಿಂದ ಅವುಗಳಿಗೂ ಒಂದು ಮನಸ್ಸಿದೆ, ಭಾವವಿದೆ, ಉದ್ದೇಶವಿದೆ ಎಂದು ಅಭಿನಯದಿಂದಲೇ ತಿಳಿಯುವಂತಾಯಿತು. ಒಂದಷ್ಟು ಸಮಯದ ಹಿಂದಿನ ನಮ್ಮ ಆಟದ ರಂಗದಲ್ಲಿ ಕುಣಿದ ಕಲಾವಿದರು ಪಾತ್ರಗಳಿಗೆ ಭಾವ ತುಂಬಿದ್ದರಿಂದ ಅವೆಲ್ಲಾ ಈಗ ದಂತಕತೆಗಳಾಗಿವೆ. ಹಾಗಾದರೆ ಈಗಿನ ಪಾತ್ರಗಳು ಮುಂದೆ ಹೇಗೆ ದಂತಕಥೆಗಳಾದಾವು? ನೋಡೋಣ.
           ಬೆಂಗಳೂರಿನ ಕರ್ನಾಾಟಕ ಕಲಾ ದರ್ಶಿನಿ(ರಿ)ಯ ತಂಡ ಡಾ.ಕೆ.ಶಿವರಾಮ ಕಾರಂತ ಉತ್ಸವದ ಆಶಯವನ್ನಿಟ್ಟುಕೊಂಡು ಕನ್ನಾಡಿನಾದ್ಯಂತ ಬ್ಯಾಲೆಯನ್ನು ಪ್ರದರ್ಶನ ಮಾಡುತ್ತಿದೆ. ತರಬೇತಿಯನ್ನು ಪಡೆದ ಕಲಾವಿದರ ಪರಿಶ್ರಮ ರಂಗದಲ್ಲಿ ಎದ್ದು ಕಾಣುತ್ತದೆ. ಕಾರಂತರಿದ್ದಾಗ ಬ್ಯಾಲೆಯ ಒಂದೆರಡು ಪ್ರದರ್ಶನವನ್ನು ನೋಡಿದ ನೆನಪು. ಆಗಿನಷ್ಟಲ್ಲದಿದ್ದರೂ ಆ ಪರಂಪರೆಯನ್ನು ಉಳಿಸುವ, ಕಾರಂತರ ಕೂಸಿನ ಆಶಯಕ್ಕೆ ಮರುಹುಟ್ಟು ಕೊಡುವ ಕಲಾದರ್ಶಿನಿಯ ಮುಖ್ಯಸ್ಥ ಶ್ರೀನಿವಾಸ ಸಾಸ್ತಾನರ ಆಶಯ ಈ ಕಾಲದ ಅನಿವಾರ್ಯ.
            ಡಾ.ಕಾರಂತರಿಗೆ ಸಾಹಿತ್ಯ ಎನ್ನುವುದು ಮನಸ್ಸು. ಕಲೆ ಅವರ ಹೃದಯ. ಹಾಗಾಗಿ ಯಕ್ಷಗಾನದ ಕುರಿತಾದ ಆಧ್ಯಯನ, ಲೇಖನ, ಪ್ರದರ್ಶನಗಳು ನೂರಾರು. ರಂಗದಲ್ಲಿ ಸೌಂದರ್ಯ ದೃಷ್ಟಿ, ಸಂಶೋಧನಾತ್ಮಕ ಪ್ರೇರಣೆ, ರಂಗ ಮಾಧ್ಯಮಕ್ಕೆ ವಿಶಿಷ್ಟ ಸಾಧ್ಯತೆಯನ್ನು ತೋರಿದ್ದಾರೆ. ತಾಯ್ನೆಲದಲ್ಲಿ ಬ್ಯಾಲೆಗೆ ಗೊಣಗಾಟ ಕೇಳಿಬಂದರೂ ಕನ್ನಡೇತರ ನೆಲದಲ್ಲಿ ಪಾತ್ರಗಳು ಕುಣಿದಿವೆ, ಪ್ರಸಂಗ ಆಶಯ-ಸಂದೇಶವನ್ನು ಅನಾವರಣಗೊಳಿಸಿವೆ.
           ಕಲೆಯ ಕುರಿತ ದೀರ್ಘ ಉಪನ್ಯಾಸ, ಟೀಕೆಗಳು ಅವನ್ನು ಸುಧಾರಿಸುವ ಪಾಠಗಳಲ್ಲ, ಎನ್ನುವುದು ಕಾರಂತರ ಅಭಿಮತವಾಗಿತ್ತು. ಬ್ಯಾಲೆಯ ಪಂಚವಟಿ ಪ್ರಸಂಗದಲ್ಲಿ ಬರುವ 'ಶೂರ್ಪನಖಿ' ಪಾತ್ರವನ್ನು ಕೀರ್ತಿಶೇಷ ಕುರಿಯ ವಿಠಲ ಶಾಸ್ತ್ರಿಗಳು ಮೆಚ್ಚಿಕೊಂಡಿದ್ದರಂತೆ. ಸುಮಾರು ಒಂದು ದಶಕ ಕಾಲ ರಂಗವಾಳಿದ ಬ್ಯಾಲೆಯು ಕಾರಂತರಿಗೆ, ಮಣ್ಣಿಗೆ, ಕಲೆಗೆ ಕೀರ್ತಿ ತಂದುಕೊಟ್ಟಿತು. ಪುತ್ತೂರಿನ ಕರ್ನಾಾಟಕ ಸಂಘವು 'ಯಕ್ಷರಂಗಕ್ಕಾಗಿ..' ಎನ್ನುವ ಪುಸ್ತಕವನ್ನು (ಸಂ. ಮಾಲಿನಿ ಮಲ್ಯ) ಪ್ರಕಟಿಸಿದೆ.
            ಕರ್ನಾಾಟಕ ಕಲಾದರ್ಶಿನಿಯು ಶ್ರೀನಿವಾಸ ಸಾಸ್ತಾನ ಮತ್ತು ಗೌರಿ ಶ್ರೀನಿವಾಸರ ನೇತೃತ್ವದಲ್ಲಿ ರೂಪುಗೊಂಡ ಸಂಸ್ಥೆ. ಗಣರಾಜ್ಯೋತ್ಸವದಲ್ಲಿ ಎರಡು ಬಾರಿ ಪ್ರದರ್ಶನ ನೀಡಿದ ಹಿರಿಮೆ. ಅಮೇರಿಕಾ, ಚೀನಾ, ದುಬೈ, ಕುವೈತ್, ಬೆಹರಿನ್, ಜರ್ಮನಿ, ನೇಪಾಳದಲ್ಲಿ ಪ್ರದರ್ಶನವನ್ನು ನೀಡಿದ ಗರಿಮೆ. ಯಕ್ಷಶಿಕ್ಷಣಕ್ಕಾಗಿ 'ಯಕ್ಷಗುರುಕುಲ' ಸ್ಥಾಪನೆ. ವಿಶ್ವಕನ್ನಡ ಸಮ್ಮೇಳನದಲ್ಲಿ 1200 ಜಾನಪದ ಕಲಾವಿದರಿಗೆ ನೃತ್ಯ ಸಂಯೋಜನೆ, ಸುವರ್ಣ ಕರ್ನಾಾಟಕ ಉತ್ಸವದಲ್ಲಿ ಐನೂರು ಮಂದಿ ಯಕ್ಷಗಾನ ಕಲಾವಿದರ ನೃತ್ಯ ಸಂಯೋಜನೆ ಹಾಗೂ ದೇಶದ ಎಲ್ಲಾ ರಾಜ್ಯಗಳಲ್ಲಿ ಕಾರ್ಯಕ್ರಮಗಳನ್ನು ಸಂಸ್ಥೆ ನೀಡಿದೆ.
          ಕಲಾ ದರ್ಶಿನಿಯು 2015ರ ಡಾ.ಕೆ.ಶಿವರಾಮ ಕಾರಂತ ಉತ್ಸವದ ಯಾನವನ್ನು ಮಾರ್ಚ್  22ರಂದು ಮೈಸೂರಿನಿಂದ ಆರಂಭಿಸಿತು. 28ರಂದು ಉಡುಪಿಯಲ್ಲಿ ಸಂಪನ್ನಗೊಳ್ಳಲಿದೆ. ಪಂಚವಟಿ ಮತ್ತು ಅಭಿಮನ್ಯು ಕಾಳಗದ ಬ್ಯಾಲೆ ಪ್ರದರ್ಶನ, ಕಾರಂತರ ಕುರಿತಾದ ವಿಚಾರ ಸಂಕಿರಣಗಳು ಯಾನದ ಹೂರಣ. ಉತ್ತಮ ನಿರ್ದೇಶಿತ ಶಿಸ್ತಿನ ತಂಡ. ಒಂದಷ್ಟು ಸಮಯದ ಬಳಿಕ ಡಾ.ಕಾರಂತರನ್ನು ಬ್ಯಾಲೆ ಮೂಲಕ ನೆನಪು ಮಾಡಿಕೊಟ್ಟ ಕರ್ನಾಾಟಕ ಕಲಾ ದರ್ಶಿನಿಗೆ ಅಭಿನಂದನೆ.


Monday, April 6, 2015

ಗದಾಯುದ್ಧ ಪ್ರಸಂಗದ 'ಕೃಷ್ಣ'

ಕಾಸರಗೋಡು ಜಿಲ್ಲೆಯ ಪೆರ್ಲ ಸನಿಹದ ಬಜಕ್ಕೂಡ್ಲು ದೇವಸ್ಥಾನದಲ್ಲಿ ಮಾರ್ಚ್ 31ರಂದು ರಾತ್ರಿ ಜರುಗಿದ ಯಕ್ಷಗಾನ ಪ್ರದರ್ಶನ. ಪ್ರಸಂಗ : ಗದಾಯುದ್ಧ. ಕಾಲಮಿತಿ ಪ್ರದರ್ಶನ. ಸತ್ಯನಾರಾಯಣ ಪುಣಿಂಚಿತ್ತಾಯರ ಸುಶ್ರಾವ್ಯ ಭಾಗವತಿಕೆ. ಶ್ರೀಧರ ಪಡ್ರೆಯವರ ಚೆಂಡೆಯ ನುಡಿತ. ಸಬ್ಬಣಕೋಡಿ ರಾಮ ಭಟ್ಟರ ಕೌರವನ ಪಾತ್ರ, ಉಪನ್ಯಾಸಕ ಭೀಮ ಭಾರದ್ವಾಜರ ಬಲರಾಮ, ಉಪನ್ಯಾಸಕ ರಾಕೇಶ್ ಕುಮಾರ್ ಕಮ್ಮಜೆಯವರ ಧರ್ಮರಾಯ, ಜನಾರ್ಧನ ಅವರ ಭೀಮ.....