Wednesday, July 29, 2015

ಬೆವರಿನಿಂದ ರೂಪುಗೊಂಡ 'ಮಯ್ಯರ ಡ್ರೆಸ್'


               ಎಂಭತ್ತರ ದಶಕ. ಯಕ್ಷಗಾನ ಪ್ರದರ್ಶನಗಳ ಸುಗ್ಗಿ. ಮೇಳಗಳಲ್ಲದೆ ಹವ್ಯಾಸಿ ಸಂಘಗಳ ಆಟಗಳೂ ಧಾರಾಳ. ಖಂಡಿಗ ವೆಂಕಟೇಶ ಮಯ್ಯರು (51) ಆಗ ವೃತ್ತಿ ಮತ್ತು ಹವ್ಯಾಸಿ ಮೇಳಗಳ ಪ್ರದರ್ಶನಗಳಲ್ಲಿ ಬೇಡಿಕೆಯ ಕಲಾವಿದ. ಮೂಡಬಿದಿರೆ ಮಾಧವ ಶೆಟ್ಟರ ಶಿಷ್ಯ. ಬಣ್ಣಗಾರಿಕೆ, ವೇಷಭೂಷಣಗಳ ವಿನ್ಯಾಸಗಳತ್ತ ಮಯ್ಯರಿಗೆ ಆಗಲೇ ಆಸಕ್ತಿ. ವೇಷಭೂಷಣಗಳಲ್ಲಿರುವ ಉಲ್ಲನ್, ವಸ್ತ್ರಗಳ ಬಣ್ಣಗಳಲ್ಲಿರುವ ಅಸಮತೋಲನ ಗಮನ ಸೆಳೆದಿತ್ತು.
              ಇದನ್ನು ಸಮತೋಲನಗೊಳಿಸುವತ್ತ ಯೋಚನೆ. ವೇಷಧಾರಿಯಾಗಿರುತ್ತಾ ಅಧ್ಯಯನ. ವಿವಿಧ ಮೇಳಗಳಿಗೆ ಭೇಟಿ. ಡ್ರೆಸ್ಸಿನ ಯಜಮಾನರುಗಳಲ್ಲಿ ಆಪ್ತ ಸಂವಾದ. ಹಿರಿಯ ಕಲಾವಿದರೊಂದಿಗೆ ಮಾತುಕತೆ.  ಹಂತ ಹಂತವಾಗಿ ಮಾಹಿತಿಗಳ ಸಂಗ್ರಹ. ಈ ಅನುಭವದ ಹಿನ್ನೆಲೆಯಲ್ಲಿ ಸ್ವಂತಕ್ಕಾಗಿ ಕೆಲವು ಪಾತ್ರಗಳ  ವೇಷಭೂಷಣಗಳು ಸಿದ್ಧವಾದುವು. ಆಟಗಳಲ್ಲಿ ತೊಟ್ಟು ಸಂಭ್ರಮಿಸಿದರು. ಬೇರೆಡೆಯಿಂದ ವೇಷಕ್ಕೆ ಕರೆ ಬಂದಾಗ ತನ್ನದೇ ಡ್ರೆಸ್ಸನ್ನು ಒಯ್ಯುತ್ತಿದ್ದುದೂ ಇದೆ. ಬಿಡುವಿನ ಅವಧಿಯಲ್ಲಿ ವಿವಿಧ ನಮೂನೆಯ ಕಿರೀಟಗಳನ್ನು ಸಿದ್ಧಪಡಿಸಿದರು. ಹನಿಗೂಡಿ ಹಳ್ಳವಾಯಿತು.
              ಸುಮಾರು 1996ರ ಹೊತ್ತಿಗೆ ಒಂದು ರಾತ್ರಿ ಪ್ರದರ್ಶನಕ್ಕೆ ಬೇಕಾದ ಪೂರ್ಣಪ್ರಮಾದ ವೇಷಭೂಷಣಗಳು ತಯಾರಾದುವು. ಹವ್ಯಾಸಿ ಸಂಘಗಳ ಆಟಗಳಿಗೆ ಬೇಡಿಕೆ ಬಂತು. ವೇಷಧಾರಿಯಾದ ಮಯ್ಯರು ಡ್ರೆಸ್ಸಿನ ಮಾಲಕರಾದರು. 'ಡ್ರೆಸ್ಸಿನ ಮಯ್ಯ'ರು ಎಂದು ಪ್ರಸಿದ್ಧರಾದರು. 'ಶ್ರೀ ಗುರುನರಸಿಂಹ ಯಕ್ಷಗಾನ ಕಲಾ ಮಂಡಳಿ, ಖಂಡಿಗ-ಆರ್ಯಪು' ಸಂಸ್ಥೆಯ ಮೂಲಕ ಕರಾವಳಿಯ ಉದ್ದಗಲಕ್ಕೂ ಸಂಚರಿಸಿದರು. ಹಿರಿಯ ಕಲಾವಿದರಿಂದ ಮನ್ನಣೆ ಗಳಿಸಿಕೊಂಡರು. ರಾತ್ರಿ ಹಗಲೆನ್ನದೆ ದುಡಿದರು. ಒಂದು ರಾತ್ರಿ ಎರಡೋ ಮೂರೋ ಕಾರ್ಯಕ್ರಮಗಳನ್ನು ನಿಭಾಯಿಸುವಷ್ಟು ಗಟ್ಟಿಯಾದರು. "2004ರಿಂದ 2006ರ ತನಕ ನಮ್ಮ ಡ್ರೆಸ್ಸಿಗೆ ಸುವರ್ಣಯುಗ. ನವೆಂಬರಿನಿಂದ ಎಪ್ರಿಲ್ ತನಕ ನಿರಂತರ ಬೇಡಿಕೆ. ಆರು ತಿಂಗಳಲ್ಲಿ ಆರು ದಿವಸ ನಿದ್ದೆ ಮಾಡಿರಬಹುದಷ್ಟೇ!" ನೆನಪು ಮಾಡಿಕೊಳ್ಳುತ್ತಾರೆ ವೆಂಕಟೇಶ ಮಯ್ಯರು.
                  ಹಾಗೆಂತ ಮಯ್ಯರು ಡ್ರೆಸ್ಸಿನಿಂದ ಶ್ರೀಮಂತರಾಗಲಿಲ್ಲ. ಯಾಕೆಂದರೆ ಅವರಲ್ಲಿ ಹೃದಯ ಶ್ರೀಮಂತಿಕೆಯಿದೆ, ಕಷ್ಟಗಳಿಗೆ ಸ್ಪಂದಿಸುವ ಸಂವೇದನಾಶೀಲ ಮನಸ್ಸಿದೆ. ಹವ್ಯಾಸಿ ಆಟಗಳಿಗೆ ಆರ್ಥಿಕವಾಗಿ ಹೊರೆಯಾಗದಂತೆ ಜಾಗೃತೆ ವಹಿಸಿದರು.  ಎಷ್ಟೋ ಪ್ರದರ್ಶನಗಳಿಗೆ ಉಚಿತವಾಗಿ ನೀಡಿದ್ದೂ ಇದೆ. ಆಯೋಜಕರಿಗೆ ಕಿರಿಕಿರಿಯಾಗದ ನಿರ್ವಹಣೆ. ಹಾಗೆಂತ ವ್ಯವಸ್ಥೆಯಲ್ಲಿ ಲೋಪ ಕಂಡರೆ ನೇರ ಹೇಳುವಷ್ಟು ನೇರಾನೇರ. ಸಿ.ಕೆ.ನರಸಿಂಹ, ಗಣೇಶ ಭಟ್, ಆನಂದ ತಿಂಗಳಾಡಿ, ವಿನೋದ ಮತ್ತು ಸಹೋದರ ಉದಯಶಂಕರ್ - ಮಯ್ಯರಿಗೆ ಸಾಥ್ ನಿಡುವ ಒಡನಾಡಿಗಳು. ಶಾಲಾ ವಾರ್ಶಿಕೋತ್ಸವಕ್ಕೆ ಬೇಕಾಗುವಂತಹ ಪರಿಕರಗಳನ್ನು ತಯಾರಿಸಿದ್ದಾರೆ.
                ವೇಷಭೂಷಣದ ನಿರ್ವಹಣೆ ಬಹು ಮುಖ್ಯ. ಕಾಲಕಾಲಕ್ಕೆ ರಿಪೇರಿ ಕೆಲಸಗಳೂ ಆಗಬೇಕು. ವಸ್ತ್ರಗಳು ಹರಿದಾಗ ಬದಲಾಯಿಸಬೇಕು. ಹೊಳಪಿನ ಬೇಗಡೆ ಬದಲಾಯಿಸುತ್ತಿರಬೇಕು. ಮಯ್ಯರು ಸ್ವತಃ ಇವೆಲ್ಲವನ್ನೂ ಮಾಡಬಲ್ಲರು. ಗುಣಮಟ್ಟದ ಕಚ್ಛಾವಸ್ತುಗಳು ಸಿಕ್ಕರೆ ಪರಿಕರಗಳು ಬೇಗನೆ ಹಾಳಾಗುವುದಿಲ್ಲ. "ಮೊದಲೆಲ್ಲಾ ಕಲಾವಿದರಲ್ಲಿ ಡ್ರೆಸ್ಸಿನ ಕುರಿತು ಗೌರವವಿತ್ತು. ತನ್ನ ವೇಷ ಆದ ಬಳಿಕ ಕಳಚಿ ಎಲ್ಲೆಂದರಲ್ಲಿ ಬಿಸಾಡುವ ಮನಃಸ್ಥಿತಿ ಇದ್ದಿರಲೇ ಇಲ್ಲ. ಆದರೆ ಈಗ ಕೆಲವರನ್ನು ನೋಡ್ತೇನೆ - ಚೌಕಿಯಲ್ಲಿ ಡ್ರೆಸ್ಸಿನ ಕುರಿತು ತೋರುವ ಅನಾದರ ಬೇಸರ ಹುಟ್ಟಿಸುತ್ತದೆ," ಎಂದು ವಿಷಾದಿಸುತ್ತಾರೆ. ಡ್ರೆಸ್ ಮಾಡಿದ ಆರಂಭದ ವರುಷಗಳಲ್ಲಿ ಗೇಲಿ ಮಾಡಿದವರು ನಂತರದ ದಿವಸಗಳನ್ನು ಮಯ್ಯರನ್ನು ಒಪ್ಪಿದ್ದಾರೆ, ಸಮರ್ಥಿಸಿದ್ದಾರೆ.
                ಮಯ್ಯರು ಸುಬ್ರಹ್ಮಣ್ಯ ಮೇಳ, ಮಹಾಲಕ್ಷ್ಮೀ ಮೇಳ, ಪುತ್ತಿಗೆ ಮೇಳಗಳಲ್ಲಿ ತಿರುಗಾಟ ಮಾಡಿದ್ದರು.  ವೀರಭದ್ರ, ರಾವಣ, ಮಹಿಷಾಸುರ, ಮುರಾಸುರ.. ಮೊದಲಾದ ಖಳ ಪಾತ್ರಗಳ ನಿರ್ವಹಣೆ ಇವರಿಗೆ ಖುಷಿ. ಬಿಸಿರಕ್ತದ ಸಮಯದ ಅವಕಾಶಗಳನ್ನು ಆಪೋಶನ ಮಾಡಿಕೊಂಡ ಸಾಧಕ. ಯಕ್ಷಗಾನದ ಹೊರತಾದ ಅವರ ಪ್ರತಿಭೆ ಅನನ್ಯ. ಸಾರಣೆ, ಮರದ ಕೆಲಸ, ಟಿವಿ ರಿಪೇರಿ, ತೋಟದ ಕೆಲಸ, ವಾಹನಗಳ ರಿಪೇರಿಗಳಲ್ಲಿ ಏಕಲವ್ಯ ಸಾಧನೆ.
               ಬೆವರಿನಿಂದ ಕಟ್ಟಿದ ಬದುಕು. ಮನೆಮಂದಿಯ ಪೂರ್ಣ ಸಹಭಾಗಿತ್ವ. ಪೈಸೆ ಪೈಸೆ ಬೆಲೆಯನ್ನರಿತ ಗೃಹಸ್ಥ. ಮಡದಿ ವಿಜಯಲಕ್ಷ್ಮೀ ಮಯ್ಯರ ಸಾಧನೆಯ ಹಿಂದಿರುವ ಶಕ್ತಿ. ಮಕ್ಕಳ ಯಕ್ಷಗಾನದ ತಂಡವನ್ನು ಕಟ್ಟಿದ್ದರು. ತನ್ನ ಪುತ್ರರಾದ ಶ್ರೀಧರ, ಸುದರ್ಶನರನ್ನು ಕಲಾವಿದರನ್ನಾಗಿ ರೂಪಿಸಿದರು. ವಯೋಸಹಜವಾಗಿ ದೇಹ-ಮನಸ್ಸುಗಳು  ಮುದುಡುತ್ತಿದೆ. ಕೃಷಿಯತ್ತ ಒಲವು. ಕೃಷಿಯನ್ನು ಮನೆಯಲ್ಲಿದ್ದು ನಿರ್ವಹಣೆ ಮಾಡಬೇಕಾದುದರಿಂದ ಯಕ್ಷಗಾನ ಓಡಾಟದ ವೇಗಕ್ಕೆ ಕಡಿವಾಣ ಹಾಕಿದ್ದಾರೆ.
                "ನಿರ್ವಹಣೆಯ ವೆಚ್ಚ ಹೆಚ್ಚಾಗುತ್ತಿದೆ. ನೇಪಥ್ಯ ಕಲಾವಿದರಾಗಲು ಹೊಸಬರು ತಯಾರಾಗುತ್ತಿಲ್ಲ. ಯಕ್ಷಗಾನ ಕಲಾವಿದರು, ಪ್ರೇಕ್ಷಕರ ಮನಃಸ್ಥಿತಿಗಳು ಬದಲಾಗುತ್ತಿದೆ. ಈ ಕ್ಷೇತ್ರದಲ್ಲಿ ಹೆಚ್ಚು ಗಳಿಸಲಿಲ್ಲ. ಆದರೆ ಮನಃತೃಪ್ತಿ ಇದೆ. ಎಷ್ಟೋ ಮಂದಿ ಹಿರಿಯ ಕಲಾವಿದರ ಪರಿಚಯವಾಗಿದೆ. ಸಮಾಜ ಗುರುತಿಸಿದೆ. ಹಾಗೆಂತ ಇದೇ ವೃತ್ತಿಯನ್ನು ದೀರ್ಘ ಕಾಲ ಮಾಡಲು ಸಾಧ್ಯವೇ?," ಮಯ್ಯರು ಮಾತನಾಡುತ್ತಿದ್ದಂತೆ ಒಂದು ಕ್ಷಣ ಮೌನವಾದರು. ಆ ಮೌನದ ಹಿಂದಿನ ಅದೆಷ್ಟು ಅರ್ಥಗಳು.
ಕೂಟ ಮಹಾಜಗತ್ತಿನ ಪುತ್ತೂರು ಅಂಗಸಂಸ್ಥೆಯು ತನ್ನ ವಾರ್ಶಿಕೋತ್ಸವದಂದು ಸಾಧಕ ಖಂಡಿಗ ವೆಂಕಟೇಶ ಮಯ್ಯರನ್ನು 26-7-2015ರಂದು ಸಂಮಾನಿಸಿದೆ. (ವೆಂಕಟೇಶ ಮಯ್ಯ - 94482 97261)


Sunday, July 19, 2015

ಸ್ತ್ರೀಪಾತ್ರಕ್ಕೆ ರಂಗಭಾಷೆ ನೀಡಿದ ಕಲಾ ಸಂಶೋಧಕ

 ಪಾತಾಳರ ಶ್ರಮದಿಂದ ರೂಪುಗೊಂಡ ವೇಷವಿನ್ಯಾಸದ ಮಾದರಿ - 
ಪುತ್ತೂರು ಬೊಳ್ವಾರಿನ ಎಂ.ಎನ್. (ದಿ.) ಅವರ ಕೈಚಳಕ.
 ವಯ್ಯಾರಿ ಪಾತಾಳ


           
              ಪಾತಾಳ ವೆಂಕಟ್ರಮಣ ಭಟ್ಟರನ್ನು ಡಿ.ವಿ.ಜಿ.ಯವರ 'ಅಂತಃಪುರ ಗೀತೆ' ಸೆಳೆದ (1958) ಕಾಲಘಟ್ಟ. ಅಲ್ಲಿನ ವಿಭಿನ್ನ ಪಾತ್ರಗಳನ್ನು ಯಕ್ಷಗಾನ ಕಣ್ಣಿಂದ ನೋಡಿದರು. ತನ್ನ ಪಾತ್ರವನ್ನು ಆವಾಹಿಸಿಕೊಂಡರು. ಯಕ್ಷಗಾನದ ಸ್ತ್ರೀವೇಷಕ್ಕೆ ಪ್ರತ್ಯೇಕವಾದ ನಿಲುವು, ನಡೆಗಳು ಬೇಕೆಂಬುದು ಸ್ಪಷ್ಟವಾಯಿತು. ಮನೆಯ ಹೆಣ್ಮಕ್ಕಳಂತೆ ಕಂಡು ಬರುತ್ತಿದ್ದ ಪಾತ್ರಗಳನ್ನು ಬದಲಾಯಿಸಬೇಕೆಂಬ ನಿರ್ಧಾಾರ.  ಡಾ. ಶಿವರಾಮ ಕಾರಂತರ 'ಯಕ್ಷಗಾನ ಬ್ಯಾಲೆ'ಯಿಂದಲೂ ಪ್ರೇರಿತ.
            ಸ್ತ್ರೀ ವೇಷದ ವೇಷಭೂಷಣಗಳ ತಯಾರಿಗೆ ಮೊದಲಾದ್ಯತೆ. ಕಣ್ಣಮುಂದೆ ಮಾದರಿಗಳಿರಲಿಲ್ಲ. ಹಿರಿಯರನ್ನು ಮಾತನಾಡಿಸಿದರೆ ಪರಂಪರೆಯನ್ನು ಮುಂದಿಡುತ್ತಾರೆ. ಹಾಗಿದ್ದರೆ ಸ್ತ್ರೀ ಪಾತ್ರಕ್ಕೆ ಯಾಕೆ ಪರಂಪರೆ ಇಲ್ಲ? ಯಾಕದು ಅವಗಣನೆಯಾಯಿತು? ಪುರುಷ ಪಾತ್ರಗಳ ಸ್ವಭಾವಕ್ಕೆ ತಕ್ಕಂತೆ, ವರ್ಣ-ವೇಷಗಳ ವ್ಯತ್ಯಾಸದಂತೆ ಸ್ತ್ರೀಪಾತ್ರಗಳಿಗೂ ಗುರುತರ ವೇಷಭೂಷಣ ಬೇಡವೇ? - ಬಿಸಿರಕ್ತದ ಪಾತಾಳರೊಳಗೆ ಎದ್ದ ಬಿಸಿ ಚಿಂತನೆಗಳು.
           ಅಂತಃಪುರ ಗೀತೆಯಲ್ಲಿ ಪ್ರಸ್ತುತಿಯಾಗಿರುವ ಶಿಲ್ಪಗಳು ಬೇಲೂರಿನ ಶಿಲಾಬಾಲಿಕೆಯನ್ನು ಹೋಲುತ್ತಿದ್ದುವು. ಅಷ್ಟಿಷ್ಟು ಕೂಡಿಟ್ಟ ಹಣದೊಂದಿಗೆ ಬೇಲೂರಿಗೆ ಪಯಣ. ಹೊಸ ಊರು. ಯಾರದ್ದೇ ಪರಿಚಯವಿಲ್ಲ. ಮನದಲ್ಲಿ ಸ್ಪಷ್ಟ ನಿಲುವಿತ್ತು, ಆದರೆ ರೂಪವಿರಲಿಲ್ಲ. ಶಿಲೆಗಳ ಅಂದ, ಬಾಗುಬಳುಕುಗಳನ್ನು ಮನನ ಮಾಡಿದರು. ಮನಃತುಂಬಿಕೊಂಡರು. ಶಿಲೆಯು ತೊಟ್ಟ ಆಭರಣಗಳು ಆಳಂಗದ ಅಳತೆಗಿಂತ ದೊಡ್ಡದಾಗಿದ್ದುವು. ಅದು ಶಿಲ್ಪ ಸೌಂದರ್ಯವಲ್ವಾ. ಯಕ್ಷಗಾನದ ವೇಷದ ಅಳತೆಗೆ ತಕ್ಕಂತೆ ಕಿರಿದುಗೊಳಿಸಿದರಾಯಿತು, ಬೇಲೂರಿನಲ್ಲಿ ಪಾತಾಳರ ಉದ್ದೇಶವನ್ನರಿತ ಕಲಾವಿದ ಲಕ್ಷ್ಮಣ ಆಚಾರ್ ಸಲಹೆ..
               ಡಾಬು, ತೋಳುಕಟ್ಟು, ಕೊರಳ ಆಭರಣಗಳು, ಶಿರೋಭೂಷಣಗಳ ಮಾದರಿಗಳ ನೀಲನಕ್ಷೆ ಸಿದ್ಧವಾಯಿತು. ಪರಿಚಿತ ಕಲಾವಿದ ಬ್ರಹ್ಮಾವರದ ಸುಬ್ಬಣ್ಣ ಭಟ್ಟರಲ್ಲಿ ವಿನ್ಯಾಸಗಳನ್ನು ತಯಾರಿಸಿಕೊಡುವಂತೆ ಮನವಿ.  ವಾರಗಟ್ಟಲೆ ನಿಂತು ಅಭ್ಯಾಸ ಮಾಡುತ್ತಿದ್ದಾಗ ಶಿಲ್ಪಗಳ ಅಂಗಭಂಗಿಗಳು, ದೇಹದ ಬಾಗುಗಳು, ಕಣ್ಣಿನ ನೋಟಗಳು ಪಾತಾಳರನ್ನು ಸೆಳೆದಿದ್ದುವು. ಮನೆಗೆ ಬಂದು  ಏಕಾಂತದಲ್ಲಿ ಅಭ್ಯಾಸ ಮಾಡಿದರು. ನನ್ನ ಆಸಕ್ತಿಯು ಆಗಿನ ಪೂಜ್ಯ ಖಾವಂದರಿಗೆ ಖುಷಿಯಾಗಿತ್ತು. ಎಲ್ಲಾ ವೆಚ್ಚಗಳನ್ನು ಅವರೇ ಭರಿಸಿದ್ದರು. ಪ್ರವಾಸಕ್ಕೆ ಹೋಗುವಾಗಲೆಲ್ಲಾ ನನ್ನ ವೇಷಗಳಿಗೆ ಹೊಂದುವ ಪರಿಕರಗಳು ಸಿಕ್ಕರೆ ತಂದು ಕೊಡುತ್ತಿದ್ದರು, ಆ ದಿನಗಳನ್ನು ಜ್ಞಾಪಿಸಿಕೊಳ್ಳುತ್ತಾರೆ.
               ವೇಷಭೂಷಣಕ್ಕೇನೋ ಆಯ ಬಂತು. ಮುಖವರ್ಣಿಕೆಯೂ ಬದಲಾಗಬೇಡವೇ? ಅದು  ಚಂದವಾದರೆ ಮಾತ್ರ ವೇಷ ಆಕರ್ಷಕ. ವೇಷಭೂಷಣಗಳಿಗೆ ಹೊಂದುತ್ತದೆ. ಈ ಯೋಚನೆಯಲ್ಲಿದ್ದಾಗ ವಿಟ್ಲದ ಬಾಬು ಮಾಸ್ತರರ ಬಣ್ಣದ ಬಿನ್ನಾಣಗಳು ಸೆಳೆದುವು. ಅವರು ಪರದೆ ವಿನ್ಯಾಸದಲ್ಲಿ ಪರಿಣತ. ಪಾತಾಳರ ಕಲಿಕೆಯ ಹಸಿವನ್ನು ಅರಿತರು. ಕಲಾವಿದನೊಳಗೆ ಹುದುಗಿದ್ದ ಕಲೆಯ ಸ್ಫುರಣದಲ್ಲಿ ಭವಿಷ್ಯವನ್ನು ಕಂಡರು.
                  ಬಣ್ಣಗಳ ಸಂಯೋಜನೆಯೂ ಒಂದು ವಿಜ್ಞಾನ, ಜತೆಗಿದ್ದು ಕಲಿಯಬೇಕಾದ ಕಾಯಕ. ಪಾತಾಳರು ಬಾಬು ಮಾಸ್ತರರೊಂದಿಗಿದ್ದು ವಿವಿಧ ಬಣ್ಣಗಳ ಸಂಯೋಗವನ್ನು ಕಲಿಯುತ್ತಾ ಬಂದರು. ಹಾಗಾಗಿ ನೋಡಿ, ಪಾತಾಳರ ವೇಷ ಸಿದ್ಧವಾಗಲು ಏನಿಲ್ಲವೆಂದರೂ ಮೂರರಿಂದ ನಾಲ್ಕು ಗಂಟೆ ಬೇಕು! ಧರ್ಮಸ್ಥಳ ಮೇಳದ ಆಗಿನ ಅವರ ಒಡನಾಡಿಗಳು ಈಗಲೂ ಜ್ಞಾಪಿಸಿಕೊಳ್ಳುತ್ತಾರೆ.
               ಮೇನಕೆ, ಮಾಯಾ ಶೂರ್ಪನಖಿ, ಮಾಯಾ ಅಜಮುಖಿ, ಮೋಹಿನಿ... ಪಾತ್ರಗಳೆಲ್ಲಾ ಶೃಂಗಾರ ಸ್ವಭಾವದವು. ಗುಣಗಳಲ್ಲಿ ವಿಭಿನ್ನ. ಬಣ್ಣಗಳಿಗೂ ಭಾಷೆಯಿದೆ, ಭಾವವಿದೆ. ಮುಖವರ್ಣಿಕೆಗಳಲ್ಲಿ ವಿವಿಧ ವರ್ಣಗಳ ಟಚ್ಅಪ್ ಕೊಡುವುದರಿಂದ ಆಯಾಯ ಪಾತ್ರಗಳ ಗುಣ ಅಭಿವ್ಯಕ್ತಿಯಲ್ಲಿ ಮಾತ್ರವಲ್ಲ, ಮೇಕಪ್ಪಿನಲ್ಲೂ ಕಾಣತೊಡಗಿತು. ಲಾಸ್ಯ, ಲಯಗಳು ರಂಗದಲ್ಲಿ ಅಭಿವ್ಯಕ್ತಿಸುತ್ತಾ ಹೋದಂತೆ ಹಿಡಿತಕ್ಕೆ ಬಂತು. ಮಂಗಳೂರಿನ ಮಾಸ್ಟರ್ ವಿಠಲ ಶೆಟ್ಟರಲ್ಲಿ ಕಲಿತ ಭರತನಾಟ್ಯದ ಹೆಜ್ಜೆಗಳು ಯಕ್ಷಗಾನದ ಹೆಜ್ಜೆಗೆ ಸುಭಗತನವನ್ನು ತಂದಿತ್ತಿತು.
               ಪಾತಾಳರ ಅನುಭವ ನೋಡಿ, "ಗೌರವದ ಪಾತ್ರಗಳಿಗೆ ಹುಬ್ಬಿನ ಮೇಲೆ ಮಕರಿಕಾ ಪಾತ್ರ ಬಿಡಿಸುತ್ತಿದ್ದೆ. ತಿಲಕವು ಅವರವರ ಮುಖದ ಆಕಾರಕ್ಕೆ ತಕ್ಕಂತಿರಬೇಕು. ಗರತಿ ಪಾತ್ರಗಳಿಗೆ ಉರುಟು ತಿಲಕ, ಗೌರಿ ಪಾತ್ರಕ್ಕೆ ಸಣ್ಣ ಅರ್ಧಚಂದ್ರ, ದೇವಿ ಪಾತ್ರಕ್ಕೆ ಹಣೆ ತುಂಬ ಬರುವಂತೆ ಅರ್ಧಚಂದ್ರ. ಮುಖದಲ್ಲಿ ಎಷ್ಟು ಕುಸುರಿಯೋ, ಅಷ್ಟೇ ಅಲಂಕಾರಕ್ಕೂ ಆದ್ಯತೆ. ಈ ಎಲ್ಲಾ ವ್ಯವಸ್ಥೆ(ಅವಸ್ಥೆ)ಗಳನ್ನು ನೋಡಿ ಸಹ ಕಲಾವಿದರಲ್ಲಿ ಕೆಲವರು ಬೆನ್ನು ತಟ್ಟಿದರು. ಗೇಲಿ ಮಾಡಿದವರೇ ಅಧಿಕ. ಅವರಿಂದ ನಾನು ಬೆಳೆಯುವುದಕ್ಕೆ ಸಾಧ್ಯವಾಯಿತು."
               ಪಾತಾಳರ ಪ್ರಯೋಗಗಳಿಗೆ ಶ್ರೀ ಧರ್ಮಸ್ಥಳ ಮೇಳವು ಪ್ರೋತ್ಸಾಹ ನೀಡಿತು. ಹಿಮ್ಮೇಳ ಕಲಾವಿದರು ಬೆಂಬಲಿಸಿದರು. ಯಾವಾಗ ಮುಖವರ್ಣಿಕೆ, ವೇಷಭೂಷಣಕ್ಕೆ ಹೊಸ ವಿನ್ಯಾಸ ಕೊಟ್ಟರೋ ಅಲ್ಲಿಂದ ಶೃಂಗಾರ ವೇಷ ಹೊಸ ಹಾದಿ ಹಿಡಿಯಿತು. ಥೇಟ್ ಶಿಲ್ಪವನ್ನು ಹೋಲುವ ಪಾತ್ರಗಳು ಪ್ರೇಕ್ಷಕರನ್ನು ಹುಚ್ಚೆಬ್ಬಿಸಿದುವು. ಪಾತ್ರಧಾರಿ ಗಂಡೋ, ಹೆಣ್ಣೋ ಎಂಬಷ್ಟು ಮಟ್ಟಿಗೆ ಚರ್ಚೆಗೆ ಗ್ರಾಸವಾಯಿತು. ಶ್ರೀ ಧರ್ಮಸ್ಥಳ ಮೇಳದಿಂದ ನಿವೃತ್ತನಾಗುವ ತನಕ ತನ್ನದೇ ವಿನ್ಯಾಸದ ವೇಷಭೂಷಣಗಳನ್ನು ತೊಡುತ್ತಿದ್ದರು.
                ಈಚೆಗೆ ಮಾತಿಗೆ ಸಿಕ್ಕರು, "ಅನುಕರಣೆಯ ಯುಗದಲ್ಲಿದ್ದೇವೆ. ಒಬ್ಬ ಕಲಾವಿದ ರಂಗದಲ್ಲಿ ಕುಣಿದರೆ ಇನ್ನೊಬ್ಬ ಅನುಕರಿಸುತ್ತಾನೆ. ಜೀವನದಲ್ಲಿ ಹೊಸತು ಏನು ಬಂದರೂ ಅದು ತಕ್ಷಣ ಅನುಕರಿಸಲ್ಪಡುತ್ತದೆ. ನಕಲಿಯ ಕಾಲ ನೋಡಿ. ಅದರೆ ನಾನಂದು ಕಷ್ಟ ಪಟ್ಟು ಮಾಡಿದ ಸ್ತ್ರೀ ಪಾತ್ರಗಳ ವೇಷಭೂಷಣಗಳು ಇವೆಯಲ್ಲಾ, ಅದು ಮಾತ್ರ ಅನುಕರಣೆಯಾಗಿಲ್ಲ. ನಕಲಿಯಾಗಿಲ್ಲ," ಪಾತಾಳರು ವಿನೋದಕ್ಕೆ ಆಡಿದರೂ ಆ ಮಾತಿನ ಹಿಂದೆ ನೋವಿತ್ತು. ಮೇಳದಿಂದ ನಿವೃತ್ತನಾಗಿ ಮೂವತ್ತನಾಲ್ಕು ವರುಷ ಸಂದರೂ ಆ ನೋವು ಆಗಾಗ್ಗೆ ಚಿಗುರಿ ವಿಷಾದದ ನೆರಳನ್ನು ಬೀರುತ್ತಿದೆ.
                   ಪಾತಾಳರಿಗೆ ಯಕ್ಷಗಾನವು ಸಾಕಷ್ಟು ಪ್ರಸಿದ್ಧಿಯನ್ನು ತಂದಿದೆ. ಪುರಸ್ಕಾರವನ್ನು ನೀಡಿದೆ. ಅದರ ಸಿಹಿ ನೆನಪಿಗೆ ತನ್ನ ಜೀವಿತದಲ್ಲೇ ಕಲಾವಿದರನ್ನು ಸಂಮಾನಿಸುವ ಆಶೆ. ಅದಕ್ಕಾಗಿ 'ಪಾತಾಳ ಯಕ್ಷ ಪ್ರತಿಷ್ಠಾನ-ಎಡನೀರು' ರೂಪೀಕರಣ. ಹತ್ತು ವರುಷದಿಂದ ಪ್ರಶಸ್ತಿ ಪ್ರದಾನ ಜರಗುತ್ತಿದೆ. ಎಲ್ಲಾ ಕಾರ್ಯಕ್ರಮಗಳಲ್ಲೂ ಪಾತಾಳರು ಭಾಗಿಯಾಗಿ ಖುಷಿಯನ್ನು ಅನುಭವಿಸಿದ್ದರು. ರಾಜ್ಯೋತ್ಸವ ಪುರಸ್ಕಾರವೂ ಪ್ರಾಪ್ತವಾಗಿದೆ.
                ಎಂಭತ್ತ ಮೂರರ ಪಾತಾಳ ವೆಂಕಟ್ರಮಣ ಭಟ್ಟರಿಗೆ ಈಗ ಬೋಳೂರು ದೋಗ್ರ ಪೂಜಾರಿ ನೆನಪಿನ ಪ್ರಶಸ್ತಿಯ ಬಾಗಿನ. 19-7-2015, ಮಂಗಳೂರು ವಿವಿಯ 'ರವೀಂದ್ರ ಕಲಾ ಕೇಂದ್ರ'ದಲ್ಲಿ ಸಂಜೆ 4-30ಕ್ಕೆ ಪ್ರಶಸ್ತಿ ಪ್ರದಾನ.
(ಪ್ರಜಾವಾಣಿಯ-ಕರಾವಳಿ-18-7-2015 ಪ್ರಕಟ)

Sunday, July 12, 2015

ಯಕ್ಷ ಸತ್ಸಂಗ ಬರೆದ ’ರಂಗ ಸಮಗ್ರತೆಯ ಮುನ್ನುಡಿ’

  ಪೂರ್ವರಂಗ
 ಪಾಂಡವರ ಒಡ್ಡೋಲಗ
 ಚಿತ್ರ ಪ್ರದರ್ಶನ
 ಸೀತಾಕಲ್ಯಾಣ
ಲಕ್ಷ್ಮೀ ಸ್ವಯಂವರ (ಸಮುದ್ರಮಥನ)

          ಯಕ್ಷಗಾನ ಪ್ರದರ್ಶನಕ್ಕೆ ಅದ್ದೂರಿಯ ಸ್ಪರ್ಶ ಸಿಕ್ಕಾಗ ಕುತೂಹಲ ಜಾಗೃತವಾಗುತ್ತದೆ. ಸಂಪರ್ಕ ತಾಣಗಳಲ್ಲೆಲ್ಲಾ ರೋಚಕತೆಗಳ ಪ್ರವಾಹ.  ನೆಚ್ಚಿನ ಕಲಾವಿದರನ್ನು ಹೊನ್ನಶೂಲಕ್ಕೇರಿಸುವ ಹೊಗಳಿಕೆಗಳ ಮಾಲೆ. ಅಭಿಮಾನದ ಗೂಡಿನೊಳಗೆ ಪ್ರಶಂಸೆಗಳ ರಿಂಗಣ. ಪ್ರದರ್ಶನದಲ್ಲಿ ಯಕ್ಷಗಾನ ಕಾಣದಿದ್ದರೂ ಕಂಡೂ ಕಾಣದಂತಿರುವ ಸ್ಥಿತಪ್ರಜ್ಞತೆ. ಕಟೀಲಿನಲ್ಲಿ ಜರುಗಿದ 'ಯಕ್ಷಮಿತ್ರ-ನಮ್ಮ ವೇದಿಕೆ' ವಾಟ್ಸಪ್ ಬಳಗದ ಯಕ್ಷಗಾನಕ್ಕೆ ತೆರಳುತ್ತಿದ್ದಾಗ ಹಾದುಹೋದ ಚಿತ್ರಗಳಿವು.
           ಅಲ್ಲಿನ ಚಿತ್ರಣವೇ ಬೇರೆ - ಸಾವಿರಾರು ಮಂದಿಯ ಉಪಸ್ಥಿತಿ. ಸಾಮಾಜಿಕ ತಾಣವೊಂದರ ತಾಕತ್ತಿನ ಸಾಕಾರ. ಅನುಭವಿ ಸಂಘಟಕರ ಆಶಯದಂತೆ ಪ್ರದರ್ಶನ. 'ಜನರಿಗೆ ಬೋರ್ ಆಗುತ್ತದೆ' ಎನ್ನುತ್ತಾ ಬದಿಗೆ ತಳ್ಳಲ್ಪಟ್ಟ ಪೂರ್ವರಂಗದ ಪ್ರಸ್ತುತಿ. ನಾಲ್ಕೂ ಪ್ರಸಂಗಗಳ ಸಂಪೂರ್ಣ ಸಂಪನ್ನತೆ. 'ಅನಾದರಕ್ಕೊಳಪ್ಪಟ್ಟ' ಸಭಾಕ್ಲಾಸ್, ತೆರೆಕ್ಲಾಸ್ಗಳ ಸೊಗಸು. ಬಣ್ಣದ ವೇಷಗಳ ಅಬ್ಬರ. ಪಾರಂಪರಿಕ ಹಾದಿಯಲ್ಲಿ ಹೆಜ್ಜೆಯೂರಿದ ಹಿಮ್ಮೇಳ. ಪ್ರದರ್ಶನವೊಂದರ ಆಯೋಜನೆಯ ಜತೆಯಲ್ಲಿ ಸಂಘಟಕರ 'ನಿಖರ' ರಂಗ ಯೋಚನೆಗಳು ಮಿಳಿತವಾಗಬೇಕೆನ್ನುವ ಸಂದೇಶವನ್ನು ಕಟೀಲು ಆಟ ನೀಡಿದೆ.
'ಸಂಘಟನೆಯಲ್ಲೂ ಸ್ಪಷ್ಟ, ನಿರ್ದಾಕ್ಷಿಣ್ಯ ಹೂರಣಗಳು ಬೇಕು,' - ಕಾರ್ಯಕ್ರಮ ಮುಗಿಸಿ ಮರಳುತ್ತಿದ್ದಾಗ ನನ್ನ ತಲೆಯಲ್ಲಿ ತುಂಬಿದ ಯೋಚನೆಗಳು.
             ಸಾಮಾಜಿಕ ಜಾಲತಾಣಗಳ ದುಷ್ಪರಿಣಾಮಗಳ ಏರುತ್ಸಾಹದ ವೈಭವೀಕರಣದ ಕಾಲಘಟ್ಟವಿದು. ಉದ್ದೇಶ ಶುದ್ಧಿಯಾಗಿದ್ದರೆ ಇವುಗಳು ಸಾಮಾಜಿಕ ಸ್ವಾಸ್ಥ್ಯಕ್ಕೂ ಪೂರಕ. 'ಯಕ್ಷಮಿತ್ರ - ನಮ್ಮ ವೇದಿಕೆ' ತಾಣವು ಅನುಷ್ಠಾನದಿಂದ ತೋರಿದೆ. ಮುನ್ನೂರು ಮೀರಿದ ಸದಸ್ಯ ಬಲ. ಪ್ರಥಮ ಯಕ್ಷಸತ್ಸಂಗದ ಯಶಸ್ವೀ ಸಂಪನ್ನತೆ. ಲಕ್ಷ್ಮೀ, ಸೀತೆ, ಹಿಡಿಂಬೆ, ಪದ್ಮಾವತಿ ಕಲ್ಯಾಣಗಳ ಆಖ್ಯಾನ. ಬೆಳಿಗ್ಗೆ ಆರು ಗಂಟೆಗೆ ಮುಗಿಯಬೇಕೆನ್ನುವ ಧಾವಂತ ಸಂಘಟಕರಿಗೆ ಇರಲಿಲ್ಲ. ಪ್ರಸಂಗವನ್ನು ಹಿಂಡಿಹಿಪ್ಪೆ ಮಾಡುವ ಹಟ ಕಲಾವಿದರಲ್ಲೂ ಇರಲಿಲ್ಲ! ನಿನ್ನೆಯ-ನಾಳಿನ ಆಟ-ಕೂಟದ ಒತ್ತಡದ ಗೊಣಗಾಟವಿರಲಿಲ್ಲ.
            ಸದಸ್ಯರೊಳಗೆ ಪಾಲುಗಾರಿಕೆ ದೃಷ್ಟಿಯಿಂದ ವಿವಿಧ ಸ್ಪರ್ಧೆಗಳು, ಛಾಯಾಚಿತ್ರ ಪ್ರದರ್ಶನ, ಸಿ.ಡಿ.ಬಿಡುಗಡೆ, ಕೈಪಿಡಿ ಅನಾವರಣ, ಕಲಾವಿದರ ಸಂಮಾನ.. ಹೀಗೆ ತುಂಬು ಕಲಾಪಗಳ ನಿಗದಿ. ವಾಟ್ಸಪ್ನಲ್ಲೇ ಮಾತಾಡಿಕೊಂಡಿದ್ದ ಸದಸ್ಯರಿಗೆ ಬಹುತೇಕರ ಹೆಸರು ಗೊತ್ತು. ಮುಖ ಪರಿಚಯ ಅಷ್ಟಕ್ಕಷ್ಟೇ. ಕಾರ್ಯಕ್ರಮದಂದು ಪರಸ್ಪರ ಪರಿಚಯ. ಸ್ವಯಂಸೇವಕರಾಗಿ ಸ್ವಯಂಸ್ಫೂರ್ತಿಯಿಂದ ಕೈಂಕರ್ಯ. 
            'ಲಕ್ಷ್ಮೀ ಸ್ವಯಂವರ' ಮೊದಲ ಪ್ರಸಂಗ. ದೇವೇಂದ್ರನ ಆಕರ್ಷಕ ಒಡ್ಡೋಲಗ. ಬಲಿ, ವಾಲಿ, ವಿಷ್ಣು ಪಾತ್ರಗಳ ಯಶಸ್ವೀ ನಿರ್ವಹಣೆ. ಹಿರಿಯ ಬಲಿಪ ನಾರಾಯಣ ಭಾಗವತರು, ಬಲಿಪ ಪ್ರಸಾದ ಭಾಗವತರ ಸಮರ್ಥ ನಿರ್ದೆೇಶನ. ಎರಡನೇ ಪ್ರಸಂಗ - ಸೀತಾಕಲ್ಯಾಣ. ವಿಶ್ವಾಮಿತ್ರ, ರಾಮ, ಲಕ್ಷ್ಮಣ, ತಾಟಕಿ, ರಾವಣ, ದೂತ ಪಾತ್ರಗಳು ಯಶದ ಹೊಣೆ ಹೊತ್ತವುಗಳು. ಪುತ್ತಿಗೆ ರಘುರಾಮ ಹೊಳ್ಳರ ಸಾರಥ್ಯ. ಹಿಡಿಂಬಾ ವಿವಾಹ ಮೂರನೇ ಆಖ್ಯಾನ. ಭೀಮ, ಹಿಡಿಂಬ, ಹಿಡಿಂಬೆ, ಮಾಹಾ ಹಿಡಿಂಬೆ.. ಪಾತ್ರಗಳನ್ನು ಕುರಿಯ ಗಣಪತಿ ಶಾಸ್ತ್ರಿಗಳು ತನ್ನ ನಿದರ್ೇಶನದ ಛಾಪಿನಿಂದ ಕುಣಿಸಿ ಎದ್ದಾಗ ಸೂರ್ಯೋದಯವಾಗಬೇಕೇ? ಕೊನೆಯ ಪ್ರಸಂಗ ಪದ್ಮಾವತಿ ಪರಿಣಯ. ಪಟ್ಲ ಸತೀಶ ಶೆಟ್ಟಿಯವರ ಭಾಗವತಿಕೆ. ಕಿರಾತ, ಪದ್ಮಾವತಿ, ಕೊರವಂಜಿ ಮೊದಲಾದ ಪಾತ್ರಗಳ ಅಭಿವ್ಯಕ್ತಿ ಚೆನ್ನಾಗಿತ್ತು. ಬೆಳಗು ಹರಿದರೂ ಸಭಾಭವನದಲ್ಲಿ ನೂರಾರು ಮಂದಿಯ ಉಪಸ್ಥಿತಿ. ಒಟ್ಟಿನಲ್ಲಿ ಸರ್ವಕಲಾವಿದರ ಕಲಾಭಿಜ್ಞತೆಗಳಿಗೆ ಯಕ್ಷ ಸತ್ಸಂಗ ಉತ್ತಮ ವೇದಿಕೆ ರೂಪಿಸಿತ್ತು.
             ವಿವಿಧ ಆಸಕ್ತಿಯ ಮನಸ್ಸುಗಳನ್ನು ಏಕಪ್ರವಾಹದಲ್ಲಿ ಒಯ್ಯುವಲ್ಲಿ ವಾಟ್ಸಪ್ ತಂಡದ ಅಡ್ಮಿನ್ಗಳ ನಿರ್ದಾಕ್ಷಿಣ್ಯ ಕಾರ್ಯವಿಧಾನ ಮೆಚ್ಚತಕ್ಕದ್ದೇ. ಯಕ್ಷಗಾನದ ಹೊರತಾದ ಯಾವುದೇ ವಿಚಾರಗಳಿಗೆ ಆಸ್ಪದ ಕೊಡದೆ ವಿಚಾರಗಳನ್ನು ಹಳಿಯಲ್ಲೇ ಒಯ್ಯವಲ್ಲಿ ಸಮರ್ಥವಾಗಿದೆ. ಡಾ.ಪದ್ಮನಾಭ ಕಾಮತ್, ಹರಿನಾರಾಯಣ ಆಸ್ರಣ್ಣರೊಂದಿಗೆ ಹತ್ತಾರು ಶ್ರಮಿಕ ಮನಸ್ಸುಗಳ ಏಕಸೂತ್ರತೆಯಿಂದ ಕಟೀಲು ಯಕ್ಷಸತ್ಸಂಗ ನಿಜಾರ್ಥದಲ್ಲಿ ಸತ್ಸಂಗವಾಯಿತು. ಯಕ್ಷಗಾನದಲ್ಲಿ ಹೊಸ ಹಾದಿಯನ್ನು ತೋರಿತು. ಭಾಗವಹಿಸಿದ ಕಲಾವಿದರೇ ಸಂಘಟಕರ ಆಶಯವನ್ನು ಮುಕ್ತಕಂಠದಿಂದ ಹೊಗಳಿದುದನ್ನು ನೋಡಿದ್ದೇನೆ, ಕೇಳಿದ್ದೇನೆ. ಇದು ಗಂಟಲ ಮೇಲಿನ ಮಾತಲ್ಲ.
           ಯಕ್ಷ ಮಿತ್ರ - ನಮ್ಮ ವೇದಿಕೆ' ವಾಟ್ಸಪ್ ತಂಡದ ಸದಸ್ಯ ಸಂಖ್ಯೆ ಹೆಚ್ಚುತ್ತಿದೆ ಎನ್ನುವುದು ಖುಷಿ. ಆದರೆ ನಿಯಂತ್ರಣ ದೃಷ್ಟಿಯಿಂದ ಸೀಮಿತಗೊಳಿಸಬಹುದೇನೋ? ಯಾಕೆಂದರೆ ಯಕ್ಷಗಾನವನ್ನು ಸಮಗ್ರವಾಗಿ ನೋಡುವ, ಯೋಚಿಸುವ ತಂಡದ ಮುಖ್ಯಸ್ಥರ ಆಶಯವನ್ನು ಅನುಸರಿಸುವ ಮನಸ್ಸುಗಳು ಹೆಚ್ಚಿದ್ದಷ್ಟೂ ತಂಡ ಸದೃಢವಾಗುತ್ತದೆ. ಕಲಾವಿದರ ಮೇಲಿನ 'ಭಯಂಕರ' ಅಭಿಮಾನ, ಒಂದೊಂದು ಪಾತ್ರದ ಕುರಿತಾದ 'ವಿಪರೀತ' ಮೋಹ, ತನ್ನ ನೆಚ್ಚಿನ ಕಲಾವಿದ ರಂಗದಲ್ಲಿ ಹೇಗೆ ಅಭಿವ್ಯಕ್ತಿಸಿದರೂ ಬೆನ್ನು ತಟ್ಟುವ 'ಆರಾಧನಾ'  ಜಾಯಮಾನಗಳು ಹಬ್ಬುವಿಕೆ. ಈ ಮಧ್ಯೆ ಯಕ್ಷಗಾನವನ್ನು ಯಕ್ಷಗಾನವಾಗಿ  ನೋಡುವ, ಆಸ್ವಾದಿಸುವ ಮನಸ್ಸುಗಳ ರೂಪೀಕರಣ ಆಗಬೇಕಾಗಿದೆ. ಕಲೆಯೊಂದರ ಬೆಳವಣಿಗೆಗೆ ಕಲಾವಿದನೂ ಮುಖ್ಯ. ಪ್ರೇಕ್ಷಕರೂ ಮುಖ್ಯ. ಆದರೆ ಕಲಾವಿದನ, ಕಲೆಯ ಬೆಳವಣಿಗೆಯಲ್ಲಿ ಪೇಕ್ಷಕನ ಪ್ರಜ್ಞೆಗೆ ಹೆಚ್ಚು ಒತ್ತು.
           ವಾಟ್ಸಪ್ ತಂಡವು ಮೊದಲ ಪ್ರದರ್ಶನ ಹೊಸ ಭರವಸೆಯನ್ನು ಹುಟ್ಟು ಹಾಕಿದೆ. ರಂಗ ಸಮಗ್ರತೆಗೆ ಹೊಸ ಮುನ್ನುಡಿ ಬರೆದಿದೆ.  ಬಹುಶಃ ಮುಂದಿನ ಕಾರ್ಯಕ್ರಮದ ರೂಪುರೇಷೆ ಈಗಾಗಲೇ ಸಿದ್ಧವಾಗಿರಬೇಕು. ಅವೆಲ್ಲವೂ ಈ ಜಾಡಿನಲ್ಲಿ ಮುಂದುವರಿಯಲಿ.

ಪ್ರಕಟ : ಪ್ರಜಾವಾಣಿ/ಕರಾವಳಿ/11-7-2015

Monday, July 6, 2015

ನಾಟ್ಯ ಶಾಂತಲೆಗೆ ಒಲಿದ 'ಶಾಂತಲಾ' ಗೌರವ




             ನೃತ್ಯ ಗುರು ಮಾಸ್ಟರ್ ವಿಠಲ ಶೆಟ್ಟರಿಗೆ ಕರ್ನಾಾಟಕ ಸರಕಾರದ ನಾಟ್ಯ ಶಾಂತಲಾ ಪ್ರಶಸ್ತಿ. ಖುಷಿ
ಪಡುವ    ಸುದ್ದಿ. ತೊಂಭತ್ತು ಮೀರಿದ ಮಾಗಿದ ಮನಸ್ಸಿಗೆ ಮುದ ನೀಡುವ ಕ್ಷಣ. 'ಈಗಲಾದರೂ ಬಂತಲ್ಲಾ' ಎಂದು ಅವರ ಶಿಷ್ಯರು ಹೆಮ್ಮೆ ಪಡುವ ಘಳಿಗೆ. ಅಕ್ಷರಾರ್ಥದಲ್ಲಿ ಅರ್ಹರಿಗೆ ಸಂದ ಬಾಗಿನ.
                ಅ ಕ್ಷಣವಿನ್ನೂ ಹಸಿಯಾಗಿ ನೆನಪಿದೆ.
              ಪಾತಾಳ ಪ್ರಶಸ್ತಿಯ ಸಿಹಿ ತಿಳಿಸಲು ವಿಠಲ ಶೆಟ್ಟರ ಮನೆಯ ಗೇಟು ದಾಟಿದ್ದೆವು. ಆಗ ಎಂಭತ್ತೇಳರ ಆಸುಪಾಸಿನಲ್ಲಿದ್ದ ವಿಠಲ ಶೆಟ್ಟರಿಂದ ಸ್ವಾಗತ. ಎಂಭತ್ತರ 'ಯಕ್ಷಶಾಂತಲಾ' ಪಾತಾಳ ವೆಂಕಟ್ರಮಣ ಭಟ್ಟರಿಂದ ಉದ್ದಂಡ ಪ್ರಣಾಮ. ಶಿಷ್ಯನನ್ನು ಹರಸಿ ಮೇಲೆತ್ತಿ ಮನೆಯೊಳಗೆ ಕರೆದುಕೊಂಡು ಹೋದರು. ಹತ್ತು ನಿಮಿಷ ಮೌನ. ಇಬ್ಬರ ಕಣ್ಣಲ್ಲೂ ಕಣ್ಣೀರು. ಎಷ್ಟೋ ವರುಷದ ಅಗಲಿಕೆಯ ವೇದನೆ ಶಿಷ್ಯನಿಗೆ. ತನ್ನಿಂದ ನೃತ್ಯ ಕಲಿತು ಯಕ್ಷಗಾನ ಕ್ಷೇತ್ರದಲ್ಲಿ ಮಿಂಚಿದ ಶಿಷ್ಯನ ಕೀರ್ತಿಗೆ ಸಂತಸ ಗುರುವಿಗೆ. ಸುಮಾರು ಒಂದೆರಡು ತಾಸು ಗುರು-ಶಿಷ್ಯರಿಂದ ಉಭಯಕುಶಲೋಪರಿ.  ಕಣ್ಣೀರು, ನಗು, ಸಂದು ಹೋದ ದಿವಸಗಳ ಅನುಭವ ವಿನಿಮಯ.
                   ಯಕ್ಷಗಾನ ಕ್ಷೇತ್ರದಲ್ಲಿ ನನಗೆ ಸಿಕ್ಕಿದ ಕೀರ್ತಿ ಗುರುವಿಗೆ ಸಲ್ಲಬೇಕು. ಉಚಿತವಾಗಿ ನೃತ್ಯ ಕಲಿಸಿದ್ದಾರೆ. ಹೊಟ್ಟೆಯನ್ನು ತಂಪಾಗಿಸಿದ್ದಾರೆ, ಎತ್ತರಕ್ಕೆ ಬೆಳೆಸಿದ್ದಾರೆ, ಎನ್ನುವ ಪಾತಾಳ ವೆಂಕಟ್ರಮಣ ಭಟ್, ಗುರುವಿನ ಪಾದಕ್ಕೆ ಇನ್ನೊಮ್ಮೆ ಕಣ್ಣೀರಿನ ಆಭಿಷೇಕ ಮಾಡಿದರು. ಜತೆಗಿದ್ದವರೆಲ್ಲಾ ದಂಗು. ಗುರು-ಶಿಷ್ಯ ಸಂಬಂಧದ ಗಾಢತೆ ಇಷ್ಟಿದೆಯಾ? ಜತೆಗೆ ಪ್ರಸ್ತುತ ಕಾಲಘಟ್ಟದ ಗುರು-ಶಿಷ್ಯ ಸಂಬಂಧಗಳ ಢಾಳು ಮುಖಗಳು ಮಿಂಚಿ ಮರೆಯಾದುವು!
ನೃತ್ಯ ಗುರು ಮಾಸ್ಟರ್ ವಿಠಲ ಶೆಟ್ಟಿ ಒಂದು ಕಾಲ ಘಟ್ಟದ ಕಲಾ ವಿಸ್ಮಯ. ಏಳು ದಶಕದ ಹಿಂದೆ ಮಹಾನ್ ಗುರು ರಾಜನ್ ಅಯ್ಯರ್ ಅವರ ಕರಕಮಲಸಂಜಾತ. ದಿ.ಎಂ.ಎ.ದೇವಾಡಿಗರಿಂದ ಸಂಗೀತಾಭ್ಯಾಸ. 1964ರಿಂದ ನೃತ್ಯಕೌಸ್ತುತ ಗುರುಕುಲ ಆರಂಭ.
              ಚಲನಚಿತ್ರ ರಂಗದ ಮಿನುಗುತಾರೆ ಕಲ್ಪನಾ ವಿಠಲ ಶೆಟ್ಟರ ಶಿಷ್ಯೆ. 'ಆರ್ಥಿಕವಾಗಿ ಗಟ್ಟಿಯಾಗಿಲ್ಲದ ಅವಳಿಗೆ ಹತ್ತು ರೂಪಾಯಿ ಶಿಷ್ಯವೇತನ ನೀಡುತ್ತಿದ್ದೆ,' ನೆನಪಿಸಿಕೊಳ್ಳುತ್ತಾರೆ. ಚಿತ್ರರಂಗದತ್ತ ವಾಲಿದ ಕಲ್ಪನಾ, ಅರ್ಧದಲ್ಲೇ ನೃತ್ಯಮೊಟಕು. ಆದರೆ ಕಲಿತಷ್ಟು ವಿದ್ಯೆ ವಜ್ರದ ರೇಖೆ. ಅಭಿನಯಿಸಿದ ಬಹುತೇಕ ಚಿತ್ರಗಳಲ್ಲಿ ನೃತ್ಯದ ಸೊಗಸು.
ಕೀರ್ತಿ ಬಂದಾಗ ಎಲ್ಲವೂ ಮರೆವು! ನೃತ್ಯ ಆರಾಧನೆ. ಹಣ ಮಾಡುವ ದಂಧೆಯಲ್ಲ. ಎಷ್ಟೇ ಜನಪ್ರಿಯತೆ ಬರಲಿ, ಏರಿದ ಏಣಿಯನ್ನು ಮರೆಯಬಾರದಲ್ಲಾ, ಎನ್ನುವ ವಿಠಲ ಶೆಟ್ಟರಿಗೆ ಸಿನಿಮಾ ರಂಗದಲ್ಲಿ ಹೇರಳ ಅವಕಾಶಗಳು ಬಂದಿದ್ದುವು. ಸಿನಿಮಾಕ್ಕಿಂದ ನೃತ್ಯ ಅಧ್ಯಾಪಕನಾಗಿರುವುದರಲ್ಲಿ ಖುಷಿ ಕಂಡರು.
              ಸುಮಾರು ಐದು ಸಾವಿರ ಮಂದಿಗೆ ನೃತ್ಯ ಕಲಿಸಿದ ಗುರು. ಉಳ್ಳಾಲ ಮೋಹನ್ ಕುಮಾರ್, ಪ್ರೇಮನಾಥ್, ಶ್ರೀನಿವಾಸ ಶೆಣೈ, ರವೀಂದ್ರನಾಥ್ ಪಂಡಿತ್.. ಇವರ ಗರಡಿಯಲ್ಲಿ ಪಳಗಿದವರು. ಸಾಮಾನ್ಯವಾಗಿ ಭರತನಾಟ್ಯದ ರಂಗಪ್ರವೇಶ ಪ್ರಕ್ರಿಯೆ ಆರ್ಥಿಕ ಗಟ್ಟಿತನ ಇದ್ದಷ್ಟೂ ವಿಜೃಂಭಿಸುತ್ತದೆ. ಬೇಕೋ ಬೇಡ್ವೋ ಎಂಬುದು ಬೇರೆ ಪ್ರಶ್ನೆ. ಈ ರೀತಿಯ ಆಡಂಬರಕ್ಕೆ ಒಗ್ಗದ ವಿಠಲ ಮಾಸ್ಟ್ರು; ಗೌಜಿಯಿಲ್ಲದೆ, ಗುರುದಕ್ಷಿಣೆಯನ್ನೂ ಸ್ವೀಕರಿಸಿದೆ ರಂಗಪ್ರವೇಶವನ್ನು ಮಾಡಿಸಿ ಮನ್ನಣೆ ಗಳಿಸಿದರು. .
               1981ರಲ್ಲಿ ಸ್ವೀಡನ್ ದೇಶದಿಂದ ಕರೆ. ಅಲ್ಲಿನ ಕಲಾ ಸಂಸ್ಥೆಯೊಂದರಿಂದ ಮೂರು ತಿಂಗಳ ತರಬೇತಿ ಮತ್ತು ಪ್ರದರ್ಶನಕ್ಕಾಗಿ ಆಹ್ವಾನ. ಸ್ವೀಡನ್, ಓಸ್ಲೋ, ಕೋಪೆನ್ಹೆಗನ್, ಸ್ಟಾಕ್ಹೋಂ - ಗಳಲ್ಲಿ ನಾಲ್ಕು ನೃತ್ಯ ಪ್ರದರ್ಶನ. ಅಲ್ಲಿನ ವಿದ್ಯಾರ್ಥಿಗಳೊಂದಿಗೆ ಪ್ರದರ್ಶನ. ಮಾಧ್ಯಮಗಳಿಂದ ಮುಕ್ತ ಪ್ರಶಂಸೆ. ವಿಮಾನದಲ್ಲಿ ಹಾರಿದ ಅಂದಿನ ಕ್ಷಣವನ್ನು ರೋಚಕವಾಗಿ ಹೇಳಿದ್ದರು.
           ವಿಠಲ ಶೆಟ್ಟರಿಗೆ ಶಾಸ್ತ್ರೀಯ ನೃತ್ಯಗಳಿಗಿಂತ ರೂಪಕಗಳತ್ತ ಒಲವು. ಪೌರಾಣಿಕ, ಚಾರಿತ್ರಿಕ, ಐತಿಹಾಸಿಕ ಕಥಾಹಂದರದ ರೂಪಕಗಳು ಕಳೆದರ್ಧ ಶತಮಾನದೀಚೆಗೆ ಜನಪ್ರಿಯ. ಭರತನಾಟ್ಯದತ್ತ ಯುವಕ ಯುವತಿಯರು ಆಸಕ್ತರಾಗುವುದು ಸಂತೋಷದಾಯಕ.  ಅದೊಂದು ಟೈಂಪಾಸ್ ಹವ್ಯಾಸವಾಗಬಾರದು, ಎನ್ನುವ ಇವರು, 'ಈಚೆಗೇಕೋ ತರಗತಿಗಳು ಪೂರ್ತಿ ಉದ್ಯಮವಾಗಿದೆ' ಎಂದು ವಿಷಾದಿಸುತ್ತಾರೆ.
             ನೃತ್ಯಕ್ಕಾಗಿಯೇ ಬದುಕು. ಅದನ್ನವರು ಆರಾಧಿಸಿದ್ದಾರೆ. ಪೂಜಿಸಿದ್ದಾರೆ. ಹಾಗಾಗಿ ಕಲಾ ದೇವಿ ಒಲಿದಿದ್ದಾಳೆ. ನಾಲ್ದೆಸೆ ಕೀರ್ತಿ ನೀಡಿದ್ದಾಳೆ. ಪ್ರಶಸ್ತಿ, ಬಿರುದುಗಳು ಮುಡಿಯೇರಿವೆ. ಆಸಕ್ತಿ ಗರಿಕೆದರಿದಾಗ ಗೆಜ್ಜೆ ಕಂಪಿಸುತ್ತದೆ. ಆ ಕಂಪನದೊಳಗೆ ಬದುಕಿನ ಹಿನ್ನೋಟವಿದೆ. ಹೆಜ್ಜೆಗಳ ಸದ್ದಿದೆ. ನೂರಾರು ಮನಸ್ಸುಗಳಿವೆ. ವಯೋಸಹಜವಾಗಿ ನೆನಪು ಕೈಕೊಡುತ್ತಿದ್ದರೂ ಗೆಜ್ಜೆಯ ಸದ್ದಿಗೆ ಕಿವಿಯರಳುತ್ತದೆ.
                 ಸರಕಾರದ ಪ್ರತಿಷ್ಠಿತ ಶಾಂತಲಾ ಪ್ರಶಸ್ತಿಯ ನಿರೀಕ್ಷೆ ಶೆಟ್ಟರಿಗಿಲ್ಲ. ಅವರಿಗದು ಬೇಕಾಗಿಯೂ ಇಲ್ಲ. ಆದರೆ ಸರಕಾರದ ಪ್ರಶಸ್ತಿ ಅಂದ ಮೇಲೆ ಅದಕ್ಕೆ ಪ್ರತ್ಯೇಕ ಮಾನ-ಸಂಮಾನ. ನೃತ್ಯ ವಿಭಾಗಕ್ಕೆ ಮೀಸಲಾದ ಪ್ರಶಸ್ತಿ. ಈ ಖುಷಿಯನ್ನು ಅನುಭವಿಸಲು ವಯಸ್ಸು ಅಡ್ಡಿಬರುತ್ತಿದೆ. ಕಂಗ್ರಾಟ್ಸ್ಗಳನ್ನು ಸ್ವೀಕರಿಸಲು ಮಾಗಿದ ದೇಹ ಸಹಕರಿಸುತ್ತಿಲ್ಲ. ಹತ್ತು ವರುಷಗಳ ಹಿಂದೆ ಪ್ರಶಸ್ತಿ ಬರಬೇಕಿತ್ತು.
                 ಡಾ.ಶೇಣಿಯವರು ತನಗೆ ಡಾಕ್ಟರೇಟ್ ಬಂದಾಗ ಹೇಳಿದ್ದರು, "ಪ್ರಶಸ್ತಿ, ಗೌರವ, ಸಂಮಾನಗಳನ್ನೆಲ್ಲಾ ಅರುವತ್ತರ ಒಳಗೆ ಕೊಡಿ. ಅದನ್ನು ಕಲಾವಿದ ಅನುಭವಿಸಬೇಕು. ಆ ಖುಷಿಯು ಅವರಿಗೆ ಸ್ಫೂರ್ತಿಯ ಕ್ಯಾಪ್ಸೂಲು."