Wednesday, September 30, 2015

ಕಲಾವಿದ ಕುಟುಂಬದ ಕಾಣ್ಕೆ : ಪೂರ್ವರಂಗಕ್ಕೆ ಹೊಳಪು


            ಯಕ್ಷಗಾನದ ಪೂರ್ವರಂಗವು ಕಾಲಮಿತಿಯ ಜಂಝಾವಾತಕ್ಕೆ ತೂರಿಹೋಗುವ ಆಪಾಯಕ್ಕೆ ಸಾಕ್ಷಿಯಾಬೇಕಾದುದು ಕಾಲ ತಂದಿಟ್ಟ ಕಾಣ್ಕೆ!  'ಬೇಕೋ-ಬೇಡ್ವೋ' ನಿಲುವುಗಳು ಮಾತಿನಲ್ಲಿ ಹಾರಿಹೋಗುತ್ತಿವೆ. ಪೂರ್ವರಂಗವನ್ನು ಕುಣಿವ ಕಲಾವಿದರ ಅಭಾವವೂ ಇಲ್ಲದಿಲ್ಲ. ಕುಣಿಸುವ ಹಿಮ್ಮೇಳದ ಶಕ್ತತೆಯೂ ವಿರಳ. ಈ ತಲ್ಲಣಗಳ ಮಧ್ಯೆ ಕೆಲವು ಮೇಳಗಳಲ್ಲಿ ಪೂರ್ವರಂಗ ಜೀವಂತವಾಗಿರುವುದು ಸಮಾಧಾನ. ಈಚೆಗಂತೂ ಪೂರ್ವರಂಗವನ್ನೇ ಮುಖ್ಯ ವಸ್ತುವಾಗಿಟ್ಟುಕೊಂಡು ಪ್ರದರ್ಶನಗಳು ನಡೆದಿರುವುದು ಉಳಿವಿನತ್ತ ಮಹತ್ತರ ಹೆಜ್ಜೆ.
            ಹಿರಿಯ ಕಲಾವಿದರ ಮಾತಿನ ಮಧ್ಯೆ ಪೂರ್ವರಂಗದ ವಿಚಾರಗಳು ಹಾದುಹೋಗುತ್ತವೆ. "ಡೌರು, ಬಾಲಗೋಪಾಲ, ನಿತ್ಯ ವೇಷ..ಗಳನ್ನು ಕುಣಿದು ಹದವಾದ ಬಳಿಕವೇ ಪ್ರಸಂಗಗಳಲ್ಲಿ ಪಾತ್ರ ಮಾಡಲು ಅರ್ಹತೆ ಬಂತು," ಯಕ್ಷಗುರು ದಿವಾಣ ಶಿವಶಂಕರ ಭಟ್ಟರ ಅನುಭವ ಪೂರ್ವರಂಗದ ಗಟ್ಟಿತನವನ್ನು ತೋರಿಸುತ್ತದೆ.  ಬಹುತೇಕ ಹಿರಿಯರು ಈ ಹಂತವನ್ನು ಯಶಸ್ವಿಯಾಗಿ ದಾಟಿ ಕಲಾವಿದರಾದವರೇ. ಹಿಮ್ಮೇಳದ ಎಲ್ಲಾ ಕಲಾವಿದರಿಗೂ ಪೂರ್ವರಂಗದ ಜ್ಞಾನವು ಮುಂದಿನ ಕಲಾ ಹೆಜ್ಜೆಗೆ ಸುಭಗತನ ತರುತ್ತದೆ.
            ನಾಟ್ಯದ ಹದಗಾರಿಕೆಗೆ, ಲಯದ ಅರಿವಿಗೆ, ಬಿಡ್ತಿಗೆ-ಮುಕ್ತಾಯದ ಜ್ಞಾನಕ್ಕೆ, ಪದ್ಯಗಳ ಭಾವಕ್ಕೆ ಅಭಿನಯ ಮಾಡಲು ಪೂರ್ವರಂಗ ಒಂದು ಕಲಿಕಾ ಶಾಲೆ. ಇದಕ್ಕೆ ನಿರ್ದಿಷ್ಟ ಪಠ್ಯಕ್ರಮಗಳಿವೆ. ರಾತ್ರಿ ಎಂಟು ಎಂಟೂವರೆ ಗಂಟೆಯಿಂದ ಹತ್ತೂವರೆ ತನಕ ಲಂಬಿಸುವ ಪೂರ್ವರಂಗದ ವೈವಿಧ್ಯಗಳ ಆವರಣದೊಳಗೆ ರೂಪುಗೊಂಡ ಕಲಾವಿದ ಎಂದೆಂದೂ ಪರಿಪಕ್ವ. ಪಾತ್ರಕ್ಕೆ ಬೇಕಾದ ಅರ್ಥಗಳನ್ನು ಬಳಿಕ ಹೊಸೆದುಕೊಂಡರಾಯಿತು.
            ಶ್ರೀಮತಿ ಲೀಲಾವತಿ ಬೈಪಾಡಿತ್ತಾಯರು (ಲೀಲಕ್ಕ) ಮತ್ತು ಹರಿನಾರಾಯಣ ಬೈಪಾಡಿತ್ತಾಯ   - ಯಕ್ಷಸಾಧಕರು. ಇವರಿಗೆ ಯಕ್ಷಗಾನವೇ ಉಸಿರು. ತಮ್ಮ ಸುದೀರ್ಘ ಅನುಭವಗಳಲ್ಲಿ ಪರಿಪಕ್ವಗೊಂಡ 'ಪೂರ್ವರಂಗ'ದ ಹಾಡುಗಳ ದಾಖಲಾತಿಯು (ಅಡಕ ತಟ್ಟೆ - ಸಿ.ಡಿ.) ಕಲಿಕಾ ಆಸಕ್ತರಿಗೆ ಕೈಪಿಡಿ. ಪಾರ್ತಿಸುಬ್ಬನ ಯಕ್ಷಗಾನದ ಪೂರ್ವರಂಗದ ಹಾಡುಗಳನ್ನು ಬಳಸಿಕೊಂಡಿದ್ದಾರೆ. ಸಿಡಿ ಜತೆಗೆ ಹಾಡುಗಳ ಲಿಖಿತ ಪುಸ್ತಿಕೆಯನ್ನೂ ಅಭ್ಯಾಸಿಗಳಿಗೆ ಅನುಕೂಲವಾಗಲೆಂದು ಮುದ್ರಿಸಿದ್ದಾರೆ.
           ಚೌಕಿ ಪೂಜೆಯಲ್ಲಿ ಹಾಡುವ 'ಗಜಮುಖದವಗೆ ಗಣಪಗೆ, ಮುದದಿಂದ ನಿನ್ನಾ', ರಂಗಸ್ಥಳದಲ್ಲಿ 'ಮುಖತೋ ಪೂರ್ಣಚಂದ್ರಸ್ಯ, ಸರ್ವೇಶಾಂ ಪರಿಪೂಜಿತಾಂ, ರಾಮಭದ್ರಾ ಗೋವಿಂದಾ, ಆದೌ ದೇವಕೀ ಗರ್ಭ ಜನನಂ, ವಿಘ್ನಧ್ವಾಂತ ನಿವಾರಣೈಕತರಣೀ; ಷಣ್ಮುಖ ಸುಬ್ರಾಯ ಕುಣಿತ, ಮುಖ್ಯ ಸ್ತ್ರೀವೇಷದ 'ಚಿಕ್ಕ ಪ್ರಾಯದ ಬಾಲೆ ಚದುರೆ, ಕಾಮಿನಿ ಕರೆದು ತಾರೆ..', ಪ್ರಸಂಗ ಪೀಠಿಕೆ, ಪೀಠಿಕಾ ಸ್ತ್ರೀವೇಷ, ಒಡ್ಡೋಲಗ, ತೆರೆಕುಣಿತ, ಸಭಾಕುಣಿತ... ಹೀಗೆ ಪೂರ್ವರಂಗದ ಬಹುತೇಕ ಎಲ್ಲಾ ಹಾಡುಗಳು. ಲೀಲಾವತಿ ಬೈಪಾಡಿತ್ತಾಯರ ಹಾಡುಗಾರಿಕೆ. ಕು.ಸ್ವಾತಿ ಬೈಪಾಡಿತ್ತಾಯರ ಸಾಥ್. ಮದ್ದಳೆ-ಚೆಂಡೆಯಲ್ಲಿ ಹರಿನಾರಾಯಣ ಬೈಪಾಡಿತ್ತಾಯ, ಅವಿನಾಶ್ ಬೈಪಾಡಿತ್ತಾಯ. ಸಂಯೋಜನೆ ಗುರುಪ್ರಸಾದ್ ಬೈಪಾಡಿತ್ತಾಯ. ಪೂರ್ವರಂಗದ ಈ ದಾಖಲಾತಿಯು ಇಡೀ ಕುಟುಂಬದ ಕೊಡುಗೆ.
           "ಕೀರ್ತಿಶೇಷರಾದ ಗುರಿಕಾರ್ ನೆಡ್ಲೆ ನರಸಿಂಹ ಭಟ್, ಕುದ್ರೆಕೂಡ್ಲು ರಾಮಭಟ್, ಚಿಪ್ಪಾರು ಕೃಷ್ಣಯ್ಯ ಬಲ್ಲಾಳ್, ದಿವಾಣ ಭೀಮ ಭಟ್ಟರ ಒಡನಾಟದ ಸಂದರ್ಭಗಳಲ್ಲಿ ಹಾಗೂ ಶ್ರೀ ಧರ್ಮಸ್ಥಳದ ಯಕ್ಷಗಾನ ಕಲಿಕಾ ಕೇಂದ್ರದಲ್ಲಿ ದಶಕಕ್ಕೂ ಹೆಚ್ಚು ಕಾಲ ಗುರುಗಳಾಗಿ ಸೇವೆ ಸಲ್ಲಿಸಿದ ಅನುಭವದ ಆಧಾರದಲ್ಲಿ ಈ ದಾಖಲಾತಿ ಮಾಡಲಾಗಿದೆ. ರಾಗ ಮತ್ತು ಹಾಡುಗಳಲ್ಲಿ ಕಾಲಕ್ಕೆ ತಕ್ಕಂತೆ ಕೆಲವೊಂದು ಬದಲಾವಣೆಗಳಾಗಿದ್ದರೂ, ಪೂರ್ವರಂಗದ ಮೂಲ ಚೌಕಟ್ಟಿನಡಿ ರೂಢಿಯಲ್ಲಿರುವ, ಹೆಚ್ಚಿನ ಹಿರಿಯ ಕಲಾವಿದರು ಒಪ್ಪಿಕೊಂಡಂತೆ ಪೂರ್ವರಂಗವನ್ನು ಪ್ರಸ್ತುತಪಡಿಸಿದ್ದೇವೆ" ಎನ್ನುತ್ತಾರೆ ಹರಿನಾರಾಯಣ ಬೈಪಾಡಿತ್ತಾಯರು. ಅಡಕ ತಟ್ಟೆಯ ರಕ್ಷಾಕವಚದಲ್ಲೂ ಆಶಯವನ್ನು ಮುದ್ರಿಸಿದ್ದಾರೆ.
           ಯಕ್ಷಗುರು ಕರ್ಗಲ್ಲು ವಿಶ್ವೇಶ್ವರ ಭಟ್ ಈ ಯತ್ನವನ್ನು ಶ್ಲಾಘಿಸಿದ್ದಾರೆ, "ಪ್ರಕೃತ ಲಭ್ಯವಿರುವ ಪೂರ್ವರಂಗದ ಕ್ರಿಯಾರೂಪವನ್ನು ಪ್ರದರ್ಶಿಸಲು ಬೇಕಾದ ರಂಗ ಸಾಹಿತ್ಯವೆನಿಸಿದ, ವಾದನ ಕ್ರಿಯೆಗೆ ಸಂಬಂಧಿಸಿದ ತಾಳಗಳ ಸ್ವರೂಪ, ಬಿಡ್ತಿಗೆ, ಮುಕ್ತಾಯ, ತುಂಡು ಮುಕ್ತಾಯ, ಕಟ್ಟು ಮುಕ್ತಾಯ, ಮೂರು ಮುಕ್ತಾಯ, ಒಂಭತ್ತು ಮುಕ್ತಾಯ, ದೊಡ್ಡ ಬಿಡ್ತಿಗೆ, ಏಳು ತಾಳಗಳ ಬಿಡ್ತಿಗೆ, ಏರು ಬಿಡ್ತಿಗೆ, ಧಿತ್ತ, ದಿಗಿಣ ತೈತ ತಕತ, ತದ್ದೀಂಕಿಟ, ಕೌತುಕ.... ಮೊದಲಾದವುಗಳನ್ನು ಬಳಸುವ ಸಾಧನದ ಖಚಿತ ಮಾಹಿತಿಯನ್ನು ದೇಸೀಯ ಪದ್ಧತಿಯಲ್ಲಿ ಒದಗಿಸಿದ್ದಾರೆ."
           ವಿದ್ಯಾರ್ಥಿಗಳಿಗೆ ನಾಲ್ಕು ತಾಳ ಬಂದರೆ ಸಾಕು, ಪ್ರಸಂಗಕ್ಕೆ ಪದ್ಯ ಹೇಳಲು ಆತುರ. ಪೂರ್ವರಂಗದ ಎಲ್ಲಾ ಮಟ್ಟುಗಳನ್ನು ಕಲಿತ ಬಳಿಕವೇ ಪ್ರಸಂಗಕ್ಕೆ ಪದ್ಯ ಹೇಳಿದರೆ ರಾಗ, ಲಯ, ಮಟ್ಟುಗಳು ಗಟ್ಟಿಯಾಗುತ್ತವೆ - ಹಿಂದೊಮ್ಮೆ ಗುರು ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರು ಹೇಳಿದ ನೆನಪು. ಈ ಹಿನ್ನೆಲೆಯಲ್ಲಿ ಲೀಲಕ್ಕ ಅವರ ಶ್ರಮ ಸಾರ್ಥಕ. ಇದನ್ನು ಕರಗತ ಮಾಡಿಕೊಳ್ಳುವ ಹೊಣೆ  ಅಭ್ಯಾಸಿಗಳದು.
            ಯಕ್ಷಗಾನವೇ ಬದುಕಾಗಿರುವ ಬೈಪಾಡಿತ್ತಾಯ ಕುಟುಂಬದ ಈ ಸಾಹಸ, ಸಾಧನೆ ಶ್ಲಾಘನೀಯ. ಯಕ್ಷಗಾನದ ಕಾಳಜಿ ಮತ್ತು ತಮ್ಮ ಜ್ಞಾನದ ದಾಖಲಾತಿಯ ಉದ್ದೇಶವರಿಸಿದ 'ಪೂರ್ವರಂಗ'ದ ಈ ದಾಖಲಾತಿ ನಮ್ಮ ಸಂಗ್ರಹದಲ್ಲಿರಬೇಕು. ಎರಡು ಸಿಡಿಗಳಲ್ಲಿ (ಆಡಿಯೋ) ಪೂರ್ವರಂಗ ವಿಸ್ತೃತವಾಗಿದೆ. ಬೆಲೆ ಒಂದು ನೂರ ನಲವತ್ತೊಂಭತ್ತು ರೂಪಾಯಿಗಳು. ಆಸಕ್ತರು ಸಂಪರ್ಕಿಸಬಹುದು. (9945967337)
             ಸುಳ್ಯದ ತೆಂಕುತಿಟ್ಟು ಯಕ್ಷಗಾನದ ಹಿತರಕ್ಷಣಾ ವೇದಿಕೆಯು ಹಿಂದೆ ಬಲಿಪ ನಾರಾಯಣ ಭಾಗವತರ ಕಂಠಶ್ರೀಯಲ್ಲಿ ಪೂರ್ವರಂಗದ ಆಡಿಯೋ ಧ್ವನಿಸುರುಳಿಯನ್ನು ರೂಪಿಸಿರುವುದು ಉಲ್ಲೇಖನೀಯ.


Monday, September 21, 2015

ಅಭಿವ್ಯಕ್ತಿಯ ಅಭಿಮಾನದಿಂದ ರಂಗಸುಖ

              "ಅಭಿಮಾನಿಗಳು ಚೌಕಿಯಲ್ಲಿ ಹೆಚ್ಚು ಹೊತ್ತು ಕಾಲ ಕಳೆಯಕೂಡದು. ಪ್ರದರ್ಶನ ನೋಡುತ್ತಾ ಅಭಿವ್ಯಕ್ತಿಗೆ ಅಭಿಮಾನ, ಮೆಚ್ಚುಗೆ ಸೂಚಿಸಿದರೆ ಕಲಾವಿದನಿಗೆ ಹೆಮ್ಮೆ. ವೇಷ ತಯಾರಿಯ ಪ್ರಕ್ರಿಯೆಯನ್ನು ಪೂರ್ತಿ ನೋಡಿಬಿಟ್ಟರೆ ರಂಗದಲ್ಲಿ ಪಾತ್ರವಾಗಿ ಕಲಾವಿದನನ್ನು ಸ್ವೀಕರಿಸಲು ಕಷ್ಟವಾಗುತ್ತದೆ," ಹಿರಿಯ ಕಲಾವಿದರೊಬ್ಬರು ಯಕ್ಷಗಾನದ ಬಣ್ಣದ ಮನೆ(ಚೌಕಿ)ಯಲ್ಲಿ ಆಡಿದ ಮನದ ಮಾತು ಮನನೀಯ. ಎಷ್ಟು ಮಂದಿಗೆ ಹಿತವಾಯಿತೋ ಗೊತ್ತಿಲ್ಲ. ನನಗಂತೂ ಚಿಂತನೆಗೆ ಅವಕಾಶ ಮಾಡಿಕೊಟ್ಟಿತ್ತು. ಇಂತಹುದೇ ಪ್ರಶ್ನೆಯೊಂದು ವಾಟ್ಸಪ್ ಸಾಮಾಜಿಕ ತಾಣದಲ್ಲೂ ಹರಿದು ಬಂದ ನೆನಪು.
             ಯಕ್ಷಗಾನಕ್ಕೆ ಅಭಿಮಾನಿಗಳು ಆಸ್ತಿ. ಈಚೆಗಿನ ವರ್ಷದಲ್ಲಂತೂ ಯುವ ಮನಸ್ಸುಗಳು ಅಭಿಮಾನವಿರಿಸಿಕೊಂಡು ಪ್ರೋತ್ಸಾಹಿಸುತ್ತಿರುವುದು ಉತ್ತಮ ಬೆಳವಣಿಗೆ. ಪ್ರದರ್ಶನಗಳಿಗೆ ತುಂಬಿ ತುಳುಕುವ ಸಭಾಭವನವನ್ನು ನೋಡಿದಾಗ ಕಣ್ಣು ತುಂಬಿಬರುತ್ತದೆ. ಕಲಾವಿದರಿಗೂ ಸ್ಫೂರ್ತಿ.  ಫೇಸ್ಬುಕ್, ವಾಟ್ಸಪ್ಗಳಲ್ಲಿ ಕಲೆಯ ಕುರಿತು ಮಾತುಕತೆಗಳು ನಿರಂತರ. ಹಾಡು, ಚಿತ್ರ, ಪ್ರದರ್ಶನಗಳ ಅಪ್ಡೇಟ್ ಆಗುತ್ತಿರುತ್ತದೆ. ಸಮಸಾಮಯಿಕ ವಿಚಾರಗಳು ನಾಡಿನೆಲ್ಲೆಡೆ ಪ್ರಸಾರವಾಗುತ್ತದೆ. ವಾಹಿನಿಗಳಲ್ಲಿ ನೇರ ಪ್ರಸಾರ. ಇವೆಲ್ಲವೂ ಕಲೆಯೊಂದರ ಬೆಳವಣಿಗೆಯಲ್ಲಿ ಮೈಲುಗಲ್ಲು.
               ಚೌಕಿಯ ವಿಚಾರಕ್ಕೆ ಬರೋಣ. ಹೌದು. ಹಿರಿಯ ಕಲಾವಿದರ ಅನಿಸಿಕೆಗೆ ಕಲಾವಿದನಾಗಿ ನನ್ನದೂ ಸಹಮತ. ಚೌಕಿ ಅಂದರೆ ಕಲಾವಿದರಿಗೆ ಮನೆ ಇದ್ದಂತೆ. ವೇಷಗಳು ಸಿದ್ಧವಾಗುವ ತಾಣ. ಪ್ರದರ್ಶನಕ್ಕೆ ಬೇಕಾದ ವಿಚಾರಗಳು ಅಲ್ಲಿ ಚರ್ಚಿಸಲ್ಪಡುತ್ತವೆ. ಹೆಚ್ಚು ಏಕಾಂತ ಬೇಡುವ ಜಾಗ. ಹೊಸ ಪ್ರಸಂಗವಾದರಂತೂ ಕಲಾವಿದರಿಗೆ ಪೇಚಾಟ. ತಂತಮ್ಮ ಪಾತ್ರಗಳ ಕುರಿತು ಚಿಂತಿಸುವ, ಚಿತ್ರಿಸುವ ಹೊತ್ತಲ್ಲಿ ಇತರ ವಿಚಾರಗಳಿಂದ ದೂರವಿದ್ದಷ್ಟೂ ಪ್ರದರ್ಶನದ ತಯಾರಿ ಸುಪುಷ್ಟಿಯಾಗುತ್ತದೆ.
              ಹೀಗಿರುತ್ತಾ ಅಭಿಮಾನಿ ಕಲಾವಿದರ ಜತೆಗೆ ಚೌಕಿಯಲ್ಲೇ ಹೆಚ್ಚು ಹೊತ್ತು ಕಳೆಯುವುದು ಉಳಿದ ಕಲಾವಿದರ ಏಕಾಂತಕ್ಕೆ ತೊಂದರೆಯಾಗುತ್ತದೆ. ಅನಿವಾರ್ಯವಾದರೆ, ಹೆಚ್ಚು ವಿಚಾರಗಳ ಸಮಾಲೋಚನೆ ಇದ್ದರೆ ಚೌಕಿಯ ಹೊರಗೆ ಬಂದು ಮಾತನಾಡಬಹುದು. ಅದರರ್ಥ ಚೌಕಿಯಲ್ಲಿರಲೇಬರಲೇ ಬಾರದು ಎಂದಲ್ಲ. ಕಲಾವಿದರನ್ನು ಮಾತನಾಡಿಸಿ, ಕುಶಲೋಪರಿ ವಿಚಾರಿಸಿ ನಾಲ್ಕೈದು ನಿಮಿಷದಲ್ಲಿ ವಿರಮಿಸಿ ಪ್ರೇಕ್ಷಕರಾಗಿ ಕುಳಿತುಕೊಂಡರೆ ಎಷ್ಟೊಂದು ಚಂದ. ಕಲಾವಿದರನ್ನು ಖಾಸಗಿಯಾಗಿ ಕೇಳಿ. ಅವರು ಚೌಕಿಯಲ್ಲಿ ಹೆಚ್ಚು ಮಾತುಕತೆಯನ್ನು ಇಷ್ಟಪಡುವುದಿಲ್ಲ.
              ಕಲಾವಿದರಿಗೂ ಮುಜುಗರ. ತನ್ನ ಅಭಿಮಾನಿಗಳು ಬಂದಾಗ ಕಲಾವಿದ ವೇಷದ ಸಿದ್ಧತೆಯಲ್ಲಿದ್ದಾರೆ ಎಂದಿಟ್ಟುಕೊಳ್ಳಿ. ಬರಿಮೈಯಲ್ಲಿ ಹೇಗೆ ಮಾತನಾಡಿಸಲಿ? ಮಾತನಾಡದಿದ್ದರೆ ಆಭಿಮಾನಕ್ಕೆ ಮಸುಕು. ಮಿತವಾಗಿ ಮಾತನಾಡಿದರೆ ಅಭಿಮಾನಿಗಳು ಬೇಸರ ಪಟ್ಟಾರು ಎನ್ನುವ ಗುಮಾನಿ. ಮನಃಸ್ಥಿತಿಯು ಈ ಗೊಂದಲದಲ್ಲೇ ಸುತ್ತುತ್ತಿರುತ್ತದೆ. ಮುಖವರ್ಣಿಕೆ ಮಾಡುತ್ತಿರುವಾಗ ಹತ್ತಿರ  ಕುಳಿತು ಕಳೆದು ಹೋದ ಪ್ರದರ್ಶನಗಳ ಪ್ರಶಂಸೆ, ಗೇಲಿ, ಹಗುರ ಮಾತುಗಳು ತೇಲುವುದನ್ನು ನೋಡಿದ್ದೇನೆ. ಇದರಿಂದ ಕಲಾವಿದನಿಗೆ ಅಂದಿನ ತನ್ನ ಪಾತ್ರಕ್ಕೆ ಮಾನಸಿಕವಾಗಿ ತಯಾರಿಯಾಗಲು ಕಷ್ಟವಾಗುತ್ತದೆ. ನಷ್ಟ ಯಾರಿಗೆ ಹೇಳಿ? ಅವರ ಪಾತ್ರವನ್ನು ನೋಡಲು ಬಂದ ಅಭಿಮಾನಿಗಳಾದ ನಮಗೆ ತಾನೆ?
            ಬಣ್ಣದ ವೇಷವೊಂದು ರಂಗಕ್ಕೆ ತನ್ನ ಪ್ರವೇಶಕ್ಕಿಂತ ಐದಾರು ಗಂಟೆಗಳ ಮೊದಲೇ ತಯಾರಿ ಬಯಸುತ್ತದೆ. ಚಿಟ್ಟಿ ಇಡುವ ಕೆಲಸ ಸೂಕ್ಷ್ಮತೆ ಮತ್ತು ಎಚ್ಚರವನ್ನು ಬೇಡುವ ಜ್ಞಾನ. ಏಕಾಗ್ರತೆಯೇ ಬಣ್ಣಗಾರಿಕೆಯ ಸುಭಗತನಕ್ಕೆ ಮಾನದಂಡ. ಸ್ವಲ್ಪ ಹೆಚ್ಚು ಕಮ್ಮಿ ಆದರಂತೂ ವೇಷ ಅಂದಗೆಡುತ್ತದೆ. ವೇಷ ತಯಾರಿಯ ಪ್ರತಿಹಂತಕ್ಕೂ ನಾವು ಪ್ರತ್ಯಕ್ಷದರ್ಶಿಗಳಾದರೆ ಆ ವೇಷ ರಂಗಕ್ಕೆ ಬಂದಾಗ ರಮ್ಯಾದ್ಭುತ ಲೋಕವನ್ನು ಅನುಭವಿಸಲು ಕಷ್ಟವಾಗುತ್ತದೆ.
            ಕಲಾವಿದರು ಬೇರೆ ಬೇರೆ ಪ್ರದರ್ಶನಗಳಲ್ಲಿ ಭಾಗವಹಿಸಿ ಬಂದಿರುವಾಗ ನಿದ್ರಾವಿಹೀನತೆಯಿಂದ ಸುಸ್ತಾಗಿರುವುದು ಸಹಜ. ಚೌಕಿಗೆ ಬೇಗನೆ ಬಂದು ವಿಶ್ರಾಂತಿಯಲ್ಲಿರುತ್ತಾರೆ. ಅಂತಹ ಕಲಾವಿದರನ್ನು ಎಬ್ಬಿಸಿ ನಮ್ಮ ಅಭಿಮಾನವನ್ನು ಮಾತಿನ ಮೂಲಕ ಹರಿಸುವುದನ್ನು ಕಣ್ಣಾರೆ ನೋಡಿದ್ದೇನೆ. ಅನುಭವಿಸಿದ್ದೇನೆ. ಇದರಿಂದಾಗಿ ಕಲಾವಿದರಿಗೆ ಪಾತ್ರವನ್ನು ನಿರೀಕ್ಷಿತ ರೀತಿಯಲ್ಲಿ ಅಭಿವ್ಯಕ್ತಿಸಲು ತ್ರಾಸವಾಗುತ್ತದೆ. ಅಂತಹ ಹೊತ್ತಲ್ಲಿ ಅಭಿಮಾನಿಗಳಾದ ನಾವೇ, ’ಛೇ... ಇವತ್ತು ಅವರ ಪಾತ್ರ ಸೊರಗಿದೆ. ಮೊನ್ನೆ ಚೆನ್ನಾಗಿತ್ತು'  ಎಂದು ಗೊಣಗುತ್ತೇವೆ. 
            ಈಗಿನ ಬಹುತೇಕ ಪ್ರದರ್ಶನಗಳಲ್ಲಿ ಪ್ರತಿಭಾವಂತ ಛಾಯಾಗ್ರಾಹಕರ ಕೈಚಳಕ ನಿಜಕ್ಕೂ ಅದ್ಭುತ. ಇವರು ಚೌಕಿ ಮತ್ತು ರಂಗಕ್ಕೆ ಏಕಕಾಲದಲ್ಲಿ ಕಣ್ಗಾವಲಿನಲ್ಲಿರುತ್ತಾರೆ. ಕಲಾವಿದರನ್ನು 'ಮಾತನಾಡಿಸದೆ' ತಮ್ಮಷ್ಟಕ್ಕೆ ಬೇಕಾದ ಕೋನದಲ್ಲಿ ಚಿತ್ರಗಳನ್ನು ಕ್ಲಿಕ್ಕಿಸುವ ಯಕ್ಷಪ್ರಿಯರ ಕೈಚಳಕಕ್ಕೆ ಬೆರಗಾಗಿದ್ದೇನೆ. ಚಿತ್ರಗಳೇ ಒಂದು ಪ್ರದರ್ಶನ. ಅದಕ್ಕೆ ಭಾವ, ಭಾವನೆಯನ್ನು ಆವಾಹಿಸುವ ಮನಸ್ಸನ್ನು ಸಜ್ಜುಗೊಳಿಸುವ ಛಾಯಾಗ್ರಾಹಕ ಬಂಧುಗಳ ಶ್ರಮಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ.
ಯಕ್ಷಗಾನವೊಂದು ಕಲೆ. ಅದರೊಳಗಿನ ಜೀವಸತ್ವದ ಅಭಿವ್ಯಕ್ತಿ ಕಲಾವಿದನಿಂದ. ಹಾಗಾಗಿ ಕಲೆ ಮತ್ತು ಕಲಾವಿದ ಒಂದೇ ಸರಳರೇಖೆಯಲ್ಲಿದ್ದಾಗ ಪ್ರದರ್ಶನದ ನಿಜಸುಖ ಅನುಭವಿಸಲು ಸಾಧ್ಯವಾಗುತ್ತದೆ. ಪಾತ್ರಗಳು ನಮ್ಮೊಳಗೆ ರಿಂಗಣಿಸಲು ಸಹಾಯವಾಗುತ್ತದೆ.
           ಅಭಿಮಾನದ ಪರಾಕಾಷ್ಠೆಯಲ್ಲಿ ಕಲೆ ಮತ್ತು ಕಲಾವಿದ ಪ್ರತ್ಯೇಕಗೊಳ್ಳುತ್ತಿದ್ದಾನೆ ಎಂದು ಅನಿಸುತ್ತದೆ.  ಹೀಗಾಗದಂತೆ ಅಭಿಮಾನಿಗಳಾದ ನಾವು ಎಚ್ಚರವಾಗುವುದೇ ಕಲೆಗೆ ಮತ್ತು ಕಲಾವಿದನಿಗೆ ಕೊಡುವ ಮಾನ-ಸಂಮಾನ. ನಮ್ಮೊಳಗೆ ವೈಯಕ್ತಿಕ ಅಭಿಮಾನಕ್ಕಿಂತಲೂ ಕಲಾಭಿಮಾನಕ್ಕೆ ಸ್ಥಾನ ಮೀಸಲಿರಿಸೋಣ.

 (ಸಾಂದರ್ಭಿಕ ಚಿತ್ರ)  (ಚಿತ್ರ : ಶ್ಯಾಮ್ ಪ್ರಸಾದ್ ಕುಂಚಿನಡ್ಕ) 
(19-9-2015- ಪ್ರಜಾವಾಣಿ-ದಧಿಗಿಣತೋ ಅಂಕಣ)


Wednesday, September 16, 2015

ಚಿಕ್ಕ ಮೇಳದ ದೊಡ್ಡ ಹೆಜ್ಜೆ

              "ಯಕ್ಷಗಾನ ಹೈಟೆಕ್ ಆಗತ್ತಿದೆ. ಕಲಾವಿದರು ಇನ್ಸ್ಟಂಟ್ ಆಗುತ್ತಿದ್ದಾರೆ.." - ಸಮಾರಂಭವೊಂದರಲ್ಲಿ ಮಾತಿನ ಮಧ್ಯೆ ಮಿಂಚಿದ ಗಣ್ಯರೊಬ್ಬರ ಮಾತು. ಹೌದು, ಯಕ್ಷಗಾನವನ್ನು ನೋಡುವ, ಅನುಭವಿಸುವ, ಅರ್ಥ ಮಾಡುವ್ ಮನಃಸ್ಥಿತಿ ಬದಲಾಗಿದೆ. ಸಮಗ್ರತೆಯ ನೋಟಕ್ಕೆ ಮಸುಕು ಬಂದಿದೆ. ಬಿಡಿಬಿಡಿಯಾದ ಮಾದರಿಗಳು ಚಿಗುರಿವೆ.
             ಹೈಟೆಕ್ಕಿನ ಪಾಶಕ್ಕೆ ಸಿಗದ ಕಲಾವಿದರು ಎಷ್ಟಿಲ್ಲ? ಅವರದನ್ನು ಅಪೇಕ್ಷೆ ಪಡುವುದಿಲ್ಲ ಬಿಡಿ. ಆದರೆ ಬದುಕಿನ ಪ್ರಶ್ನೆ ಬಂದಾಗ ಮೇಳದ ತಿರುಗಾಟದಿಂದ ಆರು ತಿಂಗಳು ಹೊಟ್ಟೆ ತಂಪಾಗುತ್ತದೆ. ಮಿಕ್ಕುಳಿದ ಮಾಸಗಳಲ್ಲಿ ಯಕ್ಷಗಾನವಲ್ಲದೆ ಅನ್ಯ ಉದ್ಯೋಗ ಹೊಂದದು. ಈ ಆಶಯದಿಂದ 'ಶ್ರೀ ದುರ್ಗಾಪರಮೇಶ್ವರೀ (ಶ್ರೀ ಉಳ್ಳಾಲ್ತಿ) ಕೃಪಾಶ್ರಿತ ಯಕ್ಷಗಾನ ಮಂಡಳಿ, ಅಂಗ್ರಿ-ಕನ್ಯಾನ' ರೂಪುಗೊಂಡಿದೆ. ಉಳಿದ ಮೇಳಗಳು ಪತ್ತನಾಜೆಗೆ ಗೆಜ್ಜೆ ಬಿಚ್ಚಿ, ದೀಪಾವಳಿಗೆ ಗೆಜ್ಜೆ ಕಟ್ಟುವಲ್ಲಿಯ ತನಕ ಇದು ಸಕ್ರಿಯವಾಗಿದೆ. ಇದೀಗ ಎರಡನೇ ವರುಷದ ತಿರುಗಾಟ.  
             ಆರು ಮಂದಿ ಕಲಾವಿದರ 'ಚಿಕ್ಕ ಮೇಳ'. ಹಿಂದಿನ ಕಲಾವಿದರನ್ನು ಮಾತನಾಡಿಸಿದಾಗ ತಾವೂ ಚಿಕ್ಕಮೇಳಗಳಲ್ಲಿ ಬಣ್ಣ ಹಚ್ಚಿದ ದಿವಸಗಳನ್ನು ನೆನಪಿಸಿಕೊಳ್ಳುತ್ತಾರೆ. ಒಂದು ಕಾಲಘಟ್ಟದಲ್ಲಿ ಕಲಾವಿದರಿಗೆ ಚಿಕ್ಕ ಮೇಳವೇ ಆಸರೆ. ಭಾಗವತ, ಚೆಂಡೆ-ಮದ್ದಳೆ ವಾದಕರು, ರಾಧಾ-ಕೃಷ್ಣ ವೇಷಗಳು ಮತ್ತು ಓರ್ವ ನಿರ್ವಹಣೆ. ಮನೆಮನೆಗೆ ಭೇಟಿ ನೀಡಿ, ಪೌರಾಣಿಕ ಕಥಾನಕದ ಒಂದು ಸನ್ನಿವೇಶದ ಸಂಭಾಷಣೆಯನ್ನು ಪ್ರಸ್ತುತಪಡಿಸುತ್ತಾರೆ. ಮನೆಯವರು ನೀಡುವ ಸಂಭಾವನೆಯ ಮೊತ್ತಗಳು ತಂಡದ ಉಸಿರು. ಅಲ್ಲಿಲ್ಲಿ ಕೆಲವು ತಂಡಗಳು ಸದ್ದು ಮಾಡುತ್ತಿವೆ.
              ಕನ್ಯಾನ-ಅಂಗ್ರಿಯ 'ಚಿಕ್ಕಮೇಳ'ವು ಪುತ್ತೂರು ಪರಿಸರದಲ್ಲಿ ಕಳೆದ ವರುಷ ಯಶಸ್ವಿ ತಿರುಗಾಟ ಮಾಡಿದೆ. ನಗರವನ್ನೂ ಸೇರಿಸಿಕೊಂಡು ಸುತ್ತಲಿನ ಹಳ್ಳಿಗಳಲ್ಲಿ ಚೆಂಡೆಮದ್ದಳೆಯ ಸದ್ದನ್ನು ಅನುರಣಿಸಿದೆ. ಜನರು ಹಾರ್ದಿಕವಾಗಿ ತಂಡವನ್ನು ಸ್ವೀಕರಿಸಿದ್ದಾರೆ. ಅನ್ಯಧರ್ಮೀಯರೂ ಸ್ಪಂದಿಸಿದ್ದಾರೆ. ತಂಡದ ಸದಸ್ಯರ ಸೌಜನ್ಯ ನಡವಳಿಕೆಯು ವಿಶ್ವಾಸವೃದ್ಧಿಗೆ ಕಾರಣವಾಗಿದೆ. ನಾಲ್ಕು ತಿಂಗಳುಗಳಲ್ಲಿ ಸಾವಿರ, ಸಾವಿರದೈನೂರು ಮನೆಗಳಿಗೆ ಮೇಳ ಕಾಲಿಟ್ಟಿದೆ.
                "ಚಿಕ್ಕಮೇಳದ ವೇಷವು ಅಂಗಳದಲ್ಲಿ ಕುಣಿಯದು. ಮನೆಯ ಒಳಗಡೆ ಚಾವಡಿಯಲ್ಲಿ ಅವಕಾಶ ಮಾಡಿಕೊಡಬೇಕೆಂದು ವಿನಂತಿಸುತ್ತಾರೆ. ಇದನ್ನು ಒಪ್ಪದ ಮಂದಿ ಇದ್ದಾರೆ. ಜಗಲಿಗೆ ಪ್ರವೇಶ ಕೊಡದ ಸಹೃದಯಿಗಳಿದ್ದಾರೆ! ತಂಡ ಅಂಗಳಕ್ಕೆ ಬಂದಾಗ ಹಗುರವಾಗಿ ವ್ಯವಹರಿಸಿದವರೂ ಇದ್ದಾರೆ. ಯಕ್ಷಗಾನದ ಮುಂದೆ ಮಾನ-ಅಪಮಾನ ನಮಗೆ ಸಮಾನ." ಎನ್ನುತ್ತಾರೆ ತಂಡದ ಮುಖ್ಯಸ್ಥ ಜಗದೀಶ ಕನ್ಯಾನ. ಇವರು ಶ್ರೀ ಕಟೀಲು ಮೇಳದ ಕಲಾವಿದ.
                ದಿವಸಕ್ಕೆ ಇಪ್ಪತ್ತರಿಂದ ಇಪ್ಪತ್ತೈದು ಮನೆಗಳ ಆಯ್ಕೆ. ಮೊದಲೇ ಗೊತ್ತುಮಾಡಿ ಕರಪತ್ರವನ್ನು ಹಂಚುತ್ತಾರೆ. ಸಂಜೆ ಆರಕ್ಕೆ ದಿಗ್ವಿಜಯ ಹೊರಟರೆ ಹತ್ತೂವರೆಗೆ ಅಂದಂದಿನ ತಿರುಗಾಟ ಕೊನೆ. ಇಪ್ಪತ್ತು ರೂಪಾಯಿಯಿಂದ ಒಂದು ಸಾವಿರ ರೂಪಾಯಿ ತನಕ ಸಂಭಾವನೆಯನ್ನು ನೀಡಿದ ಕಲಾ ಪೋಷಕರ ಪ್ರೋತ್ಸಾಹವನ್ನು  ನೆನೆಯುತ್ತಾರೆ. ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನವು ತಂಡಕ್ಕೆ ವಸತಿ, ಅಶನದ ಕಲಾಶ್ರಯ ನೀಡಿದೆ. ಒಂದೆರಡು ಯುವಕ ಮಂಡಲವು ತಂಡಕ್ಕೆ ಪೂರ್ಣ ಪ್ರಮಾಣದ ಸಹಕಾರ ನೀಡಿ ತನ್ನ ವ್ಯಾಪ್ತಿಯ ಎಲ್ಲಾ ಮನೆಗಳ ಸಂದರ್ಶನಕ್ಕೆ ಅನುವು ಮಾಡಿಕೊಟ್ಟಿತ್ತು.
                ಚಿಕ್ಕ ಮೇಳವು ಕೇವಲ ಕುಣಿತಕ್ಕೆ ಸೀಮಿತವಾಗಿಲ್ಲ. ಮಾನವೀಯ ಸ್ಪಂದನವನ್ನು ಹೂರಣಕ್ಕೆ ಸೇರಿಸಿಕೊಂಡಿದೆ. ತಂಡವು ಹೋದಾಗ ಆ ಮನೆಯಲ್ಲಿ ಯಾರಿಗಾದರೂ ಅಸೌಖ್ಯವಿದೆ ಎಂದಿಟ್ಟುಕೊಳ್ಳೋಣ. ಮನೆಯ ಯಜಮಾನ ನೀಡಿದ ಸಂಭಾವನೆಗೆ ಒಂದಿಷ್ಟು ತಮ್ಮ ದೇಣಿಗೆಯನ್ನೂ ಸೇರಿಸುತ್ತಾರೆ. ವೇಷ ಕುಣಿದ ಬಳಿಕ ಪ್ರಸಾದರೊಂದಿಗೆ ಈ ಮೊತ್ತವನ್ನು ಸಹಕಾರದ ನೆಲೆಯಲ್ಲಿ ಮರಳಿಸುತ್ತಾರೆ. ಮೊತ್ತ ಕಿಂಚಿತ್ ಆಗಿರಬಹುದು, ಆದರೆ ಇಂತಹ ಮಾನವೀಯ ಮುಖ ಯಾವ ಹೈಟೆಕ್ ವ್ಯವಸ್ಥೆಯಲ್ಲಿದೆ? ತಂಡದ ಸದಸ್ಯರು ಶ್ರೀಮಂತರಲ್ಲ, ಅವರಲ್ಲಿ ಹೃದಯ ಶ್ರೀಮಂತಿಕೆ ಇದೆ. ಕಷ್ಟ-ಸುಖಗಳ, ನೋವು-ನಲಿವುಗಳ ಅನುಭವವಿದೆ. ಸಮಾಜದಲ್ಲಿ ಕಲಾವಿದರ ಕುರಿತು ಗೌರವ ಭಾವನೆ ಮೂಡಲು ಈ ಕಾರ್ಯಹೂರಣವೊಂದೇ ಸಾಕು.
             ಈ ವರುಷ ಪುತ್ತೂರಿನಿಂದ ಮೇಳ ಹೊರಟಿದೆ. ತಂಡವು ಅನುಭವಿ ಗುರುಗಳಿಂದ  ನಾಟ್ಯ ತರಬೇತಿ ಆರಂಭಿಸಿದೆ. ಬಣ್ಣದ ತರಗತಿಗಳನ್ನು ಏರ್ಪಡಿಸುವ ಯೋಜನೆ ಹೊಂದಿದೆ.  ಚಿಕ್ಕಮೇಳದ ತಿರುಗಾಟದ ನೆನಪಿಗಾಗಿ ಕನ್ಯಾನದ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಕಿಂಚಿತ್ ದೇಣಿಗೆ ನೀಡಲು ನಿರ್ಧರಿಸಿದ್ದೇವೆ. ಈ ವರುಷ ಎರಡು ತಂಡವಾಗಿದೆ. ಒಂದು ಪುತ್ತೂರು ಸುತ್ತಮುತ್ತ ತಿರುಗಾಟ ಮಾಡಿದರೆ ಮತ್ತೊಂದು ಕಬಕವನ್ನು ಕೇಂದ್ರವಾಗಿಟ್ಟುಕೊಂಡಿದೆ, ಎನ್ನುತ್ತಾರೆ ಜಗದೀಶ್.
           ಚಿಕ್ಕ ಮೇಳದ ತಂಡಕ್ಕೆ ಹೊಟ್ಟೆಪಾಡಿನ ಉದ್ದೇಶವಾದರೂ ಅದರಲ್ಲಿ ಸಾಮಾಜಿಕ ಕಳಕಳಿ, ಶಿಸ್ತು, ಪ್ರಾಮಾಣಿಕತೆ ಮತ್ತು ಬದ್ಧತೆಯಿದೆ. ಈ ನಾಲ್ಕು ಅಂಶಗಳು ಜೀವಂತವಾಗಿರುವ ತನಕ ತಂಡ ಸದೃಢ. ಜತೆಗೆ ಯಕ್ಷಗಾನದ ಕುರಿತು ಅಪ್ಪಟ ಪ್ರೀತಿಯೂ ಸೇರಿದೆ.
              ರಿಮೋಟ್ಗಳು ಸಾಂಸ್ಕೃತಿಕ ಆಯ್ಕೆಯನ್ನು ಮಾಡುತ್ತಿರುವ ಪ್ರಸ್ತುತ ದಿನಮಾನದಲ್ಲಿ ಯಕ್ಷಗಾನದ ಮಾದರಿಯನ್ನು ಮನೆಮನೆಗೆ ಒಯ್ಯುವ ಚಿಕ್ಕಮೇಳದ ಸಾಧನೆಯೊಂದು ದೊಡ್ಡ ಹೆಜ್ಜೆ.

Friday, September 4, 2015

ಶ್ರದ್ಧೆ-ವಾಸ್ತವಗಳ ಮಿಳಿತದ ಕಾಲಮಿತಿ

                ಕಾಲಮಿತಿ ಯಕ್ಷಗಾನದ ಮಾತುಕತೆಗಳು ಮರುಜೀವ ಪಡೆಯುತ್ತಿದೆ. ಶ್ರದ್ಧೆಯ ನೆರಳಿನಲ್ಲಿ ಕಟು ವಿಚಾರಗಳು ತೀಕ್ಷ್ಮವಾಗಿರುತ್ತದೆ. ಕಲೆಯೊಂದರ ಔನ್ನತ್ಯಕ್ಕಿದು ಒಳಸುರಿ. ವಾಸ್ತವಕ್ಕೆ ಬಂದಾಗ ರಾಜಿಯ ಛಾಯೆ. ಸಾಂಸ್ಕೃತಿಕ ಪಲ್ಲಟಗಳ ಮಧ್ಯೆ ಪರಂಪರೆಯ ಸೌಂದರ್ಯವನ್ನು ಉಳಿಸಿಕೊಳ್ಳುವ ಎಚ್ಚರ. ಹಾಗಾಗಿ ಶ್ರದ್ಧೆ ಮತ್ತು ವಾಸ್ತವಗಳನ್ನು ಮಿಳಿತಗೊಳಿಸಲೇ ಬೇಕಾಗಿದೆ.
              ಆಟವೇ ಇರಲಿ, ಕೂಟವೇ ಇರಲಿ, ರಾತ್ರಿಯಿಡೀ ನಡೆಯುವ ಕಲಾಪ. ಪ್ರದರ್ಶನದ ಹಿಂದು ಮುಂದಿನ  ವಿಮರ್ಶೆಗಳಲ್ಲಿ ಸಾಂಸ್ಕೃತಿಕ ಗಟ್ಟಿತನಗಳಿದ್ದ ಕಾಲಕ್ಕೆ ಹಿರಿಯರು ಸಾಕ್ಷಿಗಳಾಗುತ್ತಾರೆ. ಅಲ್ಲೋ ಇಲ್ಲೋ ರಾತ್ರಿಯಿಡೀ ಬಿಟ್ಟರೆ ತಾಳಮದ್ದಳೆಗಳು ಕಾಲಮಿತಿಗೊಂಡಿವೆ. ಆಟಗಳೂ ಅದೇ ಜಾಡಿನಲ್ಲಿ ಜಾರಿವೆ, ಜಾರುತ್ತಿವೆ.
             ರಾತ್ರಿಯ ಪ್ರದರ್ಶನಗಳಲ್ಲಿ ಯಕ್ಷಗಾನೀಯವಾದ ರಸ ಸಂದರ್ಭಗಳು ವೈಭವ ಪಡೆಯುತ್ತವೆ. ಪಾತ್ರಕ್ಕಿರುವ ಎಲ್ಲಾ ಸಾಧ್ಯತೆಗಳನ್ನು ಸೂರೆಗೊಳ್ಳಲು ಯಥೇಷ್ಟ ಅವಕಾಶ. ಈ ಉಪಾಧಿಯಲ್ಲಿಯೇ ಕಲಾವಿದ ಸಶಕ್ತನಾಗಿ ಬೆಳೆಯುತ್ತಾನೆ. ಬಾಲಗೋಪಾಲ ವೇಷದಿಂದ ತೊಡಗಿ ಮುಖ್ಯ ಪಾತ್ರಗಳ ತನಕ ರಂಗವೇ ಗುರುಕುಲ. ಕಲಾವಿದರ ಒಡನಾಟವೇ ಪಠ್ಯ. ಅನಿವಾರ್ಯವಾದ ಅಲಿಖಿತ ಪದ್ಧತಿಗಳು ಕಲಾವಿದರ ಬೆಳವಣಿಗೆಯ ಸಿದ್ಧಾಹಾರ.
             ಬೆರಳೆಣಿಕೆಯ ಮೇಳಗಳಲ್ಲಿ ಇಂತಹ ಶೈಕ್ಷಣಿಕ ರೂಢನೆಯಿದೆ. ಮಿಕ್ಕಂತೆ ಕಲಿಕೆ ಎನ್ನುವುದು ಹೆಜ್ಜೆ, ದಿಂಞಣಗಳಿಗೆ ಸೀಮಿತವಾಗಿದೆ. ವೇಗದ ಬದುಕಿನಲ್ಲಿ ಐದಾರು ತಿಂಗಳಲ್ಲೇ ದಿಢೀರ್ ಕಲಾವಿದರಾಗಬಹುದು! ಕಂಠ, ಸೊಂಟ ತ್ರಾಣಗಳಿದ್ದರೆ ಸಾಕು. ಪ್ರೇಕ್ಷಕರೂ ಇಂತಹ ಕಲಾವಿದರ ಸ್ವಾಗತಕ್ಕೆ ಸಜ್ಜಾಗುತ್ತಾರೆ! ಆಗ ರಂಗಕಲಿಕೆಯ ಆಯುಸ್ಸು ಇಳಿಜಾರಿನತ್ತ ನೋಡಲುಪಕ್ರಮಿಸುತ್ತದೆ. ಎಂಟೋ ಒಂಭತ್ತೋ ಘಂಟೆಗೆ ಶುರುವಾಗುವ ಪೂರ್ವರಂಗಕ್ಕೆ ಆಕಳಿಕೆಯ ಮಾಲೆ. ಇಡೀರಾತ್ರಿ ಕುಳಿತು ಆಟ ನೋಡುವ ಮನಃಸ್ಥಿತಿಯೂ ಮಂಕಾಗುತ್ತಿದೆ.
               ಯಕ್ಷಗಾನದ ಸೌಂದರ್ಯ ವೈಭವ - ಪೂರ್ವರಂಗವೂ ಸೇರಿ - ದರ್ಶನಕ್ಕೆ ರಂಗ ಮತ್ತು ಕಲಾವಿದರ ಶ್ರಮ ಗುರುತರ. ಕಲೆಯ ಪ್ರಾಕಾರವೊಂದು ಅನುಷ್ಠಾನಗೊಂಡಾಗಲೇ ಬೆಳೆಯುತ್ತದೆ, ಉಳಿಯುತ್ತದೆ. ಅದನ್ನು ಬೆಂಬಲಿಸುವ, ಅದರಲ್ಲಿ  ಸೌಂದರ್ಯವನ್ನು ಕಾಣುವ ಅರಿವು ಮತ್ತು ಮನಃಸ್ಥಿತಿಯನ್ನು ಪ್ರೇಕ್ಷಕರಾದ ನಾವು ರೂಢಿಸಿಕೊಳ್ಳಬೇಕು. ಅಭಿಮಾನದ ಹೊನಲು ರಂಗದ ಉಳಿವಿಗೆ ಪೂರಕವಾಗಬೇಕು. ವಿಪರೀತ ಅಭಿಮಾನವು ಕಲಾವಿದನ ಬೌದ್ಧಿಕ ಸ್ರೋತಕ್ಕೆ ತಡೆಯಾಗುತ್ತದೆ.
               ಕೆಲವು ಬಯಲಾಟವನ್ನು ನೋಡುತ್ತಿದ್ದೇನೆ. ಸಂಘಟಕರ ಶ್ರಮದಿಂದಾಗಿ ಪ್ರೇಕ್ಷಕ ಗಡಣ ತುಂಬಿರುತ್ತದೆ. ಆದರಾತಿಥ್ಯಗಳಲ್ಲಿ ಕಾಂಚಾಣ ಸದ್ದು ಮಾಡುತ್ತಿರುತ್ತದೆ. ಪ್ರದರ್ಶನವೂ ರೈಸುತ್ತದೆ. ಅದ್ದೂರಿತನ ನಗುತ್ತದೆ. ಈ ಭಾಗ್ಯ ಎಷ್ಟು ಪ್ರದರ್ಶನಗಳಿಗಿವೆ? ಎಷ್ಟು ಮೇಳಗಳಿಗಿವೆ? ಆರಂಭಕ್ಕೆ ಸಾವಿರಾರು ಮಂದಿ ಸೇರಿದ್ದರೂ ಮಧ್ಯರಾತ್ರಿ ಕಳೆಯುವಾಗ ಕರಗುತ್ತದೆ. ಮುಂಜಾವಿಗಾಗುವಾಗ ಹತ್ತೋ ಇಪ್ಪತ್ತು ಮಂದಿ. ಉದಾ: ಮಧು ಕೈಟಭರ ಸನ್ನಿವೇಶದಲ್ಲಿ ಕಿಕ್ಕಿರಿದ ಜನಸಂದಣಿ. ಮಹಿಷಾಸುರ ಪ್ರವೇಶಕ್ಕೆ ಅಬ್ಬರದ ಆಟೋಪ. ಯಾವಾಗ ಮಹಿಷ ವಧೆ ಆಯಿತೋ ಆಗ ನೋಡಬೇಕು, ಅಲ್ಲಿದ್ದ ದ್ವಿಚಕ್ರಗಳ ಸದ್ದು ಮಾಡುವ ಪರಿ! ನಂತರದ ಕಥಾಭಾಗಕ್ಕೆ ಕಲ್ಪನೆಯ ಸ್ಪರ್ಶ.  ವಾಟ್ಸಪ್ಪಿನಲ್ಲಿ ಚಾಟ್.
               ಕಾಲಮಿತಿಯು ಪಟ್ಟಣಿಗರಿಗೆ ಖುಷಿ. ರಾತ್ರಿ ಹತ್ತರೊಳಗೆ ಮುಗಿಯುವ ಆಟವನ್ನು ಯಕ್ಷಪ್ರಿಯರು ತಪ್ಪಿಸಿ ಕೊಳ್ಳುವುದಿಲ್ಲ. ಇಲ್ಲಿರುವ ತೊಡಕು ಒಂದೇ. ನಾಲ್ಕು ಗಂಟೆಯಲ್ಲಿ ಮೂರು ಪ್ರಸಂಗಗಳನ್ನು ಮುಗಿಸುವ ಧಾವಂತ! ರಂಗದ ವೇಗವನ್ನು ಗ್ರಹಿಸುವ ತಾಕತ್ತು ಪ್ರೇಕ್ಷಕನ ಚಿತ್ತಕ್ಕಿರುವುದಿಲ್ಲ. ಔಚಿತ್ಯದ ಮಾತಿಗೂ ತಿಣುಕಾಡುವ ಪಾತ್ರಗಳು! ಒಂದೇ ಪ್ರಸಂಗವನ್ನು ಕಾಲಮಿತಿಯಲ್ಲಿ ಸರ್ವಾಂಗಸುಂದರವಾಗಿ ಮೂಡಿಸಲು ಸಾಧ್ಯವಾದರೆ ಇಡೀರಾತ್ರಿಯ ಪರಿಣಾಮ ಕಾಲಮಿತಿಯಲ್ಲಿ ತರಬಹುದು. ಹಾಗೆ ಆದೀತೆಂದು ನನಗಂತೂ ವಿಶ್ವಾಸವಿಲ್ಲ.
              ಹಳ್ಳಿ, ಪೇಟೆಗಳ ಕಲಾಭಿಮಾನಿಗಳಿಗೆ ಅವರದ್ದೇ ಸಮಸ್ಯಾ ವರ್ತುಲಗಳಿವೆ. ಯಾರಿಗೂ ಪುರುಸೊತ್ತಿಲ್ಲ. ಎಲ್ಲರೂ ಬ್ಯುಸಿ. ಬೆರಳ ತುದಿಯಲ್ಲಿ ಸಾಂಸ್ಕೃತಿಕ ಆಯ್ಕೆಗಳ ನಿಯಂತ್ರಣವೇ ಸಿಂಹಪಾಲು. ಅಲ್ಲಿ ಯಕ್ಷಗಾನಕ್ಕೆ ಕೊನೆಯ ಸಾಲು.  ರಾತ್ರಿಯಿಡೀ ಪ್ರೇಕ್ಷಕರು ಉಪಸ್ಥಿತರಿರುವ ವಾತಾವರಣದಲ್ಲಿ ಇಡೀ ರಾತ್ರಿಯ ಪ್ರದರ್ಶನ ಹೊಂದುತ್ತದೆ. ನಗರದಲ್ಲಿ ಕಾಲಮಿತಿಯೇ ಸೂಕ್ತ. ಇಷ್ಟೆಲ್ಲಾ ಹೇಳುವಾಗ ತಂಡದ ನಿರ್ವಹಣೆಯ ವ್ಯವಸ್ಥೆಯ ಸುಖ-ದುಃಖಗಳ ಚಿಂತನೆಯು ಇನ್ನೊಂದು ಮುಖದಿಂದ ಆಗಬೇಕಾಗಿದೆ.
             ಶ್ರೀ ಕ್ಷೇತ್ರ ಧರ್ಮಸ್ಥಳ ಮೇಳವು ಕಾಲಮಿತಿಗೆ ಬದಲಾಗಿದೆ. ಪ್ರಸಿದ್ಧರನ್ನೊಳಗೊಂಡ ಮೇಳದ ಯಶೋಯಾನ ಈಗ ಇತಿಹಾಸ. ಯಾವುದೇ ಒಂದು ಪ್ರಾಕಾರ ಬದಲಾವಣೆಯಾಗುವಾಗ ಪರ-ವಿರೋಧ ಅಭಿಪ್ರಾಯಗಳು ಸಹಜ. ಕಿರಿದು ಸಮಯದಲ್ಲಿ ಉತ್ತಮ ಪ್ರದರ್ಶನವನ್ನು ನೀಡಲು ಮೇಳವು ಸಶಕ್ತವಾಗಲಿ. ಶತಮಾನಗಳ ಇತಿಹಾಸದ ಮೇಳದ ವೈಭವ ಕಾಲಮಿತಿಯಲ್ಲೂ ಮುಂದುವರಿಯಲಿ.
               ತಂತ್ರಜ್ಞಾನಗಳು ಕ್ಷಣಕ್ಷಣಕ್ಕೆ ಬದಲಾಗುತ್ತಲೇ ಇರುತ್ತದೆ. ಅದರ ವೇಗವನ್ನು ಹಿಂದಿಕ್ಕಲು ಬದುಕಿನ ವೇಗ ಸಾಕಾಗುತ್ತಿಲ್ಲ. ಯಕ್ಷಗಾನದ ಮೇಲಿನ ಪ್ರೀತಿ ಬೇರೆ. ಆಸಕ್ತಿ ಬೇರೆ. ಅದನ್ನು ಸ್ವೀಕರಿಸುವ ಮನಃಸ್ಥಿತಿ ಬೇರೆ. ಈ ಮೂರರ ತ್ರಿವೇಣಿ ಸಂಗಮವು ಒಂದೇ ಹಳಿಯಲ್ಲಿ ಹರಿಯಬೇಕು. ವ್ಯಕ್ತಿ ಅಭಿಮಾನಕ್ಕಿಂತ ದುಪ್ಪಟ್ಟು ಕಲೆಯ ಅಭಿಮಾನವನ್ನು ರೂಢಿಸಿಕೊಳ್ಳುವುದೇ ಯಕ್ಷಗಾನಕ್ಕೆ ನಾವೆಲ್ಲರೂ ಕೊಡುವ ಕಾಣ್ಕೆ.
(ಸಾಂದರ್ಭಿಕ ಚಿತ್ರ - ಚಿತ್ರ ಕೃಪೆ : ಡಾ.ಮನೋಹರ ಉಪಾಧ್ಯ)