Wednesday, December 7, 2016

ಮೌನದ ಹೊಳಪಿನಲ್ಲಿ ಇಣುಕುವ ಪಕ್ವತೆ  
                    "ಸಖಿ ಪಾತ್ರವೆಂದರೆ ಎಳೆಯ ಕಲಾವಿದರಿಗೆ ಉದಾಸೀನ. ಸಖಿ ಪಾತ್ರಧಾರಿ ಪ್ರತಿಭಾವಂತನಾದರೆ ಮಾತ್ರ ಪ್ರಧಾನ ಸ್ತ್ರೀ ಪಾತ್ರವು ವಿಜೃಂಭಿಸುತ್ತದೆ. ಸಖಿ ಮತ್ತು ರಾಣಿ ಪಾತ್ರಗಳ ಔಚಿತ್ಯಗಳನ್ನು ಬಲ್ಲವನೇ ನಿಜವಾದ ಕಲಾವಿದ. ಹಿಂದೆ ಸುರತ್ಕಲ್ ಮೇಳದಲ್ಲಿ ಕಡಬ ಸಾಂತಪ್ಪನವರು, ಕರ್ನಾಟಕ ಮೇಳದಲ್ಲಿ ಅಚ್ಯುತ ಮಣಿಯಾಣಿಯವರೆಲ್ಲಾ ಸಖಿ ಪಾತ್ರಗಳ ನಿರ್ವಹಣೆಯಲ್ಲಿ ಎತ್ತಿದ ಕೈ. ಇವರಂತೆ ಶ್ರೀಕಂಠ ಭಟ್ಟರೂ ಸಖಿ ಪಾತ್ರಗಳನ್ನು ಮಾಡುತ್ತಾ ಮುಂದೆ ಪ್ರಧಾನ ಸ್ತ್ರೀಪಾತ್ರಗಳ ನಿರ್ವಹಣೆಯಲ್ಲಿ ಯಶಕಂಡರು," ಡಾ.ಕೋಳ್ಯೂರು ರಾಮಚಂದ್ರ ರಾಯರು ಶ್ರೀಕಂಠ ಭಟ್ ದಾಮ್ಲೆಯವರ ರಂಗಬದುಕನ್ನು ವಿಮರ್ಶಿಸಿದ ಪರಿಯಿದು.
                ಬೆಳ್ತಂಗಡಿ ತಾಲೂಕಿನ ಶಿಶಿಲ, ಶಿಬಾಜೆ, ಭಂಡಿಹೊಳೆ, ಅರಸಿನಮಕ್ಕಿ.. ಮೊದಲಾದ ಊರುಗಳು ಪಶ್ಚಿಮ ಘಟ್ಟದ ತಪ್ಪಲಲ್ಲಿದೆ. ಇಲ್ಲಿ ಯಕ್ಷಗಾನಕ್ಕಾಗಿ ಅಹೋರಾತ್ರಿ ದುಡಿದು ಬದುಕನ್ನೇ ಕಲಾಸಂಬಂಧಿ ಯೋಜನೆ, ಯೋಜನೆಗಳಿಗೆ ಮಿಳಿತಗೊಳಿಸಿದ ಶಿಶಿಲದ ಶ್ರೀಕಂಠ ಭಟ್ ದಾಮ್ಲೆಯವರಿಗೆ ಈಗ ಎಪ್ಪತ್ತಮೂರು ವರುಷ. ಅವರ ತನು ವಯೋಸಹಜವಾದ ವಿಶ್ರಾಂತಿ ಬೇಡುತ್ತಿದೆ. ಮನಸ್ಸು ಓಡಾಟ ಬಯಸುತ್ತಿದೆ. ಕಲಾವಿದರು ಮಾತಿಗೆ ಸಿಕ್ಕಾಗ ಒಂದು ಪಾತ್ರವೇ ಆಗಿ ಬಿಡುತ್ತಾರೆ! ಮೊಗೆದಷ್ಟು ಆರದ ಅನುಭವದ ಗಾಥೆಗಳು. ನವೆಂಬರ ಕೊನೆಗೆ ಶ್ರೀಕಂಠ ಭಟ್ಟರಲ್ಲಿಗೆ ಹೋಗಿದ್ದಾಗ ಊರುಗೋಲು ಹಿಡಿಯುವಷ್ಟು ಶರೀರ ಮುಷ್ಕರ ಹೂಡಿತ್ತು. ಈ ಆಶಕ್ತತೆಗೆ ಅವರು ಕುಗ್ಗಿಲ್ಲ. ಪಾದರಸ ಚುರುಕಿನ ಅವರ ಸಕ್ರಿಯತೆಯನ್ನು  ಊರುಗೋಲು ನಿರ್ಬಂಧಿಸಿತ್ತು! ವಯಸ್ಸಾದಾಗ ಇದೆಲ್ಲಾ ಮಾಮೂಲಿ. ದೂರದ ಕಾರ್ಯಕ್ರಮಕ್ಕೆ ಹೋಗಲು ಸ್ನೇಹಿತರ ಅವಲಂಬನೆ ಬೇಕಷ್ಟೇ. ತೊಂದರೆಯಿಲ್ಲ, ಎಂದು ಅವರೇ ಸಮರ್ಥನೆ ಕೊಟ್ಟು ಮನತುಂಬಿ ಮಾತನಾಡಿದರು.
               ವರ್ತಮಾನದ ರಂಗದತ್ತ ನೋಡಿದರು. ಕೆಲವೊಂದು ಸ್ತ್ರೀಪಾತ್ರಗಳತ್ತ ಅವರಲ್ಲಿ ಅಸಹನೆಯಿತ್ತು. 'ಅಗತ್ಯಕ್ಕಿಂತ ಹೆಚ್ಚು ಯಾಕೆ ಕುಣಿತಾರೆ ಮಾರಾಯ್ರೆ' ಎಂದಾಗ ಸಾತ್ವಿಕ ಆಕ್ರೋಶದ ಎಳೆಯೊಂದು ಮಿಂಚಿತು. 'ಪಾತ್ರಕ್ಕೂ ಭಾವ ಇಲ್ವಾ, ಅದಕ್ಕೊಂದು ಮನಸ್ಸು ಇಲ್ವಾ. "ಯಕ್ಷಗಾನ ಎಂದ ಮಾತ್ರಕ್ಕೆ, ಗಂಟೆಗಟ್ಟಲೆ ಕುಣಿಯಬೇಕಾ? ಸರಿ, ಕುಣಿಯುವುದು ಕಲಾವಿದನ ತಾಕತ್ತು ಎಂದಿಟ್ಟುಕೊಳ್ಳೋಣ. ಕುಣಿದಾದ ಬಳಿಕ ಸರಿಯಾಗಿ ಮಾತನಾಡಲು ಆಗುತ್ತದಾ? ಶರೀರ ಹೆಚ್ಚು ದಂಡಿಸಲ್ಪಟ್ಟಾಗ ಭಾವಗಳ ತೇವ ಆರಿ ಹೋಗುತ್ತದೆ.  ಭಾವಗಳನ್ನು ತೋರಿಸದ ಪಾತ್ರವು ಪಾತ್ರವಾಗದು. ಅದು ವೇಷವಾದೀತಷ್ಟೇ..." ಹೀಗೆ ವಿಮರ್ಶಿಸುತ್ತಾ ಹೋದರು. 
                  ನಾಲ್ಕು ದಶಕಕ್ಕೂ ಮಿಕ್ಕಿ ತೆಂಕಿನ ರಂಗದಲ್ಲಿ ಕುಣಿದ ಶ್ರೀಕಂಠ ಭಟ್ಟರಿಗೆ ಪುರಾಣ ಲೋಕದ ಪಾತ್ರಗಳ ಆಳರಿವು ಇದೆ. ಪಾತ್ರ ಸ್ವಭಾವದ ಅನುಭವವಿದೆ. ಯಕ್ಷಗಾನದ ಉದ್ಧಾಮ ಕಲಾವಿದರ ಒಡನಾಟ ಮತ್ತು ಸಾಹಚರ್ಯಗಳಿಂದ ರಂಗದ ಆಳಂಗಗಳನ್ನು ಅನುಭವಿಸಿದವರು. ಹಾಗಾಗಿ ವರ್ತಮಾನದ ರಂಗವನ್ನು ವಿಮರ್ಶಿಸುವ ಯೋಗ್ಯತೆ ಶ್ರೀಕಂಠ ಭಟ್ಟರಿಗಿದೆ. ಪ್ರೇಕ್ಷಕರು ಬಯಸುತ್ತಾರೆ ಎಂದು ಕಲಾವಿದ ಆ ಲೆವೆಲ್ಲಿಗೆ ಯಾಕೆ ಬಾಗಬೇಕು? ಪುರಾಣ ಲೋಕವನ್ನು ಮತ್ತು ಸಾಂಸ್ಕೃತಿಕ ಮನಸ್ಸುಗಳನ್ನು ತಾನು ರಂಗದಲ್ಲಿ ಪ್ರತಿನಿಧಿಸುತ್ತಿದ್ದೇನೆ ಎನ್ನುವ ಎಚ್ಚರ ಬೇಕು," ಎನ್ನುವ ಅವರ ದೂರಗಾಮಿ ಚಿಂತನೆಯು ನನ್ನೊಳಗಿನ ಅರೆಬೆಂದ ಕಾಳಿಗೆ ಚುಚ್ಚಿತು!
                 ಶ್ರೀಕಂಠರದು ಯಕ್ಷಗಾನಕ್ಕೆ ಸಮರ್ಪಿತ ಬದುಕು. ಓದಿದ್ದು ಮೆಟ್ರಿಕ್. ಊರಿನಲ್ಲಿ ಟೆಂಟು ಊರುತ್ತಿದ್ದ ಮೇಳಗಳ ಆಟಗಳಿಗೆ ನೋಟಕನಾಗಿ ಭಾಗಿ. ಮರುದಿವಸ ಮನೆಯಂಗಳವೇ ಬಯಲಾಟದ ವೇದಿಕೆಯಾಗಿ ರೂಪುಗೊಳ್ಳುತ್ತಿತ್ತು. "ಕುರಿಯ ವಿಠಲ ಶಾಸ್ತ್ರಿಗಳ ಈಶ್ವರ ಮತ್ತು ಕೋಳ್ಯೂರು ರಾಮಚಂದ್ರ ರಾಯರ ದಾಕ್ಷಾಯಿಣಿ ಪಾತ್ರಗಳಿಗೆ ನಾನು ಮಾರು ಹೋದವನು," ಎನ್ನುತ್ತಾರೆ. ಮಕ್ಕಳ ಯಕ್ಷಗಾನ ಹುಚ್ಚು ಊರಿನ ಹಿರಿಯರ ಗಮನ ಸೆಳೆಯಿತು. ಪದ್ಮನಾಭ ಹೆಬ್ಬಾರರಿಂದ ನಾಟ್ಯ ತರಬೇತಿ. ಜತೆಗೆ ಅಭಿನಯ, ಸಂಭಾಷಣೆ ಕಲಿಕೆ. ಬಾಡಿಗೆಯ ವೇಷಭೂಷಣದಲ್ಲಿ ಪ್ರದರ್ಶನ.
                ಫತ್ತಿಮಾರು ರಾಮಕೃಷ್ಣ ಭಟ್ಟರ ನೇತೃತ್ವದಲ್ಲಿ ತಾಳಮದ್ದಳೆ ತಂಡದ ರೂಪೀಕರಣ. ಎಲ್ಲೆಡೆ ಅಭಿಮಾನದ ಸ್ವೀಕೃತಿ. ಊರಿನ ಯಕ್ಷಗಾನ ಗುಂಗಿನ ಬಹುತೇಕರು ಮಧ್ಯಮ ವರ್ಗದವರು. ಹೇಳುವಂತಹ ಆರ್ಥಿಕ ಸ್ಥಿತಿವಂತರಲ್ಲ. ಹೀಗಿದ್ದೂ ಮೇಳ ಮಾಡುವ ಯೋಚನೆಗೆ ಶ್ರೀಕಾರ. ಒಬ್ಬೊಬ್ಬರು ಒಂದೊಂದು ವೇಷಗಳ ಡ್ರೆಸ್ ಪ್ರಾಯೋಜಿಸುವಂತೆ ರೂಪುರೇಷೆ. ಶ್ರೀಕಂಠರ ಅಣ್ಣ ವಿನಾಯಕ ದಾಮ್ಲೆ, ವಿಘ್ನೇಶ್ವರ ದಾಮ್ಲೆ ತಮ್ಮನ ಅಸರೆಗೆ ನಿಂತರು. ಎಲ್ಲರ ಸಹಕಾರದಿಂದ ಸ್ವಂತದ್ದಾದ ರಂಗಸ್ಥಳ, ವೇಷಭೂಷಣ ಸಿದ್ಧವಾಯಿತು. ಪ್ರದರ್ಶನಕ್ಕೆ ಅಣಿಯಾಯಿತು.
                   ಈ ಮಧ್ಯೆ ಶ್ರೀಕಂಠ ಭಟ್ಟರನ್ನು ಸುರತ್ಕಲ್ ಮಹಮ್ಮಾಯಿ ಮೇಳವು ಸೆಳೆಯಿತು. ಆರು ವರುಷ ತಿರುಗಾಟ ಮಾಡಿದರು. ಮೇಳದಲ್ಲಿ ಹಿರಿಯ ಕಲಾವಿದರ ಒಡನಾಟ, ರಂಗ ಮಾಹಿತಿಗಳು ಶ್ರೀಕಂಠರ ಬದುಕಿಗೆ ಹೊಸ ತಿರುವನ್ನು ನೀಡಿತು. ನಂತರ  ಕೋಳ್ಯೂರರ ಮೂಲಕ ಕರ್ನಾಟಕ ಮೇಳದಿಂದ ವೃತ್ತಿ. ಬಳಿಕ ಕೂಡ್ಲು, ಸುಬ್ರಹ್ಮಣ್ಯ, ವೇಣೂರು, ಮಂತ್ರಾಲಯ ಶ್ರೀ ರಾಘವೇಂದ್ರ ಕೃಪಾಪೋಶಿತ ಮೇಳ.. ಹೀಗೆ ಹದಿನೈದು ವರುಷಗಳ ನಿರಂತರ ವ್ಯವಸಾಯ. ವಿವಿಧ ಮೇಳಗಳಲ್ಲಿ 'ಶ್ರೀದೇವಿ, ಮಾಲಿನಿ, ಸುಭದ್ರೆ, ಚಿತ್ರಾಂಗದೆ, ದಮಯಂತಿ, ಮೋಹಿನಿ, ಗುಣಸುಂದರಿ, ಮೇನಕೆ, ಸೀತೆ, ಕೈಕೆಯಿ, ರೇಣುಕೆ..' ಪಾತ್ರಗಳು ಶ್ರೀಕಂಠ ಭಟ್ಟರಿಗೆ ಒಲಿದುವು.
               ಮುಂದೆ ಮುಂಬಯಿ ಕರೆಯಿತು. ಹೋಟೆಲ್ ವೃತ್ತಿಯೊಂದಿಗೆ ಯಕ್ಷಗಾನವೂ ವೃತ್ತಿಪರವಾಗಿ ಹೊಸೆಯಿತು. ಒಂದು ಹಂತದಲ್ಲಿ ಮುಂಬಯಿ ತೊರೆದು ಮರಳಿ ಮನೆಗೆ ಬಂದರು. ತನ್ನೂರಿನ ಮೊಂಟೆತಡ್ಕ ಶ್ರೀ ದುರ್ಗಾಪರಮೇಶ್ವರೀ ಕೃಪಾಪೋಶಿತ ಯಕ್ಷಗಾನ ಸಂಘದ ನೇತೃತ್ವದ 'ಭಂಡಿಹೊಳೆ ಮೇಳ'ದ ಸಾರಥ್ಯ ವಹಿಸಿದರು. ಸ್ನೇಹಿತ ಕಲಾವಿದರ ನೆಚ್ಚಿನ 'ಶಿಶಿಲಣ್ಣ'ನಾದರು.
                "ವ್ಯವಸಾಯ ಕಲಾವಿದನಾಗಿ ತಿರುಗಾಟಗಳಲ್ಲಿ ಇದ್ದಾಗ ದೊಡ್ಡ ಸಾಮಗರು, ಶೇಣಿಯವರು, ಅಗರಿ ಭಾಗವತರಿಂದ ತೊಡಗಿ, ಅತಿ ಕಿರಿಯ ಸಹ ಕಲಾವಿದರವರೆಗೆ ಎಲ್ಲರಿಗೂ ಬೇಕಾದವರು. ಸಹ ಕಲಾವಿದ, ಮೇಳದ ಯುಜಮಾನ, ಕೆಲಸಗಾರ, ಅತಿಥೇಯ, ಪ್ರೋತ್ಸಾಹಕ, ಯಾರಿಗೂ ಸಮಸ್ಯೆ ಆಗದೆ, ಬಂದ ಸಮಸ್ಯೆಗಳನ್ನು ಸಮಸ್ಯೆ ಎಂದೇ ಗ್ರಹಿಸದೆ ಸಹಜವಾಗಿ ನಿರ್ವಹಿಸಿದವರು. ಕಲಾ ವ್ಯವಸಾಯದಲ್ಲೇ ಹೀಗೆ ಅವಿರೋಧವಾದ ಸ್ವೀಕೃತಿ, ಸರ್ವತ್ರ ಅಂಗೀಕಾರ ಪಡೆಯುವುದು ದೊಡ್ಡ ಸಾಧನೆ. ವ್ಯವಸಾಯ ರಂಗವಿರಲಿ, ಹವ್ಯಾಸಿ ಸಂಘವಿರಲಿ; ತಾಳಮದ್ದಳೆ, ಮೇಳದ ಬಿಡಾರ, ಚೌಕಿ, ಬಂಧುಮಿತ್ರ, ಕೂಟದಲ್ಲಿ ಹೀಗೆ ಎಲ್ಲೆಲ್ಲೂ ಶ್ರೀಕಂಠ ಭಟ್ರು.," ವಿಮರ್ಶಕ ಡಾ.ಎಂ.ಪ್ರಭಾಕರ ಜೋಶಿಯವವರ ಮಾತು ಶ್ರೀಕಂಠರ ಸಮಗ್ರ ವ್ಯಕ್ತಿತ್ವ ತೋರಿಸುತ್ತದೆ. "ಶ್ರೀಕಂಠ ಭಟ್ಟರ ಕಲಾ ಸಮಪರ್ಿತ ಬದುಕಿಗೆ 'ಯಕ್ಷಶ್ರೀ' ಎನ್ನುವ ಅಭಿನಂದನಾ ಕೃತಿಯನ್ನು ಎಪ್ಪತ್ತರ ಕಾಣ್ಕೆಯಾಗಿ ಊರವರು ಸಮರ್ಪಿಸಿದ್ದಾರೆ.
             ಅನುಭವದ ಪಕ್ವತೆಯಲ್ಲಿ ಮೌನದ ಹೊಳಪಿನಲ್ಲಿರುವ ಶ್ರೀಕಂಠರು ಮಾತನಾಡಲು ತುಂಬಾ ಇದೆ ಮಾರಾಯ್ರೆ. ಒಂದು ದಿನ ಪುರುಸೊತ್ತು ಮಾಡಿ ಬನ್ನಿ, ಎಂದು ಬಾಯ್ತುಂಬಾ ನಕ್ಕು ಬೀಳ್ಕೊಟ್ಟರು.
(prajavani/dadhiginatho/2-12-2016)
    
 

Monday, November 21, 2016

ಜಾರಿದ ರಂಗಸೌಂದರ್ಯದ ಮರುಪೋಣಿಕೆ


              ಯಕ್ಷಗಾನ ಆಟ, ಕೂಟಕ್ಕೆ ಪ್ರಸಂಗವು ಸಿಲೆಬಸ್. ಅರ್ಥಗಾರಿಕೆಯಲ್ಲಿ ಮಾತಿನ ಓಘಗಳು ಎಲ್ಲೇ ಹರಿದಾಡಲಿ, ಪಠ್ಯದ ಚೌಕಟ್ಟಿನೊಳಗೇ ಮುಗಿಯಬೇಕು, ಮುಗಿಯತಕ್ಕದ್ದು. ಇದೊಂದು ಅಲಿಖಿತ ಶಾಸನ, ಶಿಸ್ತು. ಎಲ್ಲಾ ಕಲಾವಿದರೂ ಶಿಸ್ತಿನೊಳಗೆ ಬಂಧಿ. ಹಾಗಾಗಿ ಸೋಲಬೇಕಾದ ಪಾತ್ರ ಸೋಲಬೇಕು, ಗೆಲ್ಲಬೇಕಾದ ಪಾತ್ರ ಗೆಲ್ಲಲೇಬೇಕು. ವೈಯಕ್ತಿಕ ಪ್ರತಿಷ್ಠೆಗಳನ್ನು ರಂಗ ಸ್ವೀಕರಿಸುವುದಿಲ್ಲ.
           ಪ್ರದರ್ಶನಕ್ಕೂ ಪ್ರಸಂಗವೇ ಪಠ್ಯ. ಇಲ್ಲಿನ ಸನ್ನಿವೇಶಗಳಿಗೆ ಪಾರಂಪರಿಕ ನಡೆಯಿದೆ. ಆ ಹಾದಿಯಲ್ಲೇ ಪಾತ್ರಗಳು ಸಾಗಬೇಕು, ಮಾತನಾಡಬೇಕು. ಹಾದಿ ಕವಲೊಡೆದರೆ ರಂಗ, ಪಾತ್ರ ಎಡವುತ್ತದೆ. ಇಂತಹ ಹಾದಿಗಳ ಬಹುತೇಕ ಸಂದರ್ಭಗಳು ಸ್ಥಾಪಿತ. ಭಾಗವತರಿಗೆ ಈ ಜ್ಞಾನವು ಕಲಿಕಾ ಹಂತದಲ್ಲೇ ವಶವಾಗಿರುತ್ತವೆ, ವಶವಾಗಬೇಕು. ಇಂತಹ ಹಾದಿಗಳ - ಅಂದರೆ ಬೇಟೆ, ಯುದ್ಧಕ್ರಮ.. ಇತ್ಯಾದಿ - ಸ್ಪಷ್ಟ ಅರಿವು ವೇಷಧಾರಿಗೂ ಬೇಕು.
            ನಿಶಿಪೂರ್ತಿ ಪ್ರದರ್ಶನಗಳಲ್ಲಿ ಪಾತ್ರಗಳ ಪೂರ್ಣ ಚಲನಾ ಸೌಂದರ್ಯಗಳು ಅನಾವರಣಗೊಳ್ಳುತ್ತವೆ. ಕಾಲಮಿತಿಗೆ ಪ್ರದರ್ಶನಗಳು ಜಾರಿದಾಗ ಚಲನೆಗಳೂ ಜಾರಿದುವು. ಬೇಟೆ, ಜಲಕೇಳಿ, ರಾಕ್ಷಸಪಾತ್ರಗಳ ನಿತ್ಯಾಹ್ನಿಕಗಳೆಲ್ಲಾ ಹೃಸ್ವವಾದುವು. ನಿಜಸೌಂದರ್ಯಗಳು ಮಸುಕಾಯಿತು. ಭಾಗವತರ ಪದ್ಯಕ್ಕೆ ಕುಣಿತ, ಅದಕ್ಕೆ ತಕ್ಕ ಅರ್ಥಗಾರಿಕೆ ಎನ್ನುವಷ್ಟರ ಮಟ್ಟಿಗೆ ವರ್ತಮಾನದ ರಂಗ ಸೌಂದರ್ಯವಿದೆ! ಈ ಹಿನ್ನೆಲೆಯಲ್ಲಿ ಶ್ರೀ ಧರ್ಮಸ್ಥಳ ಮೇಳದ ಭಾಗವತ ಸಿರಿಬಾಗಿಲು ರಾಮಕೃಷ್ಣ ಮಯ್ಯರು ಓರ್ವ ಕಲಾವಿದನಾಗಿ ರಂಗವನ್ನು ನೋಡಿದ್ದಾರೆ, ನೋಡುತ್ತಿದ್ದಾರೆ. ರಂಗದಿಂದ ಜಾರಿದ, ಜಾರುವ ಪದ್ಧತಿಗಳನ್ನು ಹಳಿಗೆ ಜೋಡಿಸುವ ಯೋಜನೆ ರೂಪಿಸಿದ್ದಾರೆ.
               ರಾಮಕೃಷ್ಣ ಮಯ್ಯರ ನೂತನ ಪರಿಕಲ್ಪನೆ 'ರಂಗ-ಪ್ರಸಂಗ'. ಕಾಸರಗೋಡು ಜಿಲ್ಲೆಯ ನೀರ್ಚಾಲು ಮತ್ತು ದ.ಕ.ಜಿಲ್ಲೆಯ ಪಾವಂಜೆಯಲ್ಲಿ ಎರಡು ಪ್ರಯೋಗಗಳು ನಡೆದುವು. ಏನಿದು ರಂಗ-ಪ್ರಸಂಗ? ರಂಗದಿಂದ ಮರೆಯಾದ ರಂಗಕ್ರಮಗಳ ಮರು ರಂಗಪೋಣಿಕೆ. ಹವ್ಯಾಸಿ, ವೃತ್ತಿ ಕಲಾವಿದರು ಶಿಬಿರಾರ್ಥಿಗಳು. ಪರಿಕಲ್ಪನೆಯನ್ನು ಅರ್ಥಮಾಡಿಕೊಂಡ ಅನುಭವಿ ಕಲಾವಿದರಿಂದ ಪ್ರದರ್ಶನ. ನೀರ್ಚಾಲಿನಲ್ಲಿ ಐವತ್ತಕ್ಕೂ ಮಿಕ್ಕಿ ಹವ್ಯಾಸಿ ಶಿಬಿರಾರ್ಥಿಗಳು ಉಪಸ್ಥಿತರಿದ್ದರು. ಆದರೆ ಇಂತಹ ಹೊಸ ಯೋಚನೆಗೆ ಶಿಬಿರಾರ್ಥಿಗಳಾಗಿ ವೃತ್ತಿ ಕಲಾವಿದರು ಭಾಗವಹಿಸುವುದು ಯಾಕೋ ನನಗಂತೂ ಸಂಶಯವಿದೆ!
              ಕಳೆದ ಮೂರ್ನಾಲ್ಕು ವರುಷಗಳಿಂದ ಹಲವು ಪ್ರದರ್ಶನಗಳಲ್ಲಿ ಭಾಗವತಿಕೆ ಮಾಡಿದ್ದೇನೆ. ಅನ್ಯಾನ್ಯ ಕಾರಣಗಳಿಂದಾಗಿ ರಂಗಕ್ರಮಗಳಿಗೆ ಉದ್ದೇಶಪೂರ್ವಕವಾಗಿಯೇ ಸಂಘಟಕರು, ಕಲಾವಿದರು ಕತ್ತರಿ ಹಾಕುವುದನ್ನು ನೋಡಿ ಸಂಕಟಪಟ್ಟಿದ್ದೇನೆ. ಯಕ್ಷಗಾನಕ್ಕೆ ಸಂಬಂಧಪಟ್ಟಂತೆ ಸಿದ್ಧ, ಪ್ರಮಾಣ ನಾಟ್ಯಗಳನ್ನು ನಾವೇನೂ ಹೊಸದಾಗಿ ಸೃಷ್ಟಿ ಮಾಡಿದ್ದಲ್ಲ. ಮಾಡಿದರೆ ಅದು ಯಕ್ಷಗಾನವಾಗಲಾರದು. ಇಂತಹ ನಾಟ್ಯಗಳು, ರಂಗನಡೆಗಳನ್ನು ಮರೆತ ಪ್ರದರ್ಶನದಲ್ಲಿ ನನಗ್ಯಾಕೋ ಯಕ್ಷಗಾನ ಕಾಣುವುದಿಲ್ಲ. ಹಾಗಾಗಿ ಯಥಾಸಾಧ್ಯ ರಂಗಪ್ರಸಂಗವನ್ನು ಆಯೋಜಿಸಿದೆ. ಈ ದಿಸೆಯಲ್ಲಿ ಯೋಚಿಸುವ ಹಲವಾರು ಮಂದಿ ಕಲಾವಿದರು ಜತೆಯಾಗಿದ್ದಾರೆ, ಎನ್ನುತ್ತಾರೆ ರಾಮಕೃಷ್ಣ ಮಯ್ಯರು.
           ನೀರ್ಚಾಲು ಶಿಬಿರದಲ್ಲಿ ಪಾಂಡವರ ಒಡ್ಡೋಲಗ, ಕಿರಾತಾರ್ಜುನ ಆಖ್ಯಾನದ ಯುದ್ಧ ಕ್ರಮಗಳು, ಕೃಷ್ಣನ ಒಡ್ಡೋಲಗ, ಗೋಪಿಕೆಯರ ವಿಹಾರ, ಅಭಿಮನ್ಯು ಮತ್ತು ಬಬ್ರುವಾಹನ ಪಾತ್ರಗಳ ಭಿನ್ನತೆ, ಹೆಣ್ಣು ಬಣ್ಣದ ಪ್ರವೇಶ ಮತ್ತು ಶೃಂಗಾರ, ಕಾರ್ತವೀರ್ಯಾರ್ಜುನ ಪ್ರಸಂಗದ ನಡೆಗಳು, ಪ್ರಮೀಳೆಯ ಕ್ರಮ... ಹೀಗೆ ರಂಗದಿಂದ ಕಡೆಗಣಿಸಲ್ಪಟ್ಟ ವಿಚಾರಗಳ ಮರುಪೋಣಿಕೆ. ಪ್ರತೀ ಸಲವೂ ನೋಡುವಾಗ ಒಂದಲ್ಲ ಒಂದು ವ್ಯತ್ಯಾಸಗಳು ಕಾಣುವುದು ಸಹಜ. ಆದರೆ ಈಗ ಯಕ್ಷಗಾನದ ಸೀನಿಯರ್ ಆಗಿ ನಮ್ಮ ಮುಂದೆ ಸಂಪನ್ಮೂಲ ವ್ಯಕ್ತಿಯಾಗಿರುವ ಬಲಿಪ ನಾರಾಯಣ ಭಾಗವತರು ಒಪ್ಪಿದಂತೆ ರಂಗಕ್ರಮವನ್ನು ಅಳವಡಿಸಿಕೊಳ್ಳುತ್ತಿದ್ದೇವೆ, ಮಯ್ಯರ ಅಭಿಮತ.
                ಪಾವಂಜೆಯಲ್ಲಿ ಜರುಗಿದ ಎರಡನೇ ರಂಗಪ್ರಸಂಗದಲ್ಲಿ ತಾಮ್ರಧ್ವಜ ಕಾಳಗ, ಕೃಷ್ಣನ ಒಡ್ಡೋಲಗ-ಪಾರಿಜಾತ, ರಾಮನ ಒಡ್ಡೋಲಗ, ಶೂರ್ಪನಖಿ-ಮಾಯಾ ಶೂರ್ಪನಖಿ, ಬಣ್ಣದ ತೆರೆ, ಸಂಕುಲ ಯುದ್ಧದ ಕ್ರಮಗಳನ್ನು ಅಳವಡಿಸಿಕೊಳ್ಳಲಾಗಿತ್ತು. ತಾಮ್ರಧ್ವಜ ಕಾಳಗದ ರಂಗನಡೆಗಳು ತೀರಾ ಸೂಕ್ಷ್ಮ, ಜಟಿಲ. ಸಂಕುಲ ಯುದ್ಧಗಳು ಹೆಚ್ಚು ಜಾಣ್ಮೆಯನ್ನು ಬೇಡುವಂತಾದ್ದು. ಕೃಷ್ಣನ ಒಡ್ಡೋಲಗದ ಕ್ರಮಗಳಲ್ಲೂ ಎಚ್ಚರ ಬೇಕು. ಇವೆಲ್ಲಾ ರಂಗದಲ್ಲಿ ಪ್ರಯೋಗವಾಗುತ್ತಾ ಇದ್ದ ಕಾಲಘಟ್ಟದಲ್ಲಿ ಇವಕ್ಕೆ ಪ್ರತ್ಯೇಕವಾದ ಶಿಬಿರಗಳು ಬೇಕಾಗಿರಲಿಲ್ಲ. ಹೊಸ ತಲೆಮಾರಿನ ಕಲಾವಿದರಿಗೆ ಇವೆಲ್ಲವುಗಳ ಪರಿಚಯ ಇದ್ದೀತೆಂದು ಹೇಳಲು ಧೈರ್ಯಸಾಲದು.
              ಕಟೀಲು, ಉಡುಪಿ, ಪುತ್ತೂರು, ಸುಳ್ಯ, ಸುಬ್ರಹ್ಮಣ್ಯ, ಪೆರ್ಲ.. ಮೊದಲಾದೆಡೆ ಶಿಬಿರದ ಆಯೋಜನೆಯ ಯೋಜನೆ ನಡೆಯುತ್ತಿದೆ. ರಂಗ-ಪ್ರಸಂಗದ ದಾಖಲೀಕರಣವಾಗುತ್ತಿದೆ. ಕಲಿಕಾ ದಾಹಿಗಳಿಗೆ ಇದೊಂದು ಕೈತಾಂಗು ಇದ್ದಂತೆ. ಕಲಿಸುವ ಗುರುವಿನಲ್ಲಿ ಸಮಗ್ರ ಬೌದ್ಧಿಕತೆ ಇದ್ದರೆ ತೊಂದರೆಯಿಲ್ಲ. ಹಾಗೋ ಹೀಗೋ ಎನ್ನುವ ಗೊಂದಲವಿದ್ದರೆ ರಂಗದಲ್ಲಿ ಕಲಾವಿದ ಸೋಲುತ್ತಾನೆ. ಆತ ಸೋತರೆ ಗುರುವಿಗೆ ತೊಂದರೆಯಿಲ್ಲ ಬಿಡಿ! ಆದರೆ ಕಲಾವಿದನ ಬೆಳವಣಿಗೆಗೆ ತೊಡಕಾಗುತ್ತದೆ. ಇಂತಹ ಸಂದರ್ಭಗಳಲ್ಲಿ ದಾಖಲಾತಿಗಳು ಸಹಾಯಕ್ಕೆ ಬರುತ್ತವೆ. ಖರ್ಚು-ವೆಚ್ಚಗಳನ್ನು ಸರಿದೂಗಿಸಲು ಕನಿಷ್ಠ ಶುಲ್ಕದೊಂದಿಗೆ ಈ ದಾಖಲೀಕರಣ ಆಸಕ್ತರ ಕೈಸೇರಬೇಕೆನುವುದೂ ಮಯ್ಯರ ಆಶಯ.
              ನಿಮ್ಮ ಪರಿಕಲ್ಪನೆಯನ್ನು ಪ್ರೇಕ್ಷಕರು ಹೇಗೆ ಸ್ವೀಕರಿಸಿದರು? ಎನ್ನುವ ನನ್ನ ಕೀಟಲೆ ಪ್ರಶ್ನೆಗೆ ಮಯ್ಯರು ನವಿರಾಗಿ ಪ್ರತಿಕ್ರಿಯೆ ನೀಡಿದರು - ರಂಗ-ಪ್ರಸಂಗಕ್ಕೆ ಚಪ್ಪಾಳೆ, ಶಿಳ್ಳೆಗಳ ಭಯ, ಬಾಧೆಯಿಲ್ಲ!  ಯಕ್ಷಗಾನವನ್ನು ಪ್ರೀತಿಸುವ ಪ್ರೇಕ್ಷಕರಿಗೆ ಇಷ್ಟವಾಗಿದೆ. ಹಿರಿಯರಾದ ಬಲಿಪ ನಾರಾಯಣ ಭಾಗವತರು, ಡಾ.ಎಂ.ಪ್ರಭಾಕರ ಜೋಶಿ, ಸೂರಿಕುಮೇರು ಗೋವಿಂದ ಭಟ್.. ಮೊದಲಾದ ಗಣ್ಯರು ಬೆನ್ನು ತಟ್ಟಿದ್ದಾರೆ. ಒಂದಷ್ಟು ಸ್ನೇಹಿತ ಗಡಣವಿದೆ. ಇದರಿಂದ ಸ್ಪೂರ್ತಿಗೊಂಡಿದ್ದೇನೆ. ಒಂದೊಂದು ಕಾರ್ಯಕ್ರಮಕ್ಕೆ ಏನಿಲ್ಲವೆಂದರೂ ಒಂದೂವರೆಲಕ್ಷ ರೂಪಾಯಿಯ ವೆಚ್ಚವಿದೆ. ಈಗ ಹೇಗೋ ಸರಿದೂಗಿಸುತ್ತಿದ್ದೇನೆ. ಯಕ್ಷಗಾನವನ್ನು ಪ್ರೀತಿಸುವ ಕಲಾಭಿಮಾನಿಗಳಿಂದ ನೆರವನ್ನು ನಿರೀಕ್ಷಿಸುತ್ತೇನೆ.
             ಓರ್ವ ವೃತ್ತಿ ಕಲಾವಿದನಾದ ರಾಮಕೃಷ್ಣ ಮಯ್ಯರು ಯಕ್ಷಗಾನಕ್ಕೆ ಏಕಾಂಗಿಯಾಗಿ ಕಾಯಕಲ್ಪ ಕೊಡುವ ಯೋಚನೆ ಮಾಡಿದ್ದು ಸಾಹಸ. 'ರಂಗ ಹಾಳಾಯಿತು, ಪ್ರಯೋಜನವಿಲ್ಲ, ಹೀಗಾದ್ರೆ ಮುಂದೆ ಹೇಗೆ' ಎಂದು ಗೊಣಗುವ ನಾವೆಲ್ಲ ಮಯ್ಯರೊಂದಿಗೆ ಕೈಜೋಡಿಸೋಣ. ಯಾಕೆಂದರೆ ಅವರು ಗೊಣಗಾಟ ಮಾಡುವ ಬದಲು ಕಾರ್ಯಕ್ಕಿಳಿದಿದ್ದಾರೆ. ಅವರ ಯೋಜನೆಯ ಯಶವಿರುವುದು ಅವರು ವೆಚ್ಚ ಮಾಡುವ ಹಣದಲ್ಲಲ್ಲ. ಕಲೆಯನ್ನು ಪ್ರೀತಿಸುವ ನಾವು ಅವರೊಂದಿಗೆ ಹೇಗೆ ಸ್ಪಂದಿಸುತ್ತೇವೆ ಎನ್ನುವ ಹಿನ್ನೆಲೆಯಲ್ಲಿ ಯಶದ ಮಾನವಿದೆ.
             ತನ್ನ ತಂದೆಯವರ ನೆನಪಿನ 'ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ, ಕಾಸರಗೋಡು' ಈ ವೇದಿಕೆಯಡಿ ಅವರ ಯೋಜಿತ ಕಾರ್ಯಕ್ರಮಗಳು ಸಂಪನ್ನವಾಗುತ್ತಿವೆ.

ಚಿತ್ರಗಳು : ಉದಯ ಕಂಬಾರು, ನೀರ್ಚಾಲು
prajavani/ದಧಿಗಿಣತೋ/18-11-206ಸಂಯಮ ತೊರೆಯದ ಮಿತಭಾಷಿಯ ನೆನಪು


             ವಿಷಮ ಸಮರಂಗ ಪ್ರಸಂಗದಲ್ಲಿ ಸಿದ್ಧಕಟ್ಟೆಯವರದು 'ಶ್ರೀಕೃಷ್ಣ'ನ ಪಾತ್ರ. ಪರಂಧಾಮದ ಸನ್ನಿವೇಶ. ತಾಯಿ ಯಶೋದೆಯೊಂದಿಗಿನ ಸಂಭಾಷಣೆ. ಟೆಂಟಿನೊಳಗೆ ಗಾಢ ಮೌನ. ಎಲ್ಲರ ಚಿತ್ತವೂ ರಂಗದತ್ತ. ಭಾವಪೂರ್ಣವಾದ ಸನ್ನಿವೇಶದಲ್ಲಿ ಶ್ರೀಕೃಷ್ಣನ ಕಣ್ಣಲ್ಲಿ ಕಣ್ಣೀರು ಜಿನುಗಿತು. ಪ್ರಸಂಗದ ಕೊನೆಗೆ ತನ್ನ ಅವತಾರದ ಸಮಾಪ್ತಿಯ ಹೊತ್ತು. ಬದುಕಿನ ಬವಣೆ, ಹಿತರೇ ಶತ್ರುಗಳಾದ ಪರಿ, ಬೌದ್ಧಿಕ ಅಪಕ್ವತೆಯ ತನ್ನ ಸಾಮಾಜಿಕರ ಚಿತ್ರಣ ನೀಡುತ್ತಾ ಪಾತ್ರವನ್ನು ಕಟ್ಟುತ್ತಾ ಹೋದಂತೆ ಪ್ರೇಕ್ಷಕರ ಕಣ್ಣೂ ತೇವವಾಗಿತ್ತು. ಹಿಮ್ಮೇಳ ಕಲಾವಿದರೂ ಕಣ್ಣೊರೆಸಿಕೊಂಡಿದ್ದರು.  ಒಂದು ಪಾತ್ರ ಬೀರಿದ ಪರಿಣಾಮಕ್ಕೆ ಬೆರಾಗಾಗಿದ್ದೆ.
             ತಾನು ಅಭಿನಯಿಸುತ್ತಿರುವುದು ಪಾತ್ರವನ್ನು ಎನ್ನುವ ಪ್ರಜ್ಞೆ ಮರೆತುಹೋಗಿ ಪಾತ್ರವೇ ಆಗುವ ಪರಿ ಇದೆಯಲ್ಲಾ, ಇದು ವ್ಯಕ್ತಿಯೊಬ್ಬನ ಒಳಗಿದ್ದ ಸುಪುಷ್ಟ ಕಲಾವಿದನ ಕಲಾವಿದತ್ವ. ಮಾನಿಷಾದ ಪ್ರಸಂಗದ ವಾಲ್ಮೀಕಿಯೂ ಸಿದ್ಧಕಟ್ಟೆಯವರೊಳಗೆ ಸುಪ್ತವಾಗಿ ಅವಿತಿದ್ದಿರಬೇಕು. ಇಲ್ಲದಿದ್ದರೆ ವಾಲ್ಮೀಕಿಯನ್ನು ರಂಗದಲ್ಲಿ ಹಾಗೆ ಕಡೆಯಲು ಸಾಧ್ಯವೇ ಇಲ್ಲ! ಅದೂ ಪ್ರಸಂಗ ಕವಿಯು ಆಶ್ಚರ್ಯಪಡುವಂತೆ! ಪಾತ್ರ, ಭಾವ, ಅದಕ್ಕನುಗುಣವಾದ ಸಾಹಿತ್ಯಗಳು ಪರಿಣಾಮಕಾರಿಯಾಗಿ ಪ್ರಸ್ತುತಗೊಂಡರೆ ಪ್ರೇಕ್ಷಕರಿಗೆ ತುಂಬು ಪರಿಣಾಮ ಬೀರುತ್ತದೆ. ಸಿದ್ಧಕಟ್ಟೆಯವರ ಬಹುತೇಕ ಪಾತ್ರಗಳಲ್ಲಿ ಪಾತ್ರ-ಭಾವ-ಸಾಹಿತ್ಯಗಳು ಮಿಳಿತಕೊಂಡಿದ್ದುವು.
            ತಾಳಮದ್ದಳೆಯಲ್ಲೂ ಪ್ರೇಕ್ಷಕರನ್ನು ತನ್ನೆಡೆಗೆ ಸೆಳೆಯುವ 'ವಾಲಿ ಶಕ್ತಿ' ಇವರಲ್ಲಿತ್ತು. ಸುಸ್ಪಷ್ಟವಾದ ಭಾಷೆಯ ಸೊಗಸಿನಲ್ಲಿ ಮಾಧುರ್ಯವನ್ನು ಕಂಡಿದ್ದೇನೆ, ಅನುಭವಿಸಿದ್ದೇನೆ. ಆಗಾಗ್ಗೆ ಇಣುಕುವ ಗಾದೆ, ಸುಭಾಷಿತಗಳ ಸ್ಪರ್ಶ. ಸಮಕಾಲೀನ ವಿಚಾರಗಳ ಲೇಪ. ಮಧ್ಯೆ ಮಧ್ಯೆ ಸಂಸ್ಕೃತ ಸೂಕ್ತಿಗಳು. ಸಂಭಾಷಣೆಗೆಳೆವ-ಇಳಿವ ಸುಭಗತೆ. ಮಾತಿನ ಮೋಡಿಗೆ ಪದಗಳನ್ನು ಕಟ್ಟುವ, ಕಟ್ಟಿದ ಪದಗಳನ್ನು ಪುನಃ ಹೊರಕ್ಕೆ ಬಿಡುವ, ಹೊರಕ್ಕೆ ಬಿಟ್ಟ ಪದಗಳು ಪ್ರೇಕ್ಷಕರ ಸುತ್ತ ಸುತ್ತುತ್ತಾ ಅವರೊಳಗೆ ಇಳಿವ ಕ್ಷಣಗಳಿಗೆ ಹಲವು ಬಾರಿ ಸಾಕ್ಷಿಯಾಗಿದ್ದೇನೆ. ಜುಲೈ 1ರಂದು ಸಿದ್ಧಕಟ್ಟೆ ವಿಶ್ವನಾಥ ಶೆಟ್ಟರ (71) ಮರಣ ವಾರ್ತೆಯನ್ನು ಕೇಳಿದಾಗ ರಂಗದ ಅವರ ಒಂದೊಂದು ಮಾತುಗಳು ಮಿಂಚಿದುವು.
             ತೆಂಕು, ಬಡಗು ತಿಟ್ಟಿನ ರಂಗದಲ್ಲಿ ಸಿದ್ಧಕಟ್ಟೆ ವಿಶ್ವನಾಥ ಶೆಟ್ಟರ ಪಾದಗತಿ, ಜತೆಗೆ ಪದ-ಗತಿಗಳು ಅವರಿಗೆ ಅಭಿಮಾನಿಗಳನ್ನು ರೂಪಿಸಿದ್ದುವು. ಹಾಗೆಂತ ಅಭಿಮಾನಿಗಳನ್ನು ರೂಪಿಸಲೆಂದೇ 'ಗಿಮಿಕ್' ಮಾಡಿದವರಲ್ಲ. ಸ್ವ-ಪ್ರತಿಭೆಯ ಹೊಳಪಿನ ಕಿರಣಗಳು ಅಭಿಮಾನಿಗಳನ್ನು ಹುಡುಕಿ ತಂದಿದ್ದುವು. ಪಾತ್ರ ಸ್ವಭಾವ ಮತ್ತು ಪ್ರಸಂಗವು ಆ ಪಾತ್ರಕ್ಕೆ ಹಾಕಿಕೊಟ್ಟ ಚೌಕಟ್ಟಿನ ನಿಖರ ವರ್ತುಲದ ಪರಿಚಯ ಶೆಟ್ಟರಿಗಿತ್ತು. ಪಾತ್ರ ಪ್ರಸ್ತುತಿಯಲ್ಲಿ ಮಿತಿಯ ಅರಿವು ಇದ್ದುದರಿಂದ ಅವರ ಅರ್ಥವನ್ನು ಕೇಳುತ್ತಾ ಇದ್ದ ನಮಗೆ ಬೇರೆ ಪಾತ್ರ, ಪ್ರಸಂಗಗಳ ಮಾತಿನ ಎಳೆಗಳು ತಾಕುವುದಿಲ್ಲ. ಚಿಕ್ಕಚಿಕ್ಕ ಚೊಕ್ಕ ಮಾತುಗಳು, ಚುಟುಕು ಪದಗಳು. ಶುದ್ಧ ಭಾಷಾ ಪ್ರಯೋಗ.
              ಸಿದ್ಧಕಟ್ಟೆಯವರು ಓದಿದ್ದು ಪಿ.ಯು.ಸಿ. ಬೇರೆ ಉದ್ಯೋಗವನ್ನರಲಿಲ್ಲ. ಕಾವೂರು ಕೇಶವರಲ್ಲಿ ನಾಟ್ಯಾಭ್ಯಾಸ. ಕಟೀಲು ಮೇಳದಿಂದ ತಿರುಗಾಟಕ್ಕೆ ಶ್ರೀಕಾರ. ಕದ್ರಿ, ಕರ್ನಾಟಕ, ಮಂಗಳಾದೇವಿ, ಹಿರಿಯಡ್ಕ, ಸಾಲಿಗ್ರಾಮ.. ಹೀಗೆ ವಿವಿಧ ಮೇಳಗಳಲ್ಲಿ ನಾಲ್ಕು ದಶಕಗಳ ವ್ಯವಸಾಯ. ಮೊದಲಿನಿಂದಲೂ ನಾಟ್ಯದತ್ತ ಒಲವು ಕಡಿಮೆ. ಹಾಗೆಂತ ರಂಗದಲ್ಲಿ ನಾಟ್ಯ ಬೇಕೇ ಬೇಕು ಎಂದು ಸಮರ್ಥಿಸುವವನು. ನನಗೆ ನಾಟ್ಯಲಕ್ಷ್ಮೀ ಒಲಿಯಲಿಲ್ಲ. ಒಲಿಯದ ಕಲೆಯನ್ನು ಒಲಿಸುವ ಹಠ ಯಾಕಲ್ವಾ, ಎಂದು ವಿನೋದವಾಗಿ ಹೇಳಿದ್ದರು. ನಾಟ್ಯಲಕ್ಷ್ಮಿಯು ತೋರಿದ ಕೊರತೆಯನ್ನು ಸರಸ್ವತಿಯು ನೀಗಿದ್ದಾಳೆ, ಅನುಮೋದಿಸಿದ್ದಾಳೆ. ಕರ್ನೂರು ಕೊರಗಪ್ಪ ರೈಗಳ ಕದ್ರಿ ಮೇಳದಲ್ಲಿ ಅವರ ಸಹಾಯಕನಾಗಿಯೂ, ವೇಷಧಾರಿಯಾಗಿಯೂ ನಿರ್ವಹಿಸಿದ ಆ ಕಾಲಘಟ್ಟವು ಸಿದ್ಧಕಟ್ಟೆಯವರಿಗೆ ಮೇಳದ ಸಿಹಿ-ಕಹಿಗಳ ಪರಿಚಯವನ್ನು ಮಾಡಿತ್ತು.
             ಸುಧನ್ವ, ರಾಮ, ಕೃಷ್ಣ, ವಾಲ್ಮೀಕಿ, ಪರಶುರಾಮದಂತಹ ಪೌರಾಣಿಕ ಪಾತ್ರಗಳಲ್ಲಿ ಸ್ವಂತಿಕೆಯ ಹೆಜ್ಜೆ ಊರಿದ್ದಾರೆ. ಬೊಳ್ಳಿದಂಡಿಗೆ ಪ್ರಸಂಗದಲ್ಲಿ 'ಶೆಟ್ಟಿ' ಪಾತ್ರದ ಜಿಪುಣತೆ, ಗರುಡ ಕೇಂಜವೆ ಪ್ರಸಂಗದ 'ಮಂತ್ರಿ'ಯ ದುಷ್ಟತನ, ಕೋಟಿ ಚೆನ್ನಯದ 'ಬುದ್ಧಿವಂತ', ಕದ್ರಿ ಕ್ಷೇತ್ರ ಮಹಾತ್ಮೆ ಪ್ರಸಂಗದ 'ಗೋರಕ್ಷನಾಥ'.. ಪಾತ್ರಗಳ ವಿನ್ಯಾಸಗಳಲ್ಲಿ ಸಿದ್ಧಕಟ್ಟೆಯವರ ಕೊಡಗೆ ಅನನ್ಯ. ಬಡಗು ತಿಟ್ಟಿನ ರಂಗದಲ್ಲಿ ಅಗ್ನಿನಕ್ಷತ್ರ, ಈಶ್ವರಿ ಪರಮೇಶ್ವರಿ, ರಂಗನಾಯಕಿ, ಧರ್ಮಸಂಕ್ರಾಂತಿ, ಸೂರ್ಯವಂಶಿ.. ಪ್ರಸಂಗಗಳಲ್ಲಿ ವಿಶ್ವನಾಥ ಶೆಟ್ಟರ ವಿವಿಧ ಭಾವಗಳ ಪಾತ್ರಗಳು ಅವರಿಗೆ ತಾರಾಮೌಲ್ಯ ತಂದು ಕೊಟ್ಟಿದ್ದುವು. ತುಳು ಭಾಷೆಯ ಸೌಂದರ್ಯವನ್ನು ಪ್ರೇಕ್ಷಕನಾಗಿ ಅನುಭವಿಸಿದ್ದೇನೆ.
            ಚಾಣಕ್ಯ ತಂತ್ರ. ವಿಷಮ ಸಮರಂಗ, ಕನ್ಯಾಂತರಂಗ, ಚಾಣಕ್ಷ ಚಾಣಕ್ಯ, ವರ್ಣವೈಷಮ್ಯ, ಶಶಿವಂಶ ವಲ್ಲರೀ, ಜ್ವಾಲಾಜಾಹ್ನವಿ, ಶ್ರೀರಾಮ ಸೇತು.. ಸಿದ್ಧಕಟ್ಟೆಯವರು ರಚಿಸಿದ ಹಿಟ್ ಪ್ರಸಂಗಗಳು.  ಬೊಳ್ಳಿದಂಡಿಗೆ, ಗೆಂಡಸಂಪಿಗೆ, ರತ್ನರಾಧಿಕೆ, ಗರುಡರೇಖೆಯಂತಹ ಐವತ್ತಕ್ಕೂ ಮಿಕ್ಕಿದ ಪ್ರಸಂಗಗಳ ರಚಯಿತರು. ಆಳವಾದ ರಂಗಾನುಭವ ಮತ್ತು ನಿರ್ದೇಶನದ ಪರಿಪಕ್ವ ಪಾಕವಾಗಿದ್ದ ಶೆಟ್ಟರ ಪ್ರಸಂಗಗಳೆಲ್ಲವೂ ಈ ಕಾರಣಗಳಿಂದ ಗೆದ್ದಿವೆ. ಕಲಾವಿದನೊಬ್ಬ ಪ್ರಸಂಗಕರ್ತನಾದರೆ ಆತನಿಗೆ ರಂಗದ ಭಾಷೆ, ರಂಗದ ನಡೆ, ಸನ್ನಿವೇಶ ವಿನ್ಯಾಸಗಳನ್ನು ಅನುಭವಿಸಿದ ಅನುಭವ ಇರುತ್ತದೆ. ಈ ಹಿನ್ನೆಲೆಯಲ್ಲಿಯೂ ಅವರ ಪ್ರಸಂಗಗಳು ಗೆದ್ದಿವೆ.
            ವಿಶ್ವನಾಥ ಶೆಟ್ಟರೊಂದಿಗಿನ ಒಡನಾಟ ಮತ್ತು ಅವರ ಅರ್ಥಗಾರಿಕೆಯ ಸೊಗಸುಗಾರಿಕೆ, ಮಾತಿನ ಅಂದವನ್ನು ಅರ್ಥಧಾರಿ ವಾಸುದೇವ ರಂಗಾಭಟ್ ಕಂಡದ್ದು ಹೀಗೆ - ಸರಳ, ಸ್ಪಷ್ಟ ವಾಕ್ಸರಣಿ. ಪ್ರಸಂಗದ ಪ್ರಬಂಧ ಧ್ವನಿಗೆ ಪೂರಕ ಅರ್ಥವಿವರಣೆಯತ್ತ ಕಾಳಜಿ. ತೆಳು ಹಾಸ್ಯಭರಿತ ವೈನೋದಿಕವಾದ ಸಭಿಕರಿಗೆ ಆಪ್ತವಾಗುವ ಶೈಲಿ. ಉದಾಹರಣೆಗಳ, ಉಪಕಥೆಗಳ ಮೂಲಕ ವಿಷಯ ಸ್ಪಷ್ಟೀಕರಣ ಮಾಡುವ ವ್ಯಕ್ತಿ. ವಿಶಿಷ್ಟ ಅರ್ಥ ವಿಧಾನ. ಎಂತಹ ವಾದ-ತರ್ಕಗಳ ಸಂದರ್ಭದಲ್ಲೂ, ಎಂದಿಗೂ ಸಂಯಮ ತೊರೆಯದ ಸ್ಮಿತಭಾಷಿ. ಸೋಲನ್ನು ನಯವಾಗಿ ರಂಗದಲ್ಲೇ ಅಂಗೀಕರಿಸಬಲ್ಲ ಉದಾರಿಯಾದ ಅಪರೂಪದ ಅರ್ಥಧಾರಿ.
             ಮಂಗಳೂರಿನ 'ಯಕ್ಷಾಂಗಣ'ವು ತನ್ನ ತಾಳಮದ್ದಳೆ ಸಪ್ತಾಹದ ಸಮಾರೋಪದಂದು ಸಿದ್ಧಕಟ್ಟೆ ವಿಶ್ವನಾಥ ಶೆಟ್ಟರನ್ನು ಸ್ಮರಿಸಲಿದೆ. 'ಯಕ್ಷಾಂಗಣ' ಪ್ರಶಸ್ತಿಯನ್ನು ಹಿರಿಯ ಅರ್ಥಧಾರಿ ಕುಂಬಳೆ ಸುಂದರ ರಾಯರಿಗೆ ಪ್ರದಾನಿಸಿದೆ.. ನವೆಂಬರ್ 12ರಂದು ಸಂಜೆ ಮಂಗಳೂರಿನ ಎಂ.ಜಿ.ರಸ್ತೆಯಲ್ಲಿರುವ ಎಸ್.ಡಿ.ಎಂ.ಕಾನೂನು ಕಾಲೇಜಿನಲ್ಲಿ ಪ್ರಶಸ್ತಿ ಪ್ರದಾನ ನಡೆದಿದೆ.  ಸೆಪ್ಟೆಂಬರ್ 6ರಿಂದ ನಡೆಯುವ ಸಪ್ತಾಹದಲ್ಲಿ ಪ್ರತಿ ದಿನ ಯಕ್ಷಗಾನದ ಹಿರಿಯರೊಬ್ಬರನ್ನು ನೆನಪಿಸುವ ಪರಿಪಾಠವನ್ನು ಯಕ್ಷಾಂಗಣ ಹಾಕಿಕೊಂಡಿದೆ. ನಾಲ್ಕನೇ ವರುಷದ ಸಪ್ತಾಹ ಮುಗಿಯುವ ಹೊತ್ತಿಗೆ ಯಕ್ಷಾಂಗಣದ ಮುಖ್ಯಸ್ಥ ಭಾಸ್ಕರ ರೈ ಕುಕ್ಕುವಳ್ಳಿಯವರ ಬತ್ತಳಿಕೆಯಲ್ಲಿ ಐದನೇ ವರುಷ ಕಾರ್ಯಕ್ರಮಗಳು ಮೊಳಕೆಯೊಡೆದಿವೆ.

(ಚಿತ್ರ : ರಾಮ್ ನರೇಶ್ ಮಂಚಿ)

ಯಕ್ಷೊತ್ಸವ ಊರಿದ ಸಾಂಸ್ಕೃತಿಕ ಯವನಿಕೆ


              ಸಂಪಾಜೆಯಲ್ಲಿ ಇಪ್ಪತ್ತಮೂರು ಗಂಟೆಗಳ ಯಕ್ಷಗಾನ ಪ್ರದರ್ಶನ! ನಾಲ್ಕು ಆಖ್ಯಾನಗಳು. ಮೂರು ತೆಂಕು ಮತ್ತು ಒಂದು ಬಡಗು ತಿಟ್ಟಿನ ಪ್ರದರ್ಶನ. ವೃತ್ತಿ ಕಲಾವಿದರ ಸಮ್ಮಿಲನ. ಸುಪ್ತ ಪ್ರತಿಭೆಗಳ ಪೂರ್ತಿ ಅನಾವರಣ.  ಯಾವುದೇ ಪ್ರಸಂಗಕ್ಕೆ 'ಸಮಯವಿಲ್ಲ' ಎಂಬ ಗೊಣಗಾಟವಿಲ್ಲ. ಅಕ್ಟೋಬರ್ 29ರಂದು ಮಧ್ಯಾಹ್ನ ಎರಡು ಗಂಟೆಗೆ ಆರಂಭವಾದ 'ಸಂಪಾಜೆ ಯಕ್ಷೊತ್ಸವ'ವು ಮುಗಿಯುವಾಗ ಮರುದಿವಸ ಮಧ್ಯಾಹ್ನ ಒಂದು ಗಂಟೆ!
              2015ರಲ್ಲಿ ಸಂಪಾಜೆ ಯಕ್ಷೊತ್ಸವವು ರಜತ ಸಂಭ್ರಮವನ್ನು ಆಚರಿಸಿತ್ತು. ಈ ವರುಷ ಇಪ್ಪತ್ತಾರರ ಪ್ರದರ್ಶನ. ಡಾ.ಕೀಲಾರು ಗೋಪಾಲಕೃಷ್ಣಯ್ಯವರ ಸಾರಥ್ಯದಲ್ಲಿ ಯಕ್ಷೊತ್ಸವವು 1990ರಲ್ಲಿ ಆರಂಭವಾಗಿತ್ತು. 2004ರಲ್ಲಿ ಇವರು ದೈವಾಧೀನರಾದ ಬಳಿಕ 'ಡಾ.ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ'ದ ಮೂಲಕ ಆಯೋಜನೆ. ಉತ್ಸವದ ವ್ಯವಸ್ಥೆ, ವಿನ್ಯಾಸ, ಪ್ರದರ್ಶನ, ಸಂಮಾನ, ಪ್ರಶಸ್ತಿ..ಗಳು ಹಿಂದಿನಂತೆ ಮುಂದುವರಿದಿದೆ.
               ಡಾ.ಕೀಲಾರು ಗೋಪಾಲಕೃಷ್ಣಯ್ಯನವರು ಕಲಾಪೋಷಕ, ಕಲಾ ಪ್ರೇಮಿ. ಕಣ್ಣೀರಿಗೆ ಮರುಗುವ ಗುಣ. ಜಾತ್ಯತೀತ ಮನೋಭಾವದ ದಾನಿ. ಬಾಲ್ಯದಿಂದಲೇ ಯಕ್ಷಗಾನದತ್ತ ಒಲವು, ಸಾಹಿತ್ಯದಲ್ಲಿ ಪ್ರೀತಿ. ಪ್ರತಿಷ್ಠಿತ ಕೀಲಾರು ಮನೆತನ ಅನ್ನ ದಾಸೋಹಕ್ಕೆ ಖ್ಯಾತಿ. ಸ್ವಯಂ ವ್ಯಕ್ತಿತ್ವದಿಂದ ಊರಿಗೆ ಕಣ್ಣಾಗಿ ರೂಪುಗೊಂಡರು. ಸಾಂಸ್ಕೃತಿಕ ವಾತಾವರಣ ಸೃಷ್ಟಿಸಿದರು. ವಿವಿಧ ದತ್ತಿ ನಿಧಿಗಳನ್ನು ಸ್ಥಾಪಿಸಿದರು. ಬಡವರಿಗೆ ಆಸರೆಯಾದರು. ವಿದ್ಯಾರ್ಥಿಗಳಿಗೆ ನೆರವಾದರು. ಕೀಲಾರು ಅವರು ಬದುಕಿನಲ್ಲಿ ರೂಢಿಸಿಕೊಂಡಿರುವ ಸಮಾಜಮುಖಿ ಬದ್ಧತೆಗಳನ್ನು ಈಗ ಪ್ರತಿಷ್ಠಾನವು ಅನುಷ್ಠಾನಿಸುತ್ತಿದೆ.
              ಸಂಪಾಜೆ ಯಕ್ಷೊತ್ಸವದಲ್ಲಿ ಆತಿಥ್ಯಕ್ಕೆ ಮಣೆ. ಪ್ರದರ್ಶನ ಮುಗಿಯುವ ತನಕ ಪಾಕ ಶಾಲೆಯು ತೆರೆದಿರುತ್ತದೆ. ಎಷ್ಟು ಹೊತ್ತಿಗೆ ಹೋದರೂ ಉಪಾಹಾರ, ಭೋಜನವನ್ನು ಬಡಿಸಲು ಕಾದಿರುತ್ತಾರೆ. ಹಾಗಾಗಿ ಪ್ರದರ್ಶನ ಪೂರ್ತಿ ಬಹುತೇಕ ಪ್ರೇಕ್ಷಕರು ಭಾಗವಹಿಸುವುದನ್ನು ನೋಡಬಹುದು. ಎಲ್ಲಾ ವರ್ಗದ ಜನರು ಭಾಗವಹಿಸುತ್ತಾರೆ. ಒಂದೊಂದು ವಿಭಾಗದಲ್ಲೂ ಲೋಪ ಬರಬಾರದೆನ್ನುವ ನಿಗಾ. ಎಲ್ಲೆಲ್ಲೂ ಅಚ್ಚುಕಟ್ಟು. ಗೊಂದಲವಾಗದಂತೆ ಎಚ್ಚರ.
             'ಸಹಸ್ರ ಕವಚ, ಮಾರುತಿ ಪ್ರತಾಪ, ಉತ್ತಮ ಸೌದಾಮಿನಿ, ವಿಶ್ವವಿಮೋಹನ' - ಸರ್ವಾಂಗ ಸುಂದರವಾಗಿ ಮೂಡಿಬಂದ ಆಖ್ಯಾನಗಳು. ಇದರಲ್ಲಿ 'ಮಾರುತಿ ಪ್ರತಾಪ'ವನ್ನು ಬಡಗು ತಿಟ್ಟಿನ ಖ್ಯಾತರು ಪ್ರದರ್ಶಿಸಿದ್ದರು. ಜನ್ಸಾಲೆ ರಾಘವೇಂದ್ರ ಆಚಾರ್ಯರ ಭಾಗವತಿಕೆಯಲ್ಲಿ ಪ್ರಸ್ತುತಿಯಾದ ಈ ಪ್ರಸಂಗವು ಲಂಬಿತವಾದಂತೆ ಕಂಡು ಬಂದರೂ ಪ್ರಸಂಗದ ಒಟ್ಟು ಸೌಂದರ್ಯವನ್ನು ಕಲಾವಿದರು ಕಟ್ಟಿಕೊಟ್ಟರು. ಮೂವರು ಭಾಗವತರ ತ್ರಿಂದ್ವ ಭಾಗವತಿಕೆಯಲ್ಲಿ ಸಹಸ್ರಕವಚ ಪ್ರಸಂಗ ಮೆರುಗಿತು.
             ಉತ್ತಮ ಸೌದಾಮಿನಿ - ಒಂದು ಕಾಲಘಟ್ಟದಲ್ಲಿ ಶ್ರೀ ಧರ್ಮಸ್ಥಳ ಮೇಳದಲ್ಲಿ ಯಶಕಂಡ ಪ್ರಸಂಗ ಯಕ್ಷೊತ್ಸವದಲ್ಲಿ ಕಲಾವಿದರಿಗೆಲ್ಲಾ ಪ್ರಸಂಗವು ಹೊಸತು. ಎಲ್ಲೂ ಗೊಂದಲವಾಗದೆ ಸಹಜವಾಗಿ ಓಟ ಕಂಡಿತ್ತು. ಹೆಚ್ಚು ನಾಟಕೀಯ ತಿರುವುಗಳುಳ್ಳ ಇದನ್ನು ನೊಡುವ ಪ್ರೇಕ್ಷಕರು ಕೂಡಾ ರಂಗದಲ್ಲೇ ತಮ್ಮ ಗಮನವನ್ನು ಇರಿಸಿದಾಗ ಮಾತ್ರ ಪ್ರಸಂಗದ ಆಶಯ ಮನದೊಳಗೆ ಇಳಿಯುತ್ತದೆ. ಕೆಲವೊಂದು ಸನ್ನಿವೇಶಗಳಲ್ಲಿ ಬಹಳ ಸೂಕ್ಷ್ಮತೆಯ ಬಂಧವಿತ್ತು. ಮೇಲ್ನೋಟಕ್ಕೆ ನೋಡುವಾಗ ಸನ್ನಿವೇಶದಿಂದ ಸನ್ನಿವೇಶಕ್ಕೆ ಸಂಬಂಧವೇ ಇಲ್ಲದಂತೆ ಭಾಸವಾಗುತ್ತದೆ. ಕೊನೆಗೆ ಎಲ್ಲವೂ ಸುಸೂತ್ರವಾಗಿ ಪರಸ್ಪರ ಸಂಬಂಧ ಹೊಸೆಯುತ್ತದೆ.
              ವರ್ತಮಾನ ಯಕ್ಷಗಾನವು ಬಯಸುವ 'ರೈಸುವಿಕೆ'ಯು ಉತ್ತಮ ಸೌಧಾಮಿನಿಯಲ್ಲಿಲ್ಲ. ಹಾಗಾಗಿ ಕೆಲವರು 'ಬೋರ್' ಅಂದದುಂಟು. ಹಲವು ಕಾಲದಿಂದ ನಾನು 'ಬೋರ್' ಪದದ ಅರ್ಥ ಹುಡುಕುತ್ತಿದ್ದೇನೆ! ನನಗಿನ್ನೂ ಸಿಕ್ಕಿಲ್ಲ. ಆಟ ನೋಡುವ ಪ್ರೇಕ್ಷಕನ ಚಿತ್ತವು ರಂಗದೊಳಗೆ ಸುತ್ತುತ್ತಿದ್ದರೆ ಬೋರ್ ಎಂಬ ಅಂಟದು.  ಕೆಲವೊಮ್ಮೆ ರಂಗದ ಸಂಭಾಷಣೆಗಳು ದೀರ್ಘವಾದಾಗ ಚಿತ್ತವು ರಂಗದಿಂದ ಹೊರಗೆ ಸುತ್ತುವುದುಂಟು. ಆ ರೀತಿಯ ಸುತ್ತಾಟ ಒಂದು ಕ್ಷಣ ಮಾತ್ರ! ಮತ್ತದು ರಂಗದೊಳಗೆ ಜಿಗಿಯಬೇಕು. ಹೀಗೆ ಜಿಗಿಯದಿದ್ದರೆ ಪ್ರಸಂಗವನ್ನು ಅನುಭವಿಸುವುದಕ್ಕೆ, ಹಿಮ್ಮೇಳವನ್ನು ಆಸ್ವಾದಿಸುವುದಕ್ಕೆ ಕಷ್ಟವಾಗುತ್ತದೆ. ಎಲ್ಲಾ ಕಲಾವಿದರು ಉತ್ತಮ ಸೌದಾಮಿನಿಗೆ ನ್ಯಾಯ ಒದಗಿಸಿದ್ದಾರೆ. ಪರಿಣಾಮ ನೀಡಿದ್ದಾರೆ. ಚಿಕ್ಕ ಚಿಕ್ಕ ಹಾಸ್ಯ, ಮಾತಿನ ವರಸೆಯ ಪಂಚ್ಗಳು ಮುದ ನೀಡಿತ್ತು.
              ಕೊನೆಯ ಪ್ರಸಂಗ - ವಿಶ್ವವಿಮೋಹನ ಅಥವಾ ಭದ್ರಾಯು ಚರಿತ್ರೆ. ಬಹುತೇಕ ಏರು ಪದ್ಯಗಳ ಆಖ್ಯಾನವಿದು. ಪ್ರಸಂಗ ಆರಂಭವಾಗುವಾಗ ಬೆಳಗ್ಗಿನ ಜಾವ ಏಳು ಗಂಟೆ! ಸ್ವಯಂವರ, ಶೃಂಗಾರ, ವೀರರಸಗಳಿಂದ ಆವೃತ್ತವಾದ ಪ್ರಸಂಗ. ಸಂಪಾಜೆಯ ಯಕ್ಷೊತ್ಸವ ಅಂದಾಗ ಎಲ್ಲಾ ಕಲಾವಿದರಿಗೂ ತನ್ನಲ್ಲಿರುವ  ಪ್ರತಿಭೆಯ ಅನಾವರಣ ಆಗಬೇಕೆಂಬ ಹಪಹಪಿಕೆ ಇರುತ್ತದೆ. ಆಗ ಪ್ರಸಂಗ ಸಹಜವಾಗಿ ಲಂಬಿತವಾಗುತ್ತದೆ. ಲಂಬನವಾಯಿತೆಂದು ಯಾರೂ ಗೊಣಗದೆ ಪ್ರಸಂಗವನ್ನು ಸ್ವೀಕರಿಸುವ ಮನಃಸ್ಥಿತಿಯಿದೆಯಲ್ಲಾ, ಇದು ಸಂಪಾಜೆ ಯಕ್ಷೊತ್ಸವದ ಹೈಲೈಟ್.
              ಇಂದು ಸಮಗ್ರ ಯಕ್ಷಗಾನವನ್ನು ನೋಡುವ ರಸಿಕರು ಎಲ್ಲವೆಂದಲ್ಲ, ತೀರಾ ಕಡಿಮೆ. ಒಂದೊಂದು ಅಂಗವನ್ನು ಪ್ರೀತಿಸುವ, ಅದಕ್ಕಾಗಿ ಕಾಯುವ ಮನಸ್ಸುಗಳು ಧಾರಾಳ. ಕೆಲವರಿಗೆ ಭಾಗವತಿಕೆ, ಇನ್ನೂ ಕೆಲವರಿಗೆ ಚೆಂಡೆ-ಮದ್ದಳೆಗಳು, ಹಾಸ್ಯ, ಸ್ತ್ರೀವೇಶ, ಪುಂಡುವೇಶ... ಹೀಗೆ. ಇಪ್ಪತ್ತಮೂರು ಗಂಟೆಗಳಲ್ಲಿ ಇಂತಹ ನಿರೀಕ್ಷೆ, ಕಾತರಗಳಿಗೆ ಸಾಕ್ಷಿಯಾಗಿತ್ತು ಯಕ್ಷೊತ್ಸವ. ಕಾಲ ಬದಲಾಗಿದೆ, ಪುರುಸೊತ್ತಿಲ್ಲ, ಬ್ಯುಸಿ.. ಮೊದಲಾದ ಒಣ ಮಾತುಗಳನ್ನು ಬದುಕಿನಲ್ಲಿ ಕೇಳುತ್ತೇವೆ. ಯಕ್ಷೊತ್ಸವದಲ್ಲಿ ಇಪ್ಪತ್ತಮೂರು ಗಂಟೆ ಕುಳಿತ ಪ್ರೇಕ್ಷಕರನ್ನು ಕಂಡಾಗ ಈ ಮಾತು ಢಾಳು ಎಂದು ಗೋಚರವಾಯಿತು! ಮನಸ್ಸಿದ್ದರೆ ಮಾರ್ಗವಿದೆ.
                ಕೀಲಾರು ಮನೆತನದವರು ಇಪ್ಪತ್ತಾರು ವರುಷಗಳಿಂದ ಸಂಪಾಜೆಯಂತಹ ಹಳ್ಳಿಗೆ ಸಾಂಸ್ಕೃತಿಕ  ಮೌಲ್ಯವನ್ನು ನೀಡಿದ್ದಾರೆ. ಸಾಂಸ್ಕೃತಿಕ ಯವನಿಕೆಯನ್ನು ಊರಿದ್ದಾರೆ. ಸಂಪಾಜೆ ಊರಿನ ಹೆಸರನ್ನು ಕೇಳದವರು ಸಂಪಾಜೆಗೆ ಬರುವಂತೆ ಮಾಡಿದ ಸಾಧನೆ ಚಿಕ್ಕ ವಿಚಾರವಲ್ಲ. ಕೀಲಾರು ಅವರ 'ಜಾತ್ಯತೀತ ಮನೋಭಾವ ಮತ್ತು ಸರ್ವಧರ್ಮ ಪ್ರೀತಿ'ಯು ಯಕ್ಷೊತ್ಸವದಲ್ಲಿ ಸಾಕಾರಗೊಳ್ಳುತ್ತಿದೆ. ಸಂಪಾಜೆಯ ಆಟಕ್ಕೆ ಹೋಗುವಾಗಲೂ ಯಕ್ಷಗಾನದ ಗುಂಗು, ಆಟ ನೋಡಿ ಮರಳುವಾಗಲೂ ಯಕ್ಷಗಾನದ್ದೇ ಗುಂಗು! ಈ ಗುಂಗಿನ ತೇವ ತಿಂಗಳಾದರೂ ಆರದು!

ಚಿತ್ರ : ಶ್ಯಾಮ ಕುಮಾರ್ ತಲೆಂಗಳ
ಪ್ರಜಾವಾಣಿ/ದಧಿಗಿಣತೋ/4-11-2016

      

ಐದೇ ವರುಷದಲ್ಲಿ ಐನೂರು!
              ಮಂದಾರ್ತಿ ಮೇಳದ ಪ್ರಧಾನ ಭಾಗವತ ನಗರ ಸುಬ್ರಹ್ಮಣ್ಯ ಆಚಾರ್.  ಇವರ ಕಲ್ಪನೆಯ 'ನಡುಮನೆ ಗಾಯನ'ಕ್ಕೆ ಐನೂರರ ಖುಷಿ. ಯಕ್ಷಗಾನದ ಗಾಯನ ಸೊಗಸನ್ನು ಕಲಾ ಮನಸ್ಸುಗಳಿಗೆ ತಲುಪಿಸುವ ಉದ್ದೇಶ. ಬೇಸಿಗೆಯಲ್ಲಿ ಮೇಳದ ವ್ಯವಸಾಯ. ಮಳೆಗಾಲದಲ್ಲಿ ನಡುಮನೆ ಗಾಯನ. ಹೀಗೆ ವರುಷಪೂರ್ತಿ ಯಕ್ಷಗಾನವೇ ಬದುಕು. ಐನೂರು ಕಾರ್ಯಕ್ರಮದ ಹಿಂದೆ ಐದು ವರುಷದ ಶ್ರಮವಿದೆ.
               ಆ ದಿನ. ಉಡುಪಿ-ಪುತ್ತೂರು ಶ್ರೀ ಭಗವತಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ 'ನಡುಮನೆ ಗಾಯನ'ಕ್ಕೆ ಬೀಜಾಂಕುರ.  ಉಡುಪಿ ಕೆಳಾರ್ಕಳಬೆಟ್ಟು 'ನಗರ ಯಕ್ಷಬಳಗ'ದ ರೂಪೀಕರಣ. ಗಾಯನಕ್ಕೆ ಭಾಗವತ ಮತ್ತು ಓರ್ವ ಮದ್ದಳೆಗಾರ. ದಿವಸಕ್ಕೆ ಆರೇಳು ಮನೆಗಳ ಆಯ್ಕೆ. ಒಂದೊಂದು ಮನೆಯಲ್ಲಿ ಹದಿನೈದರಿಂದ ಇಪ್ಪತ್ತು ನಿಮಿಷ ಗಾಯನ. ಪುರಾಣ ಪ್ರಸಂಗಗಳ ಪದ್ಯಗಳ ಆಯ್ಕೆ. ಯಾವುದೇ ಸಂಭಾವನೆಯ ನಿರೀಕ್ಷೆಯಿರಲಿಲ್ಲ. ಪಾಲಿಗೆ ಬಂದಷ್ಟು ಸ್ವೀಕಾರ.
               ಒಂದು ವಾರ ಆಗಿರಬಹುದಷ್ಟೇ. ಕೊಡಂಕೂರಿನ ಕಲಾಪ್ರಿಯರೊಬ್ಬರಿಂದ ಆಹ್ವಾನ. ಕಾಲು ಗಂಟೆ ಸಾಲದು. ಎರಡು ಗಂಟೆಯಾದರೂ ಗಾಯನ ಬೇಕು. ಜತೆಗೆ ಚೆಂಡೆಯ ವಾದನವೂ ಬೇಕು. ಮಾಡಲು ಸಾಧ್ಯವೇ? ಎಂದು ವಿನಂತಿಸಿದರು. ಧ್ವನಿವರ್ಧಕ, ಪ್ರಚಾರದ ವ್ಯವಸ್ಥೆಯನ್ನೂ ಮಾಡಿದರು. ಕಾರ್ಯಕ್ರಮ ಉತ್ತಮವಾಗಿ ಮೂಡಿಬಂತು. ಅಂದಿನಿಂದ ದಿವಸಕ್ಕೆ ಒಂದೇ ಕಾರ್ಯಕ್ರಮ! ಅದೂ ಶಾಲೆ, ದೇವಾಲಯ, ಮನೆಗಳಲ್ಲಿ.
              ಮೂರು ವರುಷದಲ್ಲಿ ಮುನ್ನೂರೈವತ್ತು 'ನಡುಮನೆ ಗಾಯನ'! ಪ್ರಥಮ ವರುಷವೇ ನೂರರ ಸಂಭ್ರಮದ ಆಚರಣೆ. ಮುನ್ನೂರೈವತ್ತು ಕಾರ್ಯಕ್ರಮವೆಂದರೆ ಅದರ ಹಿಂದಿನ ಶ್ರಮ ಕಾಣದು. ಮನೆಗಳ ಆಯ್ಕೆ, ಪ್ರಚಾರ, ಆತಿಥ್ಯ.. ಇವೆಲ್ಲವೂ ಜೋಡಿಸಿಕೊಂಡು, ಕಲಾವಿದರನ್ನೂ ಸೇರಿಸಿಕೊಂಡು ಮಾಡಬೇಕಷ್ಟೇ. ಇದರಿಂದ ಯಕ್ಷಗಾನದ ಪದ್ಯಗಳ ಸೊಗಸನ್ನು ಜನರಿಗೆ ತಲುಪಿಸಲು ಸಹಕಾರಿಯಾಯಿತು, ಎನ್ನುತ್ತಾರೆ ಯಕ್ಷಗಾಯನದ ರೂವಾರಿ ನಗರ ಸುಬ್ರಹ್ಮಣ್ಯ ಆಚಾರ್.
              ಎರಡು ವರುಷದ ಹಿಂದೆ ಮಂದಾರ್ತಿಯ ಯಕ್ಷಗಾಯನ ಕಾರ್ಯಕ್ರಮಕ್ಕೆ ತೆಂಕಿನ ಪ್ರಸಿದ್ಧ ಭಾಗವತ ಪಟ್ಲ ಸತೀಶ ಶೆಟ್ಟಿಯವರು ಆಮಂತ್ರಿತರಾಗಿದ್ದರು. 'ಯಕ್ಷಗಾಯನದೊಂದಿಗೆ ಯಕ್ಷನೃತ್ಯವನ್ನೂ ಅಳವಡಿಸಿದರೆ ಪರಿಣಾಮಕಾರಿಯಲ್ವಾ,' ಸಲಹೆ ನೀಡಿದರು. ಯಕ್ಷನೃತ್ಯದ ಪರಿಕಲ್ಪನೆ ಮತ್ತು ವಿನ್ಯಾಸ ಇಲ್ಲಿಗೆ ಹೊಸತು. ಸ್ತ್ರೀಪಾತ್ರಧಾರಿ ಸಂತೋಷ ಕುಲಶೇಖರರಿಂದ ಜರುಗಿದ ಆದರೆ ಜರುಗಿದ ನೃತ್ಯ ಕಲಾಪ ಕ್ಲಿಕ್ ಆಯಿತು. ಕಲಾ ಪ್ರೇಕ್ಷಕರ ಸ್ವೀಕೃತಿಯೂ ದೊರೆಯಿತು. ಅಂದಿನಿಂದ ಗಾಯನದೊಂದಿಗೆ ನೃತ್ಯವೂ ಹೊಸೆಯಿತು. ಎರಡು ವರುಷದಲ್ಲಿ ನೂರೈವತ್ತು ಕಾರ್ಯಕ್ರಮಗಳಾಗಿವೆ.
                 ಒಟ್ಟು ಎರಡೂವರೆ ಗಂಟೆ. ಅದರಲ್ಲಿ ಒಂದೂಕಾಲು ಗಂಟೆ ಯಕ್ಷಗಾಯನ.  ಉಳಿದರ್ಧ ನೃತ್ಯ. ಪೌರಾಣಿಕ ಪ್ರಸಂಗಗಳ ಕಥಾಭಾಗಗಳನ್ನು ಆಯ್ಕೆ ಮಾಡಿಕೊಂಡಿದ್ದೇವೆ. ವಿನ್ಯಾಸಕ್ಕೆ ಭಂಗ ಬಾರದಂತೆ ಪುಟ್ಟ ಸಂಭಾಷಣೆಗಳು.  ಹೋದೆಡೆ ಎಲ್ಲಾ ಬಂಧುಗಳು ಸ್ವಾಗತ ಕೋರಿದ್ದಾರೆ. ಪ್ರೀತಿಯಿಂದ ನಡೆಸಿಕೊಂಡಿದ್ದಾರೆ. ಯಕ್ಷಗಾನವನ್ನು ಗೌರವಿಸಿದ್ದಾರೆ, ಎನ್ನುತ್ತಾರೆ ಆಚಾರ್.
            ಒಂದು ಕಾರ್ಯಕ್ರಮಕ್ಕೆ ಹದಿಮೂರುವರೆ ಸಾವಿರ ರೂಪಾಯಿ ವೀಳ್ಯ. ವೈಯಕ್ತಿಕವಾಗಿ ಭರಿಸುವವರೂ ಇದ್ದಾರೆ. ಸಾರ್ವಜನಿಕವಾಗಿ ಅಷ್ಟಿಷ್ಟು ಸಂಗ್ರಹಮಾಡಿ ಆಯೋಜಿಸುವವರೂ ಇದ್ದಾರೆ. ಧ್ವನಿವರ್ಧಕ, ವೇದಿಕೆ, ಜನರೇಟರ್.. ಎಲ್ಲಾ ವ್ಯವಸ್ಥೆಗಳನ್ನು ತಂಡ ಹೊಂದಿದೆ. ನಮ್ಮಲ್ಲಿಗೆ ಬನ್ನಿ ಎಂದು ಆಹ್ವಾನಿಸುವವರ ಸಂಖ್ಯೆ ಬೆಳೆದಿದೆ. ಇದು ಯಕ್ಷಗಾನದ ಹಿರಿಮೆಯಲ್ವಾ ಎಂದು ಸಂತೋಷಿಸುವ ಸುಬ್ರಹ್ಮಣ್ಯ ಆಚಾರ್, ಗೇಲಿ ಮಾಡುವವರ ಸಂಖ್ಯೆಯೂ ದೊಡ್ಡದಿದೆ. ನನಗೆ ಬೇರೆ ಆರ್ಥಿಕ ಮೂಲವಿಲ್ಲ. ಯಕ್ಷಗಾನವೇ ಬದುಕು. ಬದುಕೇ ಯಕ್ಷಗಾನ. ನನಗಿದು ಅನ್ನದ ದಾರಿ. ಯಕ್ಷಗಾನವನ್ನು ಮನೆಗೆ, ಹಳ್ಳಿಗೆ ಕೊಂಡೊಯ್ದ ತೃಪ್ತಿ, ಸಮಾಧಾನವಿದೆ, ಎನ್ನುತ್ತಾರೆ.
            ಮೇಳದ ತಿರುಗಾಟದ ಅವಧಿಯಲ್ಲೂ ನಡುಮನೆ ಗಾಯನವಿದೆ. ಅಂತಹ ಹೊತ್ತಲ್ಲಿ ಅದರ ಜವಾಬ್ದಾರಿಯನ್ನು ಆಯೋಜಕರೇ ವಹಿಸಿಕೊಳ್ಳುತ್ತಾರೆ. ಸಂಘ ಸಂಸ್ಥೆಗಳು ಗಾಯನ ಕಲಾಪಕ್ಕೆ ತುಂಬು ಬೆಂಬಲ ನೀಡಿವೆ. ಹಿರಿಯ ಕಲಾವಿದರು ಬೆನ್ನು ತಟ್ಟಿದ್ದಾರೆ. ಮಣಿಪಾಲದ ಉಪನ್ಯಾಸಕ, ಲೇಖಕ ಪ್ರೊ.ಎಸ್.ವಿ.ಉದಯಕುಮಾರ್ ಶೆಟ್ಟಿಯವರು ತುಂಬು ಪ್ರೋತ್ಸಾಹ ನೀಡಿದ್ದಾರೆ, ಎನ್ನುತ್ತಾರೆ. ಐನೂರು ಕಾರ್ಯಕ್ರಮದಲ್ಲೂ ನಗರ ಸುಬ್ರಹ್ಮಣ್ಯ ಆಚಾರ್ ಅವರೇ ಭಾಗವತರು. ಮಹೇಶ್ ಮಂದಾರ್ತಿ ಮದ್ದಳೆಗಾರರು. ರಾಮಕೃಷ್ಣ ಮಂದಾರ್ತಿ ಚೆಂಡೆ ವಾದಕರು. ಅಗತ್ಯ, ಒತ್ತಡ, ಅಪೇಕ್ಷೆಯಿದ್ದಾಗ ಅತಿಥಿ ಕಲಾವಿದರನ್ನು ಹೊಂದಿಸಿಕೊಳ್ಳುತ್ತಾರೆ.
          ಮಳೆಗಾಲದಲ್ಲಿ ಚಿಕ್ಕ ಮೇಳಗಳು ಹಿಮ್ಮೇಳ, ವೇಷಗಳೊಂದಿಗೆ ತಿರುಗಾಟ ಮಾಡುತ್ತಿವೆ. ಮಂಟಪ ಪ್ರಭಾಕರ ಉಪಾಧ್ಯರ ಏಕವ್ಯಕ್ತಿ ಪ್ರದರ್ಶನಗಳು ಜನಮಾನಸದಲ್ಲಿ ದಾಖಲಾಗಿವೆ. ಗಾನವೈಭವಗಳು ಯಥೇಷ್ಟವಾಗಿದೆ. ಪ್ರದರ್ಶನಗಳಿಗೆ ಅದ್ದೂರಿತನ ಹೊಸೆದಿದೆ. ಊಟೋಪಚಾರ, ಆತಿಥ್ಯಕ್ಕೆ ಮೊದಲ ಮಣೆ. ಪ್ರಕೃತ ಯಕ್ಷಗಾನದ ಸುದ್ದಿಗಳು ಮಾತಿಗೆ ವಸ್ತುವಾಗಿದೆ.
           ಇಂತಹ ಹೊತ್ತಲ್ಲಿ ನಗರ ಸುಬ್ರಹ್ಮಣ್ಯ ಆಚಾರ್ ತಂಡವು ಯಾವುದೇ ಗಿಮಿಕ್ ಇಲ್ಲದೆ, ಗಾಯನಸುಧೆಯನ್ನು ಉಣಿಸುತ್ತಿರುವುದು ಶ್ಲಾಘ್ಯ.  ಅವರಿಗೆ ಇದು ಹೊಟ್ಟೆಪಾಡಾದರೂ, ಈ ಹಾದಿಯಲ್ಲಿ ಗೌರವವಿದೆ. ಮಾನ-ಸಂಮಾನಗಳು ಪ್ರಾಪ್ತವಾಗಿವೆ. ಎಲ್ಲಕ್ಕಿಂತಲೂ ಮುಖ್ಯವಾಗಿ ಯಕ್ಷಗಾನವನ್ನು ಗೌರವದ ಕಣ್ಣಿನಿಂದ ನೋಡುತ್ತಾ, ಮನದಲ್ಲಿ ಮಾನಿಸುತ್ತಾ, ಸಮಾಜದಿಂದಲೂ ಗೌರವವನ್ನು ಅಪೇಕ್ಷಿಸುತ್ತಾ, ಅದರಂತೆ ನಡೆಯುವ ಮತ್ತು ಈ ವಿನ್ಯಾಸವನ್ನು ಜನರ ಮಧ್ಯೆ ಒಯ್ಯುವ ಸಾಧನೆ ಸಣ್ಣದಲ್ಲ.
              ಅಕ್ಟೋಬರ್ 28ರಂದು ಅಪರಾಹ್ನ 3 ರಿಂದ ನಡುಮನೆ ಯಕ್ಷಗಾನ ಗಾಯನ ಮತ್ತು ಯಕ್ಷ ನಾಟ್ಯದ ಐನೂರರ ಸಂಭ್ರಮ. ಪುತ್ತೂರು ಉಡುಪಿ ಶ್ರೀ ಭಗವತಿ ಕ್ಷೇತ್ರದಲ್ಲಿ ಸಮಾರಂಭ. ಈ ಸಮಾರಂಭದಲ್ಲಿ ಸ್ತ್ರೀಪಾತ್ರಧಾರಿ ಸಂತೋಷ ಕುಲಶೇಖರರಿಗೆ 'ಯಕ್ಷಮೇನಕೆ' ಪ್ರಶಸ್ತಿ ಪ್ರದಾನ. ಸುಬ್ರಹ್ಮಣ್ಯ ಭಾಗವತರ ಆಶಯಗಳಿಗೆ ಪೂರ್ಣಪ್ರಮಾಣದಲ್ಲಿ ಸ್ಪಂದಿಸಿದ ಕಲಾವಿದ. ಪ್ರಕೃತ ಮಂದಾರ್ತಿ ಮೇಳದ ಪ್ರಧಾನ ಸ್ತ್ರೀಪಾತ್ರಧಾರಿ. ಸಮಾರಂಭದ ಬಳಿಕ ನಡುಮನೆ ಯಕ್ಷಗಾನ, ಯಕ್ಷ ನಾಟ್ಯ.
             ಹಸಿವಿದ್ದಲ್ಲಿ ಪ್ರೀತಿಯಿದೆ, ವಿಶ್ವಾಸವಿದೆ. ಹಸಿದ ಮನಸ್ಸಿಗೆ ಬೇಕು, ಮುದ ನೀಡುವ ನಾದ-ಗಾಯನ. ಇದರಲ್ಲಿ ಕಲಾವಿದನೂ ಮೀಯುತ್ತಾನೆ, ಪ್ರೇಕ್ಷಕರನ್ನೂ ಮೀಯಿಸುತ್ತಾನೆ. ಮೀಯಲು ತಿಳಿಯದಿದ್ದರೆ ಮೀಯಿಸುವುದೇನನ್ನು? ಸಾಗಿ ಬಂದ ಹಾದಿಗೆ, ಬೆರಳು ತೋರಿದ ಪರಂಪರೆಗೆ ಯಾಕೆ ಕೃತಘ್ನರಾಗುತ್ತೇವೆ ಎಂದು ಅರ್ಥವಾಗುತ್ತಿಲ್ಲ. ವರ್ತಮಾನದ ರಂಗಭೂಮಿಯ ಭಾವ ನನ್ನೊಳಗೆ ಗೂಡು ಕಟ್ಟಿದ್ದು ಹೀಗೆ.
              ಸಾಗಿ ಬಂದ ಹಾದಿಯನ್ನು ಮರೆಯದ, ಪರಂಪರೆಗೆ ಮುಖತಿರುಗಿಸದೆ, ಎರಡನ್ನೂ ಗೌರವ ಭಾವದಿಂದ ಕಾಣುವ ನಗರ ಸುಬ್ರಹ್ಮಣ್ಯ ಆಚಾರ್ ಅವರ ನಡುಮನೆ ಯಕ್ಷಗಾಯನ, ಯಕ್ಷನಾಟ್ಯ ವಿನ್ಯಾಸಗಳು ಕಲಾಮನಸ್ಸುಗಳನ್ನು ಕಟ್ಟಿವೆ, ಕಟ್ಟುತ್ತಿವೆ.

ಗೋವಿನ ಮಹತಿಗೆ ಯಕ್ಷಗಾನ ಮಾಧ್ಯಮ

             ಯಕ್ಷಗಾನ ತಾಳಮದ್ದಳೆ, ಆಟಗಳು ಹಳ್ಳಿಯಿಂದ ನಗರ ತನಕ ವಿಶಾಲ ವ್ಯಾಪ್ತಿಯನ್ನು ಪಡೆದಿದೆ. ಪುರಾಣ ಸಂದೇಶ, ಬದುಕಿನ ಮಾದರಿಗಳು, ಸಂಸ್ಕೃತಿ-ಸಂಸ್ಕಾರಗಳು.. ಜನಮಾನಸಕ್ಕೆ ತಲಪಿಸುವ ಸಾಧನ. ಆಧುನಿಕ ತಂತ್ರಜ್ಞಾನಗಳು ಧಾಂಗುಡಿಯಿಡುವ ಪೂರ್ವದಲ್ಲಿ ದಕ್ಷಿಣೋತ್ತರ ಜಿಲ್ಲೆಯುದ್ದಕ್ಕೂ, ಇತ್ತ ಮಲೆಯಾಳದ  ಮಣ್ಣಿಗೂ ಯಕ್ಷಗಾನವೊಂದೇ ಅರಿವನ್ನು ಬಿತ್ತುವ ಉಪಾಧಿಯಾಗಿತ್ತು.
            "ನನ್ನ ಅಮ್ಮ ರಾಮಾಯಣ, ಮಹಾಭಾರತ, ಭಾಗವತ ಮೊದಲಾದ ಪುರಾಣ ಕಾವ್ಯಗಳನ್ನು, ಅದರ ಅರ್ಥಗಳನ್ನು ಪಾರಾಯಣ ಮಾಡುತ್ತಿದ್ದಾಗ ನಾವೆಲ್ಲಾ ಕಿವಿಯಾಗುತ್ತಿದ್ದೆವು. ಮನೆಗಳಲ್ಲಿ ಪುರಾಣ ಕಥೆಗಳನ್ನು ಹೇಳುವ ಪರಿಪಾಠವಿತ್ತು. ಆ ವಾತಾವರಣದಲ್ಲಿ ಬೆಳೆದ ನಮಗೆ ಪುರಾಣ ಓದದೆಯೇ ರಾಮಾಯಣ, ಮಹಾಭಾರತ ಕಥೆಗಳು ಮತಿಯೊಳಗೆ ಇಳಿದಿದ್ದುವು," ಎಂದು ಕೀರ್ತಿಶೇಷ ಡಾ. ಶೇಣಿ ಗೋಪಾಲಕೃಷ್ಣ ಭಟ್ಟರು ಹೇಳಿದ ಮಾತು ನೆನಪಾಗುತ್ತದೆ.
            ಇಂತಹ ಸಂದೇಶವನ್ನು ಬಿತ್ತುವ ಯಕ್ಷಗಾನವು ಕ್ರಮೇಣ ಸಾಮಾಜಿಕ ಪ್ರಸಂಗದತ್ತ ಹೊರಳಿದುವು. ತುಳು ಪ್ರಸಂಗಳು ರಚನೆಯಾದುವು. ಈ ಮಧ್ಯೆ ಒಂದು ಪಿಡುಗನ್ನೋ, ಒಂದು ಚಳುವಳಿಯನ್ನೋ ಕೇಂದ್ರೀಕರಿಸಿ ಪ್ರಸಂಗಗಳು ರಚನೆಯಾದುವು. ತಾಳಮದ್ದಳೆ, ಆಟಗಳ ಮೂಲಕ ಪ್ರಸ್ತುತಿಕೊಂಡುವು. ಒಂದು ಉಪನ್ಯಾಸ, ಭಾಷಣಗಳು ಮಾಡುವ ಪರಿಣಾಮಕ್ಕಿಂತಲೂ ದುಪ್ಪಟ್ಟು ಗಾಢ ಪರಿಣಾಮ ಬೀರಿದುವು. ಅವೆಲ್ಲಾ ಕಾಲದ ಒಂದು ಮಿತಿಯೊಳಗೆ ಹೆಚ್ಚು ಪರಿಣಾಮ, ಪ್ರಭಾವ ಬೀರುವಂತಹುದು, ದೀರ್ಘಕಾಲಿಕವಲ್ಲ.
           ಇಂದು ದೇಶಾದ್ಯಂತ ಗೋವಿನ ಸಂರಕ್ಷಣೆಯ ಚಳುವಳಿ ನಡೆಯುತ್ತಿದೆ. ಮಾಧ್ಯಮಗಳಲ್ಲಿ ಗೋಸಂತತಿ ಉಳಿಸುವ, ಬೆಳೆಸುವ ವಿಚಾರಗಳು ಪ್ರಕಟವಾಗುತ್ತಿವೆ. ಸರಕಾರಿ ಮಟ್ಟದಲ್ಲೂ ಗೋವಿನ ಅಭಿವೃದ್ಧಿಗೆ ಬೇಕಾದ ಯೋಜನೆಗಳು ರೂಪುಗೊಳ್ಳುತ್ತಿವೆ. ಹೈನುಗಾರಿಕೆಗೂ, ಕೃಷಿಗೂ ಬಿಡಿಸಲಾಗದ ಬಂಧ-ಅನುಬಂಧ. ಹೀಗೆ ಬದುಕಿನಲ್ಲಿ ಗೋವಿನ ಮಹತ್ವವನ್ನು ಸಾರುವ ವರ್ತಮಾನದ ಒಂದು ವಿಚಾರದ, ಸಮಸ್ಯೆಯ ಸುತ್ತ ಯಕ್ಷಗಾನ ಪ್ರಸಂಗವೊಂದು ಸಿದ್ಧವಾಗಿದೆ. ಒಂದೆರಡು ತಾಳಮದ್ದಳೆ ಜರುಗಿದೆ.
           ಪ್ರಸಂಗದ ಹೆಸರು - 'ಅಭೀಷ್ಟದಾಯಿನಿ ಗೋಮಾತೆ'. ಹವ್ಯಾಸಿ ಭಾಗವತ ಬಟ್ಯಮೂಲೆ ಲಕ್ಷ್ಮೀನಾರಾಯಣ ಭಟ್ ಪ್ರಸಂಗದ ರಚಯಿತರು. ಕಲಾವಿದ ಉಂಡೆಮನೆ ಕೃಷ್ಣ ಭಟ್ಟರಿಂದ ಪರಿಷ್ಕಾರ. ಸುಮಾರು ಮೂರು ಗಂಟೆಗೆ ಹೊಂದುವ ಕಾಲ್ಪನಿಕ ಪ್ರಸಂಗ. ಗೋ ಸಂತತಿಯನ್ನು ಉಳಿಸಬೇಕು, ಬೆಳೆಸಬೇಕು ಎನ್ನುವ ಸ್ಪಷ್ಟ ಸಂದೇಶ ಬೀರುವ ಪ್ರಸಂಗವು ವರ್ತಮಾನಕ್ಕೆ ಕನ್ನಡಿ. ಯಕ್ಷಗಾನದ ವರ್ತುಲದೊಳಗೆ ಕಥಾನಕ ಸುತ್ತುತ್ತದೆ. ಎಲ್ಲೂ ಕಥೆಯಿಂದ, ಚೌಕಟ್ಟಿನಿಂದ ಹೊರಹೋಗದಂತಹ ಬಿಗಿ.
           ಕಥಾ ಹಂದರ : ಕರುನಾಡಿನ ಸುಧರ್ಮ ಮಹಾರಾಜನ ಮಗ ಸತ್ಯಸೇನ. ಈತ ಬೇಟೆಗೆ ತೆರಳಿದಾಗ ಕಳಿಂಗದ ವೀರವರ್ಮನ ಮಗಳು ಚಂದ್ರಾನನೆಯ ಪರಿಚಯ. ಪರಸ್ಪರ ಪ್ರೇಮಾಂಕುರ. ಬಳಿಕ ವಿವಾಹ. ಗಂಡನ ಮನೆಯಲ್ಲಿ ಒಂದೆರಡು ತಿಂಗಳು ಕಳೆದ ಚಂದ್ರಾನನೆಗೆ ಗೋವಿನ ಮಾಂಸ ತಿನ್ನುವ ಚಪಲ. ಇದು ತಂದೆಯ ಬಳುವಳಿ. ಹೆಂಡತಿಯನ್ನು ಒಲಿಸಿಕೊಳ್ಳಲು ಗಂಡ ಸತ್ಯಸೇನ ಗೋವಧೆಗೆ ಮುಂದಾಗುತ್ತಾನೆ. ತಂದೆಯಿಂದ ಮಗನಿಗೆ ಬುದ್ಧಿವಾದ. ಯಾವುದಕ್ಕೂ ಓಗೊಡದ ಮಗನಿಂದ ದೂರವಿರಲು ಸುಧರ್ಮ ನಿರ್ಧಾರ. ದೇಶಾಂತರ ಪರ್ಯಟನೆ. ಸುಜ್ಞಾನಂದ ಯೋಗಿಯ ಮೊರೆ. ಇವರಿಬ್ಬರ ಪ್ರಾರ್ಥನೆಯಂತೆ ನಂದಿನಿ ಪ್ರತ್ಯಕ್ಷ, ಅಭಯ. ಗೋವಧೆಯ ಪರಿಣಾಮಗಳ ನಿರೂಪಣೆ.  ಯೋಗಿಯಿಂದ ಗೋಸಂರಕ್ಷಣೆಯ ಮಹತ್ವವನ್ನು ಅರಿತ ಸುಧರ್ಮನಿಂದ ಪಶ್ಚಾತ್ತಾಮ. ಕಾಲಾಂತರದಲ್ಲಿ ಮಗ ಸತ್ಯಸೇನನಲ್ಲಿ ಪರಿವರ್ತನೆ ಉಂಟಾಗುತ್ತದೆ. ತಂದೆಯನ್ನು ಹುಡುಕುತ್ತಾ ಯೋಗಿಯು ಆಶ್ರಮಕ್ಕೆ ಬರುತ್ತಾನೆ. ತನ್ನ ಸ್ವಶುರನನ್ನು ಯುದ್ಧದಲ್ಲಿ ಮಣಿಸಿ ಕಥಾನಕ ಸುಖಾಂತ್ಯವಾಗುತ್ತದೆ.
            ಮೇಲ್ನೋಟಕ್ಕೆ ಚಿಕ್ಕ ಕಥಾಭಾಗ. ಆದರೆ ತಾಳಮದ್ದಳೆಯಲ್ಲಿ ಹೆಚ್ಚು ಪರಿಣಾಮ. ಕಲಾವಿದರೆಲ್ಲರೂ ಪ್ರಸಂಗದ ಆಶಯವನ್ನು ಅರ್ಥ ಮಾಡಿಕೊಂಡಿದ್ದಾರೆ. ವರ್ತಮಾನಕ್ಕೆ ಟ್ಯೂನ್ ಆದ ಕಲಾವಿದರಿಂದ ಮಾತ್ರ ಪ್ರಸ್ತುತಿ ಸಾಧ್ಯ. ಪುರಾಣ ಪ್ರಸಂಗಗಳಂತೆ ವಾದ-ಸಂವಾದಗಳು ನಡೆದರೆ ಪ್ರಸಂಗದ ಆಶಯಕ್ಕೆ ಭಂಗವಾಗುತ್ತದೆ. ಇಲ್ಲಿರುವುದು ತಾಳಮದ್ದಳೆಯ ಮೂಲಕ ಗೋವಿನ ಸಂರಕ್ಷಣೆಯ ಅಗತ್ಯವನ್ನು ಸಾರುವುದಾಗಿದೆ, ಎನ್ನುತ್ತಾರೆ ಭಾಗವತ ಬಟ್ಯಮೂಲೆ.
           ಉಂಡೆಮನೆ ಕೃಷ್ಣ ಭಟ್, ಬಟ್ಯಮೂಲೆ ಲಕ್ಷ್ಮೀನಾರಾಯಣ ಭಟ್, (ಭಾಗವತರು), ಪಕಳಕುಂಜ ಶ್ಯಾಮ ಭಟ್, ಗುಂಡ್ಯಡ್ಕ ಈಶ್ವರ ಭಟ್, ನಾರಾಯಣ ಕಾರಂತ, ಸೂರ್ಯ ಭಟ್ ಕಶೆಕೋಡಿ, ಗಣರಾಜ ಬಡೆಕ್ಕಿಲ, ಪ್ರಭಾಕರ ಭಟ್, ಮಧುರಾ ಜಿ. ಭಟ್ (ಅರ್ಥಧಾರಿಗಳು) ಮೊದಲಾದ ಕಲಾವಿದರು. ಐದಾರು ಪ್ರಯೋಗಗಳು ಪ್ರಾಯೋಗಿಕವಾಗಿ ಜರುಗಿದಾಗ ಮಾತ್ರ ಪ್ರಸಂಗವು ಪ್ರಭಾವಶಾಲಿಯಾಗುತ್ತದೆ. ಜಾಳುಗಳು ಉದುರಿಹೋಗುತ್ತವೆ. ಸತ್ವ ಮಾತ್ರ ಉಳಿದು ಆಶಯ ಅನಾವರಣಗೊಳ್ಳುತ್ತದೆ. ಎಲ್ಲಾ ಕಲಾವಿದರು ಸಿದ್ಧ ಜಾಡಿಗಿಂತ ಭಿನ್ನವಾಗಿ ಯೋಚಿಸುತ್ತಿರುವುದು ಶ್ಲಾಘನೀಯ.
            ಪ್ರಸಂಗ ಪದ್ಯಗಳು ಇನ್ನಷ್ಟು ಪರಿಷ್ಕಾರಗೊಳ್ಳಬೇಕಿದೆ ಎನ್ನುವ ನಿಲುವು ಭಾಗವತರದು. ನಿಧಾನಕ್ಕೆ ಸರಿಹೋಗಬಹುದು.  ಮುಂದೆ ಪುಣ್ಯಕೋಟಿ ಯಕ್ಷ ಬಳಗ, ಕಶೆಕೋಡಿ ತಂಡದ ಮೂಲಕ ಪ್ರದರ್ಶನಗೊಳ್ಳುತ್ತದೆ. ಒಂದು ಆಶಯವನ್ನು ಹೊಂದಿದ ಕಾರಣ ಕೆಲವು ಸಮಯದ ವರೆಗೆ ಈ ಪ್ರಸಂಗದ ಆಟ, ಕೂಟಗಳನ್ನು ಈ ತಂಡವೇ ಪ್ರದರ್ಶಿಸುವಂತೆ ಪ್ರಸಂಗಕರ್ತರು ನಿರ್ಧರಿಸಿದ್ದಾರೆ. ಗೋವನ್ನು ಸಾಕುವವರಿಗೆ  ಗೋವಿನ ಮಹತ್ವವ್ನು ತಇಳಿಸಲು ಇದೊಂದು ಪ್ರಯತ್ನ, ಎನ್ನುತ್ತಾರೆ ತಂಡದ ನಿರ್ವಾಹಕ ಗಣರಾಜ ಕೆದಿಲ.
            ಸಾಮಾಜಿಕ ಪ್ರಸಂಗಗಳು ತಾಳಮದ್ದಳೆ, ಆಟಗಳಾಗುತ್ತಿರುವುದು ಹೊಸತಲ್ಲ. ಡಾ.ಅಮೃತ ಸೋಮೇಶ್ವರ ವಿರಚಿತ 'ಘೋರ ಮಾರಕ' (ಕಥಾ ಸಂಗ್ರಹ : ಭಾಸ್ಕರ ರೈ ಕುಕ್ಕುವಳ್ಳಿ) ಪ್ರಸಂಗವು ಕನ್ನಾಡು ಮಾತ್ರವಲ್ಲ ರಾಷ್ಟ್ರದ ರಾಜಧಾನಿಯಲ್ಲೂ ಪ್ರದರ್ಶನ ಕಂಡಿದೆ. ಇಲಾಖೆಗಳ ವರಿಷ್ಠರು ಮೆಚ್ಚಿಕೊಂಡಿದ್ದಾರೆ. ಪ್ರಸಂಗಕರ್ತರನ್ನು, ಕಲಾವಿದರನ್ನು ಬೆನ್ನುತಟ್ಟಿದ್ದಾರೆ. ಏಡ್ಸ್ ರೋಗದ ಸುತ್ತ ಹೆಣೆದ 'ಘೋರ ಮಾರಕ' ಕಥಾನಕವು ಯಕ್ಷಗಾನ ಚೌಕಟ್ಟಿನೊಳಗಿದ್ದು ಆಶಯವನ್ನು ಬಿಂಬಿಸುವಲ್ಲಿ ಸಫಲವಾಗಿದೆ.
        ಹೊಸ್ತೋಟ ಮಂಜುನಾಥ ಭಾಗವತರ 'ನಿಸರ್ಗ ಸಂಧಾನ' ಪ್ರಸಂಗವು ಸಾಕಷ್ಟು ಪ್ರದರ್ಶನ ನೀಡಿದೆ. ಸಾಕ್ಷರತಾ ಆಂದೋಳನ ಸಂದರ್ಭದಲ್ಲಿ ಸುಳ್ಯದ ಡಾ.ಚಂದ್ರಶೇಖರ ದಾಮ್ಲೆ ನೇತೃತ್ವದಲ್ಲಿ 'ಅಕ್ಷರ ವಿಜಯ' ಪ್ರದರ್ಶನಗಳು ಗ್ರಾಮ ಗ್ರಾಮಗಳಲ್ಲಿ ಜರುಗಿವೆ. ಸುಳ್ಯ ಕುಕ್ಕುಜಡ್ಕದ ಎಂ.ಟಿ.ಶಾಂತಿಮೂಲೆಯವರ 'ಕೃಷಿ ವಿಜಯ', ಒಕ್ಕಲು ಮಸೂದೆಯ ಕುರಿತು ಉಪ್ಪಳ ಕೃಷ್ಣ ಮಾಸ್ತರ್ ರಚಿಸಿದ 'ಚಿಕ್ಕ ಬೊಕ್ಕ ಕಾಳಗ'.. ಇಂತಹ ಹತ್ತಾರು ಪ್ರಸಂಗಗಳು ಆಯಾಯ ಕಾಲಘಟ್ಟದಲ್ಲಿ ರಚನೆಯಾಗಿದೆ. ರಂಗ ಪ್ರದರ್ಶನ ಕಂಡಿದೆ. ಈಗ ಈ ಸಾಲಿಗೆ 'ಅಭೀಷ್ಟದಾಯಿನಿ ಗೋಮಾತೆ'.

ದಧಿಗಿಣತೋ / 30-9-2016ಕೀರ್ತಿಯ ಮೋಹ ಮರೆತ ಮದ್ದಳೆಗಾರ

                     ತಂದೆಯವರು ಅಂಚೆ ಮಾಸ್ತರರಾಗಿದ್ದರು. ಕೃಷಿಯೊಂದಿಗೆ ಯಕ್ಷಗಾನದ ಮದ್ದಳೆಗಾರರಾಗಿ ಭಾಗವಹಿಸುತ್ತಿದ್ದರು. ಸಂದರ್ಭ ಬಂದಾಗ ಭಾಗವತಿಕೆಯನ್ನೂ ಮಾಡಿದ್ದಾರೆ. ಆಗೆಲ್ಲಾ ಸಂಭಾವನೆ ಸಿಕ್ಕರೆ ಪುಣ್ಯ. ಸಮ ಭಾವನೆ ಮಾತ್ರ! ಅವರೊಂದಿಗೆ ಹಲವು ಬಾರಿ ಜತೆಯಾಗಿದ್ದೇನೆ. ಅವರಿಗೆ ಬೀಡಿ ಸೇದುವ ಅಭ್ಯಾಸವಿತ್ತು. ಒಮ್ಮೆ ಹೀಗಾಯಿತು. ಸತತ ಏಳೆಂಟು ದಿವಸ ಅಹೋರಾತ್ರಿ ತಾಳಮದ್ದಳೆಯಲ್ಲಿ ಭಾಗವಹಿಸಿದ್ದರು. ನಿದ್ದೆಯ ಅಮಲು ಬೇರೆ. ಎಂದಿನಂತೆ ಕಚೇರಿಗೆ ಹೋದರು. ಕಡತಗಳನ್ನು ಪರಿಶೀಲಿಸಿದರು. ಯಾವುದೋ ಪತ್ರದ ಬರವಣಿಗೆಗೆ ಕುಳಿತರು. ಅಷ್ಟು ಹೊತ್ತಿಗೆ ತನಿಖಾಧಿಕಾರಿ ಬಂದು ಬಿಡಬೇಕೆ? ವೃತ್ತಿ ನಿಷ್ಠೆಗೆ ಹೆಸರಾದ ಇವರನ್ನು ನೋಡಿ ಅಧಿಕಾರಿಗೆ ಆಶ್ಚರ್ಯ! ಜತೆಗೆ ನಗು ಕೂಡಾ. ಕಾರಣವಿಷ್ಟೇ. ನಿದ್ದೆಯ ಮತ್ತಿನಲ್ಲಿ ಬಾಯಲ್ಲಿ ಪೆನ್ನು ಇಟ್ಟುಕೊಂಡಿದ್ದರು. ಬೀಡಿಯಲ್ಲಿ ಬರೆಯುತ್ತಿದ್ದರು!
ಪುತ್ತೂರು ತಾಲುಕು ಕೋನಡ್ಕ ಗೋಪಾಲಕೃಷ್ಣ ಕಲ್ಲೂರಾಯರ ಬದುಕಿನ ಒಂದು ಎಳೆಯನ್ನು ಅವರ ಚಿರಂಜೀವಿ ಮುರಳಿ ವರ್ಣಿಸಿದ್ದು ಹೀಗೆ. ಕಲ್ಲೂರಾಯರು ಯಕ್ಷಗಾನದ ಅನುಭವಿ ಮದ್ದಳೆಗಾರ. ಹಿರಿ-ಕಿರಿಯ ಕಲಾವಿದರೊಂದಿಗೆ ಆಪ್ತ ಒಡನಾಟವಿತ್ತು. ಸುತ್ತೆಲ್ಲಾ ನಡೆಯುತ್ತಿದ್ದ ಕೂಟಾಟಗಳಿಗೆ ಖಾಯಂ ಕಲಾವಿದ. ಯಕ್ಷಗಾನವನ್ನು ಹಣ ಸಂಪಾದನೆಯ ಮಾರ್ಗವಾಗಿ ಬಳಸಿಕೊಂಡವರಲ್ಲ. ಅದರಲ್ಲಿ ಪೂಜ್ಯತೆಯನ್ನು ಕಂಡವರು.
                ಕಲ್ಲೂರಾಯರಿಗೆ ಎಳವೆಯಲ್ಲೇ ಪಿತೃವಿಯೋಗ. ಕೌಟುಂಬಿಕ ಜವಾಬ್ದಾರಿ. ತಮ್ಮ ತಂಗಿಯರ ಮದುವೆ. ಅವಿಭಕ್ತ ಕುಟುಂಬ. ತುಂಬು ಸಂಸಾರ. ಸಾಂಸಾರಿಕ ತಾಪತ್ರಯಗಳು. ಭೂಮಸೂದೆಯಿಂದ ಬಹ್ವಂಶ ಭೂಮಿ ಅನ್ಯರ ಪಾಲು. ಇಂತಹ ಸಂದರ್ಭದಲ್ಲಿ ಅಧೀರತೆ ಶಮನಕ್ಕಾಗಿ ಮತ್ತು ನೆಮ್ಮದಿಗಾಗಿ ಕಲ್ಲೂರಾಯರು ಯಕ್ಷಗಾನದಲ್ಲಿ ತೊಡಗಿಸಿಕೊಂಡರು. ಮುಂದೆ ಅದು ಬಿಟ್ಟಿರಲಾಗದ ನಂಟಾಯಿತು. ಅಂಚೆ ಕಚೇರಿಯಲ್ಲಿ ಮೂವತ್ತಮೂರು ವರುಷದ ಸೇವೆ ಸಲ್ಲಿಸಿದ್ದರು. ಇಪ್ಪತ್ತೈದು ರೂಪಾಯಿ ಸಂಬಳದಿಂದ ವೃತ್ತಿ ಆರಂಭ. ನಿವೃತ್ತಿ ಹೊಂದುವಾಗ ಅವರಿಗೆ ಸಿಗುತ್ತಿದ್ದ ವೇತನ ಕೇವಲ ಎರಡೂವರೆ ಸಾವಿರ. ಕೈಗೆ ಬಂದದ್ದು ಗ್ರಾಚ್ಯುಟಿ ಆರು ಸಾವಿರ ರೂಪಾಯಿ! ನಿವೃತ್ತಿಯಂದು ಇವರ ಪ್ರಾಮಾಣಿಕ ಸೇವೆಯನ್ನು ಗುರುತಿಸುವ, ಮಾನಿಸುವ ಮನಸ್ಸುಗಳು ಇಲಾಖೆಯಲ್ಲಿದ್ದಿರಲಿಲ್ಲ!
               ಹಿರಿಯರಾದ ಕುಂಞಿಕಣ್ಣ ಮಣಿಯಾಣಿ ಮತ್ತು ಜನಾರ್ದನ ಕುರೂಪ್ - ಇವರಿಗೆ ಗುರು. ಇರಾ ಗೋಪಾಲಕೃಷ್ಣ ಭಾಗವತರು, ದಾಸರಬೈಲು ಚನಿಯ ನಾಯ್ಕ್, ಬೆಳಿಂಜ ವೆಂಕಪ್ಪ ಭಾಗವತರೊಂದಿಗೆ ಸಾಂಗತ್ಯ. ರಂಗಕ್ರಮಗಳು, ಯಾವ ವೇಷಕ್ಕೆ ಯಾವ ವೇಗದ ನುಡಿತ ಎನ್ನುವುದರ ಖಚಿತವಿತ್ತು. ಕಲಾವಿದರಿಗೆ ಬೇಕಾದಂತೆ ರಂಗವನ್ನು ಹಿಡಿದೆಳೆವ ಮನಃಸ್ಥಿತಿಗೆ ವಿರೋಧವಾಗಿದ್ದರು. ಅಟ ರೈಸಬೇಕೆಂದು ರಂಗವನ್ನು ಹಿಗ್ಗಾಮುಗ್ಗಾ ಜಗ್ಗಿದವರಲ್ಲ. ಆ ವಿಚಾರದಲ್ಲಿ ರಾಜಿಯಿಲ್ಲ.
ಹವ್ಯಾಸಿ ಕಲಾವಿದರೆಂದರೆ ಕೆಲವೆಡೆ ಹಗುರವಾಗಿ ಈಗಲೂ ಕಾಣುವುದುಂಟು. ಸಹ ಕಲಾವಿದರಿಗೆ ಅವಮಾನವಾದರೆ ಅದು ತನಗಾದ ಅವಮಾನ ಎಂದು ಗ್ರಹಿಸುವವರು. ಯಾರದ್ದೇ ಮುಲಾಜಿಗೆ ಒಳಗಾದವರಲ್ಲ. ನೇರ ಮಾತು. ಮಾತಿನಂತೆ ನಡೆ. ಮತಿಯರಿತ ನಿಲುವು. ತಾನು ಸಂಘಟಿಸುವ ಕೂಟಾಟಗಳು ತನ್ನ ಯೋಚನೆಯಂತೆ ಪ್ರದರ್ಶಿತವಾಗಬೇಕೆನ್ನುವ ನಿರೀಕ್ಷೆಯಿದ್ದುವು. ಮುಗಿದ ತಕ್ಷಣ ಪ್ರತಿಕ್ರಿಯೆ, ವಿಮರ್ಶೆ. ಪಾತ್ರಗಳು ಹಳಿ ತಪ್ಪಿದರೆ ನಿಷ್ಠುರವಾಗಿ ಖಂಡಿಸುತ್ತಿದ್ದರು. ಇವರ ಈ ಗುಣವನ್ನು ಅರಿತ ಕಲಾವಿದರು ಎಚ್ಚರದಿಂದ ಇರುತ್ತಿದ್ದುದನ್ನು ಕಂಡಿದ್ದೇನೆ.
            ಪಾರ್ತಿಸುಬ್ಬನ ಯಕ್ಷಗಾನ ಪ್ರಸಂಗಗಳು, ಜೈಮಿನಿ ಭಾರತ, ದೇವಿಮಹಾತ್ಮೆ ಪ್ರಸಂಗಗಳ ಕಂಠಪಾಠ. ಯಾವ ಪದ್ಯಗಳನ್ನು ಯಾವ ಮಟ್ಟಿನಲ್ಲಿ ಹಾಡಬೇಕೆಂದು ಖಚಿತ ಜ್ಞಾನವಿತ್ತು. ಭಾಗವತರು ಯಾರೇ ಇರಲಿ, ಆ ಮಟ್ಟಿನಲ್ಲಿ ಹಾಡದಿದ್ದರೆ ಅಸಹನೆಗೆ ಒಳಗಾಗುತ್ತಿದ್ದರು. ಯಕ್ಷಗಾನದಲ್ಲಿ ರಾಗಕ್ಕಿಂತ ಮಟ್ಟು ಮುಖ್ಯ. ಹಿರಿಯರಿಂದ ಹರಿದು ಬಂದ ಮಟ್ಟು ಯಕ್ಷಗಾನದ ಜೀವಾಳ. ಅದುವೇ ಪರಂಪರೆ. ಅದನ್ನು ಬದಲಾಯಿಸಲು ನಾವಾರು? ಎಂದಿದ್ದರು.
              ಹವ್ಯಾಸಿ ಸಂಘಗಳಲ್ಲಿ ಕಲಾವಿದರಾಗಿ, ಸಂಘಟಕರಾಗಿ ದೀರ್ಘಕಾಲದ ನಿಜಾರ್ಥದ ಸೇವೆ. ಸ್ಥಳೀಯ ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ಯಕ್ಷಗಾನದ ಸಂಘದ ಅಧ್ಯಕ್ಷರಾಗಿದ್ದಾಗ ತಾಳಮದ್ದಳೆ ಕೂಟವೊಂದಕ್ಕೆ ಭಾಗವತರಾಗಿ ದಾಮೋದರ ಮಂಡೆಚ್ಚರು ಆಗಮಿಸಿದ್ದರು. ಕೂಟ ಮುಗಿಸಿ ಮುಂಬಯಿಗೆ ತೆರಳಿದ ಮಂಡೆಚ್ಚರು ಅಲ್ಲಿನ ಕಾರ್ಯಕ್ರಮವೊಂದರಲ್ಲಿ ಕುಸಿದು ದೈವಾಧೀನರಾದರು. ಬೆಟ್ಟಂಪಾಡಿಯದ್ದು 'ಅವರ ಕೊನೇ ಕೂಟ' ಎಂದು ನೆನಪು ಮಾಡಿಕೊಂಡು ಮರುಗುತ್ತಿದ್ದರು.
 ಕಲ್ಲೂರಾಯರು ಸ್ವಾಭಿಮಾನಿ. ಫಕ್ಕನೆ ನೋಡುವಾಗ, ಮಾತನ್ನು ಕೇಳುವಾಗ ಛೇಡನೆಯೆಂದು ತೋರಿದರೂ ಮಗುವಿನ ಮನಸ್ಸು. ಅವರು ಸಕ್ರಿಯರಾಗಿರುವ ಸಮಯದಲ್ಲಿ ಸುಳ್ಯ, ಪುತ್ತೂರು ಪ್ರದೇಶಗಳಲ್ಲಿ ಅನುಭವಿ ಮದ್ದಳೆಗಾರರ ಕೊರತೆಯನ್ನು ತುಂಬಿದ್ದರು. ಕೂಟ, ಆಟಗಳಿಗೆ ನಿತ್ಯ ಕರೆ ಬರುತ್ತಿತ್ತು. ಪ್ರೀತಿಯಿಂದ ಭಾಗವಹಿಸುತ್ತಿದ್ದರು. ಎಷ್ಟೋ ಕಡೆ ಬಾಡಿಗೆಗೆ ಜೀಪು ಮಾಡಿಕೊಂಡು ತಾಳಮದ್ದಳೆಗಳಿಗೆ ಹೋಗುತ್ತಿದ್ದರು. ಸಂಘಟಕರಿಗೆ ತಾನೇ ಕೈಯಿಂದ ಅಷ್ಟಿಷ್ಟು ಮೊತ್ತ ನೀಡಿದ್ದಿದೆ. ಅವರ ಜೀವಿತದಲ್ಲಿ ಸಂಭಾವನೆಗಾಗಿ ಜಗಳ ಮಾಡಿದವರಲ್ಲ, ಎಂದು ಕಲ್ಲೂರಾಯರ ಬಂಧು, ಕಲಾವಿದ ವೆಂಕಟೇಶ್ವರ ಉಳಿತ್ತಾಯರು ನೆನಪಿಸಿಕೊಳ್ಳುತ್ತಾರೆ.
               ಬದುಕಿನ ಖುಷಿ, ನೆಮ್ಮದಿಯನ್ನು ಯಕ್ಷಗಾನದಲ್ಲಿ ಕಂಡರು. ಅದು ಸಿಕ್ಕಾಗ ಕೀರ್ತಿ ಮರೆತು ಹೋಯಿತು. ಹಣದ ಮೋಹ ಮರೆಯಾಯಿತು. ನಿಷ್ಕಲ್ಮಶ ಭಾವದಿಂದ ಯಕ್ಷಗಾನದ ಆರಾಧನೆ ಕಲ್ಲೂರಾಯರಿಗೆ ಇಷ್ಟವಾಗಿತ್ತು. ಅನಾರೋಗ್ಯದಿಂದ ಒಂದು ಹೆಜ್ಜೆ ಎತ್ತಿಡಲೂ ಆಗದ ಸ್ಥಿತಿಯಲ್ಲಿದ್ದರೂ ಯಕ್ಷಗಾನ ಬಯಲಾಟವಿದೆ ಎಂದರೆ ಸಾಕು, ನಾಲ್ಕು ಹೆಜ್ಜೆ ಇಡುವಷ್ಟು ಸಶಕ್ತರಾಗುತ್ತಿದ್ದರು, ಮುರಳಿ ಜ್ಞಾಪಿಸುತ್ತಾರೆ. ಎಪ್ಪತ್ತೈದು ಸಂವತ್ಸರಗಳನ್ನು (1941-2016) ಬಾಳಿದ ಕಲ್ಲೂರಾಯರು 2016 ಜೂನ್ 12ರಂದು ದೂರವಾದರು.  ಮಡದಿ ಕಾವೇರಿ ಅಮ್ಮ. ಅರುಣಕುಮಾರಿ, ರಾಜಾರಾಮ, ಮುರಳಿ, ಹರೀಶ, ಅನುರಾಧ ಮಕ್ಕಳು.
               ಬದುಕಿನ ಒಂದು ಕಾಲಘಟ್ಟದ ಕಲ್ಲೂರಾಯರ ಯಕ್ಷಗಾನದ ಓಡಾಟಗಳು ಆ ಸಮಯದ ಸಾಂಸ್ಕೃತಿಕ ಬದುಕಿಗೆ ಕನ್ನಡಿ.


ದಿಗಿಲು-ಬೆರಗಿನ ಮಿಳಿತದ ರಂಗಸುಖ


             ಯಕ್ಷಗಾನದಲ್ಲೀಗ ಗಾನವೈಭವದ ಸುಗ್ಗಿಯ ಕಾಲ. ಮತ್ತೊಂದೆಡೆ ಯಕ್ಷ(?)ನೃತ್ಯಗಳಿಗೆ ವೈಭವದ ಥಳಕು. ಒಂದು ಕಾಲಘಟ್ಟದಲ್ಲಿ ಮೆಚ್ಚಿಕೊಂಡಿದ್ದ, ಆ ಗುಂಗನ್ನೇ ಅಂಟಿಸಿಕೊಂಡಿದ್ದ ಇಂತಹ ವೈಭವಗಳಿಂದ ಸದ್ಯಕ್ಕಂತೂ ದೂರವಿದ್ದೇನೆ! ದೂರವಿರುವುದರಿಂದ ಯಕ್ಷಗಾನಕ್ಕೆ ಲಾಭವೂ ಬಾರದು, ನಷ್ಟವೂ ಒದಗದು. ಆದರೆ ನಾನಂತೂ ಸುಖಿ-ಖುಷಿಯಾಗಿದ್ದೇನೆ!
ಭಾಗವತಿಕೆ, ಚೆಂಡೆ-ಮದ್ದಳೆಗಳಲ್ಲಿ ರಾಗ-ನಾದಗಳ ವೈಭವ 'ಯಕ್ಷಗಾನ'ವಾಗಿ ಮೂಡಬೇಕು. ಈಗೀಗ 'ಯಕ್ಷಗಾನ'ವೊಂದು ನಿಮಿತ್ತ. ಭಾಗವತಿಕೆಯ ಅತಿ-ಲಂಬನೆಗೆ (ಇದೊಂದು ಅರ್ಹತೆ) ಮಣೆ. ಆಲಾಪನೆಗಳು ದೀರ್ಘವಾದಷ್ಟೂ ಭಾಗವತ ಮತ್ತು ಭಾಗವತಿಕೆಗೆ ಬಿರುದುಗಳ ಹೊಸೆತ. ಮದ್ದಳೆ, ಚೆಂಡೆಗಳಿಗೂ ಲಂಬನಾ ಯೋಗ. ಇವೆಲ್ಲವನ್ನೂ ತುಂಬು ಬೆಂಬಲಿಸುತ್ತಿರುವ ಅಭಿಮಾನಿ ಪ್ರೇಕ್ಷಕರು. ಪದ್ಯಾರಂಭಕ್ಕೆ ಮುನ್ನವೇ ಶಿಳ್ಳೆ, ಚಪ್ಪಾಳೆಗಳ ಮಹಾಪೂರ. ಭಾಗವತ ಮತ್ತು ಹಿಮ್ಮೇಳ ವಾದನವು ಮನದಲ್ಲಿ ಇಳಿದು ಸುಖದ ಅನುಭವವಾದಾಗ ಸಂತೋಷದ ಪ್ರಕಟೀಕರಣ ಸಹಜ. ಆದರೆ ರಂಗದಲ್ಲಿ ಪ್ರಕ್ರಿಯೆಗೆ ಉದ್ಯುಕ್ತವಾಗುವಾಗ, ನಡೆಯುತ್ತಿರುವಾಗ ಮಹಾಪೂರ ಅಪ್ಪಳಿಸಿದರೆ ಅನುಭವಿಸುವುದೇನನ್ನು?
             ಈಚೆಗೆ ಪುತ್ತೂರು ಕೆಮ್ಮಾಯಿಯಲ್ಲಿ ಎಡನೀರು ಮಠಾಧೀಶ ಶ್ರೀ ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರ ಚಾತುರ್ಮಾಸ್ಯ ವ್ರತಾಚರಣೆಯ ಸಂದರ್ಭದಲ್ಲಿ ಜರುಗಿದ ಯಕ್ಷ-ಗಾನ(ಯಕ್ಷಗಾನ ಅಲ್ಲ)ದಲ್ಲಿ ಉಪಸ್ಥಿತನಿದ್ದೆ. ಹಿರಿಯ ಭಾಗವತರಾದ ದಿನೇಶ ಅಮ್ಮಣ್ಣಾಯ ಮತ್ತು ಸುಬ್ರಹ್ಮಣ್ಯ ಧಾರೇಶ್ವರರು ತೆಂಕು-ಬಡಗು ತಿಟ್ಟುಗಳನ್ನು ಪ್ರತಿನಿಧಿಸಿದ್ದರು. ಎರಡೂವರೆ ಗಂಟೆಗಳಷ್ಟು ಹೊತ್ತು ರಂಗಸುಖವನ್ನು ತಾವೂ ಅನುಭವಿಸುತ್ತಾ, ಪ್ರೇಕ್ಷಕರಿಗೂ ಉಣಬಡಿಸಿದ್ದಾರೆ. ಒಂದೆರಡು ಬಾರಿ ಭಾಗವತಿಕೆಯ ನಾದದ ಗುಂಗಿನೊಳಗೆ ಬಂಧಿಯಾದ ಪ್ರೇಕ್ಷಕ ಕರತಾಡನವನ್ನೂ ಮರೆತಿದ್ದ!
             ದಿನೇಶ ಅಮ್ಮಣ್ಣಾಯರ ಶ್ರೀರಾಮನ ಒಡ್ಡೋಲಗದ ಪದ್ಯವೊಂದು ನಿಧಾನ ಗತಿಯಲ್ಲಿ ಪ್ರಸ್ತುತಿಗೊಂಡಿತು.  ಬಹುಶಃ ವರ್ತಮಾನದ ರಂಗದಲ್ಲಿ ಇಷ್ಟು ನಿಧಾನಗತಿಯ ಪದ್ಯವನ್ನು ಕಲಾವಿದರು ಸ್ವೀಕರಿಸುವುದು ಕಷ್ಟ. ಈ ಗತಿಯಲ್ಲಿ ಲಯದ ಜಾಡಿನ ಹಾಡುಗಾರಿಕೆ,  ಅದಕ್ಕೆ ಪೂರಕವಾದ ಮದ್ದಳೆ-ಚೆಂಡೆಗಳ ನಾದಗಳಲ್ಲಿ ಯಕ್ಷಗಾನವಿತ್ತು. ಮೂರ್ನಾಲ್ಕು ದಶಕದ ರಂಗದ ಸೊಬಗನ್ನು ನಾವೆಲ್ಲಾ ಆಗಾಗ್ಗೆ ಮೆಲುಕು ಹಾಕುತ್ತೇವಲ್ಲಾ, ಅದು ಆ ಹಿರಿಯರ ಇಂತಹ ರಂಗಗತಿ, ಲಯದ ಸ್ಥಾಪನೆಯೇ ಕಾರಣ.
             ಉದಾ: ಕೃಷ್ಣ ಸಂಧಾನ ಪ್ರಸಂಗದ 'ನೋಡಿದನು ಕಣ್ದಣಿಯ ಚಿನ್ಮಯನ ಮೂರುತಿಯ', ಭೀಷ್ಮ ವಿಜಯ ಪ್ರಸಂಗದ 'ಪರಮ ಋಷಿ ಮಂಡಲದ ಮಧ್ಯದಿ..', ಸುಧನ್ವ ಮೋಕ್ಷ ಪ್ರಸಂಗದ 'ಸತಿ ಶಿರೋಮಣಿ ಪ್ರಭಾವತಿ..  ಪದ್ಯಗಳು ಅನನ್ಯವಾಗಿ, ಪದ್ಯದ ಲಯದಲ್ಲಿ ಸಂಚರಿಸಿ ಮುದ ನೀಡಿತ್ತು. ಕೆಲವೊಮ್ಮೆ ದೀರ್ಘಲಂಬನೆಯ ಹೊರತಾಗಿಯೂ....!
ಸುಬ್ರಹ್ಮಣ್ಯ ಧಾರೇಶ್ವರರು ವೀರಮಣಿ ಕಾಳಗದ ಪರಮ ಪುರುಷ ವಿಶ್ವಮೂರ್ತಿಯ ಚರಿತೆಗಳನು ಬಲ್ಲೆ..... ಪದ್ಯವನ್ನು ಅವರ ಗುರು ನಾರಣಪ್ಪ ಉಪ್ಪೂರರು ಹಾಡುವ ಬಗೆಯನ್ನು ಮತ್ತು ನಂತರ ಬದಲಾದ ಶೈಲಿಯನ್ನು ನಿರೂಪಣೆಯೊಂದಿಗೆ ತೋರಿಸಿದರು. ಬಬ್ರುವಾಹನ ಕಾಳಗ ಪ್ರಸಂಗದ 'ಅಹುದೇ ಎನ್ನಯ ರಮಣ', ಚೂಡಾಮಣಿಯ 'ನೋಡಿದೆಯಾ ಸರಮೆ'...... ಮೊದಲಾದ ಹಾಡುಗಳಲ್ಲಿ ಲಯದ ಗಟ್ಟಿತನವಿತ್ತು. ನಾದ, ಲಯ, ಗತಿ... ಈ ಪದಗಳಿಗೆ ಶೈಕ್ಷಣಿಕ ಪಠ್ಯಗಳಲ್ಲಿ ಹಲವು ವ್ಯಾಖ್ಯೆಗಳಿವೆ. ಆದರೆ ಪ್ರೇಕ್ಷಕನಿಗೆ ಮತ್ತು ಹಾಡುಗಾರನಿಗೆ 'ರಂಗಸುಖ'ವನ್ನು ನೀಡುವ ಆ ಕ್ಷಣವನ್ನು ವಿಮರ್ಶೆಯ ಮೂಸೆಯಲ್ಲಿ, ವ್ಯಾಖ್ಯಾನದ ವ್ಯಾಪ್ತಿಯಲ್ಲಿ ಹಿಡಿದಿಡಲು ಕಷ್ಟ.
              ಬಡಗಿನ ಶ್ರೇಷ್ಟ ಮದ್ದಳೆಗಾರ ಶಂಕರ ಭಾಗವತ ಯಲ್ಲಾಪುರ ಇವರು ಧಾರೇಶ್ವರರಿಗೆ ಸಾಥ್ ಆಗಿದ್ದರು. 'ಸಾಥ್' ಎನ್ನುವ ಪದ ಪ್ರಯೋಗವು ನನ್ನ ಅಪಕ್ವ ಬುದ್ಧಿಮತ್ತೆಯಾಗಬಹುದೇನೋ? ಧಾರೇಶ್ವರರ ಹಾಡಿನ ಗತಿಯನ್ನು ಅನುಸರಿಸುವ ಮದ್ದಳೆಯ ನುಡಿತಗಳು. ಎಲ್ಲೂ ಭಾಗವತಿಕೆಯನ್ನು 'ಓವರ್ಟೇಕ್' ಮಾಡಿಲ್ಲ. ಬಹುತೇಕ ಸಂದರ್ಭಗಳಲ್ಲಿ ಮದ್ದಳೆಯೇ ಹಾಡುತ್ತಿತ್ತೇನೋ ಎನ್ನುವ ಅನುಭವವನ್ನು ಕಟ್ಟಿ ಕೊಟ್ಟಿತ್ತು! ಶಂಕರ ಭಾಗವತರ ಅನುಭವದ ದಟ್ಟ ಗಾಢತನವದು. ಮದ್ದಳೆಯ ನಾದಸುಖವನ್ನು, ರಾಗಸುಖದೊಂದಿಗೆ ಮಿಳಿತಗೊಳಿಸಿದ ಧಾರೇಶ್ವರ-ಶಂಕರ ಭಾಗವತರ ಜತೆಗಾರಿಕೆ ಅನನ್ಯ.
ಅಮ್ಮಣ್ಣಾಯರೊಂದಿಗೆ ಕೃಷ್ಣಪ್ರಕಾಶ ಉಳಿತ್ತಾಯರ ಮದ್ದಳೆವಾದನ. ಶ್ರೀರಾಮನ ಒಡ್ಡೋಲಗ, ಸತಿಶಿರೋಮಣಿ ಪ್ರಭಾವತಿ.. ಪದ್ಯಗಳಲ್ಲಿ ಉಳಿತ್ತಾಯರ ನುಡಿತಗಳು ಅಮ್ಮಣ್ಣಾಯರ ಲಯಸುಖವನ್ನು ಹೆಚ್ಚಿಸಿತ್ತು.  ಈ ಸಂದಭದಲ್ಲಿ ಉಳಿತ್ತಾಯರ ನುಡಿತಗಳು ಶಂಕರ ಭಾಗವತರಿಗೆ ಸ್ಪೂರ್ತಿ ತಂದು, ತೆಂಕು-ಬಡಗು ಮದ್ದಳೆಗಳ ನಿಜಾರ್ಥದ 'ನಾದ-ವೈಭವ'ಗಳಾಗಿ ಮೂಡಿ ಬಂದುವು. 'ಹಳೆಬೇರು-ಹೊಸ ಚಿಗುರು'  ಪದಗಳು ಕ್ಲೀಷೆಯಾಗುವ ದಿನಮಾನದಲ್ಲಿ ಅದರ ನಿಜ ಅರ್ಥವನ್ನು ಶಂಕರ ಭಾಗವತರು ತೋರಿದರು. ಉಳಿತ್ತಾಯರು ಧನ್ಯತೆಯಿಂದ ಸ್ವೀಕರಿಸಿದರು. ಬಡಗಿನ ಚೆಂಡೆಯಲ್ಲಿದ್ದ ಕಾರ್ತಿಕ್ ಧಾರೇಶ್ವರರ ಮುಜುಗರವನ್ನು ಶಂಕರ ಭಾಗವತರು ತಿಳಿಯಾಗಿಸಿದ ಸಂದರ್ಭಗಳು ಹಿರಿಯ ಮದ್ದಳೆಗಾರನ ಸೌಜನ್ಯವನ್ನು ಎತ್ತಿ ತೋರಿತು.
                ಈಚೆಗಂತೂ ಎಲ್ಲಾ ರಸಗಳ ಪದ್ಯಗಳಿಗೂ ಚೆಂಡೆಯ ನುಡಿತವು ಅನಿವಾರ್ಯವೆಂಬ ಹಠಕ್ಕೆ ರಂಗವು ಒಗ್ಗಿಸಿಕೊಂಡಿದೆ! ಶೃಂಗಾರ ರಸಗಳ ಭಾವ-ಲಾಸ್ಯಗಳನ್ನು ಚೆಂಡೆಯ ಸದ್ದು ನುಂಗಿ ನೊಣೆದಿವೆ. ಅಮ್ಮಣ್ಣಾಯರು ಶೃಂಗಾರ ರಸದ ಪದ್ಯಗಳನ್ನು ಹಾಡುವಾಗ ದೇಲಂತಮಜಲು ಸುಬ್ರಹ್ಮಣ್ಯ ಭಟ್ಟರು ಚೆಂಡೆಕೋಲುಗಳನ್ನು ಕೆಳಗಿಟ್ಟು ಪದ್ಯವನ್ನು ಆಲಿಸುತ್ತಾ ಕುಳಿತರು! ರಂಗಸುಖದ ಕಲ್ಪನೆಯಿದ್ದುದರಿಂದ ಇದು ಸಾಧ್ಯವಾಯಿತು. ದೇಲಂತಮಜಲು ಚೆಂಡೆ ನುಡಿಸುತ್ತಿದ್ದಾಗ ಶಂಕರ ಭಾಗವತರು ಉರುಳಿಕೆಯ ಗತಿಯನ್ನು ಬೆರಗಿನಿಂದ ವೀಕ್ಷಿಸುತ್ತಿದ್ದರು.
             ಸುಬ್ರಹ್ಮಣ್ಯ ಭಟ್ಟರನ್ನು ಹಲವು ಕಾಲದಿಂದ ನೋಡುತ್ತಿದ್ದೇನೆ, ಯಾವ ರಸದ ಪದ್ಯಗಳಿಗೆ ಎಷ್ಟು ಬಾರಿಸಬೇಕೆನ್ನುವ ಎಚ್ಚರ ಮತ್ತು ಚೆಂಡೆಯ 'ವಾಲ್ಯೂಮ್ ಕಂಟ್ರೋಲ್' ಇರುವುದು ಮೈಕ್ಸೆಟ್ಟಿನಲ್ಲಲ್ಲ, ಅದಿರುವುದು 'ತನ್ನ ಸ್ವ-ಪ್ರಜ್ಞೆ'ಯಲ್ಲಿ ಎಂಬ ಸ್ಪಷ್ಟ ಅರಿವನ್ನು ಹೊಂದಿದವರು. ದಾಮೋದರ ಮಂಡೆಚ್ಚರ ಉತ್ತರಾಧಿಕಾರಿಯಾಗಿ ಬೆಳೆದು ಬಂದ ಅಮ್ಮಣ್ಣಾಯರು, ನಾರಣಪ್ಪ ಉಪ್ಪೂರರ ಜತೆ ಪಳಗಿದ ಸುಬ್ರಹ್ಮಣ್ಯ ಧಾರೇಶ್ವರ, ಶಂಕರ ಭಾಗವತರು - ಇವರೆಲ್ಲಾ ರಂಗದ ಬೆರಗುಗಳನ್ನು ಅನುಭವಿಸಿಯೇ ಬೆಳೆದಿದ್ದಾರೆ. ರಂಗವು ಕಟ್ಟಿಕೊಡುವ ದಿಗಿಲು, ಬೆರಗುಗಳು ಕಲಾವಿದನ ಬೆಳವಣಿಗೆಯ ಕ್ಯಾಪ್ಸೂಲ್.
    ಯಕ್ಷ-ಗಾನಕ್ಕೆ 'ನಿರೂಪಕ' ಇಲ್ಲದಿರುವುದು ಎಲ್ಲಕ್ಕಿಂತ ಖುಷಿ ನೀಡಿತ್ತು. ಸಂದರ್ಭಾನುಸಾರ ಭಾಗವತರೇ ನಿರೂಪಣೆ ಮಾಡುತ್ತಿದ್ದರು. ವರ್ತಮಾನದ ಕಲಾಪಗಳಲ್ಲಿ 'ನಿರೂಪಕ'ನ ಸ್ಥಾನವು ಒಂದು 'ಪೋಸ್ಟ್'! ಆತ ರಂಗ ಮತ್ತು ಪ್ರೇಕ್ಷಕರ ಮಧ್ಯೆ ಕೊಂಡಿಯಾಗಿದ್ದರೆ ಸಾಕು. ಬೆರಳೆಣಿಕೆಯ ನಿರೂಪಕರು ಇದನ್ನು ಅರ್ಥಮಾಡಿಕೊಂಡಿದ್ದಾರೆ.
ಹಲವು ಖುಷಿಗಳಿಗೆ ರೆಕ್ಕೆಬಲಿಯಲು ಕಾರಣರಾದ ಅಮ್ಮಣ್ಣಾಯ-ಧಾರೇಶ್ವರರ ಹಾಡುಗಾರಿಕೆಯ ಕಲಾಪವು ರಂಗಸುಖವನ್ನು ನೀಡಿದ 'ಯಕ್ಷ-ಗಾನ'.

(ಚಿತ್ರ : ಮುರಳಿ ರಾಯರಮನೆ)
ಪ್ರಜಾವಾಣಿ/ದಧಿಗಿಣತೋ/9-9-2016
Thursday, September 22, 2016

ಇನ್ನು ಆ ಮನಸ್ಸು ಕನಸನ್ನು ಹೆಕ್ಕದು!


 ಜೂನ್ ತಿಂಗಳಲ್ಲಿ ಪೋಳ್ಯದಲ್ಲಿ ಜರುಗಿದ ತಾಳಮದ್ದಳೆಯೊಂದರಲ್ಲಿ                                                ಯಕ್ಷಗಾನ - ಸುದರ್ಶನ ವಿಜಯದಲ್ಲಿ ವಿಷ್ಣುವಿನ ಪಾತ್ರ

                   "ಬದುಕಿನಲ್ಲಿ ನಿರೀಕ್ಷೆಗಳು ಕನಸುಗಳನ್ನು ಕಟ್ಟುತ್ತವೆ. ಅದರ ಬೆನ್ನಟ್ಟಿ ಹಿಡಿಯಲು ಇನ್ನಿಲ್ಲದ ಯತ್ನ ಮಾಡುತ್ತೇವೆ. ನಮ್ಮ ನಿರೀಕ್ಷೆಯೆಲ್ಲದರ ಸಾಕಾರಕ್ಕೆ ಕಾಲ ಅನುವು ಮಾಡಿಕೊಡುವುದಿಲ್ಲ. ಕೊಟ್ಟರೂ ವಿಧಿ ಸಹಿಸುವುದಿಲ್ಲ. ಹಾಗಾಗಿ ಬದುಕಿನಲ್ಲಿ ಸಂತೃಪ್ತಿಯ ಭಾವ ಬಂದಾಗ ಕನಸುಗಳಿಗೆ ಸ್ವಲ್ಪ ವಿರಾಮ ಕೊಡುವುದೇ ಲೇಸು."  ಒಂದೂವರೆ ತಿಂಗಳ ಹಿಂದೆ 'ರುಕ್ಮಿಣಿ ಕಲ್ಯಾಣ' ಪ್ರಸಂಗದಲ್ಲಿ 'ವೃದ್ಧವಿಪ್ರ'ನಾಗಿ ಗಂಗಾಧರ ಬೆಳ್ಳಾರೆಯವರ ಅರ್ಥಗಾರಿಕೆಯಲ್ಲಿ ಸುಳಿದ ಸಾಲುಗಳಿವು. ಇದು ತನ್ನ ಕುರಿತಾಗಿಯೇ ಹೇಳಿದೆಂದು ಅವರ ಸಾವಿನ ನಂತರವಷ್ಟೇ ಅರಿಯಿತು.
                  ಮನೋವಿಶ್ಲೇಷಕ, ಉಪನ್ಯಾಸಕ, ಲೇಖಕ, ಅಂಕಣಗಾರ, ಕಥೆಗಾರ.. ಹೀಗೆ ಗಂಗಾಧರ ಬೆಳ್ಳಾರೆ (ಗಂಗಣ್ಣ)ಯವರ ಹೆಸರಿನೊಂದಿಗೆ ಹವ್ಯಾಸ-ವೃತ್ತಿಗಳು ಹೊಸೆದಿವೆ.  ಕಳೆದ ಮೂರುವರೆ ದಶಕದಿಂದ ನನಗವರು ಓರ್ವ 'ಮನುಷ್ಯ'ನಾಗಿ, 'ಕಲಾವಿದ'ನಾಗಿಯೇ ಕಂಡಿದ್ದಾರೆ. ಈ ಪದದ ವ್ಯಾಪ್ತಿ ಕೇವಲ ಅರ್ಥ ಹೇಳುವ, ವೇಷ ಮಾಡುವ ವ್ಯಾಪ್ತಿಗೆ ಸೀಮಿತವಾದುದಲ್ಲ. ಅಂದರೆ ಬದುಕಿನಲ್ಲಿ ಕಲೆಯನ್ನು ಹುಡುಕಿದ ಕಲಾವಿದ. ಅದು ಸಿಕ್ಕಾಗ ಸಂತೋಷಗೊಂಡು, ಆಪ್ತರೊಂದಿಗೆ ಹಂಚಿಕೊಂಡ ಸಹೃದಯಿ. ಕಲೆಯೆಂಬುದು ಬದುಕನ್ನು ಅರಳಿಸುವ ಉಪಾಧಿಯೆಂದು ನಂಬಿದ ಆಪ್ತ. ಕೊನೆಕೊನೆಗೆ ನಂಬುಗೆಯ ಗಾಢತೆಗೆ ಮಸುಕು ಆವರಿಸಿದಾಗ ಅದರಿಂದ ಕಳಚಿಕೊಂಡು ದೂರವಿದ್ದರು. ಇವರೊಳಗಿನ ಕಲಾವಿದನಿಗೆ 'ಸ್ವ-ಪ್ರಜ್ಞೆ'ಯಿತ್ತು.
               ಸೆಪ್ಟೆಂಬರ್ 10ರಂದು ಬೆಳ್ಳಾರೆ ದೂರವಾದರು. ಕಳೆದೊಂದು ವರುಷದಿಂದ ಅವರ ಖುಷಿಯನ್ನು ಸ್ವಾಸ್ಥ್ಯವು ಕಸಿದುಕೊಂಡಿತ್ತು. ಲವಲವಿಕೆ ಕುಸಿದಿತ್ತು. ಅವರ ಬದುಕಿನ ಖುಷಿಯನ್ನು, ಸಾಧನೆಯನ್ನು ಲೇಖನವಾಗಿಸಬೇಕೆಂದು ಯೋಚಿಸುತ್ತಲೇ ಇದ್ದೆ. ಅದು ಒದಗಿದುದು ಅವರ ಸಾವಿನ ಬಳಿಕ. "ವ್ಯಕ್ತಿಯ ಸಾಧನೆಯು ಆತ ಬದುಕಿರುವಾಗಲೇ ದಾಖಲಾಗಬೇಕು. ಈಗೀಗ ಸಂಮಾನದ ಸಂದರ್ಭ ಮತ್ತು ಆತ ದೂರವಾದ ಬಳಿಕ ಮಾತ್ರ ಕಲಾವಿದ ಪತ್ರಿಕೆಯ ಪುಟಗಳಲ್ಲಿ ಕಾಣಿಸಿಕೊಳ್ಳುತ್ತಾನೆ." - ಅವರ ಮಾತು ಚುಚ್ಚಿತು, ಕಚ್ಚಿತು.
                 ಗಂಗಾಧರ ಬೆಳ್ಳಾರೆ ಸೊನ್ನೆಯಿಂದ ಬದುಕನ್ನು ಕಟ್ಟುತ್ತಾ ಬಂದವರು. ಬಡ ಕುಟುಂಬ. ಆರ್ಥಿಕವಾಗಿ ಸದೃಢರಲ್ಲ.  ಆಕರ್ಷಕ ಕಂಠಶ್ರೀ. ಪರಿಣಾಮಕಾರಿಯಾದ ಸೆಳೆತ. ಶಾಲೆಗಳಲ್ಲಿ ನಡೆಯುವ ಕಲಾ ಕಾರ್ಯಕ್ರಮಗಳಿಗೆ ಸಂಪನ್ಮೂಲ ವ್ಯಕ್ತಿ. ಎಲ್ಲವನ್ನೂ ಕಲಿಯಬೇಕೆಂಬ ತುಡಿತ. ಅಪಾರ ನೆನಪು ಶಕ್ತಿ. ಸದಾ ಓದುವ ಗೀಳು. ವಿಮರ್ಶಿಸುವ ಗುಣ. ಆಪ್ತವಾಗಿ ತುಂಬುವ ಸ್ನೇಹಪರತೆ. ಮತಿಯರಿತ ಮಾತು. ಬೆಳ್ಳಾರೆಯ ಕಿರಣ್ ಮುದ್ರಣಾಲಯದಲ್ಲಿ ದಶಕದ ದುಡಿತ.
                 ಬಾಲ್ಯದಿಂದಲೇ ತಲೆತುಂಬಾ ಯಕ್ಷಗಾನ. ಸುತ್ತೆಲ್ಲಾ ನಡೆಯುವ ಕೂಟಾಟಗಳಿಗೆ ಖಾಯಂ ಪ್ರೇಕ್ಷಕ. ಆಟದಲ್ಲಿ ವೇಷ ಮಾಡಿದರು. ಕೂಟದಲ್ಲಿ ಅರ್ಥ ಹೇಳಿದರು. ಹವ್ಯಾಸಿ ರಂಗಕ್ಕೆ ಬೇಡಿಕೆಯ ಕಲಾವಿದರಾದರು. ಯಕ್ಷಗಾನದಲ್ಲಿ ಒಂದೊಂದೇ ಹೆಜ್ಜೆ ಊರುತ್ತಿದ್ದಂತೆ ಬೌದ್ಧಿಕವಾಗಿ ಗಟ್ಟಿಯಾಗಿದ್ದರು. ಪಾತ್ರಾಭಿವ್ಯಕ್ತಿಯಲ್ಲಿ ರಾಜಿಯಿದ್ದಿರಲಿಲ್ಲ. ರಂಗದಲ್ಲೇ ಪಟ್ಟು, ಪೆಟ್ಟು, ವಾದ, ಜಿದ್ದಾ-ಜಿದ್ದಿ. ಇದರಿಂದಾಗಿ ಒಂದಷ್ಟು ಮಂದಿಯ ಅಸಹನೆಗೂ ಕಾರಣರಾಗಿದ್ದರು. ಇದಿರರ್ಥಧಾರಿಯನ್ನು ಏನು ಮಾಡಿಯಾದರೂ ಅಂಗೈಯೊಳಗಿಟ್ಟು ಪುಡಿ ಮಾಡಬೇಕು ಎನ್ನುವ ವಿನೋದದ ಮಾತು ಬೆಳ್ಳಾರೆಯವರಿಗೆ ಸ್ವಭಾವವಾಗಿ ಕಾಡಿತು. ಬೆಳವಣಿಗೆಗೆ ಅದು ಮಾರಕ ಎಂದು ತಿಳಿದಾಗ ಸ್ವ-ಭಾವ ತಿದ್ದಿಕೊಂಡಿದ್ದರು ಕೂಡಾ.
                ಒಂದೂವರೆ ದಶಕದ ಕಾಲ ಅವರೊಂದಿಗೆ ವೇಷ ಮಾಡಿದ ಕಳೆದ ಕಾಲವು ಕಾಡುತ್ತವೆ. ಸುದರ್ಶನ ವಿಜಯದ 'ವಿಷ್ಣು', ಭೀಷ್ಮ ಪರ್ವದ 'ಭೀಷ್ಮ', ಭೀಷ್ಮ ವಿಜಯದ 'ಪರಶುರಾಮ', ಕೃಷ್ಣಾರ್ಜುನದ 'ಕೃಷ್ಣ'.. ಮೊದಲಾದ ಪಾತ್ರಗಳು ಮೆರೆದವುಗಳು. 1992ನೇ ಇಸವಿ ಇರಬೇಕು. ಪುತ್ತೂರಿನ ಯಕ್ಷಕೂಟದ ಆಯೋಜನೆಯ 'ಚಂದ್ರಹಾಸ ಚರಿತ್ರೆ' ಪ್ರಸಂಗವನ್ನು ಹವ್ಯಾಸಿಗಳೂ ಆಡಬಹುದು ಎಂದು ತೋರಿಕೊಟ್ಟ ದಿನಮಾನಗಳು. ಅದರಲ್ಲಿ 'ದುಷ್ಟಬುದ್ಧಿ'ಯ ಪಾತ್ರವನ್ನು ಬೆಳ್ಳಾರೆಯವರು ಪರಿಣಾಮಕಾರಿಯಾಗಿ ನಿರ್ವಹಿಸಿದ್ದರು. ಹಲವೆಡೆ ಈ ಪ್ರಸಂಗವು ಪ್ರದರ್ಶನ ಕಂಡಿವೆ.
              ಬೆಳ್ಳಾರೆಯ ಜತೆ ಅರ್ಥಹೇಳುವುದು, ವೇಷಮಾಡುವುದು ಸುಲಲಿತ. ಅರ್ಥದ ಜಾಡನ್ನು ಸುಲಭವಾಗಿ ತಿಳಿಯುವ ಬುದ್ಧಿಮತ್ತೆ. ಕೆಲವೊಮ್ಮೆ ಪೌರಾಣಿಕ ಲೋಕವನ್ನು ಸಮಕಾಲೀನಗೊಳಿಸುವ ಜಾಣ್ಮೆ. ಬಣ್ಣದ ಮನೆಯಲ್ಲಿ ಸಮಾಲೋಚನೆ ಮಾಡದೆ ವೇಷ ಮಾಡುತ್ತಿರಲಿಲ್ಲ. ಸಂವಾದವನ್ನು ಬೆಳೆಸುವ ಕೌಶಲ್ಯವಿತ್ತು. ಸ್ವತಃ ಕೂಟಾಟಗಳನ್ನು ಸಂಘಟಿಸುತ್ತಿದ್ದರು. ಸದಾ ಹಾಸ್ಯಪ್ರಿಯರಾದ ಬೆಳ್ಳಾರೆಯವರೊಂದಿಗೆ ಮಾತಿಗಿಳಿಯುವುದೇ ಖುಷಿಯ ಕ್ಷಣ.
               ಮನಶಾಸ್ತ್ರಜ್ಞ ಡಾ.ಮೀನಗುಂಡಿ ಸುಬ್ರಹ್ಮಣ್ಯಂ ಅವರ ಶಿಷ್ಯರಾದ ಬಳಿಕ ಮನೋಲೋಕ ಸೆಳೆಯಿತು. ಮನಃಶಾಸ್ತ್ರದ ಶೈಕ್ಷಣಿಕ ಅಧ್ಯಯನ ಮಾಡಿದರು. ಅನುಭವಕ್ಕೆ ಲೋಕ ಸುತ್ತಿದರು. ವಿಶ್ವವಿದ್ಯಾಲಯದ ಪದವಿ ಪಡೆದರು. ಇಷ್ಟು ಹೊತ್ತಿಗೆ ತಾನೂ ಬದಲಾದರು. 'ಸ್ಕೋಪ್ ಕೌನ್ಸೆಲಿಂಗ್ ಸೆಂಟರ್' ಸ್ಥಾಪಿಸಿದರು. ಇದರ ಮೂಲಕ ವಿವಿಧ ತರಬೇತಿಗಳನ್ನು ಏರ್ಪಡಿಸಿದರು. ವರ್ತನಾ ಶಿಬಿರಗಳನ್ನು ಸಂಘಟಿಸಿದರು. ಮನೋವ್ಯಾಧಿಗೆ ವೈದ್ಯರಾಗಿ ಹಲವರ ಬಾಳಿಗೆ ನೆರವಾದರು. ವರ್ತನೆಗಳ ಕುರಿತು ಪುಸ್ತಕಗಳನ್ನು ಬರೆದರು. ಗಾಜಿನ ತೇರು, ತಬ್ಬಲಿಯು ನೀನಲ್ಲ ಮಗಳೆ, ಕಲಿಕೆ ಹಾದಿಯ ಮನಸು, ಇವರು ನೀವಲ್ಲ, ನೆನಪಿಗೊಂದು ಕೌನ್ಸೆಲಿಂಗ್, ತಪ್ಪು ತಿದ್ದುವ ತಪ್ಪು, ಮೌನಗರ್ಭ.. ಪ್ರಕಟಿತ ಕೃತಿಗಳು. ಸಿನೆಮಾ ಒಂದರಲ್ಲೂ ನಟಿಸಿದ್ದರು.
                 ಮನಃಶಾಸ್ತ್ರದ ವಿಚಾರಗಳನ್ನು ಒಪ್ಪಿಕೊಂಡು, ಅಪ್ಪಿಕೊಂಡ ಬಳಿಕ ಯಕ್ಷಗಾನವು ವೀಕ್ಷಣೆಗೆ ಸೀಮಿತವಾಯಿತು. ಸ್ಕೋಪ್ ಮೂಲಕ 'ಸ್ವಗತ-ಗುಚ್ಛ' ಎನ್ನುವ ವಿಶಿಷ್ಟ ಕಲಾಪವನ್ನು ಆಯೋಜಿಸಿದರು. ಮನಃಶಾಸ್ತ್ರವನ್ನು ಹಿನ್ನೆಲೆಯಾಗಿಟ್ಟುಕೊಂಡು ಪುರಾಣದ ಕೆಲವು ಪಾತ್ರಗಳು ಮಾತನಾಡಿದುವು. ಪಾತ್ರಗಳಿಗೂ ಒಂದು ಮನಸ್ಸಿದೆ ಎಂದು ತೋರಿದರು. ಈ ಕಲಾಪ ಕ್ಲಿಕ್ ಆಯಿತು.
              ಬದ್ಧತೆಯ ಬದುಕಿಗಾಗಿ ಶ್ರಮಿಸಿದ್ದಾರೆ. ಗಂಟೆ ನೋಡದೆ ತನುವನ್ನು ಸವೆಸಿ ಏಕಲವ್ಯನಂತೆ ಮೇಲೆದ್ದಿದ್ದಾರೆ. ಗಂಗಾಧರರ ಉತ್ಕರ್ಷ 'ಕಾಲ'ಕ್ಕೆ ಬೇಡವಾಗಿದೆ. ಮನೋಚಿಕಿತ್ಸಕನ ಮನವಲ್ಲ, ಬದುಕನ್ನೇ ಅಪಹರಿಸಲು ಹೊಂಚುಹಾಕಿತು. ಒಂದೆರಡು ಬಾರಿ ಚೇತರಿಸಿದರು. 'ಇನ್ನೇನಾಗದು' ಎನ್ನುತ್ತಿರುವಾಗಲೇ ಕಾಲ ಕರೆದೊಯ್ದ. ಕನಸುಗಳು ಚಿಲಕ ಹಾಕಿದುವು. ಕನಸು ಹೆಕ್ಕುವ ಮನಸ್ಸು ಸ್ಥಬ್ದವಾಯಿತು.  ಪತ್ನಿ ಆಶಾ, ಅಧ್ಯಾಪಕಿ. ಮಕ್ಕಳು ಪ್ರಣವ, ಅವನಿ. ಫೇಸ್ಬುಕ್ಕಿನಲ್ಲಿ ಒಮ್ಮೆ ಬರೆದಿದ್ದರು, "ನನ್ನ ದುಃಖದ ಕ್ಷಣಗಳಲ್ಲಿ ಆಶಾ ಅಮ್ಮನಾಗಿದ್ದಾಳೆ. ಸಹಿಸಿಕೊಂಡು ನಕ್ಕಳೇ ಹೊರತು ಹಾಯಾಗಲಿಲ್ಲ. ನಾನು ಏನಾಗಿದ್ದೇನೆ.. ಹುಡುಕಿಕೊಳ್ಳಬೇಕಿದೆ." ಮಾರ್ಮಿಕ ಮಾತನ್ನು ಗ್ರಹಿಸಿದಾಗ ಕಣ್ಣೀರು ಜಿನುಗುತ್ತದೆ.  ನಿತ್ಯ ಭೇಟಿ ಇಲ್ಲದಿದ್ದರೂ ಮನದಿಂದ ಅಳಿಸಲಾಗದ ಬಂಧ-ಅನುಬಂಧ.
             ಬೆಳ್ಳಾರೆ  ದೂರವಾಗಿದ್ದಾರೆ. "ಮನುಷ್ಯನನ್ನು ಸಾವು ಹಂತಹಂತವಾಗಿ ಕೊಲ್ಲಬಾರದು. ಅವೆಲ್ಲವೂ ಒಂದೈದು ನಿಮಿಷದಲ್ಲಿ ಮುಗಿದುಹೋಗಬೇಕು," ಎಂದಿದ್ದ ಸ್ನೇಹಿತನ ಮಾತು ಕಾಡುತ್ತದೆ.
              ಬರುವುದಿದ್ದರೆ ನನಗೂ ಅಂತಹ ಯೋಗವೇ ಬಂದುಬಿಡಲಿ.
(16-9-2016ರ ಪ್ರಜಾವಾಣಿಯ ಕಾಲಂ)
    Saturday, September 3, 2016

ಕೆನಡಾ ಯಕ್ಷಮಿತ್ರರ ಅರ್ಥಪೂರ್ಣ ಪಯಣ                "ವಿದೇಶದಲ್ಲೂ ಅತ್ಯಂತ ಸುಸಜ್ಜಿತ ಯಕ್ಷಗಾನ ಮೇಳವಿದೆ."
               ಯಕ್ಷಗಾನ ವಿದ್ವಾಂಸ, ಆರ್ಥದಾರಿ ಡಾ.ಎಂ.ಪ್ರಭಾಕರ ಜೋಶಿಯವರು ಕೆನಡಾದಿಂದ ಮಿಂಚಂಚೆ ಕಳುಹಿಸಿದರು.  ವಿನೋದಕ್ಕೆ ಅಂದಿರಬಹುದೆಂದು ಮರೆತುಬಿಟ್ಟಿದ್ದೆ. ವಾರದಲ್ಲೇ ಕಾರ್ಯಕ್ರಮಗಳ ರಾಶಿ ರಾಶಿ ಚಿತ್ರಗಳು ಕಂಪ್ಯೂನ ಇನ್ಬಾಕ್ಸಿನಲ್ಲಿತ್ತು. ಯಕ್ಷಗಾನವು ಇರುನೆಲೆಯಲ್ಲಿ ಇನ್ನೂ ಅಭಿವೃದ್ಧಿಯಾಗಬೇಕೆನ್ನುವ ತಿಳಿವಳಿಕೆ ಪ್ರಬಲವಾಗಿ ಮೂಡಬೇಕು. ಅಲ್ಲಿ ಈಗಲೇ ಅದು ಬೇರುಬಿಟ್ಟಿರುವುದು ಖುಷಿ ತಂದಿದೆ, ಎಂದು ಮಾತಿಗಿಳಿದರು.
                ಕೆನಾಡಾ ಟೊರೆಂಟೋದ 'ಯಕ್ಷ ಮಿತ್ರ' ಸಂಘಟನೆಯು ಪೂರ್ಣ ಪ್ರಮಾಣದ ಮೇಳ ಸ್ವರೂಪದಲ್ಲಿದೆ. ಪ್ರಾಯಃ ಅದಕ್ಕೀಗ ದಶಮಾನದ ಖುಷಿ. ಸಾಗರ ಮೂಲದ ರಾಘವೇಂದ್ರ ಕಟ್ಟಿನಕೆರೆ ನಿರ್ದೇಶಕರು. ವರುಷಕ್ಕೆ ಏನಿಲ್ಲವೆಂದರೂ ಇಪ್ಪತ್ತರಿಂದ ಇಪ್ಪತ್ತೈದು ಆಟಗಳು. ೨೦೧೬ ಜೂನ್ 2 ರಿಂದ 14ರ ತನಕ ಜೋಶಿಯವರ ಪ್ರವಾಸ. ಸುಮಾರು ಐದಾರು ದಿವಸ ಟೊರೆಂಟೋ, ಒಟ್ಟಾವಾ, ಮೋಂಟ್ರಿಯಲ್..ಗಳಲ್ಲಿ ಯಕ್ಷಗಾನದ್ದೇ ಕಾರ್ಯಕ್ರಮ.
                   ಟೊರೆಂಟೋದ ಕಾರ್ಯಕ್ರಮಕ್ಕೆ ಹೊರಗಿನಿಂದ ಆಮದು ಕಲಾವಿದರಿಲ್ಲ. ಜೋಶಿ ಒಬ್ಬರು ಮಾತ್ರ ಅತಿಥಿ. ಮಿಕ್ಕವರೆಲ್ಲಾ ಅಲ್ಲೇ ಸಿದ್ಧರಾದವರು. ವೀಡಿಯೋ ಕಾನ್ಪರೆನ್ಸ್ ಮೂಲಕ ಸಮಾಲೋಚನೆ. ಯಾವ ಪಾತ್ರವನ್ನು ಯಾವ ಕೋನದಲ್ಲಿ ಚಿತ್ರಿಸಬೇಕೆನ್ನುವ ಪೂರ್ವಭಾವಿ ತರಬೇತಿಗಳು ಪ್ರದರ್ಶನದ ಒಟ್ಟಂದಕ್ಕೆ ಪೂರಕ. ’ರಾವಣ ವಧೆ ಮತ್ತು ಭೀಷ್ಮ ಪರ್ವ ಪ್ರಸಂಗಗಳ ತಾಳಮದ್ದಳೆ. ಜೋಶಿಯವರಿಗೆ 'ರಾವಣ ಮತ್ತು ಭೀಷ'್ಮನ ಪಾತ್ರ.  ಮೇಳದಿಂದ ವಾಲಿ ವಧೆ ಪ್ರಸಂಗದ ಪ್ರದರ್ಶನ.
                  ನಮ್ಮಲ್ಲಿ ಧ್ವನಿವರ್ಧಕದ ವಿಪರೀತ ಬೊಬ್ಬಾಟದಿಂದಾಗಿ ಯಕ್ಷಗಾನವನ್ನು ವೀಕ್ಷಿಸುವುದು, ಆಲಿಸುವುದು ತೀರಾ ಹಿಂಸೆ! ಎಲ್ಲಿಯವರೆಗೆ ಅಂದರೆ ಧ್ವನಿಯ ಅಟ್ಟಹಾಸಕ್ಕೆ ಪ್ರೇಕ್ಷಕರೇ ಎದ್ದು ಹೋಗಿರುವುದನ್ನು ನೋಡಿದ್ದೇನೆ. ಕಲಾವಿದರಿಗೆ ವಾಲ್ಯೂಮ್ ಹೈ ಮತ್ತು ಶಾರ್ಪ್  ಕೊಟ್ಟಷ್ಟು ಸಂತೃಪ್ತಿ. ಎಷ್ಟೋ ಸಲ ಭಾಗವತಿಕೆಯನ್ನು ಚೆಂಡೆ, ಮದ್ದಳೆಗಳ ನುಡಿತಗಳು ನುಂಗಿಬಿಡುತ್ತವೆ! ಟೊರೆಂಟೋದ ಧ್ವನಿವರ್ಧಕ ವ್ಯವಸ್ಥೆ ತುಂಬಾ ಖುಷಿಯಾಯಿತು. ಕಾರ್ಯಕ್ರಮಕ್ಕೆ ಒಂದರ್ಧ ಗಂಟೆ ಮೊದಲು ಮೈಕ್ ಬ್ಯಾಲೆನ್ಸ್ ಮಾಡಿಬಿಡುತ್ತಾರೆ. ಮಧ್ಯೆ ಮಧ್ಯೆ ಏರಿಸುವ, ಇಳಿಸುವ ಪ್ರಕ್ರಿಯೆ ಇಲ್ಲ. ನಮ್ಮಲ್ಲೂ ಇಂತಹ ಪ್ರಕ್ರಿಯೆಗಳತ್ತ ಯೋಚಿಸಬೇಕು.
              ಕನ್ನಡ ಮೂಲದ ಸೀಮಿತ ಪ್ರೇಕ್ಷಕರು. ಜತೆಗೆ ರಂಗದ ಬಣ್ಣ, ನಡೆ, ಕುಣಿತದಲ್ಲಿ ಕಲೆಯನ್ನು ಕಂಡ ವಿದೇಶಿ ಕಲಾಪ್ರಿಯರು. ಪ್ರಸಂಗದ ಪದ್ಯ ಮತ್ತು ಭಾವಾರ್ಥವನ್ನು ಪರದೆಯಲ್ಲಿ ಮೂಡಿಸುವ ತಾಂತ್ರಿಕ ವ್ಯವಸ್ಥೆಗಳು ಕನ್ನಡೇತರರಿಗೆ ಕಥೆಯನ್ನು ಅರ್ಥ ಮಾಡಿಕೊಳ್ಳಲು ಸುಲಭವಾಗಿತ್ತು.  ಕರಪತ್ರ, ಕಟೌಟ್ಗಳೆಲ್ಲಾ ಯಕ್ಷಗಾನೀಯ. ತಾಳಮದ್ದಳೆಗೆ ಎರಡು ಗಂಟೆಯ ಕಾಲಾವಧಿ. ಹಿಮ್ಮಾಹಿತಿ ನೀಡುವ ಜಾಗೃತ ಪ್ರೇಕ್ಷಕ ವರ್ಗ. ಪ್ರಶ್ನೋತ್ತರಗಳ ಮೂಲಕ ಸಂದೇಹ ನಿವಾರಣೆ.  ವಾಲಿ ವಧೆ ಪ್ರಸಂಗದಲ್ಲಿ 'ವಾಲಿ-ತಾರೆ' ಪಾತ್ರಗಳ ಸಂವಾದವನ್ನು ಅನೇಕ ಮಂದಿ ಮೆಚ್ಚಿಕೊಂಡಿದ್ದರು. ರಾವಣ ಪಾತ್ರ ಮಾಡಿ ರಾಜನೀತಿಯಲ್ಲಿ ಹೇಗೆ ಮೈತ್ರಿ ಹುಟ್ಟುತ್ತದೆ ಎನ್ನುವ ತರ್ಕಗಳು ಜನ ಮುಟ್ಟಿದೆ. ಭೀಷ್ಮ ಪರ್ವದ 'ಭೀಷ್ಮ' ಪಾತ್ರ ಲೌಕಿಕ ಉದಾಹರಣೆಯನ್ನು ಕೊಡಬಹುದೇ ಎನ್ನುವ ಪ್ರಶ್ನೆಯನ್ನು ಎದುರಿಸಿದೆ, ಎಂದು ಕೆನಡಾ ಕೂಟದ ಅನುಭವ ಹಂಚಿಕೊಳ್ಳುತ್ತಾರೆ;
                ವೇಷ, ಸಂಪ್ರದಾಯದಲ್ಲಿ ರಾಜಿಯಿಲ್ಲದ ನಿಲುವು. ಮೆಚ್ಚಬೇಕಾದ ಪ್ರಗತಿ ಸಾಧಿಸಿದ್ದಾರೆ. ವಿದೇಶದಲ್ಲಿ ಯಕ್ಷಗಾನದ ಹೆಸರಿನಲ್ಲಿ ಏನೇನೋ ಮಾಡಿಲ್ಲ. ಅಲ್ಲಿ ರಂಗಭೂಮಿಯನ್ನು ಮೆಚ್ಚುವ ಕಣ್ಣಿದೆ. ಕಲಾರಸಿಕತೆಯ ಮಟ್ಟ ಚೆನ್ನಾಗಿದೆ. ರಂಗದಲ್ಲಿ ಗಾಢ ಬೆಳಕಿಲ್ಲ. ಅವರು ತಂತ್ರಜ್ಞಾನವನ್ನು ಆಟಕ್ಕೆ ಅಳವಡಿಸಿದ್ದಾರೆ. ತರಬೇತಿಯಿದೆ. ಪ್ರತಿ ನಿಮಿಷವೂ ಯೋಚನೆ, ಯೋಜನೆ. ಮಧ್ಯೆ ಮಧ್ಯೆ ಪ್ರೇಕ್ಷಕರು ಎದ್ದು ಹೋಗುವುದಿಲ್ಲ. ಶಿಳ್ಳೆ, ಚಪ್ಪಾಳೆಗಳಿಲ್ಲ. ಕಾರ್ಯಕ್ರಮದ ಕೊನೆಗೆ ದೀರ್ಘ ಕರತಾಡನದ ಪ್ರಶಂಸೆ.
                ಪ್ರಜ್ಞಾಪೂರ್ವಕವಾದ ರಂಗಶಿಸ್ತು. ರಂಗಭೂಮಿಯನ್ನು ಬಳಸುವ ಕ್ರಮ, ನೃತ್ಯದ ತಿದ್ದುವಿಕೆ ಇನ್ನಷ್ಟು ಸುಧಾರಿಸಬೇಕಾಗಿದೆ. ಮಾಧ್ಯಮಗಳಲ್ಲಿ ಯಕ್ಷಗಾನ ಪರಿಚಯವಾಗಬೇಕು. ವಿಶ್ವ ಥಿಯೇಟರಿಗೆ ಅಲೌಕಿಕ ಕಲೆಯ ಸೊಬಗನ್ನು ತಿಳಿಸುವ ಕೆಲಸ ಆಗಬೇಕಾಗಿದೆ. ಕೆನಡಾ, ಅಮೇರಿಕಾದಂತಹ ವಿದೇಶ ನೆಲದಲ್ಲಿ ದುಡಿಯುವ ಕೈಗಳಿಗೆ ಉಣ್ಣಲು ಪುರುಸೊತ್ತಿಲ್ಲ! ಉದ್ಯೋಗದ ಧಾವಂತದಲ್ಲಿ ಇಂತಹ ಆಸಕ್ತಿಗಳಿಗೆ ಸಮಯವನ್ನು ಹೊಂದಿಸುವುದು ದೊಡ್ಡ ಸವಾಲಿನ ಕೆಲಸ.
               ನಮ್ಮಲ್ಲಿಗೆ ತಾಳಮದ್ದಳೆ ತಂಡವನ್ನು ತನ್ನಿ, ಎನ್ನುವ ಬೇಡಿಕೆಯನ್ನು ಜೋಶಿಯವರಲ್ಲಿ ಮುಂದಿಟ್ಟರಂತೆ. ಇಲ್ಲಿಂದ ಒಯ್ಯುವುದು ದೊಡ್ಡದಲ್ಲ. ಆದರೆ ಅವರನ್ನು ತಯಾರು ಮಾಡಿ, ಅವರಿಂದಲೇ ಪ್ರದರ್ಶನ, ತಾಳಮದ್ದಳೆ ಏರ್ಪಡಿಸುವುದರಿಂದ ಕಲೆಯ ವಿಸ್ತರಣೆ ಸಾಧ್ಯ, ಎನ್ನುತ್ತಾರೆ. ಸಾಂಸ್ಕೃತಿಕ ಮುಂದುವರಿಕೆ ವಿದೇಶಿ ನೆಲದಲ್ಲೂ ಆಗುತ್ತಾ ಇರುವುದು ಶ್ಲಾಘ್ಯ. ಸಣ್ಣ ಮಕ್ಕಳೂ ಯಕ್ಷಗಾನವನ್ನು ಆಸಕ್ತಿಯಿಂದ ನೋಡುತ್ತಾರೆ.
              'ವಾಲಿ ವಧೆ' ಪ್ರದರ್ಶನಕ್ಕೆ ಮುನ್ನ ಮೌಲ್ಯವರ್ಧನಾ ಶಿಬಿರ ಜರುಗಿತ್ತು.  ವೇಷಗಳ ಪ್ರವೇಶ, ರಂಗಚಲನೆ, ವಾಲಿಯನ್ನು ತಾರೆ ತಡೆಯುವ ರೀತಿ, ಯುದ್ಧಗಳು, ಕೊರಿಯೋಗ್ರಫಿಯ ಬಳಕೆ, ಅರ್ಥಗಾರಿಕೆಯ ಪ್ರಸ್ತುತಿ... ಇವೇ ಮೊದಲಾದ ಮೂಲಭೂತ ಅಂಶಗಳ ಹೂರಣವನ್ನಿಟ್ಟುಕೊಂಡ ಕಾರ್ಯಸೂಚಿ. ಈ ರೀತಿಯ ಸಮಾಲೋಚನೆಗಳು ಪ್ರದರ್ಶನದ ಒಟ್ಟಂದಕ್ಕೆ ಸಹಕಾರಿ. ನಮ್ಮಲ್ಲೂ ಇಂತಹ ಮನಃಸ್ಥಿತಿಗಳನ್ನು ರೂಪಿಸಿಕೊಳ್ಳಲೇ ಬೇಕಾಗಿದೆ, ಎನ್ನುವ ಆಗ್ರಹ ಜೋಶಿಯವರದು.
                ವಿನಾಯಕ ಹೆಗಡೆ, ಪರಮ್ ಭಟ್, ರಘು ಕಟ್ಟಿನಕೆರೆ, ನವೀನ್ ಹೆಗಡೆ, ಶ್ರೀಕಾಂತ ಹೆಗಡೆ, ನಾಗಭೂಷಣ ಮಧ್ಯಸ್ಥ, ಉದಯ ಶಾಸ್ತ್ರಿ, ವಿಷ್ಣು ಭಟ್ - ಟೊರೆಂಟೋ ಮೇಳದ ಸಾರಥಿಗಳು.  ಕಲ್ಲಭಾಗ್ ವಿನಾಯಕ್ ಹೆಗಡೆ, ರಘು ಕಟ್ಟಿನಕೆರೆ - ಮೇಳದ ಭಾಗವತರು. ಎಲ್ಲರೂ ಕನ್ನಾಡಿನವರೇ. ದೂರದಲ್ಲಿದ್ದರೂ ಯಕ್ಷಗಾನದ ಆಸಕ್ತಿಯನ್ನು ಬಿಡದೆ, ಸ್ಫೂರ್ತಿಯಿಂದ ತಂಡ ಕಟ್ಟಿರುವುದು ಇತರರಗೆ ಸ್ಫೂರ್ತಿ. 
               ಇನ್ನೊಮ್ಮೆ ಕೆನಡಾಕ್ಕೆ ಹೋಗುವ ಅವಕಾಶ ಸಿಕ್ಕರೆ ಹೇಗೆ ಸಿದ್ಧತೆ ಮಾಡಿಕೊಳ್ಳುತ್ತೀರಿ? ಎನ್ನುವ ಕೀಟಲೆ ಪ್ರಶ್ನೆಗೆ ಜೋಶಿಯವರ ಉತ್ತರ ನೋಡಿ, "ಎರಡೂವರೆ ಗಂಟೆ ತಾಳಮದ್ದಳೆಯನ್ನು ಹೇಗೆ ಕ್ರಿಸ್ಪ್ ಆಗಿ ಕೊಡಬಹುದು. ಅಲ್ಲಿನ ಕಲಾವಿದರನ್ನು ಹೇಗೆ ಜೋಡಿಸಬಹುದು ಎನ್ನುವ ಯೋಚನೆಯಿದೆ," ಎಂದರು. ಕೆನಡಾದ ಆದಿವಾಸಿಗಳ ಕಥೆಯನ್ನು ಯಕ್ಷಗಾನಕ್ಕೆ ಅಳವಡಿಸುವ ದೊಡ್ಡ ಯೋಜನೆಯು ಯಕ್ಷಮಿತ್ರಕ್ಕಿದ್ದು ಜೋಶಿ ಬೆಂಬಲ ನೀಡಿದ್ದಾರೆ.
              ಕಡಲಾಚೆ ಹಾರಿದ ಜೋಶಿಯವರಿಗೆ ಯಕ್ಷಗಾನವನ್ನು ಮರೆತು ಕುಟುಂಬದೊಂದಿಗೆ ಹಾಯಾಗಿ ವಿಹರಿಸಬಹುದಿತ್ತು. ಆದರೆ ಅಲ್ಲಿನ ಅಭಿಮಾನಿಗಳು ಪ್ರೀತಿಯ ಹಗ್ಗದಿಂದ ಕಟ್ಟಿಬಿಟ್ಟರು. ಜೋಶಿಯವರೊಂದಿಗೆ ಮಾತನಾಡುತ್ತಾ ಇದ್ದಂತೆ ನನಗೆ ಅರಿವಾದುದು ಇಷ್ಟು - ಪ್ರದರ್ಶನದ ಪೂರ್ವಭಾವಿಯಾಗಿ ಸಮಾಲೋಚನೆ ಮಾಡಿಕೊಂಡರೆ ಉತ್ತಮವಾದ ಪ್ರದರ್ಶನವನ್ನು ಯಕ್ಷಗಾನೀಯವಾಗಿ ಕೊಡಬಹುದು. ನಮ್ಮಲ್ಲಿ ಯಾಕೆ ಸಾಧ್ಯವಾಗುತ್ತಿಲ್ಲ?
(ಪ್ರಜಾವಾಣಿ | ದಧಿಗಿಣತೋ | ೨-೯-೨೦೧೬)

ಬುದ್ಧಿಗೆ ಗ್ರಾಸವಾದ ತಾಳಮದ್ದಳೆ ಸಪ್ತಾಹ


                ಕಾಸರಗೋಡು ಜಿಲ್ಲೆಯ ಎಡನೀರು ಶ್ರೀಮಠವು ಯಕ್ಷಗಾನ ಕಲಾವಿದರಿಗೆ ಮನೆ. ಯಕ್ಷಗಾನ ತಾಳಮದ್ದಳೆ, ಆಟಕ್ಕೆ ಇಲ್ಲಿ ಆರಾಧನಾ ಭಾವ. ಕಲಾರಾಧನೆ ಶ್ರೀಮಠದ ವೈಶಿಷ್ಟ್ಯ. ಅರ್ಧಶತಮಾನದೀಚೆಗೆ, ಆಚೆಗೆ ಬಾಳಿದ ಅನೇಕ ವಿದ್ವಾಂಸ ಅರ್ಥಧಾರಿಗಳ ನೆಚ್ಚಿನ ತಾಣ. ತಾಳಮದ್ದಳೆಯ ಮೂಲಕ ವಿದ್ವತ್ತಿನ ಪ್ರದರ್ಶನಕ್ಕೆ ಸುಂದರ ಅವಕಾಶ.
               ಅರ್ಥಧಾರಿಗಳು ಜತೆಯಾದರೆ ಮಠದಲ್ಲಿ ತಾಳಮದ್ದಳೆ ಖಚಿತ. ಪ್ರೇಕ್ಷಕರು ಮುಖ್ಯವಲ್ಲ, ರಸಪೋಶಿತವಾದ ಪ್ರಸ್ತುತಿ ಮುಖ್ಯ. ಕೆಲವೊಮ್ಮೆ ನಾಲ್ಕೈದು ದಿವಸ ನಿರಂತರ ಕೂಟಗಳು. ಮರುದಿವಸ ಕೂಟದ ಕಟು ವಿಮರ್ಶೆ. ಎಡನೀರು ಮಠಾಧೀಶ ಪೂಜ್ಯ ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರು ಸ್ವತಃ ಭಾಗವತಿಕೆ ಮಾಡುವುದು ಕಲಾವಿದರಿಗೆ ಸ್ಫೂರ್ತಿ. ಸ್ವಾಮಿಗಳಿಗೆ ತೃಪ್ತಿ.
               ಹೀಗೆ ನಡೆಯುತ್ತಿದ್ದ ತಾಳಮದ್ದಳೆಗೆ ಸಪ್ತಾಹದ ಸ್ವರೂಪ ಬಂತು. ಮುಂದೆ ಶ್ರೀಗಳ ಚಾತುರ್ಮಾಸ್ಯ ಅವಧಿಯಲ್ಲಿ ಸಪ್ತಾಹವು ಪೋಣಿಕೆಯಾಯಿತು. ಪ್ರಸಂಗ, ಪದ್ಯ, ಕಲಾವಿದರರನ್ನು ಸ್ವಾಮೀಜಿ ಗೊತ್ತು ಮಾಡುತ್ತಾರೆ. ಪ್ರಸಂಗವೊಂದು ಸಹಜವಾಗಿ ಎಷ್ಟು ಲಂಬಿಸಬಹುದೋ ಅಷ್ಟರ ಲಂಬನೆಗೆ ಅವಕಾಶವಿರುವುದು ವೈಶಿಷ್ಟ್ಯ ಇಷ್ಟು ಸಮಯದೊಳಗೆ ಮುಗಿಸಬೇಕೆನ್ನುವ ಸಮಯದ ಪ್ಯಾಕೇಜ್ ಇಲ್ಲ.
               ಕೀರ್ತಿಶೇಷ ಶಂಕರನಾರಾಯಣ ಸಾಮಗರು, ಡಾ.ಶೇಣಿ, ಕವಿಭೂಷಣ ವೆಂಕಪ್ಪ ಶೆಟ್ಟರು, ಸಣ್ಣ ಸಾಮಗರು, ತೆಕ್ಕಟ್ಟೆ... ಹೀಗೆ ಉದ್ಧಾಮರಿದ್ದ ಕೂಟಗಳು ಹೃಸ್ವಗೊಳ್ಳುತ್ತಿರಲಿಲ್ಲ. ಕಲಾವಿದನ ಪ್ರತಿಭೆ, ವಿದ್ವತ್ತಿಗೆ ಪೂರ್ಣ ದುಡಿತ. ಹಾಗಾಗಿ ರಾಮ-ರಾವಣ, ವಾಲಿ-ರಾಮ, ಮಾಗಧ-ಕೃಷ್ಣ...  ಪಾತ್ರಗಳ ಸಂಭಾಷಣೆಗಳು ದೀರ್ಘವೆಂದು ಕಂಡುಬಂದರೂ ಅದರಲ್ಲಿ ವಿದ್ವತ್ತಿನ ಭಾರವಿದೆ. ವೈಚಾರಿಕ ವಿಸ್ತಾರವಿದೆ. ಪ್ರೇಕ್ಷಕರು ಕೂಡಾ ಆಸ್ವಾದನೆಯಲ್ಲಿ ಕಲಾವಿದರ ಮಟ್ಟಕ್ಕೆ ಏರುವುದುಂಟು!
                ಬಹುಶಃ ಇದೇ ಜಾಡಿನಲ್ಲಿ ಸಾಗಿ ಬಂದ ಎಡನೀರು ಸಪ್ತಾಹವು ಎಂದೂ 'ಪ್ಯಾಕೇಜ್ ಅರ್ಥಗಾರಿಕೆ'ಗೆ ತನ್ನನ್ನು ಒಡ್ಡಿಕೊಳ್ಳಲಿಲ್ಲ. ಸ್ವತಃ ಸ್ವಾಮೀಜಿ ಹಾಡುವುದರಿಂದ ಅವ್ಯಕ್ತವಾಗಿ ಶಿಸ್ತು ಅನಾವರಣಗೊಳ್ಳುತ್ತದೆ. ಕಲಾವಿದರು ಈ ಆವರಣದ ತೆಕ್ಕೆಗೆ ತಮಗರಿವಿಲ್ಲದಂತೆ ಬಂಧಿಯಾಗುತ್ತಾರೆ. ಹಗುರ ವಿಚಾರಗಳು ಸುಳಿಯದಂತೆ ಎಚ್ಚರವಹಿಸುತ್ತಾರೆ. ಇದು ಕೂಟದ ಒಟ್ಟಂದದ ಪರೋಕ್ಷ ಒಳಸುರಿಗಳು.
             ಈ ಬಾರಿ ಪುತ್ತೂರಿನ ಕೆಮ್ಮಾಯಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಎಡನೀರು ಶ್ರೀಗಳ ಚಾತುರ್ಮಾಸ್ಯ ವೃತಾಚರಣೆ. ಆಗಸ್ಟ್ 9 ರಿಂದ 15ರ ತನಕ ತಾಳಮದ್ದಳೆ ಸಪ್ತಾಹ ಸಂಪನ್ನವಾಗಿತ್ತು. ಭರತಾಗಮನ, ಭೀಷ್ಮ ವಿಜಯ, ಪಂಚವಟಿ, ವಾಲಿ ವಧೆ, ಭೀಷ್ಮ ಸೇನಾಧಿಪತ್ಯ-ಕರ್ಮಬಂಧ, ಸುಧನ್ವ ಮೋಕ್ಷ, ಮಾಗಧ ವಧೆ.. ಪ್ರಸಂಗಗಳು. ಪದ್ಯಾಣ ಗಣಪತಿ ಭಟ್, ಪುತ್ತಿಗೆ ರಘುರಾಮ ಹೊಳ್ಳ, ದಿನೇಶ ಅಮ್ಮಣ್ಣಾಯ, ಕುರಿಯ ಗಣಪತಿ ಶಾಸ್ತ್ರಿ, ಜನ್ಸಾಲೆ ರಾಘವೇಂದ್ರ ಆಚಾರ್, ಸತ್ಯನಾರಾಯಣ ಪುಣಿಂಚಿತ್ತಾಯ, ರಮೇಶ ಭಟ್ ಪುತ್ತೂರು... ಸಪ್ತಾಹದಲ್ಲಿ ಭಾಗವತರಾಗಿದ್ದರು. ಪದ್ಯಾಣ ಶಂಕರನಾರಾಯಣ ಭಟ್, ಲಕ್ಷ್ಮೀಶ ಅಮ್ಮಣ್ಣಾಯ,  ದೇಲಂತಮಜಲು ಸುಬ್ರಹ್ಮಣ್ಯ ಭಟ್, ಸುನಿಲ್ ಭಂಡಾರಿ, ಪಿ.ಜಿ.ಜಗನ್ನಿವಾಸ ರಾವ್, ಕೃಷ್ಣಪ್ರಕಾಶ್ ಉಳಿತ್ತಾಯ... ಚೆಂಡೆ, ಮದ್ದಳೆ ವಾದಕರಾಗಿದ್ದರು.
ಉಡುವೆಕೋಡಿ ಸುಬ್ಬಪ್ಪಯ್ಯ (ಭರತ) - ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ (ರಾಮ); ಉಜಿರೆ ಅಶೋಕ ಭಟ್ (ಭೀಷ್ಮ) - ವಿಟ್ಲ ಶಂಭು ಶರ್ಮ (ಪರಶುರಾಮ); ಎಂ.ಎಲ್.ಸಾಮಗ (ಶ್ರೀರಾಮ) - ವಿದ್ವಾನ್ ಹಿರಣ್ಯ ವೆಂಕಟೇಶ್ವರ ಭಟ್ (ಶೂರ್ಪನಖಿ); ವಿದ್ವಾನ್ ಮೇಲುಕೋಟೆ ಉಮಾಕಾಂತ ಭಟ್ (ವಾಲಿ) - ಹಿರಣ್ಯ (ರಾಮ)', ಬರೆ ಕೇಶವ ಭಟ್ (ಭೀಷ್ಮ) - ವಿದ್ವಾನ್ ಶ್ರೀಹರಿನಾರಾಯಣದಾಸ ಆಸ್ರಣ್ಣ (ಕೃಷ್ಣ); ಮೇಲುಕೋಟೆ (ಸುಧನ್ವ) - ಸುಣ್ಣಂಬಳ ವಿಶ್ವೇಶ್ವರ ಭಟ್ (ಅರ್ಜುನ) - ಡಾ.ರಮಾನಂದ ಬನಾರಿ (ಕೃಷ್ಣ); ಮೇಲುಕೋಟೆ (ಮಾಗಧ) - ಬನಾರಿ (ಕೃಷ್ಣ)... 'ನೋಟ್' ಮಾಡಬಹುದಾದ ಜತೆ ಪಾತ್ರ-ಪಾತ್ರಧಾರಿಗಳು. ಅಲ್ಲದೆ ಉಳಿದ ಪಾತ್ರಧಾರಿಗಳ ಪ್ರಸ್ತುತಿಗಳು ಏಳು ದಿವಸಗಳ ತಾಳಮದ್ದಳೆಯ ಪರಿಣಾಮಗಳನ್ನು ಎತ್ತಿಹಿಡಿದಿವೆ.
             ಭೀಷ್ಮ ವಿಜಯ, ಸುಧನ್ವ ಮೋಕ್ಷ, ವಾಲಿವಧೆ ಪ್ರಸಂಗಗಳು ತುಸು ಹೆಚ್ಚೇ ಲಂಬಿಸಿದ್ದುವು. ಎಷ್ಟೋ ಸಲ ಅರ್ಥಗಾರಿಕೆಯಲ್ಲಿ ನುಸುಳುವ ಹೊರಗಿನ ವಿಚಾರಗಳು, ಸೂಕ್ಷ್ಮ ಸಂಗತಿಗಳು ಜಿದ್ದಿಗೆ ಬಿದ್ದಾಗ ಸಹಜವಾಗಿ ಲಂಬನವಾಗುತ್ತದೆ. ಅದು ಅರ್ಥಧಾರಿಗಳ ವಿವೇಚನೆ, ಸಾಮಥ್ರ್ಯಕ್ಕೆ ಸಂಬಂಧಪಟ್ಟ ವಿಚಾರ. ಹಿಂದೆಲ್ಲಾ ಮನೆಗಳಲ್ಲಿ ನಡೆಯುತ್ತಿದ್ದ ತಾಳಮದ್ದಳೆಗಳಲ್ಲಿ ಇಂತಹ ವೈಚಾರಿಕ ಜಿದ್ದಾಜಿದ್ದಿ ಇತ್ತೆಂಬುದನ್ನು ಹಿರಿಯರು ಜ್ಞಾಪಿಸುತ್ತಾರೆ. ಎಡನೀರು ಸಪ್ತಾಹವು ಹಿಂದಿನ ತಾಳಮದ್ದಳೆಯನ್ನು ಜ್ಞಾಪಿಸುತ್ತದೆ ಎಂದಾದರೆ ಅದು ಸಾರ್ಥಕ ಅಲ್ವಾ.
              ವರ್ತಮಾನದ ಮನಃಸ್ಥಿತಿಯು ಇಂತಹ ತಾಳಮದ್ದಳೆಯನ್ನು ಒಪ್ಪುವುದಿಲ್ಲ. ಎಲ್ಲದಕ್ಕೂ 'ಬ್ಯುಸಿ' ಹಣೆಪಟ್ಟಿ. ಸಮರ್ಥನೆಗಳ ಭರ. ಈಗಲೂ ರಾತ್ರಿಯಿಡೀ ತಾಳಮದ್ದಳೆ ಜರುಗಿದಾಗ ಬೆಳಗ್ಗಿನವರೆಗೆ ಆಸ್ವಾದಿಸುವ, ಮರುದಿವಸ ಚರ್ಚಿಸುವ, ವಿಮರ್ಶಿಸುವ ಪ್ರೇಕ್ಷಕರಿದ್ದಾರೆ. ಇವರನ್ನೆಲ್ಲಾ 'ಪುರುಸೊತ್ತು ಇದ್ದವರು' ಪಟ್ಟಿಗೆ ಸೇರಿಸಬೇಕಾಗಿಲ್ಲ. ಇವರಿಗೂ 'ಬ್ಯುಸಿ' ಇದೆ! ಇಂತಹ ಕಾಲಸ್ಥಿತಿಯಲ್ಲೂ ತಾಳಮದ್ದಳೆ ಲಂಬಿಸಿದಾಗ ಅದನ್ನು ಕೇಳುವ, ಅನುಭವಿಸುವ ಪ್ರೇಕ್ಷಕರನ್ನು ಎಡನೀರು ಸಪ್ತಾಹದಲ್ಲಿ ನೋಡಿದೆ. ಇವರಾರೂ ಒತ್ತಾಯಕ್ಕೆ ಕುಳಿತವರಲ್ಲ. ಹಂಗಿಗೆ ಒಳಗಾದವರಲ್ಲ. ತಾಳಮದ್ದಳೆಯನ್ನು ಕೇಳಲೆಂದೇ ಕುಳಿತವರು. ಮರುದಿವಸ ಕಟುವಾದ ವಿಮರ್ಶೆಯನ್ನೂ ಮಾಡುವವರು.
               ಎಡನೀರು ಸಪ್ತಾಹಕ್ಕೆ ನಾಲ್ಕೂವರೆ ದಶಕದ ಇತಿಹಾಸವಿದೆ. ಸಂದು ಹೋದ ಮತ್ತು ಈಗ ಪ್ರಸಿದ್ಧವಾಗಿರುವ ಅನೇಕ ಮಂದಿ ಸಪ್ತಾಹದಲ್ಲಿ ಭಾಗವಹಿಸಿದ್ದಾರೆ. ಬದುಕಿಗೆ ಪೂರಕವಾದ ಸಂದೇಶಗಳನ್ನು ಯಕ್ಷಗಾನ ಪ್ರಸಂಗಗಳು ಸಾರುತ್ತವೆ. ಪ್ರಸಂಗದ ಆಶಯವನ್ನು ಅರ್ಥಧಾರಿಗಳು ಸಮಕಾಲೀನ ವಿವೇಚನೆಯೊಳಗೆ ಅದ್ದಿ ಪ್ರಸ್ತುತಪಡಿಸಿದಾಗ ಪುರಾಣದ ಆಶಯವನ್ನು ಪ್ರೇಕ್ಷಕರಿಗೆ ಕಟ್ಟಿ ಕೊಡಲು ಸಾಧ್ಯ. ಸಪ್ತಾಹದ ಎಲ್ಲಾ ಪ್ರಸಂಗಗಳ ಬಹುತೇಕ ಪಾತ್ರಗಳು ನಮ್ಮ ಆಶಯವನ್ನು ಅರ್ಥಮಾಡಿಕೊಂಡಿದ್ದಾರೆ, ಎನ್ನುವ ಧನ್ಯತೆ ಎಡನೀರು ಶ್ರೀಗಳದ್ದು.
                ಎರಡು ತಿಂಗಳು ನಡೆಯುವ ಚಾತುರ್ಮಾಸ್ಯದಲ್ಲಿ ಸಪ್ತಾಹವೂ ಸೇರಿದಂತೆ ಕೂಟ, ಆಟ, ಸಂಗೀತಗಳಿಗೆ ಮಣೆ. ಕಲಾರಾಧನೆ, ಮತ್ತು ಅದರಿಂದ ಉಂಟಾಗುವ ಕಲಾನುಭವ ಮನಸ್ಸನ್ನು ಮುದಗೊಳಿಸುವ ಉಪಾಧಿ. ಪುತ್ತೂರಿನಲ್ಲಿ ಯಕ್ಷಗಾನದ ಮೂಲಕ ಕಲಾನುಭವವನ್ನು ನಿರೀಕ್ಷಿಸುವ ಸಿದ್ಧ ಪ್ರೇಕ್ಷಕರಿರುವುದು ಈ ಭಾಗದ ಸಾಂಸ್ಕೃತಿಕ ಜೀವಂತಿಕೆಗೆ ಸಾಕ್ಷಿ.
(ಚಿತ್ರ : ಲ.ನಾ.ಭಟ್, ಬೆಂಗಳೂರು)

ನಾಲ್ಕು ದಶಕದ ತೀರ್ಥಯಾತ್ರೆ - ಎಡನೀರು ತಾಳಮದ್ದಳೆ ಸಪ್ತಾಹದ ಹಿರಿಮೆ


                  ಯಕ್ಷಗಾನದ ಹಿರಿಯ ಕಲಾವಿದರ ಮಾತಿಗೆ ಕಿವಿಯಾದಾಗ ಶ್ರೀ ಎಡನೀರು ಮಠದ ಉಲ್ಲೇಖವಿಲ್ಲದೆ ಮಾತು ಪೂರ್ಣವಾಗುವುದಿಲ್ಲ. ಆ ಮಾತಿನಲ್ಲಿ ಖುಷಿಯಿದೆ, ಆನಂದವಿದೆ, ವಿಶ್ವಾಸವಿದೆ, ನಂಬುಗೆಯಿದೆ. ಮಾತೃತ್ವದ ಸ್ಪರ್ಶವಿದೆ. ಮಗುವಿನ ಪ್ರೀತಿಯನ್ನು ಅನುಭವಿಸಿದ ಸಂತೃಪ್ತಿಯಿದೆ. ಪೂಜ್ಯ ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀಪಾದರು ಕಲಾವಿದರ ಪಾಲಿಗೆ ಗುರು, ಮಗು, ತಾಯಿ, ಬಂಧು, ವೈದ್ಯ.
                  ಕಲಾವಿದರಿಗೆ ಶ್ರೀಮಠವು ಮನೆ. ಶೇಣಿಯವರೊಮ್ಮೆ ಹೇಳಿದ ನೆನಪು, ಪೂಜ್ಯರ ಪ್ರೀತಿಯ ತೆಕ್ಕೆಯಿಂದ ಬಿಡಿಸಲಾಗದಷ್ಟು ಬಂಧ, ಅನುಬಂಧ. ಸಿಗುವ ಅಕ್ಕರೆಯು ಸಕ್ಕರೆಯಷ್ಟು ಸಿಹಿ. ಕೂಟ, ಆಟಗಳು ಜರುಗಿದಾಗ ಕಲಾವಿದರಿಗಿಂತಲೂ ಹೆಚ್ಚು ಅನುಭೂತಿಯನ್ನು ಶ್ರೀಗಳು ಅನುಭವಿಸುತ್ತಾರೆ. ಒಂದರ್ಥದಲ್ಲಿ ಶ್ರೀಮಠವು ಯಕ್ಷಗಾನಕ್ಕೆ, ಕಲಾವಿದರಿಗೆ ಕೇಂದ್ರವಿದ್ದಂತೆ...
                ನಾಲ್ಕಾರು ಅರ್ಥಧಾರಿಗಳು ಸೇರಿದರೆ ಸಾಕು, ಅಹೋರಾತ್ರಿ ತಾಳಮದ್ದಳೆ ಖಚಿತ. ಮರುದಿವಸ ಕೂಟದ ಕಟು ವಿಮರ್ಶೆ. ಹಿಮ್ಮೇಳದಿಂದ ತೊಡಗಿ ಅರ್ಥಗಾರಿಕೆ ತನಕ. ಮೂರ್ನಾಲ್ಕು ದಿವಸ ನಿರಂತರ ತಾಳಮದ್ದಳೆಯ ದಾಸೋಹ. ಪೊಳಲಿ ಶಂಕರನಾರಾಯಣ ಶಾಸ್ತ್ರಿಗಳು, ಕುಬಣೂರು ಬಾಲಕೃಷ್ಣ ರಾಯರು, ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್, ದೇರಾಜೆ ಸೀತಾರಾಮಯ್ಯ, ಶೇಣಿ ಗೋಪಾಲಕೃಷ್ಣ ಭಟ್, ಮಲ್ಪೆ ಶಂಕರನಾರಾಯಣ ಸಾಮಗರು, ತೆಕ್ಕಟ್ಟೆ ಆನಂದ ಮಾಸ್ತರ್... ಹೀಗೆ ಅನೇಕರು ಕೂಟಕ್ಕೆ ಕಳೆಯೇರಿಸಿದವರು. ಇವರೆಲ್ಲರ ಅರ್ಥವನ್ನು ಕೇಳಿಯೇ ಕಲಾವಿದರಾಗಿ ರೂಪುಗೊಂಡವರೆಷ್ಟೋ.
              ಹೀಗೆ ನಡೆಯುತ್ತಿದ್ದ ತಾಳಮದ್ದಳೆಯು ಮುಂದೆ ಸಪ್ತಾಹವಾಗಿ ರೂಪಾಂತರಗೊಂಡಿತು. ದೂರದೂರಿನ ಕಲಾವಿದರು ಆಗಮಿಸಿದರು. ಮುಂದೆ ಪೂಜ್ಯ ಶ್ರೀಗಳ ಚಾತುರ್ಮಾಸ್ಯ ವೃತಾಚರಣೆ ಸಂದರ್ಭದಲ್ಲಿ ಸಪ್ತಾಹವು  ಪೋಣಿಕೆಯಾಯಿತು. ಕೂಟಕ್ಕೆ ವೈಭವ ಬಂತು. ಅರ್ಥಧಾರಿಯಾಗಿ ಪಡಿಮಂಚವೇರುವುದು ಕಲಾವಿದರಿಗೆ ಹೆಮ್ಮೆ. ಮಠದ ಹೊರತಾಗಿ ಪೂಜ್ಯರು ಹಾಡುವುದಿದ್ದರೆ ಸಪ್ತಾಹದಲ್ಲಿ ಮಾತ್ರ.
                ತಾಳಮದ್ದಳೆಯ ಸ್ವರೂಪ ನೀರ್ಣಯಕ್ಕೆ ಸ್ವಾಮೀಜಿಯವರೇ ನಿರ್ದೇಶಕ. ಕಲಾವಿದರ ಸಾಮಥ್ರ್ಯಕ್ಕನುಸಾರವಾಗಿ ಪಾತ್ರ ನಿರ್ಣಯ. ನಿಗದಿತ ಸಮಯಕ್ಕೆ ಹೊಂದುವ ಪ್ರಸಂಗ ಮತ್ತು ಪದ್ಯಗಳ ಆಯ್ಕೆ. ಕೂಟ ಯಶಕ್ಕೆ ಕಲಾವಿದರೊಂದಿಗೆ ಸಮಾಲೋಚನೆ. ಹಿರಿಯರೊಂದಿಗೆ ಕಿರಿಯ ಅರ್ಥಧಾರಿಗಳ ಮಿಳಿತ. ಸಮರ್ಥ ಹಿಮ್ಮೇಳದ ಜೋಡಣೆ. ಶ್ರೀಗಳು ಭಾಗವತಿಕೆ ಮಾಡುತ್ತಾ, ಅರ್ಥವನ್ನೂ ಗಮನಿಸುತ್ತಾ ಇರುವುದರಿಂದ  ಪಾತ್ರಗಳು ಹಳಿ ತಪ್ಪುವುದಿಲ್ಲ! ಶ್ರೀಗಳ ನಿರ್ದೇಶನಕ್ಕೆ ಪ್ರತ್ಯೇಕವಾದ ಸೌಂದರ್ಯವಿದೆ. ಸಪ್ತಾಹದಲ್ಲಿ ಪ್ರಸಂಗಕ್ಕೆ ನ್ಯಾಯ ಸಲ್ಲುತ್ತದೆ. ಸ್ವಾಮೀಜಿಯವರು ಹಾಡುವ ಕಾರಣ ಅವ್ಯಕ್ತ ಶಿಸ್ತು ರಂಗದಲ್ಲಿ ಮಾತ್ರವಲ್ಲ, ಪ್ರೇಕ್ಷಕರಲ್ಲೂ ಅನಾವರಣಗೊಳ್ಳುತ್ತದೆ, ಎನ್ನುತ್ತಾರೆ ಕಲಾವಿದ ಅಡ್ಕ ಗೋಪಾಲಕೃಷ್ಣ ಭಟ್.
                ಸ್ವಾಮೀಜಿಯವರ ಭಾಗವತಿಕೆಯನ್ನು ನೋಡಿದ್ದೇನೆ, ಕೇಳಿದ್ದೇನೆ, ಅನುಭವಿಸಿದ್ದೇನೆ. ಪಾತ್ರ ಮಾತ್ರವಲ್ಲ ಪಾತ್ರಧಾರಿಗೂ ಒಪ್ಪುವಂತೆ ಹಾಡುವುದು ಶ್ರೀಗಳ ವಿಶೇಷ. ಭಾವದ ಭಾಷೆಯನ್ನು ಉದ್ದೀಪನಗೊಳಿಸುವ ವಿಶೇಷತೆ. ಪದ್ಯಛೇದ, ಪದಛೇದದ ನಾಜೂಕುತನ ಅನನ್ಯ, ಸುಸ್ಪಷ್ಟ.  ರಂಗವು ಸುಭಗಕ್ಕೇರಿದಾಗ ಅನುಭವಿಸುವ ಆನಂದ ಅಪಾರ. ರಂಗಸೊಬಗಿಗೆ ಅರ್ಥವು ತೊಡಕಾದಾಗ ಶ್ರೀಗಳೊಳಗಿನ ನಿರದೇಶಕ ಜಾಗೃತನಾಗುತ್ತಾನೆ. ಯಾವಾಗ ನಿರ್ದೇಶಕ ಎದ್ದುನಿಂತನೋ ಆಗ ಅರ್ಥಧಾರಿ ಬೆವರದೆ ವಿಧಿಯಿಲ್ಲ!
                ಸ್ವಾಮೀಜಿ ಹಾಡುವಾಗ ರಾಗಗಳು ತನುವನ್ನು ನೇವರಿಸುತ್ತವೆ. ನಾದಗಳು ತನುಸ್ಪರ್ಶವನ್ನು ಬಯಸುತ್ತವೆ. ಹಾಡುತ್ತಾ, ತನ್ಮಯತೆಯನ್ನು ಹೊಂದಿ ಸುಖಿಸುತ್ತಾರೆ. ತನ್ಮಯತೆಯು ಶ್ರೀಗಳಿಗೆ ಪೂಜೆ. ವೇಷಧಾರಿ, ಅರ್ಥಧಾರಿಗೆ ಈ ಅವ್ಯಕ್ತ ಜಾಡು ಗೊತ್ತಾಗಿಬಿಟ್ಟರೆ ಭಾವವೇ ಬಂದು ಪರಿಚಯಿಸುತ್ತದೆ. ರಾಗಗಳ 'ಸುಖ' ಅನುಭವ ವೇದ್ಯವಾಗುತ್ತದೆ. ಶ್ರೀಗಳ ದುಃಖ, ಕರುಣ ರಸಗಳ ಹಾಡುಗಳು ನಮಗರಿವಿಲ್ಲದೆ ಲೀನವಾಗಿಸುತ್ತವೆ.
                 ಶ್ರೀಮಠದಲ್ಲಿ ಜರುಗಿದ ಋತಿಗಳೇ ಅರ್ಥಧಾರಿಗಳಾಗಿ ಜರುಗಿದ್ದ ತಾಳಮದ್ದಳೆಯೊಂದು ಈಗ ಇತಿಹಾಸ. ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರು, ಶ್ರೀ ಶ್ರೀ ವಿದ್ಯಾಭೂಷಣತೀರ್ಥ ಶ್ರೀಪಾದಂಗಳವರು (ಆಗ), ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳವರು ಭಾಗವಹಿಸಿದ್ದರು. ನಮ್ಮ ಸಾಂಸ್ಕೃತಿಕ ಮೌಲ್ಯಗಳನ್ನು ಕಲಾಮಾಧ್ಯಮವೊಂದರ ಮೂಲಕ ಜನರಿಗೆ ಮನದಟ್ಟು ಮಾಡುವುದು ಯತಿಧರ್ಮಕ್ಕೆ ಪೂರಕ, ಎನ್ನುತ್ತಾರೆ ಸ್ವಾಮೀಜಿ.
                  ಚಾತುರ್ಮಾಸ ವೃತಾಚರಣೆ ಎಂದಾಗ ಕಾಯಕಷ್ಟ ಸಹಜ. ವಿಶ್ರಾಂತಿ ದೂರ. ಹೀಗಿದ್ದೂ ಕಲಾಕಲಾಪಗಳನ್ನು ಕಾರ್ಯಕ್ರಮಗಳನ್ನು ಸ್ವಾಮೀಜಿ ವೀಕ್ಷಿಸುತ್ತಾರೆ, ವಿಮರ್ಶಿಸುತ್ತಾರೆ. ಕಲಾವಿದರನ್ನು ಮಾತನಾಡಿಸುತ್ತಾರೆ. ಯೋಗಕ್ಷೇಮ ವಿಚಾರಿಸುತ್ತಾರೆ. ಇಲ್ಲಿ ಯಕ್ಷಗಾನವು ಮನೋರಂಜನೆಯಲ್ಲ, ಅದು ಆರಾಧನಾ ಕಲೆ. ತೆಂಕುತಿಟ್ಟು, ಬಡಗುತಿಟ್ಟಿಗೆ ಸಮಾನ ಮಣೆ.
                   ಎಡನೀರು ಮೇಳಕ್ಕೆ ಬಹುತೇಕ ವರುಷಪೂರ್ತಿ ಹರಕೆ ಆಟಗಳು. ಅಲ್ಲೂ ಸಪ್ತಾಹ, ದಶಾಹಗಳ ಆಯೋಜನೆ. ಸ್ವಾಮೀಜಿಯ ನಿರ್ದೇಶನ, ಆಶಯವನ್ನು ಮೇಳದ ಎಲ್ಲಾ ಕಲಾವಿದರು ಗೌರವಿಸಿದ್ದಾರೆ, ಅನುಸರಿಸುತ್ತಿದ್ದಾರೆ. ಮೇಳವು ಮಠದಲ್ಲಿ ಪ್ರದರ್ಶನ ನೀಡುವಾಗ ಸ್ವಾಮೀಜಿ ಭಾಗವತಿಕೆ ಮಾಡುತ್ತಾರೆ. ಎಲ್ಲವೂ ಕಾಲಮಿತಿ ಪ್ರದರ್ಶನಗಳು. ಶ್ರೀಮಠಕ್ಕೆ ಆಗಮಿಸಿದವರು ಹೊಟ್ಟೆತುಂಬಾ ಉಂಡು ತೇಗಿದಾಗ ಮಾತ್ರ ಶ್ರೀಗಳಿಗೆ ಸಮಾಧಾನ. ಅದು ಮಠದ ಪರಂಪರೆ. ಎಡನೀರು ಯಕ್ಷಗಾನ ಸಪ್ತಾಹಕ್ಕೆ ನಾಲ್ಕು ದಶಕ ಮೀರಿತು.
                     ಈ ಬಾರಿ ಪುತ್ತೂರಿನ ಕೆಮ್ಮಾಯಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಎಡನೀರು ಶ್ರೀಗಳ ಚಾತುರ್ಮಾಸ್ಯ ವೃತಾಚರಣೆ. ಈ ಸಂದರ್ಭದಲ್ಲಿ ೨೦೧೬ ಆಗಸ್ಟ್ 9 ರಿಂದ 15ರ ತನಕ ಸಂಜೆ ಏಳೂವರೆಯಿಂದ ಹತ್ತರ ತನಕ ಯಕ್ಷಗಾನ ತಾಳಮದ್ದಳೆ ಸಪ್ತಾಹ ಸಂಪನ್ನವಾಗಲಿದೆ. ಭರತಾಗಮನ, ಭೀಷ್ಮವಿಜಯ, ಪಂಚವಟಿ, ಭೀಷ್ಮಸೇನಾಧಿಪತ್ಯ-ಕರ್ಮಬಂಧ, ವಾಲಿವಧೆ, ಸುಧನ್ವಾರಜುನ, ಮಾಗಧ ವಧೆ ಪ್ರಸಂಗಗಳ ಪ್ರಸ್ತುತಿ.

(ಚಿತ್ರ : ಉದಯ ಕಂಬಾರು, ನೀರ್ಚಾಲು)

ನೃತ್ಯಾರಾಧನೆಗೆ ಎರಕವಾದ ಯಕ್ಷಾರಾಧನೆ


             ವಿದುಷಿ ಸುಮಂಗಲಾ ರತ್ನಾಕರ್ ಯಾಕೋ ಕಾಲಿಗೆ ಚಕ್ರ ಕಟ್ಟಿಕೊಂಡಿದ್ದಾರೋ ಎನ್ನುವ ಗುಮಾನಿ! ನಿರಂತರ ಓಡಾಟ. ಕಲೆಯ ಹೊರತು ಅನ್ಯ ಮಾತುಕತೆಯಿಲ್ಲ. ಕಾರ್ಯಕ್ರಮಗಳಲ್ಲಿ ತುಂಬ ಓಡಾಡುವವರು. ಹಲವು ಜವಾಬ್ದಾರಿಗಳ ನಿಭಾವಣೆ. ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತುಕೊಳ್ಳುವುದೇ ಕಡಿಮೆ!
               ಸುಮಂಗಲಾ ಭರತನಾಟ್ಯ ಕಲಾವಿದೆ. ನಾಟ್ಯ ಕ್ಷೇತ್ರದ ಆಳ-ವಿಸ್ತಾರವನ್ನು ಬಲ್ಲವರು. ಸತತ ಅಧ್ಯಯನ-ವಿಮರ್ಶೆ. ಶಿಷ್ಯರ ರೂಪೀಕರಣ. ವಿಚಾರ ಮಂಥನ, ಪ್ರಾತ್ಯಕ್ಷಿಕೆ, ಪ್ರಬಂಧ.. ಹೀಗೆ ಆ ಕ್ಷೇತ್ರದ ಗರಿಷ್ಠ ಸಾಧ್ಯತೆಯನ್ನು ಆಪೋಶನ ಮಾಡಿಕೊಂಡವರು.
             ನಾನು ಹಲವು ವರುಷದಿಂದ ಭರತನಾಟ್ಯ, ಸಂಗೀತ, ಯಕ್ಷಗಾನ ಕಲಾವಿದರನ್ನು 'ಒಬ್ಬ ಕಲಾವಿದ'ನಾಗಿ ನೋಡುತ್ತಿದ್ದೇನೆ. ಭರತನಾಟ್ಯ ಪ್ರದರ್ಶನಕ್ಕೆ ಯಕ್ಷಗಾನದವರು ಮುಖ ಮಾಡುವುದಿಲ್ಲ. ಯಕ್ಷಗಾನದತ್ತ ಭರತನಾಟ್ಯ ಕಲಾವಿದ/ದೆಯರು ಇಣುಕುವುದಿಲ್ಲ. ಸಂಗೀತ ಕಲಾವಿದರು ಅವರಷ್ಟಕ್ಕೆ. ಹೀಗೆ ಒಂದು ಕಲಾ ಪ್ರಕಾರ ಮತ್ತೊಂದನ್ನು ಸ್ಪರ್ಶಿಸುವುದಿಲ್ಲ. ಹಾಗೆಂತ ಮೂರರಲ್ಲೂ ಆಸಕ್ತಿಯಿರುವವರೂ ಇದ್ದಾರೆ.
              ನನ್ನ ಗೊಣಗಾಟ ಅದಲ್ಲ. ಯಾವುದೇ ಕ್ಷೇತ್ರದ ಕಲಾವಿದರಿಗೆ ಅನ್ಯ ಕಲೆಗಳ ಕನಿಷ್ಠ ಪರಿಚಯವಾದರೂ ಬೇಕು. ಆಸಕ್ತಿ ಹುಟ್ಟಲು ಕಲಿಯಲೇ ಬೇಕು ಎಂದೇನೂ ಇಲ್ಲ. ಎಲ್ಲಾ ಕಲೆಗಳ ಅಂತಿಮ ಗುರಿ - ರಂಗಸುಖ ಅಲ್ವಾ. ಭರತನಾಟ್ಯ ಕಲಾವಿದೆಯಾದ ಸುಮಂಗಲಾ ರತ್ನಾಕರ್ ಅವರ ಸ್ವ-ಕ್ಷೇತ್ರದಲ್ಲಿ ತುಂಬು ಸಕ್ರಿಯ. ಜತೆಗೆ ಯಕ್ಷಗಾನವನ್ನೂ ತಲೆತುಂಬಿಕೊಂಡು ತಂಡ ಕಟ್ಟಿ ಪ್ರದರ್ಶನ ನೀಡುತ್ತಿರುವುದನ್ನು ನೋಡಿದರೆ ಖುಷಿ. ಜತೆಗೆ ಓರ್ವ ಯಕ್ಷಗಾನ ಕಲಾವಿದನಾಗಿ - ಛೇ.. ಅವರಂತೆ ಆಗುವುದಿಲ್ಲವಲ್ಲಾ - ಎನ್ನುವ ನಂಜು ನನಗರಿವಿಲ್ಲದೆ ಹುಟ್ಟಿಕೊಂಡಿದೆ!
               ಮಂಗಳೂರಿನ ಉರ್ವ 'ಯಕ್ಷಾರಾಧನಾ ಕಲಾ ಕೇಂದ್ರ'ವು ಸುಮಂಗಲಾರ ಕೂಸು. ಅದಕ್ಕೀಗ ಏಳರ ಹರೆಯ.  ಆರು ವರುಷಗಳಲ್ಲಿ ಕೇಂದ್ರವು ವಾರ್ಶಿಕ ಪ್ರದರ್ಶನಕ್ಕೆ ಮಾತ್ರ ತನ್ನನ್ನು ಒಡ್ಡಿಕೊಳ್ಳಲಿಲ್ಲ. ಒಂದೇ ಸೂರಿನಡಿ ಭರತನಾಟ್ಯದ ಗೆಜ್ಜೆಯ ಸದ್ದು, ಯಕ್ಷಗಾನದ ಜಾಗಟೆ ದನಿ. ಮಕ್ಕಳು, ಮಹಿಳೆಯರಲ್ಲಿ ನಮ್ಮ ಸಂಸ್ಕೃತಿ, ಪುರಾಣ, ಆಚಾರ, ವಿಚಾರಗಳ ಚಿಂತನೆ ಮೂಡಲು ಪೂರಕವಾದ ಮನಸ್ಸನ್ನು ಕಟ್ಟುವುದು ಕೇಂದ್ರದ ಉದ್ದೇಶ,ಎನ್ನುತ್ತಾರೆ. ಮನಸ್ಸಿನ ಅರಳುವಿಕೆಗೆ ಭರತನಾಟ್ಯ, ಬುದ್ಧಿಯ ವಿಕಸನಕ್ಕೆ ಯಕ್ಷಗಾನ.
              ಶಾಸ್ತ್ರೀಯ ಚೌಕಟ್ಟಿನೊಂದಿಗೆ ಯಕ್ಷಗಾನದಲ್ಲಿ ರಸೋತ್ಪತ್ತಿಯ ಸೃಷ್ಟಿ - ಸುಮಂಗಲಾರ ದೂರದೃಷ್ಟಿ. ವರ್ತಮಾನದ ಯಕ್ಷಗಾನದಲ್ಲಿ 'ರಸೋತ್ಪತ್ತಿ' ಹೊರತು ಪಡಿಸಿ ಮಿಕ್ಕೆಲ್ಲವೂ ಯಥೇಷ್ಟವಾಗಿದೆ! ಅತಿ ಕುಣಿತದ ಧಾವಂತದಲ್ಲಿ ಮಾತುಗಾರಿಕೆಗೆ ಏದುಸಿರು! ಹೆಚ್ಚು ಕುಣಿದರೆ 'ರೈಸುತ್ತದೆ' ಎನ್ನುವ ಭಾವ, ಭಾವನೆ. ಪ್ರೇಕ್ಷಕರಿಂದ ಚಪ್ಪಾಳೆ, ಶಿಳ್ಳೆಯೇ ಕುಣಿತಕ್ಕಿರುವ ಅಂತಿಮ ಮಾನದಂಡ ಎಂದು ಕಲಾವಿದರು (ಎಲ್ಲರೂ ಅಲ್ಲ) ತಿಳಿದಂತಿದೆ. ಅರ್ಥಗಾರಿಕೆ, ಭಾವನೆ, ಪಾತ್ರ ಸ್ವಭಾವಗಳನ್ನು ಕುಣಿತಗಳು ನುಂಗುತ್ತಿವೆ. ಈ ಹಿನ್ನೆಲೆಯಲ್ಲಿ ರಸೋತ್ಪತ್ತಿಯನ್ನು ರಂಗದಲ್ಲಿ ಪುನಃ ಸ್ಥಾಪಿಸುವ ಅಗತ್ಯವಿದೆ. ಸುಮಂಗಲಾ ಅವರ ಟೀಮ್ ಈ ದಿಸೆಯಲ್ಲಿ ಯೋಚಿಸುತ್ತಿರುವುದು ಶ್ಲಾಘ್ಯ.
                ಕಲಾಶಿಸ್ತಿನೊಂದಿಗೆ ತರಬೇತಿ. ಇಂದು ಯಕ್ಷಗಾನದ ತರಬೇತಿ ಕೇಂದ್ರಗಳು ವಿರಳವಾಗುತ್ತಿವೆ. ಸಂಘಗಳು, ಶಾಲೆಗಳಲ್ಲಿ ಅನುಭವಿ ಕಲಾವಿದರಿಂದ ತರಬೇತಿ ನಡೆಯುತ್ತಿದೆ. ಕಲಿಸುವ ಗುರುಗಳ ಅನುಭವ ಮತ್ತು ಬೌದ್ಧಿಕ ಸಾಮಥ್ರ್ಯದಂತೆ ವಿದ್ಯಾರ್ಥಿಗಳು ರೂಪುಗೊಳ್ಳುತ್ತಾರೆ. ಒಂದೆರಡು ಪ್ರದರ್ಶನದ ಬಳಿಕ ಬಹುತೇಕ ಕೇಂದ್ರಗಳು ಮೌನದತ್ತ ವಾಲುವುದನ್ನು ನೋಡುತ್ತಿದ್ದೇನೆ. ತರಬೇತಿಯಲ್ಲಿ ಕಲಾಶಿಸ್ತು ಎನ್ನುವ ವಿಚಾರ ತುಂಬಾ ವಿಶಾಲವಾದುದು. ನಿಭಾವಣೆ ಕಷ್ಟ. ಗುರುವಿನಲ್ಲಿ ಛಲವಿದ್ದರೆ ಕಷ್ಟವಲ್ಲ. ಸುಮಂಗಲಾ ಅವರಲ್ಲಿ ಇಂತಹ ಕಲಾಸೂಕ್ಷ್ಮ ವಿಚಾರಗಳು ಹುಟ್ಟಿಕೊಂಡಿರುವುದೇ ಗ್ರೇಟ್.
'ಯಕ್ಷೊಪಾಸನಾ ಶಿಬಿರ'ವು ಕೇಂದ್ರದ ಯಶಸ್ವೀ ಕಲಾಪ. ಯಕ್ಷ ವಿದ್ವಾಂಸರ, ಹಿರಿಯ ಕಲಾವಿದರ ಉಪಸ್ಥಿತಿ. ಮಾತುಗಾರಿಕೆ, ಭಾಷೆ, ವೈಚಾರಿಕತೆ, ಪಾತ್ರ ಚಿತ್ರಣ, ಪ್ರಸಂಗ ಪ್ರಸ್ತುತಿ.. ಮುಂತಾದ ಹೂರಣಗಳು. ಯಕ್ಷಗಾನದ ಕೆಲಸವೆಂದರೆ ಕೇವಲ ತರಬೇತಿ ಮತ್ತು ವೇಷ ಮಾಡುವುದು ಅಲ್ಲ. ಒಂದೊಂದು ವಿಭಾಗದ ಬೆಳವಣಿಗೆಗೆ ಆಗುತ್ತಾ ಇರಬೇಕು. ಶಿಬಿರಗಳು ಹೊಸದಾಗಿ ರಂಗ ಪ್ರವೇಶಿಸುವವರಿಗೆ ತುಂಬಾ ಸಹಕಾರಿ, ಎನ್ನುತ್ತಾರೆ. ನಮ್ಮ ನಡುವಿನ ಸಂಘಸಂಸ್ಥೆಗಳು ಆಟ-ಕೂಟದ ಜತೆಗೆ ಇಂತಹ ಹೂರಣವನ್ನು ಪೋಣಿಸಿಕೊಳ್ಳಬಹುದು.  
               ಯಕ್ಷಾರಾಧನಾ ಕಲಾ ಕೇಂದ್ರವು ಎಪ್ಪತ್ತೈದಕ್ಕೂ ಮಿಕ್ಕಿ ಪ್ರದರ್ಶನವನ್ನು ನೀಡಿದೆ. ಮಹಿಳಾ ತಾಳಮದ್ದಳೆ ತಂಡವು ಸುಪುಷ್ಟವಾಗಿದೆ. ಸಂದರ್ಭಾನುಸಾರ ಪ್ರಾತ್ಯಕ್ಷಿಕೆ, ಕಲಾ ಮಾತುಕತೆಯನ್ನು ಏರ್ಪಡಿಸುತ್ತಿದೆ. ಸುಮಂಗಲಾರಿಗೆ ಎಲ್ಲಾ ಕಲಾ ಪ್ರಕಾರಗಳಲ್ಲಿ ಆಸಕ್ತಿಯಿರುವುದರಿಂದ ಸಹಜವಾಗಿಯೇ ಕಲಾ ಮನಸ್ಸು ರೂಪುಗೊಂಡಿದೆ. ಜತೆ ಕಲಾವಿದರೂ ಅದೇ ಜಾಡಿನಲ್ಲಿ ಸಾಗುತ್ತಿದ್ದಾರೆ. ಈಗ ಕಲಾ ಕೇಂದ್ರಕ್ಕೆ ಏಳರ ಸಂಭ್ರಮ. ೨೦೧೬ ಆಗಸ್ಟ್ 21 ರವಿವಾರದಂದು ಸಂಜೆ 4 ಗಂಟೆಯಿಂದ ಸುರತ್ಕಲ್ ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಳದ ವಠಾರದಲ್ಲಿ ಕಲಾ ಸಂಭ್ರಮ.
                ಪರಂಪರೆಯ ಹಾದಿಯನ್ನು ಬಿಡದೆ, ಅಪ್ಪಟ ಯಕ್ಷಗಾನವನ್ನು ಮೈತುಂಬಿಕೊಂಡ ಕಟೀಲು ಮೇಳದ ಕಲಾವಿದ ಕೈರಂಗಳ ಕೃಷ್ಣ ಮೂಲ್ಯರಿಗೆ 'ಯಕ್ಷಕಲಾರಾಧಕ' ಪ್ರಶಸ್ತಿ, ಹವ್ಯಾಸಿ ಕಲಾವಿದರಾಗಿದ್ದು ವೃತ್ತಿ ರಂಗದಿಂದ ಮೆಚ್ಚುಗೆ ಪಡೆಯುತ್ತಿರುವ ಕೃಷ್ಣಪ್ರಕಾಶ ಉಳಿತ್ತಾಯರಿಗೆ 'ಯುವ ಯಕ್ಷಕಲಾರಾಧಕ' ಪ್ರಶಸ್ತಿ ಪ್ರದಾನ. ಉಳಿತ್ತಾಯರು ಕನರ್ಾಟಕ ಬ್ಯಾಂಕಿನ ಅಧಿಕಾರಿ. ಹಿಮ್ಮೇಳದ ಸೂಕ್ಷ್ಮ ಸಂಗತಿಗಳನ್ನು ಗೌರವಿಸಿದ ಮದ್ದಳೆಗಾರ, ಲೇಖಕ. ಸುಮಂಗಲಾ ಮತ್ತು ಪೂರ್ಣಿಮಾ ಯತೀಶ ರೈ ನಿರ್ದೇಶನದ 'ಶ್ರೀ ಕೃಷ್ಣ ಲೀಲೆ ಮತ್ತು ಅಂಬಾ ಶಪಥ' ಆಖ್ಯಾನಗಳ ಪ್ರದರ್ಶನ ಜರುಗಲಿದೆ. 
                ನಮ್ಮ ನಡುವೆ ನೂರಾರು ಮಹಿಳಾ ತಾಳಮದ್ದಳೆ, ಆಟಗಳ ತಂಡಗಳಿರುವುದು ಹೆಮ್ಮೆಯ ವಿಚಾರ. ಸ್ವ-ಬೆಳವಣಿಗೆ, ಬೌದ್ಧಿಕ ಗಟ್ಟಿತನ ಮತ್ತು ಯಕ್ಷಗಾನ ರಂಗದ ಸರ್ವತೋಮುಖ ಜ್ಞಾನಾವೃದ್ಧಿಗೆ ಪೂರಕವಾದ ಕನಿಷ್ಠ ಕಾರ್ಯಹೂರಣಗಳ ಸುಪುಷ್ಟ ಮರುಪೋಣಿಕೆ ಆಗಬೇಕಾಗಿದೆ. ದೂರದೂರದ ತಂಡಗಳೊಳಗೆ ಸಂಪರ್ಕ ಸೇತುವಾಗಬೇಕು. ಮಂಗಳೂರು ನಗರವನ್ನು ಕೇಂದ್ರವಾಗಿಟ್ಟುಕೊಂಡು ಸುಮಂಗಲಾ ರತ್ನಾಕರ್ ಯಕ್ಷಗಾನದ ಸಂಘಟನೆಯಲ್ಲಿ ದೊಡ್ಡ ಹೆಜ್ಜೆ ಊರಿದ್ದಾರೆ. ಅದನ್ನು ನೋಡುವ, ಮನನಿಸುವ, ಖುಷಿಪಡುವ, ಬೆನ್ನುತಟ್ಟುವ, ಪ್ರೋತ್ಸಾಹಿಸುವ, ಹೆಗಲು ಕೊಡುವ ಯಕ್ಷಮನಸ್ಸುಗಳು ತಯಾರಾಗುವುದು ಜತೆಜತೆಗೆ ಆಗಬೇಕಾಗಿದೆ. 
(ಪ್ರಜಾವಾಣಿ | ದಧಿಗಿಣತೋ ಅಂಕಣ)

ಕಲಾವಿದನಿಗೂ ಮನದ ಮಾತಿದೆ              ಜುಲೈ ತಿಂಗಳಲ್ಲಿ ಮಿತ್ರ ವಸಂತ ಶೆಟ್ಟಿ ಬೆಳ್ಳಾರೆಯವರಿಂದ ಮಿಂಚಂಚೆ - ದೆಹಲಿಯಲ್ಲಿ ಪ್ರಥಮ ಬಾರಿಗೆ ಅಹೋರಾತ್ರಿ ಯಕ್ಷಗಾನ ಪ್ರದರ್ಶನ ಜರುಗಲಿದೆ. ಸಾಲಿಗ್ರಾಮ ಮೇಳದವರಿಂದ 'ಭೀಷ್ಮ ವಿಜಯ' ಮತ್ತು 'ನಾಗಶ್ರೀ' ಪ್ರಸಂಗಗಳು. ಕಲಾವಿದರೊಂದಿಗೆ ಮುಖಾಮುಖಿ. ಕಲಾವಿದರನ್ನು ಪ್ರೇಕ್ಷಣೀಯ ಸ್ಥಳಗಳಿಗೆ ಒಯ್ಯುವ ವ್ಯವಸ್ಥೆ. ಯಥಾಸಾಧ್ಯ ಪಾರಂಪರಿಕ ಕ್ರಮಗಳಿಗೆ ಒತ್ತು. ದೆಹಲಿ ಕರ್ನಾಟಕ ಸಂಘ ಮತ್ತು ಅನ್ಯಾನ್ಯ ಸಂಸ್ಥೆಗಳ ಆಯೋಜನೆ.
            ದೇಶದ ರಾಜಧಾನಿಯಲ್ಲಿರುವ ಕನ್ನಡ ಮೂಲದ ಯಕ್ಷಪ್ರಿಯರಿಗೆ ಖುಷಿಯ ಸುದ್ದಿ. ಬಾಲ್ಯದಲ್ಲಿ ನೋಡಿದ ಆಟದ ನೆನಹು. ವೃತ್ತಿ ಜಂಜಾಟ ಮತ್ತು ನಗರದ ಒತ್ತಡಗಳಿಗೆ ಒಂದು ರಾತ್ರಿ ರಿಲಾಕ್ಸ್. ಕಲಾವಿದರೊಂದಿಗೆ ಮುಖಿಮುಖಿಯ ಕಲಾಪವನ್ನು ಪೋಣಿಸಿರುವುದು ಖುಷಿಯ ಸಂಗತಿ. ನಾವೆಲ್ಲಾ ಚೌಕಿ, ರಂಗಸ್ಥಳಕ್ಕೆ ಕಲಾವಿದರನ್ನು ಸೀಮಿತಗೊಳಿಸಿದ್ದೇವೆ. ಅವರ ಮಾತಿಗೆ ಕಿವಿಯಾಗುವ ಅವಕಾಶಗಳನ್ನು ಎಷ್ಟು ಮಂದಿ ಆಯೋಜಿಸಿದ್ದಾರೆ?
             ದಿನಮಾನಗಳು ಬದಲಾಗಿವೆ. ಕಲಾವಿದ ವಿದ್ಯಾವಂತನಾಗಿದ್ದಾನೆ. ಲೋಕಗಳನ್ನು ತಿಳಿಯುವ ಸಾಮಥ್ರ್ಯ ಹೊಂದಿದ್ದಾನೆ. ಆಧುನಿಕ ತಂತ್ರಜ್ಞಾನಕ್ಕೆ ಹೊಂದಿಕೊಂಡಿದ್ದಾನೆ. ಅಂಗೈಗೆ ಬಗೆಬಗೆಯ ಮೊಬೈಲ್ಗಳು ಅಂಟಿವೆ. ಆತನಿಗೂ ಒಂದು ಮನಸ್ಸಿದೆ. ಆಶೆಯಿದೆ. ಕನಸಿದೆ. ದೂರದೃಷ್ಟಿಯಿದೆ. ಮನೆಮಂದಿಯಿದ್ದಾರೆ. ಅವನಿಗೂ ಏನನ್ನೋ ಹೇಳಬೇಕೆಂಬ ತುಡಿತವಿದೆ. ಅದಕ್ಕೆಲ್ಲಿ ಅವಕಾಶವಿದೆ. ಕಲಾವಿದನ ಮೇಲೆ ಹಲವು ಬಗೆಯ ನಿರೀಕ್ಷೆಯನ್ನಿಟ್ಟ 'ಅಭಿಮಾನಿ'ಗಳು ಹೊಗಳಿಕೆಯ ಕೂಪಕ್ಕೆ ತಳ್ಳುತ್ತಿದ್ದಾರೆ! ಅದರಿಂದ ಏಳಲಾಗದೆ, ಬಿಡಿಸಿಕೊಳ್ಳಲಾಗದೆ ಒದ್ದಾಡುತ್ತಿದ್ದಾನೆ! ಎಬ್ಬಿಸುವವರು ಬೇಕಾಗಿದ್ದಾರೆ.
           ಕಲಾವಿದನಿಗೂ ಮಿತಿಯಿದೆ. ಯಕ್ಷಗಾನದ ಹೊರತಾದ ಯೋಚನೆಗಳು ಸುಳಿಯುವುದಿಲ್ಲ. ಕಲೆಗೆ ಅಂಟಿದ ಮನಸ್ಸಿಗೆ ಬೇರೆ ವಿಚಾರಗಳು ನಂಟಾಗುವುದಿಲ್ಲ. ಅದರ ಹೊರತು ಯೋಚಿಸುವುದಕ್ಕೆ ವ್ಯವಧಾನವಿಲ್ಲ, ಪುರುಸೊತ್ತಿಲ್ಲ. ಗೊತ್ತಿಲ್ಲ! ವರ್ತಮಾನದ ಆಗುಹೋಗುಗಳಿಗೆ ಅಪ್ಡೇಟ್ ಆಗುವ ಜ್ಞಾನ ಬೇಕಾಗಿದೆ. ಹಾಗೆಂತ ಶೈಕ್ಷಣಿಕ ಹಿನ್ನೆಲೆಯ ಹಲವು ಕಲಾವಿದರು ವರ್ತಮಾನಕ್ಕೆ ಸ್ಪಂದಿಸುತ್ತಿದ್ದಾರೆ. ಇಂತಹ ಮಾತುಕತೆಯಲ್ಲಿ ವೈಚಾರಿಕ ಗಾಢತೆ ಇಲ್ಲದಿರಬಹುದು, ಕೇವಲ ಉಭಯಕುಶಲೋಪರಿಯೂ ಸಾಕು. ಸಂಘಟಕರ ಜತೆ ಮನಸ್ಸನ್ನು ಹಂಚಿಕೊಳ್ಳುವುದಕ್ಕಿದು ವೇದಿಕೆ. ಈ ಎಲ್ಲಾ ವಿಚಾರಗಳನ್ನು ಮುಂದಿಟ್ಟು ನೋಡಿದಾಗ ದೆಹಲಿಯಲ್ಲಿ ಕಲಾವಿದರೊಂದಿಗೆ ಮುಖಾಮುಖಿ ಏರ್ಪಡಿಸಿದ್ದು ಉತ್ತಮ ಬೆಳವಣಿಗೆ.
          1980ರ ಆಜೂಬಾಜಿನಲ್ಲಿ ಸಾಲಿಗ್ರಾಮ ಮೇಳದಲ್ಲಿ ನಾಗಶ್ರೀ ಮತ್ತು ಸಮಗ್ರ ಭೀಷ್ಮ ಪ್ರಸಂಗಗಳು ಜನಮೆಚ್ಚುಗೆ ಗಳಿಸಿತ್ತು. ಕಲಾವಿದರಿಗೂ ತಾರಾಮೌಲ್ಯ ಬಂದಿತ್ತು. ಈ ಎರಡೂ ಪ್ರಸಂಗಗಳು ದೆಹಲಿಯಲ್ಲಿ ಪ್ರದರ್ಶಿತವಾಗಿತ್ತು. ತಾರಾಮೌಲ್ಯ ಪಡೆದ ಕಲಾವಿದರ ತಂಡಗಳು ದೆಹಲಿಯಲ್ಲಿ ಪ್ರದರ್ಶನ ನೀಡಿವೆ. ಆದರೆ ಇಡೀ ಮೇಳವೊಂದು ಆಗಮಿಸಿ ರಾಷ್ಟ್ರದ ರಾಜಧಾನಿಯಲ್ಲಿ ಆಟ ಆಡಿದ್ದು, ಅದರಲ್ಲಿ ಭಾಗವಹಿಸಲು ಅವಕಾಶ ಪಡೆದುದು ತುಂಬಾ ಖುಷಿ ಪಡುವ ವಿಚಾರ, ಎಂಬ ಅನುಭವ ಹಂಚಿಕೊಳ್ಳುತ್ತಾರೆ ಕಲಾವಿದ ಶಶಿಕಾಂತ ಶೆಟ್ಟಿ ಕಾರ್ಕಳ. ಕಲಾವಿದರೊಂದಿಗೆ ಮಾತುಕತೆ ಹೊಸ ಕಾನ್ಸೆಪ್ಟ್. ದೆಹಲಿಗೆ ಬಂದ ಕಲಾವಿದರು ಮನತುಂಬಿ ಭಾವನೆಗಳನ್ನು ಹಂಚಿಕೊಂಡರು. ಎಲ್ಲರೂ ಮೇಳದ ಯಜಮಾನರ ಕುರಿತು ಗೌರವವಾಗಿ ಮಾತನಾಡಿದ್ದು ಮನ ತುಂಬಿ ಬಂತು  ಎನ್ನುತ್ತಾರೆ, ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ ಮತ್ತು ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷ ಸಕಾರಾಮ ಉಪ್ಪೂರು.
          ಈ ಹಿನ್ನೆಲೆಯಲ್ಲಿ ಒಂದಷ್ಟು ವಿಚಾರ ಹಂಚಿಕೊಳ್ಳಬೇಕೆನಿಸುತ್ತದೆ. ಕಮ್ಮಟ, ಪ್ರಾತ್ಯಕ್ಷಿಕೆ, ವಿಚಾರಗೋಷ್ಠಿಗಳು ಹಲವು ಕಾಲದಿಂದ ನಡೆಯುತ್ತಲೇ ಇವೆ. ಪ್ರಾತ್ಯಕ್ಷಿಕೆಗಳನ್ನು ಸಂಘಟಿಸುವ ವ್ಯವಸ್ಥೆಯನ್ನು ಹೊಂದಿಕೊಂಡು ಕಾರ್ಯಹೂರಣ. ಗೋಷ್ಠಿಗಳಲ್ಲಿ ಕಲಾವಿದರು ಭಾಗವಹಿಸುತ್ತಿಲ್ಲ. ಎಷ್ಟೋ ಸಂದರ್ಭದಲ್ಲಿ ಅವರಿಗೆ ವಿಚಾರವೇ ತಿಳಿದಿರುವುದಿಲ್ಲ. ತಿಳಿದಿದ್ದರೂ 'ನಮಗೆ ಅದರಲ್ಲಿ ಕಲಿಯುವುದಕ್ಕೆ ಏನಿದೆ' ಎನ್ನುವ ಉಡಾಫೆ. 'ತನಗೆ ಎಲ್ಲಾ ಕಲಿತು ಆಯಿತು' ಎನ್ನುವ ಮನಃಸ್ಥಿತಿ. ಇಂತಹ ಸನ್ನಿವೇಶದಲ್ಲಿ ಮೇಳಗಳ ಕಲಾವಿದರೊಂದಿಗೆ ಮುಖಾಮುಖಿ ಹೆಚ್ಚು ಪರಿಣಾಮಕಾರಿಯಾಗಬಹುದೇನೋ? ಒಂದೊಂದು ಮೇಳಗಳ ಕಲಾವಿದರು ಒಟ್ಟಾದರೂ ಸಾಕು.
            ಪ್ರಾತ್ಯಕ್ಷಿಕೆ, ಸಂವಾದಗಳು ಇಂತಹ ತಂಡಗಳಲ್ಲಿ ಪ್ರಸ್ತುತಿಯಾಗಬೇಕು. ರಂಗದಲ್ಲದು ನಿರೀಕ್ಷಿತ ಮಟ್ಟದಲ್ಲಿ ಅನುಷ್ಠಾನವಾದೀತು ಎನ್ನುವಂತಿಲ್ಲ. ಆದರೆ ವಿಚಾರಗಳನ್ನು ಕಲಾವಿದರಿಗೆ ತಲುಪಿಸಲು ಸಹಕಾರಿ.  ಹಿಂದೊಮ್ಮೆ ಪುತ್ತೂರಿನಲ್ಲಿ ಕೊಂಡದಕುಳಿ ರಾಮಚಂದ್ರ ಹೆಗಡೆಯವರ ಮೇಳದ ಸಪ್ತಾಹ ಸಂದರ್ಭದಲ್ಲಿ ಕಲಾವಿದರೊಂದಿಗೆ ಮುಖಾಮುಖಿ ನಡೆದಿತ್ತು. ಆಸಕ್ತ ಕಲಾವಿದರು, ಅಭಿಮಾನಿಗಳು ಜತೆಗಿದ್ದರು. ಪ್ರದರ್ಶನ ಸಿದ್ಧತೆ, ಅಭಿವ್ಯಕ್ತಿ, ಪ್ರಸಂಗದ ಎಡಿಟಿಂಗ್, ಸಂಭಾಷಣೆ, ಅವಧಿಯೊಳಗೆ ಮುಗಿಸುವ ತಯಾರಿ.. ಇವೇ ಮುಂತಾದ ವಿಚಾರಗಳು ಹಾದುಹೋಗಿದ್ದುವು. ಕಲಾವಿದರ ಕಷ್ಟ-ಸುಖಗಳಿಗೆ ವೇದಿಕೆಯಾಗಿತ್ತು. ಇದೆಲ್ಲಾ ಹೊಟ್ಟೆಪಾಡಿನ ವಿಚಾರವಾದರೂ ಕಲಾವಿದ ರಂಗಕ್ಕೆ ನ್ಯಾಯ ಒದಗಿಸಬೇಕು, ಎನ್ನುವ ಕೊಂಡದಕುಳಿಯವರ ಮಾತನ್ನು ನೆನಪಿಟ್ಟುಕೊಂಡಿದ್ದೇನೆ
             ಎಲ್ಲಾ ಕಲಾವಿದರೂ ಈ ಆಶಯಕ್ಕೆ ಸ್ಪಂದಿಸುವುದು ಕಷ್ಟ. ಸಹಜವಾಗಿ ಅಂಟಿರಬಹುದಾದ ಪ್ರತಿಷ್ಠೆ, ವಿಚಾರಗಳನ್ನು ಹಗುರವಾಗಿ ಕಾಣುವ ಮನಃಸ್ಥಿತಿ, ರಂಗದ ಸೀಮಿತ ಸ್ಕ್ರಿಪ್ಟಿಗೆ ಒಗ್ಗಿಕೊಂಡ ಮನಸ್ಸಿಗೆ ಹೊರ ವಿಚಾರಗಳು ಕಿರಿಕಿರಿಯಾಗುವ ಸಾಧ್ಯತೆ ನಿಚ್ಚಳ. 'ನಾನಿರುವುದು ಹೀಗೆ', 'ಬೇಕಾದರೆ ಪ್ರೇಕ್ಷಕರು ಒಪ್ಪಿಕೊಳ್ಳಲಿ, ಬಿಡಲಿ' ಎನ್ನುವ ಮನಃಸ್ಥಿತಿ. 'ತಾನು ಏನು ಮಾಡಿದರೂ ಅಭಿಮಾನಿಗಳು ಸ್ವೀಕರಿಸುತ್ತಾರೆ,' ಎಂಬ ಮಗದೊಂದು ವರ್ಗ. ಏನೇ ಇರಲಿ, ಸಮಗ್ರ ಯಕ್ಷಗಾನದ ಕಲ್ಪನೆಯ ಮನಃಸ್ಥಿತಿ ರೂಪುಗೊಳ್ಳಬೇಕಷ್ಟೇ.
              ಇಂದು ಕಲಾವಿದರಿಗೆ ನೆರಳಾಗುವ ಎಷ್ಟು ವ್ಯವಸ್ಥೆಗಳಿಲ್ಲ. ಉಡುಪಿಯ ಕಲಾರಂಗ, ಪಟ್ಲ ಪೌಂಡೇಶನ್ ಮತ್ತು ತೆಂಕು-ಬಡಗು ತಿಟ್ಟಿನಲ್ಲಿರುವ ಸಂಘಗಳು ಕಲಾವಿದರ ಯೋಗಕ್ಷೇಮವನ್ನು ಹೊತ್ತಿದೆ. ಕಲಾರಂಗವು ವಾರ್ಶಿಕವಾಗಿ ಸಮಾವೇಶವನ್ನು ಏರ್ಪಡಿಸುತ್ತಿದೆ. ಇವೆಲ್ಲಾ ಸುಭಗದ ಬದುಕಿಗೆ ಸಂಬಂಧಿಸಿದ ವಿಚಾರಗಳು. ಶೈಕ್ಷಣಿಕವಾಗಿ ಪಕ್ವಗೊಳಿಸುವ, ಬುದ್ಧಿಯನ್ನು ಜಾಗೃತಗೊಳಿಸುವ, ಅರಿವನ್ನು ಹೆಚ್ಚಿಸುವ, ಜ್ಞಾನವನ್ನು ವೃದ್ಧಿಸುವ ಕಾರ್ಯಕ್ರಮಗಳು ಬೇಕಾಗಿವೆ. ಅವುಗಳ ಅನುಷ್ಠಾನವು ದೊಡ್ಡ ಸಮೂಹಕ್ಕೆ ಕಷ್ಟ. ಚಿಕ್ಕಪುಟ್ಟ ಗುಂಪುಗಳಲ್ಲಿ ಸಾಧ್ಯ. ಇದರಿಂದ ವೈಯಕ್ತಿಕವಾಗಿ ಕಲಾವಿದನೂ ಬೆಳೆಯುತ್ತಾನೆ. ರಂಗದಲ್ಲೂ ಬದಲಾವಣೆ ಕಾಣಬಹುದು. ಥಿಯರಿಗಳು ಮನಸ್ಸಿನೊಳಗೆ ಇಳಿಯುವುದು ನಿಧಾನ.
ಇವನ್ನೆಲ್ಲಾ ಬರೆಯುವುದು ಸುಲಭ ಅಂತ ಗೊತ್ತಿದೆ. ಬದಲಾವಣೆಯನ್ನು, ಸ್ವ-ಅಭಿವೃದ್ಧಿಯನ್ನು (ಆರ್ಥಿಕವಾಗಿ ಅಲ್ಲ) ಬಯಸುವ ಕಲಾವಿದರು ಖಂಡಿತವಾಗಿ ಸ್ಪಂದಿಸಿಯಾರು, ಸ್ಪಂದಿಸಬೇಕು. ಇಲ್ಲದಿದ್ದರೆ ಸಂಭಾವನೆಯ 'ಕವರಿನೊಳಗೆ' ರಂಗಬದುಕಿನ ಬಲೆ ನೇಯುತ್ತಾ ಇರುತ್ತದಷ್ಟೇ.
             ದೆಹಲಿ ಕರ್ನಾಟಕ ಸಂಘವು ಕಲಾವಿದರ ಮತಿಗೆ, ಮಾತಿಗೆ, ಮನಸ್ಸಿಗೆ ಮಾನ ಕೊಟ್ಟಿದೆ. ಹೊಸ ಹಾದಿ ತೋರಿದೆ.

(ಪ್ರಜಾವಾಣಿ | ದಧಿಗಿಣತೋ ಅಂಕಣ)

Friday, September 2, 2016

ಮೋಹದ ಕಚಗುಳಿಗೆ ಭಾವದ ಭಾರ
                  ಯಕ್ಷಗಾನ ಆಟಗಳಲ್ಲಿ ರಂಗ ಸುಖದ ಪದರ ಯಾಕೆ ತೆಳುವಾಗಿದೆ?,  ಹವ್ಯಾಸಿಯಾಗಿ ವೇಷಮಾಡುವ ಖಯಾಲಿಯ ನನ್ನನ್ನು ಆಗಾಗ್ಗೆ ಕಾಡುವ ಪ್ರಶ್ನೆ. ವೇಷವೋ, ಕಲಾವಿದನೋ, ಹಿಮ್ಮೇಳವೋ... ಅರ್ಥವಾಗದೆ ಅರ್ಥವನ್ನು ಹುಡುಕುತ್ತಿದ್ದೇನೆ! ಅರ್ಥ ಆಗದೇ ಇರುವುದು ನನ್ನ ದೌರ್ಬಲ್ಯ! ಮಿತಿ, ಮನಃಸ್ಥಿತಿ. ಬಹುತೇಕ ಸಂದರ್ಭಗಳಲ್ಲಿ ಪಾತ್ರದ ಬದಲು ವೇಷಧಾರಿಯೇ ಕಣ್ಮುಂದೆ ಕಾಣುತ್ತಿರುತ್ತಾರೆ. ಪೌರಾಣಿಕ ಲೋಕವನ್ನು ರಂಗವು ಕಟ್ಟಿಕೊಡುವಲ್ಲಿ ಸೊರಗುತ್ತಿದ್ದರೂ ಆಟವು 'ರೈಸುತ್ತಿದೆ'!
                ಪುತ್ತೂರಿನ ಕೆಮ್ಮಾಯಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಎಡನೀರು ಮಠಾಧೀಶ ಶ್ರೀ ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರ 'ಚಾತುರ್ಮಾಸ್ಯ ವೃತಾಚರಣೆ'.  ಈ ಸಂದರ್ಭದಲ್ಲಿ - 27-7-2016- ಮಂಟಪ ಪ್ರಭಾಕರ ಉಪಾಧ್ಯರ 'ಮೋಹ ಮೇನಕೆ' ಪ್ರದರ್ಶನ. ಎರಡು ಗಂಟೆಗಳ ಕೌಶಿಕ ಚರಿತ್ರೆ ಆಖ್ಯಾನ. ಪ್ರದರ್ಶನ ಮುಗಿದಾಗ ಕೆಲವು ಚೋದ್ಯಗಳಿಗೆ ಉತ್ತರ ಸಿಕ್ಕಿತ್ತು.
              ರಂಗವನ್ನು ವೀಕ್ಷಿಸುತ್ತಾ ಹೋದಂತೆ ನಮಗರಿವಿಲ್ಲದೆ ಭಾವದೊಳಗಿಳಿಯುವುದೇ ರಂಗಸುಖ. ಪಾತ್ರವೊಂದರ ನಿರ್ವಹಣೆಯಲ್ಲಿ ಸೂಕ್ಷ್ಮ ಸಂಗತಿಗಳು ಕ್ಷಿಪ್ರವಾಗಿ ಹಾದುಹೋದಾಗ ಬುದ್ಧಿ ಚುರುಕಾಗುತ್ತದೆ. ಏಕಾಗ್ರತೆಯತ್ತ ವಾಲುತ್ತೇವೆ. ಆವಾಗಲೇ ಭಾವಸೂಕ್ಷ್ಮತೆಯನ್ನು ಅರ್ಥಮಾಡಿಕೊಳ್ಳುವ ಅರ್ಹತೆ ಬಂದುಬಿಡುತ್ತದೆ. ಯಾವಾಗ ಅರ್ಹತೆ ಬಂತೋ ಆಗ ರಂಗಸುಖದ ಬಾಗಿಲು ತೆರೆದುಕೊಳ್ಳುತ್ತದೆ. ಅನುಭವಿಸಲು ಮನಸ್ಸು ಸಜ್ಜಾಗುತ್ತದೆ.
                  ಮಂಟಪ ತಂಡದ 'ಮೋಹ ಮೇನಕೆ'ಯು ರಂಗಸುಖವನ್ನು ಕೊಡುವ ಬಗೆಯಿದು. ಕುಣಿತಗಳ ಲಂಬನವಿಲ್ಲ. ಭಾವಾಭಿವ್ಯಕ್ತಿಗೆ ಒತ್ತು. ರಸಭಂಗ ವಿಚಾರಗಳ ನುಸುಳುವಿಕೆಯಿಲ್ಲ. ತ್ರಿವುಡೆ ತಾಳಗಳ ಪದ್ಯಗಳು ಬಂದಾಗ ಹಿಮ್ಮೇಳ ಗೆಜಲುವುದಿಲ್ಲ! ಮದ್ದಳೆ, ಚೆಂಡೆಗಳು ಅನಗತ್ಯವಾಗಿ ಸದ್ದುಮಾಡುವುದಿಲ್ಲ. ವೈಯಕ್ತಿಕ ವಿಚಾರಗಳ ಹಿಂಸೆಯಿಲ್ಲ. ಪ್ರೇಕ್ಷಕರನ್ನು ನಗಿಸಲೇಬೇಕೆಂಬ ಹಠವಿಲ್ಲ. ಸನ್ನಿವೇಶ ಪೋಷಣೆಗೆ ಪೂರಕವಾಗುವಂತಹ ಪಾತ್ರಗಳ ಆಯ್ಕೆ.
                 ರಂಗಸುಖದ ಅನುಭವ ಹೇಳುವಾಗ ಇಷ್ಟು ಹೇಳಲೇಬೇಕಲ್ವಾ. ಇದೇನೂ ಹೊಗಳಿಕೆಯಲ್ಲ. ಕೌಶಿಕ, ಮೇನಕೆ, ಮನ್ಮಥ, ವಸಂತ, ನಾರದ, ಕಣ್ವ ಪಾತ್ರಗಳು ರಂಗವನ್ನು ಗೆದ್ದಿವೆ. ಇಲ್ಲಿ ಮನದೊಳಿಗೆ ಸ್ಥಾಪಿಸಲ್ಪಟ್ಟ 'ರೈಸುವಿಕೆ' ಇಲ್ಲದಿರಬಹುದು. ಆದರೆ ಪಾತ್ರವೊಂದರ ಪೂರ್ತಿ ಚಿತ್ರಣವನ್ನು ಕೊಡುವಲ್ಲಿ ಮಂಟಪರ ಮೇನಕೆಯು ಸುಪುಷ್ಟವಾಗಿತ್ತು. ಭಾವಕ್ಕೂ ಭಾಷೆಯಿದೆ. ಆ ಭಾಷೆಗೂ ಶಿಷ್ಟತೆಯಿದೆ. ಶಿಸ್ತಿನ ಆವರಣವಿದೆ. ಪೌರಾಣಿಕ ಎನ್ನುವ ಪ್ರಜ್ಞೆಯಿದೆ.
                ಮೇನಕೆ ವೇಶ್ಯೆಯಲ್ಲ. ಕೌಶಿಕ ಕಾಮಾಂಧನಲ್ಲ. ಕೌಶಿಕನನ್ನು ಒಲಿಸಿಕೊಳ್ಳುವುದು ಮೇನಕೆಗೆ ಅಷ್ಟು ಸುಲಭವಲ್ಲ. ಈ ಪ್ರಜ್ಞೆಗೆ ಹೆಚ್ಚು ಒತ್ತು ಕೊಟ್ಟಿದ್ದೇವೆ, ಎನ್ನುತ್ತಾರೆ ಮಂಟಪರು. ಶೃಂಗಾರ ಸನ್ನಿವೇಶದಲ್ಲಿ ವಿಶ್ವಾಮಿತ್ರ-ಮೇನಕೆ ಸನ್ನಿವೇಶವು ಬಹುಕಡೆ ತಲೆ ತಗ್ಗಿಸುವಷ್ಟು ಅಗ್ಗವಾಗಿ ಸಂಭಾಷಣೆ ಲಂಬಿತವಾಗುತ್ತದೆ. ಅಶ್ಲೀಲದ ಸೋಂಕಿಲ್ಲದೆ ಮಂಟಪರು ಮೇನಕೆಯನ್ನು ಕಡೆದಿದ್ದಾರೆ. ಹಾಗಾದರೆ ಆಶ್ಲೀಲ ಇಲ್ಲವೋ? ಭಾವದಲ್ಲಿದೆ, ಮಾತಿನಲ್ಲಿಲ್ಲ. ಅದು ನಂನಮ್ಮ ಗ್ರಹಿಕೆಗೆ ಬಿಟ್ಟ ವಿಚಾರ.
                ರಂಗದ ಸೂಕ್ಷ್ಮ ಸಂಗತಿಗಳತ್ತ ಎಚ್ಚರ ವಹಿಸಿದ್ದಾರೆ. ಉದಾ: ಕೌಶಿಕ-ಮೇನಕೆಯರ 'ಶಿಶು'. ಬೊಂಬೆಯೊಂದಕ್ಕೆ ಆಶ್ರಮದ ಮಗು ಎಂದು ಬಿಂಬಿಸಲು ತೊಡಿಸಿದ ವಸ್ತ್ರ. ಇದು ನಿರ್ಜೀವ ಗೊಂಬೆಯೆನ್ನುವುದು ಮರೆತುಹೋಗುತ್ತದೆ. ಮಗುವನ್ನು ಮುದ್ದಿಸಿ ಆಡಿಸುವ ತಾಯಿಯ ಚರ್ಯೆ ನಿಜ ಬದುಕಿನ ಕನ್ನಡಿ. ಇನ್ನೊಂದು ಶಿಶುವನ್ನು ಅಗಲುವ ಸಂದರ್ಭ. ಮೈಮೇಲಿನ ಒಡವೆ ತೆಗೆದು ಮಗುವಿನ ಮೇಲಿಡುತ್ತಾ, ಕಾಲ್ಗಜ್ಜೆಯನ್ನು ಬಿಚ್ಚಲು ತೊಡಗಿದಾಗ, 'ತಾನು ದೇವಲೋಕದ ಗಣಿಕೆ' ಪ್ರಜ್ಞೆಯ ಅಭಿವ್ಯಕ್ತಿ ಇಡೀ ಪ್ರದರ್ಶನದ ಹೈಲೈಟ್. ದುಃಖ, ಕರುಣ ರಸದ ಸಂದರ್ಭದಲ್ಲಿ ಹಿಮ್ಮೇಳದ ನವಿರಾದ ನಾದಸ್ಪಂದನ. ಹಿಮ್ಮೇಳ ಕಲಾವಿದರೂ 'ಒಂದು ಪಾತ್ರವಾಗಿ' ಕಂಡುದು ಇಷ್ಟವಾಯಿತು. ಹೀಗೆ ಪಾತ್ರವಾದಾಗ ಪ್ರೇಕ್ಷಕರ ಸಾಲಿನ ಪಿಸುದನಿಯೂ ಏಕಾಗ್ರತೆಗೆ ತೊಡಕುಂಟುಮಾಡುತ್ತದೆ.
                ಅಭಿವ್ಯಕ್ತಿಯಲ್ಲಿ ಬರುವ, ಒದಗುವ, ಒದಗಬಹುದಾದ ಚಿಕ್ಕ ಚಿಕ್ಕ ಸಂಗತಿಗಳನ್ನು ಕ್ಷಿಪ್ರವಾಗಿ ಅಭಿವ್ಯಕ್ತಿಗೊಳಿಸುವ ಕಾರಣದಿಂದಲೋ ಏನೋ ರಂಗದಾಚೆಗೆ ನಮ್ಮ ದೃಷ್ಟಿಗಳು ಹರಿಯುವುದಿಲ್ಲ. ರಂಗದಾಚೆಗೆ ದೃಷ್ಟಿ ಸರಿಯುತ್ತದೆ ಎಂತಾದರೆ ದೃಷ್ಟಿ ದೋಷವಲ್ಲ. ರಂಗವು ನಮ್ಮ ದೃಷ್ಟಿಯನ್ನು ಸೆರೆಹಿಡಿಯಲು ಸೋತಿದೆ ಎಂದರ್ಥ. ಮೋಹ ಮೇನಕೆಯು ನೂರಿಪ್ಪತ್ತು ನಿಮಿಷ ದೃಷ್ಟಿಯನ್ನು ಸೆರೆಹಿಡಿದಿದೆ. ಹಾಗಾಗಿಯೇ ರಂಗಸುಖದ ಅನುಭವ. ಮೋಹದ ವಿವಿಧ ಸ್ತರಗಳ ಪ್ರಸ್ತುತಿಯು ಪ್ರಸಂಗದ ಸೂಕ್ಷ್ಮ ಆಶಯವನ್ನು ಬಿಂಬಿಸಿತು.
                 ಮಂಟಪ ಪ್ರಭಾಕರ ಉಪಾಧ್ಯ ಮತ್ತು ಎ.ಪಿ.ಪಾಠಕರ ನಿರ್ದೇಶನ. ನಿರ್ದೇಶನವೆಂದರೆ 'ಎಷ್ಟು ಪದ್ಯ ಹಾಡಬೇಕು, ಎಷ್ಟು ಕುಣಿಯಬೇಕು, ಎಷ್ಟು ಹೊತ್ತಿಗೆ ಮುಗಿಸಬೇಕು, ಎಂದಲ್ಲ. ಇಡೀ ಕಥಾನಕವನ್ನು ಯೋಜಿತ ಸಮಯದಲ್ಲಿ ಹಿಡಿದಿಡುವ ಎಡಿಟಿಂಗ್, ಫ್ರೇಮಿಂಗ್, ಸಂಕ್ಷಿಪ್ತ ಅರ್ಥಗಾರಿಕೆ, ಪದ್ಯಗಳು, ಯಾವ ಪದ್ಯಕ್ಕೆ ಎಷ್ಟು ಅಭಿನಯ.. ಇತ್ಯಾದಿ ಅಂಶಗಳು ನಿರ್ದೇಶನ ವ್ಯಾಪ್ತಿಗೆ ಬರುತ್ತದೆ. 'ನಿರ್ದೆೇಶನ ಗಟ್ಟಿಯಾಗಿದ್ದರೆ ಪ್ರದರ್ಶನವೂ ಪರಿಣಾಮಕಾರಿ' ಎನ್ನುವುದನ್ನು ಮೋಹಮೇನಕೆ ತೋರಿಸಿಕೊಟ್ಟಿತು.
                   ಮೋಹಮೇನಕೆಯನ್ನು ವೀಕ್ಷಿಸಿದ ಕಲಾವಿದೆ ಪದ್ಮಾ ಕೆ.ಆರ್.ಆಚಾರ್ಯರ ಅಭಿಮತ -  " ಮಂಟಪರು ಅವರ ಪ್ರಾಯವನ್ನೂ ಮರೆತು, ಪಾತ್ರವಾಗುವ ರೀತಿ, ಬಳುಕುವ ಬಳ್ಳಿಯಾಗಿ, ಅಭಿನಯದೊಡತಿಯಾಗಿ ಪ್ರೇಕ್ಷರ ಮೆಚ್ಚುಗೆಗೆ ಪಾತ್ರವಾಗುವ ಬಗೆಯನ್ನು ನೋಡಿಯೇ ಅನುಭವಿಸಬೇಕು. ಪಾತ್ರದಲ್ಲಿ ತಲ್ಲೀನರಾಗುವ ಬಗೆಯಂತೂ ಅನನ್ಯ."
                ಹಿಮ್ಮೇಳದಲ್ಲಿ ಅನಂತ ಪದ್ಮನಾಭ ಪಾಠಕ್ (ಭಾಗವತಿಕೆ), ದೇವದಾಸ್ ರಾವ್ (ಮದ್ದಳೆ), ಗುರುರಾಜ ಐತಾಳ್ (ಚೆಂಡೆ), ಮಂಟಪ ಉಪಾಧ್ಯ, ಪ್ರಶಾಂತವರ್ಧನ್, ಮಂಜು ಹವ್ಯಕ, ವಿನಯ ಭಟ್ - ವೇಷಧಾರಿಗಳು. ಧಾರವಾಡದ ದಿವಾಕರ ಹೆಗಡೆಯವರಿಂದ ಪದ್ಯ ರಚನೆ. ಇದು ಎಪ್ಪತ್ತನಾಲ್ಕನೇ ಪ್ರದರ್ಶನ. ಏಕವ್ಯಕ್ತಿಯಿಂದ ಯುಗಳದತ್ತ ಹೆಜ್ಜೆಯೂರಿದ ಮಂಟಪರಿಂದ ಈಗ ಪೂರ್ಣ ಪ್ರಮಾಣದ ಪ್ರದರ್ಶನ.
                ಸಮಕಾಲೀನ ಯಕ್ಷಗಾನವು ಮಂಟಪರನ್ನು ಒಪ್ಪದಿರಬಹುದು. ಒಪ್ಪಬೇಕೆಂಬ ಆಗ್ರಹ ಅವರಿಗಿಲ್ಲ ಬಿಡಿ. ರಂಗ ನಿರ್ದೇಶನದ ಅಗತ್ಯವನ್ನು ಹಲವು ದಶಕಗಳಿಂದ ಮಾತನಾಡುತ್ತಾ ಬಂದಿದ್ದೇವೆ. ಈಗಲೂ ಮಾತನಾಡುತ್ತೇವೆ. ಮುಂದೆಯೂ ಮತನಾಡದೆ ಬಿಡುವುದಿಲ್ಲ! ಕನಿಷ್ಠ ನಮಗೆ ನಾವೇ ನಿರ್ದೇಶಕರಾದರೆ ಬಹುತೇಕ ರಂಗ ಸನ್ನಿವೇಶಗಳನ್ನು ಜನರ ಮನದೊಳಗೆ ಇಳಿಯುವಂತೆ ಮಾಡಬಹುದು.

(ಚಿತ್ರಗಳು: ಮುರಳಿ ರಾಯರಮನೆ)

ಟೆಂಟಿನೊಳಗೆ ಅರ್ಧಾಯುಷ್ಯವನ್ನು ಮುಗಿಸಿದ ಯಜಮಾನ                 ಕಸ್ತೂರಿ ವರದರಾಯ ಪೈಗಳು ಸುರತ್ಕಲ್ ಮೇಳದ ಯಜಮಾನ. ಮೇಳದ ಗಾಥೆಗೆ ಹತ್ತಿರ ಹತ್ತಿರ ಅರ್ಧ ಶತಮಾನ. ಯಜಮಾನಿಕೆಗೂ 'ಅರ್ಹತೆಯಿದೆ' ಮತ್ತು 'ಅರ್ಹತೆ ಬೇಕು' ಎಂದು ಅನುಷ್ಠಾನಿಸಿ ತೋರಿಸಿದವರು. ಅಭಿಮಾನಿಗಳನ್ನು ಅರ್ಹತೆಯ ಬಲದಿಂದ ಹೊಂದಿದವರು. ಪೌರಾಣಿಕ ಪ್ರಸಂಗ-ಪಾತ್ರಗಳ ಆವರಣ ಮತ್ತು ಬದುಕಿನ ಆಸಕ್ತಿಗಳನ್ನು ಮಿಳಿತಗೊಳಿಸಿದರು. ರಂಗ ಒಪ್ಪುವ ಪ್ರದರ್ಶನಗಳನ್ನು ಸ್ಮರಣೀಯವಾಗಿ ಸಂಪನ್ನಗೊಳಿಸಿದರು. ತುಂಬು ತೊಂಭತ್ತೊಂದು ವರುಷದ ಜೀವನವನ್ನು ಅನುಭವಿಸಿದ ವರದರಾಯ ಪೈಗಳು 2016 ಜುಲೈ 17 ರಂದು ದೈವಾಧೀನರಾದರು. ಅರ್ಧಾಯುಷ್ಯವನ್ನು ಚೌಕಿಯಲ್ಲೇ ಕಳೆದಿದ್ದರು!
                 'ಶ್ರೀ ಮಹಮ್ಮಾಯಿ ಕೃಪಾಪೋಶಿತ ಯಕ್ಷಗಾನ ಮಂಡಳಿ, ಸುರತ್ಕಲ್' - ಯಕ್ಷಗಾನಕ್ಕೆ ವಾಙ್ಮಯ ವೈಭವವನ್ನು ತಂದು ಕೊಟ್ಟ ಮೇಳ. ಸೊಂಟತ್ರಾಣದ ಬದಲಿಗೆ ಪಾತ್ರತ್ರಾಣ, ಭಾವ-ಭಾವನೆಗಳಿಗೆ ಮಾನ, ಬುದ್ಧಿಗೆ ಗ್ರಾಸ, ಶಿಸ್ತಿನ ಬಣ್ಣದ ಮನೆ, ಶಿಸ್ತಿನ ಪ್ರೇಕ್ಷಕರು, ಪೌರಾಣಿಕ ಜಾಡಿನಲ್ಲಿ ಕಾಲ್ಪನಿಕ ಪ್ರಸಂಗ.. ಹೀಗೆ ಮೇಳದ ಒಂದೊಂದು ವಿಭಾಗವನ್ನು ಪೋಸ್ಟ್ಮಾರ್ಟಂ ಮಾಡಿದರೆ ಅಪ್ಪಟ ಯಕ್ಷಗಾನದ ಜೀವಂತಿಕೆ ಮಿಣುಕುತ್ತದೆ.  'ಸುರತ್ಕಲ್ ಮೇಳವು ನಮ್ಮದು' ಎನ್ನುವ ಸಾವಿರಾರು ಮನಸ್ಸುಗಳನ್ನು ಗೆಲ್ಲುವುದು ಸಣ್ಣ ಕೆಲಸವಲ್ಲ. ಅದು ವರದರಾಯ ಪೈಗಳ ಜಾಣ್ಮೆಯ ನಿರ್ವಹಣೆ.
                 ಮೇಳ ಕಟ್ಟುವುದು ಯೌವನದ ಕನಸು. 1955ರ ಹಿಂದೆ ಮುಂದೆ. ಅಚಾನಕ್ಕಾಗಿ ಅದೃಷ್ಟಕ್ಕೆ ಒಲಿದ ಐದು ಸಾವಿರ ರೂಪಾಯಿ ಮೂಲ ಬಂಡವಾಳ. ಅಣ್ಣ ಕಸ್ತೂರಿ ವಾಸುದೇವ ಪೈಯೊಂದಿಗೆ ಹೊಸ ಮೇಳದ ರೂಪೀಕರಣ. ಸಾಮಾಜಿಕ ಸ್ಥಿತಿ-ಗತಿ, ವೈಯಕ್ತಿಕ ಬದುಕು, ಕಲಾವಿದರ ಜೋಡಣೆ, ಮೇಳ ನಿರ್ವಹಣೆ.. ಹೀಗೆ ಸವಾಲುಗಳನ್ನು ಎದುರಿಸಿದ ಪೈ ಸಹೋದರರ ಮೇಳವು ಒಂದೊಂದೇ ಹೆಜ್ಜೆಯೂರಿತು. ತ್ರಿವಿಕ್ರಮನಾಗಿ ಬೆಳೆದು ನಿಂತಿತು. ಅನುಭವವು 'ಮಾಗಲು ಮತ್ತು ಬಾಗಲು' ಕಲಿಸಿತ್ತು! ಹಾಗಾಗಿ ದೀರ್ಘ ಕಾಲ ಮೇಳ ಬಾಳಿತು. ಕಲಾವಿದರಿಗೆ ಬಾಳ್ವೆ ನೀಡಿತು.
               ನಾಟ್ಯರಾಣಿ ಶಾಂತಲೆ, ಪಾಪಣ್ಣ ವಿಜಯ, ಕಡುಗಲಿ ಕುಮಾರ ರಾಮ, ರಾಜ ಯಯಾತಿ, ಸತಿ ಶೀಲವತಿ, ತುಳುನಾಡ ಬಲಿಯೇಂದ್ರ, ರಾಣಿ ರತ್ನಾವಳಿ.. ಪ್ರಸಂಗಗಳ ಮಾಲೆಗಳು ಮೇಳದ ವಿಜಯಮಾಲೆಗಳಾದುವು.  ಜನರ ಮನಸ್ಸನ್ನು ಓದುವ ಸಾಮಥ್ರ್ಯದ ವರದರಾಯ ಪೈಗಳು ಹೊಸ ಪ್ರಸಂಗಗಳ ಹುಡುಕಾಟ ಮಾಡಿದರು. ಯಕ್ಷಗಾನದ ಸ್ವರೂಪಕ್ಕೆ ತೊಂದರೆಯಾಗದಂತೆ ಪರಿಷ್ಕರಿಸಿದರು. ಕಾಲ್ಪನಿಕ ಪ್ರಸಂಗಗಳ ಪ್ರಸ್ತುತಿಗಳು ಕಾಲಧರ್ಮದ ಪಲ್ಲಟ. ಶನೀಶ್ವರ ಮಹಾತ್ಮೆ, ಬಪ್ಪನಾಡು ಕ್ಷೇತ್ರ ಮಹಾತ್ಮೆಯಂತಹ ಪ್ರಸಂಗಗಳನ್ನು ರಂಗ ಒಪ್ಪಿತು. ಪ್ರೇಕ್ಷಕರು ಸ್ವೀಕರಿಸಿದರು.
                ಅಗರಿ ಶ್ರೀನಿವಾಸ ಭಾಗವತ, ಅಗರಿ ರಘುರಾಮ ಭಾಗವತ, ಶೇಣಿ ಗೋಪಾಲಕೃಷ್ಣ ಭಟ್, ತೆಕ್ಕಟ್ಟೆ ಆನಂದ ಮಾಸ್ತರ್, ಮಧೂರು ಗಣಪತಿ ರಾವ್, ರಾಮದಾಸ ಸಾಮಗ.. ಹೀಗೆ ಹಿರಿಯರಿದ್ದ ಮೇಳವು 'ಸುಸಂಸ್ಕೃತ' ಪದವ್ಯಾಪ್ತಿಯೊಳಗಿತ್ತು. ಗಾನಗಂಧರ್ವ ಪದ್ಯಾಣ ಗಣಪತಿ ಭಟ್ಟರನ್ನು 'ಭಾಗವತ'ನನ್ನಾಗಿ ರೂಪಿಸಿದ ಮೇಳವಿದು. ಒಬ್ಬೊಬ್ಬ ಕಲಾವಿದನ ಕೊಡುಗೆಯು ಪ್ರಸಂಗಗಳನ್ನು ಉತ್ತುಂಗಕ್ಕೇರಿಸಿತ್ತು. ಇದರಿಂದಾಗಿ ಕಲಾವಿದರಿಗೆ, ಮೇಳಕ್ಕೆ, ಪ್ರಸಂಗಕ್ಕೆ ತಾರಾಮೌಲ್ಯ ಬಂತು. ಜತೆಗೆ ಯಜಮಾನರಿಗೆ ಕಲೆಕ್ಷನ್ ತುಂಬಿ ಬಂತು.
                  ಪೈಗಳು ಬಹುಶಃ ವೇಷ ಮಾಡಲಿಲ್ಲ. ಅರ್ಥ ಹೇಳಲಿಲ್ಲ. ಯಾವುದೇ ಪಾತ್ರದ ಆಳೆತ್ತರ, ಅದರ ರಂಗವ್ಯಾಪ್ತಿ, ಪ್ರಸ್ತುತಿಯಲ್ಲಿ ಕಲಾವಿದನ ಜವಾಬ್ದಾರಿಗಳ ಸ್ಪಷ್ಟ ಅರಿವಿತ್ತು, ನಿಲುವಿತ್ತು. ಯಾವ ಕಲಾವಿದನಲ್ಲಿ ಎಷ್ಟು ಅಭಿವ್ಯಕ್ತಿಯಿದೆ ಎನ್ನುವ ಮಾಪಕ ಮತಿಯಲ್ಲಿತ್ತು. ಅದನ್ನು ಹೊರಗೆಳೆವ ಕುಶಾಗ್ರಮತಿ ಅಪೂರ್ವ. ಈ ಮಾಪಕವೇ ಪ್ರದರ್ಶನಗಳ ಯಶಸ್ಸಿನ ಗುಟ್ಟು. ಯಜಮಾನರ ಹಾದಿಯನ್ನು ಅರ್ಥಮಾಡಿಕೊಂಡ ಕಲಾವಿದ ಗಡಣ. ಹಾಗಾಗಿ ನೋಡಿ. ಸುರತ್ಕಲ್ ಮೇಳವು ನಿಲುಗಡೆಯಾಗಿ ಹದಿನಾರು ವರುಷ ಕಳೆದರೂ ಅದರ ಪ್ರದರ್ಶನಗಳು ಕಾಡುತ್ತವೆ.
                  ಸಾಮಾನ್ಯವಾಗಿ ಚೌಕಿಗೂ ಯಜಮಾನನಿಗೂ ತುಂಬಾ ಅಂತರ. ಪೈಗಳ ಮೇಳದ ಚೌಕಿ ಮನೆಯಿದ್ದಂತೆ! ಕುಟುಂಬ ಸಹಿತವಾಗಿ ಚೌಕಿಯಲ್ಲಿ ಧಾರಾಳವಾಗಿ ಕುಳಿತುಕೊಳ್ಳಬಹುದು! ಕಲಾವಿದರೊಂದಿಗೆ ಮಾತನಾಡಬಹುದು. ಕಲಾವಿದರ ಕುಟುಂಬವು ಚೌಕಿಗೆ ಬಂದರಂತೂ ಎಲ್ಲರಿಗೆ ಖುಷಿ. ಬೆಸೆದುಕೊಳ್ಳುವ ಇಂತಹ ಆಪ್ತತೆಗಳೇ ಮೇಳದ ಗಟ್ಟಿ ಅಡಿಗಟ್ಟು.  ಕಲಾವಿದರೊಂದಿಗೆ ಪೈಗಳ ಊಟ, ತಿಂಡಿ, ನಿದ್ದೆ, ಮಾತುಕತೆ, ಸುಖ-ದುಃಖ ವಿನಿಮಯ. ಮೇಳದ ಯಜಮಾನನಾದವನು ಮೇಳದಲ್ಲೇ ಇರಬೇಕು, ಕಲಾವಿದರೊಂದಿಗೆ ಬೆರೆಯಬೇಕು, ಎಂದು ಶೇಣಿಯವರೂ ಹೇಳುತ್ತಿದ್ದರು. ಪೈಗಳಿಗೂ ಶೇಣಿಯವರಿಗೂ ಕಳಚದ ನಂಟು. ಶೇಣಿಯವರಿಗೂ ಯಜಮಾನರ ಮೇಲೆ ಗೌರವ. ಮೇಳದ ಕುರಿತು ಬಿಟ್ಟುಕೊಡದ ಪ್ರೀತಿ. ಇಂತಹ ಗುಣಗಳು ಕಲಾವಿದರಿಗೆ ಮೇಲ್ಪಂಕ್ತಿ.
             ವರದರಾಯ ಪೈಗಳ ಮೇಳದ ನಿರ್ವಹಣೆ ಜಾಣ್ಮೆಯಿಂದ ಕೂಡಿತ್ತು. ದುಬಾರಿತನದಿಂದ ದೂರ. ಅಡುಗೆಗೆ ಸಾಧ್ಯವಾದಷ್ಟೂ ಸ್ಥಳೀಯ ತರಕಾರಿಗಳ ಅವಲಂಬನೆ. ಮೇಳವು ಊರಿನಿಂದ ಊರಿಗೆ ಹೋಗುವಾಗ ಆ ಊರಿನ ಪಾರಂಪರಿಕ ತರಕಾರಿ ಯಾವುದಿದೆಯೋ ಅದರತ್ತ ಆಸಕ್ತಿ. ಎಲ್ಲೆಲ್ಲಿ ಸಂತೆ ಆಗುತ್ತದೋ ಅ ಜಾಗವೆಲ್ಲಾ ಪೈಗಳಿಗೆ ಪರಿಚಿತ. ಸಂತೆ ಆಗುವಲ್ಲಿ ಸುರತ್ಕಲ್ ಮೇಳದ ಆಟ ಖಚಿತ. ಟೆಂಟ್ ಹೌಸ್ಫುಲ್.
                ಬದ್ಧತೆಯ ಮೇಳದಲ್ಲಿ ಸಮಯಕ್ಕೆ ಮಹತ್ವ. ಕಲಾವಿದರೆಲ್ಲರೂ ಎಂಟು ಗಂಟೆಯೊಳಗೆ ಚೌಕಿಯಲ್ಲಿರಬೇಕೆಂಬ ಅಲಿಖಿತ ಶಾಸನ. ಎಂಟೂವರೆಗೆ ಚೌಕಿ ಪೂಜೆ, ಒಂಭತ್ತು ಗಂಟೆಯಿಂದ ಕಟ್ಟುವೇಷ, ನಿತ್ಯ ವೇಷಗಳ ಕುಣಿತ. ಹತ್ತು ಗಂಟೆ ಹತ್ತು ನಿಮಿಷಕ್ಕೆ ಪ್ರಸಂಗ ಶುರು. ಚೌಕಿಯಲ್ಲಿ ದೇವರಿಗೆ ಹೂ, ಹಣ್ಣು ಖಾಯಂ. ಸ್ವತಃ ಪೈಗಳೇ ದೇವರಿಗೆ ಅಲಂಕಾರ ಮಾಡುತ್ತಿದ್ದರು. ಪೂಜೆಯ ಬಳಿಕ ಮೇಳದ ಟಿಕೇಟ್ ಕೌಂಟರ್ ತೆರೆದುಕೊಳ್ಳುತ್ತಿತ್ತು. ಸ್ವತಃ ಪೈಗಳೇ ಕೌಂಟರಿನಲ್ಲಿರುತ್ತಿದ್ದರು. ಕಲೆಕ್ಷನ್ ಆದ ಬಳಿಕ ಕೌಂಟರಿಗೆ ಬಾಗಿಲು ಹಾಕಿ ಚೌಕಿಗೆ ಬಂದು ಕಲಾವಿದರೊಂದಿಗೆ ಮಾತನಾಡಿದ ಬಳಿಕವೇ ನಿದ್ದೆ. ಬೆಳಿಗ್ಗೆ ಐದು ಗಂಟೆಗೆ ಸ್ನಾನ. ಚೌಕಿ ಪೂಜೆಗೆ ಅಣಿ. ಈ ನಿಯತ್ತು ಬಹಳ ವರುಷ ಅನುಷ್ಠಾನ ಮಾಡಿದ್ದರು - ಭಾಗವತ ಪದ್ಯಾಣ ಗಣಪತಿ ಭಟ್ಟರು ಪೈಗಳ ಕಾಯಕವನ್ನು ಸ್ಮರಿಸಿಕೊಳ್ಳುತ್ತಾರೆ.
            ವರದರಾಯ ಪೈಗಳು 2000ರಲ್ಲಿ ಮೇಳ ನಿಲ್ಲಿಸುವ ಹೊತ್ತಲ್ಲಿ, ಮೇಳವೇನೋ ನಿಲ್ಲಿಸಬಹುದು. ಕಲಾವಿದರಿಗೆ ಏನು ಗತಿ. ಎಂದು ಮರುಗಿದ್ದರು. ಕಲಾವಿದರ ಯೋಗಕ್ಷೇಮವು ಪೈಗಳ 'ಯಜಮಾನಿಕೆಯ' ವ್ಯಾಪ್ತಿಯೊಳಗಿತ್ತು. ಇಂತಹ ಯಜಮಾನರನ್ನು ಪಡೆದ ಸುರತ್ಕಲ್ ಮೇಳ ಧನ್ಯ. ಕಲಾವಿದರಿಗೂ ಸಾರ್ಥಕ. ಅಗಲಿದ ಪೈಗಳಿಗೆ ಅಕ್ಷರ ನಮನ.
ಚಿತ್ರಗಳು : ಶಾಂತಾರಾಮ ಕುಡ್ವ    
ಶಿಷ್ಟ ಯಕ್ಷಪ್ರಜ್ಞೆಯನ್ನು ಮರೆಯದ ಅಂಬಾ              ಮೂರು ದಶಕಗಳ ಹಿಂದಿನ ಆ ದಿನಗಳು ನೆನಪಿವೆ. ಕರ್ನೂರು ಕೊರಗಪ್ಪ ರೈಗಳ ಕದ್ರಿ ಮೇಳ. 'ಗೆಜ್ಜೆದ ಪೂಜೆ' ಪ್ರಸಂಗ. ಅಂಬಾಪ್ರಸಾದರ 'ತುಳಸಿ' ಪಾತ್ರಾಭಿವ್ಯಕ್ತಿಗೆ ಮಾರುಹೋಗಿದ್ದೆ. ಹಲವು ಬಾರಿ ಪ್ರಸಂಗವನ್ನು ವೀಕ್ಷಿಸಿದ್ದೆ. ಶಾರೀರ, ಹೆಣ್ತನ, ರಸೋತ್ಪತ್ತಿ, ಚುರುಕುಗತಿ, ಮನದೊಳಗಿಳಿಯುವ ಅಭಿವ್ಯಕ್ತಿಗಳು ಮೋಡಿ ಮಾಡಿದ್ದುವು. ನಂತರದ ದಿನಗಳಲ್ಲಿ ಕರ್ನೂರರು ಕೂಟಾಟಗಳನ್ನು ಸಂಯೋಜಿಸುತ್ತಿದ್ದರು. ಗೆಜ್ಜೆದ ಪೂಜೆಯ 'ತುಳಸಿ'ಯನ್ನು ಕರ್ನೂರರು ಹಲವು ಬಾರಿ ಜ್ಞಾಪಿಸುತ್ತಿದ್ದುದನ್ನು ಗಮನಿಸಿದ್ದೇನೆ.
               ಹೊಸನಗರ ಮೇಳದಲ್ಲಿ 'ಕನ್ಯಾಂತರಂಗ' ಪ್ರಸಂಗದ 'ಅಹಲ್ಯೆ'ಯು ಅಂಬಾಪ್ರಸಾದರ ಮಾಸ್ಟರ್ಪೀಸ್! ಉಜಿರೆ ಅಶೋಕ ಭಟ್ಟರ 'ಗೌತಮ'. ಬಳಿಕ 'ಪುಣ್ಯಕೋಟಿ' ಪ್ರಸಂಗ. ಇವರ ಅನುಭವದ ಪರಿಪುಷ್ಟತೆಯ ಮೇಲ್ಮೆಗಳು ಪಾತ್ರಗಳಿಗೆ ಹೊಸ ಸೃಷ್ಟಿ, ನೋಟವನ್ನು ನೀಡಿದೆ. ಎಷ್ಟು ವರುಷ ತಿರುಗಾಟ ಮಾಡಿದ ಎನ್ನುವ ಲೆಕ್ಕಣಿಕೆಯು ಅನುಭವಕ್ಕೆ ಮಾನದಂಡವಲ್ಲ. ಪಾತ್ರಗಳೇ ಬೆರಗಾಗುವಂತೆ ಮಾಡುವ ಅಭಿವ್ಯಕ್ತಿ ಇದೆಯಲ್ಲಾ, ಅದು ನಿಜವಾದ ಕೊಡುಗೆ. ಅಂಬಾಪ್ರಸಾದರು ತಮ್ಮೆಲ್ಲಾ ಪಾತ್ರಗಳಲ್ಲಿ ಇಂತಹ 'ಕೊಡುಗೆ'ಗಳನ್ನು ಸ್ಥಾಪಿಸಿದ್ದಾರೆ.
              ಅಂಬಾರಿಗೀಗ ಐವತ್ತಮೂರು. ಒಂದು ಕಾಲಘಟ್ಟದ ಪಾತ್ರಗಳೆಲ್ಲವೂ ಶೃಂಗಾರಕ್ಕೆ ಸೀಮಿತ. ಯಕ್ಷಗಾನದ ಚೌಕಟ್ಟಿನೊಳಗೆ, ಶಿಷ್ಟತೆಯನ್ನು ಕಾಪಾಡಿಕೊಂಡ ಶೃಂಗಾರ. ವೇಷಭೂಷಣದಿಂದ ತೊಡಗಿ, ಮಾತಿನ ವರೆಗೆ 'ಯಕ್ಷಗಾನ'ದ ಪ್ರಜ್ಞೆಯಿಟ್ಟುಕೊಂಡೇ ವ್ಯವಹರಿಸಿದ ಕಲಾವಿದ. ಶೃಂಗಾರ ಪಾತ್ರವೆಂದರೆ ರಂಗದಲ್ಲಿ 'ಹೆಚ್ಚು ತೆರೆದು' ಕಾಣಿಸಿಕೊಳ್ಳಬೇಕೆಂಬ ಪ್ರಸ್ತುತ ದಿನಮಾನಗಳೇ 'ಪಾತಾಳರ ಯೌವನದ ಶೃಂಗಾರ'ಕ್ಕೆ ನಾಚಿವೆ!
              ಅಂಬಾಪ್ರಸಾರ ಗರತಿ ಪಾತ್ರಗಳು ಔಚಿತ್ಯದ ಕಕ್ಷೆಯನ್ನು ಮೀರಿದ್ದಿಲ್ಲ. ಅಭಿಮನ್ಯು ಕಾಳಗದ 'ಸುಭದ್ರೆ'ಯು ತಾನು ಅಭಿಮನ್ಯುವಿನ ತಾಯಿ ಎನ್ನುವುದನ್ನು ಮರೆಯುವುದಿಲ್ಲ! ಬೆಳೆದು ನಿಂತ ಬಬ್ರುವಾಹನನ ತಾಯಿ ಎನ್ನುವ ಪ್ರಜ್ಞೆ ಇವರ ಚಿತ್ರಾಂಗದೆಗಿದೆ. ವಿವಿಧ ಭಾವಗಳ ಗನಿ 'ದಾಕ್ಷಾಯಿಣಿ' ಪಾತ್ರದ ಭಾವತೀವ್ರತೆಗಳು, ಕ್ಷಿಪ್ರ ರಂಗನಡೆಗಳು ಜತೆಪಾತ್ರಧಾರಿಗೆ ಸವಾಲಾಗಿ ಪರಿಣಮಿಸಿದುದನ್ನು ಕಂಡಿದ್ದೇನೆ. ಸಹಜವಾಗಿ ಸ್ತ್ರೀಪಾತ್ರಧಾರಿಗಳಿಗೆ ಹಿನ್ನಡೆ ತರುವ ವೀರರಸ ಪ್ರಧಾನವಾದ ಪ್ರಮೀಳೆ, ಶಶಿಪ್ರಭಾ, ಮೀನಾಕ್ಷಿ ಪಾತ್ರಗಳಲ್ಲಿ ಅಂಬಾಪ್ರಸಾದರ ಮುನ್ನಡೆಯಿದೆ. ಸಂದರ್ಭ ಸಿಕ್ಕಾಗ ಪುರುಷ ಪಾತ್ರಗಳನ್ನು ನಿರ್ವಹಿಸಿದ್ದಿದೆ.
              ಪಾತಾಳ ವೆಂಕಟ್ರಮಣ ಭಟ್ಟರು ಅಂಬಾಪ್ರಸಾದರ ತೀರ್ಥರೂಪರು. ಸ್ತ್ರೀಪಾತ್ರಕ್ಕೆ ಹೊಸ ಸ್ವರೂಪವನ್ನು ತಂದು, ರಂಗದಲ್ಲಿ ಅಳವಡಿಸಿದ ಅನ್ವೇಷಕ. ರಂಗದ ಕುರಿತು ನಿಖರವಾದ ನಡೆ, ನುಡಿಯನ್ನು ಹೊಂದಿದವರು. ಇವರ ಒಂದು ಕಾಲಘಟ್ಟದ ತಿರುಗಾಟವು ಯಕ್ಷಗಾನ ವೈಭವಕ್ಕೆ ಸಾಕ್ಷಿ. ವೆಂಕಟ್ರಮಣ ಭಟ್ಟರ ಕೀತರ್ಿಯ ಜಾಡಿನಲ್ಲಿ ಮಗ ಅಂಬಾ ಮುಂದುವರಿದರು. ಸ್ವಂತಿಕೆಯಲ್ಲಿ ಕಾಣಿಸಿಕೊಂಡರು. ಯಾರದ್ದೇ ನಕಲಾಗಲಿಲ್ಲ. ನೋಡಿ ಕಲಿತರು. ನೋಡಿ ತಿಳಿದರು. ತಿಳಿದು ತಿದ್ದಿಕೊಂಡರು.
                 ದೇಹ ಸ್ಥೂಲ ಆಗದಂತೆ ಕಾಪಾಡಿಕೊಳ್ಳುವುದು ಸ್ತ್ರೀಪಾತ್ರಧಾರಿಗಳಿಗೆ ಸವಾಲು. ಅಲ್ಲೋ ಇಲ್ಲೋ ಕೆಲವರು ಗೆದ್ದುಬಿಡುತ್ತಾರಷ್ಟೆ. ತನಗೂ ಸ್ಥೂಲತೆಯ ಕಾಟವಾದಾಗ ಅಂಬಾಪ್ರಸಾದರು ಅಧೀರರಾಗಿದ್ದರು.  ವೇಷದ ಆಕರ್ಷಣೆಯು ಸೊರಗುವುದನ್ನು ನೋಡಿ ದುಃಖಿಸಿದ್ದರು. ಮುಂದಿನ ಹಾದಿ ಕಾಣದೆ ಪರಿತಾಪ. ಸ್ತ್ರೀಪಾತ್ರಧಾರಿಗೆ 'ತನ್ನ ವೇಷದ ಆಕರ್ಷಣೆ ಕಡಿಮೆಯಾಗುತ್ತಿದೆ' ಎನ್ನುವ ಅರಿವು ಮೂಡುವುದೇ ಗ್ರೇಟ್. ಅಂಬಾಪ್ರಸಾದರು ಹೊಸನಗರ ಮೇಳದ ಪ್ರವೇಶದಿಂದ ಮೊದಲಿನಂತೆ ಬ್ಯಾಟಿಂಗ್! ಗರತಿ ಪಾತ್ರಗಳಿಗೆ ಹೊಸ ಹಾದಿ, ಪರಿಪೂರ್ಣ ಅಭಿವ್ಯಕ್ತಿಯನ್ನು ನೀಡಲು ಪೂರ್ಣ ಅವಕಾಶ. ತಾರಾಮೌಲ್ಯವು ಇವರೊಳಗೆ ಸ್ಥಿರವಾಯಿತು.
              ಓದಿದ್ದು ಒಂಭತ್ತನೇ ತರಗತಿ. ಶ್ರೀ ಧರ್ಮಸ್ಥಳ ಲಲಿತ ಕಲಾ ಕೇಂದ್ರದಲ್ಲಿ ಯಕ್ಷಗಾನ ಕಲಿಕೆ. ಗೋವಿಂದ ಭಟ್ ಸೂರಿಕುಮೇರಿ, ನೆಡ್ಲೆ ನರಸಿಂಹ ಭಟ್ಟರಿಂದ ಅಭ್ಯಾಸ. ಮಂಗಳೂರಿನ ಮಾಸ್ಟರ್ ವಿಠಲರಿಂದ ಭರತನಾಟ್ಯಾಭ್ಯಾಸ.  ಧರ್ಮಸ್ಥಳ ಮೇಳದಲ್ಲಿ ಆರಂಭದ ತಿರುಗಾಟ. ಸುಂಕದಕಟ್ಟೆ ಮೇಳದಲ್ಲಿ 'ಕಲಾವಿದ'ನಾಗಿ ರೂಪುಗೊಂಡರು. ಬಳಿಕ ಕದ್ರಿ, ಸುರತ್ಕಲ್, ಮಧೂರು, ಕಾಟಿಪಳ್ಳ, ಮಂಗಳಾದೇವಿ, ಪುತ್ತೂರು, ಕರ್ನಾಟಕ, ಎಡನೀರು, ಹೊಸನಗರ ಮೇಳಗಳಲ್ಲಿ ಮೂವತ್ತೆಂಟು ವರುಷದ ತಿರುಗಾಟಗಳು. ಈ ಮಧ್ಯೆ ಬಡಗು ತಿಟ್ಟಿನ ಶಿರಸಿ ಮಾರಿಕಾಂಬಾ ಮೇಳದಲ್ಲಿ ವ್ಯವಸಾಯ ಮಾಡಿದ್ದರು.
              ಅಂಬಾಪ್ರಸಾದರ ಸ್ತ್ರೀವೇಷದಲ್ಲಿ  'ಯಕ್ಷಗಾನ'ವಿದೆ. ಈಗಲೂ, ಮೊದಲೂ ಆ ಪ್ರಜ್ಞೆ ಅವರಲ್ಲಿ ಜಾಗೃತ. ಬಹುಶಃ ವೆಂಕಟ್ರಮಣ ಭಟ್ಟರ ರಂಗದ ಬದ್ಧತೆಯೂ ಕಾರಣವಿರಬಹುದು. ಪಾತ್ರ ಬಯಸುವ ಆಶಯ ಮತ್ತು ವ್ಯಾಪ್ತಿ ಇದೆಯಲ್ಲಾ, ಅದನ್ನು ಅನುಭವದ ಮೂಲಕ ಅಧ್ಯಯನ ಮಾಡಿದ್ದಾರೆ. ಹಾಗಾಗಿ ಅಂಬಾಪ್ರಸಾದರ ಪಾತ್ರಗಳೆಲ್ಲವೂ ಮೆಲುಕು ಹಾಕಬಹುದಾದುದು. ರಂಗಕ್ಕೆ ಬೇಕಾಗಿರುವುದು 'ಸ್ತ್ರೀವೇಷ, ಸ್ತ್ರೀಯಲ್ಲ'! ಬದುಕಿಗೆ ಹೆಚ್ಚು ಅಂಟಿಕೊಳ್ಳುವ ಸಿನಿಮಾ ಪ್ರಭಾವ ಇವರ ವೇಷಕ್ಕೆ ಸೋಕಿಲ್ಲದಿರುವುದರಿಂದಲೇ ಈಗಲೂ ಅಂಬಾಪ್ರಸಾದರಿಗೆ ಬೇಡಿಕೆ.
             ಪಾತಾಳ ವೆಂಕಟ್ರಮಣ ಭಟ್ಟರು ಒಂದೆಡೆ ಉಲ್ಲೇಖಿಸುತ್ತಾರೆ, ನನ್ನ ಸ್ತ್ರೀವೇಷವು ರಂಗಕ್ಕೆ ಬಂದಾಗ ಪ್ರೇಕ್ಷಕರು ಅಲರ್ಟ್ ಆಗುತ್ತಿದ್ದ ದಿನಗಳಿದ್ದುವು. ನಿದ್ದೆಗೆ ಜಾರಿದವರು ಎದ್ದು ಕುಳಿತುಕೊಳ್ಳುತ್ತಿದ್ದರು. ಬರಬರುತ್ತಾ ನನ್ನ ವೇಷಕ್ಕೆ ಪ್ರೇಕ್ಷಕರಿಂದ ಹೇಳುವಂತಹ ಪ್ರತಿಕ್ರಿಯೆ ಬಾರದೇ ಇದ್ದಾಗ ರಂಗನಿರ್ಗಮನಕ್ಕೆ ಮನ ಮಾಡಿದೆ, ಎಂದಿದ್ದರು. ಅಂಬಾಪ್ರಸಾದರು ಹಲವು ಬಾರಿ ತಂದೆಯವರ ಈ ನಿಲುವನ್ನು ನೆನಪಿಸುತ್ತಿದ್ದರು. ಸಮರ್ಥಿಸುತ್ತಿದ್ದರು.
              ಯಕ್ಷರಂಗಕ್ಕೆ 'ಗರತಿ ಪಾತ್ರಧಾರಿ'ಗಳು ಬೇಕಾಗಿದ್ದಾರೆ! ಗರತಿ ಪಾತ್ರ ನಿರ್ವಹಣೆ ಸುಲಭವಲ್ಲ. ಅನುಭವದಿಂದ ಮಾಗಿದಾಗ ಮಾತ್ರ ಪರಾಕಾಯ ಪ್ರವೇಶ ಸಾಧ್ಯ. ಅಂಬಾಪ್ರಸಾದರ ಸೀತೆ, ಚಂದ್ರಮತಿ, ದಮಯಂತಿ ಪಾತ್ರಾಭಿವ್ಯಕ್ತಿಗಳೆಲ್ಲಾ ಉತ್ತುಂಗಕ್ಕೇರಿದವುಗಳು. ಸುಭದ್ರೆ ಮತ್ತು ಚಿತ್ರಾಂಗದೆ, ಮಾಲಿನಿ ಮತ್ತು ಮೋಹಿನಿ ಪಾತ್ರಗಳ ವ್ಯತ್ಯಾಸಗಳನ್ನು ಸ್ತ್ರೀಪಾತ್ರಧಾರಿ ಅರಿಯದಿದ್ದರೆ ಅದನ್ನು 'ಪಾತ್ರ' ಎಂದು ಒಪ್ಪಿಕೊಳ್ಳುವುದು ಕಷ್ಟವಾಗುತ್ತದೆ. ಪ್ರೇಕ್ಷಕರಿಂದ ಶಿಳ್ಳೆ, ಚಪ್ಪಾಳೆಗೆ ಸೀಮಿತವಾದೀತಷ್ಟೇ. ಆದರೆ ಅಂಬಾಪ್ರಸಾದರಲ್ಲಿ  ಇಂತಹ ಪಾತ್ರಸೂಕ್ಷ್ಮಗಳ ಅರಿವು ಗಟ್ಟಿಯಾಗಿದೆ. ಹಾಗಾಗಿ ರಂಗ ಎಂದೂ ಅವರನ್ನು ಬಿಡದು!
                ಅಂಬಾಪ್ರಸಾದ ಪಾತಾಳರ ಕಲಾಯಾನವನ್ನು ಗುರುತಿಸಿ ಉಪ್ಪಿನಂಗಡಿಯ ಸೌಹಾರ್ದ ಯಕ್ಷಗಾನ ಸಮಿತಿ ಮತ್ತು ಶ್ರೀ ಶಾರದೋತ್ಸವ ಸಮಿತಿಯು ಗೌರವಿಸುತ್ತಿದೆ. ೨೦೧೬ ಜುಲೈ 16, ಶನಿವಾರದಂದು ಸಂಜೆ ಉಪ್ಪಿನಂಗಡಿ ರಾಮನಗರದ 'ಶ್ರೀ ಶಾರದಾ ಮಂದಿರ'ದಲ್ಲಿ ಸಂಮಾನ ಕಾರ್ಯಕ್ರಮ ಜರುಗಲಿದೆ.
(Prajavani/Dadhiginatho Coloum)