Tuesday, February 23, 2016

ಭಾವದಲೆಯಲಿ ಮೀಯಲು ಪಾತ್ರಗಳು ಕಾಯುತ್ತಿವೆ!

              ಒಂದು ಕಾಲಘಟ್ಟವಿತ್ತು. ಸ್ತ್ರೀಪಾತ್ರಗಳಿಗೆ ಕಲಾವಿದರು ರೂಪುಗೊಳ್ಳುವುದು ತೀರಾ ಕಡಿಮೆ. ಹವ್ಯಾಸಿ ರಂಗದಲ್ಲಂತೂ ನಿರ್ಲಕ್ಷಿತ. ಮೇಳಗಳ ಹೊರತಾದ ಆಟಗಳಲ್ಲೆಲ್ಲಾ ಸ್ತ್ರೀ ಪಾತ್ರಗಳಿಲ್ಲದ ಪ್ರಸಂಗಗಳನ್ನು ಆಯ್ದುಕೊಳ್ಳಲಾಗುತ್ತಿತ್ತು. ಆಗ ರಂಗದಲ್ಲಿ ಸ್ತ್ರೀಯಾಗುತ್ತಿದ್ದ ಬೆರಳೆಣಿಕೆಯ ಕಲಾವಿದರಿಗೆ ಅವಕಾಶಗಳ ಸುಗ್ಗಿ. ಅಭಿವ್ಯಕ್ತಿಗಿಂತಲೂ ರಂಗಕ್ಕೆ ಪಾತ್ರವು ಪ್ರವೇಶಿಸಿದರೆ ಸಾಕು!
             ಈಗ ಹಾಗಲ್ಲ. ಸ್ತ್ರೀಪಾತ್ರಧಾರಿಗಳ ಸಂಖ್ಯೆ ಹೆಚ್ಚಾಗಿದೆ. ಪಾತ್ರವನ್ನು ಮಾಡಲು ಒಲವಿದೆ, ಮುಜುಗರವಿಲ್ಲ. ಶರೀರ, ಶಾರೀರ, ಒನಪು, ಒಯ್ಯಾರಗಳನ್ನು ರೂಢಿಸಿಕೊಂಡ ಕಲಾವಿದರು ಸಾಕಷ್ಟಿದ್ದಾರೆ. ವಿವಿಧ ಭಂಗಿಗಳ ಚಿತ್ರಗಳು ಫೇಸ್ಬುಕ್ಕಿನಲ್ಲಿ ಇಣುಕುತ್ತವೆ. ಅಬ್ಬಾ.. ಸ್ತ್ರೀಯರನ್ನು ನಾಚಿಸುವ ರೂಪ. ಕಲಾವಿದರ ಶ್ರಮ ಗುರುತರ. ಇದೊಂದು ಉತ್ತಮ ಬೆಳವಣಿಗೆ.
ಹೀಗಿದ್ದೂ ಅಭಿವ್ಯಕ್ತಿಯಲ್ಲಿ ಪಾತ್ರಗಳು ಯಾಕೆ ಸೋಲುತ್ತಿವೆ? ಹಲವು ಸಮಯದಿಂದ ಕಾಡುವ ಚೋದ್ಯ. ತೊಡುವ ವೇಷದಲ್ಲಿ ಸೌಂದರ್ಯದ ಕಾಳಜಿಗೆ ಮೊದಲ ಮಣೆ. ಕೆಲವೊಮ್ಮೆ ಪಾತ್ರೋಚಿತವಾದ ವೇಷಭೂಷಣಗಳ ಜಾಗಕ್ಕೆ ನವ್ಯತೆಯ ಮೆರುಗು, ಥಳುಕು. ಸಖಿ ಪಾತ್ರಕ್ಕೂ, ರಾಣಿಗೂ ವ್ಯತ್ಯಾಸವಿಲ್ಲದೆ ತೊಡುವ ವೇಷಭೂಷಣಗಳನ್ನು ಪ್ರೇಕ್ಷಕರು ಸ್ವೀಕರಿಸಬಹುದು. ರಂಗ ಸ್ವೀಕರಿಸದು.
               ಉದಾ: ದೇವಿ ಮಹಾತ್ಮೆ ಪ್ರಸಂಗದ 'ದಿತಿ'. ಕಲಾವಿದನಿಗೆ ಮಾಲಿನಿ ಪಾತ್ರ(ಧಾರಿ)ಕ್ಕಿಂತ ತಾನು ಕಡಿಮೆಯೇನಲ್ಲ ಎನ್ನುವ ಮನಃಸ್ಥಿತಿಯಿಂದ ಶೃಂಗಾರಗೊಂಡು ರಂಗಕ್ಕೆ ಬಂದರೆ? ಋಷಿ ಪತ್ನಿಯರ ಪಾತ್ರಕ್ಕೊಂದು ಸಿದ್ಧ ಮಾದರಿಗಳಿವೆ. ಅವುಗಳು ಹೊಳೆಯುವ ಆಭರಣಗಳನ್ನು ಧರಿಸಿದರೆ? ದ್ವಿಜನ ಹೆಂಡತಿಯ ಪಾತ್ರ ಸಕಲಾಭರಣ ಭೂಷಿತೆಯಾಗಿ ಬಂದರೆ? ಇವೆಲ್ಲಾ 'ಔಚಿತ್ಯ' ಬಯಸುವ ಪ್ರಶ್ನೆಗಳು. ಇವಕ್ಕೆ ಸಮರ್ಥನೆಯ ಉತ್ತರಗಳು ಬೇಕಾದಷ್ಟಿವೆ ಬಿಡಿ.
               ದೇವಿ ಮಹಾತ್ಮೆಯ 'ಮಾಲಿನಿ'ಯ ಪ್ರವೇಶದಲ್ಲಿ ಪ್ರಸಂಗದಲ್ಲಿ ಮೂರು ಪದ್ಯಗಳಿವೆ. ಆಕೆ ಯೌವನಭರಿತೆಯಾದರೂ ಸನ್ನಿವೇಶದಲ್ಲಿ ಶೃಂಗಾರ ಭಾವವಿಲ್ಲ. ಹಲವು ಮಾಲಿನಿಯರನ್ನು ನೋಡಿದ್ದೇನೆ, ನೋಡುತ್ತಿದ್ದೇನೆ. ಅಬ್ಬಾ.. ಶೃಂಗಾರದ ವಿಲಾಸವೆ..! 'ಮೋಹಿನಿ'ಯೂ ನಾಚುವ ಅಭಿವ್ಯಕ್ತಿ. ಭಾಗವತರಿಗೂ ಹಾಡಲು ಹುಮ್ಮಸ್ಸು. ಪಾತ್ರಧಾರಿಗೂ ಕುಣಿಯಲು ಉತ್ಸಾಹ. ಈ ಮಧ್ಯೆ ಪಾತ್ರದ ಆಶಯ, ಅಭಿವ್ಯಕ್ತಿ ಮಣ್ಣುಪಾಲು! "ಕುಣಿಯದಿದ್ದರೆ ಪ್ರೇಕ್ಷಕರು ಸಹಿಸರು. ಆತನಿಗೆ ಕುಣಿಯಲು ಗೊತ್ತಿಲ್ಲ ಅಂತಾರೆ. ಈಗಿನ ಕಾಲಕ್ಕೆ ಬೇಕಲ್ವಾ," - ಕಲಾವಿದರೊಬ್ಬರ ಅಭಿಪ್ರಾಯ. ಔಚಿತ್ಯವನ್ನು ಮೀರಿದ ರಂಗಕ್ರಮವನ್ನು ಯಾವ ಪ್ರೇಕ್ಷಕನೂ ಬಯಸಲಾರ ಎಂಬುದು ಪಾತ್ರಧಾರಿಗೆ ತಿಳಿದಿರಬೇಕಲ್ವಾ. ಈಗಿನ ಕಾಲ ಅಂದರೆ..?
                   ದಕ್ಷಾಧ್ವರ ಪ್ರಸಂಗದ 'ದಾಕ್ಷಾಯಿಣಿ'. ಹಲವು ರಸಗಳ ಅಭಿವ್ಯಕ್ತಿಗೆ ಒದಗುವ ಪಾತ್ರ. ಪ್ರವೇಶದಿಂದ ಅಂತ್ಯದ ತನಕ ವಿವಿಧ ಭಾವಗಳ ಪ್ರಸ್ತುತಿಗಳಿಗೆ ಹೇರಳ ಅವಕಾಶ. 'ವರಮಹಾ ಕೈಲಾಸ ಶಿಖರದಿ' ಎನ್ನುವ ಭಾಮಿನಿಗೆ ಪಾತ್ರ ಪ್ರವೇಶ. ಗರತಿ ಪಾತ್ರವಾದ್ದರಿಂದ ಹಿತಮಿತ ನಾಟ್ಯ ಸಾಕು. ಯಾಕೋ ಏನೋ, ಕೆಲವು ದಾಕ್ಷಾಯಿಣಿ ಪಾತ್ರಗಳು ರಂಗದಲ್ಲಿ 'ಮಾಯಾಶೂರ್ಪನಖಿ'ಯನ್ನು ನಾಚಿಸುತ್ತಿವೆ. ಶಿವನ ಮಡದಿ ಎನ್ನುವ ಪ್ರಜ್ಞೆಯನ್ನು ಮರೆತಿವೆ. ಪಾತ್ರ ಪೋಷಣೆಗೆ ಬೇಕಾದ ಭಾವಗಳ ರಸಘಟ್ಟಿಗಳ ತೇವ ಆರಿದೆ!
                 ಬಬ್ರುವಾಹನ ಕಾಳಗ ಪ್ರಸಂಗದ 'ಚಿತ್ರಾಂಗದೆ'. ಇದು ಗರತಿ ಪಾತ್ರ. ತನ್ನೂರಿಗೆ ಅರ್ಜುನ ಬಂದಿದ್ದಾನೆ ಎಂಬ ಸುದ್ದಿ ತಿಳಿದ ಆಕೆ ಸಂತೋಷದಿಂದ 'ಅಹುದೇ ಎನ್ನಯ ರಮಣ' ಎನ್ನುವ ಪದ್ಯಕ್ಕೆ ಕುಣಿಯುವ ಪರಿ ನೋಡಿದರೆ ಸಂತೋಷದ ಪರಾಕಾಷ್ಠೆ! ತಾನು ಆಳೆತ್ತರಕ್ಕೆ ಬೆಳೆದ ಹೊಂತಕಾರಿ ಬಬ್ರುವಾಹನನ ತಾಯಿ ಎನ್ನುವ ಪ್ರಜ್ಞೆಯನ್ನು ಪಾತ್ರಧಾರಿ ಮರೆಯುವುದು ಅಪಕ್ವತೆಯ ಲಕ್ಷಣ. ಪುರಾಣ ಪಾತ್ರಗಳು, ಅವುಗಳ ನಡೆಗಳನ್ನು ತಮಗೆ ಬೇಕಾದಂತೆ ಹಿಗ್ಗಾಮುಗ್ಗಾ ಜಗ್ಗಲು ಬರುವುದಿಲ್ಲ.
                 ತನಗೆ ಕುಣಿಯಲು ಬರುತ್ತದೆ ಎಂದು - ವನವಾಸದ ಸೀತೆ, ರೇಣುಕೆ, ಖ್ಯಾತಿ - ಮೊದಲಾದ ಪಾತ್ರಗಳನ್ನು ಹಿಚುಕುವಾಗ ಕಿಂಚಿತ್ತೂ ನೋವಾಗುವುದಿಲ್ಲವಲ್ಲ! ಹಿರಿಯರು ಹಾಕಿದ ದಾರಿಯಲ್ಲಿ ಸಾಗುತ್ತಿದ್ದೇವೆ ಎನ್ನುವ ಕನಿಷ್ಠ ಸೌಜನ್ಯವೂ ಇಲ್ಲವಲ್ಲಾ. ಪಾತ್ರಧಾರಿಯಲ್ಲಿ ಯೌವನವಿದೆ, ರೂಪವಿದೆ, ಲಾವಣ್ಯವಿದೆ ಎನ್ನುವ ಅರ್ಹತೆಯು ಔಚಿತ್ಯವನ್ನು ಮೀರಲಿರುವ ಮಾನದಂಡವಾಗಬಾರದು. ಮದುವೆ ದೃಶ್ಯದಲ್ಲಿ ಪುರೋಹಿತನ ಜತೆ ಬರುವ ಆತನ ಪತ್ನಿಯನ್ನು 'ಜೋಕರ್' ರೀತಿಯಲ್ಲಿ ಬಿಂಬಿಸಲಾಗುತ್ತದೆ. ದ್ವಂದ್ವಾರ್ಥ ಸಂಭಾಷಣೆಗೆ ಪ್ರೇಕ್ಷಕರು ನಗುವುದು 'ಅಭಿವ್ಯಕ್ತಿಗೆ ಸಿಕ್ಕ ಮಾನ್ಯತೆ' ಎಂದು ಕಲಾವಿದ ತಿಳಿದುಕೊಂಡರೆ ಅದು ಆತನ ದೌರ್ಬಲ್ಯ.
                  'ಶ್ರೀದೇವಿ'ಯ ಪಾತ್ರ. ಗಂಭೀರ ಸ್ವ-ಭಾವ. ಹಿರಿಯ ಸ್ತ್ರೀ ಪಾತ್ರಧಾರಿ ಪಾತಾಳ ವೆಂಕಟ್ರಮಣ ಭಟ್ ಹೇಳುತ್ತಾರೆ, ಕೊರಳಿಗೆ ಹಾಕಿದ ಮಲ್ಲಿಗೆ ಹೂವಿನ ಹಾರದ ಒಂದು ಹೂ ಕೂಡಾ ರಂಗದಲ್ಲಿ ಉದುರಿ ಬೀಳಬಾರದು. ಆ ಪಾತ್ರ ಗಂಭೀರವಾದಷ್ಟು ಪರಿಣಾಮ ಹೆಚ್ಚು. ಭಯ, ಭಕ್ತಿಯ ಭಾವದಿಂದ ಪ್ರೇಕ್ಷಕರು ಸ್ವೀಕರಿಸುವ ಪಾತ್ರದ ಘನತೆಯನ್ನು ಕಾಪಾಡಬೇಕು. ಶುಂಭ-ನಿಶುಂಭರಿಂದ ಸೋತ ದೇವೇಂದ್ರನು ದೇವಿಯ ಮೊರೆ ಹೋಗುತ್ತಾನೆ. ದೇವಿ ಅಭಯ ನೀಡಿದ ಬಳಿಕ 'ಎಂದು ಯೋಚಿಸಿ ಮಹಮ್ಮಾಯೆ' ಎಂದು ಸ್ವ-ಯೋಚಿಸುವ ಪದ್ಯಗಳಿಗೆ ಹಿತ-ಮಿತವಾದ ನಾಟ್ಯ ಸಾಕು. ಆ ಸನ್ನಿವೇಶ ಶೃಂಗಾರವಲ್ಲ.
                ಸತ್ಯಹರಿಶ್ಚಂದ್ರ, ಸತಿ ಸಾವಿತ್ರಿ, ನಳದಮಯಂತಿ ಪ್ರಸಂಗಗಳ ಪಾತ್ರಗಳಿಗೆ ಹಿರಿಯ ಕಲಾವಿದರು ಛಾಪನ್ನು ಒತ್ತಿ ಪ್ರಸಿದ್ಧಿಯಾದವರು. ಅವರೆಲ್ಲರೂ ದಂತಕಥೆಗಳಾಗಿ ಮಾತಿಗೆ ನಿಲುಕುತ್ತಾರೆ.  ಆ ಜಾಡಿನಲ್ಲಿ ಸಾಗಿದರೆ 'ಯಕ್ಷಗಾನ ವೇಷ'ವನ್ನು ರಂಗದಲ್ಲಿ ಕಾಣಬಹುದು. ಪಾತ್ರವು ಬಯಸುವ 'ವೇಷಭೂಷಣ, ಭಾವ, ಮಾತು, ರಂಗನಡೆ'ಯನ್ನು ಕಲಾವಿದ ರೂಢಿಸಿಕೊಳ್ಳಬೇಕಾದ್ದು ಅಗತ್ಯ. ಇವೆಲ್ಲವೂ ಅನುಭವದಲ್ಲಿ ಮಿಳಿತಗೊಂಡು ರಂಗಮರ್ಯಾದೆಗೆ ಗೌರವ ತರುತ್ತಿರುವ ಕೆಲವು ಕಲಾವಿದರ ಶ್ರಮ ಗುರುತರ, ಮಾನ್ಯ.
                 ಭಾವದಲೆಯಲ್ಲಿ ಮೀಯಲು ಪಾತ್ರಗಳು ಕಾಯುತ್ತಿವೆ! ತಮ್ಮನ್ನು ಮೀರಿಸುವ ಪಾತ್ರಗಳನ್ನು ನೇಪಥ್ಯದಿಂದ ನೋಡುತ್ತಿರುವ 'ಮಾಯಾಶೂರ್ಪನಖಿ, ಮೋಹಿನಿ, ಮಾಯಾ ಅಜಮುಖಿ, ರಂಭೆ, ಊರ್ವಶಿ'ಯರು ಮರುಗುತ್ತಿದ್ದಾರೆ!

(ಸಾಂದರ್ಭಿಕ ಚಿತ್ರ : ಸುಮಾರು ಅರ್ಧಶತಮಾನದಾಚೆಗಿನ ಪಾತಾಳ ವೆಂಕಟ್ರಮಣ ಭಟ್ಟರ 'ಮೋಹಿನಿ' ಪಾತ್ರ)


Monday, February 15, 2016

ಬಾಹುಕನ ಭಾವುಕ ಅಂತರಂಗ

              "ನಳಚರಿತ್ರೆ ಸಿನೆಮಾದಲ್ಲಿ ನಟ ಕೆಂಪೇಗೌಡರ 'ಬಾಹುಕ' ಪಾತ್ರ ನನ್ನನ್ನು ಆಕರ್ಶಿಸಿತು. ಪಾತ್ರದ ನಡೆ, ಗೂನು ಬೆನ್ನು, ಮುಖದ ಭಾವ, ವೇಷ ಮತ್ತು ನಟನೆಗೆ ಮಾರುಹೋದೆ. ಅಭ್ಯಾಸ ಮಾಡಲೆಂದೇ ಹಲವು ಬಾರಿ ಸಿನಿಮಾ ನೋಡಿದೆ. ಅವರಂತೆ ಅಲ್ಲದಿದ್ದರೂ ಆ ಪಾತ್ರದ ಹಾಗೆ ಬಾಹುಕನನ್ನು ಚಿತ್ರಿಸಲು ಯತ್ನಿಸಿದೆ," ಹಾಸ್ಯಗಾರ್ ಪೆರುವೋಡಿ ನಾರಾಯಣ ಭಟ್ಟರು 'ಬಾಹುಕ'ನನ್ನು ತಾನು ಚಿತ್ರಿಸಿದ್ದ ಆರಂಭದ ದಿವಸಗಳನ್ನು ನೆನಪಿಸಿಕೊಂಡರು.
               ನಾರಾಯಣ ಭಟ್ಟರು ಶ್ರೀ ಧರ್ಮಸ್ಥಳ ಮೇಳದ (ಸುಮಾರು 1940-45) ತಿರುಗಾಟದಲ್ಲಿದ್ದರು. ಮೇಳದ ಪ್ರಧಾನ ಹಾಸ್ಯಗಾರರಾದ ಕಿಟ್ಟಪ್ಪ ಹಾಸ್ಯಗಾರರ ಸೂಚನೆ, ಮಾರ್ಗದರ್ಶನದಂತೆ ಚಿಕ್ಕಪುಟ್ಟ ಪಾತ್ರಗಳ ನಿರ್ವಹಣೆ. ಒಂದು ದಿನ ಕಿಟ್ಟಪ್ಪರು ನಾಪತ್ತೆ! ಅಂದು ಮುಡಿಪಿನಲ್ಲಿ ಆಟ. ಪ್ರಸಂಗ 'ನಳ ಚರಿತ್ರೆ'. ಕೈರಂಗಳ ಈಶ್ವರ ಭಟ್, ತೋಡುಗುಳಿ ಶಂಕರ ಭಟ್ಟರ ಹಿರಿತನ. ಚೌಕಿಯಲ್ಲಿ ಸ್ವಲ್ಪ ಹೊತ್ತು ಗೊಂದಲವಾಯಿತು. ಅದುವರೆಗೆ ಪ್ರಸಂಗವನ್ನು ಓದಲೂ ಇಲ್ಲ, ವೇಷವನ್ನು ಮಾಡಿದ್ದೂ ಅಲ್ಲ. ಕೈಕಾಲು ನಡುಗುವ ಹೊತ್ತು!
                ಬೇರೆ ದಾರಿಯಿಲ್ಲ. ಮುಖ್ಯ ಹಾಸ್ಯಗಾರರು ಬರುವ ಲಕ್ಷಣವಿಲ್ಲ. ಬಾಹುಕ ನೀವೇ ಮಾಡಬೇಕಷ್ಟೇ, ಮೇಳದ ಹಿರಿಯರು ಪ್ರೋತ್ಸಾಹಿಸಿದರು. ಒಲ್ಲೆ ಎಂದರೂ ಮಾಡುವುದು ಅನಿವಾರ್ಯವಾಗಿತ್ತು. ಅಂದು ಕೋಳ್ಯೂರು ನಾರಾಯಣ ಭಟ್ಟರ 'ನಳ', ಕುರಿಯ ವಿಠಲ ಶಾಸ್ತ್ರಿಗಳ 'ಶುಕ' ಪಾತ್ರಗಳನ್ನು ಮಾಡಿದ್ದರು.  ಬಾಹುಕ ಪಾತ್ರ ಪಾಲಿಗೆ ಬಂದಾಗ ಅಧೀರರಾದರು. ನಾನು ಬೇರೆ ಯಾರದ್ದೇ ಪಾತ್ರವನ್ನು ನೋಡಿಲ್ಲ. ಪಾತ್ರದ ಕಲ್ಪನೆಯೂ ಇಲ್ಲ. ವೇಷಗಾರಿಕೆಯ ಸ್ವರೂಪವೂ ಗೊತ್ತಿಲ್ಲ. ಕಳ್ಳನ ಹಾಸ್ಯ, ಕಟ್ಟುಹಾಸ್ಯಕ್ಕೆ ಧರಿಸುವ ಮಂಕಿಟೊಪ್ಪಿಯನ್ನು ಹೋಲುವ ಟೊಪ್ಪಿಗೆಯನ್ನು ಧರಿಸಿದೆ. ಮುಖವನ್ನು ಸ್ವಲ್ಪ ವಿಕಾರ ಮಾಡಿದೆ. ಅಂದು ಹೇಗೋ ಅಧೈರ್ಯದಿಂದ ಅಭಿನಯಿಸಿದೆ. ಪಾತ್ರ ಮುಗಿಯುವಾಗ ಬದುಕಿದೆಯಾ ಬಡಜೀವವೇ ಎಂಬಂತಾಯಿತು, ಮೊದಲ ದಿನದ ಅಸಹಾಯಕತೆಯನ್ನು ವಿವರಿಸುತ್ತಾರೆ.
               ನಂತರ ಅಧ್ಯಯನ ಶುರು. ದೇರಾಜೆಯವರ 'ಪುನರ್ಮಿಲನ' ಕೃತಿಯು ಪಾತ್ರಚಿತ್ರಣಕ್ಕೆ ಸಹಕಾರಿಯಾಯಿತು. ಮುಖ ಓರೆ ಕಾಣುವಂತೆ ಚಿತ್ರಿಸಿದರು. ಮೂಲ್ಕಿ ಮೇಳದಲ್ಲಿ ಹಿರಿಯ ಕಲಾವಿದ ಸಣ್ಣ ತಿಮ್ಮಪ್ಪ (ಪಂಜಿ ತಿಮ್ಮಪ್ಪ) ಅವರಿಂದ ಮಾರ್ಗದರ್ಶನ. ರಂಗದಲ್ಲಿ ಹೇಗೆ, ಎಲ್ಲಿ ನಿಲ್ಲಬೇಕೆನ್ನುವ ಮಾಹಿತಿ. ರಂಗಪ್ರವೇಶ, ಪತ್ರ ಓದುವಿಕೆ, ಚಲನೆಗಳ ಸೂಕ್ಷ್ಮ ಪಾಠಗಳ ಆರ್ಜನೆ. ಬಾಲ್ಯದಲ್ಲಿದ್ದಾಗ ಬಣ್ಣದ ಅಯ್ಯಪ್ಪು ಅವರ ವೇಷವನ್ನು ಭಟ್ಟರ ಅಮ್ಮ ನೋಡಿದ್ದರಂತೆ. ಅವರಿಂದ ಪಡೆದ ಮಾಹಿತಿಯೂ ಪಾತ್ರಭಿವ್ಯಕ್ತಿಗೆ ಪೂರಕವಾಯಿತು. ಆಗ ಬಡಗಿನಲ್ಲಿ ಕೊಗ್ಗು ಹಾಸ್ಯಗಾರರು ಓರೆಮೋರೆ ವೇಷ ಮಾಡಿಕೊಂಡಿದ್ದರಂತೆ.
               ಮೂಲ್ಕಿ ಮೇಳದಲ್ಲಿ ’ನಳ ಚರಿತ್ರ” ಪ್ರದರ್ಶನವು ಪ್ರೇಕ್ಷಕರ ಮನ ಗೆದ್ದಿತು. ಮೊದಲಿಗೆ ಸಣ್ಣ ತಿಮ್ಮಪ್ಪ ಅವರ ಋತುಪರ್ಣ, ನಂತರ ಕಡಾರು ನಾರಾಯಣ ಭಟ್, ಪುತ್ತೂರು ನಾರಾಯಣ ಹೆಗಡೆಯವರ 'ಋತುಪರ್ಣ' ಜತೆಗಾರಿಕೆಯು ಖ್ಯಾತಿ ಪಡೆಯಿತು. ಆಗ ಈಶ್ವರಪ್ಪಯ್ಯ ಭಾಗವತ. ತಲೆಂಗಳ ಶಂಭಟ್ಟರ ಭಾಗವತಿಕೆ . ಕತೆಯ ಕರುಣ, ದುಃಖ ರಸಗಳ ಓಟವು ಪ್ರೇಕ್ಷಕರನ್ನು ಹಿಡಿದಿಡುತ್ತಿತ್ತು. ದಮಯಂತಿ, ನಳ ಅತ್ತಾಗ ಪ್ರೇಕ್ಷಕರೂ ಕಣ್ಣೀರು ಹಾಕುತ್ತಿದ್ದರಂತೆ!
                ಬಾಹುಕ - ರೂಪಾಂತರವನ್ನು ಹೊಂದಿದ ನಳ ಎನ್ನುವ ಪ್ರಜ್ಞೆ ಪೆರುವೋಡಿಯವರ ಬಾಹುಕನಲ್ಲಿತ್ತು. ಆ ಪ್ರಜ್ಞೆಯೇ ತಾರಾಮೌಲ್ಯ ತಂದು ಕೊಟ್ಟಿತು. ಪ್ರಸಂಗದ ಕೊನೆಯ ಭಾಗದಲ್ಲಿ ಬಾಹುಕ ಮತ್ತು ದಮಯಂತಿಯರ ಮಿಲನದ ಸಂದರ್ಭ. ಈ ಸನ್ನಿವೇಶದ ಅರ್ಥಗಾರಿಕೆಯನ್ನು ಪರಿಣಾಮಕಾರಿಯಾಗಿ ರೂಪಿಸಿದ್ದರು. ಬಾಹುಕ ಜೊಲ್ಲು ಸುರಿಸುತ್ತಾ ರಂಗ ಪ್ರವೇಶ ಮಾಡುವ ದೃಶ್ಯ ಅಬ್ಬಾ...! ರಂಗಪ್ರವೇಶಕ್ಕಿಂತ ಮೊದಲು ಮಸಿಯನ್ನು ಅಗಿಯುತ್ತಿದ್ದರಂತೆ.  ಜೊಲ್ಲನ್ನು ಕಡೆವಾಯಲ್ಲಿ ಬಿಟ್ಟಾಗ ವಿಷ ಹೊರಬಂದಂತೆ ತೋರುತ್ತಿತ್ತು! ಪ್ರೇಕ್ಷಕರು ನಿಬ್ಬೆರಗಾಗುತ್ತಿದ್ದರು. ಮುಂದೆ ಮಸಿ ಅಗಿಯುವುದು ಅಸಹ್ಯವಾಗಿ ಬಿಟ್ಟುಬಿಟ್ಟರಂತೆ!
               ಮೂಲ್ಕಿ ಮೇಳದಲ್ಲಿ ದಿವಾಕರ ಭಟ್ಟರಿಗೆ ದಮಯಂತಿಯ ಪಾತ್ರ. ನಮ್ಮೊಳಗೆ ಹೊಂದಾಣಿಕೆ ಮತ್ತು ಮನೋಧರ್ಮಗಳು ಹೊಂದುತ್ತಿದ್ದುದರಿಂದ ಸನ್ನಿವೇಶ ಭಾವನಾತ್ಮಕವಾಗಿ ಮೂಡುತ್ತಿದ್ದುವು. ವಿದ್ಯಾವಂತರೂ ಮೆಚ್ಚಿಕೊಂಡರು. ಕಲಾವಿದರೂ ಸ್ಪಂದಿಸುತ್ತಿದ್ದರು. ಕೆಲವೊಮ್ಮೆ 'ಎಲ್ಲ ಸಮಯ ಅವರೇ ತಿಂದ್ರು' ಎಂಬ ಗೊಣಗಾಟವೂ ಇತ್ತೆನ್ನಿ, ಪೆರುವೋಡಿಯವರು ಕಳೆದ ಕಾಲದ ಬಾಹುಕನನ್ನು ನೆನದು  ಭಾವುಕರಾಗುತ್ತಾರೆ.
                 ಬಡಗಿನ ಅಮೃತೇಶ್ವರಿ ಮೇಳದಲ್ಲಿ ತಿರುಗಾಟದಲ್ಲಿದ್ದಾಗಲೂ ನಳಚರಿತ್ರೆಯ ಪ್ರಸಂಗ ಪ್ರದರ್ಶನವಾಗಿತ್ತು. ಉಪ್ಪೂರು ಭಾಗವತರು ಪ್ರಸಂಗವನ್ನು ಅಚ್ಚುಕಟ್ಟಾಗಿ ಆಡಿಸುತ್ತಿದ್ದರು. ಸನ್ನಿವೇಶವನ್ನು ಯಥಾವತ್ ಆಗಿ ತೋರಿಸುವ ಸಾಮಥ್ರ್ಯ ಬಡಗಿನ ಕಲಾವಿದರಲ್ಲಿ ಹೆಚ್ಚಿದೆ. ಅಲ್ಲಿ ಬಾಹುಕನನ್ನು ತುಂಬಾ ಅನುಭವಿಸಿದ್ದೇನೆ. ಬಡಗಿನ ಅಭಿಮಾನಿಗಳು ಹಾರ್ದಿಕವಾಗಿ ಸ್ವೀಕರಿಸಿದ್ದಾರೆ. ಕರ್ಕಿ, ಇಡಗುಂಜಿ ಮೇಳದವರು ಮೆಚ್ಚಿಕೊಂಡಿದ್ದಾರೆ. 'ನೈಜ ಭಾವ, ಸಹಜಾಭಿನಯ' ಎನ್ನುವ ಹೊಗಳಿಕೆಯನ್ನು ಕೊಟ್ಟು ಪ್ರೋತ್ಸಾಹಿಸಿದ್ದಾರೆ. ನಾರಾಯಣ ಭಟ್ಟರ ಬಾಹುಕ ದಕ್ಷಿಣೋತ್ತರ ಜಿಲ್ಲೆಗಳ ರಂಗದಲ್ಲಿ ಮೂಡಿಸಿದ ದೊಡ್ಡ ಹೆಜ್ಜೆಯಿದು.
                 ಪಾಪಣ್ಣ ಮತ್ತು ಬಾಹುಕ - ಈ ಎರಡೂ ಪಾತ್ರಗಳ ನಡೆ, ಸ್ವಾಭಾವಗಳು ವಿಭಿನ್ನ. ಒಂದರಂತೆ ಇನ್ನೊಂದಿಲ್ಲ. ಪೆರುವೋಡಿಯವರ ಅಭಿವ್ಯಕ್ತಿಯಲ್ಲಿ ಇವೆರಡೂ ಬೇರೆ ಬೇರೆಯಾಗಿ ಗೋಚರವಾಗುತ್ತಿದ್ದುವು. ಕಾರ್ಕೋಟಕ ಕಚ್ಚಿದುದರಿಂದ ನಳನಿಗೆ ಪರಿಭವ. ಪಾಪಣ್ಣ ಹಾಗಲ್ಲ. ಅದು ಕೃತಕ ನಾಟಕ. ಪಾಪಣ್ಣನ ಹಿನ್ನೆಲೆಯಲ್ಲಿ ಸುಂದರ ರೂಪವಿದೆ ಎನ್ನುವ ಪ್ರಜ್ಞೆ ಪಾತ್ರಧಾರಿಯಲ್ಲಿದ್ದರೆ ಒಳ್ಳೆಯದು, ಕಿವಿಮಾತು.
                  ಪೆರುವೋಡಿಯವರ 'ಬಾಹುಕ' ಒಂದು ಕಾಲಘಟ್ಟದಲ್ಲಿ ಯಕ್ಷರಂಗದಲ್ಲಿ ಸಂಚಲನ ಮೂಡಿಸಿತ್ತು. ಬದುಕಿನಲ್ಲಿ ರಸ, ಭಾವಗಳು ಶುಷ್ಕವಾಗಿರುವಾಗ ಇಂತಹ ಪ್ರಸಂಗಗಳನ್ನು ಸ್ವೀಕರಿಸುವ ಪ್ರೇಕ್ಷಕರು ಎಷ್ಟಿದ್ದಾರೆ, ಎಂದು ಪ್ರಶ್ನಿಸುವ ಪೆರುವೋಡಿ ನಾರಾಯಣ ಭಟ್ಟರಿಗೆ ಈಗ ಎಂಭತ್ತೆಂಟರ ಹರೆಯ. (ಜನನ : 28-5-1927) ಉಮೇದು ಬಂದರೆ ಈಗಲೂ ಬಾಹುಕ, ಪಾಪಣ್ಣನಾಗುತ್ತಾರೆ!


Tuesday, February 2, 2016

ಯಕ್ಷ ಪ್ರಚಾರಗಳ ಆಧುನೀಕರಣ


                 ಬಯಲು ಸೀಮೆಯ ಹಳ್ಳಿಯಲ್ಲಿದ್ದೆ. ಅಲಂಕೃತ ಟ್ರಾಕ್ಟರಿಗೆ ಧ್ವನಿವರ್ಧಕ ಬಿಗಿದು ಸಿನೆಮಾ ಪ್ರಚಾರ ಸಾಗುತ್ತಿತ್ತು.  ಟ್ರಾಕ್ಟರ್ ಹಿಂದೆ ಏನಿಲ್ಲವೆಂದರೂ ಐವತ್ತಕ್ಕೂ ಮಿಕ್ಕಿ ಮಕ್ಕಳು, ಯುವಕರ ಹಿಂಡು ಅನುಸರಿಸುತ್ತಿತ್ತು. ತೆಳುಕಾಗದದ ಸಿನೆಮಾದ ಕರಪತ್ರ ಹಳ್ಳಿ ತುಂಬುವಷ್ಟು ಕೈಯಿಂದ ಕೈಗೆ ಬದಲಾಗುತ್ತಿದ್ದುವು. ಊರು ಹೊಸ ಸಿನೆಮಾವನ್ನು ಸ್ವಾಗತಿಸಲು ಸಜ್ಜಾಗುತ್ತಿತ್ತು.
               ಇದು ಸಿನೆಮಾ ಕತೆ. ಮೂರ್ನಾಲ್ಕು ದಶಕದ ಹಿಂದಿನ ಯಕ್ಷಗಾನ ಪ್ರಚಾರವೂ ಇದಕ್ಕಿಂತ ಹೊರತಿಲ್ಲ. ರಿಕ್ಷಾ, ಜೀಪ್, ಅಂಬಾಸಿಡರ್ ಕಾರಿನಲ್ಲಿ 'ಬನ್ನಿರಿ, ನೋಡಿರಿ, ಆನಂದಿಸಿರಿ' ಎನ್ನುವ ಸ್ಲೋಗನ್ ಕೇಳಿದರೆ ಸಾಕು, ಹಳ್ಳಿ ಅಲರ್ಟ ಆಗುತ್ತದೆ. ಕರಪತ್ರಗಳನ್ನು ಆಯಲು ಮಕ್ಕಳ ತಂಡ ಸಿದ್ಧವಾಗುತ್ತದೆ. ಒಂದರ್ಧ ಗಂಟೆಯಲ್ಲಿ ಇಡೀ ಹಳ್ಳಿಯಲ್ಲಿ ಯಕ್ಷಗಾನದ್ದೇ ಸುದ್ದಿ.
                ಪ್ರಚಾರದ ವೈಖರಿಯೂ ವಿಭಿನ್ನ. ಊರಿನ ಬಸ್ನಿಲ್ದಾಣ, ಹೋಟೆಲ್ ಮತ್ತು ಕೆಂಪುಬೋರ್ಡಿ ಅಂಗಡಿ(!) - ಹೀಗೆ ಮೂರು ಕಡೆ 'ವಾಲ್ಪೋಸ್ಟರ್' ಅಂಟಿಸಿದರೆ ಸಾಕು, ಊರಿಡೀ ಪ್ರಚಾರವಾಗುತ್ತಿತ್ತು! ಅಂದರೆ ಹೆಚ್ಚು ಜನ ಸೇರುವ ಜಾಗವದು. ಅಲ್ಲಿಂದ ಶುರು ಆಟದ ಚರ್ಚೆ.  ಕಲಾವಿದರ ಅಭಿವ್ಯಕ್ತಿಯ ವಿಮರ್ಶೆ. ಮೇಳದ ಆಟದ ಸಾಮಗ್ರಿಗಳನ್ನು ಹೊತ್ತ ಲಾರಿ ಬಂದಾಗ ಅಪಾರ ಸಡಗರ. ಮೇಳದ ಚಿಕ್ಕ ಮೆಟಡೋರ್ ವ್ಯಾನ್ನಲ್ಲಿ ಅಳವಡಿಸಿದ ಕ್ಷೀಣ ಧ್ವನಿವರ್ಧಕವು ಹಗಲಿಡೀ ಸದ್ದು ಮಾಡುತ್ತಾ ಪ್ರಚಾರ ಆರಂಭಿಸುತ್ತದೆ. ಪ್ರಚಾರದಲ್ಲಿ ಬಳಸಿದ ಭಾಷೆಯ ವಿನ್ಯಾಸಗುಚ್ಛದಿಂದಲೇ 'ಯಕ್ಷಗಾನದ ಪ್ರಚಾರ' ಎಂದು ತಿಳಿಯುತ್ತಿತ್ತು.
                ಯಕ್ಷಗಾನದ ಕರಪತ್ರವನ್ನು ಜತನದಿಂದ ಕಾಪಿಡುವ ಕಲಾಭಿಮಾನಿಗಳಿದ್ದರು. ಮೊದಲ ದರ್ಜೆಯ ಆಸನಕ್ಕೆ ಮೂರು ರೂಪಾಯಿ, ಎರಡನೆಯದ್ದಕ್ಕೆ ಎರಡು ರೂಪಾಯಿ, ಮೂರು - ನಾಲ್ಕನೇ ದರ್ಜೆಯ ಆಸನಕ್ಕೆ ಒಂದು ರೂಪಾಯಿ ಮತ್ತು ಎಪ್ಪತ್ತೈದು ಪೈಸೆ ದರ. ನೆಲಕ್ಕೆ ಐವತ್ತು ಪೈಸೆ. ಅವರವರ ಗಳಿಕೆಯ ಸಾಮಥ್ರ್ಯದಂತೆ ಆಸನದ ದರ್ಜೆಯನ್ನು ಮೊದಲೇ ನಿಗದಿಪಡಿಸಿಕೊಳ್ಳುತ್ತಿದ್ದರು. ಅಂದಿಗೆ ಹೊಂದುವಂತೆ ಗಳಿಕೆಯಲ್ಲಿ ಒಂದು ಪಾಲನ್ನು ಆಟಕ್ಕಾಗಿಯೇ ಹೊಂದಾಣಿಸಿದ ದಿನಮಾನಗಳ ಫಲಾನುಭವಿ ನಾನು!
                ಆಟದ ಟೆಂಟ್ ಮೈದಾನಿನಲ್ಲಿ ತೆರೆದುಕೊಳ್ಳುತ್ತಿದ್ದಂತೆ ಹೋಟೆಲ್, ಮಣಿಸರಕು, ಬೀಡ-ಬೀಡಿ, ಸೋಜಿ (ರವೆಯ ತೆಳು ಪಾಯಸ) .. ಅಂಗಡಿಗಳ ದಿಢೀರ್ ಸೂರು ತಯಾರಾಗಿ ಸಂಜೆ ಎಲ್ಲವೂ ಸಿದ್ಧವಾಗುತ್ತದೆ. ಕೊರೆಯುವ ಚಳಿಯನ್ನು ಶಮನಿಸುವ, ಬಡವರ ಪಾನೀಯ ಎಂದೇ ಬಿಂಬಿತವಾಗಿರುವ 'ಸೋಜಿ'ಯ ಅಂಗಡಿಯ ಮುಂದೆ ಕ್ಯೂ ನಿಂತ ದೃಶ್ಯ ಕಾಡುತ್ತದೆ. ಈಗ 'ಸೋಜಿ' ಪಾನೀಯ ಮಾಯವಾಗಿದೆ. ಆಟಕ್ಕೂ ಭರ್ಜರಿ ಕಲೆಕ್ಷನ್, ಅಂಗಡಿಗಳಿಗೂ ಬರೋಬ್ಬರಿ ವ್ಯಾಪಾರ. ಒಂದು ಜಾತ್ರೆಯನ್ನು ನೆನಪಿಸುವ ಸಂಭ್ರಮ.
                ಆಧುನಿಕ ತಂತ್ರಜ್ಞಾನಗಳು ಕಾಲೂರದ ದಿವಸಗಳಲ್ಲಿ ನಾಟಕ, ಯಕ್ಷಗಾನಗಳ ಪ್ರಚಾರ ತಂತ್ರಗಳು ಅಪ್ಪಟ ದೇಸಿ. ಪ್ರಚಾರದಲ್ಲೂ ಕಾಳಜಿ, ಸಡಗರ. ರಸ್ತೆ ಬದಿಯಲ್ಲಿ ಬಿಗಿದ ಬಟ್ಟೆಯ ಬ್ಯಾನರ್ಗಳು ರಸ್ತೆಗೆ ಶೋಭೆ. ಓದುವವರಿಗೂ ಕೂಡಾ. ಅದನ್ನು ಹರಿಯುವ, ನಾಶ ಮಾಡುವ ವಿಘ್ನಸಂತೋಷಿಗಳು ಇಲ್ಲವೇ ಇಲ್ಲ. ಆಟ, ನಾಟಕ, ಜಾತ್ರೆ, ಕೋಳಿ ಅಂಕ, ನೇಮೋತ್ಸವ... ಈ ಕಾರ್ಯಕ್ರಮಗಳು ಬಂತೆಂದರೆ ಬ್ಯಾನರ್ ಬರೆಯುವ ಕಲಾವಿದರಿಗೆ ರಾತ್ರಿ ಜಾಗರಣೆ!
                ಬರಬರುತ್ತಾ ಕರಪತ್ರಗಳ ವಿನ್ಯಾಸಗಳು ಹಿರಿದಾದುವು. ಹೆಸರಿನೊಂದಿಗೆ ಕಲಾವಿದರ ಚಿತ್ರಗಳು ಅಚ್ಚಾಗುತ್ತಿದ್ದುವು. ಮುದ್ರಣಾಲಯದಲ್ಲಿ ಅದಕ್ಕೆ ಹೆಚ್ಚುವರಿ ಖರ್ಚುಗಳು. ಒಂದೊಂದು ಚಿತ್ರದ ಅಚ್ಚು ತಯಾರಿಸುವುದು ಶ್ರಮ-ಹಣ ಬೇಡುವ ಕೆಲಸ. ಕೆಲವೊಮ್ಮೆ ಚಿತ್ರಗಳು ಪರಿಚಯ ಸಿಗದಷ್ಟು ಕಪ್ಪಗಾಗಿ 'ಇಂತಹವರ ಚಿತ್ರ' ಎಂದು ಊಹಿಸಬೇಕಾಗುತ್ತಿತ್ತು! ಆ ಕರಪತ್ರವನ್ನು ಬೇಕಾಬಿಟ್ಟಿ ಹಂಚದೆ ಬೇಕಾದವರಿಗೆ ಮಾತ್ರ ವಿತರಿಸುವ ಪರಿಪಾಠ ಶುರು. ಮುದ್ರಣ ವೆಚ್ಚದ ಹೆಚ್ಚಳದಿಂದಾಗಿ ಈ ಕ್ರಮ.
                  ತಂತ್ರಜ್ಞಾನಗಳು ಅಭಿವೃದ್ಧಿಗೊಂಡಂತೆ ಮುದ್ರಣಾಯಗಳಿಗೆ ಕಂಪ್ಯೂಟರ್ಗಳು ಪ್ರವೇಶವಾದುವು. ಅಕ್ಷರ ಮೊಳೆಗಳು ಬದಿಗೆ ಸರಿದುವು. ಚಿತ್ರಗಳಿಗೆ ಸ್ಪಷ್ಟತೆ ಬಂದುವು. ಎದ್ದು ತೋರುವ ಬಗೆಬಗೆಯ ವಿನ್ಯಾಸಗಳು. ವಾಲ್ಪೋಸ್ಟರ್ಗಳು ಕೂಡಾ ಹೊಸ ವ್ಯವಸ್ಥೆಗೆ ತೆರೆದುಕೊಂಡುವು. ಈಚೆಗಿನ ಐದಾರು ವರುಷದಿಂದ ಡಿಜಿಟಲ್ ಪರ್ವ. ದಿನಪತ್ರಿಕೆಯ ಆಕಾರದಲ್ಲಿ ಯಕ್ಷಗಾನದ ಕರಪತ್ರಗಳು ಅಚ್ಚಾಗುತ್ತವೆ. ಕಲಾವಿದರ ಚಿತ್ರದೊಂದಿಗೆ ಅವರ ವೇಷದ ಚಿತ್ರಗಳು ಪ್ರಕಟವಾಗುತ್ತವೆ. ಅಭಿಮಾನ ತುಂಬಿ ಹರಿಯುತ್ತದೆ.
             ಫ್ಲೆಕ್ಸಿ ತಂತ್ರಜ್ಞಾನದಿಂದಾಗಿ ಚಿತ್ರಗಾರರು ಮರೆಯಾದರು. ಬಟ್ಟೆಯ ಮೇಲೆ ವಿವಿಧ ವಿನ್ಯಾಸದಲ್ಲಿ ಚಿತ್ರಗಳನ್ನು ಮೂಡಿಸುತ್ತಿದ್ದ ಕೈಗಳಿಗೆ ಉದ್ಯೋಗವಿಲ್ಲ. ಕೆಲವರು ಅನಿವಾರ್ಯವಾಗಿ ಡಿಜಿಟಲ್ ತಂತ್ರಗಾರಿಕೆಯನ್ನು ಕಲಿತರು. ಇನ್ನೂ ಕೆಲವರು ಬೇರೆ ಕೆಲಸಕ್ಕೆ ವರ್ಗಾವಣೆಗೊಂಡರು. ಸಣ್ಣ ಆಕಾರದ ಗಾತ್ರದಿಂದ ತೊಡಗಿ ಭೀಮ ಗಾತ್ರದ ಫ್ಲೆಕ್ಸಿಗಳು ಪ್ರಚಾರದ ಸರಕಾದುವು. ರಂಗದ ದೃಶ್ಯವನ್ನು ಸೆರೆ ಹಿಡಿದು ಫ್ಲೆಕ್ಸಿಯಲ್ಲಿ ಮುದ್ರಿಸುವುದು ಅನಿವಾರ್ಯ ಎಂದಾಯಿತು. ಯಕ್ಷಗಾನದಿಂದ ತೊಡಗಿ, ನೇಮ, ನಾಟಕ, ಬ್ರಹ್ಮಕಲಶ, ಜಾತ್ರೆ... ಹೀಗೆ ಸಮಾಜದೊಳಗಿರುವ ಎಲ್ಲಾ ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳಲ್ಲಿ ಫ್ಲೆಕ್ಸಿಗೆ ಮೊದಲ ಮಣೆ.
                 ಜತೆಜತೆಗೆ ಜಾಲತಾಣಗಳ ಭರಾಟೆ. ವಾಟ್ಸಪ್, ಫೇಸ್ಬುಕ್ಗಳು, ವೆಬ್ಪುಟಗಳು.. ಯಕ್ಷಗಾನ ಪ್ರದರ್ಶನಗಳ ಪ್ರಚಾರಕ್ಕೆ ದೊಡ್ಡ ಕೊಡುಗೆ ನೀಡಿದುವು. 'ಲೈವ್' ವರದಿಯ ತುಣುಕುಗಳನ್ನು ಪ್ರಸಾರ ಮಾಡುವ ವಾಟ್ಸ್ಪ್ ಬಳಗಗಳಿವೆ. ಪ್ರಶಂಸೆ, ಹೊಗಳಿಕೆ, ತೆಗಳಿಕೆ, ವಿಮರ್ಶೆಗಳು ನಿತ್ಯ ಹರಿದಾಡುತ್ತಿರುತ್ತವೆ. ಕಲೆಯೊಂದರ ಜೀವಂತಿಕೆಗೆ ಆಧುನಿಕ ತಂತ್ರಜ್ಞಾನಗಳು ಪೂರಕವಾಗಿವುದು ಹೆಮ್ಮೆಯ ವಿಚಾರ. ಆದರೆ 'ಸಮಗ್ರ ಯಕ್ಷಗಾನ'ದ ನೋಟ ಬೀರುವಲ್ಲಿ ಏದುಸಿರು ಬಿಡುವಂತೆ ಭಾಸವಾಗುತ್ತದೆ. ಬೌದ್ಧಿಕ ಪಕ್ವತೆಯನ್ನು ರೂಢಿಸಿಕೊಂಡ ವಿಮರ್ಶೆಗಳಿಂದ ಕಲೆ ಗಟ್ಟಿಯಾಗುತ್ತದೆ. ಕಲಾವಿದ ಪಕ್ವನಾಗುತ್ತಾನೆ. ರಂಗ ಜೀವಂತವಾಗಿರುತ್ತದೆ.
              ಕರಪತ್ರಗಳ ವಿನ್ಯಾಸಗಳು ಹೇಗೆ ಬದಲಾಗುತ್ತಾ ಬಂದುವೋ ಅದೇ ರೀತಿ ಯಕ್ಷಗಾನದ ಪ್ರದರ್ಶನಗಳ ವಿನ್ಯಾಸವೂ ಕೂಡಾ ಪರಿಷ್ಕಾರಗೊಂಡಿರುವುದು ಖುಷಿಯ ಸಂಗತಿಯಲ್ಲ.

(ಪ್ರಜಾವಾಣಿ/ದಧಿಗಿಣತೋ/30-1-2016 ಪ್ರಕಟ)
ಕಪ್ಪುಬಿಳುಪು ಚಿತ್ರವು ಫೇಸ್ ಬುಕ್ಕಿನಿಂದ ಪ್ರಾಪ್ತಿ.