Monday, July 31, 2017

ಶುರುವಾಗಿದೆ, 'ಗುಣಮಟ್ಟ'ದ ಹುಡುಕಾಟ

ಪ್ರಜಾವಾಣಿಯ 'ದಧಿಗಿಣತೋ' ಅಂಕಣ  / 24-2-2017

             ಮಿತ್ರ ಪ್ರಕಾಶ್ ಕುಮಾರ್ ಕೊಡೆಂಕಿರಿಯವರು ಹನ್ನೆರಡು ಅಡಕ ತಟ್ಟೆ(ಸೀಡಿ)ಯಿರುವ ಭದ್ರ ಹೊದಿಕೆಯ ಪ್ಯಾಕೆಟ್ ನೀಡಿದರು. ಅವೆಲ್ಲಾ ಖ್ಯಾತ ಗಾಯಕರ ಸಂಗೀತದ ಡಿವಿಡಿಗಳು. ಇಂಡಿಯಾ ಟುಡೇ ಬಳಗದ ನಿರ್ಮಾಣ. ವಿಶೇಷ ರಿಯಾಯಿತಿಯಲ್ಲಿ ಓದುಗರಿಗಾಗಿ ವಿನ್ಯಾಸಿಸಿದೆ. ಡಿವಿಡಿಯ ಗುಣಮಟ್ಟ, ಪ್ಯಾಕೆಟ್, ನೋಟಗಳು ಆಕರ್ಷಕ. ದರವೂ ಹೇಳುವಷ್ಟು ಕಡಿಮೆಯೇನಲ್ಲ. ಗುಣಮಟ್ಟದ ಹಿನ್ನೆಲೆಯಲ್ಲಿ ಹೆಚ್ಚೂ ಅಲ್ಲ. ಇದನ್ನು ನೋಡಿದಾಗ ಯಕ್ಷಗಾನದ ಸಿಡಿ, ಡಿವಿಡಿಗಳು ಜನರನ್ನು ಗಾಢವಾಗಿ ಸೆಳೆಯುವಲ್ಲಿ ಎಲ್ಲಿ ಸೋತಿವೆ? ಹಿರಿಯ ಕಲಾವಿದರು ಭಾಗವಹಿಸಿದ ಕೂಟ/ಆಟದ ಧ್ವನಿಮುದ್ರಣದ ದಾಖಲಾತಿಗಳು ಎಲ್ಲಿವೆ? ಇದ್ದರೂ ಅಲ್ಲೋ ಇಲ್ಲೋ ಕೆಲವು ಸಂಗ್ರಾಹಕರಲ್ಲಿ ಭದ್ರವಾಗಿವೆ! ಇವೆಲ್ಲಾ ಕೇಳುಗರಿಗೆ ಮರೀಚಿಕೆ.
               ಧ್ವನಿಸುರುಳಿಗಳ ಯಶೋಯಾನದ ಬಳಿಕ ಅಡಕ ತಟ್ಟೆಗಳ ಪರ್ವ ಶುರುವಾಯಿತು. ಆರಂಭದ ದಿವಸಗಳಲ್ಲಿ ಒಂದು ಸೀಡಿ ಖರೀದಿಸುವುದೆಂದರೆ ತೀರಾ ದುಬಾರಿ. ಅದನ್ನು ಹೊಂದುವುದೂ ಪ್ರತಿಷ್ಠೆ.  ಬರಬರುತ್ತಾ ಅವುಗಳ ದರವು ಇಪ್ಪತ್ತೋ ಮೂವತ್ತೋ ರೂಪಾಯಿ ತನಕ ಕುಸಿಯಿತು. ವಿವಿಧ ಕಂಪೆನಿಗಳು ಧ್ವನಿಸುರುಳಿಗಳನ್ನು ನಿರ್ನಾಣ ಮಾಡುತ್ತಿದ್ದುವು. 'ಸಂಗೀತ'ದಂತಹ ಕಂಪೆನಿಗಳು ಧ್ವನಿಸುರುಳಿಗಳ ತಯಾರಿಯಲ್ಲಿ ಮೇಲ್ಮೆ ಸಾಧಿಸಿದ ದಿನಮಾನಗಳೀಗ ಭೂತಕಾಲಕ್ಕೆ ಸಂದುಹೋಗಿವೆ. ಕ್ರಮೇಣ ವೈಯಕ್ತಿಕವಾಗಿ ಹಲವು ನಿರ್ಮಾಪಕರು ಸೃಷ್ಟಿಯಾದರು. ಧ್ವನಿಸುರುಳಿಗಳ  ತಯಾರಿಯಲ್ಲಿದ್ದ ಗುಣಮಟ್ಟದ ಕಾಳಜಿಗಳು ಸೀಡಿಗಾಗುವಾಗ ಕುಸಿತ ಕಂಡಿತ್ತು. 
                 ಬಹುಶಃ ಆಧುನಿಕ ತಂತ್ರಜ್ಞಾನಗಳು ಧ್ವನಿಸುರುಳಿಗಳ ಮೂಲಕ ಪ್ರವೇಶವಾದುವು. ಮನೆಮನೆಯಲ್ಲಿ ಟೇಪ್ರೆಕಾರ್ಡರ್ಗಳು ಮನೆಮಾಡಿದುವು. ಜತೆಜತೆಗೆ ಹೊಸ ಹೊಸ ಧ್ವನಿಸುರುಳಿಗಳು ಮಾರುಕಟ್ಟೆಗೆ ಬಂದುವು. ಕೊಳ್ಳುಗಳ ಸಂಖ್ಯೆ ವೃದ್ಧಿಯಾಯಿತು. ಸಮಾರಂಭಗಳಲ್ಲಿ ಯಕ್ಷಗಾನದ ಧ್ವನಿಸುರುಳಿಯನ್ನು ಕೇಳಿಸುವುದು ಅಭಿಮಾನದ ವಿಚಾರವಾಯಿತು.  ನಿಧಾನಕ್ಕೆ ಈ ಮನಃಸ್ಥಿತಿ ಹಬ್ಬಿತು. ಯಾವಾಗ ಬೇಡಿಕೆ ಹೆಚ್ಚಾಯಿತೋ ಕಂಪೆನಿಯ ಹೊರತಾದ ಚಿಕ್ಕಚಿಕ್ಕ ನಿರ್ಮಾಾತೃಗಳು ಹುಟ್ಟಿಕೊಂಡರು. ತಂತಮ್ಮ ಅಭಿಮಾನಿ ಕಲಾವಿದರ ಸಂಯೋಜನೆಯಲ್ಲಿ ಧ್ವನಿಸುರುಳಿಗಳು ತಯಾರಾದುವು. ಯಾವ್ಯಾವುದೋ ಕಥಾನಕಗಳು ರಚನೆಯಾದುವು. 'ಗುಣಮಟ್ಟ' ಎನ್ನುವುದು ಶಬ್ದಕೋಶದಲ್ಲಿ ಉಳಿದುವು!   ಕೊನೆಕೊನೆಗೆ ಧ್ವನಿಸುರುಳಿಗಳ ತಯಾರಿಯಲ್ಲಿ ಲಾಭವಿದೆಯೆಂದು ಗ್ರಹಿಸಿದ ಕಲಾವಿದರೇ ಕ್ಯಾಸೆಟ್ಟಿನ ನಿರ್ಮಾತೃಗಳಾದರು.
                 ಇದೇ ಪಾಡು ಅಡಕ ತಟ್ಟೆ ಯಾ ಸೀಡಿಗಳದ್ದು ಕೂಡಾ. ವೈಯಕ್ತಿಕ ಆಸಕ್ತಿಯಿಂದ ಯಕ್ಷಗಾನದ ನೂರಾರು ಸೀಡಿಗಳು ಮಾರುಕಟ್ಟೆಗೆ ಲಗ್ಗೆಯಿಟ್ಟವು. ಸೀಡಿ ತಯಾರಿಯಲ್ಲಿ ಕಲಾವಿದರು ಆಸಕ್ತರಾದರು. ಅಭಿಮಾನಿ ಪ್ರಭಾವವು ಸೀಡಿ ತಯಾರಿಯಲ್ಲೂ ನುಸುಳಿದುವು. ಅಭಿಮಾನಿಗಳ ವ್ಯಾಪ್ತಿಯಲ್ಲಿ ಸೀಡಿಗಳು ಕೂಡಾ ಸೀಮಿತ ಚಾನೆಲ್ಲಿನಲ್ಲಿ ಪ್ರಚಾರವಾದುವು. ಅಭಿಮಾನದ ಪ್ರಖರತೆ ಮತ್ತು ಹೊಗಳಿಕೆಯ ಪರಾಕಾಷ್ಠೆಯ ಮುಂದೆ ಗುಣಮಟ್ಟಗಳು ಮಂಡಿಯೂರಿದುವು. ಬಹುತೇಕ ಕಲಾವಿದರು ಬಿಡುವಿನ ಅವಧಿಯಲ್ಲಿ ಸೀಡಿಗಳ ಮಾರಾಟವನ್ನು ಮಾಡಿದುದನ್ನು ನೋಡಿದ್ದೇನೆ. ತಪ್ಪಲ್ಲ, ಬಿಡಿ.
              ಆಟ ನೋಡುವ ಅಭಿಮಾನಿ ಚೌಕಿಗೆ ಹೋಗಿ ಕಲಾವಿದರನ್ನು ಮಾತನಾಡಿಸುವುದು ಕಲಾವಿದರ ಮೇಲಿನ ಗೌರವ. ನಿಜ ಅಭಿಮಾನಿಯ ಅಂದರೆ 'ಯಕ್ಷಗಾನದ ಅಭಿಮಾನಿ'ಯ ಇಂತಹ ವರ್ತನೆಯನ್ನು ಹಗುರವಾಗಿ ಕಂಡವರ ಹಲವರ ಪರಿಚಯ ನನಗಿದೆ. ತನ್ನ ಸಂಯೋಜನೆಯಲ್ಲಿ ಸಿದ್ಧವಾದ ಸೀಡಿಯನ್ನು ಬಲವಂತದಿಂದ ಅಭಿಮಾನಿಯ ಕೈಗಿಡುವ ಮಾರಾಟ ತಂತ್ರಕ್ಕೆ ಅಭಿಮಾನಿ ಮೊದಮೊದಲು ಒಗ್ಗಿಕೊಂಡರೂ, ಬಳಿಕ ರೋಸಿ ಹೋಗಿದ್ದಾರೆ. ಇದರಿಂದಾಗಿ ಚೌಕಿಗೆ ಹೋಗದ ಎಷ್ಟೊ ಮಂದಿಗಳು ಇದ್ದಾರೆ. ಅಲ್ಲಿಗೆ ಹೋದರೆ ಸಾಕು, ನೂರೋ ಇನ್ನೂರೋ ರೂಪಾಯಿ ಕಿಸೆಯಿಂದ ಜಾರಿದಂತೆ! ಖರೀದಿಸುವವರ ಆಸಕ್ತಿ ಗಮನಿಸಿ ಸೀಡಿಯನ್ನು ಮಾರಾಟ ಮಾಡಿದರೆ ಓಕೆ. ಆದರೆ ಅಭಿಮಾನಿಯ ಅಭಿಮಾನವನ್ನು ಎಷ್ಟೋ ಮಂದಿ ಸೀಡಿ ಮಾರಾಟಪ್ರಿಯ ಕಲಾವಿದ ಕೆಣಕಿದುದನ್ನು, ಹಗುರವಾಗಿ ಕಂಡುದನ್ನು ನೋಡಿ ಮರುಗಿದ್ದೇನೆ. ಸೀಡಿ ಮಾರಾಟಕ್ಕಿದ್ದಷ್ಟು ಆಸಕ್ತಿಯು ರಂಗಾಭಿವ್ಯಕ್ತಿಯಲ್ಲಿ ಇರುತ್ತಿದ್ದರೆ ಪ್ರದರ್ಶನಕ್ಕೂ ನ್ಯಾಯ ಸಲ್ಲಿಕೆಯಾಗುತ್ತಿತ್ತಲ್ವಾ.
                  ಇಷ್ಟೆಲ್ಲಾ ಹೇಳುವಾಗ ಸಹಜವಾಗಿ ಸಂಬಂಧಪಟ್ಟ ಕಲಾವಿದರಿಗೆ ನೋವಾಗುತ್ತದೆ, ಅದು ನಮ್ಮ ವೈಯಕ್ತಿಕ. ಅದನ್ನು ಹೇಳಲು ನೀವಾರು? ನಿಮಗೆ ಬೇಕಾದರೆ ಫ್ರೀ ಕೊಡ್ತೇನೆ, ಎಂದು ಉಡಾಫೆ ಮಾತನಾಡಿದ ಮನಸ್ಸುಗಳ ಮಾತಿನ್ನೂ ಹಸಿಯಾಗಿದೆ. "ಇವರೆಲ್ಲಾ ಹವ್ಯಾಸಿಗಳು. ನಮ್ಮ (ವೃತ್ತಿಪರ) ಕುರಿತು ಮಾತನಾಡಲು ಯೋಗ್ಯತೆಯಿಲ್ಲ. ಇವರು ಎಷ್ಟು ವರುಷ ಮೇಳದಲ್ಲಿ ತಿರುಗಾಟ ಮಾಡಿದ್ದಾರೆ," ಎನ್ನುವ ಮಾತನ್ನು ಕೇಳಿದ್ದೇನೆ. ಕಲಾವಿದ ಮಾರಾಟ ಮಾಡುವುದು ತಪ್ಪಲ್ಲ. ಅದು ಹೊಟ್ಟೆಪಾಡಿನ ವಿಚಾರ. ಆದರೆ ತಾನು ಅಭಿಮಾನಿಗೆ ನೀಡುವ ಸೀಡಿಗಳ ಗುಣಮಟ್ಟ ಹೇಗಿದೆ? ಅವರು ಯಾವ ಕಲಾವಿದರನ್ನು ಅಪೇಕ್ಷೆ ಪಡುತ್ತಾರೆ? ಆವರಿಗೆ ಆಸಕ್ತಿ ಇದೆಯಾ? ಮೊದಲಾದ ಕನಿಷ್ಠ ಪ್ರಶ್ನೆಗಳನ್ನು ಹಾಕಿಕೊಳ್ಳಬೇಕಾಗುತ್ತದೆ.
                  ಈಗೀಗ ಯಕ್ಷಗಾನದ ಪ್ರದರ್ಶನಗಳು ಅದ್ದೂರಿಯಾಗಿ ನಡೆಯುತ್ತವೆ. ವೀಡಿಯೋ ಚಿತ್ರೀಕರಣ ಇಲ್ಲದ ಆಟಗಳೇ ಕಡಿಮೆ. ಕ್ರಮೇಣ ಈ ಪ್ರದರ್ಶನದ ಚಿತ್ರೀಕರಣವು ಸೀಡಿ/ವಿಸಿಡಿ ರೂಪದಲ್ಲಿ ಲಭ್ಯವಾಗುತ್ತದೆ. ಅದಕ್ಕಿಂತಿಷ್ಟು ಮೊತ್ತವನ್ನೂ ನಿಗದಿ ಪಡಿಸಲಾಗುತ್ತದೆ. ತಪ್ಪಲ್ಲ ಬಿಡಿ, ಅದು ಅವರವರ ವಿವೇಚನೆಗೆ ಬಿಟ್ಟ ವಿಚಾರ. ಒಂದು ಗಂಟೆಯ ಸೀಡಿಯನ್ನೇ ಎಷ್ಟು ಮಂದಿ ಪೂರ್ತಿಯಾಗಿ ನೋಡುತ್ತಾರೆ, ಅಂತಹುದಲ್ಲಿ ಇಡೀ ರಾತ್ರಿಯ ಆರೇಳು ಗಂಟೆಯದನ್ನು ಪೂರ್ತಿಯಾಗಿ ಮನಸಾ ನೋಡುತ್ತಾರೆ ಎನ್ನುವುದರಲ್ಲಿ ನನಗಂತೂ ನಂಬುಗೆಯಿಲ್ಲ. ಇಂತಹ ಸೀಡಿಗಳನ್ನು ಆಸಕ್ತರು ಅಪೇಕ್ಷೆ ಪಟ್ಟರೆ ನೀಡಲಿ. ಆದರೆ ಬಲವಂತದಿಂದ ನಾನೂರೋ, ಐನೂರೋ ರೂಪಾಯಿಗೆ ಮಾರಾಟ ಮಾಡುವುದು, ಖರೀದಿಸುವವನಿಗೆ ಹೊರೆ. ನಾನು ಇಂತಹ ಒಂದೆರಡು ಘಟನೆಗಳ ಫಲಾನುಭವಿ. ಸರಿ, ನೀಡಿದ ನಾಲ್ಕೋ ಐದೋ ಡಿವಿಡಿಗಳಲ್ಲಿ ತಾಂತ್ರಿಕ ಸಮಸ್ಯೆಯಿಂದ ಒಂದೆರಡು ಮುಷ್ಕರ ಹೂಡದೇ ಇರುವುದೇ ಕಡಿಮೆ.
                    ಈಗಂತೂ ತಂತ್ರಜ್ಙಾನ ನಾಗಾಲೋಟದಲ್ಲಿದೆ. ಸೀಡಿ, ಡಿವಿಡಿಯಿಂದ 'ಪೆನ್ಡ್ರೈವ್'ಗೆ ಇಳಿದಿದೆ. ಹಳತನ್ನು ಪೆನ್ಡ್ರೈವಿಗೆ ಇಳಿಸಿಕೊಂಡೋ, ಕಾರ್ಯಕ್ರಮದ ನೇರ ಧ್ವನಿಮುದ್ರಣವನ್ನು ದಾಖಲಿಸಿಕೊಂಡು ಕೇಳುವ ದೊಡ್ಡ ವರ್ಗವಿದೆ. ಉತ್ತಮ ಕಲಾವಿದರ ಸಂಯೋಜನೆಯ ಆಟ, ಕೂಟಗಳನ್ನು ನೋಡುವ ಸಹೃದಯಿ ಪ್ರೇಕ್ಷಕರಿದ್ದಾರೆ. ಯಾವುದೇ ಅಭಿಮಾನದ, ಅಭಿಮಾನಿ ಕಲಾವಿದರ ಹಂಗಿಲ್ಲದೆ ಯಕ್ಷಗಾನವನ್ನು ನೋಡುವ ಅಜ್ಞಾತ ಪ್ರೇಕ್ಷಕರಿದ್ದಾರೆ. ಅಂತಹವರು ಉತ್ತಮ ಕಾರ್ಯಕ್ರಮಗಳ ಹುಟುಕಾಟದಲ್ಲಿದ್ದಾರೆ. ಗುಣಮಟ್ಟದ ಧ್ವನಿಸುರುಳಿ, ಸೀಡಿಗಳನ್ನು ಅರಸುವ ಯಕ್ಷಪ್ರಿಯರ ಗಡಣ ದೊಡ್ಡದಿದೆ.
                  ಇಂತಹವರಿಗೆ ಪೂರೈಸುವುದಕ್ಕಾಗಿಯೇ ಗುಣಮಟ್ಟದ ಸೀಡಿ/ಡಿವಿಡಿಗಳ ನಿರ್ಮಾಣ ಯಾಕೆ ಆಗುತ್ತಿಲ್ಲ? ಲೇಖನಾರಂಭದಲ್ಲಿ ಉಲ್ಲೇಖಿಸಿದಂತೆ ಹತ್ತೋ ಹನ್ನೆರಡು ಸಿಡಿಗಳ ಪ್ಯಾಕೆಜ್ ಮಾಡಿದರೆ ದರದ ಬಗ್ಗೆ ತಲೆಕೆಡಿಸಿಕೊಳ್ಳದೆ ಖರೀದಿಸುವವರಿದ್ದಾರೆ. ಶೇಣಿ, ಸಾಮಗ, ತೆಕ್ಕಟ್ಟೆ, ಕುಂಬಳೆ, ಸಿದ್ಧಕಟ್ಟೆ.. ಇಂತಹ ಕಲಾವಿದರ ಪ್ಯಾಕೇಜ್ ಪ್ಯಾಕೆಟನ್ನು ಸಿದ್ಧಪಡಿಸಬಹುದು. ಇಂಡಿಯ ಟುಡೇಯವರ ಸಂಗೀತದ ಈ ಪ್ಯಾಕೆಜ್ ಸೀಡಿಗಳ ಗುಚ್ಛ ಯೋಜನೆಯನ್ನು ಯಕ್ಷಗಾನ ಕ್ಷೇತ್ರ ಸ್ವೀಕರಿಸಬಹುದು. ಹತ್ತಿಪ್ಪತ್ತು ವರುಷಗಳ ಹಿಂದಿನ ಕ್ಯಾಸೆಟ್ಟನ್ನು ಸೀಡಿ ಮಾಡಿ ಕೇಳುವ ಪ್ರೇಕ್ಷಕರು ಈಗಲೂ ಇದ್ದಾರೆ ಎಂದರೆ ಇಂತಹ ಪ್ಯಾಕೆಜನ್ನು ಸ್ವೀಕರಿಸುವುದರಲ್ಲಿ ಎರಡು ಮಾತಿಲ್ಲ. ವಾಟ್ಸಪ್ ಗುಂಪುಗಳಲ್ಲಿ ಆಗೊಮ್ಮೆ ಈಗೊಮ್ಮೆ ಎರಡು ದಶಕಗಳ ಹಿಂದಿನ ಧ್ವನಿಸುರುಳಿಗಳನ್ನು ಹೊಸ ತಂತ್ರಜ್ಞಾನಕ್ಕೆ ಬದಲಾಯಿಸಿ ಹರಿಯಬಿಡುವುದನ್ನು ನೋಡಿದರೆ ಪ್ಯಾಕೇಜ್ ಪ್ಯಾಕೆಟ್ಟಿನ ಯೋಜನೆ ಯಶವಾಗಬಹುದು. ಅದನ್ನು ಉಡುಗೊರೆಯ ಸಾಧನವಾಗಿಯೂ ಬಳಸಬಹುದು.


ಪೆರುವಡಿ ಸಹೋದರರ ಮೂಲ್ಕಿ ಮೇಳದ ಯಶೋಯಾನ

ಪ್ರಜಾವಾಣಿಯ 'ದಧಿಗಿಣತೋ' ಅಂಕಣ  /  10-2-2017

                "ನನ್ನ ಯಜಮಾನರು ಮೂಲ್ಕಿ ಮೇಳ ಮಾಡಿದ್ದರಿಂದಾಗಿ ನಾಲ್ಕು ಜನರಿಗೆ ಪರಿಚಯವಾದರು. ಮೈದುನ ನಾರಾಯಣ ಭಟ್ಟರಿಗೆ ಮೇಳದ ಉಸ್ತುವಾರಿಕೆ. ಇವರಿಗ ಕೃಷ್ಣ ಭಟ್ಟರಿಗೆ ಕ್ಯಾಂಪ್ ಬುಕ್ ಮಾಡುವ ಕೆಲಸ. ಮೇಳದ ಯಜಮಾನರೆಂಬ ನೆಲೆಯಲ್ಲಿ ಸಮಾಜದಲ್ಲಿ ಗೌರವದ ಸ್ಥಾನಮಾನವಿತ್ತು. ಅಣ್ಣ-ತಮ್ಮ ಇಬ್ಬರೂ ಮೇಳ ನಡೆಸಿ ಅದರಿಂದ ಮನೆಗೆ ಒಂದು ಪೈಸೆ ತಂದಿರಲಾರರು," ಕೀರ್ತಿಶೇಷ ಪೆರುವಡಿ ಕೃಷ್ಣ ಭಟ್ಟರ ಪತ್ನಿ ಶಂಕರಿ ಅಮ್ಮ, ಒಂದು ಕಾಲಘಟ್ಟದ ಮೇಳದ ಬದುಕನ್ನು ಜ್ಞಾಪಿಸಿಕೊಂಡರು. ಇವರ ಮಗಳು ಗೌರಿ. ತನ್ನ ಅಮ್ಮನಿಗೆ ಸಾಥ್ ಆಗಿ, ಯಕ್ಷಗಾನ ಭಾಗವತಿಕೆ, ಕಲಾವಿದರ ಒಡನಾಟದಲ್ಲೇ ನಾವು ಬಾಲ್ಯವನ್ನು ಕಳೆದೆವು, ಎಂದರು.
                ಪೆರುವಡಿ ಕೃಷ್ಣ ಭಟ್, ಪೆರುವಡಿ ನಾರಾಯಣ ಭಟ್, ಪೆರುವಡಿ ಈಶ್ವರ ಭಟ್ - ಮೂವರು ಸಹೋದರರು. ಪದ್ಯಾಣ ಮೂಲ. ಪುತ್ತೂರಿನ ತೆಂಕಿಲ-ನೂಜಿಯಲ್ಲಿ ಬದುಕು. ನಾರಾಯಣ ಭಟ್ಟರು ಹಾಸ್ಯಗಾರರಾಗಿ ಯಕ್ಷಗಾನದ ಹಾಸ್ಯಕ್ಕೆ ಮಾನ ತಂದವರು. ಇವರ ಅಜ್ಜ ಪೆರುವಡಿ ಸುಬ್ರಾಯ ಭಟ್ಟರು 'ಮೂಲ್ಕಿ ಶ್ರೀ ವೆಂಕಟ್ರಮಣ ಸ್ವಾಮಿ ಯಕ್ಷಗಾನ ಕಲಾ ಮಂಡಳಿ' ಆರಂಭಿಸಿದ ಸಾಹಸಿ. ಸುಮಾರು 1955-60ರ ಆಜೂಬಾಜು. ಒಂದು ವರುಷ ತಿರುಗಾಟ ಪೂರೈಸಿದ ಮೇಳ ನಿಲುಗಡೆಯ ಹಂತಕ್ಕೆ ಬಂದಾಗ ಪೆರುವಡಿ ಸಹೋದರರು ಹೆಗಲು ಕೊಟ್ಟರು. ಮೇಳದ ಹೊರಗಡೆಯ ಜವಾಬ್ದಾರಿ ಕೃಷ್ಣ ಭಟ್ಟರಿಗೆ, ಒಳಗಿನ ವ್ಯವಹಾರದ ಹೋಣೆ ನಾರಾಯಣ ಭಟ್ಟರಿಗೆ ಮತ್ತು ಈಶ್ವರ ಭಟ್ಟರಿಗೆ ಮನೆವಾರ್ತೆ. 
               ಈಶ್ವರಪ್ಪಯ್ಯ ಭಾಗವತರು, ಪೆರುವಡಿ ರತ್ನಾಕರ ಭಟ್, ದಿವಾಣ ಭೀಮ ಭಟ್ಟರಂತಹ ಉದ್ಧಾಮರ ಹಿಮ್ಮೇಳ. ಉರ್ವ ಅಂಬು, ಅಪ್ಪಯ್ಯ ಮಣಿಯಾಣಿ, ಉದ್ಯಾವರ ಬಸವ, ರಾಮಕೃಷ್ಣ ಕಮ್ತಿ, ಮಾಧವ ಶೆಟ್ಟಿ... ಹೀಗೆ ಕಲಾವಿದರ ದಂಡು. ಪಾಪ ಭಟ್ರ್ ಬತ್ತೇರ್ ಮಾರಾಯ, ಆಟ ಕೊರ್ಕೊ’  (ಭಟ್ರು ಬಂದ್ರು ಮಾರಾಯ, ಆಟ ಕೊಡುವಾ) ಎಂದು ವೀಳ್ಯ ನೀಡಿದ ಆಢ್ಯರ ನೆನಪು ನಾರಾಯಣ ಭಟ್ಟರಿಗಿದೆ. ಮೊದಲ ತಿರುಗಾಟದಲ್ಲೇ ಮುನ್ನೂರು ರೂಪಾಯಿ ನೀಡಿ ಎತ್ತು ಸಹಿತ ಗಾಡಿಯನ್ನು ಸಾಗಾಟಕ್ಕೆ ಖರೀದಿ.
              ಮೂರನೇ ವರುಷದಿಂದ ಟೆಂಟ್ ಮೇಳವಾಗಿ ಬದಲಾಯಿತು. ಆಗ ಕುಂಡಾವು ಮತ್ತು ಕೂಡ್ಲು ಮೇಳಗಳು ಮಾತ್ರ ತೆಂಕಿನಲ್ಲಿ ಟೆಂಟ್ ಹೊಂದಿದ್ದುವು. ಒಂದೇ ಕಡೆ ಮೂರ್ನಾಲ್ಕು ದಿವಸ ನಿರಂತರ ಆಟ. ಎಲ್ಲಾ ಕಡೆ ಕೃಷ್ಣ ಲೀಲೆ, ಸುದರ್ಶನೋಪಾಖ್ಯಾನ, ಶ್ರೀ ದೇವಿ ಮಹಾತ್ಮೆ' ಪ್ರಸಂಗಗಳು. ಮೊದಲೆರಡು ಪ್ರಸಂಗಗಳಲ್ಲಿ ನಷ್ಟ ಬಂದರೂ ದೇವಿ ಮಹಾತ್ಮೆ ಪ್ರದರ್ಶನವು ನಷ್ಟವನ್ನು ತುಂಬಿ ಕೊಡುತ್ತಿತ್ತು ಎನ್ನುತ್ತಾರೆ. ಮೇಳ ವಿಜೃಂಭಿಸಿತು.
              ಕಡತೋಕ ಮಂಜುನಾಥ ಭಾಗವತರು ತೆಂಕಿನ ಮೇಳದಲ್ಲಿ ಭಾಗವತರಾದ ಘಟನೆಯನ್ನು ಹಾಸ್ಯಗಾರರೇ ಹೇಳಬೇಕು - ಮೂಲ್ಕಿ ಮೇಳವು ಉತ್ತರ ಕನ್ನಡದಲ್ಲಿ ತಿರುಗಾಟ ಮಾಡುತ್ತಿತ್ತು. ಆಗ ಕಡತೋಕ ಮಂಜುನಾಥ ಭಾಗವತರು ಮೂರೂರು ದೇವರು ಹೆಗಡೆ ಮೇಳದಲ್ಲಿದ್ದರು. ಯಾವುದೋ ಮನಸ್ತಾಪದಿಂದ ಮನೆಗೆ ಬಂದಿದ್ದರು. ಹೊನ್ನಾವರದ ಹಳದಿಪುರದಲ್ಲಿ ನಮ್ಮ ಆಟವಿತ್ತು. ತಲೆಂಗಳ ಶಂಭಟ್ಟರು ಮೇಳದ ಮುಖ್ಯ ಭಾಗವತರು. ಕಡತೋಕರು ಆಟ ನೋಡಲು ಆಗಮಿಸಿದ್ದರು. ನನ್ನ ಒತ್ತಾಯಕ್ಕೆ ಅರ್ಧ ಗಂಟೆ ಪದ್ಯ ಹೇಳಿದರು. ಅನಂತರ ಆಗಾಗ್ಗೆ ಬರುತ್ತಿದ್ದರು. ಕೊನೆಗೆ ವರ್ಷಪೂರ್ತಿ ತಿರುಗಾಟ ಮಾಡಿದರು. ಮೇಳದ ಖಾಯಂ ಭಾಗವತರಾದರು.
               'ಸತ್ಯಹರಿಶ್ಚಂದ್ರ, ನಳ ದಮಯಂತಿ, ಬ್ರಹ್ಮಕಪಾಲ' ಪ್ರಸಂಗಗಳ ಪ್ರದರ್ಶನಗಳು ಖ್ಯಾತಿ ಪಡೆದುವು. ಕೀರ್ತಿಶೇಷ ಮಲ್ಪೆ ರಾಮದಾಸ ಸಾಮಗರ 'ನಳ, ಹರಿಶ್ಚಂದ್ರ, ಈಶ್ವರ'ನ ಪಾತ್ರಗಳು. ಒಂದು ತಿರುಗಾಟದ ನಂತರ ರಾಮದಾಸ ಸಾಮಗರು 'ಕುಂಡಾವು ಮೇಳ' ಸೇರಿದರು. ಮುಂದಿನ ಎರಡು ತಿರುಗಾಟಗಳಲ್ಲಿ ಮಲ್ಪೆ ಶಂಕರನಾರಾಯಣ ಸಾಮಗರು ನಮ್ಮೊಂದಿಗಿದ್ದರು. ಮೇಳದ ಬವಣೆಯನ್ನು ಹಾಸ್ಯಗಾರರು ಹೇಳುತ್ತಾರೆ, ಮೇಳದೊಳಗೆ ಕಲಾವಿದರ ಗುಂಪುಗಾರಿಕೆ, ಮೇಳದ ಜವಾಬ್ದಾರಿ, ಪಾತ್ರ ಹಂಚುವಿಕೆಯಲ್ಲಿ ಕಲಾವಿದರ ಅಸಹನೆಗಳಿಂದ ಮಾನಸಿಕವಾಗಿ ನೊಂದಿದ್ದೆ. ಹಲವು ಸಮಸ್ಯೆಗಳನ್ನು ತಲೆಯಲ್ಲಿಟ್ಟುಕೊಂಡು ರಾತ್ರಿಯಿಡೀ ವೇಷವನ್ನೂ ಮಾಡಬೇಕು. ಜಲಂಧರ ಕಾಳಗದಂತಹ ಪ್ರಸಂಗ ಬಂದರೆ ಹದಿನಾರು ವೇಷಗಳನ್ನು ನಾನೊಬ್ಬನೇ ಮಾಡಬೇಕು. ಭದ್ರಾಯು ಚರಿತ್ರೆ, ಜಲಂಧರ ಕಾಳಗ, ವಜ್ರಬಾಹು ಕಾಳಗ, ವಿದ್ಯುನ್ಮತಿ ಕಲ್ಯಾಣ, ಕುಮಾರ ವಿಜಯ ಪ್ರಸಂಗಗಳು ಮೂಲ್ಕಿ ಮೇಳದಲ್ಲಿ ಜಯಭೇರಿ. 'ಪಾಪಣ್ಣ ವಿಜಯ' ಪ್ರಸಂಗವೂ ಮನೆಮಾತಾಯಿತು.
                ವರುಷದಿಂದ ವರುಷಕ್ಕೆ ಮೂಲ್ಕಿ ಮೇಳವು ಉಳಿದ ಮೇಳಗಳಿಗೆ ಸರಿಸಮವಾಗುವಂತೆ ಪ್ರದರ್ಶನ ನೀಡುತ್ತಿತ್ತು. ಅನುಭವಿ ಕಲಾವಿದರನ್ನೊಳಗೊಂಡ ಹಿಮ್ಮೇಳ, ಮುಮ್ಮೇಳ. ಅದ್ದೂರಿ ಜೋಡಾಟಗಳು. ಕೂಡ್ಲು-ಮೂಲ್ಕಿ-ಧರ್ಮಸ್ಥಳ ಮೇಳಗಳೊಳಗೆ ನಡೆದ ಮೂರು ದಿವಸಗಳ ಜೋಡಾಟವನ್ನು ಹಿರಿಯರು ಈಗಲೂ ಜ್ಞಾಪಿಸುತ್ತಾರೆ. 'ಅತಿಕಾಯ-ಇಂದ್ರಜಿತು-ಮೈರಾವಣ, ಕುರುಕ್ಷೇತ್ರ, ಶ್ರೀ ದೇವಿ ಮಹಾತ್ಮೆ' ಪ್ರಸಂಗಗಳು ಪ್ರದರ್ಶಿತವಾಗಿದ್ದುವು. ವಿಟ್ಲದಲ್ಲೊಮ್ಮೆ ಕಟೀಲು ಮತ್ತು ಮೂಲ್ಕಿ ಮೇಳಗಳೊಳಗೆ ಜೋಡಾಟ, ಮೂಲ್ಕಿ-ಧರ್ಮಸ್ಥಳ ಮೇಳಗಳೊಳಗೆ ನಡೆದಿತ್ತು. ಇಷ್ಟು ವೈಭವದಿಂದ ತಿರುಗಾಟ ಮಾಡಿದ ಮೂಲ್ಕಿ ಮೇಳದ ಯಶಕ್ಕೆ ಇಳಿಲೆಕ್ಕ ಆರಂಭವಾದ ಘಟನೆಯನ್ನು ಪೆರುವಡಿ ನಾರಾಯಣ ಭಟ್ಟರು ವಿಷಾದದಿಂದಲೇ ಹೇಳುತ್ತಾರೆ -
              1964ನೇ ಇಸವಿ. ಮುಂಬಯಿಯಲ್ಲಿ ಅವಕಾಶವಿದೆ ಎಂದು ಮೇಳವನ್ನು ಮುಂಬಯಿಗೆ ಒಯ್ದೆವು. ಕೆಲವು ಆಟಗಳು ನಿಶ್ಚಿತವಾದುವು. ಭರ್ಜರಿ ನಾಲ್ಕೈದು ದಿವಸ ಆಟವಾಗಿತ್ತಷ್ಟೇ. ಆಗ ಜವಾಹರಲಾಲ್ ನೆಹರೂ ನಿಧನರಾದ ಸುದ್ದಿ ಮುಂಬಯಿಯನ್ನು ತಲ್ಲಣಗೊಳಿಸಿತು. ಹನ್ನೆರಡು ದಿವಸ ಮುಂಬಯಿ ಬಂದ್. ಊಟಕ್ಕೂ ಗತಿಯಿಲ್ಲದಂತಾಯಿತು. ಕಾಡಿ ಬೇಡಿ ಕಲಾವಿದರ ಲೆಕ್ಕ ಚುಕ್ತಾ ಮಾಡಿದೆವು. ಊರಿಗೆ ಬಂದೆವು. ಮುಂದೆ ನಾಲ್ಕು ವರುಷ ಮೇಳವು ಏದುಸಿರು ಬಿಡುತ್ತಾ ತಿರುಗಾಟ ಮಾಡಿತು. ಕಷ್ಟ-ನಷ್ಟಗಳು ಬಾಧಿಸಿದುವು. ದಿನೇ ದಿನೇ ಸೋಲು. ಕೆಲವು ಕಲಾವಿದರು ಮೇಳ ಬಿಟ್ಟರು.
            ಕುಂದಾಪುರದ ಸನಿಹದ ಒಂದು ಆಟದಲ್ಲಿ ಮೇಳದ 'ಅನ್ನದ ಚೆರಿಗೆ' ಕಳವಾಯಿತು. ಜತೆಗೆ 'ಮೇಳ ಕಂಗಾಲು' ಎನ್ನುವ ಪ್ರಚಾರ. ಆ ಸಮಯಕ್ಕೆ ಅಮ್ಮ ಹಾಸಿಗೆ ಹಿಡಿದಿದ್ದರು. ಅವರ ಶುಶ್ರೂಷೆಗೆ ಅಣ್ಣ ಮನೆಯಲ್ಲಿರುವುದು ಅನಿವಾರ್ಯವಾಯಿತು. ನನಗೆ ಮೇಳ ನಡೆಸುವುದು ತ್ರಾಸವಾಯಿತು. ನಿಲ್ಲಿಸುವ ನಿಧರ್ಾರಕ್ಕೆ ಬಂದೆವು. ಮೇಳದ ಎಲ್ಲಾ ಪರಿಕರಗಳನ್ನು ಮೂಲ್ಕಿ ಒಳಲಂಕೆ ಶ್ರೀ ವೆಂಕಟ್ರಮಣ ದೇವಸ್ಥಾಕ್ಕೆ ಒಪ್ಪಿಸಿ ಮೇಳಕ್ಕೆ ವಿದಾಯ ಹೇಳಿದೆವು. 'ಕಲಾವಿದನಾಗಿದ್ದು ಮೇಳದ ಯಜಮಾನನಾಗಕೂಡದು' ಎನ್ನುವ ಪಾಠವನ್ನು ಮೇಳದ ತಿರುಗಾಟ ಕಲಿಸಿತು.
              ಪೆರುವಡಿ ಕುಟುಂಬದ ಮೇಳವೊಂದು ದಶಕಕ್ಕೂ ಮಿಕ್ಕಿ ತಿರುಗಾಟ ಮಾಡಿದ ಯಶೋಯಾನಕ್ಕೆ ಸಾಕ್ಷಿಯಾಗಿ ಕಲಾವಿದರು, ಕಲಾಭಿಮಾನಿಗಳು ಮಾತಿಗೆ ಸಿಗುತ್ತಾರೆ.

ಪಾತ್ರಗಳಿಗೆ ಮಾನ ತಂದ ಸ್ತ್ರೀಪಾತ್ರಧಾರಿ - ಕೊಕ್ಕಡ ಈಶ್ವರ ಭಟ್


ಕೊಕ್ಕಡ ಈಶ್ವರ ಭಟ್ಟರ 'ದಾಕ್ಷಾಯಿಣಿ' ಮತ್ತು ಪೆರುವೋಡಿ ನಾರಾಯಣ ಭಟ್ಟರ 'ವಿಪ್ರ' - (ಪ್ರಸಂಗ - ದಕ್ಷಾಧ್ವರ)

ಪ್ರಜಾವಾಣಿಯ 'ದಧಿಗಿಣತೋ' ಅಂಕಣ / 3-2-2017

            "ಮುಖದಲ್ಲಿ ನೆರಿಗೆ ಕಟ್ಟಿದರೆ ಮತ್ತೆ ಸ್ತ್ರೀಪಾತ್ರ ಮಾಡಬಾರದು. ತನಗೆ ವಯಸ್ಸಾಯಿತು ಎನ್ನುವ ಮಾನಸಿಕ ಸ್ಥಿತಿಯು ಆತನನ್ನು ರಂಗದಲ್ಲಿ ಯಶಸ್ವಿಗೊಳಿಸದು. ಆತ ಎಷ್ಟೇ ಪ್ರಸಿದ್ಧನಾದರೂ ಆತನ ಅಭಿವ್ಯಕ್ತಿಯು ಪ್ರೇಕ್ಷಕರಿಗೆ ಇಷ್ಟವಾಗದು. ಅಭಿಮಾನದಿಂದ ಒಪ್ಪಿಕೊಳ್ಳುತ್ತಾರಷ್ಟೇ," ಮಾತಿನ ಮಧ್ಯೆ ಹಿರಿಯ ಸ್ತ್ರೀಪಾತ್ರಧಾರಿ ಕೊಕ್ಕಡ ಈಶ್ವರ ಭಟ್ಟರು ತನ್ನನ್ನೇ ಟಾರ್ಗೆಟ್ ಮಾಡುತ್ತಾ ಮಾತು ಮುಂದುವರಿಸುತ್ತಿದ್ದರು. 'ತನಗೆ ವಯಸ್ಸಾಯಿತು' ಎನ್ನುವಂತಹ ಸ್ವ-ಪ್ರಜ್ಞೆಯು ರಂಗಾನುಭವದಿಂದ ಪಕ್ವವಾದಾಗ ಮಾತ್ರ ಕಲಾವಿದನ ಅನುಭವಕ್ಕದು ನಿಲುಕುವುದು. ಆದರೆ ಈಶ್ವರ ಭಟ್ಟರು ಎಪ್ಪತ್ತೈದರ ಅಂಚು ದಾಟಿದರೂ ಅವರ ವೇಷವನ್ನು ಈಗಲೂ ರಂಗವು ಒಪ್ಪುತ್ತದೆ.
            2016 ದಶಂಬರ 25 - ಉಪ್ಪಿನಂಗಡಿ ಸನಿಹದ ತಾಳ್ತಜೆಯಲ್ಲಿ ಜರುಗಿದ 'ಹೇಮಂತ ಹಬ್ಬ'ದಲ್ಲಿ ಜರುಗಿದ 'ರತಿ ಕಲ್ಯಾಣ' ಪ್ರಸಂಗದಲ್ಲಿ ಭಟ್ಟರು 'ದ್ರೌಪದಿ'ಯಾಗಿ ಇಳಿ ವಯಸ್ಸಲ್ಲೂ ನಯ ನಾಜೂಕಿನ ಸ್ತ್ರೀಪಾತ್ರಧಾರಿಯಾಗಿ ಮೆರೆದರು. ಅವರ ಜತೆಗೆ ಪಾತ್ರ ಮಾಡುವ ಅವಕಾಶ ಪ್ರಾಪ್ತವಾದರೂ ಭಟ್ಟರ ಮೇರು ವ್ಯಕ್ತಿತ್ವದ ಮುಂದೆ ಕುಬ್ಜನಾಗಿದ್ದೆ. ಜತೆಗೆ ಭಟ್ಟರೊಂದಿಗೆ ವೇಷ ಮಾಡಿದ ಹೆಮ್ಮೆಯೂ! ಈ ಹೆಮ್ಮೆಯು ಕೋಡು ಮೂಡಿಸಲಿಲ್ಲ. ಬದಲಿಗೆ ನನಗೆ ಬಾಗಲು ಕಲಿಸಿತು. ಕಳೆದ ವರುಷವೂ ದಮಯಂತಿ ಪುನರ್ಸ್ವಯಂವರ ಪ್ರಸಂಗದಲ್ಲಿ 'ಚೇದಿ ರಾಣಿ'ಯಾಗಿ ಹಳೆಯ ನೆನಪನ್ನು ರಂಗದಲ್ಲಿ ದಾಖಲಿಸಿದ್ದರು. ಅಂದು ಎಂ.ಕೆ.ರಮೇಶ ಆಚಾರ್ಯರು 'ದಯಮಂತಿ'ಯಾಗಿ ಕೊಕ್ಕಡದವರಿಗೆ ಸಾಥ್ ಆಗಿದ್ದರು.
              "ರಂಗದಲ್ಲಿ ಕಸುಬು ಮಾಡುವ ಕಲಾವಿದನಿಗೆ ತನ್ನ ಪಾತ್ರ ನಿರ್ವಹಣೆಯಲ್ಲಿ 'ತೃಪ್ತಿ' ಬೇಕು. ಸ್ತ್ರೀಪಾತ್ರಗಳಿಗೆ ರಂಗದಲ್ಲಿ ಅವಕಾಶ ಹೆಚ್ಚಿದ್ದಾಗ ಕಸುಬಿನಲ್ಲಿ ತೃಪ್ತಿ ಸಹಜವಾಗಿ ಬರುತ್ತದೆ. ಬೆಳಗ್ಗಿನವರೆಗೆ ಆಗಾಗ್ಗೆ ಬಂದು ಮರೆಯಾಗುವ ಸ್ತ್ರೀಪಾತ್ರಗಳು ರಂಗದಲ್ಲಿ ಮೆರೆಯುವುದಿಲ್ಲ. ಆತನಿಂದ ಉತ್ತಮ ಅಭಿವ್ಯಕ್ತಿಯನ್ನು ನಿರೀಕ್ಷಿಸುವಂತಿಲ್ಲ. ಕಲಾವಿದನನ್ನು ಪ್ರೇಕ್ಷಕ ಬಹುಬೇಗ ಮರೆಯುತ್ತಾನೆ," ಎಂನ್ನುತ್ತಾ ಕಳೆದ ಕಾಲವನ್ನು ಜ್ಞಾಪಿಸಿಕೊಳ್ಳುತ್ತಾರೆ.
              ಎಪ್ಪತ್ತೈದರ ಹರೆಯದ ಈಶ್ವರ ಭಟ್ಟರು ಅರ್ಧ ಶತಮಾನಕ್ಕೂ ಮಿಕ್ಕಿ ರಂಗದಲ್ಲಿ ತರುಣಿಯಾಗಿದ್ದಾರೆ. 'ಮೋಹಿನಿ'ಯಿಂದ 'ಚಂದ್ರಮತಿ' ತನಕ. ಒಂದು ಕಾಲಘಟ್ಟದ ಪ್ರದರ್ಶನಗಳನ್ನು ನೆನಪಿಸಿಕೊಂಡಾಗ ನಿವೃತ್ತಿಯಾಗುವಲ್ಲಿಯ ತನಕವೂ ಇವರ ಪಾತ್ರಾಭಿವ್ಯಕ್ತಿಯಲ್ಲಿ 'ಪಾತ್ರದ ಹಿರಿತನ'ದ ಗಟ್ಟಿತನವಿದ್ದುದನ್ನು ಗಮನಿಸಬಹುದು. ಗಟ್ಟಿ ಸಂಪನ್ಮೂಲವನ್ನು ಹೊಂದಿದ ಅನುಭವಿಗಳ ಮಧ್ಯದಲ್ಲಿ ಬೆಳೆದ ಪರಿಣಾಮ; ಈಗಲೂ ಕೊಕ್ಕಡದವರನ್ನು ನೆನಪಿಸಿಕೊಡರೆ ಸಾಕು, 'ದಾಕ್ಷಾಯಿಣಿ, ಮಾಯಾ ಶೂರ್ಪನಖಿ' ಪಾತ್ರಗಳು ಮಿಂಚುತ್ತವೆ.
               ಓದಿದ್ದು ಆರನೇ ತರಗತಿ. ಕುಡಾಣ ಗೋಪಾಲಕೃಷ್ಣ ಭಟ್ಟರಿಂದ ನಾಟ್ಯಾಭ್ಯಾಸ. ಒಂದಷ್ಟು ಕಾಲ ಭರತನಾಟ್ಯದ ಕಲಿಕೆ. ಮಧ್ಯೆ ಬಡಗುತಿಟ್ಟಿನ ಹೆಜ್ಜೆಗಳ ಅಭ್ಯಾಸ. ಮುಂದೆ ಕೆರೆಮನೆ ಮೇಳದಲ್ಲಿ ಒಂದು ವರುಷದ ತಿರುಗಾಟ. ಬಡಗು ಹಜ್ಜೆಗಳಿಗೆ ದಯಾನಂದ ನಾಗೂರು ಮತ್ತು ಮೊಳಹಳ್ಳಿ ಕೃಷ್ಣ ಇವರಿಗೆ ಗುರು. ಭಟ್ಟರ ತಂದೆ ಮಹಾಲಿಂಗ ಭಟ್. ತಾಯಿ ಪರಮೇಶ್ವರಿ. ಅಳಿಕೆ ಸನಿಹದ ಮುಳಿಯದಲ್ಲಿ ಹುಟ್ಟು. ಕಡೆಂಗೋಡ್ಲಿನಲ್ಲಿ ಬದುಕು. ಆರನೇ ತರಗತಿ ತನಕ ಶಾಲಾಭ್ಯಾಸ. ಪುತ್ತೂರಿನ ಪೆರುವಡಿಯವರ ನೂಜಿ ಮನೆಯಲ್ಲಿ ಮಿಕ್ಕ ಯಕ್ಷಗಾನದ ವಿವಿಧಾಂಗಗಳ ಆರ್ಜನೆ.
                ಪೆರುವಡಿ ಕೃಷ್ಣ ಭಟ್ಟರ ಸಾರಥ್ಯದ ಮೂಲ್ಕಿ ಮೇಳದಲ್ಲಿ 'ಬಾಲಕೃಷ್ಣ' ಪಾತ್ರದ ಮೂಲಕ ಬಣ್ಣದ ಮೊದಲ ಹೆಜ್ಜೆ. ಮೂಲ್ಕಿಯೂ ಸೇರಿದಂತೆ ಕೂಡ್ಲು, ಸುರತ್ಕಲ್, ಕದ್ರಿ, ಕುಂಬಳೆ, ಸಾಲಿಗ್ರಾಮ, ಶಿರಸಿ, ಇಡಗುಂಜಿ, ಎಡನೀರು ಮೇಳಗಳಲ್ಲಿ ವ್ಯವಸಾಯ. "ಚಂದ್ರಮತಿ, ಶಾರದೆ, ಚಿತ್ರಾಂಗದೆ, ದ್ರೌಪದಿ, ಸುಭದ್ರೆ, ಪ್ರಭಾವತಿ, ಮಾಯಾ ಶೂರ್ಪನಖಿ, ಮಾಯಾಹಿಡಿಂಬಿ, ಮೋಹಿನಿ.." ಹೀಗೆ ಅನೇಕಾನೇಕ ಪಾತ್ರಗಳು ಭಟ್ಟರ ನೆಚ್ಚಿನವುಗಳು. ಖ್ಯಾತಿ ತಂದವುಗಳು. ಕೂಡ್ಲು ಮೇಳದಲ್ಲಿ ಪ್ರದರ್ಶನವಾಗುತ್ತಿದ್ದ 'ಶ್ರೀದೇವಿ ಲಲಿತೋಪಾಖ್ಯಾನ' ಪ್ರಸಂಗದ 'ಶ್ರೀಲಲಿತೆ' ಪಾತ್ರವು ಈಶ್ವರ ಭಟ್ಟರಿಗೆ ತಾರಾಮೌಲ್ಯ ತಂದಿತ್ತು.
               ವೈಯಾರದ ನಾಟ್ಯ, ನಯನಾಜೂಕಿನ ಅಭಿವ್ಯಕ್ತಿ. ಮನಮೋಹಕ ಚಿತ್ರ. ಪಾತ್ರಕ್ಕನುಚಿತವಾದ ಸಂಭಾಷಣೆ ಇವರದು. 'ಮೂಲ್ಕಿ ಮೇಳದಲ್ಲಿ ನನ್ನ ಬಾಹುಕ, ಪಾಪಣ್ಣ ಪಾತ್ರಗಳಿಗೆ ಈಶ್ವರ ಭಟ್ಟರು  ದಮಯಂತಿಯಾಗಿ, ಗುಣಸುಂದರಿಯಾಗಿ ಜತೆಯಾಗಿದ್ದಾರೆ. ಮೇಳಕ್ಕೂ ಹೆಸರು ತಂದಿದ್ದಾರೆ. ಅವರದು ಮೋಹಕ ಪಾತ್ರ. ಲಾಲಿತ್ಯದ ನಡೆ. ಎಷ್ಟೊ ಕಡೆ ಹೆಣ್ಣುಮಕ್ಕಳು ಇವರ ವಯ್ಯಾರದ ಮುಂದೆ ನಾಚಿದ್ದೂ ಇದೆ, ಎಂದು ತನ್ನ ಮೇಳದ ತಿರುಗಾಟದ ಕ್ಷಣಗಳನ್ನು ನೆನಪಿಸಿಕೊಂಡರು, ಹಾಸ್ಯಗಾರ್ ಪೆರುವಡಿ ನಾರಾಯಣ ಭಟ್.
             'ಕಲಾವಿದನಿಗೆ ದುಡ್ಡು ಮುಖ್ಯ ಹೌದು. ಜತೆಗೆ ಅಭಿಮಾನವೂ ಕೂಡಾ. ರಂಗದಲ್ಲಿ ಸರಿಯಾದ ಅಭಿವ್ಯಕ್ತಿಗೆ ಅವಕಾಶವಿಲ್ಲದೇ ಹೋದಾಗ ಅಭಿಮಾನಿಗಳಿಗೆ ಮುಖ ತೋರಿಸಲು ನಾಚಿಕೆಯಾಗುತ್ತದೆ. ಜತೆಗೆ ರಂಗದಲ್ಲಿ ಸಹಪಾತ್ರಧಾರಿಗಳ ಹೊಂದಾಣಿಕೆಯೂ ಕೈಕೊಟ್ಟಾಗ ಆಗುವ ಫಜೀತಿ ಯಾರಲ್ಲಿ ಹೇಳುವುದು ಹೇಳಿ, ರಂಗಸುಖದ ಕುರಿತಾದ ಅವರ ವಿಷಾದ ಬಹುತೇಕ ಸ್ತ್ರೀಪಾತ್ರಧಾರಿಗಳು ಅನುಭವಿಸುವಂತಾದ್ದು.
            ಡಾ.ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ ಸಂಮಾನ, ಕೆರೆಮನೆ ಶಂಭು ಹೆಗಡೆ ಜಯಂತಿ ಸಂಮಾನ, ಮಂಗಳೂರು ಹವ್ಯಕ ಸಭಾ, ಶ್ರೀ ಎಡನೀರು ಮಠ, ಕಲಾರಂಗ ಉಡುಪಿ, ಪಾತಾಳ ಪ್ರಶಸ್ತಿ.. ಹೀಗೆ ಹಲವು ಪ್ರತಿಷ್ಠಿತ ಪುರಸ್ಕಾರಗಳು ಈಶ್ವರ ಭಟ್ಟರ ಕಲಾ ಸೇವೆಗೆ ಸಂದ ಮಾನಗಳು. ಕೊಕ್ಕಡ-ಪಟ್ರಮೆ ಸಮೀಪದ ಹೆನ್ನಳದಲ್ಲಿ ವಾಸ. ಪತ್ನಿ ಶಕುಂತಳೆ. ಮೂವರು ಮಕ್ಕಳು. ಕಡೆಂಗೋಡ್ಲು ನನಗೆ ಬಾಲ್ಯವನ್ನು ಕೊಟ್ಟದ್ದರಿಂದ ಈ ಊರು ನನ್ನ ಹೆಸರಿನೊಂದಿಗೆ ಹೊಸೆಯಬೇಕಿತ್ತು. ಈಗ ಕೊಕ್ಕಡ ಸಮೀಪವಿರುವುದರಿಂದಲೋ ಏನೋ ನಾನೀಗ ಕೊಕ್ಕಡ ಈಶ್ವರ ಭಟ್.
              ವರ್ತಮಾನದ ರಂಗದ ಪೌರಾಣಿಕ ಸ್ತ್ರೀಪಾತ್ರಗಳು ತನ್ನ ಪೌರಾಣಿಕ ನೆಲೆಯನ್ನು ಮರೆತಿವೆ. ಪಾತ್ರಗಳಿಗೂ ಮತಿಯಿದೆ, ಮಾತಿದೆ, ಗೌರವದ ಸ್ಥಾನವಿದೆ. ಅಲ್ಲಿ ಬರುವ ಪಾತ್ರಗಳು ಬದುಕಿನಲ್ಲಿ ಕಾಣ ಸಿಗುವ ಹೆಣ್ಣುಮಕ್ಕಳಂತೆ ಅಲ್ಲ. ಪೌರಾಣಿಕ ಪಾತ್ರಗಳಲ್ಲಿ ಉದಾತ್ತತೆಯನ್ನು ತನ್ನ ಅಭಿವ್ಯಕ್ತಿಯ ಮೂಲಕ ಕಲಾವಿದ ತುಂಬಬೇಕು. ಹಿರಿಯ ಕಲಾವಿದರನೇಕರಲ್ಲಿ ಇಂತಹ ಪ್ರಜ್ಞೆ ಸದಾ ಎಚ್ಚರದಲ್ಲಿರುತ್ತಿತ್ತು. ರಂಗದ ಗೌರವವನ್ನು ಕಾಪಾಡುತ್ತಾ, ಅಭಿವ್ಯಕ್ತಿ-ಮಾತಿನಲ್ಲಿ ಹಿಡಿತ ಸಾಧಿಸುತ್ತಾ ಪಾತ್ರವನ್ನು ಜನಮನದತ್ತ ಒಯ್ಯುವುದು ಸುಲಭದ ಮಾತಲ್ಲ - ಕೊಕ್ಕಡ ಈಶ್ವರ ಭಟ್ಟರ ಹಿರಿನುಡಿ.
              ಹಿರಿಯರು ಹೀಗೆಂದಾಗ ಬಹಳಷ್ಟು ಮಂದಿ ವರ್ತಮಾನದ ರಂಗದಲ್ಲಿ ತೊಡಗಿಸಿಕೊಂಡಿರುವ - ಹವ್ಯಾಸಿ, ವೃತ್ತಿ - ಕಲಾವಿದರು ಅಲ್ಲಗೆಳೆಯುವುದನ್ನು ಗಮನಿಸಿದ್ದೇನೆ. ಒಂದೊಂದು ಪದ್ಯಕ್ಕೆ ಕಾಲು, ಅರ್ಧ ಗಂಟೆ ಕುಣಿಯುವುದೇ ಸ್ತ್ರೀಪಾತ್ರದ ಅರ್ಹತೆ ಎಂದು ಸ್ಥಾಪಿಸುವ ಕಾಲಮಾನದಲ್ಲಿ ಈಶ್ವರ ಭಟ್ಟರಂತಹ ಹಿರಿಯರ ಮಾತು ಅಪಥ್ಯದಂತೆ ಕಾಣಬಹುದು. ಆದರೆ ಇಂದು ರಂಗದಲ್ಲಿ ನಾವು ಏನಾದರೂ ಹೆಜ್ಜೆ ಊರಿದ್ದೇವೆ, ಊರುತ್ತಿದ್ದೇವೆ ಎಂದಾದರೆ ಅದು ಈಶ್ವರ ಭಟ್ಟರಂತಹ ಹಿರಿಯರು ರಂಗದಲ್ಲಿ ಮೂಡಿಸಿದ ನಡೆಯಿಂದ ಎನ್ನುವುದನ್ನು ವರ್ತಮಾನದ ವೃತ್ತಿ-ಹವ್ಯಾಸಿ ಕಲಾವಿದರು ಮರೆಯಕೂಡದು.
              ಅನುಭವದ ಪಕ್ವತೆಯಿಂದ ಮಾಗಿರುವ ಕೊಕ್ಕಡ ಈಶ್ವರ ಭಟ್ಟರ ಅಭಿನಂದನ ಸಮಾರಂಭವು  ೨೦೧೭ ಫೆಬ್ರವರಿ ೧೧ ಶನಿವಾರದಂದು ಪುತ್ತೂರಿನ 'ನಟರಾಜ ವೇದಿಕೆ'ಯಲ್ಲಿ ದಿನಪೂರ್ತಿ ಜರುಗಲಿದೆ. ಎಡನೀರು ಮಠಾಧೀಶ ಪರಮಪೂಜ್ಯ ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರ ದಿವ್ಯ ಉಪಸ್ಥಿತಿಯಲ್ಲಿ ಅಭಿನಂದನ ಕೃತಿಯ ಅನಾವರಣ ಜರುಗಲಿದೆ. ನವರಸವಾಹಿನಿ, ನವರಸ ಅರ್ಥ ವೈಭವ, ಯಕ್ಷ ಗಾನ ವಿಹಾರ ಮತ್ತು ಎಡನೀರು ಮೇಳದವರಿಂದ 'ಸೀತಾಪರಿತ್ಯಾಗ-ಗದಾಯುದ್ಧ' ಪ್ರಸಂಗದ ಯಕ್ಷಗಾನ ಜರುಗಲಿದೆ.

Sunday, July 30, 2017

ಗೆಜ್ಜೆಯ ಸದ್ದೀಗ ವಿಶ್ವಕ್ಕೆ ಕೇಳಿಸುತ್ತಿದೆ...!


 ಕೊಂಗೋಟ್ ರಾಧಾಕೃಷ್ಣ- ಉಮಾವತಿ ದಂಪತಿ


ಪ್ರಜಾವಾಣಿಯ ಅಂಕಣ - 'ದಧಿಗಿಣತೋ / 20-1-2017

                 ಕಾರ್ಯಕ್ರಮ ಆಗುತ್ತಿರುವುದು ನನಗಲ್ಲ. ಅಲ್ಲಿ ಏನಾಗುತ್ತದೋ ಅದನ್ನು ಕ್ಲಿಕ್ಕಿಸುವುದಷ್ಟೇ ನನ್ನ ಕೆಲಸ, ಮಂಗಳೂರಿನ ಹಿರಿಯ ಛಾಯಾಚಿತ್ರ ಗ್ರಾಹಕ ಯಜ್ಞರ ಮಾತಿದು. ಕಲಾ ಕಾರ್ಯಕ್ರಮಗಳಲ್ಲಿ ಯಜ್ಞರ ಸುಳಿವಿರುವುದಿಲ್ಲ, ಎಲ್ಲಿರುತ್ತಾರೋ ಗೊತ್ತಿಲ್ಲ, ಕುಳಿತಲ್ಲಿಂದಲೇ ವೇದಿಕೆಯ ಚಿತ್ರಗಳನ್ನು ಕಲಾತ್ಮಕವಾಗಿ ಕ್ಲಿಕ್ಕಿಸುವುದು ಅವರ ಸಿದ್ಧಿ, ಅನುಭವ. ನೀಲೇಶ್ವರದ ಕೋಂಗೊಟ್ ರಾಧಾಕೃಷ್ಣ ಭಟ್ ಅವರ ಫೋಟೋ, ವೀಡಿಯೋ ದಾಖಲಾತಿ ಕಾಯಕವನ್ನು ಕಂಡಾಗಲೆಲ್ಲಾ ಯಜ್ಞರ ಮಾತು ನೆನಪಾಗುತ್ತದೆ.
                ತಂತ್ರಜ್ಞಾನದ ಬೀಸುಹೆಜ್ಜೆಯ ದಿನಮಾನದಲ್ಲಿದ್ದೇವೆ. ಯಕ್ಷಗಾನದಲ್ಲಿ ದಾಖಲಾತಿ ಎನ್ನುವ ಪದಪುಂಜ ಹಿಂದಿನಿಂದಲೂ ಕೇಳಿಸುತ್ತಿವೆಯಾದರೂ ಅದರ ವೇಗದ ತೀವ್ರತೆ ಈಚೆಗಿನದು. ಎಲ್ಲರ ಮತಿಯಲ್ಲಿ ನಿತ್ಯ ಕಾಡುತ್ತಿರುವ ಶೇಣಿ, ಸಾಮಗರ ಮಾತಿನ ದಾಖಲಾತಿಗಳು ಅಲ್ಲೋ ಇಲ್ಲೋ ಸಿಗುತ್ತವೆ. ವೀಡಿಯೋ ತೀರಾ ಕಡಿಮೆ. ಅವರ ಸಕ್ರಿಯತೆಯ ಕಾಲಘಟ್ಟದಲ್ಲಿ ದಾಖಲಾತಿ ಪರಿಕರಗಳು ಈಗಿನಷ್ಟು ಮುಂದುವರಿದಿರಲಿಲ್ಲ. ಈಗ ಹಾಗಲ್ಲ. ದಾಖಲಾತಿಯ ನಾಗಾಲೋಟ. ಕೆಲವೊಮ್ಮೆ 'ಇಷ್ಟು ಬೇಕಾ' ಎಂದು ವೈರಾಗ್ಯ ಬರುವಷ್ಟು ಚಿತ್ರಗಳೋ, ವೀಡಿಯೋಗಳು ಜಾಲತಾಣಗಳಲ್ಲಿ ಹರಿದಾಡುತ್ತಿರುತ್ತವೆ.
                ಕಾಸರಗೋಡು, ಕರಾವಳಿಯಲ್ಲಿ ನಡೆಯುವ ಬಹುತೇಕ ಯಕ್ಷಗಾನ ಪ್ರದರ್ಶನಗಳಲ್ಲಿ ಮೊದಲ ಸಾಲಿನ ಪ್ರೇಕ್ಷಕರ ಪಂಕ್ತಿಯಲ್ಲಿ ಕೋಂಗೋಟ್ ರಾಧಾಕೃಷ್ಣ ಭಟ್ಟರಿಗೆ ಆದ್ಯತೆ. ಪ್ರದರ್ಶನದ ಪರಿಣಾಮಕಾರಿ ದೃಶ್ಯಗಳ ವೀಡಿಯೊ, ಚಿತ್ರಗಳನ್ನು ತೆಗೆಯುತ್ತಾರೆ. ಚಿತ್ರಗಳನ್ನು ಫೇಸ್ಬುಕ್ನಲ್ಲಿ ಅಪ್ಲೋಡ್ ಮಾಡಿದರೆ, ವೀಡಿಯೋ ತುಣುಕುಗಳನ್ನು ಯೂಟ್ಯೂಬ್ ತಾಣಕ್ಕೆ ಏರಿಸುತ್ತಾರೆ. ಏನಿಲ್ಲವೆಂದರೂ ಸುಮಾರು  ಐದು ಸಾವಿರಕ್ಕೂ ಮಿಕ್ಕಿ ವೀಡಿಯೋ ತುಣುಕುಗಳಿವೆ. ಎರಡು ನಿಮಿಷದಿಂದ ಮೂವತ್ತು ನಿಮಿಷದ ತನಕದ ತುಣುಕುಗಳು. ಕಂಪ್ಯೂವಿಗೆ ಜಾಲತಾಣದಿಂದ ಇಳಿಸಿ ವೀಕ್ಷಿಸಬಹುದಾದ ವ್ಯವಸ್ಥೆ.
              ಆರು ವರುಷದಿಂದ ಕೊಂಗೋಟ್ ರಾಧಾಕೃಷ್ಣರು ಸದ್ದಿಲ್ಲದೆ ಯಕ್ಷಗಾನ ದಾಖಲಾತಿಯಲ್ಲಿ ತೊಡಗಿದ್ದಾರೆ. ಏನಿಲ್ಲವೆಂದರೂ ಐನೂರಕ್ಕೂ ಮಿಕ್ಕಿ ಪ್ರದರ್ಶನಗಳನ್ನು ವೀಕ್ಷಿಸಿರಬಹುದು. ಅದೂ ಚೌಕಿ ಪೂಜೆಯಿಂದ ಮಂಗಲದ ತನಕ! ಇವರ ದಾಖಲಾತಿ ಕಾಯಕಕ್ಕೆ ಕಲಾವಿದರು, ಸಂಘಟಕರು ಪೂರ್ಣ ಪ್ರಮಾಣದಲ್ಲಿ ಸಹಕರಿಸಿದ್ದಾರೆ. ಆಯೋಜಕರು ಮುಂದಾಗಿ ಆಮಂತ್ರಿಸುತ್ತಾರೆ. ಇದು ನನ್ನ ಪ್ರಚಾರಕ್ಕೆ ಬೇಕಾಗಿಲ್ಲ.  ಪ್ರದರ್ಶನವು ದಾಖಲಾಗಬೇಕು ಎನ್ನುವ ಆಶಯವು ಆಯೋಜಕರಿಗೂ ಇರುತ್ತದಲ್ಲಾ. ನನ್ನ ವೈಯಕ್ತಿಕ ಆಸಕ್ತಿಗೋಸ್ಕರ ಹುಟ್ಟಿಕೊಂಡ ಹವ್ಯಾಸವು ಈಗ ಬಿಡಲಾರದ ನಂಟಾಗಿ ಅಂಟಿಕೊಂಡಿದೆ, ಎನ್ನುತ್ತಾರೆ ಭಟ್.
                ಆರಂಭದ ದಿವಸಗಳಲ್ಲಿ ಯೂಟ್ಯೂಬ್ ತಾಣದಲ್ಲಿ ಅಪ್ಲೋಡ್ ಮಾಡಿದ ಸುಮಾರು ಎರಡು ಸಾವಿರಕ್ಕೂ ಮಿಕ್ಕಿ ವೀಡಿಯೋ ಅಳಿಸಿಹೋಗಿತ್ತು. ಈ ರಂಗಕ್ಕೆ ನಾನು ಹೊಸಬ. ತಾಂತ್ರಿಕ ವಿಚಾರಗಳು ಗೊತ್ತಿರಲಿಲ್ಲ. ಕಾಪಿರೈಟ್ನಂತಹ ಸೂಕ್ಷ್ಮ ವಿಚಾರಗಳ ಜ್ಞಾನವಿರಲಿಲ್ಲ. ಹಾಗಾಗಿ ಎಡವಟ್ಟು ಆಗಿ ಹೋಯಿತು. ಜಾಲತಾಣ ಲೋಕದಲ್ಲಿ ಅದರದ್ದೇ ಆದ ಕಾಣದ ಹುನ್ನಾರಗಳಿವೆ. ಒಳ್ಳೆಯದನ್ನು ಸಹಿಸದ ಸಾಕಷ್ಟು ಮನಸ್ಸುಗಳಿವೆ. ಅನುಭವ ಆಗುತ್ತಾ ಆಗುತ್ತಾ ಈ ಕ್ಷೇತ್ರದ ಸಿಹಿ-ಕಹಿಗಳ ಅನುಭವಗಳಾಗಿವೆ, ಎಂದು ವಿವರಿಸುತ್ತಾರೆ ಕೊಂಗೋಟ್.  ಅಳಿಸಿ ಹೋದ ತಾಣ ಮತ್ತು ಈಗಿರುವ ಎರಡು ತಾಣಗಳಲ್ಲಿ (UVRK Bhat Chithramoola,  KRK Bhat Chithramoola)ಒಂದು ಕೋಟಿಗೂ ಮಿಕ್ಕಿ ವಿಕ್ಷಕರು ದಾಖಲಾಗಿದ್ದಾರೆ!
            ಫಕ್ಕನೆ ಇವರ ಕಾಯಕ ನೋಡುವಾಗ ಲಾಭವಿರಬೇಕು ಎಂದು ಕೆಲವರು ಆಡಿಕೊಳ್ಳುವುದನ್ನು ಕೇಳಿದ್ದೇನೆ. ಲಾಭವಿಲ್ಲದೆ ಇಷ್ಟು ಹಠದಿಂದ ಯಾಕೆ ದುಡಿಯುತ್ತಾರೆ ಎಂದು ಹಗುರ ಮಾತನಾಡಿದವರನ್ನು ಹತ್ತಿರದಿಂದ ಗಮನಿಸಿದ್ದೇನೆ. ನನಗಿದು ಹವ್ಯಾಸ. ಈಗಾಗಲೇ ಐದು ಲಕ್ಷ ರೂಪಾಯಿಗೂ ಮಿಕ್ಕಿ ವ್ಯಯವಾಗಿದೆ. ಅಬ್ಬಬ್ಬಾ ಅಂದರೆ ಎರಡು ಲಕ್ಷ ಮರುಭತರ್ಿ ಆಗಿರಬಹುದಷ್ಟೇ, ಎನ್ನುತ್ತಾರೆ. ಯಾವುದೇ ಕೆಲಸ ಮಾಡುವಾಗ ಹಗುರವಾಗಿ ಮಾತನಾಡುವವರು ಸಿಕ್ಕೇ ಸಿಗುತ್ತಾರೆ. ಅದು ಅವರ ಜಾಯಮಾನ. ಅವರಾಗಿ ಏನೂ ಮಾಡರು, ಮಾಡುವವರನ್ನು ಪ್ರೋತ್ಸಾಹಿಸರು.
              ಕೊಂಗೋಟ್ ಭಟ್ಟರ ಹಿರಿಯರು ಕಾಸರಗೋಡು ಜಿಲ್ಲೆಯ ಬಾಯಾರಿನವರು. ಬದುಕಿನ ಒಂದು ಹಂತದಲ್ಲಿ ಇವರು ನೀಲೇಶ್ವರದಲ್ಲಿ ನೆಲೆಯಾದರು. ಹಿರಿಯರ ಯಕ್ಷಗಾನಾಸಕ್ತಿ ಇವರಲ್ಲೂ ಚಿಗುರಿತು. "ನನ್ನ ಹಿರಿಯರಲ್ಲಿ ಯಕ್ಷಗಾನವು ಹಣ ಮಾಡುವ ದಂಧೆಯಾಗಿರಲಿಲ್ಲ. ಅದನ್ನವರು ಸೇವಾ ಭಾವದಿಂದ ನೋಡುತ್ತಿದ್ದರು. ಹಿರಿಯರ ಹಾದಿಯಲ್ಲಿ ಮುನ್ನಡೆಯುತ್ತಿದ್ದೇನೆ. ಕಿಂಚಿತ್ತಾದರೂ ಈ ಮೂಲಕ ಸೇವೆ ಸಲ್ಲಿಸೋಣ ಎಂದು ಕ್ಯಾಮೆರಾ ಹಿಡಿದು ಆಟಗಳಿಗೆ ಓಡುತ್ತಿದ್ದೇನೆ," ಎನ್ನುತ್ತಾರೆ.
                   ಮುಖ್ಯ ಕೃಷಿ ವೃತ್ತಿ. ಕಾಞಂಗಾಡಿನಲ್ಲಿ ಸುಮಾರು ಮೂರು ದಶಕ ಬಾಳೆಕಾಯಿ ವ್ಯಾಪಾರ ಮಾಡುತ್ತಿದ್ದರು. ಕ್ಯಾಮರಾ ಕೈಗಂಟಿಕೊಂಡ ಮೇಲೆ ಈ ಕಾಯಕಕ್ಕೆ ವಿದಾಯ! ಇದ್ದುದರಲ್ಲೇ ಸಂತೃಪ್ತಿ ಪಡುವ ಜಾಯಮಾನ. ಹಾಗಾಗಿ ಕೃಷಿ, ಹವ್ಯಾಸ ಎರಡನ್ನೂ ಸರಿದೂಗಿಸುತ್ತಿದ್ದಾರೆ. ಇವರ ಪತ್ನಿ ಉಮಾವತಿ. ನಿಜಾರ್ಥದಲ್ಲಿ ಗಂಡನ ನೆರಳು. "ಪ್ರದರ್ಶನಗಳಿಗೆ ಭಟ್ಟರು ಒಂಟಿಯಾಗಿ ಹೋದುದೇ ಕಡಿಮೆ. ಇವರಿಬ್ಬರು ಯಕ್ಷಲೋಕವನ್ನು ಸೆರೆಹಿಡಿದು ದಾಖಲಿಸುತ್ತಾರೆ. ನಮಗಿಬ್ಬರಿಗೂ ಯಕ್ಷಗಾನದಲ್ಲಿ ಆಸಕ್ತಿಯಿದೆ. ಈ ದಾಖಲಾತಿ ಮೂಲಕ ಎಷ್ಟೆಷ್ಟೊ ಕಲಾವಿದರನ್ನು ಪರಿಚಯಿಸಿದ ಆನಂದವಿದೆ. ಅವರ ಅಭಿವ್ಯಕ್ತಿಯು ಇಂದು ಯೂಟ್ಯೂಬಿನಲ್ಲಿ ವಿಶ್ವದೆಲ್ಲೆಡೆ ನೋಡಲು ಸಾಧ್ಯವಾಗುತ್ತಿದೆ, ಎನ್ನುತ್ತಾರೆ" ಉಮಾವತಿ.
ಶ್ರೀ ಕಟೀಲು ಮೇಳದ ಆಟಗಳನ್ನು ಇಬ್ಬರೂ ಮಿಸ್ ಮಾಡಿಕೊಳ್ಳುವುದಿಲ್ಲ. ಆಪ್ತರು ಮುಂದಾಗಿ ಆಹ್ವಾನಿಸುತ್ತಾರೆ.                           
              ದಿನಪತ್ರಿಕೆಯನ್ನು ನೋಡಿ ಕೆಲವೊಂದು ಪ್ರದರ್ಶನಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಫಕ್ಕನೆ ನೋಡುವಾಗ ವೀಡಿಯೋ ಮಾಡಿ ಅಪ್ಲೋಡ್ ಮಾಡಿದರಾಯಿತು ಅಂದುಕೊಳ್ಳಬಹುದು. ಅದರ ಹಿಂದಿರುವ ಕಷ್ಟವನ್ನು ಅವರೇ ಹೇಳಬೇಕು, ಯೂಟ್ಯೂಬಿಗೆ ಒಂದು ಗಂಟೆಯ ವೀಡಿಯೋವನ್ನು ಅಪ್ಲೋಡ್ ಮಾಡಲು ಹದಿನೈದು ಗಂಟೆ ಬೇಕು. ಜತೆಗೆ ನಮ್ಮ ಶ್ರಮ, ಪ್ರಯಾಣ ಎಲ್ಲವೂ ಸೇರಿದಾಗ ಸ್ವಲ್ಪ ಮಟ್ಟಿಗೆ ದುಬಾರಿಯಾಗುತ್ತದೆ. ಕೆಲವೊಮ್ಮೆ ನಾಲ್ಕೈದು ದಿವಸ ರಾತ್ರಿಯಿಡೀ ಪ್ರದರ್ಶನ ವೀಕ್ಷಿಸಿದ್ದೂ ಇದೆ. ಯಕ್ಷಗಾನ ಮಾತ್ರವಲ್ಲ, ಸಂಗೀತ, ಕಥಕ್ಕಳಿ, ಓಟಂ ತುಳ್ಳಲ್, ತೆಯ್ಯಂ, ಪ್ರಾಣಿಗಳು, ಕೃಷಿ.. ಮೊದಲಾದ ವೀಡಿಯೋ ತುಣುಕುಗಳನ್ನು ಯೂಟ್ಯೂಬಿನಿಂದ ಇಳಿಸಿಕೊಳ್ಳಬಹುದು.
                ಪ್ರದರ್ಶನಗಳ ಚಿತ್ರೀಕರಣ ಮಾಡಿದ ವೀಡಿಯೋ ತುಣುಕುಗಳು ನಿಮ್ಮಲ್ಲಿ ಸಾಕಷ್ಟಿವೆ. ಅದನ್ನು ಆಸಕ್ತರಿಗೆ ಯಾಕೆ ನೀಡಬಾರದು? ಕೊಂಗೋಟ್ ಹೇಳುತ್ತಾರೆ, ಯೂಟ್ಯೂಬಿಗೆ ಏರಿಸಿದ ವೀಡಿಯೋಗಳ ಪ್ರತಿಗಳನ್ನು ನೀಡುವುದು ಕಾನೂನಿನಲ್ಲಿ ಅವಕಾಶವಿಲ್ಲ. ಯಾರಿಗೆ ಬೇಕೋ ಅವರು ಯೂಟ್ಯೂಬಿನಿಂದಲೇ ಡೌನ್ಲೋಡ್ ಮಾಡಿಕೊಳ್ಳಬೇಕು. ಅದು ತಾಂತ್ರಿಕ ಶಿಸ್ತು. ಅದನ್ನು ಎಲ್ಲರೂ ಪಾಲಿಸಬೇಕು.
                    ಕೊಂಗೋಟ್ ಅವರ ಚಿತ್ರ, ವೀಡಿಯೋಗಳು ಗುಣಮಟ್ಟದಲ್ಲಿ ಎತ್ತರದ ಸ್ಥಾನದಲ್ಲಿದೆ. ಇಂತಹ ದಾಖಲಾತಿಗಳು ಕಾಲದ ಅನಿವಾರ್ಯತೆಯಾದರೂ; ಸ್ವಂತದ್ದಾದ ವೃತ್ತಿಯನ್ನು ಬದಿಗಿಟ್ಟು, ಕಾಯಕಷ್ಟವನ್ನು ಸಹಿಸಿ ಯಕ್ಷಗಾನದ ಮೇಲಿನ ಪ್ರೀತಿಯಿಂದ ಮಾಡುವ ಈ ಕೈಂಕರ್ಯದ ಒಂದು ಪಾಲನ್ನಾದರೂ ಭರಿಸುವುದಕ್ಕೆ ಯಕ್ಷಗಾನ ಕ್ಷೇತ್ರಕ್ಕೆ ಕಷ್ಟವಾಗಲಾರದು ಅಲ್ವಾ. ಹಾಗಾದಾಗ ಮಾತ್ರ ಸದ್ದಿಲ್ಲದ ದಾಖಲಾತಿ ಕಾಯಕಕ್ಕೆ ಮಾನ-ಸಂಮಾನವನ್ನು ಒದಗಿಸಿದಂತಾದೀತು.

ಒಂದೂವರೆ ಚಪಾತಿಯಲ್ಲಿ ಮೆರೆದ ಮಾನವೀಯ ಮಿಡಿತ..!

ಪ್ರಜಾವಣಿ ಅಂಕಣ 'ದಧಿಗಿಣತೋ' / 6-1-2017

                ಸುಮಾರು ದಶಕದ ಹತ್ತಿರವಾಯಿತು. ಕಟೀಲು ಶ್ರೀ ಕ್ಷೇತ್ರದಲ್ಲಿ ತಾಳಮದ್ದಳೆ ಸಪ್ತಾಹದ ಸಂದರ್ಭ. ಶಾರೀರಿಕವಾಗಿ ಆಗಲೇ ಹರಿದಾಸ್ ಮಲ್ಪೆ ರಾಮದಾಸ ಸಾಮಗರು (ಕೀರ್ತಿಶೇಷ) ಸೊರಗಿದ್ದರು. ಪತ್ನಿಯ ಆಸರೆಯೊಂದಿಗೆ ಕೂಟಕ್ಕೆ ಆಗಮಿಸಿದ್ದರು. ಕಟೀಲಿನಲ್ಲಿ ಮೇಳದ ಆಟ ಹೊರತು ಪಡಿಸಿ ಮಿಕ್ಕೆಲ್ಲಾ ಯಕ್ಷಗಾನ ಸಂಬಂಧಿ ಕಾರ್ಯಕ್ರಮಗಳು ದೇವಳದ ಎದುರಿನ ಶಾಲೆಯಲ್ಲಿ ನಡೆಯುತಿದ್ದುವು. ಅಲ್ಲಿನ ಮುಖ್ಯ ಗುರುಗಳ ಕೊಠಡಿಯು ಸಪ್ತಾಹದ ಸಮಯದಲ್ಲಿ 'ಕೂಟದ ಚೌಕಿ'! ಪುಚ್ಚೆಕೆರೆ ಕೃಷ್ಣ ಭಟ್ಟರ ಕಾಲದಿಂದ ತೊಡಗಿ ಈಗಲೂ ಚೌಕಿ ಸದಾ ಲವಲವಿಕೆ.
                ಅಂದು ಸಾಮಗರು ಒಂದು ಗಂಟೆ ಮುಂಚಿತವಾಗಿ ಆಗಮಿಸಿದ್ದರು. ಅವರೊಂದಿಗೆ ಮುಕ್ತವಾಗಿ ಮಾತನಾಡುವ ಅವಕಾಶ ಸಿಕ್ಕಿತ್ತು. ತನ್ನ ಬಾಲ್ಯದ ಯಕ್ಷಗಾನದ ವಾತಾವರಣ, ಮೇಳದ ತಿರುಗಾಟದ ರೋಚಕ ಕ್ಷಣ, ತಾಳಮದ್ದಳೆಯ ರಸನಿಮಿಷಗಳು, ಕಹಿ ಘಟನೆಗಳು. ಶೇಣಿಯವರೊಂದಿಗಿನ ಒಡನಾಟ, ಕೂಟದ  ತಿಕ್ಕಾಟ.. ಹೀಗೆ. ಅವರ ಮಾತಿನ ಓಘ ಎಷ್ಟಿತ್ತೆಂದರೆ ಪೂರ್ಣವಿರಾಮ ಇಲ್ಲವೇ ಇಲ್ಲ. ಸನಿಹದಲ್ಲಿದ್ದ ಸಹಧರ್ಮಿಣಿ 'ಇಂದು ಮಾತನಾಡಿದ್ದು ಸಾಕು, ಇನ್ನೊಮ್ಮೆ ಮಾತನಾಡಿದರೆ ಆಗದೇ' ಎಂದು ಅವರ ಆರೋಗ್ಯದ ಹಿನ್ನೆಲೆಯಲ್ಲಿ ಎಚ್ಚರಿಸುತ್ತಿದ್ದರು.
               ಚೌಕಿಗೆ ಕಾಫಿ, ಚಹ, ಉಪಾಹಾರ ಬಂದರೆ ಸಾಕು - ಕಲಾವಿದರು ಅಲರ್ಟ್ ಆಗಬೇಕೆನ್ನುವ ಸೂಚನೆ. ಅಂದು ಚಪಾತಿ, ಗಸಿ, ಜಿಲೇಬಿ ತಟ್ಟೆಯಲ್ಲಿ ಕುಳಿತಿತ್ತು. ಯಾರೋ ಹೇಳಿದರು - 'ಸಾಮಗರಿಗೆ ಜಿಲೇಬಿ ಇಷ್ಟ'! ಸಾಮಗರು ನಗುತ್ತಾ ಜಿಲೇಬಿಯನ್ನು ಬಾಯಿಗಿಟ್ಟು ಎಲ್ಲರನ್ನು ನಗಿಸಿದ್ದರು ಕೂಡಾ! ಎಲ್ಲರಿಗೂ ತಲಾ ಮೂರು ಚಪಾತಿಯಂತೆ ವಿತರಣೆ. ಹಿಂದಿನ ತಾಳಮದ್ದಳೆಗಳ 'ಬೇಕು-ಬೇಡಗಳ ರಿಂಗಣ'ದೊಂದಿಗೆ ಬಹುತೇಕರ ತಟ್ಟೆ ಖಾಲಿಯಾಗಿತ್ತು. ಆದರೆ ಸಾಮಗರ ತಟ್ಟೆಯಲ್ಲಿ ಚಪಾತಿ ಕಾಯುತ್ತಿತ್ತು. ಅವರು ತಿನ್ನಲು ಆರಂಭಿಸಲೇ ಇಲ್ಲ. ಅತ್ತಿತ್ತ ನೋಡುತ್ತಾ ಯಾರನ್ನೋ ಕಾಯುತ್ತಿರುವಂತೆ ಭಾಸವಾಗುತ್ತಿತ್ತು. 'ತಿನ್ನಿ ಸಾಮಗ್ರೆ, ಬೇರೆ ಏನು ಬೇಕಿತ್ತು' ಎಂದು ಶಾಲಾ ಗುರುಗಳ ಸಾತ್ವಿಕ ಕೋರಿಕೆ.
               'ಓಹೋ.. ಹೌದಲ್ಲಾ.. ಒಂದು ಪೇಪರ್ ಪೀಸ್ ಕೊಡ್ತೀರಾ' ಎಂದರು. ಅದರಲ್ಲಿ ತನ್ನ ತಟ್ಟೆಯ ಒಂದೂವರೆ ಚಪಾತಿಯನ್ನು ಮಡಚಿ ಜುಬ್ಬಾದ ಕಿಸೆಗೆ ಸೇರಿಸುತ್ತಿದ್ದರು. 'ಅದ್ಯಾರಿಗೆ ಸಾಮಗ್ರೆ' ಎಂದಾಗ, 'ಅದಾ.. ಅದು ಕಾರು ಡ್ರೈವರ್ರಿಗೆ.. ಅವ ಕಾಣ್ತಾ ಇಲ್ಲ.. ಎಲ್ಲಿಗೆ ಹೋದ್ನಪ್ಪಾ, ಬೇಗ ಬರ್ತೇನೆ ಅಂದಿದ್ದ' ಎಂದಾಗ ಎಲ್ಲರೂ ದಂಗು! 'ಅವರಿಗೆ ಬೇರೆ ಕೊಡೋಣ. ಇದನ್ನು ನೀವು ತಿನ್ನಿ' ಎಂದಾಗ, 'ಹೌದಾ.. ಹಾಗಾದ್ರೆ ಆದೀತು' ಎನ್ನುತ್ತಾ ಕಿಸೆಗೆ ಸೇರಿಸಿದ್ದ ಚಪಾತಿಯ ಪ್ಯಾಕೆಟನ್ನು ಬಿಚ್ಚಿ ತನ್ನ ಪ್ಲೇಟ್ಗೆ ಸೇರಿಸಿ ಚಪಾತಿ ತಿನ್ನತೊಡಗಿದರು. ಪ್ರಸಂಗದ ಕುರಿತು ಮಾತುಕತೆ ಆರಂಭವಾದುದೇ ಕಾಫಿ ಸೇವನೆಯ ಬಳಿಕ.
               ತನ್ನ ಸಾರಥಿಯ ಹೊಟ್ಟೆ ಹಸಿದಿರಬಾರದೆಂಬ ಎಚ್ಚರ. ಸಂಘಟಕರಲ್ಲಿ ಈ ವಿಚಾರ ಹೇಳಲು ಮುಜುಗರ. ಆತನ ಅನುಪಸ್ಥಿತಿಯ ಕಾತರ. ತಳಮಳ ಸ್ಥಿತಿ. ಅವರಿಗೆ ಬೇರೆ ವ್ಯವಸ್ಥೆಯ ಆಶ್ವಾಸನೆ ಸಿಕ್ಕಾಗ ಸಂತೋಷ. ಇಂತಹ ಸೂಕ್ಷ್ಮ ಸಂವೇದನೆಯನ್ನು ಕಾಪಾಡಿಕೊಂಡವರು ಸಾಮಗರು. 'ತಾಳಮದ್ದಳೆ ಮುಗಿಯುವಾಗ ತಡವಾಗುತ್ತದಲ್ಲಾ.. ನಂತರ ನಮ್ಮನ್ನು ಕರೆದುಕೊಂಡು ಹೋಗಬೇಕಲ್ಲಾ..' ಎಂದು ಸಮರ್ಥಿಸಿಕೊಳ್ಳುತ್ತಿದ್ದರು. ತಾನು ಕಾರನ್ನು ಬಾಡಿಗೆಗೆ ಗೊತ್ತು ಮಾಡಿ ಬಂದಿದ್ದರೂ ಚಾಲಕರ ಬಗೆಗಿನ ಮಾನವೀಯ ತುಡಿತ ಇದೆಯಲ್ಲಾ, ಅದು ಎಲ್ಲರಿಗೂ ಬರುವುದಿಲ್ಲ ಬಿಡಿ.
                ಅಂದಿನ ಪ್ರಸಂಗ 'ರುಕ್ಮಾಂಗದ ಚರಿತ್ರೆ.' ಸಾಮಗರ 'ರುಕ್ಮಾಂಗದ' ಪಾತ್ರ. ಡಾ.ರಾಮಚಂದ್ರ ರಾವ್ ಕೋಳ್ಯೂರರ 'ಮೋಹಿನಿ'. ಅಂದಿನ ರುಕ್ಮಾಂಗದ ಭಕ್ತಿ, ಕರುಣ, ಶೃಂಗಾರ.. ರಸಗಳ ಘನಿಯೇ ಆಗಿದ್ದ! ಕೆಲವೊಮ್ಮೆ ಅಳುತ್ತಾ, ನಗುತ್ತಾ, ಸಂದರ್ಭವನ್ನು ಅನುಭವಿಸುತ್ತ ಸಾಗುವ ರುಕ್ಮಾಂಗದನನ್ನು ಕೋಳ್ಯೂರರ ಮೋಹಿನಿ ಚುಚ್ಚಿ ಚುಚ್ಚಿ, ಕಠೋರ ಮಾತುಗಳಿಂದ ನೋಯಿಸುತ್ತಿದ್ದಳು, ಕೆಣಕುತ್ತಿದ್ದಳು. ಎಲ್ಲದಕ್ಕೂ ಸಮಾಧಾನಕರವಾದ ಉತ್ತರ. ಕೊನೆಗೆ ರುಕ್ಮಾಂಗದನ ಪತ್ನಿ ವಿಂದ್ಯಾವಳಿ(ನಾನು)ಯು 'ಮೋಹಿನಿ.. ಯಾಕೆ ಅವರನ್ನು ನೋಯಿಸುತ್ತಿ. ಅವರ ವೃತ ಕಳೆದ ಬಳಿಕ ಅವರನ್ನು ಒಲಿಸಿ ನಾನೇ ನಿನ್ನ ಬಳಿಗೆ ಅವರನ್ನು ಕಳುಹಿಸುತ್ತೇನೆ' ಎಂದಾಗ ಸಾಮಗರು   'ಓಹೊ..' ಎಂಬ ಗಟ್ಟಿ ಧ್ವನಿಯನ್ನು ಹೊರಡಿಸಿದರು. ಒಂದು ಕ್ಷಣ ರಂಗ ಮೌನ!
               'ಹೆಂಡತಿಯೆಂದರೆ ಹೀಗಿರಬೇಕು' ಎನ್ನುತ್ತಾ ಹೆಣ್ತನ, ತಾಯ್ತನ, ಮಾತೃತ್ವದ ಕುರಿತಾಗಿ ಏನಿಲ್ಲವೆಂದರೂ ಆರ್ಧ ಗಂಟೆಗೂ ಮಿಕ್ಕಿ ಸಾಗಿದ ವಾಗ್ವಿಲಾಸದ ಮುಂದೆ ಶರಣು ಶರಣು. ನನ್ನ ಅರ್ಥ ಒಂದೆರಡು ವಾಕ್ಯಕ್ಕೆ ನಿಂತಿತ್ತು! 'ಗಂಡನಾದವನ ಕರ್ತವ್ಯ'ದ ಕುರಿತು ಪ್ರಸ್ತಾಪ ಬಂದಾಗ, ತನ್ನ ನಿಜ ಜೀವನದ ಕೆಲವು ಘಟನೆಗಳನ್ನು ಥಳಕು ಹಾಕಿ ಸಾಮಗರು ಗೋಳೋ ಅತ್ತಿದ್ದರು. ಬಳಿಕ ಸಾವರಿಸಿಕೊಂಡು ಅರ್ಥ ಮುಂದುವರಿಸಿದ್ದರು. ಪಾತ್ರವಾಗಿ ನೋಡಿದರೆ ಪಾತ್ರಕ್ಕೆ ಉಚಿತವಾದ ಅರ್ಥಗಾರಿಕೆ.
                 ಮತ್ತೊಮ್ಮೆ ಉಡುಪಿ ರಾಜಾಂಗಣದಲ್ಲಿ ರಾಮಾಯಣ ಸರಣಿ ತಾಳಮದ್ದಳೆ. ಪ್ರಸಂಗ : ಶಬರಿ ಮೋಕ್ಷ. ಸಾಮಗರ 'ರಾಮ', ನನ್ನ ಪಾತ್ರ 'ಶಬರಿ'. ವೃದ್ಧಾಪ್ಯದ ಅಸಹಾಯಕತೆಯನ್ನು ಶಬರಿ ಪ್ರಕಟಿಸಿದಾಗ ಸಾಮಗರು ಫಕ್ಕನೆ ಮಧ್ಯದಲ್ಲಿ ತಾನು ಅರ್ಥವನ್ನು ಮುಂದುವರಿಸುತ್ತಾ ವೃದ್ಧಾಪ್ಯದ ಲಕ್ಷಣ, ಅದು ಅನುಭವಕ್ಕೆ ಬಂದಾಗ ಆಗುವ ಅನುಭವಗಳನ್ನು ಭಾವಪೂರ್ಣವಾಗಿ ಹೇಳುತ್ತಾ ಅತ್ತಿದ್ದರು. ಅಳುತ್ತಾ ಅರ್ಥ ಮುಂದುವರಿಸಿದ್ದರು. ನೋಡುಗರಿಗೆ ಅದು ಅಳುವಾಗಿ ಕಾಣಲಿಲ್ಲ. ಅದೊಂದು ಪಾತ್ರವಾಗಿ ಕಂಡಿತು.
                  ಆದರೆ ಅದು ಪಾತ್ರವನ್ನು ಅನುಭವಿಸಿದ ಕಣ್ಣೀರಲ್ಲ, ತನ್ನ ಬದುಕಿನ ಯಾವುದೋ ಘಟನೆಯನ್ನು ಎಣಿಸಿ ದುಃಖ ಉಮ್ಮಳಿಸಿ, ಅದುಮಿಟ್ಟುಕೊಳ್ಳಲಾಗದೆ ಅತ್ತ ಪರಿಯಿದೆಯಲ್ಲಾ, ನಿಜಕ್ಕೂ ದುಃಖದ ಕಡಲು. ಮರೆಯಲಾಗದ ದೃಶ್ಯ. ಕಣ್ಣೀರ ಹನಿಯೊಳಗೆ ಮಿಣುಕಿದ ವಾಗ್ವಿಲಾಸ. ಸಾಮಗರನ್ನು ನೆನೆಸಿಕೊಂಡಾಗಲೆಲ್ಲಾ ಈ ಘಟನೆ ಕಾಡುತ್ತದೆ.

(ಚಿತ್ರ : ಆಸ್ಟ್ರೋ ಮೋಹನ್)

Saturday, July 29, 2017

’ಶ್ರುತಿ ಸಿದ್ಧಿ’ಯ ಪುತ್ತೂರು ಗೋಪಣ್ಣ


 ಪುತ್ತೂರು ಗೋಪಾಲಕೃಷ್ಣಯ್ಯ (ಗೋಪಣ್ಣ)

ಪ್ರಜಾವಾಣಿಯ ದಧಿಗಿಣತೋ ಅಂಕಣ / 27-1-2017

              ಪುತ್ತೂರು ಗೋಪಾಲಕೃಷ್ಣಯ್ಯನವರು 'ಪುತ್ತೂರು ಗೋಪಣ್ಣ' ಎಂದೇ ಪರಿಚಿತರು. (ಜನನ 1901 - ಮರಣ 1973) ಇವರನ್ನು ನಾನು ನೋಡಿಲ್ಲ. ಆದರೆ ಹಿರಿಯ ಕಲಾವಿದರ ಮಾತಿನಲ್ಲಿ ಈ ಹೆಸರು ಮಿಂಚಿ ಮರೆಯಾಗುತ್ತಿದ್ದುವು. ದಕ್ಷಿಣ ಕನ್ನಡ ಜಿಲ್ಲಾ ಐದನೇಯ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಪ್ರಕಟವಾದ 'ಅಭಿಮಾನ' ಕೃತಿಯಲ್ಲಿ ಇವರ ಪರಿಚಯ ಬರೆಹವು ಸೆಳೆದಿತ್ತು. ದಾಖಲಾತಿ ವ್ಯವಸ್ಥೆಗಳು ಅತ್ಯಲ್ಪವಾಗಿದ್ದ ಕಾಲಘಟ್ಟದಲ್ಲಿನ ಇವರ ಬದುಕು ದಾಖಲಾಗಿಲ್ಲ.
               'ಏನಿವರ ಸಾಧನೆ'? ಕವಿಭೂಷಣ ವೆಂಕಪ್ಪ ಶೆಟ್ಟರು ಗೋಪಣ್ಣರನ್ನು ಸಂಮಾನಿಸುತ್ತಾ ಯಕ್ಷಗಾನದ ಚೆಂಡೆಯ ನಾದವನ್ನು ಪ್ರಥಮತಃ ವೈಭವೀಕರಿಸಿದವರು ಗೋಪಣ್ಣ ಹೇಳಿದ ಮಾತು ಉಲ್ಲೇಖನೀಯ. ಭಾಗವತಿಕೆಯೊಂದಿಗೆ ಮದ್ದಳೆಯ ನಾದಗಳತ್ತ ಒಲವಿದ್ದ ಕಾಲ. ವೀರರಸಕ್ಕೆ ಏರು ಸ್ಥಾಯಿಯ ಚೆಂಡೆಯ ಸ್ವರ ಮಿಳಿತವಾಗುತ್ತಿದ್ದುವಷ್ಟೇ. ಮದ್ದಳೆಯಂತೆ ಚೆಂಡೆಗೂ ನಾದತೆಯ ಸ್ಪರ್ಶವಿದ್ದುದು ಕಡಿಮೆ. ವಿವಿಧ ಮೇಳಗಳ ತಿರುಗಾಟ, ಹಿರಿಯ ಮದ್ಲೆಗಾರರ ಒಡನಾಟ ಮತ್ತು ರಂಗದ ಕುರಿತ ತೀಕ್ಷ್ಣ ಒಳತೋಟಿಯಿದ್ದ ಗೋಪಣ್ಣರಿಗೆ ಚೆಂಡೆಯ ಸ್ವರದಲ್ಲಿ ನಾದದ ಲೋಪವನ್ನು ಗುರುತಿಸಿದರು. ಕಾಯಕಲ್ಪ ಕೊಡುವ ಸಂಕಲ್ಪ.
              ಹಿರಿಯರ ಜಾಡನ್ನು ಸ್ಪರ್ಶಿಸುವಂತಿಲ್ಲ, ಪ್ರಶ್ನಿಸುವಂತಿಲ್ಲ. ಸಾಗಿ ಬಂದ ಪರಂಪರೆಗೆ ಹೊಸತನ್ನು ಲೇಪಿಸುವಂತಿಲ್ಲ. ತೀರಾ ಇಕ್ಕಟ್ಟಿನ ಮನಃಸ್ಥಿತಿ. ಹಿರಿಯರೊಂದಿಗೆ ಸಮಾಲೋಚನೆ. ನೆಡ್ಲೆ ನರಸಿಂಹ ಭಟ್, ದಿವಾಣ ಭೀಮ ಭಟ್, ಕುದ್ರೆಕೂಡ್ಲು ರಾಮ ಭಟ್, ಮಾಂಬಾಡಿ ನಾರಾಯಣ ಭಟ್, ಕುರಿಯ ವಿಠಲ ಶಾಸ್ತ್ರಿ, ದಾಮೋದರ ಮಂಡೆಚ್ಚ.... ಹೀಗೆ ಉದ್ಧಾಮರು ಗೋಪಣ್ಣರಿಗೆ ಪ್ರಿಯ. ಹತ್ತಿರದ ನಂಟು. ತನ್ನ ಮನಸ್ಸಿನ ತುಮುಲಕ್ಕೆ ಎಲ್ಲರ ಸಾಂತ್ವನ. ಉದ್ದೇಶಕ್ಕೆ ಸಹಮತ.
              ಆಜೂಬಾಜು 1940ರ ಇಸವಿ ಇರಬಹುದು. ಆಗಷ್ಟೇ ಪುತ್ತೂರಿನಲ್ಲಿ ಗೋಪಣ್ಣ ಚೆಂಡೆ-ಮದ್ದಳೆಗಳನ್ನು ಮನೆಯಲ್ಲೇ ತಯಾರಿಸುವ ಘಟಕವನ್ನು ಹೊಂದಿದ್ದರು. ಹೆಚ್ಚಿನ ಕಲಾವಿದರು ದಿನಪೂರ್ತಿ ಇವರಲ್ಲಿದ್ದು ಹರಟೆ ಹೊಡೆಯುವಷ್ಟು ಆಪ್ತತೆಯಿತ್ತು. ಒಂದಿವಸ ಮದ್ದಳೆಯ ಶ್ರುತಿಗೆ ಚೆಂಡೆಯ ನಾದವನ್ನು ಸಮನ್ವಯಗೊಳಿಸಿ ಮಂಗಳೂರಿನ ಕಾರ್ಯಕ್ರಮವೊಂದರಲ್ಲಿ ನುಡಿಸಿದರು. ಅಂದು ಅನೇಕ ಮಂದಿ ಹಿರಿಯರು ಕಲಾವಿದರಾಗಿದ್ದರು. ಹಿಮ್ಮೇಳದ ಬದಲಾದ ನಾದಕ್ಕೆ ಖುಷಿಪಟ್ಟರು. ಇದೇ ಸಮಾರಂಭದಲ್ಲಿ ವೆಂಕಪ್ಪ ಶೆಟ್ಟರು ಗೋಪಣ್ಣರನ್ನು ಸಂಮಾನಿಸಿದರು.
               ಆಗ ತುತ್ತಿಗೂ ತತ್ವಾರ. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ತಾನದಲ್ಲಿ ವಾದನ ಸೇವೆಯ ವೃತ್ತಿಯಲ್ಲಿದ್ದರು. ಜತೆಗೆ ಚೆಂಡೆ-ಮದ್ದಳೆ ತಯಾರಿ. ತಲೆಗಿದ್ದರೆ ಕಾಲಿಗಿಲ್ಲ ಎನ್ನುವಂತಹ ಸ್ಥಿತಿಯಿತ್ತು. ಹೀಗಿದ್ದೂ ಮನೆಗೆ ಬಂದ ಕಲಾವಿದರಿಗೆಲ್ಲಾ ಹೊಟ್ಟೆ ತುಂಬಾ ಅನ್ನವನ್ನು ಬಡಿಸಿದ್ದನ್ನು ನೋಡಿದ್ದೇನೆ, ಎನ್ನುತ್ತಾರೆ ಅವರ ಪುತ್ರ ಪಿ.ವೆಂಕಟ್ರಮಣ. ಇವರು ಶಿಕ್ಷಣ ಇಲಾಖೆಯಲ್ಲಿ ಸಹ ನಿರ್ದೇಶಕರಾಗಿ ಈಗ ನಿವೃತ್ತ.
              ಎಪ್ಪತ್ತೊಂಭತ್ತರ ಹರೆಯದ ವೆಂಕಟ್ರಮಣ ನೆನಪಿಸುತ್ತಾರೆ, ಚೆಂಡೆಯ ಒಂದೊಂದು ಕಣ್ಣಿನ ನಾದವನ್ನು ಶ್ರುತಿಗೆ ಸರಿದೂಗಿಸುತ್ತಿದ್ದ, ಚೆಂಡೆಯ ಹಗ್ಗವನ್ನು ಬೆವರಿಳಿಸುತ್ತಾ ಬಿಗಿಯುತ್ತಿದ್ದುದನ್ನು, ಹಗ್ಗಕ್ಕಾಗಿ ಸೆಣಬನ್ನು ಹದ ಬರಿಸುತ್ತಿದ್ದ ತೀರ್ಥರೂಪರ ತನುಶ್ರಮ ಎಳೆಯವರಾದ ನಮಗೆ ಹಿರಿದಾಗಿ ಕಾಣಲಿಲ್ಲ. ಆದರೆ ಯಕ್ಷ ರಂಗವು ಅವರನ್ನು ಸ್ವೀಕರಿಸಿದ ರೀತಿ, ಕಲಾವಿದರು ತಮ್ಮ ಆಪ್ತತೆಯೊಳಗೆ ಸೇರಿಸಿದ ಕ್ಷಣಗಳು.. ಮತ್ತೆ ಮತ್ತೆ ಕಾಡುತ್ತದೆ. ಬಹುಶಃ ಆಗ ಚೆಂಡೆ ಬಾರಿಸುವಾಗ ಎಡದ ಕೈಯಲ್ಲಿ ಕೋಲಿಟ್ಟುಕೊಂಡು ಬಾರಿಸುವ ಪರಿಪಾಠವಿಲ್ಲ.  ಬದಲಿಗೆ ಕೈಯಲ್ಲೇ ಬಾರಿಸುತ್ತಿದ್ದರು. ತಂದೆಯವರು ಚಿಕ್ಕ ಕೋಲನ್ನು ಬಾರಿಸಲು ಬಳಸುತ್ತಿದ್ದರು. ಕುದ್ರೆಕೂಡ್ಲು ರಾಮ ಭಟ್ಟರು ಇದನ್ನು ಮೆಚ್ಚಿಕೊಂಡಿದ್ದ ನೆನಪು ನನ್ನಲ್ಲಿನ್ನೂ ಹಸಿಯಾಗಿದೆ. ಕೂಡ್ಲು ಶ್ಯಾನುಭೋಗರ ಬೆಂಬಲವೂ ಇತ್ತು.
              ಶ್ರುತಿಗೆ ಪರ್ಯಾಯ ಹೆಸರು ಗೋಪಣ್ಣ! ಕಲಾವಿದರೊಳಗೊಂದು ಅವ್ಯಕ್ತ ಗೌರವವಿತ್ತು. ಒಂದು ಛಾಪು ಹಾಕಿದರೆ ಸಾಕಂತೆ, ಯಾವ ಶ್ರುತಿ ಅಂತ ಫಕ್ಕನೆ ಗ್ರಹಿಸುವಷ್ಟು ಶ್ರುತಿ ಸಿದ್ಧಿ. ಶ್ರುತಿ ಮಾಡುವಾಗಲೂ ಅಷ್ಟೇ. ಕಪ್ಪು ಎರಡು, ಬಿಳಿ ಮೂರು... ಸಿದ್ಧಿಯ ಬಲದಿಂದ ಶ್ರುತಿ ಮಾಡುತ್ತಿದ್ದರು. ನಂತರವಷ್ಟೇ ಹಾರ್ಮೋನಿಯಂನೊಂದಿಗೆ ಪರೀಕ್ಷಿಸುತ್ತಿದ್ದರು. ಮದ್ಲೆಗಾರನಿಗೆ ಎಷ್ಟು ಅನುಭವ ಇದೆಯೆಂದು ತಿಳಿಯಲು ಮದ್ದಳೆ ಬಾರಿಸಬೇಕಾಗಿಲ್ಲ. ಛಾಪಿನ ದನಿಯಲ್ಲೇ ಅನುಭವ ಗುರುತಿಸುತ್ತಿದ್ದರು. ಎನ್ನುತ್ತಾರೆ ವೆಂಕಟ್ರಮಣ.
                ಯಕ್ಷಗಾನಕ್ಕೆ ದೀರ್ಘ ಪರಂಪರೆಯಿರುವ ಕೂಡ್ಲು - ಗೋಪಾಲಕೃಷ್ಣಯ್ಯನವರ ಹುಟ್ಟೂರು. ಕೂಡ್ಲು ಮೇಳದ ಚೆಂಡೆ-ಮದ್ದಳೆಯ ದನಿಯೊಂದಿಗೆ ಬಾಲ್ಯ. ಕೂಡ್ಲಿನ ಕೀರ್ತಿಶೇಷ ಸುಬ್ರಾಯ ಶ್ಯಾನುಭಾಗರು ಗೋಪಣ್ಣನವರ ಮಾರ್ಗದರ್ಶಕರು. ಹಿರಿಯರಾದ ಎಚ್ಚಣ್ಣ ಮದ್ಲೆಗಾರರ ಪ್ರಭಾವ. ಕೊರಕ್ಕೋಡು, ಇಚ್ಲಂಪಾಡಿ, ಕೂಡ್ಲು ಮೇಳಗಳಲ್ಲಿ ಮದ್ಲೆಗಾರರಾಗಿ ವ್ಯವಸಾಯ. ಚೆಂಡೆ, ಮದ್ದಳೆ ತಯಾರಿ ಕೆಲಸಗಳಿಗೆ ಕಾಸರಗೋಡಿನ ನಾಞಣ್ಣ ಎನ್ನುವವರು ಗುರುಗಳು. ಅಜ್ಜ ಲಕ್ಷ್ಮಣ ಮದ್ಲೆಗಾರ್, ದೊಡ್ಡಣ್ಣ ಈಶ್ವರ ಮದ್ಲೆಗಾರರ ಹಿನ್ನೆಲೆ. ಶಾಲಾ ಓದು ಕಡಿಮೆಯಿದ್ದರೂ ಬದುಕಿನ ಅನುಭವದ ಓದು ಅಪಾರ.
               ತೆಂಕುತಿಟ್ಟಿನ ಬಹುತೇಕ ಎಲ್ಲಾ ಮೇಳಗಳ ಚೆಂಡೆ-ಮದ್ದಳೆಗಳ ತಯಾರಿ ಇವರಲ್ಲಾಗುತ್ತಿದ್ದುವು. ಜೋಡಾಟದ ಸಂದರ್ಭದಲ್ಲಿ ಎರಡೂ ಮೇಳಗಳ ಹಿಮ್ಮೇಳ ಪರಿಕರಗಳನ್ನು ಇವರೇ ಸಿದ್ಧಪಡಿಸುತ್ತಿದ್ದರು. ಒಂದು ಚೆಂಡೆಯೋ, ಮದ್ದಳೆಯೋ ತಯಾರಾದರೆ ಹದಿನೈದು ರೂಪಾಯಿ ಸಂಭಾವನೆ ಸಿಕ್ಕಿದರೆ ಹೆಚ್ಚು. ಬದುಕಿನ ಇಳಿ ವಯಸ್ಸಿನಲ್ಲಿ ಮೇಳಗಳಿಗೆ ವಿದಾಯ ಹೇಳಿದ್ದರು. ಆದರೂ ಬಲಿಪ ನಾರಾಯಣ ಭಾಗವತರು (ಈಗಿನ ಬಲಿಪ ನಾರಾಯಣ ಭಾಗವತರ ಅಜ್ಜ) ಭಾಗವತಿಕೆಗಿದ್ದ ಮೇಳ ಊರಿಗೆ ಬಂದರೆ ಮೇಳದಲ್ಲಿ ಗೋಪಣ್ಣರಿಗೆ ಮದ್ದಳೆ ಕಾಯುತ್ತಿತ್ತು! ಬಲಿಪರ ಪದ್ಯಕ್ಕೆ ಮದ್ದಳೆ ನುಡಿಸುವುದು ದೊಡ್ಡ ಹೆಗ್ಗಳಿಕೆಯ ವಿಚಾರ. ಬಲಿಪರಿಗೂ ಖುಷಿಯಿತ್ತು. ಗೋಪಣ್ಣರೂ ಸಂತೃಪ್ತರಾಗುತ್ತಿದ್ದರು.
               ಆಗೆಲ್ಲಾ ಟಿಕೆಟಿನ ಟೆಂಟಿನ ಮೇಳ. ಟಿಕೇಟ್ ಇಲ್ಲದೆ ಯಾರನ್ನೂ ಒಳ ಬಿಡುತ್ತಿರಲಿಲ್ಲ. ನನಗೆ ಮಾತ್ರ ರಿಯಾಯಿತಿಯಿತ್ತು. ಗೋಪಣ್ಣನ ಮಗ ಅಂದರೆ ಸಾಕು, ಎಲ್ಲಾ ಮೇಳದವರು ಒಳಬಿಡುತ್ತಿದ್ದರು. ಎಷ್ಟೋ ಆಟವನ್ನು ಹೀಗೆನೇ ನೋಡಿದ್ದೇನೆ, ಎನ್ನುತ್ತಾರೆ ವೆಂಕಟ್ರಮಣ. ಗೋಪಣ್ಣರ ಹಿರಿ ಮಗ ಟಿ.ಪಿ.ಶ್ರೀಧರ ರಾವ್. ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ನಿವೃತ್ತರು. ಎರಡನೆಯವರು 'ಚೆಂಡೆ ವಾಸಣ್ಣ' ಎಂದೇ ಪರಿಚಿತರಾದ ವಾಸುದೇವ ರಾವ್, ನಂತರದವರು ವೆಂಕಟ್ರಮಣ, ಪಿ.ಜಿ.ಚಂದ್ರಶೇಖರ ರಾವ್, ಮತ್ತು ಪಿ.ಜಿ.ಜಗನ್ನಿವಾಸ ರಾವ್. ಎಲ್ಲರಲ್ಲೂ ಒಂದಲ್ಲ ಒಂದು ರೀತಿಯಲ್ಲಿ ಕಲೆಯ ಸ್ಪರ್ಶವಿದೆ.
               ಯಕ್ಷಗಾನದ ವ್ಯವಸಾಯ ಮತ್ತು ಅದಕ್ಕೆ ಸಂಬಂಧಿಸಿದ ಹಿಮ್ಮೇಳ ಪರಿಕರಗಳ ತಯಾರಿಗಳು ಗೋಪಣ್ಣರಿಗೆ ಆರಾಧನೆ. ಹೇಗೋ ಬದುಕು ಸಾಗಿಸಬೇಕೆನ್ನುವ ಇರಾದೆಯವರಲ್ಲ. ತನ್ನ ಇತಿ-ಮಿತಿಗಳ ಸ್ಪಷ್ಟ ಜ್ಞಾನದೊಳಗೆ ಬದುಕಿನ ರಿಂಗಣ. ಪ್ರಸಿದ್ಧಿಯು ಹೆಸರಿನೊಂದಿಗೆ ಹೊಸೆದಿಲ್ಲ. ಹೀಗೆ ಹೊಸೆದ ಪ್ರಸಿದ್ಧಿಗಳ ವಿಶೇಷಣಗಳ ಆಯುಷ್ಯ ಕ್ಷಣಿಕ. ಗೋಪಣ್ಣರ ಸಿದ್ಧಿಯ ಗಟ್ಟಿತನಕ್ಕೆ ಜ್ಞಾನದ ಗಾಢತೆ ಇದ್ದುದರಿಂದ ಅವರು ಮರಣಿಸಿ ನಾಲ್ಕು ದಶಕಗಳ ಬಳಿಕವೂ ಪ್ರಸ್ತುತರಾಗುತ್ತಾರೆ 

Friday, July 28, 2017

ಮಟ್ಟುಗಳ ಗಟ್ಟಿ ಅಡಿಗಟ್ಟು

 

ಪ್ರಜಾವಾಣಿ ಅಂಕಣ - ದದಿಗಿಣತೋ / 30-12-2016

                 ದಶಂಬರ 25. ಪುತ್ತೂರಿನ ಶ್ರೀ ನಟರಾಜ ವೇದಿಕೆ. ಬೊಳ್ವಾರಿನ ಶ್ರೀ ಆಂಜನೇಯ ಯಕ್ಷಗಾನ ಕಲಾ  ಸಂಘದ ನಲವತ್ತೆಂಟರ ಪಯಣದ ಸಂಭ್ರಮಾಚರಣೆ. ಅಂದು ಯಕ್ಷಗಾನ ಮಟ್ಟುಗಳ ಕುರಿತು ವಿಶೇಷವಾದ ಕಲಾಪ ವರ್ತಮಾನಕ್ಕೆ ಅಗತ್ಯವೆಂದು ಕಂಡುಬಂತು. ಪ್ರಸಂಗ ಪದ್ಯಗಳನ್ನು ಹಿಗ್ಗಾಮುಗ್ಗಾ ಹಿಂಜುವ, ಅದರ ಸಾಹಿತ್ಯವನ್ನು ತೋಚಿದಂತೆ ಗೀಚುವ, ಗೀಚಿದ್ದನ್ನು ಗೀಚಿದಲ್ಲವೆಂದು ಸಮರ್ಥಿಸುವ ಕಾಲಘಟ್ಟದಲ್ಲಿ ಮಟ್ಟುಗಳ ಕುರಿತಾದ ಚಿಂತನೆಯು ರಂಗಬೇಡುವ ಅನಿವಾರ್ಯ ಪ್ರಕ್ರಿಯೆ. ಎಷ್ಟು ಮಂದಿ ಕಲಾವಿದರು ಭಾಗವಹಿಸಿದ್ದಾರೆ ಎನ್ನುವುದಕ್ಕಿಂತ ಆ ಪ್ರಜ್ಞೆಯುಳ್ಳ ಒಂದಷ್ಟು ಪ್ರೇಕ್ಷಕರು ಉಪಸ್ಥಿತರಿದ್ದುದು ಕಲಾಪದ ಧನಾಂಶ.
              ಯಕ್ಷಗಾನದಲ್ಲಿ 'ಹಾಡುಗಾರಿಕೆ, ಪದ್ಯ ಹೇಳುವುದು' ಎನ್ನುವ ಪದ ಪ್ರಯೋಗಕ್ಕಿಂತ 'ಭಾಗವತಿಕೆ' ಎಂದರೆ ತುಂಬಾ ಆಪ್ತವಾಗುತ್ತದೆ. ಈ ಪದಗಳೆಲ್ಲಾ ಸ್ಫುರಿಸುವ ಅರ್ಥಗಳು ಒಂದೇ. ಶತಮಾನಗಳಿಂದ ಹಿರಿಯರು ಹಾಡಿಕೊಂಡು ಬಂದ ಪರಂಪರೆ ಏನಿದೆಯೋ ಅದನ್ನು ಫಕ್ಕನೆ ಹಳೆಯದೆಂದು ತಿರಸ್ಕರಿಸಿದರೆ ಅವಸರದ ತೀರ್ಮಾನವಾದೀತು. ಹೀಗೆ ಹರಿದು ಬಂದ ಪರಂಪರೆಯ ವಾಹಿನಿಯಲ್ಲಿ ಗಟ್ಟಿ ಅಡಿಗಟ್ಟಿನ 'ಮಟ್ಟು'ಗಳೇ ಯಕ್ಷಗಾನದ ಜೀವಾಳ. ಈ ಮಟ್ಟಿನಲ್ಲಿ ಲಯವಿದೆ, ರಾಗವಿದೆ, ಎಲ್ಲಕ್ಕಿಂತಲೂ ಮುಖ್ಯವಾಗಿ 'ಯಕ್ಷಗಾನ'ವಿದೆ. ಇಂತಹ ಮಟ್ಟುಗಳ ಕೆಲವು ಮಾದರಿಗಳ ಪ್ರಾತ್ಯಕ್ಷಿಕೆ ಕುತೂಹಲಕರವಾಗಿತ್ತು.
               ಭಾಗವತರಾಗಿ ಬಲಿಪ ನಾರಾಯಣ ಭಾಗವತರು, ಪುರುಷೋತ್ತಮ ಪೂಂಜ, ಶಿವಶಂಕರ ಬಲಿಪರು ಆಯ್ದ ಪ್ರಸಂಗಗಳ ಸೊಗಸುಗಾರಿಕೆಯನ್ನು ತೋರಿದರು. ಪೆರುವಾಯಿ ನಾರಾಯಣ ಭಟ್, ಕೃಷ್ಣಪ್ರಕಾಶ್ ಉಳಿತ್ತಾಯರ ಚೆಂಡೆ-ಮದ್ದಳೆಯ 'ನುಡಿತ'ಗಳಿಂದ ಹಾಡಿನ ಸೊಗಸು ಸ್ಪಷ್ಟವಾಗಿ ಅನಾವರಣಗೊಂಡಿತು. ಇಂತಹ ಕಲಾಪಗಳು ಹೆಚ್ಚು ಪೂರ್ವತಯಾರಿಯನ್ನು ಬೇಡುತ್ತದೆ. ಇಲ್ಲದಿದ್ದರೆ 'ಗಾನವೈಭವ' ಆಗುವ ಸಾಧ್ಯತೆ ಹೆಚ್ಚು. ಹಾಡಿನ ಒಂದು ಮಟ್ಟು ಹಾಡನ್ನು ಎಷ್ಟು ಎತ್ತರಕ್ಕೇರಿಸುತ್ತದೆ, ಛಂದಸ್ಸಿನ ಸೊಗಸನ್ನು ಹೇಗೆ ಬಿಂಬಿಸುತ್ತದೆ, ಅದರಿಂದಾಗಿ ಸಾಹಿತ್ಯ ಹರಹು ಅನಾವರಣಗೊಳ್ಳುವ ಬಗೆಯನ್ನು ಬಲಿಪರು ಮತ್ತು ಪೂಂಜರು ಸಶಕ್ತವಾಗಿ ತೋರಿದರು.
              ಪೂಂಜರು ಧ್ರುವತಾಳ ಮತ್ತು ತ್ರಿವುಡೆತಾಳದ ವಿಚಾರವನ್ನು ಹೇಳಿದರು - ಧ್ರುವ ತಾಳಕ್ಕೆ - ಶುರುವಿನಲ್ಲಿ ಚತುರಶ್ರ ಲಘು ಮತ್ತು ಒಂದು ಧ್ರುತ ಮತ್ತು ಎರಡು ಚತುರಶ್ರ ಲಘು ಹೀಗೆ ಒಟ್ಟು ಹದಿನಾಲ್ಕು ಮಾತ್ರೆಗಳು. ನಿಧಾನ ತ್ರಿವುಡೆಗೆ ಬರುವಾಗ ಧ್ರುವ ತಾಳದ ಒಂದು ಲಘು ಮತ್ತು ಧ್ರುತ ಸೇರಲ್ಪಟ್ಟು ಆರು ಮಾತ್ರಾ ಕಾಲದ ಐದು ಪೆಟ್ಟು (ರೂಪಕ ತಾಳದಂತೆ 4+2) ಆಗಿ ಉಳಿದೆರಡು ನಾಲ್ಕು ಮಾತ್ರೆಯ ಏಕತಾಳದ ರೂಪ ಹೊಂದಿ ಒಂದು ಹದಿನಾಲ್ಕು ಮಾತ್ರಾವರ್ತದ ಧ್ರುವ ತಾಳವಾಗುತ್ತದೆ. ಅಂದರೆ ಧ್ರುವ ತಾಳದ ಒಂದನೆಯ ಲಘು ಮತ್ತು ಧ್ರುತ ಸೇರಿ ಆರು ಮಾತ್ರೆ; ಮತ್ತಿನ ಎರಡು ಲಘುಗಳು ಸೇರಿ ಎಂಟು (6+4+4). ಹೀಗೆ ಧ್ರುವ ತಾಳವನ್ನು ಯಕ್ಷಗಾನದಲ್ಲಿ ನಿಧಾನ ತ್ರಿವುಡೆಯ ಜಾಗಟೆ ಪೆಟ್ಟಲ್ಲಿ ತೋರಿಸುವುದು  ನಡೆದುಬಂದ ಕ್ರಮಮಟ್ಟುಗಳ ವಿಚಾರ ಬಂದಾಗ ಮುದ್ದಣದ ರಚನೆಯ ಕುರಿತು ಸೋದಾಹರಣವಾಗಿ ಪ್ರಸಂಗಕರ್ತ ಶ್ರೀಧರ್ ಡಿ.ಎಸ್. ಅವರು ಹೇಳಿದ ವಾಕ್ಯಗಳು ನೆನಪಾಗುತ್ತವೆ,
              ಮುದ್ದಣ ಕವಿಯ ಸಾಹಿತ್ಯದಲ್ಲಿ ಶೇ.50ರಷ್ಟು ಛಂದಸ್ಸುಗಳು ಆತನದ್ದೇ ಸಂಶೋಧನೆ ಎನ್ನಬಹುದು. ಸುಮಾರು ನೂರಹತ್ತಕ್ಕೂ ಮೀರಿ ಮಟ್ಟುಗಳಿವೆ. ಮುದ್ರಿತ ಪುಸ್ತಕದಲ್ಲಿ ಏಳುನೂರ ಇಪ್ಪತ್ತು ಪದ್ಯಗಳು ಸಿಗುತ್ತವೆ. ಸಾವಿರಕ್ಕೂ ಮಿಕ್ಕಿ ಪದ್ಯಗಳಿವೆ ಎಂದು ಬಲಿಪ ನಾರಾಯಣ ಭಾಗವತರ ಅಭಿಮತ. ಒಂದೊಂದು ಪ್ರಸಂಗದಲ್ಲೂ ಇಂತಹ ಮಟ್ಟುಗಳಿವೆ. ಇದನ್ನು ಮೀರಿದ ಹಾಡುಗಾರಿಕೆಯು ಯಕ್ಷಗಾನವಾಗುವುದಿಲ್ಲ.
                ವಾರ್ಶಿಕೋತ್ಸವ ಅಂದಾಗ ಸಹಜವಾಗಿ ಲೆಕ್ಕಪತ್ರ, ವರದಿ, ಪದಾಧಿಕಾರಿಗಳ ಆಯ್ಕೆ, ಅಧ್ಯಕ್ಷರ ಅನುಮತಿ ಮೇರೆಗೆ ಇತರ ವಿಚಾರಗಳು.... ಎನ್ನುವ ಢಾಳು ಅಜೆಂಡಾಗಳು ಮಾಮೂಲಿ. ಸಂಘವೊಂದರ ನಿಬಂಧನೆಗೆ ಇವೆಲ್ಲಾ ಕಾನೂನು ಪರೀಧಿಯಲ್ಲಿ ಅವಶ್ಯ, ಬಿಡಿ. ಆಂಜನೇಯ ಸಂಘವು ವಾರ್ಶಿಕ ಕಲಾಪಕ್ಕೆ ಮಹಾಸಭೆಯನ್ನು ಥಳುಕು ಹಾಕಿಲ್ಲ. ಇದಕ್ಕೊಂದು ಸಾರ್ವಜನಿಕ ಸ್ವರೂಪ ಕೊಡಲಾಗಿದೆ. ಸಾರ್ವಜನಿಕ ಪಾಲುಗಾರಿಕೆಯು ಸಂಘದ ಚಟುವಟಿಕೆಗಳ ಬೆನ್ನಹುರಿ.
ಈ ಸಂಘಕ್ಕೆ ಹಿರಿಯರ ಕೊಡುಗೆಗಳಿವೆ. ತಾಳಮದ್ದಳೆಗಳಿಗೆ ಹೆಚ್ಚು ಒತ್ತು ನೀಡುತ್ತಿದೆ. ಹಿರಿಯರು ಕಟ್ಟಿದ ಸಂಘದ ಉದ್ದೇಶವನ್ನು ಚಾಚೂ ತಪ್ಪದೆ ಅನುಷ್ಠಾನ ಮಾಡುತ್ತಿದ್ದೇವೆ. ಇಲ್ಲಿ ಅರ್ಥ ಹೇಳಿ ಬೆಳೆದ ಅನೇಕ ಮಂದಿ ಇಂದು ವಿವಿಧ ಸ್ತರಗಳಲ್ಲಿ ಅಭಿವೃದ್ಧಿಯಾಗಿರುವುದು ಹೆಮ್ಮೆಯ ಸಂಗತಿ. ಸಂಘದೊಂದಿಗೆ ಸಂಘದ ಸಹ ಸಂಸ್ಥೆಯಾಗಿ ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘವೂ ಸಕ್ರಿಯವಾಗಿದೆ. ಮಹಿಳಾ ತಾಳಮದ್ದಳೆಗಳು ರೂಪುಗೊಂಡಿವೆ, ಎನ್ನುವ ಸಂತೋಷವನ್ನು ಹಂಚಿಕೊಳ್ಳುತ್ತಾರೆ ಸಂಘದ ಅಧ್ಯಕ್ಷ ಭಾಸ್ಕರ ಬಾರ್ಯ. ಸಂಘದ ಕಲಾಪಗಳಿಗೆ ಹೊಸ ವಿನ್ಯಾಸ, ಪರಿಷ್ಕಾರವನ್ನು ಮಾಡಿದವರು. ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘದ ಸದಸ್ಯೆಯರು 'ಪಾತ್ರ-ಪ್ರವೇಶ' ಎನ್ನುವ ಸಂವಾದ ರೂಪದ ತಾಳಮದ್ದಳೆಯನ್ನು ಪ್ರಸ್ತುಪಡಿಸಿದರು.
               'ಶ್ರೀ ಯಕ್ಷಾಂಜನೇಯ ಪ್ರಶಸ್ತಿ' : ಸಂಘವು ಪ್ರತೀವರುಷವೂ ಸಂಘದ ಹಿರಿಯ ಕಲಾವಿದರಿಗೆ ಸಂಮಾನವನ್ನು ಮಾಡುವ ಪರಿಪಾಠವನ್ನು ಮಾಡುತ್ತಿದೆ. ಸಂಘದ ನಲವತ್ತರ ಸಂಭ್ರಮದ ಬಳಿಕ 'ಶ್ರೀ ಯಕ್ಷಾಂಜನೇಯ ಪ್ರಶಸ್ತಿ'ಯನ್ನು ಸ್ಥಾಪಿಸಿದೆ. ಮೊದಲ ಪ್ರಶಸ್ತಿಯನ್ನು ಕೀರ್ತಿಶೇಷ ಮಲ್ಪೆ ರಾಮದಾಸ ಸಾಮಗರಿಗೆ ಪ್ರದಾನ ಮಾಡಲಾಗಿತ್ತು. ಈ ವರುಷ ಭಾಗವತ, ಪ್ರಸಂಗಕರ್ತ ಬೊಟ್ಟಿಕೆರೆ ಪುರುಷೋತ್ತಮ ಪೂಂಜರಿಗೆ ನೀಡಲಾಗಿತ್ತು.
               ಬೊಳ್ಳಿಂಬಳ ಪ್ರಶಸ್ತಿ : ಸಂಘದ ಹಿರಿಯ ಕಲಾವಿದ ಬಿ.ಎಸ್.ಓಕುಣ್ಣಾಯರು ತಮ್ಮ ತೀರ್ಥರೂಪರ ನೆನಪಿಗಾಗಿ 'ಬೊಳ್ಳಿಂಬಳ ಪ್ರಶಸ್ತಿ'ಯನ್ನು ಸ್ಥಾಪಿಸಿದ್ದಾರೆ. 'ಬೊಳ್ಳಿಂಬಳ ಶಂಕರನಾರಾಯಣ ಓಕುಣ್ಣಾಯ ಪ್ರತಿಷ್ಠಾನ-ಪಾಣಾಜೆ' ಇದರ ಮೂಲಕ ಪ್ರಶಸ್ತಿಯ ಆಯೋಜನೆ. ಬಿ.ಎಸ್.ಓಕುಣ್ಣಾಯರ ಸಾರಥ್ಯ. ಸಂಘದ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನೂ ಪ್ರದಾನ ಮಾಡಲಾಗುತ್ತದೆ. ಈ ಬಾರಿ ಹಿರಿಯ ಭಾಗವತ ಜಯರಾಮ ಕುದ್ರೆತ್ತಾಯರಿಗೆ ಪ್ರಾಪ್ತಿ. 
             ಸಂಘವೊಂದರ ಬ್ಯಾನರ್ ಕಟ್ಟಿಕೊಂಡರೆ ಸಾಲದು, ಅದು ವರುಷಪೂರ್ತಿ ಸಕ್ರಿಯವಾಗಿ ಇದ್ದಾಗ ಮಾತ್ರ ಸಶಕ್ತವಾಗಿ ಬೆಳೆಯುತ್ತದೆ. ಸುಸಂಸ್ಕೃತ ಪ್ರೇಕ್ಷಕರನ್ನು ಸಿದ್ಧ ಮಾಡುತ್ತದೆ. ಯಕ್ಷಗಾನದ ಬಗೆಗಿರುವ ಇಂತಹ 'ಸಿದ್ಧ ಮಾತು'ಗಳನ್ನು ಶ್ರೀ ಆಂಜನೇಯ ಸಂಘವು ಸತ್ಯ ಮಾಡಿದೆ. ನಿಯಮಿತವಾಗಿ ತಾಳಮದ್ದಳೆಗಳನ್ನು ನಡೆಸುತ್ತಿವೆ. ತನ್ನ ನಲವತ್ತರ ಸಂಭ್ರಮದಲ್ಲಿ ನಲವತ್ತಕ್ಕೂ ಮಿಕ್ಕಿ ತಾಳಮದ್ದಳೆಗಳನ್ನು ಮನೆಮನೆಗಳಲ್ಲಿ ನಡೆಸಿದೆ. ಇನ್ನೆರಡು ವರುಷದಲ್ಲಿ ಸಂಘಕ್ಕೆ ಐವತ್ತು ತುಂಬುತ್ತದೆ. ಇದರ ನೆನಪಿಗಾಗಿ ನೂರು ಮನೆ ತಾಳಮದ್ದಳೆಗಳನ್ನು ಆಯೋಜಿಸುವ ಯೋಚನೆ-ಯೋಜನೆಯ ಕಡತ ತೆರೆದಿದೆ.
(ಚಿತ್ರ : ಮುರಳಿ ರಾಯರಮನೆ)

ಶಾಸ್ತ್ರೀಯ ಆಂತರ್ಯದ ಒಡಲೊಳಗಿನ ಮಾಣಿಕ್ಯ

ಪ್ರಜಾವಾಣಿ ಅಂಕಣ - ದಧಿಗಿಣತೋ/23-12-2016

                ಬೊಟ್ಟಿಕೆರೆ ಪುರುಷೋತ್ತಮ ಪೂಂಜ - ಯಕ್ಷಗಾನ ಭಾಗವತಿಕೆಯ ಐಕಾನ್. ವರ್ತಮಾನದ ರಂಗಾಬ್ಬರದ ಮಧ್ಯೆ ಸ್ಥಿರವಾಗಿ ನಿಂತ ಪೂಂಜರು ಯಾವ ಅಬ್ಬರಕ್ಕೂ ಅಲುಗಾಡಿದವರಲ್ಲ. ಇದು ಅವರು ಯಕ್ಷಗಾನ ರಂಗದಲ್ಲಿ ಊರಿದ ಗಟ್ಟಿ ಹೆಜ್ಜೆ. ಆ ಹೆಜ್ಜೆಯ ಗಟ್ಟಿತನದ ಹಿಂದೆ ಆಳ ಅಧ್ಯಯನ, ಅನುಭವ, ಇದಮಿತ್ಥಂ ಎನ್ನುವ ಬೌದ್ಧಿಕತೆಯಿದೆ. ಹಾಗಾಗಿ ಕೊಚ್ಚಿಹೋಗುವ ಬಿರುಗಾಳಿಯ ಮಧ್ಯೆ 'ತನಗೂ ಅದಕ್ಕೂ ಸಂಬಂಧವಿಲ್ಲ' ಎನ್ನುತ್ತಾ ಅಪ್ಪಟ ರಂಗಕರ್ಮಿಯಾಗಿ ಕಾಣಿಸುತ್ತಾರೆ. ನಿಜಾರ್ಥದ 'ಸಿದ್ಧಿ'ಯ ಆಳೆತ್ತರವನ್ನು ಪೂಂಜರಲ್ಲಿ ಕಾಣಬಹುದು.
                ಪೂಂಜರು ಮೂಲತಃ ವೇಷಧಾರಿ. ಹೊಸಹಿತ್ಲು ಮಹಾಲಿಂಗ ಭಟ್ಟರ ಶಿಷ್ಯ. ಬಳಿಕ ಕೈರಂಗಳ ಗೋಪಾಲಕೃಷ್ಣ ಯಕ್ಷಗಾನ ಸಂಘದಲ್ಲಿ ಗುರು ಆನೆಗುಂಡಿ ಗಣಪತಿ ಭಟ್ಟರಲ್ಲಿ ಹಿಮ್ಮೇಳ ಪಾಠ, ಮಾರ್ಗದರ್ಶನ. ಹೆಜ್ಜೆಗಾರಿಕೆ, ವೇಷಗಾರಿಕೆ, ತಾಳಮದ್ದಳೆ... ಹೀಗೆ ಪರಿಣತಿ.  ಉಪ್ಪಳ ಭಗವತಿ ಮೇಳದಲ್ಲಿ ಚೊಚ್ಚಲ ತಿರುಗಾಟ. ಹವ್ಯಾಸಿ ರಂಗದಲ್ಲಿ ಪ್ರತಿಭಾವಂತ ಕಲಾವಿದರನ್ನು ರೂಪಿಸಿದ ಮೇಳವದು. ಒಂದು ಕಾಲಘಟ್ಟದಲ್ಲಿ ವೃತ್ತಿ ಮೇಳಗಳಿಗೆ ಸರಿಸಾಟಿಯಾಗಿ ಪೈಪೋಟಿ ಕೊಡಬಲ್ಲಷ್ಟು ಸಂಪನ್ಮೂಲಗಳು ಮೇಳದಲ್ಲಿದ್ದುವು. ಮೇಳವನ್ನು ಕೊನೆಗೆ ಮುನ್ನಡೆಸಿದವರು ಕುಂಬಳೆ ಶೇಷಪ್ಪ. ವರುಷವಿಡೀ ತಿರುಗಾಟದಲ್ಲಿದ್ದ ಮೇಳವು ಕಾಲದ ಸ್ಥಿತ್ಯಂತರಕ್ಕೆ ಒಳಗಾಗಿ ಕೊನೆಕೊನೆಗೆ ಹತ್ತೋ ಇಪ್ಪತ್ತೋ ಆಟಕ್ಕೆ ಸೀಮೀತವಾಗಿದ್ದುದು ಕಾಲದ ಪಲ್ಲಟ. ಮುಂಬಯಿಯ ಗೀತಾಂಬಿಕಾ ಮಂಡಳಿಯಲ್ಲಿ ಏಳು ವರುಷ ತಿರುಗಾಟ, ಪುತ್ತೂರು ಮೇಳದಲ್ಲಿ ಎರಡು ವರುಷ, ಕರ್ನಾಟಕದಲ್ಲಿ ಐದು ವರುಷದ ವ್ಯವಸಾಯ.
               ಶ್ರೀ ಕಟೀಲು ದಶಾವತಾರ ಮೇಳದಲ್ಲಿ ಕಳೆದ ಇಪ್ಪತ್ತೇಳು ವರುಷಗಳಿಂದ ಭಾಗವತರಾಗಿ ನಿಜ ಯಕ್ಷಾಸಕ್ತಿಯ ಅಭಿಮಾನಿಗಳನ್ನು ಪಡೆದ ಪೂಂಜರು ಯಾವುದೇ ಗಿಮಿಕ್ಗಳಿಗೆ ತನ್ನನ್ನು ಒಡ್ಡಿಸಿಕೊಂಡವರಲ್ಲ, ಅದನ್ನು ಅಂಟಿಸಿಕೊಂಡವರಲ್ಲ. ಪೌರಾಣಿಕ ಪ್ರಸಂಗವೊಂದರ ಪದ್ಯಗಳ ಸೊಬಗು ಮತ್ತು ಸೊಗಸು ಹೇಗಿರಬೇಕು ಎನ್ನುವುದಕ್ಕೆ ಪೂಂಜರ ಭಾಗವತಿಕೆ ಕನ್ನಡಿ. ಪದ್ಯಗಳಿಗೆ ಮೋಹಕತೆಯ ಸ್ಪರ್ಶವನ್ನು ಅಂಟಿಸಿದ ಭಾಗವತಿಕೆ. ಮೇಳದ ಗೌಜಿ ಗದ್ದಲದ ಅದ್ದೂರಿಯ ಮಧ್ಯೆ ದೇವಿ ಮಹಾತ್ಮೆಯ ಪದ್ಯಗಳನ್ನು ಮನಸಾ ಅನುಭವಿಸಿದ್ದೇನೆ. ಪದ್ಯಗಳಿಗೆ ಅಂಟಿಕೊಂಡರುವ ತಾಳ, ಲಯ ಏನೇ ಇರಲಿ ಪದ್ಯದಿಂದ ಪದ್ಯಕ್ಕೆ ಹೊಸ ಭಾವಗಳನ್ನು ಕಟ್ಟಿಕೊಡುವ ಸ್ವ-ಸಾಮಥ್ರ್ಯವನ್ನು ಕಂಡಿದ್ದೇನೆ.
              ಅವರ ಜತೆ ಆಗಾಗ್ಗೆ ಮದ್ದಳೆ ಸಾಥ್ ಆಗುತ್ತಿರುವ ಕೃಷ್ಣಪ್ರಕಾಶ್ ಉಳಿತ್ತಾಯರು ಹೇಳುತ್ತಾರೆ, ಫಕ್ಕನೆ ನೋಡುವಾಗ ಪೂಂಜರ ಗಾನವು ಸರಳವಾಗಿ ಕಂಡರೂ ಅದರ ಆಳ-ಎತ್ತರಗಳು ಅನುಪಮ. ಕಲಾಸೂಕ್ಷ್ಮ ಮನಸ್ಸಿನ ಪೂಂಜರಿಗೆ ಮದ್ದಳೆಯೋ ಚೆಂಡೆಯೋ ಸಾಥ್ ನೀಡುವುದು ಅತ್ಯಂತ ಸವಾಲು ಬೇಡುವ ಕೆಲಸ. ವಾದಕನು ಸಂಯಮಿಯಾಗಿ, ಮೃದುವಾದ ನುಡಿತಗಳಿಂದ ಅವರನ್ನು ಅನುಸರಿಸಬೇಕಾಗುತ್ತದೆ. ಯಕ್ಷಗಾನದಲ್ಲಿ ಬಳಕೆಯಾಗುವ ತಾಳಗಳ ಶಾಸ್ತ್ರೀಯ ಆಂತರ್ಯವನ್ನು ಸರಿಯಾಗಿ ಬಲ್ಲ ಪೂಂಜರು ರಂಗದಲ್ಲೂ ಗಾನ ಪ್ರಸ್ತುತಿಯಲ್ಲೂ ವಿಭಿನ್ನವಾಗಿ ಕಾಣುತ್ತಾರೆ.
              ಪ್ರಸಂಗಗಳು - ಪೌರಾಣಿಕ : ವಧು ವೈಶಾಲಿನಿ, ಉಭಯಕುಲ ಬಿಲ್ಲೋಜ, ನಳಿನಾಕ್ಷ ನಂದಿನಿ, ಮಾ ನಿಷಾದ, ಕ್ಷಾತ್ರಮೇಧ, ರಾಜಾ ದ್ರುಪದ, ಮಾತಂಗ ಕತ್ಯೆ, ಮನ್ಮಥೋಪಾಖ್ಯಾನ, ಪಾಂಚಜನ್ಯ, ಗಂಡುಗಲಿ ಘಟೋತ್ಕಚ, ಗಾಂಗೇಯ, ಕಾರ್ತಿಕೇಯ ಕಲ್ಯಾಣ, ಕಲಿ ಕೀಚಕ, ರುದ್ರಪಾದ, ಬೋಪ ದೇವೋಪಾಖ್ಯಾನ, ಸತಿ ಉಲೂಪಿ, ದತ್ತ ಸಂಭವ. ಇತ್ಯಾದಿ ಕನ್ನಡ ಯಕ್ಷಗಾನ ಪ್ರಸಂಗಗಳ ರಚಯಿತರು. ಇದರಲ್ಲಿ ಮಾ ನಿಷಾದವು ರಂಗದಲ್ಲಿ ಅತಿ ಹೆಚ್ಚು ಜನಸ್ವೀಕೃತಿ ಪಡೆದ ಪ್ರಸಂಗ. ಈ ಪ್ರಸಂಗದಲ್ಲಿ ಕವಿಯ ಆಶಯವನ್ನು ಮತ್ತು ಅದಕ್ಕೆ ಅಳವಡಿಸಿದ ಸಾಹಿತ್ಯಕ್ಕೆ ಅನುಗಣವಾದ ಭಾವವನ್ನು ಅನುಭವಿಸಿ ಹಾಡುವವರು ದಿನೇಶ ಅಮ್ಮಣ್ಣಾಯರು, ಈಚೆಗೆ ಗೋಷ್ಠಿಯೊಂದರಲ್ಲಿ ಹಾದು ಹೋದ ಈ ಮಾತು ಕೃತಿಯ ಗಟ್ಟಿತನವನ್ನು ಸಾರುತ್ತದೆ. ಗಾನವೈಭವದಂತಹ ಆಧುನಿಕ ವಿನ್ಯಾಸದ ಕಲಾಪದಲ್ಲಿ ಅಮ್ಮಣ್ಣಾಯರು ಭಾಗವತರಾಗಿ ಉಪಸ್ಥಿತರಿದ್ದರೆ ಈ ಪ್ರಸಂಗದ ಕೆಲವು ಪದ್ಯಗಳನ್ನು ಪ್ರೇಕ್ಷಕರು ಚೀಟಿ ಕೊಟ್ಟು ಹಾಡಿಸಲು ವಿನಂತಿ ಮಾಡಿರುವುದನ್ನು ನೋಡಿದ್ದೇನೆ. ಪರೋಕ್ಷವಾಗಿ ಇದು ಕವಿಗೆ ಸಲ್ಲುವ ಗೌರವ.
              ಕಾಲ್ಪನಿಕ :  ಮೇಘ ಮಯೂರಿ, ಸ್ವರ್ಣನೂಪುರ, ಅಮೃತ ವರ್ಶಿಣಿ, ಮೇಘ ಮಾಣಿಕ್ಯ  ಪ್ರಸಂಗಗಳು. ತುಳು ಪೌರಾಣಿಕ ಪ್ರಸಂಗಗಳಾದ ಕುಡಿಯನ ಕೊಂಬಿರೆಲ್, ಕುಡಿಯನ ಕಣ್ಣ್, ಐಗುಳೆ ದಚ್ಚಿಣೆ ಹಾಗೂ ತುಳು ಕಾಲ್ಪನಿಕ ಪ್ರಸಂಗಗಳಾದ ಪಟ್ಟದ ಕತ್ತಿ, ದಳವಾಯಿ ದುಗ್ಗಣ್ಣೆ, ನಲಿಕೆದ ನಾಗಿ, ಬಂಗಾರ್ದ ಗೆಜ್ಜೆ, ಸ್ವರ್ಣ ಕೇದಗೆ, ಗರುಡ ಕೇಂಜವೆ' ನೃತ್ಯ ರೂಪಕಗಳಾದ ಅಂಧಕ ನಿದಾನ, ಭುವನಾಭಿರಾಮ, ಜೇವು ಕೇದಗೆ ಮತ್ತು 'ಹಿತ್ತಾಳೆ ಕಿವಿ' ಮಕ್ಕಳ ನಾಟಕಗಳ ರಚಯಿತರು. ಬಹುತೇಕ ತುಳು ಪ್ರಸಂಗಗಳು ಪ್ರದರ್ಶಿತವಾಗಿವೆ. ಮೇಳಗಳು ವರುಷದ ಪ್ರಸಂಗಗಳಾಗಿ ಅಂಗೀಕರಿಸಿವೆ. ತುಳು ಪೌರಾಣಿಕ ಪ್ರಸಂಗ ಸಾಹಿತ್ಯಗಳು ಯಕ್ಷ ಲೋಕದ ರತ್ನಗಳು. ತುಳು ಸೊಗಸಿನ ಬಂಧಗಳು. ಅಪ್ಪಟ ತುಳುವಿನ ಸೊಬಗು. ಪೂಂಜರು 'ಶಾಸ್ತ್ರೀಯ ಆಂತರ್ಯದ ಒಡಲೊಳಗಿನ ಮಾಣಿಕ್ಯ'.
            ಬಹುಶಃ ಬಡಗು ತಿಟ್ಟಿನಲ್ಲಿ ಸಮರ್ಥ ಭಾಗವತರಾಗಿ ಪ್ರಸಂಗಕರ್ತರಾಗಿದ್ದ ಕೀರ್ತಿಶೇಷ ಕಾಳಿಂಗ ನಾವಡರರನ್ನು ಹೊರತುಪಡಿಸಿ; ತೆಂಕಿನಲ್ಲಿ ಸ್ವತಃ ಪ್ರಸಂಗ ರಚಿಸಿ ರಂಗದಲ್ಲಿ ಚೆನ್ನಾಗಿ ದುಡಿಸಿ ಯಶಸ್ಸನ್ನು ಹೊಂದಿದ ತರುಣ ಭಾಗವತರಲ್ಲಿ ಪೂಂಜರು ಪ್ರಮುಖರು. ಪುರಾಣದ ಆಶಯಗಳನ್ನು ಹೊಸ ದೃಷ್ಟಿಕೋನದಿಂದ ನೋಡಿ ಆಧುನಿಕತೆಗೆ ಒಗ್ಗುವಂತೆ ಪ್ರಸಂಗಗಳನ್ನು ಹೆಣೆದುದರಲ್ಲಿ ಇವರು ಇತರರನ್ನು ಮೀರಿಸುತ್ತಾರೆ, ಎನ್ನುತ್ತಾರ 'ಒಡ್ಡೋಲಗ' ಕೃತಿಯಲ್ಲಿ ಅರ್ಥಧಾರಿ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ.
             ಅಂಬುರುಹ : ಪೂಂಜರ ಮನೆಯ ಹೆಸರು 'ಅಂಬುರುಹ'. ಮಂಗಳೂರಿನ ಯಕ್ಷಧ್ರುವ ಪಟ್ಲ ಪೌಂಡೇಶನ್ (ರಿ) ಇವರು ಪೂಂಜರ ಯಕ್ಷಗಾನ ಪ್ರಸಂಗಗಳನ್ನು ಪ್ರಕಾಶಿಸಿದೆ. 'ಅಂಬುರುಹ' ಶೀರ್ಶಿಕೆಯ ಎರಡು ಸಂಪುಟಗಳಲ್ಲಿ ಅಚ್ಚಾದ ಪ್ರಸಂಗಗಳು ಪೂಂಜರ ಸಾಧನೆಗೆ ಸಂದ ಮಾನ. ಭಾಗವತ ಪಟ್ಲ ಸತೀಶ ಶೆಟ್ಟಿ ಇವರ ಸಾರಥ್ಯದ ಫೌಂಡೇಶನ್ ಶ್ಲಾಘನೀಯವಾದ ಕಾರ್ಯ ಮಾಡಿದೆ.
              ಪುರುಷೋತ್ತಮ ಪೂಂಜರು ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಗೌರವ ಪ್ರಶಸ್ತಿ, ಗೋಪಾಲಕೃಷ್ಣ ಆಸ್ರಣ್ಣ ಪ್ರಶಸ್ತಿ, ಪುಳಿಂಚ ರಾಮಯ್ಯ ಶೆಟ್ಟಿ ಪ್ರಶಸ್ತಿ, ಯಕ್ಷಮಾನಸ, ಯಕ್ಷರಕ್ಷಾ, ಬೊಂಡಾಲ ಪ್ರಶಸ್ತಿಗಳಿಂದ ಪುರಸ್ಕೃತರು. ಪುತ್ತೂರಿನ ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘವು ತನ್ನ ನಲವತ್ತೆಂಟರ ಸಂಭ್ರಮದಲ್ಲಿ ಪೂಂಜರನ್ನು 'ಶ್ರೀ ಯಕ್ಷಾಂಜನೇಯ ಪ್ರಶಸ್ತಿ' ನೀಡಿ ಗೌರವಿಸಲಿದೆ. ದಶಂಬರ 25ರಂದು ಅಪರಾಹ್ನ ಪುತ್ತೂರಿನ 'ಶ್ರೀ ನಟರಾಜ ವೇದಿಕೆ'ಯಲ್ಲಿ ಪ್ರಶಸ್ತಿ ಪ್ರದಾನ ಜರುಗಲಿದೆ.
(ಚಿತ್ರ : ಯಕ್ಷಲೋಕ)


ಇಪ್ಪತ್ತೈದು ದಿವಸವೂ.. ನೂರನಲವತ್ತೇಳು ಪುಟವೂ..

ಪ್ರಜಾವಾಣಿ ಅಂಕಣ-ದಧಿಗಿಣತೋ/16-12-2016

                   ಶೇಣಿ ಗೋಪಾಲಕೃಷ್ಣ ಭಟ್ಟರ ಅರ್ಥಗಾರಿಕೆಯ ಥಳಕಿನ ಎಳೆ - 'ಶೇಣಿ ದರ್ಶನ'. ಪುತ್ತೂರಿನ ಕರ್ನಾಟಕ ಸಂಘವು (2000) ಮುದ್ರಿಸಿತ್ತು. ವರುಷದೊಳಗೆ ಪ್ರತಿಗಳು ಖಾಲಿ. ಸಂಘದ ಅಧ್ಯಕ್ಷ ಕೀರ್ತಿಶೇಷ ಬೋಳಂತಕೋಡಿ ಈಶ್ವರ ಭಟ್ಟರು ಖುಷ್. ಪುಸ್ತಕವನ್ನು ಕೊಂಡು ಓದಿದವರಲ್ಲಿ ಕಲಾವಿದರ ಸಂಖ್ಯೆ ಸಣ್ಣದಲ್ಲ. ಹಿಮ್ಮಾಹಿತಿ ನೀಡಿ ಮೆಚ್ಚುಗೆ ಸೂಚಿಸಿದವರು ಅಧಿಕ. ಜತೆಗೆ ಈ ಮಾತುಗಳು ಶೇಣಿಯವರದ್ದೇ ಎನ್ನಲು ಏನು ಪುರಾವೆ. ಎಂದು ಕುಟುಕಿದವರೂ ಇದ್ದಾರೆನ್ನಿ. ಇಂತಹ ಮಹನೀಯರ ಅರ್ಥಗಾರಿಕೆಯಲ್ಲಿ ಶೇಣಿಯವರ ಪ್ರತಿಪಾದಿಸುತ್ತಿದ್ದ ಬಹಳಷ್ಟು ವಿಚಾರಗಳು ಹಾದುಹೋಗುವುದನ್ನು ಗಮನಿಸಿದ್ದೇನೆ.
                  ಈಶ್ವರ ಭಟ್ಟರು 'ಶೇಣಿಯವರ ಚಿಂತನೆಗಳನ್ನು ಸಂಗ್ರಹಿಸಿ. ಪ್ರಕಟಿಸೋಣ' ಎಂಬ ಆಶಯ ಮುಂದಿಟ್ಟರು. ಕರ್ನಾಾಟಕ ಸಂಘವು ಪುಸ್ತಕವನ್ನು ಪ್ರಕಟಿಸುತ್ತದೆ ಎನ್ನುವ ಹೆಮ್ಮೆ ಒಂದೆಡೆ, ಸುಮಾರು ನೂರು ಪುಟಕ್ಕಾಗುವಷ್ಟು ಬರೆಹಗಳನ್ನು ಸಂಗ್ರಹಿಸುವುದಾದರೂ ಹೇಗೆ? ಎನ್ನುವ ಆತಂಕ ಮತ್ತೊಂದೆಡೆ.  ಯೋಚನೆಯಲ್ಲೇ ತಿಂಗಳುಗಳು ದಾಟಿದುವು. 'ಶುರು ಮಾಡಿದ್ರಾ, ಬೇಗ ಮಾಡಿ ಕೊಡಿ' ಭಟ್ಟರ ನೆನಪು.
               ಒಂದು ಮುಂಜಾನೆ ಕಾಸರಗೋಡಿನ 'ದಾಸ ನಿವಾಸ'ಕ್ಕೆ ಭೇಟಿ. ಉಪಾಹಾರ, ಮಾತಿನ ಆತಿಥ್ಯ. ಹಿಂದಿನ ರಾತ್ರಿಯ ಕೂಟದ 'ಜರಾಸಂಧ'ನ ಯಶದ ಗುಂಗಿನಲ್ಲಿದ್ದರು. ತಾನು ನಿರ್ವಹಿಸಿದ ಪಾತ್ರದ ನಡೆ, ಇದಿರು ಅರ್ಥಧಾರಿಯ ಸ್ಪಂದನಗಳ ವಿವರಗಳನ್ನು ಹೇಳುತ್ತಿದ್ದಂತೆ ಅಡುಗೆ ಮನೆಯಿಂದ ಬಟ್ಟಲು ಸದ್ದು ಮಾಡಿತು. ಭೋಜನದ ಬಳಿಕವೂ ಜರಾಸಂಧ ಪ್ರತ್ಯಕ್ಷ! ಆ ಪಾತ್ರವನ್ನು ಕಡೆದ ಬಗೆ, ಯಾವುದೆಲ್ಲಾ ಹೊಳಹುಗಳನ್ನು ಪಾತ್ರದಲ್ಲಿ ತರಬಹುದೆನ್ನುವ ಯೋಚನೆಗೆ ದಿಗಿಲಾದೆ.
             ಹೊತ್ತು ಇಳಿಯುತ್ತಾ ಬರುತ್ತಿದ್ದಂತೆ ಸಹಜವಾಗಿ ಗಡಿಯಾರದತ್ತ ನಾಲ್ಕಾರು ಬಾರಿ ದೃಷ್ಟಿ ಹೋಯಿತು. ತಕ್ಷಣ ಜಾಗೃತರಾದರು. 'ಹೋ.. ಹೊತ್ತು ಹೋದುದೇ ಗೊತ್ತಾಗಲಿಲ್ಲ... ಸರಿ, ಏನು ವಿಶೇಷ? ಎಂದರು. ಬೋಳಂತಕೋಡಿಯವರ ರಾಯಸವನ್ನು ಒಪ್ಪಿಸಿದೆ. ಹೌದಲ್ಲಾ... ಮಾಡೋಣ. ಈಶ್ವರಣ್ಣ ಹೇಳಿದರೆ ಹಿಂದೆ ಹಾಕುವಂತಿಲ್ಲ, ಎಂದು ಮುಂದಿನ ಭೇಟಿಯ ದಿನವನ್ನೂ ನಿಶ್ಚಯ ಮಾಡಿಬಿಟ್ಟರು.
              ಟೇಪ್ರೆಕಾರ್ಡರ್ನೊಂದಿಗೆ ಬೀಗುತ್ತಾ ಬೇಗನೆ 'ದಾಸನಿವಾಸ' ತಲುಪಿದೆ. ಬೆಳಗ್ಗಿನ ಉಪಾಹಾರವನ್ನು ಮುಗಿಸಿ, ಆಗಷ್ಟೇ ದಿನಪತ್ರಿಕೆಯ ಓದೂ ಕೊನೆಯ ಗೆರೆಯಲ್ಲಿತ್ತು. ಇಂದು ಜೀವನ ಧರ್ಮ ಎನ್ನುವ ವಿಚಾರದಲ್ಲಿ ಮಾತನಾಡ್ತೇನೆ, ಎಂದರು. ಟೇಪ್ ರೆಕಾರ್ಡರ್ ಅಲರ್ಟ್  ಮಾಡಿ ಕುಳಿತು ಇನ್ನೇನು  ಬಟನ್ ಒತ್ತಬೇಕಷ್ಟೇ... ಒಂದಿಬ್ಬರು ಅತಿಥಿಗಳು ಮಾತನಾಡಿಸಲು ಬಂದರು.
             ಬಂದವರಲ್ಲಿ ನನ್ನ ಪರಿಚಯ, ಉದ್ದೇಶವನ್ನೆಲ್ಲಾ ತಿಳಿಸಿದ ಶೇಣಿಯವರು 'ನಾವಿಂದು ಜೀವನ ಧರ್ಮ ಎನ್ನುವ ವಿಷಯವನ್ನು ಆಯ್ಕೆಮಾಡಿಕೊಂಡಿದ್ದೇವೆ' ಎನ್ನುತ್ತಾ ಅವರಲ್ಲಿ ತಾನು ಮಾತನಾಡಲಿರುವ ವಿಷಯದ ಸಾರವನ್ನೆಲ್ಲಾ ಹೇಳುವಾಗ ಮಧ್ಯಾಹ್ನ ತಿರುಗುತ್ತಿತ್ತು. ಬಂದವರಿಗೂ ತಾವು ಬಂದ ವಿಷಯ ಮರೆತುಹೋಗುವಂತಹ ವಿಚಾರಗಳು! ಸ್ನಾನ, ಭೋಜನ, ವಿಶ್ರಾಂತಿಯ ಬಳಿಕ 'ನನಗಾಗಿ' ಮಾತು ಆರಂಭವಾಯಿತು. ಸುಮಾರು ಎರಡು ಗಂಟೆಯಷ್ಟು ಜೀವನ ಧರ್ಮದ ವ್ಯಾಖ್ಯಾನ. ಬೆಳಿಗ್ಗೆ ಅತಿಥಿಗಳು ಬಂದಿದ್ರಲ್ಲಾ... ಅವರ ಮುಂದೆ ಹೇಳಿದ ಜೀವನಧರ್ಮಕ್ಕೂ, ಟೇಪ್ರೆಕಾಡರ್ಿಗೆ ಉಣಿಸಿದ ಜೀವನಧರ್ಮಕ್ಕೂ ರಾತ್ರಿಹಗಲಿನ ವ್ಯತ್ಯಾಸ. ಬೆಳಿಗ್ಗೆ ಗಟ್ಟಿ ಕಾಳುಗಳು. ಸಂಜೆಯಾಗುವಾಗ ಮೆತ್ತಗಾದ ಅನುಭವ. ಮೆತ್ತಗಿನದರಲ್ಲೂ ರಸ-ಸ್ವಾದ.
             ಸುಮಾರು ಇಪ್ಪತ್ತೈದು ವಾರ ನಿರಂತರವಾಗಿ ಭೇಟಿ ನೀಡಿದ್ದೆ. ಪ್ರತೀ ಸಲವೂ ಅತಿಥಿಗಳು ಖಾಯಂ. ಗಟ್ಟಿಕಾಳುಗಳನ್ನು ಹೆಕ್ಕಲು ಅಸಮರ್ಥನಾಗಿದ್ದೆ. ನನಗೆ ಹೇಳಬೇಕಾದ ವಿಷಯಗಳನ್ನೆಲ್ಲಾ ಅತಿಥಿಗಳ ಕಿವಿಗೆ ಸುರಿದ ಬಳಿಕವೇ ರೆಕಾರ್ಡಿಂಗ್.  ಕೆಲವೊಮ್ಮೆ ಅತಿಥಿಗಳು ಸಂಜೆಯವರೆಗೂ ಶೇಣಿಯವರ ಮಾತಿಗೆ ಕಿವಿಯಾಗುತ್ತಿದ್ದರು. ನನ್ನ ದಾಖಲಾತಿ ಕೆಲಸ ಮುಂದೂಡಲ್ಪಡುತ್ತಿತ್ತು. ಹೀಗೆ ಮುಂದೂಡಲ್ಪಟ್ಟ ದಿವಸಗಳೇ ಅಧಿಕ! ಈಗ ಅನ್ನಿಸುವುದುಂಟು. ಅತಿಥಿಗಳಲ್ಲಿ ಮಾತನಾಡುತ್ತಿದ್ದಾಗಲೇ ರೆಕಾರ್ಡ್ ಮಾಡಬೇಕಿತ್ತು. ಈಗಿನಂತೆ ಹೇಳುವಂತಹ ತಾಂತ್ರಿಕತೆಯಿರಲಿಲ್ಲ. ಟೇಪ್ರೆಕಾರ್ಡರ್ ಒಂದನ್ನೇ ನಂಬಬೇಕಿತ್ತು. ಅದೂ ಕೆಲವೊಮ್ಮೆ ಮುಷ್ಕರ ಹೂಡುತ್ತಲಿತ್ತು.
              ಅವರ ಮಾತುಗಳನ್ನು ದಾಖಲಿಸಿದ ರಾತ್ರಿ ದೂರವಾಣಿ ಕರೆ ಮಾಮೂಲಿ. ಕೆಲವೊಂದು ಸಾಲುಗಳನ್ನು ಕತ್ತರಿಸುವಂತೆ ಸೂಚನೆ. ವಿಷಯದ ಪ್ರಸ್ತುತತೆಯ ಕುರಿತು ಹಿಮ್ಮಾಹಿತಿ. ಧ್ವನಿಮುದ್ರಿಸಿದ ವಿಚಾರಗಳನ್ನೆಲ್ಲಾ ಯಥಾವತ್ ಕಾಗದಕ್ಕಿಳಿಸಿ, ಟೈಪ್ ಮಾಡಿ ನೀಡುತ್ತಿದ್ದೆ. ತಪ್ಪು-ಒಪ್ಪು, ಪರಿಷ್ಕಾರಗಳನ್ನು  ಶೇಣಿಯವರೇ ಸ್ವತಃ ಮಾಡಿದ್ದರು. ಹೀಗೆ ಸುಮಾರು ನೂರ ನಲವತ್ತೇಳು ಪುಟಗಳಲ್ಲಿ 'ಶೇಣಿ ಚಿಂತನ' ಸಿದ್ಧವಾಯಿತು. ಇದರಲ್ಲಿ ಕಾರ್ಕಳದಲ್ಲಿ ಮಾಡಿದ ಭಾಷಣವೊಂದನ್ನು ಸೇರಿಸಿಕೊಳ್ಳಲಾಗಿದೆ. ಇವಲ್ಲದೆ ಐದಾರು ಚಿಂತನೆಗಳನ್ನು 'ವಿವಾದವಾಗಬಾರದು' ಎನ್ನುವ ಕಾರಣದಿಂದ ಬದಿಗಿಟ್ಟಿದ್ದರು.
              ಪುಸ್ತಕದ ಹೂರಣ ಕೊನೆಯ ಘಟ್ಟ ತಲಪುತ್ತಿದ್ದಂತೆ ಬೋಳಂತಕೋಡಿಯವರು ಪುಸ್ತಕ ಬಿಡುಗಡೆಯ ದಿನಾಂಕದ ಹೊಂದಾಣಿಕೆಯಲ್ಲಿದ್ದರು. ಕರಡು ಪ್ರತಿಯನ್ನು ಮುದ್ರಣಕ್ಕಾಗಿ ರಾಜೇಶ್ ಪವರ್ ಪ್ರೆಸ್ಸಿಗೆ ನೀಡಿದ್ದರು. ಅಕ್ಷರಜೋಡಣೆಯ ಕೆಲಸವೂ ಶುರುವಾಗಿತ್ತು. ಮತ್ತೊಂದೆಡೆ ಭಟ್ಟರ ಆರೋಗ್ಯ ಕೈಕೊಡುತ್ತಲಿತ್ತು.  3 ಅಕ್ಟೋಬರ್ 2003ರಂದು ಬೋಳಂತಕೋಡಿಯವರು ವಿಧಿವಶರಾದರು. ಒಂದೆರಡು ತಿಂಗಳ ಬಳಿಕ ಪುಸ್ತಕವನ್ನು ಮುದ್ರಿಸುವಂತೆ ಸಂಘದ ವರಿಷ್ಠರಲ್ಲಿ ವಿನಂತಿಸಿದರೂ ಜಾಣ ಪ್ರತಿಕ್ರಿಯೆ. ಆಂತರಿಕವಾಗಿ ರೇಗಿದ್ದೆ! ಹುಚ್ಚು ಧೈರ್ಯದಿಂದ ನಾಲ್ಕು ತಿಂಗಳಲ್ಲಿ ಮುದ್ರಣ ವೆಚ್ಚವನ್ನು ಭರಿಸುತ್ತೇನೆ, ಪುಸ್ತಕ ಮುದ್ರಣ ಮಾಡಿ ಕೊಡ್ತೀರಾ, ಪ್ರೆಸ್ಸಿನ ರಘುನಾಥ ರಾವ್ ಅವರಲ್ಲಿ ಬಿನ್ನವಿಸಿದೆ.  ಪುಸ್ತಕ ಪ್ರಕಟವಾಯಿತು. ಮಿತ್ರ ವಾಸುದೇವ ರಂಗಾಭಟ್ಟರ ಸಹಕಾರದಿಂದ ಉಡುಪಿಯಲ್ಲಿ ಬಿಡುಗಡೆಯೂ ಆಯಿತು. ಶೇಣಿ, ಸಾಮಗರು ವೇದಿಕೆಯಲ್ಲಿದ್ದರು. ಅದೇ ಹೊತ್ತಿಗೆ ನನ್ನ ಕೃಷಿ ಲೇಖನವೊಂದಕ್ಕೆ ಸಂದ ಪ್ರಶಸ್ತಿಯ ಜತೆ ಸಿಕ್ಕ ಮೊತ್ತವು ಆರ್ಥಿಕ ಭಾರವನ್ನು ಹಗುರ ಮಾಡಿತು. ಪ್ರೆಸ್ಸಿನ ಬಿಲ್ ಚುಕ್ತಾ ಆಯಿತು.
                ವಾರದ ಬಳಿಕ ಪುಸ್ತಕದ ಪ್ಯಾಕೆಟ್ಟಿನೊಂದಿಗೆ ದಾಸ ನಿವಾಸಕ್ಕೆ ಹೋದೆ. ಪುಸ್ತಕವನ್ನು ಸಮರ್ಪಿಸಿದೆ. ಅಂದಿನ ಶೇಣಿಯವರ ಖುಷಿಯ ಪ್ರಸನ್ನತೆ ಇದೆಯಲ್ಲ, ಅದನ್ನು ಮೆಲುಕು ಹಾಕಿದಷ್ಟೂ ಪುಳಕಗೊಳ್ಳುತ್ತೇನೆ. ಸಂಜೆ ಹೊರಡುವ ಹೊತ್ತು. 'ಈಗ ಬಂದೆ, ಸ್ವಲ್ಪ ಕುಳ್ಳಿರಿ' ಎಂದು ಜಗಲಿಗೆ ತಾಗಿಕೊಂಡಿದ್ದ ಕೋಣೆಯತ್ತ ನಡೆದರು. ಏನನ್ನೋ ಹುಡುಕುತ್ತಿದ್ದ ಸದ್ದು ಕೇಳುತ್ತಿತ್ತು. ಹತ್ತು ನಿಮಿಷದ ಬಳಿಕ ಮರಳಿದ ಶೇಣಿಯವರ ಮುಖದಲ್ಲಿ ಪ್ರಸನ್ನತೆ ಮಾಯವಾಗಿತ್ತು!
'ಸಾಮಗರದ್ದೂ ಒಂದು ದಾಖಲಾತಿ ಮಾಡಿಬಿಡಿ,' ಎನ್ನುತ್ತಾ ಶೇಣಿಯವರು ಬೀಳ್ಕೊಟ್ಟರು. ಶೇಣಿಯವರ ಆಶಯವು 'ಸಾಮಗ ಪಡಿದನಿ' ಕೃತಿಗೆ ಶ್ರೀಕಾರ ಬರೆಯಿತು.