Wednesday, November 28, 2018

ತೆಂಕಬೈಲು ಭಾಗವತರಿಗೆ ಪದ್ಯಾಣ ಪ್ರಶಸ್ತಿ ಪ್ರದಾನ

ಬದುಕು ಕಲೆಯಾಗಲು ಬೇಕಾದ ಒಳಸುರಿಗಳು ಯಕ್ಷಗಾನದಲ್ಲಿದೆ'
- ಪದ್ಯಾಣ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪೂಜ್ಯ ಒಡಿಯೂರು ಶ್ರೀಗಳು

"ಸಮಾಜದಲ್ಲಿ 'ಸರಸ' ಮತ್ತು 'ವಿರಸ'ವು ಗೋಚರವಾಗುವುದನ್ನು ಕಾಣುತ್ತೇವೆ.  ಇವುಗಳ ಮಧ್ಯೆ 'ಸಾಮರಸ್ಯ'ವು ಪ್ರಕಾಶಿಸಲು ಬೇಕಾದ ಸಂಪನ್ಮೂಲವನ್ನು ಯಕ್ಷಗಾನವು ನೀಡಿದೆ. ಯಕ್ಷಗಾನವು ಪೌರಾಣಿಕ ಜ್ಞಾನವನ್ನು ಪಸರಿಸುತ್ತದೆ. ಆಟ, ಕೂಟಗಳ ಮೂಲಕ ಭಾಷಾ ಶುದ್ಧಿಯನ್ನು ಕಲಿಸುತ್ತದೆ. ಸಂಸ್ಕೃತಿ, ಸಂಸ್ಕಾರಗಳ ಪಥವನ್ನು ತೋರಿಸುತ್ತದೆ. ಬದುಕು ಕಲೆಯಾಗಲು ಬೇಕಾದಂತಹ ಉತ್ತಮ ಒಳಸುರಿಗಳನ್ನು ನೀಡುತ್ತದೆ" ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಹೇಳಿದರು.

ಅವರು ಬಂಟ್ವಾಳ ತಾಲೂಕಿನ ಮಿತ್ತನಡ್ಕ ಸನಿಹದ ಪದ್ಯಾಣ ಶ್ರೀ ಮಹಾಲಿಂಗೇಶ್ವರ ದೇವಳದ ಸಭಾಭವನದಲ್ಲಿ ಜರುಗಿದ 'ಪದ್ಯಾಣ ಪ್ರಶಸ್ತಿ ಪ್ರದಾನ' ಸಮಾರಂಭದಲ್ಲಿ ಆಶೀರ್ವಚನ ನೀಡುತ್ತಾ, ಯಕ್ಷಗಾನದ ಭಾಗವತ ಹಿಮ್ಮೇಳ ಮತ್ತು ಮುಮ್ಮೇಳವನ್ನು ಹಿಡಿತದಲ್ಲಿಟ್ಟುಕೊಳ್ಳುವ ನಿರ್ದೇಶಕ. ಸ್ಥಾನಕ್ಕೆ ಏರಲು ನಿರಂತರ ಕಲಿಕೆ ಮತ್ತು ಸಾಧನೆ ಮುಖ್ಯ ಎಂದರು.
ಖ್ಯಾತ ಭಾಗವತ ಶ್ರೀ ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿಗಳಿಗೆ ಹಾರ, ಶಾಲು, ಹಣ್ಣುಹಂಪಲು, ಸಂಮಾನ ಪತ್ರ, ಸ್ಮರಣಿಕೆ ಮತ್ತು ನಿಧಿಯೊಂದಿಗೆ 'ಪದ್ಯಾಣ ಪ್ರಶಸ್ತಿ'ಯನ್ನು ಪೂಜ್ಯ ಶ್ರೀಗಳು ಪ್ರದಾನಿಸಿದರು. ಹುಟ್ಟೂರ ಸಂಮಾನ ಸ್ವೀಕರಿಸಲು ಖುಷಿಯಾಗುತ್ತಿದೆ. ಎಲ್ಲರಿಗೂ ಭಾಗ್ಯ ಬರುವುದಿಲ್ಲ. ಎನ್ನುವ ಸಂತಸವನ್ನು ತೆಂಕಬೈಲು ಶಾಸ್ತ್ರಿಗಳು ಹಂಚಿಕೊಂಡರು. ಸಂಮಾನಿತರ ಪುತ್ರ ಮುರಳೀಕೃಷ್ಣ ಶಾಸ್ತ್ರಿ ಮತ್ತು ಸೊಸೆ ವಿದ್ಯಾ ಉಪಸ್ಥಿತರಿದ್ದರು.

ಸಂದರ್ಭದಲ್ಲಿ ಪತ್ರಕರ್ತ, ಅಂಕಣಗಾರ ನಾ. ಕಾರಂತ ಪೆರಾಜೆ ಸಂಪಾದಕತ್ವದ ಕಿರು ಪುಸ್ತಿಕೆಯನ್ನು ವಿದ್ವಾಂಸ ಡಾ.ಪಾದೆಕಲ್ಲು ವಿಷ್ಣು ಭಟ್ಟರು ಬಿಡುಗಡೆಗೊಳಿಸಿದರು. ಪುಸ್ತಕದಲ್ಲಿ ಸಂಮಾನಿತರ ಪರಿಚಯ ಮತ್ತು ಅವರು ರಚಿಸಿದ 'ಏಕಚಕ್ರವೀರ ವಿಜಯ' ಪ್ರಸಂಗವು ಒಳಗೊಂಡಿದೆ. ಸಂಮಾನಿತರನ್ನು ಹಿರಿಯ ಅರ್ಥದಾರಿ ಶ್ರೀ ಸೇರಾಜೆ ಸೀತಾರಾಮ ಭಟ್ ನುಡಿಹಾರಗಳೊಂದಿಗೆ ಅಭಿನಂದಿಸಿದರು. ಆರಂಭದಲ್ಲಿ ಕರ್ನಾಟಕ ಲೋಕಸೇವಾ ಆಯೋಗದ ಆಧ್ಯಕ್ಷ ಹಾಗೂ ಪದ್ಯಾಣ ಪ್ರಶಸ್ತಿ ಸಮಿತಿಯ ಗೌರವಾಧ್ಯಕ್ಷ ಡಾ.ಟಿ.ಶ್ಯಾಮ ಭಟ್ ದೀಪ ಬೆಳಗಿಸಿ ಶುಭಚಾಲನೆ ನೀಡಿದರು

ಪದ್ಯಾಣ ಶ್ರೀಕ್ಷೇತ್ರದ ಆಡಳಿತ ಮೊಕ್ತೇಸರ ಶ್ರೀ ಸೇರಾಜೆ ಸತ್ಯನಾರಾಯಣ ಭಟ್ಟರು ಸ್ವಾಗತಿಸಿದರು. ಪದ್ಯಾಣ ಪ್ರಶಸ್ತಿ ಸಮಿತಿಯ  ಕಾರ್ಯದರ್ಶಿ  ಸ್ವಸ್ತಿಕ್ ಪದ್ಯಾಣ ವಂದಿಸಿದರು. ನಾ. ಕಾರಂತ ಪೆರಾಜೆ ನಿರ್ವಹಿಸಿದರು. ಸಮಿತಿಯ ಅಧ್ಯಕ್ಷರಾದ ಪದ್ಯಾಣ ಗೋಪಾಲಕೃಷ್ಣ ಭಟ್ಟರು ಅತಿಥಿಗಳಿಗೆ ಸ್ಮರಣಿಕೆ ನೀಡಿದರು.  ಪೂಜ್ಯ ಶ್ರೀಗಳಿಗೆ ಚೈತನ್ಯಕೃಷ್ಣ ಪದ್ಯಾಣ ಮತ್ತು ಪ್ರಣತಿ ದಂಪತಿಗಳು ಫಲಪುಷ್ಪ ನೀಡಿ ಗೌರವಿಸಿದರು. ಪದ್ಯಾಣ ಗಣಪತಿ ಭಟ್, ಪದ್ಯಾಣ ಶಂಕರನಾರಾಯಣ ಭಟ್, ಪದ್ಯಾಣ ನಾರಾಯಣ ಭಟ್, ಪದ್ಯಾಣ ಜಯರಾಮ ಭಟ್ಟರು ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದರು

ಸಂದರ್ಭದಲ್ಲಿ ಚೈತನ್ಯಕೃಷ್ಣ ಪದ್ಯಾಣ ಇವರ ವಿವಾಹದ ಸಂಭ್ರಮ ಪ್ರಯುಕ್ತ ಹನುಮಗಿರಿ ಮೇಳದವರಿಂದ 'ಮತ್ಸ್ಯಾವತಾರ ಮತ್ತು ಕನಕಾಂಗಿ ಕಲ್ಯಾಣ' ಪ್ರದರ್ಶನ ಜರುಗಿತು.  
(ಚಿತ್ರ : ಶ್ಯಾಮ್ ಪ್ರಸಾದ್ ಕುಂಚಿನಡ್ಕ)

Friday, November 23, 2018

ತೆಂಕಬೈಲು ಶೈಲಿಯಲ್ಲಿ ಮನಸ್ಸಾವರಿಸುವ ಮೋಹಸಿರಿ



        ಅರ್ಧ ಶತಮಾನದ ಯಕ್ಷ ಪಯಣ. ಈಗವರಿಗೆ ಎಪ್ಪತೈದರ ಹರೆಯ. ಹದಿನಾರು ವರುಷಗಳ ಮೇಳ ತಿರುಗಾಟ. ಮಿಕ್ಕಂತೆ ಹವ್ಯಾಸಿ ಕ್ಷೇತ್ರಕ್ಕೆ ಸಮರ್ಪಿತ.  ಅರ್ಧ ದಕ್ಷಿಣ ಕನ್ನಡದುದ್ದಕ್ಕೂ ಮೊಳಗಿದ ಭಾಗವತಿಕೆ. ಯಕ್ಷರಾತ್ರಿಗಳನ್ನು ಸುಲಲಿತವಾಗಿ ಬೆಳಗು ಮಾಡಿದ ಭಾಗವತ. ಪೌರಾಣಿಕ ಪ್ರಸಂಗಗಳ ಲೀಲಾಜಾಲ ನಿರ್ವಹಣೆ. ಹಿಮ್ಮೇಳದ ಸರ್ವಾಂಗ ಜ್ಞಾನ. ಮಾತುಗಳು ಉತ್ಪ್ರೇಕ್ಷೆಯಂತೆ ತೋರಿದರೂ ಉತ್ಪ್ರೇಕ್ಷೆಯಲ್ಲ. ಇದು ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿಗಳ ಕಲಾ ಯಾನದ ನೋಟ.
        ಒಂದು ಕಾಲಘಟ್ಟ. ಮೇಳಗಳ ತಿರುಗಾಟ ಹೊರಟ ಬಳಿಕ ಶಾಸ್ತ್ರಿಗಳು ಬ್ಯುಸಿ. ವಾರಕ್ಕೆ ಎಂಟು ದಿವಸವಿದ್ದರೂ ನಡೆಯುತ್ತಿತ್ತು! ಹಿಮ್ಮೇಳ ಕಲಾವಿದರ ಅಲಭ್ಯತೆ. ಇದ್ದರೂ ಸಮರ್ಪಕವಾಗಿ ರಂಗವನ್ನು ನಿರ್ದೇಶಿಸಬಲ್ಲ ಸರ್ವಸಮರ್ಥ ಇವರೊಬ್ಬರೇ. ಯಕ್ಷಗಾನ ಸಂಘಗಳ ಜೀವಂತಿಕೆಯ ಹಿಂದೆ ಶಾಸ್ತ್ರಿಗಳ ಶಾರೀರದ ಕೊಡುಗೆ ಅಜ್ಞಾತ. ಸಂಘಗಳು ಕಲಾವಿದರನ್ನು ಸೃಷ್ಟಿ ಮಾಡುತ್ತವೆ. ಪ್ರದರ್ಶನಗಳಲ್ಲಿ ಭಾಗವತ ಕಲಾವಿದರ ಬೆಳವಣಿಗೆಗೆ ಕಾರಣನಾಗುತ್ತಾನೆ. ಅರ್ಹತೆಯಲ್ಲಿ ರೂಪುಗೊಂಡ ಕಲಾವಿದರ ಸಂಖ್ಯೆ ಅಗಣಿತ. ಈಗ ಬಹುತೇಕ ಸಂಘಗಳು ಫಲಕಗಳಿಗೆ ಸೀಮಿತವಾಗಿದೆ!
        ತೆಂಕಬೈಲು ಶಾಸ್ತ್ರಿಗಳ ತಂದೆ ಕೃಷ್ಣ ಭಟ್. ತಾಯಿ ಸಾವಿತ್ರಿ ಅಮ್ಮ. ತಂದೆಗೆ ಮಗ ವೈದಿಕನಾಗಬೇಕೆಂಬ ಹಂಬಲ.  ತಾಯಿಯ ಪರಂಪರೆಯಿಂದ ಬಂದ ಯಕ್ಷಗಾನ.  ಇವೆರಡೂ ಸ್ವಲ್ಪ ಕಾಲ ಜತೆಜತೆಗೆ ಹೆಜ್ಜೆಯೂರಿತು. ರಾತ್ರಿ ಆಟ, ಹಗಲು ತಂದೆಯೊಂದಿಗೆ ಸಾಥ್. ಬಿಡುವಿರದ ದುಡಿಮೆ. ಮುಂದೆ ಕುಲವೃತ್ತಿಯನ್ನು ಮರೆಯದ ಯಕ್ಷಗಾನವೇ ವೃತ್ತಿಯಾಯಿತು.
        ಶಾಸ್ತ್ರಿಗಳು ಓದಿದ್ದು ಎಂಟನೇ ತರಗತಿ. ಐದು ವರುಷ ಪಾರಂಪರಿಕ ವೈದಿಕ ಅಭ್ಯಾಸ. ನಾಲ್ಕು ವರುಷ ಶಾಸ್ತ್ರೀಯ ಸಂಗೀತ ಕಲಿಕೆ. ತನ್ನೂರು ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದ ಮಿತ್ತನಡ್ಕದಲ್ಲಿ ಟೆಂಟ್ ಊರಿದ ಎಲ್ಲಾ ಮೇಳಗಳಿಗೂ ಖಾಯಂ ಪ್ರೇಕ್ಷಕ. ಇವರ ಮಾವಂದಿರಲ್ಲಿ ಓರ್ವ ಭಾಗವತ, ಮತ್ತೋರ್ವ ಮದ್ದಳೆಗಾರ. ಇವರಿಬ್ಬರಿಂದಲೂ ಹಿಮ್ಮೇಳದ ಮೊದಲ ಪಾಠ.
        ತಾಳ, ರಾಗಗಳ ಅನುಭವದಲ್ಲಿ ಪ್ರಸಂಗಗಳ ಪದ್ಯಗಳ ಸ್ವ-ಕಲಿಕೆ. ಗುರು ಮಾಂಬಾಡಿ ನಾರಾಯಣ ಭಾಗವತರಲ್ಲಿ ಕಲಿತ ಪಾಠಗಳ ಶುದ್ಧೀಕರಣ. ಕಾಲಘಟ್ಟದಲ್ಲಿ ಮಾಂಬಾಡಿ ಗುರುಗಳ ಪುತ್ರ ಮಾಂಬಾಡಿ ಸುಬ್ರಹ್ಮಣ್ಯ ಭಟ್, ಪದ್ಯಾಣ ಶಂಕರನಾರಾಯಣ ಭಟ್, ತೆಂಕಬೈಲು - ಸಮಪ್ರಾಯದ ಹೊಂತಕಾರಿಗಳು! ಪದ್ಯಾಣರು ಚೆಂಡೆಗೆ, ಮಾಂಬಾಡಿಯವರ ಮದ್ದಳೆ, ಶಾಸ್ತ್ರಿಗಳ ಭಾಗವತಿಕೆ. ಜತೆಗಾರಿಕೆಯು 'ಕರೋಪಾಡಿ ಹಿಮ್ಮೇಳ' ಎಂದೇ ಖ್ಯಾತಿಯಾಗಿತ್ತು.
        ಸೊರ್ನಾಡು ಮೇಳದಿಂದ ವ್ಯವಸಾಯ. ಮುಂದೆ ಬಪ್ಪನಾಡು, ಕುಂಡಾವು, ಸುಂಕದಕಟ್ಟೆ, ಮಲ್ಲ, ಕುಂಟಾರು, ಮಧೂರು ಮೇಳಗಳಲ್ಲಿ ತಿರುಗಾಟ. ಭಾಗವತನೇ ನಿರ್ದೇಶಕನೆಂಬ ಹಿರಿ ಮಾತಿಗೆ ವಿಧೇಯ.  ಸ್ಥಾನಕ್ಕೆ ಎಂದೂ ಚ್ಯುತಿ ತಂದವರಲ್ಲ. ಹಲವರ ಪಾಲಿಗೆ ಇವರು ನಿಷ್ಠುರ ವ್ಯಕ್ತಿ! ರಂಗ ಮತ್ತು ಮೇಳದ ವ್ಯವಹಾರಗಳಲ್ಲಿ ಸ್ವಲ್ಪ ಆಚೀಚೆ ಆದರೂ ಸಹಿಸದ ಗುಣ. ನೇರವಾಗಿ ಹೇಳುವ ವ್ಯಕ್ತಿತ್ವ. ಮುಖಸ್ತುತಿ ಇಲ್ಲದೇ ಇದ್ದುದರಿಂದ ವೃತ್ತಿ ಮೇಳದ ವ್ಯವಸ್ಥೆಯು ಶಾಸ್ತ್ರಿಗಳಿಗೆ ಪ್ರತಿಕೂಲವಾದುದೇ ಹೆಚ್ಚು. ವೈಯಕ್ತಿಕ ಅನನುಕೂಲಗಳಿಂದ ಮೇಳದ ಸಹವಾಸಕ್ಕೆ ವಿದಾಯ.
        ಪೌರಾಣಿಕ ಪ್ರಸಂಗಗಳು ಶಾಸ್ತ್ರಿಗಳಲ್ಲಿ ಮೇಲ್ಮೆ ಸಾಧಿಸಿವೆ. 'ದಕ್ಷಾಧ್ವರ, ಕರ್ಣಪರ್ವ, ದೇವಿ ಮಹಾತ್ಮೆ, ಕೃಷ್ಣಲೀಲೆ-ಕಂಸವಧೆ, ಭಾರ್ಗವ ವಿಜಯ, ಕೃಷ್ಙಾರ್ಜುನ..' ಹೀಗೆ ಹಲವು ಪ್ರಸಂಗಗಳ ಪದ್ಯಗಳು ರಸಪಾಕದಲ್ಲಿ ಮಿಂದೇಳುತ್ತಿದ್ದುವು! ಓರ್ವ ಕಲಾವಿದರ ಸೇವೆಯೋ ಕೊಡುಗೆಯೋ ಇಂತಿಷ್ಟು ವರುಷಗಳ ತಿರುಗಾಟವೆಂಬ  ಮಾನದಂಡದಿಂದ ದಾಖಲಾಗುತ್ತದೆ. ಶಾಸ್ತ್ರಿಗಳ ಕೊಡುಗೆಯು ಹಾಗಲ್ಲ. ಪ್ರಸಂಗಗಳ ಪದ್ಯಗಳು ಜನಮಾನಸದಲ್ಲಿ ಸ್ಥಾಯಿಯಾಗಿ ನೆಲೆಗೊಳಿಸಿದ ರಸಮಾನಗಳ ಮಾನದಂಡವು ಶಾಸ್ತ್ರಿಗಳ ಕೊಡುಗೆ! 
        ಪುತ್ತೂರಿನ ದರ್ಭೆಯಲ್ಲಿ ಜರುಗಿದ ದಕ್ಷಾಧ್ವರ ಪ್ರಸಂಗದ ಭಾಗವತಿಕೆಗೆ ಅಭಿಮಾನಿಗಳು ನೋಟಿನ ಹಾರ ಹಾಕಿದ್ದರು ಎನ್ನುವಾಗ ಶಾಸ್ತ್ರಿಗಳಿಗೆ ಮುಜುಗರ. ಹೊಗಳಿಕೆಗೆ ಮುದುಡುತ್ತಾರೆ. ತೆಗಳಿಕೆಗೆ ಕಿವುಡಾಗುತ್ತಾರೆ! ನೋಟಿನ ಹಾರ ಹಾಕಿದ ಸಮಯದಲ್ಲಿ ಭಾಗವತಿಕೆಯನ್ನು ಅನುಭವಿಸುವ ಪ್ರೇಕ್ಷಕರಿದ್ದರು. ಅವರು ಭಾಗವತಿಕೆಯನ್ನು ಮಾಡದಿದ್ದರೂ ಭಾಗವತಿಕೆಯ ಜ್ಞಾನವನ್ನು ಹೊಂದಿದ್ದರು ವೈಭವಕ್ಕೋ, ಗೌಜಿಗೋ ನೋಟಿನ ಹಾರ ಹಾಕಿದ್ದಲ್ಲ. ಇದು ಅಪ್ಪಟ ರಂಗ ಅಭಿಮಾನ.
        ಯಕ್ಷಗಾನದಲ್ಲಿ ಅಗರಿ ಶೈಲಿ, ಬಲಿಪ ಶೈಲಿ, ಮಂಡೆಚ್ಚ ಶೈಲಿ.. ಹೀಗೆ ಸ್ವ-ಸ್ಥಾಪಿತ ಶೈಲಿಗಳಿವೆ. ಇವೆಲ್ಲಾ ಒಂದು ಕಾಲಮಾನದಲ್ಲಿ ಪ್ರಸಿದ್ಧ. ಇವರೆಲ್ಲರ ಮಧ್ಯೆ 'ತೆಂಕಬೈಲು ಶೈಲಿ' ಮಿಂಚಿತ್ತು ಎಂದರೆ ಶಾಸ್ತ್ರಿಗಳ ಶಾರೀರ ಮತ್ತು ಭಾಗವತಿಕೆಯ ಪರಿಶ್ರಮ ಗಮನಿಸಬೇಕು. ಹಾಗೆಂದು ಯಾರದ್ದೇ ಅನುಕರಣೆಯಲ್ಲ. ಪದ್ಯಗಳ ಸಾಹಿತ್ಯ, ಸೊಗಸುಗಾರಿಕೆ, ಮೋಹಕಗಳಿಂದ ಪದ್ಯಗಳನ್ನು ಕೇಳಲೆಂದೇ ಬರುವ ಪ್ರೇಕ್ಷಕರಿದ್ದರು.
        ಘಟನೆಯೊಂದನ್ನು ನೆನಪಿಸಿಕೊಳ್ಳುತ್ತಾರೆ - ಒಂದು ಸಮಾರಂಭದಲ್ಲಿ ಅನುಕರಣಾ ವಿದ್ಯೆ(ಮಿಮಿಕ್ರಿ)ಯಲ್ಲಿ ಪರಿಣತರಾದವರೊಬ್ಬರು ಬೇರೆ ಬೇರೆ ಭಾಗವತರ ಧ್ವನಿಗಳನ್ನು ಹಾಡಿ ರಂಜಿಸಿದರಂತೆ. ನಿರೂಪಕರು ತೆಂಕಬೈಲು ಭಾಗವತರ ಹೆಸರು ಘೋಷಿಸಿದಾಗ 'ಅವರ ಭಾಗವತಿಕೆಯನ್ನು ಅನುಕರಿಸಲು ಕಷ್ಟ' ಎಂದರಂತೆ. ಇಲ್ಲಿ ಘಟನೆ ಮೂಡಿಸಿದ ಸನ್ನಿವೇಶ ಇದೆಯಲ್ಲಾ, ಅದು ಶಾಸ್ತ್ರಿಗಳ ಅಳಿಸಲಾಗದ ಹೆಜ್ಜೆ. 
        ಬಯಲಾಟಗಳ ಸೊಗಸನ್ನು, ವ್ಯವಸ್ಥೆಯನ್ನು ಅನುಭವದ ನೆನಪಿನಿಂದ ಹೇಳುತ್ತಾರೆ. ಹಿಂದಿನ ಕಲಾವಿದರಲ್ಲಿ ರಂಗನಿಷ್ಠೆ ಹೇರಳವಾಗಿತ್ತು. ಅಭಿವ್ಯಕ್ತಿಯಲ್ಲಿ ರಾಜಿಯಿದ್ದಿರಲಿಲ್ಲ. ಕುಣಿತ, ಅಭಿನಯ, ಮಾತುಗಾರಿಕೆ ಸಮಪ್ರಮಾಣದಲ್ಲಿದ್ದುವು. ಇಡೀ ರಾತ್ರಿಯ ಆಟ. ಪ್ರೇಕ್ಷಕರಿಗೆ ಕತೆಯನ್ನು ಉಣಿಸಬೇಕು. ಒಬ್ಬನೇ ಭಾಗವತ. ಮೂರು ನಿಮಿಷದ ಪದ್ಯಕ್ಕೆ ಐದು ನಿಮಿಷದ ಅರ್ಥ. ಹೀಗಾದ್ರೆ ಇಡೀ ರಾತ್ರಿಯಲ್ಲಿ ಒಂದು ಕಥಾನಕವನ್ನು ಮುಗಿಸುವುದಕ್ಕೆ ಸಾಧ್ಯವಿದೆ. ಈಗ ಪ್ರಸಂಗಗಳು ತುಂಡು ತುಂಡಾಗಿವೆ, ಬಿಡಿ.
        ಬರಬರುತ್ತಾ ಭಾಗವತರು ಇಬ್ಬರಾದರು. ಶುರುವಿನ ಭಾಗವತರು ನಿಧಾನಗತಿಯಲ್ಲಿ ಹಾಡಿದರು. ನಂತರದವರಿಗೆ ಆರು ಗಂಟೆಗೆ ಮುಗಿಸುವ ಧಾವಂತ. ಪದ್ಯ, ರಂಗದ ನಡೆಗಳು ವೇಗ ಪಡೆದುವು. ಹೀಗಾಗಿ ನನಗೆ ಆಟ 'ಓಡಿಸಲು' ಅಭ್ಯಾಸವಾಯಿತು! ಬಳಿಕ ಮೂರು ಮಂದಿ ಭಾಗವತರ ನಿಯುಕ್ತಿಯಾಯಿತು. ಸಂದರ್ಭಗಳಲ್ಲೂ ನಾನೇ ಕೊನೆಯ ಭಾಗವತ! ಪದ್ಯ, ಕಥಾನಕದ ಸ್ಪೀಡ್ ಹೆಚ್ಚಾಯಿತು. ಆಟ ಎಷ್ಟು ಹೊತ್ತಿಗೇ ಶುರುವಾಗಲಿ. ಆರು ಗಂಟೆಗೆ ಮಂಗಲ ಹೇಳುವುದನ್ನು ರೂಢಿಸಿಕೊಂಡಿದ್ದೇನೆ. ಆರು ಗಂಟೆಯ ನಂತರದ ಪ್ರದರ್ಶನ ಆಟವಾಗದು! ಶಾಸ್ತ್ರಿಗಳ ಮಾತಿನಲ್ಲಿ ರಂಗದ ಪಲ್ಲಟ, ಭಾಗವತನ ಅಸಹಾಯಕತೆಗಳ ಒಳತೋಟಿಗಳನ್ನು ಕಾಣಬಹುದು.
        ಒಟ್ಟೂ ಯಕ್ಷಗಾನ ಕ್ಷೇತ್ರದ ಸೂಕ್ಷ್ಮಾತಿಸೂಕ್ಷ್ಮ ವಿಚಾರಗಳ ಅನುಭವಿ. ಮೇಳಗಳ ತಿರುಗಾಟ ಮಾಡುತ್ತಾ ಶಿಷ್ಯಂದಿರನ್ನು ರೂಪೀಕರಿಸಿದ ಗುರು. ಏನಿಲ್ಲವೆಂದರೂ ಐನೂರಕ್ಕೂ ಮಿಕ್ಕಿದ ಶಿಷ್ಯರ ಗಡಣ. éಶಿಷ್ಯಂದಿರಿಗೆ ಹಿಮ್ಮೇಳದ ಪಾಠ ಮಾಡಿದ ತೃಪ್ತಿಯಿದೆ. ನನ್ನ ಶಿಷ್ಯರು ವೃತ್ತಿ ಕಲಾವಿದರಲ್ಲ. ಹವ್ಯಾಸಿಗಳು. ಸಹೃದಯರು. ಇವರೆಲ್ಲಾ ವೃತ್ತಿ ಕಲಾವಿದರಾಗಿರುತ್ತಿದ್ದರೆ 'ಇಂತಹವರ ಶಿಷ್ಯ' ಎಂದು ಪ್ರಚಾರ ಸಿಗುತ್ತಿತ್ತೋ ಏನೋ. ಈಗ ಪ್ರಚಾರದ ಕಾಲವಲ್ವಾ.!
        ಯಕ್ಷಗಾನದಲ್ಲಿ 'ತೆಂಕಬೈಲು ಶೈಲಿ' ಎಂದೇ ಪ್ರಚಲಿತವಿರುವ ನಿಮ್ಮ ಸ್ವ-ಶೈಲಿಯ ರೂಪೀಕರಣ ಹೇಗೆ? ಭಾಗವತಿಕೆಗೆ ಶ್ರೀಕಾರ ಹಾಕಿದ ಮಾವ ಸುಬ್ರಾಯ ಭಟ್ಟರಂತೆ ಮೊದಲು ಹಾಡುತ್ತಿದ್ದೆ. ಹಾಡಿಗೆ ಸಂಗೀತವನ್ನು ಸೇರಿಸಿ ಹಾಡಿದಾಗ ಯಾವುದೋ ಹೊಸ ಶೈಲಿಯು ಅನುಭವಕ್ಕೆ ಬಂತು! ಮಾಂಬಾಡಿ ಭಾಗವತರು ತಿದ್ದಿ ತೀಡಿದರು. ವೃತ್ತಿ, ಹವ್ಯಾಸಿ ರಂಗದಲ್ಲಿ ಹಾಡುತ್ತಾ ಹಾಡುತ್ತಾ ಸ್ವಂತದ್ದಾದ ಶೈಲಿ ರೂಪುಗೊಂಡಿತು.
        ತಿರುಮಲೇಶ್ವರ ಶಾಸ್ತ್ರಿಯವರ ಮಗ ಮುರಳೀಕೃಷ್ಣ ಶಾಸ್ತ್ರಿ. ಹರೇಕಳದ ಶ್ರೀರಾಮಕೃಷ್ಣ ಪ್ರೌಢಶಾಲೆಯಲ್ಲಿ ಅಧ್ಯಾಪಕ. ತಂದೆಯದ್ದೇ ಶಾರೀರ. ಎರಡು ವರುಷದಿಂದ ದೇಂತಡ್ಕ ಮೇಳದಲ್ಲಿ ಭಾಗವತ. ಹವ್ಯಾಸಿ ರಂಗದ ಸಂಪನ್ಮೂಲ. ಪೌರಾಣಿಕ ಪ್ರಸಂಗಗಳ ನಿಖರ ಜ್ಞಾನ. ರಂಗತಂತ್ರಗಳ ಹಿಡಿತ. ಸೊಸೆ ವಿದ್ಯಾ. ಶ್ರೀಶ ಮತ್ತು ರಶ್ಮೀ ಮುರಳೀಕೃಷ್ಣರ ಚಿರಂಜೀವಿಗಳು. ಕಲಾ ಕುಟುಂಬ.
        ಎಪ್ಪತ್ತೈದರ ಹರೆಯದ ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿಯವರ ಕಲಾಯಾನಕ್ಕೆ ಈಗ 'ಪದ್ಯಾಣ ಪ್ರಶಸ್ತಿ' ಗೌರವ. 2018 ನವೆಂಬರ್ 26ರಂದು ಕರೋಪಾಡಿ ಗ್ರಾಮದ ಪದ್ಯಾಣ ಶ್ರೀ ಮಹಾಲಿಂಗೇಶ್ವರ ದೇವಳದ ಸಭಾಭವನದಲ್ಲಿ ಅಪರಾಹ್ನ ಪ್ರಶಸ್ತಿ ಪ್ರದಾನ. ಹನುಮಗಿರಿ ಮೇಳದವರಿಂದ ಯಕ್ಷಗಾನ ಪ್ರದರ್ಶನ.

Prajavani / ದಧಿಗಿಣತೋ / 22-11-2018
ಚಿತ್ರ : ಸ್ವಸ್ತಿಕ್ ಪದ್ಯಾಣ