Saturday, December 29, 2018

ಸುವರ್ಣ ಸಡಗರ ತೆರೆದ ಸಾಂಸ್ಕøತಿಕ ಪುಟ

 ಡಾ.ಜೋಷಿಯವರಿಗೆಯಕ್ಷಾಂಜನೇಯ ಪ್ರಶಸ್ತಿಪ್ರದಾನ
   ಗದಾಯುದ್ಧ ಪ್ರಸಂಗದ ಒಂದು ದೃಶ್ಯ (ಮೊವ್ವಾರು ಬಾಲಕೃಷ್ಣ ಮಣಿಯಾಣಿ ಮತ್ತು ಮಾಧವ ಪಾಟಾಳಿ ನೀರ್ಚಾಲು)


                ಯಕ್ಷಗಾನದ ಸಂಘಗಳ ಸುದ್ದಿ ಬಂದಾಗಲೆಲ್ಲಾ ಹಿರಿಯ ಅರ್ಥದಾರಿ ಕುಂಬಳೆ ಸುಂದರ ರಾಯರ ಮಾತುಗಳು ನೆನಪಾಗುತ್ತವೆ – ‘ಯಕ್ಷಗಾನದ ಸಂಘವೊಂದು ಉದ್ಘಾಟನೆಗೊಂಡ ವರ್ಷದೊಳಗೆ ಚೆಂಡೆ, ಮದ್ದಳೆ, ಜಾಗಟೆ, ಚಕ್ರತಾಳಗಳು ಸದಸ್ಯರೊಳಗೆ ಹರಿಹಂಚಾಗಿ ಹೋಗುತ್ತದೆ!” ಅಂದರೆ - ವೈಮನಸ್ಸುಗಳು, ಪ್ರತಿಷ್ಠೆಗಳು, ಅಪಕ್ವತೆಯನ್ನೇ ಪಕ್ವತೆಯೆಂದು ಸಾಧಿಸುವ ಮನಸ್ಸುಗಳಿಂದ ಸಂಘವು ಒಂದು ವರುಷ ಬಾಳುವುದೂ ದುಸ್ತರ - ಎಂಬರ್ಥ.
                ಪುತ್ತೂರಿನ (..) ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ ಸುವರ್ಣ ಸಡಗರದಲ್ಲಿ ಪಾಲ್ಗೊಂಡಾಗ ಸುಂದರ ರಾಯರ ಮಾತುಗಳು, ಕೆಲವು ಸಂಘಗಳು ಮತ್ತು ಹಲವು ವ್ಯಕ್ತಿಗಳು ನೆನಪಿನಂಗಳದಲ್ಲಿ ಪೆಚ್ಚುಮೋರೆ ಹಾಕಿದ ದೃಶ್ಯಗಳು ಅನುಭವಕ್ಕೆ ಬಂದುವು. ಯಕ್ಷಗಾನ ಕ್ಷೇತ್ರಕ್ಕೆ ಸಹಜವಾಗಿ ಬರುವ ರಾಗ ವಿಕಾರಗಳು ಕ್ಷೇತ್ರದ ಉನ್ನತಿಗೆ ಮಾರಕವಾಗಿ ಪರಿಣಮಿಸುವುದು ಹೆಚ್ಚು. ಇಂತಹ ಅಪಾಯವನ್ನು ಆಂಜನೇಯ ಸಂಘವು ಊಹಿಸಿ ಎಚ್ಚರದಿಂದ ಐವತ್ತು ಹೆಜ್ಜೆಗಳನ್ನು ಏರಿನಿಂತಿದೆ. 
                ಸಂಘಕ್ಕೆ ಮೂಲ ಬಂಡವಾಳವಿಲ್ಲ. ಆಯಾಯ ಕಾಲದಲ್ಲಿ ಹೊಣೆಯನ್ನು ಹೊರುವ ಭಾರವಾಹಿಗಳು ವೆಚ್ಚವನ್ನು ನಿಭಾಯಿಸುತ್ತಾರೆ. ಇವರೊಂದಿಗೆ ಹೆಗಲು ಕೊಡುವ ಕಲಾ ಮನಸ್ಸುಗಳು ನೆರಳಾಗುತ್ತಾರೆ. ಪುತ್ತೂರು ನಗರದ ಕಲಾಭಿಮಾನಿಗಳು ಸಂಘಕ್ಕೆ ಹೆಗಲೆಣೆಯಾಗಿದ್ದಾರೆ.  ಇಲ್ಲಎಂದವರ ಸಂಖ್ಯೆ ತೀರಾ ಕಿರಿದು. ಹಾಗಾಗಿ ಆಂಜನೇಯ ಸಂಘವು ಐವತ್ತರ ಸಂಭ್ರಮವನ್ನು ಜನಸಹಭಾಗಿತ್ವದೊಂದಿಗೆ ಆಚರಿಸಿರುವುದು ಗುರುತರ. “ನಾಲ್ಕೈದು ಲಕ್ಷ ರೂಪಾಯಿ ಸಂಗ್ರಹದ ಆರ್ಥಿಕ ಶ್ರಮ ಬೇಡುವ ಕೆಲಸವು ಹತ್ತಿಯಂತೆ ಹಗುರವಾಗಿದೆ.” ಇದು ಸಂಘದ ಅಧ್ಯಕ್ಷ ಭಾಸ್ಕರ ಬಾರ್ಯರ ಮನದ ಮಾತು.
                2018 ದಶಂಬರ 22, 23ರಂದು ಪುತ್ತೂರಿನಶ್ರೀ ನಟರಾಜವೇದಿಕೆಯಲ್ಲಿ ಸಂಘದ ಸುವರ್ಣ ಸಂಪನ್ನ. ಎರಡು ದಿವಸ ಒಂದು ನಿಮಿಷವೂ ಬಿಡುವು ಕೊಡದ ಕಲಾಪ. ಕಿರಿಯ, ಹಿರಿಯ ಕಲಾವಿದರ ಸಮಾಗಮ. ಒಂದೆರಡು ಕಲಾಪಗಳ ಹೊರತಾಗಿ ಉಳಿದವೆಲ್ಲವೂ ಕ್ಲುಪ್ತ ಸಮಯಕ್ಕೆ ಮುಗಿದಿರುವುದು ಕಾರ್ಯಕ್ರಮ ಯಶದ ಗುಟ್ಟು. ಸಂಘದ ಮಹಿಳಾ ಯಕ್ಷಗಾನ ತಂಡದ ಸದಸ್ಯೆಯರಸೈನಿಕ ದುಡಿತವು ಕಲಾಪದ ಒಂದೊಂದು ನಿಮಿಷವನ್ನು ವ್ಯರ್ಥಗೊಳಿಸಿಲ್ಲ. 
                ಹಿರಿಯ ವಿದ್ವಾಂಸ ಡಾ.ತಾಳ್ತಜೆ ವಸಂತ ಕುಮಾರ್ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಚಾರಗಳು ಮನಹೊಕ್ಕಿದ್ದುವು. “ಒಂದು ಕಾಲಘಟ್ಟದಲ್ಲಿ ಗ್ರೀಕ್ ರಂಗಭೂಮಿಯು ದಕ್ಷಿಣ ಕನ್ನಡ, ಮೈಸೂರು ಭಾಗಗಳಲ್ಲಿ ಪ್ರದರ್ಶನ ನೀಡುತ್ತಿತ್ತು. ಹೊತ್ತಲ್ಲಿ ಯಕ್ಷಗಾನದ ಅನೇಕ ಸಂಗತಿಗಳು ಅವರನ್ನು ಸೆಳೆದಿದ್ದುವು. ಆಟ, ಕೂಟಗಳಲ್ಲಿ ಬಳಕೆಯಾಗುವ ಕನ್ನಡ ಭಾಷೆಯು ಶುದ್ಧ ಮತ್ತು ಅವು ಸಾಂಸ್ಕøತಿಕ ನೆಲೆಯಲ್ಲಿ ಶ್ರೇಷ್ಠವಾಗಿವೆ. ಆಶುಸಾಹಿತ್ಯದ ಪರಮ ವೈಭವಗಳಿಗೆ ಅನೇಕ ಬಾರಿ ರಂಗವು ಸಾಕ್ಷಿಯಾಗಿದೆ.”
                ಒಂದೆರಡು ಗೋಷ್ಠಿಗಳು ಸಾಮಯಿಕ ವಿದ್ಯಮಾನಗಳಿಗೆ ಸಂಬಂಧಿಸಿದ್ದು. ಅವುಗಳಲ್ಲಿ ಒಂದು, ರಂಗದ ಸಂಗತ ಮತ್ತು ಅಸಂಗತ. ಅರ್ಥದಾರಿ ಮಲ್ಪೆ ವಾಸುದೇವ ಸಾಮಗರ ಅಧ್ಯಕ್ಷತೆ. ಹಿರಿಯ ಕಲಾವಿದ ಗುಂಡ್ಯಡ್ಕ ಈಶ್ವರ ಭಟ್, ಸಂಘಟಕ ಎಸ್.ಎನ್.ಪಂಜಾಜೆ ವಿಷಯ ಪ್ರಸ್ತುತಿ. ಅಸಂಗತಗಳೇ ತುಂಬಿರುವ ವರ್ತಮಾನದಲ್ಲಿ ಸಂಗತಕ್ಕೆ ಹೆಚ್ಚು ಒತ್ತು ನೀಡಿದ ಈಶ್ವರ ಭಟ್ಟರ ಪ್ರಸ್ತುತಿ ಒಂದೆರಡು ದಶಕದ ಹಿಂದಿನ ರಂಗವನ್ನು ತಿರುಗಿ ನೋಡುವಂತೆ ಮಾಡಿತು. ಸಂಗತಗಳ ಕುರಿತಾದ ಕಲಾವಿದರ ಹಗುರ ನೀತಿಗಳು ಅಸಂಗತಗಳ ಬೆಳವಣಿಗೆಗೆ ಪೂರಕವಾಯಿತು ಎನ್ನುವ ಒಳನೋಟಗಳನ್ನು ಗೋಷ್ಠಿ ಕಟ್ಟಿಕೊಟ್ಟಿತು.
                ವಾಸುದೇವ ಸಾಮಗರು ಇಂತಹ ವಿಚಾರಗಳು ಮಾತಿಗೆ ಬಂದಾಗಲೆಲ್ಲಾ ಮುಲಾಜಿಯಿಲ್ಲದೆ ಮಾತನಾಡುತ್ತಾರೆ. “ಯಕ್ಷಗಾನವು ಮೇಲ್ನೋಟಕ್ಕೆ ಸೊಗಸಾಗಿ ಕಾಣುತ್ತದೆ. ನೇಪಥ್ಯದತ್ತ ನೋಟ ಹರಿಸಿ. ಆಗ ಅದರ ನಿಜವಾದ ಕಷ್ಟ, ಪರಿಶ್ರಮ ಕಾಣುತ್ತದೆ. ವರ್ತಮಾನದಲ್ಲಿ ಯಕ್ಷಗಾನವು ಫ್ಯಾಶನ್ ಆಗಿದೆ. ಇಲ್ಲಿ ಮುಖವಾಡಕ್ಕೆ ಬೆಲೆ ಹೊರತು ಮುಖಕ್ಕೆ ಅಲ್ಲ. ಹಿಂದೆ ಮೇಳದಲ್ಲಿ ಶಿಸ್ತು ಇತ್ತು. ಈಗ ಕಲಾವಿದನೆಂಬ ಹಣೆಪಟ್ಟಿಗೆ ಬೆಲೆ! ಮಕ್ಕಳಲ್ಲಿ ತಂದೆಯ ಕಲೆಯ ಕುರಿತು ಅಭಿಮಾನ ಮೂಡಿದಾಗ ನಿಜವಾಗಿ ಕಲೆಗೆ ಪ್ರೋತ್ಸಾಹ ಸಿಕ್ಕಿದಂತೆ. ಕಲಾವಿದರಿಂದಲೇ ಇಂದು ಕಲೆಯ ಕೊಲೆಯಾಗುತ್ತದೆ.”
 ಅಸಂಗತಗಳನ್ನು ಸ್ಥಾಪಿಸುವ, ಸಮರ್ಥಿಸುವ, ಅದರ ಪರ ವಾಲುವ-ನಿಲ್ಲುವ ಮನಸ್ಸುಗಳಿಂದ ಅಸಂಗತಗಳನ್ನು ಪೋಶಿಸಲಾಗುತ್ತಿದೆ. ಜತೆಗೆ ಸಂಗತ ಯಾವುದು, ಅಸಂಗತ ಯಾವುದೆಂಬ ತೊಳಲಾಟವನ್ನು ದೂರ ನಿಂತು ಬೆರಗು ಕಣ್ಣುಗಳಿಂದ ನೋಡುವ ಅನೇಕ ಕಲಾ ಮನಸ್ಸುಗಳ ಗೊಂದಲಗಳನ್ನು ದೂರಮಾಡಬೇಕಾದುದು ವರ್ತಮಾನದ ಅನಿವಾರ್ಯ. ಕ್ಷಣಿಕ ಸುಖಕ್ಕಾಗಿ ಜಾಲತಾಣಗಳಲ್ಲಿ ಪುಕ್ಕಟೆಯಾಗಿ ಹರಿಯ ಬಿಡುವ ಪ್ರಚಾರದ ಗೀಳೂ ಕೂಡಾ ಅಸಂಗತಗಳ ಜೀವಂತಿಕೆಗೆ ಒಂದು ಕಾರಣ.
           ಮತ್ತೊಂದು ಗೋಷ್ಠಿ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿಯವರ ಅಧ್ಯಕ್ಷತೆಯಲ್ಲಿ ಜರುಗಿತು. ‘ಯಕ್ಷಗಾನದಲ್ಲಿ ಸಾಮಾಜಿಕ ಜಾಲತಾಣಗಳುವಿಷಯದಲ್ಲಿ ಭಾಸ್ಕರ ರೈ ಕುಕ್ಕುವಳ್ಳಿಯವರು ವಿವರವಾಗಿ ಸಾಧಕದೊಂದಿಗೆ ಮಾರಕಗಳತ್ತ ಬೊಟ್ಟು ಮಾಡಿದರು. ಒಂದು ಕಲೆಯನ್ನು ಸಶಕ್ತವಾಗಿ ಬೆಳೆಸಲು ಬೇಕಾದ ಸಂಪನ್ಮೂಲಗಳು ಜಾಲತಾಣಗಳಲ್ಲಿವೆ. ಆದರವು ವಿರುದ್ಧ ದಿಕ್ಕಿನಲ್ಲಿ ಪ್ರವಹಿಸುತ್ತಿವೆ. ಕಲೆಯ ಅಭಿಮಾನಕ್ಕಿಂತಲೂ ವ್ಯಕ್ತಿ ಅಭಿಮಾನಗಳಿಗೆ ಆದ್ಯತೆ ನೀಡುವ ಚಾಳಿಯಿಂದ ಜಾಲತಾಣಗಳನ್ನು ಬಿಡಿಸಲೂ ಕಷ್ಟವಾಗಿದೆ!” ಬೆಂಗಳೂರಿನ ಗೌರಿ ಸಾಸ್ತಾನ ಇವರುಮಹಿಳಾ ತಾಳಮದ್ದಳೆ - ಪ್ರೇಕ್ಷಕ ಸ್ವೀಕೃತಿ ಅನುಭವಗಳನ್ನು ಪ್ರಸ್ತುತಪಡಿಸಿದರು.
          ಕುಕ್ಕುವಳ್ಳಿಯವರು ಜಾಲತಾಣಗಳ ಪೂರಕ ಮತ್ತು ಮಾರಕ ವಿಚಾರಗಳನ್ನು ಉದಾಹರಣೆ ಸಹಿತ ವಿವರಿಸುತ್ತಿದ್ದಾಗ ವಾಟ್ಸಾಪ್ ಸದ್ದು ಮಾಡಿತು! ಅಸಂಗತವಾದ ಹಳೆಯ ವೀಡಿಯೋ ಒಂದನ್ನು ಯಾರೋ ಅಪ್ಲೋಡ್ ಮಾಡಿದ್ದರು. ಶ್ವೇತಕುಮಾರ ಪ್ರಸಂಗದ ಪ್ರೇತ ಪಾತ್ರವೊಂದು ಕಂಬ ಹತ್ತುವ, ತೂಗಾಡುವ ಚಿತ್ರವದು. ವೃತ್ತಿಪರ ಕಲಾವಿದರ ಸರ್ಕಸನ್ನು (ಅಭಿವ್ಯಕ್ತಿ ಅಲ್ಲ) ನೋಡುತ್ತಾ ಇತರ ಕಲಾವಿದರೂ ಅನುಸರಿಸುವಂತೆ ಪ್ರೇರೇಪಿಸುವ  ಜಾಲತಾಣದ ಪ್ರಭಾವಗಳು ಕಲೆಯ ಬೆಳವಣಿಗೆಯಲ್ಲಿ ಮಾರಕವಾಗುವ ಸಾಧ್ಯತೆಗಳೇ ಹೆಚ್ಚು. ಇಷ್ಟೆಲ್ಲಾ ಹೇಳುವಾಗ ರಂಗ ಸೊಗಸಿನ, ರಂಗ ಭಾಷೆಯ, ಕಲಾವಿದರ, ಅನನ್ಯ ಅಭಿವ್ಯಕ್ತಿಯ, ಬಣ್ಣಗಾರಿಕೆಯ ಅಪ್ಪಟ ಧನಾತ್ಮಕ ಸಂಗತಿಗಳು ಜಾಲತಾಣಗಳಲ್ಲಿ  ಹರಿಯುತ್ತಲೇ ಇರುತ್ತವೆ. ಅಸಂಗತಗಳು ಇಂತಹ ಧನಾತ್ಮಕ ವಿಚಾರಗಳನ್ನು ಕ್ಷಿಪ್ರವಾಗಿ ಆವರಿಸಿ ಮುಚ್ಚಿಬಿಡುವುದೂ ಜಾಲತಾಣದ ತಾಕತ್ತು! ಅದು ಯಕ್ಷಗಾನದ ಕುರಿತ ನಮ್ಮ ಬೌದ್ಧಿಕ ಶಕ್ತಿ! 
          ಡಾ.ಪ್ರಭಾಕರ ಜೋಶಿಯವರು ಯಕ್ಷಗಾನದ ಇನ್ನೊಂದು ಮಗ್ಗುಲಿನತ್ತ ಗಮನ ಸೆಳೆದರು - ಭಾಗವತರು, ಅರ್ಥದಾರಿಗಳು ಹಿರಿಯ ಕಲಾವಿದರನ್ನು ಅನುಸರಣೆ ಮಾಡುವುದು ತಪ್ಪಾಗುವುದಿಲ್ಲ. ಆದರೆ ಹೊಸದಾಗಿ ಕ್ಷೇತ್ರಕ್ಕೆ ಬಂದವರು ಅನುಸರಣೆ ಮಾಡುವ ಬದಲು ಅನುಕರಿಸುತ್ತಾರೆ. ಇದರಿಂದಾಗಿ ಅವರಲ್ಲಿದ್ದ ಸ್ವಂತಿಕೆಯ ಬಲ ಕುಸಿದುಹೋಗುತ್ತಿರುವುದನ್ನು ಕಾಣುತ್ತಿದ್ದೇವೆ. ಯಕ್ಷಗಾನದ ಸಾಂಪ್ರದಾಯಿಕ ರಂಗಭೂಮಿಯು ಭಾರತದ ರಂಗಕಲೆಗಳಿಗೆ ಮಾದರಿಯಾಗಿದೆ. ಯಕ್ಷಗಾನದ ಅನ್ಯಾನ್ಯ ವಿಭಾಗದಲ್ಲಿ ಮೂವತ್ತೇಳು ಪ್ರೌಢ ಪ್ರಬಂಧಗಳು ಮಂಡನೆಯಾಗಿರುವುದು ರಂಗದ ವೈಶಿಷ್ಟ್ಯ.” ಗೋಷ್ಠಿಯ ಕೊನೆಗೆ ಡಾ.ಸುಂದರ ಕೇನಾಜೆಯವರಜೋಶಿ : ಆಳಮನದಾಳಪುಸ್ತಕದ ಲೋಕಾರ್ಪಣೆ ನಡೆಯಿತು.
          ಸಂಘ ನಡೆದು ಬಂದ ಹಾದಿಯತ್ತ ನೋಟ ಹರಿಸಲಾಯಿತು. ಸಂಘದ ಹಿರಿಯ ಕಲಾವಿದ ಕೋಡಿಯಾಡಿ ಶ್ರೀನಿವಾಸ ರೈಗಳ ಅಧ್ಯಕ್ಷತೆಯಲ್ಲಿ ಸಂಘದ ನಿಕಟ ಸಂಪರ್ಕವಿರುವ ನಗರ ಸಭಾ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್ ಮತ್ತು ಕಾರ್ಯದರ್ಶಿ ಗುಡ್ಡಪ್ಪ ಬಲ್ಯರು ಸಂಘದ ಯಶದ ಯಾನದತ್ತ ಕತ್ತು ತಿರುಗಿಸಿದರು. “ಸಂಘವು ಕಲಾವಿದರನ್ನು ಬೆಳೆಸಿದೆ. ಆತಿಥ್ಯದ ಗಾಢತೆಯನ್ನು ತೋರಿಸಿದೆ. ಸಂಘವೊಂದು ಮಾಡಬಹುದಾದ ಕಾರ್ಯಕ್ಕಿಂತಲೂ ಒಂದು ಪಟ್ಟು ಹೆಚ್ಚೇ ತನ್ನ ಕಾರ್ಯಹೂರಣದಲ್ಲಿ ಯಶ ಕಂಡಿದೆ.
          ಸಂಘದ ಗೌರವಾಧ್ಯಕ್ಷ ರಮಾನಂದ ನಾಯಕ್ ಬೊಳ್ವಾರು. ಅಧ್ಯಕ್ಷ ಭಾಸ್ಕರ ಬಾರ್ಯ. ದಶಕದೀಚೆಗೆ ಸಂಘದ ಚಟುವಟಿಕೆಯನ್ನು ಸಮಾಜಮುಖಿಯಾಗಿ ಹೊರಳಿಸಿದವರು. ರೊ.ಜಿ.ಎಲ್.ಬಲರಾಮ ಆಚಾರ್ಯರು ಆಂಜನೇಯ ಸಂಘದಸುವರ್ಣ ಸಡಗರ ಸಾರಥಿ. ಸುವರ್ಣ ನೆನಪಿನ ಗೌರವವನ್ನು ಮಲ್ಪೆ ವಾಸುದೇವ ಸಾಮಗರಿಗೆ ಪ್ರದಾನಿಸಲಾಯಿತು. ಸಂಘದ ವಾರ್ಷಿಕಯಕ್ಷಾಂಜನೇಯ ಪ್ರಶಸ್ತಿಯನ್ನು ಡಾ. ಪ್ರಭಾಕರ ಜೋಶಿಯವರಿಗೆ ಮತ್ತು ಬೊಳ್ಳಿಂಬಳ ಪ್ರಶಸ್ತಿಯನ್ನು ಹಾಸ್ಯಗಾರ್ ಪೆರುವೋಡಿ ನಾರಾಯಣ ಭಟ್ಟರಿಗೆ ಪ್ರದಾನ.
            ಎರಡು ದಿವಸ ಸಂಪನ್ನಗೊಂಡ ಕಾರ್ಯಕ್ರಮವನ್ನು ಪುತ್ತೂರಿನ ಸು-ಮನಸಿಗರು ಸಂಘಟಿಸಿದ್ದಾರೆ ಎಂದರೆ ಉತ್ಪ್ರೇಕ್ಷೆಯಾಗಲಾರದು. ಪುತ್ತೂರಿನ ಸಾಂಸ್ಕøತಿಕ ಪುಟದಲ್ಲಿ ಸುವರ್ಣ ಸಡಗರಕ್ಕೆ ಪ್ರತ್ಯೇಕ ಸ್ಥಾನ.

Prajavani / ದಧಿಗಿಣತೋ / 27-12-2018