Thursday, December 19, 2019

ಮಾಂಬಾಡಿ ಮನೆತನದಲ್ಲಿ ಯಕ್ಷಗಾನದ ಶೈಕ್ಷಣಿಕ ಶಿಸ್ತಿನ ಬದ್ಧತೆಯಿದೆ.

"ಕಲಾ ಬದುಕಿನ ಒಂದು ಕಾಲಘಟ್ಟದ ಬಳಿಕ ಪ್ರಾಪ್ತವಾಗುವ ಪ್ರಶಸ್ತಿಗಳು, ಸಂಮಾನಗಳು, ಗೌರವಗಳು ಕಲಾವಿದನಿಗೆ ಸಂತೃಪ್ತ ಭಾವ ತರಲು ಸಹಕಾರಿ. ತನ್ನ ನಡುವೆ ಇರುವ ಸಾಧಕ ಕಲಾವಿದರನ್ನು ಹುಡುಕಿ ಗೌರವಿಸುವುದು ಕೂಡಾ ಸುಸಂಸ್ಕೃತ ಸಮಾಜದ ಜವಾಬ್ದಾರಿಯಾಗಿರುತ್ತದೆ. ಅದು ಕಲೆಗೆ ನೀಡುವ ಗೌರವ ಕೂಡಾ ಹೌದು. ಯಕ್ಷಗಾನದ ಶೈಕ್ಷಣಿಕ ಶಿಸ್ತನ್ನು ಹಾಗೂ ಬದ್ಧತೆಯನ್ನು ಮಾಂಬಾಡಿ ಮನೆತನದಲ್ಲಿ ಕಾಣಬಹುದು" " ಎಂದು ಕರ್ನಾಟಕ ಬಯಲಾಟ ಅಕಾಡೆಮಿಯ ಮಾಜಿ ಅಧ್ಯಕ್ಷ, ವಿಶ್ರಾಂತ ಪ್ರಾಚಾರ್ಯ ಪ್ರೊ.ಎಂ.ಎಲ್.ಸಾಮಗ ಹೇಳಿದರು. ಅವರು ಬಂಟ್ವಾಳ ತಾಲೂಕಿನ ಮಿತ್ತನಡ್ಕ ಸನಿಹದ ಪದ್ಯಾಣ ಶ್ರೀ ಮಹಾಲಿಂಗೇಶ್ವರ ದೇವಳದ ಸಭಾಭವನದಲ್ಲಿ ಜರುಗಿದ 'ಪದ್ಯಾಣ ಪ್ರಶಸ್ತಿ ಪ್ರದಾನ' ಸಮಾರಂಭದಲ್ಲಿ (15-12-2019) ಮಾತನಾಡಿದರು.

ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಡಾ.ಟಿ.ಶ್ಯಾಮ ಭಟ್ ಸಭಾಧ್ಯಕತೆಯನ್ನು ವಹಿಸಿದ್ದರು. ಯಕ್ಷಶಿಕ್ಷಣ ಗುರು ಶ್ರೀ ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರಿಗೆ ಹಾರ, ಶಾಲು, ಹಣ್ಣುಹಂಪಲು, ಸಂಮಾನ ಪತ್ರ, ಸ್ಮರಣಿಕೆ ಮತ್ತು ನಿಧಿಯೊಂದಿಗೆ 'ಪದ್ಯಾಣ ಪ್ರಶಸ್ತಿ'ಯನ್ನು ಪ್ರದಾನಿಸಲಾಯಿತು. ವೇದಿಕೆಯಲ್ಲಿ ಮಾಂಬಾಡಿಯರ ಧರ್ಮಪತ್ನಿ ಲಕ್ಷ್ಮೀ ಅಮ್ಮ ಉಪಸ್ಥಿತರಿದ್ದರು. ಸಂಮಾನಿತರನ್ನು ಅರ್ಥದಾರಿ ವಿದ್ವಾನ್ ಹಿರಣ್ಯ ವೆಂಕಟೇಶ್ವರ ಭಟ್ಟರು ನುಡಿಹಾರಗಳೊಂದಿಗೆ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಪ್ರಶಸ್ತಿ ಪುರಸ್ಕೃತ ಮಾಂಬಾಡಿಯವರ ಕುರಿತು ಪತ್ರಕರ್ತ, ಅಂಕಣಗಾರ ನಾ. ಕಾರಂತ ಪೆರಾಜೆ ಸಂಪಾದಕತ್ವದ ಕಿರು ಪುಸ್ತಿಕೆಯನ್ನು ಟಿ.ಶ್ಯಾಮ ಭಟ್ಟರು ಬಿಡುಗಡೆಗೊಳಿಸಿದರು. ಪದ್ಯಾಣ ಶ್ರೀಕ್ಷೇತ್ರದ ಆಡಳಿತ ಮೊಕ್ತೇಸರ ಶ್ರೀ ಸೇರಾಜೆ ಸತ್ಯನಾರಾಯಣ ಭಟ್ಟರು ಶುಭಾಶಂಸನೆ ಮಾಡಿದರು. ಪದ್ಯಾಣ ಪ್ರಶಸ್ತಿ ಸಮಿತಿಯ ಕಾರ್ಯದರ್ಶಿ ಸ್ವಸ್ತಿಕ್ ಪದ್ಯಾಣ ಸ್ವಾಗತಿಸಿದರು. ಡಾ.ಸುಬ್ರಹ್ಮಣ್ಯ ಭಟ್ ಪದ್ಯಾಣ ವಂದಿಸಿದರು. ನಾ. ಕಾರಂತ ಪೆರಾಜೆ ನಿರ್ವಹಿಸಿದರು.

 ಸಮಿತಿಯ ಅಧ್ಯಕ್ಷರಾದ ಪದ್ಯಾಣ ಗೋಪಾಲಕೃಷ್ಣ ಭಟ್ಟರು ಅತಿಥಿಗಳಿಗೆ ಸ್ಮರಣಿಕೆ ನೀಡಿದರು.  ಪದ್ಯಾಣ ಗಣಪತಿ ಭಟ್, ಪದ್ಯಾಣ ಶಂಕರನಾರಾಯಣ ಭಟ್, ಪದ್ಯಾಣ ಶಿವರಾಮ ಭಟ್.. ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದರು. ಈ ಸಂದರ್ಭದಲ್ಲಿ ಹನುಮಗಿರಿ ಮೇಳದವರಿಂದ 'ಸತ್ಯಾಂತರಂಗ' ಪ್ರದರ್ಶನ ಜರುಗಿತು.
(ಚಿತ್ರ : ಉದಯ ಕಂಬಾರ್)

No comments:

Post a Comment