Tuesday, September 29, 2020

ತೆಂಕಬೈಲು - ಅಭಿಮತ

ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿಗಳ ಜತೆ ಮಾತಾಡುತ್ತಿದ್ದಂತೆ (2018) ಕಳೆದ ಕಾಲದ ಕಥನಗಳ ಅನುಭವಗಳು ಮಿಂಚಿ ಮರೆಯಾಗುತ್ತಿದ್ದುವು. ಅವುಗಳಲ್ಲಿ ವಿಷಾದಗಳಿದ್ದುವು, ರಂಗದ ದನಿಗಳಿದ್ದುವು, ಕಷ್ಟ-ಸುಖಗಳ ಮಾತುಕತೆಗಳಿದ್ದುವು, ರಂಗ ಪಲ್ಲಟಗಳಿದ್ದುವು. ಅಂತಹುಗಳ ಕೆಲವು ಮಾದರಿಗಳು ಇಲ್ಲಿವೆ :

*             ಕಾಲಮಿತಿಯಿಂದ ಕಲಾವಿದರಿಗೆ ಪ್ರಯೋಜನ. ರಾತ್ರಿ ಒಂದೋ, ಎರಡೋ ಗಂಟೆಯಲ್ಲದೆ ಪ್ರದರ್ಶನ ಮುಗಿಯುವುದಿಲ್ಲ. ಪ್ರಸಂಗ ಚಿಕ್ಕದಾಯಿತು. ರಂಗದ ಸ್ಪೀಡ್ ಹೆಚ್ಚಾಯಿತು. ಪೂರ್ತಿಯಾಗಿ ಕಥೆ ಗೊತ್ತಾಗಬೇಕಾದರೆ ಇಡೀರಾತ್ರಿ ಆಟವಾಗಬೇಕು. 

*             ಕೂಡುಕುಟುಂಬ ವ್ಯವಸ್ಥೆಗಳು ಶಿಥಿಲವಾದ ಬಳಿಕ ಆಟಗಳಿಗೆ ಪ್ರೇಕ್ಷಕರ ಸಂಖ್ಯೆಯೂ ಕಡಿಮೆಯಾಯಿತು. ಉತ್ಸಾಹವಿದ್ದರೂ ಮನೆಯ ರಕ್ಷಣೆ, ಕೆಲಸಕಾರ್ಯಗಳ ಒತ್ತಡದಿಂದ ಆಟದ ಗುಂಗನ್ನು ತನ್ನೊಳಗೆ ಅದುಮಿಟ್ಟುಕೊಳ್ಳುವ ಅನೇಕರಿದ್ದಾರೆ. ಮತ್ತೊಂದು ಕಾಲದ ಪಲ್ಲಟ. ಆಟ ನೋಡುತ್ತಿದ್ದ ಜವ್ವನಿಗರೆಲ್ಲಾ ವಿವಿಧ ಉದ್ಯೋಗಕ್ಕಾಗಿ ಪೇಟೆ ಸೇರಿದರು. ಹಳ್ಳಿ ಖಾಲಿಯಾಯಿತು!

*             ಹವ್ಯಾಸಿ ರಂಗ ಚೆನ್ನಾಗಿತ್ತು. ಅದು ಕಲಾವಿದರನ್ನು ಸೃಷ್ಟಿಸುವ ತಾಣ. ಪ್ರಾಕ್ಟೀಸ್ ಮಾಡಿ ಪ್ರದರ್ಶನ ಮಾಡುತ್ತಿದ್ದರು. ಈಗ ಸಂಘಗಳೇ ಇಲ್ಲ! ಕನಿಷ್ಠ ಶಿಸ್ತು ಮಾಯವಾಗಿದೆ. ಸಮಾಲೋಚನೆಗಳಿಲ್ಲ. ಕಥಾನಕ ಶುರುವಾದ ಬಳಿಕ ಬಂದು ಅವಸರದಲ್ಲಿ ವೇಷ ಮಾಡಿ ಹೋಗುತ್ತಾರೆ. ಪ್ರದರ್ಶನ ಯಶಸ್ವಿಯಾಗುತ್ತಿಲ್ಲ.

*             ಯಕ್ಷಗಾನಕ್ಕೆ ಪೌರಾಣಿಕ ಪ್ರಸಂಗಗಳು ಸೂಕ್ತ. ಕೋಟಿ ಚೆನ್ನಯ್ಯ, ಕಾಂತಾಬಾರೆ ಬೂದಾಬಾರೆ, ತುಳುನಾಡ ಸಿರಿ.. ಮೊದಲಾದ ಪ್ರಸಂಗಗಳಿಗೆ ಪಾಡ್ದನಗಳ ಹಿನ್ನೆಲೆಯಿದೆ. ಯಾವುದೇ ಹಿನ್ನೆಲೆಯಿಲ್ಲದ ಕಲ್ಪಿತ ಪ್ರಸಂಗಗಳು ರಂಗದಲ್ಲಿ ಯಶವಾಗುವುದಿಲ್ಲ. ಆದರೂ ಅದು ಅಲ್ಪಾಯುಷಿ.

*             ರಂಗಕ್ಕೆ ಅದರದ್ದೇ ಆದ ಭಾಷೆಯಿದೆ. ಅದು ಕಲಾವಿದರಿಗೆ, ನೇಪಥ್ಯ ಕಲಾವಿದರಿಗೆ ತಿಳಿದಿರಬೇಕು, ತಿಳಿದಿತ್ತು. ಭಾಗವತ ಜಾಗಟೆಗೆ ಸಣ್ಣಕೆ ಎರಡು ಬಾರಿ ಸದ್ದು ಮಾಡಿದರೆ ಅರ್ಥ ಮುಂದುವರಿಸಬೇಕೆಂಬ ಸೂಚನೆ. ರಥಕ್ಕೆ ಬಾರಿಸಿದರೆ ಪರದೆಯವರು ಬರಬೇಕು, ಮದ್ದಳೆಯಲ್ಲಿ ಧೋಂ ನುಡಿತ ಕೊಟ್ಟರೆ ಅದು ಚೆಂಡೆಯವರಿಗೆ ಸೂಚನೆ. ಇದೆಲ್ಲಾ ಪಾಲಿಸಿದಾಗಲೇ ಮೇಳವಾಗುತ್ತದೆ.

*             ಹಿಂದೆ ತಾಳಮದ್ದಳೆಗಳಲ್ಲಿ ಪದ್ಯಗಳನ್ನು ಟಿಕ್ ಮಾಡುವ ಸಂಪ್ರದಾಯವಿಲ್ಲ. ಅರ್ಥದಾರಿಗೆ ಜನಮನ್ನಣೆ ಬಂದಾಗ ಅವರ ಮಾತಿಗೆ ಬೆಲೆ ಬಂತು. ಭಾಗವತನ ಸ್ಥಾನಕ್ಕೆ ಇಳಿಲೆಕ್ಕವಾಯಿತು.

*             ಪ್ರಸಂಗ ಹೊಂದಿಕೊಂಡು ವೇಷಧಾರಿ ಎರಡೆರಡು ವೇಷಗಳನ್ನು ಮಾಡಲೇಬೇಕು. ಉದಾ: ದೇವಿ ಮಹಾತ್ಮೆ ಪ್ರಸಂಗವಾದರೆ ಮಧು-ಕೈಟಭ ಪಾತ್ರ ನಿರ್ವಹಿಸಿದವರು, ರಕ್ತಬೀಜ ಮತ್ತು ಧೂಮ್ರಾಕ್ಷ ಪಾತ್ರವನ್ನು ನಿರ್ವಹಿಸಬೇಕು. ತ್ರಿಜನ್ಮ ಮೋಕ್ಷ ಪ್ರಸಂಗವಾದರೆ ಹಿರಣ್ಯಾಕ್ಷ ಮಾಡಿದ ಕಲಾವಿದ ಶಿಶುಪಾಲ ಪಾತ್ರ ಮಾಡಬೇಕಿತ್ತು. ಈಗ ಎರಡು ವೇಷ ಬರೆದರೆ ಕಲಾವಿದನ ಮುಖ ಬಿಗುವಾಗುತ್ತದೆ.

*             ಭಾಗವತನನ್ನು ಹೊಂದಿಕೊಂಡೇ ರಂಗದ ಎಲ್ಲಾ ಪ್ರಕ್ರಿಯೆಗಳು ನಡೆಯಬೇಕು. ಆಟ ಸಮಯಕ್ಕೆ ಮುಗಿಯದಿದ್ದರೆ ಭಾಗವತನ ಮೇಲೆ ದೂರು. ಬೇಗ ಮುಗಿದರೂ ಭಾಗವತನೇ ಹೊಣೆ.

*             ಗಾನವೈಭವಗಳು ಮಿತಿಯಲ್ಲಿದ್ದರೆ ಚೆನ್ನ. ಒಂದೊಂದು ರಸವನ್ನು ಹಿಡಿದು ಹೇಳುವ ಪದ್ಯಗಳು ರಸಾಭಿವ್ಯಕ್ತಿಗೆ ಪೂರಕ. ಅತಿರೇಕವಾದರೆ ಹೋಯಿತು. ಹಾಡುವಾಗ ರಸಕ್ಕೊಂದು ಆಯುಷ್ಯವಿರುತ್ತದೆ! ಅದರೊಳಗೆ ಪದ್ಯ ಮುಗಿಯಬೇಕು. ಆಗ ಕೇಳಲು ಇಂಪು. ಇನ್ನೂ ಬೇಕು ಅನ್ನುವಾಗ ಮುಗಿಯಬೇಕು!

*             ಅಭಿಮಾನಿಗಳು ಹಿಂದೆಯೂ ಇದ್ದರು, ಈಗಲೂ ಇದ್ದಾರೆ. ಹಿಂದೆ ಆಟ ಮುಗಿದ ಮೇಲೆ ಅಭಿಮಾನಿಗಳ ವಿಮರ್ಶೆ, ಹೊಗಳಿಕೆ. ಮಧ್ಯೆ ಮಧ್ಯೆ ಶಿಳ್ಳೆ, ಚಪ್ಪಾಳೆಗಳಿಲ್ಲ. ತನಗೆ ರಸಭಂಗವಾಗುತ್ತದೆ ಎನ್ನುವುದು ಪ್ರೇಕ್ಷಕನಿಗೆ ಗೊತ್ತಿತ್ತು.

*             ಒಂದೊಂದು ಮೇಳದಲ್ಲಿ ಮೂರ್ನಾಲ್ಕು ಭಾಗವತರು. ಅವರವರ ಪಾಳಿಯ ಬಳಿಕ  ಹೊರಟು ಹೋಗುತ್ತಾರೆ. ಕೊನೆಯಲ್ಲಿ ಕುಳಿತುಕೊಳ್ಳವ ಭಾಗವತನಿಗೆ ರಂಗದಲ್ಲಿ ಅಸೌಖ್ಯ ಬಾಧಿಸಿತು ಎಂದಾರೆ ಸಹ ಭಾಗವತರಿಲ್ಲದೆ ಆಟ ನಿಲ್ಲುವ ಪರಿಸ್ಥಿತಿ!

*             ಕಾಲಪ್ರಮಾಣದ ಭಾಗವತಿಕೆ ಕಡಿಮೆಯಾಗಿದೆ. ಮೊದಲು ಕುಳಿತ ಭಾಗವತ ಆರಭಿ, ಮೋಹನ, ಹಂಸಧ್ವನಿ ರಾಗಗಳನ್ನು ಹಾಕಿ ಪದ್ಯ ಹೇಳಿ ಹೋಗಿರುತ್ತಾನೆ. ನಂತರ ಬಂದ ಭಾಗವತ ಯಾವ ರಾಗದಲ್ಲಿ ಹಾಡಬೇಕು? ರಾಗಗಳ ಬಳಕೆಗೂ ಕಾಲಪ್ರಮಾಣವಿದೆ. ನಮ್ಮ ಇಚ್ಛೆಯಂತೆ ರಾಗವನ್ನು ಬಳಸಲು ರಂಗ ಬಿಡುವುದಿಲ್ಲ.

*             ಮೊದಲೆಲ್ಲಾ ಸಂಭಾವನೆ ಕಡಿಮೆಯಿತ್ತು. ಆದರೆ ತೃಪ್ತಿಯಿರುತ್ತಿತ್ತು. ಈಗ ಸಂಭಾವನೆ ಮಿತಿಮೀರಿದೆ. ತೃಪ್ತಿ, ರಂಗಸುಖವಿಲ್ಲ. ತೃಪ್ತಿ ಯಾರಿಗೂ ಬೇಕಾಗಿಲ್ಲ!            

*             ಯಕ್ಷಗಾನವನ್ನು ಬಿಟ್ಟು ನಾನಿಲ್ಲ. ನನ್ನ ಬದುಕಿಗೆ ಯಕ್ಷಗಾನ ನೆರವಾಗಿದೆ. ಬದುಕನ್ನು ಆಧರಿಸಿದೆ. ತೃಪ್ತಿಯಾಗಿದ್ದೇನೆ. ರಂಗವಿಂದು ಹಲವು ಪಲ್ಲಟಗಳಿಗೆ ಒಳಗಾಗಿರುವಾಗ ಕಾಲಕ್ಕೆ ನನಗೆ ಪ್ರಾಯ ಆದುದು ನನ್ನ ಪುಣ್ಯ!


Monday, September 28, 2020

ತಂದೆಯೇ ಗುರು....


ಲೇ :  ಮುರಳಿಕೃಷ್ಣ ಶಾಸ್ತ್ರಿ ತೆಂಕಬೈಲು,

1991-92ರ ಆಜೂಬಾಜು. ಸುಳ್ಯದ ತೆಂಕುತಿಟ್ಟು ಯಕ್ಷಗಾನ ಹಿತರಕ್ಷಣಾ ವೇದಿಕೆಯು ಪದ್ಯಾಣ ಗಣಪತಿ ಭಟ್ಟರ ಪರಂಪರೆಯ ಹಾಡುಗಾರಿಕೆಯ ಧ್ವನಿಸುರುಳಿ ಹೊರತಂದಿತ್ತು. ಪದ್ಯಾಣರ ಭಾಗವತಿಕೆಯ ಮೋಹಕ ಸ್ವರವು ನನ್ನನ್ನು ಆಕರ್ಶಿಸಿತ್ತು. ಆ ಧ್ವನಿಸುರುಳಿಯನ್ನು ಕೇಳಿದಷ್ಟೂ ಉತ್ಸಾಹ ಹೆಚ್ಚಾಗುತ್ತಿತ್ತು. ಊರಿನ ಸುತ್ತಮುತ್ತ ಅವರಿದ್ದ ಮೇಳ ಟೆಂಟ್ ಊರಿದಾಗಲೆಲ್ಲಾ ಆಟಕ್ಕೆ ಖಾಯಂ ಹೋಗುತ್ತಿದ್ದೆ. ಅವರ ಪದ್ಯವನ್ನು ಅನುಭವಿಸುತ್ತಿದ್ದೆ. ಪದ್ಯಾಣರ ಹಾಡನ್ನು ಕೇಳುತ್ತಾ ಕೇಳುತ್ತಾ ಭಾಗವತಿಕೆ ಕಲಿಯಬೇಕೆಂಬ ತುಡಿತವು ಮನದ ಮೂಲೆಯಲ್ಲಿ ಬೀಜಾಂಕುರ ಮಾಡಿತ್ತು.

        1992. ಬಿಎಸ್ಸಿ ಪದವಿ ಮುಗಿಸಿದ್ದೆ. ಆ ವರುಷವೇ ತಂದೆಯವರಿಂದ ಭಾಗವತಿಕೆಗೆ ಶ್ರೀಕಾರ. ಪೂರ್ವರಂಗದ ಅಭ್ಯಾಸ. ಅಂದಂದಿನ ಪಾಠವನ್ನು ಅಂದಂದೇ ಒಪ್ಪಿಸುತ್ತಿದ್ದೆ. ಕೆಲವೇ ದಿನಗಳಲ್ಲಿ ಪ್ರಸಂಗದ ಪದ್ಯಗಳನ್ನು ಹೇಳಿಸುತ್ತಿದ್ದರು. ಹೀಗೆ ತಂದೆಯೇ ಗುರುವಾಗಿ ಯಕ್ಷಗಾನದ ಬಾಲ ಪಾಠಗಳ ಮೆಟ್ಟಿಲು ಏರುತ್ತಿದ್ದೆ. ಒಂದೆಡೆ ಪದ್ಯಾಣರ ಹಾಡಿನ ಮೋಹಕ ಗುಂಗು, ಮತ್ತೊಂದೆಡೆ ತಂದೆಯವರ ಭಾಗವತಿಕೆಯ ಸೊಗಸುಗಾರಿಕೆಗಳು ನನ್ನೊಳಗೆ ಭಾಗವತನೊಬ್ಬನನ್ನು ಹುಟ್ಟುಹಾಕಿತ್ತು.

        ಕನ್ಯಾನದ ಶ್ರೀ ಗುರುದೇವ ಕಲ್ಯಾಣ ಮಂಟಪದಲ್ಲಿ ಪಂಚವಟಿ ಪ್ರಸಂಗದ ತಾಳಮದ್ದಳೆ. ದೇವಕಾನ ಕೃಷ್ಣ ಭಟ್ಟರ ಆಯೋಜನೆ. ಆ ತಾಳಮದ್ದಳೆಯಲ್ಲಿ ಪದ್ಯ ಹೇಳಲು ಅವಕಾಶ ಸಿಕ್ಕಿತ್ತು. ಕಿರಿಯನಾದ ನನ್ನನ್ನು ಹಲವರು ಬೆನ್ನುತಟ್ಟಿದ್ದರು. ದೇವಕಾನದವರು ಮತ್ತು ಸಬ್ಬಣಕೋಡಿ ರಾಮ ಭಟ್ಟರು ಪ್ರೋತ್ಸಾಹ ನೀಡಿದರು. ಬೆಳೆಯುವ ಎಳೆಯ ಸಿರಿಗೆ ನೀರೆರೆದು ಪೋಷಿಸಿದರು.

        ಆ ಕಾಲಘಟ್ಟದಲ್ಲಿ ತಂದೆಯವರು ಹವ್ಯಾಸಿ ಕ್ಷೇತ್ರದಲ್ಲಿ ಖ್ಯಾತರಾಗಿದ್ದರು. ದಿನವೂ ಆಟ. ನನ್ನನ್ನೂ ಜತೆಗೆ ಕರೆದೊಯ್ಯುತ್ತಿದ್ದರು. ಅವರು ಭಾಗವತಿಕೆ ಮಾಡುತ್ತಿದ್ದಾಗ ನಾನು ಚಕ್ರತಾಳ ಬಾರಿಸುತ್ತಿದ್ದೆ. ಪ್ರಸಂಗದ ನಡೆ, ತಾಳ, ಯಾವ ಸಂದರ್ಭಕ್ಕೆ ಯಾವ ರಾಗ, ರಂಗನಡೆಗಳ ಸೂಕ್ಷ್ಮಗಳನ್ನು ತಿಳಿಯುವುದಕ್ಕೆ, ಕಲಿಯುವುದಕ್ಕೆ ಸಾಧ್ಯವಾಯಿತು. ದಕ್ಷಾಧ್ವರ, ಕಂಸವಧೆ, ದೇವಿಮಹಾತ್ಮೆ, ಅತಿಕಾಯ-ಇಂದ್ರಜಿತು ಕಾಳಗ, ಕರ್ಣಪರ್ವ.. ಮೊದಲಾದ ಪ್ರಸಂಗಗಳ ಪದ್ಯಗಳ ನಡೆಗಳು, ಲಯಗಳೂ ನನ್ನ ಮನಸ್ಸಿನಲ್ಲಿ ಶಾಶ್ವತವಾಗಿ ಅಚ್ಚೊತ್ತಿವೆ.

        ತಂದೆಯವರು ಪ್ರಸಂಗದ ಪದ್ಯಗಳನ್ನು ಪ್ರತ್ಯೇಕವಾಗಿ ಕೈಬರಹದಲ್ಲಿ ಬರೆಯುತ್ತಿದ್ದರು. ಅದರಲ್ಲಿ ಪ್ರಸಂಗದ ಸೂಕ್ಷ್ಮ ಮಾಹಿತಿಗಳು, ಪಾತ್ರಗಳ ನಡೆಗಳ ಮಾಹಿತಿಯಿರುತ್ತಿತ್ತು. ಇದರಿಂದಾಗಿ ಮುಂದೆ ನನಗೆ ಪ್ರಸಂಗವನ್ನು ಆಡಿಸಲು ಅವರ ಪುಸ್ತಕಗಳು ಪಠ್ಯದಂತೆ ನೆರವಾಗಿತ್ತು. ಹಿರಿಯ ಮದ್ಲೆಗಾರ್ ಪುಂಡಿಕಾಯಿ ಕೃಷ್ಣ ಭಟ್ಟರು (ದಿ.) ಮತ್ತು ಪೆರುವಾಯಿ ನಾರಾಯಣ ಭಟ್ಟರು ನನ್ನ ತಾಳ, ಲಯಗಳನ್ನು ತಿದ್ದಿದ ಗುರುಸದೃಶರು.

        ಭಾಗವತಿಕೆಯಲ್ಲಿ ಪ್ರತ್ಯೇಕವಾದ ಛಾಪನ್ನು ಊರಿದ ತಂದೆಯವರ ಖ್ಯಾತಿಗೆ ಹೆಮ್ಮೆ ಪಟ್ಟಿದ್ದೇನೆ. ಅವರಂತೆ ಅಲ್ಲದಿದ್ದರೂ ಅವರ ಹಾದಿಯಲ್ಲಿ ಯಥಾಮತ್ ಕ್ರಮಿಸುತ್ತಿದ್ದೇನೆ

 (2018ರಲ್ಲಿ ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿಯವರಿಗೆ ಪದ್ಯಾಣ ಪ್ರಶಸ್ತಿ ಪ್ರಾಪ್ತವಾಗಿತ್ತು. ಈ ಸಂದರ್ಭದಲ್ಲಿ ಅವರ ಕಲಾಯಾನದ ಕುರಿತಾದ ಚಿಕ್ಕ ಪುಸ್ತಿಕೆ ಪ್ರಕಟವಾಗಿತ್ತು. ಅದರಲ್ಲಿ ಪ್ರಕಟವಾದ ಮುರಳೀಕೃಷ್ಣರ ಲೇಖನವಿದು - ಮುರಳಿಕೃಷ್ಣರು ಹರೇಕಳದ ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ ಅಧ್ಯಾಪಕರು)

 

 

ಪದ್ಯಾಣ ‘ಪದಯಾನ’ - ಎಸಳು 46


ರಂಗದಲ್ಲಿ ಸಕ್ರಿಯ

ಲೇ :  ಕೋಳ್ಯೂರು ನಾರಾಯಣ ಭಟ್

ಗಿರಿನಗರ, ಬೆಂಗಳೂರು

 

                ನನ್ನ ಮತ್ತು ಗಣಪಣ್ಣನವರ ಪರಿಚಯ ಸುಮಾರು ಮೂರು ದಶಕಕ್ಕಿಂತಲೂ ಹಳೆಯದು. ಅವರು ಸುರತ್ಕಲ್ ಮೇಳದಲ್ಲಿರುವಾಗ ಪ್ರಾತಃಸ್ಮರಣೀಯರಾದ, ಯಕ್ಷಭೀಷ್ಮ, ಶೇಣಿಯವರನ್ನು ಕಾರ್ಯನಿಮಿತ್ತ ನೋಡಲು ಹೋದಾಗ ಗಣಪಣ್ಣನವರನ್ನು ಮಾತನಾಡಿಸಿದ್ದು.

                ದೊಡ್ಡಪ್ಪ ಮಾಣಂಗಾಯಿ ಕೃಷ್ಣಭಟ್ಟರು, ಸೋದರ ಮಾವ ಪಾತಾಳ ವೆಂಕಟರಮಣ ಭಟ್ಟರ ವೇಷಗಳಿಂದ ಪ್ರಭಾವಿತನಾಗಿ ಯಕ್ಷಗಾನಕ್ಕೆ ಪ್ರೇಕ್ಷಕನಾದೆ. ತೆಂಕು-ಬಡಗು ತಿಟ್ಟಿನ ಹೆಚ್ಚಿನ ಕಲಾವಿದರ ಪರಿಚಯ ಇದ್ದರೂ ಗಣಪಣ್ಣನವರ ಸರಳ ವ್ಯಕ್ತಿತ್ವದಿಂದಾಗಿ ಅವರೆಡೆಗೆ ಆಕರ್ಷಿತನಾದೆ. ಸಲುಗೆಯಿಂದ ಮಾತನಾಡುವಷ್ಟು ಹತ್ತಿರವಾದೆ.

                ಬೆಂಗಳೂರು ಗಿರಿನಗರದಲ್ಲಿ ಎಡನೀರು ಶ್ರೀಗಳ ನೇತೃತ್ವದ ತಾಳಮದ್ದಲೆ ಸಪ್ತಾಹ, ಮಿತ್ತೂರು ಈಶ್ವರ ಭಟ್ಟರ ಕುರುಕ್ಷೇತ್ರ ಸಿ.ಡಿ ರೆಕಾರ್ಡಿಂಗ್,  ಪುತ್ತೂರು ಶ್ರೀಧರ ಭಂಡಾರಿಯವರ ಯಕ್ಷಗಾನ ಮಂಡಳಿಯ ತಿರುಗಾಟ, ಒಂದು ಕಾಲದ ತೆಂಕುತಿಟ್ಟು ಯಕ್ಷಗಾನದ ಆಡೊಂಬಲವಾಗಿದ್ದ ಗಿರಿನಗರದ ನಿರ್ಮಾತೃ ಬಿ.ಕೃಷ್ಣಭಟ್ಟರ ಪ್ರಾಯೋಜಕತ್ವದ ಯಕ್ಷಗಾನ ಪ್ರದರ್ಶನಗಳಿಂದ ನನ್ನ, ಪದ್ಯಾಣರ ಬಾಂಧವ್ಯ ಗಟ್ಟಿಯಾಯಿತು. ಹಾಗೆಯೇ ಗೆಳೆತನದೊಂದಿಗೆ ಸಂಬಂಧಿಗಳಾಗುವ ಭಾಗ್ಯವು ದೊರೆಯಿತು.

                ಯಕ್ಷಗಾನ ಪ್ರಪಂಚದ ಅದ್ಭುತವೋ ಎಂಬಂತೆ ಜರಗುವ "ಸಂಪಾಜೆ ಯಕ್ಷೊತ್ಸವ"ದಲ್ಲಿ ಪ್ರೇಕ್ಷಕನಾಗುವ ಸೌಭಾಗ್ಯ ದೊರೆತದ್ದು ಪದ್ಯಾಣರ ಒತ್ತಾಸೆಯಿಂದಲೇ. ಕಳೆದ  ಹಲವು ವರ್ಷಗಳಿಂದ ಯಕ್ಷೊತ್ಸವಕ್ಕೆ ನಾನು ಖಾಯಂ ಸದಸ್ಯ. ಬಗ್ಗೆ ಅವರಿಗೆ ಸದಾ ಕೃತಜ್ಞ. ಅವರು ಬೆಂಗಳೂರಿಗೆ ಬಂದಾಗಲಂತೂ ನಮ್ಮ ಭೇಟಿ ನಿಶ್ಚಿತ. ವಾರಕ್ಕೊಮ್ಮೆ ಯಾ ಎರಡು ಬಾರಿ ವಿನಿಮಯವಾಗದಿದ್ದರಂತೂ ಆತ್ಮೀಯವಾಗಿಯೇ ಬಯ್ಯವುದುಂಟು. ಅಂತಹಾ ಸಲುಗೆ.

                ಯಕ್ಷಗಾನ ಹಾಡಿನ ಸ್ವರ-ತಾಳ-ಲಯಗಳ ಜ್ಞಾನ ನನಗಿಲ್ಲದಿದ್ದರೂ ಅವರು ಹಾಡುವ ಶೈಲಿ, ಜಾಗಟೆ ಹಿಡಿಯುವ ರೀತಿ, ಜಾಗಟೆ ಕೋಲಿನ ಉರುಳಿಕೆ ನೋಡಲು ತುಂಬಾ ಅಂದ. ರಂಗಸ್ಥಳದಲ್ಲಿ ಸಕ್ರಿಯವಾಗಿ ಇರುತ್ತಾ ಪಾತ್ರಗಳ ಸಂಭಾಷಣೆ ಮುಗಿದೊಡನೆ ಪದ ತೆಗೆಯುವ ಚುರುಕು, ಲಾಲಿತ್ಯ ಆಪ್ಯಾಯಮಾನವಾದುದು.

                ಸ್ನೇಹಕ್ಕೆ, ಆತಿಥ್ಯಕ್ಕೆ ಪದ್ಯಾಣ ಕುಟುಂಬವೇ ಹೆಸರುವಾಸಿ. ವರ್ಷಕ್ಕೆ ಒಂದೆರಡು ಬಾರಿ ಅವರ ಮನೆಗೆ ಹೋಗುವುದು ರೂಢಿಯಾಗಿದೆ. ಅವರ ಮಾತೃಶ್ರೀ(ದೂರದ ಸಂಬಂಧದಲ್ಲಿ ದೊಡ್ಡಮ್ಮ)ಯವರಿಗೂ ನನ್ನಲ್ಲಿ ಅತಿಯಾದ ಮಮತೆಯಿತ್ತು. ಅವರ ಕುಟುಂಬ ಸದಸ್ಯರೆಲ್ಲರಿಗೂ ಆತ್ಮೀಯ.

 

(ಸಾಂದರ್ಭಿಕ ಚಿತ್ರ : ಭಾಗವತ ಹಂಸ ಪುತ್ತಿಗೆ ರಘುರಾಮ ಹೊಳ್ಳ ದಂಪತಿ ಪದ್ಯಾಣರನ್ನು ಸಂಮಾನಿಸುತ್ತಿರುವುದು. ‘ರಘುರಾಮಾಭಿನಂದನಮ್’ ಸಂದರ್ಭ)