2010ರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ. ಹಿರಿಯರಾದ ಕಟೀಲಿನ ಪು. ಶ್ರೀನಿವಾಸ ಭಟ್ಟರೊಂದಿಗೆ ನನಗೂ ಪ್ರಶಸ್ತಿ ಸ್ವೀಕರಿಸುವ ಅವಕಾಶ. ಅವರ ಸರದಿಯ ಬಳಿಕ ನನ್ನದು. 'ಒಳ್ಳೆಯದಾಗಲಿ, ಸ್ವೀಕರಿಸಿ' ಎಂದು ಹರಸಿದರು.
ಬಳಿಕ ಮಾತನಾಡುತ್ತಾ, 'ಇಂದು ಬೆಂಗಳೂರಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭವಲ್ವಾ, ಈ ವಯಸ್ಸಲ್ಲಿ ಅದು ಪ್ರಾಪ್ತವಾಗಬೇಕಿತ್ತು. ಏನು ಮಾಡ್ಲಿ ಹೇಳಿ, ನನಗೆ ರಾಜಕೀಯ ಬಲ ಇಲ್ಲ, ಆರ್ಥಿಕ ಬಲ ಮೊದಲೇ ಇಲ್ಲ' ಎಂದು ನಿಟ್ಟುಸಿರು ಬಿಟ್ಟಿದ್ದರು.
ಕಟೀಲಿನಲ್ಲಿ ಪುಚ್ಚೆಕೆರೆ ಕೃಷ್ಣ ಭಟ್ಟರು ಮುಖ್ಯಗುರು ಆಗಿದ್ದಾಗ ಕಾರ್ಯಕ್ರಮಗಳಿಗೆ ಭಾಗವಹಿಸುತ್ತಿದ್ದೆ. ಅವರೊಂದಿಗೆ ಶ್ರೀನಿವಾಸ ಭಟ್ಟರ ಸಾಥಿ. ಆಗೆಲ್ಲಾ ಯಕ್ಷಗಾನದ್ದೇ ಗುಂಗು. ಮುಖತಃ ಸಿಕ್ಕಾಗೆಲೆಲ್ಲ, 'ನಿಮ್ಮ ಲೇಖನ ಓದುತ್ತಾ ಇದ್ದೇನೆ. ಬರೆಯಿರಿ' ಎಂದು ಹಾರೈಸುತ್ತಿದ್ದರು.
'ಕಲಾವಿದರ ಪರಿಚಯ ಪತ್ರಿಕೆಗಳಲ್ಲಿ ಬರೆಯಬಾರದು ಮಾರಾಯ್ರೆ, ಪ್ರಕಟವಾದ ಬಳಿಕ ಫೋನಿಸುವುದು ಬಿಡಿ, ಕೃತಜ್ಞತೆಯ ನುಡಿಯೂ ಇಲ್ಲ' ಎಂದು ಒಮ್ಮೆ ಖೇದ ವ್ಯಕ್ತಪಡಿಸಿದ್ದರು.`ಈ ವಿಚಾರದಲ್ಲಿ ನಿಮ್ಮೊಂದಿಗೆ ನಾನೂ ಪಾಲುದಾರ' ಎಂದಿದ್ದೆ.
ಇದು ನೂರಕ್ಕೆ ನೂರು ಸತ್ಯ. ಬರೆದ ಲೇಖನ ಹೇಗಿದೆ ಎಂಬುದಕ್ಕಿಂತಲೂ, ಲೇಖನದಲ್ಲಿ ಬಿಟ್ಟ ಅಂಶ ಯಾವುದು ಎಂಬುದನ್ನೇ ಎತ್ತಿ ಆಡುವ ಕೃತಘ್ನರಿಗೆ ಸಹಾಯ ಮಾಡಬೇಕಾ? ಎಂದು ಶ್ರೀನಿವಾಸ ಭಟ್ಟರು ನೋವಿನಿಂದ ಹೇಳಿದ ವಿಚಾರವು ಅವರ ಮರಣ ವಾರ್ತೆ ಬಂದಾಗ ನೆನಪಾಯಿತು.
ಪು.ಶ್ರೀನಿವಾಸ ಭಟ್ಟರು ಹಿರಿಯ ಜಾನಪದ ವಿದ್ವಾಂಸ. ಸಾಹಿತಿ. ನಿವೃತ್ತ ಶಿಕ್ಷಕ. ಮೂಲತಃ ಕವತ್ತಾರು ಗ್ರಾಮದ ಪುತ್ತೂರಿನವರು. ಮೂರು ದಶಕಗಳ ಕಾಲ ಕಟೀಲಿನ ಪ್ರಾಥಮಿಕ ಶಾಲೆಯಲ್ಲೇ ಸೇವೆ.
ಹನ್ನೊಂದು ಯಕ್ಷಗಾನ ಕೃತಿಗಳ ರಚಯಿತರು. ಕನ್ನಡ ಮತ್ತು ತುಳುವಿನಲ್ಲಿ ನಾಡಿನ ಹಲವಾರು ಪತ್ರಿಕೆಗಳಿಗೆ ಲೇಖನಗಳನ್ನು, ಅಂಕಣಗಳನ್ನು ಬರೆಯುತ್ತಿದ್ದರು. ತಾಳಮದ್ದಳೆ ಕೂಟಗಳಲ್ಲಿ ಅವಲೋಕನಕಾರನಾಗಿ, ಸ್ಪರ್ಧೆಗಳಲ್ಲಿ ತೀರ್ಪುಗಾರನಾಗಿ ತೊಡಗಿಸಿಕೊಂಡಿದ್ದರು. ಶಿಲಾಶಾಸನಗಳ ಅಧ್ಯಯನಕಾರನಾಗಿ ಹಲವಾರು ದೇವಳಗಳ, ದೈವಸ್ಥಾನಗಳ ಕುರಿತು ಸಂಶೋಧನಾಲೇಖನಗಳನ್ನು ಬರೆದಿದ್ದಾರೆ. ಕುಬೆವೂರು ಪುಟ್ಟಣ್ಣ ಶೆಟ್ಟಿ, ಕೊ.ಅ.ಉಡುಪ, ಯಕ್ಷಲಹರಿ ಪ್ರಶಸ್ತಿಗಳಿಂದ ಪುರಸ್ಕೃತರು.
24 ಅಕ್ಟೋಬರ್ 2011ರಂದು ಬಜಪೆಯ ಪಾಪ್ಯುಲರ್ ಶಾಲೆಯಲ್ಲಿ ದೀಪಾವಳಿಯ ಕುರಿತು ಉಪನ್ಯಾಸ ಮುಗಿಸಿ, ಮರಳುವಾಗ ಎದೆನೋವು ಕಾಣಿಸಿಕೊಂಡು, ಮನೆಸೇರಿದಾಗ ಕುಸಿದರು. ಶಿವೈಕ್ಯವಾದರು. ಅಗಲಿದ ಹಿರಿಯ ಚೇತನಕ್ಕ ಭಾಷ್ಪಾಂಜಲಿ.