Monday, August 31, 2020

‘ಪದಯಾನ’ - ಎಸಳು 36


ಯಕ್ಷಗಾನ ಭಾಗವತ ಪದ್ಯಾಣ ಗಣಪತಿ ಭಟ್ಟರ ಅಭಿನಂದನಾ ಕೃತಿ ‘ಪದಯಾನ’ದಿಂದ -

ಪದಯಾನದಲ್ಲಿ ಸೋಲರಿಯದ ಹೆಜ್ಜೆ 1

ಲೇ : ಶೀಲಾ ಗಣಪತಿ ಭಟ್

(ಪದ್ಯಾಣರ ಪತ್ನಿ)

          ಕಾಸರಗೋಡು ತಾಲೂಕಿನ ಕುಂಬ್ಡಾಜೆ ಗ್ರಾಮದ ಉಪ್ಪಂಗಳವು ನನಗೆ ತವರು ಮನೆ. ತಂದೆ ಗೋಪಾಲಕೃಷ್ಣ ಭಟ್ಟರಿಗೆ ನಾವು ಐವರು ಮಕ್ಕಳು. ಮೂವರು ಹೆಣ್ಣು. ಇಬ್ಬರು ಗಂಡು. ನಾನು ಹಿರಿಯವಳು. ಓದಿದ್ದು ಪಿ.ಯು.ಸಿ. ಜತೆಗೆ ಸಂಗೀತ ಅಭ್ಯಾಸ. ನನ್ನ ಅಜ್ಜ ಸುಬ್ರಾಯ ಭಟ್. ಹವ್ಯಾಸಿ ಭಾಗವತರು. ತಂದೆಗೆ ಹೇಗೂ ಯಕ್ಷಗಾನದ ಒಲವಿದೆ. ಹೀಗೆ ನನ್ನೊಳಗೆ ಯಕ್ಷಗಾನದ ಆಸಕ್ತಿ ಅಜ್ಞಾನವಾಗಿ ಬೆಳೆದಿತ್ತು. ಹತ್ತಿರದಲ್ಲಿ ಮೇಳದ ಆಟ ಬಂದರೆ ಅಪ್ಪ ಹೋಗಲು ಬಿಡಲಾರರು. ಯಕ್ಷಗಾನಕ್ಕೆ ಈಗಿನಷ್ಟು ಗೌರವ ಇರಲಿಲ್ಲ.

          ನನಗಾಗ ಹದಿನೆಂಟು ವರುಷ ತುಂಬಿರಬಹುದಷ್ಟೇ. ಕಂಕಣಬಲ ಕೂಡಿಬಂತು. ಋಣಾನುಬಂಧ ಹೊಸೆಯಿತು. ನನ್ನನ್ನು ನೋಡಲು ಬಂದುಬಿಟ್ಟರು. ಅವರಲ್ಲೊಬ್ಬರು ಸ್ವಲ್ಪ ಆಧುನಿಕ ಉಡುಪು ತೊಟ್ಟು ಗಮನ ಸೆಳೆಯುತ್ತಿದ್ದರು. ಹುಡುಗಿ ನೋಡುವ ಶಾಸ್ತ್ರ ಮುಗಿಯಿತು. ಕಾಫಿ ತಿಂಡಿ ಸಮಾರಾಧನೆಯಾಗಿ ಹೊರಟುಹೋದರು.

          ಮತ್ತೆ ತಿಳಿಯಿತು, ಇವರು ಅವರಲ್ಲ ಅಂತ! ಬಂದವರಲ್ಲಿ ಪಂಚೆ ಉಟ್ಟು, ಸದ್ದಿಲ್ಲದೆ ಒಂದೆಡೆ ಕುಳಿತವರು ಭಾವಿ ಗಂಡ. ಓ.. ದೇವರೇ.. ಎಂತಹ ಪ್ರಮಾದವಾಗಿ ಹೋಗಿತ್ತು. ಮನೆಯಲ್ಲಿ ಅಪ್ಪ ಹುಡುಗನನ್ನು ತೋರಿಸಿಲ್ಲ. ಬಂದವರೂ ಹುಡುಗನ ಪರಿಚಯ ಮಾಡಲಿಲ್ಲ. ನಾವು ಯಾರನ್ನೋ ನೋಡಿದೆವು. ಆಗಿನ ಕಾಲವೂ ಹಾಗಿತ್ತು. ಆ ದಿವಸ ಅಂದರೆ ಹುಡುಗಿ ನೋಡುವ ಕಾರ್ಯಕ್ರಮಕ್ಕೆ ಅವರನ್ನು ಮೇಳದಿಂದ ನೇರವಾಗಿ ಕರಕೊಂಡು ಬಂದಿದ್ದರಂತೆ. ಇವರು ‘ಯಕ್ಷಗಾನ ಭಾಗವತ’ ಎಂದಷ್ಟೇ ತಿಳಿದಿತ್ತು. ವಿಷಯ ತಿಳಿದಾಗ ನನ್ನೊಳಗಿನ ಯಕ್ಷಗಾನದ ಆಸಕ್ತಿಯೊಂದು ಮಿಂಚಲು ಹವಣಿಸುತ್ತಿತ್ತು.

          ಪದ್ಯಾಣರ ಹಾಡುಗಳನ್ನು ಕೇಳಿದ್ದೆ. ಆಸ್ವಾದಿಸಿದ್ದೆ. ನನಗೂ ಸಂಗೀತದ ನಂಟು ಇದ್ದುದರಿಂದ ಹಾಡಿಗೆ ಮನಸೋತಿದ್ದೆ. ಮನೆ, ಅಂತಸ್ತು, ಆಸ್ತಿ.. ಯಾವುದನ್ನೂ ನೋಡಿದವಳೇ ಅಲ್ಲ! ಅಪೇಕ್ಷಿಸಿದವಳೂ ಅಲ್ಲ. 1984 ಮೇ 13ರಂದು ಪದ್ಯಾಣ ಗಣಪತಿ ಭಟ್ಟರ ಅರ್ಧಾಂಗಿಯಾದೆ. ಎರಡು ದಿವಸ ಅದ್ದೂರಿ ಮದುವೆ ಸಂಭ್ರಮ. 13ರಂದು ಮದುವೆ..... ಮೇ 18ರಂದು ಅವರು ಮೇಳಕ್ಕೆ ಹೊರಟೇ ಹೋದರು!

          ಆಟ ರಾತ್ರಿಯಿಡೀ ನಡೆಯುತ್ತದೆ ಎಂದು ತಿಳಿದಿರಲಿಲ್ಲ. ಅವರು ಮನೆಬಿಟ್ಟು ತಿಂಗಳುಗಟ್ಟಲೆ ಇರುತ್ತಾರೆ ಎನ್ನುವುದೂ ಅರಿತವಳಲ್ಲ. ಆತಂಕವಾಯಿತು. ಮನೆಯಲ್ಲಿ ಹಿರಿಯರಿದ್ದರು. ಮಾತನಾಡುವ ಹಾಗಿಲ್ಲ. ಅಕ್ಕಂದಿರಲ್ಲಿ ವಿಚಾರಿಸಿದಾಗ ‘ಅವರಾ.. ಅಪರೂಪಕ್ಕೆ ಬರುತ್ತಾರಷ್ಟೇ’ ಎಂದು ಕಣ್ಣು ಮಿಟುಕಿಸಿದರು. ನನಗೆ ಆಕಾಶ ತಲೆಮೇಲೆ ಬೀಳಲು ಮಾತ್ರ ಬಾಕಿ! ಸುದ್ದಿ ಕೇಳಿ ಅಧೀರಳಾಗಿದ್ದೆ. ಅವರನ್ನು ಗ್ರಹಿಸುತ್ತಾ ಅತ್ತ ದಿನಗಳಿಗೆ ಲೆಕ್ಕವಿಲ್ಲ. ನನ್ನ ಅಳುವನ್ನು ಮನೆಯಲ್ಲಿ ಯಾರೂ ಗಮನಿಸಿಲ್ಲ. ಅಳುವುದು ಅಭ್ಯಾಸವಾಯಿತು. ಮೇ 18ನೇ ತಾರೀಕಿಗೆ ಹೋದವರು ಮೇ 25ಕ್ಕೆ ಮನೆಗೆ ಬಂದರು.

          ವಿವಾಹವಾಗಿ ಪದ್ಯಾಣರ ಮನೆಯನ್ನು, ಮನವನ್ನು ಹೊಕ್ಕಿದ್ದೆ. ಹನಿಮೂನ್ ಇಲ್ಲ! ಮದುಮಕ್ಕಳ ತಿರುಗಾಟ ದೂರದ ಮಾತು. ಪದ್ಯಾಣ ಮನೆತನ ತುಂಬಾ ಶ್ರೀಮಂತಿಕೆಯಿಂದ ಕೂಡಿದ್ದು. ನಾನು ಮನೆ ಹೊಕ್ಕಾಗ ಇಲ್ಲಿನ ಆತಿಥ್ಯದ ವ್ಯವಸ್ಥೆ ನೋಡಿ ದಂಗಾಗಿದ್ದೆ. ಪ್ರತಿದಿನ ಐವತ್ತು ಮಂದಿ ಭೋಜನಕ್ಕೆ ಹಾಜರ್. ಯಕ್ಷಗಾನಕ್ಕೆ ಸಂಬಂಧಪಟ್ಟವರು, ಹರಟೆಗಾಗಿ ಬರುವವರು, ಮಾತುಕತೆಗಾಗಿ ಆಗಮಿಸಿದವರು, ತಮಾಶೆ, ವಿಮರ್ಶೆಗಾಗಿ ಬಂದವರು.. ಇವರಿಗೆಲ್ಲಾ ಅವರವರ ಬಾಯಿರುಚಿಯಂತೆ ಅಡುಗೆ ತಯಾರಿ.

          ಮನೋರಂಜನೆಗಾಗಿ ಒಂದೆಡೆ ಚೆಸ್ ಆಟ, ಮತ್ತೊಂದೆಡೆ ಇಸ್ಪೀಟ್, ಇನ್ನೊಂದೆಡೆ ಯಕ್ಷಗಾನದ ಚೆಂಡೆ, ಮದ್ದಳೆ, ನಾಟ್ಯ .. ಹೀಗೆ ನಿತ್ಯವೂ ಹಬ್ಬದ ವಾತಾವರಣ. ಈ ನೆಪದಲ್ಲಿ ಬರುವ ಅತಿಥಿಗಳು ಅನೇಕ. ವೀಳ್ಯ ಮೆಲ್ಲಲು ಬರುವವರೂ ಇದ್ದರು. ವೀಳ್ಯಕ್ಕಾಗಿ ಅಡಿಕೆಯನ್ನು ಸಜ್ಜುಗೊಳಿಸಲೆಂದೇ ಒಂದಿಬ್ಬರು ಆಳುಗಳಿರುತ್ತಿದ್ದರು. ಇದನ್ನೆಲ್ಲಾ ನೋಡಿ ತಲೆ ತಿರುಗಿತ್ತು! ಒಂದರ್ಥದಲ್ಲಿ ಧರ್ಮಛತ್ರ. ಅತ್ತೆಯವರದ್ದೇ ಉಸ್ತುವಾರಿಕೆ. ಹೊಂದಿಕೊಳ್ಳಲು ಸ್ವಲ್ಪ ದಿನ ಬೇಕಾಯಿತು. ರಾತ್ರಿ, ಹಗಲು ಒಂದೇ ಆಗಿತ್ತು. ಬೆಳ್ಳಂಬೆಳಿಗ್ಗೆ ಅಡುಗೆಗಾಗಿ ನಾಲ್ಕು ಒಲೆಗಳಿಗೆ ಏಕಕಾಲಕ್ಕೆ ಬೆಂಕಿ ಹಾಕುವ ದೃಶ್ಯವನ್ನು ಎಣಿಸಿಕೊಂಡರೆ ಆ ಸಮಯದ ವೈಭವ ಅರ್ಥವಾದೀತು. 

(ಲೇಖನದ ಉಳಿದ ಭಾಗ ನಾಳೆಗೆ..)

 

Friday, August 28, 2020

‘ಪದಯಾನ’ದಿಂದ - ಪದ್ಯಾಣರ ಸ್ವಗತ – (ಎಸಳು 33)


  (ಯಕ್ಷಗಾನ ಭಾಗವತ ಪದ್ಯಾಣ ಗಣಪತಿ ಭಟ್ಟರ ಅಭಿನಂದನಾ ಕೃತಿ ‘ಪದಯಾನ’ದಿಂದ)

ಹೂವಿನ ಹಾದಿ :

          ನಾನೀಗ ಮೊದಲಿನ ‘ಪದ್ಯಾಣ’ ಅಲ್ಲ!

ವಯಸ್ಸಾಯಿತು. ಅರುವತ್ತು ಮೀರಿತು. ಹಿಂದಿನಂತೆ ಹಾಡಲು ಸಾಧ್ಯವಾ? ಅಭಿಮಾನಿಗಳಿಗೂ ಗೊತ್ತಿದೆ. ಜನರು ನನ್ನ ಹಾಡುಗಾರಿಕೆಯನ್ನು ತಿರಸ್ಕರಿಸಲಿಲ್ಲ, ದಿಟ.

          ಅರುವತ್ತರ ಹೊಸ್ತಿಲಲ್ಲಿ ನಿಂತು ನೋಡುತ್ತೇನೆ. ಸಾಗಿ ಬಂದ ದಾರಿಯಲ್ಲಿ ಕಲ್ಲುಮುಳ್ಳುಗಳು. ಅವೆಲ್ಲವನ್ನು ಕಲಾದೇವಿ ತೊಲಗಿಸಿದ್ದಾಳೆ. ಹಾದಿಗೆ ಹೂವನ್ನು ಹರಡಿದ್ದಾಳೆ. ಹೂವಿನ ಹಾದಿಯನ್ನು ತೋರಿದ್ದಾಳೆ. ಬದುಕನ್ನು ಹೂ ಮಾಡಿದ್ದಾಳೆ.

          ಶಾಲಾ ದಾಖಲಾತಿಯಲ್ಲಿ ಎಂಟನೇ ತರಗತಿ ತನಕ ದಾಖಲೆಯಿದೆ. ಹೆಚ್ಚು ಕಲಿಯಲಿಲ್ಲ, ಕಲಿಯಲಾಗಲಿಲ್ಲ. ಕಲಿಯಬೇಕಿತ್ತು. ಇದರಿಂದಾಗಿ ಭಾಷಾ ಸಮಸ್ಯೆ ಎದುರಾಗಿವೆ. ಪ್ರತಿಷ್ಠಿತರ ಮಧ್ಯೆ ಕಾಣಿಸಿಕೊಳ್ಳಲು ಮುಜುಗರವಾಗುತ್ತಿತ್ತು.

          ಹೀಗಿದ್ದೂ ದೇಶದ ರಾಜಧಾನಿಗೆ ಕುಟುಂಬ ಸಹಿತ ಪ್ರವಾಸ ಹೋಗಿದ್ದೇನೆ. ವಿದೇಶಕ್ಕೂ ಹಾರಿದ್ದೇನೆ. ಭಾಗವತಿಕೆ ಮಾಡಿದ್ದೇನೆ. ಜನರ ಮನವನ್ನು ಗೆದ್ದಿದ್ದೇನೆ. ಪದವಿ ಪಡೆದ ಪ್ರಮಾಣ ಪತ್ರವೇ ಬದುಕಿನ ಯಶ  ಎಂದು ತಿಳಿಯುತ್ತಿದ್ದರೆ ವಿದೇಶಕ್ಕೆ ಸುಲಭವಾಗಿ ಹೋಗಬಹುದಿತ್ತು. ಆದರೆ ಅಲ್ಲಿನವರ ಮನ ಗೆಲ್ಲಲು ಸಾಧ್ಯವಾಗುತ್ತಿತ್ತೇ. ಅವರ ಮನಸ್ಸಿನೊಳಗೆ ಇಳಿದು ತೆಂಕುತಿಟ್ಟು ಯಕ್ಷಗಾನದ  ಧ್ವಜವನ್ನು ಊರಲು ಆಗುತ್ತಿತ್ತೇ? ಅದೆಲ್ಲವೂ ಕಲಾ ದೇವಿ ಒದಗಿಸಿದ್ದಾಳೆ.

          ಶೈಕ್ಷಣಿಕ ಅರ್ಹತೆ ಇಲ್ಲವೆಂದು ಗೇಲಿ ಮಾಡಿದವರೆಷ್ಟೋ? ಅವಮಾನಿಸಿದ್ದಾರೆ. ವ್ಯಂಗ್ಯವಾಡಿದ್ದಾರೆ. ಹಗುರವಾಗಿ ಮಾತನಾಡಿದ್ದಾರೆ. ಬದುಕನ್ನು ಕೆದಕಿದ್ದಾರೆ. ಅದರೊಳಗೆ ಇಣುಕಿದ್ದಾರೆ. ಇಂತಹ ಹೊತ್ತಲ್ಲಿ ನಿರ್ಲಿಪ್ತವಾಗಿರಲು ಕಲೆ ಕಲಿಸಿದೆ. ಲೋಕದ ಡೊಂಕನ್ನು ತಿದ್ದಲು ನಾನಾರು?

          ಯಕ್ಷಯಾನದಲ್ಲಿ ಹಾದುಹೋದ ಅಭಿಮಾನಿಗಳ ಸಂಖ್ಯೆ ಅಗಣಿತ. ಮಾನ-ಸಂಮಾನಗಳು ಅರಸಿ ಬಂದುವು. ಪ್ರಶಸ್ತಿಗಳು ಮುಡಿಗೇರಿದುವು. ಹುಟ್ಟೂರಿನ ಬಂಧುಗಳು ಸನ್ಮಾನಿಸಿದರು. ‘ಆತ ನಮ್ಮವ’ನೆಂದು ಸ್ವೀಕರಿಸಿದರು. ಓರ್ವ ಕಲಾವಿದನಿಗೆ ಇನ್ನೇನು ಬೇಕು?

          ಬದುಕು ಶಾಶ್ವತವಲ್ಲ. ಆಯಷ್ಯ ಕ್ಷೀಣಿಸುತ್ತಿದೆ. ಮೊದಲಿನಂತೆ ಹಾಡಲು ಸಾಧ್ಯವಾ? ನಿರೀಕ್ಷೆ ತಪ್ಪಲ್ಲ. ಯತ್ನಿಸುತ್ತಿದ್ದೇನೆ. ಮಿತಿ ಗೊತ್ತಿದೆ. ಅದರೊಳಗೆ ಸಂಚರಿಸುತ್ತಿದ್ದೇನೆ. ಸಂಯಮದಿಂದ ನೋಡುತ್ತಿದ್ದೇನೆ. ಎರಡು ದಶಕದ ಹಿಂದಿನ ‘ಪದ್ಯಾಣ ಧ್ವನಿ’ಯನ್ನು ಹೇಗೆ ಸ್ವೀಕರಿಸಿದ್ದಾರೋ, ಅದೇ ಸ್ವೀಕೃತಿಯು ಈಗಿದೆ ಎನ್ನಲು ಹರ್ಷವಾಗುತ್ತಿದೆ. ಪದ್ಯಾಣ ಹೆಸರಿಗೆ ಶೋಭೆ ತಂದಕೊಟ್ಟ ಗುರು ಮಾಂಬಾಡಿ ನಾರಾಯಣ ಭಾಗವತರಿಗೆ ನಮೋನಮಃ

          ಕಳೆದು ಹೋಗುತ್ತಿದ್ದ ಬದುಕಿಗೆ ಆಸರೆಯಾದವರು ಟಿ. ಶ್ಯಾಮ ಭಟ್ಟರು. ‘ನನ್ನ ಗಣಪಣ್ಣ’ ಎಂದು ತಮ್ಮನಾಗಿಯೋ, ಬಂಧುವಾಗಿಯೋ ಸ್ವೀಕರಿಸಿದವರು. ಮುಕ್ತವಾಗಿ ಮಾತನಾಡುವವರು. ಕಷ್ಟಸುಖಗಳಿಗೆ ಸ್ಪಂದಿಸಿದವರು. ಕಣ್ಣೀರನ್ನು ಒರೆಸಿದವರು. ವಿಷಾದದ ಹೊತ್ತಲ್ಲಿ ಧೈರ್ಯತುಂಬಿದವರು. ಬೆಳಕಿನ ಬದುಕಿನಲ್ಲಿ ಧುತ್ತೆಂದು ಕತ್ತಲೆ ಆವರಿಸಿದಾಗ ದೀವಿಗೆ ಹಿಡಿದವರು. ನನ್ನ ಪಾಲಿನ ಆಪದ್ಭಂದು.

          ನನ್ನ ಕಲಾಯಾನದ ಮುಖ್ಯ ಉಸಿರು - ಮಡದಿ ಶೀಲಾಶಂಕರಿ. ಅಳುವನ್ನು ನುಂಗಿ ಯಕ್ಷಗಾನಕ್ಕೆ ಗಂಡನನ್ನು ಬಿಟ್ಟುಕೊಟ್ಟ ತ್ಯಾಗಮಯಿ. ಇದು ಉತ್ಪ್ರೇಕ್ಷೆಯಲ್ಲ. ಮನೆ ವ್ಯವಹಾರಗಳನ್ನು, ಮಕ್ಕಳ ಏಳ್ಗೆಯನ್ನು ಗಂಡಾಗಿ ನಿಂತು ನಿರ್ವಹಿಸಿದ್ದಾಳೆ. ತಂದೆಯ ಸ್ಥಾನದ ಶೂನ್ಯತೆಯು ಮಕ್ಕಳಲ್ಲಿ ಅಂಕುರಿಸದಂತೆ ಎಚ್ಚರ ವಹಿಸಿದ್ದಾಳೆ. ಎಲ್ಲಕ್ಕಿಂತ ಮುಖ್ಯವಾಗಿ ನನ್ನನ್ನು ಸಹಿಸಿದ್ದಾಳೆ. ಸಹಿಸುತ್ತಾ ಅಭಿಮಾನವನ್ನು ಆವಾಹಿಸಿಕೊಂಡಿದ್ದಾಳೆ. ಪದಯಾನದ ಎರಡು ಗಾಲಿಗಳಲ್ಲಿ ಒಂದು ನಾನು, ಮತ್ತೊಂದು ಅವಳು. 

          ಮಕ್ಕಳು ಓದಿದ್ದಾರೆ. ಶೈಕ್ಷಣಿಕವಾಗಿ ಗಟ್ಟಿಯಾಗಿದ್ದಾರೆ. ವೃತ್ತಿಯನ್ನೂ ಆಯ್ಕೆ ಮಾಡಿಕೊಂಡಿದ್ದಾರೆ. ತಂದೆಯ ವೃತ್ತಿಯನ್ನು ಹಳಿಯದ ಮಕ್ಕಳನ್ನು ಪಡೆದ ನಾನು ಭಾಗ್ಯಶಾಲಿ. ಇಬ್ಬರು ಮಗಂದಿರಿಗೂ ಯಕ್ಷಗಾನವೆಂದರೆ ಪ್ರೀತಿ, ಒಲವು. ಸಹೋದರರು, ಕುಟುಂಬಸ್ಥರೆಲ್ಲರೂ ಯಕ್ಷಯಾನದಲ್ಲಿ ಕೈಜೋಡಿಸಿದ್ದಾರೆ. ಎಲ್ಲರ ಪ್ರೀತಿ, ವಿಶ್ವಾಸ ಮತ್ತು ತ್ಯಾಗದ ಫಲವಾಗಿ ನಿಮ್ಮ ಗಣಪ ಹೀಗೆ ಇದ್ದಾನೆ ನೋಡಿ.

Thursday, August 27, 2020

‘ಪದಯಾನ’ - ಪದ್ಯಾಣರ ಸ್ವಗತ – (ಎಸಳು 32)


(ಯಕ್ಷಗಾನ ಭಾಗವತ ಪದ್ಯಾಣ ಗಣಪತಿ ಭಟ್ಟರ ಅಭಿನಂದನಾ ಕೃತಿ ‘ಪದಯಾನ’ದಿಂದ)

ಬದಲಾವಣೆ ಅಪರಾಧವಲ್ಲ :

          ಬದಲಾವಣೆಗೆ ಕಲಾವಿದ ಒಗ್ಗಿಕೊಳ್ಳಬೇಕು. ಚೌಕಟ್ಟಿನೊಳಗಿನ ಬದಲಾವಣೆ ಸ್ವೀಕಾರಾರ್ಹ. ಹಾಗೆಂತ ಸ್ವಚ್ಛಂದ ಸಲ್ಲದು. ಉದಾ: ಝಂಪೆ ತಾಳದ ಪದ್ಯ. ಇದು ಬೇರೆ ಯಾವ ತಾಳಗಳಿಗೂ ಒಗ್ಗದು, ಬಗ್ಗದು. ಇದನ್ನು ಬೇಕಾದಂತೆ ಬಾಗಿಸುವವರನ್ನು ಗಮನಿಸಿದ್ದೇನೆ. ಇಂತಹ ಸಾಹಸವನ್ನು ಮಾಡದಿರುವುದು ಒಳಿತು. ಇಷ್ಟು ವರುಷಗಳ ಕಾಲ ಇಂತಹ ರಂಗಾನ್ಯಾಯಗಳನ್ನು ಮಾಡದ್ದರಿಂದ ನನ್ನ ಸ್ಥಾನ ಈಗಲೂ ಉಳಿದುಕೊಂಡಿದೆ! ಇತರ ತಾಳಗಳು ಬೇರೆಯದಕ್ಕೂ ಹೊಂದಬಹುದು.

          ಹಿಂದಿನ ಭಾಗವತಿಕೆಯನ್ನು ಆಸ್ವಾದಿಸಿದ ಬಹಳ ಮಂದಿಯ ಆರೋಪವನ್ನು ಕೇಳಿದ್ದೇನೆ - ನಿಮ್ಮ ಪದ್ಯ ಆಧುನಿಕಗೊಂಡಿದೆ, ಹೌದೇ?. ಹೌದು, ಒಪ್ಪಿಕೊಳ್ಳುತ್ತೇನೆ. ಮೊದಲೇ ಹೇಳಿದಂತೆ ಮೇಳದ ಹಿತದೃಷ್ಟಿಯ ಮುಂದೆ ಸ್ವಂತದ್ದಾದ ಕಾಮಿತಗಳು ಗೌಣ. ‘ಒಬ್ಬನೇ ಮೆರೆಯಬೇಕು’ ಎನ್ನುವ ಜಾಯಮಾನದವನಲ್ಲ. ನಾವು ಮೇಳವನ್ನು ಒಪ್ಪಿದ್ದೇವೆ. ನಮ್ಮನ್ನು ಮೇಳ ಒಪ್ಪಿದೆ. ಜನರು ಒಪ್ಪಿದ್ದಾರೆ. ಒಪ್ಪಿತ ಬದುಕಿನಲ್ಲಿ ಆಗಬೇಕಾದುದು ಏನು? ಪ್ರದರ್ಶನ ಕಳೆಗಟ್ಟಬೇಕು. ಅಭಿಮಾನಿಗಳ ಆಕ್ಷೇಪ ಸಹಜ. ಆದರೆ ಹತ್ತು ಪದ್ಯದಲ್ಲಿ ಎರಡು ಪದ್ಯವನ್ನಾದರೂ ಹಳೆ ಶೈಲಿಯಲ್ಲಿ ಹೇಳದೆ ಬಿಡುವುದಿಲ್ಲ!

          ಸುರತ್ಕಲ್ ಮೇಳದ ಚೌಕಿಯಲ್ಲಿ ಅವ್ಯಕ್ತ ಶಿಸ್ತು ಅನಾವರಣಗೊಳ್ಳುತ್ತಿದ್ದುವು. ಹಿರಿಯ ಕಲಾವಿದರಲ್ಲಿ ಭಯ, ಭಕ್ತಿಯಿತ್ತು. ಶೇಣಿಯವರು ಚೌಕಿಗೆ ಬಂದರೆಂದರೆ ಗಪ್ಚಿಪ್. ಅವರಿಗೆ ಹೆದರಿ ಎಂದು ಭಾವಿಸಬೇಕಾಗಿದ್ದಿಲ್ಲ. ಅವರ ವಿದ್ವತ್ತನ್ನು ಕಲಾವಿದರು, ಪ್ರೇಕ್ಷಕರು ಗೌರವಿಸುತ್ತಿದ್ದರು. ಸುಮಾರು ಒಂದೂವರೆ ದಶಕಗಳಿಂದ ಯಾವ ಮೇಳಗಳಲ್ಲೂ ಶಿಸ್ತು ಕಾಣುವುದಿಲ್ಲ. ಕಾರಣ ಅವಜ್ಞೆಯಲ್ಲ. ಕಾಲಸ್ಥಿತಿ, ಚಿತ್ತಸ್ಥಿತಿಗಳೇ ಕಾರಣ. ಚೌಕಿಯಲ್ಲಿ ಕನಿಷ್ಠ ಶಿಸ್ತು ಬೇಕು. ಶಿಸ್ತು ಎಲ್ಲಿಂದ ಬರುತ್ತದೆ? ಕಲಾವಿದರಾದ ನಾವು ರೂಢಿಸಿಕೊಂಡು ಅನುಷ್ಠಾನಿಸಿದರೆ ಆಯಿತು. ಇದನ್ನೇ ಬದ್ಧತೆ ಎನ್ನುವುದು. ಅದು ಒತ್ತಾಯದಿಂದ, ಒತ್ತಡದಿಂದ ಬರುವಂತಹುದಲ್ಲ. ಸ್ವ-ವಿವೇಚನೆಯಿಂದ ರೂಢಿಸಿಕೊಳ್ಳಬೇಕು. ಸ್ವ-ಶಿಸ್ತು ಕಲಾವಿದನಿಗೆ ಭೂಷಣ.

          ಕಲಾಯಾನದಲ್ಲಿ ಸಮಯ ಪಾಲನೆಯನ್ನು ಗಾಢವಾಗಿ ಪಾಲಿಸಿದ್ದೇನೆ. ಸಂಘಟಕರು, ಪ್ರೇಕ್ಷಕರು ನಮ್ಮನ್ನು ಕಾಯುವುಂತೆ ಮಾಡುವುದು ಇದೆಯಲ್ಲಾ, ಅದು ಕಲೆಗೆ ಮಾಡುವ ದ್ರೋಹ. ಕಲೆಯ ಮುಂದೆ ಕಲಾವಿದ ಎಂದೆಂದಿಗೂ ಸಣ್ಣವನು. ‘ಗಣಪಣ್ಣ ತಡವಾಗಿ ಬಂದು ಕಾರ್ಯಕ್ರಮ ತಡವಾಯಿತು’ ಎನ್ನುವ ಅಪವಾದವನ್ನು ಇದುವರೆಗೆ ಕೇಳಿಲ್ಲ, ಅದರಂತೆ ವರ್ತಿಸಿಲ್ಲ ಎನ್ನುವ ಸಮಾಧಾನವಿದೆ. ಆಟವಿರಲಿ, ಕೂಟವಿರಲಿ ಕನಿಷ್ಠ ಅರ್ಧ ಗಂಟೆ ಮುಂಚಿತವಾಗಿ ತಲುಪುತ್ತಿದ್ದೆ. ಕೆಲವೊಮ್ಮೆ ನಾನೇ ಪ್ರಥಮ ಪ್ರೇಕ್ಷಕನಾದುದೂ ಇದೆ! ನಾನು ಹೋದ ಬಳಿಕವೇ ಸಂಘಟಕರು ಆಗಮಿಸಿದ ಕಾರ್ಯಕ್ರಮಗಳೂ ಇವೆ! ಅದು ನನ್ನ ಸಮಸ್ಯೆಯಲ್ಲ. ಬದ್ಧತೆಯು ಕಲಾವಿದನಿಗೆ ಮೆರುಗನ್ನು ತರುತ್ತದೆ. ಸಂಘಟಕರಿಗೆ ಕಲಾವಿದ ಹೊರೆಯಾಗದಂತೆ ಎಚ್ಚರ ವಹಿಸಿದಷ್ಟೂ ಹೆಚ್ಚು ಕಾಲ ಖುಷಿಯಿಂದ ವ್ಯವಸಾಯ ಮಾಡಬಹುದು!

          ಮಹಮ್ಮಾಯಿ ಮೇಳದಲ್ಲಿ ಕೀರ್ತಿಶೇಷ ಕಡಬ ನಾರಾಯಣ ಆಚಾರ್ಯರು ಚೆಂಡೆ, ಮದ್ದಳೆಯಲ್ಲಿ ಸಾಥ್. ನನ್ನ ಮನೋಧರ್ಮವನ್ನು ಅರಿತ ಕಲಾವಿದ. ಸ್ವಭಾವತಃ ಸಜ್ಜನ. ಆಟ, ಕೂಟಗಳಲ್ಲಿ ಒಂದಾಗಿ, ಒಂದೇ ಮನೆಯವರಂತೆ ಬಾಳಿದ, ಬೆಳೆದ ದಿನಗಳಿದ್ದುವು. ಒಟ್ಟಿಗೆ ಊಟ, ತಿಂಡಿ, ಪ್ರಯಾಣ... ಒಂದೇ ಮನಸ್ಸು, ದೇಹ ಎರಡು. ಅಕಾಲಿಕವಾಗಿ ಅವರನ್ನು ಕಳೆದುಕೊಂಡೆವು. ಆ ದಿವಸಗಳಲ್ಲಿ ಅವರಿಲ್ಲದ ಹಿಮ್ಮೇಳವನ್ನು ಊಹಿಸುವುದೂ ಕಷ್ಟವಾಗಿತ್ತು. ಮತ್ತೆ ಸರಿಹೋಯಿತು. ಅವರ ಚಿರಂಜೀವಿ ವಿನಯ ಆಚಾರ್ ಕಡಬ ತಂದೆಯ ಹಾದಿಯಲ್ಲಿ ಮುನ್ನಡೆದವರು. ಪ್ರತಿಭಾನ್ವಿತ ಕಲಾವಿದ. ಸುರತ್ಕಲ್ ಮೇಳದಲ್ಲಿ ನಾರಾಯಣ ಆಚಾರ್, ಈಗ ಅವರ ಮಗ ವಿನಯ ಆಚಾರ್ - ಇದು ಯೋಗಾಯೋಗ.

          ಹೊಸನಗರ ಮೇಳದ ಹತ್ತನೇ ವರುಷ ತಿರುಗಾಟ ಪೂರ್ತಿಯಾಯಿತು. ಚಿಕ್ಕಪ್ಪ ಪದ್ಯಾಣ ಶಂಕರನಾರಾಯಣ ಭಟ್ಟರು ಹಿಮ್ಮೇಳದ ಭಾಷಾವಿದ. ರಂಗ ನಿರ್ದೇಶಕ. ಪೌರಾಣಿಕ ಪ್ರಸಂಗಗಳ ಸಂಪೂರ್ಣ ಮಾಹಿತಿಯಿದ್ದವರು. ಚೆಂಡೆ, ಮದ್ದಳೆಗಳ ನುಡಿತಕ್ಕೆ ಭಾಷೆ ಕೊಟ್ಟವರು. ಸುನಾದವನ್ನು ನೀಡಿದವರು. ಎಲ್ಲಾ ಪಾತ್ರಗಳ ಸ್ವ-ಭಾವ, ನಡೆಗಳನ್ನು ಅರಿತ ಪರಿಪೂರ್ಣ ಕಲಾವಿದ. ಅವರು ನನ್ನೊಂದಿಗೆ ಹಿಮ್ಮೇಳದಲ್ಲಿರುವುದರಿಂದ ಭೀಮಬಲ ಬಂದಿದೆ. ಸಹೋದರ ಪದ್ಯಾಣ ಜಯರಾಮ ಭಟ್ ಇವನನ್ನು ಪ್ರತ್ಯೇಕ ಹೇಳಬೇಕಾಗಿಲ್ಲ. ಚೈತನ್ಯಕೃಷ್ಣ ಪದ್ಯಾಣ ಹಿರಿಯರ ಹಾದಿಯಲ್ಲಿ, ಭರವಸೆಯ ಕಲಾವಿದನಾಗಿ ಮೈತುಂಬಿಸಿಕೊಳ್ಳುತ್ತಿದ್ದಾರೆ.


Wednesday, August 26, 2020

ಪದಯಾನ - ಪದ್ಯಾಣರ ಸ್ವಗತ – (ಎಸಳು 31 )

  (ಯಕ್ಷಗಾನ ಭಾಗವತ ಪದ್ಯಾಣ ಗಣಪತಿ ಭಟ್ಟರ ಅಭಿನಂದನಾ ಕೃತಿ ‘ಪದಯಾನ’ದಿಂದ)

ಪೂರ್ವರಂಗ

          ಹಲವಾರು ಮಂದಿ ಕೇಳುತ್ತಿರುತ್ತಾರೆ, ಪೂರ್ವರಂಗ ಯಾಕಿಲ್ಲ? ಪ್ರಶ್ನೆ ಸಹಜ. ಹಿಂದೆಲ್ಲಾ ಪೂರ್ವರಂಗದಲ್ಲಿ ಕುಣಿದು, ಅಭ್ಯಾಸಗೊಂಡು ಪಕ್ವಗೊಂಡ ಬಳಿಕವಷ್ಟೇ ಪ್ರಸಂಗಗಳಿಗೆ ವೇಷ ಮಾಡಲು ಅರ್ಹತೆ ಬರುತ್ತಿತ್ತು. ಬಹುತೇಕ ಹಿರಿಯ ಕಲಾವಿದರು ಪೂರ್ವರಂಗದಲ್ಲೇ ಬೆಳೆದು ಬಂದವರು. ಈಗ ಪರಿಸ್ಥಿತಿ ಬದಲಾಗಿದೆ. ಕಲಾವಿದನಿಗೆ ನಾಟ್ಯ ಸಂಬಂಧಿ ವಿಚಾರದಲ್ಲಿ ಮೇಳದಲ್ಲಿ ಕಲಿಯಲು ಏನಿಲ್ಲ? ಯಾಕೆ - ಎಲ್ಲರೂ ಕಲಿತೇ ಬಂದಿರುತ್ತಾರೆ!

          ಇಡೀ ರಾತ್ರಿಯ ಆಟಕ್ಕೆ ಪೂರ್ವರಂಗ ಬೇಕು. ಆದರೆ ಗಮನಿಸಿ, ರಾತ್ರಿ ಸುಮಾರು ಎಂಟೂವರೆ ಗಂಟೆಯಿಂದ ಹತ್ತು ಗಂಟೆ ತನಕ ಪೂರ್ವರಂಗ ಈಗಲೂ ಮೇಳಗಳಲ್ಲಿ ಪ್ರದರ್ಶಿತವಾಗುತ್ತಿವೆ. ಎಷ್ಟು ಮಂದಿ ಅದನ್ನು ಯಕ್ಷಗಾನವಾಗಿ ನೋಡುತ್ತಾರೆ! ಅದೊಂದು ಸಮಯ ಕೊಲ್ಲುವ ಪ್ರಕಾರವೆಂದು ಜನರಾಡಿಕೊಳ್ಳುವುದನ್ನು ಕೇಳಿದರೆ ವಿಷಾದವಾಗುತ್ತದೆ. ಎಷ್ಟು ಮಂದಿ ಕಲಾವಿದರಿಗೆ ಪೂರ್ವರಂಗ ಕುಣಿಯಲು ಗೊತ್ತು?  ಆದರೆ ಒಂದು ಸಮಾಧಾನ. ಕಟೀಲಿನಂತ ಕ್ಷೇತ್ರದಲ್ಲಿ ಪೂರ್ವರಂಗವನ್ನು ಉಳಿಸಲು, ಅದರ ವೈಭವವನ್ನು ಮತ್ತೊಮ್ಮೆ ಕಣ್ತುಂಬಿಕೊಳ್ಳುವ ಯತ್ನ ನಡೆಯುತ್ತಿರುವುದು ಶ್ಲಾಘನೀಯ.

ವೇಗ-ಮಿತಿ :

ಕಾಲಮಿತಿಯಲ್ಲಿ ವೇಗದ ಮಿತಿ ಕಷ್ಟ. ಸ್ವಲ್ಪ ರಾಜಿ ಮಾಡಿಕೊಳ್ಳಬೇಕಾಗುತ್ತದೆ. ಆರಂಭದಿಂದಲೇ ವೇಗ ಪಡೆದುಕೊಳ್ಳುವ ಪ್ರಸಂಗಕ್ಕೆ ಕಾಲದ ಮಿತಿಯಲ್ಲಿ ಮುಗಿಸುವ ಆತುರವಿರುತ್ತದೆ. ಪಾತ್ರಸ್ವಭಾವಕ್ಕೆ ಅನುಗುಣವಾದ ವೇಗವನ್ನು ಕಾಲಮಿತಿಯಲ್ಲೂ ತರುತ್ತಿದ್ದೇವೆ.

          ದೇವೇಂದ್ರನ ಒಡ್ಡೋಲಗದ ಎಲ್ಲಾ ಪದ್ಯಗಳನ್ನು ಪಾರಂಪರಿಕ ರೀತಿಯಲ್ಲಿ ಹಾಡಿ, ವೇಷಗಳನ್ನು ಕುಣಿಸಿದರೆ ಏನಿಲ್ಲವೆಂದರೂ ನಲವತ್ತರಿಂದ ನಲವತ್ತೈದು ನಿಮಿಷ ಬೇಕು. ಕಾಲಮಿತಿ ಪ್ರದರ್ಶನದ ಮಿತಿಯೇ ನಾಲ್ಕು, ನಾಲ್ಕೂವರೆ ಗಂಟೆ. ಅದರಲ್ಲಿ ಮುಕ್ಕಾಲು ಗಂಟೆ ದೇವೇಂದ್ರಾದಿಗಳಿಗೆ ಮೀಸಲಿಟ್ಟರೆ  ಪ್ರಸಂಗದ ಮುಂದಿನ ಓಟ ಹೇಗೆ? ಇಲ್ಲಿಯೂ ಎಡಿಟಿಂಗ್ ಮಾಡಿಕೊಂಡಿದ್ದೇವೆ.

          ಮಾಂಬಾಡಿಯವರಂತಹ ಮಹಾನ್ ಗುರುಗಳಲ್ಲಿ ಕಲಿತ ನಿಧಾನ ಲಯದ ಪದ್ಯಗಳನ್ನು ಹೇಳಲು ಇಷ್ಟ. ಕೆಲವೊಮ್ಮೆ ರಂಗದಲ್ಲಿ ಕಲಾವಿದರ ನಡೆಗೆ ಅನುಗುಣವಾಗಿ ಪದ್ಯಗಳನ್ನು ಲಂಬಿಸುವ, ಹೃಸ್ವಗೊಳಿಸುವ ಕ್ಷಣಗಳು ಬರುತ್ತವೆ. ಅಂತಹ ಹೊತ್ತಲ್ಲಿ ಪಾತ್ರಗಳು ವಿಜೃಂಭಿಸುತ್ತವೆ. ಆದರೆ ಪದ್ಯ....?!  ಇಲ್ಲಿ ಪ್ರದರ್ಶನದ ಒಟ್ಟಂದಕ್ಕೆ ಮಹತ್ವ ಕೊಡಬೇಕಾಗುತ್ತದೆ. 

          ಈಗೀಗ ಸಮಗ್ರ ಯಕ್ಷಗಾನವನ್ನು ನೋಡುವ ಪ್ರೇಕ್ಷಕರ ಸಂಖ್ಯೆ ಕಡಿಮೆಯಾಗಿದೆ. ರಂಗದ ಒಂದೊಂದು ಅಂಗವನ್ನು ಆಸ್ವಾದಿಸುವ ಯುವ ಪ್ರೇಕ್ಷಕರ ಸಂಖ್ಯೆ ಅಧಿಕ. ಉದಾ? ಪದ್ಯ, ಚೆಂಡೆ, ಮದ್ದಳೆ, ಧೀಂಗಿಣ,  ಸ್ತ್ರೀಪಾತ್ರ, ಹಾಸ್ಯ, ಬಣ್ಣದವೇಷ.. ಹೀಗೆ ಒಬ್ಬೊಬ್ಬರಿಗೆ ಒಂದೊಂದು ವಿಭಾಗಗಳು ಇಷ್ಟ. ಇಂತಹ ಕ್ರಮಗಳು ಮೊದಲೂ ಇದ್ದುವು. ಈಗ ತೀರಾ ಅಧಿಕವೆಂದು ಕಾಣುತ್ತದೆ.

          ಕಾಲಮಿತಿಯಿಂದ ಕಲಾವಿದರಿಗೆ ಅನುಕೂಲವಾಗಿದೆ. ಆಟ ಮುಗಿಸಿ ರಾತ್ರಿ ಮನೆ ಸೇರುವವರಿಗೆ ಪ್ರಯೋಜನ. ಮಧ್ಯ ರಾತ್ರಿ ಬಳಿಕ ಇನ್ನೊಂದು ಕಾರ್ಯಕ್ರಮಕ್ಕೆ ಒಪ್ಪಿಕೊಳ್ಳುವವರಿಗೂ ಸಂಪಾದನೆ ದೃಷ್ಟಿಯಿಂದ ಓಕೆ. ಆದರೆ ಎರಡೂ ಕಡೆಯ ಪ್ರದರ್ಶನಗಳಿಗೆ ನ್ಯಾಯ ಸಲ್ಲಿಸುವ ಬದ್ಧತೆಯನ್ನು ರೂಢಿಸಿಕೊಳ್ಳುವುದು ಅಗತ್ಯ. ಎರಡೆರಡು ಆಟಗಳಿದ್ದಾಗ ಒತ್ತಡವಾಗುವುದು ಸಹಜ. ಒತ್ತಡದ ಬದುಕು ನಿತ್ಯವಾದರೆ ಆರೋಗ್ಯಕ್ಕೂ ಮಾರಕ. ಆರೋಗ್ಯ ಭಾಗ್ಯವಾಗದಿದ್ದರೆ ಏನು ಪ್ರಯೋಜನ?

(ಚಿತ್ರಕೃಪೆ : ಮಧುಸೂದನ ಅಲೆವೂರಾಯ)