Monday, April 20, 2026
ʼಅಡ್ಕ ವಚೋಹಾಸʼ - ʼಅಪರಂಜಿʼ
ಯಕ್ಷಗಾನದ ಹಿರಿಯ ವೇಷಧಾರಿ, ಅರ್ಥದಾರಿ ಶ್ರೀ ಅಡ್ಕ ಗೋಪಾಲಕೃಷ್ಣ ಭಟ್ ಇವರ ಅಭಿನಂದನಾ ಗ್ರಂಥ ʼಅಡ್ಕ ವಚೋಹಾಸʼವು 13-5-2016ರಂದು ಪ್ರಕಾಶಗೊಂಡಿತು. ಇವರ ಅಳಿಯ ಪೆರಡಂಜಿ ಗೋಪಾಲಕೃಷ್ಣ ಭಟ್ಟರ ಸ್ಮೃತಿ ಕೃತಿ ʼಅಪರಂಜಿʼಯು 19-4-2026ರಂದು ಬೆಳಕು ಕಂಡಿತು. ಎರಡು ಕೃತಿಗಳ ಸಂಪಾದಕನಾಗಿ ತೊಡಗಿಸಿಕೊಳ್ಳುವ ಅವಕಾಶವನ್ನು ಕೃತಿಗಳ ಪ್ರಕಾಶನ ಸಂಸ್ಥೆ ʼಯಕ್ಷತೂಣೀರ ಸಂಪ್ರತಿಷ್ಠಾನ (ರಿ) ಕೋಟೂರು-ಮುಳಿಯಾರುʼ ಒದಗಿಸಿದ್ದರು. ಎರಡೂ ಕೃತಿಗಳನ್ನು ಮೈತುಂಬಿಸಿದ ಯಕ್ಷಗಾನದ ಸಹೃದಯಿ ಹಿರಿಯರು, ಅಡ್ಕ ಹಾಗೂ ಪೆರಡಂಜಿ ಕುಟುಂಬಗಳ ಬಂಧುಗಳಿಗೆ ಕೃತಜ್ಞತೆಗಳು.
ಅಭಿನಂದನೆ ಪಡೆದ ಖುಷಿ.
ʼಯಕ್ಷತೂಣೀರ ಸಂಪ್ರತಿಷ್ಠಾನ (ರಿ) ಕೋಟೂರು-ಮುಳಿಯಾರುʼ ಇವರ ಪ್ರಕಾಶನದಲ್ಲಿ ಪೆರಡಂಜಿ ಗೋಪಾಲಕೃಷ್ಣ ಭಟ್ಟರ ಸ್ಮೃತಿ-ಕೃತಿ ʼಅಪರಂಜಿʼಯ ಸಂಪಾದಕನಾಗುವ ಅವಕಾಶ ಪ್ರಾಪ್ತವಾಗಿತ್ತು. ಅನ್ಯಾನ್ಯ ಕಾರಣಗಳಿಂದ ಪ್ರಕಟಣೆಯ ಕಾರ್ಯಕ್ಕೆ ಸ್ವಲ್ಪ ಹೆಚ್ಚು ಕಾಲಾವಕಾಶ ಬೇಕಾಗಿತ್ತು. 19-4-2026ರಂದು ಕೃತಿ ಅನಾವರಣಗೊಂಡಿತು. ಈ ಸಂದರ್ಭದಲ್ಲಿ ಸಂಪಾದಕನ ನೆಲೆಯಲ್ಲಿ ಅಭಿನಂದನೆ ಪಡೆದ ಖುಷಿ. ಪರಮಪೂಜ್ಯ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರಿಂದ ಅನುಗ್ರಹ ಮಂತ್ರಾಕ್ಷತೆ ಪಡೆದ ಧನ್ಯತೆ. (ಚಿತ್ರಗಳು : ಶ್ರೀ ಗೋವಿಂದ ಬಳ್ಳಮೂಲೆ)
ಚಿತ್ರಕಲೆಯ ಸೊಗಸುಗಾರಿಕೆ.
ದಿನಾಂಕ 19-4-2026ರಂದು ʼಯಕ್ಷತೂಣೀರ ಸಂಪ್ರತಿಷ್ಠಾನ (ರಿ) ಕೋಟೂರು-ಮುಳಿಯಾರುʼ ಇವರ ದಶಮಾನ ಸಂಭ್ರಮದ ಸಮಾರಂಭ. ಈ ಸಂದರ್ಭದಲ್ಲಿ ಕು. ಶ್ರೀಲಕ್ಷ್ಮೀ ಕುಳೂರು ಇವರ ಚಿತ್ರಕಲೆಯ ಸೊಗಸುಗಾರಿಕೆ. ವೇದಿಕೆಯಲ್ಲಿ ಕು.ಸಾಧ್ವಿಕೃಷ್ಣ ವಯನಾಡು ಹಾಗೂ ಕು.ಅನ್ವಿತಾ ಪೆರಡಂಜಿ ಇವರ ಭರತನಾಟ್ಯದ ಹಿನ್ನೆಲೆಯ ಸಾಹಿತ್ಯಕ್ಕೆ ಅನುಸಾರವಾಗಿ ದಾರದ ಮೂಲಕ ಮೂಡಿಸಿದ ಚಿತ್ರ. ಹಿರಿಯ ಕಲಾವಿದ ಶ್ರೀ ನೀರ್ನಳ್ಳಿ ಗಣಪತಿ ಅವರ ಶಿಷ್ಯೆ. ಶ್ರೀಲಕ್ಷ್ಮೀಯವರ ಕಲೆಗೆ ಸಭಿಕರಿಂದ ಪ್ರಶಂಸೆಗಳ ಮಹಾಪೂರ.. ಅಭಿನಂದನೆಗಳು ಶ್ರೀಲಕ್ಷ್ಮೀ.
(ಚಿತ್ರ : ಶ್ರೀ ಗೋವಿಂದ
ಬಳ್ಳಮೂಲೆ)
Monday, March 30, 2026
‘ಹಸ್ತಕಾಕೃತಿಯ ಸ್ಮೃತಿ-ಕೃತಿಗಳು ಪ್ರಕಟವಾಗಬೇಕು' : ಕಲಾವಿದ, ಲೇಖಕ : ನಾ. ಕಾರಂತ ಪೆರಾಜೆ
“ಪುಂಡಿಕಾಯಿ ಕೃಷ್ಣ ಭಟ್ಟರು ಹಳೆ ತಲೆಮಾರಿನ ಅಪ್ಪಟ ಮದ್ಲೆಗಾರ. ಪ್ರಾತಃಸ್ಮರಣೀಯ ಕುದ್ರೆಕೂಡ್ಲು ರಾಮ ಭಟ್ಟರ ಶಿಷ್ಯರಾಗಿ, ಸಂಪ್ರದಾಯದ ಚೌಕಟ್ಟನ್ನು ವೃತ್ತಿಯಲ್ಲಿ ಕಾಣಿಸಿದವರು. ಮದ್ದಳೆಯಲ್ಲಿ ಅವರದು ಶುದ್ಧ ಪಾಠ. ಯಾವುದೇ ಆರ್ಥಿಕ ಅಪೇಕ್ಷೆಯಿಲ್ಲದೆ ಶಿಷ್ಯರನ್ನು ರೂಪಿಸಿದ ಗುರು. ಮುಮ್ಮೇಳ ಹಾಗೂ ಹಿಮ್ಮೇಳದ ಅಪಸವ್ಯಗಳನ್ನು ಸಾತ್ವಿಕವಾಗಿ ಖಂಡಿಸುತ್ತಿದ್ದರು. ವಿವಿಧ ಮೇಳಗಳಲ್ಲಿ ನಾಲ್ಕು ದಶಕ ವ್ಯವಸಾಯ ಮಾಡಿದ್ದರು. ವೈಯಕ್ತಿವಾಗಿ ಬಡತನವಿದ್ದರೂ, ಯಕ್ಷಗಾನವನ್ನು ಶ್ರೀಮಂತಗೊಳಿಸಿದ ಕಲಾವಿದ.” ಎಂದು ಕಲಾವಿದ, ಲೇಖಕ ಶ್ರೀ ನಾ. ಕಾರಂತ ಪೆರಾಜೆ ಹೇಳಿದರು.
ಅವರು ಕಾಸರಗೋಡು ಜಿಲ್ಲೆಯ ಕುಂಟಾರು ದೇವಳದ ವಠಾರದಲ್ಲಿ (29-3-2026) ಕುತ್ಯಾಳ ಶ್ರೀ ಗೋಪಾಲಕೃಷ್ಣ ಯಕ್ಷಗಾನ ತರಬೇತಿ ಕೇಂದ್ರ, ಕೂಡ್ಲು ಇದರ 'ರಜತ ರಂಗ'ದ ಹನ್ನೊಂದನೇ ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದ ಕೀರ್ತಿಶೇಷ ಪುಂಡಿಕಾಯಿ ಕೃಷ್ಣಭಟ್ಟರ ಸಂಸ್ಮರಣೆಯನ್ನು ಮಾಡುತ್ತಾ, “ಅಭಿನಂದನ ಹಾಗೂ ಸ್ಮೃತಿ ಕೃತಿಗಳು ಯಕ್ಷಪ್ರಿಯರಿಗೆ ಒದಗುತ್ತಿಲ್ಲ. ಹಾಗಾಗಿ ಕೀರ್ತಿಶೇಷ ಕಲಾವಿದರ ಸಂಕ್ಷಿಪ್ತ ಪರಿಚಯವುಳ್ಳ ಹಸ್ತಕಾಕೃತಿಯ ಪುಸ್ತಿಕೆಗಳು ಪ್ರಕಟವಾಗಬೇಕು” ಎಂದರು
ಸಮಾರಂಭದಲ್ಲಿ ಉಪಸ್ಥಿತರಿದ್ದ ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಇವರು ಮಾತನಾಡಿ, “ವಿವಿಧ ರಂಗುರಂಗಿನ ಮಾಧ್ಯಮಗಳ ಭರಾಟೆಯಲ್ಲಿ ಕನ್ನಡ ಬಾಷೆಯ ಉಳಿವಿಗೆ ಯಕ್ಷಗಾನದ ಕೊಡುಗೆ ಗುರುತರ” ಎಂದರು. ವೇದಿಕೆಯಲ್ಲಿ ಬ್ರಹ್ಮಶ್ರೀ ವಾಸುದೇವ ತಂತ್ರಿ ಕುಂಟಾರು, ಶ್ರೀ ಪದ್ಮನಾಭ ಭಟ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಪುಂಡಿಕಾಯಿ ಕೃಷ್ಣ ಭಟ್ಟರ ಸುಪುತ್ರ ಶ್ರೀ ರಾಜೇಂದ್ರ ಭಟ್ಟರನ್ನು ಗೌರವಿಸಲಾಯಿತು. ರಜತ ರಂಗದ ಕಾರ್ಯದರ್ಶಿ ಶ್ರೀ ಸತ್ಯನಾರಾಯಣ ತಂತ್ರಿಯವರು ಪ್ರಸ್ತಾವನೆಯೊಂದಿಗೆ ಕಾರ್ಯಕ್ರಮವನ್ನು ನಿರ್ವಹಿಸಿದರು.
ಆರಂಭದಲ್ಲಿ ಕು. ಸಂಹಿತಾಲಕ್ಷ್ಮೀ ಇವರ ಪ್ರಾರ್ಥನೆಯಿಂದ ಆರಂಭಗೊಂಡ ಕಾರ್ಯಕ್ರಮದಲ್ಲಿ ಯಕ್ಷಗಾನ ತರಬೇತಿ ಕೇಂದ್ರದ ಶ್ರೀ ಸುರೇಶ್ ಮಣಿಯಾಣಿ ಸ್ವಾಗತಿಸಿದರು. ಅಧ್ಯಕ್ಷ ಶ್ರೀ ಗೋಪಾಲಕೃಷ್ಣ ಬಲ್ಯಾಯರು ವಂದಿಸಿದರು. ಒಟ್ಟೂ ಕಾರ್ಯಕ್ರಮವನ್ನು ಶ್ರೀ ಸತ್ಯನಾರಾಯಣ ತಂತ್ರಿಯವರು ಪ್ರಾಯೋಜಿಸಿದ್ದರು.
ಕಾರ್ಯಕ್ರಮದ ಅಂಗವಾಗಿ 'ಸುಧನ್ವ ಮೋಕ್ಷ' ಪ್ರಸಂಗದ ತಾಳಮದ್ದಳೆ ಸಂಪನ್ನಗೊಂಡಿತು. ಕಲಾವಿದರಾಗಿ ಶ್ರೀಗಳಾದ ರಾಮಪ್ರಸಾದ್ ಮಯ್ಯ ಕೂಡ್ಲು (ಭಾಗವತರು), ಲಕ್ಷ್ಮೀಶ ಬೆಂಗ್ರೋಡಿ (ಮದ್ದಳೆ), ರಾಜೇಂದ್ರ ಭಟ್ ಪುಂಡಿಕಾಯಿ (ಚೆಂಡೆ); ಜಬ್ಬಾರ್ ಸಮೋ (ಅರ್ಜುನ), ನಾ. ಕಾರಂತ ಪೆರಾಜೆ (ಸುಧನ್ವ), ಗೋಪಾಲಕೃಷ್ಣ ನಾಯಕ್ ಸೂರಂಬೈಲು (ಕೃಷ್ಣ) - ಭಾಗವಹಿಸಿದ್ದರು.
// ಪ್ರಕಟಣೆಯ ಕೃಪೆಗಾಗಿ //
Monday, November 17, 2025
'ರಂಗದುಡಿಮೆಗೆ ಸೀಮಿತವಾದ ಕಲಾಯಾನ'
“ಯಕ್ಷಗಾನ ಕಲಾವಿದರ ಸಾಧನೆಗಳು ಅಕಾಡೆಮಿಕ್ ನೆಲೆಯಲ್ಲಿ ದಾಖಲಾದುದು ತೀರಾ ಕಡಿಮೆ. ಒಬ್ಬೊಬ್ಬ ಕಲಾವಿದನಲ್ಲೂ ಅಪ್ರತಿಮವಾದ ಕಲಾ ಸಂಪನ್ಮೂಲಗಳಿವೆ. ಅವೆಲ್ಲಾ ರಂಗ ದುಡಿಮೆಗೆ ಅಥವಾ ಸಂಮಾನದ ಅಭಿನಂದನಾ ಮಾತುಗಳಿಗೆ ಸೀಮಿತವಾಗಿದೆ. ಕಲಾವಿದನ ಕಾಲಾ ನಂತರ ಆತನ ಸಾಧನೆಗಳು ಮರೆವಿಗೆ ಜಾರುತ್ತದೆ. ಈ ಹಿನ್ನೆಲೆಯಲ್ಲಿ ಕನಿಷ್ಠ ದಾಖಲಾತಿಗಳು ನಡೆಯಬೇಕು. ಯಕ್ಷಗಾನ ಕೇಂದ್ರಗಳು, ಅಧ್ಯಯನ ಸಂಸ್ಥೆಗಳು, ಯಕ್ಷಗಾನದ ಸಕ್ರಿಯ ಹವ್ಯಾಸಿ ಸಂಘಗಳು ತಮ್ಮ ಮಿತಿಯಲ್ಲಿ ಈ ಕಾರ್ಯವನ್ನು ಮಾಡಿದರೆ ಮುಂದಿನ ತಲೆಮಾರಿಗೆ ಕಲಾವಿದನ ಸಾಧನೆಯನ್ನು ಪರಿಚಯಿಸಿದಂತಾಗುತ್ತದೆ. ಎಂದು ಕಲಾವಿದ, ಲೇಖಕ ನಾ. ಕಾರಂತ ಪೆರಾಜೆ ಹೇಳಿದರು.
ಅವರು ಮಧೂರು ಕ್ಷೇತ್ರದಲ್ಲಿ ಜರುಗಿದ ಕಾರ್ಯಕ್ರಮವೊಂದರಲ್ಲಿ ಹಿರಿಯ ಕಲಾವಿದ ಕೀರ್ತಿಶೇಷ ಮಧೂರು ಗಣಪತಿ ರಾವ್ ಅವರನ್ನು ಕಲಾ ಯಾನವನ್ನು ನೆನಪಿಸುತ್ತಾ,“ಯಕ್ಷಗಾನ ಸಂಘಗಳ ಪ್ರದರ್ಶನಗಳು ವೃತ್ತಿ ರಂಗಭೂಮಿಯ ನೆರಳಾಗಬಾರದು. ಹಿರಿಯರನ್ನು ನೆನಪಿಸುವ ಕಾರ್ಯ ಸ್ತುತ್ಯ” ಎಂದರು. ಕುತ್ಯಾಳ ಡ್ಲು ಶ್ರೀ ಗೋಪಾಲಕೃಷ್ಣ ಯಕ್ಷಗಾನ ತರಬೇತಿ ಕೇಂದ್ರವು ತನ್ನ 'ರಜತರಂಗ' ಸಂಭ್ರಮದ ಪ್ರಯುಕ್ತ 'ಹಿರಿಯರ ನೆನಪು' ಸರಣಿ ಕಾರ್ಯಕ್ರಮವನ್ನು (16-11-2025) ಆಯೋಜಿಸಿತ್ತು.
ಶ್ರೀ ಎಡನೀರು ಮಠದ ಸತೀಶ್ ಎಡನೀರು ದೀಪಜ್ವಲನದ ಮೂಲಕ ಸಮಾರಂಭವನ್ನು ಉದ್ಘಾಟಿಸಿದರು. ಹಿರಿಯ ಜ್ಯೋತಿಷಿ ನಾರಾಯಣ ರಂಗಾಭಟ್ಟ, ಮಧೂರು ಕ್ಷೇತ್ರದ ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಪ್ರಸಾದ್, ತರಬೇತಿ ಕೇಂದ್ರದ ಅಧ್ಯಕ್ಷ ಚಂದ್ರಮೋಹನ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಧೂರು ಗಣಪತಿ ರಾವ್ ಅವರ ಚಿರಂಜೀವಿ ಶ್ರೀ ಕೃಷ್ಣ ರಾವ್ ಮಧೂರು ಇವರನ್ನು ಭಾಗವತ ತಲ್ಪಣಾಜೆ ವೆಂಕಟ್ರಮಣ ಭಟ್ ಅಭಿನಂದಿಸಿದರು. ಕಲಾವಿದ ಪೆರ್ಮುದೆ ಜಯಪ್ರಕಾಶ್ ಶೆಟ್ಟಿಯವರು ಶುಭ ಹಾರೈಸಿದರು.
ಗೋಪಾಲಕೃಷ್ಣ ಕೆ. ಇವರು ಸ್ವಾಗತಿಸಿ, ನಿರ್ವಹಿಸಿದರು. ಕೃಷ್ಣಮೂರ್ತಿ ಅಡಿಗ ವಂದಿಸಿದರು. ಸುರೇಶ್ ಮಣಿಯಾಣಿ, ವಿಘ್ನೇಶ್ ಕಾರಂತ, ಸುಜನ್, ಆಕಾಶ್, ಅರ್ಜುನ್ ಸಹಕರಿಸಿದರು.
ಕೊನೆಯಲ್ಲಿ 'ಕರ್ಣ ಭೇದನ' ಪ್ರಸಂಗದ ತಾಳಮದ್ದಳೆ ಸಂಪನ್ನಗೊಂಡಿತು. ಕಲಾವಿದರಾಗಿ ತಲ್ಪಣಾಜೆ ವೆಂಕಟ್ರಮಣ ಭಟ್ (ಭಾಗವತರು), ಲಕ್ಷ್ಮೀಶ ಬೆಂಗ್ರೋಡಿ (ಮದ್ದಳೆ), ಪವನ್ ಸ್ವರ್ಗ (ಚೆಂಡೆ), ಅರ್ಪಿತ್ ಶೆಟ್ಟಿ ಕೂಡ್ಲು (ಚಕ್ರತಾಳ); ನಾ. ಕಾರಂತ ಪೆರಾಜೆ, ಸದಾಶಿವ ಆಳ್ವ ತಲಪಾಡಿ, ಚಂದ್ರಮೋಹನ್ ಕೂಡ್ಲು, ಕೃಷ್ಣಮೂರ್ತಿ ಅಡಿಗ (ಅರ್ಥದಾರಿಗಳು) ಸಹಕರಿಸಿದರು. ಕಾರ್ಯಕ್ರಮಕ್ಕೆ ಯಕ್ಷಕಲಾಕೌಸ್ತುಭ ಮಧೂರು ಇವರ ಸಹಕಾರವಿತ್ತು.
Monday, July 28, 2025
ಯಕ್ಷಶಾಂತಲೆಯ ಅಂತರಂಗ (ನಿರೂಪಣೆ : ನಾ. ಕಾರಂತ ಪೆರಾಜೆ)
{ಪಾತಾಳ ವೆಂಕಟ್ರಮಣ ಭಟ್ – (1933-2025) ಖ್ಯಾತ ಸ್ತ್ರೀಪಾತ್ರಧಾರಿ. ಕಲಾಸಂಶೋಧಕ. 19-7-2025ರಂದು ವಿಧಿವಶರಾದರು. ಅವರ ಕುರಿತಾಗಿ 2008ರಲ್ಲಿ ಉದಯವಾಣಿಯಲ್ಲಿ ಪ್ರಕಟಗೊಂಡ ಈ ಲೇಖನದ ಮರುಓದು ಪಾತಾಳರಿಗೆ ನುಡಿ ನಮನ. ಇಲ್ಲಿರುವುದು ಅವರದೇ ಮಾತುಗಳು.}
ಯಕ್ಷಗಾನ ನನಗೆ ಬಾಲ್ಯದ ನಂಟು. ಮುಂದದು ಬದುಕಿಗಂಟಿತು. ಬಿಟ್ಟೆನೆಂದರೂ ಬಿಡದೆ ಹಿಂಬಾಲಿಸಿತು. ಬಣ್ಣದ ಲೋಕದ ಮೋಹಕತೆಗೆ ಮಾರುಹೋಗಿ, ಸೇರಿದ್ದು ಮೇಳದ ಅಡುಗೆ ಮನೆಗೆ! ಹಗಲು ಬಾಣಸಿಗ, ರಾತ್ರಿ ಯಕ್ಷಗಾನ ಪ್ರೇಕ್ಷಕ.
ಮೈಕಟ್ಟು, ಸ್ವರ ಹೆಣ್ಣು ಪಾತ್ರಕ್ಕೆ ಲಾಯಕ್ಕು - ಮೇಳದ
ಕಲಾವಿದರ ಛೇಡನೆ(?)ಯಿಂದ ಉಬ್ಬಿ ಉದ್ದಾಗಿದ್ದೆ. ಸೌಟು ತಿರುಗಿಸುವಾಗ, ಒರೆಕಲ್ಲು ತಿರುಗುವಾಗ
ಮನದ ಮೂಲೆಯಲ್ಲಿ ನನ್ನ ಕಲ್ಪನೆಯ ಸ್ತ್ರೀ ಪಾತ್ರಗಳೂ ಕುಣಿಯುತ್ತಿದ್ದುವು! ನಿತ್ಯ ಆಟ
ನೋಡಿದ್ದರಿಂದ ಸಂಭಾಷಣೆಗಳು ನೆನಪಿನಂಗಳಲ್ಲಿ ಗಿರಕಿ ಹಾಕುತ್ತಿದ್ದುವು.
ಅಂದು 'ವಿಶ್ವಾಮಿತ್ರ ಮೇನಕೆ' ಕಥಾನಕ. ಹಿರಿಯ
ಪಾತ್ರಧಾರಿಯೊಬ್ಬರು ಮೇಳಕ್ಕೆ ಕೈಕೊಟ್ಟ ದಿನ. ಅಂದೇ ಕಲಾ ದೇವಿ ನನ್ನ ಕೈಹಿಡಿದಳು. ಮೇನಕೆಯಾಗಿ
ರಂಗವೇರಿದೆ. ನೋಡಿ ಕಲಿತಷ್ಟು ಕೈಕಾಲು ಕುಣಿಸಿದೆ, ನೆನಪಿಗೆ ಬಂದಷ್ಟು ಮಾತನಾಡಿದೆ. ಪ್ರೇಕ್ಷಕರ
ಪ್ರಶಂಸೆ, ಹಿರಿಯ ಕಲಾವಿದರ ಪ್ರೋತ್ಸಾಹ-ಹಾರೈಕೆಗಳಿಂದ ಕಲಾವಿದನಾದೆ!
ಹಗಲು ತರಬೇತಿ, ಅಧ್ಯಯನ. ಕಲಿತ ನಾಟ್ಯ, ಅರ್ಥಗಾರಿಕೆ
ರಂಗಸ್ಥಳದಲ್ಲಿ ಪ್ರಯೋಗ. ಮೇನಕೆಯಲ್ಲಿದ್ದ ಆತಂಕ ದಕ್ಷಾಧ್ವರ ಪ್ರಸಂಗದ 'ದಾಕ್ಷಾಯಿಣಿ',
ಬ್ರಹ್ಮಕಪಾಲದ 'ಶಾರದೆ' ಪಾತ್ರಗಳಲ್ಲಿ ಉಂಟಾಗಲಿಲ್ಲ.
ಯಾವ ಕ್ಷಣ ನಾನು ರಂಗದಲ್ಲಿ ಹೆಣ್ಣಾದೆನೋ, ಅವಕಾಶಗಳ
ಬಾಗಿಲುಗಳು ತೆರೆಯಿತು. ಕಾಂಚನ ಮೇಳದಿಂದ ಸೌಕೂರು ಮೇಳಕ್ಕೆ ಪಯಣ. ಪಾತ್ರ ನಿರ್ವಹಣೆಗೆ
ಪೂರಕವಾಗುವಂತಹ ನೃತ್ಯ, ಭರತನಾಟ್ಯಗಳನ್ನು ಕಲಿತೆ. ತೆಂಕು-ಬಡಗಿನುದ್ದಕ್ಕೂ ವ್ಯವಸಾಯ ಮಾಡಿದೆ.
ಪರಿಣಾಮ, ನನ್ನ ಸ್ತ್ರೀಪಾತ್ರವನ್ನು ನೋಡಿದ ಹೆಣ್ಮಕ್ಕಳೇ ನಾಚುತ್ತಿದ್ದರು!
ಮೂಲ್ಕಿ ಮೇಳದಿಂದ ವೃತ್ತಿ ಬದುಕಿಗೆ ಹೊಸ ತಿರುವು. ನನಗೆ
'ತಾರಾಮೌಲ್ಯ' ತಂದ ಮೇಳ. ಕಾರಣರಾದ ಪೆರುವಡಿ ನಾರಾಯಣ ಹಾಸ್ಯಗಾರರನ್ನು ಮರೆಯಲುಂಟೇ? ಮುಂದೆ
ಸುರತ್ಕಲ್ ಮೇಳ. ದೊಡ್ಡ ಸಾಮಗರೆಂದೇ ಖ್ಯಾತರಾದ ಶಂಕರನಾರಾಯಣ ಸಾಮಗರೊಂದಿಗೆ ವೇಷ ಮಾಡುವ ಆ ಕ್ಷಣ
ಇದೆಯಲ್ಲಾ. ಅದು ಬದುಕಿನ ದೊಡ್ಡ ಅವಕಾಶ. ತುಳುಪ್ರಸಂಗಗಳು ನನಗೆ ಸವಾಲಾದರೂ, ಸಾಮಗರ
ಜತೆಯಲ್ಲಿದ್ದಾಗ ಕಲಿಕೆ. ಇದರಿಂದಾಗಿ ಶುದ್ಧ ತುಳುವನ್ನು ಕಲಿಯುವಂತಾಯ್ತು. ಧರ್ಮಸ್ಥಳ ಮೇಳದ
ಸೇರ್ಪಡೆಯ ನಂತರ ನಿವೃತ್ತಿ ತನಕವೂ ಅದೇ ಮೇಳದಲ್ಲಿ ವ್ಯವಸಾಯ ಮಾಡಿದೆ.
ಮೇಳಕ್ಕೆ ಸೇರಿದ ಸಮಯದಲ್ಲಿ ರಂಗದಲ್ಲಿ ಸ್ತ್ರೀ ಪಾತ್ರಗಳು
ಸಾಮಾನ್ಯ ಹೆಂಗುಸರಂತೆ ನಿರ್ವಹಿಸಲ್ಪಡುತ್ತಿತ್ತು. ಸೀರೆ, ತಲೆಗೆ ಹೂದಂಡೆ. ಮೇನಕೆ, ಮೋಹಿನಿ
ಪಾತ್ರಕ್ಕಾಗುವಾಗ 'ಅರ್ಧಸಾರಿ' (ಹಾಫ್ಸಾರಿ). ಶಿರೋಭೂಷಣ ಎಂಬುದಿಲ್ಲ. ಗರತಿ ಪಾತ್ರಕ್ಕೆ
ಸೆರಗನ್ನು ಶರೀರದ ಎಲ್ಲಾ ಅಂಗ ಮುಚ್ಚುವಂತೆ ಸೀರೆ ಉಟ್ಟರಾಯಿತು. ಮುಖ್ಯ ಸ್ತ್ರೀಪಾತ್ರಕ್ಕೆ
ಮೇಳದಿಂದ ಬೆಳ್ಳಿಯ ಪಟ್ಟಿ ನೀಡಲಾಗುತ್ತಿತ್ತು. ಕೊರಳಲ್ಲಿ ಮೂರ್ನಾಲ್ಕು ಮಣಿಹಾರ. ಕೈಬಳೆ, ಪುಂಡುವೇಷದ ಕೈಕಟ್ಟು. ರಾಣಿ ಪಾತ್ರಕ್ಕೆ
ತುರಾಯಿ. ಸ್ತ್ರೀಪಾತ್ರಕ್ಕೇ ಪ್ರತ್ಯೇಕವಾದ ವೇಷಭೂಷಗಳು ಇರಲಿಲ್ಲ.
ಗೌಡಸಾರಸ್ವತ ಅಭಿಮಾನಿಯೊಬ್ಬರು ಹದಿನೆಂಟು ಮೊಳದ ಸೀರೆಯನ್ನು
ಕಚ್ಚೆ ಹಾಕಲು ನನಗೆ ಬಹುಮಾನವಾಗಿ ನೀಡಿದ್ದರು. ಅಂದಿನಿಂದ ನಾನು ಕಚ್ಚೆ ಹಾಕಿಯೇ ಸ್ತ್ರೀವೇಷ
ಮಾಡಲು ಆರಂಭಿಸಿದ್ದೆ.
1958, ಶಿವರಾಮ ಕಾರಂತರು ಯಕ್ಷಗಾನದಲ್ಲಿ ಹೊಸ ಕ್ರಾಂತಿಯನ್ನು ಮಾಡಿದ ಕಾಲಘಟ್ಟ. ಅವರ ನೇತೃತ್ವದ
ಬ್ಯಾಲೆ ಸುದ್ದಿ ಮಾಡಿತ್ತು. ಕಾರಂತರ 'ಯಕ್ಷಗಾನ' ಕೃತಿ ನನ್ನನ್ನು ಆಕರ್ಶಿಸಿತು. ಯಕ್ಷಗಾನ ಸ್ತ್ರೀ ಪಾತ್ರದ ಕುರಿತು ನಾನ್ಯಾಕೆ ಬದಲಾವಣೆ
ತರಬಾರದು?
ಸ್ತ್ರೀವೇಷಕ್ಕೆ ಒಪ್ಪುವ ಆಭರಣಗಳನ್ನು ಹೇಗೆ ತಯಾರಿಸುವುದು?
ಹಳೆಯ ಮಾದರಿಗಳು ಎಲ್ಲಿವೆ? ಆಗ 'ಪರಂಪರೆ' - ಯಕ್ಷಗಾನ ವಲಯದಲ್ಲಿ ಹೆಚ್ಚು ಸದ್ದು
ಮಾಡುತ್ತಿತ್ತು. ಹಾಗಿದ್ದರೆ ಹಿಂದೊಂದು ಪರಂಪರೆ ಉಂಟೆಂದಾಯಿತು. ಅದು ಯಾವುದು? ಯಾವುದೇ
ಆಕ್ಷೇಪಗಳು ಬಾರದಂತೆ ಇರುವ ಪರಂಪರೆಯ ವೇಷಭೂಷಗಳನ್ನು ತಯಾರಿಸಿದರೆ ಹೇಗೆ?
ಅದೇ ಹೊತ್ತಿಗೆ ಡಿ.ವಿ.ಜಿ.ಯವರ ಅಂತಃಪುರ ಗೀತೆಗೆ ಮಾರುಹೋದೆ. ಒಂದೊಂದು ಪಾತ್ರಗಳನ್ನು ವಿಭಿನ್ನವಾಗಿ
ನಿರ್ವಹಿಸಬಹುದಾದ ಹೊಸ ಚಿತ್ರಣಗಳು ಹೊಳೆದುವು. ನನ್ನ ನಿರೀಕ್ಷೆಯ ಶಿಲ್ಪಗಳು ಮನದಲ್ಲಿ ಮೂರ್ತರೂಪ
ಪಡೆಯಲಾರಂಭಿಸಿದುವು. ಅಂತಃಪುರ ಗೀತೆಯಲ್ಲಿನ ಶಿಲ್ಪಗಳ ವಿವರಗಳು ಬೇಲೂರಿನ ಶಿಲಾಬಾಲಿಕೆಗಳ
ನೆನಪನ್ನು ತಂದಿಟ್ಟಿತು. ಶಿಲಾಬಾಲಿಕೆಯರ ಅಭ್ಯಾಸಕ್ಕಾಗಿ ಬೇಲೂರಿಗೆ ಹೋದೆ.
ಹಿರಿಯ ಕಲಾವಿದ ಲಕ್ಷ್ಮಣ ಆಚಾರ್ರ ಮನೆಯಲ್ಲೇ ವಾಸ್ತವ್ಯ.
ಶಿಲ್ಪಗಳ ಅಧ್ಯಯನ. ಕೆಲವು ಶಿಲ್ಪಗಳಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಎತ್ತರದ ಕಿರೀಟ, ದೊಡ್ಡ ಡಾಬು,
ತೋಳ್ಕಟ್ಟು...ಹೊಂದಿದ್ದುವು. ಎಲ್ಲವೂ ಆಳಂಗದ ಅಳತೆಗಿಂತ ದೊಡ್ಡದಾಗಿದ್ದುವು.
ಹೀಗೆ ಅಧ್ಯಯನ ಮಾಡುತ್ತಿದ್ದಾಗ ಶಿಲ್ಪದ ಅಂಗಭಂಗಿಗಳು,
ಬಾಗುಗಳು, ಕಣ್ಣಿನ ನೋಟಗಳನ್ನು ಜೊತೆಜೊತೆಗೆ ಕಲಿತೆ. ರಂಗದಲ್ಲಿ ನಾನೂ ಅವುಗಳಂತೆ ಯಾಕಿರಬಾರದು?
ಡಾಬು, ತೋಳುಕಟ್ಟು, ಕೊರಳ ಆಭರಣಗಳು, ಶಿರೋಭೂಷಣಗಳ ಆಯ ಅಳತೆಯನ್ನು
ತಂದು ಬ್ರಹ್ಮಾವರದ ಸುಬ್ಬಣ್ಣ ಭಟ್ಟರ ಮುಂದಿಟ್ಟು, ನನಗೂ ಇಂತಹುದೇ ಮಾಡಿಕೊಡುವಂತೆ
ಬಿನ್ನವಿಸಿದೆ. ಅಂದಿನ ಪೂಜ್ಯ ಖಾವಂದರು ವೆಚ್ಚವನ್ನು ಭರಿಸಿದ್ದರು.
ಧರ್ಮಸ್ಥಳ ಮೇಳ ಸೇರುವಾಗ 'ನನ್ನ ವೇಷ ಹೀಗೆಯೇ ಇರಬೇಕು' ಎಂಬ
ನಿರ್ಣಯಕ್ಕೆ ಬಂದಿದ್ದೆ. ಇದಕ್ಕೆ ಪೂರಕವಾಗಿ ವೇಷಭೂಷಗಳು ಸೊಗಸನ್ನು ತಂದುವು. ಶಿಲ್ಪಗಳಲ್ಲಿರುವ
ಬಾಗು, ಬಳಕುಗಳನ್ನು ಯಥಾಸಾಧ್ಯ ಅನುಸರಿಸಿದೆ. ರಂಗಕ್ಕದು ಹೊಸದಾದುದರಿಂದ ಕಲಾವಿದರ ಗೇಲಿಗೂ
ಒಳಗಾದೆ!
ವಿಟ್ಲದಲ್ಲಿ ಬಾಬುಮಾಸ್ತರ್ ಎಂಬ ಕಲಾವಿದರಿದ್ದರು. ಅವರು ಪರದೆ
ವಿನ್ಯಾಸದಲ್ಲಿ ಖ್ಯಾತರು. ವರ್ಣಸಂಯೋಜನೆಯಲ್ಲಿ ಎತ್ತಿದ ಕೈ. ನನಗೆ ಕಲಿಸುವಂತೆ ದುಂಬಾಲುಬಿದ್ದೆ. ಅವರಿಂದ ಕಲಿತ
ವರ್ಣಗಾರಿಕೆ ನನ್ನೆಲ್ಲಾ ಕಲ್ಪನೆಗಳ ಸಾಕಾರಕ್ಕೆ
ಪುಷ್ಟಿನೀಡಿದುವು. ವಿಭಿನ್ನ ಸ್ವಭಾವದ ಪಾತ್ರಗಳಿಗೆ ವಿವಿಧ ವರ್ಣಗಳ 'ಟಚ್ಅಪ್' ಕೊಡುತ್ತಿದ್ದೆ.
ರಸ ಶೃಂಗಾರವಾದರೂ ಮೇನಕೆ, ಮಾಯಾ ಶೂರ್ಪನಖಿ, ಮಾಯಾ ಅಜಮುಖಿ, ಮೋಹಿನಿಗಳಲ್ಲಿ
ಸ್ವಭಾವಕನ್ನುಗುಣವಾದ ಲಾಸ್ಯವನ್ನು ತರಲು ಸಾಧ್ಯವಾಯಿತು.
ನನಗೆ ವೇಷ ತಯಾರಾಗಲು ಕನಿಷ್ಠ ಮೂರು ಗಂಟೆಗಳಾದರೂ ಬೇಕು. ಅವಸರದಲ್ಲಿ
ವೇಷ ಮಾಡಲು ಕಷ್ಟ. ನಾಜೂಕು ಬಾರದಿದ್ದರೆ ವೇಷ ಪೂರ್ಣವಾಗುವುದಿಲ್ಲ. ಗೌರವದ ಪಾತ್ರಗಳಿಗೆ
ಹುಬ್ಬಿನ ಮೇಲೆ ಮಕರಿಕಾ ಪತ್ರ ಬಿಡಿಸುತ್ತಿದ್ದೆ. ತಿಲಕವು ಅವರವರ ಮುಖದ ಆಕಾರಕ್ಕೆ
ತಕ್ಕುದಾಗಿರಬೇಕು. ಮುಖ ಸಣ್ಣದು, ತಿಲಕ ದೊಡ್ಡದು - ಇದು ವಿಕಾರ, ಆಭಾಸ. ಗರತಿ ಪಾತ್ರಗಳಿಗೆ
ಉರುಟು ತಿಲಕ. ಗೌರಿ ಪಾತ್ರಕ್ಕೆ ಸಣ್ಣ ಅರ್ಧಚಂದ್ರ. ದೇವಿ ಪಾತ್ರಕ್ಕೆ ಹಣೆ ತುಂಬ ಬರುವಂತೆ
ಅರ್ಧಚಂದ್ರ. ಮಿಕ್ಕುಳಿದ ಪಾತ್ರಗಳಿಗೆಲ್ಲಾ ಶಂಕುವಿನಾಕಾರದ ತಿಲಕ.
ಮುಖದ ಬಣ್ಣದಲ್ಲಿ ಎಷ್ಟು ವಿನ್ಯಾಸವಿರುತ್ತಿತ್ತೋ, ಅಷ್ಟೇ
ಕುಸುರಿ ಜಡೆಯ ಅಲಂಕಾರದಲ್ಲಿ ಇರುತ್ತಿತ್ತು. ಮೇಳದಲ್ಲಿ ನನಗೆ ನೀಡುತ್ತಿದ್ದ ಸೀರೆ ಎರಡು ಮೂರು
ವರುಷ ಬಾಳ್ವಿಕೆ ಬರುತ್ತಿತ್ತು. ಸೆರಗುಜಾರದಂತೆ ಈಗಿನವರು ಪಿನ್ ಹಾಕುತ್ತಾರೆ. ನಾನು ಪಿನ್
ಹಾಕುತ್ತಿರಲಿಲ್ಲ. ಒಮ್ಮೆ ನೆರಿ ಹಿಡಿದರೆ ಆಯಿತು. ಮತ್ತೆ ಅದೇ ಜಾಗದಲ್ಲಿ ನೆರಿ
ನಿಲ್ಲುತ್ತಿತ್ತು!
ಹದಿನೇಳು ವರುಷದ ಧರ್ಮಸ್ಥಳ ಮೇಳದ ತಿರುಗಾಟ ಮರೆಯುವಂತಹುದಲ್ಲ.
ಶ್ರೀ ಧರ್ಮಸ್ಥಳ ಮೇಳವು ಸ್ತ್ರೀಪಾತ್ರದ ಕುರಿತಾದ ನನ್ನೆಲ್ಲಾ ಆವಿಷ್ಕಾರಗಳಿಗೆ ತೆರೆದ ಬಾಗಿಲಾಗಿತ್ತು.
ಪೂಜ್ಯ ಕಾವಂದರು ಪ್ರೋತ್ಸಾಹಿಸಿದ್ದಾರೆ. ಧರ್ಮಸ್ಥಳ ಕ್ಷೇತ್ರ ಮಹಾತ್ಮೆ ಕಥಾನಕದ 'ಅಮ್ಮುದೇವಿ',
ವಿಕ್ರಮೋರ್ವಶೀಯದ 'ಊರ್ವಶಿ', ಅಶೋಕಸುಂದರಿ, ರಂಭೆ, ಕೈಕೆ, ಗುಣಸುಂದರಿ ಪಾತ್ರಗಳು ನನ್ನ
ನಿರೀಕ್ಷೆಗೂ ಮಿಕ್ಕಿ ಮೆರೆದುವು. ಇದಕ್ಕೆ ಕಾರಣ ನಾನಲ್ಲ, ಕಡತೋಕ ಮಂಜುನಾಥ ಭಾಗವತರು.
ಶೇಣಿಯವರು, ಪುತ್ತೂರು ನಾರಾಯಣ ಹೆಗಡೆಯವರು, ಕುಂಬಳೆ ಸುಂದರ ರಾಯರು, ಕೆ.ಗೋವಿಂದ
ಭಟ್ಟರು..ಇವರೆಲ್ಲರ ಕೊಡುಗೆ ನನ್ನ ಪಾತ್ರದ ಯಶಸ್ಸಿನಲ್ಲಿತ್ತು.
ಕಡತೋಕರು ನನ್ನ ಅಮ್ಮದೇವಿ ಪಾತ್ರವನ್ನು ಮೆಚ್ಚಿಕೊಂಡು ಆಡಿದ
ಮಾತು ಎಂದಿಗೂ ಮರೆಯಲಾರೆ - 'ಶೃಂಗಾರದ ಲವಲೇಶವೂ ಇಲ್ಲದ ಈ ಸಭ್ಯ ಗೃಹಿಣಿಯ ಪಾತ್ರವನ್ನು ಜೈನರೂ
ಮೆಚ್ಚುವಂತೆ ನಿರ್ವಹಿಸಿದ್ದಾರೆ'.
ವಯಸ್ಸಾದಂತೆ ದೇಹವೂ ಮಾಗಿದೆ. ಒಂದು ಕಾಲಘಟ್ಟದಲ್ಲಿ ನನ್ನ ವೇಷ
ರಂಗಸ್ಥಳಕ್ಕೆ ಬರುವುದನ್ನೇ ಕಾಯುತ್ತಿದ್ದ ಪ್ರೇಕ್ಷರಿದ್ದರು. ಸುಮಾರು 1981ರ ಸುಮಾರಿಗೆ ಜನರ
ಸ್ಪಂದನ ಮೊದಲಿನಂತಿರಲಿಲ್ಲ! ವೇಷದ ಆಕರ್ಷಣೆ ಕುಂಠಿತವಾಗಿತ್ತು. ಮೇಳದ ವಿದಾಯಕ್ಕೆ ಮನ ಮಾಡಿದೆ.
ನನ್ನ ಉತ್ಕರ್ಷಕ್ಕೆ ಕಾರಣರಾದ ಪೂಜ್ಯ ರತ್ನವರ್ಮ ಹೆಗ್ಗಡೆಯವರು, ಪೂಜ್ಯ ವೀರೇಂದ್ರ
ಹೆಗ್ಗಡೆಯವರನ್ನು ನೆನೆಯುತ್ತಾ, ಶ್ರೀ ಧರ್ಮಸ್ಥಳ ಮೇಳವೆಂಬ ಕುಟುಂಬದಿಂದ ಭಾರವಾದ ಹೃದಯದೊಂದಿಗೆ
ಸಂಸಾರ ಸೇರಿದೆ.
ಯಕ್ಷಗಾನದಲ್ಲಿ ಅನುಕರಣೆ ಸಾಮಾನ್ಯ. ಆದರೆ ದುರಾದೃಷ್ಟ ನೋಡಿ!
ನನ್ನ ವೇಷಭೂಷಣ, ರಂಗಕ್ರಮಗಳನ್ನು ಯಾರೂ ಅನುಸರಿಸಲಿಲ್ಲ! ಬಹುಶಃ ಉಳಿದ ವೇಷಗಳಂತೆ
ಸರಳವಾಗಿಲ್ಲದಿದ್ದುದೂ ಆಗಿರಬಹುದು.
ಮೇಳದಿಂದ ನಿವೃತ್ತನಾಗಿ ಇಪ್ಪತ್ತೇಳು (2008ರಲ್ಲಿ) ವರುಷಗಳೇ ಸಂದುವಲ್ಲಾ. ಅಬ್ಬಾ..ಕಾಲದ ವೈಚಿತ್ರ ನೋಡಿ. ರೆಪ್ಪೆ
ಮಿಟುಕಿಸುವುದರೊಳಗೆ ಆಯಷ್ಯ ಲೆಕ್ಕಣಿಕೆಯಲ್ಲೂ ಇಳಿಲೆಕ್ಕ. ಹಲವು ಪ್ರಶಸ್ತಿಗಳು ಅರಸಿ ಬಂದುವು.
ಮೊನ್ನೆ ರಾಜ್ಯೋತ್ಸವ ಪ್ರಶಸ್ತಿಯನ್ನೂ ಸ್ವೀಕರಿಸಿದೆ.
ಯಕ್ಷಗಾನ ಪ್ರದರ್ಶನ ನೋಡುವ ಹಂಬಲ ಮೊದಲಿನಂತಿಲ್ಲ. ಅಪರೂಪಕ್ಕೊಮ್ಮೆ ಪ್ರದರ್ಶನಕ್ಕೆ ಹೋದರೆ ಇಡೀರಾತ್ರಿ ಆಟ ನೋಡಿ,
ನನ್ನ ಅಭಿಪ್ರಾಯಗಳನ್ನು ಸಂಬಂಧಪಟ್ಟವರಲ್ಲಿ ಹೇಳುವ ಅಭ್ಯಾಸವಿಟ್ಟುಕೊಂಡಿದ್ದೇನೆ. ನಿಷ್ಠುರ ವಿಮರ್ಶೇಗಳು ಕೆಲವು ಕಲಾವಿದರನ್ನು ನೋಯಿಸಿದೆ. ಇನ್ನೂ ಕೆಲವರಿಗೆ
ಸಂತೋಷ ತಂದಿದೆ.
ಯಾವುದೇ ವಿಚಾರವನ್ನು ಪರಸ್ಪರ ಹಂಚಿಕೊಳ್ಳುವ ಸ್ವಭಾವ. ಮನಸ್ಸಿನಲ್ಲೊಂದು,
ಮಾತನಾಡುವುದೊಂದು - ನನ್ನ ಜಾಯಮಾನವೇ ಅಲ್ಲ. ಹುಟ್ಟು ಅಂಟಿಕೊಂಡ 'ಸಿಟ್ಟು' ಕೆಲವೊಂದು ಸಲ
ಎಡವಟ್ಟು ಮಾಡಿದ್ದಿದೆ. ಫಕ್ಕನೆ ಎರಗುವ ಇದನ್ನು ದೂರಮಾಡೋಣ - ಎಷ್ಟೋ ಸಲ ಸಂಕಲ್ಪ ಮಾಡಿದ್ದೆ.
ಊಹೂಂ! ಹೇಳಿದಾಕ್ಷಣ ಸಿಟ್ಟುಬಿಡಲು ನಾನೇನು ಜಮದಗ್ನಿಯೇ?
ಎಡನೀರು ಮಠಾಧೀಶ (ಬ್ರಹ್ಮೈಕ್ಯ) ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರ ಹಿರಿತನದಲ್ಲಿ 'ಪಾತಾಳ
ಪ್ರಶಸ್ತಿ'ಯನ್ನು ಸ್ಥಾಪಿಸಿದೆ.
ಪ್ರತಿ ವರುಷ ಹಿರಿಯ ಕಲಾವಿದರನ್ನು
ಗೌರವಿಸುವುದು ಉದ್ದೇಶ. ಈ ತೃಪ್ತಿಯೊಂದಿಗೆ ಮತ್ತೊಂದು ಉದ್ದೇಶ - ನನ್ನ ಕಲಾ ಸೇವೆ ನನಗೇ
ಮರೆತುಹೋಗಬಾರದಲ್ಲಾ..!
ನನ್ನೆಲ್ಲಾ ಯಕ್ಷಬದುಕನ್ನು 'ಯಕ್ಷಶಾಂತಲಾ' ಎಂಬ ಕೃತಿಯಲ್ಲಿ
ಅಭಿಮಾನಿಗಳು ಹಿಡಿದಿಟ್ಟಿದ್ದಾರೆ. ನನಗೆ 'ಬದುಕಿನ ಬಣ್ಣ' ಮತ್ತು 'ಬಣ್ಣದ ಬದುಕು' ಬೇರೆ
ಬೇರೆಯಾಗಿ ಕಾಣುವುದಿಲ್ಲ. ನನಗೆ ಬದುಕನ್ನು ನೀಡಿದ್ದು ಬಣ್ಣ. ಈ ಬಣ್ಣದ ಬದುಕು ನನ್ನ ವರ್ಚಸ್ಸಿನ
ಬಣ್ಣವನ್ನು ಪ್ರಕಾಶಿಸಿದೆ. ನಿಜ ಜೀವನದ ಬಣ್ಣಕ್ಕೆ ಸಂಸ್ಕಾರವನ್ನು ಕಲಿಸಿದೆ. ಅದರಿಂದಾಗಿ
ಬಣ್ಣಬಣ್ಣದ ಬದುಕು ನನ್ನದಾಗಲಿಲ್ಲ.
ಪತ್ನಿ ಪರಮೇಶ್ವರಿ. ಸಣ್ಣ ಮಗ ಶ್ರೀರಾಮ. ದೊಡ್ಡವ
ಅಂಬಾಪ್ರಸಾದ. ಹೊಸನಗರ ಮೇಳದ ಕಲಾವಿದ. ನಾಲ್ವರು ಹೆಣ್ಣುಮಕ್ಕಳು. ಎಲ್ಲರೂ ವಿವಾಹಿತರು.
ಮೊಮ್ಮಕ್ಕಳಿಗೆ ನಾನೀಗ 'ಪಾತಾಳಜ್ಜ'. ರಂಗಕ್ಕೂ ಅಷ್ಟೇ!
(Patala Venkatramana Bhat : 16-11-1933 : 19-7-2025)
- ನಿರೂಪಣೆ : ನಾ. ಕಾರಂತ ಪೆರಾಜೆ
Monday, July 7, 2025
ತಾಳಮದ್ದಳೆ ಸಪ್ತಾಹ ಸಮಾರೋಪ - ಕುರಿಯ ಪ್ರಶಸ್ತಿ ಪ್ರದಾನ : 'ಪ್ರಶಸ್ತಿ ಪಡೆವ ಕಲಾವಿದನ ಬದುಕು ಅದರ್ಶವಾಗಿರಬೇಕು' - ಪೂಜ್ಯ ಎಡನೀರು ಶ್ರೀಗಳು
ಅವರು ಪುತ್ತೂರಿನ ಶ್ರೀ ಸುಕೃತೀಂದ್ರ
ಕಲಾ ಮಂದಿರದಲ್ಲಿ ಜರುಗಿದ 'ಕುರಿಯ ವಿಠಲ ಶಾಸ್ತ್ರಿ ಪ್ರಶಸ್ತಿ
ಪ್ರದಾನ ಹಾಗೂ ತಾಳಮದ್ದಳೆ ಸಪ್ತಾಹ ಸಮಾರೋಪದಲ್ಲಿ ಆಶೀರ್ವಚನ ನೀಡುತ್ತಾ, “ಇಡಗುಂಜಿ ಮೇಳವು ಪರಂಪರೆಯನ್ನು ಮುರಿಯದ ಸಂಘಟನೆ. ದಿ.ಶಂಭು ಹೆಗಡೆಯವರ
ಕನಸನ್ನು ಅವರ ಚಿರಂಜೀವಿಗಳು ನನಸು ಮಾಡುತ್ತಿದ್ದಾರೆ. ಆ ಸಂಘಟನೆಗೆ ನೀಡಿದ ಪ್ರಶಸ್ತಿಗೇ ಗೌರವ ಬಂದಿದೆ” ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ
ಕರ್ನಾಟಕ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ.ಟಿ.ಶ್ಯಾಮ ಭಟ್ ಮಾತನಾಡುತ್ತಾ, “ನಾಟ್ಯಾಚಾರ್ಯ
ಕುರಿಯ ವಿಠಲ ಶಾಸ್ತ್ರಿಗಳು ಯಕ್ಷಗಾನದ ಕ್ರಾಂತಿ ಪುರುಷ. ಅವರು ರಂಗದಲ್ಲಿ ತಂದ ಅನೇಕ ಪ್ರಯೋಗಗಳು
ಈಗಲೂ ಪ್ರಸ್ತುತ. ತನ್ನ ಮನೆಯನ್ನೇ ಗುರುಕುಲವನ್ನಾಗಿ ಮಾಡಿ ಶಿಷ್ಯರನ್ನು ಬೆಳೆಸಿದ ಮಹಾ ಗುರು” ಎಂದರು.
ಈ ಸಂದರ್ಭದಲ್ಲಿ ಕೆರೆಮನೆ ಶ್ರೀ ಇಡಗುಂಜಿ
ಮಹಾಗಣಪತಿ ಯಕ್ಷಗಾನ ಮಂಡಳಿ (ರಿ) ಈ ಸಂಸ್ಥೆಯನ್ನು ಪ್ರತಿನಿಧಿಸಿದ ಶಿವಾನಂದ
ಹೆಗಡೆ ಕೆರೆಮನೆ ಹಾಗೂ ಹಿರಿಯ ಸ್ತ್ರೀವೇಷಧಾರಿ ಕೊಕ್ಕಡ ಈಶ್ವರ ಭಟ್ಟರಿಗೆ 'ಕುರಿಯ ಪ್ರಶಸ್ತಿ' ನೀಡಿ
ಗೌರವಿಸಲಾಯಿತು. ಕಲಾಪೋಷಕ, ಉದ್ಯಮಿ ಶ್ರೀ ಆರ್.ಕೆ.ಭಟ್ಟರಿಗೆ 'ಕುರಿಯ ಸ್ಮೃತಿ ಗೌರವ'ವನ್ನು ಪ್ರದಾನಿಸಲಾಯಿತು.
ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನದ ಸಂಚಾಲಕ ಉಜಿರೆ ಅಶೋಕ ಭಟ್ಟರು ಅಭಿನಂದನಾ ನುಡಿಗಳ
ಮೂಲಕ ಸಾಧಕರ ಸಾಧನೆಗೆ ಕನ್ನಡಿ ಹಿಡಿದರು.
ಕೀರ್ತಿಶೇಷ ಹಾಸ್ಯಗಾರ್ ಪೆರುವಡಿ ನಾರಾಯಣ ಭಟ್ಟರ ಕಲಾಯಾನವನ್ನು ಹಿರಿಯ
ಅರ್ಥದಾರಿ ವೆಂಕಟರಾಮ ಭಟ್ಟ ಸುಳ್ಯ ಸ್ಮರಿಸಿದರು. ಪುತ್ತೂರಿನ ದ್ವಾರಕಾ ಕಾರ್ಪೋರೇಶನ್ ಪ್ರೈ ಲಿ., ಇದರ ವ್ಯವಸ್ಥಾಪನಾ ನಿರ್ದೇಶಕ ಗೋಪಾಲಕೃಷ್ಣ ಭಟ್ ಸಂದರ್ಭೋಚಿತವಾಗಿ
ಮಾತನಾಡಿದರು. ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಕೆ.ಅಶೋಕ ನಾಮದೇವ
ಪ್ರಭು ಉಪಸ್ಥಿತರಿದ್ದರು.
ಹಾಸ್ಯಗಾರ್ ಪೆರುವಡಿ ನಾರಾಯಣ ಭಟ್ಟರ
ನೆನಪಿನಲ್ಲಿ ಅವರ ಕುಟುಂಬಸ್ಥರು ತಾಳಮದ್ದಳೆ ಸಪ್ತಾಹಕ್ಕೆ ದೊಡ್ಡ ಮೊತ್ತದ ನಿಧಿಯನ್ನು ಕುರಿಯ ಪ್ರತಿಷ್ಠಾನದ
ಉಜಿರೆ ಅಶೋಕ ಭಟ್ಟರಿಗೆ ಹಸ್ತಾಂತರಿಸಿದರು. ಭಾಗವತ ರಮೇಶ ಭಟ್ ಪುತ್ತೂರು ಸ್ವಾಗತಿಸಿದರು. ಸ್ವಸ್ತಿಕ್
ಪದ್ಯಾಣ ವಂದಿಸಿದರು. ಕಲಾವಿದ ನಾ. ಕಾರಂತ ಪೆರಾಜೆ ನಿರ್ವಹಿಸಿದರು. ಪುತ್ತೂರಿನ ಶ್ರೀ ಲಕ್ಷ್ಮೀವೆಂಕಟರಮಣ
ದೇವಸ್ಥಾನದ ಆಶ್ರಯದಲ್ಲಿ ಉಜಿರೆಯ ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನವು 'ತಾಳಮದ್ದಳೆ
ಸಪ್ತಾಹ'ವನ್ನು ಆಯೋಜಿಸಿತ್ತು.
ಪೆರುವಡಿ ಅಶೋಕ ಸುಬ್ರಹ್ಮಣ್ಯ, ಕುಮಾರ
ಸ್ವಾಮಿ ಕನ್ಯಾನ, ಪದ್ಯಾಣ ಶಂಕರನಾರಾಯಣ ಭಟ್, ಕಾಡೂರು ಸೀತಾರಾಮ ಶಾಸ್ತ್ರಿ, ರಾಮ ಜೋಯಿಸ್ ಬೆಳ್ಳಾರೆ
ಸಹಕರಿಸಿದರು. ಸಮಾರಂಭದ ಬಳಿಕ ಸಪ್ತಾಹದ ಕೊನೆಯ ತಾಳಮದ್ದಳೆ
'ಗುರುದಕ್ಷಿಣೆ' ಸಂಪನ್ನಗೊಂಡಿತು. ಏಳು ದಿವಸವೂ ರುಚಿ ಶುದ್ಧಿಯ ಪ್ರೇಕ್ಷಕರು ತಾಳಮದ್ದಳೆಗೆ ಉಪಸ್ಥಿತರಿದ್ದರು.













