Wednesday, June 22, 2022

ಪುತ್ತೂರು 'ಗೋಪಣ್ಣ' ಸ್ಮೃತಿ ಗೌರವಕ್ಕೆ ಪದ್ಯಾಣ ಜಯರಾಮ ಭಟ್ (P.T.Jayarama Bhat) ಆಯ್ಕೆ



ಯಕ್ಷಗಾನದ ವಾದನ ಪರಿಕರಕ್ಕೆ ಮತ್ತು ವಾದನಕ್ಕೆ ಹೊಸ ಆಯಾಮವನ್ನು ತೋರಿದ ಪುತ್ತೂರು ಗೋಪಾಲಕೃಷ್ಣಯ್ಯ ಯಾ ಗೋಪಣ್ಣ ಇವರ ಸ್ಮೃತಿ ಕಾರ್ಯಕ್ರಮವು 2022 ಜೂನ್ 26, ರವಿವಾರದಂದು  ಅಪರಾಹ್ಣ ಗಂಟೆ 2ಕ್ಕೆ ಜರುಗಲಿದೆ. ಪುತ್ತೂರಿನ ಬಪ್ಪಳಿಗೆ 'ಅಗ್ರಹಾರ' ನಿವಾಸದಲ್ಲಿ ಸಂಪನ್ನವಾಗುವ ಈ ಕಾರ್ಯಕ್ರಮದಲ್ಲಿ ಯಕ್ಷಗಾನ ಭಾಗವತ, ಮದ್ಲೆಗಾರ ಪದ್ಯಾಣ ಜಯರಾಮ ಭಟ್ಟರಿಗೆ 'ಗೋಪಣ್ಣ ಸ್ಮೃತಿ ಗೌರವ' ಪ್ರದಾನಿಸಲಾಗುವುದು. ಸಮಾರಂಭದ ಬಳಿಕ ತಾಳಮದ್ದಳೆ ನಡೆಯಲಿದೆ.


ಪದ್ಯಾಣ ಜಯರಾಮ ಭಟ್ಟರು ಈಚೆಗೆ ಕೀರ್ತಿಶೇಷರಾದ ಭಾಗವತ ಪದ್ಯಾಣ ಗಣಪತಿ ಭಟ್ಟರ ಸಹೋದರ. ಪ್ರಸಿದ್ಧ ಪದ್ಯಾಣ ಮನೆತನ. ಕೇಳಿ ನೋಡಿ ಕಲಿತ ಏಕಲವ್ಯ ಸಾಧನೆ. ವಿದೇಶವೂ ಸೇರಿದಂತೆ ಬೆಂಗಳೂರಿನಲ್ಲಿ ಸ್ವಲ್ಪ ಕಾಲ ಅನ್ಯಾನ್ಯ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದರು. ಮರಳಿ ಹುಟ್ಟೂರಿಗೆ ಬಂದ ಜಯರಾಮರು ಮುಂದೆ ಯಕ್ಷಗಾನದಲ್ಲಿ ಪೂರ್ಣ ಪ್ರಮಾಣದ ವ್ಯವಸಾಯ ಮಾಡಿದರು. 


ಆರಂಭದಲ್ಲಿ ಕದ್ರಿ ಮೇಳ, ಕುಂಟಾರು ಮೇಳ, ಕನರ್ಾಟಕ ಮೇಳ, ಮಂಗಳಾದೇವಿ ಮೇಳಗಳಲ್ಲಿ ಭಾಗವತರಾಗಿದ್ದರು. ಬಳಿಕ ಎಡನೀರು, ಹೊಸನಗರ, ಹನುಮಗಿರಿ ಮೇಳಗಳಲ್ಲಿ ಮದ್ಲೆಗಾರರಾಗಿ ಸೇವೆ. ಸಹೋದರ ಗಣಪತಿ ಭಟ್ಟರ ಭಾಗವತಿಕೆ, ಚಿಕ್ಕಪ್ಪ ಪದ್ಯಾಣ ಶಂಕರನಾರಾಯಣ ಭಟ್ಟರ ಚೆಂಡೆಯ ಮಾಧುರ್ಯದೊಂದಿಗೆ ಜಯರಾಮರ ಮದ್ದಳೆಯ ನುಡಿತಗಳ ನಾದಮಿಳಿತಗಳು ಹೊಸ ಅನುಭವಗಳನ್ನು ಕಟ್ಟಿಕೊಡುತ್ತಿದ್ದುವು.  


ಪತ್ನಿ ಶ್ರೀಮತಿ ಸುಮಂಗಲಾ. ಮಗಳು ಸುಜಯಾ. ಯಕ್ಷಗಾನದಲ್ಲಿ ಪುತ್ತೂರು ಶ್ರೀಧರ ಭಂಡಾರಿಯವರ ಶಿಷ್ಯೆ. ಯಕ್ಷಕೂಟ ಪುತ್ತೂರು ಮಕ್ಕಳ ತಂಡದಲ್ಲಿ ಸುಜಯಾ ಕಲಾವಿದೆಯಾಗಿ ಗಮನ ಸೆಳೆದಿದ್ದರು. ಈ ತಂಡದ ಯಶಸ್ವೀ ಪ್ರದರ್ಶನದಲ್ಲಿ ಜಯರಾಮ ಭಟ್ಟರ ಕೊಡುಗೆಯೂ ಅನನ್ಯ. 


ಯಕ್ಷಗಾನ ಕ್ಷೇತ್ರದ ಅನನ್ಯ ಸಾಧನೆಗಾಗಿ ಪದ್ಯಾಣ ಜಯರಾಮ ಭಟ್ಟರಿಗೆ ಪುತ್ತೂರು ಬಪ್ಪಳಿಗೆ ಸನಿಹದ 'ಅಗ್ರಹಾರ'ದಲ್ಲಿ 2022 ಜೂನ್ 26ರಂದು ಗೌರವ ಪ್ರದಾನ.

 ಕಳೆದ ವರುಷಗಳಲ್ಲಿ ಗೋಪಣ್ಣ ನೆನಪಿನ ಗೌರವವನ್ನು ದೇವದರ್ಜಿ ಅಳಕೆ ನಾರಾಯಣ ರಾವ್, ಮದ್ಲೆಗಾರ ವೆಂಕಟೇಶ ಉಳಿತ್ತಾಯರು, ಜ್ಯೋತಿಷಿ ಗಣಪತಿ ಭಟ್, ಅರ್ಥದಾರಿ ಪಾವಲಕೋಡಿ ಗಣಪತಿ ಭಟ್ ಹಾಗೂ ಯಕ್ಷಗುರು ಮೋಹನ ಬೈಪಾಡಿತ್ತಾಯರಿಗೆ ಪ್ರದಾನ ಮಾಡಲಾಗಿತ್ತು. ಗೋಪಣ್ಣ ಅವರ ಚಿರಂಜೀವಿ ಭಾ.ಜ.ಪ. ನಗರ ಅಧ್ಯಕ್ಷ ಹಾಗೂ ನಗರಸಭಾ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್ ಕುಟುಂಬ ಈ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ.