Sunday, March 29, 2020

ಯಕ್ಷ ಜಾಗೃತಿ : 'ಕೊರೊನಾಸುರ!'


ಇಂದು (ಮಾ. 22) ಜನತಾ ಕರ್ಫ್ಯೂ. . ಕೊರೊನಾವನ್ನು ಓಡಿಸಲು ದೇಶವು ತನಗೆ ತಾನೆ ಸ್ತಬ್ಧತೆಯನ್ನು ತಂದುಕೊಂಡಿದೆ. ನಾಲ್ಕೈದು ದಿವಸಗಳಿಂದ ಮಾಧ್ಯಮಗಳು ತಾಜಾ ವರದಿ, ಮಾಹಿತಿಯನ್ನು ಜನರಿಗೆ ತಲಪಿಸುತ್ತಿವೆ. ನವಮಾಧ್ಯಮಗಳು ಕ್ಷಿಪ್ರವಾಗಿ ಕೊರೊನಾದಿಂದ ಪಾರಾಗುವ ವಿಷಯಗಳತ್ತ ಆಸ್ಥೆ ವಹಿಸುತ್ತಿವೆ

  ಮಧ್ಯೆ ಜನತಾ ಕರ್ಫ್ಯೂವಿನ ಅಗತ್ಯ, ಗಾಢತೆಗಳನ್ನು ತಳಮಟ್ಟದವರೆಗೂ ವಿಸ್ತರಿಸಿ ತಿಳಿಸುವ ಯತ್ನವೊಂದು ಸದ್ದಿಲ್ಲದೆ ಆಗಿದೆ! ಯಕ್ಷಗಾನದ ಮೂಲಕ 'ಕೊರೊನಾ' ರಂಗವೇರಿದೆ! ಅದೀಗ 'ಕೊರೊನಾಸುರ' ಪಾತ್ರವಾಗಿದೆ! ಸಾಮಾಜಿಕ ಜಾಗೃತಿಗಾಗಿ ಯಕ್ಷಗಾನವನ್ನು ಬಳಸಿಕೊಂಡಿರುವುದು ಸಮಸಾಮಯಿಕ ಎಚ್ಚರ.

 ಕಾಸರಗೋಡು (ಕೇರಳ) ಜಿಲ್ಲೆಯ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ(ರಿ)ವು ಸುಮಾರು ಐವತ್ತೈದು ನಿಮಿಷದ 'ಕೊರೊನಾ' ಕಥಾನಕವನ್ನು ಚಿತ್ರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿದೆ. ಪ್ರತಿಷ್ಠಾನದ ಮುಖ್ಯಸ್ಥ, ಯಕ್ಷಗಾನ ಭಾಗವತ ಸಿರಿಬಾಗಿಲು ರಾಮಕೃಷ್ಣ ಮಯ್ಯ. ಓರ್ವ ವೃತ್ತಿ ಕಲಾವಿದನಾಗಿದ್ದುಕೊಂಡು ಸಾಮಾಜಿಕ ಎಚ್ಚರವನ್ನು ಮೈಗೂಡಿಸಿಕೊಂಡಿರುವುದು ನಿಜಕ್ಕೂ ಮೇಲ್ಪಂಕ್ತಿ.

 ಇಂದು ವಾಟ್ಸಾಪ್, ಫೇಸ್ಬುಕ್.. ಮೊದಲಾದ ಮಾಧ್ಯಮಗಳಲ್ಲಿ ನೂರಾರು ಅಲ್ಲ ಸಾವಿರಾರು ಗುಂಪುಗಳು. ಯಕ್ಷಗಾನದ ವಿಚಾರಕ್ಕೆ ಬಂದರೆ ಇಲ್ಲೂ ಹಲವು ಗುಂಪುಗಳು. ಗುಂಪಿನಲ್ಲಿ ನಗರದವರೂ ಸೇರಿದಂತೆ ತೀರಾ ಹಳ್ಳಿಯ ತನಕದ ಸದಸ್ಯರಿದ್ದಾರೆ. ಕರಾವಳಿಯಲ್ಲಿ ಯಕ್ಷಗಾನವು ನಗರ, ಹಳ್ಳಿಯ ಗ್ರಾಸ್ರೂಟ್ವರೆಗೂ ತನ್ನ ನರಜಾಲವನ್ನು ಚಾಚಿಕೊಂಡಿದೆ. ಹಾಗಾಗಿ 'ಕೊರೊನಾ' ಯಕ್ಷಗಾನವು ಬೆಳಗ್ಗಿನಿಂದಲೇ ಗುಂಪುಗಳಲ್ಲಿ ಹರಿದಾಡುತ್ತಿದೆ. ಬಹುಶಃ ಕೊರೊನಾ ಯಕ್ಷಗಾನ ಕಥಾನಕವಾಗಿ ರಂಗವೇರುವುದು ಪ್ರಥಮ

ಕೊರೊನಾಸುರನ ಪ್ರವೇಶ. ವಿದೇಶದಿಂದ ಬರುವ ಓರ್ವ ವ್ಯಕ್ತಿಯಿಂದ ಕೊರೊನಾ ಆತನ ಕುಟುಂಬಕ್ಕೆ ಹಬ್ಬುತ್ತದೆ. ಸುತ್ತೆಲ್ಲಾ ವ್ಯಾಪಿಸುತ್ತದೆ. ವಿಚಾರ ತಿಳಿದ ರಾಜ ಧನ್ವಂತರಿಯನ್ನು ಸ್ಮರಿಸುತ್ತಾನೆ.  ಧನ್ವಂತರಿ ಮೈದೋರಿ ಕೆಲವೊಂದು ವಿಧಿ-ನಿಷೇಧದ ಸಂವಾದಗಳೊಂದಿಗೆ ಕೊರೊನಾಸುರನನ್ನು ದೇಶದಿಂದ ಓಡಿಸುತ್ತಾನೆ.  ಕೊನೆಗೆ ರಾಜ ಮತ್ತು ಧನ್ವಂತರಿಯ ಸಂವಾದ. ಕೊರೊನಾ ವೈರಸ್ ದೇಹವನ್ನು ಪ್ರವೇಶಿಸದಂತೆ ವಹಿಸಬೇಕಾದ ಎಚ್ಚರದ ಪ್ರಸ್ತುತಿಗಳು ಮನಗ್ರಾಹ್ಯ ಮತ್ತು ಮನನಗ್ರಾಹ್ಯ. ಆಚಾರ-ವಿಚಾರಗಳ ಪಾಲನೆಗಳಿಗೆ ಒತ್ತು ನೀಡಿದ ಸಮಾರೋಪ ಸಂವಾದವು ಪುಷ್ಟಿದಾಯಕವಾಗಿತ್ತು.

ಒಂದು ಬಹು ಪ್ರಭಾವಿ ಮಾಧ್ಯಮವೊಂದರ ಮೂಲಕ ಸಮಸಾಮಯಿಕ ಪಿಡುಗನ್ನು ಕಥೆಯ ಮೂಲಕ ಪೋಣಿಸಿರುವುದು, ಅದನ್ನು ರಂಗಕ್ಕೆ ಅಳವಡಿಸಿಕೊಳ್ಳುವುದು ಸುಲಭದ ಮಾತಲ್ಲ. ಮೊಟ್ಟ ಮೊದಲಾಗಿ ತಂಡಕ್ಕೆ ದೇಶಭಕ್ತಿಯ ಅರಿವಿರಬೇಕು. ಕೊರೋನಾದ ಮಾಹಿತಿಯಿರಬೇಕು. ಅದನ್ನು ಪಾತ್ರದ ಮೂಲಕ ಪ್ರಸ್ತುತಪಡಿಸುವ ಜಾಣ್ಮೆಯಿರಬೇಕು. ತಂಡವು ಕ್ಷಿಪ್ರವಾಗಿ ಇವೆಲ್ಲವನ್ನೂ ಜೋಡಿಸಿಕೊಂಡಿದೆ. ಪ್ರಧಾನಿ ಮೋದೀಜಿಯವರು ಯಾವಾಗ ಜನತಾ ಕರ್ಫ್ಯೂಗೆ ಕರೆಕೊಟ್ಟರೋ ಕ್ಷಣದಿಂದ ಮಯ್ಯರ ಮನದೊಳಗೆ ಕಲ್ಪನೆ ಬೀಜಾಂಕುರಗೊಂಡಿತು. ಕ್ಷಿಪ್ರವಾಗಿ ಅನುಷ್ಠಾನಗೊಂಡಿತು.

ಪ್ರಸಂಗ ರಚನೆ ಪ್ರಸಂಗಕರ್ತರಾದ ಶ್ರೀಧರ ಡಿ.ಎಸ್ ಮತ್ತು ಪ್ರೊ. ಎಂ..ಹೆಗಡೆ. ಸಿರಿಬಾಗಿಲು ರಾಮಕೃಷ್ಣ ಮಯ್ಯರ ಪರಿಕಲ್ಪನೆ ಮತ್ತು ಭಾಗವತರಾಗಿ ಪ್ರದರ್ಶನದ ಸಾರಥ್ಯ ವಹಿಸಿದ್ದರು. ನಿಡುವಜೆ ಶಂಕರ ಭಟ್, ಉದಯ ಕಂಬಾರ್, ಶ್ರೀಮುಖ ಮಯ್ಯ.. ಹಿಮ್ಮೇಳ ಸಾಥ್. ಹಿರಿಯ ಕಲಾವಿದರಾದ ರಾಧಾಕೃಷ್ಣ ನಾವಡ ಮಧೂರು, ವಾಸುದೇವ ರಂಗಾಭಟ್, ಜಯಪ್ರಕಾಶ್ ಶೆಟ್ಟಿ ಪೆರ್ಮುದೆ, ಗುರುರಾಜ ಹೊಳ್ಳ ಬಾಯಾರು, ಪ್ರಕಾಶ್ ನಾಯಕ್ ನೀರ್ಚಾಲು, ದೇವಕಾನ ಶ್ರೀಕೃಷ್ಣ ಭಟ್... ಮೊದಲಾದ ಅನುಭವಿ ಕಲಾವಿದರು 'ಕೊರೊನಾ' ಸಂಕಷ್ಟಗಳನ್ನು, ಅದನ್ನು ದೂರೀಕರಿಸಲು ಪಾಲಿಸಬೇಕಾದ ಸ್ವ-ಕರ್ಮಗಳನ್ನು ವಿವರಿಸುವಲ್ಲಿ ಪ್ರದರ್ಶನ ಗೆದ್ದಿದೆ. ನೀರ್ಚಾಲಿನ ವರ್ಣ ಸ್ಟುಡಿಯೋದ ಉದಯ ಕಂಬಾರ್ ತಂಡ ಪ್ರದರ್ಶನವನ್ನು ಚಿತ್ರೀಕರಿಸಿದೆ. ಪೈವಳಿಕೆಯ ಶ್ರೀ ಗಣೇಶ ಕಲಾ ವೃಂದವು ವೇಷಭೂಷಣ ಮತ್ತು ಒಟ್ಟೂ ವ್ಯವಸ್ಥೆಗೆ ಹೆಗಲು ನೀಡಿತ್ತು. ಎಲ್ಲರೂ ಯಾವುದೇ ಸಂಭಾವನೆ ಸ್ವೀಕರಿಸದೆ ಪ್ರದರ್ಶನದ ಚಿತ್ರೀಕರಣಕ್ಕೆ ನೆರವಾಗಿದ್ದಾರೆ. ಇದೊಂದು ವರ್ತಮಾನದ ಯಕ್ಷವ್ಯವಹಾರವು ಕಣ್ಣರಳಿಸಿ ನೋಡುವ ವಿದ್ಯಮಾನ

  ಯಾವುದೇ ಲಾಭೋದ್ದೇಶವಿಲ್ಲದೆ, ಪ್ರಚಾರದ ಹಂಬಲವಿಲ್ಲದೆ ರೂಪುಗೊಂಡದೆ. ಒಂದು ಸಾಮಾಜಿಕ ಸಮಸ್ಯೆಯನ್ನು ಮತ್ತು ಅದರಿಂದ ಪಾರಾಗಬಹುದಾಗ ವಿಚಾರಗಳನ್ನು ಜನರ ಹತ್ತಿರ ಹೇಗೆ ಒಯ್ಯಬಹುದು ಎನ್ನುವುದನ್ನು ತೋರಿದೆ. ಭಾಗವಹಿಸಿದ ಕಲಾವಿದರೆಲ್ಲರೂ ದೇಶದ ಮತ್ತು ಪ್ರಧಾನಿ ಮೋದೀಜಿಯವರ ಅಪೇಕ್ಷೆಗಳನ್ನು ಮಾನಿಸುವ ಮನಃಸ್ಥಿತಿಯನ್ನು ಹೊಂದಿ ಸ್ಪಂದಿಸಿದವರು. ಜನಜಾಗೃತಿಗೊಳ್ಳಬೇಕಾದ ಸಮಯದಲ್ಲಿ ಜಾಗೃತ ಸಮಾಜದ ಪ್ರಜೆಯಾಗಿ ಕಲಾವಿದರು ಯಥಾಸಾಧ್ಯ ಸೇವೆ ಕೈಗೊಂಡಿರುವುದು ಶ್ಲಾಘ್ಯ. ಎನ್ನುತ್ತಾರೆ ಯಕ್ಷಗಾನ ಅಕಾಡೆಮಿಯ ಸದಸ್ಯ ಯೋಗೀಶ್ರಾವ್ ಚಿಗುರುಪಾದೆ.  

ಇಂದು ಯಕ್ಷಗಾನ ಪ್ರದರ್ಶನಗಳಿಗೆ ಕೊರೊನಾ ಹಿನ್ನೆಲೆಯಲ್ಲಿ ನಿಷೇಧ ಹೇರಿರುವ ಕಾಲಘಟ್ಟದಲ್ಲಿ ಜಾಲತಾಣವೊಂದೇ ಆಸರೆಯಾಗಿದೆ. ಇದರ ಮೂಲಕ ಮುಂಜಾಗ್ರತೆಯ ಹೂರಣವನ್ನುಳ್ಳ ಯಕ್ಷಗಾನ ಚಿತ್ರೀಕರಣವಾಗಿ ಪ್ರಸಾರವಾಗುತ್ತಿರುವುದು ಅಗತ್ಯ ಮತ್ತು ಅನಿವಾರ್ಯ. ಯಕ್ಷಗಾನ ಪದ್ಯಗಳ ಮೂಲಕ ಈಗಾಗಲೇ ಒಂದಷ್ಟು ಯತ್ನಗಳಾಗಿವೆ. ಆದರೆ ಪ್ರದರ್ಶನವಾಗುತ್ತಿರುವುದು ಪ್ರಥಮ. ಸಿರಿಬಾಗಿಲು ಮಯ್ಯ ಮತ್ತು ಅವರ ತಂಡದ ಸಾಮಾಜಿಕ ಋಣದ ಕಾಳಜಿ ಅನುಕರಣೀಯ. ಎಂದು ಬೆನ್ನುತಟ್ಟಿದ್ದಾರೆ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಪ್ರೊ. ಎಂ..ಹೆಗಡೆ.

  ವೀಡಿಯೋ ಒಂದು ದಿವಸಕ್ಕೆ ಸೀಮಿತವಲ್ಲ. ಜನತಾ  ಕರ್ಫ್ಯೂ ಹಿನ್ನೆಲೆಯಲ್ಲಿ ರೂಪಿತವಾದರೂ ಕೊರೊನಾದ ಜಾಗೃತಿಗೊಂದು ಯಕ್ಷಗಾನದ ಕೊಡುಗೆ. ಮಾಧ್ಯಮಗಳ ಮೂಲಕ ಮುಂಜಾಗರೂಕತೆಗಳು ಜನಮಾನಸಕ್ಕೆ ಸಿಗುತ್ತಿದ್ದರೂ, ಒಂದು ಕಲಾಮಾಧ್ಯಮದ ಮೂಲಕ ಸಿಗುವ ಅನುಭಾವ ಇದೆಯಲ್ಲಾ.. ಅದು ಪರಿಣಾಮಕಾರಿ. ಮರೆಯುವಂತಹುದಲ್ಲ

 ದೇಶದಲ್ಲಿ ಏಡ್ಸ್ ಅಟ್ಟಹಾಸ ಮಾಡುತ್ತಿದ್ದಾಗ ಸಂದರ್ಭದಲ್ಲೂ 'ಘೋರಮಾರಕ' ಎನ್ನುವ ಯಕ್ಷಗಾನವು ಜನಪದರ ಮಧ್ಯೆ ಪ್ರದರ್ಶನಗೊಂಡಿರುವುದು ಇಲ್ಲಿ ಉಲ್ಲೇಖನೀಯ
  
ಲೇಖನ ಮುಗಿಸುವ ಹೊತ್ತಿಗೆ – 22-3-2020 - ಮಂಗಳೂರಿನ ಡಾ.ಮನೋಹರ ಉಪಾಧ್ಯಾಯರ ಮಾತೊಂದು ವಾಟ್ಸಪ್ಪಿನಲ್ಲಿ ತೇಲಿ ಬಂತು -'ಕೊರೋನಾದಿಂದ ದೂರವಿರುವ ಎಲ್ಲಾ ಮಾರ್ಗಗಳನ್ನು ಮಾಧ್ಯಮಗಳು ಬಿತ್ತರಿಸಿದುವು. ಜತೆಗೆ ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರ ಕ್ರಮದಲ್ಲೂ ಆಗಬೇಕಾದ ಬದಲಾವಣೆಯನ್ನೂ ಹೇಳಬೇಡ್ವೇ!

(Photos : Udaya Kambar, Varna Studio, Neerchal)

(ವಿಜಯವಾಣಿಗೆ ಕಳುಹಿಸಿದ ಬರಹವಿದು.)