Sunday, September 30, 2012

'ಪಾಪಣ್ಣ ಭಟ್ಟ'ರಿಗೆ 'ಕುರಿಯ' ಗೌರವದ ಬಾಗಿನ


                'ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮಂಜಯ್ಯ ಹೆಗ್ಗಡೆಯವರು ಧರ್ಮಾಧಿಕಾರಿಗಳಾಗಿದ್ದ ಸಮಯ. ಧರ್ಮಸ್ಥಳ ಮೇಳದ ಪ್ರದರ್ಶನವೊಂದರಲ್ಲಿ ಡಾ. ಶಿವರಾಮ ಕಾರಂತರ ಉಪಸ್ಥಿತಿ. ಪ್ರಸಂಗ 'ಚೂಡಾಮಣಿ'. ಕುರಿಯ ವಿಠಲ ಶಾಸ್ತ್ರಿಗಳ ಹನುಮಂತನ ಪಾತ್ರ. ಖುಷಿಯಾದ ಕಾರಂತರು 'ಆಟವನ್ನು ಸಿನೆಮಾ ಮಾಡೋಣ' ಎಂದರಂತೆ. ಹೆಗ್ಗಡೆಯವರ ಸಮ್ಮತಿ. ಶೂಟಿಂಗಿಗೆ ಹಗಲು ಸೂಕ್ತ ಸಮಯ. ಕಲಾವಿದರು ಒಲ್ಲದ ಮನಸ್ಸಿನಿಂದ ಒಪ್ಪಿ ಸಹಕರಿಸಿದರು. ಮೊದಲ ದಿನ ಆರ್ಧ ಚಿತ್ರೀಕರಣ. ಮುಂದಿನದು ಮೂಡುಬಿದಿರೆಯಲ್ಲಿ ಎಂದು ನಿಗದಿಯಾಯಿತು. ಹಗಲು ವೇಷ ನಿರ್ವಹಿಸಲು ಕಲಾವಿದರ ಅಸಮ್ಮತಿ. ಹಾಗಾಗಿ ಶೂಟಿಂಗ್ ಅರ್ಧದಲ್ಲಿ ನಿಂತುಬಿಟ್ಟಿತು. ಆ ಪ್ರಸಂಗದಲ್ಲಿ ನಾನೂ ಪಾತ್ರ ವಹಿಸಿದ್ದೆ. ಕಾರಂತರು ಚೆನ್ನಾಗಿ ನೋಡಿಕೊಂಡಿದ್ದರು', ಎಂದು ನೆನಪಿನ ಸುರುಳಿಯನ್ನು ಬಿಚ್ಚಿದರು, ಹಾಸ್ಯಗಾರ ಪೆರುವಡಿ (ಪೆರ್ವಡಿ, ಪೆರುವೋಡಿ) ನಾರಾಯಣ ಭಟ್ಟರು. (Hasyagar Peruvody Narayana Bhat)

                ಉಭಯತಿಟ್ಟುಗಳಲ್ಲಿ 'ರಾಜಾಹಾಸ್ಯ' ಎಂಬ ನೆಗಳ್ತೆಯನ್ನು ಪಡೆದ ಪೆರುವಡಿ ನಾರಾಯಣ ಭಟ್ಟರು ಮಾತಿಗಿಳಿದರೆ ಒಂದು ಕಾಲಘಟ್ಟದ ಯಕ್ಷಗಾನದ ಬದುಕು, ಸಾಮಾಜಿಕ ಜವಾಬ್ದಾರಿ, ಕಲಾವಿದನ ಹೊಣೆ.. ಹೀಗೆ ಮಿಂಚುತ್ತದೆ. 'ಹಾಸ್ಯವೆಂದರೆ ವಿಕಾರವಲ್ಲ. ಅದೊಂದು ರಸ. ಅದನ್ನು ಕಲಾವಿದ ಅನುಭವಿಸಬೇಕು. ಕಲಾವಿದನ ಅಭಿವ್ಯಕ್ತಿಯಂತೆ ಪ್ರೇಕ್ಷಕನೂ ಅನುಭವಿಸಬೇಕು. ಯಕ್ಷಗಾನದ ಹಾಸ್ಯವೆಂದರೆ ನಕ್ಕು ನಲಿವ ಹಾಸ್ಯವಲ್ಲ. ಸಮಾಜದ ವಿಕಾರಗಳನ್ನು ಎತ್ತಿ ತೋರಿಸಿ, ಅದನ್ನು ತಿದ್ದುವ ಕೆಲಸವನ್ನೂ ಹಾಸ್ಯಗಾರ ಮಾಡಬೇಕಾಗುತ್ತದೆ' ಎನ್ನುತ್ತಾರೆ.

               ಪೆರುವಡಿಯವರ ತಿರುಗಾಟದ ಕಾಲದ ಸಾಮಾಜಿಕ ವ್ಯವಸ್ಥೆಗಳು ತಪ್ಪನ್ನು ಎತ್ತಿ ತೋರಿದಾಗ ಒಪ್ಪಿಕೊಳ್ಳುವ, ರಂಗದ ಅಭಿವ್ಯಕ್ತಿಯನ್ನು 'ಕಲೆ' ಎಂದು ಸ್ವೀಕರಿಸುವ ಮನಃಸ್ಥಿತಿಯಿತ್ತು. ಈಗ ಕಾಲ ಬದಲಾದುದೋ, 'ಬೌದ್ಧಿಕವಾಗಿ ಮುಂದುವರಿದ' ಫಲವೋ ಗೊತ್ತಿಲ್ಲ, ರಂಗದ ಅಭವ್ಯಕ್ತಿಗೆ ಜಾತಿಯನ್ನೋ, ಅಂತಸ್ತನ್ನೋ ಪೋಣಿಸುವ ವಿಪರೀತ ಸ್ಥಿತಿಯನ್ನು ಕಾಣಬಹುದು. ಪಾತ್ರವೊಂದು ಪ್ರೇಕ್ಷಕರ ಅಭಿರುಚಿಯಂತೆ, ಆಸಕ್ತಿಯಂತೆ ರಂಗದಲ್ಲಿ ಓಡಾಡುವಂತಹ ಪರೋಕ್ಷ ನಿಯಂತ್ರಣ.
ಪೆರುವಡಿಯವರು ಹಾಸ್ಯಕ್ಕೆ ಗೌರವವನ್ನು ತಂದು ಕೊಟ್ಟ ಹಾಸ್ಯಗಾರ. ದಕ್ಷಾಧ್ವರ ಪ್ರಸಂಗದಲ್ಲಿ ಬರುವ 'ಬ್ರಾಹ್ಮಣ'ನ ಅಭಿವ್ಯಕ್ತಿಯಲ್ಲಿ ಗೇಲಿಯಿಲ್ಲ, ಶ್ರೀ ರಾಮ ವನಗಮನ ಪ್ರಸಂಗದ 'ಗುಹ' ಪಾತ್ರವು ಜಾತಿಯನ್ನು ಲೇವಡಿ ಮಾಡುವುದಿಲ್ಲ. ಜರಾಸಂಧ ಪ್ರಸಂಗದ 'ಶೇಂದಿ ಮಾರಾಟಗಾರ' ಪಾತ್ರವು ಯಾವುದೇ ವರ್ಗವನ್ನು ನೋಯಿಸುವುದಿಲ್ಲ. ಆದರೆ ಆ ಪಾತ್ರದ ಸುತ್ತ ಮುತ್ತ ಇರುವ ವಿಕಾರಗಳನ್ನು ಎತ್ತಿ ತೋರಿಸುತ್ತಿದ್ದರು. ಹೀಗೆ ಮಾಡುತ್ತಿದ್ದಾಗಲೆಲ್ಲಾ ವಿಪರೀತದ ಸೋಂಕಿಲ್ಲ. ನಕ್ಕು ನಲಿಯುವುದಿಲ್ಲ!

                 'ಪಾಪಣ್ಣ ವಿಜಯ' ಪ್ರಸಂಗದ 'ಪಾಪಣ್ಣ' ಪಾತ್ರವು ಪೆರುವಡಿಯವರ ರಂಗಛಾಪನ್ನು ಎತ್ತರಕ್ಕೇರಿಸಿತು. ಹೆಸರಿನೊಂದಿಗೆ 'ಪಾಪಣ್ಣ ಭಟ್ರು' ಹೊಸೆಯಿತು. ಒಂದು ವರ್ಷವಲ್ಲ, ಹಲವು ಕಾಲ ಈ ಪ್ರಸಂಗವು ವಿಜೃಂಭಿಸಿತು. 'ಇದನ್ನು ಮೊದಲು ಆಡುವಾಗ ಹೆದರಿಕೆಯಿತ್ತು. ಪೌರಾಣಿಕ ಪ್ರಸಂಗವನ್ನು ಒಪ್ಪಿಕೊಂಡ ಕಲಾಭಿಮಾನಿಗಳು ಸಾಮಾಜಿಕ ಕಥೆಯನ್ನು ರಂಗದಲ್ಲಿ ಸ್ವೀಕರಿಸಬಹುದೇ? ಇದಕ್ಕಾಗಿ ಕಾಫಿ ಎಸ್ಟೇಟ್ನಲ್ಲಿ ಮೊದಲ ಪ್ರಯೋಗವನ್ನು ಮಾಡಿದೆವು. ಹತ್ತಾರು ಪ್ರದರ್ಶನವಾದ ಬಳಿಕ ಧೈರ್ಯ ಬಂತು' ಎಂದು ಪಾಪಣ್ಣನ ಬದುಕನ್ನು ಮುಂದಿಡುತ್ತಾರೆ.

                 ಪೆರುವಡಿಯವರದು ಸಹಜ ಹಾಸ್ಯ. ಕೃಷ್ಣಲೀಲೆ ಪ್ರಸಂಗದ 'ವಿಜಯ', ಕೃಷ್ಣಾರ್ಜುನ ಕಾಳಗದ 'ಮಕರಂದ', ದೇವ ದೂತ, ರಾಕ್ಷಸದೂತ.. ಹೀಗೆ ಪ್ರತೀ ಪಾತ್ರಗಳಿಗೂ ಪ್ರತ್ಯಪ್ರತ್ಯೇಕವಾದ ಅಭಿವ್ಯಕ್ತಿ. ರಂಗದಲ್ಲಿ ದೊರೆಯನ್ನೋ, ರಾಜನನ್ನೋ ಮೀರಿಸುವ ಆಳಲ್ಲ. ದೇವೇಂದ್ರನ ಸ್ಥಾನಗೌರವವನ್ನು ಅರಿತ ದೇವದೂತ. ನಾರದನಂತಹ ಭಕ್ತಿ ಹಿನ್ನೆಲೆಯ ಪಾತ್ರಗಳಲ್ಲಿ ಹಾಸ್ಯದ ಸೋಂಕಿಲ್ಲ. ಶ್ರೀದೇವಿಯಲ್ಲಿ ಸಂಧಾನಕ್ಕೆ ಬರುವ ಶುಂಭನ ಸಚಿವ 'ಸುಗ್ರೀವ' ಹಾಸ್ಯಗಾರನಾಗುವುದಿಲ್ಲ! ಹೀಗೆ ಒಂದಲ್ಲ ಒಂದು ಪಾತ್ರಗಳನ್ನು ಹಿಡಿದು ಮಾತನಾಡಿದರೆ ಪೆರುವಡಿಯವರ ಪಾತ್ರವೈಶಿಷ್ಟ್ಯದ ಪಾರಮ್ಯ ಅರ್ಥವಾಗುತ್ತದೆ.
ಪೆರುವಡಿಯವರಿಗೆ ಈಗ ಎಂಭತ್ತೈದು ವರುಷ. ಪಾತ್ರದ, ಕಲಾವ್ಯವಸಾಯದ ದಿವಸಗಳನ್ನು ಮೆಲುಕು ಹಾಕುವಾಗ ಅವರ ವಯಸ್ಸು ಹಿಂದೋಡುತ್ತದೆ. 

               'ಔಚಿತ್ಯ ಪ್ರಜ್ಞೆಯ ಸುಳಿವಿಲ್ಲದ ಹಾಸ್ಯ ನಗೆಗೀಡು. ರಂಗಕ್ಕೆ ಅನ್ಯಾಯ. ಪರೋಕ್ಷವಾಗಿ ತನಗೆ ತಾನು ಮಾಡಿಕೊಂಡ ಅಪಮಾನ. ಪ್ರೇಕ್ಷಕರು ನಗುತ್ತಾರೆ ಎಂದು ತೋಚಿದ್ದನ್ನು ಗೀಚುವುದಲ್ಲ. ಹಾಸ್ಯಗಾರನ ಪ್ರವೇಶ ಯಾವಾಗ ಆಗುತ್ತೆ ಎಂದು ಸಭಿಕರು ಕಾಯುವಂತಹ ಸ್ಥಿತಿಯನ್ನು ಹಾಸ್ಯಗಾರ ನಿರ್ಮಾಣ ಮಾಡಬೇಕು' ಎನ್ನುತ್ತಾರೆ.

              ಪ್ರಸಿದ್ಧ ಪದ್ಯಾಣ ಮನೆತನ. 1927ರಲ್ಲಿ ಜನನ. ಆರರ ತನಕ ವಿದ್ಯಾಭ್ಯಾಸ. ಸಂಕಯ್ಯ ಭಾಗವತರು ಮತ್ತು ಈಶ್ವರ ಭಾಗವತರು ಇವರ ಅಜ್ಜ. ಎಂಟನೇ ವರುಷದಿಂದ ತಾಳಮದ್ದಳೆಯಲ್ಲಿ ಭಾಗಿ. ಸ್ವಲ್ಪ ಸಂಸ್ಕೃತ ಅಭ್ಯಾಸ. ಕುರಿಯ ವಿಠಲ ಶಾಸ್ತ್ರಿಗಳ 'ಕೃಷ್ಣ'ನ ಪಾತ್ರದಿಂದ ಪ್ರಭಾವಿ. ಪಾತ್ರದ ಗುಂಗು ಅಂಟಿತು. ಅದು ಬಿಡಿಸಲಾರದ ಅಂಟು. ಬಣ್ಣದ ಗೀಳು ಹೆಚ್ಚಾಯಿತು. ಮೇಳ ಕೈಬೀಸಿ ಕರೆಯಿತು. ಪಾರಂಪರಿಕವಾದ ಆರಂಭಿಕ ಕಲಿಕೆ. ಮುಂದೆ ದೇಹ, ಭಾಷೆ, ಶಾರೀರಗಳು ಹಾಸ್ಯ ರಸದ ಒತ್ತಿಗಿದ್ದುದರಿಂದ 'ಹಾಸ್ಯಗಾರ'ರಾದುದು ಇತಿಹಾಸ.

               ಶ್ರೀ ಧರ್ಮಸ್ಥಳ ಮೇಳದಿಂದ ವ್ಯವಸಾಯ. ಬದುಕಿಗಾಗಿ ಹಲವು ಮೇಳಗಳಿಗೆ 'ಜಂಪಿಂಗ್'. ಮುಂದೆ ಮೂಲ್ಕಿ ಮೇಳದ ಯಜಮಾನಿಕೆ. ಹಾಸ್ಯಗಾರ ಮಾತ್ರವಲ್ಲ, 'ಮೇಳದ ಯಜಮಾನ'ನೆಂಬ ಹೆಗ್ಗಳಿಕೆ. ಮನೆತನಕ್ಕೂ, ಕಲಾಭಿಮಾನಿಗಳಿಗೂ ಮಾನ. ಡಾ.ಶೇಣಿಯವರಿಗೆ ಸಾಥ್ ಆಗಿದ್ದ ಬಪ್ಪನಾಡು ಕ್ಷೇತ್ರ ಮಹಾತ್ಮೆ ಪ್ರಸಂಗವನ್ನು ಹಿರಿಯರು ಈಗಲೂ ಜ್ಞಾಪಿಸಿಕೊಳ್ಳುತ್ತಾರೆ. 'ಇವರ ಯಜಮಾನಿಕೆಯ ಮೂಲ್ಕಿ ಮೇಳದ ಅಂದಿನ ಆಟಗಳ ಸ್ವಾರಸ್ಯಗಳು, ಯಶಸ್ಸು, ಸಂಪಾದನೆ, ಕಲಾವಿದರನ್ನು ಗುರುತಿಸುವ ಪರಿಯನ್ನು ಕಂಡಾಗ ಯಕ್ಷಗಾನಕ್ಕಾಗ ಸಂಭ್ರಮದ ದಿನಗಳು. ಆರ್ಥಿಕವಾಗಿ ಅಲ್ಲದಿದ್ದರೂ ಮಾನಸಿಕವಾಗಿ ಖುಷಿ ಕೊಟ್ಟ ದಿನಮಾನಗಳು' ಎನ್ನುತ್ತಾರೆ ಒಡನಾಡಿ ಹಿರಿಯರಾದ ಪಾತಾಳ ವೆಂಕಟ್ರಮಣ ಭಟ್.

                 ದೇಹ ಮಾಗಿದೆ. ಕೌಟುಂಬಿಕ ಹೊಣೆ ಹೆಗಲೇರಿದೆ. ರಂಗದಲ್ಲಿ ಭಾಗವಹಿಸಲು ವಯಸ್ಸು ಅಡ್ಡಿಯಾಗಿದೆ. ದೇಹ ಓಕೆ ಅಂದರೂ, ಮನಸ್ಸು ಮುಷ್ಕರ ಹೂಡುತ್ತದೆ. ಹಾಗಾಗಿ ಪೆರುವಡಿಯವರು ಸ್ವಲ್ಪ ಮಟ್ಟಿಗೆ ರಂಗದಿಂದ ದೂರ. ಆದರೆ ಸುತ್ತೆಲ್ಲಾ ನಡೆಯುವ ಪ್ರದರ್ಶನಗಳಿಗೆ ಈಗಲೂ ಭೇಟಿ ನೀಡುವುದು, ಪ್ರದರ್ಶನವನ್ನು ಆಸ್ವಾದಿಸುವುದು, ಬಣ್ಣದ ಮನೆಗೆ ಹೋಗಿ ನೆನಪಿನ ಬುತ್ತಿಯನ್ನು 'ಅಗತ್ಯ ಬಿದ್ದರೆ' ಬಿಚ್ಚುವುದು, ತಾನು ನಿರ್ವಹಿಸುತ್ತಿದ್ದ ಪಾತ್ರಗಳು ರಂಗದಲ್ಲಿ ಇತರರಿಂದ ಕಳಪೆಯಾಗಿ ನಿರ್ವಹಿಸಲ್ಪಟ್ಟಾಗ ಮಮ್ಮಲ ಮರುಗುವುದು, ಆಪ್ತರಲ್ಲಿ ಮನಬಿಚ್ಚಿ ಮಾತನಾಡುವುದು.. ಈ ಹಿರಿಯರ ಇಳಿ ವಯಸ್ಸಿನ ಚಟುವಟಿಕೆ.

                 ಹಾಸ್ಯಬ್ರಹ್ಮ ಪೆರುವಡಿ ನಾರಾಯಣ ಭಟ್ಟರಿಗೆ ಸಂದ ಪುರಸ್ಕಾರಗಳು ಹಲವು. ಸರಕಾರಿ ಮುದ್ರೆಯ ಪುರಸ್ಕಾರಗಳನ್ನು ಎತ್ತಿ ಹೇಳುವಷ್ಟಿಲ್ಲ! ಇತರ ಪ್ರಶಸ್ತಿಗಳು, ಸಂಮಾನಗಳು, ಗೌರವಗಳು ಸಾಲು ಸಾಲು. 'ನನ್ನನ್ನು. ನನ್ನ ಹಾಸ್ಯವನ್ನು ಕಲಾಭಿಮಾನಿಗಳು ಸ್ವೀಕರಿಸಿದ್ದಾರಲ್ಲಾ, ಅದೇ ದೊಡ್ಡ ಪ್ರಶಸ್ತಿ. ಹಳಬರು ಸಿಕ್ಕಾಗಲೆಲ್ಲಾ ಅಂದಿನ ಅಭಿವ್ಯಕ್ತಿಯನ್ನು ನೆನಪಿಸಿ ಗಂಟೆಗಟ್ಟಲೆ ಮಾತನಾಡುತ್ತಾರಲ್ಲಾ.. ಇದಕ್ಕಿಂತ ಹಿರಿದಾದ ಗೌರವ ಇನ್ನೇನು ಬೇಕು ಹೇಳಿ' ಎನ್ನುತ್ತಾರೆ.

                   ಕೀರ್ತಿಶೇಷ ಕುರಿಯ ವಿಠಲ ಶಾಸ್ತ್ರಿ ಶತಮಾನೋತ್ಸವ ಸರಣಿ ಕಾರ್ಯಕ್ರಮ ನಡೆಯುತ್ತಿದೆ. ಒಂದೊಂದು ಸಮಾರಂಭದಲ್ಲಿ ಕುರಿಯ ಶಾಸ್ತ್ರಿಗಳ ಒಡನಾಡಿಗಳನ್ನು ಗೌರವಿಸುವ ಪರಿಪಾಠ. ಅಕ್ಟೋಬರ್ 2ರಂದು ಅಪರಾಹ್ನ ಪುತ್ತೂರಿನ 'ನಟರಾಜ ವೇದಿಕೆ'ಯಲ್ಲಿ 'ಕುರಿಯ ವಿಠಲ ಶಾಸ್ತ್ರಿ ಸಂಸ್ಮರಣಾ ಪ್ರತಿಷ್ಠಾನ'ವು ಪೆರುವಡಿ ನಾರಾಯಣ ಭಟ್ಟರನ್ನು ಗೌರವಿಸಲಿದೆ.


ಹಿರಿಯ ಕಲಾವಿದ ಅರುವ ನಾರಾಯಣ ಶೆಟ್ಟಿ ನಿಧನ



ತೆಂಕುತಿಟ್ಟು ಯಕ್ಷಗಾನದ ಹಿರಿಯ ಪಾತ್ರಧಾರಿ ಅರುವ ನಾರಾಯಣ ಶೆಟ್ಟಿ (Aruva narayana shetty) ಯವರು 19 ಸೆಪ್ಟೆಂಬರ್ 2012ರಂದು ರಂಗದಲ್ಲಿ ಶಿರ್ಲಾಲಿನಲ್ಲಿ 'ಶ್ರೀಕೃಷ್ಣ' ಪಾತ್ರದ ನಿರ್ವಹಣೆಯಲ್ಲಿದ್ದಾಗಲೇ ಹೃದಯಾಘಾತಕ್ಕೆ ಒಳಗಾಗಿ ದೈವಾಧೀನರಾದರು. ನಾರಾಯಣ ಶೆಟ್ಟಿಯವರು ಉತ್ತಮ ಕಲಾವಿದ, ಸಂಘಟಕ, ಪ್ರಸಂಗಕರ್ತ, ಅರ್ಥಧಾರಿ.

12 ಜೂನ್ 1954ರಲ್ಲಿ ಜನನ. ಬೆಳ್ತಂಗಡಿ ತಾಲೂಕು ಅಳದಂಗಡಿ ಮುತ್ತಣ್ಣ ಶೆಟ್ಟಿ, ಚೆಲುವಮ್ಮ ಹೆತ್ತವರು. ಪ್ರೌಢಶಾಲಾ ಕಲಿಕೆ. ಕೆ.ಗೋವಿಂದ ಭಟ್ ಮತ್ತು ಅರುವ ಕೊರಗಪ್ಪ ಶೆಟ್ಟರಿಂದ ಪ್ರೇರಣೆ-ಮಾರ್ಗದರ್ಶನ. ಕೌರವ, ರಾಮ, ಕೃಷ್ಣ, ಹರಿಶ್ಚಂದ್ರ, ಈಶ್ವರ, ಕೋಟಿ.. ಮೊದಲಾದ ಪಾತ್ರಗಳಲ್ಲಿ ಉತ್ತಮ ನಿರ್ವಹಣೆ.

ನಲವತ್ತೈದು ವರುಷಗಳ ಸೇವೆ. ಕಟೀಲು, ಪುತ್ತೂರು, ಬಪ್ಪನಾಡು, ಕದ್ರಿ ಮೇಳಗಳಲ್ಲಿ ತಿರುಗಾಟ. ಎಂಟು ವರುಷಗಳ ಕಾಲ 'ಅಳದಂಗಡಿ ಶ್ರೀ ಸೋಮನಾಥೇಶ್ವರ ಯಕ್ಷಗಾನ ಮಂಡಳಿ'ಯ ಯಜಮಾನ.

ಬದುಕಿನ ಕೊನೆಯ ವರುಷಗಳಲ್ಲಿ ಶ್ರವಣ ಶಕ್ತಿ ಕೈಕೊಟ್ಟಿತ್ತು. ಆದರೂ ಎದುರಾಳಿಯ, ಭಾಗವತರ ತುಟಿ ಸಂಚಲನಕ್ಕೆ ಭಾಷೆಯನ್ನು ಕೊಟ್ಟ ಅಪರೂಪದ ಕಲಾವಿದ.

Monday, September 17, 2012

ಹಿರಿಯ ಸ್ನೇಹಿತ, ಕಲಾವಿದ ಮಧೂರು ಗಣಪತಿ ರಾವ್



          ಹಿರಿಯ ಯಕ್ಷಗಾನ ಕಲಾವಿದ ಮಧೂರು ಗಣಪತಿ ರಾವ್ 16 ಸೆಪ್ಟೆಂಬರ್ 2012ರಂದು ವಿಧಿವಶರಾದರು. ಅವರಿಗೆ 88 ವರುಷ ಪ್ರಾಯ.
           ತಂದೆ ಸುಬ್ಬರಾವ್. ತಾಯಿ ರುಕ್ಮಿಣಿ. 1924ರಲ್ಲಿ ಜನನ. ಸಹೋದರ ನಾರಾಯಣ ಹಾಸ್ಯಗಾರರ ಪೂರ್ಣ ಬೆಂಬಲ, ಪ್ರೇರಣೆ. ನಿತ್ಯ ವೇಷಧಾರಿಯಾಗಿ ಶ್ರೀ ಧರ್ಮಸ್ಥಳ ಮೇಳದಿಂದ ಬಣ್ಣದ ಬದುಕು ಆರಂಭ. 
              ಕೂಡ್ಲು, ಕುದ್ರೋಳಿ, ಮೂಲ್ಕಿ, ಕುಂಡಾವು, ಸುರತ್ಕಲ್, ಉಪ್ಪಳ ಮೇಳಗಳಲ್ಲಿ ಐದು ದಶಕದ ಕಲಾ ಸೇವೆ. ಬಬ್ರುವಾಹನ, ಧರ್ಮಾಂಗದ, ಚಂದ್ರಸೇನ, ಸುದರ್ಶನ, ಅರ್ಜುನ, ಕರ್ಣ, ತಾಮ್ರಧ್ವಜ, ಇಂದ್ರಜಿತು, ರಕ್ತಬೀಜ.. ಹೀಗೆ ವಿವಿಧ ಸ್ವಭಾವದ ಪಾತ್ರಗಳಲ್ಲಿ ಮಿಂಚಿದವರು. ತಾಳಮದ್ದಳೆಯಲ್ಲೂ ಪ್ರತ್ಯೇಕ ಛಾಪು.
              ಉಳಿಯ ಶ್ರೀ ಧನ್ವಂತರಿ ಯಕ್ಷಗಾನ ಕಲಾ ಸಂಘದಲ್ಲಿ ಸಕ್ರಿಯರಾಗಿದ್ದರು. ಸ್ಥಳೀಯವಾಗಿ ಕೂಟಾಟಗಳನ್ನು ನಡೆಸಿದ್ದಾರೆ. ಆಕಾಶವಾಣಿ, ದೂರದರ್ಶನ ಮತ್ತು ವಿವಿಧ ವಾಹಿನಿಗಳಲ್ಲಿ ತೊಡಗಿಸಿಕೊಂಡವರು.
                ಕೇರಳ ಸಂಗೀತ ನಾಟಕ ಅಕಾಡೆಮಿ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಪ್ರಶಸ್ತಿಗೆ ಭಾಜನರಾಗಿದ್ದರು. ತಾನು ಸಂಯೋಜಿಸುವ ಎಲ್ಲಾ ಕೂಟಾಟಗಳಲ್ಲಿ ಅಚ್ಚುಕಟ್ಟುತದತ್ತ ಅವರ ಒಲವು ಹೆಚ್ಚು. ಕಾರ್ಯಕ್ರಮ ಶುರುವಾಗುವ ತನಕ ಚಡಪಡಿಕೆ. 'ಆಹ್ವಾನಿತ ಕಲಾವಿದರು ಬರ್ತಾರೋ, ಇಲ್ವೋ' ಎಂಬ ಒತ್ತಡ. 'ಕಾರ್ಯಕ್ರಮ ಒಳ್ಳೆಯದಾಗಬೇಕು' ಎನ್ನುವುದು ಹಿಂದಿರುವ ಕಾಳಜಿ. ಅವರೊಂದಿಗೆ ವೇಷ ಮಾಡುವ ಅನುಭವ ಇದೆಯಲ್ಲಾ, ಅದೊಂದು ರೋಚಕ! ಅನುಭವಿಸಿದವರಿಗೆ ಗೊತ್ತು.
               ಪಾಪಣ್ಣ ವಿಜಯ ಪ್ರಸಂಗದದಲ್ಲಿ ಅವರದು 'ಚಂದ್ರಸೇನ', ನನ್ನ ಪಾತ್ರ 'ಗುಣಸುಂದರಿ'. ಪ್ರಸಂಗದ ಆರಂಭಕ್ಕೆ 'ತಂದೆ ಮೇಲೋ, ಗಂಡ ಮೇಲೋ' ಎಂಬ ವಾದ ಶುರುವಾಗುತ್ತದೆ. ಅವರ ಅನುಭವದ ಮಾತಿನ ಪರಿಪಕ್ವತೆಯ ಮುಂದೆ ನಾನು ಮೂಕನಾದಾಗ, ಪ್ರಶ್ನೆಗಳ ಮೂಲಕ ಮಾತನಾಡಿಸುತ್ತಿದ್ದರು. ಧೈರ್ಯ ತುಂಬುತ್ತಿದ್ದರು. ಆ ಬಳಿಕದ ಅವರ ಒಡನಾಟಗಳೆಲ್ಲಾ ಇನ್ನು ನೆನಪು ಮಾತ್ರ.
             ಒಂದು ಕ್ಷಣಕ್ಕೆ ಸಿಟ್ಟಾಗುವ, ಮತ್ತೊಂದು ಕ್ಷಣದಲ್ಲಿ ರಾಜಿ ಮಾಡಿಕೊಳ್ಳುವ ಮಗುವಿನ ಮನಸ್ಸು. ಹೇಳುವ ವಿಚಾರವನ್ನು ನೇರವಾಗಿ ಹೇಳುತ್ತಾರೆ. ಹೀಗಾಗಿ ಕೆಲವೊಮ್ಮೆ ಒರಟಾಗಿ ಕಾಣಿಸಿಕೊಳ್ಳುತ್ತಾರೆ. ಆದರೆ ಅವರ ಒಡನಾಟವಿರುವ, ಅವನ ಮನಸ್ಸನ್ನು ಅರಿತ ಮಂದಿಗೆ ಅವರು ಒರಟಲ್ಲ. ಮೃದು.
               ಒಮ್ಮೆ ಅವರ ಪರಿಚಯವಾದರೆ ಸಾಕು, ಮತ್ತೆಂದೂ ನಿಮ್ಮನ್ನು ಬಿಡರು. ಅಷ್ಟೊಂದು ಸ್ನೇಹಬಂಧ. ಕಳೆದ ಮೂರು ವರುಷದಿಂದ ಶಾರೀರಿಕವಾಗಿ ಸೊರಗಿದ್ದ ಗಣಪತಿ ರಾಯರು, ಮೂಡ್ ಬಂದಾಗ ತಾಳಮದ್ದಳೆಗಳಲ್ಲಿ ಭಾಗವಹಿಸಿದುದನ್ನು ಅವರ ಒಡನಾಡಿ ವಿಷ್ಣು ಭಟ್, ಬಾಲಚಂದ್ರ ಕಲ್ಲೂರಾಯ, ವೆಂಕಟಕೃಷ್ಣರು ಜ್ಞಾಪಿಸಿಕೊಳ್ಳುತ್ತಾರೆ.
ಹಿರಿಯ ಸ್ನೇಹಿತ, ಕಲಾವಿದ ಗಣಪತಿ ರಾಯರಿಗೆ ಅಕ್ಷರ ನಮನ.  

ಚಿತ್ರ : ಪ್ರದೀಪ್ ಕುಮಾರ್ ಬೇಕಲ್