Monday, October 21, 2024

ಹಿರಿಯ ಹಾಸ್ಯಗಾರ ಬಂಟ್ವಾಳ ಜಯರಾಮ ಆಚಾರ್‌ ಇನ್ನು ನೆನಪು.

 



 ಮೊನ್ನೆ ಮಂಗಳವಾರ ಪುತ್ತೂರಿನ ʼನಟರಾಜ ವೇದಿಕೆʼಯಲ್ಲಿ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಪ್ರವಾಸಿ ಮಂಡಳಿ ಇವರಿಂದ ಯಕ್ಷಗಾನ ಬಯಲಾಟ. ಶ್ರೀ ಧರ್ಮಸ್ಥಳ ಮೇಳದ ಕಲಾವಿದ ಚಂದ್ರಶೇಖರ ಧರ್ಮಸ್ಥಳ ಸಾರಥ್ಯ. ಅಂದು ಚೌಕಿಯಲ್ಲಿ ಒಬ್ಬರೇ ಕುಳಿತಿದ್ದರು. ಮಾತನಾಡಿಸಿದೆ. ಎಂದಿನಂತೆ ಉಭಯಕುಶಲೋಪರಿ.. ʼಈಗ ನನ್ನ ಬೆಲೆ ಹೆಚ್ಚಾಗಿದೆʼ ಎಂದು ಕಿವಿ ತೋರಿಸಿದ್ರು. ಫಕ್ಕನೆ ಅ‍ರ್ಥವಾಗಲಿಲ್ಲ. ಮತ್ತೆ ತಿಳಿಯಿತು.

          ಅವರ ಶ್ರವಣಶಕ್ತಿ ಕೆಲವು ವರುಷಗಿಂದ ಕುಂಠಿತವಾಗಿತ್ತು. ಅದಕ್ಕವರು ವೈದ್ಯಕೀಯ ವ್ಯವಸ್ಥೆ ಮಾಡಿಕೊಂಡಿದ್ದರು. “ಈಗ ಎರಡು ಕಿವಿಯೂ ಚೆನ್ನಾಗಿ ಕೇಳುತ್ತದೆ. ಇನ್ನು ನೀವು ಬಯ್ದರೆ ಗೊತ್ತಾಗ್ತದೆ. ಮೂವತ್ತು ಸಾವಿರ ರೂಪಾಯಿಗೂ ಅಧಿಕ ಖರ್ಚಾಯಿತು.” ಎಂದು ವಿನೋದದಿಂದ ಅನುಭವ ಹಂಚಿಕೊಂಡಿದ್ದರು. ಒಂದೇ ವಾರದಲ್ಲಿ ಸಾವಿನ ಸುದ್ದಿ. ಇಂದು ಅಂದರೆ 21-10-2024 ಮುಂಜಾನೆ ವಿಧಿವಶರಾದರು.

          ದಕ್ಷಾಧ್ವರ ಪ್ರಸಂಗವೊಂದರಲ್ಲಿ ವಿಪ್ರನ ಪಾತ್ರ ಮಾಡಿ ಹೇಳಿದ ಮಾತು ನೆನಪಾಗುತ್ತದೆ... “ ಕೆಮ್ಮು, ದಮ್ಮು,. ನಡೆಯುವುದಕ್ಕೆ ಆಗುವುದಿಲ್ಲ. ಹೆಂಡತಿ, ಮಕ್ಕಳು, ಬಂಧುಗಳು ಎಲ್ಲರೂ ಇದ್ದಾರೆ. ಆದರೆ ಯಾರಿಗೂ ಹೊರೆಯಾಗದೆ ಸಾಯಬೇಕೆನ್ನುವುದು ಆಶೆ” ಎಂದಿದ್ದರು.

 ದೈವಾಧೀನರಾದ ಬಂಟ್ವಾಳ ಹಾಸ್ಯಗಾರರಿಗೆ (Bunwala Jayarama Achar)  ಕಂಬನಿ...

( 2018 ಮಾರ್ಚ್‌ 9 ರಂದು ಪ್ರಜಾವಾಣಿಯ ಮಂಗಳೂರು ಆವೃತ್ತಿಯಲ್ಲಿ ಪ್ರಕಟವಾದ ನನ್ನ ʼದಧಿಗಿಣತೋʼ ಅಂಕಣ ಬರಹದ ಮರುಓದು. ಬಂಟ್ವಾಳರಿಗಿದು ಅಕ್ಷರ ನಮನ)  

     ಯಕ್ಷಗಾನದಲ್ಲಿ ನಾಟ್ಯದಿಂದ ತೊಡಗಿ ವೇಷದ ತನಕ ಎಲ್ಲವೂ ಕಲಿಕೆಯ ಹಿನ್ನೆಲೆಯಲ್ಲಿ ಪಕ್ವಗೊಳ್ಳುತ್ತಾ ಸಾಗುತ್ತವೆ. ಆದರೆ ಹಾಸ್ಯವು ಕಲಿತು ಬರುವಂತಹುದಲ್ಲ. ಅದು ಸ್ವ-ಭಾವ. ಇದರೊಂದಿಗೆ ಕಲಿಕೆಯು ಮಿಳಿತಗೊಂಡಾಗ 'ಹಾಸ್ಯಗಾರ' ರೂಪುಗೊಳ್ಳುತ್ತಾನೆ. ಹೀಗೆ ರೂಪುಗೊಂಡ ಹಾಸ್ಯಗಾರನೊಳಗೆ ಮೂರನೇ ಕಣ್ಣು ಜಾಗೃತವಾಗಿರಬೇಕು. ಜತೆಗೆ ಸ್ವ-ಎಚ್ಚರ ಕೂಡಾ. ಹೀಗೆ ರೂಪುಗೊಂಡರೆ ಯಕ್ಷಗಾನವೂ ಸೇರಿದಂತೆ ಎಲ್ಲಾ ರಂಗದಲ್ಲೂ ಜೈಸಬಹುದು.

ಬಂಟ್ವಾಳ ಜಯರಾಮ ಆಚಾರ್ ಅವರೊಂದಿಗೆ ಮಾತಿಗೆ ಕುಳಿತಾಗ ಇಂತಹ ಸೂಕ್ಷ್ಮ ವಿಚಾರಗಳು ಹೊಕ್ಕು ಹೊರಬರುತ್ತವೆ. ಇವರದು ನಕ್ಕು ನಗಿಸುವ ಹಾಸ್ಯವಲ್ಲ! ತಾನೇ ನಗುವ ಹಾಸ್ಯವೂ ಅಲ್ಲ! ಹಾಸ್ಯವು ಮಾತನ್ನು ಬಯಸುವುದಿಲ್ಲ. ಹಾಸ್ಯಗಾರ ವಾಚಾಳಿಯಾದಾಗ ಹಾಸ್ಯರಸವು ಮುಸುಕು ಹಾಕಿಕೊಳ್ಳುತ್ತದೆ! ಹಾಸ್ಯವೆಂದರೆ ವಿಕಾರವಲ್ಲ. ರಂಗದಲ್ಲಿ ಏನು ಮಾಡಿದರೂ ಪ್ರೇಕ್ಷಕರು ಸಹಿಸಿಕೊಳ್ಳುತ್ತಾರೆ ಎನ್ನುವುದು ಭ್ರಮೆ. 

ತುಳು ಪ್ರಸಂಗವೊಂದರ ಸಂವಾದವೊಂದರಲ್ಲಿ ಸಹ ಪಾತ್ರಧಾರಿಗಳು ಉಚ್ಛರಿಸಿದ ಪದವೊಂದನ್ನು ಅಬದ್ಧವಾಗಿ ಹೇಳಿದ್ದರಂತೆ. ಆಟ ನೋಡುತ್ತಿದ್ದ ಮಹಿಳೆಯೋರ್ವರು ತಲೆತಗ್ಗಿಸಿ ಎದ್ದು ಹೋದರು. ಅವರು ಹೇಳಿದ ಪದವು ತುಳುವಿನಲ್ಲಿ ಒಂದು ಅರ್ಥ ಕೊಟ್ಟರೆ, ಹಿಂದಿಯಲ್ಲಿ ಅಶ್ಲೀಲ ಅರ್ಥವನ್ನು ಸ್ಫುರಿಸಿತ್ತು. ಅರಿಯದೆ ರಂಗದಲ್ಲಿ ಬಳಸಿದ್ದರು. ಅಲ್ಲದೆ ಪ್ರೇಕ್ಷಕರನ್ನು ಟಾರ್ಗೆಟ್‌ ಮಾಡಿದ ಹಾಸ್ಯಗಳು ಎಂದೂ ಅಲ್ಪಾಯುಷಿ.

 ಇಂತಹ ಪ್ರಕರಣಗಳು ಆದಾಗ ನಾವೆಲ್ಲಿ ತಪ್ಪುತ್ತಿದ್ದೇವೆ ಎನ್ನುವ ಅರಿವಾಗುತ್ತದೆ. ಪ್ರೇಕ್ಷಕರು ಜಾಗೃತರಾಗಿದ್ದರೆ ರಂಗವು ಆಭಾಸವಾಗುವುದಿಲ್ಲ. ನಾನು ಬೆಳೆಯುತ್ತಿದ್ದ ಆರಂಭ ಕಾಲದಲ್ಲಿ ಪ್ರೇಕ್ಷಕರಲ್ಲಿ ರಂಗಎಚ್ಚರವಿತ್ತು. ಆಭಾಸಗಳನ್ನು ಸಹಿಸುತ್ತಿರಲಿಲ್ಲ. ಏಕಾಂತದಲ್ಲಿ ಕಲಾವಿದರೊಂದಿಗೆ ಅಸಹನೆಯಿಂದ ಹೇಳುತ್ತಿದ್ದರು. ಹೀಗೆ ಪ್ರೇಕ್ಷಕರಿಂದ ಹಿಮ್ಮಾಹಿತಿ ಸಿಕ್ಕಾಗ ತಪ್ಪನ್ನು ಸರಿಪಡಿಸಿಕೊಳ್ಳಲು ಸಹಾಯಕವಾಗುತ್ತದೆ. ಇಂತಹ ಘಟನೆಗಳು ನನ್ನೊಳಗೆ ಸದಾ ಜಾಗೃತ - ಬಂಟ್ವಾಳರ ಯಶದ ಹಾದಿಯ ಕ್ಯಾಪ್ಸೂಲುಗಳಿವು.

ಹಿಂದಿನ ಹಾಸ್ಯ ಹೇಗಿತ್ತು? ಬಂಟ್ವಾಳರು ಹೇಳುತ್ತಾರೆ – “ಪಾತ್ರದ ಕುಣಿತದ ವಿನ್ಯಾಸಗಳು ಯಕ್ಷಗಾನದ ಚೌಕಟ್ಟಿನಲ್ಲಿದ್ದುವು. ಈಗಿನಂತೆ ಫಿನಿಶಿಂಗ್ ಇದ್ದಿರಲಿಲ್ಲ. ಹಾಸ್ಯಗಾರ ಕಲಿಕಾ ಪಠ್ಯದೊಳಗೆ ತನ್ನ ಜಾಣ್ಮೆಯನ್ನು ಪ್ರದರ್ಶಿಸಬೇಕು. ಮಾತಿನಲ್ಲಿ ಹೆಚ್ಚು ದ್ವಂದ್ವಾರ್ಥ ಪದಗಳಿರುತ್ತಿದ್ದುವು. ಜನರು ಅದನ್ನು ಅಶ್ಲೀಲ, ಅಬದ್ಧ ಎಂದು ಸ್ವೀಕರಿಸುತ್ತಿರಲಿಲ್ಲ. ಎಂಜಾಯ್ ಮಾಡುತ್ತಿದ್ದರು. ಹಾಸ್ಯ ರಸವಾಗಿಯೇ ಸ್ವೀಕೃತಿ ಪಡೆಯುತ್ತಿತ್ತು. ಜಾತಿಗೆ ಸಂಬಂಧಪಟ್ಟ ಪಾತ್ರಗಳು ಬಂದಾಗ ಎಲ್ಲೂ ಜಾತಿಯ ಸಮಸ್ಯೆ ಉಂಟಾಗುತ್ತಿರಲಿಲ್ಲ. ಈಗ ಬಿಡಿ, ಒಂದೊಂದು ಪದವನ್ನು ಎತ್ತಿ ಹಿಡಿದು ವಿವಾದವನ್ನುಂಟು ಮಾಡುವ ಮನಃಸ್ಥಿತಿ ಉಂಟಾಗಿದೆ.”

ಬಂಟ್ವಾಳ ಜಯರಾಮ ಆಚಾರ್ ಹನುಮಗಿರಿ ಶ್ರೀ ಕೋದಂಡರಾಮ ಮೇಳದ ಹಾಸ್ಯಗಾರರು. ಸುಮಾರು ಅರ್ಧ ಶತಮಾನದ ರಂಗಾನುಭವ. ಇವರ ತಂದೆ ಹಾಸ್ಯಗಾರರು. ತಂದೆ ಅಮ್ಟಾಡಿ ಮೇಳದಲ್ಲಿದ್ದಾಗ ಚಿಕ್ಕ ಪಾತ್ರಗಳ ಮೂಲಕ ಬಣ್ಣ ಹಚ್ಚಿದರು. ಶಾಲಾ ಕಲಿಕೆಯ ನಿಲುಗಡೆಯ ಬಳಿಕ ಬಣ್ಣದ ಲೋಕದತ್ತ ಚಿತ್ತ. ಅಮ್ಮನ ಪ್ರೋತ್ಸಾಹ. ಮುಂದೆ ಸುಂಕದಕಟ್ಟೆ, ಸೊರ್ನಾಡು, ಕಟೀಲು ಮೇಳಗಳಲ್ಲಿ ನಾಲ್ಕು ವರುಷಗಳ ಅಭ್ಯಾಸ. ನಂತರವಷ್ಟೇ ಶ್ರೀಧರ್ಮಸ್ಥಳ ಯಕ್ಷಗಾನ ಕೇಂದ್ರದಲ್ಲಿ ಕಲಿಕೆ. “ನಾನೇನು ಕುಣಿಯುತ್ತೇನೆ ಎಂದು ಹೇಳಬೇಕಾದರೆ ಗುರುವಿನ ಬಳಿಯೇ ಕಲಿಯಬೇಕು. ಮಹಾನ್ ಗುರು ಪಡ್ರೆ ಚಂದು ಗುರುಗಳಾಗಿ ಒದಗಿದ್ದರು. ಧರ್ಮಸ್ಥಳದ ಪೂಜ್ಯ ಖಾವಂದರು ನನ್ನೊಳಗಿನ ಹಾಸ್ಯಗಾರನಿಗೆ ರೂಪು ಕೊಟ್ಟರು.” ಎನ್ನುತ್ತಾರೆ.

ಆ ಘಟನೆಯನ್ನು ಬಂಟ್ವಾಳರು ಸ್ವಾರಸ್ಯವಾಗಿ ಹೇಳುತ್ತಾರೆ. ಕಲಿಕೆಯ ಕೊನೆಗೆ ವಿದ್ಯಾರ್ಥಿಗಳಿಂದ ಪ್ರದರ್ಶನ. ಪ್ರಸಂಗ ರತಿ ಕಲ್ಯಾಣ. ಬಂಟ್ವಾಳರದು 'ಮೇಘಸ್ತನಿ'ಯ ಪಾತ್ರ. ತುಂಬು ಉತ್ಸಾಹದಿಂದ ಅಭಿನಯಿಸಿದ್ದರು ಕೂಡಾ. ಕೊನೆಗೆ ಗುರು ಪಡ್ರೆ ಚಂದು ಅವರಲ್ಲಿ ಖಾವಂದರು ಹೇಳಿದರಂತೆ - 'ಇವರಿಗೆ ಬಣ್ಣದ ವೇಷ ಬೇಡ, ಹಾಸ್ಯಕ್ಕೆ ತಯಾರು ಮಾಡಿ'. ಅಂದರೆ ಅಂದಿನ ಮೇಘಸ್ತನಿಯ ರಾಕ್ಷಸಿಯ ಅಭಿವ್ಯಕ್ತಿಯಲ್ಲಿ ಹಾಸ್ಯರಸವೇ ಹೆಚ್ಚಿತ್ತಂತೆ! ಆಗ ಗುರುಕುಲದಲ್ಲಿ ಕಲಿಸುವ ರೀತಿಯೂ ಅನನ್ಯ. ಮನಮುಟ್ಟುವ ಪಾಠ, ಪಠ್ಯ. ನಂತರ ಕಟೀಲು, ಸುಂಕದಕಟ್ಟೆ ಪುತ್ತೂರು, ಹೊಸನಗರ, ಎಡನೀರು ಮೇಳಗಳಲ್ಲಿ ತಿರುಗಾಟ.

ಹಾಸ್ಯಗಾರರಾದ ಸುಜನ ಸುಳ್ಯ, ನೆಲ್ಲಿಕಟ್ಟೆ ನಾರಾಯಣ ಹಾಸ್ಯಗಾರರು, ಮಿಜಾರು ಅಣ್ಣಪ್ಪ, ವಿಟ್ಲ ಗೋಪಾಲಕೃಷ್ಣ ಜೋಶಿ.. ಹೀಗೆ ಹಿರಿಯ ಹಾಸ್ಯಗಾರರ ಪ್ರಭಾವ. ಆದರೆ ಯಾರದ್ದೇ ಅನುಕರಣೆಯಿಲ್ಲ. ಸ್ವ-ಪಾಕದಲ್ಲಿ ಕಟ್ಟಿಕೊಂಡ ಬದುಕು. ಬಹುಶಃ ರಂಗಶಿಸ್ತು ಬಂದಿರುವುದು ಇಂತಹ ಹಿರಿಯರ ಒಡನಾಟದ ಫಲ. ಶಿಷ್ಟ ಹಾಸ್ಯವು ಮೂಡಿಬಂದಿರುವುದು 'ರಂಗದಲ್ಲಿ ಹೇಗಿರಬಾರದು' ಎನ್ನುವ ಎಚ್ಚರವು ಕಲಿಸಿದ ಪಾಠ. ಹಾಸ್ಯಗಾರರು ನಿರ್ವಹಿಸುವ ಹಾಸ್ಯೇತರ ಪಾತ್ರಗಳಲ್ಲಿ ಹಾಸ್ಯ ನುಸುಳಬಾರದು ಎನ್ನುವ ಸ್ಪಷ್ಟ ಜ್ಞಾನ ಬಂಟ್ವಾಳರಲ್ಲಿದೆ.

ಯಕ್ಷಗಾನದ ಹಾಸ್ಯದ ಸ್ವರೂಪ ಹೇಗೆ? ಹಾಸ್ಯಗಾರ ತನ್ನ ಹಾಸ್ಯವನ್ನು ರಂಗದಲ್ಲಿ ದುರುಪಯೋಗ ಮಾಡಬಾರದು. ಯಾರನ್ನೋ ಮೆಚ್ಚಿಸಲು ಹಗುರನಾಗಬಾರದು. ಮಾತು ಮಿತವಾಗಿದ್ದರೆ ಹಾಸ್ಯ ರಸದ ಉತ್ಪತ್ತಿಗೆ ಅವಕಾಶ ಹೆಚ್ಚು. ಒಂದು ನೋಟದಿಂದ, ನಗೆಯಿಂದ, ನಡಿಗೆಯಿಂದ ಹಾಸ್ಯ ರಸ ಸಾಧ್ಯ. ಹಾಸ್ಯದ ಪಾತ್ರಾಭಿವ್ಯಕ್ತಿಗೆ ಪೂರ್ವಸಿದ್ಧತೆ ಮಾಡಿಕೊಂಡರೆ ಪ್ರಯೋಜನವಿಲ್ಲ. ರಂಗದಲ್ಲಿ ಸಹಪಾತ್ರ, ಹಿಮ್ಮೇಳ, ಪ್ರೇಕ್ಷಕರ ಪ್ರತಿಕ್ರಿಯೆ ಜತೆಗೆ ಪಾತ್ರಧಾರಿಯ ಅಂದಿನ ಮನಃಸ್ಥಿತಿ... ಹೀಗೆ ಎಲ್ಲಾ ಒಳಸುರಿಗಳು ಒಗ್ಗೂಡಿ ಅಭಿವ್ಯಕ್ತಿ ರೂಪುಗೊಳ್ಳುತ್ತದೆ. ಮುಖ್ಯವಾಗಿ ಗಮನಿಸಬೇಕಾದ್ದು ಹಾಸ್ಯಗಾರ ರಂಗದಲ್ಲಿ ಸ್ವತಂತ್ರನಲ್ಲ. ಸಹಪಾತ್ರದ ಓಘ, ಅನುಭವದಂತೆ ಹಾಸ್ಯಗಾರದ ಅಭಿವ್ಯಕ್ತಿ. ಸಹಪಾತ್ರ ಸೊರಗಿದರೆ ಹಾಸ್ಯವೂ ಸೊರಗುತ್ತದೆ.

ಬದಲಾದ ಮನಃಸ್ಥಿತಿಯಲ್ಲಿ ಎಲ್ಲಾ ರಂಗದಲ್ಲೂ ಹಾಸ್ಯವು ಹಾಸ್ಯಾಸ್ಪದವಾಗುತ್ತಿವೆ. ರಂಗದಲ್ಲಿ ಹಾಸ್ಯಗಾರ ಇರುತ್ತಾರೆ ಹೊರತು ಅವರ ಹಾಸ್ಯಕ್ಕೆ ಪ್ರೇಕ್ಷಕರು ನಗುವುದಿಲ್ಲ! ಬದುಕಿನಲ್ಲಿ ನಗು ಕಳೆದುಹೋಗಿದೆ! ನಗಲೂ ಗೊತ್ತಿಲ್ಲ! ಮತ್ತೊಂದೆಡೆ ಹಾಸ್ಯ ರಸಗಳ ಉತ್ಪತ್ತಿಯಲ್ಲಿ ಹಾಸ್ಯಗಾರರು ಸೋಲುತ್ತಿದ್ದಾರೆ!  ಇಂತಹ ಸ್ಥಿತಿಯಲ್ಲಿ ಬಂಟ್ವಾಳರ ಹಾಸ್ಯ ಪ್ರಸ್ತುತವಾಗುತ್ತದೆ. ತನ್ನದು ಯಕ್ಷಗಾನದ ಹಾಸ್ಯ ಎನ್ನುವ 'ಸದಾಎಚ್ಚರ' ಇವರ ಹಾಸ್ಯ ಪಾತ್ರಗಳ ಯಶದ ಗುಟ್ಟು. ದಕ್ಷಾಧ್ವರ ಪ್ರಸಂಗದ 'ವಿಪ್ರ', ದೇವಿಮಹಾತ್ಮೆಯ 'ಮಾಲಿನಿ ದೂತ', ಬೇಡರಕಣ್ಣಪ್ಪ ಪ್ರಸಂಗದ 'ಕೈಲಾಸ ಶಾಸ್ತ್ರಿ', ಮಹಾಕಲಿ ಮಗಧೇಂದ್ರದ 'ಜಗಜಟ್ಟಿ'.. ಹೀಗೆ ವಿವಿಧ ಪಾತ್ರ ವೈವಿಧ್ಯಗಳಲ್ಲಿ ಬಂಟ್ವಾಳರ ಅಭಿವ್ಯಕ್ತಿ ಮೇಲ್ಮೆ ಪಡೆದಿದೆ.

ನಮ್ಮ ಕಲಾ ಬದುಕಿನ ಮಹತ್ವದ ಕಾಲಘಟ್ಟ ಯಾವುದು? ಎನ್ನುವ ಪ್ರಶ್ನೆಗೆ ಬಂಟ್ವಾಳ ಜಯರಾಮ ಆಚಾರ್ಯರು ಹೇಳುತ್ತಾರೆ – “ಪುತ್ತೂರು ಮೇಳದ ತಿರುಗಾಟದ ಸಮಯ. ಬಾಲೆನಾಗಮ್ಮ, ರಾಣಿ ಚಿತ್ರಾಂಗದೆ ಮೊದಲಾದ ಪ್ರಸಂಗಗಳು ಹಿಟ್ ಆಗಿತ್ತು. ಆಗ ಕಾಳಿಂಗ ನಾವಡರ ವಿಜೃಂಬಣೆಯ ಕಾಲ. ಪತ್ರಿಕೆಯಲ್ಲಿ ಅವರ ಹೆಸರು ರಾರಾಜಿಸುತ್ತಿತ್ತು. ಆ ಹೊತ್ತಲ್ಲಿ 'ಬಂಟ್ವಾಳ ಜಯರಾಮ ಆಚಾರ್ಯರ ಪಾತ್ರವನ್ನು ನೋಡಲು ಮರೆಯದಿರಿ' ಎಂದು ಪತ್ರಿಕೆಯಲ್ಲಿ ಪ್ರಕಟವಾಗಲು ಶುರುವಾಗಿತ್ತು. ಆಗದು ದೊಡ್ಡ ಸಂಗತಿ. ನಮ್ಮಂತಹ ಸಣ್ಣ ಕಲಾವಿದರಿಗೆ ಹೆಸರು ತಂದುಕೊಟ್ಟ ಪುತ್ತೂರು ಮೇಳದ ಪ್ರಸಂಗಗಳು, ತಂದುಕೊಟ್ಟ ಕೀರ್ತಿಗಳು ಮರೆಯುವಂತಹುದಲ್ಲ.”

ನಾಲ್ಕೈದು ದಶಕದ ಹಿಂದೆ ನೋಟ ಹರಿಸೋಣ. ನಾಟಕ ಕಂಪೆನಿಗಳಲ್ಲಿ ತಯಾರಾದ ಕಲಾವಿದರು ಸಿನಿಮಾ ರಂಗದಲ್ಲಿ ಮಿಂಚಿದ್ದೇ ಹೆಚ್ಚು. ನಾಟಕ ರಂಗವು ಭಾವಗಳನ್ನು ಕಟ್ಟಿಕೊಡುತ್ತದೆ. ಅಭಿನಯಗಳಲ್ಲಿ ಭಾವನೆಗಳ ಅನಾವರಣಕ್ಕೆ ನಾಟಕ ರಂಗ ದೊಡ್ಡ ಕೊಡುಗೆ. ಈ ಹಿನ್ನೆಲೆಯಲ್ಲಿ ಬಂಟ್ವಾಳರು ನಾಟಕ, ಸಿನಿಮಾ ರಂಗದಲ್ಲಿ ತೊಡಗಿಸಿಕೊಂಡಿದ್ದಾರೆ. ಮೂರು ಕ್ಷೇತ್ರಗಳ ದಟ್ಟ ಅನುಭವ ಅವರನ್ನು ನಿಜಾರ್ಥದ ಹಾಸ್ಯಗಾರರನ್ನಾಗಿ ರೂಪಿಸಿದೆ. ಯಕ್ಷಗಾನದ ಆರಂಭ ಕಾಲದಲ್ಲಿ ಕಲಿತ ಹಿಮ್ಮೇಳ ಜ್ಞಾನವೂ ಕಲಾಯಾನಕ್ಕೆ ಪೂರಕವಾಗಿದೆ.

(ಚಿತ್ರಗಳು : ರಾಮ್ ನರೇಶ್ ಮಂಚಿ)

 


Wednesday, July 10, 2024

ಪಡುಕಾನ ತಿಮ್ಮಯ್ಯ ಆಚಾರ್ ಸ್ಮೃತಿ - ಹೊಸ ತಲೆಮಾರಿಗೆ ಗತಿಸಿದ ಸಾಧಕರನ್ನು ಪರಿಚಯಿಸಬೇಕು - ನಾ. ಕಾರಂತ ಪೆರಾಜೆ


 

     “ಒಂದೊಂದು ಕಾಲಘಟ್ಟದಲ್ಲಿ ಯಕ್ಷಗಾನವನ್ನು ಮನಸಾ ಆರಾಧಿಸಿ, ಅದನ್ನು ಜನಮಾನಸದಲ್ಲಿ ಹಬ್ಬಿಸಿದ ಅನೇಕರು ಗತಿಸಿದ್ದಾರೆ. ಅವರ ಕೊಡುಗೆಗಳು ದಾಖಲಾಗಲಿಲ್ಲ. ದಾಖಲು ಮಾಡಬೇಕಾದ ಸಂಪನ್ಮೂಲಗಳು ವಿರಳವಾಗಿದ್ದುವು. ಅವರ ಸಾಂಗತ್ಯದಲ್ಲಿದ್ದ ಬೆರಳೆಣಿಕೆಯ ಮಂದಿ ಅಂತಹ ಹಿರಿಯರನ್ನು ಜ್ಞಾಪಿಸಿ, ಹೊಸ ತಲೆಮಾರಿಗೆ ಪರಿಚಯಿಸುವುದು ಕಲೆಯ ಅಭಿವೃದ್ಧಿಯ ಹಿನ್ನೆಲೆಯಲ್ಲಿ ಬದ್ಧತೆಯಲ್ಲಿ ಮಾಡಬೇಕಾದ ಕಾಯಕವಾಗಿದೆ.” ಎಂದು ಕಲಾವಿದ, ಲೇಖಕ ನಾ. ಕಾರಂತ ಪೆರಾಜೆ ಹೇಳಿದರು.

     ಅವರು ಪುತ್ತೂರು ಸನಿಹದ ದೊಡ್ಡಡ್ಕದ ಪಾಲೆಚ್ಚಾರು ಗೋವಿಂದ ನಾಯಕರ 'ಶಿವಕೃಪಾ ನಿವಾಸ'ದಲ್ಲಿ ಜರುಗಿದ ಕೀರ್ತಿಶೇಷ ಮದ್ದಲೆಗಾರ ಪಡುಕಾನ ತಿಮ್ಮಯ್ಯ ಆಚಾರ್ ಅವರ ಸ್ಮೃತಿ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, “ಪಡುಕಾನ ತಿಮ್ಮಯ್ಯರು ಗತಿಸಿ ನಾಲ್ಕು ದಶಕದ ಹತ್ತಿರವಾದರೂ ಅವರನ್ನು ಸ್ಮರಿಸಿ ಗೌರವಿಸುವ ಮೂಲಕ ಅವರ ಶಿಷ್ಯ ಗೋವಿಂದ ನಾಯಕರು ನಿಜಾರ್ಥದ ಗುರುವಂದನೆಯನ್ನು ಸಲ್ಲಿಸಿದ್ದಾರೆ” ಎಂದರು.

     ಯಕ್ಷಗಾನ ಹಿಮ್ಮೇಳದ ಭಾಷಾವಿದ ಪದ್ಯಾಣ ಶಂಕರನಾರಾಯಣ ಭಟ್ ಹಾಗೂ ಅರ್ಥಧಾರಿ, ವೇಷಧಾರಿ ಗುಂಡ್ಯಡ್ಕ ಈಶ್ವರ ಭಟ್ ಜತೆಯಾಗಿ ಸಮಾರಂಭವನ್ನು ದೀಪಜ್ವಲನದ ಮೂಲಕ ಉದ್ಘಾಟಿಸಿದರು. ತಿಮ್ಮಯ್ಯ ಆಚಾರ್ ಅವರ ಚಿರಂಜೀವಿ ಕೃಷ್ಣಯ್ಯ ಆಚಾರ್ ಉಪಸ್ಥಿತರಿದ್ದರು. ಗೋವಿಂದ ನಾಯಕ್ ಎಲ್ಲರನ್ನೂ ಸ್ವಾಗತಿಸಿ, ವಂದಿಸಿದರು. ದುರ್ಗಾಪ್ರಸಾದ್, ಗಣಪತಿ ನಾಯಕ್  ಅತಿಥಿಗಳನ್ನು ಗೌರವಿಸಿದರು.

     ಪೂರ್ವಾಹ್ನ ದೇವತಾರಾಧನೆಯ ಜತೆಗೆ ಬಾಲ ಕಲಾವಿದರಿಂದ ಸಂಗೀತ, ಸ್ಮೃತಿ ಕಲಾಪದ ಕೊನೆಗೆ 'ಶ್ರೀಕೃಷ್ಣ ರಾಯಭಾರ, ಸುಧನ್ವ ಮೋಕ್ಷ' ಪ್ರಸಂಗಗಳ ತಾಳಮದ್ದಳೆಗಳು ಜರುಗಿದ್ದುವು. ಕಲಾವಿದರಾಗಿ - ಪಾಲೆಚ್ಚಾರು ಗೋವಿಂದ ನಾಯಕ್, ಶ್ರೀಪತಿ ನಾಯಕ್ ಆಜೇರು, ಶ್ರೀಮತಿ ಅಮೃತಾ ಅಡಿಗ (ಭಾಗವತರು), ಪದ್ಯಾಣ ಶಂಕರನಾರಾಯಣ ಭಟ್, ಮುರಾರಿ ಕಡಂಬಳಿತ್ತಾಯ, ಕೌಶಿಕ್ ರಾವ್ ಪುತ್ತಿಗೆ, ಕೃಷ್ಣಪ್ರಕಾಶ ಉಳಿತ್ತಾಯ, ಪಿ.ಜಿ.ಜಗನ್ನಿವಾಸ ರಾವ್, ಮುರಳೀಧರ ಕಲ್ಲೂರಾಯ, ಕೃಷ್ಣಯ್ಯ ಆಚಾರ್, ಸತ್ಯನಾರಾಯಣ ಅಡಿಗ (ಚೆಂಡೆ, ಮದ್ದಳೆ), ಪಕಳಕುಂಜ ಶ್ಯಾಮ ಭಟ್, ಗುಂಡ್ಯಡ್ಕ ಈಶ್ವರ ಭಟ್, ನಾ. ಕಾರಂತ ಪೆರಾಜೆ, ಗುಡ್ಡಪ್ಪ ಬಲ್ಯ, ಭಾಸ್ಕರ ಶೆಟ್ಟಿ ಸಾಲ್ಮರ, ಕೇಶವ ಭಟ್ ಕೇಕಣಾಜೆ, ಅಶೋಕ ಸುಬ್ರಹ್ಮಣ್ಯ ಭಟ್ ಪೆರುವಡಿ, ಸಚ್ಚಿದಾನಂದ ಪ್ರಭು (ಅರ್ಥದಾರಿಗಳು) ಭಾಗವಹಿಸಿದ್ದರು.   

 

Tuesday, July 9, 2024

ತಾಳಮದ್ದಳೆ ಸಪ್ತಾಹ ಸಮಾರೋಪ - ಪದ್ಯಾಣ, ಕುರಿಯ ಪ್ರಶಸ್ತಿ ಪ್ರದಾನ


'ತಾಳಮದ್ದಳೆಯಿಂದ ಬುದ್ಧಿಗೆ ಗ್ರಾಸ, ಬಯಲಾಟದಿಂದ ಮೋದಾನುಭವʼ- ಎಡನೀರು ಶ್ರೀ

      “ಯಕ್ಷಗಾನ ಬಯಲಾಟಗಳು ಮನಸ್ಸಿಗೆ ಮೋದವನ್ನು ನೀಡಿದರೆ, ತಾಳಮದ್ದಳೆಯು ಬುದ್ದಿಗೆ ಗ್ರಾಸವನ್ನು ಒದಗಿಸುತ್ತದೆ. ಭಾಷಾಶುದ್ಧತೆ, ಪುರಾಣ ಜ್ಞಾನ, ಅಂದವಾಗಿ ಮಾತನಾಡುವ ಶಕ್ತಿ, ಗ್ರಹಿಕಾ ಸಾಮಥ್ರ್ಯ ಮತ್ತು ಬದುಕಿಗೆ ಬೇಕಾದ ಸಂದೇಶಗಳನ್ನು ಯಕ್ಷಗಾನವು ಒದಗಿಸುತ್ತದೆ. ಅಕ್ಷರಾಭ್ಯಾಸ ಇಲ್ಲದವರೂ ಆಟ, ಕೂಟಗಳನ್ನು ನೋಡಿಯೇ ಪುರಾಣ ಜ್ಞಾನವನ್ನು ಪಡೆದವರಿದ್ದಾರೆ. ಅದು ಯಕ್ಷಗಾನದ ಶಕ್ತಿ.” ಎಂದು ಎಡನೀರು ಮಠದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಹೇಳಿದರು.

     ಅವರು ಪುತ್ತೂರಿನ ಶ್ರೀ ವೆಂಕಟರಮಣ ದೇವಸ್ಥಾನದ ಶ್ರೀ ಸುಕೃತೀಂದ್ರ ಸಭಾವನದಲ್ಲಿ ಜರುಗಿದ ತಾಳಮದ್ದಳೆ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ (7-7-2024) ಅನುಗ್ರಹ ಸಂದೇಶ ನೀಡುತ್ತಾ, ಎಡನೀರು ಮಠದಲ್ಲಿ ಚಾತುರ್ಮಾಸ್ಯ ವ್ರತಾಚರಣೆ ಸಂದರ್ಭದಲ್ಲಿ ಹಿಂದಿನಿಂದಲೂ ತಾಳಮದ್ದಳೆಯು ಆರಾಧನೆಯ ರೂಪದಲ್ಲಿ ನಡೆಯುತ್ತದೆ.” ಎಂದರು. ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ) ಉಜಿರೆ ಇವರು ಕಾರ್ಯಕ್ರಮವನ್ನು ಆಯೋಜಿಸಿದ್ದರು.

     ಈ ಸಂದರ್ಭದಲ್ಲಿ ಪದ್ಯಾಣ ಮನೆತನದ ಹಿರಿಯ ಪುಟ್ಟು ನಾರಾಯಣ ಭಾಗವತರ ಸ್ಮೃತಿಯಲ್ಲಿ ನೀಡುವ 'ಪದ್ಯಾಣ ಪ್ರಶಸ್ತಿ'ಯನ್ನು ಹಿರಿಯ ಭಾಗವತ ಕುರಿಯ ಗಣಪತಿ ಶಾಸ್ತ್ರಿ ಹಾಗೂ ಕುರಿಯ ವಿಠಲ ಶಾಸ್ತ್ರಿ ನೆನಪಿನ 'ಕುರಿಯ ಪ್ರಶಸ್ತಿ'ಯನ್ನು ಹಿರಿಯ ಹಿಮ್ಮೇಳ ವಾದಕರಾದ ಧರ್ಮಸ್ಥಳದ ಬಿ.ಸೀತಾರಾಮ ತೋಳ್ಪಾಡಿತ್ತಾಯರಿಗೆ ಶ್ರೀಗಳು ಪ್ರದಾನಿಸಿದರು. ʼಕುರಿಯ ಸ್ಮೃತಿ ಗೌರವʼವನ್ನು ಯಕ್ಷಗಾನ ಅರ್ಥದಾರಿಗಳಾದ ಕೆ.ಭಾಸ್ಕರ ರಾವ್ ಹಾಗೂ ಭಾಸ್ಕರ ನೂರಿತ್ತಾಯ ಬಾರ್ಯ ಇವರಿಗೆ ನೀಡಲಾಯಿತು.

     ಪುತ್ತೂರು ಮುಳಿಯ ಜ್ಯುವೆಲ್ಲರ್ಸ್‌ ಇದರ ಆಡಳಿತ ನಿರ್ದೇಶಕ ಮುಳಿಯ ಕೇಶವ ಪ್ರಸಾದ್, ಯಕ್ಷಗಾನ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಷಿಯವರು ಪ್ರಶಸ್ತಿ ಪುರಸ್ಕೃತರನ್ನು ನುಡಿಹಾರಗಳ ಮೂಲಕ ಗೌರವಿಸಿದರು. ಶ್ರೀಮತಿ ಶೀಲಾ ಗಣಪತಿ ಭಟ್ ಉಪಸ್ಥಿತರಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಹಂಗಾಮಿ ಅಧ್ಯಕ್ಷ ಡಾ.ಟಿ.ಶ್ಯಾಮ ಭಟ್ ಮಾತನಾಡುತ್ತಾ, “ಕೀರ್ತಿಶೇಷ ಭಾಗವತ ಪದ್ಯಾಣ ಗಣಪತಿ ಭಟ್ಟರು ಕಾಲಮಿತಿ ಪ್ರದರ್ಶನವನ್ನು ಯಶಸ್ವಿಯಾಗಿ ನಿಭಾಯಿಸಿದವರು. ಪದ್ಯಾಣ ಮತ್ತು ಕುರಿಯ ಮನೆತನಗಳ ಯಕ್ಷಗಾನೀಯ ಕೊಡುಗೆಗಳಲ್ಲಿ ಸಮರ್ಪಣಾ ಭಾವವಿರುವುದನ್ನು ಕಾಣಬಹುದು.” ಎಂದರು.

     ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನದ ಸಂಚಾಲಕ ಉಜಿರೆ ಅಶೋಕ ಭಟ್ಟರು ಸಂಮಾನಿತರನ್ನು ನುಡಿಹಾರಗಳ ಮೂಲಕ ಅಲಂಕರಿಸಿದರು. ತಾಳಮದ್ದಳೆ ಸಪ್ತಾಹದುದ್ದಕ್ಕೂ ಭಾಗವತ ಪದ್ಯಾಣ ಗಣಪತಿ ಭಟ್ಟರ ಸ್ಮೃತಿಯನ್ನು ಮಾಡಲಾಗಿತ್ತು. ಪುತ್ತೂರಿನ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದ ಆಡಳಿತ ಮಂಡಳಿಯು ಸಪ್ತಾಹದ ಸಂಘಟನೆಯಲ್ಲಿ ದೊಡ್ಡ ಹೆಗಲು ನೀಡಿತ್ತು.

ಕಲಾವಿದ, ಲೇಖಕ ನಾ. ಕಾರಂತ ಪೆರಾಜೆ ನಿರ್ವಹಿಸಿದರು. ಪದ್ಯಾಣ ಪ್ರಶಸ್ತಿ ಸಮಿತಿಯ ಸ್ವಸ್ತಿಕ್ ಪದ್ಯಾಣ ವಂದಿಸಿದರು. ಉಜಿರೆ ಅಶೋಕ ಭಟ್ಟರ ಸಪ್ತಾಹ ಸಂಯೋಜನೆಯ ಸುಭಗತೆಯು ಸಪ್ತಾಹದ ಒಟ್ಟೂ ಯಶಸ್ಸಿನಲ್ಲಿ ಅನಾವರಣಗೊಂಡಿತ್ತು.  ಕೊನೆಯಲ್ಲಿ 'ಗಂಗಾ ಸಾರಥ್ಯ' ಪ್ರಸಂಗದ ತಾಳಮದ್ದಳೆ ನಡೆಯಿತು.

Saturday, July 6, 2024

'ಮನಸ್ಸನ್ನು ಸದಭಿರುಚಿಯತ್ತ ಪರಿವರ್ತನೆಗೊಳಿಸುವ ಸಾಮಥ್ರ್ಯ ಯಕ್ಷಗಾನಕ್ಕಿದೆ' - ಶಾಸಕ ಅಶೋಕ ಕುಮಾರ್ ರೈ


“ಬಾಲ್ಯದಲ್ಲಿ ಯಕ್ಷಗಾನದ ಸೊಗಸನ್ನು ಸವಿದ ಅನುಭವ ಅನನ್ಯ. ಒಂದು ಕಾಲಘಟ್ಟದ ಯಶಸ್ವೀ ತುಳು ಕಥಾನಕ 'ಕಾಡಮಲ್ಲಿಗೆ' ಪ್ರಸಂಗವು ತುಂಬಾ ಆಕರ್ಶಿಸಿತ್ತು. ಶಾಲಾ ಜೀವನದಲ್ಲಿ ನಾಟಕ, ಯಕ್ಷಗಾನದಲ್ಲಿ ಪಾತ್ರವಹಿಸಿದ ದಿನಮಾನಗಳು ನೆನಪಾಗುತ್ತದೆ. ತಾಳಮದ್ದಳೆಯಲ್ಲಿ ಪಾತ್ರಗಳ ಮೂಲಕ ಉತ್ತಮ ವಿಚಾರವನ್ನು ಬಿತ್ತರಿಸಲು ಅವಕಾಶಗಳಿವೆ. ಉತ್ತಮ ಸಂದೇಶವನ್ನು ಕೊಡುವ ಕಥಾನಕಗಳಿವೆ. ಆಟ ಇರಲಿ, ಕೂಟ ಇರಲಿ, ಅಲ್ಲಿ ಪುರಾಣ ಪ್ರಪಂಚದ ದರ್ಶನವಾಗುವುದರಿಂದ ಕಥೆಗಳು ಬಹುಬೇಗ ಅರ್ಥವಾಗುತ್ತವೆ” ಎಂದು ಪುತ್ತೂರು ಶಾಸಕ ಶ್ರೀ ಅಶೋಕ ಕುಮಾರ್ ರೈ ಹೇಳಿದರು. 

ಅವರು ಪುತ್ತೂರಿನ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಶ್ರೀ ಸುಕೃತೀಂದ್ರ ಕಲಾ ಮಂದಿರದಲ್ಲಿ  ಜರುಗಿದ ತಾಳಮದ್ದಳೆ ಸಪ್ತಾಹದ ಸಮಾರಂಭದಲ್ಲಿ ಮಾತನಾಡುತ್ತಾ, “ಮನಸ್ಸನ್ನು ಸದಭಿರುಚಿಯತ್ತ ಪರಿವರ್ತನೆಗೊಳಿಸುವ ಸಾಮಥ್ರ್ಯ ಯಕ್ಷಗಾನಕ್ಕಿದೆ” ಎಂದರು. ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ) ಉಜಿರೆ ಇವರು ತಾಳಮದ್ದಳೆ ಸಪ್ತಾಹವನ್ನು ಆಯೋಜಿಸಿದ್ದಾರೆ. 

ಪುತ್ತೂರು ಜಿ.ಎಲ್.ಆಚಾರ್ಯ ಜ್ಯುವೆಲ್ಲರ್ಸ್‌ ಇದರ ಮ್ಹಾಲಕರಾದ ಜಿ.ಬಲರಾಮ ಆಚಾರ್ಯರು ದೀಪಜ್ವಲನೆಯ ಮೂಲಕ ತಾಳಮದ್ದಳೆ ಸಪ್ತಾಹವನ್ನು (1-7-2024) ಉದ್ಘಾಟಿಸಿದರು. ಪುತ್ತೂರು ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಕೆ.ಅಶೋಕ ನಾಮದೇವ ಪ್ರಭು ಶುಭಾಶಂಸನೆ ಮಾಡಿದರು. ಪ್ರಗತಿಪರ ಕೃಷಿಕ ಪದ್ಯಾಣ ಗೋಪಾಲಕೃಷ್ಣ ಭಟ್ಟರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ  ಪೊಳಲಿಯ ಕಲಾಪೋಷಕ, ಸಂಘಟಕ ವೆಂಕಟೇಶ ನಾವಡರಿಗೆ 'ಕುರಿಯ ಸ್ಮೃತಿ ಗೌರವ' ಸಲ್ಲಿಸಲಾಯಿತು. 

ಕುರಿಯ ಪ್ರತಿಷ್ಠಾನದ ಸಂಚಾಲಕ ಉಜಿರೆ ಅಶೋಕ ಭಟ್ಟರು ಪ್ರಸ್ತಾವನೆಯೊಂದಿಗೆ ಪದ್ಯಾಣ ಗಣಪತಿ ಭಟ್ಟರ ಸಂಸ್ಮರಣೆ ಮಾಡಿದರು. ಕಲಾವಿದ, ಲೇಖಕ ನಾ. ಕಾರಂತ ಪೆರಾಜೆ ನಿರ್ವಹಿಸಿ ವಂದಿಸಿದರು. ಭಾಗವತ ರಮೇಶ ಭಟ್ ಪುತ್ತೂರು, ಸ್ವಸ್ತಿಕ್ ಪದ್ಯಾಣ ಸಹಕರಿಸಿದರು. 

ಸಪ್ತಾಹದ ಮೊದಲ ದಿನದ ತಾಳಮದ್ದಳೆಯ ಪ್ರಸಂಗ 'ಭಕ್ತ ಪ್ರಹ್ಲಾದ'. ಕಲಾವಿದರಾಗಿ - ಎಂ.ದಿನೇಶ ಅಮ್ಮಣ್ಣಾಯ (ಭಾಗವತರು), ಎಂ.ಲಕ್ಷ್ಮೀಶ ಅಮ್ಮಣ್ಣಾಯ, ಪಿ.ಜಿ.ಜಗನ್ನಿವಾಸ ರಾವ್ (ಮದ್ದಳೆ-ಚೆಂಡೆ); ಅರ್ಥದಾರಿಗಳಾಗಿ ಸುಣ್ಣಂಬಳ ವಿಶ್ವೇಶ್ವರ ಭಟ್, ವಿಷ್ಣು ಶರ್ಮ ವಾಟೆಪಡ್ಪು, ರಾಮ ಜೋಯಿಸ್ ಬೆಳ್ಳಾರೆ, ನಾ. ಕಾರಂತ ಪೆರಾಜೆ, ರಾಮಚಂದ್ರ ಭಟ್ ದೇವರಗುಂಡಿ ಭಾಗವಹಿಸಿದ್ದರು. 

ತಾಳಮದ್ದಳೆ ಸಪ್ತಾಹದ ಸಮಾರೋಪ ಸಮಾರಂಭವು ಜುಲೈ 7, ರವಿವಾರ ಸಂಪನ್ನವಾಗಲಿದೆ. ಈ ಸಂದರ್ಭದಲ್ಲಿ ಹಿರಿಯ ಭಾಗವತ ಕುರಿಯ ಗಣಪತಿ ಶಾಸ್ತ್ರಿಯವರಿಗೆ ಪದ್ಯಾಣ ಪ್ರಶಸ್ತಿ ಹಾಗೂ ಬಿ.ಸೀತಾರಾಮ ತೋಳ್ಪಾಡಿತ್ತಾಯರಿಗೆ ಕುರಿಯ ಪ್ರಶಸ್ತಿ ಪ್ರದಾನಿಸಿ ಗೌರವಿಸಲಾಗುವುದು.

ಮದ್ಲೆಗಾರ ಲಕ್ಷ್ಮೀಶ ಅಮ್ಮಣ್ಣಾಯರಿಗೆ ಪುತ್ತೂರು 'ಗೋಪಣ್ಣ' ಸ್ಮೃತಿ ಗೌರವ ಪ್ರದಾನ

 

ಒಬ್ಬನೇ ಗುರುವಿನಲ್ಲಿ ಕಲಿತ ಶಿಷ್ಯನಲ್ಲಿ ಗುಣ, ಸ್ವಭಾವಗಳ ರೂಢನೆಯಲ್ಲಿ ವ್ಯತ್ಯಾಸಗಳನ್ನು ಕಾಣುತ್ತೇವೆ. ಗುರುವಿನಲ್ಲಿ ತಾನು ಕಲಿತ ವಿದ್ಯೆಯ ಪ್ರತಿಫಲನವು ಸಮಾಜದಲ್ಲಿ ಹೇಗೆ ಪ್ರಕಟವಾಗುತ್ತದೆ ಎನ್ನುವುದರ ಮೇಲೆ ಆತನ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ಈ ವ್ಯಕ್ತಿತ್ವದ ಪ್ರಕಾಶಕ್ಕೆ ಆತನ ಶೀಲದ ಹಿನ್ನೆಲೆ ದೊಡ್ಡದು. ಬದುಕಿನಲ್ಲಿ ಶೀಲ, ಗುಣ, ಸ್ವಭಾವವನ್ನು ಹೊಂದಿದವರು ಸೋಲುವುದಿಲ್ಲ. ಭಾರತೀಯ ಕಲೆಗಳು ಇದನ್ನೇ ಬಯಸುತ್ತವೆ. ಎಂದು ಶ್ರೀ ಕಟೀಲು ಮೇಳದ ಕಲಾವಿದ, ಮೇಳದ ಪ್ರಬಂಧಕ ಸುಣ್ಣಂಬಳ ವಿಶ್ವೇಶ್ವರ ಭಟ್ ಹೇಳಿದರು. 

ಅವರು ಪುತ್ತೂರಿನ ನಗರಸಭಾ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್ ಅವರ 'ಅಗ್ರಹಾರ' ಮನೆಯಲ್ಲಿ ಜರುಗಿದ 'ಪುತ್ತೂರು ಗೋಪಣ್ಣ' ಇವರ ಸ್ಮೃತಿ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಕಲಾ ಬದುಕಿನಲ್ಲಿ ಉತ್ತಮ ಶೀಲ, ನಡತೆಯ ಮೂಲಕ ಕಲೆಯನ್ನು ಎತ್ತರೇಕ್ಕೇರಿಸಿದ ಲಕ್ಷ್ಮೀಶ ಅಮ್ಮಣ್ಣಾಯರು ಸದಾ ವಂದ್ಯರು.  ಎಂದರು. 

ಹಿರಿಯ ಮದ್ಲೆಗಾರ ಲಕ್ಷ್ಮೀಶ ಅಮ್ಮಣ್ಣಾಯ-ಗೀತಾ ದಂಪತಿಗೆ 'ಗೋಪಣ್ಣ ಸ್ಮೃತಿ' ಗೌರವವನ್ನು ಪ್ರದಾನಿಸಲಾಯಿತು. ಗೋಪಾಲಕೃಷ್ಣರು ಜಗನ್ನಿವಾಸರ ತೀರ್ಥರೂಪರು. ಅವರ ನೆನಪಿನಲ್ಲಿ ನೀಡಿದ ಗೌರವವನ್ನು ಸ್ವೀಕರಿಸಲು ಸಂತೋಷವಾಗುತ್ತದೆ. ಯಕ್ಷಗಾನದ ಹಿಮ್ಮೇಳ ಕಲಾವಿದರು ಮರೆಯಲಾಗದ ಹೆಸರು ಗೋಪಣ್ಣ ಎಂದರು. ಸುಳ್ಯದ ವೇ.ಮೂ. ನಾಗರಾಜ ಭಟ್ಟರು ಸಂಮಾನಿತರಿಗೆ ಶುಭ ಹಾರೈಸಿದರು. 

ಭಾಗವತ ರಮೇಶ್ ಭಟ್ ಪುತ್ತೂರು ಆಭಿವಂದನಾ ನಲ್ನುಡಿ ಅಕ್ಷರ ಗುಚ್ಛವನ್ನು ವಾಚಿಸಿದರು. ಶ್ರೀವಿದ್ಯಾ ಜೆ. ರಾವ್, ವೈಷ್ಣವಿ ರಾವ್, ಶ್ರೀಕೃಷ್ಣ ರಾವ್ ಹಾಗೂ ಮನೆಯವರು ಅಮ್ಮಣ್ಣಾಯರನ್ನು  ಗೌರವಿಸಿದರು. ಪಿ.ಜಿ.ಜಗನ್ನಿವಾಸ ರಾವ್ ಸ್ವಾಗತಿಸಿದರು. ಕಲಾವಿದ ನಾ. ಕಾರಂತ ಪೆರಾಜೆ ನಿರ್ವಹಿಸಿ, ವಂದಿಸಿದರು. ಪಿ.ಜಿ.ಚಂದ್ರಶೇಖರ ರಾವ್, ಶ್ರೀಮತಿ ರತ್ನಾಕುಮಾರಿ ರಾವ್ ಅತಿಥಿಗಳಿಗೆ ಪುಷ್ಪ ನೀಡಿ ಅಭಿನಂದಿಸಿದರು.

ಕೊನೆಯಲ್ಲಿ 'ಪಂಚವಟಿ' ಪ್ರಸಂಗದ ತಾಳಮದ್ದಳೆ ಜರುಗಿತು. ಶ್ರೀಗಳಾದ ನಾರಾಯಣ ಶಬರಾಯ, ರಮೇಶ ಭಟ್ ಪುತ್ತೂರು, ಮಹೇಶ್ ಕನ್ಯಾಡಿ (ಭಾಗವತರು); ಪದ್ಯಾಣ ಶಂಕರನಾರಾಯಣ ಭಟ್, ಲಕ್ಷ್ಮೀಶ ಅಮ್ಮಣ್ಣಾಯ, ಪದ್ಯಾಣ ಜಯರಾಮ ಭಟ್, ಕೃಷ್ಣಪ್ರಕಾಶ್ ಉಳಿತ್ತಾಯ, ರಾಜಗೋಪಾಲ ಜೋಷಿ, ರಾಮಪ್ರಸಾದ್ ವದ್ವ, ಶಿತಿಕಂಠ ಭಟ್ (ಚೆಂಡೆ, ಮದ್ದಳೆ); ಸುಣ್ಣಂಬಳ ವಿಶ್ವೇಶ್ವರ ಭಟ್, ಅಶೋಕ ಭಟ್ ಉಜಿರೆ, ರಾಧಾಕೃಷ್ಣ ಕಲ್ಚಾರ್, ಡಾ.ವಿನಾಯಕ ಭಟ್ ಗಾಳಿಮನೆ, ಗುಂಡ್ಯಡ್ಕ ಈಶ್ವರ ಭಟ್, ಹರೀಶ ಬೊಳಂತಿಮೊಗರು, ರಮಾನಂದ ನೆಲ್ಲಿತ್ತಾಯ, ಶಶಿಧರ ರಾವ್ ಕನ್ಯಾಡಿ, ರಾಮ ಜೋಯಿಸ ಬೆಳ್ಳಾರೆ, ಶ್ರೀಮತಿ ಜಯಲಕ್ಷ್ಮೀ ವಿ. ಭಟ್ (ಅರ್ಥದಾರಿಗಳು) ಮೊದಲಾದ ಕಲಾವಿದರು 'ಗೋಪಣ್ಣ ಸ್ಮೃತಿ' ಕಾರ್ಯಕ್ರಮದಲ್ಲಿ (3-7-2024) 'ಪ್ರೀತಿ ಮತ್ತು ಆತ್ಮೀಯತೆ'ಯಿಂದ ಭಾಗವಹಿಸಿದ್ದರು. 


Tuesday, November 21, 2023

ಕಲೆಯನ್ನು ತಲೆಮಾರಿಗೆ ದಾಟಿಸಿದ ಹೊಳ್ಳ ಮಾಸ್ಟ್ರು

(ಯಕ್ಷಗುರು, ಸಂಘಟಕ, ಸಹೃದಯಿ ಕೈರಂಗಳ ನಾರಾಯಣ ಹೊಳ್ಳ ಇಂದು ವಿಧಿವಶರಾದರು. ಪ್ರಜಾವಾಣಿಯ 26-1-2018ರ ನನ್ನ  ಅಂಕಣದಲ್ಲಿ ಪ್ರಕಟವಾದ ಹೊಳ್ಳರ ಬಗೆಗಿನ ಬರಹವು ಅವರಿಗೆ ನುಡಿನಮನವಾಗಿ ಅರ್ಪಣೆ)

     ಯಕ್ಷಗಾನದ ಹವ್ಯಾಸಿ ಸಂಘಗಳ ಉಚ್ಛ್ರಾಯದ ದಿನಮಾನಗಳು ಈಗ ಇತಿಹಾಸ. ವೃತ್ತಿ ರಂಗಭೂಮಿಗೆ ಸುಪುಷ್ಟವಾದ ಒಳಸುರಿಗಳನ್ನು ಒದಗಿಸುವ ಸಶಕ್ತತೆ ಹೊಂದಿದ್ದುವು. ಹಳ್ಳಿಯ ಸಾಂಸ್ಕೃತಿಕ ಸ್ಥಳೀಯತೆಗೆ ಸಂಘಗಳ ಕೊಡುಗೆ ಅನನ್ಯ. ಇಲ್ಲಿ ರೂಪುಗೊಂಡ ಕಲಾವಿದರನೇಕರು ವೃತ್ತಿ ಮೇಳಗಳಲ್ಲಿ ಪ್ರಸಿದ್ಧರಾಗಿದ್ದಾರೆ, ಪ್ರಬುದ್ಧರಾಗಿದ್ದಾರೆ. ಸಾಂಸ್ಕೃತಿಕ ಗಾಢತೆಗೆ ಆಧುನಿಕ ಮನಃಸ್ಥಿತಿಯು ಮಿಳಿತವಾದಾಗ ಸಹಜವಾಗಿ ಸಂಘಗಳ ಕಾರ್ಯಹೂರಣಗಳು ನಿಧಾನಕ್ಕೆ ಪಲ್ಲಟಗೊಂಡುವು. ನಿಜಾರ್ಥದ ಸೇವೆ ಸಲ್ಲಿಸುವ ಮನಸ್ಸುಗಳು ಹಳ್ಳಿಯಿಂದ ದೂರಹೋದಾಗ ಬಹುತೇಕ ಸಂಘಗಳು ಫಲಕಗಳಲ್ಲೇ ಅಸ್ತಿತ್ವವನ್ನು ಸ್ಥಾಪಿಸುವಂತಾಯಿತು!

     ಯಾವುದೇ ಪಲ್ಲಟಗಳಿಗೆ ಅಲುಗಾಡದ ಸಂಘಗಳು ತಮ್ಮ ಕಾರ್ಯಗಳಲ್ಲಿ ರಾಜಿಮಾಡಿಕೊಳ್ಳದೆ ಸಕ್ರಿಯವಾಗಿರುವುದು ಆರಂಭದ ಕಾಲದ ಗಟ್ಟಿ ಅಡಿಗಟ್ಟು. ಅದು ಸಂಘವು ರೂಪಿಸಿದ ಸಾಂಸ್ಕೃತಿಕ ಮನಸ್ಸುಗಳ ಬದ್ಧತೆ. ಬಂಟ್ವಾಳ ತಾಲೂಕಿನ ಕೈರಂಗಳ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಸಂಘವು ಆರು ದಶಮಾನ ಮೀರಿದ, ಬೌದ್ಧಿಕವಾಗಿ ಪಕ್ವಗೊಂಡ ಸಂಘಟನೆ. ಸಂಘವನ್ನು ನೆನಪಿಸಿಕೊಂಡಾಗ ಸಂಘವನ್ನು ಸಮರ್ಪಣಾ ಭಾವದಿಂದ ಬದುಕಿನ ಅಂಗವಾಗಿ ಸ್ವೀಕರಿಸಿದ ಕೆ. ನಾರಾಯಣ ಹೊಳ್ಳ, ಆನೆಗುಂಡಿ ಗಣಪತಿ ಭಟ್ (ದಿ.), ಹೊಸಹಿತ್ಲು ಮಹಾಲಿಂಗ ಭಟ್ (ದಿ.), ಕೃಷ್ಣ ಮಾಸ್ತರ್ (ದಿ.).. ಮೊದಲಾದ ಹಿರಿಯರ ತನುಶ್ರಮಕ್ಕೆ ಶಿರವು ಬಾಗುತ್ತದೆ.

     ಒಂದು ಸಂಘವು ಗರಿಷ್ಠತಮ ಎಷ್ಟು ಸಂಪನ್ಮೂಲಗಳನ್ನು ಹೊಂದಬಹುದೋ ಅಷ್ಟನ್ನು ಕೈರಂಗಳ ಯಕ್ಷಗಾನ ಸಂಘವು ಹೊಂದಿದೆ. ಅದರಲ್ಲಿ ಯಶ ಕಂಡಿದೆ. ಕಲಾವಿದರನ್ನು ರೂಪಿಸಿದೆ. ಬೌದ್ಧಿಕ ವಿಕಾಸಕ್ಕೆ ಕಮ್ಮಟಗಳನ್ನು ಏರ್ಪಟಿಸಿದೆ. ಬಯಲಾಟ, ತಾಳಮದ್ದಳೆಗಳನ್ನು ಆಯೋಜಿಸಿದೆ. ಸ್ವಂತದ್ದಾದ ವೇಷಭೂಷಣಗಳನ್ನು ಹೊಂದಿತ್ತು. ಯಕ್ಷಗಾನದ ಸಮಗ್ರ ದರ್ಶನವನ್ನು ಹಳ್ಳಿಯಲ್ಲಿ ಪಸರಿಸುವಲ್ಲಿ, ದೂರದೂರಿನ ಕಲಾ ಮನಸ್ಸುಗಳನ್ನು ತನ್ನ ಸೂರಿನಡಿ ತರುವಲ್ಲಿ ಸಂಘದ ಅಜ್ಞಾತ ಶ್ರಮವು ಗುರುತರ.

     ಸಂಘದ ಸ್ಥಾಪನಾ ಕಾಲದಿಂದಲೂ ಸಂಘದ ಒಂದಂಗವಾಗಿದ್ದ ಕೆ. ನಾರಾಯಣ ಹೊಳ್ಳ ಇವರ ಸೇವೆಯನ್ನು ಸಂಘವು ದಾಖಲಿಸಿದೆ. 'ಧೀಮಂತ' ಎನ್ನುವ ಕೃತಿಯಲ್ಲಿ ಹೊಳ್ಳರ ಸಾಧನೆ ಮತ್ತು ವ್ಯಕ್ತಿತ್ವದ ನುಡಿಹಾರವನ್ನು ಪೋಣಿಸಿದೆ. ಆರು ದಶಕಗಳ ಕಾಲ ಸಂಘಕ್ಕೆ ಬೆನ್ನುನೀಡಿದ ಮಹನೀಯರಲ್ಲೊಬ್ಬರಾದ ಹೊಳ್ಳರನ್ನು ತಲೆಮಾರಿನ ಮನಸ್ಸುಗಳು ಗುರುತಿಸಿ, ಗೌರವಿಸಿದ್ದು ಕಲಾ ಕ್ಷೇತ್ರಕ್ಕೊಂದು ಹೊಸ ಹಾದಿ ತೋರಿದೆ.

     ಕೆ. ನಾರಾಯಣ ಹೊಳ್ಳರು ಕಾಸರಗೋಡು ಜಿಲ್ಲೆಯ ಕೋಳ್ಯೂರಿನವರು. ಕೈರಂಗಳಕ್ಕೆ ವೃತ್ತಿ ನಿಮಿತ್ತವಾಗಿ ಬಂದು ನೆಲೆಯಾದ ಬಳಿಕ 'ಕೈರಂಗಳ ಹೊಳ್ಳ'ರಾದರು. ಅಧ್ಯಾಪಕರಾಗಿ (1952-1989) ವಿದ್ಯಾರ್ಥಿಗಳನ್ನು ಸಮರ್ಥವಾಗಿ ರೂಪಿಸಿದರು. ಶಿಸ್ತು ಎನ್ನುವುದು ಪದಕೋಶಕ್ಕೆ ಸೀಮಿತವಲ್ಲ, ಅದು ಅನುಷ್ಠಾನಕ್ಕೆ ಇರುವಂತಾದ್ದು ಎಂದು ವೃತ್ತಿ ಬದುಕಿನಲ್ಲಿ ಆಚರಿಸಿ ತೋರಿಸಿದರು. ಬದ್ಧತೆಯ ಬದುಕಿಗೆ ಮಾದರಿಯಾದರು. ಶಿಸ್ತಿಗೆ ಪೂರಕವಾಗಿ ಅವರ ಒಟ್ಟೂ ದೇಹಪೃಕೃತಿಯೂ ಗಂಭೀರ! ಫಕ್ಕನೆ ನೋಡುವಾಗ ತಲೆಬಾಗುವ, ಮಾತು ಮೌನವಾಗುವ ವ್ಯಕ್ತಿತ್ವ. ಮಾತಿಗೆ ತೊಡಗಿದಾಗ ಇಷ್ಟು ಗಂಬೀರ ವ್ಯಕ್ತಿತ್ವದೊಳಗೂ ಸಾತ್ವಿಕ ಭಾವ! ವಿಶ್ವಾಸಕ್ಕೆ ತೆರೆದುಕೊಳ್ಳುವ ಮುಗ್ಧತೆ.

     ಹೊಳ್ಳರು ಕೈರಂಗಳ ಶಾಲೆಗೆ ಆಧ್ಯಾಪಕರಾಗಿ ಬಂದಾಗ ವಿದ್ವಾನ್ ಕಾಂತ ರೈಗಳು ಅಧ್ಯಾಪಕರಾಗಿದ್ದರು. ಎರಡೂ ಯಕ್ಷಮನಸ್ಸುಗಳು ಒಂದಾದುವು. ಕೈರಂಗಳ ಸುತ್ತಮುತ್ತ ತಾಳಮದ್ದಳೆಯ ವಾತಾವರಣದ ಬಿಸಿಯಿದ್ದ ಕಾಲದಲ್ಲೇ ಕಾಂತ ರೈಗಳಿಗೆ ಯಕ್ಷಗಾನದ ತಂಡ ಕಟ್ಟುವ ಬಯಕೆಯಿತ್ತು. ಅವರು ಬೀಜಾಂಕುರ ಮಾಡಿದ ಕನಸನ್ನು ಹೊಳ್ಳರು ನನಸಾಗಿಸಿದರು. 1954ರಲ್ಲಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಸಂಘಕ್ಕೆ ಶ್ರೀಕಾರ. “ಸಂಘವು ಸ್ವಂತ ವೇಷಭೂಷಣಗಳನ್ನು ಹೊಂದಿರುವುದು ಮಾತ್ರವಲ್ಲ ಹವ್ಯಾಸಿ ಸಂಘ ಸಂಸ್ಥೆಗಳಿಗೆ ಬಾಡಿಗೆಗೆ ಕೊಡುತ್ತಿತ್ತು. ಆಗೆಲ್ಲಾ ವೇಷಭೂಷಣಗಳ ಸಂಪೂರ್ಣ ನಿರ್ವಹಣೆಯನ್ನು ಹೊಳ್ಳ ಮಾಸ್ಟ್ರು ಮಾಡುತ್ತಿದ್ದರು, ಎಂದು ನೆನಪಿಸಿಕೊಳ್ಳುತ್ತಾರೆ,” ಸಂಘದ ಕಾರ್ಯದರ್ಶಿ ಚಂದ್ರಹಾಸ ಕಣಂತೂರು.

     ಹೊಳ್ಳರು ವೈದ್ಯರು ಕೂಡಾ! ಹೋಮಿಯೋಪತಿ ಚಿಕಿತ್ಸಾ ಪದ್ಧತಿಯನ್ನು ಖಾಸಗಿಯಾಗಿ ಕಲಿತು ಅಲ್ಪವೆಚ್ಚದಲ್ಲಿ ಚಿಕಿತ್ಸೆಯನ್ನು ನೀಡುತ್ತಿದ್ದರು. ಜತೆಗೆ ಕೈಗುಣದ ಪಕ್ವತೆಯೂ ಸೇರಿ ಊರಿನ ವೈದ್ಯರೆಂದೇ ಪರಿಚಿತರಾದರು. ಪೋಸ್ಟ್ಮಾಸ್ತರ್ ಆಗಿ, ಬಿಡುವಿನ ಅವಧಿಯಲ್ಲಿ ಪಡಿತರ ಅಂಗಡಿಯಲಿ ಲೆಕ್ಕ ಪತ್ರ ಬರೆಯವ ಲೆಕ್ಕಿಗನಾಗಿ, ಸ್ವಂತದ್ದಾದ ಧ್ವನಿವರ್ಧಕ ವ್ಯವಸ್ಥೆಯನ್ನು ಹೊಂದಿ ಊರಿಗೆ ಉಪಕಾರಿಯಾದ ಹೊಳ್ಳರ ವ್ಯಕ್ತಿತ್ವ ಮತ್ತು ಆಸಕ್ತಿಗೆ ದಶಬಾಹುಗಳು.

     ಕೈರಂಗಳ ಸಂಘದ ವೇಷಭೂಷಣಗಳು ಆಗ ಹವ್ಯಾಸಿ ಸಂಘಗಳ ಪಾಲಿಗೆ ವರದಾನ. ಹೊಳ್ಳರ ಶಿಸ್ತಿನ ಮುಖದ ಪರಿಚಯ ಶಾಲೆಯಲ್ಲಿ ಮಾತ್ರವಲ್ಲ, ಯಕ್ಷಗಾನ ಕ್ಷೇತ್ರದಲ್ಲೂ ಹಲವರ ಪಾಲಿಗೆ ಆಗಿದೆ. ಹೊಳ್ಳರ ಮಾರ್ಗದರ್ಶನದಲ್ಲೇ ಚೌಕಿಯ ಎಲ್ಲಾ ಕಲಾಪಗಳು ನಡೆಯುತ್ತಿದ್ದುವು. ಅಂದಿನ ದಿನಗಳಲ್ಲಿ ಹೆಚ್ಚಿನ ಹವ್ಯಾಸಿ ಕಲಾವಿದರು ಸ್ವತಃ ಬಣ್ಣ ಹಚ್ಚಿಕೊಳ್ಳುತ್ತಿರಲಿಲ್ಲ. ಪ್ರಸಾಧನದ ಕೆಲಸವನ್ನು ಹೊಳ್ಳ ಮಾಸ್ಟ್ರು ಸ್ವತಃ ವಹಿಸಿಕೊಳ್ಳುತ್ತಿದ್ದರು. “ತನ್ನ ಮುಂದೆ ಕುಳಿತ ಕಲಾವಿದರ ಮುಖಕ್ಕೆ ಬಣ್ಣ, ರೇಖೆಗಳನ್ನು ಹಾಕುತ್ತಿದ್ದಾಗಲೂ ಅವರ ಗಮನ ಇಡೀ ಚೌಕಿಯ ಆಗು ಹೋಗುಗಳ ಕಡೆಗೆ ಇರುತ್ತಿತ್ತು,” ಎನ್ನುತ್ತಾರೆ ಕೆ.ಸದಾಶಿವ.

     ಅರ್ಥದಾರಿ ಪಕಳಕುಂಜ ಶ್ಯಾಮ ಭಟ್ ಹೊಳ್ಳರ ಒಡನಾಟದ ದಿನಗಳನ್ನು ಜ್ಞಾಪಿಸಿಕೊಂಡರು - ಹೊಳ್ಳರು ಮಿತಭಾಷಿ. ಅವರು ಆಡುವ ಪ್ರತಿ ಮಾತಿಗೂ ತೂಕವಿದೆ. ಸಾಮಾನ್ಯವಾಗಿ ಬಣ್ಣದ ಮನೆಯೊಳಗೆ ಹೆಚ್ಚಿನವರ ಮಾತು ತೂಕ ರಹಿತವಾಗಿರುತ್ತದೆ. ಮಾತ್ರವಲ್ಲ ಅದು 'ಚೌಕಿಯ ಭಾಷೆ' ಎನ್ನುವ ಪ್ರತ್ಯೇಕತೆಗೆ ಒಳಗಾದುದು! ಹೊಳ್ಳರು ಚೌಕಿಯೊಳಗೆ ಇದ್ದಾಗ ಉಳಿದವರ ಮಾತು ಹಾದಿ ತಪ್ಪುತ್ತಿರಲಿಲ್ಲ! ಅವರಂತೂ ಹಗುರವಾಗಿ ಮಾತನಾಡಿದ್ದು ಕಂಡಿಲ್ಲ. ಹೊಗಳಬೇಕಾದಲ್ಲಿ ಹೊಗಳಿ, ತೆಗಳಬೇಕಾದಲ್ಲಿ ತೆಗಳಿ, 'ನಿಮಗೆ ಬೇಸರವಾದ್ರೂ ಚಿಂತೆಯಿಲ್ಲ. ಇನ್ನು ಮುಂದಕ್ಕಾದರೂ ತಿದ್ದಿಕೊಳ್ಳಿ' ಎನ್ನುವ ಖಂಡಿತವಾದಿ.

     ಅಧ್ಯಾಪಕ ಜಿ.ವೆಂಕಪ್ಪ ಅಸೈಗೋಳಿ ಇವರು ಹೊಳ್ಳರೊಂದಿಗೆ ಬಹುಕಾಲ ಜತೆಗಿದ್ದವರು. “ ಹೊಳ್ಳರು ತನ್ನವರ ನೆಮ್ಮದಿಗಾಗಿ ಸದಾ ಚಿಂತಿಸಿ ಸಲಹೆ, ಸೂಚನೆ ನೀಡುತ್ತಿದ್ದರು. ಅವರು ಕಿರಿಯರ ಎದುರಿಗೆ ಚಪಲತೆ ತೋರಿಸಿ ಹಗುರ ಆಗುತ್ತಿರಲಿಲ್ಲ. ಕಠಿಣ ಸಮಸ್ಯೆಗಳಲ್ಲಿ ಪರಿಹಾರ ಕಾಣದೆ ಇದ್ದರೆ ಇನ್ನೊಬ್ಬರನ್ನು ನೋಯಿಸದೆ ತಾನೇ ಮನಸ್ಸಿನಲ್ಲಿ ನೋವನ್ನು ಸಹಿಸಿಕೊಂಡು ಮೌನದಲ್ಲಿರುವುದು ಅವರ ಪ್ರವೃತ್ತಿಯಾಗಿದೆ. ಎಷ್ಟೋ ಬಾರಿ ತಪ್ಪುಗಳನ್ನು ನಿಷ್ಟುರವಾಗಿ ಹೇಳುತ್ತಿದ್ದರು. ಅದನ್ನು ತಿದ್ದಿಕೊಳ್ಳದವರಲ್ಲಿ ಯಾವತ್ತೂ ಕೇಡು ದೃಷ್ಟಿಯಿಂದ ನೋಡುತ್ತಿರಲಿಲ್ಲ.”

     ಹೊಳ್ಳರಿಗೆ ಜವಾಬ್ದಾರಿಗಳನ್ನು ಎಳೆದುಕೊಳ್ಳುವ ಸ್ವ-ಭಾವ. ಮೈಮೇಲೆ ಬಂದ ಹೊಣೆಗಾರಿಕೆಯನ್ನು ಗುರಿಮುಟ್ಟಿಸುವ ಛಲ. ಅದು ಬದುಕಿನ ಬದ್ಧತೆ. ಬದುಕನ್ನು ಕಸಿದುಕೊಳ್ಳುವ ಘಟನೆಗಳು ನಡೆದಾಗ ಅಧೀರರಾಗಲಿಲ್ಲ. ಪರಿಸ್ಥಿತಿಗೆ ಅಂಜಿ ವಿಚಾರದೊಳಗೆ ರಾಜಿ ಮಾಡಿಕೊಳ್ಳಲಿಲ್ಲ. ಇಡೀ ಗ್ರಾಮಕ್ಕೆ ಅಧ್ಯಾಪಕನೊಬ್ಬ ಎಷ್ಟು ಪ್ರಭಾವಿಯಾಗಿ ಬೆಳೆಯಬಹುದೋ ಅದನ್ನೂ ಮೀರಿ ಹೊಳ್ಳರು ಬೆಳೆದರು, ಇತರರನ್ನೂ ಬೆಳೆಸಿದರು. ತ್ರಿವಿಕ್ರಮ ಕಾಯದ ನೆರಳಿನಡಿ ಹೊಸ ತಲೆಮಾರು ಊರಿನ ಸಾಂಸ್ಕೃತಿಕ ಸ್ಪರ್ಶದ ಸ್ಥಳೀಯತೆಯ ಉಳಿವಿಗಾಗಿ ಹೆಗಲು ನೀಡುತ್ತಿದ್ದಾರೆ. ಹೊಸ ತಲೆಮಾರಿಗೆ ದಾಟಿಸಿದ್ದಾರೆ. ಹೊಳ್ಳರ ಮತ್ತು ಹೊಳ್ಳರಂತೆ ದುಡಿದ ಅನೇಕ ಮನಸ್ಸುಗಳಿಗೆ ಊರಿನ ಸಂಘವು ಕೃತಜ್ಞವಾಗಿರುವುದು ಕಲಾ ಮನಸ್ಸಿನ ದ್ಯೋತಕ. ಎಲ್ಲಿ ಕಲಾ ಮನಸ್ಸು ರೂಪುಗೊಳ್ಳುತ್ತದೋ ಅಲ್ಲೆಲ್ಲಾ ಸಂಸ್ಕಾರ, ಸಂಸ್ಕೃತಿಗಳು ಮಿಳಿತಗೊಳ್ಳುತ್ತಿರುತ್ತದೆ.

ಸಂಘದ ಆಟ, ಕೂಟ, ಕಲಾಪಗಳಲ್ಲಿ ತಾವೆಲ್ಲೂ ಫೋಕಸ್ ಆಗದೆ ಕಲಾವಿದರನ್ನು ಸಿದ್ಧಗೊಳಿಸುವ ಹೊಳ್ಳರ ನಿರ್ಲಿಪ್ತ ಮತ್ತು ಫಲಾಪೇಕ್ಷೆ ರಹಿತ ದುಡಿಮೆಗೆ ಶರಣು. ಇಂತಹ ಧೀಮಂತ ವ್ಯಕ್ತಿತ್ವದ ಹೊಳ್ಳರಿನ್ನು ನೆನಪು ಮಾತ್ರ. ಇಂದು – 21-11-2023 -  ವಿಧಿವಶರಾದರು. ಅಗಲಿದ ಸಾಧಕನಿಗೆ ಅಕ್ಷರ ನಮನ. ಓಂ ಶಾಂತಿಃ