'ರಂಗದಲ್ಲಿ ಕಸುಬು ಮಾಡುವ ಕಲಾವಿದನಿಗೆ ತನ್ನ ಪಾತ್ರ ನಿರ್ವಹಣೆಯಲ್ಲಿ 'ತೃಪ್ತಿ' ಬೇಕು. ಸ್ತ್ರೀಪಾತ್ರಗಳಿಗೆ ರಂಗದಲ್ಲಿ ಅವಕಾಶ ಹೆಚ್ಚಿದ್ದಾಗ ಕಸುಬಿನಲ್ಲಿ ತೃಪ್ತಿ ಸಹಜವಾಗಿ ಬರುತ್ತದೆ. ಬೆಳಗ್ಗಿನವರೆಗೆ ಆಗಾಗ್ಗೆ ಬಂದು ಮರೆಯಾಗುವ ಸ್ತ್ರೀಪಾತ್ರಗಳು ರಂಗದಲ್ಲಿ ಮೆರೆಯುವುದಿಲ್ಲ. ಆತನಿಂದ ಉತ್ತಮ ಅಭಿವ್ಯಕ್ತಿಯನ್ನು ನಿರೀಕ್ಷಿಸುವಂತಿಲ್ಲ. ಕಲಾವಿದನನ್ನು ಪ್ರೇಕ್ಷಕ ಬಹುಬೇಗ ಮರೆಯುತ್ತಾನೆ,' ಎಂದು ಹಿರಿಯ ಸ್ತ್ರೀ ಪಾತ್ರಧಾರಿ ಕೊಕ್ಕಡ ಈಶ್ವರ ಭಟ್ ಕಳೆದ ಕಾಲವನ್ನು ಜ್ಞಾಪಿಸಿಕೊಳ್ಳುತ್ತಾರೆ.
ಎಪ್ಪತ್ತೆರಡು ಹರೆಯದ ಈಶ್ವರ ಭಟ್ಟರು ಐವತ್ತು ವರ್ಷಕ್ಕೂ ಮಿಕ್ಕಿ ರಂಗದಲ್ಲಿ ತರುಣಿಯಾಗಿದ್ದಾರೆ. 'ಮೋಹಿನಿ'ಯಿಂದ 'ಚಂದ್ರಮತಿ' ತನಕ. ಒಂದು ಕಾಲಘಟ್ಟದ ಪ್ರದರ್ಶನಗಳನ್ನು ನೆನಪಿಸಿಕೊಂಡಾಗ ನಿವೃತ್ತಿಯಾಗುವಲ್ಲಿಯ ತನಕವೂ ಇವರ ಪಾತ್ರಾಭಿವ್ಯಕ್ತಿಯಲ್ಲಿ 'ಪಾತ್ರದ ಹಿರಿತನ'ದ ಗಟ್ಟಿತನವಿದ್ದುದನ್ನು ಗಮನಿಸಬಹುದು. ಗಟ್ಟಿ ಸಂಪನ್ಮೂಲವನ್ನು ಹೊಂದಿದ ಗಟ್ಟಿಗರ ಮಧ್ಯದಲ್ಲಿ ಬೆಳೆದ ಪರಿಣಾಮ; ಈಗಲೂ ಕೊಕ್ಕಡದವರನ್ನು ನೆನಪಿಸಿಕೊಡರೆ ಸಾಕು, 'ದಾಕ್ಷಾಯಿಣಿ, ಮಾಯಾ ಶೂರ್ಪನಖಿ' ಪಾತ್ರಗಳು ಮಿಂಚುತ್ತವೆ.
ಓದಿದ್ದು ಆರನೇ ತರಗತಿ. ಕುಡಾಣ ಗೋಪಾಲಕೃಷ್ಣ ಭಟ್ಟರಿಂದ ನಾಟ್ಯಾಭ್ಯಾಸ. ಒಂದಷ್ಟು ಕಾಲ ಭರತನಾಟ್ಯದ ಕಲಿಕೆ. ಮಧ್ಯೆ ಬಡಗುತಿಟ್ಟಿನ ಹೆಜ್ಜೆಗಳ ಅಭ್ಯಾಸ. ಮುಂದೆ ಕೆರೆಮನೆ ಮೇಳದಲ್ಲಿ ಒಂದು ವರುಷದ ತಿರುಗಾಟ. ಬಡಗು ಹಜ್ಜೆಗಳಿಗೆ ದಯಾನಂದ ನಾನೂರು ಮತ್ತು ಮೊಳಹಳ್ಳಿ ಕೃಷ್ಣ ಇವರಿಗೆ ಗುರು.
ಭಟ್ಟರ ತಂದೆ ಮಹಾಲಿಂಗ ಭಟ್. ತಾಯಿ ಪರಮೇಶ್ವರಿ. ಅಳಿಕೆ ಸನಿಹದ ಮುಳಿಯದಲ್ಲಿ ಹುಟ್ಟು. ಕಡೆಂಗೋಡ್ಲಿನಲ್ಲಿ ಬದುಕು. ಆರನೇ ತರಗತಿ ತನಕ ಶಾಲಾಭ್ಯಾಸ. ಪುತ್ತೂರಿನ ಪೆರುವಡಿಯವರ ನೂಜಿ ಮನೆಯಲ್ಲಿ ಮಿಕ್ಕ ಯಕ್ಷಗಾನದ ವಿವಿಧಾಂಗಗಳ ಆರ್ಜನೆ.
ಪೆರುವಡಿ ಕೃಷ್ಣ ಭಟ್ಟರ ಸಾರಥ್ಯದ ಮೂಲ್ಕಿ ಮೇಳದಲ್ಲಿ 'ಬಾಲಕೃಷ್ಣ' ಪಾತ್ರದ ಮೂಲಕ ಬಣ್ಣದ ಮೊದಲ ಹೆಜ್ಜೆ. ಮೂಲ್ಕಿಯೂ ಸೇರಿದಂತೆ ಕೂಡ್ಲು, ಸುರತ್ಕಲ್, ಕದ್ರಿ, ಕುಂಬಳೆ, ಸಾಲಿಗ್ರಾಮ, ಶಿರಸಿ, ಇಡಗುಂಜಿ, ಎಡನೀರು ಮೇಳಗಳಲ್ಲಿ ವ್ಯವಸಾಯ.
ಚಂದ್ರಮತಿ, ಶಾರದೆ, ಚಿತ್ರಾಂಗದೆ, ದ್ರೌಪದಿ, ಸುಭದ್ರೆ, ಪ್ರಭಾವತಿ, ಮಾಯಾ ಶೂರ್ಪನಖಿ, ಮಾಯಾಹಿಡಿಂಬಿ, ಮೋಹಿನಿ.. ಹೀಗೆ ಸಾಲು ಸಾಲು ಪಾತ್ರಗಳು ಭಟ್ಟರ ನೆಚ್ಚಿನವುಗಳು. ಖ್ಯಾತಿ ತಂದವುಗಳು. ಕೂಡ್ಲು ಮೇಳದಲ್ಲಿ ಆಡುತ್ತಿದ್ದ 'ಶ್ರೀದೇವಿ ಲಲಿತೋಪಾಖ್ಯಾನ' ಪ್ರಸಂಗದ 'ಶ್ರೀಲಲಿತೆ' ಪಾತ್ರವು ಈಶ್ವರ ಭಟ್ಟರಿಗೆ ತಾರಾಮೌಲ್ಯ ತಂದಿತ್ತು.
ವೈಯಾರದ ನಾಟ್ಯ, ನಯನಾಜೂಕಿನ ಅಭಿವ್ಯಕ್ತಿ. ಮನಮೋಹಕ ಚಿತ್ರ. ಪಾತ್ರಕ್ಕನುಚಿತವಾದ ಸಂಭಾಷಣೆ ಇವರದು. 'ಮೂಲ್ಕಿ ಮೇಳದಲ್ಲಿ ನನ್ನ ಬಾಹುಕ, ಪಾಪಣ್ಣ ಪಾತ್ರಗಳಿಗೆ ಈಶ್ವರ ಭಟ್ಟರು ದಮಯಂತಿಯಾಗಿ, ಗುಣಸುಂದರಿಯಾಗಿ ಸಾಥಿ ನೀಡಿದ್ದಾರೆ. ಉತ್ತಮ ಹೆಸರು ಪಡೆದಿದ್ದಾರೆ. ಮೇಳಕ್ಕೂ ಹೆಸರು ತಂದಿದ್ದಾರೆ' ಎಂದು ಈಶ್ವರ ಭಟ್ಟರ ತಿರುಗಾಟದ ಕ್ಷಣವನ್ನು ನೆನಪಿಸಿಕೊಂಡರು, ಹಾಸ್ಯಗಾರ್ ಪೆರುವಡಿ ನಾರಾಯಣ ಭಟ್.
'ಕಲಾವಿದನಿಗೆ ದುಡ್ಡು ಮುಖ್ಯ ಹೌದು. ಜತೆಗೆ ಅಭಿಮಾನವೂ ಕೂಡಾ. ರಂಗದಲ್ಲಿ ಸರಿಯಾದ ಅಭಿವ್ಯಕ್ತಿಗೆ ಅವಕಾಶವಿಲ್ಲದೇ ಹೋದಾಗ ಅಭಿಮಾನಿಗಳಿಗೆ ಮುಖ ತೋರಿಸಲು ನಾಚಿಕೆಯಾಗುತ್ತದೆ,' ಮಾತಿನ ಮಧ್ಯೆಯಿರುವ ಅವರ ನೋವು ಅರ್ಥವಾಗಲು ಕಷ್ಟಪಡಬೇಕಿಲ್ಲ.
ಡಾ.ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ ಸಂಮಾನ, ಕೆರೆಮನೆ ಶಂಭು ಹೆಗಡೆ ಜಯಂತಿ ಸಂಮಾನ, ಮಂಗಳೂರು ಹವ್ಯಕ ಸಭಾ, ಶ್ರೀ ಎಡನೀರು ಮಠ, ಕಲಾರಂಗ ಉಡುಪಿ.. ಹೀಗೆ ಹಲವು ಪ್ರತಿಷ್ಠಿತ ಪುರಸ್ಕಾರಗಳು ಈಶ್ವರ ಭಟ್ಟರ ಕಲಾ ಸೇವೆಗೆ ಸಂದ ಮಾನಗಳು.
ಪ್ರಸ್ತುತ ಕೊಕ್ಕಡ-ಪಟ್ರಮೆ ಸಮೀಪದ ಹೆನ್ನಳದಲ್ಲಿ ವಾಸ. ಪತ್ನಿ ಶಕುಂತಳೆ. ಮೂವರು ಮಕ್ಕಳು. ಕಡೆಂಗೋಡ್ಲು ನನಗೆ ಬಾಲ್ಯವನ್ನು ಕೊಟ್ಟದ್ದರಿಂದ ಈ ಊರು ನನ್ನ ಹೆಸರಿನೊಂದಿಗೆ ಹೊಸೆಯಬೇಕಿತ್ತು. ಈಗ ಕೊಕ್ಕಡ ಸಮೀಪವಿರುವುದರಿಂದಲೋ ಏನೋ ನಾನೀಗ ಕೊಕ್ಕಡ ಈಶ್ವರ ಭಟ್.
ಈಶ್ವರ ಭಟ್ಟರ ಕಲಾ ಸೇವೆಗೆ ಈಗ 'ಪಾತಾಳ ಪ್ರಶಸ್ತಿ'ಯ ಗರಿ. ಎಡನೀರು ಮಠಾಧೀಶ ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀ ಪಾದಂಗಳವರು ಗೌರವಾಧ್ಯಕ್ಷರಾಗಿರುವ 'ಶ್ರೀ ಪಾತಾಳ ಯಕ್ಷ ಪ್ರತಿಷ್ಠಾನ'ದಿಂದ ಫೆಬ್ರವರಿ 13ರಂದು ರಾತ್ರಿ 8 ಗಂಟೆಗೆ ಶ್ರೀ ಎಡನೀರು ಮಠದ ಶ್ರೀಕೃಷ್ಣ ಸಭಾಭವನದಲ್ಲಿ ಪ್ರಶಸ್ತಿ ಪ್ರದಾನ.
ಉತ್ತಮ ಲೇಖನ. ಕೊಕ್ಕಡ ಈಶ್ವರ ಭಟ್ ರವರು ಸುರತ್ಕಲ್ ಮೇಳದ ಪ್ರಧಾನ ಸ್ತ್ರೀ ವೇಶಧಾರಿಯಾಗಿರುವಾಗ ಅವರ ಹಲವಾರು ಅದ್ಭುತ ಪಾತ್ರಗಳನ್ನು ನೋಡಿದ್ದೇನೆ. ಸತೀ ಶೀಲವತಿಯ ಶೀಲವತಿ, ನಳದಮಯಂತಿಯ ದಮಯಂತಿ, ಮಹಾತ್ಮೆಯ ಅಲೋಲಿಕೆ, ಅಮರ ಶಿಲ್ಪಿ ವೀರಕಲ್ಕುಡ ದ ಪದ್ಬಾಜಿ..ರಾಣಿ ರತ್ನಾವಳಿಯ ರತ್ನಾವಳಿ ಕ್ಹಡ್ಗುಗಲಿ ಕುಮಾರ ರಾಮದ... ಹೆಸರು ನೆನಪಿಲ್ಲ ಒಂದು ಪಾತ್ರ ಹೀಗೆ ಅದ್ಭುತ ವೆನಿಸುವ ಪಾತ್ರಗಳು ಹಲವಾರು ಇದೆ.
ReplyDelete