"ಮೂಡಂಬೈಲು ಶಾಸ್ತ್ರಿಗಳು ಹಳ್ಳಿಯಲ್ಲಿ ಅಧ್ಯಾಪಕರಾಗಿದ್ದುಕೊಂಡು, ಮಾದರಿ ಶಾಲೆಯಾಗಿ ರೂಪಿಸುವುದರ ಜತೆಗೆ ಅಭಿವೃದ್ಧಿಗೆ ಬೇಕಾದಂತಹ ಸಂಪನ್ಮೂಲಗಳ ಕ್ರೋಢೀಕರಣಕ್ಕಾಗಿ ಅಹರ್ನಿಶಿ ದುಡಿದವರು. ಕೈತುಂಬಾ ಸಂಬಳ ಬರುವ ಅವಕಾಶಗಳಿದ್ದರೂ ಅದರತ್ತ ನೋಡದೆ ತನ್ನೂರಿನ ಏಳ್ಗೆಗಾಗಿ ಶ್ರಮಿಸಿದ್ದಾರೆ. ಗ್ರಾಮವನ್ನು ಕಟ್ಟುವ ಮಹಾತ್ಮ ಗಾಂಧೀಜಿಯವರ ಮಾದರಿಯನ್ನು ಇವರಲ್ಲಿ ಕಾಣಬಹುದು, ಎಂದು ಮಂಗಳೂರು ವಿಶ್ವವಿದ್ಯಾಲಯದ ಕುಲಸಚಿವರಾದ ಡಾ.ಕೆ.ಚಿನ್ನಪ್ಪ ಗೌಡ ಹೇಳಿದರು.
ಅವರು ಮೇ.13ರಂದು ಪುತ್ತೂರಿನ 'ನಟರಾಜ ವೇದಿಕೆ'ಯಲ್ಲಿ ಜರುಗಿದ ಖ್ಯಾತ ಅರ್ಥದಾರಿ ಮೂಡಂಬೈಲು ಸಿ. ಗೋಪಾಲಕೃಷ್ಣ ಶಾಸ್ತ್ರಿಗಳ 'ಎಪ್ಪತ್ತೈದರ ಸಂಭ್ರಮ'ದ ಸಂಮಾನ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ, 'ಒಂದು ಕಾಲಘಟ್ಟದ ವಿದ್ವತ್ ಪರಂಪರೆ ಶಾಸ್ತ್ರಿಗಳಲ್ಲಿ ಕಾಣಬಹುದು' ಎಂದರು.
ಮೂಡಂಬೈಲು ಸಿ.ಗೋಪಾಲಕೃಷ್ಣ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ) ಮತ್ತು ಮೂಡಂಬೈಲು 75 ಸಂಮಾನ ಸಮಿತಿ ಪುತ್ತೂರು ಇವರ ಜಂಟಿ ಆಶ್ರಯದಲ್ಲಿ ಮತ್ತು ಸಮಸ್ತ ಅಭಿಮಾನಿಗಳ ಪ್ರೋತ್ಸಾಹದಿಂದ ಶಾಸ್ತ್ರಿಗಳನ್ನು ಶಾಲು, ಹಾರ, ಹಣ್ಣುಹಂಪಲು, ಕನಕದುಂಗುರ, ಬೆಳ್ಳಿಯ ಸ್ಮರಣಿಕೆ, ಸಂಮಾನ ಪತ್ರದೊಂದಿಗೆ ಭಾವಪೂರ್ಣವಾಗಿ, ಗೌರವದಿಂದ ಸಂಮಾನಿಸಲಾಯಿತು. ಶಾಸ್ತ್ರಿಗಳ ಗುರು ವಿದ್ವಾನ್ ಪೆರ್ಲ ಕೃಷ್ಣ ಭಟ್ಟರು ಆಶೀರ್ವಾದ ಪೂರ್ವಕ ಶಿಷ್ಯನನ್ನು ಹರಿಸಿ, ಸಂಮಾನಿಸಿದರು. ಸಂಮಾನಕ್ಕೆ ಕೃತಜ್ಞತೆ ಸಲ್ಲಿಸಿದ ಶಾಸ್ತ್ರಿಗಳು, 'ಕಲಾವಿದ ಸಕ್ರಿಯವಾಗಿರುವಾಗಲೇ ಗೌರವ, ಪುರಸ್ಕಾರಗಳು ಸಲ್ಲಬೇಕು' ಎಂದರು. ಶ್ರೀಮತಿ ಪದ್ಮಾ ಕೆ.ಆಚಾರ್ಯ ಸಂಮಾನ ಪತ್ರವನ್ನು ವಾಚಿಸಿದರು. ಬಳಿಕೆ ಶಾಸ್ತ್ರಿ ಅಭಿಮಾನಿಗಳಿಂದ ಹಾರಾರ್ಪಣೆ ನಡೆಯಿತು.
ಹಿರಿಯ ವಿದ್ವಾಂಸ, ಅರ್ಥದಾರಿ ಡಾ.ಎಂ.ಪ್ರಭಾಕರ ಜೋಶಿಯವರು, ಶಾಸ್ತ್ರಿಯವರೊಂದಿಗಿನ ನಾಲ್ಕು ದಶಕದ ತಮ್ಮ ಒಡನಾಟವನ್ನು ಸೋದಾಹರಣ ಮೂಲಕ ಪ್ರಸ್ತುತಪಡಿಸಿ ಅಭಿನಂದಿಸಿದರು. ಹೊಸನಗರ ಮೇಳದ ವ್ಯವಸ್ಥಾಪಕ, ಅರ್ಥದಾರಿ, ಸಂಘಟಕ ಉಜಿರೆ ಅಶೋಕ ಭಟ್ಟರು ಮೂಡಂಬೈಲು ಅವರ ಅರ್ಥಗಾರಿಕೆಯ ಸೊಗಸನ್ನು ವಿವರಿಸಿದರು.
ಅಭ್ಯಾಗತರಾಗಿ ದ.ಕ.ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಕೆ.ಟಿ.ಶೈಲಜಾ ಭಟ್, ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯ ಎಸ್.ಆರ್.ರಂಗಮೂರ್ತಿ ಉಪಸ್ಥಿತರಿದ್ದು ಎಪ್ಪತ್ತೈದರ ಶಾಸ್ತ್ರಿಗಳಿಗೆ ಶುಭಹಾರೈಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಕೇಂದ್ರಾಧ್ಯಕ್ಷ ಹರಿಕೃಷ್ಣ ಪುನರೂರು, ಜಿಲ್ಲಾ ಕಚೇರಿ ತಹಶೀಲ್ದಾರ್ ಕೆ.ಮೋಹನ್ ರಾವ್ ಮತ್ತು ಸಾಹಿತಿ ಡಾ.ರಮಾನಂದ ಬನಾರಿಯವರು ಶುಭಾಶಂಸನೆ ಮಾಡಿದರು.
ಸಂಮಾನ ಸಮಿತಿಯ ಅಧ್ಯಕ್ಷ ಕೆ.ಸೀತಾರಾಮ ರೈ ಸವಣೂರು ಇವರಿಂದ ಸ್ವಾಗತ. ಪ್ರತಿಷ್ಠಾನದ ಅಧ್ಯಕ್ಷ ಸಿ.ರಾಮಕೃಷ್ಣ ಶಾಸ್ತ್ರಿಯವರಿಂದ ಪ್ರಸ್ತಾವನೆ. ಸಂಮಾನ ಸಮಿತಿಯ ಪ್ರಧಾನ ಕಾರ್ಯದರ್ಶಿ ಭಾಸ್ಕರ ಬಾರ್ಯರಿಂದ ವಂದನಾರ್ಪಣೆ. ಅಡಿಕೆ ಪತ್ರಿಕೆಯ ಸಹಾಯಕ ಸಂಪಾದಕ ನಾ. ಕಾರಂತ ಪೆರಾಜೆ ಮತ್ತು ಸಂಮಾನ ಸಮಿತಿಯ ಕಾರ್ಯದರ್ಶಿ ದಿವಾಕರ ಗೇರುಕಟ್ಟೆಯವರು ಸಮಾರಂಭವನ್ನು ನಿರ್ವಹಿಸಿದರು.
ಗೌರವ ಗ್ರಂಥ ಅನಾವರಣ
'ಮೂಡಂಬೈಲು ಶಾಸ್ತ್ರಿ 75' ಗೌರವ ಗ್ರಂಥವನ್ನು ಕರ್ನಾಟಕ ಸಾರಿಗೆ ಆಯಕ್ತ ಟಿ.ಶ್ಯಾಮ ಭಟ್ ಅನಾವರಣಗೊಳಿಸಿ, ಶಾಸ್ತ್ರಿಯವರ ಅರ್ಥಗಾರಿಕೆಯ ಗಟ್ಟಿತನವನ್ನು ನೆನಪಿಸಿಕೊಳ್ಳುತ್ತಾ, 'ಶಾಸ್ತ್ರಿಯವರು ಬದುಕಿನಲ್ಲಿ ಕಲೆಯನ್ನು ಅಂಟಿಸಿಕೊಂಡು ಸ್ವ-ಪ್ರಯತ್ನದಿಂದ ಎತ್ತರಕ್ಕೇರಿದವರು. ಆರ್ಥಗಾರಿಕೆಯಲ್ಲಿ ಅವರಾಗಿ ಆಕ್ರಮಣಕ್ಕೆ ಹೋಗುವವರಲ್ಲ. ಚುಚ್ಚಿದರೆ ಬಿಡರು. ಅವರ ಏಕಮುಖ ಅರ್ಥಗಳಲ್ಲಿ ಸಾಹಿತ್ಯದ ಪಕ್ವತೆ ಎದ್ದುಕಾಣುತ್ತದೆ' ಎಂದರು. ಗ್ರಂಥ ರಚನೆಯ ಹಿಂದಿನ ಶ್ರಮ, ಹೂರಣವನ್ನು ಪ್ರಧಾನ ಸಂಪಾದಕರಾದ ಸಿ.ಎಚ್.ಕೃಷ್ಣ ಶಾಸ್ತ್ರಿ ಬಾಳಿಲ ಮತ್ತು ಡಾ.ಎಂ.ಪ್ರಭಾಕರ ಜೋಶಿಯವರು ವಿವರಿಸಿದರು. 508 ಪುಟಗಳ ಗ್ರಂಥದ ಮುಖ ಬೆಲೆ ಮುನ್ನೂರು ರೂಪಾಯಿ.
ಉದ್ಘಾಟನೆ
ಪೂರ್ವಾಹ್ನ ಜರುಗಿದ ಸಮಾರಂಭದಲ್ಲಿ ಉಪ್ಪಿನಂಗಡಿ ಕನ್ನಡ ಸಂಗಮದ ಅಧ್ಯಕ್ಷ ಕಜೆ ಈಶ್ವರ ಭಟ್ಟರು ದೀಪಜ್ವಲನದ ಮೂಲಕ 'ಮೂಡಂಬೈಲು 75' ಕಲಾಪಕ್ಕೆ ಚಾಲನೆ ಕೊಟ್ಟು, 'ಕಲಾವಿದನ ಜೀವಿತ ಕಾಲದಲ್ಲೇ ಇಂತಹ ಗ್ರಂಥಗಳು ಹೊರಬರುವುದು ಉತ್ತಮ ಕೆಲಸ' ಎಂದರು. ಕರ್ನಾಟಕ ಯಕ್ಷಗಾನ ಮತ್ತು ಬಯಲಾಟ ಅಕಾಡೆಮಿಯ ಅಧ್ಯಕ್ಷ ಪ್ರೊ:ಎಂ.ಎಲ್.ಸಾಮಗರು ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಬೇರೆ ಕಲೆಗಳಿಂದ ಯಕ್ಷಗಾನವು ಸಾತ್ವಿಕ ಸ್ಪರ್ಧೆಯನ್ನು ಎದುರಿಸಬೇಕಾಗಿದೆ. ಬದುಕಿನಲ್ಲಿ ಯಕ್ಷಗಾನ ಏಕೆ ಬೇಕು ಎಂಬುದನ್ನು ಯುವ ಜನರಿಗೆ, ಹೆತ್ತವರಿಗೆ, ಪಾಲಕರಿಗೆ ತಿಳಿಹೇಳುವ ಪ್ರತ್ಯೇಕ ಕೆಲಸಗಳಾಗಬೇಕಾಗಿದೆ' ಎಂದರು.
ಅಭ್ಯಾಗತರಾಗಿ ಪುತ್ತೂರಿನ ಶಾಸಕಿ ಶ್ರೀಮತಿ ಮಲ್ಲಿಕಾ ಪ್ರಸಾದ್, ಪುತ್ತೂರು ಕ್ಷೇತ್ರದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ನನ್ಯ ಅಚ್ಯುತ ಮೂಡೆತ್ತಾಯರು ಶುಭ ಹಾರೈಸಿದರು. ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ನಿವೃತ್ತ ಮುಖ್ಯಸ್ಥ ಡಾ.ತಾಳ್ತಜೆ ವಸಂತ ಕುಮಾರ್, ದ.ಕ.ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಕರ್ನಾಟಕ ಧಾರ್ಮಿಕ ಪರಿಷತ್ತಿನ ಸದಸ್ಯ ಪಂಜ ಭಾಸ್ಕರ ಭಟ್ ಶುಭಾಶಂಸನೆ ಮಾಡಿದರು.
ಈ ಸಂದರ್ಭದಲ್ಲಿ ಕಲ್ಕೂರ ಪ್ರತಿಷ್ಠಾನದ ವತಿಯಿಂದ ಮೂಡಂಬೈಲು ಅವರನ್ನು ಗೌರವಿಸಲಾಯಿತು. ಸಂಮಾನ ಸಮಿತಿಯ ಅಧ್ಯಕ್ಷ ಕೆ.ಸೀತಾರಾಮ ರೈ ಸವಣೂರು ಇವರಿಂದ ಸ್ವಾಗತ. ಶಾಸ್ತ್ರಿ ಪ್ರತಿಷ್ಟಾನದ ಗೌರವಾಧ್ಯಕ್ಷ ಡಾ.ಸಿ.ಕೃಷ್ಣ ಶಾಸ್ತ್ರಿ ಕಡಬ, ಪ್ರತಿಷ್ಠಾನದ ಕಾರ್ಯದರ್ಶಿ ಸಿ.ಮುರಲೀಧರ ಶಾಸ್ತ್ರಿ ಮೂಡಂಬೈಲು ಇವರಿಂದ ಧನ್ಯವಾದ. ಆರಂಭದಲ್ಲಿ ಕು.ಅನನ್ಯ ಬೊಳಂತಿಮೊಗರು, ಕೃಷ್ಣರಾಜ ದೇಲಂತಮಜಲು ಇವರಿಂದ ಪ್ರಾರ್ಥನೆ. ಅರ್ಥದಾರಿ ವಾಸುದೇವ ರಂಗಾಭಟ್ಟ ಮತ್ತು ಹರೀಶ್ ಬೊಳಂತಿಮೊಗರು ಇವರಿಂದ ನಿರ್ವಹಣೆ.
ತಾಳಮದ್ದಳೆ
ಯಕ್ಷಗಾನ ಬಯಲಾಟ ಅಕಾಡೆಮಿ ಬೆಂಗಳೂರು ಇವರ ಸಹಕಾರದೊಂದಿಗೆ 'ಅರ್ಥಗಾರಿಕೆಯಲ್ಲಿ ಕನ್ನಡ ಸೊಗಸು' ಎಂಬ ಆಶಯದಲ್ಲಿ 'ಭೀಷ್ಮ ಸೇನಾಧಿಪತ್ಯ' ಮತ್ತು 'ಚಕ್ರಗ್ರಹಣ' ಎಂಬ ತಾಳಮದ್ದಳೆ. ಭಾಗವತರಾಗಿ ಪದ್ಯಾಣ ಗಣಪತಿ ಭಟ್ ಮತ್ತು ಕುರಿಯ ಗಣಪತಿ ಶಾಸ್ತ್ರಿ, ಚೆಂಡೆ ಮದ್ದಳೆಯಲ್ಲಿ - ಪದ್ಯಾಣ ಶಂಕರನಾರಾಯಣ ಭಟ್, ದಂಬೆ ಈಶ್ವರ ಶಾಸ್ತ್ರಿ, ವದ್ವ ರಾಮಪ್ರಸಾದ್; ಅರ್ಥದಾರಿಗಳಾಗಿ - ಕುಂಬಳೆ ಸುಂದರ ರಾವ್ (ಭೀಷ್ಮ 1), ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ (ಭೀಷ್ಮ 2), ಉಡುವೆಕೋಡಿ ಸುಬ್ಬಪ್ಪಯ್ಯ (ಕೌರವ), ಸುಣ್ಣಂಬಳ ವಿಶ್ವೇಶ್ವರ ಭಟ್ (ದ್ರೋಣ), ಶಂಭು ಶರ್ಮ (ಕರ್ಣ), ರಾಧಾಕೃಷ್ಣ ಕಲ್ಚಾರ್ (ಕೃಷ್ಣ), ಜಬ್ಬರ್ ಸಮೋ (ಅಭಿಮನ್ಯು), ವಾದಿರಾಜ ಕಲ್ಲೂರಾಯ (ಅರ್ಜುನ) - ಭಾಗವಹಿಸಿದ್ದರು.
ಪ್ರತಿಷ್ಠಾನ ಮತ್ತು ಸಂಮಾನ ಸಮಿತಿಯ - ಸಿ.ಈಶ್ವರ ಶಾಸ್ತ್ರಿ, ಬಿ.ರವಿಚಂದ್ರ, ಸಿ.ರಾಮಚಂದ್ರ ಶಾಸ್ತ್ರಿ, ಬಿ.ಈಶ್ವರ ನಾಯ್ಕ, ಪ್ರೇಮಲತಾ ಟಿ.ರಾವ್, ಶುಭಾ ಗಣೇಶ್, ಉಮಾ ಡಿ.ಪ್ರಸನ್ನ, ರಮೇಶ ಬಾಬು, ವಾಟೆಡ್ಕ ಕೃಷ್ಣ ಭಟ್, ಕಾಡೂರು ಸೀತಾರಾಮ ಶಾಸ್ತ್ರಿ.. ಮೊದಲಾದವರು ಸಂದರ್ಭೋಚಿತವಾಗಿ ಕಲಾಪಗಳ ವಿವಿಧ ಅಂಗಗಳನ್ನು ನಿರ್ವಹಿಸಿದ್ದರು.
(ಚಿತ್ರ : ಕ್ರಷ್ನಾ ಸ್ಟುಡಿಯೋ, ಪುತ್ತೂರು)
No comments:
Post a Comment