ಕಲಾವಿದ, ಸಂಘಟಕ, ಪ್ರವಚನಕಾರ ಹಾಗೂ ಸಾಮಾಜಿಕ ಕಾರ್ಯಕರ್ತ ಶ್ರೀ ಭಾಸ್ಕರ ಬಾರ್ಯ ಇವರು ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ಸದಸ್ಯರನ್ನಾಗಿ ಆಯ್ಕೆ ಮಾಡಿ ಘನ ಕರ್ನಾಟಕ ಸರಕಾರವು ಆದೇಶ ಹೊರಡಿಸಿದೆ. ಹತ್ತು ಮಂದಿ ಸದಸ್ಯರನ್ನೊಳಗೊಂಡ ಅಕಾಡೆಮಿಗೆ ಪ್ರೊ.ಎಂ.ಎಲ್.ಸಾಮಗರು ಅಧ್ಯಕ್ಷರಾಗಿದ್ದಾರೆ.
ಭಾಸ್ಕರ ಬಾರ್ಯರು ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯರು. ಕರ್ನಾಟಕ ಸಂಸ್ಕೃತಿ ಸಂರಕ್ಷಣಾ ಸೊಸೈಟಿ (ರಿ) ಇದರ ಸದಸ್ಯರಾಗಿ ಈ ಹಿಂದೆ ಆಯ್ಕೆಯಾಗಿರುತ್ತಾರೆ. ಬೊಳ್ವಾರಿನ ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ ಅಧ್ಯಕ್ಷ. ಪುತ್ತೂರು ಶಿವಳ್ಳಿ ಸಂಪದದ ಅಧ್ಯಕ್ಷರಾಗಿ ಈಚೆಗಷ್ಟೇ ನಿಯುಕ್ತಿಯಾಗಿರುತ್ತಾರೆ. ಅಲ್ಲದೆ - ಪುತ್ತೂರು ದ್ರಾವಿಡ ಬ್ರಾಹ್ಮಣರ ಹಾಸ್ಟೆಲ್ ಸಮಿತಿಯ ಉಪಾಧ್ಯಕ್ಷ, ಪುತ್ತೂರಿನ ನಾಡಹಬ್ಬ ಸಮಿತಿಯ ಉಪಾಧ್ಯಕ್ಷ, ಮಾಜಿ ಹಾಸ್ಯ ಪ್ರಿಯ ಸಂಘದ ಆಧ್ಯಕ್ಷ.
ಎಡನೀರು ಯಕ್ಷಗಾನ ಸಮಿತಿ, ಮೂಡಂಬೈಲು 75 ಸಮಾರಂಭ, ಶೇಣಿ ನೆನಪು, ಸಾಮಗದ್ವಯ ಸಂಸ್ಮರಣೆ, 'ಆಂಜನೇಯ 40'ರ ಮಾಣಿಕ್ಯ ಸಂಭ್ರಮ, ಸರಣಿ ತಾಳಮದ್ದಳೆ ಮೊದಲಾದ ಗುರುತರ ಕಾರ್ಯಕ್ರಮಗಳ ಸಂಘಟನೆಯನ್ನು ಮಾಡಿರುತ್ತಾರೆ. ಬಾರ್ಯ ಶ್ರೀ ಮಹಾವಿಷ್ಣು ದೇವಸ್ಥಾನದ ಪರಂಪರೆಯ ಅರ್ಚಕ ಮನೆತನ ಇವರದು.
ಬಾರ್ಯರ ಸಂಘಟನಾ ಕೌಶಲಕ್ಕೆ ಸಾಕ್ಷಿಯಾಗಿ ಹಲವು ಸಂಮಾನಗಳು ಅರಸಿ ಬಂದಿವೆ. ಉಂಡೆಮನೆ ಕೃಷ್ಣ ಭಟ್, ಸ್ನೇಹ ಸಂಗಮ ರಿಕ್ಷಾ ಚಾಲಕರ ಸಂಘ, ದೇಂತಡ್ಕ ಶ್ರೀ ವನದುರ್ಗಾ ದೇವಸ್ಥಾನ, ಜೋಗಿ ಸುಧಾರಕರ ಸಂಘ ಹಾಗೂ ಇತರ ಸಂಸ್ಥೆಗಳು ಸಂಮಾನಿಸಿವೆ. ತನ್ನ ತೀರ್ಥರೂಪರ ನೆನಪಿಗಾಗಿ 'ಬಾರ್ಯ ವಿಷ್ಣುಮೂರ್ತಿ ನೂರಿತ್ತಾಯ ಪ್ರತಿಷ್ಠಾನ'ವನ್ನು ಸ್ಥಾಪಿಸಿ, ವರುಷಕ್ಕೊಮ್ಮೆ ವಿವಿಧ ಸಾಧಕರನ್ನು ಗೌರವಿಸುವ ಪರಿಪಾಠ ಇಟ್ಟುಕೊಂಡಿದ್ದಾರೆ.
ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲಿ ತೀರ್ಪುಗಾರರಾಗಿ ಭಾಗವಹಿಸಿರುತ್ತಾರೆ. ಮೂರು ದಶಕದ ಹಿಂದೆ ಬಾರ್ಯದಲ್ಲಿ ವಯಸ್ಕರ ಶಿಕ್ಷಣ ತರಗತಿಯ ಅಧ್ಯಾಪಕನಾಗಿ 'ಅತ್ಯುತ್ತಮ ಶಿಕ್ಷಕ' ನೆಗಳ್ತೆಗೆ ಪಾತ್ರರಾಗಿದ್ದರು. ಅಲ್ಲದೆ ಯುವಕ ಮತ್ತು ಯುವತಿ ಮಂಡಲಗಳ ಕಾರ್ಯಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದ್ದರು. ಈಚೆಗೆ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಳದ ಜಾತ್ರಾ ಉಸ್ತುವಾರಿ ಸಮಿತಿಯ ಸದಸ್ಯರಾಗಿದ್ದರು. ಪುತ್ತೂರಿನ ಬೊಳುವಾರಿನ ಶ್ರೀ ದುರ್ಗಾಶಕ್ತಿ ಫೈನಾನ್ಸ್ (ರಿ) ಇದನ್ನು ಬಾರ್ಯರು ನಡೆಸುತ್ತಿದ್ದಾರೆ.
No comments:
Post a Comment