"ಐದನೇ ತರಗತಿ ಫೈಲ್ ಆಗಿ, ಮೈಸೂರಿನಲ್ಲಿ ಹೊಟ್ಟೆಪಾಡಿಗಾಗಿ ಹೋಟೆಲ್ ಸೇರಿದ್ದೆ. ಅಕಸ್ಮಾತ್ತಾಗಿ ಹೋಟೆಲಿಗೆ ಆಗಮಿಸಿದ
ಕುರಿಯ ವಿಠಲ ಶಾಸ್ತ್ರಿಗಳು ನೋಡಿ ಅಲ್ಲಿಂದ ತನ್ನ ಮನೆಗೆ ಕರೆದುಕೊಂಡು ಹೋಗಿ ಅನ್ನ, ವಸತಿ, ವಿದ್ಯೆ ನೀಡಿ ಬೆಳೆಸಿದರು, ಎನ್ನುವಾಗ
ಕಳೆದ ಕಾಲ ನೆನಪಾಗಿ ಮುಳಿಯಾಲ ಭೀಮ ಭಟ್ಟರ ಕಣ್ಣು ಆದ್ರ್ರವಾಯಿತು.
'ದೇವಿ ಭಟ್ರು' ಎಂದೇ ಖ್ಯಾತರಾಗಿದ್ದ ಭೀಮ ಭಟ್ಟರಿಗೆ ಶತಾಯುಷ್ಯ
ಪೂರೈಸಲು ಇನ್ನು ಕಾಲೇ ಶತಮಾನ. 'ಯಕ್ಷಗಾನವನ್ನು ಭಕ್ತಿಯಿಂದ ನೋಡುವ,
ಆಡುವ ದಿನಮಾನಗಳು ಮರೆಯಾಗಿವೆ. ಭಕ್ತಿಯ ಜಾಗದಲ್ಲಿ ಆಡಂಬರ ಮೇಳೈಸಿವೆ' ಎನ್ನುತ್ತಾ ಮಾತಿಗಿಳಿದರು.
ಒಂದು ಸ್ವಾರಸ್ಯವನ್ನು ರೋಚಕವಾಗಿ ಹೇಳುತ್ತಾರೆ, ನಾನು ಅಂಬೆಗಾಲಿಕ್ಕುತ್ತಿದ್ದಾಗ
ಹಿರಿಯ (ಅಜ್ಜ) ಬಲಿಪ ನಾರಾಯಣ ಭಾಗವತರು ಎತ್ತಿ, ಮುದ್ದಾಡಿ 'ಇವನಿಗೆ ಭೀಮನ ಪಾತ್ರವನ್ನು ತೊಡಿಸಿ, ರಂಗಸ್ಥಳದಲ್ಲಿ ಆಡಿಸದೆ
ನಾನು ದೂರವಾಗಲಾರೆ' ಎಂದಿದ್ದರಂತೆ. ಒಂದಷ್ಟು ಸಮಯದ ಬಳಿಕ ಇವರು ಭೀಮನ ಪಾತ್ರ
ಮಾಡಿದ ಮರುದಿವಸ ಇವರ ತಂದೆ ಶಿವೈಕ್ಯರಾದರಂತೆ!
ಮುಳಿಯಾಲ ಭೀಮ ಭಟ್ಟರ ತಂದೆ ಕೇಚಣ್ಣ (ಕೇಶವ) ಭಟ್ಟರು ವೇಷಧಾರಿ. ಅಜ್ಜ, ಪಿಜ್ಜ .. ಹೀಗೆ ಕಲಾವಿದ ವಂಶ. ತಂದೆಯೊಂದಿಗೆ ಆಟ ನೋಡುವುದು ಬಾಲ್ಯಾಸಕ್ತಿ. ಕಲಾವಿದನಾಗಬೇಕೆಂಬ
ಹಂಬಲವಿರಲಿಲ್ಲ. ಯಾವಾಗ ಕುರಿಯ ಶಾಸ್ತ್ರಿಗಳು ಮೈಸೂರಿನಿಂದ ಕರೆದುಕೊಂಡು ಬಂದು ಮಿತ್ತನಡ್ಕದ (ಕನ್ಯಾನ
ಸನಿಹ) ತನ್ನ ಗರಡಿಗೆ ಸೇರಿಸಿದರೋ, ಅಂದಿನಿಂದ ಶಾಸ್ತ್ರಿಗಳ ನೆಚ್ಚಿನ ಶಿಷ್ಯರಲ್ಲೊಬ್ಬರಾದರು.
1951ರಲ್ಲಿ ಕುರಿಯ ಶಾಸ್ತ್ರಿಗಳ ಸಂಚಾಲಕತ್ವದ ಶ್ರೀ ಧರ್ಮಸ್ಥಳ ಮೇಳದಿಂದ 'ಕಲಾವಿದ'ನ ಪಟ್ಟ. ಕೋಡಂಗಿ, ಬಾಲಗೋಪಾಲ,
ಮುಖ್ಯಸ್ತ್ರೀವೇಷ, ಪೀಠಿಕೆ ವೇಷ.. ಹೀಗೆ ಹಂತಹಂತ ಕಲಿಕೆ.
ತನ್ನ ವೇಷದ ಬಳಿಕ ರಂಗಸ್ಥಳದ ಹತ್ತಿರ ಕುಳಿತು ಬಣ್ಣದ ಮಾಲಿಂಗನವರ, ಕರ್ಗಲ್ಲು
ಸುಬ್ಬಣ್ಣ ಭಟ್ಟರ, ಕುರಿಯದವರ ವೇಷಗಳ ಅಭಿವ್ಯಕ್ತಿ, ನಾಟ್ಯಗಾರಿಕೆ, ಆರ್ಥಗಾರಿಕೆಗಳನ್ನು ನೋಡಿ-ಕೇಳಿ ಅಭ್ಯಾಸ. 'ನನಗೆ ಓದಿದ ಅನುಭವ ಕಡಿಮೆ,
ನೋಡಿದ ಅನುಭವ ಜಾಸ್ತಿ' ಎನ್ನಲು ಅವರಿಗೆ ಮುಜುಗರವಿಲ್ಲ.
ಏಳು ವರುಷ ಧರ್ಮಸ್ಥಳ ಮೇಳದ ತಿರುಗಾಟ. 1958ರಿಂದ ಕಟೀಲು ಮೇಳ.
ಶ್ರೀ ದೇವಿ ಮಹಾತ್ಮೆ ಪ್ರಸಂಗದ 'ಶ್ರೀದೇವಿ'ಯ
ಪಾತ್ರವನ್ನು 'ಒಲಿಸಿಕೊಂಡ' ಮುಳಿಯಾಲದವರು ಕಲಾಭಿಮಾನಿಗಳಿಗೆ
'ದೇವಿ ಭಟ್ರು' ಎಂದೇ ಪರಿಚಿತ. ನನ್ನ ದೇವಿ ಪಾತ್ರದ
ಯಶಸ್ಸಿಗೆ ಪೊಳಲಿ ಶಂಕರನಾರಾಯಣ ಶಾಸ್ತ್ರಿಗಳ ಕೊಡುಗೆಯನ್ನು ಮರೆಯುವಂತಿಲ್ಲ. ಆ ಪಾತ್ರಕ್ಕೆ ಬೇಕಾದ
ಚಿಕ್ಕ-ಚೊಕ್ಕ-ಅರ್ಥಗರ್ಭಿತ ಅರ್ಥಗಳನ್ನು ಪೊಳಲಿಯವರಿಂದ ಕಲಿತೆ. ಹಾಗಾಗಿ ಗೌರವಗಳು ಅವರಿಗೆ ಸಲ್ಲಬೇಕು'
ಎಂದು ವಿನೀತರಾಗಿ ಹೇಳುತ್ತಾರೆ.
ಒಂದು ಕಾಲಘಟ್ಟದಲ್ಲಿ ಪ್ರಮೀಳೆ, ಶಶಿಪ್ರಭೆ, ಮೀನಾಕ್ಷಿಯಂತಹ ಗಂಡುಗತ್ತಿನ ಪಾತ್ರಗಳಲ್ಲಿ ಮೆರೆದ ಭೀಮ ಭಟ್ಟರು; 'ಅತಿಕಾಯ, ತಾಮ್ರಧ್ವಜ, ಕರ್ಣ,
ದ್ರುಪದ, ಕೃಷ್ಣ, ಹನುಮಂತ'
ಹೀಗೆ ರಂಗದ ಬಹುತೇಕ ಪಾತ್ರಗಳಿಗೆ ಸ್ವ-ನಿರ್ಮಿತ ಮಿರುಗು ನೀಡಿದ್ದಾರೆ. ಸೀತೆ,
ದಮಯಂತಿ, ಚಂದ್ರಮತಿ, ದ್ರೌಪದಿ..ಯಂತಹ
ಗರತಿ ಪಾತ್ರಗಳನ್ನು ಸಲೀಸಾಗಿ ನಿರ್ವಹಿಸುತ್ತಿದ್ದರು.
' ಶ್ರೀದೇವಿ' ಪಾತ್ರ
ಈಗಲೂ ನೆನಪಿಸುವಂತಹುದು. ಶರೀರ, ಶಾರೀರ ಮತ್ತು ಪಾತ್ರದ ಕುರಿತಾದ ಶೃದ್ಧೆ,
ಭಕ್ತಿ. ಇವೆಲ್ಲವೂ ಕ್ರೋಢೀಕರಿಸಿದ ಸಿಹಿಪಾಕ. ಅದರಲ್ಲಿ ಒಗರಿಲ್ಲ, ಹೆಚ್ಚು ಸಿಹಿಯೂ ಇಲ್ಲ! ಹಿತ-ಮಿತ. ಹಾಗಾಗಿ ಪಾತ್ರಾಭಿವ್ಯಕ್ತಿಯಲ್ಲಿ ಪೂರ್ಣ ಹಿಡಿತ. 'ಪ್ರಸಂಗ ಉತ್ತರಾರ್ಧದಲ್ಲಿ ದೇವಿಯು ಒಮ್ಮೆ ಉಯ್ಯಾಲೆಯಲ್ಲಿ ಕುಳಿತರೆ ಮತ್ತೆ ಏಳುವುದು ಶುಂಭ-ನಿಶುಂಭರ
ವಧೆಯ ಸಮಯಕ್ಕೆ ಮಾತ್ರ. ಮಧ್ಯೆ ಎದ್ದು ಆಚೀಚೆ ಹೋಗುವ ಕ್ರಮವಿಲ್ಲ' ಎಂದು
ಪಾತ್ರವನ್ನು ಜ್ಞಾಪಿಸಿಕೊಳ್ಳುತ್ತಾರೆ.
ಕುಂಡಾವು ಮೇಳದ ಒಂದು ವರುಷದ ತಿರುಗಾಟದ ಬಳಿಕ ಪುನಃ ಐದು
ವರುಷ ಧರ್ಮಸ್ಥಳ ಮೇಳ. 1979ರಿಂದ 1990ರ ತನಕ 'ಸುಂಕದಕಟ್ಟೆ
ಮೇಳ'ದಲ್ಲಿ ವ್ಯವಸಾಯ. ಈ ಮೇಳವನ್ನು ಹುಟ್ಟುಹಾಕುವುದರಲ್ಲಿ ಭೀಮ ಭಟ್ಟರ
ಶ್ರಮವಿದೆ. ಮಳೆಗಾಲದಲ್ಲಿ ಕಲಾವಿದರನ್ನು ಒಟ್ಟು ಸೇರಿಸಿ ದೇಶಾದ್ಯಂತ ಸಂಚರಿಸಿ, ಅನ್ಯ ಭಾಷಿಗರಿಗೂ ಯಕ್ಷಗಾನದ ಸವಿಯನ್ನು ಉಣಿಸಿದ್ದಾರೆ, ಭೀಮ ಭಟ್ಟರು.
ಯಕ್ಷಗಾನ ಕುರಿತ ಒಂದೆರಡು ಚಿಕ್ಕ ಪುಸ್ತಿಕೆಯನ್ನು ಅಚ್ಚುಹಾಕಿಸಿದ್ದಾರೆ.
ಸುಮಾರು ನಾಲ್ಕು ದಶಕ ಯಕ್ಷಗಾನದಲ್ಲಿ ದುಡಿದ ಭೀಮ ಭಟ್ಟರು
1991ರಲ್ಲಿ ಅಪಘಾತಕ್ಕೀಡಾಗಿ ಚೇತರಿಸಿದರು. ಈಚೆಗೆ ಒಂಭತ್ತು ವರುಷಗಳಿಂದ ಕಾಂತಾವರ ಶ್ರೀ ಕಾಂತೇಶ್ವರ
ದೇವಸ್ಥಾನದಲ್ಲಿ ಮ್ಯಾನೇಜರ್ ಆಗಿ ದುಡಿತ. 'ಡಾ.ಜೀವಂಧರ
ಬಲ್ಲಾಳರು ನನಗೆ ಮರುಜೀವ ನೀಡಿದರು. ಇಳಿ ವಯಸ್ಸಿನಲ್ಲಿ ಅನ್ನ, ಸೂರು ನೀಡಿ
ಆಶ್ರಯ ಕಲ್ಪಿಸಿದ್ದಾರೆ' ಎನ್ನುತ್ತಾರೆ.
ತನ್ನ ತಿರುಗಾಟದ ಕ್ಷಣಗಳನ್ನು ಭಟ್ಟರು ಹೇಳುವಾಗ ವಿಷಾದವಿಲ್ಲ.
ಸಂಕಟವಿಲ್ಲ. ನೋವಿಲ್ಲ. ಒಂದೊಂದು ಘಟನೆಯನ್ನು ಮೆಲುಕು ಹಾಕುತ್ತಿದ್ದಂತೆ ವಯೋಮಾನ ಹಿಂದಕ್ಕೆ ಹೋಗುತ್ತಿತ್ತು.
'ನೋಡಿ, ಶಾಸ್ತ್ರಿಗಳು ಕಲಿಸಿದ ಭರತನಾಟ್ಯದ ಭಂಗಿ'
ಎನ್ನುತ್ತಾ ಶಿವ ತಾಂಡವ ಒಂದು ಭಂಗಿಗೆ ಸಿದ್ಧರಾದರು. ಮನಸ್ಸೇನೋ ಸಿದ್ಧವಾಯಿತು,
ಆದರೆ ದೇಹ ಕೇಳಲಿಲ್ಲ!
ಮಡದಿ ಲೀಲಾವತಿ. ಒಬ್ಬಳೇ ಮಗಳು. ವಿವಾಹಿತೆ. 'ಆರ್ಥಿಕವಾಗಿ ನಾನು ಶ್ರೀಮಂತನಲ್ಲ. ಆದರೆ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ
ನಾನು ಯಕ್ಷ ಶ್ರೀಮಂತ' ಎನ್ನುತ್ತಾರೆ. 'ತನಗೆ
ವಯಸ್ಸಾಯಿತು. ಇನ್ನು ಹೇಗೋ. ಯಕ್ಷಗಾನದ ಸುದ್ದಿಯೇ ಬೇಡವಪ್ಪಾ..' ಮುಂತಾದ
ಋಣಾತ್ಮಕ ಭಾವ-ಮಾತುಗಳನ್ನು ನಾನು ಭೀಮ ಭಟ್ಟರೊಂದಿಗಿನ ಮಾತುಕತೆಯಲ್ಲಿ ಕಂಡಿಲ್ಲ.
ಕುರಿಯ ಶಾಸ್ತ್ರಿಗಳ ಗರಡಿಯಲ್ಲಿ ಪಳಗಿದ ಮುಳಿಯಾಲ ಭೀಮ
ಭಟ್ಟರ ಕಲಾ ಸೇವೆಗೆ, ಆಗಸ್ಟ್ 18ರಂದು ಪುಣಚ ಶ್ರೀ ದೇವಿ
ವಿದ್ಯಾ ಕೇಂದ್ರದಲ್ಲಿ ಅಪರಾಹ್ನ 'ಕುರಿಯ ವಿಠಲ ಶಾಸ್ತ್ರಿ ಜನ್ಮಶತಮಾನೋತ್ಸವ'
ಸಂದರ್ಭದ 'ಗೌರವ ಸಂಮಾನ'.
No comments:
Post a Comment