Saturday, January 4, 2014

ಉಳಿಯ ಯಕ್ಷಗಾನ ಸಂಘ : ಮೆರೆದು ಮಿರುಗಿದ ಸುವರ್ಣ







               ಮಧೂರು ಉಳಿಯ ಶ್ರೀ ಧನ್ವಂತರಿ ಯಕ್ಷಗಾನ ಕಲಾ ಸಂಘವು ಕಳೆದ ವಾರ ಚಿನ್ನದ ಹೊಳಪಿನಿಂದ ಮೆರೆಯಿತು. ವೈವಿಧ್ಯ ಹೂರಣಗಳಿಂದ ಮೆರೆಸಿತು. ಬಹುಕಾಲ ಮೆರುಗುವಂತೆ ಮಾಡಿತು. ಸಂಘವೊಂದರ ಗರಿಷ್ಠ ಸಾಧ್ಯತೆಗಳನ್ನು ಸಾಕಾರಗೊಳಿಸಿತು.
                  ಎಷ್ಟು ಬೇಕೋ ಅಷ್ಟು ಸಭಾ ಕಲಾಪ. ಒಂದು ನೆನಪು ಸಂಚಿಕೆ ಅನಾವರಣಕ್ಕೆ, ಇನ್ನೊಂದು ಸಮಾರೋಪ. ಮಿಕ್ಕ ಸಮಯವೆಲ್ಲವೂ ಯಕ್ಷಗಾನದ ವಿವಿಧ ವೈವಿಧ್ಯಗಳ ಪ್ರಸ್ತುತಿ. ಹಿರಿಯ ಕಲಾವಿದರ ಉಪಸ್ಥಿತಿ. ಕಾಪಿಟ್ಟ ಕಲಾ ಔಚಿತ್ಯದ ಮಿತಿ.
ಸಂಘವು ಚಿನ್ನದ ಹಬ್ಬಕ್ಕಾಗಿ ಐವತ್ತು ತಾಳಮದ್ದಳೆ ನಡೆಸಿತ್ತು. ಅಭಿಮಾನಿಗಳಿಂದ ಅಭಿಯಾನಕ್ಕೆ ತುಂಬು ಅಭಿಮತ. ಇಲ್ಲಿ ಪ್ರೇಕ್ಷಕರು ಮುಖ್ಯವಾಗಿರಲಿಲ್ಲ. ಮನೆ ಮಂದಿ ತಾಳಮದ್ದಳೆ ವೀಕ್ಷಿಸಬೇಕು. ಯಕ್ಷಗಾನೀಯ ವಾತಾವರಣವು ಮನೆ ಮನಗಳಲ್ಲಿ ಬೆಳಗಬೇಕು. ಆ ಮೂಲಕ ಯಕ್ಷಗಾನ ಬದುಕಬೇಕು ಎನ್ನುವ ದೂರದೃಷ್ಟಿ.
                ಅಭಿಯಾನವನ್ನು ಪ್ರಾಂಜಲವಾಗಿ ಸಮಾಜ ಸ್ವೀಕರಿಸಿದೆ. ಮನೆಯ ಜಗಲಿಯಲ್ಲಿ ಜಾಗ ಕೊಟ್ಟಿದೆ. ಅಭಿಮಾನದ ಹೊನಲು ಹರಿಸಿದೆ. ಸುವರ್ಣಾಭಿಯಾನ ಯಶದ ಹಿನ್ನೆಲೆಯಲ್ಲಿ ಚಿನ್ನದ ಹಬ್ಬದಲ್ಲಿ ಮೊದಲ ಸೆಶನ್ - ಸಂಘದ ಕಲಾವಿದರಿಂದ ತಾಳಮದ್ದಳೆ. ಅಪರಾಹ್ನ ಶ್ರೀ ಧರ್ಮಸ್ಥಳ ಮೇಳದ ಭಾಗವತ ಸಿರಿಬಾಗಿಲು ರಾಮಕೃಷ್ಣ ಮಯ್ಯರ ನಿದರ್ೇಶನದಲ್ಲಿ 'ಪೂರ್ವರಂಗ' ಪ್ರಾತ್ಯಕ್ಷಿಕೆ.
                  ಹಿಂದೆಲ್ಲಾ ಪೂರ್ವರಂಗವು ಸರಿಸುಮಾರು ರಾತ್ರಿ ಎಂಟು ಗಂಟೆಗೆ ಆರಂಭವಾಗಿ ಹತ್ತು ಗಂಟೆಯ ತನಕ ಪ್ರದರ್ಶಿತವಾಗುತ್ತಿದ್ದುವು. ಆಗಷ್ಟೇ ರಂಗಪ್ರವೇಶಿಸುವ ಕಲಾವಿದನಿಗೆ ಪೂರ್ವರಂಗ ಎನ್ನುವುದು ಕಲಿಕಾ ಶಾಲೆ. ಎಲ್ಲಾ ತಾಳ, ನಡೆಗಳ ಅಭ್ಯಾಸ. ಸಮರ್ಥವಾಗಿ ಪೂರ್ವರಂಗವನ್ನು ಅಭ್ಯಾಸ ಮಾಡಿದ ಕಲಾವಿದ ಮುಂದೆ ಎಂತಹ ಪಾತ್ರವನ್ನಾದರೂ ಮಾಡಬಹುದಾದಷ್ಟು ಸಮರ್ಥನಾಗಬಲ್ಲ. ಬಾಲಗೋಪಾಲರಲ್ಲಿಂದ ಪೀಠಿಕೆ ಸ್ತ್ರೀವೇಷದ ತನಕ ವಿವಿಧ ಪಾತ್ರಗಳ ಅಭಿವ್ಯಕ್ತಿ. ಈಗಾಗಲೇ ರಂಗದಿಂದ ಮರೆಯಾದ ಷಣ್ಮುಖ ಸುಬ್ರಾಯ ಕುಣಿತ ಮತ್ತು ಅರ್ಧನಾರೀಶ್ವರ ಪಾತ್ರಗಳ ಪ್ರಸ್ತುತಿಗಳು ಬಹುತೇಕರಲ್ಲಿ ಕುತೂಹಲ ಮೂಡಿಸಿದುವು.
                     ಸಂಜೆ 'ಅಭಿಮನ್ಯು ಕಾಳಗ', ಮತ್ತು 'ದುಶ್ಶಾಸನ ವಧೆ' ಪ್ರಸಂಗಗಳ ಪ್ರದರ್ಶನ. ಅಭಿಮನ್ಯು ಕಾಳಗವು ಸಿರಿಬಾಗಿಲು ರಾಮಕೃಷ್ಣ ಮಯ್ಯರ ಭಾಗವತಿಕೆಯಲ್ಲಿ ವಿಜೃಂಬಿಸಿದರೆ, ದುಶ್ಶಾಸನ ಕಾಳಗ ಪ್ರಸಂಗವು ಹಿರಿಯ ಕಲಾವಿದ ಕುರಿಯ ಗಣಪತಿ ಶಾಸ್ತ್ರಿಗಳ ಭಾಗವತಿಕೆಯಲ್ಲಿ ಯಶ ಕಂಡಿತು. ಚಂದ್ರಶೇಖರ ಧರ್ಮಸ್ಥಳ ಅವರ ಸಮರ್ಥ ಅಭಿಮನ್ಯು. ನೃತ್ಯ, ಅಭಿನಯ, ಮಾತಿನ ಸಮಪಾಕ. ಆರೋಹಣ ಕ್ರಮದ ಬೀಸು ನಡೆ. ಕೊನೆಯವರೆಗೆ 'ಅಭಿಮನ್ಯು' ಎನ್ನುವುದನ್ನು ಮರೆಯದ ಅಭಿವ್ಯಕ್ತಿ. ಬೀಸುಹೆಜ್ಜೆಯ ಪಾತ್ರಗಳಲ್ಲಿ ಭಾವಾಭಿನಯಕ್ಕೆ ಅವಕಾಶ ಕಡಿಮೆ. ತ್ರಾಸವೂ ಕೂಡಾ. ಚಂದ್ರಶೇಖರ್ ಇದನ್ನು ಸಮನ್ವಯಗೊಳಿಸಿದ್ದಾರೆ. ಖುಷಿ ನೀಡಿದ ಪಾತ್ರ. ಬಹುಕಾಲ ನೆನಪಿನಲ್ಲಿ ಉಳಿವ ಅಭಿವ್ಯಕ್ತಿ.
                      ಕುರಿಯ ಗಣಪತಿ ಶಾಸ್ತ್ರಿಗಳ ಹಾಡುಗಾರಿಕೆಯಲ್ಲಿ 'ದುಶ್ಶಾಸನ ವಧೆ' ಪ್ರಸಂಗ. ಈ ಪ್ರಸಂಗದಲ್ಲಿರುವ ಪಾರಂಪರಿಕ ಮತ್ತು ಖಚಿತ ನಡೆಗಳಿಂದಾಗಿ ಮೇಳದ ಕಲಾವಿದರು ಕೂಡಾ ಆಡಲು ಹಿಂದೇಟು ಹಾಕುವುದುಂಟು. ಆದರೆ ಕುರಿಯ, ಪದ್ಯಾಣ ಜತೆಗಾರಿಕೆಗೆ ಗೇರುಕಟ್ಟೆ ಗಂಗಯ್ಯ ಶೆಟ್ಟಿಯವರ 'ರುದ್ರಭೀಮ' ಉತ್ತಮ ಸಾಥ್. ನಿಧಾನಗತಿಯಲ್ಲಿ ಸಾಗುವ ಪ್ರಸಂಗದ ಆರಂಭ, ಅದಕ್ಕೆ ಸರಿಯಾದ ಚೆಂಡೆಯ ನುಡಿ, ಭಾಗವತಿಕೆಯ ವೇಗ, ಪ್ರಸಂಗ ಸಾಹಿತ್ಯ...ಗಳು ಕಲಾವಿದರಿಗೆ ಸವಾಲು. ಈ ಸವಾಲಿಗೆ ಎಲ್ಲಾ ಕಲಾವಿದರು ಉತ್ತರ ನೀಡಿ ಉತ್ತಮ ಪ್ರದರ್ಶನ ನೀಡಿರುವುದು ಸುವರ್ಣ ಹಬ್ಬದ ಹೈಲೈಟ್.
                    ಮರುದಿವಸ ಬಲಿಪ ನಾರಾಯಣ ಭಾಗವತರು, ಪುತ್ತಿಗೆ ರಘುರಾಮ ಹೊಳ್ಳ ಮತ್ತು ದಿನೇಶ ಅಮ್ಮಣ್ಣಾಯರಿಂದ ಗಾನವೈವಿಧ್ಯ. ಪಾರಂಪರಿಕ ಪದ್ಯಗಳ ಪ್ರಸ್ತುತಿ. ಹಿಮ್ಮೇಳದಲ್ಲಿ ಪದ್ಮನಾಭ ಉಪಾಧ್ಯಾಯ ಮತ್ತು ದೇಲಂತಮಜಲು ಸುಬ್ರಹ್ಮಣ್ಯ ಭಟ್. ವಾಸುದೇವ ರಂಗಾಭಟ್ಟರ ನಿರೂಪಣೆ. ಮೂರೂ ಭಾಗವತರಲ್ಲಿ ರಾಗಗಳು ವಿಸ್ತಾರವಾಗುವ ಬಗೆ, ಸಾಹಿತ್ಯದ ಸ್ಪಷ್ಟತೆ, ಮಟ್ಟುಗಳು, ಸಂಗೀತ ರಾಗಗಳ ಬಳಕೆ.. ಹೀಗೆ ವಿವಿಧ ಸ್ತರಗಳಲ್ಲಿ ಸಂಪನ್ನ. 'ಭೀಷ್ಮ ಪ್ರತಿಜ್ಞೆ' ತಾಳಮದ್ದಳೆ ಮತ್ತು 'ಶಿವಪಂಚಾಕ್ಷರಿ ಮಹಿಮೆ' ಬಯಲಾಟಗಳು - ಹೀಗೆ ಚಿನ್ನದ ಹಬ್ಬದಲ್ಲಿ ಸಮೃದ್ಧ ಹೂರಣ.
                      ಉದ್ಘಾಟನಾ ಸಮಾರಂಭದಲ್ಲಿ ವಿಮರ್ಶಕ ಡಾ.ಎಂ.ಪ್ರಭಾಕರ ಜೋಶಿಯವರು ಪ್ರಸ್ತುತ ಕಾಲಘಟ್ಟದ ಯಕ್ಷರಂಗವನ್ನು ವಿಮರ್ಶೆ ಮಾಡಿದರು - ಯಕ್ಷಗಾನದ ಪ್ರಸ್ತುತಿಗಳು ಹೃಸ್ವವಾಗುತ್ತಿವೆ. ಲಘುಪ್ರಿಯರ ಸಂಖ್ಯೆ ಹೆಚ್ಚಾಗುತ್ತಿದೆ. ಆಟ, ಕೂಟಗಳಲ್ಲೂ ಇಂತಹ ಲಘುತ್ವ ಕಾಣಬಹುದಾಗಿದೆ. ಕಾಲಮಿತಿ ಪ್ರದರ್ಶನವು ಕಾಲದ ಕರೆ. ಯಕ್ಷಗಾನ ಕ್ಷೇತ್ರದಲ್ಲಿ ಅಧ್ಯಯನ, ಸಂಶೋಧನೆ, ವಿಮರ್ಶೆ, ಪರಿಷ್ಕರಣೆ ಆಗಬೇಕಾಗಿದೆ.
                      ಡಾ.ಶೇಣಿಯವರು ಓಡಾಡಿದ ಕಾಸರಗೋಡು ನೆಲದಲ್ಲಿ ಅವರಿಗೆ ಉತ್ತಮವಾದ ಸ್ಮಾರಕ ಇನ್ನೂ ನಿರ್ಮಾಣಗೊಂಡಿಲ್ಲ. ಶೇಣಿಯವರು ಬದುಕಿರುವಾಗಲೇ ಅವರಿಗೆ ಪದ್ಮಶ್ರೀ ಪ್ರಶಸ್ತಿ ಬರಬೇಕಿತ್ತು. ಬಂದಿಲ್ಲ. ಆ ಯತ್ನಗಳು ಆಗಿಲ್ಲ, ಎಂದ ಜೋಶಿಯವರು ಮಾತು ಮರೆತು ಬಿಡುವಂತಹುದಲ್ಲ.

No comments:

Post a Comment