Wednesday, December 7, 2016

ಮೌನದ ಹೊಳಪಿನಲ್ಲಿ ಇಣುಕುವ ಪಕ್ವತೆ



  
                    "ಸಖಿ ಪಾತ್ರವೆಂದರೆ ಎಳೆಯ ಕಲಾವಿದರಿಗೆ ಉದಾಸೀನ. ಸಖಿ ಪಾತ್ರಧಾರಿ ಪ್ರತಿಭಾವಂತನಾದರೆ ಮಾತ್ರ ಪ್ರಧಾನ ಸ್ತ್ರೀ ಪಾತ್ರವು ವಿಜೃಂಭಿಸುತ್ತದೆ. ಸಖಿ ಮತ್ತು ರಾಣಿ ಪಾತ್ರಗಳ ಔಚಿತ್ಯಗಳನ್ನು ಬಲ್ಲವನೇ ನಿಜವಾದ ಕಲಾವಿದ. ಹಿಂದೆ ಸುರತ್ಕಲ್ ಮೇಳದಲ್ಲಿ ಕಡಬ ಸಾಂತಪ್ಪನವರು, ಕರ್ನಾಟಕ ಮೇಳದಲ್ಲಿ ಅಚ್ಯುತ ಮಣಿಯಾಣಿಯವರೆಲ್ಲಾ ಸಖಿ ಪಾತ್ರಗಳ ನಿರ್ವಹಣೆಯಲ್ಲಿ ಎತ್ತಿದ ಕೈ. ಇವರಂತೆ ಶ್ರೀಕಂಠ ಭಟ್ಟರೂ ಸಖಿ ಪಾತ್ರಗಳನ್ನು ಮಾಡುತ್ತಾ ಮುಂದೆ ಪ್ರಧಾನ ಸ್ತ್ರೀಪಾತ್ರಗಳ ನಿರ್ವಹಣೆಯಲ್ಲಿ ಯಶಕಂಡರು," ಡಾ.ಕೋಳ್ಯೂರು ರಾಮಚಂದ್ರ ರಾಯರು ಶ್ರೀಕಂಠ ಭಟ್ ದಾಮ್ಲೆಯವರ ರಂಗಬದುಕನ್ನು ವಿಮರ್ಶಿಸಿದ ಪರಿಯಿದು.
                ಬೆಳ್ತಂಗಡಿ ತಾಲೂಕಿನ ಶಿಶಿಲ, ಶಿಬಾಜೆ, ಭಂಡಿಹೊಳೆ, ಅರಸಿನಮಕ್ಕಿ.. ಮೊದಲಾದ ಊರುಗಳು ಪಶ್ಚಿಮ ಘಟ್ಟದ ತಪ್ಪಲಲ್ಲಿದೆ. ಇಲ್ಲಿ ಯಕ್ಷಗಾನಕ್ಕಾಗಿ ಅಹೋರಾತ್ರಿ ದುಡಿದು ಬದುಕನ್ನೇ ಕಲಾಸಂಬಂಧಿ ಯೋಜನೆ, ಯೋಜನೆಗಳಿಗೆ ಮಿಳಿತಗೊಳಿಸಿದ ಶಿಶಿಲದ ಶ್ರೀಕಂಠ ಭಟ್ ದಾಮ್ಲೆಯವರಿಗೆ ಈಗ ಎಪ್ಪತ್ತಮೂರು ವರುಷ. ಅವರ ತನು ವಯೋಸಹಜವಾದ ವಿಶ್ರಾಂತಿ ಬೇಡುತ್ತಿದೆ. ಮನಸ್ಸು ಓಡಾಟ ಬಯಸುತ್ತಿದೆ. ಕಲಾವಿದರು ಮಾತಿಗೆ ಸಿಕ್ಕಾಗ ಒಂದು ಪಾತ್ರವೇ ಆಗಿ ಬಿಡುತ್ತಾರೆ! ಮೊಗೆದಷ್ಟು ಆರದ ಅನುಭವದ ಗಾಥೆಗಳು. ನವೆಂಬರ ಕೊನೆಗೆ ಶ್ರೀಕಂಠ ಭಟ್ಟರಲ್ಲಿಗೆ ಹೋಗಿದ್ದಾಗ ಊರುಗೋಲು ಹಿಡಿಯುವಷ್ಟು ಶರೀರ ಮುಷ್ಕರ ಹೂಡಿತ್ತು. ಈ ಆಶಕ್ತತೆಗೆ ಅವರು ಕುಗ್ಗಿಲ್ಲ. ಪಾದರಸ ಚುರುಕಿನ ಅವರ ಸಕ್ರಿಯತೆಯನ್ನು  ಊರುಗೋಲು ನಿರ್ಬಂಧಿಸಿತ್ತು! ವಯಸ್ಸಾದಾಗ ಇದೆಲ್ಲಾ ಮಾಮೂಲಿ. ದೂರದ ಕಾರ್ಯಕ್ರಮಕ್ಕೆ ಹೋಗಲು ಸ್ನೇಹಿತರ ಅವಲಂಬನೆ ಬೇಕಷ್ಟೇ. ತೊಂದರೆಯಿಲ್ಲ, ಎಂದು ಅವರೇ ಸಮರ್ಥನೆ ಕೊಟ್ಟು ಮನತುಂಬಿ ಮಾತನಾಡಿದರು.
               ವರ್ತಮಾನದ ರಂಗದತ್ತ ನೋಡಿದರು. ಕೆಲವೊಂದು ಸ್ತ್ರೀಪಾತ್ರಗಳತ್ತ ಅವರಲ್ಲಿ ಅಸಹನೆಯಿತ್ತು. 'ಅಗತ್ಯಕ್ಕಿಂತ ಹೆಚ್ಚು ಯಾಕೆ ಕುಣಿತಾರೆ ಮಾರಾಯ್ರೆ' ಎಂದಾಗ ಸಾತ್ವಿಕ ಆಕ್ರೋಶದ ಎಳೆಯೊಂದು ಮಿಂಚಿತು. 'ಪಾತ್ರಕ್ಕೂ ಭಾವ ಇಲ್ವಾ, ಅದಕ್ಕೊಂದು ಮನಸ್ಸು ಇಲ್ವಾ. "ಯಕ್ಷಗಾನ ಎಂದ ಮಾತ್ರಕ್ಕೆ, ಗಂಟೆಗಟ್ಟಲೆ ಕುಣಿಯಬೇಕಾ? ಸರಿ, ಕುಣಿಯುವುದು ಕಲಾವಿದನ ತಾಕತ್ತು ಎಂದಿಟ್ಟುಕೊಳ್ಳೋಣ. ಕುಣಿದಾದ ಬಳಿಕ ಸರಿಯಾಗಿ ಮಾತನಾಡಲು ಆಗುತ್ತದಾ? ಶರೀರ ಹೆಚ್ಚು ದಂಡಿಸಲ್ಪಟ್ಟಾಗ ಭಾವಗಳ ತೇವ ಆರಿ ಹೋಗುತ್ತದೆ.  ಭಾವಗಳನ್ನು ತೋರಿಸದ ಪಾತ್ರವು ಪಾತ್ರವಾಗದು. ಅದು ವೇಷವಾದೀತಷ್ಟೇ..." ಹೀಗೆ ವಿಮರ್ಶಿಸುತ್ತಾ ಹೋದರು. 
                  ನಾಲ್ಕು ದಶಕಕ್ಕೂ ಮಿಕ್ಕಿ ತೆಂಕಿನ ರಂಗದಲ್ಲಿ ಕುಣಿದ ಶ್ರೀಕಂಠ ಭಟ್ಟರಿಗೆ ಪುರಾಣ ಲೋಕದ ಪಾತ್ರಗಳ ಆಳರಿವು ಇದೆ. ಪಾತ್ರ ಸ್ವಭಾವದ ಅನುಭವವಿದೆ. ಯಕ್ಷಗಾನದ ಉದ್ಧಾಮ ಕಲಾವಿದರ ಒಡನಾಟ ಮತ್ತು ಸಾಹಚರ್ಯಗಳಿಂದ ರಂಗದ ಆಳಂಗಗಳನ್ನು ಅನುಭವಿಸಿದವರು. ಹಾಗಾಗಿ ವರ್ತಮಾನದ ರಂಗವನ್ನು ವಿಮರ್ಶಿಸುವ ಯೋಗ್ಯತೆ ಶ್ರೀಕಂಠ ಭಟ್ಟರಿಗಿದೆ. ಪ್ರೇಕ್ಷಕರು ಬಯಸುತ್ತಾರೆ ಎಂದು ಕಲಾವಿದ ಆ ಲೆವೆಲ್ಲಿಗೆ ಯಾಕೆ ಬಾಗಬೇಕು? ಪುರಾಣ ಲೋಕವನ್ನು ಮತ್ತು ಸಾಂಸ್ಕೃತಿಕ ಮನಸ್ಸುಗಳನ್ನು ತಾನು ರಂಗದಲ್ಲಿ ಪ್ರತಿನಿಧಿಸುತ್ತಿದ್ದೇನೆ ಎನ್ನುವ ಎಚ್ಚರ ಬೇಕು," ಎನ್ನುವ ಅವರ ದೂರಗಾಮಿ ಚಿಂತನೆಯು ನನ್ನೊಳಗಿನ ಅರೆಬೆಂದ ಕಾಳಿಗೆ ಚುಚ್ಚಿತು!
                 ಶ್ರೀಕಂಠರದು ಯಕ್ಷಗಾನಕ್ಕೆ ಸಮರ್ಪಿತ ಬದುಕು. ಓದಿದ್ದು ಮೆಟ್ರಿಕ್. ಊರಿನಲ್ಲಿ ಟೆಂಟು ಊರುತ್ತಿದ್ದ ಮೇಳಗಳ ಆಟಗಳಿಗೆ ನೋಟಕನಾಗಿ ಭಾಗಿ. ಮರುದಿವಸ ಮನೆಯಂಗಳವೇ ಬಯಲಾಟದ ವೇದಿಕೆಯಾಗಿ ರೂಪುಗೊಳ್ಳುತ್ತಿತ್ತು. "ಕುರಿಯ ವಿಠಲ ಶಾಸ್ತ್ರಿಗಳ ಈಶ್ವರ ಮತ್ತು ಕೋಳ್ಯೂರು ರಾಮಚಂದ್ರ ರಾಯರ ದಾಕ್ಷಾಯಿಣಿ ಪಾತ್ರಗಳಿಗೆ ನಾನು ಮಾರು ಹೋದವನು," ಎನ್ನುತ್ತಾರೆ. ಮಕ್ಕಳ ಯಕ್ಷಗಾನ ಹುಚ್ಚು ಊರಿನ ಹಿರಿಯರ ಗಮನ ಸೆಳೆಯಿತು. ಪದ್ಮನಾಭ ಹೆಬ್ಬಾರರಿಂದ ನಾಟ್ಯ ತರಬೇತಿ. ಜತೆಗೆ ಅಭಿನಯ, ಸಂಭಾಷಣೆ ಕಲಿಕೆ. ಬಾಡಿಗೆಯ ವೇಷಭೂಷಣದಲ್ಲಿ ಪ್ರದರ್ಶನ.
                ಫತ್ತಿಮಾರು ರಾಮಕೃಷ್ಣ ಭಟ್ಟರ ನೇತೃತ್ವದಲ್ಲಿ ತಾಳಮದ್ದಳೆ ತಂಡದ ರೂಪೀಕರಣ. ಎಲ್ಲೆಡೆ ಅಭಿಮಾನದ ಸ್ವೀಕೃತಿ. ಊರಿನ ಯಕ್ಷಗಾನ ಗುಂಗಿನ ಬಹುತೇಕರು ಮಧ್ಯಮ ವರ್ಗದವರು. ಹೇಳುವಂತಹ ಆರ್ಥಿಕ ಸ್ಥಿತಿವಂತರಲ್ಲ. ಹೀಗಿದ್ದೂ ಮೇಳ ಮಾಡುವ ಯೋಚನೆಗೆ ಶ್ರೀಕಾರ. ಒಬ್ಬೊಬ್ಬರು ಒಂದೊಂದು ವೇಷಗಳ ಡ್ರೆಸ್ ಪ್ರಾಯೋಜಿಸುವಂತೆ ರೂಪುರೇಷೆ. ಶ್ರೀಕಂಠರ ಅಣ್ಣ ವಿನಾಯಕ ದಾಮ್ಲೆ, ವಿಘ್ನೇಶ್ವರ ದಾಮ್ಲೆ ತಮ್ಮನ ಅಸರೆಗೆ ನಿಂತರು. ಎಲ್ಲರ ಸಹಕಾರದಿಂದ ಸ್ವಂತದ್ದಾದ ರಂಗಸ್ಥಳ, ವೇಷಭೂಷಣ ಸಿದ್ಧವಾಯಿತು. ಪ್ರದರ್ಶನಕ್ಕೆ ಅಣಿಯಾಯಿತು.
                   ಈ ಮಧ್ಯೆ ಶ್ರೀಕಂಠ ಭಟ್ಟರನ್ನು ಸುರತ್ಕಲ್ ಮಹಮ್ಮಾಯಿ ಮೇಳವು ಸೆಳೆಯಿತು. ಆರು ವರುಷ ತಿರುಗಾಟ ಮಾಡಿದರು. ಮೇಳದಲ್ಲಿ ಹಿರಿಯ ಕಲಾವಿದರ ಒಡನಾಟ, ರಂಗ ಮಾಹಿತಿಗಳು ಶ್ರೀಕಂಠರ ಬದುಕಿಗೆ ಹೊಸ ತಿರುವನ್ನು ನೀಡಿತು. ನಂತರ  ಕೋಳ್ಯೂರರ ಮೂಲಕ ಕರ್ನಾಟಕ ಮೇಳದಿಂದ ವೃತ್ತಿ. ಬಳಿಕ ಕೂಡ್ಲು, ಸುಬ್ರಹ್ಮಣ್ಯ, ವೇಣೂರು, ಮಂತ್ರಾಲಯ ಶ್ರೀ ರಾಘವೇಂದ್ರ ಕೃಪಾಪೋಶಿತ ಮೇಳ.. ಹೀಗೆ ಹದಿನೈದು ವರುಷಗಳ ನಿರಂತರ ವ್ಯವಸಾಯ. ವಿವಿಧ ಮೇಳಗಳಲ್ಲಿ 'ಶ್ರೀದೇವಿ, ಮಾಲಿನಿ, ಸುಭದ್ರೆ, ಚಿತ್ರಾಂಗದೆ, ದಮಯಂತಿ, ಮೋಹಿನಿ, ಗುಣಸುಂದರಿ, ಮೇನಕೆ, ಸೀತೆ, ಕೈಕೆಯಿ, ರೇಣುಕೆ..' ಪಾತ್ರಗಳು ಶ್ರೀಕಂಠ ಭಟ್ಟರಿಗೆ ಒಲಿದುವು.
               ಮುಂದೆ ಮುಂಬಯಿ ಕರೆಯಿತು. ಹೋಟೆಲ್ ವೃತ್ತಿಯೊಂದಿಗೆ ಯಕ್ಷಗಾನವೂ ವೃತ್ತಿಪರವಾಗಿ ಹೊಸೆಯಿತು. ಒಂದು ಹಂತದಲ್ಲಿ ಮುಂಬಯಿ ತೊರೆದು ಮರಳಿ ಮನೆಗೆ ಬಂದರು. ತನ್ನೂರಿನ ಮೊಂಟೆತಡ್ಕ ಶ್ರೀ ದುರ್ಗಾಪರಮೇಶ್ವರೀ ಕೃಪಾಪೋಶಿತ ಯಕ್ಷಗಾನ ಸಂಘದ ನೇತೃತ್ವದ 'ಭಂಡಿಹೊಳೆ ಮೇಳ'ದ ಸಾರಥ್ಯ ವಹಿಸಿದರು. ಸ್ನೇಹಿತ ಕಲಾವಿದರ ನೆಚ್ಚಿನ 'ಶಿಶಿಲಣ್ಣ'ನಾದರು.
                "ವ್ಯವಸಾಯ ಕಲಾವಿದನಾಗಿ ತಿರುಗಾಟಗಳಲ್ಲಿ ಇದ್ದಾಗ ದೊಡ್ಡ ಸಾಮಗರು, ಶೇಣಿಯವರು, ಅಗರಿ ಭಾಗವತರಿಂದ ತೊಡಗಿ, ಅತಿ ಕಿರಿಯ ಸಹ ಕಲಾವಿದರವರೆಗೆ ಎಲ್ಲರಿಗೂ ಬೇಕಾದವರು. ಸಹ ಕಲಾವಿದ, ಮೇಳದ ಯುಜಮಾನ, ಕೆಲಸಗಾರ, ಅತಿಥೇಯ, ಪ್ರೋತ್ಸಾಹಕ, ಯಾರಿಗೂ ಸಮಸ್ಯೆ ಆಗದೆ, ಬಂದ ಸಮಸ್ಯೆಗಳನ್ನು ಸಮಸ್ಯೆ ಎಂದೇ ಗ್ರಹಿಸದೆ ಸಹಜವಾಗಿ ನಿರ್ವಹಿಸಿದವರು. ಕಲಾ ವ್ಯವಸಾಯದಲ್ಲೇ ಹೀಗೆ ಅವಿರೋಧವಾದ ಸ್ವೀಕೃತಿ, ಸರ್ವತ್ರ ಅಂಗೀಕಾರ ಪಡೆಯುವುದು ದೊಡ್ಡ ಸಾಧನೆ. ವ್ಯವಸಾಯ ರಂಗವಿರಲಿ, ಹವ್ಯಾಸಿ ಸಂಘವಿರಲಿ; ತಾಳಮದ್ದಳೆ, ಮೇಳದ ಬಿಡಾರ, ಚೌಕಿ, ಬಂಧುಮಿತ್ರ, ಕೂಟದಲ್ಲಿ ಹೀಗೆ ಎಲ್ಲೆಲ್ಲೂ ಶ್ರೀಕಂಠ ಭಟ್ರು.," ವಿಮರ್ಶಕ ಡಾ.ಎಂ.ಪ್ರಭಾಕರ ಜೋಶಿಯವವರ ಮಾತು ಶ್ರೀಕಂಠರ ಸಮಗ್ರ ವ್ಯಕ್ತಿತ್ವ ತೋರಿಸುತ್ತದೆ. "ಶ್ರೀಕಂಠ ಭಟ್ಟರ ಕಲಾ ಸಮಪರ್ಿತ ಬದುಕಿಗೆ 'ಯಕ್ಷಶ್ರೀ' ಎನ್ನುವ ಅಭಿನಂದನಾ ಕೃತಿಯನ್ನು ಎಪ್ಪತ್ತರ ಕಾಣ್ಕೆಯಾಗಿ ಊರವರು ಸಮರ್ಪಿಸಿದ್ದಾರೆ.
             ಅನುಭವದ ಪಕ್ವತೆಯಲ್ಲಿ ಮೌನದ ಹೊಳಪಿನಲ್ಲಿರುವ ಶ್ರೀಕಂಠರು ಮಾತನಾಡಲು ತುಂಬಾ ಇದೆ ಮಾರಾಯ್ರೆ. ಒಂದು ದಿನ ಪುರುಸೊತ್ತು ಮಾಡಿ ಬನ್ನಿ, ಎಂದು ಬಾಯ್ತುಂಬಾ ನಕ್ಕು ಬೀಳ್ಕೊಟ್ಟರು.
(prajavani/dadhiginatho/2-12-2016)
    
 

No comments:

Post a Comment