ಯಕ್ಷಗಾನ ಆಟ, ಕೂಟಕ್ಕೆ ಪ್ರಸಂಗವು ಸಿಲೆಬಸ್. ಅರ್ಥಗಾರಿಕೆಯಲ್ಲಿ ಮಾತಿನ ಓಘಗಳು ಎಲ್ಲೇ ಹರಿದಾಡಲಿ, ಪಠ್ಯದ ಚೌಕಟ್ಟಿನೊಳಗೇ ಮುಗಿಯಬೇಕು, ಮುಗಿಯತಕ್ಕದ್ದು. ಇದೊಂದು ಅಲಿಖಿತ ಶಾಸನ, ಶಿಸ್ತು. ಎಲ್ಲಾ ಕಲಾವಿದರೂ ಶಿಸ್ತಿನೊಳಗೆ ಬಂಧಿ. ಹಾಗಾಗಿ ಸೋಲಬೇಕಾದ ಪಾತ್ರ ಸೋಲಬೇಕು, ಗೆಲ್ಲಬೇಕಾದ ಪಾತ್ರ ಗೆಲ್ಲಲೇಬೇಕು. ವೈಯಕ್ತಿಕ ಪ್ರತಿಷ್ಠೆಗಳನ್ನು ರಂಗ ಸ್ವೀಕರಿಸುವುದಿಲ್ಲ.
ಪ್ರದರ್ಶನಕ್ಕೂ ಪ್ರಸಂಗವೇ ಪಠ್ಯ. ಇಲ್ಲಿನ ಸನ್ನಿವೇಶಗಳಿಗೆ ಪಾರಂಪರಿಕ ನಡೆಯಿದೆ. ಆ ಹಾದಿಯಲ್ಲೇ ಪಾತ್ರಗಳು ಸಾಗಬೇಕು, ಮಾತನಾಡಬೇಕು. ಹಾದಿ ಕವಲೊಡೆದರೆ ರಂಗ, ಪಾತ್ರ ಎಡವುತ್ತದೆ. ಇಂತಹ ಹಾದಿಗಳ ಬಹುತೇಕ ಸಂದರ್ಭಗಳು ಸ್ಥಾಪಿತ. ಭಾಗವತರಿಗೆ ಈ ಜ್ಞಾನವು ಕಲಿಕಾ ಹಂತದಲ್ಲೇ ವಶವಾಗಿರುತ್ತವೆ, ವಶವಾಗಬೇಕು. ಇಂತಹ ಹಾದಿಗಳ - ಅಂದರೆ ಬೇಟೆ, ಯುದ್ಧಕ್ರಮ.. ಇತ್ಯಾದಿ - ಸ್ಪಷ್ಟ ಅರಿವು ವೇಷಧಾರಿಗೂ ಬೇಕು.
ನಿಶಿಪೂರ್ತಿ ಪ್ರದರ್ಶನಗಳಲ್ಲಿ ಪಾತ್ರಗಳ ಪೂರ್ಣ ಚಲನಾ ಸೌಂದರ್ಯಗಳು ಅನಾವರಣಗೊಳ್ಳುತ್ತವೆ. ಕಾಲಮಿತಿಗೆ ಪ್ರದರ್ಶನಗಳು ಜಾರಿದಾಗ ಚಲನೆಗಳೂ ಜಾರಿದುವು. ಬೇಟೆ, ಜಲಕೇಳಿ, ರಾಕ್ಷಸಪಾತ್ರಗಳ ನಿತ್ಯಾಹ್ನಿಕಗಳೆಲ್ಲಾ ಹೃಸ್ವವಾದುವು. ನಿಜಸೌಂದರ್ಯಗಳು ಮಸುಕಾಯಿತು. ಭಾಗವತರ ಪದ್ಯಕ್ಕೆ ಕುಣಿತ, ಅದಕ್ಕೆ ತಕ್ಕ ಅರ್ಥಗಾರಿಕೆ ಎನ್ನುವಷ್ಟರ ಮಟ್ಟಿಗೆ ವರ್ತಮಾನದ ರಂಗ ಸೌಂದರ್ಯವಿದೆ! ಈ ಹಿನ್ನೆಲೆಯಲ್ಲಿ ಶ್ರೀ ಧರ್ಮಸ್ಥಳ ಮೇಳದ ಭಾಗವತ ಸಿರಿಬಾಗಿಲು ರಾಮಕೃಷ್ಣ ಮಯ್ಯರು ಓರ್ವ ಕಲಾವಿದನಾಗಿ ರಂಗವನ್ನು ನೋಡಿದ್ದಾರೆ, ನೋಡುತ್ತಿದ್ದಾರೆ. ರಂಗದಿಂದ ಜಾರಿದ, ಜಾರುವ ಪದ್ಧತಿಗಳನ್ನು ಹಳಿಗೆ ಜೋಡಿಸುವ ಯೋಜನೆ ರೂಪಿಸಿದ್ದಾರೆ.
ರಾಮಕೃಷ್ಣ ಮಯ್ಯರ ನೂತನ ಪರಿಕಲ್ಪನೆ 'ರಂಗ-ಪ್ರಸಂಗ'. ಕಾಸರಗೋಡು ಜಿಲ್ಲೆಯ ನೀರ್ಚಾಲು ಮತ್ತು ದ.ಕ.ಜಿಲ್ಲೆಯ ಪಾವಂಜೆಯಲ್ಲಿ ಎರಡು ಪ್ರಯೋಗಗಳು ನಡೆದುವು. ಏನಿದು ರಂಗ-ಪ್ರಸಂಗ? ರಂಗದಿಂದ ಮರೆಯಾದ ರಂಗಕ್ರಮಗಳ ಮರು ರಂಗಪೋಣಿಕೆ. ಹವ್ಯಾಸಿ, ವೃತ್ತಿ ಕಲಾವಿದರು ಶಿಬಿರಾರ್ಥಿಗಳು. ಪರಿಕಲ್ಪನೆಯನ್ನು ಅರ್ಥಮಾಡಿಕೊಂಡ ಅನುಭವಿ ಕಲಾವಿದರಿಂದ ಪ್ರದರ್ಶನ. ನೀರ್ಚಾಲಿನಲ್ಲಿ ಐವತ್ತಕ್ಕೂ ಮಿಕ್ಕಿ ಹವ್ಯಾಸಿ ಶಿಬಿರಾರ್ಥಿಗಳು ಉಪಸ್ಥಿತರಿದ್ದರು. ಆದರೆ ಇಂತಹ ಹೊಸ ಯೋಚನೆಗೆ ಶಿಬಿರಾರ್ಥಿಗಳಾಗಿ ವೃತ್ತಿ ಕಲಾವಿದರು ಭಾಗವಹಿಸುವುದು ಯಾಕೋ ನನಗಂತೂ ಸಂಶಯವಿದೆ!
ಕಳೆದ ಮೂರ್ನಾಲ್ಕು ವರುಷಗಳಿಂದ ಹಲವು ಪ್ರದರ್ಶನಗಳಲ್ಲಿ ಭಾಗವತಿಕೆ ಮಾಡಿದ್ದೇನೆ. ಅನ್ಯಾನ್ಯ ಕಾರಣಗಳಿಂದಾಗಿ ರಂಗಕ್ರಮಗಳಿಗೆ ಉದ್ದೇಶಪೂರ್ವಕವಾಗಿಯೇ ಸಂಘಟಕರು, ಕಲಾವಿದರು ಕತ್ತರಿ ಹಾಕುವುದನ್ನು ನೋಡಿ ಸಂಕಟಪಟ್ಟಿದ್ದೇನೆ. ಯಕ್ಷಗಾನಕ್ಕೆ ಸಂಬಂಧಪಟ್ಟಂತೆ ಸಿದ್ಧ, ಪ್ರಮಾಣ ನಾಟ್ಯಗಳನ್ನು ನಾವೇನೂ ಹೊಸದಾಗಿ ಸೃಷ್ಟಿ ಮಾಡಿದ್ದಲ್ಲ. ಮಾಡಿದರೆ ಅದು ಯಕ್ಷಗಾನವಾಗಲಾರದು. ಇಂತಹ ನಾಟ್ಯಗಳು, ರಂಗನಡೆಗಳನ್ನು ಮರೆತ ಪ್ರದರ್ಶನದಲ್ಲಿ ನನಗ್ಯಾಕೋ ಯಕ್ಷಗಾನ ಕಾಣುವುದಿಲ್ಲ. ಹಾಗಾಗಿ ಯಥಾಸಾಧ್ಯ ರಂಗಪ್ರಸಂಗವನ್ನು ಆಯೋಜಿಸಿದೆ. ಈ ದಿಸೆಯಲ್ಲಿ ಯೋಚಿಸುವ ಹಲವಾರು ಮಂದಿ ಕಲಾವಿದರು ಜತೆಯಾಗಿದ್ದಾರೆ, ಎನ್ನುತ್ತಾರೆ ರಾಮಕೃಷ್ಣ ಮಯ್ಯರು.
ನೀರ್ಚಾಲು ಶಿಬಿರದಲ್ಲಿ ಪಾಂಡವರ ಒಡ್ಡೋಲಗ, ಕಿರಾತಾರ್ಜುನ ಆಖ್ಯಾನದ ಯುದ್ಧ ಕ್ರಮಗಳು, ಕೃಷ್ಣನ ಒಡ್ಡೋಲಗ, ಗೋಪಿಕೆಯರ ವಿಹಾರ, ಅಭಿಮನ್ಯು ಮತ್ತು ಬಬ್ರುವಾಹನ ಪಾತ್ರಗಳ ಭಿನ್ನತೆ, ಹೆಣ್ಣು ಬಣ್ಣದ ಪ್ರವೇಶ ಮತ್ತು ಶೃಂಗಾರ, ಕಾರ್ತವೀರ್ಯಾರ್ಜುನ ಪ್ರಸಂಗದ ನಡೆಗಳು, ಪ್ರಮೀಳೆಯ ಕ್ರಮ... ಹೀಗೆ ರಂಗದಿಂದ ಕಡೆಗಣಿಸಲ್ಪಟ್ಟ ವಿಚಾರಗಳ ಮರುಪೋಣಿಕೆ. ಪ್ರತೀ ಸಲವೂ ನೋಡುವಾಗ ಒಂದಲ್ಲ ಒಂದು ವ್ಯತ್ಯಾಸಗಳು ಕಾಣುವುದು ಸಹಜ. ಆದರೆ ಈಗ ಯಕ್ಷಗಾನದ ಸೀನಿಯರ್ ಆಗಿ ನಮ್ಮ ಮುಂದೆ ಸಂಪನ್ಮೂಲ ವ್ಯಕ್ತಿಯಾಗಿರುವ ಬಲಿಪ ನಾರಾಯಣ ಭಾಗವತರು ಒಪ್ಪಿದಂತೆ ರಂಗಕ್ರಮವನ್ನು ಅಳವಡಿಸಿಕೊಳ್ಳುತ್ತಿದ್ದೇವೆ, ಮಯ್ಯರ ಅಭಿಮತ.
ಪಾವಂಜೆಯಲ್ಲಿ ಜರುಗಿದ ಎರಡನೇ ರಂಗಪ್ರಸಂಗದಲ್ಲಿ ತಾಮ್ರಧ್ವಜ ಕಾಳಗ, ಕೃಷ್ಣನ ಒಡ್ಡೋಲಗ-ಪಾರಿಜಾತ, ರಾಮನ ಒಡ್ಡೋಲಗ, ಶೂರ್ಪನಖಿ-ಮಾಯಾ ಶೂರ್ಪನಖಿ, ಬಣ್ಣದ ತೆರೆ, ಸಂಕುಲ ಯುದ್ಧದ ಕ್ರಮಗಳನ್ನು ಅಳವಡಿಸಿಕೊಳ್ಳಲಾಗಿತ್ತು. ತಾಮ್ರಧ್ವಜ ಕಾಳಗದ ರಂಗನಡೆಗಳು ತೀರಾ ಸೂಕ್ಷ್ಮ, ಜಟಿಲ. ಸಂಕುಲ ಯುದ್ಧಗಳು ಹೆಚ್ಚು ಜಾಣ್ಮೆಯನ್ನು ಬೇಡುವಂತಾದ್ದು. ಕೃಷ್ಣನ ಒಡ್ಡೋಲಗದ ಕ್ರಮಗಳಲ್ಲೂ ಎಚ್ಚರ ಬೇಕು. ಇವೆಲ್ಲಾ ರಂಗದಲ್ಲಿ ಪ್ರಯೋಗವಾಗುತ್ತಾ ಇದ್ದ ಕಾಲಘಟ್ಟದಲ್ಲಿ ಇವಕ್ಕೆ ಪ್ರತ್ಯೇಕವಾದ ಶಿಬಿರಗಳು ಬೇಕಾಗಿರಲಿಲ್ಲ. ಹೊಸ ತಲೆಮಾರಿನ ಕಲಾವಿದರಿಗೆ ಇವೆಲ್ಲವುಗಳ ಪರಿಚಯ ಇದ್ದೀತೆಂದು ಹೇಳಲು ಧೈರ್ಯಸಾಲದು.
ಕಟೀಲು, ಉಡುಪಿ, ಪುತ್ತೂರು, ಸುಳ್ಯ, ಸುಬ್ರಹ್ಮಣ್ಯ, ಪೆರ್ಲ.. ಮೊದಲಾದೆಡೆ ಶಿಬಿರದ ಆಯೋಜನೆಯ ಯೋಜನೆ ನಡೆಯುತ್ತಿದೆ. ರಂಗ-ಪ್ರಸಂಗದ ದಾಖಲೀಕರಣವಾಗುತ್ತಿದೆ. ಕಲಿಕಾ ದಾಹಿಗಳಿಗೆ ಇದೊಂದು ಕೈತಾಂಗು ಇದ್ದಂತೆ. ಕಲಿಸುವ ಗುರುವಿನಲ್ಲಿ ಸಮಗ್ರ ಬೌದ್ಧಿಕತೆ ಇದ್ದರೆ ತೊಂದರೆಯಿಲ್ಲ. ಹಾಗೋ ಹೀಗೋ ಎನ್ನುವ ಗೊಂದಲವಿದ್ದರೆ ರಂಗದಲ್ಲಿ ಕಲಾವಿದ ಸೋಲುತ್ತಾನೆ. ಆತ ಸೋತರೆ ಗುರುವಿಗೆ ತೊಂದರೆಯಿಲ್ಲ ಬಿಡಿ! ಆದರೆ ಕಲಾವಿದನ ಬೆಳವಣಿಗೆಗೆ ತೊಡಕಾಗುತ್ತದೆ. ಇಂತಹ ಸಂದರ್ಭಗಳಲ್ಲಿ ದಾಖಲಾತಿಗಳು ಸಹಾಯಕ್ಕೆ ಬರುತ್ತವೆ. ಖರ್ಚು-ವೆಚ್ಚಗಳನ್ನು ಸರಿದೂಗಿಸಲು ಕನಿಷ್ಠ ಶುಲ್ಕದೊಂದಿಗೆ ಈ ದಾಖಲೀಕರಣ ಆಸಕ್ತರ ಕೈಸೇರಬೇಕೆನುವುದೂ ಮಯ್ಯರ ಆಶಯ.
ನಿಮ್ಮ ಪರಿಕಲ್ಪನೆಯನ್ನು ಪ್ರೇಕ್ಷಕರು ಹೇಗೆ ಸ್ವೀಕರಿಸಿದರು? ಎನ್ನುವ ನನ್ನ ಕೀಟಲೆ ಪ್ರಶ್ನೆಗೆ ಮಯ್ಯರು ನವಿರಾಗಿ ಪ್ರತಿಕ್ರಿಯೆ ನೀಡಿದರು - ರಂಗ-ಪ್ರಸಂಗಕ್ಕೆ ಚಪ್ಪಾಳೆ, ಶಿಳ್ಳೆಗಳ ಭಯ, ಬಾಧೆಯಿಲ್ಲ! ಯಕ್ಷಗಾನವನ್ನು ಪ್ರೀತಿಸುವ ಪ್ರೇಕ್ಷಕರಿಗೆ ಇಷ್ಟವಾಗಿದೆ. ಹಿರಿಯರಾದ ಬಲಿಪ ನಾರಾಯಣ ಭಾಗವತರು, ಡಾ.ಎಂ.ಪ್ರಭಾಕರ ಜೋಶಿ, ಸೂರಿಕುಮೇರು ಗೋವಿಂದ ಭಟ್.. ಮೊದಲಾದ ಗಣ್ಯರು ಬೆನ್ನು ತಟ್ಟಿದ್ದಾರೆ. ಒಂದಷ್ಟು ಸ್ನೇಹಿತ ಗಡಣವಿದೆ. ಇದರಿಂದ ಸ್ಪೂರ್ತಿಗೊಂಡಿದ್ದೇನೆ. ಒಂದೊಂದು ಕಾರ್ಯಕ್ರಮಕ್ಕೆ ಏನಿಲ್ಲವೆಂದರೂ ಒಂದೂವರೆಲಕ್ಷ ರೂಪಾಯಿಯ ವೆಚ್ಚವಿದೆ. ಈಗ ಹೇಗೋ ಸರಿದೂಗಿಸುತ್ತಿದ್ದೇನೆ. ಯಕ್ಷಗಾನವನ್ನು ಪ್ರೀತಿಸುವ ಕಲಾಭಿಮಾನಿಗಳಿಂದ ನೆರವನ್ನು ನಿರೀಕ್ಷಿಸುತ್ತೇನೆ.
ಓರ್ವ ವೃತ್ತಿ ಕಲಾವಿದನಾದ ರಾಮಕೃಷ್ಣ ಮಯ್ಯರು ಯಕ್ಷಗಾನಕ್ಕೆ ಏಕಾಂಗಿಯಾಗಿ ಕಾಯಕಲ್ಪ ಕೊಡುವ ಯೋಚನೆ ಮಾಡಿದ್ದು ಸಾಹಸ. 'ರಂಗ ಹಾಳಾಯಿತು, ಪ್ರಯೋಜನವಿಲ್ಲ, ಹೀಗಾದ್ರೆ ಮುಂದೆ ಹೇಗೆ' ಎಂದು ಗೊಣಗುವ ನಾವೆಲ್ಲ ಮಯ್ಯರೊಂದಿಗೆ ಕೈಜೋಡಿಸೋಣ. ಯಾಕೆಂದರೆ ಅವರು ಗೊಣಗಾಟ ಮಾಡುವ ಬದಲು ಕಾರ್ಯಕ್ಕಿಳಿದಿದ್ದಾರೆ. ಅವರ ಯೋಜನೆಯ ಯಶವಿರುವುದು ಅವರು ವೆಚ್ಚ ಮಾಡುವ ಹಣದಲ್ಲಲ್ಲ. ಕಲೆಯನ್ನು ಪ್ರೀತಿಸುವ ನಾವು ಅವರೊಂದಿಗೆ ಹೇಗೆ ಸ್ಪಂದಿಸುತ್ತೇವೆ ಎನ್ನುವ ಹಿನ್ನೆಲೆಯಲ್ಲಿ ಯಶದ ಮಾನವಿದೆ.
ತನ್ನ ತಂದೆಯವರ ನೆನಪಿನ 'ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ, ಕಾಸರಗೋಡು' ಈ ವೇದಿಕೆಯಡಿ ಅವರ ಯೋಜಿತ ಕಾರ್ಯಕ್ರಮಗಳು ಸಂಪನ್ನವಾಗುತ್ತಿವೆ.
ಚಿತ್ರಗಳು : ಉದಯ ಕಂಬಾರು, ನೀರ್ಚಾಲು
prajavani/ದಧಿಗಿಣತೋ/18-11-206
No comments:
Post a Comment