Sunday, July 30, 2017

ಗೆಜ್ಜೆಯ ಸದ್ದೀಗ ವಿಶ್ವಕ್ಕೆ ಕೇಳಿಸುತ್ತಿದೆ...!


 ಕೊಂಗೋಟ್ ರಾಧಾಕೃಷ್ಣ- ಉಮಾವತಿ ದಂಪತಿ


ಪ್ರಜಾವಾಣಿಯ ಅಂಕಣ - 'ದಧಿಗಿಣತೋ / 20-1-2017

                 ಕಾರ್ಯಕ್ರಮ ಆಗುತ್ತಿರುವುದು ನನಗಲ್ಲ. ಅಲ್ಲಿ ಏನಾಗುತ್ತದೋ ಅದನ್ನು ಕ್ಲಿಕ್ಕಿಸುವುದಷ್ಟೇ ನನ್ನ ಕೆಲಸ, ಮಂಗಳೂರಿನ ಹಿರಿಯ ಛಾಯಾಚಿತ್ರ ಗ್ರಾಹಕ ಯಜ್ಞರ ಮಾತಿದು. ಕಲಾ ಕಾರ್ಯಕ್ರಮಗಳಲ್ಲಿ ಯಜ್ಞರ ಸುಳಿವಿರುವುದಿಲ್ಲ, ಎಲ್ಲಿರುತ್ತಾರೋ ಗೊತ್ತಿಲ್ಲ, ಕುಳಿತಲ್ಲಿಂದಲೇ ವೇದಿಕೆಯ ಚಿತ್ರಗಳನ್ನು ಕಲಾತ್ಮಕವಾಗಿ ಕ್ಲಿಕ್ಕಿಸುವುದು ಅವರ ಸಿದ್ಧಿ, ಅನುಭವ. ನೀಲೇಶ್ವರದ ಕೋಂಗೊಟ್ ರಾಧಾಕೃಷ್ಣ ಭಟ್ ಅವರ ಫೋಟೋ, ವೀಡಿಯೋ ದಾಖಲಾತಿ ಕಾಯಕವನ್ನು ಕಂಡಾಗಲೆಲ್ಲಾ ಯಜ್ಞರ ಮಾತು ನೆನಪಾಗುತ್ತದೆ.
                ತಂತ್ರಜ್ಞಾನದ ಬೀಸುಹೆಜ್ಜೆಯ ದಿನಮಾನದಲ್ಲಿದ್ದೇವೆ. ಯಕ್ಷಗಾನದಲ್ಲಿ ದಾಖಲಾತಿ ಎನ್ನುವ ಪದಪುಂಜ ಹಿಂದಿನಿಂದಲೂ ಕೇಳಿಸುತ್ತಿವೆಯಾದರೂ ಅದರ ವೇಗದ ತೀವ್ರತೆ ಈಚೆಗಿನದು. ಎಲ್ಲರ ಮತಿಯಲ್ಲಿ ನಿತ್ಯ ಕಾಡುತ್ತಿರುವ ಶೇಣಿ, ಸಾಮಗರ ಮಾತಿನ ದಾಖಲಾತಿಗಳು ಅಲ್ಲೋ ಇಲ್ಲೋ ಸಿಗುತ್ತವೆ. ವೀಡಿಯೋ ತೀರಾ ಕಡಿಮೆ. ಅವರ ಸಕ್ರಿಯತೆಯ ಕಾಲಘಟ್ಟದಲ್ಲಿ ದಾಖಲಾತಿ ಪರಿಕರಗಳು ಈಗಿನಷ್ಟು ಮುಂದುವರಿದಿರಲಿಲ್ಲ. ಈಗ ಹಾಗಲ್ಲ. ದಾಖಲಾತಿಯ ನಾಗಾಲೋಟ. ಕೆಲವೊಮ್ಮೆ 'ಇಷ್ಟು ಬೇಕಾ' ಎಂದು ವೈರಾಗ್ಯ ಬರುವಷ್ಟು ಚಿತ್ರಗಳೋ, ವೀಡಿಯೋಗಳು ಜಾಲತಾಣಗಳಲ್ಲಿ ಹರಿದಾಡುತ್ತಿರುತ್ತವೆ.
                ಕಾಸರಗೋಡು, ಕರಾವಳಿಯಲ್ಲಿ ನಡೆಯುವ ಬಹುತೇಕ ಯಕ್ಷಗಾನ ಪ್ರದರ್ಶನಗಳಲ್ಲಿ ಮೊದಲ ಸಾಲಿನ ಪ್ರೇಕ್ಷಕರ ಪಂಕ್ತಿಯಲ್ಲಿ ಕೋಂಗೋಟ್ ರಾಧಾಕೃಷ್ಣ ಭಟ್ಟರಿಗೆ ಆದ್ಯತೆ. ಪ್ರದರ್ಶನದ ಪರಿಣಾಮಕಾರಿ ದೃಶ್ಯಗಳ ವೀಡಿಯೊ, ಚಿತ್ರಗಳನ್ನು ತೆಗೆಯುತ್ತಾರೆ. ಚಿತ್ರಗಳನ್ನು ಫೇಸ್ಬುಕ್ನಲ್ಲಿ ಅಪ್ಲೋಡ್ ಮಾಡಿದರೆ, ವೀಡಿಯೋ ತುಣುಕುಗಳನ್ನು ಯೂಟ್ಯೂಬ್ ತಾಣಕ್ಕೆ ಏರಿಸುತ್ತಾರೆ. ಏನಿಲ್ಲವೆಂದರೂ ಸುಮಾರು  ಐದು ಸಾವಿರಕ್ಕೂ ಮಿಕ್ಕಿ ವೀಡಿಯೋ ತುಣುಕುಗಳಿವೆ. ಎರಡು ನಿಮಿಷದಿಂದ ಮೂವತ್ತು ನಿಮಿಷದ ತನಕದ ತುಣುಕುಗಳು. ಕಂಪ್ಯೂವಿಗೆ ಜಾಲತಾಣದಿಂದ ಇಳಿಸಿ ವೀಕ್ಷಿಸಬಹುದಾದ ವ್ಯವಸ್ಥೆ.
              ಆರು ವರುಷದಿಂದ ಕೊಂಗೋಟ್ ರಾಧಾಕೃಷ್ಣರು ಸದ್ದಿಲ್ಲದೆ ಯಕ್ಷಗಾನ ದಾಖಲಾತಿಯಲ್ಲಿ ತೊಡಗಿದ್ದಾರೆ. ಏನಿಲ್ಲವೆಂದರೂ ಐನೂರಕ್ಕೂ ಮಿಕ್ಕಿ ಪ್ರದರ್ಶನಗಳನ್ನು ವೀಕ್ಷಿಸಿರಬಹುದು. ಅದೂ ಚೌಕಿ ಪೂಜೆಯಿಂದ ಮಂಗಲದ ತನಕ! ಇವರ ದಾಖಲಾತಿ ಕಾಯಕಕ್ಕೆ ಕಲಾವಿದರು, ಸಂಘಟಕರು ಪೂರ್ಣ ಪ್ರಮಾಣದಲ್ಲಿ ಸಹಕರಿಸಿದ್ದಾರೆ. ಆಯೋಜಕರು ಮುಂದಾಗಿ ಆಮಂತ್ರಿಸುತ್ತಾರೆ. ಇದು ನನ್ನ ಪ್ರಚಾರಕ್ಕೆ ಬೇಕಾಗಿಲ್ಲ.  ಪ್ರದರ್ಶನವು ದಾಖಲಾಗಬೇಕು ಎನ್ನುವ ಆಶಯವು ಆಯೋಜಕರಿಗೂ ಇರುತ್ತದಲ್ಲಾ. ನನ್ನ ವೈಯಕ್ತಿಕ ಆಸಕ್ತಿಗೋಸ್ಕರ ಹುಟ್ಟಿಕೊಂಡ ಹವ್ಯಾಸವು ಈಗ ಬಿಡಲಾರದ ನಂಟಾಗಿ ಅಂಟಿಕೊಂಡಿದೆ, ಎನ್ನುತ್ತಾರೆ ಭಟ್.
                ಆರಂಭದ ದಿವಸಗಳಲ್ಲಿ ಯೂಟ್ಯೂಬ್ ತಾಣದಲ್ಲಿ ಅಪ್ಲೋಡ್ ಮಾಡಿದ ಸುಮಾರು ಎರಡು ಸಾವಿರಕ್ಕೂ ಮಿಕ್ಕಿ ವೀಡಿಯೋ ಅಳಿಸಿಹೋಗಿತ್ತು. ಈ ರಂಗಕ್ಕೆ ನಾನು ಹೊಸಬ. ತಾಂತ್ರಿಕ ವಿಚಾರಗಳು ಗೊತ್ತಿರಲಿಲ್ಲ. ಕಾಪಿರೈಟ್ನಂತಹ ಸೂಕ್ಷ್ಮ ವಿಚಾರಗಳ ಜ್ಞಾನವಿರಲಿಲ್ಲ. ಹಾಗಾಗಿ ಎಡವಟ್ಟು ಆಗಿ ಹೋಯಿತು. ಜಾಲತಾಣ ಲೋಕದಲ್ಲಿ ಅದರದ್ದೇ ಆದ ಕಾಣದ ಹುನ್ನಾರಗಳಿವೆ. ಒಳ್ಳೆಯದನ್ನು ಸಹಿಸದ ಸಾಕಷ್ಟು ಮನಸ್ಸುಗಳಿವೆ. ಅನುಭವ ಆಗುತ್ತಾ ಆಗುತ್ತಾ ಈ ಕ್ಷೇತ್ರದ ಸಿಹಿ-ಕಹಿಗಳ ಅನುಭವಗಳಾಗಿವೆ, ಎಂದು ವಿವರಿಸುತ್ತಾರೆ ಕೊಂಗೋಟ್.  ಅಳಿಸಿ ಹೋದ ತಾಣ ಮತ್ತು ಈಗಿರುವ ಎರಡು ತಾಣಗಳಲ್ಲಿ (UVRK Bhat Chithramoola,  KRK Bhat Chithramoola)ಒಂದು ಕೋಟಿಗೂ ಮಿಕ್ಕಿ ವಿಕ್ಷಕರು ದಾಖಲಾಗಿದ್ದಾರೆ!
            ಫಕ್ಕನೆ ಇವರ ಕಾಯಕ ನೋಡುವಾಗ ಲಾಭವಿರಬೇಕು ಎಂದು ಕೆಲವರು ಆಡಿಕೊಳ್ಳುವುದನ್ನು ಕೇಳಿದ್ದೇನೆ. ಲಾಭವಿಲ್ಲದೆ ಇಷ್ಟು ಹಠದಿಂದ ಯಾಕೆ ದುಡಿಯುತ್ತಾರೆ ಎಂದು ಹಗುರ ಮಾತನಾಡಿದವರನ್ನು ಹತ್ತಿರದಿಂದ ಗಮನಿಸಿದ್ದೇನೆ. ನನಗಿದು ಹವ್ಯಾಸ. ಈಗಾಗಲೇ ಐದು ಲಕ್ಷ ರೂಪಾಯಿಗೂ ಮಿಕ್ಕಿ ವ್ಯಯವಾಗಿದೆ. ಅಬ್ಬಬ್ಬಾ ಅಂದರೆ ಎರಡು ಲಕ್ಷ ಮರುಭತರ್ಿ ಆಗಿರಬಹುದಷ್ಟೇ, ಎನ್ನುತ್ತಾರೆ. ಯಾವುದೇ ಕೆಲಸ ಮಾಡುವಾಗ ಹಗುರವಾಗಿ ಮಾತನಾಡುವವರು ಸಿಕ್ಕೇ ಸಿಗುತ್ತಾರೆ. ಅದು ಅವರ ಜಾಯಮಾನ. ಅವರಾಗಿ ಏನೂ ಮಾಡರು, ಮಾಡುವವರನ್ನು ಪ್ರೋತ್ಸಾಹಿಸರು.
              ಕೊಂಗೋಟ್ ಭಟ್ಟರ ಹಿರಿಯರು ಕಾಸರಗೋಡು ಜಿಲ್ಲೆಯ ಬಾಯಾರಿನವರು. ಬದುಕಿನ ಒಂದು ಹಂತದಲ್ಲಿ ಇವರು ನೀಲೇಶ್ವರದಲ್ಲಿ ನೆಲೆಯಾದರು. ಹಿರಿಯರ ಯಕ್ಷಗಾನಾಸಕ್ತಿ ಇವರಲ್ಲೂ ಚಿಗುರಿತು. "ನನ್ನ ಹಿರಿಯರಲ್ಲಿ ಯಕ್ಷಗಾನವು ಹಣ ಮಾಡುವ ದಂಧೆಯಾಗಿರಲಿಲ್ಲ. ಅದನ್ನವರು ಸೇವಾ ಭಾವದಿಂದ ನೋಡುತ್ತಿದ್ದರು. ಹಿರಿಯರ ಹಾದಿಯಲ್ಲಿ ಮುನ್ನಡೆಯುತ್ತಿದ್ದೇನೆ. ಕಿಂಚಿತ್ತಾದರೂ ಈ ಮೂಲಕ ಸೇವೆ ಸಲ್ಲಿಸೋಣ ಎಂದು ಕ್ಯಾಮೆರಾ ಹಿಡಿದು ಆಟಗಳಿಗೆ ಓಡುತ್ತಿದ್ದೇನೆ," ಎನ್ನುತ್ತಾರೆ.
                   ಮುಖ್ಯ ಕೃಷಿ ವೃತ್ತಿ. ಕಾಞಂಗಾಡಿನಲ್ಲಿ ಸುಮಾರು ಮೂರು ದಶಕ ಬಾಳೆಕಾಯಿ ವ್ಯಾಪಾರ ಮಾಡುತ್ತಿದ್ದರು. ಕ್ಯಾಮರಾ ಕೈಗಂಟಿಕೊಂಡ ಮೇಲೆ ಈ ಕಾಯಕಕ್ಕೆ ವಿದಾಯ! ಇದ್ದುದರಲ್ಲೇ ಸಂತೃಪ್ತಿ ಪಡುವ ಜಾಯಮಾನ. ಹಾಗಾಗಿ ಕೃಷಿ, ಹವ್ಯಾಸ ಎರಡನ್ನೂ ಸರಿದೂಗಿಸುತ್ತಿದ್ದಾರೆ. ಇವರ ಪತ್ನಿ ಉಮಾವತಿ. ನಿಜಾರ್ಥದಲ್ಲಿ ಗಂಡನ ನೆರಳು. "ಪ್ರದರ್ಶನಗಳಿಗೆ ಭಟ್ಟರು ಒಂಟಿಯಾಗಿ ಹೋದುದೇ ಕಡಿಮೆ. ಇವರಿಬ್ಬರು ಯಕ್ಷಲೋಕವನ್ನು ಸೆರೆಹಿಡಿದು ದಾಖಲಿಸುತ್ತಾರೆ. ನಮಗಿಬ್ಬರಿಗೂ ಯಕ್ಷಗಾನದಲ್ಲಿ ಆಸಕ್ತಿಯಿದೆ. ಈ ದಾಖಲಾತಿ ಮೂಲಕ ಎಷ್ಟೆಷ್ಟೊ ಕಲಾವಿದರನ್ನು ಪರಿಚಯಿಸಿದ ಆನಂದವಿದೆ. ಅವರ ಅಭಿವ್ಯಕ್ತಿಯು ಇಂದು ಯೂಟ್ಯೂಬಿನಲ್ಲಿ ವಿಶ್ವದೆಲ್ಲೆಡೆ ನೋಡಲು ಸಾಧ್ಯವಾಗುತ್ತಿದೆ, ಎನ್ನುತ್ತಾರೆ" ಉಮಾವತಿ.
ಶ್ರೀ ಕಟೀಲು ಮೇಳದ ಆಟಗಳನ್ನು ಇಬ್ಬರೂ ಮಿಸ್ ಮಾಡಿಕೊಳ್ಳುವುದಿಲ್ಲ. ಆಪ್ತರು ಮುಂದಾಗಿ ಆಹ್ವಾನಿಸುತ್ತಾರೆ.                           
              ದಿನಪತ್ರಿಕೆಯನ್ನು ನೋಡಿ ಕೆಲವೊಂದು ಪ್ರದರ್ಶನಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಫಕ್ಕನೆ ನೋಡುವಾಗ ವೀಡಿಯೋ ಮಾಡಿ ಅಪ್ಲೋಡ್ ಮಾಡಿದರಾಯಿತು ಅಂದುಕೊಳ್ಳಬಹುದು. ಅದರ ಹಿಂದಿರುವ ಕಷ್ಟವನ್ನು ಅವರೇ ಹೇಳಬೇಕು, ಯೂಟ್ಯೂಬಿಗೆ ಒಂದು ಗಂಟೆಯ ವೀಡಿಯೋವನ್ನು ಅಪ್ಲೋಡ್ ಮಾಡಲು ಹದಿನೈದು ಗಂಟೆ ಬೇಕು. ಜತೆಗೆ ನಮ್ಮ ಶ್ರಮ, ಪ್ರಯಾಣ ಎಲ್ಲವೂ ಸೇರಿದಾಗ ಸ್ವಲ್ಪ ಮಟ್ಟಿಗೆ ದುಬಾರಿಯಾಗುತ್ತದೆ. ಕೆಲವೊಮ್ಮೆ ನಾಲ್ಕೈದು ದಿವಸ ರಾತ್ರಿಯಿಡೀ ಪ್ರದರ್ಶನ ವೀಕ್ಷಿಸಿದ್ದೂ ಇದೆ. ಯಕ್ಷಗಾನ ಮಾತ್ರವಲ್ಲ, ಸಂಗೀತ, ಕಥಕ್ಕಳಿ, ಓಟಂ ತುಳ್ಳಲ್, ತೆಯ್ಯಂ, ಪ್ರಾಣಿಗಳು, ಕೃಷಿ.. ಮೊದಲಾದ ವೀಡಿಯೋ ತುಣುಕುಗಳನ್ನು ಯೂಟ್ಯೂಬಿನಿಂದ ಇಳಿಸಿಕೊಳ್ಳಬಹುದು.
                ಪ್ರದರ್ಶನಗಳ ಚಿತ್ರೀಕರಣ ಮಾಡಿದ ವೀಡಿಯೋ ತುಣುಕುಗಳು ನಿಮ್ಮಲ್ಲಿ ಸಾಕಷ್ಟಿವೆ. ಅದನ್ನು ಆಸಕ್ತರಿಗೆ ಯಾಕೆ ನೀಡಬಾರದು? ಕೊಂಗೋಟ್ ಹೇಳುತ್ತಾರೆ, ಯೂಟ್ಯೂಬಿಗೆ ಏರಿಸಿದ ವೀಡಿಯೋಗಳ ಪ್ರತಿಗಳನ್ನು ನೀಡುವುದು ಕಾನೂನಿನಲ್ಲಿ ಅವಕಾಶವಿಲ್ಲ. ಯಾರಿಗೆ ಬೇಕೋ ಅವರು ಯೂಟ್ಯೂಬಿನಿಂದಲೇ ಡೌನ್ಲೋಡ್ ಮಾಡಿಕೊಳ್ಳಬೇಕು. ಅದು ತಾಂತ್ರಿಕ ಶಿಸ್ತು. ಅದನ್ನು ಎಲ್ಲರೂ ಪಾಲಿಸಬೇಕು.
                    ಕೊಂಗೋಟ್ ಅವರ ಚಿತ್ರ, ವೀಡಿಯೋಗಳು ಗುಣಮಟ್ಟದಲ್ಲಿ ಎತ್ತರದ ಸ್ಥಾನದಲ್ಲಿದೆ. ಇಂತಹ ದಾಖಲಾತಿಗಳು ಕಾಲದ ಅನಿವಾರ್ಯತೆಯಾದರೂ; ಸ್ವಂತದ್ದಾದ ವೃತ್ತಿಯನ್ನು ಬದಿಗಿಟ್ಟು, ಕಾಯಕಷ್ಟವನ್ನು ಸಹಿಸಿ ಯಕ್ಷಗಾನದ ಮೇಲಿನ ಪ್ರೀತಿಯಿಂದ ಮಾಡುವ ಈ ಕೈಂಕರ್ಯದ ಒಂದು ಪಾಲನ್ನಾದರೂ ಭರಿಸುವುದಕ್ಕೆ ಯಕ್ಷಗಾನ ಕ್ಷೇತ್ರಕ್ಕೆ ಕಷ್ಟವಾಗಲಾರದು ಅಲ್ವಾ. ಹಾಗಾದಾಗ ಮಾತ್ರ ಸದ್ದಿಲ್ಲದ ದಾಖಲಾತಿ ಕಾಯಕಕ್ಕೆ ಮಾನ-ಸಂಮಾನವನ್ನು ಒದಗಿಸಿದಂತಾದೀತು.

No comments:

Post a Comment