Friday, July 28, 2017

ಮಟ್ಟುಗಳ ಗಟ್ಟಿ ಅಡಿಗಟ್ಟು

 

ಪ್ರಜಾವಾಣಿ ಅಂಕಣ - ದದಿಗಿಣತೋ / 30-12-2016

                 ದಶಂಬರ 25. ಪುತ್ತೂರಿನ ಶ್ರೀ ನಟರಾಜ ವೇದಿಕೆ. ಬೊಳ್ವಾರಿನ ಶ್ರೀ ಆಂಜನೇಯ ಯಕ್ಷಗಾನ ಕಲಾ  ಸಂಘದ ನಲವತ್ತೆಂಟರ ಪಯಣದ ಸಂಭ್ರಮಾಚರಣೆ. ಅಂದು ಯಕ್ಷಗಾನ ಮಟ್ಟುಗಳ ಕುರಿತು ವಿಶೇಷವಾದ ಕಲಾಪ ವರ್ತಮಾನಕ್ಕೆ ಅಗತ್ಯವೆಂದು ಕಂಡುಬಂತು. ಪ್ರಸಂಗ ಪದ್ಯಗಳನ್ನು ಹಿಗ್ಗಾಮುಗ್ಗಾ ಹಿಂಜುವ, ಅದರ ಸಾಹಿತ್ಯವನ್ನು ತೋಚಿದಂತೆ ಗೀಚುವ, ಗೀಚಿದ್ದನ್ನು ಗೀಚಿದಲ್ಲವೆಂದು ಸಮರ್ಥಿಸುವ ಕಾಲಘಟ್ಟದಲ್ಲಿ ಮಟ್ಟುಗಳ ಕುರಿತಾದ ಚಿಂತನೆಯು ರಂಗಬೇಡುವ ಅನಿವಾರ್ಯ ಪ್ರಕ್ರಿಯೆ. ಎಷ್ಟು ಮಂದಿ ಕಲಾವಿದರು ಭಾಗವಹಿಸಿದ್ದಾರೆ ಎನ್ನುವುದಕ್ಕಿಂತ ಆ ಪ್ರಜ್ಞೆಯುಳ್ಳ ಒಂದಷ್ಟು ಪ್ರೇಕ್ಷಕರು ಉಪಸ್ಥಿತರಿದ್ದುದು ಕಲಾಪದ ಧನಾಂಶ.
              ಯಕ್ಷಗಾನದಲ್ಲಿ 'ಹಾಡುಗಾರಿಕೆ, ಪದ್ಯ ಹೇಳುವುದು' ಎನ್ನುವ ಪದ ಪ್ರಯೋಗಕ್ಕಿಂತ 'ಭಾಗವತಿಕೆ' ಎಂದರೆ ತುಂಬಾ ಆಪ್ತವಾಗುತ್ತದೆ. ಈ ಪದಗಳೆಲ್ಲಾ ಸ್ಫುರಿಸುವ ಅರ್ಥಗಳು ಒಂದೇ. ಶತಮಾನಗಳಿಂದ ಹಿರಿಯರು ಹಾಡಿಕೊಂಡು ಬಂದ ಪರಂಪರೆ ಏನಿದೆಯೋ ಅದನ್ನು ಫಕ್ಕನೆ ಹಳೆಯದೆಂದು ತಿರಸ್ಕರಿಸಿದರೆ ಅವಸರದ ತೀರ್ಮಾನವಾದೀತು. ಹೀಗೆ ಹರಿದು ಬಂದ ಪರಂಪರೆಯ ವಾಹಿನಿಯಲ್ಲಿ ಗಟ್ಟಿ ಅಡಿಗಟ್ಟಿನ 'ಮಟ್ಟು'ಗಳೇ ಯಕ್ಷಗಾನದ ಜೀವಾಳ. ಈ ಮಟ್ಟಿನಲ್ಲಿ ಲಯವಿದೆ, ರಾಗವಿದೆ, ಎಲ್ಲಕ್ಕಿಂತಲೂ ಮುಖ್ಯವಾಗಿ 'ಯಕ್ಷಗಾನ'ವಿದೆ. ಇಂತಹ ಮಟ್ಟುಗಳ ಕೆಲವು ಮಾದರಿಗಳ ಪ್ರಾತ್ಯಕ್ಷಿಕೆ ಕುತೂಹಲಕರವಾಗಿತ್ತು.
               ಭಾಗವತರಾಗಿ ಬಲಿಪ ನಾರಾಯಣ ಭಾಗವತರು, ಪುರುಷೋತ್ತಮ ಪೂಂಜ, ಶಿವಶಂಕರ ಬಲಿಪರು ಆಯ್ದ ಪ್ರಸಂಗಗಳ ಸೊಗಸುಗಾರಿಕೆಯನ್ನು ತೋರಿದರು. ಪೆರುವಾಯಿ ನಾರಾಯಣ ಭಟ್, ಕೃಷ್ಣಪ್ರಕಾಶ್ ಉಳಿತ್ತಾಯರ ಚೆಂಡೆ-ಮದ್ದಳೆಯ 'ನುಡಿತ'ಗಳಿಂದ ಹಾಡಿನ ಸೊಗಸು ಸ್ಪಷ್ಟವಾಗಿ ಅನಾವರಣಗೊಂಡಿತು. ಇಂತಹ ಕಲಾಪಗಳು ಹೆಚ್ಚು ಪೂರ್ವತಯಾರಿಯನ್ನು ಬೇಡುತ್ತದೆ. ಇಲ್ಲದಿದ್ದರೆ 'ಗಾನವೈಭವ' ಆಗುವ ಸಾಧ್ಯತೆ ಹೆಚ್ಚು. ಹಾಡಿನ ಒಂದು ಮಟ್ಟು ಹಾಡನ್ನು ಎಷ್ಟು ಎತ್ತರಕ್ಕೇರಿಸುತ್ತದೆ, ಛಂದಸ್ಸಿನ ಸೊಗಸನ್ನು ಹೇಗೆ ಬಿಂಬಿಸುತ್ತದೆ, ಅದರಿಂದಾಗಿ ಸಾಹಿತ್ಯ ಹರಹು ಅನಾವರಣಗೊಳ್ಳುವ ಬಗೆಯನ್ನು ಬಲಿಪರು ಮತ್ತು ಪೂಂಜರು ಸಶಕ್ತವಾಗಿ ತೋರಿದರು.
              ಪೂಂಜರು ಧ್ರುವತಾಳ ಮತ್ತು ತ್ರಿವುಡೆತಾಳದ ವಿಚಾರವನ್ನು ಹೇಳಿದರು - ಧ್ರುವ ತಾಳಕ್ಕೆ - ಶುರುವಿನಲ್ಲಿ ಚತುರಶ್ರ ಲಘು ಮತ್ತು ಒಂದು ಧ್ರುತ ಮತ್ತು ಎರಡು ಚತುರಶ್ರ ಲಘು ಹೀಗೆ ಒಟ್ಟು ಹದಿನಾಲ್ಕು ಮಾತ್ರೆಗಳು. ನಿಧಾನ ತ್ರಿವುಡೆಗೆ ಬರುವಾಗ ಧ್ರುವ ತಾಳದ ಒಂದು ಲಘು ಮತ್ತು ಧ್ರುತ ಸೇರಲ್ಪಟ್ಟು ಆರು ಮಾತ್ರಾ ಕಾಲದ ಐದು ಪೆಟ್ಟು (ರೂಪಕ ತಾಳದಂತೆ 4+2) ಆಗಿ ಉಳಿದೆರಡು ನಾಲ್ಕು ಮಾತ್ರೆಯ ಏಕತಾಳದ ರೂಪ ಹೊಂದಿ ಒಂದು ಹದಿನಾಲ್ಕು ಮಾತ್ರಾವರ್ತದ ಧ್ರುವ ತಾಳವಾಗುತ್ತದೆ. ಅಂದರೆ ಧ್ರುವ ತಾಳದ ಒಂದನೆಯ ಲಘು ಮತ್ತು ಧ್ರುತ ಸೇರಿ ಆರು ಮಾತ್ರೆ; ಮತ್ತಿನ ಎರಡು ಲಘುಗಳು ಸೇರಿ ಎಂಟು (6+4+4). ಹೀಗೆ ಧ್ರುವ ತಾಳವನ್ನು ಯಕ್ಷಗಾನದಲ್ಲಿ ನಿಧಾನ ತ್ರಿವುಡೆಯ ಜಾಗಟೆ ಪೆಟ್ಟಲ್ಲಿ ತೋರಿಸುವುದು  ನಡೆದುಬಂದ ಕ್ರಮಮಟ್ಟುಗಳ ವಿಚಾರ ಬಂದಾಗ ಮುದ್ದಣದ ರಚನೆಯ ಕುರಿತು ಸೋದಾಹರಣವಾಗಿ ಪ್ರಸಂಗಕರ್ತ ಶ್ರೀಧರ್ ಡಿ.ಎಸ್. ಅವರು ಹೇಳಿದ ವಾಕ್ಯಗಳು ನೆನಪಾಗುತ್ತವೆ,
              ಮುದ್ದಣ ಕವಿಯ ಸಾಹಿತ್ಯದಲ್ಲಿ ಶೇ.50ರಷ್ಟು ಛಂದಸ್ಸುಗಳು ಆತನದ್ದೇ ಸಂಶೋಧನೆ ಎನ್ನಬಹುದು. ಸುಮಾರು ನೂರಹತ್ತಕ್ಕೂ ಮೀರಿ ಮಟ್ಟುಗಳಿವೆ. ಮುದ್ರಿತ ಪುಸ್ತಕದಲ್ಲಿ ಏಳುನೂರ ಇಪ್ಪತ್ತು ಪದ್ಯಗಳು ಸಿಗುತ್ತವೆ. ಸಾವಿರಕ್ಕೂ ಮಿಕ್ಕಿ ಪದ್ಯಗಳಿವೆ ಎಂದು ಬಲಿಪ ನಾರಾಯಣ ಭಾಗವತರ ಅಭಿಮತ. ಒಂದೊಂದು ಪ್ರಸಂಗದಲ್ಲೂ ಇಂತಹ ಮಟ್ಟುಗಳಿವೆ. ಇದನ್ನು ಮೀರಿದ ಹಾಡುಗಾರಿಕೆಯು ಯಕ್ಷಗಾನವಾಗುವುದಿಲ್ಲ.
                ವಾರ್ಶಿಕೋತ್ಸವ ಅಂದಾಗ ಸಹಜವಾಗಿ ಲೆಕ್ಕಪತ್ರ, ವರದಿ, ಪದಾಧಿಕಾರಿಗಳ ಆಯ್ಕೆ, ಅಧ್ಯಕ್ಷರ ಅನುಮತಿ ಮೇರೆಗೆ ಇತರ ವಿಚಾರಗಳು.... ಎನ್ನುವ ಢಾಳು ಅಜೆಂಡಾಗಳು ಮಾಮೂಲಿ. ಸಂಘವೊಂದರ ನಿಬಂಧನೆಗೆ ಇವೆಲ್ಲಾ ಕಾನೂನು ಪರೀಧಿಯಲ್ಲಿ ಅವಶ್ಯ, ಬಿಡಿ. ಆಂಜನೇಯ ಸಂಘವು ವಾರ್ಶಿಕ ಕಲಾಪಕ್ಕೆ ಮಹಾಸಭೆಯನ್ನು ಥಳುಕು ಹಾಕಿಲ್ಲ. ಇದಕ್ಕೊಂದು ಸಾರ್ವಜನಿಕ ಸ್ವರೂಪ ಕೊಡಲಾಗಿದೆ. ಸಾರ್ವಜನಿಕ ಪಾಲುಗಾರಿಕೆಯು ಸಂಘದ ಚಟುವಟಿಕೆಗಳ ಬೆನ್ನಹುರಿ.
ಈ ಸಂಘಕ್ಕೆ ಹಿರಿಯರ ಕೊಡುಗೆಗಳಿವೆ. ತಾಳಮದ್ದಳೆಗಳಿಗೆ ಹೆಚ್ಚು ಒತ್ತು ನೀಡುತ್ತಿದೆ. ಹಿರಿಯರು ಕಟ್ಟಿದ ಸಂಘದ ಉದ್ದೇಶವನ್ನು ಚಾಚೂ ತಪ್ಪದೆ ಅನುಷ್ಠಾನ ಮಾಡುತ್ತಿದ್ದೇವೆ. ಇಲ್ಲಿ ಅರ್ಥ ಹೇಳಿ ಬೆಳೆದ ಅನೇಕ ಮಂದಿ ಇಂದು ವಿವಿಧ ಸ್ತರಗಳಲ್ಲಿ ಅಭಿವೃದ್ಧಿಯಾಗಿರುವುದು ಹೆಮ್ಮೆಯ ಸಂಗತಿ. ಸಂಘದೊಂದಿಗೆ ಸಂಘದ ಸಹ ಸಂಸ್ಥೆಯಾಗಿ ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘವೂ ಸಕ್ರಿಯವಾಗಿದೆ. ಮಹಿಳಾ ತಾಳಮದ್ದಳೆಗಳು ರೂಪುಗೊಂಡಿವೆ, ಎನ್ನುವ ಸಂತೋಷವನ್ನು ಹಂಚಿಕೊಳ್ಳುತ್ತಾರೆ ಸಂಘದ ಅಧ್ಯಕ್ಷ ಭಾಸ್ಕರ ಬಾರ್ಯ. ಸಂಘದ ಕಲಾಪಗಳಿಗೆ ಹೊಸ ವಿನ್ಯಾಸ, ಪರಿಷ್ಕಾರವನ್ನು ಮಾಡಿದವರು. ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘದ ಸದಸ್ಯೆಯರು 'ಪಾತ್ರ-ಪ್ರವೇಶ' ಎನ್ನುವ ಸಂವಾದ ರೂಪದ ತಾಳಮದ್ದಳೆಯನ್ನು ಪ್ರಸ್ತುಪಡಿಸಿದರು.
               'ಶ್ರೀ ಯಕ್ಷಾಂಜನೇಯ ಪ್ರಶಸ್ತಿ' : ಸಂಘವು ಪ್ರತೀವರುಷವೂ ಸಂಘದ ಹಿರಿಯ ಕಲಾವಿದರಿಗೆ ಸಂಮಾನವನ್ನು ಮಾಡುವ ಪರಿಪಾಠವನ್ನು ಮಾಡುತ್ತಿದೆ. ಸಂಘದ ನಲವತ್ತರ ಸಂಭ್ರಮದ ಬಳಿಕ 'ಶ್ರೀ ಯಕ್ಷಾಂಜನೇಯ ಪ್ರಶಸ್ತಿ'ಯನ್ನು ಸ್ಥಾಪಿಸಿದೆ. ಮೊದಲ ಪ್ರಶಸ್ತಿಯನ್ನು ಕೀರ್ತಿಶೇಷ ಮಲ್ಪೆ ರಾಮದಾಸ ಸಾಮಗರಿಗೆ ಪ್ರದಾನ ಮಾಡಲಾಗಿತ್ತು. ಈ ವರುಷ ಭಾಗವತ, ಪ್ರಸಂಗಕರ್ತ ಬೊಟ್ಟಿಕೆರೆ ಪುರುಷೋತ್ತಮ ಪೂಂಜರಿಗೆ ನೀಡಲಾಗಿತ್ತು.
               ಬೊಳ್ಳಿಂಬಳ ಪ್ರಶಸ್ತಿ : ಸಂಘದ ಹಿರಿಯ ಕಲಾವಿದ ಬಿ.ಎಸ್.ಓಕುಣ್ಣಾಯರು ತಮ್ಮ ತೀರ್ಥರೂಪರ ನೆನಪಿಗಾಗಿ 'ಬೊಳ್ಳಿಂಬಳ ಪ್ರಶಸ್ತಿ'ಯನ್ನು ಸ್ಥಾಪಿಸಿದ್ದಾರೆ. 'ಬೊಳ್ಳಿಂಬಳ ಶಂಕರನಾರಾಯಣ ಓಕುಣ್ಣಾಯ ಪ್ರತಿಷ್ಠಾನ-ಪಾಣಾಜೆ' ಇದರ ಮೂಲಕ ಪ್ರಶಸ್ತಿಯ ಆಯೋಜನೆ. ಬಿ.ಎಸ್.ಓಕುಣ್ಣಾಯರ ಸಾರಥ್ಯ. ಸಂಘದ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನೂ ಪ್ರದಾನ ಮಾಡಲಾಗುತ್ತದೆ. ಈ ಬಾರಿ ಹಿರಿಯ ಭಾಗವತ ಜಯರಾಮ ಕುದ್ರೆತ್ತಾಯರಿಗೆ ಪ್ರಾಪ್ತಿ. 
             ಸಂಘವೊಂದರ ಬ್ಯಾನರ್ ಕಟ್ಟಿಕೊಂಡರೆ ಸಾಲದು, ಅದು ವರುಷಪೂರ್ತಿ ಸಕ್ರಿಯವಾಗಿ ಇದ್ದಾಗ ಮಾತ್ರ ಸಶಕ್ತವಾಗಿ ಬೆಳೆಯುತ್ತದೆ. ಸುಸಂಸ್ಕೃತ ಪ್ರೇಕ್ಷಕರನ್ನು ಸಿದ್ಧ ಮಾಡುತ್ತದೆ. ಯಕ್ಷಗಾನದ ಬಗೆಗಿರುವ ಇಂತಹ 'ಸಿದ್ಧ ಮಾತು'ಗಳನ್ನು ಶ್ರೀ ಆಂಜನೇಯ ಸಂಘವು ಸತ್ಯ ಮಾಡಿದೆ. ನಿಯಮಿತವಾಗಿ ತಾಳಮದ್ದಳೆಗಳನ್ನು ನಡೆಸುತ್ತಿವೆ. ತನ್ನ ನಲವತ್ತರ ಸಂಭ್ರಮದಲ್ಲಿ ನಲವತ್ತಕ್ಕೂ ಮಿಕ್ಕಿ ತಾಳಮದ್ದಳೆಗಳನ್ನು ಮನೆಮನೆಗಳಲ್ಲಿ ನಡೆಸಿದೆ. ಇನ್ನೆರಡು ವರುಷದಲ್ಲಿ ಸಂಘಕ್ಕೆ ಐವತ್ತು ತುಂಬುತ್ತದೆ. ಇದರ ನೆನಪಿಗಾಗಿ ನೂರು ಮನೆ ತಾಳಮದ್ದಳೆಗಳನ್ನು ಆಯೋಜಿಸುವ ಯೋಚನೆ-ಯೋಜನೆಯ ಕಡತ ತೆರೆದಿದೆ.
(ಚಿತ್ರ : ಮುರಳಿ ರಾಯರಮನೆ)

No comments:

Post a Comment