Monday, July 2, 2018

ಚೌಕಿಯೆಂದರೆ ಬಣ್ಣದ ಮನೆ ಮಾತ್ರವಲ್ಲ!

ಚಿತ್ರ : ಮುರಳಿ ಎಂ. ಅಬ್ಬೆಮನೆ
           ಯಕ್ಷಗಾನದಲ್ಲಿ ಬಣ್ಣದ ಮನೆಯು (ಚೌಕಿ) ಪಾವಿತ್ರ್ಯ. ಕಲೆಯ ಆಲಯ. ದೇವಾಲಯ. ಚೌಕಿಯೊಳಗೆ ಚಪ್ಪಲಿ ಧರಿಸುವಂತಿಲ್ಲ. ಮದ್ಯಪಾನ, ಧೂಮಪಾನ ಮಾಡುವಂತಿಲ್ಲ. ಚೌಕಿಯಲ್ಲಿ ಆರಾಧಿಸಲ್ಪಡುವ ದೇವರಿಗೆ ಸಮರ್ಪಿತವಾಗುವ ಹರಕೆಗಳು, ಹಣ್ಣುಕಾಯಿಗಳು, ನೈವೇದ್ಯಗಳು, ಪ್ರಾರ್ಥನೆಗಳು, ವಿಶೇಷ ಪೂಜೆಗಳು, ಭಜನೆಗಳು.. ಇವನ್ನೆಲ್ಲಾ ಕಂಡಾಗ ದೇವಾಲಯದ ಪ್ರತಿರೂಪವೇ. ಈಚೆಗಂತೂ ದೇವರಿಗೆ ಹೂವಿನ ಅಲಂಕಾರವು ಭಕ್ತಜನರನ್ನು ಸೆಳೆಯುತ್ತಿದೆ.
                ದೇವರ ದರ್ಶನಕ್ಕಾಗಿ ಅಸಂಖ್ಯಾತ ಕಲಾಭಿಮಾನಿ ಭಕ್ತರು, ಕುಟುಂಬದವರು ಆಗಮಿಸುತ್ತಾರೆ. ದೇವರ ಮುಂಭಾಗದಲ್ಲಿ ಕಲಾವಿದರಿಗೆ ಮೇಕಪ್ ಮಾಡುವ ವ್ಯವಸ್ಥೆಯು ಪಾರಂಪರಿಕ. ದೇವರ ದರ್ಶನಕ್ಕೆ ಬಂದವರು ಕಲಾವಿದರತ್ತಲೂ ನೋಟ ಬೀರದೆ ಇರರು. ಪರಿಚಿತರಾದರಂತೂ ಮಾತನಾಡಿಸುತ್ತಾರೆ. ಸುಖ ದುಃಖ ವಿನಿಮಯ, ಆಟದ ಸುದ್ದಿಗಳ ರೋಚಕ ಮಾತುಕತೆಗಳು ನಡೆಯುತ್ತಿರುತ್ತದೆ. ಹೀಗೆ ಅಭಿಮಾನಿಗಳಿಗೂ, ಕಲಾವಿದರಿಗೂ ಚೌಕಿಯು ಪರಸ್ಪರ ಭಾವಗಳು ಬೆಸೆಯುವ ತಾಣ.
                ಕಲಾವಿದನಿಗೆ ಚೌಕಿಯೇ ಮನೆ. ವರುಷದ ಆರು ತಿಂಗಳು ಹೊಟ್ಟೆ ತಂಪಾಗಿಸುವ ತಂಪುಕೋಣೆ! ತನ್ನೆಲ್ಲಾ ಸುಖ, ದುಃಖ, ಗೊಣಗಾಟ, ಅರಚಾಟ, ನಗು, ಅಳು, ಬಯ್ದಾಟ, ತೋಯ್ದಾಟ.. ಹೀಗೆ ಹಲವು ಅಭಿವ್ಯಕ್ತಿಗಳು ನಡೆಯುತ್ತಲೇ ಇರುವುದನ್ನು ಚೌಕಿಯು ನೋಡುತ್ತಿರುತ್ತದೆ. ಜತೆಗೆ ಬದ್ಧತೆಯ ಚಿಪ್ಪಿನೊಳಗೆ ವೃತ್ತಿ ಧರ್ಮವನ್ನು ಪಾಲಿಸುತ್ತಾ, ಯಕ್ಷಲೋಕದ ಶ್ರೀಮಂತಿಕೆಯನ್ನು ಮೆರೆಸುವ ಕಲಾವಿದರ ಏಳ್ಗೆಯನ್ನೂ ಚೌಕಿಯು  ಗಮನಿಸುತ್ತದೆ. ಹೀಗೆ ಏಳ್ಗೆಯಾದ ಕಲಾವಿದನಿಗೆ ತಾರಾಮೌಲ್ಯವನ್ನು ಒದಗಿಸುವಲ್ಲಿಚೌಕಿಯ ಸ್ಥಾನಮಹತ್ತಾಗಿದೆ. ಇದು ಕೇವಲ ಮೇಕಪ್ ಮಾಡುವ, ವೇಷ ಮುಗಿಸಿದ ಬಳಿಕ ನಿದ್ರಿಸುವ, ಗೊತ್ತಿಲ್ಲದೆ (?) ಎರಗುವ ವಿಕಾರಗಳ ಪ್ರಕಟೀಕರಣಕ್ಕಿರುವ ತಾಣವಲ್ಲ.
                ಹವ್ಯಾಸಿ ಕ್ಷೇತ್ರದಲ್ಲಿ ಚೌಕಿಯ ವ್ಯವಸ್ಥೆಗಳು ಗುರುತರ. ವೃತ್ತಿ ಮೇಳಗಳಲ್ಲಿದ್ದಂತೆ ವ್ಯವಸ್ಥಿತವಾಗಿ ಇರದಿದ್ದರೂ ಪಾವಿತ್ರ್ಯವನ್ನು ಕಾಪಾಡುವಲ್ಲಿ ಹವ್ಯಾಸಿಗಳಿಗೂ ಜವಾಬ್ದಾರಿಗಳಿವೆ. ಮೇಳಗಳಲ್ಲಿ ಸಂಬಂಧಪಟ್ಟ ಕ್ಷೇತ್ರಗಳ ಸಾನ್ನಿಧ್ಯವು ಆರಾಧಿಸಲ್ಪಟ್ಟರೆ, ಹವ್ಯಾಸಿ ಪ್ರದರ್ಶನಗಳಲ್ಲಿ ಸಾಂಕೇತಿಕವಾಗಿಸ್ವಸ್ತಿಕ್ (ಎರಡು ಬಾಳೆಎಲೆಯ ಮೇಲೆ ಬೆಳ್ತಿಗೆ ಅಕ್ಕಿ, ತೆಂಗಿನಕಾಯಿ, ವೀಳ್ಯದೆಲೆ, ಅಡಿಕೆ, ಬಾಳೆಹಣ್ಣು, ನಾಣ್ಯ, ಹೂಗಣಪತಿ ದೇವರ ಸಾನ್ನಿಧ್ಯದ ಸಂಕೇತ) ಇಟ್ಟು ದೇವತಾ ಸ್ಥಾನವನ್ನು ಆರೋಪಿಸಲಾಗುತ್ತದೆ. ಇದೊಂದು ಅರಾಧನಾ ಕಲೆಯಾಗಿ ಬೆಳೆದು ಬಂದಿರುವುದಕ್ಕೆ ಸಾಕ್ಷಿಯಾಗಿ ಕಾಣುತ್ತದೆ.
                ಮೇಳಗಳಲ್ಲಿ ಪಾಲಿಸಲೇ ಬೇಕಾದ ಅವ್ಯಕ್ತವಾದ ಶಿಸ್ತುಗಳಿವೆ. ಕಲಾವಿದನಿಗೆ ಒಪ್ಪಿಗೆ ಇದೆಯೋ, ಇಲ್ಲವೋ ಆತ ಪಾಲಿಸಲೇಬೇಕು. ಹವ್ಯಾಸಿಗಳಿಗೆ ಬದ್ಧತೆಯಿಲ್ಲ. ಹಾಗಾಗಿಯೇ ಹವ್ಯಾಸಿ ಪ್ರದರ್ಶನಗಳ ಬಹುತೇಕ ಚೌಕಿಯು ಶಿಸ್ತಿನ ಹಳಿಯಲ್ಲಿರುವುದಿಲ್ಲ. ಇಲ್ಲಿ ಪ್ರತಿಯೊಬ್ಬನೂ ಸರ್ವತಂತ್ರ ಸ್ವತಂತ್ರ. ಹೇಗೂ ವರ್ತಿಸಬಹುದು,  ಪ್ರಶ್ನಿಸುವಂತಿಲ್ಲ. ಪ್ರಶ್ನಿಸಿದರೆ ರಾದ್ಧಾಂತ. ಅದರೆ ನಮ್ಮ ಮಧ್ಯೆ ನಿರಂತರವಾಗಿ ಪ್ರದರ್ಶನ ನೀಡುವ ಕೆಲವು ಹವ್ಯಾಸಿ ತಂಡಗಳ ಚೌಕಿಯು ಮೇಳಗಳಂತೆ ವ್ಯವಸ್ಥೆಗಳಿಂದ ಕೂಡಿರುತ್ತದೆ.
                ಧೂಮಪಾನ, ಮದ್ಯಪಾನ ಸೇವಿಸಿ ಚೌಕಿಗೆ ಪ್ರವೇಶಿಸಕೂಡದುಇದು ನಿಯಮ. ಹವ್ಯಾಸಿಗಳ ಕೆಲವೊಂದು ಪ್ರದರ್ಶನಗಳ ಚೌಕಿಯಲ್ಲಿ ಇವೆರಡು ಇಲ್ಲದೆ ಆಟ ನಡೆಯದು! ಈಗೀಗ ಕಡಿಮೆಯಾಗಿದೆ. ಸುಮಾರು ಎರಡೂವರೆ ದಶಕಗಳಲ್ಲಿ ನಾನು ಮದ್ಯವ್ಯಸನಿಗಳ ಬಗೆಬಗೆಯ ಅಕರಾಳ-ವಿಕರಾಳ ವಿಕಾರ ಮನಸ್ಸುಗಳು ಸೃಷ್ಟಿಸುವ ಅಪಭೃಂಶಗಳ ಫಲಾನುಭವಿ! ಸಂಘದ ಆಟಗಳಾದರಂತೂ ಮುಗಿಯಿತು, ಯಾರೂ ಮಾತಾಡುವಂತಿಲ್ಲ. ಕೆಲವೊಮ್ಮೆ ಚೌಕಿಯಲ್ಲಿ ಹೊಡೆದಾಟ ಆದಾಗಲೂ ಕಿವಿ, ಕಣ್ಣು, ಬಾಯಿ ಮುಚ್ಚಿಕೊಂಡಿರಬೇಕಾದ ಅನಿವಾರ್ಯತೆ. ಈಗಂತೂ ಜಾಲತಾಣಗಳು ಬಂದಿವೆ. ಒಂದೈದು ನಿಮಿಷದಲ್ಲಿ ಹೊಡೆದಾಟಗಳ ತಾಜಾ ಚಿತ್ರಗಳು ಲೋಕಾರ್ಪಣಗೊಳ್ಳುತ್ತವೆ! ವಾಹಿನಿಗಳಿಗಿದು ಚರ್ಚೆಯ ವಸ್ತುವಾಗುತ್ತದೆ. ಕಲಾವಿದನಿಗೂ ಪುಕ್ಕಟೆ ಪ್ರಚಾರ. ಗಲಾಟೆ ಮಾಡಿಕೊಂಡವರು ಇಪ್ಪತ್ತನಾಲ್ಕು ಗಂಟೆಯೊಳಗೆ ಜೋಸ್ತಿಗಳಾಗುತ್ತಾರೆ.  
                ಮದ್ಯಪಾನದ ವಿಷಯಕ್ಕೆ ಬರೋಣ. ಎಲ್ಲಾ ಕಡೆ ಎನ್ನಲಾರೆ. ಹಲವು ಪ್ರದರ್ಶನಗಳಲ್ಲಿ ಮದ್ಯಪಾನದ ಪರಿಣಾಮವಾಗಿ ಮನಸ್ಥಿತಿಗಳು ಕೆಡುವ ಸಂಭವ ಅಧಿಕ. ಧೂಮಪಾನ, ಮದ್ಯಪಾನ ಅಭ್ಯಾಸವಿಲ್ಲದವರು  ಮುಜುಗರದಿಂದಲೇ ಪಾತ್ರ ನಿರ್ವಹಿಸುತ್ತಾರೆ. ಸ್ವಸ್ತಿಕ್ ಬಳಿ ಉರಿಸಿಟ್ಟ ದೀಪದಿಂದಲೇ ಬೀಡಿ/ಸಿಗರೇಟು ಉರಿಸಿ, ಅಲ್ಲೇ ಹೊಗೆಯನ್ನು ಸುರುಳಿಯಾಗಿ ಗಾಳಿಗೆ ಬಿಟ್ಟು ಆತ್ಮಸುಖ(!)ವನ್ನು ಅನುಭವಿಸುವರೂ ಇದ್ದಾರೆ. ಬಿಡುವ ಎಷ್ಟು ಮಂದಿ ಬೇಕು? ಅವರಿಗೆ ದೇವರ ದೀಪವೂ ಒಂದೇ, ಸ್ಮಶಾನದ ಉರಿಯೂ ಒಂದೇ! ಇಂತಹವರು ವರ್ತಮಾನದಲ್ಲೂ ಬದಲಾಗದೇ ಇರುವುದು ಕಲೆಯ ದೋಷವಲ್ಲ. ವರ್ತಮಾನಕ್ಕೆ ಟ್ಯೂನ್ ಆಗದಿರುವ ದೌರ್ಬಲ್ಯ. ಇದನ್ನೇ ಸ್ವ-ಅಭಿವೃದ್ಧಿಯೆಂದು ಫೋಸ್ ಕೊಡುತ್ತಾ ಇರುತ್ತಾರೆ.  
                ದೇವಾಲಯಗಳ ಸಭಾಭವನದೊಳಗೋ, ಆವರಣದಲ್ಲೋ ಪ್ರದರ್ಶನಗಳಾಗುತ್ತವೆ. ಹಲವು ಆಟಗಳಲ್ಲಿ ಭಾಗವಹಿಸಿದ್ದೇನೆ. ಆಟದ ಮರುದಿನ ದೇವಾಲಯಗಳ ವರಿಷ್ಠರು, “ಮುಂದಿನ ವರುಷದಿಂದ ಆಟ ಬೇಡಎಂಕು ಖಡಕ್ಕಾಗಿ ಹೇಳಿದುದಿದೆ.  ಅರ್ಧ ಸೇದಿ ಬಿಸುಟ ಬೀಡಿ ತುಂಡುಗಳು, ಪಾನ್ಪರಾಗ್ ಸ್ಯಾಚೆಟ್ಗಳು, ಉಗುಳಿದ ತ್ಯಾಜ್ಯಗಳು, ಅವುಗಳು ಬಿಡಿಸಿದ ಚಿತ್ತಾರಗಳು, ಮದ್ಯಪಾನದ ಬಾಟಲಿಗಳು! ಕಣ್ಣಿಗೆ ಕಾಣದ ಇಂತಹ ವಿಚಾರಗಳನ್ನು ಎತ್ತಿ ಹೇಳುವಾಗ ಸಂಕಟವಾಗುತ್ತದೆ. ಪೌರಾಣಿಕ ಸಂದೇಶಗಳನ್ನು ಜನಮಾನಸದೊಳಗೆ ಇಳಿಬಿಡುವ ನಮ್ಮ ಹಾಡು, ಪಾಡು! ಒಂದಿಬ್ಬರು ಮಾಡಿದ ಅನರ್ಥಗಳಿಗೆ ಕಲಾವಿದ ಸಂಕುಲವೇ ತಲೆತಗ್ಗಿಸಬೇಕಾದ ಪ್ರಮೇಯ. 
                ಕೆಲವೆಡೆ ಅಭಿಮಾನಿಗಳ ಭ್ರಮಾ ಆಭಿಮಾನಕ್ಕೆ ಕಲಾವಿದ ಬಲಿಯಾಗುತ್ತಾನೆ. ಒಮ್ಮೆ ಹೀಗಾಯಿತು. ಪ್ರಸಂಗ ದೇವಿ ಮಹಾತ್ಮೆ. ಮಹಿಷಾಸುರ ಪಾತ್ರಧಾರಿಯ ಅಭಿಮಾನಿಗಳ ಊರದು! ಸಭಾ ಮಧ್ಯದಲ್ಲಿ ಮಹಿಷಾಸುರನ ಅದ್ದೂರಿ ಪ್ರವೇಶದ ಮೊದಲೇ ಹೊಟ್ಟೆ ತಂಪು ಮಾಡಿಕೊಂಡಿದ್ದ! ಆತ ರಂಗ ತಲಪುವಾಗಲೇ ಸೊರಗಿದ್ದ. ದೇವಿಯೊಡನೆ ಯುದ್ಧದ ಸಂದರ್ಭದಲ್ಲಂತೂ ಕಣ್ಣಾಲಿಗಳು ತಿರುಗುತ್ತಿದ್ದುವು! ಕಿರೀಟ ಅರ್ಧಕ್ಕೆ ಜಾರಿ ನೆಲ ನೋಡುತ್ತಿತ್ತು. ದೇವಿಯು ಕೊಲ್ಲುವ ಮೊದಲೇ ಪಾತ್ರವು ರಂಗದಲ್ಲಿ ಸತ್ತಿತ್ತು!
                ಸಾವಿರಗಟ್ಟಲೆ ಪ್ರೇಕ್ಷಕರು ಆಟ ನೋಡುತ್ತಿದ್ದಾರೆ ಎನ್ನುವ ಕನಿಷ್ಠ ಪರಿಜ್ಞಾನವೂ ಇಲ್ಲ. ತಾನು ಯಕ್ಷಗಾನಕ್ಕೆ ಅಪಚಾರ ಮಾಡುತ್ತಿದ್ದೇನೆ ಎಂಬ ಪಾಪಪ್ರಜ್ಞೆಯಿಲ್ಲ. ತನ್ನ ಪಾತ್ರಕ್ಕೆ ನ್ಯಾಯ ಸಲ್ಲಿಸಬೇಕೆಂಬ ಛಲವಿಲ್ಲ. ಪ್ರಧಾನ ಪಾತ್ರವೆಂಬ ಅರಿವೂ ಇಲ್ಲ. ಕಲಾವಿದ ಅಭಿಮಾನಿಗಳ ಅಭಿಮಾನವನ್ನು ಪಡೆಯುವುದು ತಪ್ಪಲ್ಲ. ತನ್ನ ಪಾತ್ರವನ್ನು ಕೊಂದುಕೊಂಡು, ವ್ಯಕ್ತಿತ್ವವನ್ನು ಹಾಳುಮಾಡಿಕೊಂಡರೆ ಏನು ಪ್ರಯೋಜನ? “ಇಂತಹ ಘಟನೆಗಳಿಂದ ಸಮಾಜವು ಉಳಿದ ಕಲಾವಿದರನ್ನು ಹಗುರವಾಗಿ ಕಾಣುತ್ತದೆ. ಎಲ್ಲರನ್ನೂ ಸಂಶಯ ದೃಷ್ಟಿಯಿಂದ ನೋಡುತ್ತಾರೆ. ವ್ಯಸನವುಳ್ಳ ಕಲಾವಿದರನ್ನು ದೂರವಿರಿಸುವುದೇ ಪರಿಹಾರಹಿರಿಯ ಕಲಾವಿದರೊಬ್ಬರ ದುಃಖದ ಮಾತು.
                ಯಕ್ಷಗಾನವು ಆರಾಧನಾ ಕಲೆಯೋ, ಜಾನಪದ ಕಲೆಯೋ.. ಮುಖ್ಯವಲ್ಲ. ತಂತಮ್ಮ ವ್ಯಸನಗಳಿಂದ ಚೌಕಿಯ, ರಂಗದ, ಒಟ್ಟೂ ಯಕ್ಷಗಾನಕ್ಕೆ ಅಗೌರವ ತರುವಂತಹ ವಿದ್ಯಮಾನಗಳು ಮರುಕಳಿಸಬಾರದು. ವ್ಯಸನಗಳು ಮನೆವ್ಯಾಪ್ತಿಯಲ್ಲಿದ್ದು ವ್ಯಕ್ತಿಗತವಾಗಿರಲಿ. ಕಲೆಯೊಂದರ ಬೆಳವಣಿಗೆಗೆ ಕಲಾವಿದನ ಕೊಡುಗೆ ಎಷ್ಟು ಮುಖ್ಯವೋ, ಆತ ವ್ಯಸನಗಳಿಂದ ಮುಕ್ತವಾಗಿರುವುದೂ ಅಷ್ಟೇ ಮುಖ್ಯ ಅಲ್ವಾ. ಕಲಾವಿದ ರಂಗಕ್ಕೆ ವೇಷತೊಟ್ಟು ಬಂದಾಗ ಆತನೊಳಗೆ ಪೌರಾಣಿಕ ವ್ಯಕ್ತಿಯನ್ನು ಪ್ರೇಕ್ಷಕ ಗುರುತಿಸುತ್ತಾನೆ. ಪ್ರೇಕ್ಷಕನಿಗೆ ಪೌರಾಣಿಕ ಪಾತ್ರವೇ ಕಾಣಬೇಕೇ ಹೊರತು ವೇಷ ತೊಟ್ಟ ಕಲಾವಿದ ಕಾಣಬಾರದು! ಚೌಕಿಯಲ್ಲಿ ಕಲಾವಿದನ ವ್ಯಕ್ತಿತ್ವ, ನಡವಳಿಕೆ ಹೇಗಿರುತ್ತದೋ ಅದಕ್ಕೆ ಹೊಂದಿಕೊಂಡು ಗೌರವ ಪ್ರಾಪ್ತಿ. ಗೌರವವಿಲ್ಲದ ನಡವಳಿಕೆಯು ಕಲಾ ಬದುಕಿಗೆ ಕಳಂಕ.
                ಚೌಕಿಯು ಕಲಾವಿದನ ಮನೆ. ಅಲ್ಲಿ ಆತ ಏಕಾಂತವನ್ನು ಬಯಸುತ್ತಾನೆ. ಮೇಕಪ್ ಮಾಡುವಾಗ, ವೇಷಭೂಷಣ ಧರಿಸುವಾಗ ರಂಗದ ಅಭಿವ್ಯಕ್ತಿಯತ್ತ ಮೌನವಾಗಿ ಯೋಚಿಸಬೇಕಾಗುತ್ತದೆ. ಹಿರಿಯ ಕಲಾವಿದರು ಇಂತಹ ಮನಸ್ಥಿತಿಯನ್ನು ಬಯಸುತ್ತಾರೆ. “ಮೊದಲೆಲ್ಲಾ ಚೌಕಿಯೊಳಗೆ ಸಾರ್ವಜನಿಕರಿಗೆ ಪ್ರವೇಶವಿದ್ದಿರಲಿಲ್ಲ. ದೇವರ ಸನಿಹಕ್ಕೆ ಮಾತ್ರ ಪ್ರವೇಶ. ಸಂಬಂಧಿಕರು ಬಂದಾಗ ಕಲಾವಿದನೇ ಚೌಕಿಯಿಂದ ಹೊರಗೆ ಬಂದು ಬಂಧುಗಳೊಂದಿಗೆ ಬೆರೆಯುತ್ತಾನೆ. ಚೌಕಿಯೊಳಗೆ ಶಿಸ್ತು ಮತ್ತು ಮೌನ ಮುಖ್ಯ. ಎಲ್ಲ ಕಲಾವಿದರು ಪಾಲಿಸುತ್ತಿದ್ದರು.” ಪುತ್ತೂರು ಶ್ರೀಧರ ಭಂಡಾರಿಯವರು ಒಂದು ಕಾಲಘಟ್ಟದ ಬಣ್ಣದ ಬದುಕಿಗೆ ದನಿಯಾಗುತ್ತಾರೆ

Prajavani / ದಧಿಗಿಣತೋ / 8-6-2018
               

No comments:

Post a Comment