ಯಕ್ಷಮಂಗಳ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಿರಿಯ ಭಾಗವತ ಮತ್ಯಾಡಿ ನರಸಿಂಹ ಶೆಟ್ಟ (92) ಮತ್ತು ಹಾಸ್ಯಗಾರ್ ಪೆರುವೋಡಿ ನಾರಾಯಣ ಭಟ್ (91) – ಇವರೊಂದಿಗೆ ಡಾ.ನಾರಾಯಣ ಶೆಟ್ಟರು – ಒಂದು ಹೃದ್ಯ ಚಿತ್ರ
ಕನ್ನಡ ಛಂದಸ್ಸಿನಲ್ಲಿ ಏನಿದೆಯೋ ಅದು ಯಕ್ಷಗಾನದಲ್ಲಿದೆ ಎಂದು ತನ್ನ ಸಂಶೋಧನಾ ಪ್ರಬಂಧ ‘ಯಕ್ಷಗಾನ ಛಂದೋಬುಧಿ’ ಕೃತಿಯ ಮೂಲಕ ತೋರಿಸಿದ್ದಾರೆ. ಇದಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯವು ‘ಡಾಕ್ಟರ್ ಆಫ್ ಲಿಟ್ರೇಚರ್’ ಪದವಿ ನೀಡಿ ನೀಡಿತ್ತು. ಕನ್ನಡ ಲೋಕಕ್ಕೆ ಅಪೂರ್ವ ಕೃತಿಯನ್ನು ನೀಡಿದ ಶೆಟ್ಟರು ‘ಅಭಿನವ ನಾಗವರ್ಮ’ ಎಂದೇ ಪ್ರಸಿದ್ಧರಾದರು. ಶಾಸ್ತ್ರದ ಗ್ರಂಥಗಳಲ್ಲಿ ಲಕ್ಷಣವಿದ್ದು ಲಕ್ಷ್ಯವಿರದ ಪದ್ಯಗಳನ್ನು ಯಕ್ಷಗಾನದಿಂದ ಸಂಶೋಧಿಸಿ ಕೊಟ್ಟ ಶೆಟ್ಟರು ಗರ್ಭಕವಿತ್ವದ ಮಹಾ ಚಿಂತನಕಾರ.
ಕಾಂತಾವರ ಕನ್ನಡ ಸಂಘವು ‘ನಾಡಿಗೆ ನಮಸ್ಕಾರ’ ಮಾಲಿಕೆಯಲ್ಲಿ ನಾರಾಯಣ ಶೆಟ್ಟರ ಕಿರು ಪುಸ್ತಿಕೆಯನ್ನು ಪ್ರಕಾಶಿಸಿದೆ. ಯುವ ವಿಮರ್ಶಕ, ಪ್ರಸಂಗಕರ್ತ ಡಾ.ದಿನಕರ್ ಎಸ್. ಪಚ್ಚನಾಡಿಯವರು ಶೆಟ್ಟರ ಬದುಕಿಗೆ ಕನ್ನಡಿ ಹಿಡಿದಿದ್ದಾರೆ. ಶೆಟ್ಟರ ವ್ಯಕ್ತಿತ್ವವನ್ನು ಒಂದು ಪ್ಯಾರಾದಲ್ಲಿ ದಿನಕರ್ ಕಟ್ಟಿಕೊಟ್ಟ ಬಗೆ ಅನನ್ಯ – “ಇವರು ವಿತ್ತಾಪಹಾರಕ ಗುರುವಲ್ಲ. ಚಿತ್ತಾಪಹಾರಕ ಗುರು. ಛಂದಸ್ಸಿನ ಅಧ್ಯಯನಕ್ಕಾಗಿ ಮನೆಗೆ ಬಂದ ಎಷ್ಟೋ ಮಂದಿಗಳಿಗೆ ಅನ್ನ ಹಾಕಿ ವಿದ್ಯಾ ದಾನ ಮಾಡಿದ ಪುಣ್ಯ ಗುರು. ಶಿಷ್ಯರಿಂದ ಹಣ ಪಡಕೊಂಡವರಲ್ಲ. ಆಪತ್ಕಾಲದಲ್ಲಿ ಶಿಷ್ಯರಿಗೇ ಸಹಾಯ ಮಾಡಿದ ಮಹಾ ಗುಣ ಇವರದ್ದು.”
2013ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಸಮ್ಮೇಳನದ ಸರ್ವಾಧ್ಯಕ್ಷತೆಯ ಗಾದಿಯು ಡಾ.ಶಿಮಂತೂರು ಎನ್. ನಾರಾಯಣ ಶೆಟ್ಟರಿಗೆ ಪ್ರಾಪ್ತವಾಗಿತ್ತು. ಈ ಗೌರವ ಯಕ್ಷಗಾನದ ಸಾಹಿತ್ಯ ಲೋಕಕ್ಕೆ ಸಂದ ಗೌರವ. ಯಕ್ಷಗಾನದ ಕವಿಗಳಿಗೆ ಸಲ್ಲುವ ಮಾನ. ಯಕ್ಷಗಾನದ ಕ್ಷೇತ್ರದಲ್ಲಿ ಅದೆಷ್ಟೋ ಸಾಹಿತ್ಯ ಕೃತಿಗಳಿಂದ ಆ ರಂಗವನ್ನು ಶ್ರೀಮಂತಗೊಳಿಸಿದ ಚೇತನಗಳಿಗೆ ಸಂದ ಗೌರವ. ಈ ಮಾತುಗಳನ್ನು ಸಮ್ಮೇಳನದ ವೇದಿಕೆಯಲ್ಲಿ ನಾರಾಯಣ ಶೆಟ್ಟರು ಹೇಳುತ್ತಿದ್ದಾಗ ಭಾವುಕರಾಗಿದ್ದರು. ತಮ್ಮ ಆಧ್ಯಕ್ಷೀಯ ಭಾಷಣದುದ್ದಕ್ಕೂ ಭಾಷೆ, ಸಾಹಿತ್ಯ, ಕಲೆಗಳ ಸುತ್ತ ಹೆಣೆದ ವಿಚಾರಗಳು ಸರ್ವಮಾನ್ಯವಾದುದು. ಪಟ್ಲ ಪ್ರಶಸ್ತಿ ಖುಷಿಯ ಸಂದರ್ಭದಲ್ಲಿ ಶೆಟ್ಟರ ಅಂದಿನ ಮಾತುಗಳ ಸಿಹಿಯನ್ನು ಮನನಿಸುವುದು ಕೂಡಾ ನಾವು ಅವರಿಗೆ ಸಲ್ಲಿಸುವ ಗೌರವ ಎಂದುಕೊಂಡಿದ್ದೇನೆ –
ಹದಿಮೂರನೇ ಶತಮಾನದಿಂದಲೇ ಯಕ್ಷಗಾನ ಪ್ರಸಂಗದ ಸೃಷ್ಟಿಗೆ ಹಿನ್ನೆಲೆಯಿದೆ. ಯಕ್ಷಗಾನ ಪ್ರಸಂಗ ಸಾಹಿತ್ಯದ ಬೆಳವಣಿಗೆಯು ಕೀರ್ತನ ಸಾಹಿತ್ಯದ ಬಳಿಕ ಕನ್ನಡ ನಾಡಿನಲ್ಲಾಗಿದೆ. ನಾಲ್ಕು ಶತಮಾನಗಳಿಂದ ಬೆಳೆದು ಬಂದಿದೆ. ಯಕ್ಷಗಾನವು ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆ ಹಿರಿದು ಮತ್ತು ಅಪೂರ್ವ. ಅದರಲ್ಲಿ ಛಂದೋ ಸಾರಸ್ವತ ಲೋಕಕ್ಕೆ ಯಕ್ಷಗಾನದ ಪೂರ್ವ ಸೂರಿಗಳು ಮತ್ತಾವ ಸಾಹಿತ್ಯ ಪ್ರಕಾರಗಳಲ್ಲೂ ದೊರಕದ ಮಹತ್ತರವಾದ ದೇಣಿಗೆಗಳನ್ನು ನೀಡಿದ್ದಾರೆ. ಹೀಗಿದ್ದರೂ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಪ್ರಸಂಗ ಸಾಹಿತ್ಯ ಮನ್ನಣೆಗೆ ಒಳಗಾಗಿಲ್ಲ!
ಛಂದಸ್ಸು ಮತ್ತು ಲಯ ಆಧುನಿಕ ಕವಿತೆಗಳಲ್ಲಿ ದೂರವಾಗುತ್ತಾ ಇದೆ. ಪದ್ಯವು ಗದ್ಯಮಯವಾಗುತ್ತಿದೆ. ಆಧುನಿಕ ಕವಿಗಳಿಗೆ ಈ ಕುರಿತಾದ ಜ್ಞಾನ ಯಾಕಿಲ್ಲ? ಅನ್ಯ ಭಾಷೆಗಳಿಂದಾಗಿ ಕನ್ನಡ ಭಾಷೆಯ ಸೊಗಸು ಮಸುಕಾಗುತ್ತಿದೆ. ತುಳು ಭಾಷೆಯ ಪುಷ್ಟಿಯೂ ಕರಗುತ್ತಿದೆ? ಇದಕ್ಕಾಗಿ ನಾವೇನು ಮಾಡಬಹುದು? ಹಿಂದಿನ ಕಾಲದ ಅನೇಕರು ನಿರಕ್ಷರಾರೂ ಕಾವ್ಯ ಪ್ರಯೋಗ ಪರಿಣತರು. ಇಂದು ಎಲ್ಲರೂ ವಿದ್ಯಾವಂತರಾಗಿ ಬೆಳೆದಿದ್ದಾರೆ, ಬೆಳೆಯುತ್ತಿದಾರೆ? ಎಲ್ಲರೂ ಗದ್ಯ ಪರಿಣತರಾಗಿಯೇ ಕಾಣುತ್ತಾರೆ. ಕಾವ್ಯ ಪ್ರಯೋಗ ಪರಿಣತರು ತೀರಾ ಕಡಿಮೆ. ಓದುವ ಆಸಕ್ತಿ ಯುವ ಪೀಳಿಗೆಯಲ್ಲಿ ಕುಂಟುತ್ತಾ ಇದೆ. ಗದ್ಯವನ್ನೇ ಓದುವವರು ಕಡಿಮೆಯಾಗಿರುವಾಗ ಪದ್ಯವನ್ನು ಓದುವ ಆಸಕ್ತಿ ಎಷ್ಟು ಮಂದಿಗಳಲ್ಲಿ ನಿರೀಕ್ಷಿಸಬಹುದು?
ಹೀಗೆ ಕನ್ನಡ ಸಾರಸ್ವತ ಲೋಕದ ಭಾಷೆಯ ಹಿನ್ನಡೆಯನ್ನು ನಾರಾಯಣ ಶೆಟ್ಟರು ವಿಮರ್ಶಿಸುತ್ತಾ, ಜವಾಬ್ದಾರಿಯನ್ನು ನೆನಪಿಸುತ್ತಾರೆ – “ಯುವ ಪೀಳಿಗೆಯನ್ನು ಸಾಹಿತ್ಯಿಕವಾಗಿ ಬೆಳೆಯುವಂತೆ ಮಾಡಲು ಹಿರಿಯರ ಪಾತ್ರ ಹಿರಿದಾಗಿದೆ. ಸಾಹಿತ್ಯವನ್ನು ಓದುವ ಹವ್ಯಾಸದಲ್ಲಿ ಮಕ್ಕಳು ಬೆಳೆಯುವಂತೆ ಪೋಷಕರು ಆದ್ಯ ಗಮನ ನೀಡಬೇಕು. ಭಾಷೆಯ ಸೊಗಸನ್ನು ಎಳವೆಯಿಂದಲೇ ಅನುಭವಿಸಿ ಪ್ರಭಾವಿತರಾಗುವ ಲಕ್ಷಣ ಯುವಕರಲ್ಲಿ ಬೆಳೆದರೆ ಮಾತ್ರ ಸಾಹಿತ್ಯ ಸೃಷ್ಟಿಯ ಗುಣ ಮೈದಾಳುತ್ತದೆ. ಭಾಷೆಯ ಶಾಸ್ತ್ರೀಯ ಸ್ಥಾನಮಾನವನ್ನು ನಿರಂತರವಾಗಿ ಕಾಯ್ದುಕೊಳ್ಳುವ ಹೊಣೆಗಾರಿಕೆ ಎಲ್ಲರದಾಗಬೇಕು.”
ಸಾಹಿತ್ಯವು ಬದುಕಿನಲ್ಲಿ ಮಿಳಿತಗೊಂಡಾಗ ಮಾತ್ರ ಬದುಕಿನ ಸುಭಗತೆ. ಈ ಕುರಿತು ಶೆಟ್ಟರ ಮಾತುಗಳು ಮನನೀಯ – “ಸಾಹಿತ್ಯ ಮತ್ತು ಭಾಷೆಗೆ ಅವಿನಾಭಾವ ಸಂಬಂಧ. ಭಾಷೆಯ ಉದಯವೆಂದರೆ ಸಾಹಿತ್ಯದ ಉದಯ. ಸ್ಥೂಲವಾಗಿ ಹೇಳುವುದಾದರೆ ‘ರಸಾನುಭವದ ಸುಂದರ ಅಭಿವ್ಯಕ್ತಿಯೇ ಸಾಹಿತ್ಯ.’ ಇದರ ಮೂಲ ಸತ್ವವು ಅಭಿವ್ಯಕ್ತಿಯ ಸಾಧನವಾದ ಭಾಷೆಯಲ್ಲಿದೆ. ಇದಕ್ಕೆ ಮೂಲವಾದ ಸೌಂದರ್ಯ ಪ್ರಜ್ಞೆ ಮನುಷ್ಯನಷ್ಟು ಪ್ರಾಚೀನವಾಗಿದೆ. ಒಂದೊಂದು ಭಾಷೆಯ ಸೃಷ್ಟಿಯಲ್ಲೂ ಸಾಹಿತ್ಯದ ಗುಣಾಂಶಗಳಿವೆ. ಹಾಗಾಗಿ ಸಾಹಿತ್ಯಕ್ಕೆ ಭಾಷೆಯಷ್ಟೇ ಪ್ರಾಚೀನತೆಯಿದೆ.”
ಉಪ್ಪಿನಂಗಡಿಯ ಸಾಹಿತ್ಯ ಸಮ್ಮೇಳನದಲ್ಲಿ ಶೆಟ್ಟರು ಮಾತಿಗೆ ಸಿಕ್ಕಾಗ ಹೇಳಿದ್ದರು – “ಛಂದಸ್ಸು, ಸಾಹಿತ್ಯ ಎಲ್ಲವೂ ಅಂಗೈಯಲ್ಲಿದೆ. ಎಷ್ಟು ಮಂದಿ ಓದುತ್ತಾರೆ. ಕೃತಿಯೊಂದರ ಸಾರ್ಥಕತೆಯಾಗುವುದು ಓದುಗರು ಸೃಷ್ಟಿಯಾದಾಗ ಮಾತ್ರ. ಆ ಓದುಗ ಕೃತಿಯನ್ನು ಹೇಗೆ ಸ್ವೀಕರಿಸಿದ ಎನ್ನುವ ನೆಲೆಯಲ್ಲಿ ಆ ಕೃತಿಯ ಯಶಸ್ಸು. ಆದರೆ ಜನರಲ್ಲಿ ಸಾಹಿತ್ಯ, ಕಲೆಗಳ ಆಸಕ್ತಿಯೇ ಹೊರಟುಹೋಗಿದೆ. ಅನಾಸಕ್ತಿಯೇ ಬದುಕಾಗಿದೆ. ವರ್ತಮಾನದ ಸಾಂಸ್ಕøತಿಕ, ಸಾಹಿತ್ಯದ ಆಯ್ಕೆಗಳಲ್ಲಿ ಅತಿಯಾದ ಸ್ವಾತಂತ್ರ್ಯವು ನುಸುಳಿದ್ದರಿಂದ ಬದ್ಧತೆಯು ಒದ್ದಾಡುತ್ತಿದೆ.”
ನಾರಾಯಣ ಶೆಟ್ಟರ ಮಾತುಗಳು ಸಮ್ಮೇಳನದ ವೇದಿಕೆಗೆ ಸೀಮಿತ ಎಂದು ಮರೆಯುವಂತಹುದಲ್ಲ. ವರ್ತಮಾನದಲ್ಲಿ ಕಲೆ, ಸಾಹಿತ್ಯ, ಸಂಸ್ಕøತಿಗಳು ಪ್ರತ್ಯಪ್ರತ್ಯೇಕವಾಗಿ ತಂತಂಮ್ಮ ಅಸ್ತಿತ್ವವನ್ನು ಸ್ಥಾಪಿಸಲು ಏದುಸಿರುಬಿಡುತ್ತಿವೆ. ಒಂದು ಕಾಲಘಟ್ಟದಲ್ಲಿ ಇವು ಮೂರೂ ಪರಸ್ಪರ ಮಿಳಿತಗೊಂಡಿರುವುದರಿಂದ ಕನ್ನಡದಲ್ಲಿ ಅನೇಕ ಕವಿಗಳು ರೂಪುಗೊಂಡು ಪ್ರಾತಃಸ್ಮರಣೀಯರಾದರು. ಅವರ ಕೃತಿಗಳಿಗೆ ಸಾರಸ್ವತ ಲೋಕವು ಮಾನವನ್ನರ್ಪಿಸಿತು. ಹಾಗಾಗಿ ಕಲೆ ಬೇರೆಯಲ್ಲ, ಸಾಹಿತ್ಯವೂ ಬೇರೆಯಲ್ಲ. ಇವೆರಡರ ಸಂಗಮದಲ್ಲಿ ಸಂಸ್ಕøತಿಗೆ ಮರುಹುಟ್ಟು.
ನನಗೆ ಶಿಮಂತೂರು ನಾರಾಯಣ ಶೆಟ್ಟರು ತುಂಬಾ ಕಾಡುವುದು ಈ ಎಲ್ಲಾ ಕಾರಣಗಳಿಂದ. ಓರ್ವ ಕವಿಯಾಗಿ ಲೋಕವನ್ನು ನೋಡುವುದಕ್ಕೂ; ಕವಿಯೊಳಗೆ ಕಲೆ, ಸಂಸ್ಕತಿ, ಸಾಹಿತ್ಯವನ್ನಿರಿಸಿಕೊಂಡು ಲೋಕವನ್ನು ನೋಡುವುದಕ್ಕೂ ವ್ಯತ್ಯಾಸಗಳಿವೆ. ನಾರಾಯಣ ಶೆಟ್ಟರೊಳಗೆ ಈ ಮೂರು ವಿಚಾರಗಳು ಸೇರಿರುವುದರಿಂದ ‘ಯಕ್ಷಗಾನ ಛಂದೋಂಬುಧಿ’ಯಂತಹ ದೊಡ್ಡ ಕೃತಿಯನ್ನು ಅರ್ಪಿಸಲು ಸಾಧ್ಯವಾಯಿತು. ಈಚೆಗೆ ಕೋಣಾಜೆಯಲ್ಲಿ ಜರುಗಿದ ‘ಯಕ್ಷಮಂಗಳ ಪ್ರಶಸ್ತಿ’ ಪ್ರದಾನದ ಸಂದರ್ಭದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರು – “ನಾರಾಯಣ ಶೆಟ್ಟರ ಛಂದೋಂಬುಧಿಯಂತಹ ಕೃತಿಗಳು ಸರಳೀಕರಣವಾಗಬೇಕು” ಎಂದಿದ್ದರು. ಅಕಾಡೆಮಿಯಂತಹ ಮಾನ್ಯತಾ ಸಂಸ್ಥೆಗೆ ಈ ಕೆಲಸ ಕಷ್ಟವಾಗದು!
2018
ಮೇ 27ರಂದು ಮಂಗಳೂರಿನ ಅಡ್ಯಾರು ಗಾರ್ಡ್ನ್ನಿನಲ್ಲಿ ನಡೆಯುವ ‘ಪಟ್ಲ ಸಂಭ್ರಮ’ ಕಲಾಪದಲ್ಲಿ ‘ಪಟ್ಲ ಪ್ರಶಸ್ತಿ’ಯನ್ನು ಸ್ವೀಕರಿಸುವ ಎಂಭತ್ತನಾಲ್ಕರ ಡಾ.ಎನ್.ನಾರಾಯಣ ಶೆಟ್ಟಿಯವರಿಗೆ ಶುಭ ಹಾರೈಕೆಗಳು. ಶೆಟ್ಟರಿಗೆ ಪ್ರಶಸ್ತಿಯನ್ನು ಪ್ರದಾನಿಸುವ ಮೂಲಕ ಪಟ್ಲ ಫೌಂಡೇಶನ್ನಿನ ಗೌರವ ವೃದ್ಧಿಸಿದೆ. ಯಕ್ಷಗಾನವನ್ನು ಪ್ರೀತಿಸುವ, ಗೌರವಿಸುವ ಎಲ್ಲರಿಗೂ ಖುಷಿ ನೀಡುವ ವಿಚಾರವಿದು. ಪಟ್ಲ ಸಂಭ್ರಮಕ್ಕೆ ನೀವೆಲ್ಲಾ ಬರ್ತೀರಲ್ವಾ. ಪಟ್ಲ ಸತೀಶಣ್ಣ ನಿಮಗಾಗಿ ಕಾಯುತ್ತಿರುತ್ತಾರೆ.
Prajavani / ದಧಿಗಿಣತೋ / 25-5-2018
No comments:
Post a Comment