ಬದುಕು ಕಲೆಯಾಗಲು ಬೇಕಾದ ಒಳಸುರಿಗಳು ಯಕ್ಷಗಾನದಲ್ಲಿದೆ'
- ಪದ್ಯಾಣ ಪ್ರಶಸ್ತಿ ಪ್ರದಾನ
ಸಮಾರಂಭದಲ್ಲಿ ಪೂಜ್ಯ ಒಡಿಯೂರು ಶ್ರೀಗಳು
"ಸಮಾಜದಲ್ಲಿ
'ಸರಸ' ಮತ್ತು 'ವಿರಸ'ವು
ಗೋಚರವಾಗುವುದನ್ನು ಕಾಣುತ್ತೇವೆ. ಇವುಗಳ
ಮಧ್ಯೆ 'ಸಾಮರಸ್ಯ'ವು ಪ್ರಕಾಶಿಸಲು
ಬೇಕಾದ ಸಂಪನ್ಮೂಲವನ್ನು ಯಕ್ಷಗಾನವು ನೀಡಿದೆ. ಯಕ್ಷಗಾನವು ಪೌರಾಣಿಕ
ಜ್ಞಾನವನ್ನು ಪಸರಿಸುತ್ತದೆ. ಆಟ, ಕೂಟಗಳ ಮೂಲಕ
ಭಾಷಾ ಶುದ್ಧಿಯನ್ನು ಕಲಿಸುತ್ತದೆ. ಸಂಸ್ಕೃತಿ, ಸಂಸ್ಕಾರಗಳ ಪಥವನ್ನು ತೋರಿಸುತ್ತದೆ. ಬದುಕು
ಕಲೆಯಾಗಲು ಬೇಕಾದಂತಹ ಉತ್ತಮ ಒಳಸುರಿಗಳನ್ನು ನೀಡುತ್ತದೆ"
ಎಂದು ಒಡಿಯೂರು ಶ್ರೀ ಗುರುದೇವದತ್ತ
ಸಂಸ್ಥಾನದ ಪೂಜ್ಯ ಶ್ರೀ ಶ್ರೀ
ಗುರುದೇವಾನಂದ ಸ್ವಾಮೀಜಿಯವರು ಹೇಳಿದರು.
ಅವರು ಬಂಟ್ವಾಳ ತಾಲೂಕಿನ ಮಿತ್ತನಡ್ಕ
ಸನಿಹದ ಪದ್ಯಾಣ ಶ್ರೀ ಮಹಾಲಿಂಗೇಶ್ವರ
ದೇವಳದ ಸಭಾಭವನದಲ್ಲಿ ಜರುಗಿದ 'ಪದ್ಯಾಣ ಪ್ರಶಸ್ತಿ
ಪ್ರದಾನ' ಸಮಾರಂಭದಲ್ಲಿ ಆಶೀರ್ವಚನ ನೀಡುತ್ತಾ, ಯಕ್ಷಗಾನದ ಭಾಗವತ ಹಿಮ್ಮೇಳ ಮತ್ತು
ಮುಮ್ಮೇಳವನ್ನು ಹಿಡಿತದಲ್ಲಿಟ್ಟುಕೊಳ್ಳುವ ನಿರ್ದೇಶಕ. ಈ ಸ್ಥಾನಕ್ಕೆ ಏರಲು
ನಿರಂತರ ಕಲಿಕೆ ಮತ್ತು ಸಾಧನೆ
ಮುಖ್ಯ ಎಂದರು.
ಖ್ಯಾತ ಭಾಗವತ ಶ್ರೀ ತೆಂಕಬೈಲು
ತಿರುಮಲೇಶ್ವರ ಶಾಸ್ತ್ರಿಗಳಿಗೆ ಹಾರ, ಶಾಲು, ಹಣ್ಣುಹಂಪಲು,
ಸಂಮಾನ ಪತ್ರ, ಸ್ಮರಣಿಕೆ ಮತ್ತು
ನಿಧಿಯೊಂದಿಗೆ 'ಪದ್ಯಾಣ ಪ್ರಶಸ್ತಿ'ಯನ್ನು
ಪೂಜ್ಯ ಶ್ರೀಗಳು ಪ್ರದಾನಿಸಿದರು. ಹುಟ್ಟೂರ
ಸಂಮಾನ ಸ್ವೀಕರಿಸಲು ಖುಷಿಯಾಗುತ್ತಿದೆ. ಎಲ್ಲರಿಗೂ ಈ ಭಾಗ್ಯ ಬರುವುದಿಲ್ಲ.
ಎನ್ನುವ ಸಂತಸವನ್ನು ತೆಂಕಬೈಲು ಶಾಸ್ತ್ರಿಗಳು ಹಂಚಿಕೊಂಡರು. ಸಂಮಾನಿತರ ಪುತ್ರ ಮುರಳೀಕೃಷ್ಣ ಶಾಸ್ತ್ರಿ
ಮತ್ತು ಸೊಸೆ ವಿದ್ಯಾ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಪತ್ರಕರ್ತ, ಅಂಕಣಗಾರ ನಾ. ಕಾರಂತ
ಪೆರಾಜೆ ಸಂಪಾದಕತ್ವದ ಕಿರು ಪುಸ್ತಿಕೆಯನ್ನು ವಿದ್ವಾಂಸ
ಡಾ.ಪಾದೆಕಲ್ಲು ವಿಷ್ಣು ಭಟ್ಟರು ಬಿಡುಗಡೆಗೊಳಿಸಿದರು.
ಈ ಪುಸ್ತಕದಲ್ಲಿ ಸಂಮಾನಿತರ
ಪರಿಚಯ ಮತ್ತು ಅವರು ರಚಿಸಿದ
'ಏಕಚಕ್ರವೀರ ವಿಜಯ' ಪ್ರಸಂಗವು ಒಳಗೊಂಡಿದೆ.
ಸಂಮಾನಿತರನ್ನು ಹಿರಿಯ ಅರ್ಥದಾರಿ ಶ್ರೀ
ಸೇರಾಜೆ ಸೀತಾರಾಮ ಭಟ್ ನುಡಿಹಾರಗಳೊಂದಿಗೆ
ಅಭಿನಂದಿಸಿದರು. ಆರಂಭದಲ್ಲಿ ಕರ್ನಾಟಕ ಲೋಕಸೇವಾ ಆಯೋಗದ
ಆಧ್ಯಕ್ಷ ಹಾಗೂ ಪದ್ಯಾಣ ಪ್ರಶಸ್ತಿ
ಸಮಿತಿಯ ಗೌರವಾಧ್ಯಕ್ಷ ಡಾ.ಟಿ.ಶ್ಯಾಮ
ಭಟ್ ದೀಪ ಬೆಳಗಿಸಿ ಶುಭಚಾಲನೆ
ನೀಡಿದರು.
ಪದ್ಯಾಣ
ಶ್ರೀಕ್ಷೇತ್ರದ ಆಡಳಿತ ಮೊಕ್ತೇಸರ ಶ್ರೀ
ಸೇರಾಜೆ ಸತ್ಯನಾರಾಯಣ ಭಟ್ಟರು ಸ್ವಾಗತಿಸಿದರು. ಪದ್ಯಾಣ
ಪ್ರಶಸ್ತಿ ಸಮಿತಿಯ ಕಾರ್ಯದರ್ಶಿ ಸ್ವಸ್ತಿಕ್ ಪದ್ಯಾಣ ವಂದಿಸಿದರು. ನಾ.
ಕಾರಂತ ಪೆರಾಜೆ ನಿರ್ವಹಿಸಿದರು. ಸಮಿತಿಯ
ಅಧ್ಯಕ್ಷರಾದ ಪದ್ಯಾಣ ಗೋಪಾಲಕೃಷ್ಣ ಭಟ್ಟರು
ಅತಿಥಿಗಳಿಗೆ ಸ್ಮರಣಿಕೆ ನೀಡಿದರು. ಪೂಜ್ಯ
ಶ್ರೀಗಳಿಗೆ ಚೈತನ್ಯಕೃಷ್ಣ ಪದ್ಯಾಣ ಮತ್ತು ಪ್ರಣತಿ
ದಂಪತಿಗಳು ಫಲಪುಷ್ಪ ನೀಡಿ ಗೌರವಿಸಿದರು.
ಪದ್ಯಾಣ ಗಣಪತಿ ಭಟ್, ಪದ್ಯಾಣ
ಶಂಕರನಾರಾಯಣ ಭಟ್, ಪದ್ಯಾಣ ನಾರಾಯಣ
ಭಟ್, ಪದ್ಯಾಣ ಜಯರಾಮ ಭಟ್ಟರು
ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದರು.
ಈ ಸಂದರ್ಭದಲ್ಲಿ ಚೈತನ್ಯಕೃಷ್ಣ ಪದ್ಯಾಣ ಇವರ ವಿವಾಹದ
ಸಂಭ್ರಮ ಪ್ರಯುಕ್ತ ಹನುಮಗಿರಿ ಮೇಳದವರಿಂದ 'ಮತ್ಸ್ಯಾವತಾರ ಮತ್ತು ಕನಕಾಂಗಿ ಕಲ್ಯಾಣ'
ಪ್ರದರ್ಶನ ಜರುಗಿತು.
(ಚಿತ್ರ : ಶ್ಯಾಮ್
ಪ್ರಸಾದ್ ಕುಂಚಿನಡ್ಕ)
No comments:
Post a Comment