ತೆಂಕುತಿಟ್ಟು ಯಕ್ಷಗಾನದ ಹಿರಿಯ ಭಾಗವತ ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ ಇವರಿಗೆ ಈ ಸಾಲಿನ 'ಪದ್ಯಾಣ ಪ್ರಶಸ್ತಿ' ಘೋಷಣೆಯಾಗಿದೆ. ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದ ಪದ್ಯಾಣ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ 2018 ನವೆಂಬರ 26ರಂದು ಅಪರಾಹ್ನ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದೆ. ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ದಿವ್ಯ ಸಾನ್ನಿಧ್ಯವನ್ನು ವಹಿಸಲಿದ್ದಾರೆ.
ಪದ್ಯಾಣ ಕುಟುಂಬದ ಹಿರಿಯರಾದ ಕೀರ್ತಿಶೇಷ ಪದ್ಯಾಣ ಪುಟ್ಟು ಭಾಗವತರ ನೆನಪಿನಲ್ಲಿ ‘ಪದ್ಯಾಣ ಪ್ರಶಸ್ತಿ’ ರೂಪುಗೊಂಡಿದೆ. ಎರಡು ವರುಷಗಳ ಹಿಂದೆ ಸ್ಥಾಪಿಸಿದ ಪ್ರಶಸ್ತಿಯನ್ನು ಹಿರಿಯ ಭಾಗವತರಾದ ಅಗರಿ ರಘುರಾಮ ಭಾಗವತರು, ಬಲಿಪ ನಾರಾಯಣ ಭಾಗವತರಿಗೆ ಪ್ರದಾನಿಸಲಾಗಿತ್ತು.
ಪದ್ಯಾಣ ಮನೆತನಕ್ಕೆ ಯಕ್ಷ ಕಲೆಯು ನೀಡಿದ ಗೌರವಕ್ಕೆ ಪ್ರತಿಯಾಗಿ 'ಕಲಾಕೃತಜ್ಞತೆ'ಯ ದ್ಯೋತಕವಾಗಿ ಪದ್ಯಾಣ ಪ್ರಶಸ್ತಿ ಸ್ಥಾಪಿತವಾಗಿದೆ. ಈ ವರುಷ ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿಯವರಿಗೆ ಪ್ರಶಸ್ತಿ. ತೆಂಕುತಿಟ್ಟಿನ ಹಳೆಯ ಪಾರಂಪರಿಕ ಶೈಲಿಯೊಂದಕ್ಕೆ ಸಲ್ಲುವ ಗೌರವವಿದು.
ತಿರುಮಲೇಶ್ವರ ಶಾಸ್ತ್ರಿಗಳು ತೆಂಕುತಿಟ್ಟು ಯಕ್ಷಗಾನದ ಭಾಗವತಿಕೆಯ ಪರಂಪರೆಯಲ್ಲಿ ತಮ್ಮ ವಿಶಿಷ್ಟ ಅನುಭವದಿಂದ 'ತೆಂಕಬೈಲು' ಮಟ್ಟು ಒಂದನ್ನು ಸ್ಥಾಪಿಸಿದ ಹೆಗ್ಗಳಿಕೆ. ವೃತ್ತಿ ಮತ್ತು ಹವ್ಯಾಸಿ ರಂಗಭೂಮಿಗೆ ಇವರ ಅನುಭವದ ಕೊಡುಗೆ ಅನನ್ಯ. ಎಪ್ಪತ್ತೈದು ವರುಷದ ಶಾಸ್ತ್ರಿಗಳು ರಂಗದಲ್ಲೀಗಲೂ ಸಕ್ರಿಯರು. ಈ ಸಂದರ್ಭದಲ್ಲಿ 'ಶ್ರೀ ಹನುಮಗಿರಿ ಮೇಳ'ದವರಿಂದ ಮತ್ಸ್ಯಾವತಾರ - ಕನಕಾಂಗಿ ಕಲ್ಯಾಣ' ಪ್ರಸಂಗಗಳ ಬಯಲಾಟ ಜರುಗಲಿದೆ.
No comments:
Post a Comment