Thursday, October 1, 2020

ನೆಚ್ಚಿನ ಗುರು - ತೆಂಕಬೈಲು ಶಾಸ್ತ್ರಿಗಳು




ನೆಚ್ಚಿನ ಗುರು

 ಚಿತ್ರ, ಲೇಖನ :  ಉದಯ ಕಂಬಾರು, ನೀರ್ಚಾಲು

               

ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿಗಳು   ಒಂದು ಕಾಲಘಟ್ಟದಲ್ಲಿ ವೃತ್ತಿಯಾಗಿಯೂ, ಹವ್ಯಾಸಿಯಾಗಿಯೂ ಮಿಂಚಿದ ಭಾಗವತರು. ಈಗಲೂ ಕೂಡಾ. ನನಗೆ ತೆಂಕಬೈಲು ಅಂದಾಗ ಹಿಮ್ಮೇಳ, ಮುಮ್ಮೇಳ ಎಲ್ಲದರಲ್ಲಿಯೂ ಒಂದು ರೀತಿಯ ಭಯ, ಭಕ್ತಿ. ಕಾರಣ, ಅವರಲ್ಲಿರುವ ಪ್ರಸಂಗ ನಡೆ, ಶಿಸ್ತುಬದ್ಧತೆ, ಶ್ರುತಿ-ತಾಳ-ಲಯಗಳಲ್ಲಿ ಖಚಿತತೆ.

                ಅವರ ಅನುಭವ ಅಪಾರ. ಮಾಂಬಾಡಿ ಗುರು ಪರಂಪರೆ. ಓರ್ವ ಕಲಾವಿದ ಹಿಮ್ಮೇಳ, ಮುಮ್ಮೇಳಗಳಲ್ಲಿ ಅನುಭವವನ್ನು ಪಡೆದರೆ  ಅಂತಹ ಕಲಾವಿದ ಪರಿಪೂರ್ಣ. ಜತೆಗೆ ನಾಟ್ಯ, ಸಂಗೀತ, ವಾದ್ಯ - ಇವು ಮೂರೂ ಅತ್ಯಗತ್ಯ. ಇವೆಲ್ಲವನ್ನೂ ಅರಗಿಸಿಕೊಂಡವರು ಶಾಸ್ತ್ರಿಗಳು. ಒಳ್ಳೆಯ ಗುರುಗಳಿಗೆ ನಾನು ಪ್ರೀತಿಯ ಶಿಷ್ಯ ಎನ್ನಲು ಅಭಿಮಾನವಾಗುತ್ತದೆ.

                1984-85ನೇ ಇಸವಿ. ಮಾನ್ಯದಲ್ಲಿ ನಡೆಯುತ್ತಿದ್ದ ಅವರ ತರಗತಿಗೆ ವಿದ್ಯಾರ್ಥಿಯಾದೆ. ಸ್ವ-ಇಚ್ಛೆ ಮತ್ತು ತಂದೆಯವರ ಪ್ರೋತ್ಸಾಹ. ತರಗತಿಯಲ್ಲಿ ನಲವತ್ತು ವಿದ್ಯಾರ್ಥಿಗಳಿದ್ದರು. ನಾನಿಂದು ಚೆಂಡೆ, ಮದ್ದಳೆಯನ್ನು ನುಡಿಸುತ್ತಿದ್ದರೆ ಅದಕ್ಕೆ ಗುರುಗಳು ಕಾರಣ. 

                ತರಗತಿ ಆರಂಭವಾಗುವಾಗ ನಾನು ಭಾಗವತಿಕೆ ಕಲಿಯುವ ಪಂಕ್ತಿಯಲ್ಲಿ ಕುಳಿತುಕೊಳ್ಳುತ್ತಿದ್ದೆ. ನನ್ನೊಂದಿಗೆ ಗೆಳೆಯ ಚೇನಕ್ಕೋಡು ರವಿಶಂಕರ ಇರುತ್ತಿದ್ದರು. ನನಗೆ ಹಾಗೂ ಅವರಿಗೆ ಕೊನೆಗೆ ತರಬೇತಿ. ಕೆಲವೊಮ್ಮೆ ಅಹೋರಾತ್ರಿ ನಡೆಯುತ್ತಿತ್ತು. ನಮ್ಮ ಮೇಲೆ ಗುರುಗಳಿಗೆ ವಿಶ್ವಾಸವಿತ್ತು.

                ಕೆಲವೊಮ್ಮೆ ನಮ್ಮ ತರಗತಿಯ ಬಳಿಕ ನಮ್ಮ ಮನೆಯಲ್ಲಿ ಉಳಿದುಕೊಳ್ಳುತ್ತಿದ್ದರು ತರಬೇತಿಯ ಸಮಯದಲ್ಲಿ ಅವರ ಊಟದ ವ್ಯವಸ್ಥೆಯನ್ನು ನಾನು, ಕೆಲವೊಮ್ಮೆ ಮಾವ ಪಟ್ಟಾಜೆ ವೆಂಕಟ್ರಮಣ ಭಟ್ಟರು (ದಿ.) ನಿರ್ವಹಿಸುತ್ತಿದ್ದೆವು.

                ನಾನು ಚೆಂಡೆ, ಮದ್ದಳೆಯಲ್ಲಿ ಬಹುಶಃ ಅವರ ಪ್ರಥಮ ವಿದ್ಯಾರ್ಥಿ.  ಗುರುಗಳ ಪೂರ್ಣ ಅನುಗ್ರಹದಿಂದ ತೃಪ್ತನಾಗಿದ್ದೇನೆ. ಸುಬ್ರಾಯ ಸಂಪಾಜೆ, ಮೋಹನ ಭಟ್, ರವಿಶಂಕರ ಇವರೆಲ್ಲಾ ಶಾಸ್ತ್ರಿಗಳ ನೆಚ್ಚಿನ ಶಿಷ್ಯರು.

                ಪದ್ಯಾಣ ಪ್ರಶಸ್ತಿಗೆ (2018) ತೆಂಕಬೈಲು ಗುರುಗಳನ್ನು ಆರಿಸಿದ್ದು ಸಂತೋಷ ತಂದಿದೆ. ಮಾಂಬಾಡಿ - ಪದ್ಯಾಣ - ತೆಂಕಬೈಲು ಮೂರು ಮನೆತನಗಳು ಯಕ್ಷಗಾದ ಹೊಕ್ಕುಳ ಬಳ್ಳಿ.

(ತೆಂಕಬೈಲು ಅವರಿಗೆ ಪದ್ಯಾಣ ಪ್ರಶಸ್ತಿ ಪ್ರದಾನ ಸಂದರ್ಭದಲ್ಲಿ ಬಿಡುಗಡೆಗೊಂಡ ಪುಸ್ತಿಕೆಯಿಂದ. – ಸಂಪಾದಕ : ನಾ. ಕಾರಂತ ಪೆರಾಜೆ.... ಪ್ರಕಾಶಕರು : ಪದ್ಯಾಣ ಪ್ರಶಸ್ತಿ ಸಮಿತಿ..... ಇದರ ಕಾರ್ಯದರ್ಶಿ ಸ್ವಸ್ತಿಕ್ ಪದ್ಯಾಣ)

 

 

No comments:

Post a Comment