Thursday, October 1, 2020

ಪದ್ಯಾಣ - ಪದಯಾನ - ಎಸಳು 47


ಯೋಗ - ಯೋಗ್ಯತೆ - ಆಪ್ತತೆ

ಲೇ : ಡಾ. ಎಂ. ಪ್ರಭಾಕರ ಜೋಶಿ

 

          ಪದ್ಯಾಣ - ಕಲೆಯ ನೆಲೆಯಲ್ಲೂ, ವೈಯಕ್ತಿಕವಾಗಿಯೂ ನಮಗೆ, ಅಂದರೆ ನಿಕಟವರ್ತಿಗಳಿಗೆಲ್ಲ ಆಪ್ತತೆ, ಸಾಧನೆ, ಪ್ರೀತಿ. ಒಡನಾಟಗಳನ್ನೆಲ್ಲ ಒಳಗೊಳ್ಳುವ ಶಬ್ದ. ನಾದ, ಗಾನ, ಮಿತ್ರಕೂಟಗಳೆಲ್ಲದರ ಸಮುಚ್ಚಯ. ಇಡಿಯ ಪದ್ಯಾಣ ಮನೆತನಕ್ಕೆ ನಾನೊಬ್ಬ ಆಪ್ತನೆನ್ನಲು ಹೆಮ್ಮೆ. ಹಳ್ಳಿಯ ಬದುಕಿನ ಸ್ವಭಾವ ವೈಶಿಷ್ಟ್ಯಗಳನ್ನು ಇಂದಿಗೂ ಉಳಿಸಿಕೊಂಡವರು ಎಲ್ಲಾ ಪದ್ಯಾಣ ಬಂಧುಗಳು. ಯಕ್ಷಗಾನದ ಉನ್ನತ ಸಂಕೇತಗಳಲ್ಲಿ, ಐಕಾನ್ಗಳಲ್ಲಿ ಪದ್ಯಾಣ ಒಂದು.

          ಯಕ್ಷಗಾನ ಹಿಮ್ಮೇಳದ ವಿಭಾಗಕ್ಕೆ ಇವರದು ದೊಡ್ಡ ಕೊಡುಗೆ. ವೃತ್ತಿನಿರತರಾಗಿಲ್ಲದ ಪದ್ಯಾಣ ಬಂಧುಗಳೂ ಯಕ್ಷಗಾನದಲ್ಲಿ ಸಮರ್ಥರೇ. ಆರ್ವಾಚೀನ ಯುಗದ ಅಗ್ರಗಣ್ಯ ಭಾಗವತರಲ್ಲಿ ಒಬ್ಬರಾಗಿ, ಇದೀಗ ಹಿರಿಯ ಕಲಾವಿದರೆನಿಸುವ ಗಣಪತಿ ಭಟ್ಟರದು - ದೀರ್ಘ ಯಶಸ್ವಿ ಯಾನ. ರಂಗದ ಮೇಲೆ, ರಂಗದ ಹೊರಗೆ ಮತ್ತು ಮನೆಯ ಮಟ್ಟದಲ್ಲಿ ನಾನು ಓರ್ವ ನಿಡುಗಾಲದ ಸಹವರ್ತಿ ಮಿತ್ರ.

          ಅವರನ್ನು ಮೊದಲ ಬಾರಿಗೆ ಕಂಡುದು 1972ರ ಸುಮಾರಿಗೆ - ಸುಳ್ಯದ ಕಲ್ಮಡ್ಕ, ಕೊಲ್ಲಮೊಗ್ರು, ಚೊಕ್ಕಾಡಿಗಳಲ್ಲಿ ನಡೆದ ಕೂಟಗಳಲ್ಲಿ. ಆಗಷ್ಟೇ ಭಾಗವತಿಕೆಯ ಆರಂಭಿಕ ಅಭ್ಯಾಸದ ಬಳಿಕ ಸಾರ್ವಜನಿಕ ಪ್ರದರ್ಶನಗಳಲ್ಲಿ ಅವರು ಕಾಣಿಸಿಕೊಳ್ಳಲಾರಂಭಿಸಿದ ಕಾಲ. ತುಂಬ ಮಧುರವಾದ ಎಳೆಯ ಕಂಠ, ಸ್ವಚ್ಛ ಉಚ್ಛಾರ ಮತ್ತು ಜೀವಂತಿಕೆಗಳಿಂದ ಆಗಲೇ ಗಮನ ಸೆಳೆದಿದ್ದರು.

          ಹೊಸಬನ ಹೆದರಿಕೆ, ಉತ್ಸಾಹ ಎರಡರಿಂದಲೂ ಕೂಡಿದ ಹುಡುಗನ ಭಾಗವತಿಕೆ ಕೇಳುವುದು, ನೋಡುವುದು ಒಂದು ಅನುಭವವಾಗಿತ್ತು. ಕೊಲ್ಲಮೊಗರಿನಲ್ಲಿ ಅವರು ಹಾಡಿದ ಕೃಷ್ಣಸಂಧಾನ ಪ್ರಸಂಗದ ಏನಯ್ಯ ಇಂಥಾದ್ದೇನಯ್ಯ.. ಎಂಬ, ಕೃಷ್ಣನು ದುರ್ಯೋಧನನನ್ನು ಪಚಾರಿಸುವ ಪದ್ಯಗಳ ಅಂದ ಇಂದಿಗೂ ನೆನಪಿನಲ್ಲಿದೆ. ಅದು ಓರ್ವ ಪ್ರತಿಭಾವಂತ ಹೊಸ ಭಾಗವತನ ಆಗಮನವನ್ನು ಸಾರುವಂತಿದ್ದ ಸಂದರ್ಭ.

          ಸುಮಾರು ಅದೇ ಹೊತ್ತಿಗೆ - ಯಕ್ಷಗಾನದಲ್ಲಿ ಪ್ರತಿಭಾವಂತ ತರುಣರ ಒಂದು ಭಾಗವತ ಸಮೂಹವೇ ಕಾಣಿಸಿಕೊಂಡದ್ದು ವಿಶಿಷ್ಟ ವಿದ್ಯಮಾನ. ದಿ. ಕಾಳಿಂಗನಾವಡ, ದಿನೇಶ ಅಮ್ಮಣ್ಣಾಯ, ಪುತ್ತಿಗೆ ರಘುರಾಮ ಹೊಳ್ಳ, ಸುಬ್ರಹ್ಮಣ್ಯ ಧಾರೇಶ್ವರ, ಪೋಳ್ಯ ಲಕ್ಷ್ಮೀನಾರಾಯಣ ಶೆಟ್ಟಿ, ಪುರುಷೋತ್ತಮ ಪೂಂಜ.. ಇವರೆಲ್ಲ ಅದೇ ಸುಮಾರಿಗೆ ಪ್ರವೇಶಿಸಿ ಮುಂದೆ ಬೇರೆ ಬೇರೆ ರೀತಿಗಳಲ್ಲಿ ಯಶಸ್ವಿಗಳಾದರು.

          ಮನೆತನದ ತುಂಬೆಲ್ಲ ಆಟ, ಕೂಟದ ಹಿಮ್ಮೇಳಗಳದ್ದೇ ನಾದ. ಪದ್ಯಾಣ - ಯಕ್ಷಗಾನದಲ್ಲೇ ಮುಳುಗಿದ್ದ, ಆದರೆ ಯಶಸ್ವಿ ಕೃಷಿಕರೂ ಆದ ಒಂದು ಮನೆತನ. ಅಜ್ಜ ಪುಟ್ಟು ನಾರಾಯಣ ಭಟ್ಟರು ಮತ್ತು ಗುರು ಮಾಂಬಾಡಿ (ಅವರೂ ಪದ್ಯಾಣದವರೇ) - ಅಗರಿ ಭಾಗವತದ್ವಯರು - ಮತ್ತು ಶೇಣಿ - ಹೀಗೆ ಗಣಪತಿ ಭಟ್ಟರ ಮೇಲೆ ನಾಲ್ಕು ಅಂಶಗಳ ಗಾಢ ಪ್ರಭಾವ.

          ಮುಂದೆ ಇವರ ಭಾಗವತಿಕೆಯನ್ನು ಮೂರು ಹಂತಗಳಲ್ಲಿ ಗುರುತಿಸಬಹುದು. 1985 ವರೆಗಿನ ಉದಯೋನ್ಮುಖ ಕಾಲ, ಮುಂದೆ ಎರಡು ದಶಕಗಳ ಪ್ರೌಢತೆಯ ಕಾಲ, ಆ ಬಳಿಕ ಪ್ರೌಢ ಹಿರಿಯ ಭಾಗವತರ ಅವಧಿ. 1985-2005ರ ಅವಧಿಯಲ್ಲಿ ಪದ್ಯಾಣರು ಆಟ ಕೂಟಗಳಿಗೆ ಹೊಸಬರ ಪೈಕಿ ಮೊದಲ ಆಯ್ಕೆಯ ಭಾಗವತರಾಗಿದ್ದರು.

          ಇವರ ರಾಗ ಮಂಡನಾ ವಿಧಾನಗಳು ಮುಖ್ಯವಾಗಿ - ಮಾಂಬಾಡಿ ಪದ್ಧತಿಯವು. ಉಚ್ಛಾರ ಚೊಕ್ಕ, ಕಲಾವಿದರ ಜತೆ ಭಾಗವಹಿಸುವ, ಪ್ರದರ್ಶನ ಸ್ಪಂದನ ಒಳ್ಳೆಯ ಗುಣಮಟ್ಟದ್ದು. ಅಗರಿ ಶೈಲಿಯ ಕುರಿತು ಅಪಾರ ಪ್ರೀತಿ. ಅದನ್ನು ಅಣಕವೆನಿಸದ ಅನುಕರಣೆಯಿಂದ ಹಾಡಬಲ್ಲರು. ಅಂತಹ ಒಂದು ಧ್ವನಿಸುರುಳಿ ಬಿಡುಗಡೆಯಾಗಿದೆ. ಪದ್ಯ - ಅರ್ಥ ಮುಂದುವರಿಕೆಯ ರೀತಿ, ಎತ್ತುಗಡೆ ಶೀಘ್ರಜೋಡಣೆ, ಹೊಂದಾಣಿಕೆ, ಹದ ತುಂಬ ಅನುಕೂಲಕರ.

          ಸಂದರ್ಭ ಮತ್ತು ಅರ್ಥಧಾರಿಯ ಧೋರಣೆಯ ಭಾವಾಭಿವ್ಯಕ್ತಿ ವಿಧಾನದ ವ್ಯತ್ಯಾಸ ತಿಳಿದು ಹಾಡುವ ಪದ್ಯಾಣ - ವಿಶಿಷ್ಟ ರೀತಿಯಲ್ಲಿ ಎತ್ತುಗಡೆ ಮಾಡಿದಾಗ, ಪದ್ಯ ಹಾರಿಸುವಾಗ - ಕೂಡಲೇ ಹೊಂದಿಕೊಳ್ಳಬಲ್ಲರು. ಅಂತಹ ಅನೇಕ ಅನುಭವಗಳು ನನಗೂ, ನನ್ನಂತೆ ಇತರ ಸಹ ಕಲಾವಿದರಿಗೂ ಆಗಿವೆ. ಹಿಮ್ಮೇಳದ ಚೆಂಡೆ ಮದ್ದಳೆಗಾರರ ಜತೆ ಆತ್ಮೀಯವಾಗಿ, ಜೀವಂತಿಕೆಯಿಂದ ಒಡನಾಡುತ್ತ ಪ್ರೇರೇಪಿಸುವ, ಅವರಿಂದಲೂ ಒಳ್ಳೆಯ ವಾದನ ಹೊರಹೊಮ್ಮುವಂತೆ ಆಸಕ್ತಿವಹಿಸುವ ಟೀಂಮ್ಯಾನ್ - ಪದ್ಯಾಣ.

          ಹಲವು ಸಾಂಪ್ರದಾಯಿಕ ಪ್ರಸಂಗಗಳ ನಡೆ, ಮಾಹಿತಿಗಳ ಹಿಡಿತ ಅವರಿಗೆ ಚೆನ್ನಾಗಿದೆ. ಈಚೆಗಿನ ವರೆಗೂ ಸ್ವರ ಆಕರ್ಷಣೆ, ಮಾಧುರ್ಯಗಳಲ್ಲಿ - ಪದ್ಯಾಣ ಉತ್ಕೃಷ್ಟ ಮಟ್ಟದಲ್ಲಿದ್ದವರು. ಈಗ ಅನುಭವ, ಪಕ್ವತೆಗಳಿಂದ ತುಂಬಿಸಬಲ್ಲವರು. ದಿ.ಶೇಣಿ ಅವರಿದ್ದ ಕಾಲದಲ್ಲಿ - ಉಳಿದ ಹಿರಿಕಿರಿಯ ಕಲಾವಿದರೂ ಇದ್ದ - ತಾಳಮದ್ದಳೆಗಳಲ್ಲಿ ಇವರು ಅಂದಿನ ಪ್ರಮುಖ ಭಾಗವತರಾಗಿದ್ದವರು. ಅಂದಿನ ದಿನಗಳ ಆ ಒಡನಾಟ, ರಂಗದ ಮೇಲೆ ಮತ್ತು ಹೊರಗೆ ನಡೆದ ವಿನೋದ, ಸ್ವಾರಸ್ಯ, ಗೆಳೆತನದ ಒಡನಾಟಗಳು, ಅಂತೆಯೆ ಸುರತ್ಕಲ್ ಶ್ರೀ ಮಹಮ್ಮಾಯಿ ಮೇಳದ ದಿನಗಳ ಕಲಾವೈಭವಗಳು ಅವಿಸ್ಮರಣೀಯ. ಅಂದಿನ ಸುರತ್ಕಲ್ ಮೇಳ ವೈವಿಧ್ಯಮಯ ಪ್ರತಿಭೆಗಳ ಕಲಾ ಸಂಮೇಳನವಾಗಿತ್ತು. ತಿರುಗಾಟ ಅತ್ಯಂತ ಹಾರ್ದಿಕವಾಗಿತ್ತು.

          ವ್ಯಕ್ತಿಯಾಗಿ - ತುಂಬ ಆತ್ಮೀಯತೆಯ ಮತ್ತು ಹಲವು ವಿಚಾರಗಳಲ್ಲಿ ಮುಗ್ಧ ಸ್ವಭಾವದವರು ಪದ್ಯಾಣ ಗಣಪತಿ ಭಟ್ಟರು. ಯೋಗ್ಯತೆ, ವಿದ್ವತ್ತು, ಪ್ರತಿಭೆಗಳಿಗೆ ತುಂಬ ಗೌರವ ಕೊಡುವವರು. ಎಲ್ಲಾ ಪದ್ಯಾಣ ಬಂಧುಗಳಂತೆ ಒಳ್ಳೆಯ ಅತಿಥೇಯ. ಮಿತ್ರರನ್ನು ಸತ್ಕರಿಸಿದಷ್ಟು, ಆದರಾತಿಥ್ಯ ನೀಡಿದಷ್ಟು ಖುಷಿ, ಇಷ್ಟು ಸಾಲದೆಂಬಂತಹ ಅತೃಪ್ತಿ. ಅವರ ಬಂಧುಗಳು, ಪತ್ನಿ, ಪುತ್ರರು ತುಂಬ ಸಹಕಾರಿಗಳು. ಕುಟುಂಬ ಜೀವನದ, ಹೊಂದಾಣಿಕೆಯ ದಾಂಪತ್ಯದ ಒಂದು ಒಳ್ಳೆಯ ದೃಷ್ಟಾಂತವಾದ ಭಾಗ್ಯಶಾಲಿ - ಗಣಪತಿ ಭಟ್ಟರು. ಯೋಗ್ಯತೆ-ಯೋಗ ಎರಡೂ ಉಳ್ಳ ಭಾಗ್ಯಶಾಲಿ ಕಲಾವಿದ.

          ತೀರಾ ಹೊಂದಾಣಿಕೆಯ, ಯಾರನ್ನೂ ನೋಯಿಸಲು ಇಷ್ಟಪಡದ ಸ್ವಭಾವ. ಇವರ ಗುಣವೂ ಹೌದು, ದೋಷವೂ ಹೌದು. ಹಾಗಾಗಿ ರಂಗದ ಅನಪೇಕ್ಷಿತಗಳನ್ನು ಇವರು ಸಹಿಸುವುದು ಕಾಣುತ್ತದೆ. ಕಟ್ಟುನಿಟ್ಟಿನ ನಿಯಂತ್ರಣ, ಖಡಾಖಂಡಿತ ಆಕ್ಷೇಪವು ನನ್ನಿಂದ ಆಗದ ವಿಚಾರ ಎಂದು ಅವರೇ ಹೇಳುತ್ತಾರೆ. ಬೇಸರದ, ಒಪ್ಪಿಗೆಯಾಗದ ಸಂಗತಿ, ಘಟನೆ ನಡೆದರೆ ತನ್ನೊಳಗೇ ನೊಂದುಕೊಳ್ಳುವ ಸ್ವಭಾವದವರು.

          ಈಚೆಗಿನ ವರುಷಗಳಲ್ಲಿ ಭಾಗವತಿಕೆಯ ರಂಗವಿಧಾನಗಳಲ್ಲಿ ಸರ್ವತ್ರ ಹರಡಿರುವ ಜನಪ್ರಿಯತೆಯ ಹೆಸರಿನ ವಿಕ್ಷೇಪಗಳು, ಟ್ರೆಂಡ್ ಫ್ಯಾಶನ್ಗಳು, ವಿಚಿತ್ರ ರೂಢಿಗಳಾದ ಅಸಮರ್ಪಕ ಚಾಲೂ ಕುಣಿತ, ಆಕಾರವಿಲ್ಲದ ಪುನರಾವರ್ತನಾ ವಿಧಾನ, ವ್ಯಕ್ತಿಯನ್ನು ಮೆರೆಸುವ ಕ್ರಮಗಳು - ಮೊದಲಾದ ಅ-ಕಲಾತ್ಮಕವಾದ ಅಂಶಗಳಿಗೆ ಇವರೂ ಅನಿವಾರ್ಯವಾಗಿ ಬಲಿಯಾಗಿದ್ದಾರೆ. ಅದಕ್ಕೆಲ್ಲ ಬೆಂಬಲ ನೀಡಿ ಪ್ರೋತ್ಸಾಹಿಸುವುದು ಭಾಗವತಿಕೆ ಎಂದಾಗಿರುವ ಈ ದಿನಗಳಲ್ಲಿ - ಹಳೆಯ ಶೈಲಿಯೊಂದರ ಪ್ರತಿನಿಧಿಯಾದ, ಅದನ್ನು ಸೊಗಸಾಗಿ ತೋರಿಸಬಲ್ಲ ಪದ್ಯಾಣರು, ಅದರಿಂದ - ಅನಪೇಕ್ಷಿತ ವಿಧಾನಗಳಿಂದಾಗಿ ತೊಂದರೆ, ಇರಿಸುಮುರುಸು ಅನುಭವಿಸಿದ್ದಾರೆ. ವಿಕಾರವೇ ವಿಕಾಸವೆನಿಸುವ ಸಾಂಸ್ಕೃತಿಕ ಸನ್ನಿವೇಶದಲ್ಲಿ ಈ ಅಸಹಾಯಕತೆ ಹಲವರ ಸಮಸ್ಯೆ.

          ನಾಲ್ಕು ದಶಕಕ್ಕೂ ಮಿಕ್ಕಿ ಹಾಡುತ್ತಾ, ಮೂರು ತಲೆಮಾರಿನ ಕಲಾವಿದರನ್ನು ಕುಣಿಸಿರುವ ಲಕ್ಷಾಂತರ ಜನರ ಮನ ಮುಟ್ಟಿ ರಂಜಿಸಿರುವ ನಮ್ಮ ಭಾಗವತ ಗಣಪತಿ ಭಟ್ಟರಿಗೆ - ಈಗ ಹಿರಿತನ ಮಾನ-ಸಂಮಾನಗಳ ಕಾಲ.

          ಇನ್ನೂ ಹಲವು ವರುಷ ಪದ್ಯಾಣ ಪದ ನಾವು ಕೇಳುತ್ತಿರಬೇಕು. ಯಾನ ನಡೆಯುತ್ತಿರಬೇಕು. ತೆಂಕುತಿಟ್ಟಿನ ಶೈಲಿಯ ಉಜ್ಜೀವನಕ್ಕೆ, ಸ್ಥಾಪನೆಗೆ ಅವರ ಅನುಭವ ನೆರವಾಗಬೇಕು.

ಚಿತ್ರ :

 

No comments:

Post a Comment