(ಗಂಡುಗತ್ತಿನ ಪುರುಷ ವೇಷಧಾರಿ - ಸಂಪಾಜೆ ಶೀನಪ್ಪ ರೈಯವರು Sampaje Sheenappa Rai ಇಂದು (13-7-2021) ವಿಧಿವಶರಾದರು. ಅಗಲಿದ ಚೇತನಕ್ಕೆ ಕಂಬನಿ. ದಿನಾಂಕ 9-12-2016ರ ಪ್ರಜಾವಾಣಿಯ ನನ್ನ ‘ದಧಿಗಿಣತೋ’ ಅಂಕಣದಲ್ಲಿ ಶೀನಪ್ಪಣ್ಣನವರ ಲೇಖನ ಬರೆದಿದ್ದೆ. ಅವರು ದೂರವಾದ ಈ ದಿವಸ ಅವರ ನೆನಪಿಗಾಗಿ ಆ ಲೇಖನವನ್ನು (ಐದು ವರುಷದ ಮೊದಲಿನ) ಯಥಾವತ್ ನೀಡಿದ್ದೇನೆ. ಈ ಬರೆಹದ ಮೂಲಕ ಅವರಿಗೆ ಅಕ್ಷರ ನಮನಗಳು)
2016 ಜೂನ್ ಏಳರಂದು ಸಂಪಾಜೆ ಶೀನಪ್ಪ ರೈಗಳಿಗೆ ಎಪ್ಪತ್ತಮೂರರ ಹುಟ್ಟುಹಬ್ಬ. ಅವರ ಯಕ್ಷ ತಿರುಗಾಟಕ್ಕೆ ಈಗ ಅರುವತ್ತರ ಸೌರಂಭ. ಬಹುಶಃ ವರ್ತಮಾನದ ತೆಂಕುತಿಟ್ಟು ಯಕ್ಷಗಾನದ ರಂಗದಲ್ಲಿ ಇಷ್ಟು ದೀರ್ಘ ಕಾಲ ತಿರುಗಾಟ ಮಾಡಿದವರಲ್ಲಿ ರೈಗಳು ಮೊದಲಿಗರೆಂದರೆ ಉತ್ಪ್ರೇಕ್ಷೆಯಾಗಲಾರದು. ಬಯಲಲ್ಲಿ ಆಡುವ ವಯಸ್ಸಿನಲ್ಲಿ ಬಯಲಾಟದ ವೇದಿಕೆಯನ್ನೇರಿ 'ಆಟ'ವಾಡಿದವರು. ನಾಲ್ಕನೇ ತರಗತಿಗೆ ನಾಲ್ಕು ಗೋಡೆಯ ಬಂಧಿಯ ಕಲಿಕೆ ನಿಲುಗಡೆ. ಸಮಾಜ, ಬದುಕು, ಸಜ್ಜನರ ಸಹವಾಸದಿಂದ ಕಲಿತುದು ಅಪಾರ. ಹಾಗಾಗಿ ಶೀನಪ್ಪ ರೈಗಳು ಸರ್ವಮಾನ್ಯರು.
ಒಂದು ಕಾಲಘಟ್ಟದ ರಂಗದಲ್ಲಿ 'ಹಿರಣ್ಯಾಕ್ಷ, ಇಂದ್ರಜಿತು, ರಕ್ತಬೀಜ' ಪಾತ್ರಗಳು ಶೀನಪ್ಪಣ್ಣನ ಮನದೊಳಗೆ ಇಳಿದು ನಿಬ್ಬೆರಗಾಗಿ ನೋಡುತ್ತಿದ್ದುವು! ಪಾತ್ರಾಭಿವ್ಯಕ್ತಿಯ ಅಬ್ಬರಕ್ಕೆ ಅಬ್ಬರದ ಪಾತ್ರಗಳು ಕೈಕಟ್ಟಿ ನೋಡುತ್ತಿದ್ದುವು! ಖಳ ಪಾತ್ರಗಳು 'ನಾವಿಷ್ಟು ಕ್ರೂರಿಗಳೇ' ಎಂದು ರೈಗಳನ್ನು ಪ್ರಶ್ನಿಸುತ್ತಿದ್ದುವು! ಪಾತ್ರ ಮುಗಿಸಿ ರಂಗದಿಂದ ನಿರ್ಗಮಿಸಿದರೂ ಆ ಪಾತ್ರಗಳು ರಂಗದಲ್ಲೆಲ್ಲಾ ಕುಣಿದಾಡಿದಂತೆ, ಅಬ್ಬರಿಸಿದಂತೆ ಒಂದಷ್ಟು ಹೊತ್ತು ಕಾಣುತ್ತಿರಬೇಕಾದರೆ ರೈಗಳ ಪಾತ್ರವು ಊರಿದ ಛಾಪಿನ ಗಾಢತೆಯನ್ನು ಅರ್ಥಮಾಡಿಕೊಳ್ಳಬಹುದು.
ಎರಡೂವರೆ ದಶಕದ ಹಿಂದೆ 'ಹಿರಣ್ಯಾಕ್ಷ ವಧೆ' ಪ್ರಸಂಗದ ಜೋಡಾಟ ನೋಡಿದ ನೆನಪಿನ್ನೂ ಹಸಿಯಾಗಿದೆ. ಒಂದು ರಂಗದಲ್ಲಿ ಸಂಪಾಜೆಯವರ ಹಿರಣ್ಯಾಕ್ಷ, ಇನ್ನೊಂದರಲ್ಲಿ ಸೂರಿಕುಮೇರು ಗೋವಿಂದ ಭಟ್. ಇಬ್ಬರೂ ಸರಿಸಮಾನರು. ಇಬ್ಬರ ನಡೆಯಲ್ಲೂ ಎರಕ. ಶಾರೀರದಲ್ಲೂ ಪೈಪೋಟಿ. ರಂಗಚಲನೆಯಲ್ಲಿ ಮಾನಸಿಕವಾಗಿ ಸ್ಪರ್ಧೆಯಂತೆ ಗೋಚರಿಸಿದರೂ ಇಬ್ಬರೊಳಗೆ ಅದ್ಯಾವುದೋ ಅವ್ಯಕ್ತ ಒಪ್ಪಂದ. ಎರಡೂ ಪಾತ್ರಗಳು ಒಂದೇ ಸರಳರೇಖೆಯಲ್ಲಿ ಓಡಾಡಿದ ಅನುಭವ. ಜೋಡಾಟ ಮುಗಿದ ಬಳಿಕ ಎರಡೂ ಪಾತ್ರಗಳು ಪ್ರೇಕ್ಷಕರನ್ನು ಹಿಡಿದಿಟ್ಟಿದ್ದುವು. ಪರಿಣಾಮದ ಕುರಿತು ಎಚ್ಚರ ಮತ್ತು ಪಾತ್ರಗಳು ಎಲ್ಲೂ ಸೋಲಬಾರದೆನ್ನುವ ಬೌದ್ಧಿಕ ಪಕ್ವತೆಗಳು ಇಬ್ಬರಲ್ಲೂ ಇದ್ದುದರಿಂದ ಕಾಲು ಶತಮಾನದ ಬಳಿಕವೂ ಆ ಪ್ರದರ್ಶನ ನೆನಪಿನಲ್ಲಿ ಉಳಿದಿದ್ದುವು. ಆಗ ರೈಗಳಿಗೆ ಸುಮಾರು ನಲವತ್ತೆಂಟರ ಹರೆಯ ಇದ್ದಿರಬಹುದು.
ಈಗ ಎಪ್ಪತ್ತಮೂರು ದಾಟಿತು. ದೇಹ ಮಾಗಿದೆ. ತಿರುಗಾಟದ ಪಕ್ವತೆಯು ರಂಗಚಲನೆಯಲ್ಲಿ ಗೋಚರವಾಗುತ್ತದೆ. ಮೊದಲಿನ ಹೊಂತಕಾರಿ ಬಲುಮೆ ಇಲ್ಲದಿದ್ದರೂ ಪಾತ್ರಸ್ವಭಾವ, ಅಭಿವ್ಯಕ್ತಿಯಲ್ಲಿ ಹೊಂತಕಾರಿ ಭಾವ ಇಣುಕುತ್ತಲೇ ಇರುತ್ತದೆ. ಕಿರೀಟ ವೇಷಕ್ಕೆ ಇರಬೇಕಾದ ಸ್ಪಷ್ಟ ಮತ್ತು ನಿಖರ ನಡೆಗಳು ರೈಗಳಲ್ಲಿ 'ಲೆಕ್ಕಾಚಾರ' ರೂಪದಲ್ಲಿ ಜೀವಂತವಾಗಿದೆ. ಹಾಗಾಗಿ ಪಾತ್ರ ಎಲ್ಲೂ ಸೋಲುವುದಿಲ್ಲ. ಅವರು ಪಾತ್ರಗಳಿಗೆ ಮೂಡಿಸಿದ ಗತ್ತುಗಳಿಗೆ ಇನ್ನೂ ಏರು ಜವ್ವನವಿದೆ. ಪೌರಾಣಿಕ ಪಾತ್ರವೊಂದು ಮೂಡಿಸಬೇಕಾದ ಒಟ್ಟೂ ಪರಿಣಾಮದ ಸಾರಸರ್ವಸ್ವ ಏನಿದೆಯೋ ಅವೆಲ್ಲವೂ ಅವರಲ್ಲಿ ಕಾಣಬಹುದು.
ಪಾತ್ರ ಪ್ರವೇಶದಲ್ಲೇ ಅನಾವರಣಗೊಳ್ಳುವ ಗಂಡು ಗತ್ತಿನ ಹೆಜ್ಜೆಗಳು. ಆ ಹೆಜ್ಜೆಗಳಲ್ಲಿ ರೈಗಳ ತಪಸ್ಸಿದೆ. ಆರು ದಶಕದ ಸಾಧನೆಯಿದೆ. ಆ ಹೆಜ್ಜೆಗಳು ಎಂದೂ ರೈಗಳನ್ನು ವಾಲಿಸಿಲ್ಲ, ಬೀಳಿಸಿಲ್ಲ. ಹೆಜ್ಜೆಗಳ ನಂಬುಗೆಗೆ ರೈಗಳು ಎಂದು ದ್ರೋಹ ಬಗೆದಿಲ್ಲ. ಹಾಗಾಗಿ ರೈಗಳ ಪಾತ್ರಗಳೆಲ್ಲವೂ ಗಟ್ಟಿ. ಪಾತ್ರವಾಗಿ 'ತಾನೇನು ಮಾಡುತ್ತೇನೆ ಮತ್ತು ತಾನೇನು ಮಾಡಬೇಕು' ಎನ್ನುವ ಎಚ್ಚರವೇ ಅವರಿಗೆ ತಾರಾಮೌಲ್ಯ ತಂದು ಕೊಟ್ಟಿತು.
ವಯಸ್ಸಿಗೆ ಮೀರಿದ ಮಾತುಕತೆ, ಬೌದ್ಧಿಕತೆಯನ್ನು ಮೀರಿದ ವಿಮರ್ಶೆ,
ಪಾತ್ರವೊಂದನ್ನು ಹೇಗೆ ಮಾಡಿದರೂ ನಡೆಯುತ್ತದೆ ಎನ್ನುವ ಮನಃಸ್ಥಿತಿಯ ನೂರಾರು ಮನಸ್ಸುಗಳನ್ನು ತಿರುಗಾಟದುದ್ದಕ್ಕೂ ನೋಡಿದ್ದಾರೆ. ಮನದಲ್ಲಿ ನಕ್ಕಿದ್ದಾರೆ. 'ಅಯ್ಯೋ' ಎಂದು ಮರುಗಿದ್ದಾರೆ. ಯಕ್ಷಗಾನಕ್ಕೂ ಒಂದು ಚೌಕಟ್ಟಿದೆ. ಆ ಚೌಕಟ್ಟಿನೊಳಗೆ ರಂಗದ ಪಠ್ಯವಿದೆ. ಮೊದಲು ಅದನ್ನು ಓದಲು ಕಲಿತುಕೊಳ್ಳಬೇಕು. ತಿಳಿದುಕೊಳ್ಳಬೇಕು. ಆಗ ಎಲ್ಲವೂ ಅರ್ಥವಾಗುತ್ತದೆ, ಎಂದು ಮಾರ್ಮಿಕವಾಗಿ ಹೇಳಿದ ನೆನಪು ಕಾಡುತ್ತದೆ.
ಎಲ್ಲಾ ವಿಧದ ಕಿರೀಟ ವೇಷಗಳನ್ನು ಆಯಾಯ ಪಾತ್ರದ ಸ್ವಭಾವಕ್ಕೆ ಚಿತ್ರಿಸುವುದು ರೈಗಳ ವಿಶೇಷತೆ. ಹೆಚ್ಚು ರಂಗ ಜಾಣ್ಮೆ ಬೇಕಾದ ಕಿರಾತಾರ್ಜುನ ಪ್ರಸಂಗದ ಅರ್ಜುನ,
ಅತಿಕಾಯ... ಪಾತ್ರಗಳ ಸ್ವಭಾವಗಳನ್ನು ಅರಿತು ಅಭಿವ್ಯಕ್ತಿ. ಉದಾಸೀನ ಮಾಡದ ಮುಖವರ್ಣಿಕೆ. ಸಹ ಕಲಾವಿದರು ಹೊಂತಕಾರಿಗಳಾದರೆ ಅವರ ರಂಗಕ್ರಿಯೆಗೆ ತೊಡಕಾಗದಂತೆ ಎಚ್ಚರ. ಕೆಲವೊಮ್ಮೆ, ಕೆಲವು ಕ್ಷಣ ಅಂತಹ ಸಂದರ್ಭ ಬಂದಾಗ ಅವರ ವಯಸ್ಸು ಹಿಂದಕ್ಕೋಡುತ್ತದೆ! ಆದರೆ ದೇಹ ಮಾತ್ರ ವೇಗಕ್ಕೆ ಮಿತಿಯನ್ನು ಹಾಕುತ್ತವೆ!
ಶೀನಪ್ಪ ರೈಗಳಲ್ಲಿ ಮುಖ್ಯವಾಗಿ ಗಮನಿಸಬೇಕಾದ್ದು ಅವರಲ್ಲಿ ಪ್ರತ್ಯೇಕ ಗುಣವಾಗಿ ಎದ್ದು ಕಾಣುವ ಸಜ್ಜನಿಕೆ, ಸರಳತೆ.
ಬಾಗುವ ಗುಣ. ಬೀಗದ ವ್ಯಕ್ತಿತ್ವ. ಕಲಾವಿದರನೇಕರಲ್ಲಿ ಇನ್ನೂ ಪಕ್ವಗೊಳ್ಳಬೇಕಾದ ಈ ಎರಡು ಗುಣಗಳು ಶೀನಪ್ಪ ರೈಗಳಲ್ಲಿ ಸ್ವ-ಭಾವವಾಗಿ ಅವರನ್ನು ಎತ್ತರಕ್ಕೇರಿಸಿವೆ. ಮಾತನಾಡುವ ವ್ಯಕ್ತಿ ಮತ್ತು ತಾನು ಮಾನಸಿಕವಾಗಿ ಎಷ್ಟು ಅಂತರದಲ್ಲಿರಬೇಕು ಎನ್ನುವ ಮಾಪಕ ಇದೆಯಲ್ಲಾ ಅದು ಬದುಕು ಕಲಿಸಿದ ಬದುಕಿನ ಪಾಠ. 'ವಿದ್ಯೆಗೆ ವಿನಯವೇ ಭೂಷಣ' - ಹಿರಿಯರ ಮಾತು ರೈಗಳಲ್ಲಿ ಸಾಕಾರಗೊಂಡಿದೆ.
ಯಕ್ಷಗಾನ ರಂಗದಲ್ಲಿ ನನ್ನ ಬೆಳವಣಿಗೆಯ ಯಶಸ್ಸು ಕೀರ್ತಿಶೇಷ ಕೀಲಾರು ಗೋಪಾಲಕೃಷ್ಣಯ್ಯರಿಗೆ ಸಲ್ಲಬೇಕು. ಮಗುವಿನಂತೆ ನೋಡಿಕೊಂಡಿದ್ದಾರೆ. ನನ್ನ ಏಳ್ಗೆಯ ಶಿಲ್ಪಿ ಅವರು, ಎಂದು ವಿನೀತವಾಗಿ ಒಮ್ಮೆ ಹೇಳಿಕೊಂಡಿದ್ದರು. ಸಾಗಿ ಬಂದ ಪಥವನ್ನು ಮರೆಯದ ಸಜ್ಜನಿಕೆಯು ಅವರಲ್ಲಿ ವಿನೀತತೆಯನ್ನು ಹುಟ್ಟುಹಾಕಿದೆ. ಅಹಂಕಾರವನ್ನು ಹೊಸಕಿ ಹಾಕಿದೆ. ಸಮಾಜ, ಕಲೆ ಮತ್ತು ಇದರಿಂದ ನಾವು ಪಡೆದ ಸಂಸ್ಕಾರ - ಇವಿಷ್ಟು ವ್ಯಕ್ತಿಯೊಬ್ಬನ ಉತ್ಕರ್ಷಕ್ಕೆ ಸಹಕಾರಿಯಾಗುತ್ತದೆ ಎಂದಾದರೆ ನಿಜಕ್ಕೂ ಗ್ರೇಟ್ ಅಲ್ವಾ. ಶೀನಪ್ಪ ರೈಗಳು ಈ ನೆಲೆಯಲ್ಲಿ ಭಾಗ್ಯವಂತರು.
2014ನೇ ಇಸವಿ. ಸಂಪಾಜೆಯ ಯಕ್ಷೊತ್ಸವ ಸಂದರ್ಭ. ಅದೇ ದಿವಸ ಅವರಿಗೆ ಬೆಂಗಳೂರಿನಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ. ಪ್ರಶಸ್ತಿ ಸ್ವೀಕರಿಸಿ ಸಂಪಾಜೆಗೆ ಮರಳಿದಾಗ ಪ್ರದರ್ಶನ ನಡೆಯುತ್ತಿದ್ದು. ಪ್ರದರ್ಶನ ಮಧ್ಯದಲ್ಲಿ ಆಯೋಜಕರಿಂದ ಶೀನಪ್ಪ ರೈಗಳಿಗೆ ಅಭಿನಂದನೆ. ಈ ಗೌರವವನ್ನು ಸ್ವೀಕರಿಸಿ ಪ್ರೇಕ್ಷಕರಿಗೆ ತಲೆಬಾಗಿದಾಗ ಇಡೀ ಪ್ರೇಕ್ಷಕ ಗಡಣ ಕರತಾಡನದಿಂದ ಶೀನಪ್ಪ ರೈಯವರನ್ನು ಅಭಿನಂದಿಸಿದ ಸಂದರ್ಭದಲ್ಲಿ ರೈಗಳನ್ನು ಹತ್ತಿರದಿಂದ ಗಮನಿಸಿದ್ದೇನೆ, ಆನಂದದ ಭಾಷ್ಪದಿಂದ ಕಣ್ಣು ತೋಯ್ದಿತ್ತು. ಈ ಘಟನೆಗೆ ಸಾಕ್ಷಿಯಾದ ನನಗೂ ಖುಷಿಯ ಅನುಭವ.
ಅವರ ಹುಟ್ಟೂರು ಸಂಪಾಜೆಯ ಕೀಲಾರಿನ ಮಾದೇಪಾಲು. ಪ್ರಸ್ತುತ ಸುರತ್ಕಲ್ಲಿನಲ್ಲಿ ವಾಸ. ಮಡದಿ ಗಿರಿಜಾವತಿ. ಜಯರಾಮ, ರೇವತಿ, ರಾಜು - ಮಕ್ಕಳು. ಕುಂಡಾವು, ವೇಣೂರು, ಇರುವೈಲು, ಸೌಕೂರು, ಚೌಡೇಶ್ವರಿ, ಕಟೀಲು, ಎಡನೀರು, ಹೊಸನಗರ ಮೇಳಗಳಲ್ಲಿ ಸೇವೆ ಸಲ್ಲಿಸಿ, ಪ್ರಕೃತ ಎಡನೀರು ಯಕ್ಷಗಾನ ಮಂಡಳಿಯಲ್ಲಿ ತಿರುಗಾಟ ಮಾಡುತ್ತಿದ್ದಾರೆ. ರೈಗಳು ಯಕ್ಷಗಾನ ವ್ಯವಸಾಯದ ಆರುವತ್ತು ವರುಷದ ಖುಷಿಯಲ್ಲಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿಯೂ ಸೇರಿದಂತೆ ಹಲವಾರು
ಪ್ರತಿಷ್ಠಿತ ಪ್ರಶಸ್ತಿಗಳಿಂದ ಪುರಸ್ಕೃತರು.
ಒಬ್ಬ ಕಲಾವಿದನ ವ್ಯಕ್ತಿತ್ವದ ಕುರಿತು ಬರೆಯುವಾಗ ಮೂರ್ನಾಲ್ಕು ಪ್ಯಾರಾದಲ್ಲಿ ಲೇಖನಿ ನಿಂತುಬಿಡುತ್ತದೆ. ಆದರೆ ಶೀನಪ್ಪಣ್ಣನ ವ್ಯಕ್ತಿತ್ವದ ಕುರಿತು ಬರೆಯುತ್ತಿದ್ದಾಗ ಬಲವಂತದಿಂದ ಪೂರ್ಣವಿರಾಮ ಇಡಬೇಕಾದ ಪರಿಸ್ಥಿತಿ! ಅದು ಅವರು ರೂಪಿಸಿದ ಭೂಮ ವ್ಯಕ್ತಿತ್ವ.
(ಚಿತ್ರಗಳು : ರಾಮ್ ನರೇಶ್ ಮಂಚಿ)
No comments:
Post a Comment