Tuesday, October 12, 2021

ಸ್ವ-ನಿರ್ಮಿತ ಶೈಲಿಗೆ ಹೊಸೆದ ಮನೆತನ


(4-8-2017ರ ಪ್ರಜಾವಾಣಿಯಲ್ಲಿ ಪ್ರಕಟವಾದ ಲೇಖನ)

ನಾಲ್ಕು ದಶಕದ ಹಿಂದಿನ ದಿನಮಾನಗಳು. ಪೆರಾಜೆಯಲ್ಲಿ ಯಕ್ಷಗುರು ಪ್ರಕಾಶ್ಚಂದ್ರರ ಗುರುಕುಲದಲ್ಲಿ ರೂಪುಗೊಳ್ಳುತ್ತಿರುವ ಕಲಾವಿದರನ್ನು ಕಂಡಾಗ ಅದೇನೋ ಆನಂದ. ಜತೆಗೆ ಅತ್ತಿತ್ತ ತಿರುಗಾಡುವ 'ಸಣ್ಣ ಮೇಳ'ವೂ ಸಕ್ರಿಯವಾಗಿತ್ತು. ಮೇಳಕ್ಕೆ ದಾಸರಬೈಲು ಚನಿಯ ನಾಯ್ಕರು ಭಾಗವತರು. ಮದ್ದಳೆಗೆ ಕಲ್ಮಡ್ಕದ ಗೋಳ್ತಾಜೆಯ ಗಣಪತಿ ಭಟ್. ಸ್ಫುರದ್ರೂಪಿ ಯುವಕ. ಸರಳ ಉಡುಗೆ. ಮುದುಡಿ ಮುದ್ದೆಯಾಗುವ ಸ್ವಭಾವ.

ಚನಿಯರಿಗೆ ಗಣಪತಿ ಭಟ್ಟರ ಮದ್ದಳೆ, ಚೆಂಡೆ ಸಾಥ್. ನಾಯ್ಕರ ಮತ್ತು ಪೆರಾಜೆಯ ಹಿರಿಯರ ಕಲಾವಿದರ  ಪರಿಚಯವಿತ್ತಷ್ಟೇ. ಯುವಕ ಚೆಂಡೆ, ಮದ್ದಳೆ ಎರಡರಲ್ಲೂ ಕೈಯಾಡಿಸುವ ಕೈಚಳಕವು ವಿಶೇಷವಾಗಿ ಕಂಡಿತ್ತು. ಯಕ್ಷಗಾನದ ಮೊದಲಾಕ್ಷರವೇ ಅರಿಯದ ನನಗದು ಸೋಜಿಗವಾಗಿತ್ತು. ಹಲವು ಬಾರಿ ಕೂಟ, ಆಟಗಳಲ್ಲಿ ಅವರನ್ನು ನೋಡಿದ್ದೆ.

ಒಂದಷ್ಟು ಸಮಯದ ಬಳಿಕ ಯಕ್ಷಗಾನ ಅಂಟಿತು. ಮೇಳಗಳ ಆಟಗಳನ್ನು ನೋಡುವ ಪರಿಪಾಠ ರೂಢಿಸಿಕೊಂಡೆ. ಹೊತ್ತಲ್ಲಿ ಸುರತ್ಕಲ್ ಮೇಳವು ಮಂಗಳೂರಿನ ನೆಹರೂ ಮೈದಾನದಲ್ಲಿ ಟೆಂಟ್ ಹಾಕಿತ್ತು.  ಐದೋ ಆರು ರೂಪಾಯಿಯ ಟಿಕೇಟ್ ಪಡೆದು ಟೆಂಟಿನೊಳಗೆ ಪ್ರವೇಶಿಸುವಾಗ ರಂಗದ ಪಡಿಮಂಚದಲ್ಲಿ ಗಣಪತಿ ಭಟ್ ಭಾಗವತಿಕೆ ಮಾಡುತ್ತಿದ್ದರು. ಅರೆ... ಇವರಿಗೆ ಹಾಡಲು ಬರುತ್ತದಾ? ಬೆರಗಿನಲ್ಲೇ ಬೆಳಗು ಮಾಡಿದ್ದೆ.

ಯುವಕ ಮನೆತನವೊಂದಕ್ಕೆ ಪರ್ಯಾಯ ಹೆಸರಾಗಿ ರೂಪುಗೊಂಡ ಬಗೆ ಅನನ್ಯ. ಅಂದಿನ ಗಣಪತಿ ಭಟ್, ಯಕ್ಷಗಾನ ಕಂಡ ಪದ್ಯಾಣ ಗಣಪತಿ ಭಟ್. ಯಕ್ಷಗಾನ ಮೇರು ಭಾಗವತ. ಸ್ವ-ನಿರ್ಮಿತ ಗಟ್ಟಿ ಯಕ್ಷಧ್ವನಿ. ಬೆಳೆದು ಹರಡಿದ ಆಲದ ಮರ. ಹಿರಿಯರೊಂದಿಗೆ ಪಳಗಿದ ಪ್ರತಿಭೆ. ಅಬ್ಬಾ.. ಅದೇನು ಸ್ವರ. ಯಕ್ಷರಾತ್ರಿಗಳ ಅಬ್ಬರಕ್ಕೆ ಸೊಗಸನ್ನು ತಂದರು. ಸ್ವರ ಮಾತ್ರದಿಂದಲೇ ರಾತ್ರಿಗಳ ಸೊಬಗಿಗೂ ಕಾರಣರಾದರು.

ಹಿರಿಯರ ಹಿಡಿತಕ್ಕೆ ಸಿಕ್ಕದ ಬಾಲ್ಯ. ಔದಾಸೀನ್ಯದ ಶಾಲಾ ಕಲಿಕೆ. ಮನೆಯವರಿಗಿಂತಲೂ ಆಪ್ತರೇ ಸರ್ವಸ್ವ. ಇಡೀ ಗ್ರಾಮವೇ ಗುರುತು ಮಾಡುವಂತಹ ವ್ಯಕ್ತಿತ್ವ. ಈಗ..? ಅಂದು ಗುರುತು ಹಿಡಿವ ರೀತಿಯೇ ಬೇರೆ. ಇಂದು ನೋಡುವ ಮನಃಸ್ಥಿತಿಯೇ ಬೇರೆ. ಇದಕ್ಕೆ ಕಾರಣ, ಗುರು ಮಾಂಬಾಡಿ ನಾರಾಯಣ ಭಾಗವತರು. ಧರ್ಮಸ್ಥಳದ ಲಲಿತ ಕಲಾ ಕೇಂದ್ರದಲ್ಲಿ ಭಾಗವತಿಕೆಯನ್ನು ಕಲಿತರು. ಚೆಂಡೆ, ಮದ್ದಳೆಯ ಕಲಿಕೆಯನ್ನು ಆರ್ಜಿಸಿದರು. ಮುಂದೆ 'ಭಾಗವತ'ರಾದರು. ಅವರ ಕಲಿಕಾ ದಿನಮಾನಗಳ ನೆನಪುಗಳನ್ನು ಅವರೇ ಹೇಳಬೇಕು.

                                              ************          ***********

ಶ್ರೀ ಧರ್ಮಸ್ಥಳ ಯಕ್ಷಗಾನ ಲಲಿತಕಲಾ ಕೇಂದ್ರದ ಮೊದಲ ದಿನ. ಹಿಮ್ಮೇಳ ಕಲಿಕೆಗೆ ಶ್ರೀಕಾರ. ನನಗೆ ಸಂಗೀತದ ಪಾಠ ಆಗದಿದ್ದರೂ ಮನೆಯ ಸಂಗೀತದ ನಾದದ ವಾತಾವರಣದಿಂದ ಪ್ರಭಾವಿತನಾಗಿದ್ದೆ. ನನ್ನ ಚಿಕ್ಕಪ್ಪ ಸಂಗೀತ ವಿದ್ವಾಂಸ. ನಿತ್ಯ ಸಾಧಕ. ಅವರ '..ರಿ..........ನಿ....' ಆಲಾಪನೆಯನ್ನು ಗುಣುಗುಣಿಸುತ್ತಾ ಅದರ ಸಂಚಾರವು ಮನಸ್ಸಿನೊಳಗೆ ನೆಲೆಯೂರಿತ್ತು.  ಇದು ನನಗೆ ಉಪಯೋಗಕ್ಕೆ ಬಂತು. ಗುರುಗಳು '....' ಹೇಳಿಸುತ್ತಿದ್ದರು. ನನಗದು ರೂಢಿಯಾದ್ದರಿಂದ ತಕ್ಷಣ ಒಪ್ಪಿಸುತ್ತಿದ್ದೆ.

ಎಲ್ಲರಿಗೂ ಏಕ ರೀತಿಯ ಪಾಠ. ಒಬ್ಬ ಬೇಗ ಕಲಿತರೆ ಆತನಿಗೆ ಮುಂದಿನ ಪಾಠ ಹೇಳುತ್ತಿರಲಿಲ್ಲ. ಎಲ್ಲರಿಗೂ ಒಂದು ಪಾಠವು ಕರಗತವಾದ ಬಳಿಕವೇ ಮುಂದಿನ ತಾಳ, ಪದ್ಯ. ಮಾಂಬಾಡಿ ಗುರುಗಳು ಕಲಿಸುವ ರೀತಿ ಅಪೂರ್ವ, ಅನನ್ಯ. ಕಲಿಸಿದ್ದಷ್ಟೂ ಗಟ್ಟಿ. ಪದ್ಯಗಳಲ್ಲಿರುವ ಅಕ್ಷರ, ಅಕ್ಷರವು ನಿಲ್ಲಬೇಕಾದ ತಾಳದ ಜಾಗದ ನಿಖರವನ್ನು ಕಲಿಸುವ ಜಾಣ್ಮೆ ಮಾಂಬಾಡಿಯವರಿಗೆ ಸಿದ್ಧಿಸಿತ್ತು. ಉದಾ: 'ಅಂಬುರುಹದಳನೇತ್ರೆ....' ನಾಲ್ಕು ಸಾಲಿನ ಭಾಮಿನಿಯನ್ನು ನಾಲ್ಕು ಉಸಿರಿನಲ್ಲಿ ಹೇಳಬೇಕು. ಒಮ್ಮೆ ಉಸಿರು ತೆಕ್ಕೊಂಡು ಬಿಡುವ ಕಾಲ ಇದೆಯಲ್ಲಾ ಅದರಲ್ಲಿ ಮೊದಲ ಚರಣ ಹಾಡಬೇಕು. ಅದರಂತೆ ಇಡೀ ಭಾಮಿನಿಯು ನಾಲ್ಕು ಉಸಿರಿನೊಳಗೆ ಒಂದೇ ರಾಗದಲ್ಲಿ ಬಂಧಿಯಾಗಬೇಕು. ಹಾಗೆ ಹೇಳಿದರೆ ಅದು ಯಕ್ಷಗಾನ.

ನಾಟಿ, ಕಾಂಭೋದಿ, ಭೈರವಿ, ಪೀಲು, ಸುರುಟಿ, ಸಾವೇರಿ, ನವರೋಜು, ಜಂಜೂಟಿ.. ಇವು ಯಕ್ಷಗಾನದ ಪ್ರಸಿದ್ಧ ರಾಗಗಳು. ಇವುಗಳನ್ನು ಗುರುಗಳು ಆಲಾಪಿಸಿ ಹೇಳಿಕೊಡುತ್ತಿರುವಾಗ ಬಳಿಯಲ್ಲಿರುತ್ತಿದ್ದ ಕುರಿಯ ವಿಠಲ ಶಾಸ್ತ್ರಿಗಳು ತಲ್ಲೀನರಾಗುತ್ತಿದ್ದರು. ಅಂದರೆ ಗುರುಗಳು ಬಳಸುವ ರಾಗಕ್ಕೆ ಅಷ್ಟೊಂದು ಆಕರ್ಷಣೆಯಿತ್ತು. ಭಾವನೆಗಳಿದ್ದುವು.  ಕರ್ಣಪರ್ವ ಪ್ರಸಂಗದ 'ಶಿವ ಶಿವಾ ಸಮರದೊಳು...' ಪದ್ಯವನ್ನು ಸಾವೇರಿ ರಾಗದಲ್ಲಿ ಹಾಡಿದಾಗ 'ಕರ್ಣ' ನೆನಪಾಗಿ ಕುರಿಯದವರು ಒಂದು ಕ್ಷಣ ಕುಸಿದಿದ್ದರು! ಕಲಿಕಾ ಕೇಂದ್ರದಲ್ಲಿ ಹಾಡನ್ನು ಕೇಳಿಯೇ ಪರಾಕಾಯ ಪ್ರವೇಶ ಮಾಡುವ ಕುರಿಯರ ಪಾತ್ರಗಳು ರಂಗದಲ್ಲಿ ಅದ್ಭುತ.

ದಿನ ಪೂರ್ತಿ ತರಗತಿ. ಛತ್ರದಲ್ಲಿ ಮಧ್ಯಾಹ್ನದೂಟ. ಬೆಳಗ್ಗೆ ಗಂಜಿಯೂಟ. ವಿದ್ಯಾರ್ಥಿಗಳೇ ತಂತಮ್ಮ ಪಾಳಿಯಲ್ಲಿ ಸ್ವಯಂ ಆಗಿ ಅಡುಗೆ ಮಾಡಬೇಕಾಗಿತ್ತು. ತರಗತಿಗೆ ಸೇರಿ ಒಂದು ವಾರವಾಯಿತಷ್ಟೇ. ಮಾಂಬಾಡಿ ಗುರುಗಳ (ಮಾಂಬಾಡಿ ಅಜ್ಜ) ಸ್ನೇಹವಾಯಿತು! ಅವರ ವಯಸ್ಸು ಸುಮಾರು ಎಪ್ಪತ್ತು, ನನ್ನ ವಯಸ್ಸು ಹದಿನಾಲ್ಕು! ಸ್ನೇಹಕ್ಕೆ ಕಾರಣ ಏನು ಗೊತ್ತೇ. ಅಜ್ಜನಿಗೆ 'ಕೃಷ್ಣ ನಶ್ಯ' ಸೇದುವ ಅಭ್ಯಾಸವಿತ್ತು. ಅವರಿಗೆ ಬೇಕಾದಷ್ಟು ಒದಗಿಸುತ್ತಿದ್ದೆ. ತರಗತಿ ಆರಂಭವಾಗುವಾಗ ಮೊದಲ ವಿದ್ಯಾರ್ಥಿಯಾಗಿ ಹಾಜರಿರುತ್ತಿದ್ದೆ. ಅವರೊಂದಿಗೇ ಕಾಫಿ, ತಿಂಡಿ, ನಿದ್ದೆ. ಹೀಗೆ ವಿವಿಧ ರೀತಿಯಲ್ಲಿ ಗುರುಗಳ ಸೇವೆ ಮಾಡಿದ್ದೆ. ಅವರು ಸುಪ್ರೀತರಾಗಿದ್ದರು. 

ಮೂರುವರೆ ತಿಂಗಳಲ್ಲಿ ಪ್ರಾಥಮಿಕ ಪಾಠ ಮುಗಿಯಿತು. 'ಎಲ್ಲಾ ಹೇಳಿಕೊಟ್ಟಿದ್ದೆ ಮಾರಾಯ' ಎಂದು ಆಶೀರ್ವದಿಸಿದರು. ವರುಷದ ತರಬೇತಿ ಅವಧಿಯ ಕೊನೆಯ ದಿನದ ಪ್ರದರ್ಶನ. ಕಲಿತುದನ್ನು ಪ್ರತ್ಯಕ್ಷವಾಗಿ ತೋರಿಸುವ ವ್ಯವಸ್ಥೆ. ಪ್ರಸಂಗ : ಪುರುಷಾತಿಕ್ರಮಣ. ಪೂಜ್ಯ ಹೆಗ್ಗಡೆಯವರು ಸಹಿತ ಅವರ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು. ದೇವಸ್ಥಾನಕ್ಕೆ ಆಗಮಿಸಿದ ಭಕ್ತವೃಂದ ನೂರಾರು ಸಂಖ್ಯೆಯಲ್ಲಿ ನೆರೆದಿದ್ದರು.

ಮೊದಲು ಜಾಗಟೆ ಹಿಡಿಯಲು ನನಗೆ ಅವಕಾಶ. ಮುಂದಿನ ಆಸನದಲ್ಲಿ ವಿರಾಜಮಾನರಾಗಿದ್ದ ಹೆಗ್ಗಡೆಯವರು, ಗುರುಗಳು, ಪ್ರೇಕ್ಷಕರನ್ನು ನೋಡಿ ಹೆದರಿ ಮುದ್ದೆಯಾಗಿದ್ದೆ. ಬೆವರಿ ಕಂಗಾಲಾಗಿದ್ದೆ. ಚೌಕಿ ಪೂಜೆ ಮುಗಿದು, ರಂಗಸ್ಥಳಕ್ಕೆ ಪ್ರವೇಶ. ಏನಾಯಿತೋ ಏನೋ.. ಗುರುಗಳು ಹೇಳಿಕೊಟ್ಟದ್ದು ಮರೆತುಹೋಯಿತು. 'ಅಂಬುರುಹದಳನೇತ್ರೆ...' ಭಾಮಿನಿಯನ್ನು ನಾಲ್ಕು ಉಸಿರಿನಲ್ಲಿ ಹೇಳುವ ಬದಲು ಒಂದೇ ಉಸಿರಿನಲ್ಲಿ ಹೇಳಿ ಮುಗಿಸಿದ್ದೆ. ಗುರುಗಳು ಎಲ್ಲಿಂದ ಬಂದರೋ ಗೊತ್ತಿಲ್ಲ, 'ತಲೆಗೊಂದು ಕುಟ್ಟಿ ಹಾಕಿ' ನಾಲ್ಕು ಉಸಿರಲ್ಲಿ ಪುನಃ ಹೇಳಿಸಿದರು. ಸರಿಯಾಗಿಯೇ ಹೇಳಿದೆ. ಕುಟ್ಟಿ ಪ್ರಯೋಗವು ಪ್ರೇಕ್ಷಕರಿಗೆ ಮೋಜು ಆಗಿದ್ದಿರಬೇಕು.

ತರಬೇತಿ ಮುಗಿದು ಮನೆಯತ್ತ ಮುಖ ಮಾಡುವ ದಿನ. ಹೆಗ್ಗಡೆಯವರ ಅಮ್ಮ ಇಪ್ಪತ್ತು ರೂಪಾಯಿ ಉಡುಗೊರೆ ನೀಡಿದ್ದರು. ಮಾಂಬಾಡಿ ಗುರುಗಳು, ಆರಂಭದ ಸಂದರ್ಶನದಲ್ಲೇ ಪೈಲ್ ಮಾಡಿದಾಗ ನೀನು ಮನೆಗೆ ಹೋಗುತ್ತಿದ್ದರೆ, ನಿನ್ನಂತಹ ಶಿಷ್ಯನನ್ನು ಕಳೆದುಕೊಳ್ಳುತ್ತಿದ್ದೆ. ಅಲ್ಲದೆ ನಿನಗೂ ನಷ್ಟವಾಗುತ್ತಿತ್ತು, ಎಂದಿದ್ದರು. ಭಾಮಿನಿಯನ್ನು ಹೇಳುವಾಗ ಇಂದಿಗೂ ಗುರುಗಳು ನೆನಪಾಗುತ್ತಾರೆ.

                          ***************

ಪದ್ಯಾಣರು ಅರವತ್ತರ ಗೌರವ ಗ್ರಂಥ 'ಪದಯಾನ' ಸಂಪಾದಕತ್ವ ನನ್ನ ಪಾಲಿಗೆ ಬಂದಾಗ ಅವರ ಕಲಾ ಬದುಕಿನೊಳಗೆ ಇಣುಕುವ ಸಂದರ್ಭ ಬಂದಿತ್ತು. ಅಗ ಅವರು ಮನಸ್ಸನ್ನು ಪೂರ್ತಿಯಾಗಿ ತೆರೆದುಕೊಂಡಿರುವುದು ಇಂದು ನೆನಪಾಗುತ್ತದೆ. ಕ್ಷಣಕ್ಕೆ ಅವರಿಲ್ಲ. ಇಂದು ಪೂರ್ವಾಹ್ನ ಸುಮಾರು ಏಳೂಮುಕ್ಕಾಲು ಗಂಟೆಯ ಸುಮಾರಿಗೆ 'ನಮ್ಮ ಗಣಪಣ್ಣ' ದೈವಾಧೀನರಾದರು. ಅವರ ಒಡನಾಡಿಗಳಿಗೆ ಒಡನಾಟವು ನೆನಪಿನ ಬುತ್ತಿಯಾಗಿ ಕಾಡುತ್ತದೆ. ಯಕ್ಷಗಾನಕ್ಕೆ 'ಸ್ವ-ನಿರ್ನಿತ ಶೈಲಿ'ಯನ್ನು ಹೊಸೆದ ಪದ್ಯಾಣ ಗಣಪತಿ ಭಟ್ಟರಿಗೆ ಇದು ಅಕ್ಷರಾರ್ಪಣೆ.

ಚಿತ್ರಗಳು : ಅನಿಲ್ ಎಸ್. ಕರ್ಕೇರ


 

No comments:

Post a Comment