(ಹಿರಿಯ ಭಾಗವತ ಕಾಟುಕುಕ್ಕೆ ಕೊರಗಪ್ಪ ನಾಯ್ಕರು ಇಂದು ದೈವಾಧೀನರಾದರು. ಅವರ ಕುರಿತಾದ ಹಾಗೂ ಅವರಿಗೆ ಸೂರು ಒದಗಿಸಿದ ಪಟ್ಲ ಫೌಂಡೇಶನ್ ಕುರಿತಾಗಿ, ದಿನಾಂಕ 23-3-2018ರ ಪ್ರಜಾವಾಣಿ ಸಂಚಿಕೆಯಲ್ಲಿ ಪ್ರಕಟವಾದ ನನ್ನ ಅಂಕಣ ಬರಹ)
ಯಾವುದೇ ಕ್ಷೇತ್ರವಿರಲಿ, ತಾರಾಮೌಲ್ಯದತ್ತ ಕಲಾವಿದರ ಲಕ್ಷ್ಯ. ಸಹಜ ಕೂಡಾ. ಸರ್ವಸಮರ್ಥ ರಂಗಾಳ್ತನವು ಪ್ರಸಿದ್ಧಿಯ ಉಪಾಧಿ. ಒಂದೊಂದು ವಿಭಾಗದಲ್ಲಿ ಕಲಾವಿದರ ಶ್ರಮ ಅನ್ಯಾದೃಶ. ಬೌದ್ಧಿಕ ಮಟ್ಟದ ಮೇಲ್ಮೆಯೂ ಕಾರಣ. ಜತೆಗೆ ಪ್ರೇಕ್ಷಕರ ಎಚ್ಚರದ ಮನಃಸ್ಥಿತಿ. ಇವೆಲ್ಲಾ ಪ್ರದರ್ಶನವೊಂದರ ಹಿನ್ನೆಲೆಯಲ್ಲಿ ಗಣನೀಯ. ತಾರಾಮೌಲ್ಯದ ವ್ಯಾಪ್ತಿಯೇ ತನ್ನ ವ್ಯಾಪ್ತಿಯ ಎಲ್ಲೆಯನ್ನು ನಿಖರವಾಗಿ ಗುರುತಿಸಿದೆ. ಹಾಗಾಗಿ ಇಂದು ತಾರಾಮೌಲ್ಯಕ್ಕೆ ಅಂಕ ನೀಡಿದ ಪ್ರೇಕ್ಷಕರೇ ನಾಳೆಯೋ, ನಾಡಿದ್ದೋ ಅಥವಾ ಮುಂದಿನ ವರುಷವೋ ತಟಸ್ಥರಾಗುವಂತಹ ವಿದ್ಯಮಾನಗಳು ಯಕ್ಷಗಾನದಲ್ಲಿ ಹೊಸತೇನಲ್ಲ.
ಶ್ರೀ ಕಟೀಲು ಮೇಳದ ಭಾಗವತರಾದ ಪಟ್ಲ ಸತೀಶ ಶೆಟ್ಟರನ್ನು ಭೌತಿಕವಾಗಿ ದೂರದಿಂದ, ಮಾನಸಿಕವಾಗಿ ಹತ್ತಿರದಿಂದ ನೋಡುತ್ತಾ ಬರುತ್ತಿದ್ದೇನೆ. (ಈಗವರು ಸ್ವಂತದ್ದಾದ ಪಾವಂಜೆ ಮೇಳದ ಯಜಮಾನ) ಉತ್ಕರ್ಷವನ್ನು ಕೇಳುತ್ತಾ ಖುಷಿಪಟ್ಟಿದ್ದೇನೆ. ಎಳೆಯ ವಯಸ್ಸಿನಲ್ಲಿ ತಾರಾಮೌಲ್ಯದ ಮೆಟ್ಟಿಲುಗಳನ್ನು ಏರುತ್ತಾ ಬಂದವರು. ಯುವಕರ ಮನದಲ್ಲಿ ನಾದಬೀಜವನ್ನು ಊರಿದವರು. ಮೊಬೈಲುಗಳಲ್ಲಿ ಪಟ್ಲರ ಹಾಡಿನ ರಿಂಗ್ಟೋನ್ಗಳನ್ನು ಯುವ ಮನಸ್ಸುಗಳು ಅಳವಡಿಸಿಕೊಳ್ಳುವಷ್ಟು ಪಟ್ಲರು ಅವರಿಸಿರುವುದು ಜನಮಾನ್ಯ.
ಪಟ್ಲ ಸತೀಶ ಶೆಟ್ಟರ ತಾರಾಮೌಲ್ಯ ಇಷ್ಟಕ್ಕೆ ಸೀಮಿತವಾಗಿಲ್ಲ. ಓರ್ವ ಕಲಾವಿದನಾಗಿ ಸಾಕಾಗಬಹುದೇನೋ. ಆದರೆ ಪಟ್ಲರಲ್ಲಿರುವ ಮಾನವೀಯ ತುಡಿತಗಳು ರಂಗಕ್ಕೆ ಅವರನ್ನು ಸೀಮಿತಗೊಳಿಸಲಿಲ್ಲ. ತನ್ನನ್ನು ಬೆಳೆಸಿದ ರಂಗಕ್ಕೆ ಸ್ಥಾನ-ಮಾನಗಳನ್ನು ತರುವ ಮನಃಸ್ಥಿತಿಯನ್ನು ಅವರೊಳಗೆ ಯಕ್ಷರಂಗ ಕಟ್ಟಿಕೊಟ್ಟಿದೆ. ಕಲಾವಿದರ ಬದುಕನ್ನು ಬಡತನದ ಕಣ್ಣಿಂದ ನೋಡುವ ಮತಿಯನ್ನು ಕರುಣಿಸಿದೆ. ಕಣ್ಣೀರಿಗೆ ಸ್ಪಂದಿಸುವ ಮನದ ಮಿಡಿತವನ್ನು ಸೃಷ್ಟಿಸಿ, 'ತಾರಾಮೌಲ್ಯ'ದ ವ್ಯಾಪ್ತಿಯನ್ನು ಪಟ್ಲರು ದಾಟಿದ್ದಾರೆ.
ಇದು ಒಂದು ರೀತಿಯ ವೈಚಾರಿಕ ಧ್ಯಾನ. ಈ ಧ್ಯಾನದ ನೆರಳು - 'ಯಕ್ಷಧ್ರುವ ಪಟ್ಲ ಫೌಂಡೇಶನ್'. ಸಮಾಜದಲ್ಲಿ ಉಳ್ಳವರನ್ನು ನಿತ್ಯ ನೋಡುತ್ತೇವೆ. ಅವರು ತಮ್ಮನ್ನು ಉದ್ಘಾಟಿಸಿಕೊಳ್ಳುವ ಛಾತಿ ಅಸಹನೀಯ. ಅಂತಹವರಲ್ಲಿ ಅನುಕಂಪದ ತೇವ ಆರಿಹೋಗಿರುತ್ತದೆ. ಯಕ್ಷಗಾನದ ಪ್ರೀತಿ ಎನ್ನುವುದು ಗಂಟಲ ಮೇಲಿನ ಕ್ಷಣಿಕ ಸುಖ. ಆದರೆ ಸಾಮಾಜಿಕ ಸ್ಥಿತಿ ಮತ್ತು ಗತಿಗಳ ಸ್ಪಷ್ಟ ಅರಿವಿದ್ದ ಪಟ್ಲರು ಫೌಂಡೇಶನ್ ಮೂಲಕ ಕಲಾವಿದರ ಬಡತನಕ್ಕೆ, ಬದುಕಿಗೆ ಕೈತಾಂಗು ಆಗುತ್ತಿರುವುದು ಯಕ್ಷರಂಗ ಕಂಡ ಅಪರೂಪದ ವಿದ್ಯಮಾನ.
ಬಾಲ್ಯದ ಹಳ್ಳಿಯ ಬದುಕು, ಬಡತನದ ಪರಿಚಯ, ಗ್ರಾಮೀಣ ಸ್ಥಳೀಯತೆಗಳು ಪಟ್ಲರೊಳಗೆ ಜೀವಂತ. ಹಾಗಾಗಿ ಯಕ್ಷಧ್ರುವ ಸಂಸ್ಥೆಯನ್ನು ನಗರಕ್ಕೇ ಸೀಮಿತಗೊಳಿಸಲಿಲ್ಲ. ಹಳ್ಳಿಯವರೆಗೂ ವ್ಯಾಪಿಸಿದ್ದಾರೆ. ಸಮಾಜದ ಸಂಪನ್ಮೂಲವನ್ನು ಸಮಾಜಕ್ಕೆ ವಿನಿಯೋಗಿಸುವ ಕಾರ್ಯಹೂರಣ. ಫೌಂಡೇಶನ್ ನೀಡುವ ಪ್ರಶಸ್ತಿಗಳೂ ಕೂಡಾ 'ತಾರಾಮೌಲ್ಯ' ಯಾ ಪ್ರತಿಷ್ಠೆಯನ್ನು ಹೊಂದಿದೆ ಎಂದರೆ ಅದರ ಹಿಂದಿರುವ ಪಟ್ಲರ ಯೋಜನೆ ಮತ್ತು ಯೋಚನೆಗಳನ್ನು ಅರ್ಥಮಾಡಿಕೊಳ್ಳಬಹುದು.
ಅವರ ತೀರ್ಥರೂಪರು ಪಟ್ಲಗುತ್ತು ಮಹಾಬಲ ಶೆಟ್ಟರು. ಶ್ರೀ ಮಲ್ಲ ಮೇಳವನ್ನು ಅವರು ನಿರ್ವಹಿಸುತ್ತಿದ್ದ ಕಾಲದ ಘಟನೆಯೊಂದು ನೆನಪಾಗುತ್ತದೆ. ಅದೊಂದು ಬಯಲಾಟದ ಸಂದರ್ಭದ ಸಮಾರಂಭ. ಮಹಾಬಲ ಶೆಟ್ಟರಿಗೆ ಅಂದು ಸಂಮಾನ. ವೇದಿಕೆಯ ಗಣ್ಯರಲ್ಲಿ ಬಹುತೇಕ ಯಕ್ಷಗಾನದದ ಒಳಸುಳಿಗಳನ್ನು ಬಲ್ಲವರಾಗಿರಲಿಲ್ಲ. ಭಾಷಣವೂ ಎಲ್ಲೆಲ್ಲೋ ದಿಂಞಿಣ ಹಾಕುತ್ತಿತ್ತು! ಸಂಮಾನಿತರ ಪರಿಚಯವೂ ಅಸ್ಪಷ್ಟ. ಸಂಮಾನವೂ ಗೋಜಲು ಗೋಜಲು! ಮಹಾಬಲ ಶೆಟ್ಟರು ಮಾನಸಿಕವಾಗಿ ಅಸಮಾಧಾನವನ್ನು ಹೊಂದಿದ್ದರು. ನೋಡುವಾ, ಮುಂದೊಂದು ದಿವಸ ಇಂತಹ ಸಂಮಾನಗಳನ್ನು ಅದ್ದೂರಿಯಾಗಿ ಆಯೋಜಿಸುವ ದಿನಗಳು ಬರಬಹುದು, ಎಂದು ಮಾತಿನ ಮಧ್ಯೆ ಸ್ನೇಹಿತರಲ್ಲಿ ಹೇಳಿ ಮುನಿಸು ಹಗುರ ಮಾಡಿಕೊಂಡಿದ್ದರು. ಯೋಗಾಯೋಗವೋ ನೋಡಿ, ಮಹಾಬಲ ಶೆಟ್ಟರ ಅಂದಿನ ಸಂಕಲ್ಪ ಅವರ ಚಿರಂಜೀವಿ ಸತೀಶರಲ್ಲಿಂದು ಸಾಕಾರಗೊಳ್ಳುತ್ತಿದೆ.
ಯಕ್ಷಗಾನವೆಂದರೆ ಭಾಗವತಿಕೆ, ವೇಷಗಾರಿಕೆ ಅಷ್ಟೇ ಅಲ್ಲ. ಅದರ ಹೊರಗೆ ಫಕ್ಕನೆ ರಾಚದ ಎಷ್ಟೋ ವಿಚಾರಗಳಿವೆ. ಉದಾ: ಪ್ರಸಂಗ ಪುಸ್ತಕಗಳ ಪ್ರಕಾಶನ. ಭಾಗವತ ಬೊಟ್ಟಿಕೆರೆ ಪುರುಷೋತ್ತಮ ಪೂಂಜರ ಪ್ರಸಂಗಗಳು ಮತ್ತು ಮಹಾ ಭಾಗವತ ಬಲಿಪ ನಾರಾಯಣ ಭಾಗವತರ ಪ್ರಸಂಗಗಳನ್ನು ಫೌಂಡೇಶನ್ ಅಚ್ಚು ಹಾಕಿದೆ. ಬಲಿಪರನ್ನು ನಿಧಿಯೊಂದಿಗೆ ಗೌರವಿಸಿದ್ದರು ಕೂಡಾ. ಬಲಿಪರ ಮನದ ಮಾತು ಗಮನಿಸಿ - ನನ್ನ ಮೇಲಿನ ಗೌರವದಿಂದ ಸತೀಶ ಶೆಟ್ಟರು ನಿಧಿಯೊಂದಿಗೆ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಓರ್ವ ಕಲಾವಿದನಿಗೆ ಹೇಗೆ ಗೌರವ ಕೊಡಬೇಕೆಂದು ಅವರಿಗೆ ಗೊತ್ತಿದೆ. ಪ್ರಸಂಗಗಳನ್ನು ಅಚ್ಚು ಹಾಕಿಸುವ ಯೋಜನೆ ಇದೆಯಲ್ಲಾ, ಅದು ಪ್ರಸಂಗ ಕವಿಯ ಪಾಲಿಗೆ ಎಲ್ಲಾ ಗೌರವಕ್ಕಿಂತಲೂ ಹಿರಿದು.
ಪ್ರತೀ ತಾಲೂಕುಗಳಲ್ಲಿ ಫೌಂಡೇಶನ್ನಿನ ಘಟಕಗಳನ್ನು ಸ್ಥಾಪಿಸುತ್ತಿರುವುದು ಕಲಾವಿದರ, ಕಲಾಸಕ್ತರ ಸಂಘಟನೆಗೆ ಉಪಾಧಿ. ನಿಶ್ಚಿತ ಯೋಜನೆಯ
ಹಿನ್ನೆಲೆಯಲ್ಲಿ ರೂಪುಗೊಳ್ಳುವ ಘಟಕದಲ್ಲಿ ಸಮಾಜದ ಅನ್ಯಾನ್ಯ ವ್ಯಕ್ತಿಗಳೂ
ಸದಸ್ಯರು. ಆ ಮೂಲಕ ಕಾರ್ಯಕ್ರಮ,
ಪ್ರಶಸ್ತಿ ಪ್ರದಾನ, ಪ್ರದರ್ಶನಗಳೆಲ್ಲಾ ಯೋಜಿತ.
ತಾನು ಮೇಲುಸ್ತುವಾರಿಕೆ ಮಾಡುತ್ತಾ ಘಟಕಗಳಿಗೆ ಸ್ವತಂತ್ರ ವ್ಯವಸ್ಥೆಯನ್ನು ಮಾಡಿದ್ದಾರೆ, ಮಾಡುತ್ತಿದ್ದಾರೆ. ಪಟ್ಲರ ಒಟ್ಟೂ ವ್ಯವಸ್ಥೆಯಲ್ಲಿ
- ಕಲಾವಿದನಾಗಿ ದೂರನಿಂತು - ಸ್ವ-ಹಿತಕ್ಕಿಂತಲೂ ಕಲೆ,
ಕಲಾವಿದರ ಏಳ್ಗೆಯ ಮನಃಸ್ಥಿತಿ ಇರುವುದು
ಅಪರೂಪ ಮತ್ತು ಶ್ಲಾಘ್ಯ. ಸಮಾಜಕ್ಕೆ
ಕಲೆಯ ಸ್ಪರ್ಶವನ್ನು ನೀಡುವ ಅಜ್ಞಾತ ಹೂರಣ.
'ಪಟ್ಲ ಯಕ್ಷಾಶ್ರಯ ಯೋಜನೆ' - ಭಾಗವತ ಪಟ್ಲ ಸತೀಶ ಶೆಟ್ಟರ ದೂರದರ್ಶಿತ್ವದ ಯೋಜನೆ. ಪುಣ್ಯದ ಕೆಲಸ. ತಾರಾಮೌಲ್ಯಗಳೇ ಕುಣಿದು ಕುಪ್ಪಳಿಸಿ ಸಂಭ್ರಮಿಸುವ ಕೆಲಸವಿದು. ಅಶಕ್ತತೆಗೆ ಕೈಹಿಡಿವ, ಅನ್ನದ ಬಟ್ಟಲನ್ನು ತುಂಬುವ, ಕಣ್ಣೀರನ್ನು ಒರೆಸಿ ಗೌರವಯುತವಾದ ಬಾಳನ್ನು ಕಲಾವಿದ ನಡೆಸುವಂತಾಗಬೇಕೆನ್ನುವ ಈ ಯೋಜನೆಯಿಂದ ಪಟ್ಲರು ನಿಜಾರ್ಥದ ಮಾನಕ್ಕೆ ಮಾನ್ಯರು. ಈಚೆಗೆ (2018) ಆಶಕ್ತ ಭಾಗವತ ಕೊರಗಪ್ಪ ನಾಯ್ಕರಿಗೆ ಯಕ್ಷಾಶ್ರಯದ ಮೂಲಕ ಆಶ್ರಯ ನೀಡಿದ್ದಾರೆ. ಬಹುಶಃ ಆಶಕ್ತ ಕಲಾವಿದರಿಗೆ ನೀಡುವ ಎರಡನೇ ಮನೆಯ ಕೊಡುಗೆ.
ಕಾಟುಕುಕ್ಕೆ ಕೊರಗಪ್ಪ ನಾಯ್ಕ್ ಇವರಿಗೆ ಪಟ್ಲರು ಗೃಹಭಾಗ್ಯ ಒದಗಿಸಿದರು. ಚಿಕ್ಕ ಸೂರಿನ ಮಧ್ಯೆ ಬದುಕು ಸವೆಸುತ್ತಿದ್ದ ನಾಯ್ಕರಿಗೆ ಸಂಭ್ರಮ. ನಾಲ್ಕು ದಶಕಗಳ ಕಾಲ ಭಾಗವತನಾಗಿ ದುಡಿದು, ಅಶಕ್ತತೆಯತ್ತ ಜಾರುತ್ತಾ ಹೋದ ನಾಯ್ಕರಿಗೆ ಆರೇಳು ವರುಷದ ಹಿಂದೆ ಬೊಳ್ಳಿಂಬಳ ಪ್ರಶಸ್ತಿ ಬಂದಾಗ ಭೇಟಿ ಮಾಡಿದ್ದೆ. ಚಿಕ್ಕ ಮನೆಯ ಜಗಲಿಯಲ್ಲಿ ಬದುಕಿನ ಶೇಷಾಯುಷ್ಯವನ್ನು ಲೆಕ್ಕ ಮಾಡುತ್ತಿದ್ದ ಕೊರಗಪ್ಪ ನಾಯ್ಕರ ಪತ್ನಿ ಲಕ್ಷ್ಮೀ ಅಮ್ಮ, 'ನಮಗೆ ಯೋಗವಿಲ್ಲ' ಎಂದು ಕಣ್ಣೀರು ಹಾಕಿದ್ದ ದಿನಗಳು ನೆನಪಾಗುತ್ತದೆ. ಪಟ್ಲರು ಮನೆಯನ್ನು ನಿರ್ಮಿಸಿ ಕೊಡುವುದರ ಮೂಲಕ ಕೊರಗಪ್ಪ ನಾಯ್ಕರ ಕಲಾ ವ್ಯವಸಾಯಕ್ಕೆ ಯೋಗ ಮತ್ತು ಯೋಗ್ಯತೆಯನ್ನು ತಂದಿದ್ದಾರೆ.
ಕಾಸರಗೋಡು ಜಿಲ್ಲೆಯ ಕಾಟುಕುಕ್ಕೆ - ಖಂಡೇರಿಯು ಕೊರಗಪ್ಪ ನಾಯ್ಕರ ಹುಟ್ಟೂರು. ಬಾಲ್ಯದಿಂದಲೇ ಯಕ್ಷಗಾನದದ ಒಲವು. ಅದರಲ್ಲೂ ಭಾಗವತನಾಗಬೇಕೆಂಬ ಹಂಬಲ. ಕೇಳಿ ಕಲಿತುದೇ ಹೆಚ್ಚು. ಬಲಿಪ ನಾರಾಯಣ ಭಾಗವತರಿಂದ ಭಾಗವತಿಕೆಯ ಪಾಠ. ಬಣ್ಣದ ಕುಂಞಿರಾಮರಿಂದ ನಾಟ್ಯಾಭ್ಯಾಸ. ಲಕ್ಷ್ಮಣ ಆಚಾರ್ಯರಿಂದ ಮದ್ದಳೆಯ ಕಲಿಕೆ. ಮುಂದೆ ನಿಡ್ಲೆ ನರಸಿಂಹ ಭಟ್ಟರು ಚೆಂಡೆಗೆ ಗುರುವಾದರು.
ಕಟೀಲು ಮೇಳ ಸೇರುವ ಪೂರ್ವದಲ್ಲಿ ಶ್ರೀ ಧರ್ಮಸ್ಥಳ ಮೇಳದಲ್ಲಿ ಒಂದು ವರುಷ, ಕುಂಡಾವಿನಲ್ಲಿ ಒಂದು ವರುಷ ಮತ್ತು ಪುತ್ತೂರು ಮೇಳಗಳಲ್ಲಿ ವ್ಯವಸಾಯ ಮಾಡಿದ್ದರು. ಮಳೆಗಾಲದಲ್ಲಿ ಸ್ಥಳೀಯವಾಗಿ ತಾಳಮದ್ದಳೆಗಳಲ್ಲಿ ಭಾಗಿಯಾಗುತ್ತಿದ್ದರು. ಪ್ರಸ್ತುತ ಮಡದಿ ಲಕ್ಷ್ಮೀ ಗಂಡನಿಗೆ ಆಸರೆ. ನಾಯ್ಕರ ದನಿ. ಅಸ್ಪಷ್ಟ ಮಾತುಗಳಿಗೆ ಸ್ಪಷ್ಟತೆಯ ಸ್ಪರ್ಶ ನೀಡುವ ಮಾರ್ಗದರ್ಶಕಿ. ಮಗ ದೇವಿಪ್ರಸಾದ್ ಸ್ವ-ಉದ್ಯೋಗದ ದುಡಿಮೆ.
ಬದುಕಿಗೆ ಎರವಾದ ಅಸೌಖ್ಯತೆಯು ಕೊರಗಪ್ಪ ನಾಯ್ಕರ ಯಕ್ಷ ಬದುಕು ಮಾತ್ರವಲ್ಲದೆ ಭವಿಷ್ಯವನ್ನು ಕಿತ್ತುಕೊಂಡಿತ್ತು. ಅವರೊಬ್ಬ ಸಂಪನ್ಮೂಲ ವ್ಯಕ್ತಿಯಾಗುವುದು ವಿಧಿಗೆ ಇಷ್ಟವಿರಲಿಲ್ಲ. ಬದುಕಿನಲ್ಲಿ 'ಮುಂದೇನು ಎನ್ನುವ ಪ್ರಶ್ನೆಗೆ ಉತ್ತರ ಸಿಗದಿದ್ದಾಗ ಪಟ್ಲ ಫೌಂಡೇಶನ್ ಆಸರೆಯಾಗಿದೆ. ಇದು ನಾಯ್ಕರಿಗೆ ನಿಜಾರ್ಥದ ಗೌರವಪೂರ್ವಕವಾದ ಸೂರುಭಾಗ್ಯ.
(ಗೃಹ ಪ್ರವೇಶದ ಚಿತ್ರ : ಅಶ್ವಿತ್ ಶೆಟ್ಟಿ)
No comments:
Post a Comment