Saturday, October 16, 2021

ರಾಮಚಂದ್ರ ಅರ್ಬಿತ್ತಾಯ ವಿಧಿವಶ


ತೀರಾ ಆಪ್ತರ ಶ್ರದ್ಧಾಂಜಲಿ ನಮನ ಬರೆಯುವುದೆಂದರೆ ಕೈ ನಡುಕವಾಗುತ್ತದೆ. ಈಚೆಗಂತೂ ಕಣ್ಣೆದುರೇ ಹತ್ತಾರು ಮಂದಿ ಅಗಲಿ ಹೋದರು. ಕಾಲನ ನಿರ್ಣಯಕ್ಕೆ ಕಾರಣ ನೂರಾರು.

ಸುಬ್ರಹ್ಮಣ್ಯದ ರಾಮಚಂದ್ರ ಅರ್ಬಿತ್ತಾಯರ ಪ್ರವೃತ್ತಿ ಯಕ್ಷಗಾನ. ಪ್ರಭಾವಿ ಕೌಟುಂಬಿಕ ಹಿನ್ನೆಲೆ. ಹಾಗೆಂದು ತಾನೆಂದೂ ‘ಭಾಗವತ’ ಎಂದು ಪೋಸ್ ಕೊಟ್ಟವರಲ್ಲ. ಮನುಷ್ಯನಿಗಿರಬೇಕಾದ ಸಜ್ಜನಿಕೆ ಮತ್ತು ಅಹಮಿಕೆಯಿಲ್ಲದ ವ್ಯಕ್ತಿತ್ವವನ್ನು ತೀರಾ ಹತ್ತಿರದಿಂದ ಕಂಡು ಮನನಿಸಿಕೊಂಡಿದ್ದೆನೆ. ಗೌರವಿಸಿದ್ದೇನೆ. (ಇದು ಮರಣಿಸಿದ ಬಳಿಕ ಹೇಳುವ ಗಂಟಲ ಮೇಲಿನ ಮಾತಲ್ಲ.) ಗೊಣಗಾಟದಿಂದ ತೀರಾ ದೂರ.

ತಾಳಮದ್ದಳೆ, ಆಟಗಳಲ್ಲಿ ಅರ್ಬಿತ್ತಾಯರ ಭಾಗವತಿಕೆಯನ್ನು ಸವಿದಿದ್ದೇನೆ. ಆ ಖುಷಿಯನ್ನು ಅವರೊಂದಿಗೆ ಹಂಚಿಕೊಂಡಿದ್ದೇನೆ. ಹೊಗಳಿಕೆಗೆ ನಾಚಿ ಮುದ್ದೆಯಾಗುತ್ತಿದ್ದರು. ಅವರು ಕರುಣ ರಸ, ಶೃಂಗಾರ ರಸದ ಪದ್ಯಗಳನ್ನು ತುಂಬಾ ಪರಿಣಾಮಕಾರಿಯಾಗಿ ಹಾಡಬಲ್ಲರು. ಈಚೆಗೆ ತಾರನಾಥ ಸವಣೂರು ಅವರ ಸಂಯೋಜನೆಯಲ್ಲಿ ‘ಭರತಾಗಮನ’ ಪ್ರಸಂಗದ ತಾಳಮದ್ದಳೆಯಲ್ಲಿ ಭಾಗವತಿಕೆ ಮಾಡಿದ್ದರು. ಪ್ರಸಂಗ ಪದ್ಯಗಳನ್ನು ಸೊಗಸಾಗಿ, ಮಾಧುರ್ಯದಿಂದ ಹಾಡಿದ್ದರು.

ಕೆಲವೆಡೆ ಯಕ್ಷಗಾನದ ಭಾಗವತಿಕೆ ತರಬೇತಿ ಮಾಡುತ್ತಿದ್ದರು. ಹವ್ಯಾಸಿ ವಲಯದಲ್ಲಿ ಅವರಿಗೆ ಬೇಡಿಕೆ ಮತ್ತು ಕೀರ್ತಿಯಿತ್ತು. ಅವರನ್ನೇ ಭಾಗವತಿಕೆಗೆ ಅಪೇಕ್ಷಿಸುವ ಆಪ್ತ ವರ್ಗವಿತ್ತು. ನನಗೂ ಅವರಿಗೂ ಬಹುಕಾಲದ ಪರಿಚಯ. ಹಾಗೆಂದು ಭೇಟಿಯಾಗುತ್ತಿದ್ದ, ಹರಟುತ್ತಿದ್ದ ಸಂದರ್ಭಗಳು ದೂರ. ಮನಸ್ಸಿನಲ್ಲಿ ಹತ್ತಿರ.

ಅವರ ಪದ್ಯಗಳನ್ನು ಕೇಳುತ್ತಿದ್ದಂತೆ ನನಗೆ ಮೋಹನ ಬೈಪಡಿತ್ತಾಯರ ಪದ್ಯಗಳನ್ನು ಕೇಳಿದಂತೆ ಭಾಸವಾಗುತ್ತಿತ್ತು. (ಅರ್ಬಿತ್ತಾಯರಿಗೆ ಮೋಹನ ಬೈಪಾಡಿತ್ತಾಯರು ಬಂಧು.) ಸ್ವಷ್ಟ, ವಿರಳ. ಗೊಂದಲವಿಲ್ಲದ ಪದಸಂಚಾರ. ರಾಗಗಳ ಏರಿಳಿತದಲ್ಲಿ ‘ಯಕ್ಷಗಾನ’’ವಿತ್ತು.

ಇನ್ನೆಲ್ಲಾ ನೆನಪು. ಅರ್ಬಿತ್ತಾಯರಿಗೆ ಅಕ್ಷರ ನಮನ.


No comments:

Post a Comment