Wednesday, July 6, 2022

ರಾಗಗಳೇ ಮೈಯಾದ ಭಾಗವತ


(ಪ್ರಜಾವಾಣಿ / ಧಧಿಗಿಣತೋ ಅಂಕಣ / 10-11-2017ರಲ್ಲಿ ಪ್ರಕಟ... ಶ್ರೀ ದಿನೇಶ ಅಮ್ಮಣ್ಣಾಯರಿಗೆ ‘ಮಂಡೆಚ್ಚ ಪ್ರಶಸ್ತಿ’ ಘೋಷಣೆ. ಜುಲೈ 10, ಭಾನುವಾರದಂದು ಕಟೀಲಿನಲ್ಲಿ ಪ್ರದಾನ. ಈ ಲೇಖನದ ಮರುಓದು) ಲೇ : ನಾ. ಕಾರಂತ ಪೆರಾಜೆ 

'ಕಲಾವಿದ ಪೂರ್ಣಾವಧಿಯಾಗಿ ವ್ಯವಸಾಯ ಮಾಡುವುದೇ ಯಕ್ಷಗಾನಕ್ಕೆ ಆತ ನೀಡುವ ಕೊಡುಗೆ.' - ಭಾಗವತ ದಿನೇಶ ಅಮ್ಮಣ್ಣಾಯರೊಂದಿಗೆ ಮಾತುಕತೆಯ ಮಧ್ಯೆ ಹಾದು ಹೋದ ವಾಕ್ಯವಿದು.

ಮೇಳವೊಂದರಲ್ಲಿ ತಿರುಗಾಟ ಪೂರ್ತಿ ಮಾಡುವುದು ವೃತ್ತಿ ಕಲಾವಿದನ ಬದ್ಧತೆ. ಇದರೊಳಗಿದೆ, ಕಲಾವಿದನ ಸ್ವ-ಅಭಿವೃದ್ಧಿ. ಅದು ಯಕ್ಷಗಾನ ನೀಡಿದ ಅವಕಾಶ. ಬೆಳವಣಿಗೆಯು ಸ್ವ-ಭಾವಕ್ಕೆ ಬದಲಾದಾಗ ಅವಕಾಶವೇ ಹಾದಿ ತೋರುತ್ತದೆ. ಹಾದಿಯಲ್ಲಿ ಬದ್ಧತೆಯು ಗಟ್ಟಿ ಹೆಜ್ಜೆಯನ್ನು ಊರುವುದಕ್ಕೆ ಸಾಧ್ಯ. ಹೆಜ್ಜೆಯು ಗಟ್ಟಿಯಾದರೆ ಮತ್ತೆ ಅವಕಾಶವೇ ಬೆರಳು ತೋರುತ್ತದೆ. ಬಾಗಿಲು ತೆರೆಯುತ್ತದೆ.

ಅಮ್ಮಣ್ಣಾಯರ ಯಶದ ಬದ್ಧತೆಯ ಹೊಳಪಿನಲ್ಲಿ ಅನುಭವದ ಗಟ್ಟಿತನವಿದೆ. ಯಾವುದು ಯಕ್ಷಗಾನ, ಯಾವುದಲ್ಲ ಎನ್ನುವ ಎಚ್ಚರವಿದೆ. ಕಲೆಯ ಮನವನ್ನು ಗೆಲ್ಲುವ ಸ್ವ-ಪ್ರಜ್ಞೆಯಿದೆ. ಕಲೆಯ ಮನಸ್ಸಿನೊಂದಿಗೆ ಅನುಸಂಧಾನ ಮಾಡುವ ಭಾಗವತಿಕೆಯು ಗೆಲ್ಲುತ್ತದೆ. ಭಾಗವತ ಕೀರ್ತಿಶೇಷ ದಾಮೋದರ ಮಂಡೆಚ್ಚರು ಕಲೆಯ ಮನದೊಳಗೆ ಇಳಿಯುತ್ತಿದ್ದರು. ಗುರುವಿನ ಹಾದಿಯೇ ಅಮ್ಮಣ್ಣಾಯರಿಗೆ ಮಂತ್ರವಾಯಿತು. ಭಾಗವತಿಕೆಯ ಮನಸ್ಸುಗಳನ್ನು ರಂಗದಲ್ಲಿ ಅರಳಿಸಿದರು.

ದಿನೇಶ ಅಮ್ಮಣ್ಣಾಯರ ಕಲಿಕಾ ಹಾದಿ ಭಿನ್ನ. ಬಾಲ್ಯದಲ್ಲಿ ತನ್ನಣ್ಣನಿಗೆ ಗುರು ಹರಿನಾರಾಯಣ ಬೈಪಾಡಿತ್ತಾಯರು ಮದ್ದಳೆ ಪಾಠ ಮಾಡುತ್ತಿದ್ದರು. ಪಾಠಗಳನ್ನು ಮರೆಯಲ್ಲಿ ಕೇಳಿ ಮನನಿಸಿಕೊಂಡರು. ತಕ್ಷಣ ವಶವಾಗುವ ಗ್ರಹಿಕಾವೇಗದಿಂದ ತಾವೇ ಬೆರಗಾಗುವಷ್ಟು ನುಡಿತಗಳು ಕೈವಶ. ಒಂದೆರಡು ವರುಷ ಮೇಳಗಳಲ್ಲಿ ಮದ್ದಳೆಗಾರನಾಗಿ ಅವಕಾಶ. ಒಮ್ಮೆ ದಾಮೋದರ ಮಂಡೆಚ್ಚರ ಭಾಗವತಿಕೆಗೆ ಆಪದ್ಭಾಂಧವನಾಗಿ ಮದ್ಲೆಗಾರನಾದ ಅಮ್ಮಣ್ಣಾಯರು ಭವಿಷ್ಯದಲ್ಲಿ ಅವರ ಉತ್ತರಾಧಿಕಾರಿಯಾದೇನು ಎಂಬ ಕನಸು ಇದ್ದಿರಲಿಲ್ಲ. ಕನಸು ಕಟ್ಟಿರಲಿಲ್ಲ. ಆದರೆ ಭಾಗವತನಾಗಬೇಕೆಂಬ ಕನಸು ಕಟ್ಟಿಕೊಂಡವರು ವಿಷ್ಣು ಅಮ್ಮಣ್ಣಾಯರು. ಸಂಬಂಧದಲ್ಲಿ ದಿನೇಶರ ದೊಡ್ಡಪ್ಪ. ಆಪ್ತವಾಣಿ 'ಚಿಕ್ಕಪ್ಪ'.

ಆಗಲೇ ಮಂಡೆಚ್ಚರ ಭಾಗವತಿಕೆಗೆ ಅಮ್ಮಣ್ಣಾಯರು ಮದ್ದಳೆಗಾರರಾಗಿದ್ದರು. ಮದ್ದಳೆಯ ನುಡಿತಗಳು ಭಾಗವತಿಕೆಯ ಅಕ್ಷರಗಳನ್ನು ತನ್ನೊಳಗೆ ಇಳಿಸಿಕೊಂಡವು. ಮನದೊಳಗೆ ಭಾಗವತನೊಬ್ಬ ಬೆಳೆಯುತ್ತಿದ್ದ. ಬೆಳವಣಿಗೆ ಅಗೋಚರ. ಗೋಚರದೊಳಗೆ ಅಗೋಚರವಾಗುವುದು ಒಂದು ಬಗೆಯ ಸಿದ್ಧಿ. ಮಂಡೆಚ್ಚರು ನಿತ್ಯ ಆವರಿಸುತ್ತಾ ಬಂದರು. ಆವರಣದೊಳಗೆ ಬಿಡಿಸಿಕೊಳ್ಳಲಾಗದಷ್ಟು ಬಂಧಿಯಾದರು. ಬಂಧನ ಇದೆಯಲ್ಲಾ, ಇದು ಕಲಾ ಬಂಧನ. ಕಲಾವಿದನೊಬ್ಬನನ್ನು ಅಪರೂಪಕ್ಕೆ ಬಾಧಿಸುವ ಬಂಧನ. ಇದುವೇ ಯೋಗ, ಭಾಗ್ಯ.

ಭಾಗವತಿಕೆಯ ಅಕ್ಷರಮಾಲೆಯನ್ನು ಮಂಡೆಚ್ಚರಿಂದಲೇ ಕಲಿಯಬೇಕೆನ್ನುವ ಆಗ್ರಹವಿತ್ತು. ಕರ್ನಾಟಕ ಮೇಳದಲ್ಲಿ ಸಂದರ್ಭ ಸಿಕ್ಕಾಗ ಗೂಡಿನಿಂದ ಹೊರ ಬಂದ ಹಾಡುಹಕ್ಕಿ ಉಲಿಯುತ್ತಿತ್ತು. ಮದ್ದಳೆಯಿಂದ ಕಳಚಿ ಕಾಲಮಿತಿಯ ಸಂಗೀತಗಾರರಾಗುತ್ತಿದ್ದರು. ಚಿಕ್ಕಪ್ಪನಿಗೆ ಮದ್ದಳೆಗಾರನಾಗುವುದು ಇಷ್ಟವಿದ್ದಿರಲಿಲ್ಲ. ತಾನೇ ಅಧಿಕೃತವಾಗಿ ಆಶೀರ್ವಾದ - ಜಾಗಟೆ - ಪಡೆದು ಮನೆಯಲ್ಲೇ ಭಾಗವತಿಕೆಗೆ ಶ್ರೀಕಾರ. ಮದ್ಲೆಗಾರ ದಿನೇಶರು ಭಾಗವತರಾದರು. 

ಆಗಷ್ಟೇ ಪುತ್ತೂರು ಶ್ರೀಧರ ಭಂಡಾರಿಗಳ 'ಪುತ್ತೂರು ಮೇಳ'ವು ದಿಗ್ವಿಜಯ ಆರಂಭಿಸಿತ್ತು. 'ಬಾಲೆ ನಾಗಮ್ಮ, ರಾಣಿ ಚಿತ್ರಾಂಗದೆ' ಪ್ರಸಂಗ ಪ್ರದರ್ಶನ ಪರಿಣಾಮಗಳು ಉಳಿದೆಲ್ಲಾ ಮೇಳಗಳ ಕತ್ತನ್ನು ತನ್ನೆಡೆ ತಿರುಗಿಸಿತ್ತು. ಅಮ್ಮಣ್ಣಾಯರ ಕಂಠಶ್ರೀಯು ಆಗ ಯಕ್ಷಗಾನ ವಲಯದಲ್ಲಿ ಪರಿವರ್ತನೆಯ ಗಾಳಿ. ಪುತ್ತೂರು ಜಾತ್ರೆಯ ಆಟವೊಂದರಲ್ಲಿ ಮಂಡೆಚ್ಚರ ಮತ್ತು ಕರ್ನಾಟಕ ಮೇಳದ ಯಜಮಾನರ ಚಿತ್ತವನ್ನೂ ದಿನೇಶರು ಸೆಳೆದರು. ಇವರಿಬ್ಬರನ್ನು ಮೋಡಿ ಮಾಡಿದ ಭಾಗವತಿಕೆಯು ಕಲಾ ಬದುಕಿಗೊಂದು ಟರ್ನಿಂಗ್.

ಮುಂದಿನ ವರುಷದಿಂದ (1981) ಕರ್ನಾಟಕ ಮೇಳದ ಭಾಗವತ. ಉಂಡ ನೋವುಗಳು ಮೌನವಾದುವು. ಖುಷಿಗಳು ಕುಣಿದುವು. ಮಂಡೆಚ್ಚರಿಂದ ರಂಗಮಾಹಿತಿಗಳ ಪಾಠ. ಪ್ರಸಂಗ ನಡೆಗಳ ಮಾಹಿತಿ. ಪದ್ಯಗಳ, ರಾಗಗಳ ಸ್ವ-ಭಾವ ಪರಿಚಯ. ಪದ್ಯಗಳ ಎತ್ತುಗಡೆಯ ಕೆಣಿಗಳ ಆರ್ಜನೆ. ಅಕ್ಕ ರಾಜೀವಿಯವರಿಂದ ಕಲಿತ ಸಂಗೀತದ ಸ್ವರಸ್ಥಾನಗಳು ಭಾಗವತಿಕೆಗೆ ಅಂದ ನೀಡಿದುವು. ಅಮ್ಮಣ್ಣಾಯರು ಗುರುವಿನ ಹೆಜ್ಜೆಯೊಳಗೆ ಸುತ್ತಿದರು. ಮಂಡೆಚ್ಚರು ಮನತುಂಬಿ ಹರಸಿದರು. ಅಪ್ಪಟ ಶಿಷ್ಯರಾಗಿ ಹೊರಹೊಮ್ಮಿದರು. ಒಂದೇ ರಾತ್ರಿ ಇಬ್ಬರು ಹಾಡಿದರೆಂದರೆ ಯಾರು ಮಂಡೆಚ್ಚರು, ಯಾರು ಅಮ್ಮಣ್ಣಾಯರು ಎಂದು ಗುರುತಿಸಲು ಕಷ್ಟವಾಗುತ್ತಿತ್ತು!

ಮಂಡೆಚ್ಚರ ಹಾಡು ಎಂದರೆ ಭಾವಗಳ ರಾಶಿ. ಪದ್ಯಗಳ ಭಾವ, ಅದಕ್ಕೆ ಹೊಂದುವ ರಾಗಗಳನ್ನು ಅನುಭವಿಸಿ ಹಾಡುತ್ತಿದ್ದರು. ಒಂದು ಹಂತದಲ್ಲಿ ರಾಗದೊಂದಿಗೆ ಮಿಳಿತವಾಗುತ್ತಿದ್ದರು. ಸ್ವತಃ ಅವರೇ ರಾಗವಾಗುತ್ತಿದ್ದರು! ಏರು ಪದ್ಯಗಳು ವೇಷಗಳಿಗೆ ಝೇಂಕಾರದ ಸ್ಪರ್ಶ ನೀಡುತ್ತಿದ್ದುವು. ಪ್ರಸಂಗ ಪದ್ಯಗಳಿಗೆ ಸಂಗೀತದ ರಾಗಗಳ ಮೂಲಕ ಹೊಳಪನ್ನು ತರುವ ಸಾಮಥ್ರ್ಯ ಅನ್ಯಾದೃಶ. ಅವರೊಂದು 'ರಂಗದ ಪುಂಜ'. ಪದ್ಯದ ಒಂದೊಂದು ಅಕ್ಷರಕ್ಕಿರುವ ಭಾವವನ್ನು ಹೆಕ್ಕಿ ಉಣಿಸುತ್ತಿದ್ದರು. ಆಂಗಿಕ ಚೇಷ್ಟೆಗಳಿಲ್ಲ. ರಂಗಸ್ಥಳ ಅವರಿಗೆ ದೇವಾಲಯ.. ಗುರುವನ್ನು ಜ್ಞಾಪಿಸಿಕೊಳ್ಳುತ್ತಾ ಅಮ್ಮಣ್ಣಾಯರು ಭಾವುಕರಾಗುತ್ತಾರೆ. ಮಂಡೆಚ್ಚರ ರಂಗ ಶುಚಿತ್ವವು ಶಿಷ್ಯನಲ್ಲೂ ಪ್ರತಿಫಲಿತವಾಗುತ್ತಿರುವುದನ್ನು ನಾವೆಲ್ಲಾ ನೋಡುತ್ತಿದ್ದೇವೆ. ಅದು ಬಿಗಿಮಾನವಲ್ಲ. ರಂಗದ ಬಿಗಿ.

ಮೂರು ವರುಷ ಗುರುವಿನೊಂದಿಗೆ ವ್ಯವಸಾಯ. ನೋಡಿದ, ಕೇಳಿದ, ಮನನಸಿದ ಜ್ಞಾನ. ಒಂದರ್ಥದಲ್ಲಿ ಏಕಲವ್ಯ ಕಲಿಕೆ. ಮಂಡೆಚ್ಚರು ದೂರವಾದ ಬಳಿಕ ಸ್ಥಾನಕ್ಕೆ ಅಮ್ಮಣ್ಣಾಯರು ಗೌರವ ತಂದರು. ಅದು ವರ್ತಮಾನದಲ್ಲೂ ಹೊಳೆಯುತ್ತಿದೆ. ಅಮ್ಮಣ್ಣಾಯರನ್ನು ಕಂಡಾಗ ಮಂಡೆಚ್ಚರು ನೆನಪಾಗುತ್ತಾರೆ. ಮಂಡೆಚ್ಚರನ್ನು ಜ್ಞಾಪಿಸಿಕೊಂಡರೆ ದಿನೇಶರು ನೆನಪಾಗಲೇಬೇಕು! ಒಂದಕ್ಕೊಂದು ಎರಕ. ಬಹುಶಃ ಯಕ್ಷಲೋಕದಲ್ಲಿ ಇಂತಹ ಎರಕಗಳು ಅಪರೂಪ. ಇಪ್ಪತ್ತೊಂದು ವರುಷದ ಕರ್ನಾಟಕ ಮೇಳದ ವ್ಯವಸಾಯವು ಅಮ್ಮಣ್ಣಾಯರನ್ನು ಯಕ್ಷಗಾನಕ್ಕೆ ಕೊಡುಗೆಯನ್ನಾಗಿ ನೀಡಿತು. ನಂತರ ಕುಂಟಾರು, ಕದ್ರಿ ಮೇಳಗಳ ಬಳಿಕ ಹದಿಮೂರು ವರುಷಗಳಿಂದ ಶ್ರೀ ಎಡನೀರು ಮೇಳದಲ್ಲಿ ವ್ಯವಸಾಯ.

ಪಾತ್ರಗಳಿಗೂ ಮನಸ್ಸಿದೆ. ರಾಗಕ್ಕೂ ಮನವಿದೆ. ಇವೆರಡೂ ಮಿಳಿತಗೊಂಡಾಗ ಭಾಗವತ ಪಾತ್ರವಾಗುತ್ತಾನೆ. ದಿನೇಶರಲ್ಲಿ ಭಾವದ ತೇವ ಸದಾ ಆದ್ರ್ರ. ಭಕ್ತಿ, ದುಃಖ, ಕರುಣ ರಸಗಳಲ್ಲಿ ರಸಗಳಿಗೆ ತನ್ನನ್ನು ಸಮರರ್ಪಿಸಿಕೊಂಡಂತೆ ಭಾಸವಾಗುವ ಭಾಗವತಿಕೆ. 'ಭಕ್ತಸುಧಾಮ, ಪಾಂಚಜನ್ಯ, ಅಕ್ಷಯಾಂಬರ, ಮಾನಿಷಾದ' ಪ್ರಸಂಗಗಳ ಕೆಲವು ಪದ್ಯಗಳ ಭಾವಕೋಶದೊಳಗೆ ಅಮ್ಮಣ್ಣಾಯರು ಜಾರಿಬಿಡುತ್ತಾರೆ. ಭಕ್ತಿರಸದಲ್ಲಿ ಭಕ್ತಿಯ ಕಣ್ಣೀರು, ದುಃಖರಸದಲ್ಲಿ ಪಾತ್ರದೊಂದಿಗೆ ತಾನೂ ಕಣ್ಣೀರಿಡುತ್ತಾ ಲೀನವಾಗುವುದು ಗುರು ಕಲಿಸಿದ ಪಾಠ. ಮಂಡೆಚ್ಚ ಶೈಲಿಯೆಂದರೆ ಅದು ಜೀವಸ್ವರಗಳ ಮರುಹುಟ್ಟು. ಮಂಡೆಚ್ಚರ ಬಳಿಕ ಸ್ವ-ಹಾದಿಯತ್ತ ನೋಟ. ಹೊಸ ಪ್ರಸಂಗಗಳಿಗೆ ನವ್ಯತೆಯ ಸ್ಪರ್ಶ. ಅದರಲ್ಲೂ ನವ್ಯವೆಂದು ಗೋಚರವಾಗದ ಎಚ್ಚರ. ಇಂತಹ ರಂಗ ಎಚ್ಚರದ ಸೂಕ್ಷ್ಮತೆಯಿಂದಾಗಿ ಅಮ್ಮಣ್ಣಾಯರ ಶೈಲಿಗೆ ಒಂಟಿಸಲಗದ ನಡೆ.

      ವಾಲಿಮೋಕ್ಷ ತಾಳಮದ್ದಳೆಯೊಂದರಲ್ಲಿ ಡಾ.ಶೇಣಿ ಗೋಪಾಲಕೃಷ್ಣ ಭಟ್ಟರಿಗೆ ಭಾಗವತಿಕೆ ಇಷ್ಟವಾಗಿ ಬೆನ್ನುತಟ್ಟಿದ್ದರು. ಮುಂದೆ ಒಂದು ಸಂಮಾನ ಸಮಾರಂಭದಲ್ಲಿ, ಶೇಣಿಯವರು ಸಂಮಾನಿಸಿ ಮಂಡೆಚ್ಚರ ಫೋಟೋ ಒಂದನ್ನು ಉಪಾಯನವಾಗಿ ನೀಡಿದ್ದರು. ಜತೆಗೆ 'ಪೌರಾಣಿಕ ಪ್ರಸಂಗಗಳನ್ನು ಸಮರ್ಥವಾಗಿ ಮುನ್ನಡೆಸಬಲ್ಲ ಭಾಗವತ' ಎನ್ನುವ ಪ್ರಶಂಸೆಯನ್ನೂ ಮಾಡಿದ್ದರು - ಘಟನೆಯನ್ನು ಹೇಳುತ್ತಿದ್ದಾಗ ದಿನೇಶರು ಪುಳಕಗೊಳ್ಳುತ್ತಾರೆ.

     ಅಮ್ಮಣ್ಣಾಯರದು ಸ್ವ-ರೂಪಿತ ವ್ಯಕ್ತಿತ್ವ. ಮೇಲ್ನೋಟದಲ್ಲಿ ನೋಡಿದರೆ ತುಂಬಾ ಗಂಭೀರ. ಮುಕ್ತವಾಗಿ ತೆರೆದುಕೊಳ್ಳುವ ಗುಣ. ರಂಗದಲ್ಲಿ ಧ್ಯಾನಸ್ಥ ಸ್ಥಿತಿ. ಅವರು ಚೌಕಿಯಿಂದ ರಂಗಕ್ಕೆ ಬರುವ ನಡಿಗೆಯ ಗತಿಯ ಅಂದವನ್ನು ಹತ್ತಿರದಿಂದ ನೋಡಬೇಕು. ಭಾಗವತ, ಮದ್ದಳೆವಾದಕ, ಚೆಂಡೆವಾದಕ - ಮೂವರ ನಾದಮನಸ್ಸುಗಳು ಒಂದಾದಾಗ ಮಾತ್ರ ನಿಜಾರ್ಥದ ರಾಗವೈಭವ, ನಾದ ವೈಭವ. ಭಾಗವತನನ್ನು ಓವರ್ಟೇಕ್ ಮಾಡುವ ವಾದನಗಳಿಂದ ರಂಗದಲ್ಲಿ ರಸಸೃಷ್ಟಿಯಾಗದು. ಎನ್ನುತ್ತಾರೆ. ಯಾವುದೇ ಪ್ರಭಾವಗಳ ದಾಸರಾಗದೆ ನಿಂತನಿಲುವಿನಲ್ಲಿ ದೃಢತೆಯಲ್ಲಿರುವುದರಿಂದ ಅಮ್ಮಣ್ಣಾಯರ ಭಾಗವತಿಕೆಯಲ್ಲಿ ಪ್ರೇಕ್ಷಕರನ್ನು ಮೆಚ್ಚಿಸುವ ಹಠವಿಲ್ಲ! ಪ್ರೇಕ್ಷಕರೇ ಮೆಚ್ಚಿಕೊಂಡಿದ್ದಾರೆ. ಕಲೆಯೇ ಮೆಚ್ಚಿಕೊಂಡಿದೆ.

     ರಂಗದಲ್ಲಿ ಭಾಗವತಿಕೆಯ ಜಾಡಿನಲ್ಲೇ ವೇಷಗಳು ಚಲಿಸಿದರೆ ಅದರಿಂದ ಸಿಗುವ ರಂಗಸುಖ ಅನನ್ಯ. ವೇಷಧಾರಿಗಳೇ ಭಾಗವತನನ್ನು ನಿಯಂತ್ರಿಸಹೊರಟರೆ ಅದು ಹೇಗೆ ಯಕ್ಷಗಾನವಾದೀತು? ಪ್ರಸಂಗ ಕವಿಯ ಆಶಯದ ವಿರುದ್ಧದ ರಂಗ ಪ್ರಸ್ತುತಿಗಳು ಕವಿಗೆ ಮಾಡುವ ಅವಮಾನ, ದಿನೇಶ ಅಮ್ಮಣ್ಣಾಯರ ಮನದ ಮಾತುಗಳಲ್ಲಿ ರಂಗವಿಷಾದ ಮಿಂಚಿತು. 

ಲೇ : ನಾ. ಕಾರಂತ ಪೆರಾಜೆ

ಚಿತ್ರಗಳು : ಸ್ವಸ್ತಿಕ್ ಪದ್ಯಾಣ


 

No comments:

Post a Comment