Thursday, July 7, 2022

ಆ ದಿನಗಳನ್ನು ಈ ಚಿತ್ರ ನೆನಪಿಸಿತು..

          1992... ಹೊಸದಿಗಂತದ ಸಾಪ್ತಾಹಿಕ ಪುರವಣಿಗೆ ಲೇಖನಕ್ಕಾಗಿ ಡಾ.ಶೇಣಿ ಗೋಪಾಲಕೃಷ್ಣ ಭಟ್ಟರ ಮುಂದೆ ನಿಂತಿದ್ದೆ. ಶೇಣಿಯವರ ವ್ಯಕ್ತಿತ್ವದ ಆಳ, ಎತ್ತರ ತಿಳಿಯದ ವಯಸ್ಸು ನನ್ನದು. ಹತ್ತೋ ಹದಿನೈದೋ ಪ್ರಶ್ನೆಗಳು ನನ್ನಲ್ಲಿದ್ದುವು. ಅದೂ ಬಾಲಿಶ! ಐದು ನಿಮಿಷದಲ್ಲಿ ಅದಕ್ಕೆ ಉತ್ತರವೂ ಪ್ರಾಪ್ತವಾಯಿತು... ಸ್ವಲ್ಪ ಹೊತ್ತು ಶೇಣಿಯವರು ಮೌನವಾದರು..

          ಅಷ್ಟು ಹೊತ್ತಿಗೆ ಅವರ ಭಾವ ಪ್ರೊ.ವಿ.ಬಿ.ಮೊಳೆಯಾರ್ ಕಾಫಿಯೊಂದಿಗೆ ಹಾಜರ್.... ಕಾಫಿ ಹೀರುತ್ತಾ ಮಾತಿಗೆ ತೊಡಗಿದರು. ಮೊಳೆಯಾರರೂ ಹಾಸ್ಯ ಚಟಾಕಿ ಹಾರಿಸುತ್ತಿದ್ದರು... ಶೇಣಿಯವರ ಮಾತಿನಲ್ಲಿ ಯಕ್ಷ ಲೋಕದ ವಿವಿಧ ಯೋಚನೆಗಳ ಅನಾವರಣ.

          ಆಗ ನನ್ನಲ್ಲಿ ಇದ್ದುದು ಒಂದು ಚಿಕ್ಕ ಟೇಪ್ ರೆಕಾರ್ಡರ್. ಒಂದು ಗಂಟೆಯ ಕ್ಯಾಸೆಟ್. ಶೇಣಿಯವರು ಎರಡು ಗಂಟೆಗೂ ಹೆಚ್ಚು ಮಾತನಾಡಿದರು!  ಅವರ ಬೌದ್ಧಿಕ ಪ್ರಖರತೆಯು ನನ್ನನ್ನು ಕುಬ್ಜನನ್ನಾಗಿ ಮಾಡಿತು. ಕೊನೆಗೆ ಒಂದು ಗಂಟೆ ಕ್ಯಾಸೆಟ್ಟಿನಲ್ಲಿ ಎಷ್ಟು ವಿಷಯಗಳು ಬಂದುವೋ ಅದಕ್ಕೆ ಪ್ರಶ್ನೆಗಳನ್ನು ಹೊಸೆದು ಸಂದರ್ಶನ ಲೇಖನವನ್ನೇನೋ ಬರೆದೆ. ಹೊಸದಿಗಂತದಲ್ಲಿ ಪೂರ್ಣಪುಟದಲ್ಲಿ ಪ್ರಕಟವಾಯಿತು.

          ವಾರದ ಬಳಿಕ ಕಾರ್ಯಕ್ರಮವೊಂದಕ್ಕೆ ಪುತ್ತೂರಿಗೆ ಬಂದಿರುವಾಗ ಪೇಪರ್ ತೋರಿಸಿದೆ.  ಬೆನ್ನುತಟ್ಟಿದರು. ಮತ್ತೆ ಆಗಾಗ ಅವರ ಕಾಸರಗೋಡಿನ ‘ದಾಸನಿವಾಸ’ಕ್ಕೆ ಭೇಟಿ ನೀಡುತ್ತಿದ್ದೆ. ಇಡೀ ದಿವಸ ಕುಳ್ಳಿರಿಸಿಕೊಂಡು ಯಕ್ಷಲೋಕದ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದರು.

          ಈಗ ಅನ್ನಿಸುತ್ತಿದೆ... ಅವನ್ನೆಲ್ಲಾ ದಾಖಲಿಸಬೇಕಿತ್ತು... ಆಗ ಸಶಕ್ತ ಟೇಪ್ ರೆಕಾರ್ಡರ್ ಇರುತ್ತಿದ್ದರೆ.... ಅಂತಹುದನ್ನು ಖರೀದಿಸುವಷ್ಟು ನಾನೂ ಸಶಕ್ತನಾಗಿದ್ದಿರಲ್ಲ... ಏನೇ ಇರಲಿ.. ಶೇಣಿಯವರೊಂದಿಗೆ ಸುಮಾರು ಒಂದೂವರೆ ದಶಕಕ್ಕೂ ಮಿಕ್ಕಿದ ಒಡನಾಟ ನನ್ನ ಬದುಕಿನ ಒಂದು ಹೆಮ್ಮೆ.

No comments:

Post a Comment