ಮನಸ್ಥಿತಿಯನ್ನು ಹೊಂದಿಕೊಂಡು ಅಭಿವ್ಯಕ್ತಿ. ಇಂದು ಅಭಿನಯಿಸಿದ ಕೌರವನೋ, ಮಹಿಷಾಸುರನೋ ನಾಳೆಯೂ ಆದೀತೆಂದು ಊಹಿಸಲಾಗದು. ಮನಸ್ಥಿತಿಯನ್ನು ಶಬ್ದಗಳಲ್ಲಿ ಕಟ್ಟಿಕೊಡುವುದು ಸಾಧ್ಯವಿಲ್ಲ. ಅದು ಅನುಭವ ವೇದ್ಯ. ಬದುಕಿನಲ್ಲಿ ಜವಾಬ್ದಾರಿಯುಳ್ಳ ಮನಸ್ಸುಗಳಿಗೆ ಇಂತಹ ಬದ್ಧತೆಯ ಬದುಕಿದೆ. ಅದನ್ನು ಜಾಣ್ಮೆಯಿಂದ ನಿಭಾಯಿಸುತ್ತಾನೆ ಕೂಡಾ. ನಮ್ಮ ಮಧ್ಯೆ ಇರುವ ಅನೇಕ ಹಿರಿಯರ ಬದುಕು ಬದ್ಧತೆಯಿಂದ ಕೂಡಿದ್ದರಿಂದಾಗಿಯೇ ಸದಾ ಸ್ಮರಣೀಯರು. ಗೌರವಾದರಣೀಯರು.
ಬಣ್ಣದ ಮನೆಯತ್ತ ಇಣುಕೋಣ. ಒಂದಷ್ಟು ಮಂದಿ ಇದ್ದಾರೆ. ಅವರೊಳಗೆ ಮನಸ್ಸು, ಭಾವಗಳು.. ಇದೆಯೋ, ಇಲ್ಲವೋ? ನನಗಂತೂ ಸಂಶಯವಿದೆ! ಭಾವಶುಷ್ಕರಾಗಿ ಭಾವ, ಭಾವನೆಗಳ ವಿಚಾರವಾಗಿ ಗಟ್ಟಿ ಸ್ವರದಲ್ಲಿ ಮಾತನಾಡುತ್ತಾರೆ! ವೃತ್ತಿ ಮತ್ತು ಹವ್ಯಾಸಿ ರಂಗದಲ್ಲಿ ಇಂತಹ ‘ಭಾವರೋಗಿ’ಗಳ ಸಂಖ್ಯೆ ಕಡಿಮೆಯಲ್ಲ. ಯಾವುದೇ ಪಾತ್ರ ವಹಿಸಲಿ, ವೇಷ ಮಾತ್ರ ಅಚ್ಚುಕಟ್ಟು. ಹಿಮ್ಮೇಳದ ನುಡಿಗೆ ದುಡಿಯುತ್ತಾರೆ! (ಅಭಿವ್ಯಕ್ತಿ ಅಲ್ಲ) ಚೌಕಿಗೆ ಮರಳುತ್ತಾರೆ. ತನ್ನ ಬೆನ್ನನ್ನು ತಟ್ಟಿಕೊಳ್ಳುತ್ತಾರೆ. ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಾರೆ. ಜಾಲತಾಣಗಳಲ್ಲಿ ಹರಿಯ ಬಿಡುತ್ತಾರೆ. ವಾಟ್ಸಾಪ್, ಫೆಸ್ಬುಕ್ಕಿನಲ್ಲಿ ತನ್ನ ಚಿತ್ರಗಳೂ ಎಷ್ಟು ಅಂಟಿಸಲ್ಪಟ್ಟಿವೆ ಎನ್ನುವ ಮಾನದಂಡದಲ್ಲಿ ಅನುಭವದ ರೇಖೆಗಳ ನಿರ್ಧಾರ!
ದೊಡ್ಡ ಮೇಳಗಳಲ್ಲಿ ನಿಗದಿತ ಕಲಾವಿದರಲ್ಲದೆ ಅನ್ಯ ಹವ್ಯಾಸಿ ಕಲಾವಿದರಿಗೆ ಅವಕಾಶ ಕಡಿಮೆ, ಇಲ್ಲವೆಂದಲ್ಲ. ಕೆಲವು ಮೇಳಗಳಲ್ಲಿ ಆಗೊಮ್ಮೆ ಈಗೊಮ್ಮೆ ಹವ್ಯಾಸಿಗಳಲ್ಲಿ ಅನುಭವವುಳ್ಳವರನ್ನು ಆಹ್ವಾನಿಸುವುದಿದೆ. ಇಂತಹ ಹೊತ್ತಲ್ಲಿ ಸ್ಥಾಪಿತ ಕಲಾವಿದರ ಮಾನಸಿಕ ವಿಕಾರಗಳನ್ನು ಹವ್ಯಾಸಿ ಎದುರಿಸಬೇಕಾಗುತ್ತದೆ. ಅವರ ಜತೆ ಸಹಪಾತ್ರಧಾರಿಯಾದರೆ ರಂಗನಡೆಗಳ ಸಮಾಲೋಚನೆಯನ್ನು ಕಲಾವಿದ ಬಯಸುತ್ತಾನೆ. ಇದು ವೃತ್ತಿ ಮನಸ್ಸಿಗೆ ಕಿರಿಕಿರಿ! ಪೂರ್ತಿ ರಂಗಮಾಹಿತಿಯನ್ನು ಬಿಟ್ಟುಕೊಡರು. ರಂಗದಿಂದ ನಿರ್ಗಮಿಸಿ ಬಣ್ಣದ ಮನೆಗೆ ಬಂದಾಗ ಗೊಣಗಾಟಗಳ ಸರಮಾಲೆ. ಅದರಲ್ಲೂ ಹಗುರ ಮಾತುಗಳ ಮಾಲೆ. ಸ್ಥಾಪಿತ ಕಲಾವಿದ ಮೊದಲೇ ಸಮಾಲೋಚಿಸಿದ್ದರೆ ಇಂತಹ ಗೊಣಗಾಟಗಳ ಅಗತ್ಯ ಬಾರದು. ಗೊಣಗಾಡುವುದು, ಇತರ ಕಲಾವಿದರ ಎದುರು ತನ್ನ ಸೀನಿಯಾರಿಟಿಯನ್ನು ಪ್ರದರ್ಶಿಸುವುದೇ ಅರ್ಹತೆ ಎಂದು ನಂಬಿರುವುದು ಭ್ರಮೆ.
ಪ್ರಸಂಗವೊಂದು ನಿಶ್ಚಯವಾಯಿತು ಎಂದಿಟ್ಟುಕೊಳ್ಳೋಣ. ಆ ಪ್ರಸಂಗದಲ್ಲಿ ಅವಕಾಶ ಕಡಿಮೆ ಅಥವಾ ತಾನು ವಿಜೃಂಬಿಸುವ ಪಾತ್ರ ಇನ್ನೊಬ್ಬರ ಪಾಲಾಯಿತು ಎಂದಾದಲ್ಲಿ ಆ ಪ್ರಸಂಗವನ್ನೇ ಕುಲಗೆಡಿಸುವ ತನಕ ಮುಂದಾಗ್ತಾನೆ! ತನ್ನ ಅಭಿವ್ಯಕ್ತಿಯನ್ನು ಕುಂಠಿತಗೊಳಿಸುತ್ತಾ, ಬಣ್ಣದ ಮನೆಯ ವಿದ್ಯಮಾನಗಳನ್ನು ರಂಗದಲ್ಲಿ ಹರಟುತ್ತಾ, ಪರಿಚಿತರದಲ್ಲಿ ಪ್ರಸಂಗ-ಪ್ರದರ್ಶನದ ದೋಷಗಳನ್ನೇ ಪಟ್ಟಿಮಾಡುತ್ತಾ ಇನ್ನೊಮ್ಮೆ ಆ ಪ್ರಸಂಗ ಪ್ರದರ್ಶನವಾಗದಂತೆ ಮಾಡುವಲ್ಲೇ ಆಸಕ್ತಿ. ಹಿರಿಯರ ವರ್ತನೆಗಳು ಸಹಜವಾಗಿ ಕಿರಿಯರಲ್ಲಿ ವೈರಸ್ ಆಗಿ ನುಗ್ಗಿಬಿಡುತ್ತದೆ. ಹೊಸ ಪ್ರಸಂಗ ಕೈಗೆ ಸಿಕ್ಕಿದಾಗ ಮೇಳದ ಪ್ರದರ್ಶನ ಅಂದವಾಗಬೇಕು, ನಾಲ್ಕು ಜನ ಮೆಚ್ಚಿಕೊಳ್ಳಬೇಕೆಂಬ ಮನಃಸ್ಥಿತಿಗೆ ಅಹಂ ಲಗಾಮು ಹಾಕಿದೆ.
ಸಹ ಪಾತ್ರಧಾರಿ ಹೊಸಬ ಅಥವಾ ಹವ್ಯಾಸಿ ಕಲಾವಿದನಾದರಂತೂ ಮುಗಿಯಿತು! ಆತನ ಚಿತ್ತವನ್ನು ಪೂರ್ತಿ ಕೆಡಿಸುತ್ತಾ, ತಾನೂ ನೆಮ್ಮದಿಯಿಂದ ವಂಚಿತನಾಗಿ ಪಾತ್ರ ವಹಿಸುವವರನ್ನು ನೋಡಿದ್ದೇನೆ. ಜತೆಗೆ ಯಾರ್ಯಾರನ್ನೋ ಟಾರ್ಗೆಟ್ ಮಾಡಿ ದೂಷಿಸುವುದನ್ನು ಗಮನಿಸಿದ್ದೇನೆ. ತಾನು ಶ್ರೇಷ್ಠ ಎಂದು ಬೀಗುವ, ಜತೆ ಪಾತ್ರಧಾರಿಗಳು ಕನಿಷ್ಠವೆಂದು ನೋಡುವ ಹಿರಿಯ ಕಲಾವಿದ ತನ್ನ ವರ್ತನೆಯನ್ನು ಬದಲಾಯಿಸಿಕೊಳ್ಳುವುದೇ ಕಾಲದ ಅವಶ್ಯಕತೆ. ಇದು ಹೊಂದಾಣಿಕೆಯ ಕಾಲ. ಪರಸ್ಪರ ಸಮಾಲೋಚಿಸಿದ ಬಳಿಕವೇ ರಂಗಕ್ಕೆ ಯಾಕೆ ಪ್ರವೇಶಿಸಕೂಡದು? ಯಾವುದೇ ಮೇಳದಲ್ಲಿ ಒಂದು ಸ್ಥಾಪಿತ ವ್ಯವಸ್ಥೆಯಿರುತ್ತದೆ. ಆ ವ್ಯವಸ್ಥೆಯನ್ನೇ ತನ್ನ ವರ್ತನೆಯಿಂದ ಪ್ರಶ್ನಿಸುವಂತೆ ಮಾಡುವ ಕಲಾವಿದನನ್ನೇ ಪ್ರಶ್ನಿಸುವ ಕಾಲ ಸಮನಿಸಿದೆ.
ಈಚೆಗೆ ಓರ್ವ ಹಿರಿಯರು ಮಾತಿಗೆ ಸಿಕ್ಕರು. ಒಂದು ಆಟದ ಪ್ರದರ್ಶನದ ಕರಪತ್ರದಲ್ಲಿ ಒಬ್ಬರ ಹೆಸರಿನ ಮುಂದಿರುವ ಅವರ ಸರ್ನೇಮ್ ಬಿಟ್ಟುಹೋಗಿತ್ತಂತೆ. ಅದಕ್ಕಾಗಿ ಆ ಕಲಾವಿದ ರಾದ್ದಾಂತ ಎಬ್ಬಿಸಿದ ರೀತಿ ತಲೆ ತಗ್ಗಿಸುವಂತಾದ್ದು. ಆತ ಬಳಸಿದ ಭಾಷೆ ಶಿಷ್ಟತೆಯಿದ ದೂರ, ಬಹುದೂರ. ಶಿಷ್ಟತೆಯ ಅರ್ಥ ಗೊತ್ತಿಲ್ಲದವರಿಂದ ಇದೆಲ್ಲ ಸಾಧ್ಯವಾದೀತು. ಒಂದು ಪ್ರದರ್ಶನದಲ್ಲಿ ತನ್ನ ಸರ್ನೇಮ್ ಕಳಕೊಂಡರೆ ಬದುಕಿನಲ್ಲಿ ನಷ್ಟವಾಗದು! ಬಹುಶಃ ಕಲಾವಿದನ ನಿಜ ವಯಸ್ಸು (ಕಲಾಯಾನದ ವಯಸ್ಸಲ್ಲ) ಹೆಚ್ಚಾದಂತೆ ಇಂತಹ ಕೀಳರಿಮೆಗಳು ಪ್ರಕಟವಾಗುವುದೋ ಏನೋ?
ಕಲಾವಿದ ಅಂದಾಕ್ಷಣ ಸಮಾಜದಲ್ಲಿ ಉತ್ತಮ ಸ್ಥಾನವಿದೆ. ಆತ ಎದುರಾದಾಗ ಮಾತನಾಡಿಸುವವರಿದ್ದಾರೆ. ಮಾನಿಸುವವರಿದ್ದಾರೆ. ಉಪಾಹಾರ, ಊಟ ನೀಡಿ ಸತ್ಕರಿಸುವವರಿದ್ದಾರೆ. ಕೆಲವೊಮ್ಮೆ ಉಳ್ಳವರು ದಕ್ಷಿಣೆ ನೀಡುವುದೂ ಇದೆ! ಹೀಗೆ ಆತಿಥ್ಯ ನೀಡಿದ ಮಂದಿ ಚೌಕಿಗೆ ಹೋದಾಗ ಕಲಾವಿದನ ಮುಖದಲ್ಲಿ ಕಿರುನಗೆಯೂ ಮೂಡುವುದಿಲ್ಲ! ಮುಖ ತಿರುಗಿಸುವ ಒಂದಷ್ಟು ಮನಸ್ಸುಗಳು ಮನಸ್ಸಿಗೆ ಬಂದುವು! ಕಲಾವಿದರನ್ನು ಮಾತನಾಡಿಸಲೆಂದೇ ಅಭಿಮಾನಿಗಳು ಚೌಕಿಗೆ ಆಗಮಿಸುತ್ತಾರೆ. ಮಾತನಾಡಿಸುವ ಕನಿಷ್ಠ ಸೌಜನ್ಯವನ್ನೂ ಕಲಾವಿದ ಇರಿಸಿಕೊಳ್ಳದೇ ಇದ್ದರೆ ಅಭಿಮಾನಿಗೆ ನಷ್ಟವಲ್ಲ. ಆದರೆ ಈಗೀಗ ಬಣ್ಣದ ಮನೆಯಲ್ಲಿ ಅಭಿಮಾನಿಗಳ ದಂಡು ಕಲಾವಿದರ ಏಕಾಂತಕ್ಕೆ ಮಾರಕವಾಗಿದೆ!
ಪರಿಚಯದ ಕಲಾವಿದನನ್ನು ಮಾತನಾಡಿಲು ಚೌಕಿಗೆ ಬಂದಾಗ ಕೆಲವು ಸ್ಥಾಪಿತ ಮನಸ್ಸುಗಳು ಕೆರಳುತ್ತವೆ! ಎದುರಿನಿಂದ ಹಲ್ಲುಗಿಂಜುತ್ತಾ, ಹಿಂದಿನಿಂದ ಹಗುರವಾಗಿ ಮಾತನಾಡುವುದು ಕಲಾವಿದನ ಅರ್ಹತೆ ಎಂದು ಸ್ಥಾಪಿಸಲ್ಪಟ್ಟಿದೆ. ಯಾಕೆ ಹೀಗೆ? ಕಲಾವಿದ ಬದಲಾಗುವುದು ಯಾವಾಗ? ನಾಲ್ಕು ಗೋಡೆಯ ಚೌಕಿಯೊಳಗೆ ಪೂರ್ಣವಾಗಿ ತನ್ನನ್ನು ಬಂಧಿಸಿಟ್ಟುಕೊಂಡಿದ್ದಾನೆ. ಬೌದ್ಧಿಕ ಪಕ್ವತೆಯ ಕೊರತೆಯು ಆತನನ್ನು ಹೊರಗೆ ಬರದಂತ ತಡೆದಿದೆ. ಬದಲಾಗಬೇಕಾದುದು ರಂಗವಲ್ಲ, ತಾನು ಎನ್ನುವ ಎಚ್ಚರ ಬಂದುಬಿಟ್ಟರೆ ಎಲ್ಲವೂ ಸಲೀಸು. ಬೆರಳೆಣಿಕೆಯ ಕಲಾವಿದರ ವಿಚಿತ್ರ ವೈವಿಧ್ಯ ಸ್ವಭಾವಗಳು ಆ ಕ್ಷೇತ್ರದ ಅನ್ಯ ಕಲಾವಿದರಿಗೆ ಮುಳ್ಳಾಗಿ ಪರಿಣಮಿಸಿದೆ. ಕಲಾವಿದ ಅಂದಾಕ್ಷಣ ಎಲ್ಲರೂ ಒಂದೇ ಎನ್ನುವ ನಿಲುವು ಸಮಾಜದಲ್ಲಿ ಕಾಣುತ್ತದೆ.
ಮೇಳದಲ್ಲಿ ಒಬ್ಬಬ್ಬರ ವಿಕಾರಗಳು ಇಡೀ ತಂಡದ ಸಂತೋಷಕ್ಕೆ ಮಾರಕ. ಸೀನಿಯರ್ ಎನ್ನುವ ಪದದ ವ್ಯಾಪ್ತಿಯು ದಿಗಂತ ವ್ಯಾಪ್ತಿಯಲ್ಲ! ಅದು ಆ ರಂಗದ ವ್ಯಾಪ್ತಿ ಎಂದು ಕಲಾವಿದ ತಿಳಿದುಕೊಳ್ಳಬೇಕು. ಸೀನಿಯರ್ ವ್ಯಕ್ತಿತ್ವದ ಅನಾವರಣಕ್ಕೆ ರಂಗವೇ ತಾಣ. ಆ ತಾಣದಲ್ಲಿ ತನ್ನ ಅನುಭವ ಪ್ರಕಟವಾಗದೆ; ಚೌಕಿಯಲ್ಲೋ, ಸಹ ಕಲಾವಿದರಲ್ಲೋ, ಅಭಿಮಾನಿಗಳಲ್ಲೋ ಪ್ರಕಟವಾದರೆ ಏನು ಪ್ರಯೋಜನ? ಚೌಕಿಯ ಸಹ ಕಲಾವಿದರೊಂದಿಗೆ ಓರ್ವ ಕಲಾವಿದನ ವಿಕಾರಗಳು, ಹಗುರ ವ್ಯಕ್ತಿತ್ವಗಳು ಪ್ರಸ್ತುತಿಗೊಂಡರೆ ತನ್ನನ್ನು ತಾನು ಹಗುರ ಮಾಡಿಕೊಂಡಂತೆ. ಪ್ರೌಢತೆ ಇರುವುದು ಬುದ್ಧಿಯಲ್ಲಾದರೂ, ಅದರ ಪ್ರತಿಫಲನ ವ್ಯಕ್ತಿತ್ವದಲ್ಲಿ ಅಲ್ವಾ. ವ್ಯಕ್ತಿತ್ವವೇ ಮೂರಾಬಟ್ಟೆಯಾದರೆ? ಕಲೆ ಎಲ್ಲಿ? ಕಲಾವಿದ ಎಲ್ಲಿ? ಕಲಾಭಿಜ್ಞತೆ ಎಲ್ಲಿ?
ಎರಡು ವಾರಗಳಲ್ಲಿ ಕಲಾವಿದನ ಕಾಣದ ವ್ಯಕ್ತಿತ್ವಗಳ ಕುರಿತು – ಚಿಕ್ಕ ಕಲಾವಿದನಾಗಿ ನನ್ನನ್ನೂ ಸೇರಿಸಿಕೊಂಡು - ನಾಲ್ಕಾರು ವ್ಯಕ್ತಿತ್ವಗಳನ್ನು ಅಕ್ಷರಕ್ಕಿಳಿಸಿದ್ದೇನೆ. ಇನ್ನೊಂದಿಷ್ಟು ಮುಂದಿನ ವಾರ. ಇದು ಯಾರ ಕುರಿತಾದ ಟಾರ್ಗೆಟ್ ಅಲ್ಲ. ಒಟ್ಟೂ ಯಕ್ಷಗಾನ ಕ್ಷೇತ್ರದಲ್ಲಿ ಪ್ರಕಟವಾಗುತ್ತಿರುವ ವ್ಯಕ್ತಿತ್ವಗಳ ಮಾದರಿಗಷ್ಟೇ. ಹತ್ತಿರದಿಂದ ನೋಡಿದ ದರ್ಶನಗಳು. ಈ ರೀತಿಯ ದರ್ಶನದ ಹಿಂದಿರುವ ಪ್ರದರ್ಶನದ ಗಾಢತೆ ಎಷ್ಟಿರಬಹುದು? ಇದು ಒಟ್ಟೂ ಕಲಾ ಪ್ರಜ್ಞೆಯೊಂದರ ಬೆಳವಣಿಗೆಗೆ ಪೂರಕವಾಗಲಾರದು.
ಯಕ್ಷಗಾನವೆಂದರೆ - ಬಣ್ಣ ಹಚ್ಚುವುದು, ವೇಷ ತೊಡುವುದು, ರಂಗದಲ್ಲಿ ಕುಣಿದು ನಿರ್ಗಮಿಸಿವುದು, ಬಣ್ಣ ತೆಗೆಯುವುದು. ಇವಿಷ್ಟೇ ಅಲ್ಲ. ಅದರಾಚೆಗಿನ ಲೋಕವನ್ನು ಕಲಾವಿದ ನೋಡುವಂತಾದರೆ ವೇಷಗಳ ಬಣ್ಣಗಳಿಗೆ ನಿಜಾರ್ಥ ಪ್ರಾಪ್ತವಾದೀತು.
ಸಾಂದರ್ಭಿಕ ಚಿತ್ರ : ಕೊಂಗೋಟ್ ರಾಧಾಕೃಷ್ಣ ಭಟ್
Prajavani / ದಧಿಗಿಣತೋ / 18-5-2018
Very true.
ReplyDelete