Friday, September 7, 2018

ಆಟ ಭರ್ಜರಿ, ಕುರ್ಚಿ ಖಾಲಿ!

                                      ಸಾಂದರ್ಭಿಕ ಚಿತ್ರ : ಮುರಳಿ ಎಂ. ಅಬ್ಬೆಮನೆ

                ವಾರದ ಹಿಂದೆ ಆಪ್ತರಲ್ಲಿಗೆ ಸಮಾರಂಭವೊಂದಕ್ಕೆ ಹೋಗಿದ್ದೆ. ನೂರೋ ಇನ್ನೂರೋ ಮಂದಿಯಿರಲಿಲ್ಲ. ಚಿಕ್ಕ, ಚೊಕ್ಕ ಕಾರ್ಯಕ್ರಮ. ಅವರ ಮನೆಗೆ ತಾಗಿಕೊಂಡಂತೆ ಬ್ರಹ್ಮಚಾರಿಯೋರ್ವರ ಬಿಡಾರ. ಲೋಕಾಭಿರಾಮದ ಮತುಕತೆಯ ಮಧ್ಯೆ ಮನೆಯಿಂದ ಶಿಳ್ಳು, ಚಪ್ಪಾಳೆ, ಉಘೆ.. ಉದ್ಗಾರ! ಮೈದಾನದಲ್ಲಾದರೆ ಕೇಳಿಯೂ ಕೇಳದಂತಿರಬಹುದು. ಕ್ರಿಕೆಟ್ ಋತುವಿನಲ್ಲಾಗಿದ್ದರೆ ಸರಿ; ‘ಫೋರ್, ಸಿಕ್ಸ್, ಶತಕಬಾರಿಸಿದಾಗ ಸಂತಸದ ಪ್ರತಿಕ್ರಿಯೆಗಳು ಏಕಾಂತದಲ್ಲೂ ಹೊರಹೊಮ್ಮುತ್ತದೆ. ಅದು ಕ್ರಿಕೆಟ್ ಸಮಯವಲ್ಲ. ಕಾಲು ಹೊರಗಿಡಲೂ ಅಸಾಧ್ಯವಾದ ಜಡಿ ಮಳೆ. ಶಿಳ್ಳೆಯ ಮೂಲ ಸಂತೋಷ ಯಾವುದು? 
                ಪ್ರಾದೇಶಿಕ ವಾಹಿನಿಯೊಂದರಲ್ಲಿಅಭಿಮನ್ಯು ಕಾಳಗಯಕ್ಷಗಾನ ಪ್ರದರ್ಶನವು ಪ್ರಸಾರವಾಗುತ್ತಿತ್ತು.  ಅಭಿಮನ್ಯು ಪಾತ್ರದ ಪ್ರವೇಶದ ಸಂದರ್ಭ. ಪಾತ್ರಧಾರಿಯ ದಿಂಙಣದಿಂದ ಖುಷಿಪಟ್ಟ ಅವರು ಸಂತೋಷವನ್ನು ಶಿಳ್ಳೆ, ಚಪ್ಪಾಳೆಯ ಮೂಲಕ ಸಂಭ್ರಮಿಸಿದ್ದರು. ಪ್ರತಿ ಪದ್ಯಕ್ಕೆ ಅಭಿವ್ಯಕ್ತಿಸುವ ಕಲಾವಿದನ ಸಾಮಥ್ರ್ಯ  ಮೆಚ್ಚುವಂತಾದ್ದು. ಶುಷ್ಕಭಾವದವನೂ ಒಮ್ಮೆ ಕಣ್ಣಗಲಿಸಿ ನೋಡುವಂತಿತ್ತು. ಸ್ವಲ್ಪ ಸಮಯದ ಹಿಂದೆ ಮಂಗಳೂರಿನಲ್ಲಿ ಜರುಗಿದ ಆಟದ ಮರುಪ್ರಸಾರವದು.
ಇರಲಿ, ಕೆಟ್ಟ ಸಂಶೋಧನಾ ಬುದ್ದಿ ಜಾಗೃತವಾಯಿತು. ಅವರನ್ನೊಮ್ಮೆ ನೋಡಿಯೇ ಬಿಡೋಣ ಎಂದು ಸದ್ದಿನ ಜಾಡನ್ನು ಅನುಸರಿಸಿ ಕಿಟಕಿಯಿಂದ ಇಣುಕಿದ್ದೇ ಇಣುಕಿದ್ದು. ಅವರು ಮುಜುಗರದಿಂದ ಮುದ್ದೆಯಾದರು! ತಪ್ಪಲ್ಲ ಬಿಡಿ. ಅದು ಒಂದು ಪ್ರದರ್ಶನ, ಒಂದು ಪಾತ್ರವು ನಮ್ಮೊಳಗಿಳಿದು ಉಂಟುಮಾಡುವ ಸುಖದ ಪ್ರತಿಕ್ರಿಯೆ.
            ಬಹುಶಃ ಸಭಾಭವನದಲ್ಲಿ ಆಟವನ್ನು ವೀಕ್ಷಿಸಿರುತ್ತಿದ್ದರೆ ಸುಖದ ಪ್ರತಿಕ್ರಿಯೆ ಅವರಲ್ಲಿ ಮೂಡಲಾರದಿತ್ತೇನೋ. ಟಿವಿ ಪರದೆಯ ಮೇಲೆ ಪಾತ್ರಧಾರಿಯ ಭಾವ, ಚಲನೆಗಳನ್ನು ಕ್ಯಾಮರಾ ವಿವಿಧ ಕೋನಗಳಲ್ಲಿ ಕಂಪೋಸ್ ಮಾಡಿ ಹರಿಯಬಿಟ್ಟಾಗ, ಸಭಾಭವನದಲ್ಲಿ ಕುಳಿತು ಅನುಭವಿಸುವ ಆನಂದಕ್ಕಿಂತ ಎಷ್ಟೋ ಪಟ್ಟು ಮುದ ನೀಡುವ ಅವಕಾಶಗಳು ನಿಚ್ಚಳ. ಕಣ್ಣಿಗೆ ಹಿತವಾದ ಕೋನಗಳಲ್ಲಿ ವೀಕ್ಷಿಸುವ ಕಾರಣ ಆಟ ನನಗಾಗಿ ಆಗುತ್ತಿದೆಎಂದು ಗ್ರಹಿಸಿಕೊಂಡರೂ ನಡೆದೀತು. ಧ್ವನಿವರ್ಧಕದ ಬೊಬ್ಬೆ, ಗೆಜಲಾಟ ಇಲ್ಲಿಲ್ಲ!
                ಮಂಗಳೂರು, ಉಡುಪಿ, ಕಿನ್ನಿಗೋಳಿ, ಕಟೀಲು.. ಮೊದಲಾದ ಸ್ಥಳಗಳಲ್ಲಿ ನಡೆಯುವ ತಾಳಮದ್ದಳೆ, ಪ್ರದರ್ಶನಗಳನ್ನು ಕುಳಿತಲ್ಲೇ (ಲೈವ್) ನೋಡುವಂತಹ ವ್ಯವಸ್ಥೆಗಳು ರೂಢಿಯಾಗಿವೆ. ಮನೆಮಂದಿಗೆ ಇದರಿಂದ ಅನುಕೂಲ. ಸಭಾಭವನದಲ್ಲಿ ಕುಳಿತಂತೆ ಟಿವಿಯ ಮುಂದೆ ಕುರುಕುರು ತಿಂಡಿಯೊಂದಿಗೆ ಕುಳಿತು ಆನಂದಿಸುವ ಮಂದಿಗಳಿಗೆ ಲೈವ್ ಖುಷಿ. ಆದರೆ ಕೆಲವೆಡೆ ಗಮನಿಸಿದ್ದೇನೆ, ಲೈವ್ ಇದ್ದರೆ ಮಾತ್ರ ಕಾರ್ಯಕ್ರಮಗಳು ಪ್ರತಿಷ್ಠೆಯವು ಎನ್ನಲಾಗುತ್ತಿದೆ! ಹೌದೇ?
              ಬದಲಾದ ಆಟ-ಕೂಟ, ಬದಲಾದ ತಂತ್ರಜ್ಞಾನ, ಬದಲಾದ ತಲೆಮಾರಿನಟೇಸ್ಟ್ಹೇಗುಂಟೋ ಹಾಗೆ ರಂಗ ವಿನ್ಯಾಸಗಳು ಪರಿಷ್ಕಾರಗೊಳ್ಳುತ್ತಿದೆ. ಜತೆಯಲ್ಲೇ ಅದು ಯಕ್ಷಗಾನದ ಚೌಕಟ್ಟಿನಲ್ಲೇ ಇದೆ ಎನ್ನುವ ಸಮರ್ಥನೆ. “ಇದೇನೂ ಖಾಯಂ ಆಗಿ ಅಲ್ವಲ್ಲಾ... ಒಂದು ಪ್ರದರ್ಶನಕ್ಕೆ ಮಾತ್ರ ಗೌಜಿ. ಜನ ಬರಬೇಕಲ್ವಾ..” ಎನ್ನುವ ವಿಡಂಬನೆ. ಜನ ಮಾತ್ರವಲ್ಲ, ಅದು ಕಿಕ್ಕಿರಿದ ಜನಸಂದಣಿಯಾಗಬೇಕು! ಆಟವನ್ನೋ, ಕೂಟವನ್ನೋ ನೋಡಿ, ಕೇಳಿ ಅನುಭವಿಸುವುದೇನನ್ನು? ಕಾರಣಕ್ಕಾಗಿ ಅನೇಕರು ನೇರ ಪ್ರಸಾರದ ವ್ಯವಸ್ಥೆಯನ್ನು ನೆಚ್ಚಿಕೊಂಡಿದ್ದಾರೆ, ಮೆಚ್ಚಿಕೊಂಡಿದ್ದಾರೆ.
           ಆಟ, ತಾಳಮದ್ದಳೆಗಳ ಲೈವ್ ಪ್ರಸಾರವು ಈಚೆಗಿನ ವಿದ್ಯಮಾನ. ನಿರ್ದಿಷ್ಟ ಸಂಖ್ಯೆಯ ಪ್ರೇಕ್ಷಕರನ್ನು ಹುಟ್ಟುಹಾಕಿದ, ಹಾಕುತ್ತಿರುವ ಸ್ಥಾಪಿತ ವ್ಯವಸ್ಥೆಯ ಕೂಟಾಟಗಳು ಯಕ್ಷಗಾನಕ್ಕೊಂದು ಕಾಣ್ಕೆ. ಯಾವಾಗ ನೇರ ಪ್ರಸಾರದ ಕ್ಯಾಮರಾಗಳು ವೇದಿಕೆಯ ಮುಂದೆ ಅಲಂಕೃತವಾಗಿ ನಿಂತುವೋ, ಅಂದಿನಿಂದ ಪ್ರೇಕ್ಷಕರ ಸಂಖ್ಯೆಯೂ ಇಳಿಲೆಕ್ಕದತ್ತ ಜಾರುತ್ತಿರುವುದನ್ನು ಗಮಿನಿಸಿದ್ದೇನೆ. ಹೇಗೂ ನೇರ ಪ್ರಸಾರ ಇದೆಯಲ್ವಾ. ಇನ್ನು ಸಭಾಭವನಕ್ಕೆ ಹೋಗಿ ಏನಾಗಬೇಕು? ಕೆಲವೊಮ್ಮೆ ಸಂಘಟಕರ ದಾಕ್ಷಿಣ್ಯಕ್ಕೆ ಆಗಮಿಸಿದರೂ, ಅರ್ಧ ಗಂಟೆಯಲ್ಲಿ ಜಾಗ ಖಾಲಿ! ಮನೆಯಲ್ಲಿ ಆರಾಮವಾಗಿ ನೋಡಬಹುದಲ್ಲಾ. (ಅವರು ನೋಡುವುದಿಲ್ಲ ಎನ್ನುವುದು ಬೇರೆ ಮಾತು) ತಡರಾತ್ರಿಯಾದರೂ ತೊಂದರೆಯಿಲ್ಲ, ಪ್ರಯಾಣದ ಆತಂಕವಿಲ್ಲ. ಇಂತಹ ವ್ಯವಸ್ಥೆಗಳನ್ನು ವರ್ತಮಾನದ ಸ್ಥಾಪಿತ ಮನಸ್ಥಿತಿಗಳು ನಂನಮ್ಮ ಅನುಕೂಲಕ್ಕೆ ಬೇಕಾದಂತೆ ಹೊಂದಿಸಿಕೊಂಡಿವೆ.  
           ಮಾಧ್ಯಮಗಳು ಜಾಹೀರಾತು ಲೋಕದಲ್ಲಿ ರಂಗು ರಂಗಾಗಿದೆ. ಜಾಹೀರಾತುಗಳೇ ತಮ್ಮ ತೆಕ್ಕೆಯೊಳಗೆ ಮಾಧ್ಯಮಗಳನ್ನು ಇಟ್ಟುಕೊಂಡಿದೆಯೇನೋ ಭಾಸವಾಗುತ್ತದೆ! ನೇರ ಪ್ರಸಾರದ ವ್ಯವಸ್ಥೆಯಲ್ಲೂ ಅವುಗಳ ಕರಾಮತ್ತುಗಳಿವೆ. ಆಯೋಜನೆಯ ನೆಲೆಯಲ್ಲಿ ಜಾಹೀರಾತುಗಳಿಗೆ ಸುಗ್ಗಿ. ಎಲ್ಲವೂ ಮಾರುಕಟ್ಟೆಯ ತಜ್ಞತೆಯ ಮೇಲೆ ವ್ಯವಹಾರಗಳು ಕುದುರುವುದರಿಂದ ಯಕ್ಷಗಾನವೂ ಅದರಿಂದ ತಪ್ಪಿಸಿಕೊಳ್ಳುವಂತಿಲ್ಲ. ಹಾಗಾಗಿ ಇಂದು ಆಟ, ಕೂಟಗಳ ಪ್ರಚಾರಗಳಲ್ಲಿ ತಂತ್ರಜ್ಞಾನದ್ದೇ ಮೇಲುಗೈ.
          ಇರಲಿ, ಪ್ರೇಕ್ಷಕರ ಸಂಖ್ಯೆ ಇಳಿಮುಖ ಅಂದೆಯಲ್ವಾ. ಮೇಲ್ನೋಟಕ್ಕೆ ನೋಡುವಾಗ ಸಂಖ್ಯೆಯಲ್ಲಿ  ವಿಸ್ತಾರ ಕಾಣುತ್ತದೆ. ಆದರೆ ಅದರೊಳಗೆ ಸಮಗ್ರ ಯಕ್ಷಗಾನದ ನೋಟ ಎಷ್ಟಿದೆ? ಪ್ರಶ್ನೆಯೊಳಗೆ ನನ್ನ ಅಜ್ಞಾನವೂ ನುಸುಳಿರಬಹುದೇನೋ. ಆಟ-ಕೂಟಗಳನ್ನು ಯಕ್ಷಗಾನವಾಗಿ ಆಸ್ವಾದಿಸುವವರು ಎಷ್ಟು ಮಂದಿ? ಗೌಜಿ, ಸಂಭ್ರಮಗಳ ಮಧ್ಯೆ ನಿಜವಾದ ಯಕ್ಷಗಾನದ ಸುಖಗಳು ಮರೆಯಾಗುತ್ತವೆ. ಹಿಂದಿನ ರಂಗ, ಕಲಾವಿದರ ಮಾದರಿಗಳು ಹೊಸ ರಂಗಭೂಮಿಗೆ ಪರಿಚಯವಾಗುತ್ತಿಲ್ಲ.
           ತಮಗೆ ಬೇಕಾದಂತೆ ರಂಗನಡೆ, ವೇಷಗಳಲ್ಲಿ ನಾವಿನ್ಯ, ಮುಖವರ್ಣಿಕೆಗಳಲ್ಲಿ ವ್ಯತ್ಯಾಸಗಳಾಗುತ್ತಿವೆ. ಹಾಗಲ್ಲ, ಹೀಗೆ ಎನ್ನುವ ನಿರ್ದೇಶಕ ಮೇಳಗಳಲ್ಲಿ ಇಲ್ಲ. ಇದ್ದರೂ ಅವರ ಮಾತನ್ನು ಕೇಳುವ ಸಹನೆ, ಸೌಜನ್ಯಗಳು ಕಲಾವಿದರಲ್ಲಿ ಮೂಡುವುದು ಸಂಶಯವೇ. ಮೂಡಿದರೆ ನಿಜಕ್ಕೂ ವಿಸ್ಮಯ. ಇಷ್ಟೆಲ್ಲಾ ಇದ್ದರೂ ಜರುಗಿದ, ಜರಗುವ ಕಾರ್ಯಕ್ರಮಗಳಿಗೆ ದನಿಯಾಗುವ, ವಿಮರ್ಶಿಸುವ, ಸಂದರ್ಭ ಬಿದ್ದಾಗ ಕಟು ಶಬ್ದಗಳೊಂದಿಗೆ ಖಂಡಿಸುವ ಮನಸ್ಸುಗಳನ್ನು ನೋಡಿದಾಗ ಹೃದಯ ತುಂಬುತ್ತದೆ.
           ಕಲಾವಿದನಿಗೆ ಅಭಿಮಾನಿಗಳ ಸಂಖ್ಯೆ ಹಿರಿದಾದಾಗ ನಿಜ ಪ್ರೇಕ್ಷಕರನ್ನು ಮರೆಯುತ್ತಾರೆ. ನಿಜ ಪ್ರೇಕ್ಷಕ ಎಂದೂ ಕಲಾನಿಷ್ಠ, ರಂಗನಿಷ್ಠ. ಅವರಲ್ಲಿ ಶ್ಲಾಘಿಸುವ ಗುಣವಿದೆ. ಶ್ಲಾಘಿಸುವುದು ಅವರ ದೌರ್ಬಲ್ಯವಲ್ಲ. ಹಾಗೆಂತ ವಿಪರೀತ ಹೊಗಳುವ ಚಾಳಿ ಅವರಲ್ಲಿಲ್ಲ. ವೇಷಧಾರಿಯಾಗಿ ರಂಗದಲ್ಲಿ ಕಲಾವಿದನನ್ನು ಒಪ್ಪಿಕೊಳ್ಳುತ್ತಾನೆ. ನಿಜ ಜೀವನದಲ್ಲಿ ಅಲ್ಲ. ಕಲಾವಿದನೊಂದಿಗೆ ಸದಾ ಅಭಿಮಾನಿಯಾಗಿ ಕಾಣಿಸಿಕೊಳ್ಳಲು ಪುರುಸೊತ್ತಿಲ್ಲ! ಚಾಳಿಯೂ ಇಲ್ಲ. ಯಾವಾಗ ಕಲಾವಿದನ ಒಲವು ಪ್ರೇಕ್ಷಕನ ಮೇಲೆ ಕಡಿಮೆಯಾಯಿತೋ, ಪ್ರೇಕ್ಷಕನೂ ಅಂತರ ಕಾಪಾಡಿಕೊಳ್ಳಲು ಶುರು ಮಾಡಿದ. ಸಹಜವಾಗಿ ಕಾರ್ಯಕ್ರಮಗಳಿಗೆ ಪ್ರೇಕ್ಷಕರಲ್ಲೂ ಇಳಿಮುಖವಾಯಿತು.
           ಸಭಾಭವನ ತುಂಬಿದೆ ಎಂದ ಮಾತ್ರಕ್ಕೆ ಯಕ್ಷಗಾನದ ಪ್ರೇಕ್ಷಕರು ತುಂಬಿದ್ದಾರೆ ಎಂದರ್ಥವಲ್ಲ. ನೇರ ಪ್ರಸಾರದ ಬಳಿಕ ಬಹುತೇಕ ಕೂಟ, ಆಟಗಳಲ್ಲಿ ಸಭಾಭವನದೊಳಗೆ ಬೆರಳೆಣಿಕೆಯ ಪ್ರೇಕ್ಷಕರು. ಅದೂ ಅನ್ಯಾನ್ಯ ಕಾರಣಕ್ಕೆ ಉಪಸ್ಥಿತರಿದ್ದಾರಷ್ಟೇ. ಎಷ್ಟೋ ಸಂದರ್ಭದಲ್ಲಿ ಸ್ವಾಗತ, ಧನ್ಯವಾದಗಳು ದೂರದೂರಿನಲ್ಲಿ ಟಿವಿ ಮುಂದೆ ಕುಳಿತು ನೇರ ಪ್ರಸಾರವನ್ನು ವೀಕ್ಷಿಸುವ ಪ್ರೇಕ್ಷಕರಿಗೂ ಸಲ್ಲಲ್ಪಡುತ್ತದೆ! ವಾಸ್ತವ ಹೀಗಿದ್ದಾಗ – ‘ಭರ್ಜರಿ ಆಟ,  ಆದರೆ ಸಭಾಭವನ ಖಾಲಿಎಂಬಂತಾಗಿದೆ. ಇಷ್ಟೆಲ್ಲಾ ಹೇಳಿದರೂ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವ ಬೆರಳೆಣಿಕೆಯ ವ್ಯವಸ್ಥಿತ ಆಟ, ಕೂಟಗಳು ನಡೆಯುತ್ತಿರುವುದನ್ನು ಅಲ್ಲಗೆಳೆಯುವಂತಿಲ್ಲ. ಯಶದ ಹಿಂದೆ ಸಂಘಟಕರ ಅವ್ಯಕ್ತ ಶ್ರಮ ದಾಖಲಾಗುವುದಿಲ್ಲ. 
             ನೇರಪ್ರಸಾರದಿಂದ ಕಲಾವಿದರಿಗೆ ಪ್ರತಿಕ್ರಿಯೆಗಳ ಮಾಲೆಯ ಕೊಡುಗೆ. ಮೊಬೈಲ್ ಮೂಲಕ, ಫೇಸ್ಬುಕ್, ವಾಟ್ಸಾಪ್ಗಳಲ್ಲಿ ಮೆಸ್ಸೇಜ್ಗಳ ಹರಿದಾಟ. ಭರಪೂರ ಹಿಮ್ಮಾಹಿತಿ. ಕಲಾವಿದರ ಬೆನ್ನು ತಟ್ಟುತ್ತಾರೆ. ಯೋಗ ಕೆಲವರಿಗೆ ಮಾತ್ರ! ಈಗೀಗಫೇಸ್ಬುಕ್ ಲೈವ್ನೇರಪ್ರಸಾರವೂ ಶುರುವಾಗಿಬಿಟ್ಟಿದೆ. ಏನಿದ್ದರೂ ಬಯಲಲ್ಲಿ, ಸಭಾಭವನದಲ್ಲಿ ಎಲ್ಲರೊಂದಿಗೆ ಕುಳಿತು ನೋಡುವ ಆನಂದ ನೇರಪ್ರಸಾರದಲ್ಲಿಲ್ಲ. ಅಂತಹ ಆನಂದವನ್ನು ಇಷ್ಟಪಡದ ಮಂದಿಯೂ ಇದ್ದಾರೆನ್ನಿ!
            ಯಕ್ಷಗಾನ ಯಾಕೆ, ಕನ್ನಾಡಿನ ವಾಹಿನಿಗಳ ಒಳಗೆ ಇಣುಕಿದರೆ ಎಲ್ಲದರಲ್ಲೂ ನೇರ ಪ್ರಸಾರದ ಛಾಯೆ. ಅದರಲ್ಲಿ ಸುಖ, ಸಾರ್ಥಕ್ಯ. ಜನ್ಮ ಜಾಲಾಡುವ ಹಪಾಹಪಿ. ಅಪಾಯ ಯಕ್ಷಗಾನದ ನೇರಪ್ರಸಾರದಲ್ಲಿಲ್ಲ! ಇಷ್ಟೆಲ್ಲಾ ಹೇಳಿದರೂ ನೇರಪ್ರಸಾರದ ಪ್ರಯೋಜನ ಹತ್ತಾರು. ದೂರದೂರಿಗೆ ಹೋಗಲು ಸಮಯವನ್ನು ಹೊಂದಾಣಿಸಲಾಗದವರಿಗೆ ವರದಾನ. ನೇರವಾಗಿ ವೀಕ್ಷಿಸಲು ಇದ್ದಂತಹ ವಿಪರೀತ ಜನಸಂದೋಹ, ಮೈಕಾಸುರ, ಅದ್ದೂರಿತನಗಳಿಂದ ಮುಕ್ತವಾಗಲು ಸಹಕಾರಿ. ತನಗೆ ಆಟವೋ, ಕೂಟವೋ ಇಷ್ಟವಾಗಿಲ್ಲ ಎಂದಾದರೆ ರಿಮೋಟ್ ಕೈಯಲ್ಲೇ ಇದೆಯಲ್ವಾ..! ಇದಕ್ಕಿಂತ ದೊಡ್ಡ ಅನುಕೂಲ ಯಾವುದು ಹೇಳಿ
(ಪ್ರಜಾವಾಣಿ / ದಧಿಗಿಣತೋ / 3-8-2018)
 



No comments:

Post a Comment