ಇಪ್ಪತ್ತೈದು ವರುಷಗಳ ಹಿಂದಿನ ಶಿವಣ್ಣ ಆಚಾರ್
ಹಿರಿಯ ಸ್ತ್ರೀಪಾತ್ರಧಾರಿ ಕುರ್ನಾಡು ಶಿವಣ್ಣ ಆಚಾರ್ಯರು ಮನಸ್ಸಿಗೆ ಬಂದಾಗ ನೆನಪುಗಳು ಮೂವತ್ತೆರಡು ವರುಷದ ಹಿಂದೋಡಿತು. ತಲಪಾಡಿ ಸನಿಹದ ಕಿನ್ಯ ಶ್ರೀ ದುರ್ಗಾಪರಮೇಶ್ವರೀ ಯಕ್ಷಗಾನ ಸಂಘದ ವಾರ್ಷಿಕೋತ್ಸವದ ಸಂದರ್ಭ. ‘ಕುಶ-ಲವ’ ಪ್ರಸಂಗ. ಶಿವಣ್ಣ ಆಚಾರ್ ಅವರ ಸೀತೆ. ಕೀರ್ತಿಶೇಷ ಜಲಂಧರ ರೈ ಅವರ ‘ಶತ್ರುಘ್ನ’, ಭಾಸ್ಕರ ರೈ ಕುಕ್ಕುವಳ್ಳಿಯವರ ‘ರಾಮ’. ನಾನಾಗ ಯಕ್ಷಗಾನದ ಮೊದಲ ಹೆಜ್ಜೆಯನ್ನೂ ಊರದ ಕಾಲಘಟ್ಟ. ಪುಂಡುವೇಷದ ಗೀಳಿನ ಸಮಯ! ಅಂದು ಶಿವಣ್ಣರ ಸೀತೆಯು ಪಾತ್ರವಾಗಿರಲಿಲ್ಲ, ನಿಜಸೀತೆಯೇ ಆಗಿದ್ದರು! ದುಃಖರಸದ ಸಂದರ್ಭದಲ್ಲಿ ಅತ್ತಿದ್ದರು. ಕಣ್ಣೀರು ಕಪೋಲದಲ್ಲಿ ತೊಟ್ಟಿಕ್ಕುತ್ತಿದ್ದ ಆ ದೃಶ್ಯದ ನೆನಪು ಮಾಸಿಲ್ಲ.
‘ಅಭಿನಯ ಇಷ್ಟೊಂದು ಪರಿಣಾಮಕಾರಿಯಾಗಿ ಸಾಧ್ಯವೇ?’ ಎಂಬ ಚೋದ್ಯಕ್ಕೆ ಉತ್ತರವಾಗಿ ಶಿವಣ್ಣ ಮುಂದಿದ್ದರು. ಅಂದೇ ಮೊದಲ ಪರಿಚಯ. ಅವರ ಸೀತೆಯ ಪಾತ್ರದ ಅಭಿವ್ಯಕ್ತಿಯು ನನ್ನೊಳಗೆ ಗಾಢವಾಗಿ ಇಳಿದಿತ್ತು. ಮತ್ತೊಂದು ಸಂದರ್ಭದಲ್ಲಿ ‘ಶಬರಿಮಲೆ ಕ್ಷೇತ್ರ ಮಹಾತ್ಮೆ’ ಪ್ರಸಂಗದಲ್ಲಿ ಜಲಂಧರ ರೈ ಅವರ ‘ಕೇತಕಿವರ್ಮ’, ಶಿವಣ್ಣರ ‘ಸುಮುಖಿ’ ಪಾತ್ರ. ಕೃಷ್ಣಪ್ಪ ಕೋಟೆಕಾರು ಅವರ ‘ಕೇಳುಪಂಡಿತ’. ಬಹುಶಃ ನಾನಂದು ‘ಕನಕವರ್ಮ’ನಿರ್ವಹಿಸಿದ ನೆನಪು. ಅಯ್ಯಪ್ಪನಲ್ಲಿ ತನ್ನ ತಪ್ಪನ್ನು ಮನ್ನಿಸುವಂತೆ ಕೇಳಿಕೊಳ್ಳವ ಸಂದರ್ಭದಲ್ಲಿ ಪ್ರೇಕ್ಷಕರೆಲ್ಲ ಮೌನದ ತಲ್ಲೀನತೆ!
ಎರಡು ಮೂರು ವರ್ಷಗಲ್ಲಿ ಶಿವಣ್ಣರು ಆಪ್ತರಾದರು. ಒಂದು ಆಟದ ಸಂದರ್ಭದ ನೆನಪು ಹಸಿಯಾಗಿದೆ. ಆಗಲೂ ಪುಂಡುವೇಷದ ಗೀಳು ಕಳಚಲ್ಪಡಲಿಲ್ಲ. ಪುಂಡುವೇಷದ ಯಾವುದೇ ಅರ್ಹತೆ, ಯೋಗ್ಯತೆ ಇಲ್ಲದಿದ್ದರೂ ಅದು ಅಂಟಿತ್ತು! “ನೋಡಿ... ನಿಮ್ಮ ಪಾತ್ರ ಸ್ವಭಾವವು ಪುಂಡುವೇಷಕ್ಕೆ ಒಪ್ಪುವುದಿಲ್ಲ. ನೀವು ಸ್ತ್ರೀಪಾತ್ರದತ್ತ ವಾಲುವುದೊಳ್ಳೆಯದು.” ಶಿವಣ್ಣರ ಸಕಾಲದ ಮಾತನ್ನು ಸ್ವೀಕರಿಸಿದ್ದೆ. ಆಮೇಲೆ ಒಂದಷ್ಟು ಕಾಲ ಬಹುತೇಕ ಆಟಗಳಲ್ಲಿ ಜತೆಯಾಗುತ್ತಿದ್ದೆವು. ಪಾತ್ರ, ಸಂದರ್ಭ, ರಸಗಳ ಪರಿಣಾಮಗಳು, ಪ್ರಸಂಗದ ನಡೆಗಳನ್ನು ಹೇಳುತ್ತಿದ್ದರು. ಅಂದು - ಮೂವತ್ತು ವರುಷದ ಹಿಂದೆ - ಶಿವಣ್ಣರ ಗರತಿ ಪಾತ್ರದ ಪ್ರಭಾವ ಏನಿದೆಯೋ ಅದು ಮರೆತುಹೋಗಿಲ್ಲ, ಹೋಗುತ್ತಿಲ್ಲ. ನನ್ನ ಮಾತಿನ ಅಸಹಾಯಕತೆಯಿಂದಾಗಿ ಅಳವಡಿಸಿಕೊಳ್ಳಲು ಅಂದು ಸಾಧ್ಯವಾಗಲಿಲ್ಲ. ಈಗ ಪಾತ್ರ ಮಾಡುವಾಗಲೆಲ್ಲಾ ಶಿವಣ್ಣರ ಅಭಿವ್ಯಕ್ತಿ ನೆನಪಾಗುತ್ತದೆ. ಬಹುತೇಕ ಪಾತ್ರಗಳಿಗೆ ಅವರೊಂದು ಮಾದರಿ.
ಕುರ್ನಾಡು ಶಿವಣ್ಣ ಆಚಾರ್ಯರಿಗೆ ‘ದೋಗ್ರ ಪ್ರಶಸ್ತಿ’ ಘೋಷಣೆಯಾದಾಗ (ಪ್ರಶಸ್ತಿ ಪ್ರದಾನ 17-7-2018) ನೆನಪುಗಳು ಒತ್ತರಿಸಿ ಬಂದುವು. ಬಜ್ಪೆ ರಾಘವದಾಸರ ಸಂಯೋಜನೆಯಲ್ಲಿ ಮಂಜೇಶ್ವರ-ಆನೆಕಲ್ಲು ಸನಿಹ ‘ಹರಿಶ್ಚಂದ್ರ’ ಪ್ರಸಂಗದ ಪ್ರದರ್ಶನ. ಶಿವಣ್ಣರದು ಉತ್ತರಾರ್ಧದ ‘ಚಂದ್ರಮತಿ’ಯ ಪಾತ್ರ. ಅಂದು ಕೂಡಾ ಹಾಗೆ. ಪಾತ್ರವಾಗಲಿಲ್ಲ, ನಿಜ ಚಂದ್ರಮತಿಯೇ ಆಗಿ ಹೋದರು! ಪ್ರೇಕ್ಷಕರೂ ಅತ್ತುದನ್ನು ಗಮನಿಸಿದ್ದೇನೆ. ತನ್ನ ಮಗನ ಶವದ ಮುಂದೆ ಎದೆ ಬಡಿದುಕೊಳ್ಳುವ, ಸ್ಮಶಾನದಲ್ಲಿ ಮಗನನ್ನು ಎತ್ತಿಕೊಂಡು ಬರುವ ದೃಶ್ಯಗಳಲ್ಲಿ ಶಿವಣ್ಣರ ಅಭಿವ್ಯಕ್ತಿ... ಛೇ... ಗರತಿ ಪಾತ್ರಗಳೇ ಮಂಡಿಯೂರಿದ್ದುವು.
ಸ್ತ್ರೀ ಸಹಜ ಶಾರೀರ, ಸಂಭಾಷಣೆಗೆ ತೆರೆದುಕೊಳ್ಳುವ ಮಿತವಾದ ಮಾತುಗಾರಿಕೆ, ಪಾತ್ರ ಸ್ವಭಾವ, ವೃತ್ತಿ ಕಲಾವಿದರಾದರೂ ಹವ್ಯಾಸಿಗಳೊಂದಿಗೆ ಹೊಂದಿಕೊಳ್ಳುವ ಗುಣ ಮೆಚ್ಚುವಂತಾದ್ದು. ಮುಖ್ಯವಾಗಿ ತನ್ನ ಪಾಲಿನ ಪಾತ್ರವನ್ನು ಸಹ ಪಾತ್ರಧಾರಿಗಳಿಗೆ ‘ಬಿಟ್ಟುಕೊಡುವ’ ಅಪೂರ್ವತೆ ಕಂಡಿದ್ದೇನೆ, ಅನುಭವಿಸಿದ್ದೇನೆ. ಹವ್ಯಾಸಿ ಆಟಕ್ಕೆ ಅವರೊಬ್ಬ ನಿರ್ದೇಶಕ. ವೇಷಭೂಷಣದಿಂದ ತೊಡಗಿ, ಪಾತ್ರಾಭಿವ್ಯಕ್ತಿ ತನಕ ಚೌಕಿಯಲ್ಲಿ ‘ಹೇಳಿ ಕೊಡುವ’ ಗುಣ. ಪ್ರಸಂಗದ ನಡೆಗಳು ಸ್ಪಷ್ಟವಾಗಿ ಮತ್ತು ಸ್ಫುಟವಾಗಿತ್ತು.
ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಮಾಜಿ ಸದಸ್ಯ ಭಾಸ್ಕರ ರೈ ಕುಕ್ಕುವಳ್ಳಿ ಒಡನಾಟದ ಕ್ಷಣಗಳನ್ನು ನೆನಪು ಮಾಡಿಕೊಳ್ಳುತ್ತಾರೆ – “ಯಕ್ಷಗಾನದ ಸ್ತ್ರೀಪಾತ್ರಧಾರಿಗಳಲ್ಲಿ ಅಡ್ಯನಡ್ಕ ಕೃಷ್ಣ ಭಂಡಾರಿಯವರ ನಂತರ ಹೆಚ್ಚಾಗಿ ಹಚ್ಚಿಕೊಂಡ ಕಲಾವಿದರೆಂದರೆ ಕುರ್ನಾಡು ಶಿವಣ್ಣ ಆಚಾರ್ಯರು. ಅವರೊಂದಿಗೆ ಹಲವು ಪಾತ್ರಗಳನ್ನು ನಿರ್ವಹಿಸಿದ್ದೇನೆ. ಅವರು ರಂಗದಿಂದ ನೇಪಥ್ಯಕ್ಕೆ ಸರಿದಾಗಲೂ ಸಂಬಂಧ ಸ್ಥಾಯಿಯಾಗಿತ್ತು. ನಾನು ಅಕಾಡೆಮಿಯ ಸದಸ್ಯನಾಗಿದ್ದ ಸಂದರ್ಭದಲ್ಲಿ ಅವರಿಗಾಗಿ ಸ್ಪಂದಿಸುವ ಅವಕಾಶ ಲಭಿಸಿದುದು ಧನ್ಯತೆಯ ಕ್ಷಣ.”
ಹೆರ್ಗ, ಧರ್ಮಸ್ಥಳ, ಮೂಲ್ಕಿ, ಕೂಡ್ಲು, ವೇಣೂರು, ಸುಂಕದಕಟ್ಟೆ, ಕಟೀಲು, ತಳಕಲ, ನಂದಾವರ, ಅಡ್ಯಾರು, ಮಲ್ಲ ಮೇಳಗಳಲ್ಲಿ ತಿರುಗಾಟ ಮಾಡಿದ್ದರು. ಅನ್ಯಾನ್ಯ ಕಾರಣಗಳಿಂದ ರಂಗದಿಂದ ಬಹುಬೇಗ ನೇಪಥ್ಯಕ್ಕೆ ಸರಿದರು. ಹವ್ಯಾಸಿಯಾಗಿ ತೊಡಗಿಸಿಕೊಂಡರು. ಹೂ ಹಾಕುವಕಲ್ಲಿನ ರಾಘವದಾಸ್ ಅವರ ‘ಭಾರತೀ ಕಲಾ ಆಟ್ರ್ಸ್’’
ಜತೆಗೆ ‘ಪ್ರಸಾದನ ಕಲಾವಿದ’ನಾಗಿ ತೊಡಗಿಸಿಕೊಂಡಿದ್ದರು. ಎಲ್ಲಾ ಕಲಾವಿದರಿಗೆ ಪ್ರಿಯವಾಗಿ ನಡೆದುಕೊಳ್ಳುತ್ತಿದ್ದರು. ಒಂದೆಡೆ ಕಲಾವಿದನಾಗಿ, ಮತ್ತೊಂದೆಡೆ ಪ್ರಸಾದನ ಕಲಾವಿದನಾಗಿ ಜತೆಜತೆಗೆ ದುಡಿದಿದ್ದರು. ಕೆಲವೊಂದು ಸಂಘಗಳಿಗೆ ಶಿವಣ್ಣರೇ ಬೇಕೆಂಬ ಆಗ್ರಹವೂ ಇತ್ತು.
“ದಾಕ್ಷಾಯಿಣಿ, ತ್ರಿಲೋಕಸುಂದರಿ, ಶಾರದೆ, ತಾರೆ, ಗುಣಸುಂದರಿ, ಸುಭದ್ರೆ, ಸೀತೆ, ಮಂಡೋದರಿ, ಕಯಾದು, ಚಂದ್ರಮತಿ, ಶಾರದೆ, ಕಿನ್ನಿದಾರು, ಸೋಮಲೆ..” ಹೀಗೆ ಕನ್ನಡ-ತುಳು ಪ್ರಸಂಗಗಳ ಪಾತ್ರಗಳಲ್ಲಿ ಖಚಿತ ಅಭಿವ್ಯಕ್ತಿ. ಪಾತ್ರವೊಂದು ‘ಹೇಗಿರಬೇಕು, ಹೇಗಿರಬಾರದೆನ್ನುವ’ ಎಚ್ಚರ, ಒಂದು ಪಾತ್ರಕ್ಕಿರುವ ಅವಕಾಶ, ಅದನ್ನು ತಾನು ಎಷ್ಟು ಆಕ್ರಮಿಸಿಕೊಳ್ಳಬೇಕೆಂಬ ಜಾಣ್ಮೆ, ಇದಿರು ಪಾತ್ರಕ್ಕೆ ತೊಡಕಾಗದ ಮಿತ ಸಂಭಾಷಣೆಗಳಿಂದ ರಂಗವನ್ನು ಗೆದ್ದಿದ್ದರು. ಯಾವ ಪಾತ್ರಕ್ಕೆ ಎಷ್ಟು ಕುಣಿಯಬೇಕೆನ್ನುವ ‘ಲೆಕ್ಕಾಚಾರ’ವಿತ್ತು. ‘ಹೆಚ್ಚಾದರೆ ಅದು ಯಕ್ಷಗಾನವಾಗದು’ಎಂದಿದ್ದರು. ಕೃಷ್ಣಾರ್ಜುನ ಕಾಳಗದಂತಹ ಪ್ರಸಂಗದಲ್ಲಿ ‘ಸುಭದ್ರೆ’ಯ ಭಾವಾಭಿವ್ಯಕ್ತಿಯ ಮುಂದೆ ಅರ್ಜುನ ಪಾತ್ರಧಾರಿಯೂ ಅತ್ತ ಸಂದರ್ಭಗಳು ಸಾಕಷ್ಟಿವೆ.
ಕುರ್ನಾಡು ಶಿವಣ್ಣ ಆಚಾರ್ಯರು ಓದಿದ್ದು ನಾಲ್ಕನೇ ತರಗತಿ. ಪುಣಚ ನಾಗಪ್ಪ ಭಂಡಾರಿಯವರಿಂದ ನಾಟ್ಯಾರ್ಜನೆ. ಮುಂದೆ ಪುಳಿಂಚ ರಾಮಯ್ಯ ಶೆಟ್ಟಿ, ಕೋಳ್ಯೂರು ನಾರಾಯಣ ಭಟ್ಟರಿಂದಲೂ ಕಲಿಕೆ, ಒಡನಾಟ. ತನ್ನ ಚಿಕ್ಕಪ್ಪ ಶ್ರೀನಿವಾಸ ಆಚಾರ್ಯ ಭಾಗವತರಿಂದ ಪ್ರೇರಣೆ. ಶಿವಣ್ಣರ ರಂಗಾನುಭವದ ಆಳ ನೋಡಿದರೆ ನಾಲ್ಕನೇ ತರಗತಿ ಓದಿದ್ದು ಎನ್ನುವುದು ಮರೆತುಹೋಗುತ್ತದೆ! ಪುಸ್ತಕಗಳನ್ನು ಓದಿಲ್ಲ, ಬರೆದಿಲ್ಲ. ಪ್ರಸಂಗದ ಪದ್ಯಗಳೆಲ್ಲಾ ಕಂಠಸ್ತ. ನಾಲಗೆ ತುದಿಯಲ್ಲಿ ಪುರಾಣ ಸಂಗತಿಗಳು. ಸಹ ಕಲಾವಿದನಿಗೆ ಹೇಳಿ ಕೊಡುವಷ್ಟು ಸಶಕ್ತ. ಶಿವಣ್ಣರಿಗ ಈಗ ಎಪ್ಪತ್ತ ಆರು ವರುಷ. ಬಹುಶಃ ದಶಕದೀಚೆಗೆ ಶಾರೀರಿಕವಾಗಿ ಮಾಗಿದ್ದಾರೆ.
ಕುರ್ನಾಡು ಶಿವಣ್ಣ ಆಚಾರ್ಯರು, ದಾಸರಬೈಲು ಚನಿಯ ನಾಯಕ್.. ಮೊದಲಾದವರಲ್ಲಿರುವ ಯಕ್ಷಗಾನ ಸಂಪತ್ತು ಅಪ್ಪಟ. ರಂಗದಲ್ಲದು ಬಳಕೆಯಾದರೂ ಅದಕ್ಕೆ ಪ್ರಖರತೆಯ ಬೆಳಕು ಬಿದ್ದಿಲ್ಲ. ಬೆಳಕು ಬೀಳಬೇಕಾದ ಕಾಲಘಟ್ಟದಲ್ಲಿ ಬೆಳಕು ಕೊಡುವ ಮನಸ್ಸುಗಳಲ್ಲೇ ಬೆಳಕು ಇದ್ದಿರಲಿಲ್ಲ! ಇವರೆಲ್ಲಾ ಸ್ವಂತವಾಗಿ ಎದ್ದು ನಿಲ್ಲುವಷ್ಟು ಆರ್ಥಿಕವಾಗಿ ಅಸಮರ್ಥರು. ಇದರಿಂದಾಗಿಯೇ ಇರಬೇಕು, ಇಂತಹ ಅಪ್ಪಟ ಕಲಾವಿದರು ತಾವಾಗಿ ಎಲ್ಲೂ ಕಾಣಿಸುವುದಿಲ್ಲ. ತಮ್ಮನ್ನು ತಾವು ‘ಫೋಕಸ್’ ಮಾಡಿಕೊಂಡಿಲ್ಲ. ಅದು ಜಾಯಮಾನವೂ ಅಲ್ಲ. ಅವಕಾಶ ಸಿಕ್ಕರೆ ಯಕ್ಷಗಾನದ ಸೌಂದರ್ಯವನ್ನು ತೋರುತ್ತಾರೆ.
ಹಿಂದೊಮ್ಮೆ ಶಿವಣ್ಣರಾಡಿದ್ದ ಮಾತು ಚುಚ್ಚುತ್ತದೆ. “ಯಕ್ಷಗಾನಕ್ಕೆ ನನ್ನಂತಹವರು ಯಾರಿಗೆ ಬೇಕು ಹೇಳಿ. ನನ್ನಲ್ಲಿ ವಾಹನ ಇಲ್ಲ. ಅಡಿಕೆ ತೋಟ ಇಲ್ಲ. ಅಭಿಮಾನಿಗಳಿಲ್ಲ! ಸ್ವಯಂ ಪ್ರಚಾರ ಮಾಡಿಕೊಳ್ಳಲು ಮನಸ್ಸು ಒಪ್ಪುತ್ತಿಲ್ಲ.” ಇದೇ ಭಾವ ಬರುವಂತೆ ಚನಿಯರೂ ಆಡಿದ್ದರು. ಮನಸ್ಸಿನ ಬೇಗುದಿ ಅರ್ಥ ಮಾಡಿಕೊಳ್ಳಲು ಈ ವಾಕ್ಯಗಳು ಸಾಕು. ಇದು ಇವರಿಬ್ಬರ ಪಾಡಲ್ಲ. ತೆಂಕು ಮತ್ತು ಬಡಗು ತಿಟ್ಟುಗಳಲ್ಲಿ ಇಂತಹ ಅಪ್ಪಟ ಕಲಾವಿದರು ಎಷ್ಟು ಮಂದಿ ಬೇಕು?
ವರ್ತಮಾನದ ರಂಗ ಬದಲಾಗಿದೆ. ಮನಸ್ಸುಗಳು ಬದಲಾಗಿದೆ. ಮನಸ್ಥಿತಿಗಳು ಬದಲಾಗಿವೆ. ಹಳೆಯದಕ್ಕೆ ಮೌಲ್ಯವಿಲ್ಲ ಎನ್ನುವಷ್ಟರ ತನಕ ಬೌದ್ಧಿಕತೆ ಮೇಲ್ಮೆ ಸಾಧಿಸಿದೆ. ಬದಲಾವಣೆಯ ಭರಾಟೆಯಲ್ಲಿ ಶಿವಣ್ಣ ಆಚಾರ್ಯರು ಮಿಂಚುಹುಳದ ಹೊಳಪಿನ ಹಾಗೆ ನೆನಪಾಗುತ್ತಾರಲ್ವಾ... ಅದೇ ಅವರು ಅಂದು ರಂಗದಲ್ಲಿ ಕಟ್ಟಿಕೊಟ್ಟ ಸಾಮಥ್ರ್ಯ. ಇದನ್ನೆ ‘ಅಪ್ಪಟ’ ಎನ್ನುವುದು. ಇಂತಹವರು ರಂಗದಲ್ಲಿ ಮೂಡಿ ಬರಬೇಕು. ವರ್ತಮಾನದ ರಂಗಕ್ಕೆ ಅಪ್ಪಟತನವನ್ನು ಪ್ರದರ್ಶಿಸುವ ಎಲ್ಲಾ ಅರ್ಹತೆಗಳಿವೆ. ಆದರೆ ಅಪ್ಪಟ ಯಾವುದೆಂದು ಹೇಳುವ ಮನಸ್ಸುಗಳು ಬೇಕಾಗಿವೆ. ರಂಗವು ಅಂತಹವರನ್ನು ಹುಡುಕುತ್ತಿದೆ. ಗೊತ್ತಿದ್ದವರು ಮೌನವಾಗಿದ್ದಾರೆ. ಅವರ ಮೌನವನ್ನು ಮಾತಾಗಿಸುವವರೂ ಬೇಕಾಗಿದ್ದಾರೆ.
No comments:
Post a Comment