ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿಗಳ ಜತೆ ಮಾತಾಡುತ್ತಿದ್ದಂತೆ (2018) ಕಳೆದ ಕಾಲದ ಕಥನಗಳ ಅನುಭವಗಳು ಮಿಂಚಿ ಮರೆಯಾಗುತ್ತಿದ್ದುವು. ಅವುಗಳಲ್ಲಿ ವಿಷಾದಗಳಿದ್ದುವು, ರಂಗದ ದನಿಗಳಿದ್ದುವು, ಕಷ್ಟ-ಸುಖಗಳ ಮಾತುಕತೆಗಳಿದ್ದುವು, ರಂಗ ಪಲ್ಲಟಗಳಿದ್ದುವು. ಅಂತಹುಗಳ ಕೆಲವು ಮಾದರಿಗಳು ಇಲ್ಲಿವೆ :
* ಕಾಲಮಿತಿಯಿಂದ ಕಲಾವಿದರಿಗೆ ಪ್ರಯೋಜನ. ರಾತ್ರಿ ಒಂದೋ, ಎರಡೋ ಗಂಟೆಯಲ್ಲದೆ ಪ್ರದರ್ಶನ ಮುಗಿಯುವುದಿಲ್ಲ. ಪ್ರಸಂಗ ಚಿಕ್ಕದಾಯಿತು. ರಂಗದ ಸ್ಪೀಡ್ ಹೆಚ್ಚಾಯಿತು. ಪೂರ್ತಿಯಾಗಿ ಕಥೆ ಗೊತ್ತಾಗಬೇಕಾದರೆ ಇಡೀರಾತ್ರಿ ಆಟವಾಗಬೇಕು.
* ಕೂಡುಕುಟುಂಬ ವ್ಯವಸ್ಥೆಗಳು ಶಿಥಿಲವಾದ ಬಳಿಕ ಆಟಗಳಿಗೆ ಪ್ರೇಕ್ಷಕರ ಸಂಖ್ಯೆಯೂ ಕಡಿಮೆಯಾಯಿತು. ಉತ್ಸಾಹವಿದ್ದರೂ ಮನೆಯ ರಕ್ಷಣೆ, ಕೆಲಸಕಾರ್ಯಗಳ ಒತ್ತಡದಿಂದ ಆಟದ ಗುಂಗನ್ನು ತನ್ನೊಳಗೆ ಅದುಮಿಟ್ಟುಕೊಳ್ಳುವ ಅನೇಕರಿದ್ದಾರೆ. ಮತ್ತೊಂದು ಕಾಲದ ಪಲ್ಲಟ. ಆಟ ನೋಡುತ್ತಿದ್ದ ಜವ್ವನಿಗರೆಲ್ಲಾ ವಿವಿಧ ಉದ್ಯೋಗಕ್ಕಾಗಿ ಪೇಟೆ ಸೇರಿದರು. ಹಳ್ಳಿ ಖಾಲಿಯಾಯಿತು!
* ಹವ್ಯಾಸಿ ರಂಗ ಚೆನ್ನಾಗಿತ್ತು. ಅದು ಕಲಾವಿದರನ್ನು ಸೃಷ್ಟಿಸುವ ತಾಣ. ಪ್ರಾಕ್ಟೀಸ್ ಮಾಡಿ ಪ್ರದರ್ಶನ ಮಾಡುತ್ತಿದ್ದರು. ಈಗ ಸಂಘಗಳೇ ಇಲ್ಲ! ಕನಿಷ್ಠ ಶಿಸ್ತು ಮಾಯವಾಗಿದೆ. ಸಮಾಲೋಚನೆಗಳಿಲ್ಲ. ಕಥಾನಕ ಶುರುವಾದ ಬಳಿಕ ಬಂದು ಅವಸರದಲ್ಲಿ ವೇಷ ಮಾಡಿ ಹೋಗುತ್ತಾರೆ. ಪ್ರದರ್ಶನ ಯಶಸ್ವಿಯಾಗುತ್ತಿಲ್ಲ.
* ಯಕ್ಷಗಾನಕ್ಕೆ ಪೌರಾಣಿಕ ಪ್ರಸಂಗಗಳು ಸೂಕ್ತ. ಕೋಟಿ ಚೆನ್ನಯ್ಯ, ಕಾಂತಾಬಾರೆ ಬೂದಾಬಾರೆ, ತುಳುನಾಡ ಸಿರಿ.. ಮೊದಲಾದ ಪ್ರಸಂಗಗಳಿಗೆ ಪಾಡ್ದನಗಳ ಹಿನ್ನೆಲೆಯಿದೆ. ಯಾವುದೇ ಹಿನ್ನೆಲೆಯಿಲ್ಲದ ಕಲ್ಪಿತ ಪ್ರಸಂಗಗಳು ರಂಗದಲ್ಲಿ ಯಶವಾಗುವುದಿಲ್ಲ. ಆದರೂ ಅದು ಅಲ್ಪಾಯುಷಿ.
* ರಂಗಕ್ಕೆ ಅದರದ್ದೇ ಆದ ಭಾಷೆಯಿದೆ. ಅದು ಕಲಾವಿದರಿಗೆ, ನೇಪಥ್ಯ ಕಲಾವಿದರಿಗೆ ತಿಳಿದಿರಬೇಕು, ತಿಳಿದಿತ್ತು. ಭಾಗವತ ಜಾಗಟೆಗೆ ಸಣ್ಣಕೆ ಎರಡು ಬಾರಿ ಸದ್ದು ಮಾಡಿದರೆ ಅರ್ಥ ಮುಂದುವರಿಸಬೇಕೆಂಬ ಸೂಚನೆ. ರಥಕ್ಕೆ ಬಾರಿಸಿದರೆ ಪರದೆಯವರು ಬರಬೇಕು, ಮದ್ದಳೆಯಲ್ಲಿ ಧೋಂ ನುಡಿತ ಕೊಟ್ಟರೆ ಅದು ಚೆಂಡೆಯವರಿಗೆ ಸೂಚನೆ. ಇದೆಲ್ಲಾ ಪಾಲಿಸಿದಾಗಲೇ ಮೇಳವಾಗುತ್ತದೆ.
* ಹಿಂದೆ ತಾಳಮದ್ದಳೆಗಳಲ್ಲಿ ಪದ್ಯಗಳನ್ನು ಟಿಕ್ ಮಾಡುವ ಸಂಪ್ರದಾಯವಿಲ್ಲ. ಅರ್ಥದಾರಿಗೆ ಜನಮನ್ನಣೆ ಬಂದಾಗ ಅವರ ಮಾತಿಗೆ ಬೆಲೆ ಬಂತು. ಭಾಗವತನ ಸ್ಥಾನಕ್ಕೆ ಇಳಿಲೆಕ್ಕವಾಯಿತು.
* ಪ್ರಸಂಗ ಹೊಂದಿಕೊಂಡು ವೇಷಧಾರಿ ಎರಡೆರಡು ವೇಷಗಳನ್ನು ಮಾಡಲೇಬೇಕು. ಉದಾ: ದೇವಿ ಮಹಾತ್ಮೆ ಪ್ರಸಂಗವಾದರೆ ಮಧು-ಕೈಟಭ ಪಾತ್ರ ನಿರ್ವಹಿಸಿದವರು, ರಕ್ತಬೀಜ ಮತ್ತು ಧೂಮ್ರಾಕ್ಷ ಪಾತ್ರವನ್ನು ನಿರ್ವಹಿಸಬೇಕು. ತ್ರಿಜನ್ಮ ಮೋಕ್ಷ ಪ್ರಸಂಗವಾದರೆ ಹಿರಣ್ಯಾಕ್ಷ ಮಾಡಿದ ಕಲಾವಿದ ಶಿಶುಪಾಲ ಪಾತ್ರ ಮಾಡಬೇಕಿತ್ತು. ಈಗ ಎರಡು ವೇಷ ಬರೆದರೆ ಕಲಾವಿದನ ಮುಖ ಬಿಗುವಾಗುತ್ತದೆ.
* ಭಾಗವತನನ್ನು ಹೊಂದಿಕೊಂಡೇ ರಂಗದ ಎಲ್ಲಾ ಪ್ರಕ್ರಿಯೆಗಳು ನಡೆಯಬೇಕು. ಆಟ ಸಮಯಕ್ಕೆ ಮುಗಿಯದಿದ್ದರೆ ಭಾಗವತನ ಮೇಲೆ ದೂರು. ಬೇಗ ಮುಗಿದರೂ ಭಾಗವತನೇ ಹೊಣೆ.
* ಗಾನವೈಭವಗಳು ಮಿತಿಯಲ್ಲಿದ್ದರೆ ಚೆನ್ನ. ಒಂದೊಂದು ರಸವನ್ನು ಹಿಡಿದು ಹೇಳುವ ಪದ್ಯಗಳು ರಸಾಭಿವ್ಯಕ್ತಿಗೆ ಪೂರಕ. ಅತಿರೇಕವಾದರೆ ಹೋಯಿತು. ಹಾಡುವಾಗ ರಸಕ್ಕೊಂದು ಆಯುಷ್ಯವಿರುತ್ತದೆ! ಅದರೊಳಗೆ ಪದ್ಯ ಮುಗಿಯಬೇಕು. ಆಗ ಕೇಳಲು ಇಂಪು. ಇನ್ನೂ ಬೇಕು ಅನ್ನುವಾಗ ಮುಗಿಯಬೇಕು!
* ಅಭಿಮಾನಿಗಳು ಹಿಂದೆಯೂ ಇದ್ದರು, ಈಗಲೂ ಇದ್ದಾರೆ. ಹಿಂದೆ ಆಟ ಮುಗಿದ ಮೇಲೆ ಅಭಿಮಾನಿಗಳ ವಿಮರ್ಶೆ, ಹೊಗಳಿಕೆ. ಮಧ್ಯೆ ಮಧ್ಯೆ ಶಿಳ್ಳೆ, ಚಪ್ಪಾಳೆಗಳಿಲ್ಲ. ತನಗೆ ರಸಭಂಗವಾಗುತ್ತದೆ ಎನ್ನುವುದು ಪ್ರೇಕ್ಷಕನಿಗೆ ಗೊತ್ತಿತ್ತು.
* ಒಂದೊಂದು ಮೇಳದಲ್ಲಿ ಮೂರ್ನಾಲ್ಕು ಭಾಗವತರು. ಅವರವರ ಪಾಳಿಯ ಬಳಿಕ ಹೊರಟು ಹೋಗುತ್ತಾರೆ. ಕೊನೆಯಲ್ಲಿ ಕುಳಿತುಕೊಳ್ಳವ ಭಾಗವತನಿಗೆ ರಂಗದಲ್ಲಿ ಅಸೌಖ್ಯ ಬಾಧಿಸಿತು ಎಂದಾರೆ ಸಹ ಭಾಗವತರಿಲ್ಲದೆ ಆಟ ನಿಲ್ಲುವ ಪರಿಸ್ಥಿತಿ!
* ಕಾಲಪ್ರಮಾಣದ ಭಾಗವತಿಕೆ ಕಡಿಮೆಯಾಗಿದೆ. ಮೊದಲು ಕುಳಿತ ಭಾಗವತ ಆರಭಿ, ಮೋಹನ, ಹಂಸಧ್ವನಿ ರಾಗಗಳನ್ನು ಹಾಕಿ ಪದ್ಯ ಹೇಳಿ ಹೋಗಿರುತ್ತಾನೆ. ನಂತರ ಬಂದ ಭಾಗವತ ಯಾವ ರಾಗದಲ್ಲಿ ಹಾಡಬೇಕು? ರಾಗಗಳ ಬಳಕೆಗೂ ಕಾಲಪ್ರಮಾಣವಿದೆ. ನಮ್ಮ ಇಚ್ಛೆಯಂತೆ ರಾಗವನ್ನು ಬಳಸಲು ರಂಗ ಬಿಡುವುದಿಲ್ಲ.
* ಮೊದಲೆಲ್ಲಾ ಸಂಭಾವನೆ ಕಡಿಮೆಯಿತ್ತು. ಆದರೆ ತೃಪ್ತಿಯಿರುತ್ತಿತ್ತು. ಈಗ ಸಂಭಾವನೆ ಮಿತಿಮೀರಿದೆ. ತೃಪ್ತಿ, ರಂಗಸುಖವಿಲ್ಲ. ತೃಪ್ತಿ ಯಾರಿಗೂ ಬೇಕಾಗಿಲ್ಲ!
* ಯಕ್ಷಗಾನವನ್ನು ಬಿಟ್ಟು ನಾನಿಲ್ಲ. ನನ್ನ ಬದುಕಿಗೆ ಯಕ್ಷಗಾನ ನೆರವಾಗಿದೆ. ಬದುಕನ್ನು ಆಧರಿಸಿದೆ. ತೃಪ್ತಿಯಾಗಿದ್ದೇನೆ. ರಂಗವಿಂದು ಹಲವು ಪಲ್ಲಟಗಳಿಗೆ ಒಳಗಾಗಿರುವಾಗ ಈ ಕಾಲಕ್ಕೆ ನನಗೆ ಪ್ರಾಯ ಆದುದು ನನ್ನ ಪುಣ್ಯ!
No comments:
Post a Comment